30112015

ಆಕರ:

  1. Thomas Boothby et al., Evidence for extensive horizontal gene transfer from the draft genome of a tardigrade, PNAS, Early edition , http://www.pnas.org/content/early/2015/11/18/1510461112 (doi: 10.1073/pnas.1510461112.)
Published in: on ನವೆಂಬರ್ 30, 2015 at 5:49 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಊಟಕ್ಕೂ ಒಂದು ಕಾಲವಿದೆಯೇ?

23112015

  1. Atish Mukherjee et al., Shifting the feeding of mice to the rest phase creates metabolic alterations which, on their own, shift the peripheral circadian clocks by 12 hours, PNAS, Early edition  (www.pnas.org/cgi/doi/10.1073/pnas.1519735112)
  2. Atish Mukherjee et al., Shifting eating to the circadian rest phase misaligns the peripheral clocks with the master SCN clock and leads to a metabolic syndrome PNAS, Early edition (www.pnas.org/cgi/doi/10.1073/pnas.1519807112)

ಒಕ್ಕಣೆ: ಪ್ರಕಟಿತ ಲೇಖನದ ಕೊನೆಯ ವಾಕ್ಯ ಹೀಗಿರಬೇಕಿತ್ತು. ಬಲವಂತವಾಗಿ ನಮ್ಮ ದೈನಂದಿನ ಲಯವನ್ನು ಬದಲಿಸುವುದರಿಂದ ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ಇವು ಎನ್ನುತ್ತಾರೆ ಶಾಂಬನ್‍.

ಆತುರದ ಲೇಖನದಲ್ಲಿ ಇಂತಹ ತಪ್ಪುಗಳು ಸಹಜವಾದರೂ ಆಗಬಾರದು. ಈ ಲೇಖನ ಬರೆಯಲು ಎಂದಿಗಿಂತಲೂ ಹೆಚ್ಚು ಸಮಯ ಬೇಕಾಯಿತು. ಮುಖ್ಯವಾಗಿ ಎರಡು ವಿಷಯಗಳು ತೊಡಕಾಗಿದ್ದುವು. ಮೊದಲನೆಯದಾಗಿ ದೈನಂದಿನ ಜೈವಿಕ ಗಡಿಯಾರಗಳ ಪರಿಕಲ್ಪನೆ ಹಾಗೂ ಅವುಗಳನ್ನು ನಿರ್ದೇಶಿಸುವ ಅಂಗಗಳ ಬಗ್ಗೆ ತಿಳಿಸದೆ ಮುಂದುವರೆಯುವುದು ಕಷ್ಟವಾಗಿತ್ತು. ಎರಡನೆಯದಾಗಿ, ನಮ್ಮ ಮಿದುಳಿನಲ್ಲಿರುವ ಮಾಸ್ಟರ್‍ ಕ್ಲಾಕ್‍, ಹಾಗೂ ಅದರ ಲಯವನ್ನು ಬೆಳಕಿಗೆ ಹೊಂದಿಸುವ ಪ್ರಕ್ರಿಯೆಗಳ ಬಗ್ಗೆ ಹೇಳ ಹೊರಟಿದ್ದರೆ ಬಹುಶಃ ಇಡೀ ಸಂಯುಕ್ತ ಕರ್ನಾಟಕವೇ ಅವಶ್ಯಕವಾಗುತ್ತಿತ್ತೋ ಏನೋ? ಇವ್ಯಾವುದೂ ಇಲ್ಲದೆ 600 ಪದಗಳಲ್ಲಿ ಈ ಎರಡು ಸಂಶೋಧನಾ ಪ್ರಬಂಧಗಳ ಬಗ್ಗೆ ತಿಳಿಸುವುದು ಕಷ್ಟವೇ. ಆದರೂ ಪ್ರಯತ್ನಸಿದ್ದೇನೆ. ಇದರ ಜೊತೆಗೆ ಇನ್ನೊಂದು ಅಪಾಯವೂ ಇದೆ. ಲೇಖನದ ಆರಂಭದಲ್ಲಿ ಅಜ್ಜಿಯ ವಿಶ್ವಾಸದ ಬಗ್ಗೆ ತಿಳಿಸಿದ್ದೇನೆ. ಇದು ರೂಢಿಗತ ನಡವಳಿಕೆ. ಇಂದಿನ ದಿನಗಳಲ್ಲಿ ಇವುಗಳಿಗೆ ಒಂದು ವೈಜ್ಞಾನಿಕ ಕಾರಣ ನೀಡಬಹುದಾದರೂ, ಈ ನಡವಳಿಕೆಗಳು ರೂಢಿಯಾಗುವ ಮೊದಲೇ ಇಂತಹ ತಿಳುವಳಿಕೆಗಳಿದ್ದುವು ಎಂದು ಓದುಗರು ನಂಬುವುದೂ ಸಾಧ್ಯ. ಲೇಖಕನಾಗಿ ಆ ಅಪಾಯವನ್ನೂ ನಾನು ಗಮನಿಸಬೇಕಿತ್ತು. ಅದನ್ನು ತಪ್ಪಿಸಲಂತೂ ಆಗುವುದಿಲ್ಲ ಎನ್ನುವುದು ಇನ್ನೊಂದು ಮಾತು. ಇದೇ ವಾರ, ಮತ್ತೊಂದು ಸಂಶೋಧನೆ ಆರಾಮವಾಗಿ ಊಟ ಮಾಡುವುದರಿಂದ ಊಟದ ಸ್ವಾದಿಷ್ಟತೆ ಇನ್ನಷ್ಟು ಹೆಚ್ಚುತ್ತದೆ ಎಂದು ಗಣಿತ ಮಾದರಿಗಳ ಮೂಲಕ ತಿಳಿಸಿತ್ತು. ಅದನ್ನೂ ಈ ಲೇಖನದೊಟ್ಟಿಗೆ ಕೂಡಿಸಿ ಅಜ್ಜಿಯ ಮಾತಿಗೆ ವಿಜ್ಞಾನದ ಒತ್ತು ಎಂದು ಬಿಡೋಣವೇ ಅನ್ನುವ ಹಂಬಲವನ್ನು ತಡೆಯುವುದೂ ಕಷ್ಟವೇ ಆಯ್ತು.

ಇವೆಲ್ಲ ಕನ್ನಡ ವಿಜ್ಞಾನ ಲೇಖಕರ ಬವಣೆಗಳು. ಈ ಬವಣೆಗಳನ್ನೂ ಮೀರಿ ಬಂದ ಈ ಲೇಖನ ಇದೋ ಈಗ ನಿಮ್ಮೆಲ್ಲರ ವಿಮರ್ಶೆಗೆ !

ಶ್ರೀ ಮಲ್ಲಪ್ಪನವರು ಮೊಬೈಲ್‍ ನಲ್ಲಿ ಲೇಖನ ಓದಲಾಗದಷ್ಟು ಸಣ್ಣ ಅಕ್ಷರಗಳು ಎಂದು ನೊಂದುಕೊಂಡಿದ್ದಾರೆ. ಇದೋ ಮೂಲ ಪಾಠ ಇಲ್ಲಿದೆ. ಇದು ಸಂಯುಕ್ತ ಕರ್ನಾಟಕದಲ್ಲಿ ದಿನಾಂಕ 23.11.15 ರಂದು ಪ್ರಕಟವಾಗಿತ್ತು.

ನಮ್ಮ ಮನೆಯಲ್ಲಿ ಇರುವವರು ಮೂರೇ ಜನರಾದರೂ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವುದು ಅಪರೂಪ. ನನಗೋ ಕಛೇರಿಗೆ ಓಡುವ ಆತುರ. ಸಿಕ್ಕದ್ದನ್ನು ಬಾಯಿಗೆ ತುರುಕಿ ಓಡುತ್ತೇನೆ. ಮನೆಯವಳಿಗೆ ನಮ್ಮಿಬ್ಬರಿಗೂ ಊಟ, ತಿಂಡಿ ಕೊಡುವ ಜವಾಬುದಾರಿ. ನಮ್ಮದೆಲ್ಲ ಮುಗಿದ ಮೇಲೆ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ಇನ್ನು ಉಳಿದದ್ದು ಮಗ. ಕಾಲೇಜಿನಿಂದ ಯಾವಾಗ ಬರುತ್ತಾನೋ ಆಗ ಊಟ. ಕ್ಯಾಂಟೀನಿನಲ್ಲಿ ಏನು ಸಿಗುತ್ತದೋ ಅದುವೇ ಮೃಷ್ಟಾನ್ನ!  .ಕೆಲಸ ಮಾಡೋದೇ ಹೊಟ್ಟೆ ಹೊರೆಯೋಕೆ, ಹೀಗೆ ಊಟವನ್ನೂ ಸರಿಯಾಗಿ ಮಾಡದಿದ್ದರೆ ಹೇಗೆ? ಊಟದಲ್ಲಿ ಶಿಸ್ತಿರಬೇಕು. ಹೇಗೆಂದರೆ ಹಾಗೆ, ಯಾವಾಗ ಅಂದರೆ ಆವಾಗ, ಏನೆಂದರೆ ಅದು ತಿನ್ನೋದಲ್ಲ’ ಅಂತ ಅಜ್ಜಿ ಮೊಮ್ಮಗನನ್ನು ಬೈಯುವ ರೀತಿಯಲ್ಲಿ ನಮ್ಮೆಲ್ಲರಿಗೂ ಶಿಸ್ತಿನ ಪಾಠ ಹೇಳುತ್ತಿರುತ್ತಾಳೆ. 

ಹೊಟ್ಟೆ ತುಂಬಿದರೆ ಸಾಕಲ್ಲ. ಊಟಕ್ಕೂ ಶಿಸ್ತೇ? ಅದೆಲ್ಲ ಹಳೆಯ ಪರಂಪರೆ ಅನ್ನುವವರಿಗೆ ಇದೋ ವಿಜ್ಞಾನ ಜಗತ್ತಿನಿಂದ ಒಂದು ಕಿವಿ ಮಾತು. ಇಂದಿನ ಕಾಲದ ಖಾಯಿಲೆಗಳಾದ ಡಯಾಬಿಟೀಸ್, ಹೊಟ್ಟೆಯ ಹುಣ್ಣು ಮುಂತಾದುವಕ್ಕೂ ಊಟದ ಶಿಸ್ತಿಗೂ ಸಂಬಂಧ ಇದೆ ಎನ್ನುವ ಕೌತುಕಮಯ ಸಂಶೋಧನೆ ಮೊನ್ನೆ ಪ್ರಕಟವಾಗಿದೆ.  ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಫ್ರೆಂಚ್ ವಿಜ್ಞಾನಿ ಪಿಯರಿ ಶಾಂಬನ್ ಮತ್ತು ಸಂಗಡಿಗರು ಹೀಗೊಂದು ಸುದ್ದಿ ಪ್ರಕಟಿಸಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವವರ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳು ನಮ್ಮ ಜೀರ್ಣಕ್ರಿಯೆಯ ಮೇಲೆ  ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಇದಕ್ಕೂ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವವರಲ್ಲಿ ಕಂಡು ಬರುವ ಡಯಾಬಿಟೀಸ್, ರಕ್ತದೊತ್ತಡ, ಬೊಜ್ಜು ಮುಂತಾದ ಖಾಯಿಲೆಗಳಿಗೂ ಸಂಬಂಧವಿದೆ ಎಂದು ಇವರು ನಿರೂಪಿಸಿದ್ದಾರೆ.

ಹೊತ್ತಲ್ಲದ ಹೊತ್ತು           ಎಂದರೇನೆಂದು ಕೇಳಬೇಡಿ. ಯಾರು ಏನು ಮಾಡಿದರೇನು, ಮಾಡದಿದ್ದರೇನು, ಬೆಳಗಾಗುವುದು ನಿಲ್ಲುವುದಿಲ್ಲ. ರಾತ್ರಿಯಾಗುವುದು ತಪ್ಪುವುದಿಲ್ಲ ಎನ್ನುವ ಮಾತು ಕೇಳಿದ್ದೀರಿ. ಬೆಳಗಾಗುವುದಕ್ಕೂ, ರಾತ್ರಿಯಾಗುವುದಕ್ಕೂ ನಮ್ಮ ನಿತ್ಯದ ಚಟುವಟಿಕೆಗಳಿಗೂ ನೇರ ಸಂಬಂಧವಿದೆ ಅನ್ನುವುದು ವಿಜ್ಞಾನಿಗಳ ಅಂಬೋಣ. ನಮ್ಮದಷ್ಟೆ ಅಲ್ಲ, ಬಹುತೇಕ ಪ್ರಾಣಿಗಳ, ಗಿಡ-ಮರಗಳ ಚಟುವಟಿಕೆಗಳೂ ಹಗಲು-ರಾತ್ರಿಯ ಜೊತೆಗೆ ತಳುಕಿಕೊಂಡಿವೆ. ಉದಾಹರಣೆಗೆ, ಸೂರ್ಯ ಉದಯಿಸಿದ್ದನ್ನ ನೀವು ಕಂಡಿರೋ ಇಲ್ಲವೋ, ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಎಚ್ಚರವಾಗುವುದು ತಪ್ಪುವುದಿಲ್ಲ. ಹಾಗೆಯೇ, ರಾತ್ರಿ ನೀವು ಎಷ್ಟೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಚ್ಚರವಿರಬೇಕೆಂದರೂ ತೂಕಡಿಸುವುದು ತಪ್ಪುವುದಿಲ್ಲ. ಬೆಳಗೆಲ್ಲ ಎಚ್ಚರ, ರಾತ್ರಿಯಾಗುತ್ತಿದ್ದ ಹಾಗೇ ನಿದ್ರೆ. 

ಹಾಗಿದ್ದರೆ ಬೆಳಗಾಗದಿದ್ದರೆ ನಾವು ಹಾಸಿಗೆ ಬಿಟ್ಟೇಳುವುದೇ ಇಲ್ಲವೇ ಎನ್ನಬೇಡಿ. ವಿಜ್ಞಾನಿಗಳು ಕಂಡ ಹಾಗೆ ಇದೊಂದು ಸಹಜ ಚಕ್ರ. ಬೆಳಗಾಗುತ್ತದೆಯೋ ಇಲ್ಲವೋ, ನಿದ್ರೆಯಾದ ಮೇಲೆ ಎಚ್ಚರವಾಗಲೇ ಬೇಕು. ಅನಂತರ ಮತ್ತೆ ನಿದ್ರೆಗೆ ಮರಳಲೇ ಬೇಕು.  ಈ ಚಕ್ರವನ್ನು ದೈನಂದಿನ ಲಯ ಎಂದು ಕರೆದಿದ್ದಾರೆ. ಹೀಗೆಯೇ ವಾರ್ಷಿಕ ಲಯವೂ ಇರಬಹುದು. ಗಂಟೆಯ ಲಯವೂ ಇರಬಹುದು. ಒಟ್ಟಾರೆ ಎಲ್ಲ ಚಟುವಟಿಕೆಗಳೂ ಲಯಬದ್ಧವಾಗಿ ಮರುಕಳಿಸುತ್ತವೆ ಎನ್ನುವುದು ಸತ್ಯ. ಇದನ್ನೇ ಜೈವಿಕ ಗಡಿಯಾರ ಎಂದೂ ವಿಜ್ಞಾನಿಗಳು ಗುರುತಿಸಿದ್ದಾರೆ.

ಈ ಲಯವನ್ನು ಕೆಡಿಸಿದರೆ ಏನಾಗಬಹುದು? ಅರ್ಥಾತ್, ಬೆಳಗ್ಗಿನ ಚಟುವಟಿಕೆಯನ್ನು ರಾತ್ರಿ, ರಾತ್ರಿ ಮಾಡಬೇಕಾದ್ದನ್ನು ಬೆಳಗ್ಗೆ ಮಾಡಿದರೆ ಏನಾಗಬಹುದು? ಶಿವರಾತ್ರಿ ಹಬ್ಬವೆನ್ನಿಸುವುದು ಇದೇ ಕಾರಣಕ್ಕೇ. ನಿದ್ರೆ ಮಾಡಬೇಕಾದ ಹೊತ್ತಿನಲ್ಲಿ ಅದನ್ನು ತಡೆದು ಜಾಗರಣೆ ಇರುತ್ತೇವಲ್ಲ,  ಈ ಸಾಹಸಕ್ಕೇ ಅದು ಹಬ್ಬ ಎನ್ನಿಸುತ್ತದೆ. ಶಿವರಾತ್ರಿಯಂತೆ ನಿತ್ಯವೂ ಜಾಗರಣೆ ಮಾಡಿದೆವೆನ್ನಿ. ಆಗ ತುಸು ದಿನಗಳವರೆಗೆ ಹಗಲು ಅರೆಬರೆ ನಿದ್ರೆ ಮಾಡುತ್ತೇವೆ. ಕೊನೆಗೆ ಹಗಲೆಲ್ಲ ನಿದ್ರೆ ಮಾಡಿ, ಸಂಜೆ ಸೂರ್ಯ ಮುಳುಗುವ ವೇಳೆಗೆ ಬೆಳಗಾಗುವುದಕ್ಕೆ ಆರಂಭವಾಗುತ್ತದೆ. ಬೆಳಗ್ಗೆ ಸೂರ್ಯ ಉದಯಿಸುವಾಗ ನಿದ್ರೆ ಬರಲಾರಂಭಿಸುತ್ತದೆ. ನಿಮ್ಮ ದೇಹದ ಗಡಿಯಾರ ಲಯ ತಪ್ಪಿರುತ್ತದೆ. ಇದುವರೆಗಿನ ತಿಳುವಳಿಕೆಯ ಪ್ರಕಾರ ಲಯಗೆಟ್ಟ ಗಡಿಯಾರ ಮರಳಿ ಮೊದಲಿನ ಲಯವನ್ನು ಪಡೆಯುತ್ತದೆಂದು. ಇದರ ಕೀಲಿ ನಮ್ಮ ಮಿದುಳಿನಲ್ಲಿರುವ ನರಕೋಶಗಳ ಒಂದು ಪುಟ್ಟ ಗಂಟಿನಲ್ಲಿದೆಯೆಂದೂ ತಿಳಿದಿತ್ತು. ಈ ಗಂಟನ್ನು ಸೂಪ್ರ ಕಯಾಸ್ಮಾಟಿಕ್ ನ್ಯೂರಾನ್ (ಎಸ್ ಸಿ ಎನ್ ) ಎಂದು ಕರೆಯುತ್ತಾರೆ. ಪಿಯರೆ ಶಾಂಬನ್ ಅವರ ಸಂಶೋಧನೆ ಈ ತಿಳುವಳಿಕೆಗೆ ತುಸು ಗಾಭರಿಯಾಗುವಂತಹ ವಿಷಯಗಳನ್ನು ಕೂಡಿಸಿದೆ.

ನಮ್ಮ ನಿತ್ಯದ ಚಟುವಟಿಕೆಗಳು ಈ ಸಹಜ ಲಯವನ್ನು ಮೀರಿ ಹೆಚ್ಚು ಕಾಲ ನಡೆದಿದ್ದೇ ಆದರೆ ಎಸ್ ಸಿ ಎನ್ ಕೀಲಿಯ ನಿಯಂತ್ರಣವನ್ನೂ ಮೀರಿ ಶಾಶ್ವತ ಬದಲಾವಣೆಗಳಾಗುತ್ತವೆ. ಇವು ನಮ್ಮ ಕೆಲವು ಖಾಯಿಲೆಗಳಿಗೆ ಕಾರಣವಿರಬಹುದು ಎಂದು ಶಾಂಬನ್ ತಂಡ ಗುರುತಿಸಿದೆಯಂತೆ. ಅಂದ ಹಾಗೆ ಶಾಂಬನ್ ತಂಡ ಸಂಶೋಧನೆ ಮಾಡಿದ್ದು ಇಲಿಗಳ ಮೇಲೆ. ಇಲಿಗಳು ನಮ್ಮ ಹಾಗೆ ಹಗಲು ಓಡಾಡುವುದಿಲ್ಲವಷ್ಟೆ. ಅವು ನಿಶಾಚರಿಗಳು. ಅವುಗಳ  ಊಟ ತಿಂಡಿಯೂ ಅಷ್ಟೆ. ಎಲ್ಲವೂ ನಮ್ಮ ದಿನಚರ್ಯೆಗೆ ವಿರುದ್ಧ. ಅವುಗಳಿಗೆ ಸಹಜವಾದ ರಾತ್ರಿ ಹೊತ್ತಿನ ಊಟದ ಬದಲಿಗೆ ಹಗಲಷ್ಟೆ ಊಟಮಾಡಲು ಬಿಟ್ಟು ಏನಾಗುತ್ತದೆಂದು ಶಾಂಬನ್ ತಂಡ ಗಮನಿಸಿದೆ.

ಇದೊಂದು ರೀತಿ ಇಲಿಗಳನ್ನು ನಿತ್ಯ ರಾತ್ರಿಪಾಳಿ ಕೆಲಸ ಮಾಡಲು ಹೇಳಿದಂತೆ ಅನ್ನಿ. ಸಹಜವಾದ ಚಕ್ರವನ್ನು ಒತ್ತಾಯದಿಂದ ಬದಲಿಸಿದ ಹಾಗೆ ನಿತ್ಯ ಹಗಲು ಶಿವರಾತ್ರಿ ಮಾಡುವ  ಈ ಇಲಿಗಳ ಮೈಯಲ್ಲಿ ಯಾವ್ಯಾವ ರಾಸಾಯನಿಕ ಬದಲಾವಣೆಗಳು ಕಾಣುತ್ತವೆಯೆಂದು ಇವರು ವಿಶಿಷ್ಟ ಪ್ರಯೋಗಗಳಿಂದ ತಿಳಿಯಲು ಪ್ರಯತ್ನಿಸಿದ್ದಾರೆ. ಹೀಗೆ ಮಾಡಿದಾಗ ಇವುಗಳ ಉಣಿಸಿನ ಹಾಗೂ ಜೀರ್ಣಕ್ರಿಯೆಗಳ ಲಯ ತಪ್ಪುತ್ತದಷ್ಟೆ.

ಈ ಪ್ರಯೋಗಗಳಲ್ಲಿ ಮೊದಲು ಕಂಡದ್ದು: ಇಲಿಗಳು ಹಗಲು ಹೊಟ್ಟೆಬಿರಿಯ ಉಂಡರೂ, ಅವುಗಳ ರಕ್ತದಲ್ಲಿನ ರಾಸಾಯನಿಕಗಳು ಹಸಿದಾಗ ಇರುವಂತೆಯೇ ಇದ್ದುವು. ಅಂದರೆ ಉಂಡದ್ದು ದೇಹವನ್ನು ಕೂಡಿರಲೇ ಇಲ್ಲ. ನಡುರಾತ್ರಿಯಲ್ಲಿ ಕನಿಷ್ಟವಾಗಿರಬೇಕಿದ್ದ ಇನ್ಸುಲಿನ್ ಈ ಹಗಲುಣುವ ಇಲಿಗಳಲ್ಲಿ ಗರಿಷ್ಟವಾಗಿತ್ತು. ರಕ್ತದಲ್ಲಿನ ಕೊಬ್ಬಿನ ಅಂಶ (ಮುಕ್ತ ಮೇದಾಮ್ಲಗಳು) ಹಾಗೂ ರಕ್ತದೊತ್ತಡಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಅಂಶವೂ ಹೀಗೆ ಎಡವಟ್ಟು ಕಾಲದಲ್ಲಿ ಇತ್ತು. ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಲಿವರ್ (ಯಕೃತ್ತು) ನಲ್ಲಿನ ರಾಸಾಯನಿಕಗಳ ಪರಿಸ್ಥಿತಿಯೂ ಹೀಗೇ ಇತ್ತು.

ಹಗಲಿರಬೇಕಾದ್ದು ರಾತ್ರಿ ಕಾಣುತ್ತಿರುವುದಕ್ಕೆ ಎಸ್ ಸಿ ಎನ್ ನ ನಿಯಂತ್ರಣ ಕಾರಣವೋ, ಅಥವಾ ಅಕಾಲದ  ಉಣಿಸೇ ಕಾರಣವೋ ಎಂದು ಶಾಂಬನ್ ಪರೀಕ್ಷಿಸಿದ್ದಾರೆ.  ಅಕಾಲದಲ್ಲಿ (ಹಗಲು) ಉಣಿಸು ನೀಡಿದ  ಇಲಿಗಳಿಗೆ ಅನಂತರ ರಾತ್ರಿ ಒಮ್ಮ ಗ್ಲುಕೋಸ್ ಚುಚ್ಚಿದ್ದಾರೆ. ಗ್ಲುಕೋಸ್ ಆಹಾರ ಜೀರ್ಣವಾದ ನಂತರ ಉತ್ಪತ್ತಿಯಾಗುವ ವಸ್ತುವಷ್ಟೆ. ಪ್ರಯೋಗದ ಆರಂಭಿಸಿದ ಒಂದೆರಡು ದಿನಗಳಲ್ಲಿ ಹೀಗೆ ಗ್ಲುಕೋಸ್ ನೀಡಿದಾಗ ಇಲಿಗಳಲ್ಲಿ ದೈನಂದಿನ ಲಯ ಪಲ್ಲಟದಿಂದಾಗುವ ಪರಿಣಾಮಗಳು ಮರೆಯಾದುವು. ಆದರೆ ಅನಂತರದ ದಿನಗಳಲ್ಲಿ ನೀಡಿದಾಗ ಪಲ್ಲಟದ ಪರಿಣಾಮಗಳು ಹಾಗೇ ಉಳಿದುಕೊಂಡವು. ಅಂದರೆ ಈ ಪಲ್ಲಟನೆ ಆಹಾರಾಭ್ಯಾಸ ದಿಂದ ಬಂದದ್ದೇ ಹೊರತು ಎಸ್ ಸಿ ಎನ್ ನಿಯಂತ್ರಣದಿಂದಲ್ಲ ಎಂದು ಶಾಂಬನ್ ತೀರ್ಮಾನಿಸಿದ್ದಾರೆ.

ಈ ಯಾವ ಬದಲಾವಣೆಗಳೂ ಎಸ್ ಸಿ ಎನ್ ನ ಲಯವನ್ನು ತಾಕುವುದಿಲ್ಲ. ಆದರೆ ಇತರೇ ಕ್ರಿಯೆಗಳ ನಡುವಣ ತಾಳಮೇಳ ಬದಲಾಗುತ್ತದೆ. ದೇಹದ ವಿವಿಧ ಕ್ರಿಯೆಗಳು ಒಂದಕ್ಕೊಂದು ತಳುಕಿಕೊಂಡ ಚಕ್ರದಂತೆ ಇರುವುದರಿಂದ, ಒಂದರ ಲಯ ತಪ್ಪಿದ ಕೂಡಲೇ ಮತ್ತೊಂದರ ಲಯವೂ ಬದಲಾಗುತ್ತದೆ ಎನ್ನುತ್ತಾರೆ ಶಾಂಬನ್. ಬಲವಂತವಾಗಿ ನಮ್ಮ ದೈನಂದಿನ ಲಯವನ್ನು ಬದಲಿಸುವುದರಿಂದ ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ಇವು ಎನ್ನುತ್ತಾರೆ ಶಾಂಬನ್.

ಪ್ರಯೋಗಗಳನ್ನು ಇಲಿಗಳಲ್ಲೇ ನಡೆಸಿದ್ದರೂ, ಈ ರಾಸಾಯನಿಕ ಕ್ರಿಯೆಗಳಿಗೂ ನಮ್ಮ ದೇಹದಲ್ಲಿ ಜರುಗುವ ಕ್ರಿಯೆಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. “ ಜೈವಿಕ ಗಡಿಯಾರದಲ್ಲಿ ಆಗುವ ಈ ಲಯಪಲ್ಲಟನ, ಪಾಳಿಗಳಲ್ಲಿ ಕೆಲಸ ಮಾಡುವ (ಉದಾಹರಣೆಗೆ, ಟ್ರಕ್ ಡ್ರೈವರ್ ಗಳು, ಐಟಿ ಉದ್ಯಮದ ಸಿಬ್ಬಂದಿಗಳು) ವವರಲ್ಲಿ ಸಾಮಾನ್ಯವಾಗಿ ಕಾಣಬರುವ ಖಾಯಿಲೆಗಳನ್ನುಂಟು ಮಾಡುವಂತಹ ರಾಸಾಯನಿಕ ಕ್ರಿಯೆಗಳನ್ನೇ ತಾಕುತ್ತದೆ,” ಎನ್ನುವುದು ಶಾಂಬನ್ ಅಭಿಪ್ರಾಯ. ಅರ್ಥಾತ್, ನಮ್ಮ ಊಟ ಹೇಗಿದೆ ಅನ್ನುವುದಷ್ಟೆ ಅಲ್ಲ, ನಾವು ಯಾವಾಗ ಊಟ ಮಾಡುತ್ತೇವೆಂಬುದೂ ಮುಖ್ಯ ಅಂತಲ್ಲವೇ? ಅಜ್ಜಿ ಇದನ್ನು ತಿಳಿದೇ ಹೇಳಿದಳು ಅನ್ನಬೇಡಿ. ಅಂತೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ಶಿಸ್ತು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಅನ್ನುತ್ತದೆ ಶಾಂಬನ್ ಸಂಶೋಧನೆ.

 

Published in: on ನವೆಂಬರ್ 23, 2015 at 5:49 ಫೂರ್ವಾಹ್ನ  Comments (2)  

ಪ್ಲಾಸ್ಟಿಕ್‍ ತಿನ್ನುವ ಹುಳು

16112015

ಆಕರ:

  1. Yu Yang et al., Biodegradation and Mineralization of Polystyrene by Plastic-Eating Mealworms: Part 1. Chemical and Physical Characterization and Isotopic Tests, Environ. Sci. Technol.,2015, 49 (20), pp 12080–12086 ( http://pubs.acs.org/doi/pdf/10.1021/acs.est.5b02661),
  2. Yu Yang et al., Biodegradation and Mineralization of Polystyrene by Plastic-Eating Mealworms: Part 2. Role of Gut microorganisms, Environ. Sci. Technol.,2015, 49 (20), pp 12087–12093, DOI: 10.1021/acs.est.5b02663, (http://pubs.acs.org/doi/abs/10.1021/acs.est.5b02663)

ಲೇಖನದಲ್ಲಿ ಪ್ರಕಟವಾಗದಿದ್ದ ಟೆನೆಬ್ರಿಯೊ ಮಾಲಿಟರ್‍ ದುಂಬಿಯ ಚಿತ್ರ  ಇದೋ ಇಲ್ಲಿದೆ.

tenebriomolitor1

Published in: on ನವೆಂಬರ್ 16, 2015 at 6:21 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಾಗದದಾಟದ ಕಾರ್ಬನ್‍ ಕಮಲ!

ಬೆಳಗ್ಗೆ ಸೂರ್ಯೋದಯದ ಜೊತೆಗೇ ಕಮಲ ಅರಳುವುದು ನೋಡಿದ್ದಿರಲ್ಲ? ಕಮಲಕ್ಕೆ ಬೆಳಗಾಗುವುದು ಹೇಗೆ ಗೊತ್ತಾಗುತ್ತದೆ ಎನ್ನುವ ಅಚ್ಚರಿಯಿರಲಿ. ಅದರ ಪಕಳೆಗಳು ಬಿಡಿಸಿಕೊಳ್ಳುವುದು ಹೇಗೆ? ಭದ್ರವಾಗಿ ಮುಚ್ಚಿಕೊಂಡಿರುವ ಅವುಗಳನ್ನು ದೂರಕ್ಕೆ ಎಳೆದು ನಿಲ್ಲಿಸುವ ಬಲ ಎಲ್ಲಿಂದ ಬಂತು ಎನ್ನುವುದು ಮತ್ತೊಂದು ಕೌತುಕದ ಪ್ರಶ್ನೆ. ಕಮಲ, ಮಲ್ಲಿಗೆ, ಗುಲಾಬಿಗಳು ಸಹಜವಾಗಿ, ಸರಾಗವಾಗಿ ಮಾಡುವ ಈ ಕ್ರಿಯೆಯನ್ನು ಅನುಕರಿಸುವುದು ಸುಲಭವಲ್ಲ. ಇದೋ. ಬೆಳಕಿಗೆ ಪ್ರತಿಕ್ರಯಿಸಿ ಮಡಿಚಿ, ಬಿಡಿಸಿಕೊಳ್ಳುವ ನ್ಯಾನೋ ಕಾರ್ಬನ್ ಡಬ್ಬಿಯೊಂದು ಸಿದ್ಧವಾಗಿದೆ. ಚೀನಾದ ಡಾಂಗುವ ವಿಶ್ವವಿದ್ಯಾನಿಲಯದ ರಸಾಯನ ತಂತ್ರಜ್ಞ ಹೋಂಗ್ಚಿ ವಾಂಗ್ ಮತ್ತು ಸಂಗಡಿಗರು ಹೀಗೊಂದು ಸಾಧನವನ್ನು ಸಿದ್ಧಗೊಳಿಸಿದ್ದಾರೆಂದು ಮೊನ್ನೆ ಸೈನ್ಸ್ ಅಡ್ವಾನ್ಸಸ್ ಪತ್ರಿಕೆ ವರದಿ ಮಾಡಿದೆ. ಕಾಗದ ಮಡಚುವ ಜಪಾನೀ ಕಲೆ ಓರಿಗಾಮಿ ತಮಗೆ ಸ್ಫೂರ್ತಿ ಎಂದು ಇವರು ಹೇಳಿಕೊಂಡಿದ್ದಾರೆ.

ಅವಕೆಂಪು ಕಿರಣಗಳಿಗೆ ಒಡ್ಡಿದಾಗ ಮುಚ್ಚಿಕೊಂಡು ಡಬ್ಬಿಯಾದ ಪಗಡೆ ಹಾಸು

ಅವಕೆಂಪು ಕಿರಣಗಳಿಗೆ ಒಡ್ಡಿದಾಗ ಮುಚ್ಚಿಕೊಂಡು ಡಬ್ಬಿಯಾದ ಪಗಡೆ ಹಾಸು

ಓರಿಗಾಮಿ ತಂತ್ರಗಳನ್ನು ಸಾಧನಗಳ ವಿನ್ಯಾಸದಲ್ಲಿ ಬಳಸುವುದು ಹೊಸತೆನಲ್ಲ. ಅಂತರಿಕ್ಷ ನೌಕೆಗಳಿಗೆ ವಿದ್ಯುತ್ ಒದಗಿಸುವ ಸೌರಫಲಕಗಳನ್ನು ಮೊದಲಿಗೆ ಹೀಗೆಯೇ ಮಡಚಿಟ್ಟು ಪೊಟ್ಟಣ ಕಟ್ಟಿರುತ್ತಾರೆ. ನೌಕೆ ಬಾಹ್ಯಾಕಾಶವನ್ನು ತಲುಪಿದ ಅನಂತರ ಇವುಗಳು ಮಡಿಕೆ ಬಿಚ್ಚಿಕೊಂಡು ಹರಡಿಕೊಳ್ಳುವಂತೆ ಮಾಡುತ್ತಾರೆ. ಇಲ್ಲಿಯೂ ಓರಿಗಾಮಿಯ ತಂತ್ರಗಳು ನೆರವಿಗೆ ಬರುತ್ತವೆ.

ದೊಡ್ಡ ಕಾಗದವನ್ನೋ, ಹಾಳೆಯನ್ನೋ, ಪಟ್ಟಿಯನ್ನೋ ಮಡಚಿ, ಸುತ್ತಿ ವಿಭಿನ್ನ ಆಕಾರಗಳನ್ನು ಮಾಡುವುದು ಸುಲಭ. ಆದರೆ ಕೈಗೆ ಸಿಗದೆಯೇ ಇರುವಂತಹ ವಸ್ತುಗಳನ್ನು ಮಡಚುವುದು ಹೇಗೆ? ಇದು ನ್ಯಾನೋ ತಂತ್ರಜ್ಞರು ಎದುರಿಸುತ್ತಿರುವ ಸಂದಿಗ್ಧ. ಕಣ್ಣಿಗೆ ಕಾಣದಷ್ಟು ಸೂಕ್ಷ್ಮ ಗಾತ್ರದ ಯಂತ್ರಗಳನ್ನು ಮಾಡುವ ಇಚ್ಛೆ. ಆದರೆ ಆ ಪುಟ್ಟ ವಸ್ತುಗಳಿಗೆ ಆಕಾರ ಕೊಡುವ ಉಳಿ, ಸುತ್ತಿಗೆಗಳು ಇರಬೇಕಷ್ಟೆ. ಇದ್ದರೂ ಅವನ್ನು ಬಳಸುವಷ್ಟು ನಮ್ಮ ಕೈ ನಾಜೂಕಾಗಿರಬೇಕು. ಇವೆರಡೂ ಸಾಧ್ಯವಿಲ್ಲದಾದಾಗ ವಸ್ತುವಿನದ್ದೇ ಗುಣಗಳನ್ನು ಬಳಸಿಕೊಂಡು ಓರಿಗಾಮಿ ಮಾಡಬೇಕಷ್ಟೆ. ಹೀಗೆ ಓರಿಗಾಮಿಗೆ ಒಗ್ಗುವ ವಸ್ತುಗಳಿಗಾಗಿ ನ್ಯಾನೋ ತಂತ್ರಜ್ಞರು ಹುಡುಕಾಡುತ್ತಿದ್ದಾರೆ. ಹಲವು ವಿಶಿಷ್ಟ ಉಪಾಯಗಳನ್ನು ಸೃಷ್ಟಿಸುತ್ತಿದ್ದಾರೆ. ವಾಂಗ್ ಈ ನಿಟ್ಟಿನಲ್ಲಿ ಮತ್ತೊಂದು ಹೊಸ ತಂತ್ರವನ್ನು ರೂಪಿಸಿದ್ದಾರೆ.

ನ್ಯಾನೋ ಎಂದರೆ ಒಂದು ಮಿಲಿಮೀಟರಿನ ದಶಲಕ್ಷದಲ್ಲೊಂದು ಪಾಲು. ಅರ್ಥಾತ್ ಒಂದು ನ್ಯಾನೋ ದಪ್ಪವಿರುವ ಹತ್ತು ಲಕ್ಷ ಇಟ್ಟಿಗೆಗಳನ್ನು ಒಂದಕ್ಕೊಂಡು ಆತುಕೊಂಡಿರುವಂತೆ ಜೋಡಿಸಿದರೆ ಅದು ಒಂದು ಮಿಲಿಮೀಟರ್ ಉದ್ದದ ಸಾಲಾಗಬಹುದಷ್ಟೆ.  ಈ ಹಿಂದೆಯೂ ನ್ಯಾನೋ ಸ್ತರದಲ್ಲಿ ತನ್ನಂತಾನೇ ಆಕಾರ ಬದಲಿಸುವ ಸಾಧನಗಳನ್ನು ರೂಪಿಸಲಾಗಿದೆ. ಇವುಗಳಲ್ಲಿ ನೀರು ಕಳೆದುಕೊಂಡಾಗಲೋ, ಹೀರಿಕೊಂಡಾಗಲೋ ವಿಭಿನ್ನ ಪ್ರಮಾಣದಲ್ಲಿ ಉದ್ದವಾಗುವ ಅಥವಾ ದಪ್ಪನಾಗುವ ಎರಡು ವಸ್ತುಗಳನ್ನು ಪದರಗಳಾಗಿ ಜೋಡಿಸಿ ಪ್ರಯತ್ನಿಸಿದ್ದಾರೆ.  ನೀರಿಗೆ ತೆರೆದಿಟ್ಟಾಗ ಇದು ಕಮಾನಿನಂತೆ ಬಾಗುತ್ತದೆ. ಹೀಗೆಯೇ ತಾಪ ಹೆಚ್ಚಿದಾಗ ಆಕಾರ ಬದಲಿಸುವ ಲೋಹ ಮಿಶ್ರಣಗಳನ್ನೂ ಪ್ರಯತ್ನಿಸಿದ್ದಾರೆ. ತಮ್ಮ ಸಾಧನ ಇವೆಲ್ಲಕ್ಕಿಂತ ಭಿನ್ನ ಎನ್ನುತ್ತಾರೆ ವಾಂಗ್.

ಇವರು ಲೋಹ, ಪಾಲಿಮರ್ ಗಳ ಬದಲಿಗೆ ನ್ಯಾನೋಕಾರ್ಬನ್ ತಂತುಗಳನ್ನು ಬಳಸಿದ್ದಾರೆ. ನ್ಯಾನೋ ಕಾರ್ಬನ್ ಅತಿ ಧೃಢವಾದ ವಸ್ತು. ಬೇಕೆಂದ ಹಾಗೆ ಬಾಗುವುದಿಲ್ಲ. ಸಾಧಾರಣವಾಗಿ ಬಾಗದ ಇದನ್ನು ಹೆಣೆದು ಹಾಳೆಯನ್ನಾಗಿ ಮಾಡಬಹುದು. ಈ ಹಾಳೆಯೇ ಗ್ರಾಫೀನ್. ಗ್ರಾಫೀನ್  ಹಾಳೆಯನ್ನು ಬೇಕೆಂದ ಹಾಗೆ ಮಡಚುವಂತೆ ಮೃದುವಾಗಿಸಿರುವುದೇ ವಾಂಗ್ ಅವರ ಸಾಧನೆ. ಇದು ಬಹಳ ಕಷ್ಟವೇನಲ್ಲವಂತೆ. ಗ್ರಾಫೀನ್ ಹಾಳೆಗಳನ್ನು ನ್ಯಾನೋ ಕಾರ್ಬನ್ ದ್ರಾವಣದಿಂದ ತಯಾರಿಸುತ್ತಾರೆ. ಪಾಲಿಡೋಪಾಮಿನ್ ‍ದ್ರಾವಕದಲ್ಲಿ ಗ್ರಾಫೀನ್ ಆಕ್ಸೈಡ್ ಕರಗಿಸಬಹುದು. ಈ ದ್ರಾವಣವನ್ನು ಒಣಗಿಸಿದರೆ ಗ್ರಾಫೀನ್ ಹಾಳೆ ದೊರೆಯುತ್ತದೆ. ಹೀಗೆ ಗ್ರಾಫೀನ್ ಹಾಳೆ ತಯಾರಿಸುವಾಗ ವಾಂಗ್ ತಂಡ ಒಂದು ವಿಶೇಷವನ್ನು ಗಮನಿಸಿತು. ಗ್ರಾಫೀನ್ ‍ಹಾಳೆಯಲ್ಲಿ ಎಲ್ಲೆಲ್ಲ ಗ್ರಾಫೀನ್ ಆಕ್ಸೈಡ್ ಆಕ್ಸಿಜನ್ ಅಣುವನ್ನು ಕಳೆದುಕೊಂಡು ಇರುತ್ತದೆಯೋ ಅಲ್ಲಿ ಅದು ಸುಲಭವಾಗಿ ನೀರನ್ನು ಕಳೆದುಕೊಳ್ಳಬಲ್ಲುದು. ಸಾಮಾನ್ಯವಾಗಿ ಹಾಳೆಯ ಮೇಲೆ ಸ್ವಲ್ಪ ಪಾಲಿಡೋಪಾಮಿನ್ ಉಳಿದುಕೊಳ್ಳುವುದರಿಂದ ಹೀಗೆ ಆಕ್ಸಿಜನ್ ನಷ್ಟ ತಡೆಯಬಹುದು.

ಈ ಗುಣವನ್ನೇ ಬಳಸಿಕೊಂಡು ತನ್ನಂತಾನೇ ಆಕಾರ ಬದಲಿಸುವ ಡಬ್ಬಗಳು, ವಸ್ತುಗಳನ್ನು ಹಿಡಿದೆಳೆಯುವ ಕಣ್ಣಿಗೆ ಕಾಣದ ಸೂಕ್ಷ್ಮ ‘ಕೈ’ ಮೊದಲಾದ ನ್ಯಾನೋ ಯಂತ್ರಗಳನ್ನು ವಾಂಗ್ ತಂಡ ರೂಪಿಸಿದೆ. ತಮಗೆ ಬೇಕಾದ ಆಕಾರದ ಗ್ರಾಫೀನ್ ಹಾಳೆಗಳನ್ನು ತೆಗೆದುಕೊಂಡು ಅದರ ಮೇಲಿರುವ ಪಾಲಿಡೋಪಾಮಿನ್ ಲೇಪವನ್ನು ನಿರ್ದಿಷ್ಟ ಸ್ಥಾನಗಳಲ್ಲಿ ಹೆರೆದು ತೆಗೆದುಬಿಡುತ್ತಾರೆ. ಹೀಗೆ ಪಾಲಿಡೋಪಾಮಿನ್ ಲೇಪವಿಲ್ಲದೆ ಬೆತ್ತಲಾದೆಡೆ ಗ್ರಾಫೀನ್ ಆಕ್ಸೈಡ್ ಆಕ್ಸಿಜನ್ ಕಳೆದುಕೊಳ್ಳಬಲ್ಲುದು. ಪರಿಣಾಮವಾಗಿ ಅಲ್ಲಿ ಧೃಡತೆಯೂ ಕಡಿಮೆಯಾಗುತ್ತದೆ. ಮೃದುವಾದ ಕೀಲು ಗಳಾದಂತೆ ಆಗುತ್ತದೆ.

ಪಾಲಿಡೋಮೈಡ್ ಕವಚವಿರುವ ಗ್ರಾಫೀನ್ ಪದರಗಳು ಬಿಸಿಯಾದಾಗ ಅಥವಾ ಬೆಳಕಿಗೆ ಒಡ್ಡಿದಾಗ ನೀರನ್ನು ಹೀರಿಕೊಂಡು ಊದುತ್ತವೆ. ಆದರೆ ಎಲ್ಲ ಕಡೆಯೂ ಸಮನಾಗಿ ಹರಡಿಕೊಳ್ಳಲಾಗದಂತೆ ಪಾಲಿಡೋಮೈಡ್ ತಡೆಯುವುದರಿಂದ ದಪ್ಪನಾಗುವ ಬದಲು ಉದ್ದವಾಗುತ್ತವೆ. ಗ್ರಾಫೀನ್ ಬೆತ್ತಲೆಯಾಗಿರುವೆಡೆ ಹೀಗಾಗುವುದಿಲ್ಲ. ಇದು ಒಂದು ರೀತಿ ಆ ಕೀಲಿನ ಇಬ್ಬದಿಯನ್ನೂ ಎಳೆದಂತೆ ಆಗುತ್ತದೆ . ಈ ಕ್ರಿಯೆಯನ್ನೇ ಬಳಸಿಕೊಂಡು ವಿಭಿನ್ನ ರೀತಿಯ ಓರಿಗಾಮಿ ಸಾಧನಗಳನ್ನು ವಾಂಗ್ ತಂಡ ರೂಪಿಸಿದೆ.

ಪಗಡೆ ಹಾಸಿನ ಆಕಾರದ ಹಾಳೆಯ ನಟ್ಟ ನಡುವಿನ ಚದರದ ನಾಲ್ಕೂ ಬದಿಯಲ್ಲೂ ಪಾಲಿಡೋಮೈಡ್ ಲೇಪನವನ್ನು ಹೆರೆದು ತೆಗೆದಿದ್ದಾರೆ. ಈ ರೀತಿಯ ಹಾಳೆಯನ್ನು ಅವಗೆಂಪು (ಕೀಲು ನೋವಾದಾಗ ಬಿಸಿ ಮಾಡಲು ವೈದ್ಯರು ಬಳಸುವ ದೀಪದ ಬೆಳಕು) ಕಿರಣಗಳಿಗೆ ಒಡ್ಡಿದ್ದಾರೆ. ಕಣ್ಣೆವೆ ಮುಚ್ಚುವುದರೊಳಗೆ ಪಗಡೆ ಹಾಸು ಮಡಚಿಕೊಂಡು ಡಬ್ಬಿಯಂತಾಗಿದೆ. ಇದಕ್ಕೆ ಬೇಕಾದ ಸಮಯ ಎಂಟು ಸೆಕೆಂಡು. ಇದುವರೆಗೆ ಶೋಧವಾಗಿರುವ ಯಾವುದೇ ತಂತ್ರದಲ್ಲೂ ಇಷ್ಟು ಕ್ಷಿಪ್ರವಾಗಿ ಪ್ರತಿಕ್ರಿಯೆ ದೊರಕಿರಲಿಲ್ಲ. ದೀಪ ಆರಿಸಿದ ಕೂಡಲೇ ಡಬ್ಬಿ ಮರಳಿ ಪಗಡೆ ಹಾಸಾಗಿದೆ.

ಈ ತಂತ್ರಗಳನ್ನು ಬಳಸಿ ಹಲವು ವಿಧದ ಚಲನೆಗಳನ್ನು ತೋರುವ ನ್ಯಾನೋ ಯಂತ್ರಗಳನ್ನು ವಾಂಗ್ ರೂಪಿಸಿದ್ದಾರೆ. ಒಂದೋ ಎರಡೋ ಮಿಲಿಮೀಟರು ಉದ್ದಗಲದ  ಈ ಪುಟ್ಟ ಸಾಧನಗಳು ನಾಳೆ ಇಂತಹ ಸ್ವಯಂ ಆಕಾರಗೊಳ್ಳುವ ಸೂಕ್ಷ್ಮ ಯಂತ್ರಗಳನ್ನು ನಿರ್ಮಿಸಬಹುದು ಎನ್ನುವ ಸಾಧ್ಯತೆಗಳನ್ನು ವಾಂಗ್ ಅವರ ಪ್ರಯತ್ನ ಹುಟ್ಟಿಸಿದೆ.

ಬೆಳಕುಇರಲಿ, ಬೇನೆ ಬೇಡ!

09112015

ಈ ಲೇಖನಕ್ಕೆ ಆಧಾರವಾದ ಕೆಲವು ಆಕರಗಳು. ಇವು 2005 ರಿಂದ 2012 ರವರೆಗೆ ವಿವಿಧ ನಗರಗಳಲ್ಲಿ ದೀಪಾವಳಿಯ ದಿನಗಳಲ್ಲಾದ ಮಾಲಿನ್ಯದ ಕುರಿತು ನಡೆದ ಸಂಶೋಧನೆಗಳ ವಿವರಗಳನ್ನು ತಿಳಿಸುತ್ತವೆ. ಇವುಗಳು ಹಾಗೂ ದೀಪಾವಳಿಯ ಸಂದರ್ಭದಲ್ಲಿ ಆಗುವ ಅಪಘಾತಗಳು, ಪ್ರಾಣಿ-ಪಕ್ಷಿಗಳ ಸಾವು ಮುಂತಾದುವು ಪಟಾಕಿಗಳ ನಿಷೇಧಕ್ಕೆ ಕಾರಣ. ಈ ಹಿನ್ನೆಲೆ ಇಲ್ಲದೆ ನಿಷೇಧವಾಗಿದ್ದರೆ ಅದಕ್ಕೆ ಬೇರೆ ಅರ್ಥ ಕೊಡಬಹುದಿತ್ತು. ವಾಸ್ತವ ಇದು. ಇಲ್ಲಿರುವ ಸಂಶೋಧನೆಗಳಷ್ಟೆ ಅಲ್ಲ. ಇನ್ನೂ ಬಹಳಷ್ಟಿವೆ. ಅವೆಲ್ಲವನ್ನೂ ಪಟ್ಟಿ ಮಾಡುವುದು ಕಷ್ಟ. ಉದಾಹರಣೆಗೆ ಇವುಗಳನ್ನು ಕೊಟ್ಟಿದ್ದೇನೆ ಅಷ್ಟೆ.

  1. U. P. Nasir & D. Brahmaiah, Impact of fireworks on ambient air quality: A case study; Int. J. Environ. Sci. Technol. (2015) 12:1379–1386, DOI 10.1007/s13762-014-0518-y

2 ,  Vaishali V. Khaparde, et al Influence of burning of fireworks on particle size distribution of PM10 and associated Barium at Nagpur, Environ Monit Assess (2012) 184:903–911 DOI 10.1007/s10661-011-2008-8

  1. S. Tiwari et al., Statistical evaluation of PM10 and distribution of PM1,PM2.5, and PM10 in ambient air due to extreme fireworks episodes (Deepawali festivals) in megacity Delhi, Nat Hazards (2012) 61:521–531 DOI 10.1007/s11069-011-9931-4
  1. Jennie Munster et al., The Fallout from Fireworks: Perchlorate in Total deposition, Water Air Soil Pollut (2009) 198:149–153, DOI 10.1007/s11270-008-9833-6
  1. Venkata Swamy Yerramsetti et al., The impact assessment of Diwali fireworks emissions on the air quality of a tropical urban site, Hyderabad, India, during three consecutive years, Environ Monit Assess (2013) 185:7309–7325, DOI 10.1007/s10661-013-3102-x
Published in: on ನವೆಂಬರ್ 9, 2015 at 5:15 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕ್ಯಾನ್ಸರ್‍ ಗೆ ಇನ್ನೊಂದು ಕಾರಣ!

ಕ್ಯಾನ್ಸರ್ ಎನ್ನುವ ರೋಗ ಬರುತ್ತದೇಕೆ ಎನ್ನುವ ಪ್ರಶ್ನೆಗೆ ಇನ್ನೇನು ಉತ್ತರ ಸಿಕ್ಕಿತು ಎನ್ನುವಾಗಲೇ ಹೊಸದೊಂದು ಪ್ರಶ್ನೆ ಕಾಡುತ್ತದೆ. ಪ್ರತಿ ವರ್ಷ ವಿಭಿನ್ನ ರೂಪದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಕ್ಯಾನ್ಸರ್ ಬರಲು ಇದುವರೆವಿಗೂ ಊಹಿಸದೇ ಇದ್ದ ಕಾರಣವೊಂದು ಕೂಡಿಕೊಂಡಿದೆ. ನಿನ್ನೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರದಿಯಾದ ರೋಗಿಯೊಬ್ಬನ ಕಥೆ ಹೊಟ್ಟೆಯೊಳಗೆ ವಾಸಿಸುವ ಹುಳುಗಳಿಂದಲೂ ಕ್ಯಾನ್ಸರ್ ಉಂಟಾಗಬಹುದು ಎನ್ನುವ ಹೊಸ ಸಾಧ್ಯತೆಯನ್ನು ಮುಂದಿಟ್ಟಿದೆ.

ಕ್ಯಾನ್ಸರ್ ಎಂದರೆ ಹದ್ದು ಮೀರಿದ ಜೀವಕೋಶಗಳು ಎನ್ನುತ್ತಾರೆ ವಿಜ್ಞಾನಿಗಳು. ನಮ್ಮ ದೇಹದ ವಿವಿಧ ಅಂಗಗಳಲ್ಲಿರುವ ಜೀವಕೋಶಗಳ ಸಂಖ್ಯೆ, ಅವುಗಳ ಚಟುವಟಿಕೆಗೆ ಮಿತಿಯಿದೆ. ಒಂದು ಹಂತಕ್ಕೆ ಬೆಳೆದ ಮೇಲೆ ಎಲ್ಲ ಕೋಶಗಳೂ ಸಂಖ್ಯೆಯಲ್ಲಿ ಹೆಚ್ಚುವುದಿಲ್ಲ. ಹಾಗಾಗುವುದಿದ್ದರೆ ನಾವು ಊದುತ್ತಲೇ ಇರಬೇಕಿತ್ತು. ಹಾಗೆಯೇ ಪ್ರತಿ ಜೀವಕೋಶ ಅಥವಾ ಅಂಗಕ್ಕೆ ಅದರದ್ದೇ ಸ್ಥಾನವಿದೆ. ಹೃದಯ ಎದೆಗೂಡಿನಲ್ಲಿಯೇ ಇರಬೇಕು. ಮಿದುಳು ತಲೆಯೊಳಗೇ ಇರಬೇಕು. ವಿವಿಧ ನರಗಳು ಇಂತಿಂತಲ್ಲೇ ಇರಬೇಕು. ಹಾಗಿದ್ದರಷ್ಟೆ ಈ ದೇಹ ಜೀವಿಯಾಗಿ, ವ್ಯಕ್ತಿಯಾಗಿ ಇರಬಲ್ಲುದು. ಈ ನಿಯಮಗಳನ್ನು ಪಾಲಿಸದೆ ಅಡ್ಡಹಾದಿ ಹಿಡಿದ ಕೋಶಗಳೇ ಕ್ಯಾನ್ಸರ್ ಗೆ ಮೂಲ. ಇದು ಇಂದಿನ ತಿಳುವಳಿಕೆ.

ದೇಹದಲ್ಲಿ ಕೆಲವೇ ಜೀವಕೋಶಗಳು ಸಂಖ್ಯೆಯಲ್ಲಿ ಹೆಚ್ಚಾಗುವಂತೆ ನಿಸರ್ಗ ನಿಯಮಗಳಿವೆ. ಆದರೆ ಕ್ಯಾನ್ಸರ್ ಕೋಶಗಳು ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಎಷ್ಟೆಂದರಷ್ಟು ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ, ಗಂಟಾಗುತ್ತವೆ. ಕೆಲವೊಮ್ಮೆ ಎಲ್ಲೆಂದರಲ್ಲಿ ನುಸುಳಿ ಆ ಅಂಗಗಳಲ್ಲೂ ಕ್ಯಾನ್ಸರ್ ಉಂಟು ಮಾಡುತ್ತವೆ. ವೈದ್ಯರು ಈ ಸ್ಥಿತಿಯನ್ನು ಮೆಟಾಸ್ಟಾಸಿಸ್ ಎನ್ನುತ್ತಾರೆ. ಬರೇ ಸಂಖ್ಯೆ ಹೆಚ್ಚಾಗಿ ಗಂಟಾಗುತ್ತಿದ್ದರೆ, ಆ ಗಂಟನ್ನೇ ಕಿತ್ತು ಬಿಸಾಡಬಹುದು. ಶಸ್ತ್ರಕ್ರಿಯೆಗಳ ಮೂಲಕ ಹೀಗೆ ಚಿಕಿತ್ಸೆ ನೀಡುವುದುಂಟು. ಆದರೆ ಮೆಟಾಸ್ಟಾಸಿಸ್ ಆದ ಸಂದರ್ಭದಲ್ಲಿ ಚಿಕಿತ್ಸೆ ನೀಡುವುದು ಬಲು ಕಷ್ಟ.

ಜಂತುಹುಳುಗಳೂ ಇಂತಹ ಮೆಟಾಸ್ಟಾಸಿಸ್ ಗೆ ಕಾರಣವಾಗಬಹುದು ಎನ್ನುತ್ತದೆ ಈ ಸುದ್ದಿ. ಇದು ಗೊತ್ತಾಗಿದ್ದು ಹೀಗೆ. ಎರಡು ವರ್ಷದ ಹಿಂದೆ, ಅಮೆರಿಕೆಯ ಅಟ್ಲಾಂಟಾದಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನ  ಇನ್ಫೆಕ್ಶಿಯಸ್ ಡಿಸೀಸಸ್ (ಸೋಂಕು ರೋಗ) ಪ್ರಯೋಗಶಾಲೆಗೆ ಒಬ್ಬ ರೋಗಿಯ ಅಂಗಾಂಶಗಳು ಪರೀಕ್ಷೆಗೆ ಬಂದಿದ್ದುವು.  ಈತನಿಗೆ ಎಚ್  ಐ ವಿ. ಸೋಂಕು ಇದ್ದು ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಿದ್ದ. ನಿಲ್ಲದ ಜ್ವರ, ಕುಸಿಯುವ ದೇಹತೂಕದ ತೊಂದರೆಗಳು ನಿಂತಿರಲೇ ಇಲ್ಲ. ಮರು ಪರೀಕ್ಷೆ ಮಾಡಿದಾಗ ಮಲದಲ್ಲಿ ಹೈಮೆನೋಲೆಪಿಸ್ ನಾನಾ ಎನ್ನುವ ಲಾಡಿಹುಳುವಿನ ಮೊಟ್ಟೆಗಳು ಕಂಡುವು. ಜೊತೆಗೆ ರಕ್ತದಲ್ಲಿ ಎಚ್ ಐ ವಿ. ವೈರಸ್ ಪ್ರಮಾಣವೂ ಹೆಚ್ಚಿತ್ತು. ಎಚ್ ಐ ವಿ. ಸೋಂಕು ದೇಹದ ರೋಗನಿರೋಧಕತೆಯನ್ನು ಕುಗ್ಗಿಸಿಬಿಟ್ಟಿರಬೇಕು. ಹೀಗಾಗಿ ಈ ಹುಳು ಎಗ್ಗಿಲ್ಲದೆ ಬೆಳೆದಿದೆ ಎಂದು ಭಾವಿಸಿ ಚಿಕಿತ್ಸೆ ನೀಡಿದರು. ಆದರೂ ತೊಂದರೆಗಳು ನಿಲ್ಲಲಿಲ್ಲ. ಮತ್ತೆ ಪರೀಕ್ಷೆ ನಡೆಸಿದಾಗ ದೇಹದ ಹಲವೆಡೆ, ಶ್ವಾಸಕೋಶ, ಸ್ನಾಯುಗಳು, ಕರುಳು ಮುಂತಾದೆಡೆ ಗಂಟುಗಳು ಇದ್ದುದು ಕಂಡು ಬಂತು. ಅದೇನೆಂದು ಪತ್ತೆ ಮಾಡುವಷ್ಟರಲ್ಲಿ ಮೂತ್ರಪಿಂಡ ಕೈಕೊಟ್ಟು ರೋಗಿ ಹರೋಹರ ಎಂದುಬಟ್ಟಿದ್ದ.

ಹೈಮೆನೊಲೆಪಿಸ್ ನಾನಾ ಕಣ್ಣಿಗೆ ತೋರುವುದು ಹೀಗೆ (ಚಿತ್ರ ಕೃಪೆ: ವೀಕಿಪೀಡಿಯ)

ಹೈಮೆನೊಲೆಪಿಸ್ ನಾನಾ ಕಣ್ಣಿಗೆ ತೋರುವುದು ಹೀಗೆ (ಚಿತ್ರ ಕೃಪೆ: ವೀಕಿಪೀಡಿಯ)

ಈ ಗಂಟುಗಳು ಏಕೆ ಬಂದುವು ಎನ್ನುವ ಕುತೂಹಲದಿಂದ ವೈದ್ಯರು ಅವನ ದೇಹದಲ್ಲಿದ್ದ ಗಂಟುಗಳನ್ನು ಕೊಯ್ದು ಅದರಲ್ಲಿದ್ದ ಜೀವಕೋಶಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು.  ಕುತೂಹಲ ಏಕೆಂದರೆ ಹೈಮೆನೊಲೆಪಿಸ್ ನಾನಾ ಹುಳು ಬೇರೆ ಹುಳುಗಳಂತೆ ಇತರೆ ಅಂಗಗಳಿಗೆ ವಲಸೆ ಹೋಗುವುದಿಲ್ಲ. ಏನಿದ್ದರೂ ಕರುಳಿನಲ್ಲಿಯೇ ಬೆಳೆದು, ಅಲ್ಲಿಯೇ ಮೊಟ್ಟೆಯಿಟ್ಟು, ಅಲ್ಲಿಯೇ ಮರಿ ಮಾಡಿ, ಅಲ್ಲಿಯೇ ಸಾಯುತ್ತದೆ. ಹಾಗಿದ್ದರೆ ಎಚ್ ಐ ವಿ ಸೋಂಕಿರುವವರಲ್ಲಿ ಇದು ಬೇರೆ ಅಂಗಗಳಿಗೆ ವಲಸೆ ಹೋಗುತ್ತಿರಬಹುದು ಎಂದು ಈ ಗಂಟುಗಳು ಸೂಚಿಸಿದ್ದವು.

ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾದ್ದೇ ಬೇರೆ. ದೇಹದ ವಿವಿಧ ಜಾಗಗಳಲ್ಲಿ ಇದ್ದ ಗಂಟುಗಳಲ್ಲಿ ದೊರೆತ ಎಲ್ಲ ಜೀವಕೋಶಗಳೂ ಒಂದೇ ರೀತಿ ಇದ್ದುವು. ಇದು ಕ್ಯಾನ್ಸರ್ ರೋಗದ ಲಕ್ಷಣ. ಕ್ಯಾನ್ಸರ್ ಕೋಶಗಳು ಮೆಟಾಸ್ಟಾಸಿಸ್ ಆಗಿ ಹರಡಿಕೊಂಡಾಗ ವಿಭಿನ್ನ ಅಂಗಗಳಲ್ಲಿದ್ದರೂ ಒಂದೇ ರೀತಿ ಇರುತ್ತವೆ. ಕ್ಯಾನ್ಸರ್ ಪತ್ತೆ ಮಾಡುವುದಕ್ಕೂ ಈ ಗುಣ ನೆರವಾಗುತ್ತದೆ.  ಗಂಟುಗಳಲ್ಲಿನ ಕೋಶಗಳೆಲ್ಲ ಒಂದೇ ರೀತಿ ಇದ್ದುದರಿಂದ ಇದು ಕ್ಯಾನ್ಸರ್ ಎನ್ನುವ ತೀರ್ಮಾನಕ್ಕೆ ವೈದ್ಯರು ಬಂದಿದ್ದರು.  ಆದರೆ ಯಾವ ಕ್ಯಾನ್ಸರ್ ? ದೇಹದ ಯಾವ ಕೋಶಗಳು ಕ್ಯಾನ್ಸರ್‍ ಆಗಿವೆ ಎಂದು ಪತ್ತೆ ಮಾಡಲು ಇನ್ನಷ್ಟು ಪರೀಕ್ಷೆ ಮಾಡಿದರು.  ವಿಚಿತ್ರವೆಂದರೆ ಈ ಯಾವ ಕೋಶಗಳಲ್ಲೂ ಮನುಷ್ಯನ ಜೀವಕೋಶಗಳಲ್ಲಿ ಕಾಣುವ ಪ್ರೊಟೀನುಗಳು ಇರಲಿಲ್ಲ. ಅಂದರೆ ಇವು ಹದ್ದು ಮೀರಿದ ಮನುಷ್ಯ ಕೋಶಗಳಲ್ಲ. ಇವುಗಳ ಮೂಲ ಬೇರೆಲ್ಲೋ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದರು. ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ  ಈ ಕೋಶಗಳು ಹೈಮೆನೋಲೆಪಿಸ್ ನಾನಾ ದ ಮೊಟ್ಟೆಗಳು ಎನ್ನುವುದು ಸ್ಪಷ್ಟವಾಯಿತು.

ಹೈಮೆನೊಲೆಪಿಸ್‍ನ ಪುಟ್ಟ ತಲೆಯ ನಿಕಟ ನೋಟ

ಹೈಮೆನೊಲೆಪಿಸ್‍ನ ಪುಟ್ಟ ತಲೆಯ ನಿಕಟ ನೋಟ

ಹೊಟ್ಟೆ ಸೋಂಕಿದ ಜಂತುಹುಳುಗಳ ಮೊಟ್ಟೆಗಳು ಮಿದುಳು, ಕಣ್ಣನ್ನು ಬಾಧಿಸುವುದು ಅಪರೂಪವಲ್ಲ. ರಿವರ್ ಬ್ಲೈಂಡ್ ನೆಸ್ ಎನ್ನುವ ಜಂತುಹುಳದ ಸೋಂಕು ಆಫ್ರಿಕಾದಲ್ಲಿ ಲಕ್ಷಾಂತರ ಮಕ್ಕಳನ್ನು ಕುರುಡಾಗಿಸುತ್ತದೆ. ಹೈಮೆನೋಲೆಪಿಸ್ ನಾನಾ ದ ಮೊಟ್ಟೆಗಳು ಹೀಗೆ ಬೇರೆ ಅಂಗಗಳಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಈ ರೋಗಿಯ ವೃತ್ತಾಂತ ವಿಚಿತ್ರವೆನ್ನಿಸಿದೆ. ಬಹುಶಃ ಎಚ್ ಐ ವಿ ಸೋಂಕಿನಿಂದಾಗಿ ಈತ ರೋಗಗಳನ್ನು ತಡೆಯಲಾರದವನಾಗಿದ್ದ. ಇಲ್ಲದಿದ್ದರೆ ಬೇರೆ ಯಾವುದೇ ಅಂಗಗಳಿಗೆ ಮೊಟ್ಟೆಗಳು ವಲಸೆ ಹೋಗಿದ್ದರೂ ಅವನ್ನು ದೇಹ ಹೊರ ತಳ್ಳಿಬಿಡುತ್ತಿತ್ತು. ಅಥವಾ ಕೊಂದು ಬಿಡುತ್ತಿತ್ತು. ‘ಈಗ  ಆ ಶಕ್ತಿ ಇಲ್ಲವಾದ್ದರಿಂದ  ಈತನ ಅಂಗ ಅಂಗಗಳಲ್ಲೂ ಮೊಟ್ಟೆಗಳು ನೆಲೆಸಿವೆ. ಮರಿಗಳಾಗಿ ಬೆಳೆಯದೆ ಜೀವಕೋಶಗಳಾಗಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆ. ಕ್ಯಾನ್ಸರ್ ಆಗಿದೆ’ ಎಂದು ಈ ಬಗ್ಗೆ ಪರಿಶೀಲನೆ ನಡೆಸಿದ ಅಟೀಸ್ ಮುಯಲೆಂಬಾಕ್ ಎಂಬ ವೈದ್ಯರ ನೇತೃತ್ವದ ತಂಡ ಊಹಿಸಿದೆ.

ಇದುವರೆವಿಗೂ ಕ್ಯಾನ್ಸರ್ ಉಂಟಾಗಲು ಜೀವಕೋಶಗಳಲ್ಲಿ ರಾಸಾಯನಿಕಗಳು, ವಿಷಗಳಿಂದಾಗುತ್ತಿದ್ದ ದೋಷಗಳು, ವೈರಸ್ ಸೋಂಕು ಕಾರಣವಿರಬಹುದು ಎಂಬುದು ತಿಳಿದಿತ್ತು. ಈಗ  ಈ ಕಾರಣಗಳ ಪಟ್ಟಿಗೆ ಜಂತುಹುಳುಗಳನ್ನೂ ಸೇರಿಸಬೇಕು. ಇವು ಕೇವಲ ಎಚ್ ಐ ವಿ. ಸೋಂಕಿರುವವರಲ್ಲಿ ಮಾತ್ರವೇ ಹೀಗೋ? ಅಥವಾ ಬೇರೆಯವರಲ್ಲೂ ಆಗಬಹುದೋ? ಬೇರೆಯವರಲ್ಲೂ ಆಗಬಹುದು ಎಂದರೆ ಹೈಮೆನೊಲೆಪಿಸ್ ನಾನಾ ಅಲ್ಲದೆ ಬೇರೆ ಜಂತುಹುಳುಗಳೂ ಹೀಗೆ ಮಾಡಬಹುದೇ? ಮುಂತಾದ ಪ್ರಶ್ನೆಗಳು ಎದ್ದಿವೆ. ಇದರ ಅರ್ಥ ಸ್ವಚ್ಛತೆ ಕಡಿಮೆ ಇರುವ ಎಲ್ಲೆಡೆಯೂ, ನಮ್ಮ ಭಾರತದಲ್ಲೂ, ಕ್ಯಾನ್ಸರ್ ಹೀಗುಂಟಾಗುವ ಸಾಧ್ಯತೆ ಇರಬಹುದು ಅಲ್ಲವೇ?

Published in: on ನವೆಂಬರ್ 6, 2015 at 6:56 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ವೀರ್ಯಾಣುವಿಲ್ಲದೆ ಸಂತಾನಾಭಿವೃದ್ಧಿ – ರೋಸಿ ತಂತ್ರ

ವೈದ್ಯ ಜಗತ್ತಿನಲ್ಲಿ ವಿಚಿತ್ರಗಳಿಗೆ ಮೊದಲಿಲ್ಲ, ಕೊನೆಯಿಲ್ಲ. ದಿನಕ್ಕೊಂದು ಹೊಸ ಸುದ್ದಿ. ಹೊಸ ಕೌತುಕವನ್ನು ಹೊತ್ತು ತರುತ್ತದೆ. ನಿನ್ನೆ ಬಂದ ಸುದ್ದಿ. ಮಕ್ಕಳಾಗಲು ವೀರ್ಯಾಣುವೇ ಬೇಕಿಲ್ಲ. ವೀರ್ಯಾಣುವಿನ ಮೂಲವಾದ ಜೀವಕೋಶವಿದ್ದರೆ ಸಾಕು. ಜಪಾನಿನ ಫುಕುವೋಕಾದಲ್ಲಿರುವ ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರ ( ಇನ್ಸ್ ಟಿಟ್ಯೂಟ್ ಫಾರ್ ಎ.ಆರ್.ಟಿ.) ಯ ವೈದ್ಯ ರಿಯುಜೊ ಯಮಗಿನಾಚಿ ಮತ್ತು ಸಂಗಡಿಗರು ಹೀಗೊಂದು ತಂತ್ರವನ್ನು ರೂಪಿಸಿದ್ದಾರೆ ಎಂದು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆ ವರದಿ ಮಾಡಿದೆ.

ವೀರ್ಯಾಣುವಿನ ಮೂಲಕೋಶ ಎಂದರೆ? ತಾಳಿ ಈ ಪ್ರಶ್ನೆಗೆ ಉತ್ತರ ತಿಳಿಯುವುದಕ್ಕೆ ಮುನ್ನ ಮನುಷ್ಯನಲ್ಲಿ ಸಂತಾನೋತ್ಪತ್ತಿ ಹೇಗಾಗುತ್ತದೆ ಅನ್ನೋದು ಗೊತ್ತಿದೆಯಲ್ಲ. ಮದುವೆಯಾದರೆ ಸಂತಾನವಾಗದು. ಹೆಣ್ಣು, ಗಂಡು ಕೂಡಿಬಿಟ್ಟರೂ ಸಂತಾನವಾಗದು. ಹೆಣ್ಣಿನಲ್ಲಿ ತಿಂಗಳಿಗೊಮ್ಮೆ ಜನಿಸುವ ಅಂಡದ ಜೊತೆಗೆ ಗಂಡಿನ ವೀರ್ಯದಲ್ಲಿರುವ ವೀರ್ಯಾಣುಗಳು ಕೂಡಬೇಕು. ಇದನ್ನು ಅಂಡಗಳ ಫಲಿಸುವಿಕೆ ಎಂದು ವಿಜ್ಞಾನಿಗಳು ಗುರುತಿಸುತ್ತಾರೆ. ಹೆಣ್ಣಿನ ದೇಹದೊಳಗೆ ಎಲ್ಲೋ ಅವಿತುಕೊಂಡಿರುವ ಅಂಡಾಣುವನ್ನು ಗಂಡಿನ ವೀರ್ಯಾಣು ಓಡಾಡಿ ಹುಡುಕಿ ಫಲಿತಗೊಳಿಸುತ್ತದೆ. ಅಂದ ಮೇಲೆ ವೀರ್ಯಾಣುವಿಗೆ ಓಡಾಡುವ, ಚಲನೆಯ ಶಕ್ತಿ ಬೇಕೇ ಬೇಕಲ್ಲವೇ?

ಇದು ಇದುವರೆಗಿನ ವಿಶ್ವಾಸವಾಗಿತ್ತು. ಇದಕ್ಕೆ ಕಾರಣವಿಲ್ಲದೆಯೂ ಇಲ್ಲ. ಗಂಡಿನ ವೀರ್ಯವನ್ನು ಸೂಕ್ಷ್ಮದರ್ಶಕದಡಿಯಲ್ಲಿ ಇಟ್ಟು ಹಣಿಕಿದರೆ ಬಾಲವಿರುವ, ಚಡಪಡಿಸುತ್ತ ಮುಲುಗುವ ಲಕ್ಷಾಂತರ ವೀರ್ಯಾಣುಗಳು ಕಾಣಿಸುತ್ತವೆ. ಇವು ವೀರ್ಯೋತ್ಪತ್ತಿಯ ಕ್ರಿಯೆಯಲ್ಲಿ ಅಂತಿಮ ಘಟ್ಟ. ಅಂಡಾಣುವನ್ನು ಹುಡುಕುವುದಕ್ಕೆ ಇವಕ್ಕೆ ಬಾಲವುಂಟು, ಅಂಡಾಣುವಿನೊಳಗೆ ಕೊರೆದು ನುಸುಳುವುದಕ್ಕೆ ಮೂತಿಯಲ್ಲಿ ವಿಶೇಷ ಪ್ರೊಟೀನುಗಳೂ ಉಂಟು. ಯಾವುದೇ ಕಾರಣಕ್ಕೆ ಇವೆರಡೂ ಇಲ್ಲವೆಂದರೆ ಅಂಡಾಣುವಿನ ಸಮೀಪ ಸಾಗುವುದಕ್ಕೂ, ಅದನ್ನು ಕೂಡುವುದಕ್ಕೂ ಕಷ್ಟವಷ್ಟೆ!

ಎಷ್ಟೋ ಗಂಡಸರಲ್ಲಿ ಇಂತಹ ದೋಷವಿರುವ ವೀರ್ಯ  ಇರಬಹುದು. ಒಂದೋ ಬೇಕಾದಷ್ಟು ವೀರ್ಯಾಣು ಇಲ್ಲದಿರಬಹುದು. ಇದ್ದರೂ ಓಡಾಡುವಷ್ಟು ಸಾಮತ್ಥ್ಯವಿಲ್ಲದ, ಬಾಲವಿಲ್ಲದ ವೀರ್ಯಾಣುಗಳಿರಬಹುದು. ಒಟ್ಟಾರೆ ಈ ಗಂಡಸರ ವೀರ್ಯ ಸಹಜವಾಗಿ ಅಂಡಾಣುವನ್ನು ಫಲಿತಗೊಳಿಸಲು ಅಶಕ್ತರು. ಇಂತಹ ಗಂಡಸರಿಗೂ ಪುತ್ರ ಅಥವಾ ಪುತ್ರಿಭಾಗ್ಯ ನೀಡುವುದು ಹೇಗೆ ಎನ್ನುವುದೇ ಯಮಗಿನಾಚಿ ತಂಡದ ಕಾಳಜಿ.

ವೀರ್ಯಾಣುವಾಗುವುದಕ್ಕೂ ಮೊದಲಿನ ಸ್ಥಿತಿಯಲ್ಲಿರುವ ಮಾನವನ ವೀರ್ಯಜನಕ ಕೋಶಗಳು. ಹಳದಿ ಬಾಣಗಳು ಸ್ಪರ್ಮಾಟಿಡ್‍ಗಳನ್ನು ಗುರುತಿಸಿವೆ

ವೀರ್ಯಾಣುವಾಗುವುದಕ್ಕೂ ಮೊದಲಿನ ಸ್ಥಿತಿಯಲ್ಲಿರುವ ಮಾನವನ ವೀರ್ಯಜನಕ ಕೋಶಗಳು. ಹಳದಿ ಬಾಣಗಳು ಸ್ಪರ್ಮಾಟಿಡ್‍ಗಳನ್ನು ಗುರುತಿಸಿವೆ

ಇದಕ್ಕೆ ಇವರು ಮಾಡಿದ್ದು ಇಷ್ಟೆ. ಗಂಡಿನಲ್ಲಿ ವೀರ್ಯವನ್ನು ಹುಟ್ಟಿಸುವ ವೀರ್ಯಜನಕಾಂಗದಿಂದ ಕೋಶಗಳನ್ನು ತೆಗೆದು ಅಂಡಾಣುವಿನೊಳಗೇ ಚುಚ್ಚಿದರು. ವೀರ್ಯ ಹುಟ್ಟುವ ಹಾದಿಯಲ್ಲಿ ಹಲವು ಹಂತಗಳಿವೆ. ಒಂದು ಕೋಶ ಮತ್ತೊಂದಕ್ಕೆ ಎನ್ನುವಂತೆ ಕನಿಷ್ಟ ನಾಲ್ಕು ಬಗೆಯ ಕೋಶಗಳು ಹುಟ್ಟುತ್ತವೆ. ಈ ಸಾಲಿನಲ್ಲಿ ಕೊನೆಯದಾಗಿ ಹುಟ್ಟುವುದೇ ಸ್ಪರ್ಮಾಟಿಡ್. ಇದನ್ನು ವೀರ್ಯಾಣು-ಜನಕ ಎನ್ನೋಣ.  ಈ ಸ್ಪರ್ಮಾಟಿಡ್ ಗೆ ಬಾಲವಿಲ್ಲ. ತನ್ನಲ್ಲಿರುವ ಕೋಶರಸವನ್ನೆಲ್ಲ ಕಳೆದುಕೊಂಡು, ಅತಿ ಮುಖ್ಯವಾದ ಕೋಶಕೇಂದ್ರ (ನ್ಯೂಕ್ಲಿಯಸ್) ವನ್ನಷ್ಟೆ ಉಳಿಸಿಕೊಂಡು, ಅದಕ್ಕೇ ಬಾಲವನ್ನು ಬೆಳೆಸಿಕೊಂಡು ಇದು ವೀರ್ಯಾಣುವಾಗುತ್ತದೆ. ಈ ಸ್ಪರ್ಮಾಟಿಡ್ ಅನ್ನೇ ನೇರವಾಗಿ ಅಂಡಾಣುವಿಗೆ ಚುಚ್ಚಿದ್ದಾರೆ ಯಮಗಿನಾಚಿ.  ಇದನ್ನು ರೋಸಿ (ಆರ್.ಓ.ಎಸ್.ಐ) ತಂತ್ರ ಎಂದು ಇವರು ಹೆಸರಿಸಿದ್ದಾರೆ.

ರೋಸಿ ತಂತ್ರ ಬಳಸಿ ಸ್ಪರ್ಮಾಟಿಡ್‍ ಅನ್ನು ಅಂಡದೊಳಗೆ ಚುಚ್ಚುತ್ತಿರುವುದು

ರೋಸಿ ತಂತ್ರ ಬಳಸಿ ಸ್ಪರ್ಮಾಟಿಡ್‍ ಅನ್ನು ಅಂಡದೊಳಗೆ ಚುಚ್ಚುತ್ತಿರುವುದು

ಆದರೆ ಇದು ಸುಲಭವಲ್ಲ. ಏಕೆಂದರೆ ವೀರ್ಯಾಣುವಿನ ಮೂತಿಯಲ್ಲಿರುವ ಪ್ರೊಟೀನು ಕಾಣದಿದ್ದರೆ ಅಂಡಾಣು ಅದನ್ನು ಮೂಸುವುದೂ ಇಲ್ಲ. ಅದಕ್ಕೆ ಅಂಡಾಣುವಿಗೆ ನಯವಾಗಿ ವಿದ್ಯುತ್ ಷಾಕ್ ನೀಡಿ ಅದನ್ನು ಒಪ್ಪಿಸಿದರು. ಹೀಗೆ ಸಿದ್ಧವಾದ ಅಂಡಾಣುವಿಗೆ ಗಂಡಿನ ಸ್ಪರ್ಮಾಟಿಡ್ ಗಳನ್ನು ಚುಚ್ಚಿದರು. ಈ ರೀತಿಯಲ್ಲಿ ಕೃತಕವಾಗಿ ಫಲಿತಗೊಳಿಸಿದ ಅಂಡಗಳನ್ನು ತಾಯ ಗರ್ಭಾಶಯದೊಳಗೆ ಇಟ್ಟರು. ಹೀಗೆ ಇವರು ಗರ್ಭಭಾಗ್ಯ ನೀಡಿದ ಹದಿನಾಲ್ಕು ಮಕ್ಕಳೂ ಈಗ ದೈಹಿಕವಾಗಿ, ಮಾನಸಿಕವಾಗಿ ಯಾವುದೇ ತೊಂದರೆ ಇಲ್ಲದೆ ಬೆಳೆದಿದ್ದಾರಂತೆ.

ಇದುವರೆವಿಗೂ ಸ್ಪರ್ಮಾಟಿಡ್ ಬಳಸಿ ಕೃತಕ ಗರ್ಭಧಾರಣೆಯ ಮೂಲಕ ಪ್ರನಾಳಶಿಶುಗಳನ್ನು ಪಡೆದವರಿರಲಿಲ್ಲ. ಈ ಹದಿನಾಲ್ಕು ಮಂದಿಗೆ ಆ ಹೆಗ್ಗಳಿಕೆಯನ್ನು ಯಮಗಿನಾಚಿ ತಂಡ ದೊರಕಿಸಿದೆ ಎನ್ನೋಣವೇ!

Published in: on ನವೆಂಬರ್ 4, 2015 at 6:48 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕಲೆಯೋ, ಹವ್ಯಾಸವೋ, ಸಂಶೋಧನೆಯೋ, ಶಿಕ್ಷಣವೋ – ಏನು ಹೇಳಲಿ ಇದನು?

ವಿನ್ಸೆಂಜೋ ವೈಟೆಲ್ಲಿಗೆ ಕನ್ನಡ ಬರುತ್ತಿದ್ದಿದ್ದರೆ ಬಹುಶಃ ಹೀಗೆ ಹೇಳುತ್ತಿದ್ದನೋ ಏನೋ. ಈತ ನೆದರ್ ಲ್ಯಾಂಡ್ ನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ತಾತ್ವಿಕ ಫಿಸಿಕ್ಸ್ ಸಂಶೋಧಕ. ಕಣ್ಣಿಗೆ ಕಾಣದ, ಅನುಭವಗಳಿಗೆ ದೊರಕದ ಅಮೂರ್ತ ಕಲ್ಪನೆಗಳ ಕ್ಷೇತ್ರ ಇದು. ಥಿಯರೆಟಿಕಲ್ ಫಿಸಿಕ್ಸ್ ಎನ್ನುತ್ತಾರೆ. ಬಹಳಷ್ಟು ಗಣಿತ, ಒಂದಿಷ್ಟು ಚಿತ್ರಣ ಇವುಗಳಿಂದ  ಈ ಪ್ರಪಂಚದ ಭೌತಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಕ್ಷೇತ್ರ ಇದು. ವೈಟೆಲ್ಲಿಗೆ ಇದು ಆಟದ ಮನೆಯಂತೆ. ಈತನ ಪ್ರಯೋಗಶಾಲೆ ಮಕ್ಕಳ ಆಟದ ಮನೆಯಂತೆಯೇ ಇದೆ ಎನ್ನುತ್ತದೆ ಈ ಬಗ್ಗೆ ವರದಿ ಮಾಡಿರುವ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆ. ಈ ಚಿತ್ರ ನೋಡಿದರೆ ಪತ್ರಿಕೆಯ ಮಾತು ಅಕ್ಷರಶಃ ನಿಜ ಅನಿಸುತ್ತದೆ.

ವೈಟೆಲಿ ಮತ್ತು ಅವರ ಆಟಿಕೆಗಳು

                                                                ವೈಟೆಲಿ ಮತ್ತು ಅವರ ಆಟಿಕೆಗಳು

ಆದರೆ ವೈಟೆಲ್ಲಿ ಹೇಳುವುದೇ ಬೇರೆ! ಇದು ಸಂಶೋಧನೆ ಎನ್ನುತ್ತಾನೆ ಈತ. ಮಕ್ಕಳ ಆಟಿಕೆ ಲೀಗೋವನ್ನು ಬಳಸಿ ಈತ ಭೌತವಿಜ್ಞಾನದ ಸಂಕೀರ್ಣ ಕಲ್ಪನೆಗಳನ್ನು ಮೂರ್ತಗೊಳಿಸುತ್ತಾನಂತೆ. ಥಿಯರೆಟಿಕಲ್ ಫಿಸಿಕ್ಸ್ ನಲ್ಲಿ ವಿವಿಧ ವಸ್ತು, ಬಲ ಹಾಗೂ ಅಣುಗಳ ಸಂಬಂಧ, ಒಡನಾಟಗಳನ್ನು ಗಣಿತ ಸೂತ್ರಗಳ ಮೂಲಕ ವಿವರಿಸುವುದು ವಾಡಿಕೆ. ಐನ್ ಸ್ಟೀನ್ ಬರೆದ E=mc2 ನಮಗೆ ಮೂರಕ್ಷರಗಳಾಗಿ ಕಾಣಬಹುದು. ಆದರೆ ಭೌತವಿಜ್ಞಾನಿಗಳಿಗೆ ಇದು ವಸ್ತು ಮತ್ತು ಶಕ್ತಿಯ ನಡುವಣ ಸಂಬಂಧದ ವಿವರಣೆ. ಹೀಗೇ ಅಣುಗಳ ಸ್ತರದಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನೂ ಗಣಿತ ರೂಪದಲ್ಲಿ ಥಿಯರೆಟಿಕಲ್ ಫಿಸಿಕ್ಸ್ ಕಲ್ಪಿಸಿಬಿಡುತ್ತದೆ. ಈ ಕಲ್ಪನೆ ನಿಜವೋ ಅಲ್ಲವೋ ಎನ್ನುವುದನ್ನು ಅನಂತರ ಪ್ರಯೋಗ, ಪರೀಕ್ಷೆಗಳ ಮೂಲಕ ತಿಳಿಯಲು ಉಳಿದವರು ಹೆಣಗಾಡಬೇಕು. ಕೆಲವೊಮ್ಮೆ ಈ ಪರಿಕಲ್ಪನೆಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ.

ವೈಟೆಲ್ಲಿ ಯ ಸಂಶೋಧನೆಯೂ ಇಂತಹ ವಿಷಯಗಳನ್ನು ಕುರಿತೇ ಇದೆಯಂತೆ. ಅಣುಗಳು ಹರಳುಗಳಾಗಿ ಜೋಡಣೆಯಾದಾಗ ವಿವಿಧ ಅಣುಗಳ ಚಲನೆ ಹೇಗಿರಬಹುದು ಎನ್ನುವ ಕೌತುಕಮಯ ಸಂಶೋಧನೆ. ಇದನ್ನು ಮೊದಲು ಗಣಿತ ರೂಪದಲ್ಲಿ ಸೂತ್ರಗಳಾಗಿ ವಿವರಿಸಿ ಅನಂತರ ಗಣಕಯಂತ್ರಗಳಲ್ಲಿ ಚಿತ್ರೀಕರಿಸಲು ಪ್ರಯತ್ನಿಸುವುದು ಮಾಮೂಲು. ಆದರೆ ಈ ಗಂಭೀರ ವಿಷಯವನ್ನು ವೈಟೆಲ್ಲಿ ಆಟವನ್ನಾಗಿಸಿ ಬಿಟ್ಟಿದ್ದಾರೆ. ಲೀಗೋ ಆಟಿಕೆಯಲ್ಲಿನ ವಿವಿಧ ಆಕಾರದ ಗಾಲಿಗಳು, ಇಟ್ಟಿಗೆಗಳು ಹಾಗೂ ಕಂಬಿಗಳನ್ನು ಬಳಸಿ ಅಣುರಚನೆಯ ಮೂರು ಆಯಾಮದ ಶಿಲ್ಪವನ್ನು ಇವರು ರಚಿಸುತ್ತಾರೆ.

ವೈಟೆಲಿಯವರ ಆಟಿಕೆ ಹಾಗೂ ಅದು ಪ್ರತಿನಿಧಿಸುವ ಅಣು ಸಂಬಂಧಗಳು

                               ವೈಟೆಲಿಯವರ ಆಟಿಕೆ ಹಾಗೂ ಅದು ಪ್ರತಿನಿಧಿಸುವ ಅಣು ಸಂಬಂಧಗಳು

ಮೇಲಿಂದ ನೋಡಲು ಪೊಳ್ಳಾಗಿ ಕಾಣುವ ಕೆಲವು ರಚನೆಗಳನ್ನು ಸುತ್ತಿಗೆ ಹಿಡಿದು ಬಡಿದರೂ ಅಲ್ಲಾಡುವುದಿಲ್ಲವಂತೆ. ಹಾಗೆಯೇ ಇನ್ನು ಕೆಲವು ರಚನೆಗಳು ಉಫ್ ಎಂದು ಊದಿದರೆ ಸಾಕು, ಗಂಟೆಗಟ್ಟಲೆ ಲಯಬದ್ಧವಾಗಿ ಅಲೆಯಲೆಯಾಗಿ ಚಲಿಸುತ್ತವೆ. ಇವೆಲ್ಲವೂ ಅಣುಗಳ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳ ಚಿತ್ರಣ. ತಾವು ಕಲ್ಪಿಸಿಕೊಂಡದ್ದನ್ನು ಇತರರಿಗೆ ತಿಳಿಸುವುದಕ್ಕೆ, ಮುಖ್ಯವಾಗಿ ಈ ವಿದ್ಯಮಾನಗಳನ್ನು ಬಳಸಿ ಹೊಸ ಸಾಧನಗಳನ್ನು ರೂಪಿಸುವ  ತಂತ್ರಜ್ಞರಿಗೆ ತಿಳಿಸುವುದು ಬಲು ಸುಲಭ ಎನ್ನುತ್ತಾರೆ ವೈಟೆಲಿ. ಇದೋ ಅವರ ಕುಶಲತೆಯ ಒಂದು ಚಿತ್ರಣ ಈ ವೀಡಿಯೋದಲ್ಲಿದೆ.

ನಿಜ. ವಿಜ್ಞಾನ ಕಬ್ಬಿಣದ ಕಡಲೆ ಅನ್ನಿಸುವುದಕ್ಕೆ ಕಾರಣ ಅದರ ಪರಿಕಲ್ಪನೆಗಳನ್ನು ನಾವು ಊಹಿಸುವುದಾಗಲಿ, ನಿತ್ಯ ಜೀವನದಲ್ಲಿ ಅನುಭವಿಸುವುದಾಗಲಿ ಕಷ್ಟ. ನಮ್ಮ ಸಂವೇದನೆಗಳಿಗೆ ಬಾರದ ಇವನ್ನು ನಮ್ಮ ಗ್ರಹಿಕೆಯ ಪರಿಧಿಯೊಳಗೆ ತರುವ ವೈಟೆಲಿಯ ಪ್ರಯತ್ನ ಖಂಡಿತ ಗಂಭೀರ ಶಿಕ್ಷಣ. ಆಟಿಕೆಗಳನ್ನು ಬಳಸಿದರೂ ಆಟವಲ್ಲ. ಅಮೂರ್ತ ಕಲ್ಪನೆಗಳು ಆಧಾರವಾದರೂ ಬರಡು ಸಂಶೋಧನೆಯಲ್ಲ. ತಿಳುವಳಿಕೆ ನೀಡುವುದಾದರೂ ಶಿಕ್ಷಣವಲ್ಲ. ಇದನ್ನು ಏನೆನ್ನೋಣ? ನೀವೇ ಹೇಳಿ.

Published in: on ನವೆಂಬರ್ 3, 2015 at 6:15 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೋಳು ತಲೆಯವರಿಗೆ ರೋಮಾಂಚನ

 ಆಕರ: Sivan Harel, Claire A. Higgins, Jane E. Cerise, Zhenpeng Dai, James C. Chen, Raphael Clynes and Angela M. Christiano, Pharmacologic inhibition of JAK-STAT signaling promoteshair growth, Sci Adv 2015, 1:(October 23, 2015), doi: 10.1126/sciadv.1500973

ಆಕರ: Sivan Harel, Claire A. Higgins, Jane E. Cerise, Zhenpeng Dai, James C. Chen, Raphael Clynes and Angela M. Christiano, Pharmacologic inhibition of JAK-STAT signaling promoteshair growth, Sci Adv 2015, 1:(October 23, 2015), doi: 10.1126/sciadv.1500973

Published in: on ನವೆಂಬರ್ 2, 2015 at 6:27 ಫೂರ್ವಾಹ್ನ  Comments (2)