ಬಣ್ಣದ ಮೊಟ್ಟೆ ಬಂದಿತು ಹೇಗೆ?

617324801_9ac447afcf_z

ಚಿತ್ರ ಕೃಪೆ: ರಾಡ್ರಿಗೊ ಬೆನವಿಡಿಸ್‍, ಫ್ಲಿಕರ್‍.ಕಾಮ್

ಮೇಷ್ಟರುಗಳಿಗೆ ಮೊಟ್ಟೆಯ ಬಗ್ಗೆ ತುಂಬಾ ಪ್ರೀತಿ. ಮಕ್ಕಳ ತಪ್ಪು ಉತ್ತರಗಳಿಗೆ ಸೊನ್ನೆ ಸುತ್ತಿ ಮೊಟ್ಟೆ ಎನ್ನುತ್ತಾರೆ. ಮೊಟ್ಟೆಯ ಆಕಾರ  ಅಪ್ಪಟ ವೃತ್ತವಲ್ಲದಿದ್ದರೂ, ಅದನ್ನು ಸೊನ್ನೆಗೆ ಹೋಲಿಸುವುದು ತಪ್ಪಿಲ್ಲ. ಮೊಟ್ಟೆಯ ಆಕಾರದೆ ಬಗ್ಗೆ ಇರುವ ತಪ್ಪು ಕಲ್ಪನೆಯ ಹಾಗೇ ಅದರ ಬಣ್ಣದ ಬಗ್ಗೆಯೂ ಒಂದು ತಪ್ಪು ಕಲ್ಪನೆ ನಮ್ಮ ಮನಸ್ಸಿನಲ್ಲಿ ಭದ್ರವಾಗಿ ನೆಲಯೂರಿದೆ. ಮೊಟ್ಟೆಯ ಬಣ್ಣ ಬಿಳಿ, ಬೇರೆಯ ಬಣ್ಣದ ಮೊಟ್ಟೆ ಇಲ್ಲ. ಅದಕ್ಕೇ ಚಿನ್ನದ ಮೊಟ್ಟೆ ಎಂದರೆ ಕಿವಿ ನೆಟ್ಟಗಾಗುತ್ತದೆ. ಅಪ್ಪಟ ನೀಲಿ ಬಣ್ನದ ಮೊಟ್ಟೆಯೂ ಇರಬಹುದು ಎಂದರೆ ಏನೆನ್ನುತ್ತೀರಿ? ಇದು ನಿಜವಷ್ಟೆ ಅಲ್ಲ. ಈ ನೀಲಿ ಮೊಟ್ಟೆ ಒಂದು ವೈರಸ್ನ ಕಿತಾಪತಿ ಎಂದರೆ ಬಹುಶಃ ನೀವು ನಂಬಲಿಕ್ಕಿಲ್ಲ. ಆದರೆ ಇದುವೂ ನಿಜ.

ವಾಸ್ತವವಾಗಿ ಎಲ್ಲ ಪಕ್ಷಿಗಳ ಮೊಟ್ಟೆಗಳೂ ಬೆಳ್ಳಗಿರುವುದಿಲ್ಲ. ಪಕ್ಷಿಗಳ ಮೊಟ್ಟೆಗಳನ್ನು ಪರಿಶೀಲಿಸಿದಾಗ ಕೆಲವದರ ಮೊಟ್ಟೆಗಳಲ್ಲಿ ಸ್ವಲ್ಪ ಮಟ್ಟಿಗೆ ಕಂದು, ಬೂದು, ನೀಲಿ, ಹಸಿರಿನ ಚಿತ್ತಾರಗಳನ್ನು ಕಾಣಬಹುದು. ಇವು ಸಹಜ ಬಣ್ಣಗಳು. ನಮ್ಮ ಕೂದಲು, ಚರ್ಮದ ಬಣ್ಣಕ್ಕೆ ಮೆಲಾನಿನ್ ಎನ್ನುವ ವರ್ಣಕ ಹೇಗೆ ಕಾರಣವೋ, ಹಾಗೆಯೇ ಮೊಟ್ಟೆಗಳ ಬಣ್ಣಕ್ಕೂ ವರ್ಣಕಗಳೇ ಕಾರಣ. ಮೆಲಾನಿನ್ ನಂತೆಯೇ ಪಿರ್ರೋಲ್ ರಚನೆ ಇರುವ ರಾಸಾಯನಿಕಗಳು ಮೊಟ್ಟೆಗಳಿಗೆ ಬಣ್ಣ ನೀಡುತ್ತವೆ. ಮೊಟ್ಟೆಯ ಬಣ್ಣಕ್ಕೆ ಎರಡು ವರ್ಗದ ಪಿರ್ರೋಲ್ ಗಳು ಕಾರಣವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಪ್ರೊಟೋಪಾರ್ಫಿರಿನ್ ಕಂದು, ಬೂದು, ಬಣ್ಣ ಕೊಡುತ್ತದೆ. ಬೈಲಿವರ್ಡಿನ್ (ಇದು ನಮ್ಮ ಪಿತ್ತರಸದಲ್ಲಿ ಇರುತ್ತದೆ. ವಾಂತಿಗೆ, ಮಲಕ್ಕೆ ಹಳದಿ ಬಣ್ಣ ನೀಡುವುದೇ ಇದು.) ನೀಲಿ, ಹಸಿರು ಬಣ್ಣವನ್ನು ನೀಡುತ್ತದೆ. ಎರಡೂ ವರ್ಣಕಗಳೂ ಇರುವ ಮೊಟ್ಟೆಗಳೂ ಇವೆ. ಯಾವ ವರ್ಣಕದ ಪ್ರಮಾಣ ಹೆಚ್ಚಿರುತ್ತದೆಯೋ ಅದರ ಬಣ್ಣವನ್ನು ಮೊಟ್ಟೆ ತಳೆಯುತ್ತದೆ. ಬಿಳೀ ಮೊಟ್ಟೆಗಳಲ್ಲೂ ಗುರುತಿಸಲಾಗದಷ್ಟು ಅಲ್ಪ ಪ್ರಮಾಣದಲ್ಲಿ ಈ ವರ್ಣಕಗಳು ಇರಬಹುದು.

ಮೊಟ್ಟೆಗೇಕೆ ಈ ಬಣ್ಣ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ. ಸುತ್ತಲಿನ ಪರಿಸರದಿಂದ ಮೊಟ್ಟೆಯನ್ನು ಮರೆಮಾಚುವುದಕ್ಕಾಗಿ ಇರಬಹುದೇ? ಅಥವಾ, ಬೆಕ್ಟೀರಿಯಾ ಸೋಂಕನ್ನು ತಡೆಯಲಿರಬಹುದೇ? ಬಿಸಿಲಿನ ಬೇಗೆಯನ್ನು ತಡೆಯಲೋ, ಛಳಿಯಲ್ಲಿ ಬೆಚ್ಚಗಾಗಲೋ ಇರಬಹುದೇ? ಎಂದೆಲ್ಲ ಹಲವು ಊಹೆಗಳಿವೆ. ಇವು ಇನ್ನೂ ಊಹೆಗಳಷ್ಟೆ. ನೆಲದ ಮೇಲೆ ಮೊಟ್ಟೆಯಿಡುವ ಪಕ್ಚಿಗಳಲ್ಲಿ ನೀಲಿ, ಹಸಿರು ಬಣ್ಣದ ಮೊಟ್ಟೆಗಳು ಜಾಸ್ತಿ. ಪೊಟರೆಗಳೊಳಗೋ, ಬಿಲಗಳೊಳಗೋ ವಾಸಿಸುವ ಪಕ್ಷಿಗಳ ಮೊಟ್ಟೆಗಳಲ್ಲಿ ಕಂದು ಅಥವಾ ಬೂದು ಬಣ್ಣ ಹೆಚ್ಚು ಎನ್ನುವುದಷ್ಟೆ ಸದ್ಯಕ್ಕೆ ಗೊತ್ತಿರುವ ವಿಷಯ.  ಇವೆಲ್ಲದರ ಮಧ್ಯೆ ಅಪ್ಪಟ ತೆಳು ನೀಲಿ ಬಣ್ಣದ ಮೊಟ್ಟೆಯನ್ನು ನೀಡುವ ಕೋಳಿಯ ತಳಿಯೂ ಇದೆ. ಚೀನಾದ  ಒಂದು ತಳಿ ಹೀಗೆ ನೀಲಿ ಬಣ್ಣದ ಮೊಟ್ಟೆಯಿಡುತ್ತದೆ. ಇದೇ ರೀತಿ ಚಿಲಿ ದೇಶದ ಮಪುಚೆ ತಳಿಯ ಕೋಳಿಗಳೂ ನೀಲಿ ಮೊಟ್ಟೆಯನ್ನಿಡುತ್ತವೆ. ಮಪುಚೆ ಕೋಳಿಗಳಲ್ಲಿ ಇದು ಒಂದು ಪ್ರಬಲ ವಿಕೃತಿಯಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಈ ಗುಣವಿರುವ ತಳಿಯ ಕೋಳಿಗಳನ್ನು ಬೇರೆ ಯಾವ ತಳಿಯ ಜೊತೆ ಕೂಡಿಸಿದರೂ, ಕೊನೆಗೆ ಹುಟ್ಟುವುದು ನೀಲಿ ಬಣ್ಣದ ಮೊಟ್ಟೆಯಿಡುವ ಕೋಳಿಯೇ.

ನೀಲಿ ಮೊಟ್ಟೆಯಿಡುವ  ಈ ಕೋಳಿಯ ಉಗಮದ ಬಗ್ಗೆ ಎದ್ದ  ಒಂದು ಪ್ರಶ್ನೆ ಮತ್ತೊಂದು ಕೌತುಕವನ್ನೂ ಬಯಲಾಗಿಸಿದೆ. ನೀಲಿ ಮೊಟ್ಟೆಗಳನ್ನಿಡುವ  ಗುಣ ಮಪುಚೆ ಕೋಳಿಗಳಿಗೆ ಬೇರೆ ತಳಿಗಳಿಂದ ಬಂತೇ ಅಥವಾ ಈ ತಳಿಯಲ್ಲಿಯಿದಯೇ? ಇದು ಪ್ರಶ್ನೆ. ಚೀನೀ ತಳಿಗಳಲ್ಲೂ ನೀಲಿ ಬಣ್ಣದ ಮೊಟ್ಟೆಯಿಡುವ ಕೋಳಿಗಳಿವೆಯಷ್ಟೆ. ಅದರ ಜೊತೆ ಹಾಗೂ ಮಪುಚೆ ತಳಿಗಳಿಗೆ ಸಂಬಂಧಿಗಳೆನ್ನಿಸಿದ ಯುರೋಪಿಯನ್ ಮತ್ತು ದಕ್ಷಿಣ ಅಮೆರಿಕೆಯ ಕೋಳಿ ತಳಿಗಳ ಜೊತೆ ಹೋಲಿಸಿ ನೋಡಿದರೆ ಹೇಗೆ ಎನ್ನುವ ಕುತೂಹಲದಿಂದ  ಇಂಗ್ಲೆಂಡಿನ ಡೇವಿಡ್ ರಾಗ್ ಎನ್ನುವವರ ನೇತೃತ್ವದಲ್ಲಿ ಆಸ್ಟ್ರೇಲಿಯ, ಚಿಲಿ ಮತ್ತು ಫ್ರಾನ್ಸ್ ನ ವಿಜ್ಞಾನಿಗಳ ತಂಡವೊಂದು ಮಪುಚೆ ಕೋಳಿಗಳ ತಳಿಗುಣಗಳನ್ನು ಗರಡಿಯಾಡಿದ್ದಾರೆ. ಫಲಿತಾಂಶ:  ಈ ಮೊಟ್ಟೆಗಳ ಬಣ್ಣಕ್ಕೆ ಕಾರಣವಾದ ಅಂಶ ಸುಮಾರು ಐದುನೂರು ವರ್ಷಗಳಿಂದೀಚೆಗೆ ಬಂದಿದೆ. ಇದು ಆಗ  ಈ ತಳಿಯ ಕೋಳಿಗಳಿಗೆ ಸೋಂಕಿದ ವೈರಸ್ ಒಂದರ ಪಳೆಯುಳಿಕೆಯಂತೆ. ಹೀಗೆಂದು ಇವರು ಪ್ರಕಟಿಸಿದ್ದಾರೆ.

ಕೋಳಿಜ್ವರದ ಸುದ್ದಿ ಬಿಸಿಯಾಗಿರುವ ಸಮಯದಲ್ಲಿ ಈ ತಳಿಯ ಕೋಳಿಗಳಿಗೆ ಸೋಂಕಿದ ಯಾವುದೋ ವೈರಸ್ ನೆಲೆಸಿರುವ ನೀಲಿ ಮೊಟ್ಟೆಯಿದೆ ಎಂದರೆ ಖಂಡಿತ ಅದರ ಸಮೀಪ ನೀವು ಸುಳಿಯುವುದಿಲ್ಲ. ಆದರೆ ಇದುವರೆವಿಗೂ ಈ ವೈರಸ್ ನಿಂದ ಯಾರಿಗೂ ಅಪಾಯವಾದ ಸುದ್ದಿಯಿಲ್ಲ. ಏಕೆಂದರೆ ಇದು ಒಂದು ರೆಟ್ರೋವೈರಸ್. ಅಂದರೆ ಎಂದೋ ಸೋಂಕಿದ ವೈರಸ್ ನ ಪಳೆಯುಳಿಕೆ. ಇಂತಹ ಪಳೆಯುಳಿಕೆಗಳು ನಮ್ಮ ದೇಹದಲ್ಲೂ ಇವೆ. ಕುಂಭಕರ್ಣನಂತೆ ಸದಾ ಸುಪ್ತವಾಗಿರುವ ಇವು ಇದ್ದಕ್ಕಿದ್ದ ಹಾಗೆ ಚುರುಕಾಗಿ ಕಾರ್ಯಪ್ರವೃತ್ತವಾದಾಗ ಕ್ಯಾನ್ಸರ್ ಉಂಟು ಮಾಡುತ್ತವೆ ಎಂದು ತಿಳಿದು ಬಂದಿದೆ.

ರೆಟ್ರೋವೈರಸ್ ಗಳೇ ಮೊಟ್ಟೆಗಳ ನೀಲಿ ಬಣ್ಣಕ್ಕೆ ಕಾರಣವೆನ್ನುವದನ್ನು ನಂಬು ಕಷ್ಟ. ಏಕೆಂದರೆ ಯುರೋಪಿಯನ್ ಕೋಳಿಗಳಲ್ಲು ಈ ವೈರಸ್ ಪಳೆಯುಳಿಕೆ ಇದೆ. ಚೀನೀ ತಳಿಗಳಲ್ಲಿ ಇರುವ ಪಳೆಯುಳಿಕೆಗೂ, ಮಪುಚೆಯಲ್ಲಿರುವ ವೈರಸ್ ತುಣುಕಿಗೂ ಬಲು ದೂರದ ನಂಟಂತೆ. ಪ್ರಪಂಚದ ವಿವಿಧೆಡೆಗಳಲ್ಲಿರುವ ಕೋಳಿತಳಿಗಳ ತಳಿಗುಣಗಳ ಜೊತೆಗೆ ಹೋಲಿಸಿದಾಗ  ವೈರಸ್ ತುಣುಕು ಸುಮಾರು ಐದುನೂರು ವರ್ಷಪಗಳಿಂದೀಚೆಗೆ, ಅರ್ಥಾತ್ ಕಾಡುಕೋಳಿಗಳು ಸಾಕುಕೋಳಿಗಳಾದ ಮೇಲೆ ಕೂಡಿಕೊಂಡದ್ದಿರಬಹುದು ಎನ್ನುತ್ತಾರೆ ರಾಗ್.

ಮಪುಚೆ ತಳಿಗಳಲ್ಲಿಯಷ್ಟೆ ಏಕೆ ನೀಲಿ ಮೊಟ್ಟೆಗೆ ಕಾರಣವಾಗಿವೆ? ಯುರೋಪಿಯನ್ ತಳಿಗಳಲ್ಲಿ ಹೀಗೆ ಮಾಡುವುದಿಲ್ಲವೇಕೆ? ಈ ಪ್ರಶ್ನೆಗೂ ಉತ್ತರವಿದೆ. ಮಪುಚೆ ತಳಿಗಳಲ್ಲಿ ಈ ರೆಟ್ರೋವೈರಸ್ ಗುಣ ಒಂದು ಎಸ್ಟ್ರೋಜೆನ್ ಹಾರ್ಮೋನು ಉತ್ಪಾದನೆಯನ್ನು ನಿರ್ದೇಶಿಸುವ ತಳಿಗುಣದ ಬದಿಯಲ್ಲಿ ನೆಲೆಸಿದೆ. ಇದೇ ಇದಕ್ಕೆ ಕಾರಣ. ಇದಲ್ಲದೆ ಇತ್ತೀಚೆಗೆ ಮಪುಚೆ ತಳಿಯಲ್ಲಿರುವ ರೆಟ್ರೋವೈರಸ್ ನಲ್ಲಿ ಹಲವು ಬದಲಾವಣೆಗಳೂ ಆಗಿವೆ. ಇದರಿಂದಾಗಿ ಈ ವ್ಯತ್ಯಾಸ.

ತಾಯಿಕೋಳಿಯಲ್ಲಿ ಈ ವೈರಸ್ ಬೈಲಿವಿರಿಡಿನ್ ವರ್ಣಕ ಕರಗಿರುವ ದ್ರವವನ್ನು ಅತಿ ಹೆಚ್ಚಿನ ಪ್ರಮಾನದಲ್ಲಿ ತಯಾರಾಗುವಂತೆ ಮಾಡಿದೆಯಂತೆ. ಹೀಗಾಗಿ ಸಾಮಾನ್ಯ ಮೊಟ್ಟೆಗಳಿಗಿಂತ ಹೆಚ್ಚು ಬೈಲಿವಿರಿಡಿನ್ ಮೊಟ್ಟೆಗೆ ಸಾಗುತ್ತದೆ.  ಮತ್ತೊಂದು ವಿಶೇಷ.: ಎಸ್ಟ್ರೊಜೆನ್ ಹಾರ್ಮೋನು ಕೇವಲ ಮೊಟ್ಟೆಯ ಹುಟ್ಟಿನ ನೆಲೆಯಾದ ಅಂಡಾಶಯ ಹಾಗೂ ಅಂಡನಾಳಗಳಲ್ಲಷ್ಟೆ ಉತ್ಪಾದನೆಯಾಗುತ್ತದೆ. ಈ ರೆಟ್ರೋವೈರಸ್ ಕೂಡ ಇಲ್ಲೇ ಎಚ್ಚರವಾಗುವುದರಿಂದ ಇದರ ಚಟುವಟಿಕೆ ನೇರವಾಗಿ ಮೊಟ್ಟೆಯನ್ನಷ್ಟೆ ತಾಕುತ್ತದೆ. ಮೊಟ್ಟೆಯ ಬಣ್ಣವಷ್ಟೆ ಬದಲಾಗುತ್ತದೆ ಎನ್ನುತ್ತಾರೆ ರಾಗ್.

ಆಹಾ! ಹೀಗೆ ಚಿನ್ನದ ಮೊಟ್ಟೆಯನ್ನೂ ಕೊಡುವ ವೈರಸ್ ಸೋಂಕಬಾರದೇ ಎಂದು ನೀವು ಆಲೋಚಿಸಿದರೆ ಅದು ನಿಮ್ಮ ತಪ್ಪಲ್ಲ ಬಿಡಿ. ಅದು ಮನುಷ್ಯ ಸಹಜ ಗುಣ. ಆದರೆ ಎಂದೋ ಸೋಂಕಿದ ವೈರಸ್, ಇದ್ದಕ್ಕಿದ್ದ ಹಾಗೆ ಮರಳುವ ನೆನಪಿನಂತೆ ಎಚ್ಚರವಾಗಿ ಪ್ರಕೃತಿಯ ವಿಚಿತ್ರವೊಂದಕ್ಕೆ ಕಾರಣವಾಗುವುದಿದೆಯಲ್ಲ, ಅದು ಎಂತಹ ಅದ್ಭುತ ಅಲ್ಲವೇ?

Published in: on ಅಕ್ಟೋಬರ್ 17, 2015 at 8:16 ಅಪರಾಹ್ನ  Comments (2)