ಕಾಫಿ, ಕಾಫಿ!

ಕಾಫಿ ಕುಡಿಯದ ದಕ್ಷಿಣ ಕರ್ನಾಟಕದ ಮನೆ ಉಂಟೆ. ಹೇಳಿ, ಕೇಳಿ ಮದ್ರಾಸಿನ ಅಯ್ಯರ್‌ ಪೀಳಿಗೆಗೆ ಸೇರಿದವ. ಕಾಫಿ ಮಾಮಿ ಅಂತಲೇ ಹೆಸರು ಪಡೆದ ಮಹಿಳೆಯರ ಸಂತಾನ. ಅಂತಹವನಿಗೆ ಕಾಫಿ ಎಂದರೆ ಹೇಳಬೇಕೆ! ಕಾಫಿ ನಮ್ಮ ನಾಡಿನ ಬೆಳೆಯಲ್ಲದಿರಬಹುದು, ಆದರೆ ನಮ್ಮ ನರನಾಡಿಗಳಲ್ಲಿ ಒಂದಾಗಿಬಿಟ್ಟಿದೆ ಎಂದರೆ ತಪ್ಪೇನಲ್ಲ! ಕಾಲೇಜಿನಲ್ಲಿ ಓದುತ್ತಿದ್ದಾಗ ಕ್ಯಾಂಪಸ್‌ನ ಮೂಲೆಯಲ್ಲಿ ತಳ್ಳುಗಾಡಿಯಿಟ್ಟುಕೊಂಡು ಕಾಫಿ ಮಾಡಿಕೊಡುತ್ತಿದ್ದ ಚಿಕ್ಕಣ್ಣನ ನೆನಪಾಗುತ್ತದೆ. ನಾನು ಹೋದ ಕೂಡಲೇ ಕಾಫಿ ಬೀಜವನ್ನೇ ತಿಂದಂತೆ ಕಹಿ ಮುಖ ಮಾಡಿಕೊಂಡು ಸ್ಟ್ರಾಂಗ್‌ ಕಾಫಿ ಮಾಡಿ ಕೊಡುತ್ತಿದ್ದ. ಕಹಿ ಮುಖ ಏಕೆಂದರೆ ಮೂವರಿಗೆ ಉಪಯೋಗಿಸಬಹುದಾದ ಡಿಕಾಕ್ಷನ್‌ ನನಗೊಬ್ಬನಿಗೇ ಹಾಕಬೇಕಾಗುತ್ತಿತ್ತು. ಇಲ್ಲದಿದ್ದರೆ ಬಿಡುತ್ತಿರಲಿಲ್ಲವೆನ್ನಿ. ಗೆಳೆಯ ಸಂಪತ್ತುವಿನ ಅಮ್ಮನಂತೂ ನನಗಾಗಿ ವಿಶೇಷ ಕಾಫಿ ಮಾಡಿ ಕೊಡುತ್ತಿದ್ದರು. ಏಕೆಂದರೆ ನನ್ನಷ್ಟು ಸ್ಟ್ರಾಂಗ್‌ ಕಾಫಿ ಕುಡಿಯುವವರು ಅವರ ಮನೆಯಲ್ಲಿ ಅವರೊಬ್ಬರೇ! ’ನಿನಗೆ ಕಾಫಿ ಕುಡಿಯುವುದು ರಕ್ತದಲ್ಲೇ ಬಂದಿದೆ,’ ಅಂತ ಲೇವಡಿ ಮಾಡುತ್ತಿದ್ದರು ಕೂಡ. ಆದರೆ ಮೂವತ್ತು ವರ್ಷಗಳ ನಂತರ ಈಗ ಕಾಫಿ ಕುಡಿಯುವುದಿರಲಿ ಅದರ ಪರಿಮಳವನ್ನೂ ಮೂಸುವಿದಿಲ್ಲ. ಏಕೆಂದರೆ ಕಾಫಿ ಕುಡಿದರೆ ಅಸಿಡಿಟಿ ಹೆಚ್ಚಾಗುತ್ತದೆ. ತೇಗು ಬರುತ್ತದೆ. ತಲೆನೋವು ಗ್ಯಾರಂಟಿ. ನನ್ನ ಮಗಳೂ ತಲೆನೋವಿನ ಕಾರಣದಿಂದಲೇ ಕಾಫಿ ಕುಡಿಯುವುದನ್ನು ಬಿಟ್ಟಿದ್ದಾಳೆ. ನನ್ನವಳು ಕೆಲವು ದಿನ ಕಾಫಿ ಪುಡಿ ಮಾರಾಟ ಮಾಡಿದಳಾದರೂ ಕಾಫಿ ಕುಡಿಯುವುದಿಲ್ಲ. ಮಗನಂತೂ ಆ ಬಗ್ಗೆ ಚಿಂತೆ ಮಾಡಿದವನೇ ಅಲ್ಲ. ಈಗ ಚಿಕ್ಕಮಗಳೂರಿನ ಗೆಳೆಯರು ಬಿಟ್ಟಿ ಕಾಫಿ ಬೀಜ ತಂದು ಕೊಟ್ಟರೂ ಸಂಕೋಚದಿಂದ ಬೇಡ ಅನ್ನುವ ಪರಿಸ್ಥಿತಿ ಮನೆಯಲ್ಲಿ. ಕಾಫಿ ಹಿಡಿಸದಿರುವುದಕ್ಕೆ ಕಾರಣವೇನು ಅಂತ ಎಷ್ಟೋ ಬಾರಿ ಯೋಚಿಸಿದ್ದೇನೆ. ಉದ್ಯೋಗನಿಮಿತ್ತ ದೂರದ ದೆಹಲಿಗೆ ಹೋಗಿದ್ದಾಗ ಅಲ್ಲಿ ಒಳ್ಳೆಯ ಕಾಫಿ ಹುಡಿ ದೊರೆಯದ್ದು ಕಾರಣವೋ? ಅಥವಾ ಏಕಾಂಗಿಯಾಗಿದ್ದಾಗ ಕಾಫಿ ಕಷಾಯ ಮಾಡಿಕೊಳ್ಳುವ ರೇಜಿಗೆಯನ್ನು ತಪ್ಪಿಸಿಕೊಳ್ಳಲು ಟೀ ಮೊರೆ ಹೋದೆನೋ? ಅಥವಾ ನಿಜವಾಗಿಯೂ ಕಾಫಿ ನನಗೆ ಒಗ್ಗುವುದಿಲ್ಲವೋ? ಗೊಂದಲವಾಗಿತ್ತು. ಈವತ್ತು ಪಿಎಲ್‌ಓಎಸ್‌ ಜೆನೆಟಿಕ್ಸ್‌ ಓದುತ್ತಿದ್ದಾಗ ನನ್ನ ಸಮಸ್ಯೆಗೆ ಕಾರಣ ಸಿಕ್ಕಿದೆ. ಪಿಎಲ್‌ಓಎಸ್‌ ಜೆನೆಟಿಕ್ಸ್‌ ಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಬಂಧವೊಂದು ಕಾಫಿಯನ್ನು ಕುಡಿಯುವುದು ನಮ್ಮ ರಕ್ತದಲ್ಲಿ ಅಲ್ಲ, ಅನುವಂಶೀಯ ಗುಣಗಳಲ್ಲೇ ಇರಬಹುದು ಎನ್ನುವ ಉತ್ತೇಜಕರ ಸುದ್ದಿಯನ್ನು ವರದಿ ಮಾಡಿದೆ.

ಅಮೆರಿಕೆಯ ಬ್ರಿಘಾಮ್‌ ನಲ್ಲಿರುವ ಹಾರ್ವರ್ಡ್‌ ಮೆಡಿಕಲ್‌ ಸ್ಕೂಲ್‌ ಮತ್ತು ಮಹಿಳೆಯರ ಆಸ್ಪತ್ರೆ ಹಾಗೂ ನಾರ್ತ್‌ ಕೆರೋಲಿನಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಕಟಿಸಿರುವ ಈ ಪ್ರಬಂಧದ ಪ್ರಕಾರ ಯಾರು ಎಷ್ಟು ಕಾಫಿ ಕುಡಿಯುತ್ತಾರೆ ಎನ್ನುವುದಕ್ಕೆ ಅವರಲ್ಲಿರುವ ಎರಡು ಜೀನ್‌ಗಳು ಕಾರಣವಿರಬಹುದಂತೆ. ಜೀನ್‌ ಎಂದರೆ ನಮ್ಮ ಗುಣಗಳನ್ನು ನಿರ್ದೇಶಿಸುವ ರಾಸಾಯನಿಕ ಘಟಕಗಳು ಅನ್ನೋದು ಗೊತ್ತಲ್ಲ. ಒಟ್ಟು ೩೦,೦೦೦ ಜೀನ್‌ಗಳು ನಮ್ಮಲ್ಲಿ ಇವೆಯಂತೆ. ಇವು ಗುಣಗಳನ್ನು ನಿರ್ದೇಶಿಸುವಂಥವು. ಇದಲ್ಲದೆ ಇನ್ನೂ ಲಕ್ಷಾಂತರ ಕೆಲಸವಿಲ್ಲದ ಜೀನ್‌ಗಳೂ ಇವೆಯಂತೆ. ಇವೆಲ್ಲವನ್ನೂ ಒಟ್ಟಾಗಿ ಜೀನೋಮ್‌ ಅನ್ನುತ್ತಾರೆ. ಇತ್ತೀಚೆಗೆ ಈ ’ಓಂ’ಕಾರದಲ್ಲಿಯೇ ಹಸಿವು, ಹುಟ್ಟು, ಸಾವು, ನಿದ್ರೆ, ಊಟ ಮತ್ತು ಸೆಕ್ಸ್‌ ಎಲ್ಲವಕ್ಕೂ ಕಾರಣ ಹುಡುಕುತ್ತಿದ್ದಾರೆ. ಮೂವತ್ತುಮೂರು ಜನರ ಈ ತಂಡ ಮಾಡಿದ್ದೂ ಅದನ್ನೇ!

ಕಾಫಿ ನಿದ್ರೆ ಓಡಿಸಿ, ಎಚ್ಚರಿಸುವುದಕ್ಕೆ ಅದರಲ್ಲಿರುವ ಕೆಫೀನ್‌ ಕಾರಣ ಅಂತ ಮೇಷ್ಟರು ಹೇಳಿಕೊಟ್ಟಿದ್ದು ಮರೆತಿಲ್ಲ. ಆದರೆ ಈ ಕೆಫೀನ್‌ ಅನ್ನು ಎಲ್ಲರ ದೇಹವೂ ಒಂದೇ ಸಮನಾಗಿ ಅರಗಿಸಿಕೊಳ್ಳುವುದಿಲ್ಲ ಅನ್ನುವುದು ಇತ್ತೀಚಿನ ಸುದ್ದಿ. ಕೆಲವರಿಗೆ ನಿದ್ರೆ ಬಾರದಿರಬೇಕಾದರೆ ಅತಿ ಹೆಚ್ಚು ಕೆಫೀನ್‌ ಬೇಕಂತೆ. ಇನ್ನು ಕೆಲವರಿಗೆ ಕಾಫಿ ಮೂಸಿದರೂ ಸಾಕು ನಿದ್ರೆ ಹಾರಿ ಹೋಗುತ್ತದಂತೆ. ಕೆಫೀನ್‌ನ ಈ ಉತ್ತೇಜಕ ಗುಣ ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿರುವುದಕ್ಕೆ ಅವರವರ ಜೀನೋಮ್‌ಗಳೇ ಕಾರಣವಿರಬಹುದು ಎನ್ನುವುದು ಒಂದು ಗುಮಾನಿ.

ಇದಕ್ಕಾಗಿ ಈ ತಂಡ ದೇಹದಲ್ಲಿ ಕೆಫೀನ್‌ ಅರಗಿಸಲು ನೆರವಾಗುತ್ತದೆಂದು ಈ ಹಿಂದೆ ಗಮನಿಸಿದ್ದ CYP1A2 ಎನ್ನುವ ಜೀನ್‌ ಅನ್ನೂ, ಅದನ್ನು ಎಚ್ಚರಿಸುವ AHR  ಎನ್ನುವ ಮತ್ತೊಂದು ಜೀನ್‌ ಗಳ ಅಧ್ಯಯನ ಮಾಡಿದ್ದಾರೆ. ಸುಮಾರು ೪೭೦೦೦ ಅಮೆರಿಕನ್ನರ ಜೀನೋಮ್‌ಗಳನ್ನು ಒಬ್ಬರಿನ್ನೊಬ್ಬರದರ ಜೊತೆಗೆ ತಾಳೆ ಹಾಕಿದ್ದಾರೆ. ಜೊತೆಗೆ ಅವರು ಎಷ್ಟೆಷ್ಟು ಕಾಫಿ ಕುಡಿದು, ಎಷ್ಟೆಷ್ಟು ಕೆಫೀನ್‌ ದೇಹಕ್ಕೆ ಕೂಡಿಸಿಕೊಳ್ಳುತ್ತಾರೆ ಎಂದೂ ದಾಖಲಿಸಿದ್ದಾರೆ. ಇವೆರಡನ್ನೂ ತಾಳೆ ನೋಡಿದಾಗ CYP1A2 ಮತ್ತು AHR ಗಳು ಎರಡೂ ಇದ್ದವರು ಸಾಮಾನ್ಯವಾಗಿ ದಿನಕ್ಕೆ ಉಳಿದವರಿಗಿಂತಲೂ ಸುಮಾರು ೪೦ ಮಿಲಿಗ್ರಾಂನಷ್ಟು ಹೆಚ್ಚು ಕೆಫೀನ್‌ ಕೂಡಿಸಿಕೊಳ್ಳುತ್ತಾರಂತೆ.  ಒಂದು ದೊಡ್ಡ ಬಾಟಲಿ ಕೋಲಾದಲ್ಲಿ ಒಂದೆರಡು ಮಿಲಿಗ್ರಾಂನಷ್ಟು ಕೆಫೀನ್‌ ಅಷ್ಟೆ ಇರುತ್ತದೆ ಅನ್ನುವುದನ್ನು ನೆನಪಿಡಿ. ಈ ಎರಡೂ ಜೀನ್‌ಗಳು ಇಲ್ಲದವರು ಅತಿ ಕಡಿಮೆ ಕಾಫಿ ಕುಡಿಯುತ್ತಾರಂತೆ.

ಅಂದರೆ ಕಾಫಿ ಕುಡಿಯುವುದು ಚಟವಲ್ಲ, ಅನುವಂಶೀಯ ಗುಣ ಅಂದಾಯಿತಲ್ಲ. ಕಾಫಿ (ಕೆಫೀನ್‌)ಗೂ ಕೆಲವರ ನಡವಳಿಕೆಗೂ ಏನಕೇನ ಸಂಬಂಧವಿದೆ. ಅತಿ ನಿದ್ರೆ, ನಿದ್ರಾಹೀನತೆ, ಚುರುಕುತನ, ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯವೆಲ್ಲವಕ್ಕೂ ಕಾಫಿ ಸೇವನೆಗೂ ಸಂಬಂಧವಿದೆ. ಹಾಗಿದ್ದ ಮೇಲೆ ಕಾಫಿ ಸೇವನೆ ರಕ್ತಗುಣ ಎನ್ನುವುದರಲ್ಲಿ ತಪ್ಪೇನಿದೆ?

ಏನಿಲ್ಲ. ಆದರೆ ಇದುವರೆವಿಗೂ ಕೇವಲ ಖಾಯಿಲೆಗಳಿಗೂ, ಜೀನೋಮ್‌ಗೂ ತಳುಕು ಹಾಕುತ್ತಿದ್ದರಷ್ಟೆ. ಆದರೆ ಈಗ ಕಾಫಿ ಸೇವನೆಯಂತ ನಿತ್ಯಕರ್ಮಕ್ಕೂ, ಅನುವಂಶೀಯತೆಯೇ ಕಾರಣ ಎನ್ನುತ್ತಿದ್ದಾರಲ್ಲ! ಅದೇ ಪ್ರಶ್ನೆ. ಹಾಗಿದ್ದರೆ ಕಾಫಿಯ ಜೊತೆಗೆ ಪೇಪರ್‌ ಓದುವುದಕ್ಕೂ, ಕಾಫಿ ಕುಡಿಯದೆಯೇ ಶೌಚಕ್ಕೆ ಹೋಗದಿರುವುದಕ್ಕೂ, ಕಛೇರಿಯಲ್ಲಿ ಕೆಲಸ ಮಾಡಲು ಸೋಮಾರಿತನ ಬಂದಾಗಲೆಲ್ಲ ಕಾಫಿ ಕುಡಿಯುವುದೂ ಅನುವಂಶೀಯವೇ ಇರಬಹುದೇ?

ಕಾಫಿ ಮಾಡುವ ಯಂತ್ರವನ್ನು ಹಾಸಿಗೆಯ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವ ಅಮೆರಿಕನ್ನರಿಗೆ ಇಂತಹ ಆಲೋಚನೆ ಬಂದಿರುವುದು ಸಹಜವೇ. ನಮ್ಮ ಮದ್ರಾಸ್‌ ಮಾಮಿ ಇದಕ್ಕೆ ಏನು ಹೇಳುತ್ತಾರೋ ಕೇಳಬೇಕು!

Published in: on ಏಪ್ರಿಲ್ 7, 2011 at 7:51 ಅಪರಾಹ್ನ  Comments (3)