ವಿನ್ಸೆಂಜೋ ವೈಟೆಲ್ಲಿಗೆ ಕನ್ನಡ ಬರುತ್ತಿದ್ದಿದ್ದರೆ ಬಹುಶಃ ಹೀಗೆ ಹೇಳುತ್ತಿದ್ದನೋ ಏನೋ. ಈತ ನೆದರ್ ಲ್ಯಾಂಡ್ ನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ತಾತ್ವಿಕ ಫಿಸಿಕ್ಸ್ ಸಂಶೋಧಕ. ಕಣ್ಣಿಗೆ ಕಾಣದ, ಅನುಭವಗಳಿಗೆ ದೊರಕದ ಅಮೂರ್ತ ಕಲ್ಪನೆಗಳ ಕ್ಷೇತ್ರ ಇದು. ಥಿಯರೆಟಿಕಲ್ ಫಿಸಿಕ್ಸ್ ಎನ್ನುತ್ತಾರೆ. ಬಹಳಷ್ಟು ಗಣಿತ, ಒಂದಿಷ್ಟು ಚಿತ್ರಣ ಇವುಗಳಿಂದ ಈ ಪ್ರಪಂಚದ ಭೌತಿಕ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವ ಕ್ಷೇತ್ರ ಇದು. ವೈಟೆಲ್ಲಿಗೆ ಇದು ಆಟದ ಮನೆಯಂತೆ. ಈತನ ಪ್ರಯೋಗಶಾಲೆ ಮಕ್ಕಳ ಆಟದ ಮನೆಯಂತೆಯೇ ಇದೆ ಎನ್ನುತ್ತದೆ ಈ ಬಗ್ಗೆ ವರದಿ ಮಾಡಿರುವ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆ. ಈ ಚಿತ್ರ ನೋಡಿದರೆ ಪತ್ರಿಕೆಯ ಮಾತು ಅಕ್ಷರಶಃ ನಿಜ ಅನಿಸುತ್ತದೆ.
ಆದರೆ ವೈಟೆಲ್ಲಿ ಹೇಳುವುದೇ ಬೇರೆ! ಇದು ಸಂಶೋಧನೆ ಎನ್ನುತ್ತಾನೆ ಈತ. ಮಕ್ಕಳ ಆಟಿಕೆ ಲೀಗೋವನ್ನು ಬಳಸಿ ಈತ ಭೌತವಿಜ್ಞಾನದ ಸಂಕೀರ್ಣ ಕಲ್ಪನೆಗಳನ್ನು ಮೂರ್ತಗೊಳಿಸುತ್ತಾನಂತೆ. ಥಿಯರೆಟಿಕಲ್ ಫಿಸಿಕ್ಸ್ ನಲ್ಲಿ ವಿವಿಧ ವಸ್ತು, ಬಲ ಹಾಗೂ ಅಣುಗಳ ಸಂಬಂಧ, ಒಡನಾಟಗಳನ್ನು ಗಣಿತ ಸೂತ್ರಗಳ ಮೂಲಕ ವಿವರಿಸುವುದು ವಾಡಿಕೆ. ಐನ್ ಸ್ಟೀನ್ ಬರೆದ E=mc2 ನಮಗೆ ಮೂರಕ್ಷರಗಳಾಗಿ ಕಾಣಬಹುದು. ಆದರೆ ಭೌತವಿಜ್ಞಾನಿಗಳಿಗೆ ಇದು ವಸ್ತು ಮತ್ತು ಶಕ್ತಿಯ ನಡುವಣ ಸಂಬಂಧದ ವಿವರಣೆ. ಹೀಗೇ ಅಣುಗಳ ಸ್ತರದಲ್ಲಿ ನಡೆಯುವ ಎಲ್ಲ ಕ್ರಿಯೆಗಳನ್ನೂ ಗಣಿತ ರೂಪದಲ್ಲಿ ಥಿಯರೆಟಿಕಲ್ ಫಿಸಿಕ್ಸ್ ಕಲ್ಪಿಸಿಬಿಡುತ್ತದೆ. ಈ ಕಲ್ಪನೆ ನಿಜವೋ ಅಲ್ಲವೋ ಎನ್ನುವುದನ್ನು ಅನಂತರ ಪ್ರಯೋಗ, ಪರೀಕ್ಷೆಗಳ ಮೂಲಕ ತಿಳಿಯಲು ಉಳಿದವರು ಹೆಣಗಾಡಬೇಕು. ಕೆಲವೊಮ್ಮೆ ಈ ಪರಿಕಲ್ಪನೆಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗುತ್ತದೆ.
ವೈಟೆಲ್ಲಿ ಯ ಸಂಶೋಧನೆಯೂ ಇಂತಹ ವಿಷಯಗಳನ್ನು ಕುರಿತೇ ಇದೆಯಂತೆ. ಅಣುಗಳು ಹರಳುಗಳಾಗಿ ಜೋಡಣೆಯಾದಾಗ ವಿವಿಧ ಅಣುಗಳ ಚಲನೆ ಹೇಗಿರಬಹುದು ಎನ್ನುವ ಕೌತುಕಮಯ ಸಂಶೋಧನೆ. ಇದನ್ನು ಮೊದಲು ಗಣಿತ ರೂಪದಲ್ಲಿ ಸೂತ್ರಗಳಾಗಿ ವಿವರಿಸಿ ಅನಂತರ ಗಣಕಯಂತ್ರಗಳಲ್ಲಿ ಚಿತ್ರೀಕರಿಸಲು ಪ್ರಯತ್ನಿಸುವುದು ಮಾಮೂಲು. ಆದರೆ ಈ ಗಂಭೀರ ವಿಷಯವನ್ನು ವೈಟೆಲ್ಲಿ ಆಟವನ್ನಾಗಿಸಿ ಬಿಟ್ಟಿದ್ದಾರೆ. ಲೀಗೋ ಆಟಿಕೆಯಲ್ಲಿನ ವಿವಿಧ ಆಕಾರದ ಗಾಲಿಗಳು, ಇಟ್ಟಿಗೆಗಳು ಹಾಗೂ ಕಂಬಿಗಳನ್ನು ಬಳಸಿ ಅಣುರಚನೆಯ ಮೂರು ಆಯಾಮದ ಶಿಲ್ಪವನ್ನು ಇವರು ರಚಿಸುತ್ತಾರೆ.
ಮೇಲಿಂದ ನೋಡಲು ಪೊಳ್ಳಾಗಿ ಕಾಣುವ ಕೆಲವು ರಚನೆಗಳನ್ನು ಸುತ್ತಿಗೆ ಹಿಡಿದು ಬಡಿದರೂ ಅಲ್ಲಾಡುವುದಿಲ್ಲವಂತೆ. ಹಾಗೆಯೇ ಇನ್ನು ಕೆಲವು ರಚನೆಗಳು ಉಫ್ ಎಂದು ಊದಿದರೆ ಸಾಕು, ಗಂಟೆಗಟ್ಟಲೆ ಲಯಬದ್ಧವಾಗಿ ಅಲೆಯಲೆಯಾಗಿ ಚಲಿಸುತ್ತವೆ. ಇವೆಲ್ಲವೂ ಅಣುಗಳ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳ ಚಿತ್ರಣ. ತಾವು ಕಲ್ಪಿಸಿಕೊಂಡದ್ದನ್ನು ಇತರರಿಗೆ ತಿಳಿಸುವುದಕ್ಕೆ, ಮುಖ್ಯವಾಗಿ ಈ ವಿದ್ಯಮಾನಗಳನ್ನು ಬಳಸಿ ಹೊಸ ಸಾಧನಗಳನ್ನು ರೂಪಿಸುವ ತಂತ್ರಜ್ಞರಿಗೆ ತಿಳಿಸುವುದು ಬಲು ಸುಲಭ ಎನ್ನುತ್ತಾರೆ ವೈಟೆಲಿ. ಇದೋ ಅವರ ಕುಶಲತೆಯ ಒಂದು ಚಿತ್ರಣ ಈ ವೀಡಿಯೋದಲ್ಲಿದೆ.
ನಿಜ. ವಿಜ್ಞಾನ ಕಬ್ಬಿಣದ ಕಡಲೆ ಅನ್ನಿಸುವುದಕ್ಕೆ ಕಾರಣ ಅದರ ಪರಿಕಲ್ಪನೆಗಳನ್ನು ನಾವು ಊಹಿಸುವುದಾಗಲಿ, ನಿತ್ಯ ಜೀವನದಲ್ಲಿ ಅನುಭವಿಸುವುದಾಗಲಿ ಕಷ್ಟ. ನಮ್ಮ ಸಂವೇದನೆಗಳಿಗೆ ಬಾರದ ಇವನ್ನು ನಮ್ಮ ಗ್ರಹಿಕೆಯ ಪರಿಧಿಯೊಳಗೆ ತರುವ ವೈಟೆಲಿಯ ಪ್ರಯತ್ನ ಖಂಡಿತ ಗಂಭೀರ ಶಿಕ್ಷಣ. ಆಟಿಕೆಗಳನ್ನು ಬಳಸಿದರೂ ಆಟವಲ್ಲ. ಅಮೂರ್ತ ಕಲ್ಪನೆಗಳು ಆಧಾರವಾದರೂ ಬರಡು ಸಂಶೋಧನೆಯಲ್ಲ. ತಿಳುವಳಿಕೆ ನೀಡುವುದಾದರೂ ಶಿಕ್ಷಣವಲ್ಲ. ಇದನ್ನು ಏನೆನ್ನೋಣ? ನೀವೇ ಹೇಳಿ.
ನಿಮ್ಮದೊಂದು ಉತ್ತರ