ಹೌದು. ನೋವಿಗೆಷ್ಟು ಬೆಲೆ. ಅಲ್ಲ ಸ್ವಾಮಿ. ನೋವಿಗೆ, ಸಾವಿಗೆ ಬೆಲೆ ಕಟ್ಟುವುದಕ್ಕಾಗುತ್ತದೆಯೇ? ಆಗುತ್ತದೆ. ನೀವು ಜಾಗತೀಕರಣದ ತವರೂರು ಅಮೆರಿಕೆಯಲ್ಲಿದ್ದರೆ ಇದುವೂ ಸಾಧ್ಯ. ನಿಮಗೆಷ್ಟು ಆದಾಯ ಎನ್ನುವುದು ನಿಮಗೆಷ್ಟು ನೋವಾಗುತ್ತದೆ ಎನ್ನುವುದನ್ನು ನಿರ್ಧರಿಸಬಹುದು ಎಂದು ಅಮೆರಿಕೆಯ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರಜ್ಞ ಅಲಾನ್ ಕ್ರುಗರ್ ಪ್ರಕಟಿಸಿದ್ದಾರೆ. ಇವರ ಅಭಿಪ್ರಾಯ ಪ್ರಕಟವಾಗಿರುವುದು ಇನ್ನೆಲ್ಲೂ ಅಲ್ಲ. ಸುಪ್ರಸಿದ್ಧ ವೈದ್ಯಕೀಯ ಪತ್ರಿಕೆ ಲ್ಯಾನ್ಸೆಟ್‌ನಲ್ಲಿ ಈ ಸುದ್ದಿ ಬಂದಿದೆ ಎಂದ ಮೇಲೆ ನಾವು ತುಸು ಗಂಭೀರವಾಗಿಯೇ ಇದನ್ನು ಪರಿಗಣಿಸಬೇಕು ಅಲ್ಲವೇ?
ಬಡವ-ಬಲ್ಲಿದರ ನಡುವೆ ಕಂದರವಿದೆ ಎನ್ನುವುದು ಗೊತ್ತಿದೆಯಲ್ಲ. ಹಾಗೆಯೇ ನೋವುಳ್ಳವ-ನೋವಿಲ್ಲದವರು ಎನ್ನುವ ಕಂದರವೂ ಇದೆ ಎನ್ನುತ್ತಾರೆ ಕ್ರುಗರ್. ಬಹುಶಃ ರಸಗೊಬ್ಬರ ಸಿಗಲಿಲ್ಲ ಎಂದು ಗುಂಡಿಗೆ ಗುಂಡಿಗೆ ಒಡ್ಡುವ ರೈತರಿಗೆ ನೋವು ಹೆಚ್ಚಾಗುತ್ತದೆಯೋ. ಫೋರ್ಡ್ ಐಕನ್ ಕಾರನ್ನು ಎಂಜಿರೋಡಿಗೆ ಕೊಂಡೊಯ್ಯಲು ಹೆಚ್ಚು ಖರ್ಚು ಮಾಡಬೇಕಲ್ಲ ಎಂದು ಲೆಕ್ಕ ಹಾಕುವ ಐಟಿ-ಧಣಿಗಳಿಗೆ ನೋವು ಹೆಚ್ಚಾಗುತ್ತದೆಯೋ ಎಂದು ಕೇಳಬೇಡಿ. ಕ್ರುಗರ್ ಅದಕ್ಕೂ ಒಂದು ಸಂಶೋಧನೆ ನಡೆಸಿಯಾರು. ಸದ್ಯಕ್ಕೆ ಅವರು ಅಮೆರಿಕೆಯ ಪ್ರಜೆಗಳಲ್ಲಿ ಯಾರಿಗೆ ಹೆಚ್ಚು ನೋವುಂಟಾಗುತ್ತದೆ ಎಂಬ ಅಧ್ಯಯನದಲ್ಲಿ ಬಿಸಿಯಾಗಿದ್ದಾರೆ.
ಹೈಸ್ಕೂಲು ನಪಾಸಾದವರು ಪದವೀಧರರಿಗಿಂತಲೂ ದುಪ್ಪಟ್ಟು ನೋವು ಅನುಭವಿಸುವರಂತೆ. ಈ ನೋವು ಮಾನಸಿಕ ಅಳುಕಲ್ಲ. ಕೀಳರಿಮೆಯೂ ಅಲ್ಲ. ದೈಹಿಕ ನೋವು. ಪ್ರತಿದಿನವೂ ನಿಮಗೆ ಯಾವುದಾದರೂ ನೋವಿನ ಅನುಭವ ಆಗುತ್ತದೆಯೇ? ಆಗುತ್ತದಾದರೆ ಎಷ್ಟು ಬಾರಿ ಆಗುತ್ತದೆ? ಇತ್ಯಾದಿ ಗಂಭೀರ ಪ್ರಶ್ನೆಗಳನ್ನು ಅಮೆರಿಕೆಯ ಸುಮಾರು ೪೦೦೦ ಜನರಿಗೆ ಕೇಳಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಅಮೆರಿಕೆಯ ಜನತೆಯಲ್ಲಿ ಶೇಕಡ ೨೮ರಷ್ಟು ಮಂದಿ ಪ್ರತಿನಿತ್ಯವೂ ನೋವನ್ನು ಅನುಭವಿಸುತ್ತಾರೆನ್ನುವುದು ಇವರ ಲೆಕ್ಕಾಚಾರ. ಇವರಲ್ಲಿ ವಾರ್ಷಿಕ ೩೦,೦೦೦ (೧೨,೦೦,೦೦೦ ರೂಪಾಯಿಗಳು) ಡಾಲರಿಗಿಂತಲೂ ಆದಾಯ ಕಡಿಮೆ ಇರುವ ಮನೆಯವರು ಪ್ರತಿದಿನವೂ ಶೇಕಡ ೨೦ರಷ್ಟು ಸಮಯ ಸಾಧಾರಣದಿಂದ ತೀವ್ರ ನೋವಿನಿಂದ ನರಳುತ್ತಾರಂತೆ. ವಾರ್ಷಿಕ ೧೦೦,೦೦೦ ಡಾಲರು (೪೦,೦೦೦,೦೦೦ ರೂಪಾಯಿಗಳು) ವರಮಾನ ಇರುವವರು ಕೇವಲ ಶೇಕಡ ೮ರಷ್ಟು ಸಮಯ ಮಾತ್ರ ನೋವನ್ನು ಅನುಭವಿಸುತ್ತಾರೆ. ಅರ್ಥಾತ್, ಬಡವರಿಗೇ ನೋವಿನ ಹೊಡೆತ ಹೆಚ್ಚು.
ಅಲ್ಲ, ಇಂತಹ ಅಧ್ಯಯನವಾದರೂ ಏತಕ್ಕೆ ಬೇಕಿತ್ತು ಎಂದಿರಾ? ಪ್ರತಿವರ್ಷವೂ ನೋವಿಗಾಗಿ ಸಾವಿರಾರು ಕೋಟಿ ಡಾಲರುಗಳಷ್ಟು ಔಷಧವನ್ನು ಅಮೆರಿಕನ್ನರು ಸೇವಿಸುತ್ತಾರೆ. ಕ್ರುಗರ್‌ರವರ ಪ್ರಕಾರ ದೈಹಿಕ ನೋವೂ, ಮಾನಸಿಕ ನೋವೂ ಒಂದೇ! ಒಟ್ಟಾರೆ ಬಡವರು ಹೆಚ್ಚುನೋವುಳ್ಳವರು (ವಾಹ್!), ಬಲ್ಲಿದರಿಗೆ ನೋವು ಕಡಿಮೆ ಎನ್ನುವುದು ಇವರ ಅಭಿಪ್ರಾಯ. ಒಟ್ಟಾರೆ, ನೋವು ಯಾರಿಗೆ ಹೆಚ್ಚಾಗುತ್ತದೆ, ಏಕಾಗುತ್ತದೆ ಎನ್ನುವುದನ್ನು ತಿಳಿದುಕೊಂಡರೆ, ನೋವಿನಿಂದಾಗಿ ಕೆಲಸ ನಿಲ್ಲುವುದನ್ನು ತಡೆಗಟ್ಟಬಹುದು. ಇದರಿಂದ ಅಮೆರಿಕೆಯ ಕೈಗಾರಿಕೆಗಳ ಉತ್ಪಾದನೆಗೆ ಒದಗುವ ನಷ್ಟ ಕಡಿಮೆಯಾದೀತು ಎನ್ನುವುದು ಕ್ರುಗರ್‌ರವರ ಅಭಿಪ್ರಾಯ.
ಅದು ತಿಳಿಯುತ್ತದೋ ಇಲ್ಲವೋ. ಔಷಧ ಕಂಪೆನಿಗಳಿಗೆ ಮಾತ್ರ ತಮ್ಮ ಹೊಸ ಕುರಿಗಳು ಯಾರೆಂಬುದು ಸ್ಪಷ್ಟವಾಗುತ್ತದೆಯಷ್ಟೆ.
ಇನ್ನೂ ಹೆಚ್ಚಿನ ವಿವರಗಳಿಗೆ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದ ಈ ಪತ್ರಿಕಾ ವರದಿ ಓದಿ.