ಸಂತೋಷದ ಸ್ವರೂಪ

ಇದು ಬ್ರಿಟಿಷ್ ವಿಜ್ಞಾನಿ ಡೆಸ್ಮಂಡ್ ಮಾರಿಸ್ ಬರೆದ ‘ದಿ ನೇಚರ್‍ ಆಫ್‍ ಹ್ಯಾಪಿನೆಸ್‍’ ಪುಸ್ತಕದ ಅನುವಾದ.

ಡೆಸ್ಮಂಡ್‍ ಮಾರಿಸ್ ಲಂಡನ್ನಿನ ಪ್ರಾಣಿಸಂಗ್ರಹಾಲಯದ ನಿರ್ದೇಶಕನಾಗಿದ್ದವ. ಪ್ರಾಣಿಗಳ ನಡವಳಿಕೆಗಳನ್ನು ಬಲು ನಿಕಟವಾಗಿ ಕಂಡವ. ಜೀವವಿಜ್ಞಾನಿಯೂ ಹೌದು. ಹೀಗಾಗಿ ಮಾನವನ ನಡವಳಿಕೆಗಳನ್ನೂ ಪ್ರಾಣಿಗಳ ನಡವಳಿಕೆಯಂತೆಯೇ ವೈಜ್ಞಾನಿಕವಾಗಿ ವಿಶ್ಲೇಷಿಸಿದವ. ತನ್ನ ಅಧ್ಯಯನ, ಅನುಭವಗಳ ಸಾರವನ್ನು ಹಲವು ಜನಪ್ರಿಯ ಪುಸ್ತಕಗಳ ಮೂಲಕ ಹಂಚಿದವ. ಜೀವವಿಜ್ಞಾನಿಗಳಿಗೂ, ಜನಸಾಮಾನ್ಯರಿಗೂ ಆ ಕಾರಣದಿಂದಾಗಿ ಆಪ್ತನಾದ ಲೇಖಕ-ವಿಜ್ಞಾನಿ.

ಈತ ಬರೆದ ದಿ ನೇಕೆಡ್‍ ಏಪ್‍, ದಿ ನೇಕೆಡ್‍ ಮ್ಯಾನ್, ದಿ ನೇಕೆಡ್‍ ವುಮನ್‍, ಮ್ಯಾನ್‍ ವಾಚಿಂಗ್‍, ಬೇಬಿ ವಾಚಿಂಗ್‍, ದಿ ಸಾಕ್ಸರ್‍ ಟ್ರೈಬ್‍ (ಫುಟ್‍ಬಾಲ್‍ ಗೀಳಿರುವವರನ್ನು ಕುರಿತು ಬರೆದದ್ದು), ದಿ ಇಂಟಿಮೇಟ್‍ ಬಿಹೇವಿಯರ್‍ ಮೊದಲಾದ ಪುಸ್ತಕಗಳು ಕಥೆ-ಕಾದಂಬರಿಗಳಷ್ಟೆ ಜನಪ್ರಿಯವಾದಂತವು. ಈ ಎಲ್ಲ ಪುಸ್ತಕಗಳಲ್ಲೂ ಮಾನವನ ನಡವಳಿಕೆಗಳನ್ನು ವಿಜ್ಞಾನದ ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಅವಲೋಕಿಸಿದ್ದಾರೆ ಮಾರಿಸ್‍. ಪ್ರಪಂಚದ ಹಲವು ಭಾಷೆಗಳಿಗೆ ಇವುಗಳಲ್ಲಿ ಬಹುತೇಕ ಪುಸ್ತಕಗಳು ಭಾಷಾಂತರಗೊಂಡಿವೆ. ಆದರೆ ಅಂತಹ ಭಾಷಾಂತರವಿಲ್ಲದ ಕಾರಣ ಕನ್ನಡದ ಓದುಗರಿಗೆ ಈ ಸ್ವಾರಸ್ಯಕರ ದೃಷ್ಟಿಕೋನಗಳು ಅಲಭ್ಯ. ಕನ್ನಡವನ್ನಷ್ಟೆ ತಿಳಿದಿರುವ ಓದುಗರಿಗೂ ಮಾನವನ ನಡವಳಿಕೆಗಳ ಕುರಿತ ಈ ದೃಷ್ಟಿಕೋನ ದೊರೆಯಲಿ ಎನ್ನುವ ಹಂಬಲದಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ. ಇಂಗ್ಲೀಷಿನ ಮೂಲವನ್ನು ಕಾಪಿರೈಟ್‍ ಕಾರಣಗಳಿಂದಾಗಿ ಇಲ್ಲಿ ಕೊಟ್ಟಿಲ್ಲ. ಆಸಕ್ತರಿಗೆ ಆ ಪುಸ್ತಕಗಳ ಹೊದಿಕೆ ಹಾಗೂ ವಿವರಗಳ ಪುಟವನ್ನು ಇಲ್ಲಿ ನೀಡಿದ್ದೇನೆ.

cover1cover2titlepage

ಧರ್ಮ, ದೇವರು, ಪ್ರೇಮ, ಕಾಮಗಳ ಬಗ್ಗೆ ವೈಜ್ಞಾನಿಕ ಹೊಳಹು ನೀಡಿ ಜೀವವಿಜ್ಞಾನದ ಅಧ್ಯಯನಕ್ಕೆ ಪ್ರೇರಣೆ ನೀಡಿದ ಡೆಸ್ಮಂಡ್‍ ಮಾರಿಸ್‍ ಅವರಿಗೆ ಕೃತಜ್ಞ.

ವಾರಕ್ಕಿಷ್ಟು ಎಂದು ಈ ಪುಟಗಳನ್ನು ಹಂಚಿಕೊಳ್ಳಲಿದ್ದೇನೆ. ಇಲ್ಲಿನ ಚಿಂತನೆಗಳ ಬಗ್ಗೆ ಹಾಗೂ ಭಾಷಾಂತರದ ಬಗ್ಗೆ ಓದುಗರ ಟಿಪ್ಪಣಿಗಳು ಬರುತ್ತದೆನ್ನುವ ಆಶಯದೊಂದಿಗೆ ಈ ಪ್ರಯೋಗವನ್ನು ಮುಂದುವರೆಸುವೆ.

 

Advertisements
ಪ್ರಕಟಿತ on ಡಿಸೆಂಬರ್ 20, 2015 at 6:02 ಅಪರಾಹ್ನ  Comments Off on ಸಂತೋಷದ ಸ್ವರೂಪ  
%d bloggers like this: