ನಮ್ಮೂರಲ್ಲಿ ಇತ್ತೀಚೆಗೆ ಕಾಲೇಜು ದಿನಾಚರಣೆಗಳಲ್ಲಿ ಎರಡು ಕಾರ್ಯಕ್ರಮಗಳು ಅನಿವಾರ್ಯ – ಮೊದಲನೆಯದು ರಂಗಮಂಚವನ್ನು ಮುರಿಯುವಂತೆ ಕುಣಿಯುವ ಬ್ರೇಕ್ ಡ್ಯಾನ್ಸ್ ಮತ್ತು ಎರಡನೆಯದು ಫ್ಯಾಶನ್ ಶೋ. ನಮ್ಮೂರಿನ ಚೆಲುವೆಯರು ವಿಶ್ವಸುಂದರಿಯಾಗುತ್ತಾರೆಯೋ ಇಲ್ಲವೋ, ರಂಗಮಂಚದಲ್ಲಿ ಅದಕ್ಕಿಂತಲೂ ಬಿನ್ನಾಣದಿಂದ ನಡೆಯುವುದನ್ನು ನೋಡಿ ಪೋಕರಿಗಳು ಶಿಳ್ಳೆ ಹೊಡೆಯುವುದು ಎಫ್‌ಎಂ ಚಾನೆಲ್ ಇಲ್ಲದಿದ್ದರೂ ಊರಿಗೆಲ್ಲಾ ಕೇಳಿಸುತ್ತದೆ. ಅಮೆರಿಕೆಯ ಸಂಸ್ಕೃತಿ ಇವರಿಗ್ಯಾಕೆ ಎಂದು ನನ್ನಂತಹ ಮುದಿ ಗೊಡ್ಡುಗಳು ಮೂಗು ಮುರಿಯುವುದು ಇದ್ದಿದ್ದೇ. ಹೀಗಿರುವಾಗ ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಒಂದು ಫ್ಯಾಶನ್ ಶೋ ಬಗ್ಗೆ ಬರೆಯಲೇ ಬೇಕಾಗಿ ಬಂದಿದೆ.
ಕಾರ್ನೆಲ್ ವಿಶ್ವವಿದ್ಯಾನಿಲಯದ ನಾರು ವಿಜ್ಞಾನ ಮತ್ತು ದಿರಿಸು ವಿನ್ಯಾಸ ವಿಭಾಗದ ವಿದ್ಯಾರ್ಥಿನಿ ಒಲಿವಿಯಾ ಒಂಗ್ ಒಂದು ಹೈಟೆಕ್ ಫ್ಯಾಶನ್ ಬಟ್ಟೆ ತಯಾರಿಸಿದ್ದಾಳೆ. ಇದನ್ನು ಅಲ್ಲಿ ಜರುಗಿದ ಫ್ಯಾಶನ್ ಶೋ ಒಂದರಲ್ಲಿ ಇತ್ತೀಚೆಗೆ ಪ್ರದರ್ಶಿಸಲಾಯಿತು. ಹೈ ಫ್ಯಾಶನ್ ಎಂದ ಕೂಡಲೆ ಅತಿ ಕಡಿಮೆ ಬಟ್ಟೆಯ ದಿರಿಸು ಎಂದುಕೊಳ್ಳಬೇಡಿ. ಮೈ ಪೂರ್ತ ಹೊದಿಕೆಯಾಗುವ ಈಕೆಯ ದಿರಿಸು ಹೈ ಫ್ಯಾಶನ್ ಅಲ್ಲ, ಹೈಟೆಕ್ ಬಟ್ಟೆಯ ಫ್ಯಾಶನ್. ಬೆಳ್ಳಿಯ ನಾನೋ ಕಣಗಳನ್ನು ಮೈತುಂಬಿಕೊಂಡ ಈ ಬಟ್ಟೆ ಕೊಳೆಯೇ ಆಗುವುದಿಲ್ಲವಂತೆ. ಡೆನಿಮ್ ನಂತೆ ಈ ಬಟ್ಟೆಯನ್ನು ಒಗೆಯಲೇ ಬೇಕಿಲ್ಲ ಎನ್ನುತ್ತದೆ ಈ ಸುದ್ದಿ ಪ್ರಕಟಿಸಿರುವ ಕಾರ್ನೆಲ್ ಕ್ರಾನಿಕಲ್.
ಬಟ್ಟೆ ಕೊಳೆಯಾಗದಂತೆ ತಡೆಯುವುದು ಯಾರಿಗೆ ಇಷ್ಟವಿಲ್ಲ. ದಿರಿಸಿಗೆ ಮೆತ್ತಿಕೊಳ್ಳುವ ಮಣ್ಣು, ಎಣ್ಣೆಯಲ್ಲದೆ ಇವುಗಳ ನೆರಳಿನಲ್ಲಿ ನೆಲೆಯಾಗುವ ಬೆಕ್ಟೀರಿಯಾ, ಬೂಸುಗಳು ಬಟ್ಟೆಯನ್ನು ಹಾಳುಗೆಡವುತ್ತವೆ. ದಪ್ಪಗಿನ, ಗಾಢ ನೀಲಿ ಬಣ್ಣದ ಡೆನಿಮ್ ಈಗಲೂ ಯುವಜನರ ಮೆಚ್ಚಿನ ಬಟ್ಟೆ. ಏಕೆಂದರೆ, ಇದನ್ನು ಒಗೆಯುವುದು ಕಷ್ಟ. ಒಗೆಯುವವರು ದೊರೆಯುವುದೂ ಕಷ್ಟ! ಇದನ್ನೂ ಮೀರಿಸುವ ಫ್ಯಾಶನ್ ಬಟ್ಟೆ ಒಂಗ್‌ನ ವಿನ್ಯಾಸ.
ಕೆಲವು ವರುಷಗಳ ಹಿಂದೆ ಜಪಾನಿನ ಒಂದು ಒಳ ಉಡುಪು ತಯಾರಕ ಕಂಪೆನಿ, ಒಳ ಉಡುಪುಗಳನ್ನು ತಯಾರಿಸುವಾಗ ಅದರ ನೂಲಿನ ಎಡೆಯಲ್ಲಿ ಬೆಕ್ಟೀರಿಯಾ ಮಾರಕ ಔಷಧಗಳು ಹಾಗೂ ಸುಗಂಧ ತುಂಬಿದ ಸೂಕ್ಷ್ಮಗುಂಡುಗಳನ್ನು ಹುದುಗಿಸಿತ್ತು. ಒಳ ಉಡುಪಿನಲ್ಲಿ ನೆಲೆಯಾಗುವ ಬೆವರು ಹಾಗೂ ಬೆಕ್ಟೀರಿಯಾಗಳನ್ನು ಇದು ನಾಶ ಮಾಡುವುದರ ಜೊತೆಗೇ ಪರಿಮಳವನ್ನೂ ಬೀರುತ್ತಿತ್ತು.
ಒಂಗ್ ರಚನೆ ಇದನ್ನೂ ಮೀರಿಸಿದೆ ಎನ್ನಬಹುದು. ಒಂಗ್ ತಯಾರಿಸಿರುವ ಬಟ್ಟೆಯಲ್ಲಿ ಎಳೆಗಳ ಎಡೆಯಲ್ಲಿ ಅತಿಸೂಕ್ಷ್ಮಗಾತ್ರದ ಬೆಳ್ಳಿಯ ಕಣಗಳನ್ನು ಹುದುಗಿಸಲಾಗಿದೆ. ಇಷ್ಟು ಸಣ್ಣ ಗಾತ್ರದ ಬೆಳ್ಳಿ ಬಲು ಕ್ರಿಯಾಶೀಲ ಪದಾರ್ಥ. ಇದು ತನ್ನ ಜೊತೆ ಸಂಪರ್ಕಕ್ಕೆ ಬಂದ ಪದಾರ್ಥಗಳನ್ನು ಆಕ್ಸಿಡೀಕರಿಸಿಬಿಡುತ್ತದೆ. ಅರ್ಥಾತ್, ಅದನ್ನು ಒಡೆಯುತ್ತದೆ. ಜಿಡ್ಡು, ಕೊಳೆ, ಬಣ್ಣ ಇವು ಆಕ್ಸಿಡೀಕರಣವಾದಾಗ ಮಾಯವಾಗುತ್ತವೆ. ಆಕ್ಸಿಡೀಕರಣ ಜೀವಾಣುಗಳಿಗೆ ಅದರಲ್ಲೂ ಬೆಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಿಗೆ ಕಂಟಕವೇ ಸರಿ. ಬೆಳ್ಳಿ ತುಂಬಿದ ಈ ಹೈಟೆಕ್ ನಾರುಮಡಿ ಹಲವು ಬಗೆಯ ಬೆಕ್ಟೀರಿಯಾಗಳು ಹಾಗೂ ವೈರಸ್‌ಗಳನ್ನು ಕೊಲ್ಲುತ್ತದೆ ಎಂದು ಕ್ರಾನಿಕಲ್ ಹೇಳಿದೆ.
ಅಷ್ಟೇ ಅಲ್ಲ. ಈ ಬಟ್ಟೆಯನ್ನು ಒಗೆಯುವ ಅಗತ್ಯವೂ ಇಲ್ಲವಂತೆ. ಬೆಳ್ಳಿ ಕಣಗಳ ಅತಿ ಸೂಕ್ಷ್ಮ ಗಾತ್ರ, ಸೂಕ್ಷ್ಮಜೀವಿಗಳನ್ನು ನಾಶಗೊಳಿಸುವುದರ ಜೊತೆಗೇ ಕಲೆ ನೆಲೆಯಾಗದಂತೆ ಕಾಪಾಡುತ್ತದಂತೆ. ಕಲೆ, ಕೊಳೆ ಕೂರದಿದ್ದಾಗ ಬಟ್ಟೆ ಒಗೆಯುವುದು ಬೇಕೆ?
ಬೆಳ್ಳಿಯಷ್ಟೆ ತಾನೆ. ಚಿನಿವಾರನಿಗೆ ಕೊಟ್ಟರೆ ಬೆಳ್ಳಿಯ ಬಟ್ಟೆಯನ್ನೇ ಕೊಟ್ಟಾನು ಎನ್ನಬೇಡಿ. ಬೆಳ್ಳಿಯ ಸೂಕ್ಷ್ಮಗಾತ್ರದಿಂದಾಗಿಯಷ್ಟೆ ಬಟ್ಟೆ ಕೊಳೆರಹಿತವಾಗುತ್ತದೆ. ಇದನ್ನು ತಯಾರಿಸುವುದೂ ಸುಲಭವಲ್ಲ. ಬೆಳ್ಳಿಯ ಕಣಗಳು ಒಟ್ಟಾಗದಂತೆ ದ್ರಾವಣ ತಯಾರಿಸಿ, ಅದರಲ್ಲಿ ಮೊದಲೇ ಸಂಸ್ಕರಿಸಿದ ಹತ್ತಿ ಬಟ್ಟೆಯನ್ನು ಅದ್ದಬೇಕು. ಬೆಳ್ಳಿಯ ಕಣಗಳು ಋಣ ವಿದ್ಯುತ್ ಗುಣದವುಗಳಾದ್ದರಿಂದ, ಹತ್ತಿಯನ್ನು ವಿಶೇಷ ಪಾಲಿಮರ್ ಜೊತೆಗೆ ಸಂಸ್ಕರಿಸಿ ಧನ ವಿದ್ಯುತ್ ಗುಣವಿರುವಂತೆ ಮಾಡಲಾಯಿತು. ಈಗ ಹತ್ತಿಯ ಎಳೆಗಳೊಳಗೆ ಬೆಳ್ಳಿ ಕೂರಿಸಬಹುದಿತ್ತು.
ಇದೇ ಬಗೆಯಲ್ಲಿ ಇನ್ನೂ ಪ್ರಬಲ ಕ್ರಿಯಾವಸ್ತುವೆನ್ನಿಸಿದ ಪಲಾಡಿಯಂ ಲೋಹದ ಕಣಗಳಿರುವ ದಿರಿಸನ್ನೂ ಒಂಗ್ ತಯಾರಿಸಿದ್ದಾಳೆ. ಇದು ಬೆಂಗಳೂರಿನ ಸಂಜೆಯ ಹೊಗೆಯನ್ನೂ ಶಿಥಿಲಗೊಳಿಸುತ್ತದಂತೆ. ಮಾಯಗಾರನಂತೆ ಈ ದಿರಿಸು ತೊಟ್ಟು ಕೈ ಆಡಿಸಿದರೆ, ಗಾಳಿ ಶುದ್ಧವಾಗಬಹುದು ಎನ್ನುವ ಆಶಯ ಒಂಗ್ ನದ್ದು.
ಮಲಿನ ಗಾಳಿ ಶುದ್ಧವಾಗುತ್ತದೋ ಇಲ್ಲವೋ. ಈ ಬಟ್ಟೆ ಕೈ ಒರೆಸುವ ಬಟ್ಟೆಯಾಗಿಯಂತೂ ಬಲು ಉಪಯುಕ್ತ. ಒಂದೇ ಸಮಸ್ಯೆ. ಹೈಟೆಕ್ ಫ್ಯಾಶನ್ ಆದ್ದರಿಂದ ಬೆಲೆಯೂ ಹೈ ಆಗಿಯೇ ಇದೆ. ಒಂಭತ್ತು ಗಜದ ಸೀರೆಗೆ ಸುಮಾರು ೫೦,೦೦೦ ರೂಪಾಯಿಗಳು (೧೦೦೦೦ ಡಾಲರುಗಳು) ಆಗಬಹುದು ಎಂದು ಒಂಗ್ ಅಂದಾಜಿಸಿದ್ದಾಳೆ.
ಈಗ ಹೇಳಿ. ನಿಮಗೆ ಕಾಂಜೀವರಂ ಬೇಕೋ, ಕೊಳೆರಹಿತ ಬೆಳ್ಳಿ ಡೆನಿಮ್ ಬೇಕೋ?