ಊಟಕ್ಕೂ ಒಂದು ಕಾಲವಿದೆಯೇ?

23112015

  1. Atish Mukherjee et al., Shifting the feeding of mice to the rest phase creates metabolic alterations which, on their own, shift the peripheral circadian clocks by 12 hours, PNAS, Early edition  (www.pnas.org/cgi/doi/10.1073/pnas.1519735112)
  2. Atish Mukherjee et al., Shifting eating to the circadian rest phase misaligns the peripheral clocks with the master SCN clock and leads to a metabolic syndrome PNAS, Early edition (www.pnas.org/cgi/doi/10.1073/pnas.1519807112)

ಒಕ್ಕಣೆ: ಪ್ರಕಟಿತ ಲೇಖನದ ಕೊನೆಯ ವಾಕ್ಯ ಹೀಗಿರಬೇಕಿತ್ತು. ಬಲವಂತವಾಗಿ ನಮ್ಮ ದೈನಂದಿನ ಲಯವನ್ನು ಬದಲಿಸುವುದರಿಂದ ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ಇವು ಎನ್ನುತ್ತಾರೆ ಶಾಂಬನ್‍.

ಆತುರದ ಲೇಖನದಲ್ಲಿ ಇಂತಹ ತಪ್ಪುಗಳು ಸಹಜವಾದರೂ ಆಗಬಾರದು. ಈ ಲೇಖನ ಬರೆಯಲು ಎಂದಿಗಿಂತಲೂ ಹೆಚ್ಚು ಸಮಯ ಬೇಕಾಯಿತು. ಮುಖ್ಯವಾಗಿ ಎರಡು ವಿಷಯಗಳು ತೊಡಕಾಗಿದ್ದುವು. ಮೊದಲನೆಯದಾಗಿ ದೈನಂದಿನ ಜೈವಿಕ ಗಡಿಯಾರಗಳ ಪರಿಕಲ್ಪನೆ ಹಾಗೂ ಅವುಗಳನ್ನು ನಿರ್ದೇಶಿಸುವ ಅಂಗಗಳ ಬಗ್ಗೆ ತಿಳಿಸದೆ ಮುಂದುವರೆಯುವುದು ಕಷ್ಟವಾಗಿತ್ತು. ಎರಡನೆಯದಾಗಿ, ನಮ್ಮ ಮಿದುಳಿನಲ್ಲಿರುವ ಮಾಸ್ಟರ್‍ ಕ್ಲಾಕ್‍, ಹಾಗೂ ಅದರ ಲಯವನ್ನು ಬೆಳಕಿಗೆ ಹೊಂದಿಸುವ ಪ್ರಕ್ರಿಯೆಗಳ ಬಗ್ಗೆ ಹೇಳ ಹೊರಟಿದ್ದರೆ ಬಹುಶಃ ಇಡೀ ಸಂಯುಕ್ತ ಕರ್ನಾಟಕವೇ ಅವಶ್ಯಕವಾಗುತ್ತಿತ್ತೋ ಏನೋ? ಇವ್ಯಾವುದೂ ಇಲ್ಲದೆ 600 ಪದಗಳಲ್ಲಿ ಈ ಎರಡು ಸಂಶೋಧನಾ ಪ್ರಬಂಧಗಳ ಬಗ್ಗೆ ತಿಳಿಸುವುದು ಕಷ್ಟವೇ. ಆದರೂ ಪ್ರಯತ್ನಸಿದ್ದೇನೆ. ಇದರ ಜೊತೆಗೆ ಇನ್ನೊಂದು ಅಪಾಯವೂ ಇದೆ. ಲೇಖನದ ಆರಂಭದಲ್ಲಿ ಅಜ್ಜಿಯ ವಿಶ್ವಾಸದ ಬಗ್ಗೆ ತಿಳಿಸಿದ್ದೇನೆ. ಇದು ರೂಢಿಗತ ನಡವಳಿಕೆ. ಇಂದಿನ ದಿನಗಳಲ್ಲಿ ಇವುಗಳಿಗೆ ಒಂದು ವೈಜ್ಞಾನಿಕ ಕಾರಣ ನೀಡಬಹುದಾದರೂ, ಈ ನಡವಳಿಕೆಗಳು ರೂಢಿಯಾಗುವ ಮೊದಲೇ ಇಂತಹ ತಿಳುವಳಿಕೆಗಳಿದ್ದುವು ಎಂದು ಓದುಗರು ನಂಬುವುದೂ ಸಾಧ್ಯ. ಲೇಖಕನಾಗಿ ಆ ಅಪಾಯವನ್ನೂ ನಾನು ಗಮನಿಸಬೇಕಿತ್ತು. ಅದನ್ನು ತಪ್ಪಿಸಲಂತೂ ಆಗುವುದಿಲ್ಲ ಎನ್ನುವುದು ಇನ್ನೊಂದು ಮಾತು. ಇದೇ ವಾರ, ಮತ್ತೊಂದು ಸಂಶೋಧನೆ ಆರಾಮವಾಗಿ ಊಟ ಮಾಡುವುದರಿಂದ ಊಟದ ಸ್ವಾದಿಷ್ಟತೆ ಇನ್ನಷ್ಟು ಹೆಚ್ಚುತ್ತದೆ ಎಂದು ಗಣಿತ ಮಾದರಿಗಳ ಮೂಲಕ ತಿಳಿಸಿತ್ತು. ಅದನ್ನೂ ಈ ಲೇಖನದೊಟ್ಟಿಗೆ ಕೂಡಿಸಿ ಅಜ್ಜಿಯ ಮಾತಿಗೆ ವಿಜ್ಞಾನದ ಒತ್ತು ಎಂದು ಬಿಡೋಣವೇ ಅನ್ನುವ ಹಂಬಲವನ್ನು ತಡೆಯುವುದೂ ಕಷ್ಟವೇ ಆಯ್ತು.

ಇವೆಲ್ಲ ಕನ್ನಡ ವಿಜ್ಞಾನ ಲೇಖಕರ ಬವಣೆಗಳು. ಈ ಬವಣೆಗಳನ್ನೂ ಮೀರಿ ಬಂದ ಈ ಲೇಖನ ಇದೋ ಈಗ ನಿಮ್ಮೆಲ್ಲರ ವಿಮರ್ಶೆಗೆ !

ಶ್ರೀ ಮಲ್ಲಪ್ಪನವರು ಮೊಬೈಲ್‍ ನಲ್ಲಿ ಲೇಖನ ಓದಲಾಗದಷ್ಟು ಸಣ್ಣ ಅಕ್ಷರಗಳು ಎಂದು ನೊಂದುಕೊಂಡಿದ್ದಾರೆ. ಇದೋ ಮೂಲ ಪಾಠ ಇಲ್ಲಿದೆ. ಇದು ಸಂಯುಕ್ತ ಕರ್ನಾಟಕದಲ್ಲಿ ದಿನಾಂಕ 23.11.15 ರಂದು ಪ್ರಕಟವಾಗಿತ್ತು.

ನಮ್ಮ ಮನೆಯಲ್ಲಿ ಇರುವವರು ಮೂರೇ ಜನರಾದರೂ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವುದು ಅಪರೂಪ. ನನಗೋ ಕಛೇರಿಗೆ ಓಡುವ ಆತುರ. ಸಿಕ್ಕದ್ದನ್ನು ಬಾಯಿಗೆ ತುರುಕಿ ಓಡುತ್ತೇನೆ. ಮನೆಯವಳಿಗೆ ನಮ್ಮಿಬ್ಬರಿಗೂ ಊಟ, ತಿಂಡಿ ಕೊಡುವ ಜವಾಬುದಾರಿ. ನಮ್ಮದೆಲ್ಲ ಮುಗಿದ ಮೇಲೆ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ. ಇನ್ನು ಉಳಿದದ್ದು ಮಗ. ಕಾಲೇಜಿನಿಂದ ಯಾವಾಗ ಬರುತ್ತಾನೋ ಆಗ ಊಟ. ಕ್ಯಾಂಟೀನಿನಲ್ಲಿ ಏನು ಸಿಗುತ್ತದೋ ಅದುವೇ ಮೃಷ್ಟಾನ್ನ!  .ಕೆಲಸ ಮಾಡೋದೇ ಹೊಟ್ಟೆ ಹೊರೆಯೋಕೆ, ಹೀಗೆ ಊಟವನ್ನೂ ಸರಿಯಾಗಿ ಮಾಡದಿದ್ದರೆ ಹೇಗೆ? ಊಟದಲ್ಲಿ ಶಿಸ್ತಿರಬೇಕು. ಹೇಗೆಂದರೆ ಹಾಗೆ, ಯಾವಾಗ ಅಂದರೆ ಆವಾಗ, ಏನೆಂದರೆ ಅದು ತಿನ್ನೋದಲ್ಲ’ ಅಂತ ಅಜ್ಜಿ ಮೊಮ್ಮಗನನ್ನು ಬೈಯುವ ರೀತಿಯಲ್ಲಿ ನಮ್ಮೆಲ್ಲರಿಗೂ ಶಿಸ್ತಿನ ಪಾಠ ಹೇಳುತ್ತಿರುತ್ತಾಳೆ. 

ಹೊಟ್ಟೆ ತುಂಬಿದರೆ ಸಾಕಲ್ಲ. ಊಟಕ್ಕೂ ಶಿಸ್ತೇ? ಅದೆಲ್ಲ ಹಳೆಯ ಪರಂಪರೆ ಅನ್ನುವವರಿಗೆ ಇದೋ ವಿಜ್ಞಾನ ಜಗತ್ತಿನಿಂದ ಒಂದು ಕಿವಿ ಮಾತು. ಇಂದಿನ ಕಾಲದ ಖಾಯಿಲೆಗಳಾದ ಡಯಾಬಿಟೀಸ್, ಹೊಟ್ಟೆಯ ಹುಣ್ಣು ಮುಂತಾದುವಕ್ಕೂ ಊಟದ ಶಿಸ್ತಿಗೂ ಸಂಬಂಧ ಇದೆ ಎನ್ನುವ ಕೌತುಕಮಯ ಸಂಶೋಧನೆ ಮೊನ್ನೆ ಪ್ರಕಟವಾಗಿದೆ.  ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಫ್ರೆಂಚ್ ವಿಜ್ಞಾನಿ ಪಿಯರಿ ಶಾಂಬನ್ ಮತ್ತು ಸಂಗಡಿಗರು ಹೀಗೊಂದು ಸುದ್ದಿ ಪ್ರಕಟಿಸಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವವರ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳು ನಮ್ಮ ಜೀರ್ಣಕ್ರಿಯೆಯ ಮೇಲೆ  ಪರೋಕ್ಷವಾಗಿ ಪ್ರಭಾವ ಬೀರುತ್ತವೆ. ಇದಕ್ಕೂ ಹೀಗೆ ಹೊತ್ತಲ್ಲದ ಹೊತ್ತಿನಲ್ಲಿ ಊಟ ಮಾಡುವವರಲ್ಲಿ ಕಂಡು ಬರುವ ಡಯಾಬಿಟೀಸ್, ರಕ್ತದೊತ್ತಡ, ಬೊಜ್ಜು ಮುಂತಾದ ಖಾಯಿಲೆಗಳಿಗೂ ಸಂಬಂಧವಿದೆ ಎಂದು ಇವರು ನಿರೂಪಿಸಿದ್ದಾರೆ.

ಹೊತ್ತಲ್ಲದ ಹೊತ್ತು           ಎಂದರೇನೆಂದು ಕೇಳಬೇಡಿ. ಯಾರು ಏನು ಮಾಡಿದರೇನು, ಮಾಡದಿದ್ದರೇನು, ಬೆಳಗಾಗುವುದು ನಿಲ್ಲುವುದಿಲ್ಲ. ರಾತ್ರಿಯಾಗುವುದು ತಪ್ಪುವುದಿಲ್ಲ ಎನ್ನುವ ಮಾತು ಕೇಳಿದ್ದೀರಿ. ಬೆಳಗಾಗುವುದಕ್ಕೂ, ರಾತ್ರಿಯಾಗುವುದಕ್ಕೂ ನಮ್ಮ ನಿತ್ಯದ ಚಟುವಟಿಕೆಗಳಿಗೂ ನೇರ ಸಂಬಂಧವಿದೆ ಅನ್ನುವುದು ವಿಜ್ಞಾನಿಗಳ ಅಂಬೋಣ. ನಮ್ಮದಷ್ಟೆ ಅಲ್ಲ, ಬಹುತೇಕ ಪ್ರಾಣಿಗಳ, ಗಿಡ-ಮರಗಳ ಚಟುವಟಿಕೆಗಳೂ ಹಗಲು-ರಾತ್ರಿಯ ಜೊತೆಗೆ ತಳುಕಿಕೊಂಡಿವೆ. ಉದಾಹರಣೆಗೆ, ಸೂರ್ಯ ಉದಯಿಸಿದ್ದನ್ನ ನೀವು ಕಂಡಿರೋ ಇಲ್ಲವೋ, ಬೆಳಗ್ಗೆ ಸೂರ್ಯೋದಯದ ಸಮಯಕ್ಕೆ ಎಚ್ಚರವಾಗುವುದು ತಪ್ಪುವುದಿಲ್ಲ. ಹಾಗೆಯೇ, ರಾತ್ರಿ ನೀವು ಎಷ್ಟೇ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಚ್ಚರವಿರಬೇಕೆಂದರೂ ತೂಕಡಿಸುವುದು ತಪ್ಪುವುದಿಲ್ಲ. ಬೆಳಗೆಲ್ಲ ಎಚ್ಚರ, ರಾತ್ರಿಯಾಗುತ್ತಿದ್ದ ಹಾಗೇ ನಿದ್ರೆ. 

ಹಾಗಿದ್ದರೆ ಬೆಳಗಾಗದಿದ್ದರೆ ನಾವು ಹಾಸಿಗೆ ಬಿಟ್ಟೇಳುವುದೇ ಇಲ್ಲವೇ ಎನ್ನಬೇಡಿ. ವಿಜ್ಞಾನಿಗಳು ಕಂಡ ಹಾಗೆ ಇದೊಂದು ಸಹಜ ಚಕ್ರ. ಬೆಳಗಾಗುತ್ತದೆಯೋ ಇಲ್ಲವೋ, ನಿದ್ರೆಯಾದ ಮೇಲೆ ಎಚ್ಚರವಾಗಲೇ ಬೇಕು. ಅನಂತರ ಮತ್ತೆ ನಿದ್ರೆಗೆ ಮರಳಲೇ ಬೇಕು.  ಈ ಚಕ್ರವನ್ನು ದೈನಂದಿನ ಲಯ ಎಂದು ಕರೆದಿದ್ದಾರೆ. ಹೀಗೆಯೇ ವಾರ್ಷಿಕ ಲಯವೂ ಇರಬಹುದು. ಗಂಟೆಯ ಲಯವೂ ಇರಬಹುದು. ಒಟ್ಟಾರೆ ಎಲ್ಲ ಚಟುವಟಿಕೆಗಳೂ ಲಯಬದ್ಧವಾಗಿ ಮರುಕಳಿಸುತ್ತವೆ ಎನ್ನುವುದು ಸತ್ಯ. ಇದನ್ನೇ ಜೈವಿಕ ಗಡಿಯಾರ ಎಂದೂ ವಿಜ್ಞಾನಿಗಳು ಗುರುತಿಸಿದ್ದಾರೆ.

ಈ ಲಯವನ್ನು ಕೆಡಿಸಿದರೆ ಏನಾಗಬಹುದು? ಅರ್ಥಾತ್, ಬೆಳಗ್ಗಿನ ಚಟುವಟಿಕೆಯನ್ನು ರಾತ್ರಿ, ರಾತ್ರಿ ಮಾಡಬೇಕಾದ್ದನ್ನು ಬೆಳಗ್ಗೆ ಮಾಡಿದರೆ ಏನಾಗಬಹುದು? ಶಿವರಾತ್ರಿ ಹಬ್ಬವೆನ್ನಿಸುವುದು ಇದೇ ಕಾರಣಕ್ಕೇ. ನಿದ್ರೆ ಮಾಡಬೇಕಾದ ಹೊತ್ತಿನಲ್ಲಿ ಅದನ್ನು ತಡೆದು ಜಾಗರಣೆ ಇರುತ್ತೇವಲ್ಲ,  ಈ ಸಾಹಸಕ್ಕೇ ಅದು ಹಬ್ಬ ಎನ್ನಿಸುತ್ತದೆ. ಶಿವರಾತ್ರಿಯಂತೆ ನಿತ್ಯವೂ ಜಾಗರಣೆ ಮಾಡಿದೆವೆನ್ನಿ. ಆಗ ತುಸು ದಿನಗಳವರೆಗೆ ಹಗಲು ಅರೆಬರೆ ನಿದ್ರೆ ಮಾಡುತ್ತೇವೆ. ಕೊನೆಗೆ ಹಗಲೆಲ್ಲ ನಿದ್ರೆ ಮಾಡಿ, ಸಂಜೆ ಸೂರ್ಯ ಮುಳುಗುವ ವೇಳೆಗೆ ಬೆಳಗಾಗುವುದಕ್ಕೆ ಆರಂಭವಾಗುತ್ತದೆ. ಬೆಳಗ್ಗೆ ಸೂರ್ಯ ಉದಯಿಸುವಾಗ ನಿದ್ರೆ ಬರಲಾರಂಭಿಸುತ್ತದೆ. ನಿಮ್ಮ ದೇಹದ ಗಡಿಯಾರ ಲಯ ತಪ್ಪಿರುತ್ತದೆ. ಇದುವರೆಗಿನ ತಿಳುವಳಿಕೆಯ ಪ್ರಕಾರ ಲಯಗೆಟ್ಟ ಗಡಿಯಾರ ಮರಳಿ ಮೊದಲಿನ ಲಯವನ್ನು ಪಡೆಯುತ್ತದೆಂದು. ಇದರ ಕೀಲಿ ನಮ್ಮ ಮಿದುಳಿನಲ್ಲಿರುವ ನರಕೋಶಗಳ ಒಂದು ಪುಟ್ಟ ಗಂಟಿನಲ್ಲಿದೆಯೆಂದೂ ತಿಳಿದಿತ್ತು. ಈ ಗಂಟನ್ನು ಸೂಪ್ರ ಕಯಾಸ್ಮಾಟಿಕ್ ನ್ಯೂರಾನ್ (ಎಸ್ ಸಿ ಎನ್ ) ಎಂದು ಕರೆಯುತ್ತಾರೆ. ಪಿಯರೆ ಶಾಂಬನ್ ಅವರ ಸಂಶೋಧನೆ ಈ ತಿಳುವಳಿಕೆಗೆ ತುಸು ಗಾಭರಿಯಾಗುವಂತಹ ವಿಷಯಗಳನ್ನು ಕೂಡಿಸಿದೆ.

ನಮ್ಮ ನಿತ್ಯದ ಚಟುವಟಿಕೆಗಳು ಈ ಸಹಜ ಲಯವನ್ನು ಮೀರಿ ಹೆಚ್ಚು ಕಾಲ ನಡೆದಿದ್ದೇ ಆದರೆ ಎಸ್ ಸಿ ಎನ್ ಕೀಲಿಯ ನಿಯಂತ್ರಣವನ್ನೂ ಮೀರಿ ಶಾಶ್ವತ ಬದಲಾವಣೆಗಳಾಗುತ್ತವೆ. ಇವು ನಮ್ಮ ಕೆಲವು ಖಾಯಿಲೆಗಳಿಗೆ ಕಾರಣವಿರಬಹುದು ಎಂದು ಶಾಂಬನ್ ತಂಡ ಗುರುತಿಸಿದೆಯಂತೆ. ಅಂದ ಹಾಗೆ ಶಾಂಬನ್ ತಂಡ ಸಂಶೋಧನೆ ಮಾಡಿದ್ದು ಇಲಿಗಳ ಮೇಲೆ. ಇಲಿಗಳು ನಮ್ಮ ಹಾಗೆ ಹಗಲು ಓಡಾಡುವುದಿಲ್ಲವಷ್ಟೆ. ಅವು ನಿಶಾಚರಿಗಳು. ಅವುಗಳ  ಊಟ ತಿಂಡಿಯೂ ಅಷ್ಟೆ. ಎಲ್ಲವೂ ನಮ್ಮ ದಿನಚರ್ಯೆಗೆ ವಿರುದ್ಧ. ಅವುಗಳಿಗೆ ಸಹಜವಾದ ರಾತ್ರಿ ಹೊತ್ತಿನ ಊಟದ ಬದಲಿಗೆ ಹಗಲಷ್ಟೆ ಊಟಮಾಡಲು ಬಿಟ್ಟು ಏನಾಗುತ್ತದೆಂದು ಶಾಂಬನ್ ತಂಡ ಗಮನಿಸಿದೆ.

ಇದೊಂದು ರೀತಿ ಇಲಿಗಳನ್ನು ನಿತ್ಯ ರಾತ್ರಿಪಾಳಿ ಕೆಲಸ ಮಾಡಲು ಹೇಳಿದಂತೆ ಅನ್ನಿ. ಸಹಜವಾದ ಚಕ್ರವನ್ನು ಒತ್ತಾಯದಿಂದ ಬದಲಿಸಿದ ಹಾಗೆ ನಿತ್ಯ ಹಗಲು ಶಿವರಾತ್ರಿ ಮಾಡುವ  ಈ ಇಲಿಗಳ ಮೈಯಲ್ಲಿ ಯಾವ್ಯಾವ ರಾಸಾಯನಿಕ ಬದಲಾವಣೆಗಳು ಕಾಣುತ್ತವೆಯೆಂದು ಇವರು ವಿಶಿಷ್ಟ ಪ್ರಯೋಗಗಳಿಂದ ತಿಳಿಯಲು ಪ್ರಯತ್ನಿಸಿದ್ದಾರೆ. ಹೀಗೆ ಮಾಡಿದಾಗ ಇವುಗಳ ಉಣಿಸಿನ ಹಾಗೂ ಜೀರ್ಣಕ್ರಿಯೆಗಳ ಲಯ ತಪ್ಪುತ್ತದಷ್ಟೆ.

ಈ ಪ್ರಯೋಗಗಳಲ್ಲಿ ಮೊದಲು ಕಂಡದ್ದು: ಇಲಿಗಳು ಹಗಲು ಹೊಟ್ಟೆಬಿರಿಯ ಉಂಡರೂ, ಅವುಗಳ ರಕ್ತದಲ್ಲಿನ ರಾಸಾಯನಿಕಗಳು ಹಸಿದಾಗ ಇರುವಂತೆಯೇ ಇದ್ದುವು. ಅಂದರೆ ಉಂಡದ್ದು ದೇಹವನ್ನು ಕೂಡಿರಲೇ ಇಲ್ಲ. ನಡುರಾತ್ರಿಯಲ್ಲಿ ಕನಿಷ್ಟವಾಗಿರಬೇಕಿದ್ದ ಇನ್ಸುಲಿನ್ ಈ ಹಗಲುಣುವ ಇಲಿಗಳಲ್ಲಿ ಗರಿಷ್ಟವಾಗಿತ್ತು. ರಕ್ತದಲ್ಲಿನ ಕೊಬ್ಬಿನ ಅಂಶ (ಮುಕ್ತ ಮೇದಾಮ್ಲಗಳು) ಹಾಗೂ ರಕ್ತದೊತ್ತಡಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಅಂಶವೂ ಹೀಗೆ ಎಡವಟ್ಟು ಕಾಲದಲ್ಲಿ ಇತ್ತು. ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಲಿವರ್ (ಯಕೃತ್ತು) ನಲ್ಲಿನ ರಾಸಾಯನಿಕಗಳ ಪರಿಸ್ಥಿತಿಯೂ ಹೀಗೇ ಇತ್ತು.

ಹಗಲಿರಬೇಕಾದ್ದು ರಾತ್ರಿ ಕಾಣುತ್ತಿರುವುದಕ್ಕೆ ಎಸ್ ಸಿ ಎನ್ ನ ನಿಯಂತ್ರಣ ಕಾರಣವೋ, ಅಥವಾ ಅಕಾಲದ  ಉಣಿಸೇ ಕಾರಣವೋ ಎಂದು ಶಾಂಬನ್ ಪರೀಕ್ಷಿಸಿದ್ದಾರೆ.  ಅಕಾಲದಲ್ಲಿ (ಹಗಲು) ಉಣಿಸು ನೀಡಿದ  ಇಲಿಗಳಿಗೆ ಅನಂತರ ರಾತ್ರಿ ಒಮ್ಮ ಗ್ಲುಕೋಸ್ ಚುಚ್ಚಿದ್ದಾರೆ. ಗ್ಲುಕೋಸ್ ಆಹಾರ ಜೀರ್ಣವಾದ ನಂತರ ಉತ್ಪತ್ತಿಯಾಗುವ ವಸ್ತುವಷ್ಟೆ. ಪ್ರಯೋಗದ ಆರಂಭಿಸಿದ ಒಂದೆರಡು ದಿನಗಳಲ್ಲಿ ಹೀಗೆ ಗ್ಲುಕೋಸ್ ನೀಡಿದಾಗ ಇಲಿಗಳಲ್ಲಿ ದೈನಂದಿನ ಲಯ ಪಲ್ಲಟದಿಂದಾಗುವ ಪರಿಣಾಮಗಳು ಮರೆಯಾದುವು. ಆದರೆ ಅನಂತರದ ದಿನಗಳಲ್ಲಿ ನೀಡಿದಾಗ ಪಲ್ಲಟದ ಪರಿಣಾಮಗಳು ಹಾಗೇ ಉಳಿದುಕೊಂಡವು. ಅಂದರೆ ಈ ಪಲ್ಲಟನೆ ಆಹಾರಾಭ್ಯಾಸ ದಿಂದ ಬಂದದ್ದೇ ಹೊರತು ಎಸ್ ಸಿ ಎನ್ ನಿಯಂತ್ರಣದಿಂದಲ್ಲ ಎಂದು ಶಾಂಬನ್ ತೀರ್ಮಾನಿಸಿದ್ದಾರೆ.

ಈ ಯಾವ ಬದಲಾವಣೆಗಳೂ ಎಸ್ ಸಿ ಎನ್ ನ ಲಯವನ್ನು ತಾಕುವುದಿಲ್ಲ. ಆದರೆ ಇತರೇ ಕ್ರಿಯೆಗಳ ನಡುವಣ ತಾಳಮೇಳ ಬದಲಾಗುತ್ತದೆ. ದೇಹದ ವಿವಿಧ ಕ್ರಿಯೆಗಳು ಒಂದಕ್ಕೊಂದು ತಳುಕಿಕೊಂಡ ಚಕ್ರದಂತೆ ಇರುವುದರಿಂದ, ಒಂದರ ಲಯ ತಪ್ಪಿದ ಕೂಡಲೇ ಮತ್ತೊಂದರ ಲಯವೂ ಬದಲಾಗುತ್ತದೆ ಎನ್ನುತ್ತಾರೆ ಶಾಂಬನ್. ಬಲವಂತವಾಗಿ ನಮ್ಮ ದೈನಂದಿನ ಲಯವನ್ನು ಬದಲಿಸುವುದರಿಂದ ರಾಸಾಯನಿಕ ಕ್ರಿಯೆಗಳಲ್ಲಿ ಉಂಟಾಗುವ ವ್ಯತ್ಯಾಸಗಳೇ ಇವು ಎನ್ನುತ್ತಾರೆ ಶಾಂಬನ್.

ಪ್ರಯೋಗಗಳನ್ನು ಇಲಿಗಳಲ್ಲೇ ನಡೆಸಿದ್ದರೂ, ಈ ರಾಸಾಯನಿಕ ಕ್ರಿಯೆಗಳಿಗೂ ನಮ್ಮ ದೇಹದಲ್ಲಿ ಜರುಗುವ ಕ್ರಿಯೆಗಳಿಗೂ ಅಷ್ಟೇನೂ ವ್ಯತ್ಯಾಸವಿಲ್ಲ. “ ಜೈವಿಕ ಗಡಿಯಾರದಲ್ಲಿ ಆಗುವ ಈ ಲಯಪಲ್ಲಟನ, ಪಾಳಿಗಳಲ್ಲಿ ಕೆಲಸ ಮಾಡುವ (ಉದಾಹರಣೆಗೆ, ಟ್ರಕ್ ಡ್ರೈವರ್ ಗಳು, ಐಟಿ ಉದ್ಯಮದ ಸಿಬ್ಬಂದಿಗಳು) ವವರಲ್ಲಿ ಸಾಮಾನ್ಯವಾಗಿ ಕಾಣಬರುವ ಖಾಯಿಲೆಗಳನ್ನುಂಟು ಮಾಡುವಂತಹ ರಾಸಾಯನಿಕ ಕ್ರಿಯೆಗಳನ್ನೇ ತಾಕುತ್ತದೆ,” ಎನ್ನುವುದು ಶಾಂಬನ್ ಅಭಿಪ್ರಾಯ. ಅರ್ಥಾತ್, ನಮ್ಮ ಊಟ ಹೇಗಿದೆ ಅನ್ನುವುದಷ್ಟೆ ಅಲ್ಲ, ನಾವು ಯಾವಾಗ ಊಟ ಮಾಡುತ್ತೇವೆಂಬುದೂ ಮುಖ್ಯ ಅಂತಲ್ಲವೇ? ಅಜ್ಜಿ ಇದನ್ನು ತಿಳಿದೇ ಹೇಳಿದಳು ಅನ್ನಬೇಡಿ. ಅಂತೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಈ ಶಿಸ್ತು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ ಅನ್ನುತ್ತದೆ ಶಾಂಬನ್ ಸಂಶೋಧನೆ.

 

Published in: on ನವೆಂಬರ್ 23, 2015 at 5:49 ಫೂರ್ವಾಹ್ನ  Comments (2)  

The URI to TrackBack this entry is: https://kollegala.wordpress.com/2015/11/23/%e0%b2%8a%e0%b2%9f%e0%b2%95%e0%b3%8d%e0%b2%95%e0%b3%82-%e0%b2%92%e0%b2%82%e0%b2%a6%e0%b3%81-%e0%b2%95%e0%b2%be%e0%b2%b2%e0%b2%b5%e0%b2%bf%e0%b2%a6%e0%b3%86%e0%b2%af%e0%b3%87/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. ರಾಯರೇ : ಮೇಲ್ಕಂಡ ಲೇಖನ ಪತ್ರಿಕೆಯೊಂದರ ಛಾಯಾ ಪ್ರತಿಯಾಗಿದೆ. ಮೋಬೈಲಲ್ಲಿ ಓದಲು ಅಕ್ಷರಗಳು ತುಂಬಾ ಚಿಕ್ಕದಾಗಿದ್ದು, ದೊಡ್ಡದು ಮಾಡಹೊರಟರೆ ಅಕ್ಷರಗಳು ಮಸಕಾಗಿ ಓದಲು ಆಗುತ್ತಿಲ್ಲ ತಾವು ದಯಮಾಡಿ ಈ ಸಮಸ್ಯೆಯನ್ನು ಪರಿಹರಿಸಿ

    • ಮಲ್ಲಪ್ಪನವರೆ ಖಂಡಿತ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: