ಬೂಸಾ ಮಾಂಸ!

ಭಾರತದ ಮಂದಿ ಹೆಚ್ಚೆಚ್ಚು ಉಂಡು ತಮಗೆ ಆಹಾರವಿಲ್ಲದಂತೆ ಮಾಡಿದ್ದಾರೆಂದು ದೂರಿದ ಅಮೆರಿಕನ್ನರು ಹೊಟ್ಟೆ ತುಂಬಿಸಿಕೊಳ್ಳಲು ಹೊಸ ಉಪಾಯ ಹೂಡಿದ್ದಾರೆ. ನಮ್ಮೂರಿನ ಬೂಸಾವನ್ನೇ ಆಹಾರವನ್ನಾಗಿ ಬಳಸಲು ಸಿದ್ಧರಾಗಿದ್ದಾರೆ. ಅಮೆರಿಕೆಯ ಆಹಾರ ಮತ್ತು ಔಷಧ ಪ್ರಾಧಿಕಾರ ಅಕ್ಕಿ ತೌಡನ್ನು ಮಾಂಸದ ಉತ್ಪನ್ನಗಳಲ್ಲಿ ಸೇರಿಸಿಕೊಳ್ಳಲು ಅನುಮತಿ ನೀಡಿದೆಯಂತೆ. ಅಕ್ಕಿ ತೌಡನ್ನು ಆಹಾರವನ್ನಾಗಿ ಬಳಸಲು ಹಲವು ಉಪಾಯಗಳನ್ನು ಹೂಡುತ್ತಿರುವ ಅಮೆರಿಕೆಯ ನ್ಯೂಟ್ರಸಿಯ ಎನ್ನುವ ಸಂಸ್ಥೆ ತಿಳಿಸಿದೆ.

ಅಕ್ಕಿ ತೌಡಿನ ಬಗ್ಗೆ ಭಾರತೀಯರಿಗೆ ತಿಳಿಯದ್ದು ಏನಿಲ್ಲ. ಸಹಸ್ರಾರು ವರುಷಗಳಿಂದ ಅದನ್ನು ದನಕರುಗಳಿಗೆ ಆಹಾರವನ್ನಾಗಿ ನೀಡಿ, ಬೂಸಾ ಎನ್ನುವ ಹೆಸರನ್ನೂ ನೀಡಿದ್ದೇವೆ. ಇತ್ತೀಚೆಗೆ ಈ ತ್ಯಾಜ್ಯಕ್ಕೂ ಬೆಲೆ ಬಂದಿರುವುದು ವಿಶೇಷ. ತೌಡು ಬಲು ಬೇಗನೆ ಹಾಳಾಗಲು ಅದರಲ್ಲಿರುವ ಎಣ್ಣೆ ಕಾರಣ. ಈ ಎಣ್ಣೆಯಲ್ಲಿ ಒರೈಜನಾಲ್‌ ಎನ್ನುವ ಪ್ರತ್ಯಾಕ್ಸಿಕಾರಕ ಅಂಶ ಇದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಅತಿ ವರ್ತನೆಯ ರಾಸಾಯನಿಕಗಳ ಕ್ರಿಯೆಯನ್ನು ಇಂತಹ ಪ್ರತ್ಯಾಕ್ಸಿಕಾರಕಗಳು ಶಮನಗೊಳಿಸುತ್ತವೆ. ಇದರಿಂದ ಮುಪ್ಪು, ವಯಸ್ಸಾಗುವುದರಿಂದ ಹಾಗೂ ಅಪಥ್ಯಾಹಾರದಿಂದ ಉಂಟಾಗುವ ಖಾಯಿಲೆಗಳನ್ನು ದೂರವಿಡಬಹುದು ಎಂದು ಪೋಷಣಾ ತಜ್ಞರ ಅಂಬೋಣ. ಹೀಗಾಗಿ ಪ್ರತ್ಯಾಕ್ಸೀಕಾರಕ (ಆಂಟಿಆಕ್ಸಿಡಂಟು)ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಹಲವು ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಪ್ರತ್ಯಾಕ್ಸೀಕಾರಕಗಳು ಈಗ ಮೂಲ. ಒರೈಜನಾಲ್‌ ಇಂತಹ ಆಹಾರೌಷಧಗಳಲ್ಲಿ ಒಂದು. ಒರೈಜನಾಲ್‌ ಭರಿತ ಅಕ್ಕಿ ತೌಡಿನ ಎಣ್ಣೆ ಈಗ ಆಹಾರವಾಗಿ ಬಳಕೆಯಾಗುತ್ತಿದೆ. ಇದುವರೆವಿಗೂ ಅದನ್ನು ಸಾಬೂನಿನಂತಹ ಸೌಂದರ್ಯ ಸಾಧನಗಳಲ್ಲಿ ಬಳಸಲಾಗುತ್ತಿತ್ತು. ಒರೈಜನಾಲ್‌ನಿಂದಾಗಿ ಈಗ ತೌಡಿಗೂ ಬೆಲೆ ಬಂದಿದೆ. ಇನ್ನು ನ್ಯೂಟ್ರಸಿಯದ ಪ್ರಯತ್ನದಿಂದಾಗಿ ಎಣ್ಣೆ ಹಿಂಡಿದ ಬೂಸಾ ಇನ್ನಷ್ಟು ದುಬಾರಿಯಾದರೆ ಅಚ್ಚರಿಯೇನಿಲ್ಲ.

ಅಕ್ಕಿ ತೌಡನ್ನೇ ನೇರ ಆಹಾರವನ್ನಾಗಿ ಬಳಸಿಕೊಳ್ಳಲು ಆಗದು. ಏಕೆಂದರೆ ಅದರಲ್ಲಿರುವ ಎಣ್ಣೆಯಿಂದಾಗಿ ಅದು ಬಹು ಬೇಗನೆ ಮುಗ್ಗಲಾಗುತ್ತದೆ. ಅಸಹ್ಯ ವಾಸನೆ ಬೀರುತ್ತದೆ. ಇದರೊಟ್ಟಿಗೆ ತೌಡಿನಲ್ಲಿರುವ ಲೈಪೇಸ್‌ ಎನ್ನುವ ಕಿಣ್ವ ಜೀರ್ಣಕ್ರಿಯೆಗೂ ತೊಡಕಾಗಿರುತ್ತದೆ. ಹೀಗಾಗಿ ಮುಗ್ಗಲಾಗುವ ಮೊದಲೇ ತೌಡನ್ನು ಉಂಡರೂ ಆರೋಗ್ಯಕ್ಕೆ ಒಳ್ಳೆಯದಾಗದು. ಈ ಕಿಣ್ವದ ಚಟುವಟಿಕೆಯನ್ನು ತಡೆಗಟ್ಟುವಂತೆ ತೌಡನ್ನು ಸಂಸ್ಕರಿಸಿದರೆ ಅದನ್ನು ಆಹಾರ ಪದಾರ್ಥಗಳಲ್ಲಿ ಬಳಸಲಾದೀತು ಎನ್ನುತ್ತಾರೆ ವಿಜ್ಞಾನಿಗಳು. ನ್ಯೂಟ್ರಸಿಯ ಮಾಡಿರುವುದೂ ಇದನ್ನೇ! ಎಣ್ಣೆ ಹಿಂಡಿ ಉಳಿದ ತೌಡಿನ ನಾರಿನ ಅಂಶವನ್ನು ರಾಸಾಯನಿಕ ಕ್ರಿಯೆಯಿಂದ ಸ್ಥಿರಗೊಳಿಸಿ, ಲೈಪೇಸ್‌ ಚಟುವಟಿಕೆ ಇಲ್ಲವಾಗಿಸಿದೆ.  ಇದನ್ನೇ ಮಾಂಸದ ಉಂಡೆ, ಮಾಂಸದ ಪ್ಯಾಟಿಗಳಲ್ಲಿ ಕೂಡಿಸಿದ್ದಾರೆ.

ಅಕ್ಕಿ ತೌಡಿನಿಂದ ಲಾಭವಿದೆ. ಸಾಮಾನ್ಯವಾಗಿ ಇಂತಹ ಪದಾರ್ಥಗಳಲ್ಲಿ ಬಳಸುವ ಸೋಯ ಹಿಟ್ಟಿಗಿಂತಲೂ ಇದು ಅಗ್ಗ. ಒಂದು ಕಿಲೋ ಸೋಯಾ ಹಿಟ್ಟಿಗೆ ೨.೫೦ ಡಾಲರು ಬೆಲೆ. ಅಷ್ಟೇ ಪ್ರಮಾಣದ ಅಕ್ಕಿ ತೌಡಿನ ಬೆಲೆ ಕೇವಲ ಅರ್ಧ ಡಾಲರು. ಇದಷ್ಟೆ ಅಲ್ಲ! ಎಣ್ಣೆ ಹಿಂಡಿದ ಅಕ್ಕಿ ತೌಡು ಉತ್ತಮ ನಾರಿನ ಅಂಶದ ಆಕರ. ಆಹಾರದಲ್ಲಿ ನಾರಿನ ಅಂಶ ಕಡಿಮೆಯಾಗುತ್ತಿರುವುದರಿಂದಲೇ ಮಧುಮೇಹ, ಮಲಬದ್ಧತೆಯಂತಹ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ. ನಾರಿನ ಅಂಶ ಅತಿಕಡಿಮೆ ಇರುವ ಮಾಂಸಾಹಾರದಲ್ಲಿ ಅಕ್ಕಿ ತೌಡನ್ನು ಕೂಡಿಸುವುದರಿಂದ ನಾರಿನ ಅಂಶವನ್ನು ಹೆಚ್ಚಿಸಿದಂತೆಯೂ ಆಯಿತು, ಬೆಲೆ ಅಗ್ಗವಾಗಿಸಿದಂತೆಯೂ ಆಯಿತು ಎನ್ನುವುದು ನ್ಯೂಟ್ರಸಿಯದ ಆಲೋಚನೆ.  ಹೆಚ್ಚಿನ ವರದಿಗೆ ಫುಡ್‌ ನಾವಿಗೇಟರ್‌ ಯುಎಸ್‌ಎ ನೋಡಿ. 

ಈ ಸುದ್ದಿ ಕೇಳಿ ನಮ್ಮೂರ ದನಗಳು ತಮ್ಮ ಆಹಾರಕ್ಕೆ ಸಂಚಕಾರ ಬರುತ್ತವೆಂದು ಅಧ್ಯಕ್ಷ ಜಾರ್ಜ್‌ ಬುಷ್‌ಗೆ ದೂರು ಸಲ್ಲಿಸಿವೆ ಎನ್ನುವುದು ಗಾಳಿ ಸುದ್ದಿ!

 

Published in: on ಮೇ 27, 2008 at 5:43 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ