ಹಂದಿ ಕೊಟ್ಟೀತೇ ಹೊಸ ಮೂತ್ರಪಿಂಡ?

ಮೂತ್ರಪಿಂಡದ ಖಾಯಿಲೆ ಬಂದವರ ಪಾಡು ದೇವರಿಗೇ ಪ್ರೀತಿ. ಹೃದಯವಾದರೂ ಥಟ್ಟನೆ ಕೆಲಸ ನಿಲ್ಲಿಸಿ ನೋವಿನಿಂದ ಪಾರು ಮಾಡಿಬಿಡುತ್ತದೆ. ಆದರೆ ಮೂತ್ರಪಿಂಡದ ಖಾಯಿಲೆ ಹಾಗಲ್ಲ.  ಭೂಮಿಯಲ್ಲೇ ನರಕ ಇರುವುದಾದರೆ ಅದು ಕ್ಯಾನ್ಸರ್ ಅಥವಾ ಮೂತ್ರಪಿಂಡದ ರೋಗಗಳನ್ನು ಹಿಂಸಾಮಾರ್ಗವಾಗಿ ಅನುಸರಿಸುತ್ತಿರಬಹುದು. ಏನೇ ಇರಲಿ. ಸದ್ಯಕ್ಕೆ ತೀವ್ರತೆರನ ಮೂತ್ರಪಿಂಡದ ಖಾಯಿಲೆಗಳಿಂದ ನರಳುವ ರೋಗಿಗಳಿಗೆ ಇರುವುದು ಎರಡೇ ಮಾರ್ಗ.  ವಾರಕ್ಕೊಮ್ಮೆಯೋ, ಎರಡು ಬಾರಿಯೋ ದುಬಾರಿ ಹಣ ತೆತ್ತು ಡಯಾಲಿಸಿಸ್ (ಯಂತ್ರಗಳನ್ನು ಬಳಸಿ ದೇಹದಲ್ಲಿ ಶೇಖರಣೆಯಾದ ಕಸವನ್ನು ಬಿಸಾಡುವುದು) ನ ನೋವನ್ನು ಅನುಭವಿಸುವುದು ಅಥವಾ ಇನ್ನೂ ಸ್ವಲ್ಪ ಜಾಸ್ತಿ ವೆಚ್ಚ ಮಾಡಿ ಯಾರಿಂದಲಾದರೂ ಮೂತ್ರಪಿಂಡವನ್ನು ದಾನ ಪಡೆದು ಕಸಿ ಮಾಡಿಸಿಕೊಳ್ಳುವುದು. ಎರಡೂ ಜೇಬಿಗೂ, ದೇಹಕ್ಕೂ ನೋವು ತರುವ ವಿಷಯವೇ! ನೋವನ್ನುಂಡಾದರೂ ಚಿಕಿತ್ಸೆ ಪಡೆಯೋಣ ಎಂದರೆ ಕಸಿ ಮಾಡಲು ಬೇಕಾದ ಮೂತ್ರಪಿಂಡಗಳಿಗೂ ಕ್ಷಾಮವಿದೆ. ನೆಂಟರೇ ದಾನ ಕೊಡದಿರುವಾಗ, ಸತ್ತ ಹೆಣದಿಂದ ಕಿತ್ತು ಪಡೆಯಬೇಕಾಗುತ್ತದೆ. ಅಥವಾ ಕಳ್ಳತನದಿಂದ ಮೂತ್ರಪಿಂಡಗಳನ್ನು ಪಡೆದು ಕಸಿ ಮಾಡುವ ದುರುಳ ವೈದ್ಯರುಗಳ ಮೊರೆ ಹೋಗಬೇಕಾಗುತ್ತದೆ. ಇವೆರಡೂ ಸಾಧ್ಯವಿಲ್ಲವಾದರೆ ದೇವರ ಪಾದವೇ ಗತಿ. ಅಮೆರಿಕವೊಂದರಲ್ಲಿಯೇ ಹೀಗೆ ಮೂತ್ರಪಿಂಡಗಳ ಅಭಾವದಿಂದಾಗಿ ಪ್ರತಿದಿನವೂ ಕನಿಷ್ಟ 12 ಜನರಾದರೂ ಮೂತ್ರಪಿಂಡದ ಖಾಯಿಲೆಗೆ ಬಲಿಯಾಗುತ್ತಿದ್ದಾರೆ ಎಂದು ಒಂದು ಅಂದಾಜು ಹೇಳುತ್ತಿದೆ.

ವಿಜ್ಞಾನ ಪರಿಹಾರ ದೊರಕಿಸದ ಸಮಸ್ಯೆಗಳಿಲ್ಲ ಎನ್ನುವುದು ಎಲ್ಲದ ನಂಬಿಕೆಯಷ್ಟೆ. ಇಲ್ಲೂ ಹಾಗೇ. ಪರಿಹಾರಕ್ಕಾಗಿ ಎಲ್ಲ ಸಾಧ್ಯತೆಗಳನ್ನೂ ವಿಜ್ಞಾನಿಗಳು ತಡಕಾಡುತ್ತಿದ್ದಾರೆ. ಉದಾಹರಣೆಗೆ, ಹಂದಿಯ ಮೂತ್ರಪಿಂಡವನ್ನೇ ಕಸಿ ಮಾಡಿದರೆ ಹೇಗೆ? ಬೇರೊಬ್ಬರ ಅಂಗವನ್ನೇ ದೇಹ ತನ್ನದೆನ್ನಲು ಹಿಂದೇಟು ಹಾಕುತ್ತದೆ. ಪರಿಣಾಮವಾಗಿ ಕಸಿ ಅಂಟಿಕೊಳ್ಳುವುದೇ ಇಲ್ಲ.  ಇನ್ನು ಹಂದಿಯ ಮಾತೇಕೆ ಎಂದಿರಾ? ಇದಕ್ಕೂ ಉಪಾಯವಿದೆ. ಹಂದಿಯ ಮೂತ್ರಪಿಂಡದಲ್ಲಿರುವ ಪ್ರೋಟೀನುಗಳನ್ನು ತೊಳೆದು ಅದನ್ನು ‘ಮಾನವೀಯ’ ವಾಗಿಸಿದರೆ, ಆಗ ಅದು ಭದ್ರವಾಗಿ ನೆಲೆಯಾಗಬಹುದು.

ಮತ್ತೊಂದು ಆಲೋಚನೆಯೂ ಇದೆ. ಕೃತಕ ಮೂತ್ರಪಿಂಡವನ್ನು ಸೃಷ್ಟಿಸುವುದು. ಆದರೆ ಇದು ಹೇಳಿದಷ್ಟು ಸುಲಭವಲ್ಲ. ಏಕೆಂದರೆ ಮೂತ್ರಪಿಂಡ ಹಲವು ಮೂಲಗಳಿಂದ ಬಂದ ಜೀವಕೋಶಗಳು ಕೂಡಿ ಆಗಿರುವ ಅಂಗ. ಇದರ ಸೂಕ್ಷ್ಮ ರಚನೆಯೂ ಅತಿ ನವಿರು. ಇದನ್ನು ನಕಲು ಮಾಡುವುದು ಮಹಾ ಸಾಹಸವೇ ಸರಿ. ಆಕರಕೋಶಗಳನ್ನು ಬಳಸಿ ಇದನ್ನು ಮಾಡಬಹುದು ಎಂದರೂ ಅದು ಕೋಶಗಳ ಮುದ್ದೆಯಾಗಿಬಿಡಬಹುದು. ಮೂತ್ರಪಿಂಡದಲ್ಲಿರುವ ನಾಳಗಳ ಜೋಡಣೆಯಾಗಲಿ, ರಕ್ತನಾಳಗಳ ಜಾಲವಾಗಲಿ ಬೇಕಿರುವ ಹಾಗೆ ಬೆಳೆಯುವುದಿಲ್ಲ.

pigkidney

ಹಂದಿಯನ್ನು ಬಳಸಿ ಮೂತ್ರಪಿಂಡ ಮಾಡುವ ಬಗೆ : ರೋಗಿಯ ಮೈಯಿಂದ ಹೆಕ್ಕಿದ ಕೋಶವನ್ನು ಹಂದಿಯ ಭ್ರೂಣದಲ್ಲಿ ಕೂಡಿಸುವುದು. ಅಲ್ಲಿ ಬೆಳೆದ ಮೂತ್ರಪಿಂಡದ ಮೊಳಕೆಯನ್ನು ರೋಗಿಯ ಮೂತ್ರಪಿಂಡದ ಬಳಿ ಕಸಿ ಮಾಡುವುದು. ಅನಂತರ ರೋಗಿಯ ದೇಹದೊಳಗೆ ಬೇರೊಂದು ಮೂತ್ರ ಚೀಲ ಹಾಗೂ ಮೂತ್ರನಾಳ ಬೆಳೆಯುವಂತೆ ಶಸ್ತ್ರಕ್ರಿಯೆ ನಡೆಸುವುದು. ಹೀಗೆ ರೋಗಿಯ ದೇಹದಲ್ಲೇ ಅವನ ಕೋಶಗಳಿಂದಲೇ ಹೊಸ ಮೂತ್ರಪಿಂಡ ಹುಟ್ಟಿಸುವುದು.

ಇವೆಲ್ಲ ಜಾಲ, ನಾಳಗಳನ್ನು ಮೂರು ಆಯಾಮದ ಪ್ರಿಂಟಿಂಗ್ ತಂತ್ರದಿಂದ ಎರಕ ಹೊಯ್ದು, ಈ ಹಂದರದೊಳಗೆ ಮಾನವನ ಆಕರಕೋಶಗಳನ್ನು ಇಟ್ಟು ಮೂತ್ರಪಿಂಡದ ವಿವಿಧ ಅಂಗಗಳು ಹುಟ್ಟುವಂತೆ ಮಾಡುವ ಆಲೋಚನೆಯೂ ಇದೆ. ಇದುವೂ ಸುಲಭವಲ್ಲ. ಪ್ರತಿ ಹಂತದಲ್ಲಿಯೂ ಬೆಳವಣಿಗೆಯ ಘಟಕಗಳೆಂದು ಹೆಸರಿಸಿದ ಬೇರೆ, ಬೇರೆ ರಾಸಾಯನಿಕಗಳನ್ನು ಬಳಸಬೇಕು. ದೇಹದೊಳಗೆ ಅಂಗಗಳು ಬೆಳೆಯುವಾಗ ಒಂದೊಂದು ಹಂತದಲ್ಲಿ ಒಂದೊಂದು ರಾಸಾಯನಿಕ ಅದರ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ. ಇವು ಯಾವುವು, ಯಾವ ಪ್ರಮಾಣದಲ್ಲಿ ಬಳಕೆಯಾಗುತ್ತವೆ, ತಪ್ಪಾದರೆ ಏನಾಗಬಹುದು ಎನ್ನುವುದೆಲ್ಲವೂ ಇನ್ನೂ

ಹೀಗಾಗಿ ಈ ಎಲ್ಲ ತಂತ್ರಗಳೂ ಇನ್ನೂ ನಾಳಿನ ಕನಸುಗಳಾಗಿಯೇ ಉಳಿದಿವೆ. ಈ ಕನಸುಗಳ ಪಟ್ಟಿಗೆ ಜಪಾನಿನ ಜೀಕೈ ವೈದ್ಯಕೀಯ ವಿಶ್ವವಿದ್ಯಾನಿಲಯದ ತಕಾಶಿ ಯೋಕೂ ಮತ್ತು ತಂಡದವರು ಇನ್ನೊಂದು ತಂತ್ರವನ್ನು ಸೇರಿಸಿದ್ದಾರೆಂದು ಪಿಎನ್ಎಎಸ್ ಪತ್ರಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ ವರದಿ ಮಾಡಿದೆ. ಹಂದಿಯನ್ನೇ ಬಳಸಿದರೂ ಕೊನೆಗೆ ರೋಗಿಯ ದೇಹದಲ್ಲೇ ಹೊಸ ಮೂತ್ರಪಿಂಡ ಮೊಳೆಯುವಂತೆ ಮಾಡಬಲ್ಲುದಂತೆ ಈ ತಂತ್ರ. ಇದು ನಿಜಕ್ಕೂ ನನಸಾಗಬಲ್ಲ ಕನಸು ಎನ್ನವುದು ಯೋಕೂ  ತಂಡದ ಅಭಿಪ್ರಾಯ.

ಏನಿದು ತಂತ್ರ?

ವಾಸ್ತವವಾಗಿ ಇದು ಒಂದು ತಂತ್ರವಲ್ಲ. ಹಲವು ತಂತ್ರಗಳ ಮೇಳ. ಮೊದಲಿಗೆ ಇದರಲ್ಲಿ ರೋಗಿಯ ದೇಹದಿಂದಲೇ ಹೆಕ್ಕಿದ ಸ್ನಾಯುಕೋಶಗಳನ್ನು ಆಕರಕೋಶ (ಸ್ಟೆಮ್ ಸೆಲ್ ) ಗಳನ್ನಾಗಿ ಪರಿವರ್ತಿಸುತ್ತಾರೆ. ದೇಹದ ಯಾವುದೇ ಕೋಶವನ್ನೂ ಇನ್ಯಾವುದೋ ಕೋಶವಾಗಿ ಬೆಳೆಯುವ ಸಾಮರ್ಥ್ಯವಿರುವ ಆಕರಕೋಶವನ್ನಾಗಿಸುವ ಉಪಾಯ ಕೈ ಹತ್ತಿದೆಯಷ್ಟೆ.  ರೋಗಿಯ ದೇಹದಿಂದಲೇ ಹೆಕ್ಕಿದ ಮೀಸೆಂಕೈಮ್ ಎನ್ನುವ ಕೋಶಗಳನ್ನು ಹಂದಿಯ ಭ್ರೂಣದೊಳಗೆ ಚುಚ್ಚುವುದು. ಇವು ಹಂದಿಯ ಕೋಶಗಳಂತೆಯೇ ಆಗಿ ಬೆಳೆಯುತ್ತವೆ. ಅನಂತರ  ಈ ಕೋಶಗಳನ್ನು ತೆಗೆದು ಬೆಳೆದ ಹಂದಿಯ ಮೂತ್ರಪಿಂಡದ ಪೊರೆಯಲ್ಲಿ ಕಸಿ ಮಾಡುವುದು. ಇದು ಮೂತ್ರಪಿಂಡವಾಗಿ ಬೆಳೆಯಲು ಬೇಕಾದ ಪರಿಸರವನ್ನು ಅರ್ಥಾತ್ ಹಂತ, ಹಂತವಾಗಿ ದೊರೆಯಬೇಕಾದ ರಾಸಾಯನಿಕಗಳನ್ನು ಪೂರೈಸಲು ಅನುವಾಗುತ್ತದೆ. ಇದರಿಂದಾಗಿ ಅಲ್ಲಿ ಆಕರಕೋಶಗಳು ಹೊಸ ಮೂತ್ರಪಿಂಡಗಳಾಗಿ ಬೆಳೆಯಬಹುದು ಎನ್ನುವುದು ತರ್ಕ.

ಈ ಹಿಂದೆ ಇಂತಹ ಪ್ರಯೋಗಗಳನ್ನು ಇವರು ಇಲಿಗಳ ಮೇಲೆ ಮಾಡಿ ಪರೀಕ್ಷಿಸಿದ್ದರು. ಆದರೆ ಆ ಸಂದರ್ಭದಲ್ಲಿ ಮೂತ್ರಪಿಂಡದಂತಹ ಅಂಗ ರೂಪುಗೊಂಡರೂ ಅಲ್ಪಕಾಲದಲ್ಲಿಯೇ ಕೊಳೆತು ನಾಶವಾಗಿ ಬಿಟ್ಟಿತ್ತು. ಇದಕ್ಕೆ ಕಾರಣ  ಹೊಸ ಅಂಗವೂ ಕೆಲಸದಲ್ಲಿ ತೊಡಗಿ ಮೂತ್ರವನ್ನು ಉತ್ಪಾದಿಸುತ್ತಿತ್ತು. ಈ ಮೂತ್ರ ಹೊರ ಹೋಗಲು ಹಾದಿಯಿಲ್ಲದೆ ಇದ್ದಲ್ಲೇ ಶೇಖರಣೆಯಾಗಿ ನೀರು ಕೂಡಿಕೊಂಡು ಹೊಸ ಅಂಗವೂ ಸಾವನ್ನಪ್ಪಿತ್ತು.

ಹಾಗಿದ್ದರೆ ಹೊಸ ಮೂತ್ರಪಿಂಡದಿಂದ ಮೂತ್ರ ನಿರಾಳವಾಗಿ ಹೊರ ಹೋಗುವಂತೆ ಮಾಡಿದರೆ ಅದು ಇನ್ನೂ ದೊಡ್ಡದಾಗಿ, ಪರಿಪೂರ್ಣ ಅಂಗವಾಗಿ ಬೆಳೆಯಬಹುದೇ ಎಂದು ಯೋಕೂ ತಂಡ ಆಲೋಚಿಸಿತು. ಹಂದಿಯ ದೇಹದಲ್ಲಿ ಬೆಳೆದ ಮೂತ್ರಪಿಂಡವನ್ನು ಕಸಿ ಮಾಡುವ ಮೊದಲು ಇಲಿಗಳಲ್ಲಿ ಮತ್ತೊಂದು ಶಸ್ತ್ರಕ್ರಿಯೆ ಮಾಡಿದರು. ಅವುಗಳ ಗುದದ್ವಾರದಲ್ಲಿನ ತುಸು ಅಂಶವನ್ನು ಒಳಬದಿಯಲ್ಲಿ ನೆಟ್ಟು ಅವು ಬೆಳೆಯುವುದೇ ಎಂದು ಗಮನಿಸಿದರು. ಈ ಗುದದ್ವಾರದ ಕಸಿ ನಿಧಾನವಾಗಿ ಮೂತ್ರದ ಚೀಲವಾಗಿ ಬೆಳೆಯಿತು.  ಇನ್ನು ಉಳಿದದ್ದು ಒಂದೇ ಉಪಾಯ. ಈ ಮೂತ್ರದ ಚೀಲವನ್ನು ಮೂತ್ರವನ್ನು ತಯಾರಿಸುವ ಪಿಂಡದ ಜೊತೆಗೆ ಕೂಡಿಸುವುದು. ಹಳೆಯ ಮೂತ್ರಪಿಂಡದ ಮೂತ್ರನಾಳವನ್ನು ಬಳಸಿ ಇದನ್ನೂ ಮಾಡಿದರು. ಹೀಗೆ ಹಂತ, ಹಂತವಾಗಿ ಮೂತ್ರವನ್ನು ಸೃಷ್ಟಿಸುವ ಹೊಸ ಪಿಂಡ, ಅದನ್ನು ಸಂಗ್ರಹಿಸುವ ಚೀಲ ಹಾಗೂ ಅದನ್ನು ಹರಿಸುವ ನಾಳವನ್ನೂ ಹೊಸದಾಗಿ ಇವರು ಸೃಷ್ಟಿಸಿದ್ದಾರೆ.  ಸ್ಟೆಪ್ ವೈಸ್ ಪೆರಿಸ್ಟಾಲ್ಟಿಕ್ ಯೂರಿಟರ್ ಸಿಸ್ಟೆಮ್ ಎಂದು ಅವರು ಹೆಸರಿಸಿರುವ ಈ ತಂತ್ರ ಸಮರ್ಪಕವಾಗಿ ಕೆಲಸ ಮಾಡುತ್ತದಂತೆ. ಮೂತ್ರಪಿಂಡದೊಳಗೆ ಬಣ್ಣ ಹಚ್ಚಿ ಅದು ಸರಾಗವಾಗಿ ಹೊರಗೆ ಹರಿದು ಬರುತ್ತದೆಯೋ ಅಲ್ಲೇ ಕೂಡಿಕೊಂಡಿರುತ್ತದೆಯೋ ಎಂದೂ ಗಮನಿಸಿದ್ದಾರೆ.

ಅಂತೂ ಈ ತಂತ್ರ ಸಾಧ್ಯವಾದರೆ, ಹಳೆಯ ಮೂತ್ರಪಿಂಡವಿರುವ ಜಾಗದಲ್ಲೇ ಹೊಸ ಪಿಂಡವೊಂದು ಬೆಳೆಯುವಂತೆ ಮಾಡಬಹುದು ಎನ್ನುವುದು ಇವರ ಅನಿಸಿಕೆ. ಇದನ್ನು ಸದ್ಯಕ್ಕೆ ಇಲಿಗಳಲ್ಲಿ ಮಾಡಿದ್ದಾರಾದರೂ, ಮನುಷ್ಯರಲ್ಲಿ ಮಾಡಲು ಯಾವ ಅಡ್ಡಿಯೂ ಇಲ್ಲ ಎನ್ನುತ್ತಾರೆ.

ಆದರೆ ಹೀಗೆ ಹಂದಿಯಲ್ಲಿ ಬೆಳೆದ ಅಂಗವನ್ನು ಹೊತ್ತು ಓಡಾಡಲು ಎಷ್ಟು ಜನ ಸಿದ್ಧರಿದ್ದಾರೋ?

Published in: on ಅಕ್ಟೋಬರ್ 13, 2015 at 5:59 ಅಪರಾಹ್ನ  Comments (2)  

ಪಾರಂಪರಿಕ ಖಾಯಿಲೆಗಳಿಗೆ ಅಸಾಂಪ್ರದಾಯಿಕ ಚಿಕಿತ್ಸೆ

12102015

Published in: on ಅಕ್ಟೋಬರ್ 13, 2015 at 5:44 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ