ಭವಿಷ್ಯದ ತಿಜೋರಿಯಲ್ಲಿ ಭಾರತದ ಬೀಜಗಳು!

ಉತ್ತರ ಧ್ರುವ ಪ್ರದೇಶದಲ್ಲಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಯೋಜನೆ ನಿರ್ಮಿಸುತ್ತಿರುವ “ಶೀತಲ ಬೀಜ ತಿಜೋರಿ”ಯಲ್ಲಿ ಭಾರತದ ಕೃಷಿ ಪೈರುಗಳ ಮೂರು ತಳಿಗಳ ಬೀಜಗಳು ಭದ್ರತೆಗಾಗಿ ಸೇರ್ಪಡೆಯಾಗಿವೆ. ಭತ್ತದ ಐಆರ್‌-೩೬, ಐಆರ್‌-೬೪ ತಳಿಗಳ ಬೀಜಗಳು ಮತ್ತು ಗೋಧಿಯ ಲೆರ್ಮಾ ರೋಜೊ, ಸೊನೊರೊ-೬೪ ಮತ್ತಿ ರಿಡ್ಲಿ ತಳಿಗಳ ಬೀಜಗಳನ್ನು ಕಳೆದ ಜೂನ್‌ ೧೯, ೨೦೦೮ರಂದು ನಾರ್ವೆ ದೇಶದ ಉತ್ತರ ತುದಿಯಲ್ಲಿ ಹಿಮಾಚ್ಛಾದಿತ ಬೆಟ್ಟವೊಂದರ ಅಡಿಯಲ್ಲಿ ಕೊರೆದಿರುವ ಬೀಜ ತಿಜೋರಿಯಲ್ಲಿ ಇಡಲಾಯಿತು. ಈ ಸಂದರ್ಭದಲ್ಲಿ ಭಾರತದ ಕೇಂದ್ರ ಸರಕಾರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಶ್ರೀ ಕಪಿಲ್‌ ಸಿಬಲ್‌ರವರೂ ಅಲ್ಲಿ ಉಪಸ್ಥಿತರಿದ್ದರು ಎಂದು ಜುಲೈ ೧, ೨೦೦೮ರಂದು ಪ್ರೆಸ್‌ ಇನ್‌ಫರ್ಮೇಶನ್‌ ಬ್ಯೂರೊ ಬಿಡುಗಡೆ ಮಾಡಿದ ಪ್ರಕಟಣೆಯೊಂದು ತಿಳಿಸಿದೆ.

ಆಧುನಿಕ ಕೃಷಿ ಪದ್ಧತಿಯಿಂದಾಗಿ ಮರೆಯಾಗುತ್ತಿರುವ ಧಾನ್ಯಗಳ ಸ್ಥಳೀಯ ಹಾಗೂ ವಿಶಿಷ್ಟ ತಳಿಗಳು ಸಂಪೂರ್ಣ ಕಾಣೆಯಾಗುವ ಮುನ್ನವೇ ಅವುಗಳ ತಳಿಗುಣಗಳನ್ನು ಕಾದಿಡುವ ಹಂಬಲದಿಂದ ಹಲವಾರು ರಾಷ್ಟ್ರಗಳು ಒಟ್ಟಾಗಿ ಸ್ವಾಲ್‌ಬಾರ್ಡ್‌ ಗ್ಲೋಬಲ್‌ ಸೀಡ್‌ ವಾಲ್ಟ್‌ ಎನ್ನುವ ಯೋಜನೆಯನ್ನು ಹಮ್ಮಿಕೊಂಡಿವೆ. ಅತಿ ಶೀತಲವಾಗಿರುವ ನೆಲದಲ್ಲಿ ತಿಜೋರಿ ಕೊರೆದು ಅಲ್ಲಿ ಬೀಜಗಳನ್ನು ಕಾದಿಡುವುದರಿಂದ, ಅವು ಸಹಸ್ರಾರು ವರ್ಷಗಳ ಕಾಲ ಸಾಯದಂತೆ ಉಳಿಸಬಹುದು ಎನ್ನುವ ಆಶಯ ಈ ಯೋಜನೆಗಿದೆ. ವರ್ಷವೆಲ್ಲವೂ ಹಿಮ ಕವಿದಿರುವ ಲೋಂಗಿಯೆರ್‌ಬಿಯೆನ್‌ ಎನ್ನುವ ಸ್ಥಳದಲ್ಲಿ ತಿಜೋರಿ ನಿರ್ಮಾಣ ಕಾರ್ಯವೂ ಸಾಗಿದೆ. ಇಲ್ಲಿ ವರ್ಷವೆಲ್ಲವೂ ಉಷ್ಣತೆ -೨೦ರಿಂದ -೩೦ ಡಿಗ್ರಿ ಸೆಲ್ಶಿಯಸ್‌ ಇರುತ್ತದೆಯಂತೆ.  ಒಂದು ವೇಳೆ ಹಸಿರುಮನೆ ಪರಿಣಾಮದಿಂದಾಗಿ ಭೂಮಿಯ ಮೇಲೆ ಕವಿದಿರುವ ಹಿಮದ ಬೆಟ್ಟವೆಲ್ಲ ಕರಗಿದರೂ, ಇಲ್ಲಿನ ಉಷ್ಣತೆ -೩ ಡಿಗ್ರಿ ತಲುಪಲು ಹಲವಾರು ವಾರಗಳೇ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇಲ್ಲಿಟ್ಟ ಬೀಜಗಳ ನಿಧಿ ಭದ್ರವಾಗಿರುತ್ತದೆ ಎನ್ನುವ ಆಶಯವಿದೆ.

ಬಿಲ್‌ ಗೇಟ್ಸ್‌ ದತ್ತಿ ನಿಧಿಯ ಜೊತೆಗೆ ಬ್ರಿಟನ್‌, ನಾರ್ವೆ, ಆಸ್ಟ್ರೇಲಿಯಾ, ಸ್ವಿಟ್ಜರ್ಲಂಡ್‌, ಸ್ವೀಡನ್‌ ಗಳಲ್ಲದೆ ಭಾರತ, ಬ್ರೆಜಿಲ್‌, ಕೊಲಂಬಿಯಾ, ಇಥಿಯೋಪಿಯಾಗಳೂ ಈ ಕಾರ್ಯದಲ್ಲಿ ಕೈಗೂಡಿಸಿವೆ. ಈ ತಿಜೋರಿಯ ಪ್ರಪ್ರಥಮ ಶಿಲಾನ್ಯಾಸವನ್ನು ಮೊನ್ನೆ ನಡೆಸಲಾಯಿತು. ಅದೇ ಸಂದರ್ಭದಲ್ಲಿ ಭಾರತದ ಈ ಐದು ತಳಿಗಳನ್ನು ಕಾದಿಡಲು ತಿಜೋರಿಗೆ ಸಲ್ಲಿಸಲಾಯಿತು.

ಈ ಬಗ್ಗೆ ಸರಕಾರಿ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.

ಬೀಜವನ್ನೇನೋ ಉಳಿಸಬಹುದು. ಆದರೆ ಬೀಜವನ್ನು ಉತ್ತು, ಬಿತ್ತು, ಅನ್ನ ಬೆಳೆವವರನ್ನು ಉಳಿಸುವುದು ಹೇಗೆ ಎನ್ನುವುದಕ್ಕೂ ವಿಜ್ಞಾನಿಗಳು ಉಪಾಯ ಹುಡುಕಬೇಕು ಎನ್ನೋಣವೆ!

Published in: on July 4, 2008 at 6:59 pm Leave a Comment

ನೋವಿಗೆಷ್ಟು ಕಾಸು!

ಹೌದು. ನೋವಿಗೆಷ್ಟು ಬೆಲೆ. ಅಲ್ಲ ಸ್ವಾಮಿ. ನೋವಿಗೆ, ಸಾವಿಗೆ ಬೆಲೆ ಕಟ್ಟುವುದಕ್ಕಾಗುತ್ತದೆಯೇ? ಆಗುತ್ತದೆ. ನೀವು ಜಾಗತೀಕರಣದ ತವರೂರು ಅಮೆರಿಕೆಯಲ್ಲಿದ್ದರೆ ಇದುವೂ ಸಾಧ್ಯ. ನಿಮಗೆಷ್ಟು ಆದಾಯ ಎನ್ನುವುದು ನಿಮಗೆಷ್ಟು ನೋವಾಗುತ್ತದೆ ಎನ್ನುವುದನ್ನು ನಿರ್ಧರಿಸಬಹುದು ಎಂದು ಅಮೆರಿಕೆಯ ಪ್ರಿನ್ಸ್‌ಟನ್‌ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಅಲಾನ್‌ ಕ್ರುಗರ್‌ ಪ್ರಕಟಿಸಿದ್ದಾರೆ. ಇವರ ಅಭಿಪ್ರಾಯ ಪ್ರಕಟವಾಗಿರುವುದು ಇನ್ನೆಲ್ಲೂ ಅಲ್ಲ. ಸುಪ್ರಸಿದ್ಧ ವೈದ್ಯಕೀಯ ಪತ್ರಿಕೆ ಲ್ಯಾನ್ಸೆಟ್‌ನಲ್ಲಿ ಈ ಸುದ್ದಿ ಬಂದಿದೆ ಎಂದ ಮೇಲೆ ನಾವು ತುಸು ಗಂಭೀರವಾಗಿಯೇ ಇದನ್ನು ಪರಿಗಣಿಸಬೇಕು ಅಲ್ಲವೇ?

ಬಡವ-ಬಲ್ಲಿದರ ನಡುವೆ ಕಂದರವಿದೆ ಎನ್ನುವುದು ಗೊತ್ತಿದೆಯಲ್ಲ. ಹಾಗೆಯೇ ನೋವುಳ್ಳವ-ನೋವಿಲ್ಲದವರು ಎನ್ನುವ ಕಂದರವೂ ಇದೆ ಎನ್ನುತ್ತಾರೆ ಕ್ರುಗರ್‌. ಬಹುಶಃ ರಸಗೊಬ್ಬರ ಸಿಗಲಿಲ್ಲ ಎಂದು ಗುಂಡಿಗೆ ಗುಂಡಿಗೆ ಒಡ್ಡುವ ರೈತರಿಗೆ ನೋವು ಹೆಚ್ಚಾಗುತ್ತದೆಯೋ. ಫೋರ್ಡ್‌ ಐಕನ್‌ ಕಾರನ್ನು ಎಂಜಿರೋಡಿಗೆ ಕೊಂಡೊಯ್ಯಲು ಹೆಚ್ಚು ಖರ್ಚು ಮಾಡಬೇಕಲ್ಲ ಎಂದು ಲೆಕ್ಕ ಹಾಕುವ ಐಟಿ-ಧಣಿಗಳಿಗೆ ನೋವು ಹೆಚ್ಚಾಗುತ್ತದೆಯೋ ಎಂದು ಕೇಳಬೇಡಿ. ಕ್ರುಗರ್‌ ಅದಕ್ಕೂ ಒಂದು ಸಂಶೋಧನೆ ನಡೆಸಿಯಾರು. ಸದ್ಯಕ್ಕೆ ಅವರು ಅಮೆರಿಕೆಯ ಪ್ರಜೆಗಳಲ್ಲಿ ಯಾರಿಗೆ ಹೆಚ್ಚು ನೋವುಂಟಾಗುತ್ತದೆ ಎಂಬ ಅಧ್ಯಯನದಲ್ಲಿ ಬಿಸಿಯಾಗಿದ್ದಾರೆ.

ಹೈಸ್ಕೂಲು ನಪಾಸಾದವರು ಪದವೀಧರರಿಗಿಂತಲೂ ದುಪ್ಪಟ್ಟು ನೋವು ಅನುಭವಿಸುವರಂತೆ. ಈ ನೋವು ಮಾನಸಿಕ ಅಳುಕಲ್ಲ. ಕೀಳರಿಮೆಯೂ ಅಲ್ಲ. ದೈಹಿಕ ನೋವು. ಪ್ರತಿದಿನವೂ ನಿಮಗೆ ಯಾವುದಾದರೂ ನೋವಿನ ಅನುಭವ ಆಗುತ್ತದೆಯೇ? ಆಗುತ್ತದಾದರೆ ಎಷ್ಟು ಬಾರಿ ಆಗುತ್ತದೆ? ಇತ್ಯಾದಿ ಗಂಭೀರ ಪ್ರಶ್ನೆಗಳನ್ನು ಅಮೆರಿಕೆಯ ಸುಮಾರು ೪೦೦೦ ಜನರಿಗೆ ಕೇಳಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಮೆರಿಕೆಯ ಜನತೆಯಲ್ಲಿ ಶೇಕಡ ೨೮ರಷ್ಟು ಮಂದಿ ಪ್ರತಿನಿತ್ಯವೂ ನೋವನ್ನು ಅನುಭವಿಸುತ್ತಾರೆನ್ನುವುದು ಇವರ ಲೆಕ್ಕಾಚಾರ. ಇವರಲ್ಲಿ ವಾರ್ಷಿಕ ೩೦,೦೦೦ (೧೨,೦೦,೦೦೦ ರೂಪಾಯಿಗಳು) ಡಾಲರಿಗಿಂತಲೂ ಆದಾಯ ಕಡಿಮೆ ಇರುವ ಮನೆಯವರು ಪ್ರತಿದಿನವೂ ಶೇಕಡ ೨೦ರಷ್ಟು ಸಮಯ ಸಾಧಾರಣದಿಂದ ತೀವ್ರ ನೋವಿನಿಂದ ನರಳುತ್ತಾರಂತೆ. ವಾರ್ಷಿಕ ೧೦೦,೦೦೦ ಡಾಲರು (೪೦,೦೦೦,೦೦೦ ರೂಪಾಯಿಗಳು) ವರಮಾನ ಇರುವವರು ಕೇವಲ ಶೇಕಡ ೮ರಷ್ಟು ಸಮಯ ಮಾತ್ರ ನೋವನ್ನು ಅನುಭವಿಸುತ್ತಾರೆ. ಅರ್ಥಾತ್‌, ಬಡವರಿಗೇ ನೋವಿನ ಹೊಡೆತ ಹೆಚ್ಚು.

ಅಲ್ಲ, ಇಂತಹ ಅಧ್ಯಯನವಾದರೂ ಏತಕ್ಕೆ ಬೇಕಿತ್ತು ಎಂದಿರಾ? ಪ್ರತಿವರ್ಷವೂ ನೋವಿಗಾಗಿ ಸಾವಿರಾರು ಕೋಟಿ ಡಾಲರುಗಳಷ್ಟು ಔಷಧವನ್ನು ಅಮೆರಿಕನ್ನರು ಸೇವಿಸುತ್ತಾರೆ. ಕ್ರುಗರ್‌ರವರ ಪ್ರಕಾರ ದೈಹಿಕ ನೋವೂ, ಮಾನಸಿಕ ನೋವೂ ಒಂದೇ! ಒಟ್ಟಾರೆ ಬಡವರು ಹೆಚ್ಚುನೋವುಳ್ಳವರು (ವಾಹ್‌!), ಬಲ್ಲಿದರಿಗೆ ನೋವು ಕಡಿಮೆ ಎನ್ನುವುದು ಇವರ ಅಭಿಪ್ರಾಯ.  ಒಟ್ಟಾರೆ, ನೋವು ಯಾರಿಗೆ ಹೆಚ್ಚಾಗುತ್ತದೆ, ಏಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ, ನೋವಿನಿಂದಾಗಿ ಕೆಲಸ ನಿಲ್ಲುವುದನ್ನು ತಡೆಗಟ್ಟಬಹುದು. ಇದರಿಂದ ಅಮೆರಿಕೆಯ ಕೈಗಾರಿಕೆಗಳ ಉತ್ಪಾದನೆಗೆ ಒದಗುವ ನಷ್ಟ ಕಡಿಮೆಯಾದೀತು ಎನ್ನುವುದು ಕ್ರುಗರ್‌ರವರ ಅಭಿಪ್ರಾಯ.

ಅದು ತಿಳಿಯುತ್ತದೋ ಇಲ್ಲವೋ. ಔಷಧ ಕಂಪೆನಿಗಳಿಗೆ ಮಾತ್ರ ತಮ್ಮ ಹೊಸ ಕುರಿಗಳು ಯಾರೆಂಬುದು ಸ್ಪಷ್ಟವಾಗುತ್ತದೆಯಷ್ಟೆ.

ಇನ್ನೂ ಹೆಚ್ಚಿನ ವಿವರಗಳಿಗೆ ಪ್ರಿನ್ಸ್‌ಟನ್‌ ವಿಶ್ವವಿದ್ಯಾನಿಲಯದ ಈ ಪತ್ರಿಕಾ ವರದಿ ಓದಿ.

Published in: on June 11, 2008 at 8:43 pm Leave a Comment

ತಾಯಿಯ ಹಾಲಿನಲ್ಲಿ ಮೊಟ್ಟೆಯ ವಾಸನೆ!

ಚಿಕ್ಕಂದಿನಲ್ಲಿ ಸ್ತನಿ ಪ್ರಾಣಿಗಳು ಅಂದರೆ ಏನು ಎಂದು ಮಾಸ್ಟರನ್ನು ಕೇಳಿದ್ದೆ. “ಹಿಂಡಲು ಕಿವಿ ಇರುವಂತಹ ಪ್ರಾಣಿ,” ಎಂದು ಅವರು ಹೇಳಿದ್ದು ಈಗಲೂ ನೆನಪಿದೆ. ಸ್ತನಿಗಳ ವಿಶಿಷ್ಟ ಗುಣಗಳಲ್ಲಿ ಮೊಲೆಹಾಲು ಬಿಟ್ಟರೆ ಹಿಂಡಲು ಕೈಗೆ ಸಿಗುವ ಕಿವಿಯೇ ಪ್ರಮುಖ ಎನ್ನಬಹುದು. ತಾಯಿಯ ಮಮತೆಯ ಸೆಲೆ ಎಂದು ಖ್ಯಾತಿಯಾದ ಮೊಲೆಹಾಲು ಸ್ತನಿಗಳಲ್ಲಷ್ಟೆ ಲಭ್ಯ. ಮೊಲೆ ಇಲ್ಲದ ಪ್ಲಾಟಿಪಸ್‌ನ ಚರ್ಮವೂ ಹಾಲನ್ನು ಒಸರುತ್ತದೆ. ಹೀಗಾಗಿ ಅದಕ್ಕೂ ಆದಿಸ್ತನಿ ಎಂಬ ಪಟ್ಟ ಸಿಕ್ಕಿದೆ. ಸ್ತನಿಗಳ ಹೊರತು ಉಳಿದೆಲ್ಲ ಪ್ರಾಣಿಗಳೂ ಮೊಟ್ಟೆ ಇಡುತ್ತವೆ. ಹಾವು, ಹಕ್ಕಿಗಳು, ಹುಳು, ಕೀಟಗಳು ಎಲ್ಲವೂ ವಂಶಾಭಿವೃದ್ಧಿಗೆ ಮೊಟ್ಟೆ ಇಟ್ಟು ಮರೆಯಾಗಿಬಿಡುತ್ತವಷ್ಟೆ. ಆದರೆ ಸ್ತನಿಗಳು ಮಾತ್ರ ಮರಿ ಮಾಡಿ, ಅವಕ್ಕೆ ಮಾತೃಪ್ರೇಮವನ್ನು ಹಾಲಿನಲ್ಲಿಯೇ ಎರೆಯುತ್ತವೆ!

ಇದು ಸಾಧ್ಯವಾದದ್ದು ಹೇಗೆ? ಮೊಟ್ಟೆಯಿಡುವ ಪರಿಪಾಠ ಮರೆಯಾಗಿ ಮೊಲೆಹಾಲೂಡಿಸುವ ಪರಿಪಾಠ ಬೆಳೆದದ್ದು ಹೇಗೆ?  ಇದಕ್ಕೆ ಉತ್ತರ ದೊರಕಿದೆ. ಹಕ್ಕಿಗಳ ಮೊಟ್ಟೆಯಲ್ಲಿ ಇರುವ ಹಳದಿ ವಸ್ತುವನ್ನು ತಯಾರಿಸುವ ಶಕ್ತಿ ಮರೆಯಾದ ಕಾರಣ, ಮೊಲೆಹಾಲು ಸುರಿಯಲಾರಂಭಿಸಿತು ಎಂದು ಸ್ವಿಟ್ಜರ್ಲೆಂಡ್‌ನ ಲೌಸಾನೆ ವಿಶ್ವವಿದ್ಯಾನಿಲಯದ ತಳಿಜೀವಿವಿಜ್ಞಾನಿ ಡೇವಿಡ್‌ ಬ್ರಾವಂಡ್‌ ಮತ್ತು ಸಂಗಡಿಗರು ಸಂಶೋಧಿಸಿದ್ದಾರೆ. ಕೋಳಿಮೊಟ್ಟೆಯ ಪೌಷ್ಠಿಕತೆಗೆ ಅದರಲ್ಲಿರುವ ಹಳದಿ ವಸ್ತು – ಜಮೆ, ಜಮೆಚೀಲ – ಕಾರಣವಷ್ಟೆ. (ಇದನ್ನು  ‘ಯೋಕ್‌’ ಎಂದೂ ಕರೆಯುತ್ತಾರೆ.)  ಕೋಳಿಮೊಟ್ಟೆಯಲ್ಲಿಯಷ್ಟೆ ಅಲ್ಲ, ಹಕ್ಕಿಗಳು, ಉರಗಗಳ ಮೊಟ್ಟೆಯಲ್ಲಿಯೂ ಜಮೆ ಇರುತ್ತದೆ. ಇದು ಮೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೆ ತಾಯಿ ಒದಗಿಸಿಕೊಟ್ಟ ಆಹಾರದ ದಾಸ್ತಾನು. ಮೊಟ್ಟೆಯೊಡೆದು ಮರಿ ಹೊರಬರುವವರೆವಿಗೂ ಈ ದಾಸ್ತಾನಿಟ್ಟ ಆಹಾರವನ್ನು ಬಳಸಿಕೊಂಡೇ ಭ್ರೂಣದ ಬೆಳವಣಿಗೆ ಸಾಗಬೇಕು. ಹೆಚ್ಚು ಬೇಕೆಂದರೂ ಲಭ್ಯವಿರುವುದಿಲ್ಲ. ಮೊಟ್ಟೆಯ ಜಮೆಯಲ್ಲಿರುವ ಆಹಾರ ಕೊಬ್ಬು, ಕಾರ್ಬೊಹೈಡ್ರೇಟ್‌ ಮತ್ತು ಪ್ರೊಟೀನ್‌ಗಳ ಸಂಕೀರ್ಣ ಮಿಶ್ರಣ. ಈ ಮಿಶ್ರಣಕ್ಕೆ ವೈಟಿಲೋಜೆನ್‌ ಅನ್ನುವ ಪ್ರೊಟೀನ್‌ ಕಾರಣ. ಆಹಾರವನ್ನು ಮೊಟ್ಟೆಯೊಳಗೆ ಸಾಗಿಸಲು ಮತ್ತು ಅದರೊಟ್ಟಿಗೆ ತಳುಕಿಕೊಂಡು ಭದ್ರವಾಗಿಡುವುದು ವೈಟಿಲೊಜನ್‌ ಕೆಲಸ. ಹೀಗಾಗಿ ಹಕ್ಕಿಗಳು, ಉರಗಗಳಲ್ಲಿ ವೈಟಿಲೊಜೆನ್‌ ತಯಾರಿಸುವ ಜೀನ್‌ಗಳು ಇದ್ದೇ ಇರುತ್ತವೆ. ಬಹುತೇಕ ಮೊಟ್ಟೆಯಿಡುವ ಎಲ್ಲ ಪ್ರಾಣಿಗಳಲ್ಲೂ ಹೆಚ್ಚೂ, ಕಡಿಮೆ ಒಂದೇ ರೀತಿ ಇರುತ್ತದೆ ಈ ಜೀನ್‌ಗಳ ಸ್ವರೂಪ. ಅಷ್ಟು ಪ್ರಮುಖ ಈ ಜೀನ್‌.

ಕೋಳಿಯಲ್ಲಿರುವ ವೈಟಿಲೊಜೆನ್‌ ಜೀನ್‌ಗಳು ಸ್ತನಿಗಳಲ್ಲಿಯೂ ಇವೆಯೇ ಎಂದು ಬ್ರಾವಂಡ್‌ ತಂಡ ಪರೀಕ್ಷಿಸಿತು. ನಾಯಿ, ಮಾನವ ಮತ್ತು ಆರ್ಮಡಿಲೊ (ದಕ್ಷಿಣ ಅಮೆರಿಕೆಯಲ್ಲಿ ಕಾಣಸಿಗುವ, ಇರುವೆಗಳನ್ನಷ್ಟೆ ತಿಂದು ಬದುಕುವ ಸ್ತನಿ) ಈ ಮೂರು ಪ್ರಾಣಿಗಳ ಡಿಎನ್‌ಎ (ತಳಿಸಂಕೇತಗಳನ್ನು ಹೊತ್ತಿರುವ ರಾಸಾಯನಿಕ)ಯಲ್ಲಿ ವೈಟಿಲೊಜೆನ್‌ ಜೀನ್‌ನ ಪಳೆಯುಳಿಕೆಗಳು ಇದ್ದುವು. ಆದರೆ ಕ್ರಿಯಾಶೀಲವಾಗಿರಲಿಲ್ಲ. ದೋಷಪೂರ್ಣವಾಗಿದ್ದುವು. ಮೂರೂ ಪ್ರಾಣಿಗಳಲ್ಲೂ ಒಂದೇ ಬಗೆಯ ದೋಷ ಕಂಡು ಬಂದಿದು ಅಚ್ಚರಿಯ ಸಂಗತಿ. ಏಕೆಂದರೆ, ಆರ್ಮಡಿಲೊ ವಿಕಾಸವಾದದ್ದು ಸುಮಾರು ೧೦ ಕೋಟಿ ವರುಷಗಳ ಹಿಂದೆ. ಮಾನವನೆಂಬ ಪ್ರಾಣಿಯ ವಿಕಾಸವಾದದ್ದು ಸುಮಾರು ೪ ಲಕ್ಷ ವರ್ಷಗಳ ಹಿಂದೆ. ಅರ್ಥಾತ್‌, ಆರ್ಮಡಿಲೊ ಎನ್ನುವ ಸ್ತನಿ ಹುಟ್ಟುವ ಮೊದಲೇ ಜಮೆಯನ್ನು ಉತ್ಪಾದಿಸಬೇಕಾಗಿದ್ದ ಈ ಜೀನ್‌ಗಳು ನಿಷ್ಕ್ರಿಯವಾಗಿಬಿಟ್ಟಿದ್ದುವು.  ಈ ಮೂರೂ ಜೀವಿಗಳಲ್ಲೂ ಮರಿಗಳು ತಾಯಿಗೆ ಮಾಸು ಮತ್ತು ಹೊಕ್ಕಳಬಳ್ಳಿಯಿಂದ ಅಂಟಿಕೊಂಡಿರುತ್ತವೆಯಷ್ಟೆ. ಹೀಗಾಗಿ ಇವನ್ನು ನಿಜಸ್ತನಿ (ಯೂಥೀರಿಯನ್‌) ಎನ್ನುತ್ತಾರೆ.

ಮಾಸು ಮತ್ತು ಹೊಕ್ಕಳಬಳ್ಳಿ ಇಲ್ಲದ, ಹಾಲು ಸುರಿಸುವ ಜೀವಿಗಳೂ ಇವೆ. ಇವನ್ನು ಅರೆಸ್ತನಿಗಳು (ಮೆಟಾಥೀರಿಯನ್‌) ಎನ್ನುತ್ತಾರೆ. ಅಮೆರಿಕೆಯಲ್ಲಿ ವಾಸಿಸುವ ಒಪೊಸಮ್‌ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುವ ವಾಲಬಿ  (ಇವುಗಳಲ್ಲಿ ಮೊಲೆ ಇದ್ದರೂ, ತಾಯಿ-ಮಗುವನ್ನು ಕೂಡಿಸುವ ಮಾಸು ಮತ್ತು ಹೊಕ್ಕಳ ಬಳ್ಳಿ ಇರುವುದಿಲ್ಲ. ಕಾಂಗರೂ ಸಹ ಇಂತಹುದೇ ಪ್ರಾಣಿ.) ಈ ಜೀನ್‌ಗಳ ಪಳೆಯುಳಿಕೆಗಳು ಕಂಡುವು. ಆದರೆ ಅಲ್ಲಿಯೂ ಇವು ನಿಷ್ಕ್ರಿಯವಾಗಿದ್ದುವು. ೭ ಕೋಟಿ ವರುಷಗಳ ಹಿಂದೆ ಆಸ್ಟ್ರೇಲಿಯಾ ಖಂಡ ಅಮೆರಿಕೆಯಿಂದ ಬೇರ್ಪಡುವುದಕ್ಕೆ ಮೊದಲೇ ಈ ಜೀವಿಗಳು ವಿಕಾಸವಾಗಿದ್ದುವು. ಅಂದರೆ, ಜಮೆಯ ಜೀನ್‌ ಅಷ್ಟು ಮೊದಲೇ ನಿಷ್ಕ್ರಿಯವಾಗಿತ್ತು.

ಹಾಗಿದ್ದರೆ ಜಮೆಯ ಜೀನ್‌ ಆದಿಸ್ತನಿಗಳಲ್ಲಿ ಇರಬಹುದೇ? ಉತ್ತರಕ್ಕಾಗಿ ಪ್ಲಾಟಿಪಸ್‌ನ ತಳಿಸಂಕೇತಗಳಲ್ಲಿ ಶೋಧ ನಡೆಯಿತು. ಪ್ಲಾಟಿಪಸ್‌ ಮೊಟ್ಟೆ ಇಡುವ ಪ್ರಾಣಿ. ಆದರೆ ಮೊಟ್ಟೆ ಒಡೆದು ಹೊರಬಂದ ಮರಿಗಳು ಕೆಲವು ಕಾಲ ತಾಯಿಯ ಹಾಲು ಕುಡಿಯುತ್ತವೆ. ತಾಯಿಯಲ್ಲಿ ಮೊಲೆ ಇಲ್ಲದಿದ್ದರೂ, ಕೆಲವೆಡೆ ಕೂದಲು ಗಂಟಿಕ್ಕಿಕೊಂಡಂತಾಗಿ, ಅಲ್ಲಿಂದ ಹಾಲು ಒಸರುತ್ತದೆ. ಆದ್ದರಿಂದಲೇ ಇವಕ್ಕೆ ಆದಿಸ್ತನಿ ಎನ್ನುವ ಹೆಸರು. ಪ್ಲಾಟಿಪಸ್‌ನ ಇಡೀ ತಳಿಸಂಕೇತವನ್ನು ಇತ್ತೀಚೆಗೆ ಅನಾವರಣ ಮಾಡಲಾಯಿತು. ಪ್ಲಾಟಿಪಸ್‌ನಲ್ಲಿ ಹುಡುಕಿದಾಗ ಎರಡು ವೈಟಿಲೊಜೆನ್‌ ಜೀನ್‌ಗಳು ಕಂಡು ಬಂದುವು. ಅದರಲ್ಲಿ ಒಂದು ಸುಮಾರು ೫ ಕೋಟಿ ವರುಷಗಳ ಹಿಂದೆಯೇ ನಿಷ್ಕ್ರಿಯವಾಗಿದ್ದಂತಹುದು. ಮತ್ತೊಂದು ಇನ್ನೂ ಕ್ರಿಯಾಶೀಲವಾಗಿತ್ತು. ನಿಷ್ಕ್ರಿಯಗೊಳ್ಳದ ಈ ಏಕೈಕ ಜೀನ್‌ನಿಂದಾಗಿ ಆದಿಸ್ತನಿಗಳು ತಮ್ಮ ಮೊಟ್ಟೆಯಲ್ಲಿ ಜಮೆಯನ್ನು ಕೂಡಿಸುವುದು ಸಾಧ್ಯವಾಗಿದೆ ಎಂದು ಬ್ರವಾಂಡ್‌ ಅಭಿಪ್ರಾಯ ಪಟ್ಟಿದ್ದಾರೆ. ಅತ್ತ ಜಮೆಯೂ ಪೂರ್ಣವಿಲ್ಲ, ಇತ್ತ ಮೊಲೆಹಾಲೂ ಪೂರ್ಣವಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಆದಿಸ್ತನಿಗಳಿವೆ. ಏಕೆಂದರೆ ಈ ಜೀವಿಗಳಲ್ಲಿ ಜಮೆಯ ಜೀನ್‌ಗಳು ಅರೆಬರೆಯಾಗಿರುವಂತೆಯೇ, ಮೊಲೆಹಾಲಿನಲ್ಲಿರುವ ವಿಶಿಷ್ಟ ಪ್ರೊಟೀನ್‌ ಕೇಸೀನ್‌ ನಿರ್ದೇಶಿಸುವ ಜೀನ್‌ಗಳೂ ಇವೆ. ಇದು ಮರಿಗಳಿಗೆ ಕ್ಯಾಲ್ಶಿಯಂ ಲವಣ ಒದಗಲು ನೆರವಾಗುವ ಪ್ರೊಟೀನ್‌. ಜಮೆಯಲ್ಲಿರುವ ವೈಟಿಲೊಜೆನ್‌ನಂತೆಯೇ ಕ್ಯಾಲ್ಶಿಯಂ ಅನ್ನು ಭದ್ರವಾಗಿ ಹಿಡಿದುಕೊಂಡು ಇರುತ್ತದೆ.

ಆದಿಸ್ತನಿ, ಅರೆಸ್ತನಿ ಹಾಗೂ ನಿಜಸ್ತನಿಗಳೆಲ್ಲವುಗಳ ಮೂಲಜೀವಿಯಲ್ಲಿ ಈ ಜೀನ್‌ ಉಗಮವಾಗಿರಬೇಕು ಎನ್ನುವುದು ಇವರ ಊಹೆ. ಜಮೆಯ ವೈಟಿಲೊಜೆನ್‌ ಜೀನ್‌ಗಳು ಮರೆಯಾದಾಗ, ಅದರ ಸ್ಥಾನವನ್ನು ಕೇಸೀನ್‌ನ ಈ ಜೀನ್‌ ತುಂಬಿತಂತೆ. ಅಂದ ಹಾಗೆ ಅಂಡಗಳನ್ನು ಒದ್ದೆಯಾಗಿಡುವುದಕ್ಕೆಂದು ಈ ಜೀನ್‌, ಹಾಗೂ ಹಾಲಿನ ಉತ್ಪಾದನೆ ರೂಪುಗೊಂಡಿರಬೇಕು. ಕ್ರಮೇಣ ಮಾಸು ಮತ್ತು ಸ್ತನಗಳನ್ನು ವಿಕಾಸವಾಗಿ, ತಾಯಿ ಮತ್ತು ಮಗುವಿನ ನಡುವಿನ ಮಧುರ ಬಾಂಧವ್ಯಕ್ಕೆ ಕಾರಣವಾಗಿರಬೇಕು ಎನ್ನುವುದು ಇವರ ಊಹೆ.

ಹಾಲಿನಲ್ಲಿ ಮೊಟ್ಟೆಯ ವಾಸನೆ ಹೀಗಿದೆ.

Published in: on June 3, 2008 at 6:13 am Leave a Comment

ಬೂಸಾ ಮಾಂಸ!

ಭಾರತದ ಮಂದಿ ಹೆಚ್ಚೆಚ್ಚು ಉಂಡು ತಮಗೆ ಆಹಾರವಿಲ್ಲದಂತೆ ಮಾಡಿದ್ದಾರೆಂದು ದೂರಿದ ಅಮೆರಿಕನ್ನರು ಹೊಟ್ಟೆ ತುಂಬಿಸಿಕೊಳ್ಳಲು ಹೊಸ ಉಪಾಯ ಹೂಡಿದ್ದಾರೆ. ನಮ್ಮೂರಿನ ಬೂಸಾವನ್ನೇ ಆಹಾರವನ್ನಾಗಿ ಬಳಸಲು ಸಿದ್ಧರಾಗಿದ್ದಾರೆ. ಅಮೆರಿಕೆಯ ಆಹಾರ ಮತ್ತು ಔಷಧ ಪ್ರಾಧಿಕಾರ ಅಕ್ಕಿ ತೌಡನ್ನು ಮಾಂಸದ ಉತ್ಪನ್ನಗಳಲ್ಲಿ ಸೇರಿಸಿಕೊಳ್ಳಲು ಅನುಮತಿ ನೀಡಿದೆಯಂತೆ. ಅಕ್ಕಿ ತೌಡನ್ನು ಆಹಾರವನ್ನಾಗಿ ಬಳಸಲು ಹಲವು ಉಪಾಯಗಳನ್ನು ಹೂಡುತ್ತಿರುವ ಅಮೆರಿಕೆಯ ನ್ಯೂಟ್ರಸಿಯ ಎನ್ನುವ ಸಂಸ್ಥೆ ತಿಳಿಸಿದೆ.

ಅಕ್ಕಿ ತೌಡಿನ ಬಗ್ಗೆ ಭಾರತೀಯರಿಗೆ ತಿಳಿಯದ್ದು ಏನಿಲ್ಲ. ಸಹಸ್ರಾರು ವರುಷಗಳಿಂದ ಅದನ್ನು ದನಕರುಗಳಿಗೆ ಆಹಾರವನ್ನಾಗಿ ನೀಡಿ, ಬೂಸಾ ಎನ್ನುವ ಹೆಸರನ್ನೂ ನೀಡಿದ್ದೇವೆ. ಇತ್ತೀಚೆಗೆ ಈ ತ್ಯಾಜ್ಯಕ್ಕೂ ಬೆಲೆ ಬಂದಿರುವುದು ವಿಶೇಷ. ತೌಡು ಬಲು ಬೇಗನೆ ಹಾಳಾಗಲು ಅದರಲ್ಲಿರುವ ಎಣ್ಣೆ ಕಾರಣ. ಈ ಎಣ್ಣೆಯಲ್ಲಿ ಒರೈಜನಾಲ್‌ ಎನ್ನುವ ಪ್ರತ್ಯಾಕ್ಸಿಕಾರಕ ಅಂಶ ಇದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಅತಿ ವರ್ತನೆಯ ರಾಸಾಯನಿಕಗಳ ಕ್ರಿಯೆಯನ್ನು ಇಂತಹ ಪ್ರತ್ಯಾಕ್ಸಿಕಾರಕಗಳು ಶಮನಗೊಳಿಸುತ್ತವೆ. ಇದರಿಂದ ಮುಪ್ಪು, ವಯಸ್ಸಾಗುವುದರಿಂದ ಹಾಗೂ ಅಪಥ್ಯಾಹಾರದಿಂದ ಉಂಟಾಗುವ ಖಾಯಿಲೆಗಳನ್ನು ದೂರವಿಡಬಹುದು ಎಂದು ಪೋಷಣಾ ತಜ್ಞರ ಅಂಬೋಣ. ಹೀಗಾಗಿ ಪ್ರತ್ಯಾಕ್ಸೀಕಾರಕ (ಆಂಟಿಆಕ್ಸಿಡಂಟು)ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹಲವು ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಪ್ರತ್ಯಾಕ್ಸೀಕಾರಕಗಳು ಈಗ ಮೂಲ. ಒರೈಜನಾಲ್‌ ಇಂತಹ ಆಹಾರೌಷಧಗಳಲ್ಲಿ ಒಂದು. ಒರೈಜನಾಲ್‌ ಭರಿತ ಅಕ್ಕಿ ತೌಡಿನ ಎಣ್ಣೆ ಈಗ ಆಹಾರವಾಗಿ ಬಳಕೆಯಾಗುತ್ತಿದೆ. ಇದುವರೆವಿಗೂ ಅದನ್ನು ಸಾಬೂನಿನಂತಹ ಸೌಂದರ್ಯ ಸಾಧನಗಳಲ್ಲಿ ಬಳಸಲಾಗುತ್ತಿತ್ತು. ಒರೈಜನಾಲ್‌ನಿಂದಾಗಿ ಈಗ ತೌಡಿಗೂ ಬೆಲೆ ಬಂದಿದೆ. ಇನ್ನು ನ್ಯೂಟ್ರಸಿಯದ ಪ್ರಯತ್ನದಿಂದಾಗಿ ಎಣ್ಣೆ ಹಿಂಡಿದ ಬೂಸಾ ಇನ್ನಷ್ಟು ದುಬಾರಿಯಾದರೆ ಅಚ್ಚರಿಯೇನಿಲ್ಲ.

ಅಕ್ಕಿ ತೌಡನ್ನೇ ನೇರ ಆಹಾರವನ್ನಾಗಿ ಬಳಸಿಕೊಳ್ಳಲು ಆಗದು. ಏಕೆಂದರೆ ಅದರಲ್ಲಿರುವ ಎಣ್ಣೆಯಿಂದಾಗಿ ಅದು ಬಹು ಬೇಗನೆ ಮುಗ್ಗಲಾಗುತ್ತದೆ. ಅಸಹ್ಯ ವಾಸನೆ ಬೀರುತ್ತದೆ. ಇದರೊಟ್ಟಿಗೆ ತೌಡಿನಲ್ಲಿರುವ ಲೈಪೇಸ್‌ ಎನ್ನುವ ಕಿಣ್ವ ಜೀರ್ಣಕ್ರಿಯೆಗೂ ತೊಡಕಾಗಿರುತ್ತದೆ. ಹೀಗಾಗಿ ಮುಗ್ಗಲಾಗುವ ಮೊದಲೇ ತೌಡನ್ನು ಉಂಡರೂ ಆರೋಗ್ಯಕ್ಕೆ ಒಳ್ಳೆಯದಾಗದು. ಈ ಕಿಣ್ವದ ಚಟುವಟಿಕೆಯನ್ನು ತಡೆಗಟ್ಟುವಂತೆ ತೌಡನ್ನು ಸಂಸ್ಕರಿಸಿದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾದೀತು ಎನ್ನುತ್ತಾರೆ ವಿಜ್ಞಾನಿಗಳು. ನ್ಯೂಟ್ರಸಿಯ ಮಾಡಿರುವುದೂ ಇದನ್ನೇ! ಎಣ್ಣೆ ಹಿಂಡಿ ಉಳಿದ ತೌಡಿನ ನಾರಿನ ಅಂಶವನ್ನು ರಾಸಾಯನಿಕ ಕ್ರಿಯೆಯಿಂದ ಸ್ಥಿರಗೊಳಿಸಿ, ಲೈಪೇಸ್‌ ಚಟುವಟಿಕೆ ಇಲ್ಲವಾಗಿಸಿದೆ.  ಇದನ್ನೇ ಮಾಂಸದ ಉಂಡೆ, ಮಾಂಸದ ಪ್ಯಾಟಿಗಳಲ್ಲಿ ಕೂಡಿಸಿದ್ದಾರೆ.

ಅಕ್ಕಿ ತೌಡಿನಿಂದ ಲಾಭವಿದೆ. ಸಾಮಾನ್ಯವಾಗಿ ಇಂತಹ ಪದಾರ್ಥಗಳಲ್ಲಿ ಬಳಸುವ ಸೋಯ ಹಿಟ್ಟಿಗಿಂತಲೂ ಇದು ಅಗ್ಗ. ಒಂದು ಕಿಲೋ ಸೋಯಾ ಹಿಟ್ಟಿಗೆ ೨.೫೦ ಡಾಲರು ಬೆಲೆ. ಅಷ್ಟೇ ಪ್ರಮಾಣದ ಅಕ್ಕಿ ತೌಡಿನ ಬೆಲೆ ಕೇವಲ ಅರ್ಧ ಡಾಲರು. ಇದಷ್ಟೆ ಅಲ್ಲ! ಎಣ್ಣೆ ಹಿಂಡಿದ ಅಕ್ಕಿ ತೌಡು ಉತ್ತಮ ನಾರಿನ ಅಂಶದ ಆಕರ. ಆಹಾರದಲ್ಲಿ ನಾರಿನ ಅಂಶ ಕಡಿಮೆಯಾಗುತ್ತಿರುವುದರಿಂದಲೇ ಮಧುಮೇಹ, ಮಲಬದ್ಧತೆಯಂತಹ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ನಾರಿನ ಅಂಶ ಅತಿಕಡಿಮೆ ಇರುವ ಮಾಂಸಾಹಾರದಲ್ಲಿ ಅಕ್ಕಿ ತೌಡನ್ನು ಕೂಡಿಸುವುದರಿಂದ ನಾರಿನ ಅಂಶವನ್ನು ಹೆಚ್ಚಿಸಿದಂತೆಯೂ ಆಯಿತು, ಬೆಲೆ ಅಗ್ಗವಾಗಿಸಿದಂತೆಯೂ ಆಯಿತು ಎನ್ನುವುದು ನ್ಯೂಟ್ರಸಿಯದ ಆಲೋಚನೆ.  ಹೆಚ್ಚಿನ ವರದಿಗೆ ಫುಡ್‌ ನಾವಿಗೇಟರ್‌ ಯುಎಸ್‌ಎ ನೋಡಿ. 

ಈ ಸುದ್ದಿ ಕೇಳಿ ನಮ್ಮೂರ ದನಗಳು ತಮ್ಮ ಆಹಾರಕ್ಕೆ ಸಂಚಕಾರ ಬರುತ್ತವೆಂದು ಅಧ್ಯಕ್ಷ ಜಾರ್ಜ್‌ ಬುಷ್‌ಗೆ ದೂರು ಸಲ್ಲಿಸಿವೆ ಎನ್ನುವುದು ಗಾಳಿ ಸುದ್ದಿ!

 

Published in: on May 27, 2008 at 5:43 am Leave a Comment

ಕರೀಬಿಲವನ್ನು ತೂಗುವ ವಿಧಾನ

ತರಕಾರಿ ತರಲು ಹೋದಾಗಲೆಲ್ಲ, ಮಾರುವವ ಸರಿಯಾಗಿ ತೂಗುತ್ತಿದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದಲ್ಲ! ನನ್ನ ಗೆಳೆಯರೊಬ್ಬರು ತರಕಾರಿ ಮಾರುಕಟ್ಟೆಗೆ ಹೋಗುವಾಗ ಒಂದು ತೂಕದ ಕಲ್ಲನ್ನೂ ಹೊತ್ತು ಹೋಗುತ್ತಿದ್ದರು. ಅದನ್ನೇ ಇಟ್ಟು ತೂಗು ಎನ್ನುತ್ತಿದ್ದರು. ಕಣ್ಮುಂದೆ ನಡೆಯುವ ಮಾಪನವನ್ನೇ ನಂಬಲಾಗದ ನಮಗೆ ಇನ್ನು ಕೋಟ್ಯಂತರ ಕಿಲೋಮೀಟರು ದೂರವಿರುವ ತಾರೆಯರನ್ನು ತೂಗಬಹುದು ಎಂದರೆ ನಂಬಿಕೆ ಬರುವುದಾದರೂ ಹೇಗೆ?

ಇದು ಸತ್ಯವಾದರೂ ನಿಜ. ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ತಾರೆಗಳು, ಕರೀಬಿಲಗಳ ತೂಕವನ್ನು ಕಂಡು ಹಿಡಿಯುವ ಹೊಸದೊಂದು ತಂತ್ರವನ್ನು ಅಮೆರಿಕೆಯ ನಾಸಾದ ಭೌತವಿಜ್ಞಾನಿಗಳು ರೂಪಿಸಿದ್ದಾರಂತೆ.

ತಾರೆಗಳನ್ನು ತೂಗುವ ಹುಚ್ಚಾದರೂ ಯಾಕೆ ಎಂದಿರಾ? ನಿಜ. ನಮಗೆ ನಿಮಗೆ ತರಕಾರಿಯ ತೂಕವಷ್ಟೆ ಸಾಕು. ಆದರೆ ವಿಶ್ವದ ಉಗಮ, ವಿಕಾಸ ಇವುಗಳ ಬಗ್ಗೆ ಕುತೂಹಲವಿರುವ ವಿಜ್ಞಾನಿಗಳಿಗೆ ನಭೋಮಂಡಲದಲ್ಲಿರುವ ಕಾಯಗಳ ಭಾರವನ್ನೂ ತಿಳಿಯುವುದು ಅವಶ್ಯಕ. ದೂರವಿರುವ ವಸ್ತುಗಳ ಬಗ್ಗೆ ನಡೆಯುವುದೆಲ್ಲವೂ ಊಹಾಪೋಹವಷ್ಟೆ. ಈ ಲೆಕ್ಕಾಚಾರದಲ್ಲಿ ಭಾರದ ಪಾತ್ರವೂ ಇದೆ. ಉದಾಹರಣೆಗೆ, ನಕ್ಷತ್ರಗಳು ಬೆಳೆದಂತೆಲ್ಲ ಬಲು ಭಾರಿಯಾಗುತ್ತವೆ ಎನ್ನುವುದುಂಟು. ಒಂದು ಮಿತಿ (ಇದನ್ನು ಚಂದ್ರಶೇಖರ್‌ ಮಿತಿ ಎನ್ನುತ್ತಾರೆ)ಯನ್ನು ಮೀರಿ ಇವು ಭಾರಿಯಾದರೆ ಅಂತ್ಯ ಗ್ಯಾರಂಟಿ (ನಮಗೂ ಮಿತಿ ಮೀರಿ ಬೊಜ್ಜು ಬಂದರೆ ಇದೇ ಗತಿ ತಾನೇ.) ಎನ್ನುತ್ತಾರೆ ಭೌತವಿಜ್ಞಾನಿಗಳು.

ತಾರೆಗಳು ಸಾವಿನಲ್ಲಿಯೂ ಅದ್ಭುತವಂತೆ. ಇವು ಮರಣಿಸಿದಾಗ ಸುಟ್ಟು ಬೂದಿಯಾಗುವುದಿಲ್ಲ. ಕೊಳೆಯುವುದಿಲ್ಲ. ರೂಪಾಂತರಗೊಂಡು ಕರೀಬಿಲಗಳಾಗುತ್ತವೆ. ಬೆಳಕನ್ನೂ ನುಂಗುವ ದೈತ್ಯಗಳಾಗುತ್ತವೆ. ಬೆಳಕನ್ನೂ ಇವು ಹೀರಿಕೊಂಡು ಬಿಡುವುದರಿಂದ ಮಿನುಗುವ ತಾರೆಯರ ಸ್ಥಾನದಲ್ಲಿ ಏನೂ ಇಲ್ಲದ ಅವಕಾಶ ಇದ್ದಂತೆ ತೋರುತ್ತದೆ.

ಹೀಗೆ ಹುಟ್ಟುವ ಕರೀಬಿಲಕ್ಕೆ (ಬ್ಲ್ಯಾಕ್‌ ಹೋಲ್‌) ತನ್ನ ಸುತ್ತಮುತ್ತಲಿರುವ ಎಲ್ಲ ವಸ್ತುವನ್ನೂ ಹೀರಿಕೊಳ್ಳವಷ್ಟು ಬಲವಾದ ಸೆಳೆತವಿದೆ.  ಅತಿ ಸೆಳೆತಕ್ಕೆ ಸಿಲುಕಿ ಕರೀಬಿಲದ ಮಡಿಲಿಗೆ ಸುತ್ತಲಿನ ವಸ್ತುಗಳು ಬಂದು ಬೀಳುವುದನ್ನು ಅಕ್ರಿಶನ್‌ ಎಂದು ಹೇಳುವರು. ಕರೀಬಿಲದ ಸುತ್ತಲೂ ಪ್ರವಾಹದಂತೆ ಹರಿಯುವ ವಸ್ತು, ಸುಳಿಯಾಗಿ ಬಿಲದೊಳಗೆ ಇಳಿಯುತ್ತದೆ. ಕರೀಬಿಲದ ಸೊಂಟಕ್ಕೆ ಸುತ್ತಿದಂತೆ ಕಾಣುವ ಈ ವಸ್ತುವಿನ ಪ್ರವಾಹವನ್ನು ಅಕ್ರಿಶನ್‌ ಡಿಸ್ಕ್‌ (ಸುಳಿಯುಂಗುರ) ಎನ್ನುವರು. ಈ ಸಂದರ್ಭದಲ್ಲಿ ಕೆಲವೊಮ್ಮೆ ಟ್ರಾಫಿಕ್‌ ಜಾಮ್‌ ಆಗುವುದೂ ಉಂಟು. ಅಲ್ಲಲ್ಲಿ ಸೆಳೆಯಲ್ಪಟ್ಟ ವಸ್ತುಗಳು ಮುಂದೆ ಸಾಗದೆ ಗಂಟು ಕಟ್ಟುತ್ತವೆ.  ಬಿಸಿಯಾಗಿ ಕ್ಷಕಿರಣಗಳನ್ನು ಹೊರಸೂಸುತ್ತವೆ.  ಕೆಲವೊಮ್ಮೆ ಈ ಕ್ಷಕಿರಣಗಳ ಸೂಸುವಿಕೆಯಲ್ಲಿಯೂ ವ್ಯತ್ಯಾಸಗಳು ಕಂಡು ಬರುತ್ತವೆ. ಇವಕ್ಕೂ ಕರೀಬಿಲದ ತೂಕಕ್ಕೂ ನಂಟು ಇರಬಹುದು ಎನ್ನುವ ನಂಬಿಕೆ ವಿಜ್ಞಾನಿಗಳದ್ದು.

ಉದಾಹರಣೆಗೆ, ಸುಳಿಯುಂಗುರದಲ್ಲಿರುವ ಟ್ರಾಫಿಕ್‌ ಜಾಮ್‌ಗೂ ಕರೀಬಿಲಕ್ಕೂ ಇರುವ ದೂರಕ್ಕೂ ಕರೀಬಿಲದ ತೂಕಕ್ಕೂ ನೇರ ಸಂಬಂಧವಿದೆಯಂತೆ. ಹಾಗೆನ್ನುತ್ತಾರೆ ನಾಸಾದ ನಿಕೊಲಾಯ್‌ ಶಾಪಾಶ್ನಿಕೋವ್‌ ಮತ್ತು ಲೆವ್‌ ತಿತಾರ್ಚು.  ಈ ದೂರವನ್ನು ಗಣಿಸುವುದು ಸಾಧ್ಯವಾದರೆ ಕರೀಬಿಲದ ತೂಕವನ್ನೂ ಲೆಕ್ಕ ಹಾಕಬಹುದು ಎನ್ನುವುದು ಇವರ ಅಂದಾಜು. ಇದಕ್ಕೆ ತಕ್ಕ ಗಣಕ ತಂತ್ರಾಂಶವನ್ನೂ ಇವರು ರೂಪಿಸಿದ್ದಾರೆ. ಅಷ್ಟೇ ಅಲ್ಲ, ನಮಗೆ ಈಗಾಗಲೇ ತಿಳಿದಿರುವ ಮೂರು ಕರೀಬಿಲಗಳ ತೂಕವನ್ನೂ ಲೆಕ್ಕ ಹಾಕಿದ್ದಾರೆ. ಇವರ ಲೆಕ್ಕಾಚಾರ, ಈ ಮೊದಲೇ ಬೇರೆ ವಿಧಾನಗಳಿಂದ ತಿಳಿದಿರುವ ತೂಕಕ್ಕೆ ಹೋಲುತ್ತದೆಯಂತೆ. ಆದ್ದರಿಂದ ಇನ್ನು ಮುಂದೆ ಇದೇ ವಿಧಾನದಿಂದ ಕರೀಬಿಲಗಳನ್ನು ತೂಗಲು ನಿರ್ಧರಿಸಿದ್ದಾರೆ.

ಸದ್ಯ. ನಮ್ಮ ರೇಶನ್‌ ಅಂಗಡಿಯವರಿಗೆ ಇದು ತಿಳಿದಿಲ್ಲ. ತಿಳಿಯುವುದೂ ಬೇಡ. ಕಣ್ಣಳತೆ, ಕೈಯಳತೆಯಂತೆ ದೂರದಿಂದಲೇ ತೂಕ ಲೆಕ್ಕ ಹಾಕಿ ಚೀಲ ತುಂಬಿಸಿ ಕಳಿಸಿಬಿಟ್ಟಾರು!

Published in: on May 17, 2007 at 7:17 pm Comments (1)

ಆಹಾ, ಹೈ ಟೆಕ್‌ ಫ್ಯಾಶನ್‌

ನಮ್ಮೂರಲ್ಲಿ ಇತ್ತೀಚೆಗೆ ಕಾಲೇಜು ದಿನಾಚರಣೆಗಳಲ್ಲಿ ಎರಡು ಕಾರ್ಯಕ್ರಮಗಳು ಅನಿವಾರ್ಯ – ಮೊದಲನೆಯದು ರಂಗಮಂಚವನ್ನು ಮುರಿಯುವಂತೆ ಕುಣಿಯುವ ಬ್ರೇಕ್‌ ಡ್ಯಾನ್ಸ್ ಮತ್ತು ಎರಡನೆಯದು ಫ್ಯಾಶನ್‌ ಶೋ.  ನಮ್ಮೂರಿನ ಚೆಲುವೆಯರು ವಿಶ್ವಸುಂದರಿಯಾಗುತ್ತಾರೆಯೋ ಇಲ್ಲವೋ, ರಂಗಮಂಚದಲ್ಲಿ ಅದಕ್ಕಿಂತಲೂ ಬಿನ್ನಾಣದಿಂದ ನಡೆಯುವುದನ್ನು ನೋಡಿ ಪೋಕರಿಗಳು ಶಿಳ್ಳೆ ಹೊಡೆಯುವುದು ಎಫ್‌ಎಂ ಚಾನೆಲ್‌ ಇಲ್ಲದಿದ್ದರೂ ಊರಿಗೆಲ್ಲಾ ಕೇಳಿಸುತ್ತದೆ.  ಅಮೆರಿಕೆಯ ಸಂಸ್ಕೃತಿ ಇವರಿಗ್ಯಾಕೆ ಎಂದು ನನ್ನಂತಹ ಮುದಿ ಗೊಡ್ಡುಗಳು ಮೂಗು ಮುರಿಯುವುದು ಇದ್ದಿದ್ದೇ. ಹೀಗಿರುವಾಗ ಅಮೆರಿಕೆಯ ಕಾರ್ನೆಲ್‌ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ಫ್ಯಾಶನ್‌ ಶೋ ಬಗ್ಗೆ ಬರೆಯಲೇ ಬೇಕಾಗಿ ಬಂದಿದೆ.

ಕಾರ್ನೆಲ್‌ ವಿಶ್ವವಿದ್ಯಾನಿಲಯದ ನಾರು ವಿಜ್ಞಾನ ಮತ್ತು ದಿರಿಸು ವಿನ್ಯಾಸ ವಿಭಾಗದ ವಿದ್ಯಾರ್ಥಿನಿ ಒಲಿವಿಯಾ ಒಂಗ್‌ ಒಂದು ಹೈಟೆಕ್‌ ಫ್ಯಾಶನ್‌ ಬಟ್ಟೆ ತಯಾರಿಸಿದ್ದಾಳೆ. ಇದನ್ನು ಅಲ್ಲಿ ಜರುಗಿದ ಫ್ಯಾಶನ್‌ ಶೋ ಒಂದರಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಯಿತು.  ಹೈ ಫ್ಯಾಶನ್‌ ಎಂದ ಕೂಡಲೆ ಅತಿ ಕಡಿಮೆ ಬಟ್ಟೆಯ ದಿರಿಸು ಎಂದುಕೊಳ್ಳಬೇಡಿ. ಮೈ ಪೂರ್ತ ಹೊದಿಕೆಯಾಗುವ ಈಕೆಯ ದಿರಿಸು ಹೈ ಫ್ಯಾಶನ್‌ ಅಲ್ಲ, ಹೈಟೆಕ್‌ ಬಟ್ಟೆಯ ಫ್ಯಾಶನ್‌.  ಬೆಳ್ಳಿಯ ನಾನೋ ಕಣಗಳನ್ನು ಮೈತುಂಬಿಕೊಂಡ ಈ ಬಟ್ಟೆ ಕೊಳೆಯೇ ಆಗುವುದಿಲ್ಲವಂತೆ.  ಡೆನಿಮ್‌ ನಂತೆ ಈ ಬಟ್ಟೆಯನ್ನು ಒಗೆಯಲೇ ಬೇಕಿಲ್ಲ ಎನ್ನುತ್ತದೆ ಈ ಸುದ್ದಿ ಪ್ರಕಟಿಸಿರುವ ಕಾರ್ನೆಲ್‌ ಕ್ರಾನಿಕಲ್‌.

ಬಟ್ಟೆ ಕೊಳೆಯಾಗದಂತೆ ತಡೆಯುವುದು ಯಾರಿಗೆ ಇಷ್ಟವಿಲ್ಲ.  ದಿರಿಸಿಗೆ ಮೆತ್ತಿಕೊಳ್ಳುವ ಮಣ್ಣು, ಎಣ್ಣೆಯಲ್ಲದೆ ಇವುಗಳ ನೆರಳಿನಲ್ಲಿ ನೆಲೆಯಾಗುವ ಬೆಕ್ಟೀರಿಯಾ, ಬೂಸುಗಳು ಬಟ್ಟೆಯನ್ನು ಹಾಳುಗೆಡವುತ್ತವೆ.   ದಪ್ಪಗಿನ, ಗಾಢ ನೀಲಿ ಬಣ್ಣದ ಡೆನಿಮ್‌ ಈಗಲೂ ಯುವಜನರ ಮೆಚ್ಚಿನ ಬಟ್ಟೆ. ಏಕೆಂದರೆ, ಇದನ್ನು ಒಗೆಯುವುದು ಕಷ್ಟ. ಒಗೆಯುವವರು ದೊರೆಯುವುದೂ ಕಷ್ಟ!  ಇದನ್ನೂ ಮೀರಿಸುವ ಫ್ಯಾಶನ್‌ ಬಟ್ಟೆ ಒಂಗ್‌ನ ವಿನ್ಯಾಸ.

ಕೆಲವು ವರುಷಗಳ ಹಿಂದೆ ಜಪಾನಿನ ಒಂದು ಒಳ ಉಡುಪು ತಯಾರಕ ಕಂಪೆನಿ, ಒಳ ಉಡುಪುಗಳನ್ನು ತಯಾರಿಸುವಾಗ ಅದರ ನೂಲಿನ ಎಡೆಯಲ್ಲಿ ಬೆಕ್ಟೀರಿಯಾ ಮಾರಕ ಔಷಧಗಳು ಹಾಗೂ ಸುಗಂಧ ತುಂಬಿದ ಸೂಕ್ಷ್ಮಗುಂಡುಗಳನ್ನು ಹುದುಗಿಸಿತ್ತು. ಒಳ ಉಡುಪಿನಲ್ಲಿ ನೆಲೆಯಾಗುವ ಬೆವರು ಹಾಗೂ ಬೆಕ್ಟೀರಿಯಾಗಳನ್ನು ಇದು ನಾಶ ಮಾಡುವುದರ ಜೊತೆಗೇ ಪರಿಮಳವನ್ನೂ ಬೀರುತ್ತಿತ್ತು.

ಒಂಗ್‌ ರಚನೆ ಇದನ್ನೂ ಮೀರಿಸಿದೆ ಎನ್ನಬಹುದು. ಒಂಗ್‌ ತಯಾರಿಸಿರುವ ಬಟ್ಟೆಯಲ್ಲಿ ಎಳೆಗಳ ಎಡೆಯಲ್ಲಿ ಅತಿಸೂಕ್ಷ್ಮಗಾತ್ರದ ಬೆಳ್ಳಿಯ ಕಣಗಳನ್ನು ಹುದುಗಿಸಲಾಗಿದೆ. ಇಷ್ಟು ಸಣ್ಣ ಗಾತ್ರದ ಬೆಳ್ಳಿ ಬಲು ಕ್ರಿಯಾಶೀಲ ಪದಾರ್ಥ. ಇದು ತನ್ನ ಜೊತೆ ಸಂಪರ್ಕಕ್ಕೆ ಬಂದ ಪದಾರ್ಥಗಳನ್ನು ಆಕ್ಸಿಡೀಕರಿಸಿಬಿಡುತ್ತದೆ. ಅರ್ಥಾತ್‌, ಅದನ್ನು ಒಡೆಯುತ್ತದೆ. ಜಿಡ್ಡು, ಕೊಳೆ, ಬಣ್ಣ ಇವು ಆಕ್ಸಿಡೀಕರಣವಾದಾಗ ಮಾಯವಾಗುತ್ತವೆ. ಆಕ್ಸಿಡೀಕರಣ ಜೀವಾಣುಗಳಿಗೆ ಅದರಲ್ಲೂ ಬೆಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಿಗೆ ಕಂಟಕವೇ ಸರಿ.  ಬೆಳ್ಳಿ ತುಂಬಿದ ಈ ಹೈಟೆಕ್‌ ನಾರುಮಡಿ ಹಲವು ಬಗೆಯ ಬೆಕ್ಟೀರಿಯಾಗಳು ಹಾಗೂ ವೈರಸ್‌ಗಳನ್ನು ಕೊಲ್ಲುತ್ತದೆ ಎಂದು ಕ್ರಾನಿಕಲ್‌ ಹೇಳಿದೆ.

ಅಷ್ಟೇ ಅಲ್ಲ. ಈ ಬಟ್ಟೆಯನ್ನು ಒಗೆಯುವ ಅಗತ್ಯವೂ ಇಲ್ಲವಂತೆ. ಬೆಳ್ಳಿ ಕಣಗಳ ಅತಿ ಸೂಕ್ಷ್ಮ ಗಾತ್ರ, ಸೂಕ್ಷ್ಮಜೀವಿಗಳನ್ನು ನಾಶಗೊಳಿಸುವುದರ ಜೊತೆಗೇ ಕಲೆ ನೆಲೆಯಾಗದಂತೆ ಕಾಪಾಡುತ್ತದಂತೆ. ಕಲೆ, ಕೊಳೆ ಕೂರದಿದ್ದಾಗ ಬಟ್ಟೆ ಒಗೆಯುವುದು ಬೇಕೆ?

ಬೆಳ್ಳಿಯಷ್ಟೆ ತಾನೆ. ಚಿನಿವಾರನಿಗೆ ಕೊಟ್ಟರೆ ಬೆಳ್ಳಿಯ ಬಟ್ಟೆಯನ್ನೇ ಕೊಟ್ಟಾನು ಎನ್ನಬೇಡಿ. ಬೆಳ್ಳಿಯ ಸೂಕ್ಷ್ಮಗಾತ್ರದಿಂದಾಗಿಯಷ್ಟೆ ಬಟ್ಟೆ ಕೊಳೆರಹಿತವಾಗುತ್ತದೆ. ಇದನ್ನು ತಯಾರಿಸುವುದೂ ಸುಲಭವಲ್ಲ. ಬೆಳ್ಳಿಯ ಕಣಗಳು ಒಟ್ಟಾಗದಂತೆ ದ್ರಾವಣ ತಯಾರಿಸಿ, ಅದರಲ್ಲಿ ಮೊದಲೇ ಸಂಸ್ಕರಿಸಿದ ಹತ್ತಿ ಬಟ್ಟೆಯನ್ನು ಅದ್ದಬೇಕು. ಬೆಳ್ಳಿಯ ಕಣಗಳು ಋಣ ವಿದ್ಯುತ್‌ ಗುಣದವುಗಳಾದ್ದರಿಂದ, ಹತ್ತಿಯನ್ನು ವಿಶೇಷ ಪಾಲಿಮರ್‌ ಜೊತೆಗೆ ಸಂಸ್ಕರಿಸಿ ಧನ ವಿದ್ಯುತ್‌ ಗುಣವಿರುವಂತೆ ಮಾಡಲಾಯಿತು. ಈಗ ಹತ್ತಿಯ ಎಳೆಗಳೊಳಗೆ ಬೆಳ್ಳಿ ಕೂರಿಸಬಹುದಿತ್ತು.

ಇದೇ ಬಗೆಯಲ್ಲಿ ಇನ್ನೂ ಪ್ರಬಲ ಕ್ರಿಯಾವಸ್ತುವೆನ್ನಿಸಿದ ಪಲಾಡಿಯಂ ಲೋಹದ ಕಣಗಳಿರುವ ದಿರಿಸನ್ನೂ ಒಂಗ್‌ ತಯಾರಿಸಿದ್ದಾಳೆ. ಇದು ಬೆಂಗಳೂರಿನ ಸಂಜೆಯ ಹೊಗೆಯನ್ನೂ ಶಿಥಿಲಗೊಳಿಸುತ್ತದಂತೆ.  ಮಾಯಗಾರನಂತೆ ಈ ದಿರಿಸು ತೊಟ್ಟು ಕೈ ಆಡಿಸಿದರೆ, ಗಾಳಿ ಶುದ್ಧವಾಗಬಹುದು ಎನ್ನುವ ಆಶಯ ಒಂಗ್‌ ನದ್ದು.

ಮಲಿನ ಗಾಳಿ ಶುದ್ಧವಾಗುತ್ತದೋ ಇಲ್ಲವೋ. ಈ ಬಟ್ಟೆ ಕೈ ಒರೆಸುವ ಬಟ್ಟೆಯಾಗಿಯಂತೂ ಬಲು ಉಪಯುಕ್ತ. ಒಂದೇ ಸಮಸ್ಯೆ. ಹೈಟೆಕ್‌ ಫ್ಯಾಶನ್‌ ಆದ್ದರಿಂದ ಬೆಲೆಯೂ ಹೈ ಆಗಿಯೇ ಇದೆ.  ಒಂಭತ್ತು ಗಜದ ಸೀರೆಗೆ ಸುಮಾರು ೫೦,೦೦೦ ರೂಪಾಯಿಗಳು (೧೦೦೦೦ ಡಾಲರುಗಳು) ಆಗಬಹುದು ಎಂದು ಒಂಗ್‌ ಅಂದಾಜಿಸಿದ್ದಾಳೆ.

ಈಗ ಹೇಳಿ. ನಿಮಗೆ ಕಾಂಜೀವರಂ ಬೇಕೋ, ಕೊಳೆರಹಿತ ಬೆಳ್ಳಿ ಡೆನಿಮ್‌ ಬೇಕೋ?

ಗೋಮಾಂಸ ಭಕ್ಷಕರೇ ಎಚ್ಚರಿಕೆ!

ತಲೆಬರೆಹ ಓದಿ ತಲೆಯನ್ನು ಕುಟ್ಟಿದಂತಾಯಿತೇ? ಅಲ್ಲ ಸ್ವಾಮಿ, ವಿಜ್ಞಾನದ ಬ್ಲಾಗ್‌ನಲ್ಲಿ ರಾಜಕೀಯ ಬಂದಂತಿದೆಯಲ್ಲ, ಎಂದಿರಾ? ಇಲ್ಲ, ಸ್ವಾಮಿ. ಖಂಡಿತ ಇಲ್ಲ. ನಮ್ಮ ಹಿಂದುತ್ವವಾದಿಗಳು ಅಮೆರಿಕನ್ನರನ್ನು ಇನ್ನು ಜರೆಯುವುದು ಬಿಟ್ಟು ಹೊಗಳಲು ಆರಂಭಿಸಬೇಕು, ಅಷ್ಟೆ. ಏಕೆಂದರೆ ಮೊನ್ನೆ ತಾನೆ ಅಲ್ಲಿನ ರಾಜ್ಯದ ಸಂಸತ್ತು ಒಂದರಲ್ಲಿ ವೇದಪಠಣ ಆಗಿತ್ತು. ಈಗ ಅಮೆರಿಕೆಯ ರೋಚೆಸ್ಟರ್‌ವೈದ್ಯಕೀಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗೋಮಾಂಸ ಭಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವ ತಾಯಂದಿರ ಗಂಡು ಮಕ್ಕಳು ವೀರ್ಯಹೀನರಾಗುವ ಸಾಧ್ಯತೆಗಳಿವೆ ಎಂದು ನಿನ್ನೆ ಬಿಡುಗಡೆಯಾದ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ಇಲ್ಲಿನ ರಿಪ್ರೊಡಕ್ಟಿವ್‌ ಎಪಿಡೆಮಿಯೊಲಜಿ ಸೆಂಟರ್‌ನ ನಿರ್ದೇಶಕರಾದ ಶಾನ್ನ ಎಚ್‌. ಸ್ವಾನ್‌ ತಮ್ಮ ಸಂಗಡಿಗರ ಜೊತೆಗೂಡಿ ಈ ಪ್ರಮುಖ ಸಂಶೋಧನೆ ಮಾಡಿದ್ದಾರೆ. ಇದರ ವಿವರಗಳನ್ನು ಜರ್ನಲ್‌ ಆಫ್‌ ಹ್ಯೂಮನ್‌ ರಿಪ್ರೊಡಕ್ಷನ್‌ನ ಮಾರ್ಚ್‌ ೨೮ ರ ಸಂಚಿಕೆಯಲ್ಲಿ ವರದಿ ಮಾಡಲಾಗಿದೆ.

ಗರ್ಭಿಣಿ ಹೆಂಗಸರು ದನದ ಮಾಂಸ ತಿನ್ನುವುದರಿಂದ ಅಪಾಯವೇನಾದರೂ ಇದೆಯೇ ಎನ್ನುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆದಿತ್ತು. ಒಟ್ಟು ೩೮೭ ಗಂಡಸರ ವೀರ್ಯ, ವೀರ್ಯಾಣು, ಸಂತಾನ ಸಾಮರ್ಥ್ಯ ಇತ್ಯಾದಿಗಳನ್ನು ಒಟ್ಟು ಮಾಡಿ, ಅವರ ತಾಯಂದಿರು ಗರ್ಭಿಣಿಯಾಗಿದ್ದಾಗ ತಿಂದಿದ್ದ ದನದ ಮಾಂಸದ ಪ್ರಮಾಣದ ಜೊತೆಗೆ ತಾಳೆ ಹಾಕಲಾಯಿತು. ಉಳಿದೆಲ್ಲ ವಿಷಯಗಳೂ ಸಮಾನವಾಗಿದ್ದಾಗ, ತಾಯಂದಿರ ದನದ ಮಾಂಸ ಸೇವನೆಯ ಪ್ರಮಾಣದಿಂದಾಗಿ ಈ ಗಂಡಸರ ವೀರ್ಯದಲ್ಲಿನ ವೀರ್ಯಾಣುಗಳ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇತ್ತು ಎಂದು ಸ್ವಾನ್‌ ತಂಡ ಹೇಳಿದೆ.

ವೀರ್ಯೋತ್ಪಾದನೆಯ ಪ್ರಮುಖ ಘಟ್ಟ ಮೀಸೆ ಬಲಿತಾಗ ಆಗುವುದಿಲ್ಲ. ಭ್ರೂಣಾವಸ್ಥೆಯಲ್ಲಿಯೇ ಆಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ತಾಯ ಗರ್ಭದಲ್ಲಿ ಇರುವಾಗಲೇ ವೀರ್ಯ ಜನಕಾಂಗದಲ್ಲಿನ ವೀರ್ಯಜನಕ ಕೋಶಗಳ ಸಂಖ್ಯೆ ನಿರ್ಣಯಿಸಲ್ಪಡುತ್ತದೆ. ಇದರಲ್ಲಿ ಹೆಚ್ಚು, ಕಡಿಮೆ ಆದಲ್ಲಿ, ಪರಿಣಾಮ ಪ್ರಾಯ ಬಂದ ಮೇಲೆ ತೋರುತ್ತದೆ.

ವೀರ್ಯಾಣುಗಳ ಸರಾಸರಿ ಸಂಖ್ಯೆ ಸ್ವಾನ್‌ ತಂಡ ಅಧ್ಯಯನ ಮಾಡಿದ ಗಂಡಸರಲ್ಲಿ ಶೇಕಡ ೧೮ರಷ್ಟು ಮಂದಿಯಲ್ಲಿ ಬಲು ಕಡಿಮೆ ಇತ್ತು. ಅದೇ ತಾಯಂದಿರು ಅತಿ ಗೋಮಾಂಸ ಭಕ್ಷಕರಾಗಿಲ್ಲದ ಗಂಡಸರಲ್ಲಿ ಕೇವಲ ಶೇಕಡ ೫ರಷ್ಟು ಮಂದಿಯಷ್ಟೆ ವೀರ್ಯಾಣುಗಳ ಕೊರತೆಯನ್ನು ಅನುಭವಿಸಿದ್ದರು.

ಹಾಗೆಂದು, ಈ ಗಂಡಸರೆಲ್ಲ ಸಂತಾನ ಹೀನರಾದರೆಂದುಕೊಳ್ಳಬೇಡಿ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೂ, ಫಲವತ್ತೆಯೇನೂ ಕಡಿಮೆ ಆಗಲಿಲ್ಲ. ಹೀಗಾಗಿ, ಗೋಮಾಂಸ ತಿನ್ನುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ದನದ ಮಾಂಸ ರುಚಿಸದವರು ಖುಷಿ ಪಡುವ ಹಾಗೂ ಇಲ್ಲ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಯುರೇಕಾ ಅಲರ್ಟ್‌ ನಲ್ಲಿ ನೋಡಿ.

Published in: on March 21, 2007 at 10:26 am Comments (1)