ಕ್ಯಾನ್ಸರ್‍ ಗೆ ಇನ್ನೊಂದು ಕಾರಣ!

ಕ್ಯಾನ್ಸರ್ ಎನ್ನುವ ರೋಗ ಬರುತ್ತದೇಕೆ ಎನ್ನುವ ಪ್ರಶ್ನೆಗೆ ಇನ್ನೇನು ಉತ್ತರ ಸಿಕ್ಕಿತು ಎನ್ನುವಾಗಲೇ ಹೊಸದೊಂದು ಪ್ರಶ್ನೆ ಕಾಡುತ್ತದೆ. ಪ್ರತಿ ವರ್ಷ ವಿಭಿನ್ನ ರೂಪದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಕ್ಯಾನ್ಸರ್ ಬರಲು ಇದುವರೆವಿಗೂ ಊಹಿಸದೇ ಇದ್ದ ಕಾರಣವೊಂದು ಕೂಡಿಕೊಂಡಿದೆ. ನಿನ್ನೆ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪತ್ರಿಕೆಯಲ್ಲಿ ವರದಿಯಾದ ರೋಗಿಯೊಬ್ಬನ ಕಥೆ ಹೊಟ್ಟೆಯೊಳಗೆ ವಾಸಿಸುವ ಹುಳುಗಳಿಂದಲೂ ಕ್ಯಾನ್ಸರ್ ಉಂಟಾಗಬಹುದು ಎನ್ನುವ ಹೊಸ ಸಾಧ್ಯತೆಯನ್ನು ಮುಂದಿಟ್ಟಿದೆ.

ಕ್ಯಾನ್ಸರ್ ಎಂದರೆ ಹದ್ದು ಮೀರಿದ ಜೀವಕೋಶಗಳು ಎನ್ನುತ್ತಾರೆ ವಿಜ್ಞಾನಿಗಳು. ನಮ್ಮ ದೇಹದ ವಿವಿಧ ಅಂಗಗಳಲ್ಲಿರುವ ಜೀವಕೋಶಗಳ ಸಂಖ್ಯೆ, ಅವುಗಳ ಚಟುವಟಿಕೆಗೆ ಮಿತಿಯಿದೆ. ಒಂದು ಹಂತಕ್ಕೆ ಬೆಳೆದ ಮೇಲೆ ಎಲ್ಲ ಕೋಶಗಳೂ ಸಂಖ್ಯೆಯಲ್ಲಿ ಹೆಚ್ಚುವುದಿಲ್ಲ. ಹಾಗಾಗುವುದಿದ್ದರೆ ನಾವು ಊದುತ್ತಲೇ ಇರಬೇಕಿತ್ತು. ಹಾಗೆಯೇ ಪ್ರತಿ ಜೀವಕೋಶ ಅಥವಾ ಅಂಗಕ್ಕೆ ಅದರದ್ದೇ ಸ್ಥಾನವಿದೆ. ಹೃದಯ ಎದೆಗೂಡಿನಲ್ಲಿಯೇ ಇರಬೇಕು. ಮಿದುಳು ತಲೆಯೊಳಗೇ ಇರಬೇಕು. ವಿವಿಧ ನರಗಳು ಇಂತಿಂತಲ್ಲೇ ಇರಬೇಕು. ಹಾಗಿದ್ದರಷ್ಟೆ ಈ ದೇಹ ಜೀವಿಯಾಗಿ, ವ್ಯಕ್ತಿಯಾಗಿ ಇರಬಲ್ಲುದು. ಈ ನಿಯಮಗಳನ್ನು ಪಾಲಿಸದೆ ಅಡ್ಡಹಾದಿ ಹಿಡಿದ ಕೋಶಗಳೇ ಕ್ಯಾನ್ಸರ್ ಗೆ ಮೂಲ. ಇದು ಇಂದಿನ ತಿಳುವಳಿಕೆ.

ದೇಹದಲ್ಲಿ ಕೆಲವೇ ಜೀವಕೋಶಗಳು ಸಂಖ್ಯೆಯಲ್ಲಿ ಹೆಚ್ಚಾಗುವಂತೆ ನಿಸರ್ಗ ನಿಯಮಗಳಿವೆ. ಆದರೆ ಕ್ಯಾನ್ಸರ್ ಕೋಶಗಳು ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಎಷ್ಟೆಂದರಷ್ಟು ಸಂಖ್ಯೆ ಹೆಚ್ಚಿಸಿಕೊಳ್ಳುತ್ತವೆ, ಗಂಟಾಗುತ್ತವೆ. ಕೆಲವೊಮ್ಮೆ ಎಲ್ಲೆಂದರಲ್ಲಿ ನುಸುಳಿ ಆ ಅಂಗಗಳಲ್ಲೂ ಕ್ಯಾನ್ಸರ್ ಉಂಟು ಮಾಡುತ್ತವೆ. ವೈದ್ಯರು ಈ ಸ್ಥಿತಿಯನ್ನು ಮೆಟಾಸ್ಟಾಸಿಸ್ ಎನ್ನುತ್ತಾರೆ. ಬರೇ ಸಂಖ್ಯೆ ಹೆಚ್ಚಾಗಿ ಗಂಟಾಗುತ್ತಿದ್ದರೆ, ಆ ಗಂಟನ್ನೇ ಕಿತ್ತು ಬಿಸಾಡಬಹುದು. ಶಸ್ತ್ರಕ್ರಿಯೆಗಳ ಮೂಲಕ ಹೀಗೆ ಚಿಕಿತ್ಸೆ ನೀಡುವುದುಂಟು. ಆದರೆ ಮೆಟಾಸ್ಟಾಸಿಸ್ ಆದ ಸಂದರ್ಭದಲ್ಲಿ ಚಿಕಿತ್ಸೆ ನೀಡುವುದು ಬಲು ಕಷ್ಟ.

ಜಂತುಹುಳುಗಳೂ ಇಂತಹ ಮೆಟಾಸ್ಟಾಸಿಸ್ ಗೆ ಕಾರಣವಾಗಬಹುದು ಎನ್ನುತ್ತದೆ ಈ ಸುದ್ದಿ. ಇದು ಗೊತ್ತಾಗಿದ್ದು ಹೀಗೆ. ಎರಡು ವರ್ಷದ ಹಿಂದೆ, ಅಮೆರಿಕೆಯ ಅಟ್ಲಾಂಟಾದಲ್ಲಿರುವ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ನ  ಇನ್ಫೆಕ್ಶಿಯಸ್ ಡಿಸೀಸಸ್ (ಸೋಂಕು ರೋಗ) ಪ್ರಯೋಗಶಾಲೆಗೆ ಒಬ್ಬ ರೋಗಿಯ ಅಂಗಾಂಶಗಳು ಪರೀಕ್ಷೆಗೆ ಬಂದಿದ್ದುವು.  ಈತನಿಗೆ ಎಚ್  ಐ ವಿ. ಸೋಂಕು ಇದ್ದು ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದಿದ್ದ. ನಿಲ್ಲದ ಜ್ವರ, ಕುಸಿಯುವ ದೇಹತೂಕದ ತೊಂದರೆಗಳು ನಿಂತಿರಲೇ ಇಲ್ಲ. ಮರು ಪರೀಕ್ಷೆ ಮಾಡಿದಾಗ ಮಲದಲ್ಲಿ ಹೈಮೆನೋಲೆಪಿಸ್ ನಾನಾ ಎನ್ನುವ ಲಾಡಿಹುಳುವಿನ ಮೊಟ್ಟೆಗಳು ಕಂಡುವು. ಜೊತೆಗೆ ರಕ್ತದಲ್ಲಿ ಎಚ್ ಐ ವಿ. ವೈರಸ್ ಪ್ರಮಾಣವೂ ಹೆಚ್ಚಿತ್ತು. ಎಚ್ ಐ ವಿ. ಸೋಂಕು ದೇಹದ ರೋಗನಿರೋಧಕತೆಯನ್ನು ಕುಗ್ಗಿಸಿಬಿಟ್ಟಿರಬೇಕು. ಹೀಗಾಗಿ ಈ ಹುಳು ಎಗ್ಗಿಲ್ಲದೆ ಬೆಳೆದಿದೆ ಎಂದು ಭಾವಿಸಿ ಚಿಕಿತ್ಸೆ ನೀಡಿದರು. ಆದರೂ ತೊಂದರೆಗಳು ನಿಲ್ಲಲಿಲ್ಲ. ಮತ್ತೆ ಪರೀಕ್ಷೆ ನಡೆಸಿದಾಗ ದೇಹದ ಹಲವೆಡೆ, ಶ್ವಾಸಕೋಶ, ಸ್ನಾಯುಗಳು, ಕರುಳು ಮುಂತಾದೆಡೆ ಗಂಟುಗಳು ಇದ್ದುದು ಕಂಡು ಬಂತು. ಅದೇನೆಂದು ಪತ್ತೆ ಮಾಡುವಷ್ಟರಲ್ಲಿ ಮೂತ್ರಪಿಂಡ ಕೈಕೊಟ್ಟು ರೋಗಿ ಹರೋಹರ ಎಂದುಬಟ್ಟಿದ್ದ.

ಹೈಮೆನೊಲೆಪಿಸ್ ನಾನಾ ಕಣ್ಣಿಗೆ ತೋರುವುದು ಹೀಗೆ (ಚಿತ್ರ ಕೃಪೆ: ವೀಕಿಪೀಡಿಯ)

ಹೈಮೆನೊಲೆಪಿಸ್ ನಾನಾ ಕಣ್ಣಿಗೆ ತೋರುವುದು ಹೀಗೆ (ಚಿತ್ರ ಕೃಪೆ: ವೀಕಿಪೀಡಿಯ)

ಈ ಗಂಟುಗಳು ಏಕೆ ಬಂದುವು ಎನ್ನುವ ಕುತೂಹಲದಿಂದ ವೈದ್ಯರು ಅವನ ದೇಹದಲ್ಲಿದ್ದ ಗಂಟುಗಳನ್ನು ಕೊಯ್ದು ಅದರಲ್ಲಿದ್ದ ಜೀವಕೋಶಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರು.  ಕುತೂಹಲ ಏಕೆಂದರೆ ಹೈಮೆನೊಲೆಪಿಸ್ ನಾನಾ ಹುಳು ಬೇರೆ ಹುಳುಗಳಂತೆ ಇತರೆ ಅಂಗಗಳಿಗೆ ವಲಸೆ ಹೋಗುವುದಿಲ್ಲ. ಏನಿದ್ದರೂ ಕರುಳಿನಲ್ಲಿಯೇ ಬೆಳೆದು, ಅಲ್ಲಿಯೇ ಮೊಟ್ಟೆಯಿಟ್ಟು, ಅಲ್ಲಿಯೇ ಮರಿ ಮಾಡಿ, ಅಲ್ಲಿಯೇ ಸಾಯುತ್ತದೆ. ಹಾಗಿದ್ದರೆ ಎಚ್ ಐ ವಿ ಸೋಂಕಿರುವವರಲ್ಲಿ ಇದು ಬೇರೆ ಅಂಗಗಳಿಗೆ ವಲಸೆ ಹೋಗುತ್ತಿರಬಹುದು ಎಂದು ಈ ಗಂಟುಗಳು ಸೂಚಿಸಿದ್ದವು.

ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾದ್ದೇ ಬೇರೆ. ದೇಹದ ವಿವಿಧ ಜಾಗಗಳಲ್ಲಿ ಇದ್ದ ಗಂಟುಗಳಲ್ಲಿ ದೊರೆತ ಎಲ್ಲ ಜೀವಕೋಶಗಳೂ ಒಂದೇ ರೀತಿ ಇದ್ದುವು. ಇದು ಕ್ಯಾನ್ಸರ್ ರೋಗದ ಲಕ್ಷಣ. ಕ್ಯಾನ್ಸರ್ ಕೋಶಗಳು ಮೆಟಾಸ್ಟಾಸಿಸ್ ಆಗಿ ಹರಡಿಕೊಂಡಾಗ ವಿಭಿನ್ನ ಅಂಗಗಳಲ್ಲಿದ್ದರೂ ಒಂದೇ ರೀತಿ ಇರುತ್ತವೆ. ಕ್ಯಾನ್ಸರ್ ಪತ್ತೆ ಮಾಡುವುದಕ್ಕೂ ಈ ಗುಣ ನೆರವಾಗುತ್ತದೆ.  ಗಂಟುಗಳಲ್ಲಿನ ಕೋಶಗಳೆಲ್ಲ ಒಂದೇ ರೀತಿ ಇದ್ದುದರಿಂದ ಇದು ಕ್ಯಾನ್ಸರ್ ಎನ್ನುವ ತೀರ್ಮಾನಕ್ಕೆ ವೈದ್ಯರು ಬಂದಿದ್ದರು.  ಆದರೆ ಯಾವ ಕ್ಯಾನ್ಸರ್ ? ದೇಹದ ಯಾವ ಕೋಶಗಳು ಕ್ಯಾನ್ಸರ್‍ ಆಗಿವೆ ಎಂದು ಪತ್ತೆ ಮಾಡಲು ಇನ್ನಷ್ಟು ಪರೀಕ್ಷೆ ಮಾಡಿದರು.  ವಿಚಿತ್ರವೆಂದರೆ ಈ ಯಾವ ಕೋಶಗಳಲ್ಲೂ ಮನುಷ್ಯನ ಜೀವಕೋಶಗಳಲ್ಲಿ ಕಾಣುವ ಪ್ರೊಟೀನುಗಳು ಇರಲಿಲ್ಲ. ಅಂದರೆ ಇವು ಹದ್ದು ಮೀರಿದ ಮನುಷ್ಯ ಕೋಶಗಳಲ್ಲ. ಇವುಗಳ ಮೂಲ ಬೇರೆಲ್ಲೋ ಇರಬೇಕು ಎನ್ನುವ ತೀರ್ಮಾನಕ್ಕೆ ಬಂದರು. ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ  ಈ ಕೋಶಗಳು ಹೈಮೆನೋಲೆಪಿಸ್ ನಾನಾ ದ ಮೊಟ್ಟೆಗಳು ಎನ್ನುವುದು ಸ್ಪಷ್ಟವಾಯಿತು.

ಹೈಮೆನೊಲೆಪಿಸ್‍ನ ಪುಟ್ಟ ತಲೆಯ ನಿಕಟ ನೋಟ

ಹೈಮೆನೊಲೆಪಿಸ್‍ನ ಪುಟ್ಟ ತಲೆಯ ನಿಕಟ ನೋಟ

ಹೊಟ್ಟೆ ಸೋಂಕಿದ ಜಂತುಹುಳುಗಳ ಮೊಟ್ಟೆಗಳು ಮಿದುಳು, ಕಣ್ಣನ್ನು ಬಾಧಿಸುವುದು ಅಪರೂಪವಲ್ಲ. ರಿವರ್ ಬ್ಲೈಂಡ್ ನೆಸ್ ಎನ್ನುವ ಜಂತುಹುಳದ ಸೋಂಕು ಆಫ್ರಿಕಾದಲ್ಲಿ ಲಕ್ಷಾಂತರ ಮಕ್ಕಳನ್ನು ಕುರುಡಾಗಿಸುತ್ತದೆ. ಹೈಮೆನೋಲೆಪಿಸ್ ನಾನಾ ದ ಮೊಟ್ಟೆಗಳು ಹೀಗೆ ಬೇರೆ ಅಂಗಗಳಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಈ ರೋಗಿಯ ವೃತ್ತಾಂತ ವಿಚಿತ್ರವೆನ್ನಿಸಿದೆ. ಬಹುಶಃ ಎಚ್ ಐ ವಿ ಸೋಂಕಿನಿಂದಾಗಿ ಈತ ರೋಗಗಳನ್ನು ತಡೆಯಲಾರದವನಾಗಿದ್ದ. ಇಲ್ಲದಿದ್ದರೆ ಬೇರೆ ಯಾವುದೇ ಅಂಗಗಳಿಗೆ ಮೊಟ್ಟೆಗಳು ವಲಸೆ ಹೋಗಿದ್ದರೂ ಅವನ್ನು ದೇಹ ಹೊರ ತಳ್ಳಿಬಿಡುತ್ತಿತ್ತು. ಅಥವಾ ಕೊಂದು ಬಿಡುತ್ತಿತ್ತು. ‘ಈಗ  ಆ ಶಕ್ತಿ ಇಲ್ಲವಾದ್ದರಿಂದ  ಈತನ ಅಂಗ ಅಂಗಗಳಲ್ಲೂ ಮೊಟ್ಟೆಗಳು ನೆಲೆಸಿವೆ. ಮರಿಗಳಾಗಿ ಬೆಳೆಯದೆ ಜೀವಕೋಶಗಳಾಗಿ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿವೆ. ಕ್ಯಾನ್ಸರ್ ಆಗಿದೆ’ ಎಂದು ಈ ಬಗ್ಗೆ ಪರಿಶೀಲನೆ ನಡೆಸಿದ ಅಟೀಸ್ ಮುಯಲೆಂಬಾಕ್ ಎಂಬ ವೈದ್ಯರ ನೇತೃತ್ವದ ತಂಡ ಊಹಿಸಿದೆ.

ಇದುವರೆವಿಗೂ ಕ್ಯಾನ್ಸರ್ ಉಂಟಾಗಲು ಜೀವಕೋಶಗಳಲ್ಲಿ ರಾಸಾಯನಿಕಗಳು, ವಿಷಗಳಿಂದಾಗುತ್ತಿದ್ದ ದೋಷಗಳು, ವೈರಸ್ ಸೋಂಕು ಕಾರಣವಿರಬಹುದು ಎಂಬುದು ತಿಳಿದಿತ್ತು. ಈಗ  ಈ ಕಾರಣಗಳ ಪಟ್ಟಿಗೆ ಜಂತುಹುಳುಗಳನ್ನೂ ಸೇರಿಸಬೇಕು. ಇವು ಕೇವಲ ಎಚ್ ಐ ವಿ. ಸೋಂಕಿರುವವರಲ್ಲಿ ಮಾತ್ರವೇ ಹೀಗೋ? ಅಥವಾ ಬೇರೆಯವರಲ್ಲೂ ಆಗಬಹುದೋ? ಬೇರೆಯವರಲ್ಲೂ ಆಗಬಹುದು ಎಂದರೆ ಹೈಮೆನೊಲೆಪಿಸ್ ನಾನಾ ಅಲ್ಲದೆ ಬೇರೆ ಜಂತುಹುಳುಗಳೂ ಹೀಗೆ ಮಾಡಬಹುದೇ? ಮುಂತಾದ ಪ್ರಶ್ನೆಗಳು ಎದ್ದಿವೆ. ಇದರ ಅರ್ಥ ಸ್ವಚ್ಛತೆ ಕಡಿಮೆ ಇರುವ ಎಲ್ಲೆಡೆಯೂ, ನಮ್ಮ ಭಾರತದಲ್ಲೂ, ಕ್ಯಾನ್ಸರ್ ಹೀಗುಂಟಾಗುವ ಸಾಧ್ಯತೆ ಇರಬಹುದು ಅಲ್ಲವೇ?

Published in: on ನವೆಂಬರ್ 6, 2015 at 6:56 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ