ತಲೆಬರೆಹ ಓದಿ ತಲೆಯನ್ನು ಕುಟ್ಟಿದಂತಾಯಿತೇ? ಅಲ್ಲ ಸ್ವಾಮಿ, ವಿಜ್ಞಾನದ ಬ್ಲಾಗ್‌ನಲ್ಲಿ ರಾಜಕೀಯ ಬಂದಂತಿದೆಯಲ್ಲ, ಎಂದಿರಾ? ಇಲ್ಲ, ಸ್ವಾಮಿ. ಖಂಡಿತ ಇಲ್ಲ. ನಮ್ಮ ಹಿಂದುತ್ವವಾದಿಗಳು ಅಮೆರಿಕನ್ನರನ್ನು ಇನ್ನು ಜರೆಯುವುದು ಬಿಟ್ಟು ಹೊಗಳಲು ಆರಂಭಿಸಬೇಕು, ಅಷ್ಟೆ. ಏಕೆಂದರೆ ಮೊನ್ನೆ ತಾನೆ ಅಲ್ಲಿನ ರಾಜ್ಯದ ಸಂಸತ್ತು ಒಂದರಲ್ಲಿ ವೇದಪಠಣ ಆಗಿತ್ತು. ಈಗ ಅಮೆರಿಕೆಯ ರೋಚೆಸ್ಟರ್‌ವೈದ್ಯಕೀಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಗೋಮಾಂಸ ಭಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವ ತಾಯಂದಿರ ಗಂಡು ಮಕ್ಕಳು ವೀರ್ಯಹೀನರಾಗುವ ಸಾಧ್ಯತೆಗಳಿವೆ ಎಂದು ನಿನ್ನೆ ಬಿಡುಗಡೆಯಾದ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.
ಇಲ್ಲಿನ ರಿಪ್ರೊಡಕ್ಟಿವ್ ಎಪಿಡೆಮಿಯೊಲಜಿ ಸೆಂಟರ್‌ನ ನಿರ್ದೇಶಕರಾದ ಶಾನ್ನ ಎಚ್. ಸ್ವಾನ್ ತಮ್ಮ ಸಂಗಡಿಗರ ಜೊತೆಗೂಡಿ ಈ ಪ್ರಮುಖ ಸಂಶೋಧನೆ ಮಾಡಿದ್ದಾರೆ. ಇದರ ವಿವರಗಳನ್ನು ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್‌ನ ಮಾರ್ಚ್ ೨೮ ರ ಸಂಚಿಕೆಯಲ್ಲಿ ವರದಿ ಮಾಡಲಾಗಿದೆ.
ಗರ್ಭಿಣಿ ಹೆಂಗಸರು ದನದ ಮಾಂಸ ತಿನ್ನುವುದರಿಂದ ಅಪಾಯವೇನಾದರೂ ಇದೆಯೇ ಎನ್ನುವ ನಿಟ್ಟಿನಲ್ಲಿ ಈ ಸಂಶೋಧನೆ ನಡೆದಿತ್ತು. ಒಟ್ಟು ೩೮೭ ಗಂಡಸರ ವೀರ್ಯ, ವೀರ್ಯಾಣು, ಸಂತಾನ ಸಾಮರ್ಥ್ಯ ಇತ್ಯಾದಿಗಳನ್ನು ಒಟ್ಟು ಮಾಡಿ, ಅವರ ತಾಯಂದಿರು ಗರ್ಭಿಣಿಯಾಗಿದ್ದಾಗ ತಿಂದಿದ್ದ ದನದ ಮಾಂಸದ ಪ್ರಮಾಣದ ಜೊತೆಗೆ ತಾಳೆ ಹಾಕಲಾಯಿತು. ಉಳಿದೆಲ್ಲ ವಿಷಯಗಳೂ ಸಮಾನವಾಗಿದ್ದಾಗ, ತಾಯಂದಿರ ದನದ ಮಾಂಸ ಸೇವನೆಯ ಪ್ರಮಾಣದಿಂದಾಗಿ ಈ ಗಂಡಸರ ವೀರ್ಯದಲ್ಲಿನ ವೀರ್ಯಾಣುಗಳ ಪ್ರಮಾಣ ಸಾಮಾನ್ಯಕ್ಕಿಂತಲೂ ಕಡಿಮೆ ಇತ್ತು ಎಂದು ಸ್ವಾನ್ ತಂಡ ಹೇಳಿದೆ.
ವೀರ್ಯೋತ್ಪಾದನೆಯ ಪ್ರಮುಖ ಘಟ್ಟ ಮೀಸೆ ಬಲಿತಾಗ ಆಗುವುದಿಲ್ಲ. ಭ್ರೂಣಾವಸ್ಥೆಯಲ್ಲಿಯೇ ಆಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ತಾಯ ಗರ್ಭದಲ್ಲಿ ಇರುವಾಗಲೇ ವೀರ್ಯ ಜನಕಾಂಗದಲ್ಲಿನ ವೀರ್ಯಜನಕ ಕೋಶಗಳ ಸಂಖ್ಯೆ ನಿರ್ಣಯಿಸಲ್ಪಡುತ್ತದೆ. ಇದರಲ್ಲಿ ಹೆಚ್ಚು, ಕಡಿಮೆ ಆದಲ್ಲಿ, ಪರಿಣಾಮ ಪ್ರಾಯ ಬಂದ ಮೇಲೆ ತೋರುತ್ತದೆ.
ವೀರ್ಯಾಣುಗಳ ಸರಾಸರಿ ಸಂಖ್ಯೆ ಸ್ವಾನ್ ತಂಡ ಅಧ್ಯಯನ ಮಾಡಿದ ಗಂಡಸರಲ್ಲಿ ಶೇಕಡ ೧೮ರಷ್ಟು ಮಂದಿಯಲ್ಲಿ ಬಲು ಕಡಿಮೆ ಇತ್ತು. ಅದೇ ತಾಯಂದಿರು ಅತಿ ಗೋಮಾಂಸ ಭಕ್ಷಕರಾಗಿಲ್ಲದ ಗಂಡಸರಲ್ಲಿ ಕೇವಲ ಶೇಕಡ ೫ರಷ್ಟು ಮಂದಿಯಷ್ಟೆ ವೀರ್ಯಾಣುಗಳ ಕೊರತೆಯನ್ನು ಅನುಭವಿಸಿದ್ದರು.
ಹಾಗೆಂದು, ಈ ಗಂಡಸರೆಲ್ಲ ಸಂತಾನ ಹೀನರಾದರೆಂದುಕೊಳ್ಳಬೇಡಿ. ವೀರ್ಯಾಣುಗಳ ಸಂಖ್ಯೆ ಕಡಿಮೆ ಇದ್ದರೂ, ಫಲವತ್ತೆಯೇನೂ ಕಡಿಮೆ ಆಗಲಿಲ್ಲ. ಹೀಗಾಗಿ, ಗೋಮಾಂಸ ತಿನ್ನುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ದನದ ಮಾಂಸ ರುಚಿಸದವರು ಖುಷಿ ಪಡುವ ಹಾಗೂ ಇಲ್ಲ.
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಯುರೇಕಾ ಅಲರ್ಟ್ ನಲ್ಲಿ ನೋಡಿ.
Good and Full of new information..
please visit and suggest…
http://khagola.blogspot.com