ಕೊಳ್ಳೇಗಾಲ ಶರ್ಮ
ನಾನು ಚಿಕ್ಕವನಾಗಿದ್ದಾಗ, ಕೊಳ್ಳೇಗಾಲ ತಾಲೂಕು ಎಂದರೆ ಬಲು ಹಿಂದುಳಿದ ನಾಡು ಎನ್ನುವ ಅನಿಸಿಕೆ ಇತ್ತು. ಸರ್ಕಾರಿ ದಾಖಲೆಗಳಲ್ಲೂ ಅದು ಬಲು ಹಿಂದುಳಿದ, ಅಥವಾ ಅಭಿವೃದ್ದಿ ಆಗದ ತಾಲೂಕು ಎಂದೇ ಇತ್ತು. ನಾನು ಹುಟ್ಟುವುದಕ್ಕೂ ಕೆಲವೇ ವರ್ಷಗಳ ಹಿಂದಷ್ಟೆ ಅಂದರೆ 1956ರಲ್ಲಿ ಕರ್ನಾಟಕಕ್ಕೆ ಸೇರ್ಪಡೆಯಾಗಿತ್ತು. ಅದುವರೆವಿಗೂ ಅದು ತಮಿಳುನಾಡಿನ, ಅಂದರೆ ಅಂದಿನ ಮದರಾಸು ರಾಜ್ಯದ, ಕೊಯಂಬತ್ತೂರು ಜಿಲ್ಲೆಯ ಅಂಗವಾಗಿತ್ತು. ನಾನು ಎರಡನೆಯದೋ, ಮೂರನೆಯದೋ ತರಗತಿಯಲ್ಲಿ ಇದ್ದಾಗ ನನಗೆ ಈ ವಿಷಯ ತಿಳಿದಾಗ ಬೆರಗಾಗಿದ್ದೆ. ತಮಿಳು ನಾಡಿನಿಂದ ಕನ್ನಡ ನಾಡಿಗೆ ಬಂದಿದ್ದೆವು ಎಂಬುದೇ ದೊಡ್ಡ ಖುಷಿಯ ವಿಷಯ ಎನಿಸಿತ್ತು. ಮೊನ್ನೆ ಅದಕ್ಕೂ ಹೆಚ್ಚಿನ ಖುಷಿಯ ವಿಷಯ ತಿಳಿಯಿತು. ಇನ್ನೂ ಖುಷಿಯಾಗಿದೆ. ಆಫ್ರಿಕಾಗೆ ಬಲು ಹತ್ತಿರದಲ್ಲಿ ಇತ್ತಂತೆ ನಮ್ಮ ಕೊಳ್ಳೇಗಾಲ.
ಕಿವಿಗೆ ಹೂವು ಇಡಬೇಡ ಎಂದಿರಾ? ಇಲ್ಲ ಸ್ವಾಮಿ. ಇದು ಸತ್ಯ. ನಾವು ಈಗ ಭಾರತದಲ್ಲಿ ಕರ್ನಾಟಕ ಎನ್ನುವ ರಾಜ್ಯದಲ್ಲಿ, ಪಶ್ಚಿಮ ಘಟ್ಟಗಳ ಒಂದು ಕೊನೆಯಲ್ಲಿ ಕಾಣುವ ಕೊಳ್ಳೇಗಾಲ ಎನ್ನುವ ಸ್ಥಳ ಒಂದಾನೊಂದು ಕಾಲದಲ್ಲಿ ಬೇರೆಯದೇ ಭೂ ಖಂಡಗಳ ಜೊತೆಗೆ ಬೆಸೆದುಕೊಂಡಿತ್ತಂತೆ. ಹೀಗನ್ನುತ್ತದೆ ಭೂವಿಜ್ಞಾನ. ಇದು ಹತ್ತು, ನೂರು ವರ್ಷಗಳ ಚರಿತ್ರೆಯಲ್ಲ. ಕೋಟ್ಯಂತರ ವರ್ಷಗಳ ಚರಿತ್ರೆ. ನಾನು ಈಗ ನನ್ನ ತವರು ಎನ್ನುವ ಕೊಳ್ಳೇಗಾಲ ಎನ್ನುವ ನೆಲ ಆಗ ಎಲ್ಲಿ ಇತ್ತು, ಹೇಗಿತ್ತು ಎನ್ನುವ ಕುತೂಹಲ ಚರಿತ್ರೆಯನ್ನು ಡೈನೊಸಾರ್ ಡಾಟ್ ಆರ್ಗ್ ಎನ್ನುವ ಜಾಲತಾಣದಲ್ಲಿ ನೋಡಬಹುದು. ಈ ಜಾಲತಾಣದಲ್ಲಿ ಭೂಮಿಯ ವಿಕಾಸದ ಬಗ್ಗೆ ನಮಗೆ ತಿಳಿದಿರುವ ಮಾಹಿತಿಯನ್ನೆಲ್ಲ ಸಂಗ್ರಹಿಸಿ, ಅದಕ್ಕೆ ಅನುಗುಣವಾಗಿ ಭೂಗೋಳದ ಚಿತ್ರ ಕಾಣುವಂತೆ ಮಾಡಿದ್ದಾರೆ. ಅಂದರೆ ಒಂದು ಕೋಟಿ ವರ್ಷಗಳ ಹಿಂದೆ ಭೂಮಿ ಹೇಗಿತ್ತು ಎನ್ನುವ ಚಿತ್ರಣ ದೊರೆಯುತ್ತದೆ. ಆ ಭೂಗೋಳದಲ್ಲಿ ನಮ್ಮೂರನ್ನೂ ಹುಡುಕಬಹುದು. ಅರ್ಥಾತ್, ಇಂದು ನಾನು ನನ್ನೂರು ಎಂದು ಕರೆಯುವ ನೆಲ, ಅಂದು ಎಲ್ಲಿತ್ತು ಎನ್ನುವುದು ತಿಳಿಯುತ್ತದೆ.
ನಮ್ಮೂರು ಎಲ್ಲಿತ್ತು ಅಂದರೆ ಏನರ್ಥ ಎಂದಿರಾ? ಈ ಭೂಮಿ ನಾವು ಇಂದು ನೋಡುವ ಹಾಗೆ ಹಿಂದೆ ಇರಲಿಲ್ಲ ಎನ್ನುವುದು ಗೊತ್ತಷ್ಟೆ. ಹಾಗೆಯೇ ಈ ಭೂಮಿಯ ಮೇಲೆ ನಾವು ಇಂದು ಗುರುತಿಸುವ ವಿವಿಧ ಸ್ಥಳಗಳ ಸ್ಥಾನವೂ ಇಂದಿನಂತೆ ಅಂದು ಇರಲಿಲ್ಲ. ಇಂದು ಇರುವಲ್ಲಿಯೇ ಲಕ್ಷ ವರ್ಷಗಳ ನಂತರ ಇರುವುದಿಲ್ಲ. ಏಕೆಂದರೆ ಭೂಮಿಯ ಮೇಲೆ ನಾವು ನೆಲ ಎಂದು ಗುರುತಿಸುವ ಪದರವಿದೆಯಲ್ಲ, ಅದು ಸದಾ ಚಲಿಸುತ್ತಲೇ ಇರುತ್ತದೆ. ಅದರ ಕೆಳಗೆ ಬಲು ಬಿಸಿಯಾದ ದ್ರವವಿದೆ. ಆ ದ್ರವದ ಮೇಲೆ ಹಾಲು ಕೆನೆಗಟ್ಟಿದಾಗ ಇರುವ ಪದರದಂತೆ ಒಂದು ಪದರ ಗಟ್ಟಿಯಾಗಿದೆ. ಆ ಪದರವೇ ನಾವು ತುಳಿದಾಡುವ, ಅಡ್ಡಾಡುವ, ಓಡಾಡುವ ನೆಲ. ಇಂತಹ ಹಲವಾರು ಪದರಗಳು ತೇಲಾಡುತ್ತಿವೆ.ಇವನ್ನೆಲ್ಲ ಭೂಫಲಕಗಳು ಅರ್ಥಾತ್ ಟೆಕ್ಟಾನಿಕ್ ಪ್ಲೇಟ್ ಎಂದು ಭೂವಿಜ್ಞಾನಿಗಳು ಹೆಸರಿಸಿದ್ದಾರೆ. ಈ ಫಲಕಗಳು ಹೀಗೆ ತೇಲುತ್ತಾ, ಕೆನೆಯ ಚೂರುಗಳಂತೆಯೇ ಒಂದಿನ್ನೊಂದನ್ನು ದೂಡುತ್ತಲೋ, ಒಂದಿನ್ನೊಂದರಿಂದ ದೂರ ಸರಿಯುತ್ತಲೋ ಇರುತ್ತವೆ. ಕೆಲವೊಮ್ಮೆ ಒಂದರ ಜೊತೆಗೆ ಇನ್ನೊಂದು ಬೆಸೆದುಕೊಳ್ಳಲೂ ಬಹುದು. ಕೆಲವೊಮ್ಮೆ ಒಂದು ಎರಡಾಗಿ ಬಿರುಕು ಒಡೆಯಲೂ ಬಹುದು.
ನಾವು ಇಂದು ಬರೆಯುವ ವಿವಿಧ ಭೂಖಂಡಗಳ ನಕ್ಷೆ ಈ ರೀತಿಯಲ್ಲಿ ರೂಪುಗೊಂಡಿದೆ ಎನ್ನುವುದು ವಿಜ್ಞಾನಿಗಳ ವಾದ. ಪ್ಲೇಟ್ ಟೆಕ್ಟಾನಿಕ್ಸ್ ಎನ್ನುವ ಈ ಪರಿಕಲ್ಪನೆಯ ಪ್ರಕಾರ ನಾವು ಇಂದು ಇರುವ ಭರತಖಂಡ ಹಿಂದೊಮ್ಮೆ ಆಫ್ರಿಕಾ ಖಂಡದ ಭಾಗವಾಗಿತ್ತು. ಅದೊಂದು ದೊಡ್ಡ ಭೂಖಂಡವಾಗಿತ್ತು. ಈ ಖಂಡ ಚೂರು, ಚೂರಾಗಿ ಒಡೆದು ಬೇರೆಯಾಯಿತು. ಅಂತಹ ಚೂರುಗಳಲ್ಲಿ ಒಂದು ಉತ್ತರಕ್ಕೆ ಸರಿಯುತ್ತಾ ಯೂರೇಶಿಯಾ ಎನ್ನುವ ಇನ್ನೊಂದು ಭಾರೀ ಖಂಡದ ಜೊತೆಗೆ ಘಟ್ಟಿಸಿತು. ಅದರ ಜೊತೆಗೆ ಬೆಸೆದುಕೊಂಡಿತು. ಇಂದಿನ ಭಾರತವಾಯಿತು. ಹೀಗೆ ಇದು ಘಟ್ಟಿಸಿದ ಸ್ಥಳದಲ್ಲಿ ಮಡಚಿಕೊಂಡ ಕೆನೆಪದರಗಳೇ ಈಗಿನ ಹಿಮಾಲಯ.
ಡೈನೊಸಾರ್ ಪಿಕ್ಷರ್ಸ್ ಆರ್ಗ್ ಜಾಲತಾಣದಲ್ಲಿ ಈ ಚರಿತ್ರೆಯನ್ನು ಬಿಂಬಿಸುವ ಭೂಗೋಳಗಳಿವೆ. ಇಂದು ನಾವು ಗುರುತಿಸುವ ವಿವಿಧ ಭೂ ಪ್ರದೇಶಗಳ ಹೆಸರನ್ನು ಹಾಕಿದರೆ, ವಿವಿಧ ಕಾಲಘಟ್ಟದಲ್ಲಿ ಅದು ಎಲ್ಲಿತ್ತು ಎಂದು ಇದು ತೋರಿಸುತ್ತದೆ. ಈ ಚಿತ್ರದಲ್ಲಿ ನೀವು ನೋಡುವುದು ನಮ್ಮ ಕೊಳ್ಳೇಗಾಲ ಇದ್ದ ಸ್ಥಾನ. ಚಾಮರಾಜನಗರ ಜಿಲ್ಲೆಯಲ್ಲಿರುವ ಕೊಳ್ಳೇಗಾಲ ಇಲ್ಲಿ ಕೆಂಪು ಚುಕ್ಕಿಯಾಗಿ ತೋರುತ್ತಿದೆ. ಎರಡು ಕೋಟಿ ವರ್ಷಗಳು ಅಥವಾ ಇಪ್ಪತ್ತು ಮಿಲಿಯನ್ ವರ್ಷಗಳ ಹಿಂದೆ. ಅದಾಗಲೇ ಭಾರತ ಖಂಡ ರೂಪುಗೊಂಡಾಗಿತ್ತು. ಆದರೆ ನಮ್ಮೂರಿನಲ್ಲಿ ಜನಗಳೇ ಇರಲಿಲ್ಲ. ಏಕೆಂದರೆ ಆಗಿನ್ನೂ ಮನುಷ್ಯರು ಹುಟ್ಟಿರಲೇ ಇಲ್ಲ! ಏನಿದ್ದರೂ ಕೆಲವು ಸ್ತನಿಗಳೂ, ಹಕ್ಕಿಗಳೂ ಇದ್ದುವು.

ಅದಕ್ಕೂ ಹಿಂದೆ ಹೇಗಿತ್ತು? ಎಲ್ಲಿತ್ತು ನಮ್ಮೂರು? ಇದೋ ಐದು ಕೋಟಿ ವರ್ಷಗಳ ಹಿಂದೆ ನಮ್ಮ ಕೊಳ್ಳೇಗಾಲ ಇದ್ದ ಸ್ಥಿತಿ. ಆಗ ಕೈಲಾಸ ಪರ್ವತ ಹಾಗೂ ಹಿಮಾಲಯ ಇನ್ನೂ ಹುಟ್ಟಿರಲಿಲ್ಲ. ಕೆಲವು ಕೋಟಿ ವರ್ಷಗಳ ಹಿಂದೆ ಉಲ್ಕೆಗಳು ಬಂದು ಭೂಮಿಯನ್ನು ಬಡಿದ ಕಾರಣವಾಗಿ ಇಲ್ಲಿದ್ದ ದೈತ್ಯ ಡೈನೋಸಾರುಗಳೆಲ್ಲವೂ ನಾಶವಾಗಿದ್ದುವು. ಹಕ್ಕಿಗಳು, ಸ್ತನಿಗಳು ಭೂಮಿಯಲ್ಲಿ ಕಾಣಿಸಿಕೊಂಡಿದ್ದುವು.

ಅದಕ್ಕೂ ಹಿಂದೆ ಅಂದರೆ ಸುಮಾರು 17 ಕೋಟಿ ವರ್ಷಗಳ ಹಿಂದೆ ಭೂಮಿ ಈಗಿನಷ್ಟು ಹಿತವಾಗಿರಲಿಲ್ಲ. ಹವೆ ಬಲು ಬಿಸಿಯಾಗಿತ್ತು. ಹಾಂ. ನಮ್ಮ ಭರತ ಖಂಡ ಹೆಚ್ಚೂ ಕಡಿಮೆ ಆಫ್ರಿಕಾ ಖಂಡಕ್ಕೇ ಸೇರಿಬಿಟ್ಟಿತ್ತು ಎನ್ನಬಹುದು. ಮಡಗಾಸ್ಕರ್ ದ್ವೀಪ ಸಮೂಹಗಳು ಈಗ ಇರುವ ಕೇರಳಾಗೆ ಬಲು ಹತ್ತಿರದಲ್ಲಿ ಇದ್ದುವು. ಯಾವ ದೇಶ? ಯಾವ ಸೀಮೆ ಎನ್ನೋಣವೇ? ಅದು ಡೈನೋಸಾರುಗಳ ಕಾಲ. ಹಾಂ. ನಮ್ಮ ಮರಡೀ ಗುಡ್ಡದ ಮೇಲೂ ಡೈನೋಸಾರುಗಳು ಓಡಾಡುತ್ತಿದ್ದಿರಬಹುದು ಎಂದು ಊಹಿಸಿಕೊಳ್ಳುವುದೇ ಎಷ್ಟು ವಿಸ್ಮಯಕರವಾದ ವಿಷಯ!


ಇನ್ನೂ ಹಿಂದೆ ನಮ್ಮ ಭರತ ಖಂಡವೇ ಇರಲಿಲ್ಲ. ಇದೋ ಮೂವತ್ತು ಕೋಟಿ ವರ್ಷಗಳ ಹಿಂದೆ ನಮ್ಮ ಭೂಮಿಯ ನಕ್ಷೆ. ಹೀಗಿತ್ತು. ಉಸಿರಾಡಲು ಆಮ್ಲಜನಕವಿತ್ತು. ಆದರೆ ಹೆಚ್ಚಿನ ಭಾಗವನ್ನೆಲ್ಲ ಮೋಡಗಳೇ ಆವರಿಸಿಕೊಂಡಿದ್ದುವು. ಹಸಿರು ಗಿಡಗಳು ಇದ್ದುವು. ಹೂಗಳು ಇರಲಿಲ್ಲ! ಇದ್ದುದೆಲ್ಲ ಜರೀಗಿಡಗಳು, ಪಾಚಿ ಹಾಗೂ ಇತರೆ ಸಸ್ಯಗಳು. ಕೆಲವು ಕೀಟಗಳು ಇದ್ದುವು. ಹಾವು, ಹಲ್ಲಿಗಳು ಇದ್ದುವು. ಕೀಟಗಳೂ ಬಲು ದೈತ್ಯವಾಗಿದ್ದುವು. ಮನುಷ್ಯ ಇದ್ದಿರಲು ಸಾಧ್ಯವೇ ಇಲ್ಲ! ಆಗ ನಮ್ಮ ಕೊಳ್ಳೇಗಾಲ ಆಫ್ರಿಕಾದ ಜೊತೆಗೇ ಬೆಸೆದುಕೊಂಡು ಬಿಟ್ಟಿತ್ತು. ಭಾರತವೂ ಇರಲಿಲ್ಲ. ಮಹಾಭಾರತವೂ ಇರಲಿಲ್ಲ!


ಇದೋ ಈ ಕಾಲದಲ್ಲಿ ನಿಮ್ಮೂರು ಎಲ್ಲಿತ್ತು ಎಂದು ನೋಡಬೇಕೇ? ಹಾಗಿದ್ದರೆ ಇದೋ ಈ ಜಾಲತಾಣದಲ್ಲಿ ಇರುವ ನಕ್ಷೆಯನ್ನು ನೋಡಿ. ಇದು ಇಂಟರಾಕ್ಟಿವ್ ನಕ್ಷೆ. ನೀವು ಕೊಟ್ಟ ಮಾಹಿತಿಗೆ ತಕ್ಕಂತೆ ಉತ್ತರವನ್ನು ಒದಗಿಸುತ್ತದೆ. ಪ್ರಯತ್ನಿಸಿ. http://dinosaurpictures.org/ancient-earth#0
ಇದನ್ನು ನೋಡಿದಾಗ ಈ ಸೀಮೆಗಳು, ಸಂಸ್ಕೃತಿ ಎಲ್ಲವೂ ಎಷ್ಟು ಕೃತಕ ಎನ್ನಿಸುವುದಿಲ್ಲವೇ?
ಚಿತ್ರಗಳ ಕೃಪೆ: http://dinosaurpictures.org/ancient-earth#0