ಆನೆಗಳಿಗೇಕೆ ಕ್ಯಾನ್ಸರ್ ಕಾಟವಿಲ್ಲ?

elephants_family

ಹೌದು. ಮನುಷ್ಯ ಹೆದರುವ ರೋಗ ಕ್ಯಾನ್ಸರ್‍ ಆನೆಗಳಿಗೆ ಕಡಿಮೆ ಎಂದರೆ ನಂಬುವಿರಾ? ವಿಚಿತ್ರವಾದರೂ ಇದು ನಿಜ. ವಿಚಿತ್ರ ಏಕೆಂದರೆ ವಿಜ್ಞಾನಿಗಳ ಪ್ರಕಾರ ದೇಹ ದೊಡ್ಡದಾದಷ್ಟೂ ಕ್ಯಾನ್ಸರ್ ಹೆಚ್ಚೆಚ್ಚು ಕಾಣಿಸಿಕೊಳ್ಳಬೇಕು. ಈ ತರ್ಕಕ್ಕೆ ವಿಜ್ಞಾನಿಗಳು ಕೊಡುವ ಕಾರಣ ಇದು. ಕ್ಯಾನ್ಸರ್‍ ಎನ್ನುವುದು ನಮ್ಮ ದೇಹದಲ್ಲಿರುವ ಜೀವಕೋಶಗಳಲ್ಲಿ ಕೂಡಿಕೊಳ್ಳುವ ತಪ್ಪುಗಳ ಫಲ. ಜೀವಕೊಶದಲ್ಲಿ ಪ್ರತಿಕ್ಷಣವೂ ನೂರಾರು ರಾಸಾಯನಿಕ ಕ್ರಿಯೆಗಳು ಜರುಗುತ್ತಿರುತ್ತವೆ. ಇವೆಲ್ಲವೂ ತಪ್ಪಿಲ್ಲದೆ ಜರುಗಿದರೆ ಜೀವಕೋಶ ಆರೋಗ್ಯವಾಗಿರುತ್ತದೆ. ಇಲ್ಲದಿದ್ದರೆ ಖಾಯಿಲೆ ಗ್ಯಾರಂಟಿ. ಇಂತಹ ನೂರಾರು ಕ್ರಿಯೆಗಳಲ್ಲಿ ಪ್ರಮುಖವಾದದ್ದು ಡಿಎನ್ಎ ಪ್ರತಿ ಮಾಡುವುದು. ನಮ್ಮ ದೇಹ ದೊಡ್ಡದಾಗುವಾಗ  ಇಲ್ಲವೇ ಯಾವುದಾದರೂ ಜೀವಕೋಶವನ್ನುಕಿತ್ತೆಸೆದು ಆ ಜಾಗದಲ್ಲಿ ಬೇರೊಂದು ಕೋಶವಿಡಬೇಕಾದಾಗ ಜೀವಕೋಶಗಳು ವಿಭಜನೆಯಾಗುತ್ತವೆ. ಅಂದರೆ ಒಂದಿರುವುದು ಎರಡಾಗುತ್ತದೆ. ಈ ವೇಳೆ ಡಿಎನ್ಎಯೂ ಎರಡಾಗಬೇಕು.

ಡಿಎನ್ಎ ಸಾಮಾನ್ಯ ರಾಸಾಯನಿಕವಲ್ಲ. ಇದು ನಮ್ಮ ಬದುಕಿನ ಸಾರ. ಇದರಲ್ಲಿ ಜೀವಕೋಶದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೆ ಬೇಕಾದ ಮಾಹಿತಿ ಇರುತ್ತದೆ. ಹಾಗೆಯೇ ಆಗದಿರುವ ಕ್ರಿಯೆಗಳ ಮಾಹಿತಿಯೂ ಇರುತ್ತದೆ. ಹೀಗೆ ಆಗದ ಕ್ರಿಯೆಗಳಲ್ಲಿ ಕ್ಯಾನ್ಸರ್ ಕೂಡ ಒಂದು. ಕ್ಯಾನ್ಸರ್‍ ಆಗಬಹುದಾದ ಮಾಹಿತಿ ಇದ್ದರೂ ಆಗದಿರುವುದಕ್ಕೆ ಕಾರಣ ಅದು ಪ್ರಕಟವಾಗದಂತೆ ಹತ್ತಿಕ್ಕುವುದು. ಇದು ಸಹಜವಾಗಿಯೇ ನಡೆಯುತ್ತಿದ್ದರೂ, ಕೆಲವೊಮ್ಮೆ ಕೈ ಮೀರಿ ಈ ನಿಯಂತ್ರಣ ಕ್ಷೀಣವಾಗಬಹುದು. ಆಗ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎನ್ನುವುದು ವಿಜ್ಞಾನಿಗಳ ತರ್ಕ.

ಹದ್ದುಬಸ್ತಿನಲ್ಲಿ ಇರುವ ಕ್ಯಾನ್ಸರ್ ಡಿಎನ್ಎ ಪ್ರಕಟಗೊಳ್ಳುವುದಕ್ಕೆ ಅದನ್ನು ನಿಯಂತ್ರಿಸುತ್ತಿರುವ ಘಟಕಗಳಲ್ಲಿ ಆಗುವ ದೋಷಗಳು ಕಾರಣವಿರಬೇಕು ಎನ್ನುವುದು ಊಹೆ. ಡಿಎನ್ಎ ಹೆಚ್ಚೆಚ್ಚು ಪ್ರತಿಯಾದಷ್ಟೂ ಹೆಚ್ಚೆಚ್ಚು ತಪ್ಪುಗಳು ಸೇರಿಕೊಳ್ಳುವ ಸಾಧ್ಯತೆಗಳಿರುತ್ತವಷ್ಟೆ. ದೇಹದ ಗಾತ್ರ ದೊಡ್ಡದಾದಷ್ಟೂ ಹೆಚ್ಚೆಚ್ಚು ಜೀವಕೋಶಗಳು ಬೇಕಾಗುತ್ತದೆ. ಅಂದರೆ ಹೆಚ್ಚೆಚ್ಚು ವಿಭಜನೆ, ಡಿಎನ್ಎ ನಕಲುಗಳೂ ಆಗಬೇಕು. ಹೆಚ್ಚೆಚ್ಚು ತಪ್ಪುಗಳೂ ಆಗುತ್ತಿರಬೇಕಲ್ಲ? ಹೆಚ್ಚೆಚ್ಚು ಕ್ಯಾನ್ಸರ್ ಕೂಡ ಇರಬೇಕು ಎನ್ನುವುದು ಊಹೆ. ಆದರೆ ಮನುಷ್ಯನಿಗಿಂತ ನಾಲ್ಕೈದು ಪಟ್ಟು ದೊಡ್ಡದಾಗಿರುವ ಆನೆಯಲ್ಲಿ ಕ್ಯಾನ್ಸರ್‍ ಕಾಣುವುದೇ ಇಲ್ಲವಲ್ಲ. ಏಕೆ? ಏನಿದರ ಗುಟ್ಟು!

ಅಮೆರಿಕೆಯ ಹಂಟ್ಸ್ ಮನ್ ಕ್ಯಾನ್ಸರ್ ಇನ್ಸ್ ಟಿಟ್ಯೂಟ್ ನ ಜೋಶುವ ಶಿಫ್‍ಮನ್‍ ನೇತೃತ್ವದ ತಂಡ ಹಾಗೂ ಶಿಕಾಗೋ ವಿಶ್ವವಿದ್ಯಾನಿಲಯದ ವಿನ್ಸೆಂಟ್‍ ಲಿಂಚ್ ನೇತೃತ್ವದ ಇನ್ನೊಂದು ತಂಡ ಏಕಕಾಲಕ್ಕೆ ಈ ರಹಸ್ಯವನ್ನು ರಟ್ಟು ಮಾಡಿವೆ.  ಈ ಸುದ್ದಿಯನ್ನು ಅಮೆರಿಕೆಯ ಸುಪ್ರಸಿದ್ಧ ವೈದ್ಯಕೀಯ ಪತ್ರಿಕೆ ಜರ್ನಲ್ ಆಫ್‍ ಅಮೆರಿಕನ್ ಮೆಡಿಕಲ್  ಅಸೋಸಿಯೇಷನ್‍ (ಜೆಎಎಂಎ) ತನ್ನ  ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದೆ.  ಇವರ ಪ್ರಕಾರ ಇದು ತಪ್ಪುಗಳಿಂದಾದದ್ದಲ್ಲ. ಆದರೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ವ್ಯವಸ್ಥೆ ಇರುವುದರಿಂದ ಆದದ್ದು. ಆನೆಗಳ ಜೀವಕೋಶಗಳಲ್ಲಿ ದೋಷಪೂರ್ಣ ಜೀವಕೋಶಗಳನ್ನು ಕೊಲ್ಲುವ ಕ್ರಿಯೆಗೆ ಅಗತ್ಯವಾದ ಪಿ53 ಎನ್ನುವ ಪ್ರೊಟೀನ್‍ ತಯಾರಿಕೆ ನಮ್ಮಲ್ಲಿ ಆಗುವುದಕ್ಕಿಂತಲೂ ಹತ್ತಾರು ಪಟ್ಟು ಹೆಚ್ಚು ಎನ್ನುತ್ತಾರೆ.

ಈ ಎರಡೂ ತಂಡಗಳೂ ಆನೆಗಳ ಜೀವಕೋಶಗಳನ್ನು ಅರೆದು ಅವುಗಳಲ್ಲಿರುವ ಡಿಎನ್ಎ ಹೆಕ್ಕಿ ಮಾನವ ಹಾಗೂ ಇತರೆ ಜೀವಿಗಳ ಡಿಎನ್ಎ ಜೊತೆಗೆ ಹೋಲಿಸಿವೆ. ಹೋಲಿಸುವಾಗ ವಿಶೇಷವಾಗಿ ಪಿ53 ಎನ್ನುವ ಪ್ರೊಟೀನ್‍ ತಯಾರಿಸುವ ಜೀನ್‍ಗಳತ್ತ ಗಮನವಿಟ್ಟಿವೆ. ಈ ಪ್ರೊಟೀನ್‍ ಅಂಶ ಕಡಿಮೆಯಾದರೆ ಅಥವಾ ಈ ಜೀನ್‍ನ ಕೆಲಸಗಳ್ಳತನ ತೋರಿದರೆ ಕ್ಯಾನ್ಸರ್ ಆಗುತ್ತದೆನ್ನುವುದು ಈ ಹಿಂದೆ ಸ್ಪಷ್ಟವಾಗಿತ್ತು.  ಈ ಜೀನ್‍ ನಲ್ಲಿ ತಪ್ಪುಗಳಿದ್ದರೆ ಹೀಗಾಗಬಹುದಷ್ಟೆ. ಆದರೆ ಆನೆಯಲ್ಲಿ ಈ ತಪ್ಪುಗಳುಂಟಾದರೂ ಅದನ್ನು ತಕ್ಷಣದಲ್ಲಿಯೇ ಕರಾರುವಾಕ್ಕಾಗಿ ತಿದ್ದುವ ಪದ್ಧತಿ ಇದೆಯೋ? ಇದರಿಂದಾಗಿಯೇ ಆನೆಗಳು ಕ್ಯಾನ್ಸರ್‍ನಿಂದ ತಪ್ಪಿಸಿಕೊಳ್ಳುತ್ತಿರಬಹುದೋ ಎಂಬ ಊಹೆಯಿಂದಾಗಿ ಈ ವಿಶೇಷ ಗಮನ.

ಇವರು ಕಂಡದ್ದೇ ಬೇರೆ. ತಪ್ಪುಗಳನ್ನು ಕ್ಷಿಪ್ರವಾಗಿ ತಿದ್ದುವುದಾಗಿದ್ದರೆ ಆನೆಯ ಜೀವಕೋಶಗಳು ಪ್ರಬಲವಾದ ವಿಕಿರಣಗಳಿಗೆ ಒಡ್ಡಿದಾಗ ಸಾಯಬಾರದು. ಎಕ್ಸ್ ರೇ, ಅಲ್ಟ್ರಾವಯಲೆಟ್‍ ಕಿರಣಗಳು ಜೀವಕೋಶಗಳ ಡಿಎನ್ಎಯಲ್ಲಿ ದೋಷಗಳನ್ನುಂಟು ಮಾಡುತ್ತವೆ. ಇವಕ್ಕೆ ಒಡ್ಡಿದಾಗ ತಪ್ಪುಗಳನ್ನು ಕರಾರುವಾಕ್ಕಾಗಿ ತಿದ್ದುವಂತಿದ್ದರೆ ಆನೆಯ ಕೋಶಗಳು ಸಾಯಬಾರದು. ಆದರೆ ವಾಸ್ತವ ಹಾಗಿರಲಿಲ್ಲ. ಮನುಷ್ಯನ ಜೀವಕೋಶಗಳಿಗಿಂತ ಶೀಘ್ರವಾಗಿ ಆನೆಯ ಕೋಶಗಳು ಸಾಯುತ್ತಿದ್ದುವು. ಹಾಗಿದ್ದರೆ ಕ್ಯಾನ್ಸರ್ ಬಾರದಿರುವುದಕ್ಕೆ ಬೇರೇನೋ ಕಾರಣವಿರಬೇಕು ಎಂದು ಮತ್ತೆ ಹುಡುಕಾಟ ಆರಂಭವಾಯಿತು.

ಮರಳಿ ಪರೀಕ್ಷಿಸಿದಾಗ ಪಿ53 ಜೀನ್‍ ಒಂದಲ್ಲ ಎರಡಲ್ಲ ನಲವತ್ತು ಐವತ್ತು ಸಂಖ್ಯೆಯಲ್ಲಿ ಕಂಡು ಬಂದಿತು. ಮನುಷ್ಯನ ಜೀವಕೋಶದಲ್ಲಿ ಹೆಚ್ಚೆಂದರೆ ಇದು ಎರಡು ಕಡೆ ಇರಬಹುದಷ್ಟೆ. ಹಾಗಿದ್ದರೆ ಇಷ್ಟೊಂದು ಪ್ರತಿ ಏಕೆ? ಇವಕ್ಕೇನು ಕೆಲಸ? ಸಾಮಾನ್ಯವಾಗಿ ಈ ಜೀನ್‍ ಹಾಗೂ ಇದರ ಪ್ರೊಟೀನ್‍ ಅಪೋಪ್ಟೋಸಿಸ್ ಎನ್ನುವ ಕ್ರಿಯೆಯನ್ನು ಉಂಟು ಮಾಡುತ್ತವೆ. ಇದು ಒಂದು ವಿಧದಲ್ಲಿ ಜೀವಕೋಶಗಳ ಆತ್ಮಹತ್ಯೆ ಎನ್ನುತ್ತಾರೆ ವಿಜ್ಞಾನಿಗಳು. ಜೀವಕೋಶಗಳಲ್ಲಿ ತೊಂದರೆಗಳು ಕಂಡು ಬಂದಾಗ ಻ಅಥವಾ ಜೀವಕೋಶಗಳ ಸಂಖ್ಯೆ ಮಿತಿಮೀರಿದಾಗ ಕೆಲವು ಜೀವಕೋಶಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತವೆ. ಈ ಅಪೋಪ್ಟೋಸಿಸ್‍ ಕ್ರಿಯೆಗೆ ಪಿ53 ಮೂಲ. ಹಾಗಿದ್ದರೆ ಇಂತಹ ಆತ್ಮಹತ್ಯೆಗಳು ಹೆಚ್ಚಾಗಲಿ ಅಂತಲೇ ಹೆಚ್ಚೆಚ್ಚು ಪಿ53 ಇವೆಯೋ?

ಇದರ ಪರೀಕ್ಷೆ ಮಾಡಿದಾಗ ಮೇಲ್ನೋಟಕ್ಕೆ ಹೌದೆನ್ನಿಸುತ್ತದೆಯಂತೆ. ಒಂದಿಷ್ಟು ಡಿಎನ್ಎ ದೋಷ ಕಾಣಿಸಿಕೊಂಡರೂ ಆ ಕೋಶಗಳನ್ನು ಈ ಪಿ53 ಆತ್ಮಹತ್ಯೆಗೆ ಪ್ರಚೋದಿಸುತ್ತಿರಬೇಕು. ಹೀಗಾಗಿ ಕ್ಯಾನ್ಸರ್‍ ಬೆಳೆಯುವಷ್ಟು ದೋಷಗಳು ಸಂಗ್ರಹವಾಗುವುದಿಲ್ಲ. ಆದ್ದರಿಂದ ಆನೆಗಳಿಗೆ ಕ್ಯಾನ್ಸರ್‍ ಕಾಟ ಕಡಿಮೆ ಎನ್ನುವ ತೀರ್ಮಾನಕ್ಕೆ ಈ ಎರಡೂ ತಂಡಗಳೂ ಬಂದಿವೆ.

ಬಹುಶಃ. ನಮ್ಮ ದೇಹದಲ್ಲೂ ಹೇಗಾದರು ಈ ಪಿ53 ಹೆಚ್ಚಾಗುವಂತೆ ಮಾಡಿದರೆ ಕ್ಯಾನ್ಸರ್‍ ಹತ್ತಿಕ್ಕಬಹುದೇ? ಇದು ಮುಂದಿನ ಪ್ರಶ್ನೆ. ಇದಕ್ಕೇನು ಉತ್ತರ ಬರುತ್ತದೋ ಕಾದು ನೋಡೋಣ!

Published in: on ಅಕ್ಟೋಬರ್ 11, 2015 at 9:50 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2015/10/11/%e0%b2%86%e0%b2%a8%e0%b3%86%e0%b2%97%e0%b2%b3%e0%b2%bf%e0%b2%97%e0%b3%87%e0%b2%95%e0%b3%86-%e0%b2%95%e0%b3%8d%e0%b2%af%e0%b2%be%e0%b2%a8%e0%b3%8d%e0%b2%b8%e0%b2%b0%e0%b3%8d-%e0%b2%95%e0%b2%be%e0%b2%9f/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: