ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಮಗುವಾಗಿ ಕಲಿಯದ್ದನ್ನು ದೊಡ್ಡವಾಗಿ ಕಲಿಯಲು ಅಸಾಧ್ಯ ಎನ್ನುವ ಜಾಣ್ನುಡಿ. ಇದು ನಮ್ಮ ಗುಣಗಳನ್ನು ವಿವರಿಸುವ ಹಾಗೆಯೇ ನಮ್ಮ ಮಿದುಳಿನ ಸಾಮರ್ಥ್ಯಕ್ಕೂ ಒಪ್ಪುತ್ತದೆ. ಮನೋವಿಜ್ಞಾನಿಗಳು ಹಾಗೂ ನರವಿಜ್ಞಾನಿಗಳ ಪ್ರಕಾರ ಬೆಳಯುವ ಹಂತದಲ್ಲಿ, ಅಂದರೆ ನಾವು ಶಿಶುವಾಗಿದ್ದಾಗ, ಮಕ್ಕಳಾಗಿದ್ದಾಗ, ನಮ್ಮ ಮಿದುಳಿಗೆ ಇರುವ ಸಾಮರ್ಥ್ಯ ತದನಂತರ ಕಡಿಮೆಯಾಗಿಬಿಡುತ್ತದಂತೆ. ಮಕ್ಕಳಲ್ಲಿ ಶಿಕ್ಷಣಕ್ಕೆ ಮಹತ್ವ ಕೊಡುವುದು ಇದೇ ಕಾರಣಕ್ಕೇ. ಇದು ನಮ್ಮಅನುಭವಕ್ಕೂ ಬಂದ ಮಾತು. ಚಿಕ್ಕವರಾಗಿದ್ದಾಗ ಸೈಕಲ್ಲು ಕಲಿಯುವುದೂ, ಹೊಸ ಭಾಷೆ ಕಲಿಯುವುದೂ ನೀರು ಕುಡಿದಂತೆ ಸಲೀಸು. ದೊಡ್ಡವರಾದ ಮೇಲೆ, ಅದೇ ಭಾಷೆ, ಮಾತೃಭಾಷೆಯೇ ಆಗಿದ್ದರೂ, ಕಬ್ಬಿಣದ ಕಡಲೆ. ಇದು ದೊಡ್ಡವರಾದ ನಾವು ತೋರುವ ಹಿಂಜರಿಕೆಯಿಂದಾಗಿ ಎನ್ನಿಸಿದರೂ ವಾಸ್ತವ ಬೇರೆ. ನಮ್ಮ ಮಿದುಳು ಅಷ್ಟರಲ್ಲಾಗಲೇ ಬೆಳೆದಿರುತ್ತದೆ. ಹೊಸದಾದ ಕಲಿಯುವ ಸಾಮರ್ಥ್ಯ ಕುಗ್ಗಿರುತ್ತದೆ. ಹೊಸದಾಗಿ ಏನನ್ನಾದರೂ ಕಲಿತರೂ ಅದನ್ನ ತನ್ನ ನರಜಾಲದೊಳಗೆ ಕೂಡಿಸಿಕೊಳ್ಳಲಾರದು ಎನ್ನುವುದು ನರವಿಜ್ಞಾನಿಗಳ ನಂಬಿಕೆ.
ಇದು ಎಷ್ಟರ ಮಟ್ಟಿಗೆ ನೆಲೆಯಾಗಿದೆ ಎಂದರೆ ಹುಟ್ಟುಗುರುಡರಿಗೆ ದೃಷ್ಟಿ ನೀಡುವುದು ಸಾಧ್ಯವಾದರೂ ಅದನ್ನು ಮಾಡುವುದು ಬೇಡ ಎಂದು ವೈದ್ಯರು ನಿರ್ಧರಿಸಿಬಿಡುತ್ತಾರೆ. ಹತ್ತು ವಯಸ್ಸಿನ ನಂತರ ಹುಟ್ಟಾಗುರುಡರಿಗೆ ಶಸ್ತ್ರಕ್ರಿಯೆ ಮಾಡಿ ದೃಷ್ಟಿ ಮರಳಿಸಿದರೂ ಲಾಭವಿಲ್ಲ ಎನ್ನುವ ನಂಬಿಕೆ ಇದೆ. ಅಷ್ಟರಲ್ಲಿ ನಮ್ಮ ಮಿದುಳು ಸಾಕಷ್ಟು ಬೆಳೆದು ಬಿಟ್ಟಿರುತ್ತದೆ. ಹೊಸದಾಗಿ ದೃಷ್ಟಿಯನ್ನು ಗ್ರಹಿಸುವ, ಹಾಗೂ ಅದರಿಂದಾಗಿ ದೊರೆತ ಅನುಭವಗಳನ್ನು ಅರ್ಥೈಸಿಕೊಳ್ಳುವುದು ಬೆಳೆದ ಮಿದುಳಿಗೆ ಕಷ್ಟ ಎನ್ನುವುದು ಈ ಹಿಂಜರಿಕೆಗೆ ಕಾರಣ. ಹಾಗೇನಿರಲಿಕ್ಕಿಲ್ಲ ಎನ್ನುವ ವರದಿಯೊಂದು ಬಂದಿದೆ.
ಹುಟ್ಟುವಾಗಲೇ ಕಣ್ಣಿನ ಮಸೂರ ಪೊರೆಗಟ್ಟಿಕೊಂಡಿದ್ದರಿಂದ ಅಂಧರಾಗಿಯೇ ಬೆಳೆದವರಲ್ಲಿ ನಡೆದ ಅಧ್ಯಯನದ ವರದಿ ಇದು. ಮಸ್ಯಾಚುಸೆಟ್ಸ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನರವಿಜ್ಞಾನಿ ಆಗಿರುವ ಭಾರತ ಸಂಜಾತ ಪವನ್ ಸಿನ್ಹ ಹೀಗೊಂದು ಅಧ್ಯಯನ ನಡೆಸಿದರು. ಹುಟ್ಟಾಗುರುಡರಾಗಿ ಹದಿನೈದು ಇಪ್ಪತ್ತು ವರ್ಷ ಬೆಳೆದ ಯುವಕ/ಯುವತಿಯರಿಗೆ ಕೃತಕ ಮಸೂರಗಳನ್ಶನು ಸ್ತ್ರಕ್ರಿಯೆಯ ಮೂಲಕ ಅಳವಡಿಸಿ ದೃಷ್ಟಿ ನೀಡಿದರು. ಹೊಸದಾಗಿ ದೃಷ್ಟಿ ಪಡೆದವರು ಜಗತ್ತನ್ನು ನೋಡಲು ಹೇಗೆ ಕಲಿಯುತ್ತಾರೆ ಎಂದು ಪರೀಕ್ಷಿಸಿದರು. ಒಟ್ಟಾರೆ ತಿಳಿದದ್ದು ಇಷ್ಟು.
ನಮ್ಮ ಮಿದುಳು ಗಿಡವಾಗಿ ಬಾಗುತ್ತದೆ. ಮರವಾಗಿಯೂ ಬಾಗಬಲ್ಲುದು. ಬೆಳೆದ ಮೇಲೂ ಗ್ರಹಿಸುವ, ಮಾಹಿತಿಯನ್ನು ಸಂಗ್ರಹಿಸುವ ಸಾಮರ್ಥ್ಯ ಮಿದುಳಿನಲ್ಲಿ ಇರುತ್ತದೆ. ಏನಿಲ್ಲದಿದ್ದರೂ ದೃಷ್ಟಿ ವಿಷಯದಲ್ಲಿ ಇದು ನಿಜ. ದೃಷ್ಟಿಗೆ ಸಂಬಂಧಿಸಿದಂತೆ ಕೆಲವು ಸಾಮರ್ಥ್ಯಗಳು ಕಣ್ಣಿರಲಿ, ಇಲ್ಲದಿರಲಿ ಹುಟ್ಟಿನಿಂದಲೇ ಮಿದುಳಿನಲ್ಲಿ ನೆಲೆಯಾಗಿರುತ್ತವೆ. ಇವನ್ನು ದೃಷ್ಟಿ ಮರಳಿಸಿ ಸಚೇತನಗೊಳಿಸಬಹುದು.
ಇದೋ ಆ ಬಗ್ಗೆ ಬರೆದ ಲೇಖನ ಇಲ್ಲಿದೆ.
ನಿಮ್ಮದೊಂದು ಉತ್ತರ