ವೈದ್ಯ ಜಗತ್ತಿನಲ್ಲಿ ವಿಚಿತ್ರಗಳಿಗೆ ಮೊದಲಿಲ್ಲ, ಕೊನೆಯಿಲ್ಲ. ದಿನಕ್ಕೊಂದು ಹೊಸ ಸುದ್ದಿ. ಹೊಸ ಕೌತುಕವನ್ನು ಹೊತ್ತು ತರುತ್ತದೆ. ನಿನ್ನೆ ಬಂದ ಸುದ್ದಿ. ಮಕ್ಕಳಾಗಲು ವೀರ್ಯಾಣುವೇ ಬೇಕಿಲ್ಲ. ವೀರ್ಯಾಣುವಿನ ಮೂಲವಾದ ಜೀವಕೋಶವಿದ್ದರೆ ಸಾಕು. ಜಪಾನಿನ ಫುಕುವೋಕಾದಲ್ಲಿರುವ ಕೃತಕ ಸಂತಾನೋತ್ಪತ್ತಿ ತಂತ್ರಜ್ಞಾನ ಕೇಂದ್ರ ( ಇನ್ಸ್ ಟಿಟ್ಯೂಟ್ ಫಾರ್ ಎ.ಆರ್.ಟಿ.) ಯ ವೈದ್ಯ ರಿಯುಜೊ ಯಮಗಿನಾಚಿ ಮತ್ತು ಸಂಗಡಿಗರು ಹೀಗೊಂದು ತಂತ್ರವನ್ನು ರೂಪಿಸಿದ್ದಾರೆ ಎಂದು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆ ವರದಿ ಮಾಡಿದೆ.
ವೀರ್ಯಾಣುವಿನ ಮೂಲಕೋಶ ಎಂದರೆ? ತಾಳಿ ಈ ಪ್ರಶ್ನೆಗೆ ಉತ್ತರ ತಿಳಿಯುವುದಕ್ಕೆ ಮುನ್ನ ಮನುಷ್ಯನಲ್ಲಿ ಸಂತಾನೋತ್ಪತ್ತಿ ಹೇಗಾಗುತ್ತದೆ ಅನ್ನೋದು ಗೊತ್ತಿದೆಯಲ್ಲ. ಮದುವೆಯಾದರೆ ಸಂತಾನವಾಗದು. ಹೆಣ್ಣು, ಗಂಡು ಕೂಡಿಬಿಟ್ಟರೂ ಸಂತಾನವಾಗದು. ಹೆಣ್ಣಿನಲ್ಲಿ ತಿಂಗಳಿಗೊಮ್ಮೆ ಜನಿಸುವ ಅಂಡದ ಜೊತೆಗೆ ಗಂಡಿನ ವೀರ್ಯದಲ್ಲಿರುವ ವೀರ್ಯಾಣುಗಳು ಕೂಡಬೇಕು. ಇದನ್ನು ಅಂಡಗಳ ಫಲಿಸುವಿಕೆ ಎಂದು ವಿಜ್ಞಾನಿಗಳು ಗುರುತಿಸುತ್ತಾರೆ. ಹೆಣ್ಣಿನ ದೇಹದೊಳಗೆ ಎಲ್ಲೋ ಅವಿತುಕೊಂಡಿರುವ ಅಂಡಾಣುವನ್ನು ಗಂಡಿನ ವೀರ್ಯಾಣು ಓಡಾಡಿ ಹುಡುಕಿ ಫಲಿತಗೊಳಿಸುತ್ತದೆ. ಅಂದ ಮೇಲೆ ವೀರ್ಯಾಣುವಿಗೆ ಓಡಾಡುವ, ಚಲನೆಯ ಶಕ್ತಿ ಬೇಕೇ ಬೇಕಲ್ಲವೇ?
ಇದು ಇದುವರೆಗಿನ ವಿಶ್ವಾಸವಾಗಿತ್ತು. ಇದಕ್ಕೆ ಕಾರಣವಿಲ್ಲದೆಯೂ ಇಲ್ಲ. ಗಂಡಿನ ವೀರ್ಯವನ್ನು ಸೂಕ್ಷ್ಮದರ್ಶಕದಡಿಯಲ್ಲಿ ಇಟ್ಟು ಹಣಿಕಿದರೆ ಬಾಲವಿರುವ, ಚಡಪಡಿಸುತ್ತ ಮುಲುಗುವ ಲಕ್ಷಾಂತರ ವೀರ್ಯಾಣುಗಳು ಕಾಣಿಸುತ್ತವೆ. ಇವು ವೀರ್ಯೋತ್ಪತ್ತಿಯ ಕ್ರಿಯೆಯಲ್ಲಿ ಅಂತಿಮ ಘಟ್ಟ. ಅಂಡಾಣುವನ್ನು ಹುಡುಕುವುದಕ್ಕೆ ಇವಕ್ಕೆ ಬಾಲವುಂಟು, ಅಂಡಾಣುವಿನೊಳಗೆ ಕೊರೆದು ನುಸುಳುವುದಕ್ಕೆ ಮೂತಿಯಲ್ಲಿ ವಿಶೇಷ ಪ್ರೊಟೀನುಗಳೂ ಉಂಟು. ಯಾವುದೇ ಕಾರಣಕ್ಕೆ ಇವೆರಡೂ ಇಲ್ಲವೆಂದರೆ ಅಂಡಾಣುವಿನ ಸಮೀಪ ಸಾಗುವುದಕ್ಕೂ, ಅದನ್ನು ಕೂಡುವುದಕ್ಕೂ ಕಷ್ಟವಷ್ಟೆ!
ಎಷ್ಟೋ ಗಂಡಸರಲ್ಲಿ ಇಂತಹ ದೋಷವಿರುವ ವೀರ್ಯ ಇರಬಹುದು. ಒಂದೋ ಬೇಕಾದಷ್ಟು ವೀರ್ಯಾಣು ಇಲ್ಲದಿರಬಹುದು. ಇದ್ದರೂ ಓಡಾಡುವಷ್ಟು ಸಾಮತ್ಥ್ಯವಿಲ್ಲದ, ಬಾಲವಿಲ್ಲದ ವೀರ್ಯಾಣುಗಳಿರಬಹುದು. ಒಟ್ಟಾರೆ ಈ ಗಂಡಸರ ವೀರ್ಯ ಸಹಜವಾಗಿ ಅಂಡಾಣುವನ್ನು ಫಲಿತಗೊಳಿಸಲು ಅಶಕ್ತರು. ಇಂತಹ ಗಂಡಸರಿಗೂ ಪುತ್ರ ಅಥವಾ ಪುತ್ರಿಭಾಗ್ಯ ನೀಡುವುದು ಹೇಗೆ ಎನ್ನುವುದೇ ಯಮಗಿನಾಚಿ ತಂಡದ ಕಾಳಜಿ.

ವೀರ್ಯಾಣುವಾಗುವುದಕ್ಕೂ ಮೊದಲಿನ ಸ್ಥಿತಿಯಲ್ಲಿರುವ ಮಾನವನ ವೀರ್ಯಜನಕ ಕೋಶಗಳು. ಹಳದಿ ಬಾಣಗಳು ಸ್ಪರ್ಮಾಟಿಡ್‍ಗಳನ್ನು ಗುರುತಿಸಿವೆ
ಇದಕ್ಕೆ ಇವರು ಮಾಡಿದ್ದು ಇಷ್ಟೆ. ಗಂಡಿನಲ್ಲಿ ವೀರ್ಯವನ್ನು ಹುಟ್ಟಿಸುವ ವೀರ್ಯಜನಕಾಂಗದಿಂದ ಕೋಶಗಳನ್ನು ತೆಗೆದು ಅಂಡಾಣುವಿನೊಳಗೇ ಚುಚ್ಚಿದರು. ವೀರ್ಯ ಹುಟ್ಟುವ ಹಾದಿಯಲ್ಲಿ ಹಲವು ಹಂತಗಳಿವೆ. ಒಂದು ಕೋಶ ಮತ್ತೊಂದಕ್ಕೆ ಎನ್ನುವಂತೆ ಕನಿಷ್ಟ ನಾಲ್ಕು ಬಗೆಯ ಕೋಶಗಳು ಹುಟ್ಟುತ್ತವೆ. ಈ ಸಾಲಿನಲ್ಲಿ ಕೊನೆಯದಾಗಿ ಹುಟ್ಟುವುದೇ ಸ್ಪರ್ಮಾಟಿಡ್. ಇದನ್ನು ವೀರ್ಯಾಣು-ಜನಕ ಎನ್ನೋಣ. ಈ ಸ್ಪರ್ಮಾಟಿಡ್ ಗೆ ಬಾಲವಿಲ್ಲ. ತನ್ನಲ್ಲಿರುವ ಕೋಶರಸವನ್ನೆಲ್ಲ ಕಳೆದುಕೊಂಡು, ಅತಿ ಮುಖ್ಯವಾದ ಕೋಶಕೇಂದ್ರ (ನ್ಯೂಕ್ಲಿಯಸ್) ವನ್ನಷ್ಟೆ ಉಳಿಸಿಕೊಂಡು, ಅದಕ್ಕೇ ಬಾಲವನ್ನು ಬೆಳೆಸಿಕೊಂಡು ಇದು ವೀರ್ಯಾಣುವಾಗುತ್ತದೆ. ಈ ಸ್ಪರ್ಮಾಟಿಡ್ ಅನ್ನೇ ನೇರವಾಗಿ ಅಂಡಾಣುವಿಗೆ ಚುಚ್ಚಿದ್ದಾರೆ ಯಮಗಿನಾಚಿ. ಇದನ್ನು ರೋಸಿ (ಆರ್.ಓ.ಎಸ್.ಐ) ತಂತ್ರ ಎಂದು ಇವರು ಹೆಸರಿಸಿದ್ದಾರೆ.
ಆದರೆ ಇದು ಸುಲಭವಲ್ಲ. ಏಕೆಂದರೆ ವೀರ್ಯಾಣುವಿನ ಮೂತಿಯಲ್ಲಿರುವ ಪ್ರೊಟೀನು ಕಾಣದಿದ್ದರೆ ಅಂಡಾಣು ಅದನ್ನು ಮೂಸುವುದೂ ಇಲ್ಲ. ಅದಕ್ಕೆ ಅಂಡಾಣುವಿಗೆ ನಯವಾಗಿ ವಿದ್ಯುತ್ ಷಾಕ್ ನೀಡಿ ಅದನ್ನು ಒಪ್ಪಿಸಿದರು. ಹೀಗೆ ಸಿದ್ಧವಾದ ಅಂಡಾಣುವಿಗೆ ಗಂಡಿನ ಸ್ಪರ್ಮಾಟಿಡ್ ಗಳನ್ನು ಚುಚ್ಚಿದರು. ಈ ರೀತಿಯಲ್ಲಿ ಕೃತಕವಾಗಿ ಫಲಿತಗೊಳಿಸಿದ ಅಂಡಗಳನ್ನು ತಾಯ ಗರ್ಭಾಶಯದೊಳಗೆ ಇಟ್ಟರು. ಹೀಗೆ ಇವರು ಗರ್ಭಭಾಗ್ಯ ನೀಡಿದ ಹದಿನಾಲ್ಕು ಮಕ್ಕಳೂ ಈಗ ದೈಹಿಕವಾಗಿ, ಮಾನಸಿಕವಾಗಿ ಯಾವುದೇ ತೊಂದರೆ ಇಲ್ಲದೆ ಬೆಳೆದಿದ್ದಾರಂತೆ.
ಇದುವರೆವಿಗೂ ಸ್ಪರ್ಮಾಟಿಡ್ ಬಳಸಿ ಕೃತಕ ಗರ್ಭಧಾರಣೆಯ ಮೂಲಕ ಪ್ರನಾಳಶಿಶುಗಳನ್ನು ಪಡೆದವರಿರಲಿಲ್ಲ. ಈ ಹದಿನಾಲ್ಕು ಮಂದಿಗೆ ಆ ಹೆಗ್ಗಳಿಕೆಯನ್ನು ಯಮಗಿನಾಚಿ ತಂಡ ದೊರಕಿಸಿದೆ ಎನ್ನೋಣವೇ!