ಬೂಸಾ ಮಾಂಸ!

ಭಾರತದ ಮಂದಿ ಹೆಚ್ಚೆಚ್ಚು ಉಂಡು ತಮಗೆ ಆಹಾರವಿಲ್ಲದಂತೆ ಮಾಡಿದ್ದಾರೆಂದು ದೂರಿದ ಅಮೆರಿಕನ್ನರು ಹೊಟ್ಟೆ ತುಂಬಿಸಿಕೊಳ್ಳಲು ಹೊಸ ಉಪಾಯ ಹೂಡಿದ್ದಾರೆ. ನಮ್ಮೂರಿನ ಬೂಸಾವನ್ನೇ ಆಹಾರವನ್ನಾಗಿ ಬಳಸಲು ಸಿದ್ಧರಾಗಿದ್ದಾರೆ. ಅಮೆರಿಕೆಯ ಆಹಾರ ಮತ್ತು ಔಷಧ ಪ್ರಾಧಿಕಾರ ಅಕ್ಕಿ ತೌಡನ್ನು ಮಾಂಸದ ಉತ್ಪನ್ನಗಳಲ್ಲಿ ಸೇರಿಸಿಕೊಳ್ಳಲು ಅನುಮತಿ ನೀಡಿದೆಯಂತೆ. ಅಕ್ಕಿ ತೌಡನ್ನು ಆಹಾರವನ್ನಾಗಿ ಬಳಸಲು ಹಲವು ಉಪಾಯಗಳನ್ನು ಹೂಡುತ್ತಿರುವ ಅಮೆರಿಕೆಯ ನ್ಯೂಟ್ರಸಿಯ ಎನ್ನುವ ಸಂಸ್ಥೆ ತಿಳಿಸಿದೆ.

ಅಕ್ಕಿ ತೌಡಿನ ಬಗ್ಗೆ ಭಾರತೀಯರಿಗೆ ತಿಳಿಯದ್ದು ಏನಿಲ್ಲ. ಸಹಸ್ರಾರು ವರುಷಗಳಿಂದ ಅದನ್ನು ದನಕರುಗಳಿಗೆ ಆಹಾರವನ್ನಾಗಿ ನೀಡಿ, ಬೂಸಾ ಎನ್ನುವ ಹೆಸರನ್ನೂ ನೀಡಿದ್ದೇವೆ. ಇತ್ತೀಚೆಗೆ ಈ ತ್ಯಾಜ್ಯಕ್ಕೂ ಬೆಲೆ ಬಂದಿರುವುದು ವಿಶೇಷ. ತೌಡು ಬಲು ಬೇಗನೆ ಹಾಳಾಗಲು ಅದರಲ್ಲಿರುವ ಎಣ್ಣೆ ಕಾರಣ. ಈ ಎಣ್ಣೆಯಲ್ಲಿ ಒರೈಜನಾಲ್‌ ಎನ್ನುವ ಪ್ರತ್ಯಾಕ್ಸಿಕಾರಕ ಅಂಶ ಇದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಅತಿ ವರ್ತನೆಯ ರಾಸಾಯನಿಕಗಳ ಕ್ರಿಯೆಯನ್ನು ಇಂತಹ ಪ್ರತ್ಯಾಕ್ಸಿಕಾರಕಗಳು ಶಮನಗೊಳಿಸುತ್ತವೆ. ಇದರಿಂದ ಮುಪ್ಪು, ವಯಸ್ಸಾಗುವುದರಿಂದ ಹಾಗೂ ಅಪಥ್ಯಾಹಾರದಿಂದ ಉಂಟಾಗುವ ಖಾಯಿಲೆಗಳನ್ನು ದೂರವಿಡಬಹುದು ಎಂದು ಪೋಷಣಾ ತಜ್ಞರ ಅಂಬೋಣ. ಹೀಗಾಗಿ ಪ್ರತ್ಯಾಕ್ಸೀಕಾರಕ (ಆಂಟಿಆಕ್ಸಿಡಂಟು)ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹಲವು ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಪ್ರತ್ಯಾಕ್ಸೀಕಾರಕಗಳು ಈಗ ಮೂಲ. ಒರೈಜನಾಲ್‌ ಇಂತಹ ಆಹಾರೌಷಧಗಳಲ್ಲಿ ಒಂದು. ಒರೈಜನಾಲ್‌ ಭರಿತ ಅಕ್ಕಿ ತೌಡಿನ ಎಣ್ಣೆ ಈಗ ಆಹಾರವಾಗಿ ಬಳಕೆಯಾಗುತ್ತಿದೆ. ಇದುವರೆವಿಗೂ ಅದನ್ನು ಸಾಬೂನಿನಂತಹ ಸೌಂದರ್ಯ ಸಾಧನಗಳಲ್ಲಿ ಬಳಸಲಾಗುತ್ತಿತ್ತು. ಒರೈಜನಾಲ್‌ನಿಂದಾಗಿ ಈಗ ತೌಡಿಗೂ ಬೆಲೆ ಬಂದಿದೆ. ಇನ್ನು ನ್ಯೂಟ್ರಸಿಯದ ಪ್ರಯತ್ನದಿಂದಾಗಿ ಎಣ್ಣೆ ಹಿಂಡಿದ ಬೂಸಾ ಇನ್ನಷ್ಟು ದುಬಾರಿಯಾದರೆ ಅಚ್ಚರಿಯೇನಿಲ್ಲ.

ಅಕ್ಕಿ ತೌಡನ್ನೇ ನೇರ ಆಹಾರವನ್ನಾಗಿ ಬಳಸಿಕೊಳ್ಳಲು ಆಗದು. ಏಕೆಂದರೆ ಅದರಲ್ಲಿರುವ ಎಣ್ಣೆಯಿಂದಾಗಿ ಅದು ಬಹು ಬೇಗನೆ ಮುಗ್ಗಲಾಗುತ್ತದೆ. ಅಸಹ್ಯ ವಾಸನೆ ಬೀರುತ್ತದೆ. ಇದರೊಟ್ಟಿಗೆ ತೌಡಿನಲ್ಲಿರುವ ಲೈಪೇಸ್‌ ಎನ್ನುವ ಕಿಣ್ವ ಜೀರ್ಣಕ್ರಿಯೆಗೂ ತೊಡಕಾಗಿರುತ್ತದೆ. ಹೀಗಾಗಿ ಮುಗ್ಗಲಾಗುವ ಮೊದಲೇ ತೌಡನ್ನು ಉಂಡರೂ ಆರೋಗ್ಯಕ್ಕೆ ಒಳ್ಳೆಯದಾಗದು. ಈ ಕಿಣ್ವದ ಚಟುವಟಿಕೆಯನ್ನು ತಡೆಗಟ್ಟುವಂತೆ ತೌಡನ್ನು ಸಂಸ್ಕರಿಸಿದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾದೀತು ಎನ್ನುತ್ತಾರೆ ವಿಜ್ಞಾನಿಗಳು. ನ್ಯೂಟ್ರಸಿಯ ಮಾಡಿರುವುದೂ ಇದನ್ನೇ! ಎಣ್ಣೆ ಹಿಂಡಿ ಉಳಿದ ತೌಡಿನ ನಾರಿನ ಅಂಶವನ್ನು ರಾಸಾಯನಿಕ ಕ್ರಿಯೆಯಿಂದ ಸ್ಥಿರಗೊಳಿಸಿ, ಲೈಪೇಸ್‌ ಚಟುವಟಿಕೆ ಇಲ್ಲವಾಗಿಸಿದೆ.  ಇದನ್ನೇ ಮಾಂಸದ ಉಂಡೆ, ಮಾಂಸದ ಪ್ಯಾಟಿಗಳಲ್ಲಿ ಕೂಡಿಸಿದ್ದಾರೆ.

ಅಕ್ಕಿ ತೌಡಿನಿಂದ ಲಾಭವಿದೆ. ಸಾಮಾನ್ಯವಾಗಿ ಇಂತಹ ಪದಾರ್ಥಗಳಲ್ಲಿ ಬಳಸುವ ಸೋಯ ಹಿಟ್ಟಿಗಿಂತಲೂ ಇದು ಅಗ್ಗ. ಒಂದು ಕಿಲೋ ಸೋಯಾ ಹಿಟ್ಟಿಗೆ ೨.೫೦ ಡಾಲರು ಬೆಲೆ. ಅಷ್ಟೇ ಪ್ರಮಾಣದ ಅಕ್ಕಿ ತೌಡಿನ ಬೆಲೆ ಕೇವಲ ಅರ್ಧ ಡಾಲರು. ಇದಷ್ಟೆ ಅಲ್ಲ! ಎಣ್ಣೆ ಹಿಂಡಿದ ಅಕ್ಕಿ ತೌಡು ಉತ್ತಮ ನಾರಿನ ಅಂಶದ ಆಕರ. ಆಹಾರದಲ್ಲಿ ನಾರಿನ ಅಂಶ ಕಡಿಮೆಯಾಗುತ್ತಿರುವುದರಿಂದಲೇ ಮಧುಮೇಹ, ಮಲಬದ್ಧತೆಯಂತಹ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ನಾರಿನ ಅಂಶ ಅತಿಕಡಿಮೆ ಇರುವ ಮಾಂಸಾಹಾರದಲ್ಲಿ ಅಕ್ಕಿ ತೌಡನ್ನು ಕೂಡಿಸುವುದರಿಂದ ನಾರಿನ ಅಂಶವನ್ನು ಹೆಚ್ಚಿಸಿದಂತೆಯೂ ಆಯಿತು, ಬೆಲೆ ಅಗ್ಗವಾಗಿಸಿದಂತೆಯೂ ಆಯಿತು ಎನ್ನುವುದು ನ್ಯೂಟ್ರಸಿಯದ ಆಲೋಚನೆ.  ಹೆಚ್ಚಿನ ವರದಿಗೆ ಫುಡ್‌ ನಾವಿಗೇಟರ್‌ ಯುಎಸ್‌ಎ ನೋಡಿ. 

ಈ ಸುದ್ದಿ ಕೇಳಿ ನಮ್ಮೂರ ದನಗಳು ತಮ್ಮ ಆಹಾರಕ್ಕೆ ಸಂಚಕಾರ ಬರುತ್ತವೆಂದು ಅಧ್ಯಕ್ಷ ಜಾರ್ಜ್‌ ಬುಷ್‌ಗೆ ದೂರು ಸಲ್ಲಿಸಿವೆ ಎನ್ನುವುದು ಗಾಳಿ ಸುದ್ದಿ!

 

Published in: on May 27, 2008 at 5:43 am Leave a Comment

ಗೋಮಾಂಸ ಭಕ್ಷಕರೇ ಎಚ್ಚರಿಕೆ!

ತಲೆಬರೆಹ ಓದಿ ತಲೆಯನ್ನು ಕುಟ್ಟಿದಂತಾಯಿತೇ? ಅಲ್ಲ ಸ್ವಾಮಿ, ವಿಜ್ಞಾನದ ಬ್ಲಾಗ್‌ನಲ್ಲಿ ರಾಜಕೀಯ ಬಂದಂತಿದೆಯಲ್ಲ, ಎಂದಿರಾ? ಇಲ್ಲ, ಸ್ವಾಮಿ. ಖಂಡಿತ ಇಲ್ಲ. ನಮ್ಮ ಹಿಂದುತ್ವವಾದಿಗಳು ಅಮೆರಿಕನ್ನರನ್ನು ಇನ್ನು ಜರೆಯುವುದು ಬಿಟ್ಟು ಹೊಗಳಲು ಆರಂಭಿಸಬೇಕು, ಅಷ್ಟೆ. ಏಕೆಂದರೆ ಮೊನ್ನೆ ತಾನೆ ಅಲ್ಲಿನ ರಾಜ್ಯದ ಸಂಸತ್ತು ಒಂದರಲ್ಲಿ ವೇದಪಠಣ ಆಗಿತ್ತು. ಈಗ ಅಮೆರಿಕೆಯ ರೋಚೆಸ್ಟರ್‌ವೈದ್ಯಕೀಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗೋಮಾಂಸ ಭಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವ ತಾಯಂದಿರ ಗಂಡು ಮಕ್ಕಳು ವೀರ್ಯಹೀನರಾಗುವ ಸಾಧ್ಯತೆಗಳಿವೆ ಎಂದು ನಿನ್ನೆ ಬಿಡುಗಡೆಯಾದ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

ಇಲ್ಲಿನ ರಿಪ್ರೊಡಕ್ಟಿವ್‌ ಎಪಿಡೆಮಿಯೊಲಜಿ ಸೆಂಟರ್‌ನ ನಿರ್ದೇಶಕರಾದ ಶಾನ್ನ ಎಚ್‌. ಸ್ವಾನ್‌ ತಮ್ಮ ಸಂಗಡಿಗರ ಜೊತೆಗೂಡಿ ಈ ಪ್ರಮುಖ ಸಂಶೋಧನೆ ಮಾಡಿದ್ದಾರೆ. ಇದರ ವಿವರಗಳನ್ನು ಜರ್ನಲ್‌ ಆಫ್‌ ಹ್ಯೂಮನ್‌ ರಿಪ್ರೊಡಕ್ಷನ್‌ನ ಮಾರ್ಚ್‌ ೨೮ ರ ಸಂಚಿಕೆಯಲ್ಲಿ ವರದಿ ಮಾಡಲಾಗಿದೆ.

ಗರ್ಭಿಣಿ ಹೆಂಗಸರು ದನದ ಮಾಂಸ ತಿನ್ನುವುದರಿಂದ ಅಪಾಯವೇನಾದರೂ ಇದೆಯೇ ಎನ್ನುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆದಿತ್ತು. ಒಟ್ಟು ೩೮೭ ಗಂಡಸರ ವೀರ್ಯ, ವೀರ್ಯಾಣು, ಸಂತಾನ ಸಾಮರ್ಥ್ಯ ಇತ್ಯಾದಿಗಳನ್ನು ಒಟ್ಟು ಮಾಡಿ, ಅವರ ತಾಯಂದಿರು ಗರ್ಭಿಣಿಯಾಗಿದ್ದಾಗ ತಿಂದಿದ್ದ ದನದ ಮಾಂಸದ ಪ್ರಮಾಣದ ಜೊತೆಗೆ ತಾಳೆ ಹಾಕಲಾಯಿತು. ಉಳಿದೆಲ್ಲ ವಿಷಯಗಳೂ ಸಮಾನವಾಗಿದ್ದಾಗ, ತಾಯಂದಿರ ದನದ ಮಾಂಸ ಸೇವನೆಯ ಪ್ರಮಾಣದಿಂದಾಗಿ ಈ ಗಂಡಸರ ವೀರ್ಯದಲ್ಲಿನ ವೀರ್ಯಾಣುಗಳ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇತ್ತು ಎಂದು ಸ್ವಾನ್‌ ತಂಡ ಹೇಳಿದೆ.

ವೀರ್ಯೋತ್ಪಾದನೆಯ ಪ್ರಮುಖ ಘಟ್ಟ ಮೀಸೆ ಬಲಿತಾಗ ಆಗುವುದಿಲ್ಲ. ಭ್ರೂಣಾವಸ್ಥೆಯಲ್ಲಿಯೇ ಆಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ತಾಯ ಗರ್ಭದಲ್ಲಿ ಇರುವಾಗಲೇ ವೀರ್ಯ ಜನಕಾಂಗದಲ್ಲಿನ ವೀರ್ಯಜನಕ ಕೋಶಗಳ ಸಂಖ್ಯೆ ನಿರ್ಣಯಿಸಲ್ಪಡುತ್ತದೆ. ಇದರಲ್ಲಿ ಹೆಚ್ಚು, ಕಡಿಮೆ ಆದಲ್ಲಿ, ಪರಿಣಾಮ ಪ್ರಾಯ ಬಂದ ಮೇಲೆ ತೋರುತ್ತದೆ.

ವೀರ್ಯಾಣುಗಳ ಸರಾಸರಿ ಸಂಖ್ಯೆ ಸ್ವಾನ್‌ ತಂಡ ಅಧ್ಯಯನ ಮಾಡಿದ ಗಂಡಸರಲ್ಲಿ ಶೇಕಡ ೧೮ರಷ್ಟು ಮಂದಿಯಲ್ಲಿ ಬಲು ಕಡಿಮೆ ಇತ್ತು. ಅದೇ ತಾಯಂದಿರು ಅತಿ ಗೋಮಾಂಸ ಭಕ್ಷಕರಾಗಿಲ್ಲದ ಗಂಡಸರಲ್ಲಿ ಕೇವಲ ಶೇಕಡ ೫ರಷ್ಟು ಮಂದಿಯಷ್ಟೆ ವೀರ್ಯಾಣುಗಳ ಕೊರತೆಯನ್ನು ಅನುಭವಿಸಿದ್ದರು.

ಹಾಗೆಂದು, ಈ ಗಂಡಸರೆಲ್ಲ ಸಂತಾನ ಹೀನರಾದರೆಂದುಕೊಳ್ಳಬೇಡಿ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೂ, ಫಲವತ್ತೆಯೇನೂ ಕಡಿಮೆ ಆಗಲಿಲ್ಲ. ಹೀಗಾಗಿ, ಗೋಮಾಂಸ ತಿನ್ನುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ದನದ ಮಾಂಸ ರುಚಿಸದವರು ಖುಷಿ ಪಡುವ ಹಾಗೂ ಇಲ್ಲ.

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಯುರೇಕಾ ಅಲರ್ಟ್‌ ನಲ್ಲಿ ನೋಡಿ.

Published in: on March 21, 2007 at 10:26 am Comments (1)