ಟ್ಯುರೀನ್‍ ಮುಸುಕಿನ ಬಟ್ಟೆ ಭಾರತದ್ದು!

ಟ್ಯುರೀನ್‍ ಮುಸುಕಿನ ಬಗ್ಗೆ ಕೇಳಿದ್ದೀರಲ್ಲ?  ಇಟಲಿಯ ಟ್ಯುರೀನ್‍ ನಗರದ ಸೈಂಟ್‍ ಜಾನ್‍ ದಿ ಬಾಪ್ಟಿಸ್ಟ್ ಇಗರ್ಜಿಯಲ್ಲಿ ಇದನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಳೆದ 117 ವರ್ಷಗಳಿಂದ ಇದು ಹಲವು ವಿವಾದಗಳಿಗೆ ಜನ್ಮ ನೀಡಿದ ಬಟ್ಟೆ. 1898ರಲ್ಲಿ ಛಾಯಾಚಿತ್ರಕಾರನೊಬ್ಬ ಈ ಮುಸುಕಿನ ಚಿತ್ರವನ್ನು ತೆಗೆದಿದ್ದ. ಚಿತ್ರದ ನೆಗಟಿವ್‍ ನಲ್ಲಿ ನೋಡಿದಾಗ ಮೇಲೆ ಇರುವಂತಹ ಚಿತ್ರ ಕಂಡಿತು. ಅದಕ್ಕೂ ಮೊದಲು ಇದನ್ನು ಯೇಸು ಕ್ರಿಸ್ತನ ಶವದ ಮೇಲೆ ಹೊದಿಸಿದ್ದ ಮುಸುಕು ಎಂದು ಹೇಳಲಾಗಿತ್ತು. ಛಾಯಾಚಿತ್ರಕಾರ ಸೆಕೊಂಡೊ ಪಿಯೊ ತೆಗೆದ ನೆಗಟಿವ್‍ನಲ್ಲಿ ಹೊದಿಕೆಯ ಮೇಲೆ ಮನುಷ್ಯನ ಛಾಯೆಯೊಂದು ಮೂಡಿತ್ತು. ಹೀಗಾಗಿ ಇದು ಯೇಸು ಕ್ರಿಸ್ತನ ಮೇಲೆ ಹೊದಿಸಿದ್ದ ಮುಸುಕೇ ಎಂದು ಕ್ರಿಸ್ತ ಬಂಧುಗಳು ನಂಬಿದ್ದಾರೆ. ಹಾಗೇನಿಲ್ಲ. ಇದುವೂ ಯಾರೋ ಮಾಡಿದ ಮೋಸದ ಮಾಯ ಎಂದು ಹಲವರು ಧ್ವನಿಯೆತ್ತಿದ್ದಾರೆ. ನಿಜ ಏನೆಂಬುದನ್ನು ತಿಳಿಯಲು ಇದುವರೆವಿಗೂ ಹಲವು ಪ್ರಯತ್ನಗಳು ನಡೆದಿವೆ. ವೈಜ್ಞಾನಿಕವಾಗಿ ಕಾರ್ಬನ್‍ ಡೇಟಿಂಗ್‍ ತಂತ್ರ ಬಳಸಿ ಮುಸುಕಿನಲ್ಲಿರುವ ಕಾರ್ಬನ್‍ ಅಣುಗಳು ಎಷ್ಟು ಹಳೆಯವು ಎನ್ನುವುದನ್ನು ಪರೀಕ್ಷೆ ಮಾಡಿದಾಗ, ಅದು ಕ್ರಿಸ್ತಶಕ 500 ರಿಂದ 1500ರೊಳಗಿನ ಹೊದಿಕೆ ಎನ್ನುವುದು ತಿಳಿದುಬಂದಿತು. ಕ್ರಿಸ್ತನ ಮರಣ ಻ಅದಕ್ಕಿಂತಲೂ ಹಿಂದೆ ಆಗಿದ್ದಷ್ಟೆ. 1988 ರಲ್ಲಿ ನಡೆದ ಪರೀಕ್ಷೆಗಳು ಈ ಮುಸುಕು ಕ್ರಿಸ್ತಶಕ 1260 ರಿಂದ 1390ರೊಳಗಿನದ್ದು ಎಂದು ಹೇಳಿತು. ಆದರೆ ಇದನ್ನೂ ಅಲ್ಲಗಳೆಯುವವರಿದ್ದಾರೆ. ಮುಸುಕಿನ ರಹಸ್ಯಕ್ಕೆ ಇದರ ಮೇಲೆ ನಡೆದ ರಾಸಾಯನಿಕ ಪರೀಕ್ಷೆಗಳೂ ಇಂಬುಗೊಟ್ಟವು. ಮುಸುಕಿನ ಮೇಲಿರುವ ನೆರಳಿನ ತಲೆಯಲ್ಲಿ ಮುಳ್ಳಿನ ಕಿರೀಟದಲ್ಲಿರುವಂತೆ ರಂಧ್ರಗಳಿವೆ. ಒಂದು ಮಣಿಕಟ್ಟಿನಲ್ಲಿ ಬಳೆಯನ್ನು ತೊಡಿಸಿದ್ದಂತೆ ಗುರುತುಗಳಿವೆ. ಎದೆಯ ಭಾಗದಲ್ಲಿ ರಕ್ತವರ್ಣದ ಕಲೆಗಳಿವೆ. ಇವೆಲ್ಲವೂ ಶಿಲುಬೆಯೇರಿದ ಕ್ರಿಸ್ತನದ್ದೇ ಎನ್ನುವುದು ಭಕ್ತರ ವಾದ.  ಇದನ್ನು ಒಪ್ಪದ ಕಲಾವಿದರು ಈ ಚಿತ್ರವನ್ನು ಯಾವುದೋ ಸಸ್ಯವರ್ಣದಿಂದ ರಚಿಸಿರಬೇಕು ಎಂದು ವಾದಿಸುತ್ತಾರೆ.  ಮುಸುಕಿನ ಮೇಲಿನ ಬಣ್ಣಗಳನ್ನು ಪರೀಕ್ಷಿಸಿದ ಕೆಲವು ಫೋರೆನ್ಸಿಕ್‍ ತಜ್ಞರು ಇದು ರಕ್ತದ ಕಲೆಗಳು ಎಂದು ಹೇಳಿದ್ದೂ ಉಂಟು. ಹೀಗೆ ಕಾಲ, ನೆರಳಿನ ಸ್ವರೂಪ ಹಾಗೂ ಬಟ್ಟೆಯ ರೂಪದ ಬಗ್ಗೆ ಟ್ಯೂರಿನ್‍ ಮುಸುಕು ವಿವಾದಗಳ ಆಗರವಾಗಿದೆ ಎನ್ನಬಹುದು. ಬಟ್ಟೆಯ ಮೇಲಿರುವ ಧೂಳಿನ ಕಣಗಳಲ್ಲಿ ಇರುವ ಪರಾಗರೇಣುಗಳು ಹಾಗೂ ಇತರೆ ಸಸ್ಯಗಳ ಻ಅಂಶಗಳು ಯಾವ ಸಸ್ಯಗಳದ್ದು, ಅವು ಎಲ್ಲಿ ಬೆಳೆಯುತ್ತಿದ್ದಿರಬಹುದು ಎಂದೆಲ್ಲ ಊಹೆಗಳು ನಡೆದಿವೆ. ಆದರೂ ಈ ಮುಸುಕು ಯಾವ ದೇಶದ್ದು, ಎಂದು ಸೃಷ್ಟಿಯಾಗಿದ್ದು, ಹೇಗೆ ಸೃಷ್ಟಿಯಾಗಿದ್ದು ಎನ್ನುವ ಬಗ್ಗೆ ನಿಖರವಾಗಿ ಹೇಳುವವರಿಲ್ಲ. ಈ ಎಲ್ಲ ಗೊಂದಲಕ್ಕೆ ಈಗ ಮತ್ತೊಂದು ಅಂಶ ಸೇರ್ಪಡೆಯಾಗಿದೆ. ಈ ಮುಸುಕನ್ನು ಮಾಡಿರುವ ಬಟ್ಟೆ ಭಾರತದಲ್ಲಿ ತಯಾರಾಗಿದ್ದಿರಬಹುದು ಎಂಬ ವರದಿಯನ್ನು ಸೈಂಟಿಫಿಕ್ ರಿಪೋರ್ಟ್‍ ಪತ್ರಿಕೆ ಪ್ರಕಟಿಸಿದೆ.  ಇಟಲಿಯ ಪಡೋವ ವಿಶ್ವವಿದ್ಯಾನಿಲಯದ ಜಿಯಾನಿ ಬರಕಾಚಿಯ ಮತ್ತು ಸಂಗಡಿಗರು ಈ ಮುಸುಕಿನ ಮೇಲಿರುವ ದೂಳನ್ನು ಜತನವಾಗಿ ಸಂಗ್ರಹಿಸಿ (ಪ್ರಪಂಚದ ಹಲವು ಕ್ರಿಶ್ಷಿಯನ್‍ ಸಮುದಾಯಗಳು ಪವಿತ್ರವೆಂದು ಪರಿಗಣಿಸಿರುವ ಮುಸುಕಿಗೆ ಯಾವುದೋ ಘಾಸಿಯಾಗುವಂತಿಲ್ಲವಲ್ಲ!)  ಻ಅದರಲ್ಲಿರುವ ಡಿಎನ್‍ಎ ತುಣುಕುಗಳನ್ನು ಪರೀಕ್ಷಿಸಿದ್ದಾರೆ. ಇತ್ತೀಚಿನ ತಂತ್ರಗಳನ್ನು ಬಳಸಿ ಈ ತುಣುಕುಗಳು ಯಾವ ಸಸ್ಯಗಳು ಅಥವಾ ಮಾನವ ಸಮುದಾಯಕ್ಕೆ ಸೇರಿರಬಹುದು ಎಂದು ಪರಿಶೀಲಿಸಿದ್ದಾರೆ. ಮುಸುಕಿನ ಮೇಲೆ ದೊರಕಿರುವ ದೂಳಿನಲ್ಲಿರುವ ಡಿಎನ್‍ಎ ತುಣುಕುಗಳು ಹಲವು ಸಸ್ಯಗಳಿಗೆ ಸೇರಿದ್ದು, ಇವೆಲ್ಲವೂ ಟ್ಯುರೀನ್‍ ಮುಸುಕು ಅದರ ಜೀವಿತಾವಧಿಯಲ್ಲಿ ಪ್ರವಾಸ ಮಾಡಿದ ವಿವಿಧ ಸ್ಥಳಗಳಲ್ಲಿರುವ ಸಸ್ಯಗಳಿಗೆ ತಾಳೆಯಾಗುತ್ತವೆ. ಆದರೆ ಇದರಲ್ಲಿರುವ ಮೈಟೋಕಾಂಡ್ರಿಯದ ಡಿಎನ್‍ಎ ತುಣುಕುಗಳು ಮತ್ತೊಂದು ವಿಸ್ಮಯವನ್ನು ಬಯಲು ಮಾಡಿದುವು. ಮೈಟೊಕಾಂಡ್ರಿಯ ಡಿಎನ್‍ಎ ಯನ್ನು ಮಾನವ ಸಮುದಾಯಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸಲು ಬಳಸುತ್ತಾರೆ. ಮೈಟೊಕಾಂಡ್ರಿಯ  ಎನ್ನುವುದು ಜೀವಕೋಶಗಳ ಒಂದು ಅಂಗಾಂಶ.  ಇದು ತಾಯಿಯಿಂದ ಮಗುವಿಗೆ  ಒಂದಿಷ್ಟೂ ಬದಲಾವಣೆಯಾಗದೆ ವರ್ಗಾವಣೆಯಾಗುತ್ತದೆಯಾದ್ದರಿಂದ  ವಿವಿಧ ಸಮುದಾಯಗಳಲ್ಲಿರುವ ವ್ಯತ್ಯಾಸವನ್ನು ಇದರಿಂದ ಪತ್ತೆ ಹಚ್ಚಬಹುದು.

ಈ ರೀತಿಯ ಪರೀಕ್ಷೆಯನ್ನು ನಡೆಸಿದ ಬರಕಾಚಿಯಗೆ ಒಂದು ಅಚ್ಚರಿ ಕಂಡಿತು. ಟ್ಯುರೀನ್‍ ಮುಸುಕು ಕ್ರಿಸ್ತಶಕ 1200 ರಿಂದ ಇಂದಿನವರೆಗೂ ಯಾವ್ಯಾವ ಪ್ರದೇಶಗಳಲ್ಲೆಲ್ಲ ಅಲೆದಾಡಿತ್ತೋ ಅಲ್ಲಿನ ಸಮುದಾಯಗಳನ್ನು ಸೂಚಿಸುವ  ಮೈಟೊಕಾಂಡ್ರಿಯ ಡಿಎನ್‍ಎ ತುಣುಕುಗಳು  ಇದ್ದುವು. ಇದು ನಿರೀಕ್ಷಿಸಿದ ಫಲಿತಾಂಶ. ಆದರೆ ಇದರೊಟ್ಟಿಗೆ ಭಾರತೀಯರ ಮೈಟೊಕಾಂಡ್ರಿಯ ಡಿಎನ್ಎ ಯ ತುಣುಕುಗಳಂತವೂ ಇದರಲ್ಲಿ ದೊರಕಿವೆ. ಇದುವರೆಗೂ ದಾಖಲಾಗಿರುವ ಚರಿತ್ರೆಯ ಪ್ರಕಾರ ಈ ಮುಸುಕು ಯಾವ ಭಾರತೀಯರ ಕೈಗೂ ಸಿಕ್ಕಿರಲಿಲ್ಲ. 1300 ರಿಂದ ಇಂದಿನವರೆಗೆ ಇದು ಯುರೋಪಿನ ಕ್ರಿಶ್ಚಿಯನ್‍ ಸಮುದಾಯದ ಕಟ್ಟೆಚ್ಚರದಲ್ಲಿ ಕಾಪಾಡಲ್ಪಟ್ಟಿದೆ. ಹಾಗಿದ್ದರೆ ಎಲ್ಲಿಂದ ಬಂತು ಈ ಭಾರತೀಯ ಡಿಎನ್ಎ ತುಣುಕು?

ಬರಕಾಚಿಯ ತಂಡದ ಪ್ರಕಾರ ಇದಕ್ಕೆ ಒಂದೇ ಒಂದು ಕಾರಣ.  ಈ ಬಟ್ಟೆ ಭಾರತದಲ್ಲಿ ತಯಾರಾಗಿದ್ದಿರಬೇಕು. ಆ ಡಿಎನ್ಎ ತುಣುಕು ಬಟ್ಟೆ ತಯಾರಿಸಿದ್ದವರದ್ದು ಇರಬೇಕು. ಬಹಳ ಹಿಂದೆ ಈ ಬಟ್ಟೆಯನ್ನು ಸಿಂಡನ್‍ ಎಂದೂ ಕರೆಯುತ್ತಿದ್ದರಂತೆ. ಈ ಪದ ಸಿಂಧೂ ಎನ್ನುವ ಪದದ ಻ಅಪಭ್ರಂಶವಾಗಿರಬೇಕು. ಅದುವೂ ಒಂದು ಪುರಾವೆ ಎಂದು ಬರಕಾಚಿಯ ತಂಡ ತಮ್ಮ ಊಹೆಯನ್ನು ಚರ್ಚೆಗೆ ಇಟ್ಟಿದೆ.

ಏನೇ ಇರಲಿ. ವಿಶ್ವಾಸದ ಮಾತುಗಳಿಗೆ ವಿಜ್ಞಾನದ ಪುರಾವೆಗಳು ಎಂದಿಗೂ ಸಾಕಾಗುವುದಿಲ್ಲ. ಬರಕಾಚಿಯ ತಂಡದ ಈ ಶೋಧ ಮುಸುಕಿನ ಮೇಲಿರುವ ಛಾಯೆ ಹೇಗಾಯಿತು, ಎಂದಾಯಿತು ಎನ್ನುವುದನ್ನು ತಿಳಿಸಿಲ್ಲ. ಏನಿದ್ದರೂ ಈ ಮುಸುಕು ಇದುವರಗೂ ಜನ ನಂಬಿರುವ ಸ್ಥಳಗಳಲ್ಲೇ ಇತ್ತು. ಅಲ್ಲಿನ ಸಸ್ಯಗಳ ಕುರುಹು ಇದೆ ಅಂತಲೇ ತಿಳಿಸಿದೆ. ಜೊತೆಗೆ ಬಟ್ಟೆ ಭಾರತದಿಂದ ಬಂದಿರಬಹುದು ಎನ್ನುವ ಕೌತುಕವನ್ನೂ ಮುಂದಿಟ್ಟಿದೆ. ವಿಶ್ವಾಸ, ವಿಜ್ಞಾನದ ಈ ಗುದ್ದಾಟ  ಎಲ್ಲಿಯವರೆಗೆ ಮುಟ್ಟುತ್ತದೆ ಕಾದು ನೋಡೋಣ.

ಚಿತ್ರ: https://en.wikipedia.org/wiki/Shroud_of_Turin#/media/File:Full_length_negatives_of_the_shroud_of_Turin.jpg

Published in: on ಅಕ್ಟೋಬರ್ 6, 2015 at 6:59 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ