ಭೂಮಿಯ ಅಂತ್ಯ ಹೀಗಾಗಬಹುದೇ?

ಇರುವುದೊಂದೇ ಭೂಮಿ! ಇದುವೂ ಇಲ್ಲವಾದರೆ? ವಿಚಿತ್ರ ಪ್ರಶ್ನೆ ಅಲ್ಲ. ಭೂಮಿಗೂ ಸಾವು ಬರಬಹುದಲ್ಲ. ಬಂದರೆ ಅದು ಹೇಗಿದ್ದೀತು ಎನ್ನುವುದೆ ಪ್ರಶ್ನೆ. ಭೂಮಿಗೆ ಸಾವೇ? ಹೌದು. ಅರಣ್ಯವೆಲ್ಲ ಬೋಳಾಗಿ ಬರುವ ಆಪತ್ತಿನಿಂದ ಮನುಕುಲ ನಾಶವಾಗಬಹುದು, ಭೂಮಿಯಲ್ಲ. ಹಾಗೆಯೇ ಭೂಮಿ ಬಿಸಿಯೇರಿ, ನೀರೊಣಗಿ ಹಸಿರು ಕಾಣೆಯಾಗಿ ಜೀವಿಗಳೆಲ್ಲ ಮರೆಯಾಗಬಹುದು. ಬೋಳಾದರೂ, ಭೂಮಿ ಉಳಿದಿರುತ್ತದೆ. ಅಂತಹ ಭೂಮಿಗೂ ಒಮ್ಮೆ ಅಂತ್ಯ ಬರಬಹುದು. ಇದು ಅಂತಿಂತಹ ಅಂತ್ಯವಲ್ಲ. ಇಡೀ ಭೂಮಿ ಸ್ವಲ್ಪ, ಸ್ವಲ್ಪವೇ ದೂಳೀಪಟವಾಗಿ ಹೋಗುವ ನಿಧಾನ ಸಾವು ಎನ್ನುವ ಸುದ್ದಿ ಬಂದಿದೆ.

ಭೂಮಿಯ ಅಂತ್ಯದ ಬಗ್ಗೆ ಹಲವು ಊಹಾಪೋಹಗಳಿವೆ. ಸೂರ್ಯ ಕಳೆಗುಂದಿ ಮುದಿಯಾಗುವ ದಿನಗಳಲ್ಲಿ ಭೂಮಿಗೂ ಅಂತ್ಯ ಸಮೀಪಿಸಿತು ಎಂದರ್ಥ ಎನ್ನುತ್ತಾರೆ ಖಗೋಳವಿಜ್ಞಾನಿಗಳು. ನಿತ್ಯ ಬೆಳಕು ಚೆಲ್ಲಿ, ಭೂಮಿಯನ್ನು ಹಸಿರಾಗಿ ನಗಿಸುವ ಸೂರ್ಯನಿಗೆ ಈಗ  ಏರುಜವ್ವನ. ತನ್ನ ಅಂತರಾಳದಲ್ಲಿರುವ ಎಲ್ಲ ಶಕ್ತಿಯನ್ನೂ ಚಿಮ್ಮಿಸುತ್ತಿದ್ದಾನೆ. ಇದು ನಿರಂತರವಲ್ಲ. ಎಂದೋ ಒಂದು ದಿನ ಸೂರ್ಯ ನೂ ಕಳೆಗುಂದಬಹುದು. ಸೂರ್ಯನನ್ನೇ ಆತುಕೊಂಡಿರುವ ಭೂಮಿಯಂತಹ ಗ್ರಹಗಳಿಗೆ ಅವು ಅಂತ್ಯದ ದಿನಗಳು ಎನ್ನುವುದು ಖಗೋಳ ವಿಜ್ಞಾನಿಗಳ ತರ್ಕ.

ಆ ಅಂತ್ಯ ಹೀಗಾಗಬಹುದು ಎನ್ನುವ ಊಹೆಯೂ. ಸದ್ಯಕ್ಕೆ ಸೂರ್ಯ ತನ್ನಲ್ಲಿರುವ ಎಲ್ಲ ಜಲಜನಕವನ್ನೂ ಉರಿಸುತ್ತಿದ್ದಾನೆ. ಇದು ಉರಿದು ಹುಟ್ಟುವ ಶಾಖವೇ ಸುಮಾರು ಹದಿನೈದು ಕೋಟಿ ಕಿಲೋಮೀಟರು ದೂರವಿರುವ ನಮ್ಮ ಭೂಮಿಯನ್ನು ಬೆಚ್ಚಗಾಗಿರಿಸಿದೆ. ಇನ್ನು ಸೂರ್ಯ ಎಷ್ಟು ಬಿಸಿಯಾಗಿರಬಹುದು ಊಹಿಸುವುದೂ ಕಷ್ಟ.  ಆರು ಲಕ್ಷ ಕಿಲೋಮೀಟರು ದಪ್ಪವಿರುವ ಸೂರ್ಯನ ಮೇಲ್ಮೈ ಸುಮಾರು 6000 ಡಿಗ್ರಿ ಸೆಂಟಿಗ್ರೇಡ್ ನಷ್ಟು ಸುಡುತ್ತದೆ. ಅಲ್ಲಿ ನಮ್ಮ ಭೂಮಿಯ ಮೇಲಿನ ಯಾವ ವಸ್ತುವೂ ವಸ್ತುವಾಗಿ ಉಳಿದಿರದು. ಇನ್ನು ಸೂರ್ಯನ ಅಂತರಾಳದಲ್ಲಿ ಲಕ್ಷಾಂತರ ಡಿಗ್ರಿ ಉಷ್ಣತೆ ಇರಬಹುದು ಎನ್ನುವುದು ಅಂದಾಜು. ಇದು ಸೂರ್ಯನ ಇಂದಿನ ಸ್ಥಿತಿ.

ಸೂರ್ಯ ಸದಾ ಹೀಗಿರಲಿಕ್ಕಿಲ್ಲ. ಒಂದಲ್ಲ ಒಂದು ದಿನ ಒಡಲಿನಲ್ಲಿರುವ ಹೈಡ್ರೊಜನ್ ಇಂಧನ ಬರಿದಾದಾಗ ತಣ್ಣಗಾಗಲೇ ಬೇಕು. ಹಾಗಾದಾಗ ಈಗ ವಜ್ರದಂತೆ ಹೊಳೆಯುತ್ತಿರುವ ಸೂರ್ಯ ಕೆಂಪಾಗುತ್ತಾನೆ. ವಯಸ್ಸಾದ ಹಾಗೇ ಮೈಯಲ್ಲಿ ಕೊಬ್ಬು ಕೂಡುವ ಹಾಗೆ ಅವನ ಗಾತ್ರವೂ ಹಿಗ್ಗುತ್ತದೆ. ಸೂರ್ಯ ಎಷ್ಟರ ಮಟ್ಟಿಗೆ ಹಿಗ್ಗುತ್ತಾನೆ ಅಂದರೆ ಹೆಚ್ಚೂ ಕಡಿಮೆ ಭೂಮಿಯನ್ನು ಮುಟ್ಟುವಷ್ಟು ಅವನ ಮೈ ಹಿಗ್ಗುತ್ತದೆ. ಆಗ ನಮಗಿಂತ ಸಮೀಪದಲ್ಲಿರುವ ಬುಧ ಹಾಗೂ ಶುಕ್ರ ಗ್ರಹಗಳು ಅವನೊಳಗೇ ಕೂಡಿ ಬಿಡುತ್ತವೆ. ತಣ್ಣಗಾಗಿದ್ದಾನೆ ಅಂದ ಮಾತ್ರಕ್ಕೆ ಸೂರ್ಯ ಶೀತಲನಾಗಿರುವುದಿಲ್ಲ. ಆಗಲೂ ಭೂಮಿಯನ್ನು ಕರಿಕಲಾಗಿಸುವಷ್ಟು ಉಷ್ಣ  ಉಳಿದಿರುತ್ತದೆ. ಇದು ಮಧ್ಯವಯಸ್ಸು. ಹೀಗಾಗಲು ಸುಮಾರು 500 ಕೋಟಿ ವರ್ಷಗಳು ಬೇಕು.

ಇದಾದ ಅನಂತರ ಬರುವುದೇ ಮುಪ್ಪು. ಮುಪ್ಪಾದ ಸೂರ್ಯನನ್ನು ಬಿಳೀ ಕುಬ್ಜಗಳೆನ್ನುತ್ತಾರೆ. ಗಾತ್ರದಲ್ಲಿ ಕೃ಼ಶನಾಗಿ, ಚೈತನ್ಯ ಉಡುಗಿ ತನ್ನೊಳಗೇ ಕುಸಿಯಲು ಆರಂಭಿಸುತ್ತಾನೆ. ಈ ಹಂತದಲ್ಲಿ ಅವನನ್ನೇ ಅವನಲ್ಲಿ ಉಳಿದಿರುವುದು ಕೇವಲ ಗುರುತ್ವಾಕರ್ಷಣೆ. ಭೂಮಿಗೆ ಬಿಸಿಯೂಡಿಸುವಷ್ಟು ಶಕ್ತಿ ಅವನಲ್ಲಿ ಇರದು. ಇದು ವಿಜ್ಞಾನಿಗಳ ತರ್ಕ. ಅದು ಸರಿ. ಆಗ ಭೂಮಿಗೇನಾಗುತ್ತದೆ? ಅದರಲ್ಲಿ ಜೀವವೇನೂ ಉಳಿದಿರದು. ಆದರೂ ಕಲ್ಲು ಮಣ್ಣಾದರೂ ಇರುತ್ತವಲ್ಲವೇ? ಅವಕ್ಕೇನಾಗುತ್ತದೆ?

ಇದುವರೆವಿಗೂ ಈ ಪ್ರಶ್ನೆಗಳಿಗೆ ಉತ್ತರ ಇರಲಿಲ್ಲ. ಕಳೆದ ವಾರ ಅಮೆರಿಕೆಯ ಕೇಂಬ್ರಿಡ್ಜ್ ನಲ್ಲಿರುವ ಹಾರ್ವರ್ಡ್-ಸ್ಮಿತ್ಸೋನಿಯನ್ ಸೆಂಟರ್ ಫಾರ್ ಆಸ್ಟ್ರಾನಮಿಯ ಖಗೋಳ ವಿಜ್ಞಾನಿ ಆಂಡ್ರ್ಯೂ ವಾಂಡರ್ಬರ್ಗ್ ಮತ್ತು ಸಂಗಡಿಗರು ಭೂಮಿಗೇನಾಗಬಹುದು ಎನ್ನುವ ಬಗ್ಗೆ ಒಂದು ವಿವರಣೆ ಕೊಟ್ಟಿದ್ದಾರೆ. ಇದು ಕೇವಲ ತರ್ಕವಲ್ಲ. ನಿದರ್ಶನದ ಜೊತೆಗೆ ನೀಡಿದ ವಿವರಣೆ ಎನ್ನುವುದೇ ವಿಶೇಷ. ನೇಚರ್ ಪತ್ರಿಕೆಯಲ್ಲಿ ಈ ವಿವರಗಳು ಪ್ರಕಟವಾಗಿವೆ.

ಬಿಳೀಕುಬ್ಜದ ಮುಂದೆ ಸಾಗುತ್ತಿರುವ ಗ್ರಹ. ದೂಳೀಪಟವಾಗುತ್ತಿರುವ ಗ್ರಹದ ಬಾಲ, ಉಳಿಕೆ ಗ್ರಹದಿಂದಾಗಿ ತಾರೆಯ ಬೆಳಕಿನ ಪ್ರಖರತೆ ನಿರಂತರವಾಗಿ ಏರುಪೇರಾಗುತ್ತಿರುವಂತೆ ಭಾಸವಾಗುತ್ತದೆ.

ಬಿಳೀಕುಬ್ಜದ ಮುಂದೆ ಸಾಗುತ್ತಿರುವ ಗ್ರಹ. ದೂಳೀಪಟವಾಗುತ್ತಿರುವ ಗ್ರಹದ ಬಾಲ, ಉಳಿಕೆ ಗ್ರಹದಿಂದಾಗಿ ತಾರೆಯ ಬೆಳಕಿನ ಪ್ರಖರತೆ ನಿರಂತರವಾಗಿ ಏರುಪೇರಾಗುತ್ತಿರುವಂತೆ ಭಾಸವಾಗುತ್ತದೆ. (ಚಿತ್ರ: ನೇಚರ್‍)

ಈ ವಿಶ್ವದಲ್ಲಿ ಸೂರ್ಯನದ್ದಷ್ಟೆ ಸಂಸಾರವಲ್ಲ. ಅವನಂತೆಯೇ ಕೋಟಿಗಟ್ಟಲೆ ಸೂರ್ಯನಿದ್ದಾರೆ. ಅವನಂತೆಯೇ ಏರುಜವ್ವನದಲ್ಲಿ ಇರುವವೂ ಇವೆ. ಮುಪ್ಪಿನ ಅವಸ್ಥೆಯಲ್ಲಿ ಇರುವಂತಹವೂ ಇವೆ. ಇವುಗಳಲ್ಲಿ ಕೆಲವು ಪುಟ್ಟ ಗ್ರಹಗಳ ಸಂಸಾರವನ್ನೂ ಕಟ್ಟಿಕೊಂಡಿವೆ. ಇಂತಹ ಒಂದು ಬಿಳೀಕುಬ್ಜನ ಮೇಲೆ ಗಮನವಿಟ್ಟ ವಾಂಡರ್ ಬರ್ಗ್ ಅಲ್ಲಿ ಭೂಮಿಯ ಅಂತ್ಯದ ಚಿತ್ರಗಳನ್ನು ಕಂಡಿದ್ದಾರೆ. WD1145+017 ಎಂದು ಈ ತಾರೆಯನ್ನು ಖಗೋಳಜ್ಞರು ಗುರುತಿಸಿದ್ದಾರೆ. ಇದರಿಂದ ಚಿಮ್ಮಿದ ಬೆಳಕನ್ನಷ್ಟೆ ಭೂಮಿಯ ಮೇಲಿಂದ ಗಮನಿಸಬಹುದು. ಇವರು ಮಾಡಿದ್ದೂ ಅದನ್ನೇ. ಆದರೆ ಆ ಬೆಳಕಿನಲ್ಲಾಗುವ ವ್ಯತ್ಯಾಸಗಳು ಇವರಿಗೆ ವಿಚಿತ್ರವೆನ್ನಿಸಿತಂತೆ.

ಸಾಮಾನ್ಯವಾಗಿ ಬೆಳಕು ಚಿಮ್ಮುವ ತಾರೆಗಳ ಮುಂದೆ ಇನ್ಯಾವುದಾದರೂ ವಸ್ತು, ಕಾಯ ಹಾದು ಹೋದಾಗ ಕ್ಷಣಕಾಲ ಕತ್ತಲೆ ಉಂಟಾಗಬಹುದು. ತಾರೆಗಿಂತ  ಆ ಕಾಯ ಚಿಕ್ಕದಾಗಿದ್ದರೆ, ಬೆಳಕು ಮಂದವಾಗಬಹುದು. ಆದರೆ ಅದು ಮತ್ತೆ ಪ್ರಖರವಾಗಬೇಕಷ್ಟೆ. WD1145+017 ಯಿಂದ ಬರುವ ಬೆಳಕಿನಲ್ಲಿ ತುಸು ವ್ಯತ್ಯಾಸವಿದೆಯಂತೆ. ಇದರ ಬೆಳಕು ಒಂದೇ ತೆರನಾಗಿ ಕ್ಷಿಣವಾಗುವುದಿಲ್ಲ. ಒಮ್ಮೆ ಅತಿ ಹೆಚ್ಚಾಗಿ, ಅನಂತರ ತುಸು ಕಡಿಮೆಯಾಗಿ, ಮತ್ತೊಮ್ಮೆ ಪ್ರಖರವಾಗಿ ತೋರುತ್ತದೆ. ಇದರ ಅರ್ಥ, ತಾರೆಯ ಮುಂದಿನಿಂದ ನಿರಂತರವಾಗಿ ಏನೋ ಹಾಯುತ್ತಿದೆ. ಅಲ್ಲಿಂದ ಬರುವ ಬೆಳಕನ್ನು ಮರೆಮಾಚುತ್ತಿದೆ ಎಂದಾಯಿತು. ಹೀಗೇಕೆ. ಅದು ಗ್ರಹವಷ್ಟೆ ಆಗಿದ್ದರೆ ಸ್ವಲ್ಪ ಹೊತ್ತಷ್ಟೆ ಮರೆಮಾಚಬೇಕಿತ್ತಲ್ಲವೇ? ಈ ಪ್ರಶ್ನೆಗೆ ಉತ್ತರವನ್ನು ಹುಡುಕಲು, ತಾರೆಯ ಗಾತ್ರ, ಬೆಳಕು, ಬೆಳಕಿನಲ್ಲಾಗುವ ವ್ಯತ್ಯಾಸಗಳೆಲ್ಲವನ್ನೂ ಗಣಿಸಿದ್ದಾರೆ. ಯಾವ ಸಂದರ್ಭಗಳಲ್ಲಿ ಹೀಗಾಗಬಹುದು ಎಂದು ಲೆಕ್ಕ ಹಾಕಿದ್ದಾರೆ.

ಈ ಎಲ್ಲ ಲೆಕ್ಕಾಚಾರಗಳ ಫಲಿತಾಂಶ. WD1145+017 ಯ ಮುಂದೆ ಸಾಗುತ್ತಿರುವ ಗ್ರಹ ಸಾವಿನಂಚಿನಲ್ಲಿರುವಂತಹದ್ದು. ಮುಪ್ಪಾದ ತಾರೆಯ ಅಗಾಧ ಗುರುತ್ವಾಕರ್ಷಣೆಯಿಂದಾಗಿ ಗ್ರಹದಲ್ಲಿರುವ ವಸ್ತುಗಳೂ ಕಿತ್ತೊಗೆಯಲ್ಪಡುತ್ತಿವೆ. ಇದು ನಿರಂತರವಾಗಿ ಆಗುತ್ತಿರುವುದರಿಂದ ಗ್ರಹದಿಂದ ಹೊರಚೆಲ್ಲುತ್ತಿರುವ ವಸ್ತು ದೂಳಿನ ಬಾಲದಂತೆ ಆಗಿದೆ. ಗ್ರಹ, ಅದರ ಈ ದೂಳಿನ ಬಾಲ ಬೆಳಕನ್ನು ಮರೆಮಾಚುವುದರಿಂದ ಒಮ್ಮೆ ತುಸು ಹೆಚ್ಚಾಗಿ, ಇನ್ನೊಮ್ಮೆ ತುಸು ಕಡಿಮೆಯಾಗಿ ತಾರೆಯ ಬೆಳಕಿನಲ್ಲಿ ವ್ಯತ್ಯಾಸಗಳಾಗುತ್ತಿರಬೇಕು. ಇಂತಹ ಹಂತವನ್ನು ನಮ್ಮ ಸೂರ್ಯ ತಲುಪಿದಾಗ ಭೂಮಿಗೂ ಇದೇ ಗತಿಯಾಗಬಹುದು. ಭೂಮಿಯಲ್ಲಿರುವ ಎಲ್ಲ ವಸ್ತುಗಳೂ ಚಿಂದಿಯಾಗಿ, ದೂಳೀಪಟವಾಗಿ ಭೂಮಿಯ ಬಾಲಂಗೋಚಿಯಾಗಬಹುದು. ಅನಂತರ ಕ್ರಮೇಣ ಎಲ್ಲವನ್ನೂ ಕಳೆದುಕೊಂಡ ಭೂಮಿ ಗ್ರಹವಾಗುಳಿಯದೆ ಲಕ್ಷಾಂತರ  ಉಲ್ಕೆಗಳಾಗಿಯೋ, ಅಂತರಿಕ್ಷದಲ್ಲಿ ಅಲೆದಾಡುವ ದೂಳಿನ ಕಣಗಳಾಗಿಯೋ ದೂಳೀಪಟವಾಗಿಬಿಡಬಹುದು ಎನ್ನುತ್ತಾರೆ.

ನಿತ್ಯ ರಾತ್ರಿಯಾಗಸದಲ್ಲಿ ಒಮ್ಮೊಮ್ಮೆ ಮಿಂಚಿ ತೋರುವ ಉಲ್ಕೆಗಳೂ ಹೀಗೇ ಹಿಂದೆಂದೋ ಇದ್ದ ಭೂಮಿಯಂತಹ ಗ್ರಹದ ಉಳಿಕೆಗಳಿರಬಹುದೇ! ನಾವೂ ಹಾಗೇ ಆಗಬಹುದು ಎನ್ನುವ ಹೊಸ ವಾದವನ್ನು ವಾಂಡರ್ ಬರ್ಗ್ ತಂಡ ಮುಂದಿಟ್ಟಿದೆ.

Published in: on ಅಕ್ಟೋಬರ್ 31, 2015 at 7:34 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ