ಕರೀಬಿಲವನ್ನು ತೂಗುವ ವಿಧಾನ

ತರಕಾರಿ ತರಲು ಹೋದಾಗಲೆಲ್ಲ, ಮಾರುವವ ಸರಿಯಾಗಿ ತೂಗುತ್ತಿದ್ದಾನೆಯೋ ಇಲ್ಲವೋ ಎನ್ನುವ ಅನುಮಾನ ಇದ್ದೇ ಇರುತ್ತದಲ್ಲ! ನನ್ನ ಗೆಳೆಯರೊಬ್ಬರು ತರಕಾರಿ ಮಾರುಕಟ್ಟೆಗೆ ಹೋಗುವಾಗ ಒಂದು ತೂಕದ ಕಲ್ಲನ್ನೂ ಹೊತ್ತು ಹೋಗುತ್ತಿದ್ದರು. ಅದನ್ನೇ ಇಟ್ಟು ತೂಗು ಎನ್ನುತ್ತಿದ್ದರು. ಕಣ್ಮುಂದೆ ನಡೆಯುವ ಮಾಪನವನ್ನೇ ನಂಬಲಾಗದ ನಮಗೆ ಇನ್ನು ಕೋಟ್ಯಂತರ ಕಿಲೋಮೀಟರು ದೂರವಿರುವ ತಾರೆಯರನ್ನು ತೂಗಬಹುದು ಎಂದರೆ ನಂಬಿಕೆ ಬರುವುದಾದರೂ ಹೇಗೆ?

ಇದು ಸತ್ಯವಾದರೂ ನಿಜ. ಸಹಸ್ರಾರು ಜ್ಯೋತಿರ್ವರ್ಷಗಳಷ್ಟು ದೂರ ಇರುವ ತಾರೆಗಳು, ಕರೀಬಿಲಗಳ ತೂಕವನ್ನು ಕಂಡು ಹಿಡಿಯುವ ಹೊಸದೊಂದು ತಂತ್ರವನ್ನು ಅಮೆರಿಕೆಯ ನಾಸಾದ ಭೌತವಿಜ್ಞಾನಿಗಳು ರೂಪಿಸಿದ್ದಾರಂತೆ.

ತಾರೆಗಳನ್ನು ತೂಗುವ ಹುಚ್ಚಾದರೂ ಯಾಕೆ ಎಂದಿರಾ? ನಿಜ. ನಮಗೆ ನಿಮಗೆ ತರಕಾರಿಯ ತೂಕವಷ್ಟೆ ಸಾಕು. ಆದರೆ ವಿಶ್ವದ ಉಗಮ, ವಿಕಾಸ ಇವುಗಳ ಬಗ್ಗೆ ಕುತೂಹಲವಿರುವ ವಿಜ್ಞಾನಿಗಳಿಗೆ ನಭೋಮಂಡಲದಲ್ಲಿರುವ ಕಾಯಗಳ ಭಾರವನ್ನೂ ತಿಳಿಯುವುದು ಅವಶ್ಯಕ. ದೂರವಿರುವ ವಸ್ತುಗಳ ಬಗ್ಗೆ ನಡೆಯುವುದೆಲ್ಲವೂ ಊಹಾಪೋಹವಷ್ಟೆ. ಈ ಲೆಕ್ಕಾಚಾರದಲ್ಲಿ ಭಾರದ ಪಾತ್ರವೂ ಇದೆ. ಉದಾಹರಣೆಗೆ, ನಕ್ಷತ್ರಗಳು ಬೆಳೆದಂತೆಲ್ಲ ಬಲು ಭಾರಿಯಾಗುತ್ತವೆ ಎನ್ನುವುದುಂಟು. ಒಂದು ಮಿತಿ (ಇದನ್ನು ಚಂದ್ರಶೇಖರ್‌ ಮಿತಿ ಎನ್ನುತ್ತಾರೆ)ಯನ್ನು ಮೀರಿ ಇವು ಭಾರಿಯಾದರೆ ಅಂತ್ಯ ಗ್ಯಾರಂಟಿ (ನಮಗೂ ಮಿತಿ ಮೀರಿ ಬೊಜ್ಜು ಬಂದರೆ ಇದೇ ಗತಿ ತಾನೇ.) ಎನ್ನುತ್ತಾರೆ ಭೌತವಿಜ್ಞಾನಿಗಳು.

ತಾರೆಗಳು ಸಾವಿನಲ್ಲಿಯೂ ಅದ್ಭುತವಂತೆ. ಇವು ಮರಣಿಸಿದಾಗ ಸುಟ್ಟು ಬೂದಿಯಾಗುವುದಿಲ್ಲ. ಕೊಳೆಯುವುದಿಲ್ಲ. ರೂಪಾಂತರಗೊಂಡು ಕರೀಬಿಲಗಳಾಗುತ್ತವೆ. ಬೆಳಕನ್ನೂ ನುಂಗುವ ದೈತ್ಯಗಳಾಗುತ್ತವೆ. ಬೆಳಕನ್ನೂ ಇವು ಹೀರಿಕೊಂಡು ಬಿಡುವುದರಿಂದ ಮಿನುಗುವ ತಾರೆಯರ ಸ್ಥಾನದಲ್ಲಿ ಏನೂ ಇಲ್ಲದ ಅವಕಾಶ ಇದ್ದಂತೆ ತೋರುತ್ತದೆ.

ಹೀಗೆ ಹುಟ್ಟುವ ಕರೀಬಿಲಕ್ಕೆ (ಬ್ಲ್ಯಾಕ್‌ ಹೋಲ್‌) ತನ್ನ ಸುತ್ತಮುತ್ತಲಿರುವ ಎಲ್ಲ ವಸ್ತುವನ್ನೂ ಹೀರಿಕೊಳ್ಳವಷ್ಟು ಬಲವಾದ ಸೆಳೆತವಿದೆ.  ಅತಿ ಸೆಳೆತಕ್ಕೆ ಸಿಲುಕಿ ಕರೀಬಿಲದ ಮಡಿಲಿಗೆ ಸುತ್ತಲಿನ ವಸ್ತುಗಳು ಬಂದು ಬೀಳುವುದನ್ನು ಅಕ್ರಿಶನ್‌ ಎಂದು ಹೇಳುವರು. ಕರೀಬಿಲದ ಸುತ್ತಲೂ ಪ್ರವಾಹದಂತೆ ಹರಿಯುವ ವಸ್ತು, ಸುಳಿಯಾಗಿ ಬಿಲದೊಳಗೆ ಇಳಿಯುತ್ತದೆ. ಕರೀಬಿಲದ ಸೊಂಟಕ್ಕೆ ಸುತ್ತಿದಂತೆ ಕಾಣುವ ಈ ವಸ್ತುವಿನ ಪ್ರವಾಹವನ್ನು ಅಕ್ರಿಶನ್‌ ಡಿಸ್ಕ್‌ (ಸುಳಿಯುಂಗುರ) ಎನ್ನುವರು. ಈ ಸಂದರ್ಭದಲ್ಲಿ ಕೆಲವೊಮ್ಮೆ ಟ್ರಾಫಿಕ್‌ ಜಾಮ್‌ ಆಗುವುದೂ ಉಂಟು. ಅಲ್ಲಲ್ಲಿ ಸೆಳೆಯಲ್ಪಟ್ಟ ವಸ್ತುಗಳು ಮುಂದೆ ಸಾಗದೆ ಗಂಟು ಕಟ್ಟುತ್ತವೆ.  ಬಿಸಿಯಾಗಿ ಕ್ಷಕಿರಣಗಳನ್ನು ಹೊರಸೂಸುತ್ತವೆ.  ಕೆಲವೊಮ್ಮೆ ಈ ಕ್ಷಕಿರಣಗಳ ಸೂಸುವಿಕೆಯಲ್ಲಿಯೂ ವ್ಯತ್ಯಾಸಗಳು ಕಂಡು ಬರುತ್ತವೆ. ಇವಕ್ಕೂ ಕರೀಬಿಲದ ತೂಕಕ್ಕೂ ನಂಟು ಇರಬಹುದು ಎನ್ನುವ ನಂಬಿಕೆ ವಿಜ್ಞಾನಿಗಳದ್ದು.

ಉದಾಹರಣೆಗೆ, ಸುಳಿಯುಂಗುರದಲ್ಲಿರುವ ಟ್ರಾಫಿಕ್‌ ಜಾಮ್‌ಗೂ ಕರೀಬಿಲಕ್ಕೂ ಇರುವ ದೂರಕ್ಕೂ ಕರೀಬಿಲದ ತೂಕಕ್ಕೂ ನೇರ ಸಂಬಂಧವಿದೆಯಂತೆ. ಹಾಗೆನ್ನುತ್ತಾರೆ ನಾಸಾದ ನಿಕೊಲಾಯ್‌ ಶಾಪಾಶ್ನಿಕೋವ್‌ ಮತ್ತು ಲೆವ್‌ ತಿತಾರ್ಚು.  ಈ ದೂರವನ್ನು ಗಣಿಸುವುದು ಸಾಧ್ಯವಾದರೆ ಕರೀಬಿಲದ ತೂಕವನ್ನೂ ಲೆಕ್ಕ ಹಾಕಬಹುದು ಎನ್ನುವುದು ಇವರ ಅಂದಾಜು. ಇದಕ್ಕೆ ತಕ್ಕ ಗಣಕ ತಂತ್ರಾಂಶವನ್ನೂ ಇವರು ರೂಪಿಸಿದ್ದಾರೆ. ಅಷ್ಟೇ ಅಲ್ಲ, ನಮಗೆ ಈಗಾಗಲೇ ತಿಳಿದಿರುವ ಮೂರು ಕರೀಬಿಲಗಳ ತೂಕವನ್ನೂ ಲೆಕ್ಕ ಹಾಕಿದ್ದಾರೆ. ಇವರ ಲೆಕ್ಕಾಚಾರ, ಈ ಮೊದಲೇ ಬೇರೆ ವಿಧಾನಗಳಿಂದ ತಿಳಿದಿರುವ ತೂಕಕ್ಕೆ ಹೋಲುತ್ತದೆಯಂತೆ. ಆದ್ದರಿಂದ ಇನ್ನು ಮುಂದೆ ಇದೇ ವಿಧಾನದಿಂದ ಕರೀಬಿಲಗಳನ್ನು ತೂಗಲು ನಿರ್ಧರಿಸಿದ್ದಾರೆ.

ಸದ್ಯ. ನಮ್ಮ ರೇಶನ್‌ ಅಂಗಡಿಯವರಿಗೆ ಇದು ತಿಳಿದಿಲ್ಲ. ತಿಳಿಯುವುದೂ ಬೇಡ. ಕಣ್ಣಳತೆ, ಕೈಯಳತೆಯಂತೆ ದೂರದಿಂದಲೇ ತೂಕ ಲೆಕ್ಕ ಹಾಕಿ ಚೀಲ ತುಂಬಿಸಿ ಕಳಿಸಿಬಿಟ್ಟಾರು!

Published in: on ಮೇ 17, 2007 at 7:17 ಅಪರಾಹ್ನ  Comments (2)