ಭೂಮಿಯ ಅಂತ್ಯ ಹೀಗಾಗಬಹುದೇ?

ಇರುವುದೊಂದೇ ಭೂಮಿ! ಇದುವೂ ಇಲ್ಲವಾದರೆ? ವಿಚಿತ್ರ ಪ್ರಶ್ನೆ ಅಲ್ಲ. ಭೂಮಿಗೂ ಸಾವು ಬರಬಹುದಲ್ಲ. ಬಂದರೆ ಅದು ಹೇಗಿದ್ದೀತು ಎನ್ನುವುದೆ ಪ್ರಶ್ನೆ. ಭೂಮಿಗೆ ಸಾವೇ? ಹೌದು. ಅರಣ್ಯವೆಲ್ಲ ಬೋಳಾಗಿ ಬರುವ ಆಪತ್ತಿನಿಂದ ಮನುಕುಲ ನಾಶವಾಗಬಹುದು, ಭೂಮಿಯಲ್ಲ. ಹಾಗೆಯೇ ಭೂಮಿ ಬಿಸಿಯೇರಿ, ನೀರೊಣಗಿ ಹಸಿರು ಕಾಣೆಯಾಗಿ ಜೀವಿಗಳೆಲ್ಲ ಮರೆಯಾಗಬಹುದು. ಬೋಳಾದರೂ, ಭೂಮಿ ಉಳಿದಿರುತ್ತದೆ. ಅಂತಹ ಭೂಮಿಗೂ ಒಮ್ಮೆ ಅಂತ್ಯ ಬರಬಹುದು. ಇದು ಅಂತಿಂತಹ ಅಂತ್ಯವಲ್ಲ. ಇಡೀ ಭೂಮಿ ಸ್ವಲ್ಪ, ಸ್ವಲ್ಪವೇ ದೂಳೀಪಟವಾಗಿ ಹೋಗುವ ನಿಧಾನ ಸಾವು ಎನ್ನುವ ಸುದ್ದಿ ಬಂದಿದೆ.

ಭೂಮಿಯ ಅಂತ್ಯದ ಬಗ್ಗೆ ಹಲವು ಊಹಾಪೋಹಗಳಿವೆ. ಸೂರ್ಯ ಕಳೆಗುಂದಿ ಮುದಿಯಾಗುವ ದಿನಗಳಲ್ಲಿ ಭೂಮಿಗೂ ಅಂತ್ಯ ಸಮೀಪಿಸಿತು ಎಂದರ್ಥ ಎನ್ನುತ್ತಾರೆ ಖಗೋಳವಿಜ್ಞಾನಿಗಳು. ನಿತ್ಯ ಬೆಳಕು ಚೆಲ್ಲಿ, ಭೂಮಿಯನ್ನು ಹಸಿರಾಗಿ ನಗಿಸುವ ಸೂರ್ಯನಿಗೆ ಈಗ  ಏರುಜವ್ವನ. ತನ್ನ ಅಂತರಾಳದಲ್ಲಿರುವ ಎಲ್ಲ ಶಕ್ತಿಯನ್ನೂ ಚಿಮ್ಮಿಸುತ್ತಿದ್ದಾನೆ. ಇದು ನಿರಂತರವಲ್ಲ. ಎಂದೋ ಒಂದು ದಿನ ಸೂರ್ಯ ನೂ ಕಳೆಗುಂದಬಹುದು. ಸೂರ್ಯನನ್ನೇ ಆತುಕೊಂಡಿರುವ ಭೂಮಿಯಂತಹ ಗ್ರಹಗಳಿಗೆ ಅವು ಅಂತ್ಯದ ದಿನಗಳು ಎನ್ನುವುದು ಖಗೋಳ ವಿಜ್ಞಾನಿಗಳ ತರ್ಕ.

ಆ ಅಂತ್ಯ ಹೀಗಾಗಬಹುದು ಎನ್ನುವ ಊಹೆಯೂ. ಸದ್ಯಕ್ಕೆ ಸೂರ್ಯ ತನ್ನಲ್ಲಿರುವ ಎಲ್ಲ ಜಲಜನಕವನ್ನೂ ಉರಿಸುತ್ತಿದ್ದಾನೆ. ಇದು ಉರಿದು ಹುಟ್ಟುವ ಶಾಖವೇ ಸುಮಾರು ಹದಿನೈದು ಕೋಟಿ ಕಿಲೋಮೀಟರು ದೂರವಿರುವ ನಮ್ಮ ಭೂಮಿಯನ್ನು ಬೆಚ್ಚಗಾಗಿರಿಸಿದೆ. ಇನ್ನು ಸೂರ್ಯ ಎಷ್ಟು ಬಿಸಿಯಾಗಿರಬಹುದು ಊಹಿಸುವುದೂ ಕಷ್ಟ.  ಆರು ಲಕ್ಷ ಕಿಲೋಮೀಟರು ದಪ್ಪವಿರುವ ಸೂರ್ಯನ ಮೇಲ್ಮೈ ಸುಮಾರು 6000 ಡಿಗ್ರಿ ಸೆಂಟಿಗ್ರೇಡ್ ನಷ್ಟು ಸುಡುತ್ತದೆ. ಅಲ್ಲಿ ನಮ್ಮ ಭೂಮಿಯ ಮೇಲಿನ ಯಾವ ವಸ್ತುವೂ ವಸ್ತುವಾಗಿ ಉಳಿದಿರದು. ಇನ್ನು ಸೂರ್ಯನ ಅಂತರಾಳದಲ್ಲಿ ಲಕ್ಷಾಂತರ ಡಿಗ್ರಿ ಉಷ್ಣತೆ ಇರಬಹುದು ಎನ್ನುವುದು ಅಂದಾಜು. ಇದು ಸೂರ್ಯನ ಇಂದಿನ ಸ್ಥಿತಿ.

ಸೂರ್ಯ ಸದಾ ಹೀಗಿರಲಿಕ್ಕಿಲ್ಲ. ಒಂದಲ್ಲ ಒಂದು ದಿನ ಒಡಲಿನಲ್ಲಿರುವ ಹೈಡ್ರೊಜನ್ ಇಂಧನ ಬರಿದಾದಾಗ ತಣ್ಣಗಾಗಲೇ ಬೇಕು. ಹಾಗಾದಾಗ ಈಗ ವಜ್ರದಂತೆ ಹೊಳೆಯುತ್ತಿರುವ ಸೂರ್ಯ ಕೆಂಪಾಗುತ್ತಾನೆ. ವಯಸ್ಸಾದ ಹಾಗೇ ಮೈಯಲ್ಲಿ ಕೊಬ್ಬು ಕೂಡುವ ಹಾಗೆ ಅವನ ಗಾತ್ರವೂ ಹಿಗ್ಗುತ್ತದೆ. ಸೂರ್ಯ ಎಷ್ಟರ ಮಟ್ಟಿಗೆ ಹಿಗ್ಗುತ್ತಾನೆ ಅಂದರೆ ಹೆಚ್ಚೂ ಕಡಿಮೆ ಭೂಮಿಯನ್ನು ಮುಟ್ಟುವಷ್ಟು ಅವನ ಮೈ ಹಿಗ್ಗುತ್ತದೆ. ಆಗ ನಮಗಿಂತ ಸಮೀಪದಲ್ಲಿರುವ ಬುಧ ಹಾಗೂ ಶುಕ್ರ ಗ್ರಹಗಳು ಅವನೊಳಗೇ ಕೂಡಿ ಬಿಡುತ್ತವೆ. ತಣ್ಣಗಾಗಿದ್ದಾನೆ ಅಂದ ಮಾತ್ರಕ್ಕೆ ಸೂರ್ಯ ಶೀತಲನಾಗಿರುವುದಿಲ್ಲ. ಆಗಲೂ ಭೂಮಿಯನ್ನು ಕರಿಕಲಾಗಿಸುವಷ್ಟು ಉಷ್ಣ  ಉಳಿದಿರುತ್ತದೆ. ಇದು ಮಧ್ಯವಯಸ್ಸು. ಹೀಗಾಗಲು ಸುಮಾರು 500 ಕೋಟಿ ವರ್ಷಗಳು ಬೇಕು.

ಇದಾದ ಅನಂತರ ಬರುವುದೇ ಮುಪ್ಪು. ಮುಪ್ಪಾದ ಸೂರ್ಯನನ್ನು ಬಿಳೀ ಕುಬ್ಜಗಳೆನ್ನುತ್ತಾರೆ. ಗಾತ್ರದಲ್ಲಿ ಕೃ಼ಶನಾಗಿ, ಚೈತನ್ಯ ಉಡುಗಿ ತನ್ನೊಳಗೇ ಕುಸಿಯಲು ಆರಂಭಿಸುತ್ತಾನೆ. ಈ ಹಂತದಲ್ಲಿ ಅವನನ್ನೇ ಅವನಲ್ಲಿ ಉಳಿದಿರುವುದು ಕೇವಲ ಗುರುತ್ವಾಕರ್ಷಣೆ. ಭೂಮಿಗೆ ಬಿಸಿಯೂಡಿಸುವಷ್ಟು ಶಕ್ತಿ ಅವನಲ್ಲಿ ಇರದು. ಇದು ವಿಜ್ಞಾನಿಗಳ ತರ್ಕ. ಅದು ಸರಿ. ಆಗ ಭೂಮಿಗೇನಾಗುತ್ತದೆ? ಅದರಲ್ಲಿ ಜೀವವೇನೂ ಉಳಿದಿರದು. ಆದರೂ ಕಲ್ಲು ಮಣ್ಣಾದರೂ ಇರುತ್ತವಲ್ಲವೇ? ಅವಕ್ಕೇನಾಗುತ್ತದೆ?

ಇದುವರೆವಿಗೂ ಈ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಕಳೆದ ವಾರ ಅಮೆರಿಕೆಯ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರಾನಮಿಯ ಖಗೋಳ ವಿಜ್ಞಾನಿ ಆಂಡ್ರ್ಯೂ ವಾಂಡರ್ಬರ್ಗ್ ಮತ್ತು ಸಂಗಡಿಗರು ಭೂಮಿಗೇನಾಗಬಹುದು ಎನ್ನುವ ಬಗ್ಗೆ ಒಂದು ವಿವರಣೆ ಕೊಟ್ಟಿದ್ದಾರೆ. ಇದು ಕೇವಲ ತರ್ಕವಲ್ಲ. ನಿದರ್ಶನದ ಜೊತೆಗೆ ನೀಡಿದ ವಿವರಣೆ ಎನ್ನುವುದೇ ವಿಶೇಷ. ನೇಚರ್ ಪತ್ರಿಕೆಯಲ್ಲಿ ಈ ವಿವರಗಳು ಪ್ರಕಟವಾಗಿವೆ.

ಬಿಳೀಕುಬ್ಜದ ಮುಂದೆ ಸಾಗುತ್ತಿರುವ ಗ್ರಹ. ದೂಳೀಪಟವಾಗುತ್ತಿರುವ ಗ್ರಹದ ಬಾಲ, ಉಳಿಕೆ ಗ್ರಹದಿಂದಾಗಿ ತಾರೆಯ ಬೆಳಕಿನ ಪ್ರಖರತೆ ನಿರಂತರವಾಗಿ ಏರುಪೇರಾಗುತ್ತಿರುವಂತೆ ಭಾಸವಾಗುತ್ತದೆ.

ಬಿಳೀಕುಬ್ಜದ ಮುಂದೆ ಸಾಗುತ್ತಿರುವ ಗ್ರಹ. ದೂಳೀಪಟವಾಗುತ್ತಿರುವ ಗ್ರಹದ ಬಾಲ, ಉಳಿಕೆ ಗ್ರಹದಿಂದಾಗಿ ತಾರೆಯ ಬೆಳಕಿನ ಪ್ರಖರತೆ ನಿರಂತರವಾಗಿ ಏರುಪೇರಾಗುತ್ತಿರುವಂತೆ ಭಾಸವಾಗುತ್ತದೆ. (ಚಿತ್ರ: ನೇಚರ್‍)

ಈ ವಿಶ್ವದಲ್ಲಿ ಸೂರ್ಯನದ್ದಷ್ಟೆ ಸಂಸಾರವಲ್ಲ. ಅವನಂತೆಯೇ ಕೋಟಿಗಟ್ಟಲೆ ಸೂರ್ಯನಿದ್ದಾರೆ. ಅವನಂತೆಯೇ ಏರುಜವ್ವನದಲ್ಲಿ ಇರುವವೂ ಇವೆ. ಮುಪ್ಪಿನ ಅವಸ್ಥೆಯಲ್ಲಿ ಇರುವಂತಹವೂ ಇವೆ. ಇವುಗಳಲ್ಲಿ ಕೆಲವು ಪುಟ್ಟ ಗ್ರಹಗಳ ಸಂಸಾರವನ್ನೂ ಕಟ್ಟಿಕೊಂಡಿವೆ. ಇಂತಹ ಒಂದು ಬಿಳೀಕುಬ್ಜನ ಮೇಲೆ ಗಮನವಿಟ್ಟ ವಾಂಡರ್ ಬರ್ಗ್ ಅಲ್ಲಿ ಭೂಮಿಯ ಅಂತ್ಯದ ಚಿತ್ರಗಳನ್ನು ಕಂಡಿದ್ದಾರೆ. WD1145+017 ಎಂದು ಈ ತಾರೆಯನ್ನು ಖಗೋಳಜ್ಞರು ಗುರುತಿಸಿದ್ದಾರೆ. ಇದರಿಂದ ಚಿಮ್ಮಿದ ಬೆಳಕನ್ನಷ್ಟೆ ಭೂಮಿಯ ಮೇಲಿಂದ ಗಮನಿಸಬಹುದು. ಇವರು ಮಾಡಿದ್ದೂ ಅದನ್ನೇ. ಆದರೆ ಆ ಬೆಳಕಿನಲ್ಲಾಗುವ ವ್ಯತ್ಯಾಸಗಳು ಇವರಿಗೆ ವಿಚಿತ್ರವೆನ್ನಿಸಿತಂತೆ.

ಸಾಮಾನ್ಯವಾಗಿ ಬೆಳಕು ಚಿಮ್ಮುವ ತಾರೆಗಳ ಮುಂದೆ ಇನ್ಯಾವುದಾದರೂ ವಸ್ತು, ಕಾಯ ಹಾದು ಹೋದಾಗ ಕ್ಷಣಕಾಲ ಕತ್ತಲೆ ಉಂಟಾಗಬಹುದು. ತಾರೆಗಿಂತ  ಆ ಕಾಯ ಚಿಕ್ಕದಾಗಿದ್ದರೆ, ಬೆಳಕು ಮಂದವಾಗಬಹುದು. ಆದರೆ ಅದು ಮತ್ತೆ ಪ್ರಖರವಾಗಬೇಕಷ್ಟೆ. WD1145+017 ಯಿಂದ ಬರುವ ಬೆಳಕಿನಲ್ಲಿ ತುಸು ವ್ಯತ್ಯಾಸವಿದೆಯಂತೆ. ಇದರ ಬೆಳಕು ಒಂದೇ ತೆರನಾಗಿ ಕ್ಷಿಣವಾಗುವುದಿಲ್ಲ. ಒಮ್ಮೆ ಅತಿ ಹೆಚ್ಚಾಗಿ, ಅನಂತರ ತುಸು ಕಡಿಮೆಯಾಗಿ, ಮತ್ತೊಮ್ಮೆ ಪ್ರಖರವಾಗಿ ತೋರುತ್ತದೆ. ಇದರ ಅರ್ಥ, ತಾರೆಯ ಮುಂದಿನಿಂದ ನಿರಂತರವಾಗಿ ಏನೋ ಹಾಯುತ್ತಿದೆ. ಅಲ್ಲಿಂದ ಬರುವ ಬೆಳಕನ್ನು ಮರೆಮಾಚುತ್ತಿದೆ ಎಂದಾಯಿತು. ಹೀಗೇಕೆ. ಅದು ಗ್ರಹವಷ್ಟೆ ಆಗಿದ್ದರೆ ಸ್ವಲ್ಪ ಹೊತ್ತಷ್ಟೆ ಮರೆಮಾಚಬೇಕಿತ್ತಲ್ಲವೇ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು, ತಾರೆಯ ಗಾತ್ರ, ಬೆಳಕು, ಬೆಳಕಿನಲ್ಲಾಗುವ ವ್ಯತ್ಯಾಸಗಳೆಲ್ಲವನ್ನೂ ಗಣಿಸಿದ್ದಾರೆ. ಯಾವ ಸಂದರ್ಭಗಳಲ್ಲಿ ಹೀಗಾಗಬಹುದು ಎಂದು ಲೆಕ್ಕ ಹಾಕಿದ್ದಾರೆ.

ಈ ಎಲ್ಲ ಲೆಕ್ಕಾಚಾರಗಳ ಫಲಿತಾಂಶ. WD1145+017 ಯ ಮುಂದೆ ಸಾಗುತ್ತಿರುವ ಗ್ರಹ ಸಾವಿನಂಚಿನಲ್ಲಿರುವಂತಹದ್ದು. ಮುಪ್ಪಾದ ತಾರೆಯ ಅಗಾಧ ಗುರುತ್ವಾಕರ್ಷಣೆಯಿಂದಾಗಿ ಗ್ರಹದಲ್ಲಿರುವ ವಸ್ತುಗಳೂ ಕಿತ್ತೊಗೆಯಲ್ಪಡುತ್ತಿವೆ. ಇದು ನಿರಂತರವಾಗಿ ಆಗುತ್ತಿರುವುದರಿಂದ ಗ್ರಹದಿಂದ ಹೊರಚೆಲ್ಲುತ್ತಿರುವ ವಸ್ತು ದೂಳಿನ ಬಾಲದಂತೆ ಆಗಿದೆ. ಗ್ರಹ, ಅದರ ಈ ದೂಳಿನ ಬಾಲ ಬೆಳಕನ್ನು ಮರೆಮಾಚುವುದರಿಂದ ಒಮ್ಮೆ ತುಸು ಹೆಚ್ಚಾಗಿ, ಇನ್ನೊಮ್ಮೆ ತುಸು ಕಡಿಮೆಯಾಗಿ ತಾರೆಯ ಬೆಳಕಿನಲ್ಲಿ ವ್ಯತ್ಯಾಸಗಳಾಗುತ್ತಿರಬೇಕು. ಇಂತಹ ಹಂತವನ್ನು ನಮ್ಮ ಸೂರ್ಯ ತಲುಪಿದಾಗ ಭೂಮಿಗೂ ಇದೇ ಗತಿಯಾಗಬಹುದು. ಭೂಮಿಯಲ್ಲಿರುವ ಎಲ್ಲ ವಸ್ತುಗಳೂ ಚಿಂದಿಯಾಗಿ, ದೂಳೀಪಟವಾಗಿ ಭೂಮಿಯ ಬಾಲಂಗೋಚಿಯಾಗಬಹುದು. ಅನಂತರ ಕ್ರಮೇಣ ಎಲ್ಲವನ್ನೂ ಕಳೆದುಕೊಂಡ ಭೂಮಿ ಗ್ರಹವಾಗುಳಿಯದೆ ಲಕ್ಷಾಂತರ  ಉಲ್ಕೆಗಳಾಗಿಯೋ, ಅಂತರಿಕ್ಷದಲ್ಲಿ ಅಲೆದಾಡುವ ದೂಳಿನ ಕಣಗಳಾಗಿಯೋ ದೂಳೀಪಟವಾಗಿಬಿಡಬಹುದು ಎನ್ನುತ್ತಾರೆ.

ನಿತ್ಯ ರಾತ್ರಿಯಾಗಸದಲ್ಲಿ ಒಮ್ಮೊಮ್ಮೆ ಮಿಂಚಿ ತೋರುವ ಉಲ್ಕೆಗಳೂ ಹೀಗೇ ಹಿಂದೆಂದೋ ಇದ್ದ ಭೂಮಿಯಂತಹ ಗ್ರಹದ ಉಳಿಕೆಗಳಿರಬಹುದೇ! ನಾವೂ ಹಾಗೇ ಆಗಬಹುದು ಎನ್ನುವ ಹೊಸ ವಾದವನ್ನು ವಾಂಡರ್ ಬರ್ಗ್ ತಂಡ ಮುಂದಿಟ್ಟಿದೆ.

Published in: on ಅಕ್ಟೋಬರ್ 31, 2015 at 7:34 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗಿಡವಾಗಿಯೂ ಬಾಗುತ್ತದೆ. ಮರವಾಗಿಯೂ ಬಾಗೀತು ಈ ಮಿದುಳು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಮಗುವಾಗಿ ಕಲಿಯದ್ದನ್ನು ದೊಡ್ಡವಾಗಿ ಕಲಿಯಲು ಅಸಾಧ್ಯ ಎನ್ನುವ ಜಾಣ್ನುಡಿ. ಇದು ನಮ್ಮ ಗುಣಗಳನ್ನು ವಿವರಿಸುವ ಹಾಗೆಯೇ ನಮ್ಮ ಮಿದುಳಿನ ಸಾಮರ್ಥ್ಯಕ್ಕೂ ಒಪ್ಪುತ್ತದೆ. ಮನೋವಿಜ್ಞಾನಿಗಳು ಹಾಗೂ ನರವಿಜ್ಞಾನಿಗಳ ಪ್ರಕಾರ  ಬೆಳಯುವ ಹಂತದಲ್ಲಿ, ಅಂದರೆ ನಾವು ಶಿಶುವಾಗಿದ್ದಾಗ, ಮಕ್ಕಳಾಗಿದ್ದಾಗ, ನಮ್ಮ ಮಿದುಳಿಗೆ ಇರುವ ಸಾಮರ್ಥ್ಯ ತದನಂತರ  ಕಡಿಮೆಯಾಗಿಬಿಡುತ್ತದಂತೆ. ಮಕ್ಕಳಲ್ಲಿ ಶಿಕ್ಷಣಕ್ಕೆ ಮಹತ್ವ ಕೊಡುವುದು ಇದೇ ಕಾರಣಕ್ಕೇ. ಇದು ನಮ್ಮಅನುಭವಕ್ಕೂ ಬಂದ ಮಾತು. ಚಿಕ್ಕವರಾಗಿದ್ದಾಗ ಸೈಕಲ್ಲು ಕಲಿಯುವುದೂ, ಹೊಸ ಭಾಷೆ ಕಲಿಯುವುದೂ ನೀರು ಕುಡಿದಂತೆ ಸಲೀಸು. ದೊಡ್ಡವರಾದ ಮೇಲೆ, ಅದೇ ಭಾಷೆ, ಮಾತೃಭಾಷೆಯೇ ಆಗಿದ್ದರೂ, ಕಬ್ಬಿಣದ ಕಡಲೆ. ಇದು ದೊಡ್ಡವರಾದ ನಾವು ತೋರುವ ಹಿಂಜರಿಕೆಯಿಂದಾಗಿ ಎನ್ನಿಸಿದರೂ ವಾಸ್ತವ ಬೇರೆ. ನಮ್ಮ ಮಿದುಳು ಅಷ್ಟರಲ್ಲಾಗಲೇ ಬೆಳೆದಿರುತ್ತದೆ. ಹೊಸದಾದ ಕಲಿಯುವ ಸಾಮರ್ಥ್ಯ ಕುಗ್ಗಿರುತ್ತದೆ. ಹೊಸದಾಗಿ ಏನನ್ನಾದರೂ ಕಲಿತರೂ ಅದನ್ನ ತನ್ನ ನರಜಾಲದೊಳಗೆ ಕೂಡಿಸಿಕೊಳ್ಳಲಾರದು ಎನ್ನುವುದು ನರವಿಜ್ಞಾನಿಗಳ ನಂಬಿಕೆ.

ಇದು ಎಷ್ಟರ ಮಟ್ಟಿಗೆ ನೆಲೆಯಾಗಿದೆ ಎಂದರೆ ಹುಟ್ಟುಗುರುಡರಿಗೆ ದೃಷ್ಟಿ ನೀಡುವುದು ಸಾಧ್ಯವಾದರೂ ಅದನ್ನು ಮಾಡುವುದು ಬೇಡ ಎಂದು ವೈದ್ಯರು ನಿರ್ಧರಿಸಿಬಿಡುತ್ತಾರೆ. ಹತ್ತು ವಯಸ್ಸಿನ ನಂತರ ಹುಟ್ಟಾಗುರುಡರಿಗೆ ಶಸ್ತ್ರಕ್ರಿಯೆ ಮಾಡಿ ದೃಷ್ಟಿ ಮರಳಿಸಿದರೂ ಲಾಭವಿಲ್ಲ ಎನ್ನುವ ನಂಬಿಕೆ ಇದೆ. ಅಷ್ಟರಲ್ಲಿ ನಮ್ಮ ಮಿದುಳು ಸಾಕಷ್ಟು ಬೆಳೆದು ಬಿಟ್ಟಿರುತ್ತದೆ. ಹೊಸದಾಗಿ ದೃಷ್ಟಿಯನ್ನು ಗ್ರಹಿಸುವ, ಹಾಗೂ ಅದರಿಂದಾಗಿ ದೊರೆತ ಅನುಭವಗಳನ್ನು ಅರ್ಥೈಸಿಕೊಳ್ಳುವುದು ಬೆಳೆದ ಮಿದುಳಿಗೆ ಕಷ್ಟ  ಎನ್ನುವುದು ಈ ಹಿಂಜರಿಕೆಗೆ ಕಾರಣ. ಹಾಗೇನಿರಲಿಕ್ಕಿಲ್ಲ ಎನ್ನುವ ವರದಿಯೊಂದು ಬಂದಿದೆ.

ಹುಟ್ಟುವಾಗಲೇ ಕಣ್ಣಿನ ಮಸೂರ ಪೊರೆಗಟ್ಟಿಕೊಂಡಿದ್ದರಿಂದ ಅಂಧರಾಗಿಯೇ ಬೆಳೆದವರಲ್ಲಿ ನಡೆದ ಅಧ್ಯಯನದ ವರದಿ ಇದು. ಮಸ್ಯಾಚುಸೆಟ್ಸ  ಇನ್ಸ್ ಟಿಟ್ಯೂಟ್‍ ಆಫ್‍ ಟೆಕ್ನಾಲಜಿಯಲ್ಲಿ ನರವಿಜ್ಞಾನಿ ಆಗಿರುವ ಭಾರತ ಸಂಜಾತ ಪವನ್ ಸಿನ್ಹ ಹೀಗೊಂದು ಅಧ್ಯಯನ ನಡೆಸಿದರು. ಹುಟ್ಟಾಗುರುಡರಾಗಿ ಹದಿನೈದು ಇಪ್ಪತ್ತು ವರ್ಷ ಬೆಳೆದ ಯುವಕ/ಯುವತಿಯರಿಗೆ ಕೃತಕ ಮಸೂರಗಳನ್ಶನು ಸ್ತ್ರಕ್ರಿಯೆಯ ಮೂಲಕ ಅಳವಡಿಸಿ ದೃಷ್ಟಿ ನೀಡಿದರು. ಹೊಸದಾಗಿ ದೃಷ್ಟಿ ಪಡೆದವರು ಜಗತ್ತನ್ನು ನೋಡಲು ಹೇಗೆ ಕಲಿಯುತ್ತಾರೆ ಎಂದು ಪರೀಕ್ಷಿಸಿದರು. ಒಟ್ಟಾರೆ ತಿಳಿದದ್ದು ಇಷ್ಟು.

ನಮ್ಮ ಮಿದುಳು ಗಿಡವಾಗಿ ಬಾಗುತ್ತದೆ. ಮರವಾಗಿಯೂ ಬಾಗಬಲ್ಲುದು. ಬೆಳೆದ ಮೇಲೂ ಗ್ರಹಿಸುವ, ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ಮಿದುಳಿನಲ್ಲಿ ಇರುತ್ತದೆ.  ಏನಿಲ್ಲದಿದ್ದರೂ ದೃಷ್ಟಿ ವಿಷಯದಲ್ಲಿ ಇದು ನಿಜ. ದೃಷ್ಟಿಗೆ ಸಂಬಂಧಿಸಿದಂತೆ ಕೆಲವು ಸಾಮರ್ಥ್ಯಗಳು ಕಣ್ಣಿರಲಿ, ಇಲ್ಲದಿರಲಿ ಹುಟ್ಟಿನಿಂದಲೇ ಮಿದುಳಿನಲ್ಲಿ ನೆಲೆಯಾಗಿರುತ್ತವೆ. ಇವನ್ನು ದೃಷ್ಟಿ ಮರಳಿಸಿ ಸಚೇತನಗೊಳಿಸಬಹುದು.

ಇದೋ ಆ ಬಗ್ಗೆ ಬರೆದ ಲೇಖನ ಇಲ್ಲಿದೆ.

26102015A

Published in: on ಅಕ್ಟೋಬರ್ 28, 2015 at 6:41 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಾಣದ ಕಣಗಳು

ನಾನು ಕೊಟ್ಟಿದ್ದ ಶೀರ್ಷಿಕೆ 'ಕಾಣದ ಕಣಗಳು'. ಪತ್ರಿಕೆ ಕೊಟ್ಟಿದ್ದು ಬೇರೆ. ಎಷ್ಟೊಂದು ವ್ಯತ್ಯಾಸ.

ನಾನು ಕೊಟ್ಟಿದ್ದ ಶೀರ್ಷಿಕೆ ‘ಕಾಣದ ಕಣಗಳು’. ಪತ್ರಿಕೆ ಕೊಟ್ಟಿದ್ದು ಬೇರೆ. ಎಷ್ಟೊಂದು ವ್ಯತ್ಯಾಸ.

Published in: on ಅಕ್ಟೋಬರ್ 26, 2015 at 7:17 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ವಿಧಿ ಬರೆಹದಲ್ಲಾಗುವ ತಪ್ಪುಗಳು!

19102015

Published in: on ಅಕ್ಟೋಬರ್ 19, 2015 at 6:14 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬಣ್ಣದ ಮೊಟ್ಟೆ ಬಂದಿತು ಹೇಗೆ?

617324801_9ac447afcf_z

ಚಿತ್ರ ಕೃಪೆ: ರಾಡ್ರಿಗೊ ಬೆನವಿಡಿಸ್‍, ಫ್ಲಿಕರ್‍.ಕಾಮ್

ಮೇಷ್ಟರುಗಳಿಗೆ ಮೊಟ್ಟೆಯ ಬಗ್ಗೆ ತುಂಬಾ ಪ್ರೀತಿ. ಮಕ್ಕಳ ತಪ್ಪು ಉತ್ತರಗಳಿಗೆ ಸೊನ್ನೆ ಸುತ್ತಿ ಮೊಟ್ಟೆ ಎನ್ನುತ್ತಾರೆ. ಮೊಟ್ಟೆಯ ಆಕಾರ  ಅಪ್ಪಟ ವೃತ್ತವಲ್ಲದಿದ್ದರೂ, ಅದನ್ನು ಸೊನ್ನೆಗೆ ಹೋಲಿಸುವುದು ತಪ್ಪಿಲ್ಲ. ಮೊಟ್ಟೆಯ ಆಕಾರದೆ ಬಗ್ಗೆ ಇರುವ ತಪ್ಪು ಕಲ್ಪನೆಯ ಹಾಗೇ ಅದರ ಬಣ್ಣದ ಬಗ್ಗೆಯೂ ಒಂದು ತಪ್ಪು ಕಲ್ಪನೆ ನಮ್ಮ ಮನಸ್ಸಿನಲ್ಲಿ ಭದ್ರವಾಗಿ ನೆಲಯೂರಿದೆ. ಮೊಟ್ಟೆಯ ಬಣ್ಣ ಬಿಳಿ, ಬೇರೆಯ ಬಣ್ಣದ ಮೊಟ್ಟೆ ಇಲ್ಲ. ಅದಕ್ಕೇ ಚಿನ್ನದ ಮೊಟ್ಟೆ ಎಂದರೆ ಕಿವಿ ನೆಟ್ಟಗಾಗುತ್ತದೆ. ಅಪ್ಪಟ ನೀಲಿ ಬಣ್ನದ ಮೊಟ್ಟೆಯೂ ಇರಬಹುದು ಎಂದರೆ ಏನೆನ್ನುತ್ತೀರಿ? ಇದು ನಿಜವಷ್ಟೆ ಅಲ್ಲ. ಈ ನೀಲಿ ಮೊಟ್ಟೆ ಒಂದು ವೈರಸ್ನ ಕಿತಾಪತಿ ಎಂದರೆ ಬಹುಶಃ ನೀವು ನಂಬಲಿಕ್ಕಿಲ್ಲ. ಆದರೆ ಇದುವೂ ನಿಜ.

ವಾಸ್ತವವಾಗಿ ಎಲ್ಲ ಪಕ್ಷಿಗಳ ಮೊಟ್ಟೆಗಳೂ ಬೆಳ್ಳಗಿರುವುದಿಲ್ಲ. ಪಕ್ಷಿಗಳ ಮೊಟ್ಟೆಗಳನ್ನು ಪರಿಶೀಲಿಸಿದಾಗ ಕೆಲವದರ ಮೊಟ್ಟೆಗಳಲ್ಲಿ ಸ್ವಲ್ಪ ಮಟ್ಟಿಗೆ ಕಂದು, ಬೂದು, ನೀಲಿ, ಹಸಿರಿನ ಚಿತ್ತಾರಗಳನ್ನು ಕಾಣಬಹುದು. ಇವು ಸಹಜ ಬಣ್ಣಗಳು. ನಮ್ಮ ಕೂದಲು, ಚರ್ಮದ ಬಣ್ಣಕ್ಕೆ ಮೆಲಾನಿನ್ ಎನ್ನುವ ವರ್ಣಕ ಹೇಗೆ ಕಾರಣವೋ, ಹಾಗೆಯೇ ಮೊಟ್ಟೆಗಳ ಬಣ್ಣಕ್ಕೂ ವರ್ಣಕಗಳೇ ಕಾರಣ. ಮೆಲಾನಿನ್ ನಂತೆಯೇ ಪಿರ್ರೋಲ್ ರಚನೆ ಇರುವ ರಾಸಾಯನಿಕಗಳು ಮೊಟ್ಟೆಗಳಿಗೆ ಬಣ್ಣ ನೀಡುತ್ತವೆ. ಮೊಟ್ಟೆಯ ಬಣ್ಣಕ್ಕೆ ಎರಡು ವರ್ಗದ ಪಿರ್ರೋಲ್ ಗಳು ಕಾರಣವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಪ್ರೊಟೋಪಾರ್ಫಿರಿನ್ ಕಂದು, ಬೂದು, ಬಣ್ಣ ಕೊಡುತ್ತದೆ. ಬೈಲಿವರ್ಡಿನ್ (ಇದು ನಮ್ಮ ಪಿತ್ತರಸದಲ್ಲಿ ಇರುತ್ತದೆ. ವಾಂತಿಗೆ, ಮಲಕ್ಕೆ ಹಳದಿ ಬಣ್ಣ ನೀಡುವುದೇ ಇದು.) ನೀಲಿ, ಹಸಿರು ಬಣ್ಣವನ್ನು ನೀಡುತ್ತದೆ. ಎರಡೂ ವರ್ಣಕಗಳೂ ಇರುವ ಮೊಟ್ಟೆಗಳೂ ಇವೆ. ಯಾವ ವರ್ಣಕದ ಪ್ರಮಾಣ ಹೆಚ್ಚಿರುತ್ತದೆಯೋ ಅದರ ಬಣ್ಣವನ್ನು ಮೊಟ್ಟೆ ತಳೆಯುತ್ತದೆ. ಬಿಳೀ ಮೊಟ್ಟೆಗಳಲ್ಲೂ ಗುರುತಿಸಲಾಗದಷ್ಟು ಅಲ್ಪ ಪ್ರಮಾಣದಲ್ಲಿ ಈ ವರ್ಣಕಗಳು ಇರಬಹುದು.

ಮೊಟ್ಟೆಗೇಕೆ ಈ ಬಣ್ಣ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಸುತ್ತಲಿನ ಪರಿಸರದಿಂದ ಮೊಟ್ಟೆಯನ್ನು ಮರೆಮಾಚುವುದಕ್ಕಾಗಿ ಇರಬಹುದೇ? ಅಥವಾ, ಬೆಕ್ಟೀರಿಯಾ ಸೋಂಕನ್ನು ತಡೆಯಲಿರಬಹುದೇ? ಬಿಸಿಲಿನ ಬೇಗೆಯನ್ನು ತಡೆಯಲೋ, ಛಳಿಯಲ್ಲಿ ಬೆಚ್ಚಗಾಗಲೋ ಇರಬಹುದೇ? ಎಂದೆಲ್ಲ ಹಲವು ಊಹೆಗಳಿವೆ. ಇವು ಇನ್ನೂ ಊಹೆಗಳಷ್ಟೆ. ನೆಲದ ಮೇಲೆ ಮೊಟ್ಟೆಯಿಡುವ ಪಕ್ಚಿಗಳಲ್ಲಿ ನೀಲಿ, ಹಸಿರು ಬಣ್ಣದ ಮೊಟ್ಟೆಗಳು ಜಾಸ್ತಿ. ಪೊಟರೆಗಳೊಳಗೋ, ಬಿಲಗಳೊಳಗೋ ವಾಸಿಸುವ ಪಕ್ಷಿಗಳ ಮೊಟ್ಟೆಗಳಲ್ಲಿ ಕಂದು ಅಥವಾ ಬೂದು ಬಣ್ಣ ಹೆಚ್ಚು ಎನ್ನುವುದಷ್ಟೆ ಸದ್ಯಕ್ಕೆ ಗೊತ್ತಿರುವ ವಿಷಯ.  ಇವೆಲ್ಲದರ ಮಧ್ಯೆ ಅಪ್ಪಟ ತೆಳು ನೀಲಿ ಬಣ್ಣದ ಮೊಟ್ಟೆಯನ್ನು ನೀಡುವ ಕೋಳಿಯ ತಳಿಯೂ ಇದೆ. ಚೀನಾದ  ಒಂದು ತಳಿ ಹೀಗೆ ನೀಲಿ ಬಣ್ಣದ ಮೊಟ್ಟೆಯಿಡುತ್ತದೆ. ಇದೇ ರೀತಿ ಚಿಲಿ ದೇಶದ ಮಪುಚೆ ತಳಿಯ ಕೋಳಿಗಳೂ ನೀಲಿ ಮೊಟ್ಟೆಯನ್ನಿಡುತ್ತವೆ. ಮಪುಚೆ ಕೋಳಿಗಳಲ್ಲಿ ಇದು ಒಂದು ಪ್ರಬಲ ವಿಕೃತಿಯಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಈ ಗುಣವಿರುವ ತಳಿಯ ಕೋಳಿಗಳನ್ನು ಬೇರೆ ಯಾವ ತಳಿಯ ಜೊತೆ ಕೂಡಿಸಿದರೂ, ಕೊನೆಗೆ ಹುಟ್ಟುವುದು ನೀಲಿ ಬಣ್ಣದ ಮೊಟ್ಟೆಯಿಡುವ ಕೋಳಿಯೇ.

ನೀಲಿ ಮೊಟ್ಟೆಯಿಡುವ  ಈ ಕೋಳಿಯ ಉಗಮದ ಬಗ್ಗೆ ಎದ್ದ  ಒಂದು ಪ್ರಶ್ನೆ ಮತ್ತೊಂದು ಕೌತುಕವನ್ನೂ ಬಯಲಾಗಿಸಿದೆ. ನೀಲಿ ಮೊಟ್ಟೆಗಳನ್ನಿಡುವ  ಗುಣ ಮಪುಚೆ ಕೋಳಿಗಳಿಗೆ ಬೇರೆ ತಳಿಗಳಿಂದ ಬಂತೇ ಅಥವಾ ಈ ತಳಿಯಲ್ಲಿಯಿದಯೇ? ಇದು ಪ್ರಶ್ನೆ. ಚೀನೀ ತಳಿಗಳಲ್ಲೂ ನೀಲಿ ಬಣ್ಣದ ಮೊಟ್ಟೆಯಿಡುವ ಕೋಳಿಗಳಿವೆಯಷ್ಟೆ. ಅದರ ಜೊತೆ ಹಾಗೂ ಮಪುಚೆ ತಳಿಗಳಿಗೆ ಸಂಬಂಧಿಗಳೆನ್ನಿಸಿದ ಯುರೋಪಿಯನ್ ಮತ್ತು ದಕ್ಷಿಣ ಅಮೆರಿಕೆಯ ಕೋಳಿ ತಳಿಗಳ ಜೊತೆ ಹೋಲಿಸಿ ನೋಡಿದರೆ ಹೇಗೆ ಎನ್ನುವ ಕುತೂಹಲದಿಂದ  ಇಂಗ್ಲೆಂಡಿನ ಡೇವಿಡ್ ರಾಗ್ ಎನ್ನುವವರ ನೇತೃತ್ವದಲ್ಲಿ ಆಸ್ಟ್ರೇಲಿಯ, ಚಿಲಿ ಮತ್ತು ಫ್ರಾನ್ಸ್ ನ ವಿಜ್ಞಾನಿಗಳ ತಂಡವೊಂದು ಮಪುಚೆ ಕೋಳಿಗಳ ತಳಿಗುಣಗಳನ್ನು ಗರಡಿಯಾಡಿದ್ದಾರೆ. ಫಲಿತಾಂಶ:  ಈ ಮೊಟ್ಟೆಗಳ ಬಣ್ಣಕ್ಕೆ ಕಾರಣವಾದ ಅಂಶ ಸುಮಾರು ಐದುನೂರು ವರ್ಷಗಳಿಂದೀಚೆಗೆ ಬಂದಿದೆ. ಇದು ಆಗ  ಈ ತಳಿಯ ಕೋಳಿಗಳಿಗೆ ಸೋಂಕಿದ ವೈರಸ್ ಒಂದರ ಪಳೆಯುಳಿಕೆಯಂತೆ. ಹೀಗೆಂದು ಇವರು ಪ್ರಕಟಿಸಿದ್ದಾರೆ.

ಕೋಳಿಜ್ವರದ ಸುದ್ದಿ ಬಿಸಿಯಾಗಿರುವ ಸಮಯದಲ್ಲಿ ಈ ತಳಿಯ ಕೋಳಿಗಳಿಗೆ ಸೋಂಕಿದ ಯಾವುದೋ ವೈರಸ್ ನೆಲೆಸಿರುವ ನೀಲಿ ಮೊಟ್ಟೆಯಿದೆ ಎಂದರೆ ಖಂಡಿತ ಅದರ ಸಮೀಪ ನೀವು ಸುಳಿಯುವುದಿಲ್ಲ. ಆದರೆ ಇದುವರೆವಿಗೂ ಈ ವೈರಸ್ ನಿಂದ ಯಾರಿಗೂ ಅಪಾಯವಾದ ಸುದ್ದಿಯಿಲ್ಲ. ಏಕೆಂದರೆ ಇದು ಒಂದು ರೆಟ್ರೋವೈರಸ್. ಅಂದರೆ ಎಂದೋ ಸೋಂಕಿದ ವೈರಸ್ ನ ಪಳೆಯುಳಿಕೆ. ಇಂತಹ ಪಳೆಯುಳಿಕೆಗಳು ನಮ್ಮ ದೇಹದಲ್ಲೂ ಇವೆ. ಕುಂಭಕರ್ಣನಂತೆ ಸದಾ ಸುಪ್ತವಾಗಿರುವ ಇವು ಇದ್ದಕ್ಕಿದ್ದ ಹಾಗೆ ಚುರುಕಾಗಿ ಕಾರ್ಯಪ್ರವೃತ್ತವಾದಾಗ ಕ್ಯಾನ್ಸರ್ ಉಂಟು ಮಾಡುತ್ತವೆ ಎಂದು ತಿಳಿದು ಬಂದಿದೆ.

ರೆಟ್ರೋವೈರಸ್ ಗಳೇ ಮೊಟ್ಟೆಗಳ ನೀಲಿ ಬಣ್ಣಕ್ಕೆ ಕಾರಣವೆನ್ನುವದನ್ನು ನಂಬು ಕಷ್ಟ. ಏಕೆಂದರೆ ಯುರೋಪಿಯನ್ ಕೋಳಿಗಳಲ್ಲು ಈ ವೈರಸ್ ಪಳೆಯುಳಿಕೆ ಇದೆ. ಚೀನೀ ತಳಿಗಳಲ್ಲಿ ಇರುವ ಪಳೆಯುಳಿಕೆಗೂ, ಮಪುಚೆಯಲ್ಲಿರುವ ವೈರಸ್ ತುಣುಕಿಗೂ ಬಲು ದೂರದ ನಂಟಂತೆ. ಪ್ರಪಂಚದ ವಿವಿಧೆಡೆಗಳಲ್ಲಿರುವ ಕೋಳಿತಳಿಗಳ ತಳಿಗುಣಗಳ ಜೊತೆಗೆ ಹೋಲಿಸಿದಾಗ  ವೈರಸ್ ತುಣುಕು ಸುಮಾರು ಐದುನೂರು ವರ್ಷಪಗಳಿಂದೀಚೆಗೆ, ಅರ್ಥಾತ್ ಕಾಡುಕೋಳಿಗಳು ಸಾಕುಕೋಳಿಗಳಾದ ಮೇಲೆ ಕೂಡಿಕೊಂಡದ್ದಿರಬಹುದು ಎನ್ನುತ್ತಾರೆ ರಾಗ್.

ಮಪುಚೆ ತಳಿಗಳಲ್ಲಿಯಷ್ಟೆ ಏಕೆ ನೀಲಿ ಮೊಟ್ಟೆಗೆ ಕಾರಣವಾಗಿವೆ? ಯುರೋಪಿಯನ್ ತಳಿಗಳಲ್ಲಿ ಹೀಗೆ ಮಾಡುವುದಿಲ್ಲವೇಕೆ? ಈ ಪ್ರಶ್ನೆಗೂ ಉತ್ತರವಿದೆ. ಮಪುಚೆ ತಳಿಗಳಲ್ಲಿ ಈ ರೆಟ್ರೋವೈರಸ್ ಗುಣ ಒಂದು ಎಸ್ಟ್ರೋಜೆನ್ ಹಾರ್ಮೋನು ಉತ್ಪಾದನೆಯನ್ನು ನಿರ್ದೇಶಿಸುವ ತಳಿಗುಣದ ಬದಿಯಲ್ಲಿ ನೆಲೆಸಿದೆ. ಇದೇ ಇದಕ್ಕೆ ಕಾರಣ. ಇದಲ್ಲದೆ ಇತ್ತೀಚೆಗೆ ಮಪುಚೆ ತಳಿಯಲ್ಲಿರುವ ರೆಟ್ರೋವೈರಸ್ ನಲ್ಲಿ ಹಲವು ಬದಲಾವಣೆಗಳೂ ಆಗಿವೆ. ಇದರಿಂದಾಗಿ ಈ ವ್ಯತ್ಯಾಸ.

ತಾಯಿಕೋಳಿಯಲ್ಲಿ ಈ ವೈರಸ್ ಬೈಲಿವಿರಿಡಿನ್ ವರ್ಣಕ ಕರಗಿರುವ ದ್ರವವನ್ನು ಅತಿ ಹೆಚ್ಚಿನ ಪ್ರಮಾನದಲ್ಲಿ ತಯಾರಾಗುವಂತೆ ಮಾಡಿದೆಯಂತೆ. ಹೀಗಾಗಿ ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚು ಬೈಲಿವಿರಿಡಿನ್ ಮೊಟ್ಟೆಗೆ ಸಾಗುತ್ತದೆ.  ಮತ್ತೊಂದು ವಿಶೇಷ.: ಎಸ್ಟ್ರೊಜೆನ್ ಹಾರ್ಮೋನು ಕೇವಲ ಮೊಟ್ಟೆಯ ಹುಟ್ಟಿನ ನೆಲೆಯಾದ ಅಂಡಾಶಯ ಹಾಗೂ ಅಂಡನಾಳಗಳಲ್ಲಷ್ಟೆ ಉತ್ಪಾದನೆಯಾಗುತ್ತದೆ. ಈ ರೆಟ್ರೋವೈರಸ್ ಕೂಡ ಇಲ್ಲೇ ಎಚ್ಚರವಾಗುವುದರಿಂದ ಇದರ ಚಟುವಟಿಕೆ ನೇರವಾಗಿ ಮೊಟ್ಟೆಯನ್ನಷ್ಟೆ ತಾಕುತ್ತದೆ. ಮೊಟ್ಟೆಯ ಬಣ್ಣವಷ್ಟೆ ಬದಲಾಗುತ್ತದೆ ಎನ್ನುತ್ತಾರೆ ರಾಗ್.

ಆಹಾ! ಹೀಗೆ ಚಿನ್ನದ ಮೊಟ್ಟೆಯನ್ನೂ ಕೊಡುವ ವೈರಸ್ ಸೋಂಕಬಾರದೇ ಎಂದು ನೀವು ಆಲೋಚಿಸಿದರೆ ಅದು ನಿಮ್ಮ ತಪ್ಪಲ್ಲ ಬಿಡಿ. ಅದು ಮನುಷ್ಯ ಸಹಜ ಗುಣ. ಆದರೆ ಎಂದೋ ಸೋಂಕಿದ ವೈರಸ್, ಇದ್ದಕ್ಕಿದ್ದ ಹಾಗೆ ಮರಳುವ ನೆನಪಿನಂತೆ ಎಚ್ಚರವಾಗಿ ಪ್ರಕೃತಿಯ ವಿಚಿತ್ರವೊಂದಕ್ಕೆ ಕಾರಣವಾಗುವುದಿದೆಯಲ್ಲ, ಅದು ಎಂತಹ ಅದ್ಭುತ ಅಲ್ಲವೇ?

Published in: on ಅಕ್ಟೋಬರ್ 17, 2015 at 8:16 ಅಪರಾಹ್ನ  Comments (2)  

ಹಂದಿ ಕೊಟ್ಟೀತೇ ಹೊಸ ಮೂತ್ರಪಿಂಡ?

ಮೂತ್ರಪಿಂಡದ ಖಾಯಿಲೆ ಬಂದವರ ಪಾಡು ದೇವರಿಗೇ ಪ್ರೀತಿ. ಹೃದಯವಾದರೂ ಥಟ್ಟನೆ ಕೆಲಸ ನಿಲ್ಲಿಸಿ ನೋವಿನಿಂದ ಪಾರು ಮಾಡಿಬಿಡುತ್ತದೆ. ಆದರೆ ಮೂತ್ರಪಿಂಡದ ಖಾಯಿಲೆ ಹಾಗಲ್ಲ.  ಭೂಮಿಯಲ್ಲೇ ನರಕ ಇರುವುದಾದರೆ ಅದು ಕ್ಯಾನ್ಸರ್ ಅಥವಾ ಮೂತ್ರಪಿಂಡದ ರೋಗಗಳನ್ನು ಹಿಂಸಾಮಾರ್ಗವಾಗಿ ಅನುಸರಿಸುತ್ತಿರಬಹುದು. ಏನೇ ಇರಲಿ. ಸದ್ಯಕ್ಕೆ ತೀವ್ರತೆರನ ಮೂತ್ರಪಿಂಡದ ಖಾಯಿಲೆಗಳಿಂದ ನರಳುವ ರೋಗಿಗಳಿಗೆ ಇರುವುದು ಎರಡೇ ಮಾರ್ಗ.  ವಾರಕ್ಕೊಮ್ಮೆಯೋ, ಎರಡು ಬಾರಿಯೋ ದುಬಾರಿ ಹಣ ತೆತ್ತು ಡಯಾಲಿಸಿಸ್ (ಯಂತ್ರಗಳನ್ನು ಬಳಸಿ ದೇಹದಲ್ಲಿ ಶೇಖರಣೆಯಾದ ಕಸವನ್ನು ಬಿಸಾಡುವುದು) ನ ನೋವನ್ನು ಅನುಭವಿಸುವುದು ಅಥವಾ ಇನ್ನೂ ಸ್ವಲ್ಪ ಜಾಸ್ತಿ ವೆಚ್ಚ ಮಾಡಿ ಯಾರಿಂದಲಾದರೂ ಮೂತ್ರಪಿಂಡವನ್ನು ದಾನ ಪಡೆದು ಕಸಿ ಮಾಡಿಸಿಕೊಳ್ಳುವುದು. ಎರಡೂ ಜೇಬಿಗೂ, ದೇಹಕ್ಕೂ ನೋವು ತರುವ ವಿಷಯವೇ! ನೋವನ್ನುಂಡಾದರೂ ಚಿಕಿತ್ಸೆ ಪಡೆಯೋಣ ಎಂದರೆ ಕಸಿ ಮಾಡಲು ಬೇಕಾದ ಮೂತ್ರಪಿಂಡಗಳಿಗೂ ಕ್ಷಾಮವಿದೆ. ನೆಂಟರೇ ದಾನ ಕೊಡದಿರುವಾಗ, ಸತ್ತ ಹೆಣದಿಂದ ಕಿತ್ತು ಪಡೆಯಬೇಕಾಗುತ್ತದೆ. ಅಥವಾ ಕಳ್ಳತನದಿಂದ ಮೂತ್ರಪಿಂಡಗಳನ್ನು ಪಡೆದು ಕಸಿ ಮಾಡುವ ದುರುಳ ವೈದ್ಯರುಗಳ ಮೊರೆ ಹೋಗಬೇಕಾಗುತ್ತದೆ. ಇವೆರಡೂ ಸಾಧ್ಯವಿಲ್ಲವಾದರೆ ದೇವರ ಪಾದವೇ ಗತಿ. ಅಮೆರಿಕವೊಂದರಲ್ಲಿಯೇ ಹೀಗೆ ಮೂತ್ರಪಿಂಡಗಳ ಅಭಾವದಿಂದಾಗಿ ಪ್ರತಿದಿನವೂ ಕನಿಷ್ಟ 12 ಜನರಾದರೂ ಮೂತ್ರಪಿಂಡದ ಖಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಒಂದು ಅಂದಾಜು ಹೇಳುತ್ತಿದೆ.

ವಿಜ್ಞಾನ ಪರಿಹಾರ ದೊರಕಿಸದ ಸಮಸ್ಯೆಗಳಿಲ್ಲ ಎನ್ನುವುದು ಎಲ್ಲದ ನಂಬಿಕೆಯಷ್ಟೆ. ಇಲ್ಲೂ ಹಾಗೇ. ಪರಿಹಾರಕ್ಕಾಗಿ ಎಲ್ಲ ಸಾಧ್ಯತೆಗಳನ್ನೂ ವಿಜ್ಞಾನಿಗಳು ತಡಕಾಡುತ್ತಿದ್ದಾರೆ. ಉದಾಹರಣೆಗೆ, ಹಂದಿಯ ಮೂತ್ರಪಿಂಡವನ್ನೇ ಕಸಿ ಮಾಡಿದರೆ ಹೇಗೆ? ಬೇರೊಬ್ಬರ ಅಂಗವನ್ನೇ ದೇಹ ತನ್ನದೆನ್ನಲು ಹಿಂದೇಟು ಹಾಕುತ್ತದೆ. ಪರಿಣಾಮವಾಗಿ ಕಸಿ ಅಂಟಿಕೊಳ್ಳುವುದೇ ಇಲ್ಲ.  ಇನ್ನು ಹಂದಿಯ ಮಾತೇಕೆ ಎಂದಿರಾ? ಇದಕ್ಕೂ ಉಪಾಯವಿದೆ. ಹಂದಿಯ ಮೂತ್ರಪಿಂಡದಲ್ಲಿರುವ ಪ್ರೋಟೀನುಗಳನ್ನು ತೊಳೆದು ಅದನ್ನು ‘ಮಾನವೀಯ’ ವಾಗಿಸಿದರೆ, ಆಗ ಅದು ಭದ್ರವಾಗಿ ನೆಲೆಯಾಗಬಹುದು.

ಮತ್ತೊಂದು ಆಲೋಚನೆಯೂ ಇದೆ. ಕೃತಕ ಮೂತ್ರಪಿಂಡವನ್ನು ಸೃಷ್ಟಿಸುವುದು. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ ಮೂತ್ರಪಿಂಡ ಹಲವು ಮೂಲಗಳಿಂದ ಬಂದ ಜೀವಕೋಶಗಳು ಕೂಡಿ ಆಗಿರುವ ಅಂಗ. ಇದರ ಸೂಕ್ಷ್ಮ ರಚನೆಯೂ ಅತಿ ನವಿರು. ಇದನ್ನು ನಕಲು ಮಾಡುವುದು ಮಹಾ ಸಾಹಸವೇ ಸರಿ. ಆಕರಕೋಶಗಳನ್ನು ಬಳಸಿ ಇದನ್ನು ಮಾಡಬಹುದು ಎಂದರೂ ಅದು ಕೋಶಗಳ ಮುದ್ದೆಯಾಗಿಬಿಡಬಹುದು. ಮೂತ್ರಪಿಂಡದಲ್ಲಿರುವ ನಾಳಗಳ ಜೋಡಣೆಯಾಗಲಿ, ರಕ್ತನಾಳಗಳ ಜಾಲವಾಗಲಿ ಬೇಕಿರುವ ಹಾಗೆ ಬೆಳೆಯುವುದಿಲ್ಲ.

pigkidney

ಹಂದಿಯನ್ನು ಬಳಸಿ ಮೂತ್ರಪಿಂಡ ಮಾಡುವ ಬಗೆ : ರೋಗಿಯ ಮೈಯಿಂದ ಹೆಕ್ಕಿದ ಕೋಶವನ್ನು ಹಂದಿಯ ಭ್ರೂಣದಲ್ಲಿ ಕೂಡಿಸುವುದು. ಅಲ್ಲಿ ಬೆಳೆದ ಮೂತ್ರಪಿಂಡದ ಮೊಳಕೆಯನ್ನು ರೋಗಿಯ ಮೂತ್ರಪಿಂಡದ ಬಳಿ ಕಸಿ ಮಾಡುವುದು. ಅನಂತರ ರೋಗಿಯ ದೇಹದೊಳಗೆ ಬೇರೊಂದು ಮೂತ್ರ ಚೀಲ ಹಾಗೂ ಮೂತ್ರನಾಳ ಬೆಳೆಯುವಂತೆ ಶಸ್ತ್ರಕ್ರಿಯೆ ನಡೆಸುವುದು. ಹೀಗೆ ರೋಗಿಯ ದೇಹದಲ್ಲೇ ಅವನ ಕೋಶಗಳಿಂದಲೇ ಹೊಸ ಮೂತ್ರಪಿಂಡ ಹುಟ್ಟಿಸುವುದು.

ಇವೆಲ್ಲ ಜಾಲ, ನಾಳಗಳನ್ನು ಮೂರು ಆಯಾಮದ ಪ್ರಿಂಟಿಂಗ್ ತಂತ್ರದಿಂದ ಎರಕ ಹೊಯ್ದು, ಈ ಹಂದರದೊಳಗೆ ಮಾನವನ ಆಕರಕೋಶಗಳನ್ನು ಇಟ್ಟು ಮೂತ್ರಪಿಂಡದ ವಿವಿಧ ಅಂಗಗಳು ಹುಟ್ಟುವಂತೆ ಮಾಡುವ ಆಲೋಚನೆಯೂ ಇದೆ. ಇದುವೂ ಸುಲಭವಲ್ಲ. ಪ್ರತಿ ಹಂತದಲ್ಲಿಯೂ ಬೆಳವಣಿಗೆಯ ಘಟಕಗಳೆಂದು ಹೆಸರಿಸಿದ ಬೇರೆ, ಬೇರೆ ರಾಸಾಯನಿಕಗಳನ್ನು ಬಳಸಬೇಕು. ದೇಹದೊಳಗೆ ಅಂಗಗಳು ಬೆಳೆಯುವಾಗ ಒಂದೊಂದು ಹಂತದಲ್ಲಿ ಒಂದೊಂದು ರಾಸಾಯನಿಕ ಅದರ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಇವು ಯಾವುವು, ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತವೆ, ತಪ್ಪಾದರೆ ಏನಾಗಬಹುದು ಎನ್ನುವುದೆಲ್ಲವೂ ಇನ್ನೂ

ಹೀಗಾಗಿ ಈ ಎಲ್ಲ ತಂತ್ರಗಳೂ ಇನ್ನೂ ನಾಳಿನ ಕನಸುಗಳಾಗಿಯೇ ಉಳಿದಿವೆ. ಈ ಕನಸುಗಳ ಪಟ್ಟಿಗೆ ಜಪಾನಿನ ಜೀಕೈ ವೈದ್ಯಕೀಯ ವಿಶ್ವವಿದ್ಯಾನಿಲಯದ ತಕಾಶಿ ಯೋಕೂ ಮತ್ತು ತಂಡದವರು ಇನ್ನೊಂದು ತಂತ್ರವನ್ನು ಸೇರಿಸಿದ್ದಾರೆಂದು ಪಿಎನ್ಎಎಸ್ ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ ವರದಿ ಮಾಡಿದೆ. ಹಂದಿಯನ್ನೇ ಬಳಸಿದರೂ ಕೊನೆಗೆ ರೋಗಿಯ ದೇಹದಲ್ಲೇ ಹೊಸ ಮೂತ್ರಪಿಂಡ ಮೊಳೆಯುವಂತೆ ಮಾಡಬಲ್ಲುದಂತೆ ಈ ತಂತ್ರ. ಇದು ನಿಜಕ್ಕೂ ನನಸಾಗಬಲ್ಲ ಕನಸು ಎನ್ನವುದು ಯೋಕೂ  ತಂಡದ ಅಭಿಪ್ರಾಯ.

ಏನಿದು ತಂತ್ರ?

ವಾಸ್ತವವಾಗಿ ಇದು ಒಂದು ತಂತ್ರವಲ್ಲ. ಹಲವು ತಂತ್ರಗಳ ಮೇಳ. ಮೊದಲಿಗೆ ಇದರಲ್ಲಿ ರೋಗಿಯ ದೇಹದಿಂದಲೇ ಹೆಕ್ಕಿದ ಸ್ನಾಯುಕೋಶಗಳನ್ನು ಆಕರಕೋಶ (ಸ್ಟೆಮ್ ಸೆಲ್ ) ಗಳನ್ನಾಗಿ ಪರಿವರ್ತಿಸುತ್ತಾರೆ. ದೇಹದ ಯಾವುದೇ ಕೋಶವನ್ನೂ ಇನ್ಯಾವುದೋ ಕೋಶವಾಗಿ ಬೆಳೆಯುವ ಸಾಮರ್ಥ್ಯವಿರುವ ಆಕರಕೋಶವನ್ನಾಗಿಸುವ ಉಪಾಯ ಕೈ ಹತ್ತಿದೆಯಷ್ಟೆ.  ರೋಗಿಯ ದೇಹದಿಂದಲೇ ಹೆಕ್ಕಿದ ಮೀಸೆಂಕೈಮ್ ಎನ್ನುವ ಕೋಶಗಳನ್ನು ಹಂದಿಯ ಭ್ರೂಣದೊಳಗೆ ಚುಚ್ಚುವುದು. ಇವು ಹಂದಿಯ ಕೋಶಗಳಂತೆಯೇ ಆಗಿ ಬೆಳೆಯುತ್ತವೆ. ಅನಂತರ  ಈ ಕೋಶಗಳನ್ನು ತೆಗೆದು ಬೆಳೆದ ಹಂದಿಯ ಮೂತ್ರಪಿಂಡದ ಪೊರೆಯಲ್ಲಿ ಕಸಿ ಮಾಡುವುದು. ಇದು ಮೂತ್ರಪಿಂಡವಾಗಿ ಬೆಳೆಯಲು ಬೇಕಾದ ಪರಿಸರವನ್ನು ಅರ್ಥಾತ್ ಹಂತ, ಹಂತವಾಗಿ ದೊರೆಯಬೇಕಾದ ರಾಸಾಯನಿಕಗಳನ್ನು ಪೂರೈಸಲು ಅನುವಾಗುತ್ತದೆ. ಇದರಿಂದಾಗಿ ಅಲ್ಲಿ ಆಕರಕೋಶಗಳು ಹೊಸ ಮೂತ್ರಪಿಂಡಗಳಾಗಿ ಬೆಳೆಯಬಹುದು ಎನ್ನುವುದು ತರ್ಕ.

ಈ ಹಿಂದೆ ಇಂತಹ ಪ್ರಯೋಗಗಳನ್ನು ಇವರು ಇಲಿಗಳ ಮೇಲೆ ಮಾಡಿ ಪರೀಕ್ಷಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮೂತ್ರಪಿಂಡದಂತಹ ಅಂಗ ರೂಪುಗೊಂಡರೂ ಅಲ್ಪಕಾಲದಲ್ಲಿಯೇ ಕೊಳೆತು ನಾಶವಾಗಿ ಬಿಟ್ಟಿತ್ತು. ಇದಕ್ಕೆ ಕಾರಣ  ಹೊಸ ಅಂಗವೂ ಕೆಲಸದಲ್ಲಿ ತೊಡಗಿ ಮೂತ್ರವನ್ನು ಉತ್ಪಾದಿಸುತ್ತಿತ್ತು. ಈ ಮೂತ್ರ ಹೊರ ಹೋಗಲು ಹಾದಿಯಿಲ್ಲದೆ ಇದ್ದಲ್ಲೇ ಶೇಖರಣೆಯಾಗಿ ನೀರು ಕೂಡಿಕೊಂಡು ಹೊಸ ಅಂಗವೂ ಸಾವನ್ನಪ್ಪಿತ್ತು.

ಹಾಗಿದ್ದರೆ ಹೊಸ ಮೂತ್ರಪಿಂಡದಿಂದ ಮೂತ್ರ ನಿರಾಳವಾಗಿ ಹೊರ ಹೋಗುವಂತೆ ಮಾಡಿದರೆ ಅದು ಇನ್ನೂ ದೊಡ್ಡದಾಗಿ, ಪರಿಪೂರ್ಣ ಅಂಗವಾಗಿ ಬೆಳೆಯಬಹುದೇ ಎಂದು ಯೋಕೂ ತಂಡ ಆಲೋಚಿಸಿತು. ಹಂದಿಯ ದೇಹದಲ್ಲಿ ಬೆಳೆದ ಮೂತ್ರಪಿಂಡವನ್ನು ಕಸಿ ಮಾಡುವ ಮೊದಲು ಇಲಿಗಳಲ್ಲಿ ಮತ್ತೊಂದು ಶಸ್ತ್ರಕ್ರಿಯೆ ಮಾಡಿದರು. ಅವುಗಳ ಗುದದ್ವಾರದಲ್ಲಿನ ತುಸು ಅಂಶವನ್ನು ಒಳಬದಿಯಲ್ಲಿ ನೆಟ್ಟು ಅವು ಬೆಳೆಯುವುದೇ ಎಂದು ಗಮನಿಸಿದರು. ಈ ಗುದದ್ವಾರದ ಕಸಿ ನಿಧಾನವಾಗಿ ಮೂತ್ರದ ಚೀಲವಾಗಿ ಬೆಳೆಯಿತು.  ಇನ್ನು ಉಳಿದದ್ದು ಒಂದೇ ಉಪಾಯ. ಈ ಮೂತ್ರದ ಚೀಲವನ್ನು ಮೂತ್ರವನ್ನು ತಯಾರಿಸುವ ಪಿಂಡದ ಜೊತೆಗೆ ಕೂಡಿಸುವುದು. ಹಳೆಯ ಮೂತ್ರಪಿಂಡದ ಮೂತ್ರನಾಳವನ್ನು ಬಳಸಿ ಇದನ್ನೂ ಮಾಡಿದರು. ಹೀಗೆ ಹಂತ, ಹಂತವಾಗಿ ಮೂತ್ರವನ್ನು ಸೃಷ್ಟಿಸುವ ಹೊಸ ಪಿಂಡ, ಅದನ್ನು ಸಂಗ್ರಹಿಸುವ ಚೀಲ ಹಾಗೂ ಅದನ್ನು ಹರಿಸುವ ನಾಳವನ್ನೂ ಹೊಸದಾಗಿ ಇವರು ಸೃಷ್ಟಿಸಿದ್ದಾರೆ.  ಸ್ಟೆಪ್ ವೈಸ್ ಪೆರಿಸ್ಟಾಲ್ಟಿಕ್ ಯೂರಿಟರ್ ಸಿಸ್ಟೆಮ್ ಎಂದು ಅವರು ಹೆಸರಿಸಿರುವ ಈ ತಂತ್ರ ಸಮರ್ಪಕವಾಗಿ ಕೆಲಸ ಮಾಡುತ್ತದಂತೆ. ಮೂತ್ರಪಿಂಡದೊಳಗೆ ಬಣ್ಣ ಹಚ್ಚಿ ಅದು ಸರಾಗವಾಗಿ ಹೊರಗೆ ಹರಿದು ಬರುತ್ತದೆಯೋ ಅಲ್ಲೇ ಕೂಡಿಕೊಂಡಿರುತ್ತದೆಯೋ ಎಂದೂ ಗಮನಿಸಿದ್ದಾರೆ.

ಅಂತೂ ಈ ತಂತ್ರ ಸಾಧ್ಯವಾದರೆ, ಹಳೆಯ ಮೂತ್ರಪಿಂಡವಿರುವ ಜಾಗದಲ್ಲೇ ಹೊಸ ಪಿಂಡವೊಂದು ಬೆಳೆಯುವಂತೆ ಮಾಡಬಹುದು ಎನ್ನುವುದು ಇವರ ಅನಿಸಿಕೆ. ಇದನ್ನು ಸದ್ಯಕ್ಕೆ ಇಲಿಗಳಲ್ಲಿ ಮಾಡಿದ್ದಾರಾದರೂ, ಮನುಷ್ಯರಲ್ಲಿ ಮಾಡಲು ಯಾವ ಅಡ್ಡಿಯೂ ಇಲ್ಲ ಎನ್ನುತ್ತಾರೆ.

ಆದರೆ ಹೀಗೆ ಹಂದಿಯಲ್ಲಿ ಬೆಳೆದ ಅಂಗವನ್ನು ಹೊತ್ತು ಓಡಾಡಲು ಎಷ್ಟು ಜನ ಸಿದ್ಧರಿದ್ದಾರೋ?

Published in: on ಅಕ್ಟೋಬರ್ 13, 2015 at 5:59 ಅಪರಾಹ್ನ  Comments (2)  

ಪಾರಂಪರಿಕ ಖಾಯಿಲೆಗಳಿಗೆ ಅಸಾಂಪ್ರದಾಯಿಕ ಚಿಕಿತ್ಸೆ

12102015

Published in: on ಅಕ್ಟೋಬರ್ 13, 2015 at 5:44 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಆನೆಗಳಿಗೇಕೆ ಕ್ಯಾನ್ಸರ್ ಕಾಟವಿಲ್ಲ?

elephants_family

ಹೌದು. ಮನುಷ್ಯ ಹೆದರುವ ರೋಗ ಕ್ಯಾನ್ಸರ್‍ ಆನೆಗಳಿಗೆ ಕಡಿಮೆ ಎಂದರೆ ನಂಬುವಿರಾ? ವಿಚಿತ್ರವಾದರೂ ಇದು ನಿಜ. ವಿಚಿತ್ರ ಏಕೆಂದರೆ ವಿಜ್ಞಾನಿಗಳ ಪ್ರಕಾರ ದೇಹ ದೊಡ್ಡದಾದಷ್ಟೂ ಕ್ಯಾನ್ಸರ್ ಹೆಚ್ಚೆಚ್ಚು ಕಾಣಿಸಿಕೊಳ್ಳಬೇಕು. ಈ ತರ್ಕಕ್ಕೆ ವಿಜ್ಞಾನಿಗಳು ಕೊಡುವ ಕಾರಣ ಇದು. ಕ್ಯಾನ್ಸರ್‍ ಎನ್ನುವುದು ನಮ್ಮ ದೇಹದಲ್ಲಿರುವ ಜೀವಕೋಶಗಳಲ್ಲಿ ಕೂಡಿಕೊಳ್ಳುವ ತಪ್ಪುಗಳ ಫಲ. ಜೀವಕೊಶದಲ್ಲಿ ಪ್ರತಿಕ್ಷಣವೂ ನೂರಾರು ರಾಸಾಯನಿಕ ಕ್ರಿಯೆಗಳು ಜರುಗುತ್ತಿರುತ್ತವೆ. ಇವೆಲ್ಲವೂ ತಪ್ಪಿಲ್ಲದೆ ಜರುಗಿದರೆ ಜೀವಕೋಶ ಆರೋಗ್ಯವಾಗಿರುತ್ತದೆ. ಇಲ್ಲದಿದ್ದರೆ ಖಾಯಿಲೆ ಗ್ಯಾರಂಟಿ. ಇಂತಹ ನೂರಾರು ಕ್ರಿಯೆಗಳಲ್ಲಿ ಪ್ರಮುಖವಾದದ್ದು ಡಿಎನ್ಎ ಪ್ರತಿ ಮಾಡುವುದು. ನಮ್ಮ ದೇಹ ದೊಡ್ಡದಾಗುವಾಗ  ಇಲ್ಲವೇ ಯಾವುದಾದರೂ ಜೀವಕೋಶವನ್ನುಕಿತ್ತೆಸೆದು ಆ ಜಾಗದಲ್ಲಿ ಬೇರೊಂದು ಕೋಶವಿಡಬೇಕಾದಾಗ ಜೀವಕೋಶಗಳು ವಿಭಜನೆಯಾಗುತ್ತವೆ. ಅಂದರೆ ಒಂದಿರುವುದು ಎರಡಾಗುತ್ತದೆ. ಈ ವೇಳೆ ಡಿಎನ್ಎಯೂ ಎರಡಾಗಬೇಕು.

ಡಿಎನ್ಎ ಸಾಮಾನ್ಯ ರಾಸಾಯನಿಕವಲ್ಲ. ಇದು ನಮ್ಮ ಬದುಕಿನ ಸಾರ. ಇದರಲ್ಲಿ ಜೀವಕೋಶದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೆ ಬೇಕಾದ ಮಾಹಿತಿ ಇರುತ್ತದೆ. ಹಾಗೆಯೇ ಆಗದಿರುವ ಕ್ರಿಯೆಗಳ ಮಾಹಿತಿಯೂ ಇರುತ್ತದೆ. ಹೀಗೆ ಆಗದ ಕ್ರಿಯೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‍ ಆಗಬಹುದಾದ ಮಾಹಿತಿ ಇದ್ದರೂ ಆಗದಿರುವುದಕ್ಕೆ ಕಾರಣ ಅದು ಪ್ರಕಟವಾಗದಂತೆ ಹತ್ತಿಕ್ಕುವುದು. ಇದು ಸಹಜವಾಗಿಯೇ ನಡೆಯುತ್ತಿದ್ದರೂ, ಕೆಲವೊಮ್ಮೆ ಕೈ ಮೀರಿ ಈ ನಿಯಂತ್ರಣ ಕ್ಷೀಣವಾಗಬಹುದು. ಆಗ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎನ್ನುವುದು ವಿಜ್ಞಾನಿಗಳ ತರ್ಕ.

ಹದ್ದುಬಸ್ತಿನಲ್ಲಿ ಇರುವ ಕ್ಯಾನ್ಸರ್ ಡಿಎನ್ಎ ಪ್ರಕಟಗೊಳ್ಳುವುದಕ್ಕೆ ಅದನ್ನು ನಿಯಂತ್ರಿಸುತ್ತಿರುವ ಘಟಕಗಳಲ್ಲಿ ಆಗುವ ದೋಷಗಳು ಕಾರಣವಿರಬೇಕು ಎನ್ನುವುದು ಊಹೆ. ಡಿಎನ್ಎ ಹೆಚ್ಚೆಚ್ಚು ಪ್ರತಿಯಾದಷ್ಟೂ ಹೆಚ್ಚೆಚ್ಚು ತಪ್ಪುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವಷ್ಟೆ. ದೇಹದ ಗಾತ್ರ ದೊಡ್ಡದಾದಷ್ಟೂ ಹೆಚ್ಚೆಚ್ಚು ಜೀವಕೋಶಗಳು ಬೇಕಾಗುತ್ತದೆ. ಅಂದರೆ ಹೆಚ್ಚೆಚ್ಚು ವಿಭಜನೆ, ಡಿಎನ್ಎ ನಕಲುಗಳೂ ಆಗಬೇಕು. ಹೆಚ್ಚೆಚ್ಚು ತಪ್ಪುಗಳೂ ಆಗುತ್ತಿರಬೇಕಲ್ಲ? ಹೆಚ್ಚೆಚ್ಚು ಕ್ಯಾನ್ಸರ್ ಕೂಡ ಇರಬೇಕು ಎನ್ನುವುದು ಊಹೆ. ಆದರೆ ಮನುಷ್ಯನಿಗಿಂತ ನಾಲ್ಕೈದು ಪಟ್ಟು ದೊಡ್ಡದಾಗಿರುವ ಆನೆಯಲ್ಲಿ ಕ್ಯಾನ್ಸರ್‍ ಕಾಣುವುದೇ ಇಲ್ಲವಲ್ಲ. ಏಕೆ? ಏನಿದರ ಗುಟ್ಟು!

ಅಮೆರಿಕೆಯ ಹಂಟ್ಸ್ ಮನ್ ಕ್ಯಾನ್ಸರ್ ಇನ್ಸ್ ಟಿಟ್ಯೂಟ್ ನ ಜೋಶುವ ಶಿಫ್‍ಮನ್‍ ನೇತೃತ್ವದ ತಂಡ ಹಾಗೂ ಶಿಕಾಗೋ ವಿಶ್ವವಿದ್ಯಾನಿಲಯದ ವಿನ್ಸೆಂಟ್‍ ಲಿಂಚ್ ನೇತೃತ್ವದ ಇನ್ನೊಂದು ತಂಡ ಏಕಕಾಲಕ್ಕೆ ಈ ರಹಸ್ಯವನ್ನು ರಟ್ಟು ಮಾಡಿವೆ.  ಈ ಸುದ್ದಿಯನ್ನು ಅಮೆರಿಕೆಯ ಸುಪ್ರಸಿದ್ಧ ವೈದ್ಯಕೀಯ ಪತ್ರಿಕೆ ಜರ್ನಲ್ ಆಫ್‍ ಅಮೆರಿಕನ್ ಮೆಡಿಕಲ್  ಅಸೋಸಿಯೇಷನ್‍ (ಜೆಎಎಂಎ) ತನ್ನ  ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.  ಇವರ ಪ್ರಕಾರ ಇದು ತಪ್ಪುಗಳಿಂದಾದದ್ದಲ್ಲ. ಆದರೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ವ್ಯವಸ್ಥೆ ಇರುವುದರಿಂದ ಆದದ್ದು. ಆನೆಗಳ ಜೀವಕೋಶಗಳಲ್ಲಿ ದೋಷಪೂರ್ಣ ಜೀವಕೋಶಗಳನ್ನು ಕೊಲ್ಲುವ ಕ್ರಿಯೆಗೆ ಅಗತ್ಯವಾದ ಪಿ53 ಎನ್ನುವ ಪ್ರೊಟೀನ್‍ ತಯಾರಿಕೆ ನಮ್ಮಲ್ಲಿ ಆಗುವುದಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚು ಎನ್ನುತ್ತಾರೆ.

ಈ ಎರಡೂ ತಂಡಗಳೂ ಆನೆಗಳ ಜೀವಕೋಶಗಳನ್ನು ಅರೆದು ಅವುಗಳಲ್ಲಿರುವ ಡಿಎನ್ಎ ಹೆಕ್ಕಿ ಮಾನವ ಹಾಗೂ ಇತರೆ ಜೀವಿಗಳ ಡಿಎನ್ಎ ಜೊತೆಗೆ ಹೋಲಿಸಿವೆ. ಹೋಲಿಸುವಾಗ ವಿಶೇಷವಾಗಿ ಪಿ53 ಎನ್ನುವ ಪ್ರೊಟೀನ್‍ ತಯಾರಿಸುವ ಜೀನ್‍ಗಳತ್ತ ಗಮನವಿಟ್ಟಿವೆ. ಈ ಪ್ರೊಟೀನ್‍ ಅಂಶ ಕಡಿಮೆಯಾದರೆ ಅಥವಾ ಈ ಜೀನ್‍ನ ಕೆಲಸಗಳ್ಳತನ ತೋರಿದರೆ ಕ್ಯಾನ್ಸರ್ ಆಗುತ್ತದೆನ್ನುವುದು ಈ ಹಿಂದೆ ಸ್ಪಷ್ಟವಾಗಿತ್ತು.  ಈ ಜೀನ್‍ ನಲ್ಲಿ ತಪ್ಪುಗಳಿದ್ದರೆ ಹೀಗಾಗಬಹುದಷ್ಟೆ. ಆದರೆ ಆನೆಯಲ್ಲಿ ಈ ತಪ್ಪುಗಳುಂಟಾದರೂ ಅದನ್ನು ತಕ್ಷಣದಲ್ಲಿಯೇ ಕರಾರುವಾಕ್ಕಾಗಿ ತಿದ್ದುವ ಪದ್ಧತಿ ಇದೆಯೋ? ಇದರಿಂದಾಗಿಯೇ ಆನೆಗಳು ಕ್ಯಾನ್ಸರ್‍ನಿಂದ ತಪ್ಪಿಸಿಕೊಳ್ಳುತ್ತಿರಬಹುದೋ ಎಂಬ ಊಹೆಯಿಂದಾಗಿ ಈ ವಿಶೇಷ ಗಮನ.

ಇವರು ಕಂಡದ್ದೇ ಬೇರೆ. ತಪ್ಪುಗಳನ್ನು ಕ್ಷಿಪ್ರವಾಗಿ ತಿದ್ದುವುದಾಗಿದ್ದರೆ ಆನೆಯ ಜೀವಕೋಶಗಳು ಪ್ರಬಲವಾದ ವಿಕಿರಣಗಳಿಗೆ ಒಡ್ಡಿದಾಗ ಸಾಯಬಾರದು. ಎಕ್ಸ್ ರೇ, ಅಲ್ಟ್ರಾವಯಲೆಟ್‍ ಕಿರಣಗಳು ಜೀವಕೋಶಗಳ ಡಿಎನ್ಎಯಲ್ಲಿ ದೋಷಗಳನ್ನುಂಟು ಮಾಡುತ್ತವೆ. ಇವಕ್ಕೆ ಒಡ್ಡಿದಾಗ ತಪ್ಪುಗಳನ್ನು ಕರಾರುವಾಕ್ಕಾಗಿ ತಿದ್ದುವಂತಿದ್ದರೆ ಆನೆಯ ಕೋಶಗಳು ಸಾಯಬಾರದು. ಆದರೆ ವಾಸ್ತವ ಹಾಗಿರಲಿಲ್ಲ. ಮನುಷ್ಯನ ಜೀವಕೋಶಗಳಿಗಿಂತ ಶೀಘ್ರವಾಗಿ ಆನೆಯ ಕೋಶಗಳು ಸಾಯುತ್ತಿದ್ದುವು. ಹಾಗಿದ್ದರೆ ಕ್ಯಾನ್ಸರ್ ಬಾರದಿರುವುದಕ್ಕೆ ಬೇರೇನೋ ಕಾರಣವಿರಬೇಕು ಎಂದು ಮತ್ತೆ ಹುಡುಕಾಟ ಆರಂಭವಾಯಿತು.

ಮರಳಿ ಪರೀಕ್ಷಿಸಿದಾಗ ಪಿ53 ಜೀನ್‍ ಒಂದಲ್ಲ ಎರಡಲ್ಲ ನಲವತ್ತು ಐವತ್ತು ಸಂಖ್ಯೆಯಲ್ಲಿ ಕಂಡು ಬಂದಿತು. ಮನುಷ್ಯನ ಜೀವಕೋಶದಲ್ಲಿ ಹೆಚ್ಚೆಂದರೆ ಇದು ಎರಡು ಕಡೆ ಇರಬಹುದಷ್ಟೆ. ಹಾಗಿದ್ದರೆ ಇಷ್ಟೊಂದು ಪ್ರತಿ ಏಕೆ? ಇವಕ್ಕೇನು ಕೆಲಸ? ಸಾಮಾನ್ಯವಾಗಿ ಈ ಜೀನ್‍ ಹಾಗೂ ಇದರ ಪ್ರೊಟೀನ್‍ ಅಪೋಪ್ಟೋಸಿಸ್ ಎನ್ನುವ ಕ್ರಿಯೆಯನ್ನು ಉಂಟು ಮಾಡುತ್ತವೆ. ಇದು ಒಂದು ವಿಧದಲ್ಲಿ ಜೀವಕೋಶಗಳ ಆತ್ಮಹತ್ಯೆ ಎನ್ನುತ್ತಾರೆ ವಿಜ್ಞಾನಿಗಳು. ಜೀವಕೋಶಗಳಲ್ಲಿ ತೊಂದರೆಗಳು ಕಂಡು ಬಂದಾಗ ಻ಅಥವಾ ಜೀವಕೋಶಗಳ ಸಂಖ್ಯೆ ಮಿತಿಮೀರಿದಾಗ ಕೆಲವು ಜೀವಕೋಶಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆ. ಈ ಅಪೋಪ್ಟೋಸಿಸ್‍ ಕ್ರಿಯೆಗೆ ಪಿ53 ಮೂಲ. ಹಾಗಿದ್ದರೆ ಇಂತಹ ಆತ್ಮಹತ್ಯೆಗಳು ಹೆಚ್ಚಾಗಲಿ ಅಂತಲೇ ಹೆಚ್ಚೆಚ್ಚು ಪಿ53 ಇವೆಯೋ?

ಇದರ ಪರೀಕ್ಷೆ ಮಾಡಿದಾಗ ಮೇಲ್ನೋಟಕ್ಕೆ ಹೌದೆನ್ನಿಸುತ್ತದೆಯಂತೆ. ಒಂದಿಷ್ಟು ಡಿಎನ್ಎ ದೋಷ ಕಾಣಿಸಿಕೊಂಡರೂ ಆ ಕೋಶಗಳನ್ನು ಈ ಪಿ53 ಆತ್ಮಹತ್ಯೆಗೆ ಪ್ರಚೋದಿಸುತ್ತಿರಬೇಕು. ಹೀಗಾಗಿ ಕ್ಯಾನ್ಸರ್‍ ಬೆಳೆಯುವಷ್ಟು ದೋಷಗಳು ಸಂಗ್ರಹವಾಗುವುದಿಲ್ಲ. ಆದ್ದರಿಂದ ಆನೆಗಳಿಗೆ ಕ್ಯಾನ್ಸರ್‍ ಕಾಟ ಕಡಿಮೆ ಎನ್ನುವ ತೀರ್ಮಾನಕ್ಕೆ ಈ ಎರಡೂ ತಂಡಗಳೂ ಬಂದಿವೆ.

ಬಹುಶಃ. ನಮ್ಮ ದೇಹದಲ್ಲೂ ಹೇಗಾದರು ಈ ಪಿ53 ಹೆಚ್ಚಾಗುವಂತೆ ಮಾಡಿದರೆ ಕ್ಯಾನ್ಸರ್‍ ಹತ್ತಿಕ್ಕಬಹುದೇ? ಇದು ಮುಂದಿನ ಪ್ರಶ್ನೆ. ಇದಕ್ಕೇನು ಉತ್ತರ ಬರುತ್ತದೋ ಕಾದು ನೋಡೋಣ!

Published in: on ಅಕ್ಟೋಬರ್ 11, 2015 at 9:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಲ್ಲು ಒಡೆದದ್ದು ಹೇಗೆ?

St-marys-Island1

ಸೈಂಟ್‍ ಮೇರೀಸ್‍ ದ್ವೀಪದ ಕಲ್ಲುಗಳೇಕೆ ಷಟ್ಕೋಣದ ಕಂಭಗಳಂತಿವೆ? ಕರ್ನಾಟಕದ ಸುಪ್ರಸಿದ್ದ ದ್ವೀಪದ ಕಥೆಗೊಂದು ಹೊಸ ಭಾಷ್ಯ ಬರೆಯಲಾಗಿದೆ. ಜಕ್ಕಣಾಚಾರಿಗಿಂತಲೂ ಮಿಗಿಲಾದ ಶಿಲ್ಪಿಯೊಬ್ಬ ಲಕ್ಷಾಂತರ ವರ್ಷಗಳ ಕಾಲ ಕುಳಿತು ಉಳಿ ಕುಟ್ಟಿ ಒಂದೇ ಸಮನಾದ ಷಟ್ಕೋಣದ ಆಕಾರವನ್ನು ಕಡೆದಿದ್ದಾನೋ ಎನ್ನುವಷ್ಟು ದ್ವೀಪದ ಶಿಲೆಗಳ ಆಕಾರ ಸಮನಾಗಿದೆ. ಇದು ಕೇವಲ ಸೈಂಟ್‍ ಮೇರೀಸ್‍ ದ್ವೀಪದ್ದಷ್ಟೆ ಅಲ್ಲ. ಪ್ರಪಂಚದ   ಇನ್ನೂ ಹಲವೆಡೆ ಇಂತಹ ಆಕಾರದ ಶಿಲೆಗಳು ಕಾಣುತ್ತವೆ. ಈ ಕಲ್ಲುಗಳಿಗಷ್ಟೆ ಏಕೆ ಈ ಆಕಾರ ಎನ್ನುವುದು ಸೋಜಿಗದ ಪ್ರಶ್ನೆ. ನಿನ್ನೆಯ ದಿನ ಸುಪ್ರಸಿದ್ದ ಫಿಸಿಕ್ಸ್ ಸಂಶೋಧನಾ ಪತ್ರಿಕೆ ಫಿಸಿಕಲ್ ರಿವ್ಯೂ ಲೆಟರ್ಸ್ ನಲ್ಲಿ ಪ್ರಕಟವಾಗಿರುವ ಪ್ರಬಂಧವೊಂದು ಈ ಗುಟ್ಟಿನ ಮೊಟ್ಟೆಯನ್ನೊಡೆದಿದೆ.

ಸೈಂಟ್‍ ಮೇರೀಸ್‍ ದ್ವೀಪದ ಕಲ್ಲುಗಳನ್ನು ಭೂವಿಜ್ಞಾನಿಗಳು ಬಸಾಲ್ಟ್ ಶಿಲೆಗಳೆನ್ನುತ್ತಾರೆ. ಇದು ಭೂಮಿಯೊಳಗಿರುವ ಬಿಸಿ ಶಿಲಾರಸ (ಲಾವಾ) ಮೇಲುಕ್ಕಿಬಂದು ತಣಿದಾಗ ರೂಪುಗೊಂಡ ಕಲ್ಲುಗಳು ಎನ್ನುವುದು ಅವರ ನಂಬಿಕೆ. ಕರ್ನಾಟಕವಿರುವ ದಕ್ಷಿಣ ಪ್ರಸ್ಥಭೂಮಿಯಿಡೀ ಹೀಗೇ ಲಾವಾ ರಸ  ಉಕ್ಕಿ ಬಂದು ತಣಿದಾದ ಆಗಿದ್ದು. ಸುಮಾರು ಆರೂವರೆ ಕೋಟಿ ವರ್ಷಗಳ ಹಿಂದಿನ ಕಥೆ. ಒಮ್ಮೆಲೇ ಭೂಮಿಯಿಂದ  ಉಕ್ಕಿದ ಲಾವಾ ಭರತಖಂಡದ ದಕ್ಷಿಣಭಾಗವನ್ನೆಲ್ಲಾ ಆವರಿಸಿಕೊಂಡಿತಂತೆ. ಆದರೆ ಈ ದಕ್ಷಿಣ ಪ್ರಸ್ಥ ಭೂಮಿಯಲ್ಲಿ ಎಲ್ಲಿಯೂ ಕಾಣದ ಷಟ್ಕೋಣದ ಶಿಲೆಗಳು ಸೈಂಟ್‍ ಮೇರೀಸ್‍ನಲ್ಲಿ ಮಾತ್ರ ಯಾಕೆ ಇವೆ?

ಇದಕ್ಕೆ ಉತ್ತರ: ಇವು ದಕ್ಷಿಣ ಪ್ರಸ್ಥಭೂಮಿಯ ಹುಟ್ಟಿದ ಸಂದರ್ಭದಲ್ಲೇ ಜನಿಸಿದರೂ, ತಣಿದ ಗತಿ ಮಾತ್ರ ಬೇರೆಯಿರಬೇಕು ಎನ್ನುತ್ತಾರೆ  ಈ ಬಗ್ಗೆ ತಮ್ಮ ಹೊಸ ತರ್ಕವನ್ನು ಮಂಡಿಸಿರುವ ಮಾರ್ಟಿನ್‍ ಹಾಫ್ಮನ್ ಮತ್ತು ಸಂಗಡಿಗರು. ಇವರು ಬಿಸಿಯಾದ ಲಾವಾ ತಣಿಯುವುದಕ್ಕೆ ಬೇಕಾದ ಸಂದರ್ಭಗಳನ್ನು ಕಂಪ್ಯೂಟರಿನಲ್ಲಿ ಗಣಿತೀಯವಾಗಿ ಸೃಷ್ಟಿಸಿದರು. ಅನಂತರ ವಿಭಿನ್ನ ಸಂದರ್ಭಗಳಲ್ಲಿ ಈ ಬಿಸಿಗಲ್ಲು ತಣ್ಣಗಾದರೆ ಏನಾಗಬಹುದು ಎಂದು ಲೆಕ್ಕಿಸಿದರು. ಇದರ ಫಲವಾಗಿ ಸೈಂಟ್‍ ಮೇರೀಸ್‍ ಶಿಲೆಗಳು ಹೇಗಾಗಿರಬಹುದು ಎನ್ನುವ ಸೂಚನೆ ದೊರಕಿದೆ.

ಬಿಸಿಗಲ್ಲು ತಣಿಯುವಾಗ  ಅದು ಕುಗ್ಗುತ್ತದಷ್ಟೆ. ಇದರಿಂದ ಉಂಟಾಗುವ ಬಲ  ಕಡಿಮೆಯೇನಲ್ಲ. ಇದರ ಫಲವಾಗಿ ಶಿಲೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ವಾಸ್ತವವಾಗಿ ಬಿರುಕುಗಳು ಅತಿ ಒತ್ತಡವನ್ನು ವಿತರಿಸುವ ಉಪಾಯವಷ್ಟೆ. ಆರಂಭದಲ್ಲಿ ಕಲ್ಲಿನ ಹೊರಮೈ ತಣಿದಾಗ ಈ ಬಿರುಕುಗಳು ಚಚ್ಚೌಕಾಕಾರದಲ್ಲಿಯೋ ಅಥವಾ ಆಯತವಾಗಿಯೋ ಶುರುವಾಗುತ್ತವೆಯಂತೆ. ಆದರೆ ಕಾಲ ಕಳೆದ ಹಾಗೆ ಬಿರುಕುಗಳು ದೊಡ್ಡದಾಗಿ ಒಂದನೊಡನೊಂದು ಕೂಡಿಕೊಳ್ಳುತ್ತವಂತೆ. ಹೀಗಾದಾಗ ಆರಂಭದಲ್ಲಿ ಎರಡು ಬಿರುಕುಗಳ ನಡುವಿದ್ದ ತೊಂಬತ್ತು ಡಿಗ್ರಿ ಕೋನ (ಲಂಬ ಕೋನ) ಬದಲಾಗಿ ನೂರಿಪ್ಪತ್ತು ಡಿಗ್ರಿಯಾಗಿ  ಬೆಳೆಯುತ್ತದೆ. ಅಕ್ಕಪಕ್ಕದ ಬಿರುಕುಗಳು ಹೀಗೆ 120 ಡಿಗ್ರಿ ಕೋನಕ್ಕೆ ಬೆಳೆದಾಗ ಷಟ್ಕೋಣಾಕೃತಿ ರೂಪುಗೊಳ್ಳುತ್ತದೆ. ಈ ರೀತಿ ಯಾವುದೆ ವಸ್ತು ತಣಿದರೂ ಷಟ್ಕೋನಗಳು ರೂಪುಗೊಳ್ಳಬೇಕಾದದ್ದು ಗಣಿತ ಪ್ರಕಾರ ನಿಯಮವಂತೆ.

ಕಂಪ್ಯುಟರಿನಲ್ಲಿ ಇಂತಹ ಲೆಕ್ಕಾಚಾರಗಳನ್ನು ಹಾಕಿದಾಗ ಎಲ್ಲ ಬಿರುಕುಗಳೂ ಕೊನೆಗೆ ಬಂದು ಕೂಡಿದ್ದು ನೂರ ಇಪತ್ತು ಡಿಗ್ರಿ ಕೋನದಲ್ಲಿ. ಹೀಗುಂಟಾಗಿರಬೇಕು ನಮ್ಮ ಸೈಂಟ್‍ ಮೇರೀಸ್‍ ದ್ವೀಪದ ಸುಂದರ ಶಿಲೆಗಳು.

Published in: on ಅಕ್ಟೋಬರ್ 10, 2015 at 7:08 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಟ್ಯುರೀನ್‍ ಮುಸುಕಿನ ಬಟ್ಟೆ ಭಾರತದ್ದು!

ಟ್ಯುರೀನ್‍ ಮುಸುಕಿನ ಬಗ್ಗೆ ಕೇಳಿದ್ದೀರಲ್ಲ?  ಇಟಲಿಯ ಟ್ಯುರೀನ್‍ ನಗರದ ಸೈಂಟ್‍ ಜಾನ್‍ ದಿ ಬಾಪ್ಟಿಸ್ಟ್ ಇಗರ್ಜಿಯಲ್ಲಿ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಳೆದ 117 ವರ್ಷಗಳಿಂದ ಇದು ಹಲವು ವಿವಾದಗಳಿಗೆ ಜನ್ಮ ನೀಡಿದ ಬಟ್ಟೆ. 1898ರಲ್ಲಿ ಛಾಯಾಚಿತ್ರಕಾರನೊಬ್ಬ ಈ ಮುಸುಕಿನ ಚಿತ್ರವನ್ನು ತೆಗೆದಿದ್ದ. ಚಿತ್ರದ ನೆಗಟಿವ್‍ ನಲ್ಲಿ ನೋಡಿದಾಗ ಮೇಲೆ ಇರುವಂತಹ ಚಿತ್ರ ಕಂಡಿತು. ಅದಕ್ಕೂ ಮೊದಲು ಇದನ್ನು ಯೇಸು ಕ್ರಿಸ್ತನ ಶವದ ಮೇಲೆ ಹೊದಿಸಿದ್ದ ಮುಸುಕು ಎಂದು ಹೇಳಲಾಗಿತ್ತು. ಛಾಯಾಚಿತ್ರಕಾರ ಸೆಕೊಂಡೊ ಪಿಯೊ ತೆಗೆದ ನೆಗಟಿವ್‍ನಲ್ಲಿ ಹೊದಿಕೆಯ ಮೇಲೆ ಮನುಷ್ಯನ ಛಾಯೆಯೊಂದು ಮೂಡಿತ್ತು. ಹೀಗಾಗಿ ಇದು ಯೇಸು ಕ್ರಿಸ್ತನ ಮೇಲೆ ಹೊದಿಸಿದ್ದ ಮುಸುಕೇ ಎಂದು ಕ್ರಿಸ್ತ ಬಂಧುಗಳು ನಂಬಿದ್ದಾರೆ. ಹಾಗೇನಿಲ್ಲ. ಇದುವೂ ಯಾರೋ ಮಾಡಿದ ಮೋಸದ ಮಾಯ ಎಂದು ಹಲವರು ಧ್ವನಿಯೆತ್ತಿದ್ದಾರೆ. ನಿಜ ಏನೆಂಬುದನ್ನು ತಿಳಿಯಲು ಇದುವರೆವಿಗೂ ಹಲವು ಪ್ರಯತ್ನಗಳು ನಡೆದಿವೆ. ವೈಜ್ಞಾನಿಕವಾಗಿ ಕಾರ್ಬನ್‍ ಡೇಟಿಂಗ್‍ ತಂತ್ರ ಬಳಸಿ ಮುಸುಕಿನಲ್ಲಿರುವ ಕಾರ್ಬನ್‍ ಅಣುಗಳು ಎಷ್ಟು ಹಳೆಯವು ಎನ್ನುವುದನ್ನು ಪರೀಕ್ಷೆ ಮಾಡಿದಾಗ, ಅದು ಕ್ರಿಸ್ತಶಕ 500 ರಿಂದ 1500ರೊಳಗಿನ ಹೊದಿಕೆ ಎನ್ನುವುದು ತಿಳಿದುಬಂದಿತು. ಕ್ರಿಸ್ತನ ಮರಣ ಻ಅದಕ್ಕಿಂತಲೂ ಹಿಂದೆ ಆಗಿದ್ದಷ್ಟೆ. 1988 ರಲ್ಲಿ ನಡೆದ ಪರೀಕ್ಷೆಗಳು ಈ ಮುಸುಕು ಕ್ರಿಸ್ತಶಕ 1260 ರಿಂದ 1390ರೊಳಗಿನದ್ದು ಎಂದು ಹೇಳಿತು. ಆದರೆ ಇದನ್ನೂ ಅಲ್ಲಗಳೆಯುವವರಿದ್ದಾರೆ. ಮುಸುಕಿನ ರಹಸ್ಯಕ್ಕೆ ಇದರ ಮೇಲೆ ನಡೆದ ರಾಸಾಯನಿಕ ಪರೀಕ್ಷೆಗಳೂ ಇಂಬುಗೊಟ್ಟವು. ಮುಸುಕಿನ ಮೇಲಿರುವ ನೆರಳಿನ ತಲೆಯಲ್ಲಿ ಮುಳ್ಳಿನ ಕಿರೀಟದಲ್ಲಿರುವಂತೆ ರಂಧ್ರಗಳಿವೆ. ಒಂದು ಮಣಿಕಟ್ಟಿನಲ್ಲಿ ಬಳೆಯನ್ನು ತೊಡಿಸಿದ್ದಂತೆ ಗುರುತುಗಳಿವೆ. ಎದೆಯ ಭಾಗದಲ್ಲಿ ರಕ್ತವರ್ಣದ ಕಲೆಗಳಿವೆ. ಇವೆಲ್ಲವೂ ಶಿಲುಬೆಯೇರಿದ ಕ್ರಿಸ್ತನದ್ದೇ ಎನ್ನುವುದು ಭಕ್ತರ ವಾದ.  ಇದನ್ನು ಒಪ್ಪದ ಕಲಾವಿದರು ಈ ಚಿತ್ರವನ್ನು ಯಾವುದೋ ಸಸ್ಯವರ್ಣದಿಂದ ರಚಿಸಿರಬೇಕು ಎಂದು ವಾದಿಸುತ್ತಾರೆ.  ಮುಸುಕಿನ ಮೇಲಿನ ಬಣ್ಣಗಳನ್ನು ಪರೀಕ್ಷಿಸಿದ ಕೆಲವು ಫೋರೆನ್ಸಿಕ್‍ ತಜ್ಞರು ಇದು ರಕ್ತದ ಕಲೆಗಳು ಎಂದು ಹೇಳಿದ್ದೂ ಉಂಟು. ಹೀಗೆ ಕಾಲ, ನೆರಳಿನ ಸ್ವರೂಪ ಹಾಗೂ ಬಟ್ಟೆಯ ರೂಪದ ಬಗ್ಗೆ ಟ್ಯೂರಿನ್‍ ಮುಸುಕು ವಿವಾದಗಳ ಆಗರವಾಗಿದೆ ಎನ್ನಬಹುದು. ಬಟ್ಟೆಯ ಮೇಲಿರುವ ಧೂಳಿನ ಕಣಗಳಲ್ಲಿ ಇರುವ ಪರಾಗರೇಣುಗಳು ಹಾಗೂ ಇತರೆ ಸಸ್ಯಗಳ ಻ಅಂಶಗಳು ಯಾವ ಸಸ್ಯಗಳದ್ದು, ಅವು ಎಲ್ಲಿ ಬೆಳೆಯುತ್ತಿದ್ದಿರಬಹುದು ಎಂದೆಲ್ಲ ಊಹೆಗಳು ನಡೆದಿವೆ. ಆದರೂ ಈ ಮುಸುಕು ಯಾವ ದೇಶದ್ದು, ಎಂದು ಸೃಷ್ಟಿಯಾಗಿದ್ದು, ಹೇಗೆ ಸೃಷ್ಟಿಯಾಗಿದ್ದು ಎನ್ನುವ ಬಗ್ಗೆ ನಿಖರವಾಗಿ ಹೇಳುವವರಿಲ್ಲ. ಈ ಎಲ್ಲ ಗೊಂದಲಕ್ಕೆ ಈಗ ಮತ್ತೊಂದು ಅಂಶ ಸೇರ್ಪಡೆಯಾಗಿದೆ. ಈ ಮುಸುಕನ್ನು ಮಾಡಿರುವ ಬಟ್ಟೆ ಭಾರತದಲ್ಲಿ ತಯಾರಾಗಿದ್ದಿರಬಹುದು ಎಂಬ ವರದಿಯನ್ನು ಸೈಂಟಿಫಿಕ್ ರಿಪೋರ್ಟ್‍ ಪತ್ರಿಕೆ ಪ್ರಕಟಿಸಿದೆ.  ಇಟಲಿಯ ಪಡೋವ ವಿಶ್ವವಿದ್ಯಾನಿಲಯದ ಜಿಯಾನಿ ಬರಕಾಚಿಯ ಮತ್ತು ಸಂಗಡಿಗರು ಈ ಮುಸುಕಿನ ಮೇಲಿರುವ ದೂಳನ್ನು ಜತನವಾಗಿ ಸಂಗ್ರಹಿಸಿ (ಪ್ರಪಂಚದ ಹಲವು ಕ್ರಿಶ್ಷಿಯನ್‍ ಸಮುದಾಯಗಳು ಪವಿತ್ರವೆಂದು ಪರಿಗಣಿಸಿರುವ ಮುಸುಕಿಗೆ ಯಾವುದೋ ಘಾಸಿಯಾಗುವಂತಿಲ್ಲವಲ್ಲ!)  ಻ಅದರಲ್ಲಿರುವ ಡಿಎನ್‍ಎ ತುಣುಕುಗಳನ್ನು ಪರೀಕ್ಷಿಸಿದ್ದಾರೆ. ಇತ್ತೀಚಿನ ತಂತ್ರಗಳನ್ನು ಬಳಸಿ ಈ ತುಣುಕುಗಳು ಯಾವ ಸಸ್ಯಗಳು ಅಥವಾ ಮಾನವ ಸಮುದಾಯಕ್ಕೆ ಸೇರಿರಬಹುದು ಎಂದು ಪರಿಶೀಲಿಸಿದ್ದಾರೆ. ಮುಸುಕಿನ ಮೇಲೆ ದೊರಕಿರುವ ದೂಳಿನಲ್ಲಿರುವ ಡಿಎನ್‍ಎ ತುಣುಕುಗಳು ಹಲವು ಸಸ್ಯಗಳಿಗೆ ಸೇರಿದ್ದು, ಇವೆಲ್ಲವೂ ಟ್ಯುರೀನ್‍ ಮುಸುಕು ಅದರ ಜೀವಿತಾವಧಿಯಲ್ಲಿ ಪ್ರವಾಸ ಮಾಡಿದ ವಿವಿಧ ಸ್ಥಳಗಳಲ್ಲಿರುವ ಸಸ್ಯಗಳಿಗೆ ತಾಳೆಯಾಗುತ್ತವೆ. ಆದರೆ ಇದರಲ್ಲಿರುವ ಮೈಟೋಕಾಂಡ್ರಿಯದ ಡಿಎನ್‍ಎ ತುಣುಕುಗಳು ಮತ್ತೊಂದು ವಿಸ್ಮಯವನ್ನು ಬಯಲು ಮಾಡಿದುವು. ಮೈಟೊಕಾಂಡ್ರಿಯ ಡಿಎನ್‍ಎ ಯನ್ನು ಮಾನವ ಸಮುದಾಯಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಲು ಬಳಸುತ್ತಾರೆ. ಮೈಟೊಕಾಂಡ್ರಿಯ  ಎನ್ನುವುದು ಜೀವಕೋಶಗಳ ಒಂದು ಅಂಗಾಂಶ.  ಇದು ತಾಯಿಯಿಂದ ಮಗುವಿಗೆ  ಒಂದಿಷ್ಟೂ ಬದಲಾವಣೆಯಾಗದೆ ವರ್ಗಾವಣೆಯಾಗುತ್ತದೆಯಾದ್ದರಿಂದ  ವಿವಿಧ ಸಮುದಾಯಗಳಲ್ಲಿರುವ ವ್ಯತ್ಯಾಸವನ್ನು ಇದರಿಂದ ಪತ್ತೆ ಹಚ್ಚಬಹುದು.

ಈ ರೀತಿಯ ಪರೀಕ್ಷೆಯನ್ನು ನಡೆಸಿದ ಬರಕಾಚಿಯಗೆ ಒಂದು ಅಚ್ಚರಿ ಕಂಡಿತು. ಟ್ಯುರೀನ್‍ ಮುಸುಕು ಕ್ರಿಸ್ತಶಕ 1200 ರಿಂದ ಇಂದಿನವರೆಗೂ ಯಾವ್ಯಾವ ಪ್ರದೇಶಗಳಲ್ಲೆಲ್ಲ ಅಲೆದಾಡಿತ್ತೋ ಅಲ್ಲಿನ ಸಮುದಾಯಗಳನ್ನು ಸೂಚಿಸುವ  ಮೈಟೊಕಾಂಡ್ರಿಯ ಡಿಎನ್‍ಎ ತುಣುಕುಗಳು  ಇದ್ದುವು. ಇದು ನಿರೀಕ್ಷಿಸಿದ ಫಲಿತಾಂಶ. ಆದರೆ ಇದರೊಟ್ಟಿಗೆ ಭಾರತೀಯರ ಮೈಟೊಕಾಂಡ್ರಿಯ ಡಿಎನ್ಎ ಯ ತುಣುಕುಗಳಂತವೂ ಇದರಲ್ಲಿ ದೊರಕಿವೆ. ಇದುವರೆಗೂ ದಾಖಲಾಗಿರುವ ಚರಿತ್ರೆಯ ಪ್ರಕಾರ ಈ ಮುಸುಕು ಯಾವ ಭಾರತೀಯರ ಕೈಗೂ ಸಿಕ್ಕಿರಲಿಲ್ಲ. 1300 ರಿಂದ ಇಂದಿನವರೆಗೆ ಇದು ಯುರೋಪಿನ ಕ್ರಿಶ್ಚಿಯನ್‍ ಸಮುದಾಯದ ಕಟ್ಟೆಚ್ಚರದಲ್ಲಿ ಕಾಪಾಡಲ್ಪಟ್ಟಿದೆ. ಹಾಗಿದ್ದರೆ ಎಲ್ಲಿಂದ ಬಂತು ಈ ಭಾರತೀಯ ಡಿಎನ್ಎ ತುಣುಕು?

ಬರಕಾಚಿಯ ತಂಡದ ಪ್ರಕಾರ ಇದಕ್ಕೆ ಒಂದೇ ಒಂದು ಕಾರಣ.  ಈ ಬಟ್ಟೆ ಭಾರತದಲ್ಲಿ ತಯಾರಾಗಿದ್ದಿರಬೇಕು. ಆ ಡಿಎನ್ಎ ತುಣುಕು ಬಟ್ಟೆ ತಯಾರಿಸಿದ್ದವರದ್ದು ಇರಬೇಕು. ಬಹಳ ಹಿಂದೆ ಈ ಬಟ್ಟೆಯನ್ನು ಸಿಂಡನ್‍ ಎಂದೂ ಕರೆಯುತ್ತಿದ್ದರಂತೆ. ಈ ಪದ ಸಿಂಧೂ ಎನ್ನುವ ಪದದ ಻ಅಪಭ್ರಂಶವಾಗಿರಬೇಕು. ಅದುವೂ ಒಂದು ಪುರಾವೆ ಎಂದು ಬರಕಾಚಿಯ ತಂಡ ತಮ್ಮ ಊಹೆಯನ್ನು ಚರ್ಚೆಗೆ ಇಟ್ಟಿದೆ.

ಏನೇ ಇರಲಿ. ವಿಶ್ವಾಸದ ಮಾತುಗಳಿಗೆ ವಿಜ್ಞಾನದ ಪುರಾವೆಗಳು ಎಂದಿಗೂ ಸಾಕಾಗುವುದಿಲ್ಲ. ಬರಕಾಚಿಯ ತಂಡದ ಈ ಶೋಧ ಮುಸುಕಿನ ಮೇಲಿರುವ ಛಾಯೆ ಹೇಗಾಯಿತು, ಎಂದಾಯಿತು ಎನ್ನುವುದನ್ನು ತಿಳಿಸಿಲ್ಲ. ಏನಿದ್ದರೂ ಈ ಮುಸುಕು ಇದುವರಗೂ ಜನ ನಂಬಿರುವ ಸ್ಥಳಗಳಲ್ಲೇ ಇತ್ತು. ಅಲ್ಲಿನ ಸಸ್ಯಗಳ ಕುರುಹು ಇದೆ ಅಂತಲೇ ತಿಳಿಸಿದೆ. ಜೊತೆಗೆ ಬಟ್ಟೆ ಭಾರತದಿಂದ ಬಂದಿರಬಹುದು ಎನ್ನುವ ಕೌತುಕವನ್ನೂ ಮುಂದಿಟ್ಟಿದೆ. ವಿಶ್ವಾಸ, ವಿಜ್ಞಾನದ ಈ ಗುದ್ದಾಟ  ಎಲ್ಲಿಯವರೆಗೆ ಮುಟ್ಟುತ್ತದೆ ಕಾದು ನೋಡೋಣ.

ಚಿತ್ರ: https://en.wikipedia.org/wiki/Shroud_of_Turin#/media/File:Full_length_negatives_of_the_shroud_of_Turin.jpg

Published in: on ಅಕ್ಟೋಬರ್ 6, 2015 at 6:59 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ