ಜಿರಲೆಗಳ ಜಾತ್ರೆಗೆ ಬೆಕ್ಟೀರಿಯಾ ಮೋಡಿ

ಮನೆಯಲ್ಲಿ ಎಲ್ಲಾದರೂ ಒಂದು ಜಿರಲೆ ಕಾಣಿಸಿಕೊಂಡರೆ ಸಾಕು. ಅದರ ಮಹಾಸಂತಾನ ಇನ್ನೆಲ್ಲೋ ಇದೆ ಎನ್ನುವುದು ಗ್ಯಾರಂಟಿ. ಏಕೆಂದರೆ ಕಣ್ಣಿಗೆ ಕಾಣಿಸುವುದಕ್ಕಿಂತಲೂ ಹೆಚ್ಚು ಕಾಣದೆ ಮರೆಯಾಗಿಯೇ ಇರುತ್ತವಷ್ಟೆ. ಕೀಟವನ್ನ  ಪ್ರಪಂಚದಿಂದ ಕಿತ್ತೆಸೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಎಂತಹ ಲಕ್ಷ್ಮಣರೇಖೆಯನ್ನೂ ಮೀರಿ ನಡೆಯುತ್ತವೆ. ಯಾರ ಹಿಟ್ ಗಳನ್ನೂ ತಡೆದುಕೊಳ್ಳುತ್ತವೆ.

ನಿಶಾಚರಿಯಾದ  ಈ ಕೊಳಕು ಕೀಟಗಳು ಯಾಕೆ ಒಂದೆಡೆ ಒಟ್ಟಾಗುತ್ತವೆ ಎನ್ನುವ ಗುಟ್ಟು ತಿಳಿಯಲು ವಿಜ್ಞಾನಿಗಳಿಗೆ ಬಹಳ ಕುತೂಹಲ.  ಈ ಗುಟ್ಟು ಗೊತ್ತಾದರೆ ಅವುಗಳ ಕುಂಭಮೇಳವನ್ನು ನಾವೇ ನಡೆಸಿ, ಗುಡಿಸಿ ಬಿಸಾಡಿಬಿಡಬಹುದು ಎನ್ನುವ ದೂರದ ಆಸೆ (ದುರಾಸೆ?) ಇದಕ್ಕೆ ಪ್ರೇರಣೆ.

ಆದರೆ ಕೋಟ್ಯಂತರ ಕಿಲೋಮೀಟರು ದೂರದಲ್ಲಿರುವ ಗೆಲಾಕ್ಸಿಯ ಕರಿಬಿಲದ ಗುಟ್ಟನ್ನಾದರೂ ತಿಳಿಯಬಹುದು. ಅಡುಗೆ ಮನೆಯಲ್ಲಿ ಕಾಲ  ಅಡಿಯಲ್ಲಿ ಓಡಾಡುವ ಜಿರಲೆಗಳ ಗುಟ್ಟನ್ನು ಅರಿಯುವುದು ಸುಲಭವಾಗಿಲ್ಲ. ಜಿರಲೆಗಳನ್ನು ಕೊಲ್ಲುವ ಔಷಧಿಗಳಿವೆ.  ದೂರವಿಡುವ ಲಕ್ಷ್ಮಣರೇಖೆಯಂತಹ ವಸ್ತುಗಳನ್ನೂ ಸೃಷ್ಟಿಸಿದ್ದಾಗಿದೆ. ಆದರೂ ಇವು ಜಾತ್ರೆ ಸೇರುವುದು ಏಕೆ? ಎನ್ನುವುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ನೀವು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಜಿರಲೆಗಳ ಜಾತ್ರೆ ಸೇರಿ ಇಡೀ ಮನೆಯೆಲ್ಲ ವಾಸನೆ ಹೊಡೆಯಲು ಆರಂಭಿಸುತ್ತದೆ. ಜಿರಲೆ ಕಾಣಿಸದೇ ಇರಬಹುದು, ಆದರೆ ಅದರ ವಾಸನೆ ಮೂಗನ್ನು ತಾಕುವುದು ಖಂಡಿತ. ಮೂಗು ಮುಚ್ಚಿಕೊಳ್ಳುವಷ್ಟು ಗಾಢವಾಗಿ ಜಿರಲೆಯ ವಾಸನೆ ಬಂತು ಎಂದರೆ ಅಲ್ಲಿ ನೂರಾರು ಸಂಖ್ಯೆಯಲ್ಲಿ ಈ ಕೀಟಗಳು ಕೂಡಿಕೊಂಡಿವೆ ಎಂದೇ ಅರ್ಥ. ತಿನ್ನಲು ಧಂಡಿಯಾಗಿ ಆಹಾರ ಸಿಗುತ್ತದೆ ಅಂತಲೋ, ಅಥವಾ ಬೆಚ್ಚಗಿನ ನೆಲೆ ಸಿಕ್ಕಿದೆ ಎಂತಲೋ ಎಲ್ಲವೂ ಅಲ್ಲಿ ಒಗ್ಗೂಡುತ್ತವೆಯೋ? ಆದರೆ ಹೀಗೆ ಜಾತ್ರೆ ಸೇರಿದೆಡೆ ಜಿರಲೆಗಳ ಬೆಳವಣಿಗೆ ವೇಗವಾಗಿ ಆಗುತ್ತದೆ ಎನ್ನುವುದು ವಿಜ್ಞಾನಿಗಳಿಗೆ ಗೊತ್ತಿರುವ ವಿಷಯ. ಗೊತ್ತಿಲ್ಲದ್ದು, ಇಂತಲ್ಲಿಗೇ ಬನ್ನಿ ಅಂತ ಅವಕ್ಕೆ ಜಾಹೀರಾತು ನೀಡುವುದು ಯಾವುದು?  ಅವುಗಳಿಗೆ ತಮ್ಮ ಒಡನಾಡಿಗಳಿರುವ ಸ್ಥಳ ಹೇಗೆ ಗೊತ್ತಾಗುತ್ತದೆ ?

ಈ ಬಗ್ಗೆ ಹಲವು ಊಹೆಗಳಿವೆ. ಜಿರಲೆಗಳು ತಮ್ಮ ಒಡನಾಡಿಗಳನ್ನು ಆಕಷಿಸುವ ರಾಸಾಯನಿಕಗಳನ್ನು ಸೂಸುತ್ತಿರಬಹುದು. ಈ ಮೂಲಕ ಇಂತಲ್ಲಿಗೆ ಬನ್ನಿ ಎಂದು ಆಹ್ವಾನ ನೀಡುತ್ತಿರಬಹುದು. ಈ ಊಹೆಯ ಬೆನ್ನತ್ತಿದ ಫ್ರೆಂಚ್ ವಿಜ್ಞಾನಿ ರಿವೋಲ್ಟ್ ಕಲೆಟ್  ಕಳೆದ ಏಪ್ರಿಲ್ ನಲ್ಲಿ ತಮ್ಮ ಶೋಧವನ್ನು ಪ್ರಕಟಿಸಿದ್ದಾರೆ. ಈಕೆ ತಮ್ಮ ಸಂಗಡಿಗರ ಜೊತೆಯಲ್ಲಿ ಅಮೆರಿಕನ್ ಜಿರಲೆಗಳ ಮೇಲೆ ಈ ಪ್ರಯೋಗ ಕೈಗೊಂಡರು. ಕರ್ರಗೆ ದೊಡ್ಡದಾಗಿ ಕಾಣುವ ಹಾರುವ ಜಿರಲೆಗಳು ಇವು. ಇವನ್ನು ಪೆರಿಪ್ಲಾನೆಟಾ ಅಮೆರಿಕಾನಾ  ಎಂದು ವಿಜ್ಞಾನಿಗಳು ಗುರುತಿಸುತ್ತಾರೆ.

ಜಿರಲೆಗಳ ಮೈಯಿಂದ ಹೊರಸೂಸುತ್ತಿರುವ ಯಾವ ರಾಸಾಯನಿಕ ಒಡನಾಡಿಗಳನ್ನು ಸೆಳೆಯುತ್ತಿರಬಹುದು ಎನ್ನುವುದನ್ನು ಪರೀಕ್ಷಿಸಲು ಈಕೆ ಜಿರಲೆಯ ಮೈಯನ್ನು ಅರೆದು ಎರಡು ರಾಸಾಯನಿಕ ದ್ರಾವಣಗಳನ್ನು ತಯಾರಿಸಿದರು. ಒಂದರಲ್ಲಿ ಜಿರಲೆಯ ಚರ್ಮದಲ್ಲಿರುವ ರಾಸಾಯನಿಕಗಳು ಹಾಗೂ ಮತ್ತೊಂದು ಅದರಿಂದ ಗಾಳಿಯಲ್ಲಿ ಹರಡಿಕೊಳ್ಳುವ ರಾಸಾಯನಿಕಗಳ ದ್ರಾವಣ.  ಈ ದ್ರಾವಣಗಳಲ್ಲಿ ಕಾಗದವನ್ನು ಅದ್ದಿ, ಜಿರಲೆಗಳು ಅಲ್ಲಿಗೆ ಓಡಿ ಬರಬಹುದೇ ಎಂದು ನೋಡಿದಾಗ ಒಂದು ಆಶ್ಚರ್ಯ ಕಾದಿತ್ತು. ಮೈ ಮೇಲಿನ ರಸ ಬಹಳಷ್ಟಿದ್ದರೂ ಜಿರಲೆಗಳು ಅಲ್ಲಿಗೆ ಬರಲಿಲ್ಲವಂತೆ.! ಆದರೆ ಅದರೊಟ್ಟಿಗೆ ಗಾಳಿಯಲ್ಲಿ ಹರಡಿಕೊಳ್ಳುವ ರಾಸಾಯನಿಕಗಳ ಒಂದೆರಡು ಹನಿ ಹಾಕಿದರೂ ಸಾಕು, ಜಾತ್ರೆ ನೆರೆಯುತ್ತಿತ್ತಂತೆ. ಇದಕ್ಕೆ ಅವರ ವಿವರಣೆ ಹೀಗಿದೆ. ಗಾಳಿಯಲ್ಲಿ ಹರಡುವ ರಾಸಾಯನಿಕಗಳು ಜಿರಲೆಗಳನ್ನು ದೂರದಿಂದ ಕೈ ಬೀಸಿ ಕರೆಯುತ್ತವೆ. ಹತ್ತಿರ ಬಂದ ಮೇಲೆ ಚರ್ಮದಲ್ಲಿರುವಂಥವು ದೂರ ಸರಿಯದಂತೆ ಗಾಢ ಮೈತ್ರಿಯನ್ನು ಬೆಳೆಸುತ್ತವೆ. ಹೀಗೆ ದೂರದಿಂದ ಕೈಬೀಸಿ ಕರೆಯುವ ಮೂರು ರಾಸಾಯನಿಕಗಳು ಯಾವುವು ಎಂದೂ ಅವರು ಗುರುತಿಸಿದ್ದಾರೆ. ಹೆಕ್ಸಾಡೆಕಾನೋಯಿಕ್ ಆಮ್ಲ, ಪೆಂಟಾಡೆಕಾನೋಯಿಕ್ ಆಮ್ಲ ಹಾಗೂ ಪೆಂಟಾಇಥಿಲೀನ್ ಗ್ಲೈಕಾಲ್ ಈ ರಾಸಾಯನಿಕಗಳು. ಇವುಗಳ ಮಿಶ್ರಣ ಜಿರಲೆಗಳನ್ನು ಸೆಳೆಯುತ್ತವೆ ಎನ್ನುವುದು ಇವರ ತೀರ್ಮಾನ.

cockroach

ಪೆರಿಪ್ಲಾನೆಟಾ ಅಮೆರಿಕಾನಾ ಜಿರಲೆಯ ಜಾತ್ರೆ

ಇದು ಕರಿ ಜಿರಲೆಯ ಮಾತು. ಇನ್ನು ಬಿಳಿ ಜಿರಲೆಯ ಕಥೆ! ಪೆರಿಪ್ಲಾನೆಟಾ ಅಮೆರಿಕಾನಾ ಗಿಂತ ತುಸು ಚಿಕ್ಕದಾಗಿ, ಬೆಳ್ಳಗೆ ಕಾಣುವ ಜಿರಲೆಗಳನ್ನು ಬಿಳಿಜಿರಲೆ ಎನ್ನುತ್ತೇವಷ್ಟೆ! ಇವು ಜಿರಲೆಯ ಮರಿಗಳಲ್ಲ. ಇವನ್ನು ಜರ್ಮನ್ ಜಿರಲೆಗಳು ಎಂದು ವಿಜ್ಞಾನಿಗಳು ಗುರುತಿಸುವ ವಿಜ್ಞಾನಿಗಳು ಇವನ್ನು ಬ್ಲಾಟ್ಟಾ ಜರ್ಮಾನಿಕಾ ಎಂದು ಹೆಸರಿಸಿದ್ದಾರೆ. ಈ ಜರ್ಮನ್ ಜಿರಲೆಗಳಲ್ಲೂ ಜಾತ್ರೆಯಂತೆ ಜಂಗುಳಿಯಾಗುತ್ತದೆ. ಇದಕ್ಕೆ ಕಾರಣವೇನಿರಬಹುದು ಎಂದು ಅಮೆರಿಕೆಯ ನಾರ್ತ್ ಕೆರೋಲಿನಾ ವಿಶ್ವವಿದ್ಯಾನಿಲಯದ ಕೋಬಿ ಸ್ಕಾಲ್ ಮತ್ತು ಸಂಗಡಿಗರು ವರದಿ ಮಾಡಿದ್ದಾರೆ. ಸ್ವಾರಸ್ಯವೆಂದರೆ ಸಂಗಡಿಗರನ್ನು ಕೂಗಿ ಕರೆಯುವುದು ಜಿರಲೆಗಳ ಮೈಯ ವಾಸನೆಯಲ್ಲ. ಅವುಗಳ ಹೊಟ್ಟೆಯಲ್ಲಿರುವ ಬೆಕ್ಟೀರಿಯಾಗಳ ಸಂತೆಯಂತೆ!

ಜರ್ಮನ್ ಜಿರಲೆಗಳ ಹಿಕ್ಕೆಗಳಲ್ಲಿರುವ ರಾಸಾಯನಿಕಗಳು ಅವುಗಳು ಸಂತೆ ಸೇರುವಂತೆ ಪ್ರಚೋದಿಸುತ್ತವೆ ಎಂದು ಈ ಹಿಂದೆ ತಿಳಿದಿತ್ತು. ಹಿಕ್ಕೆಯೆಲ್ಲವನ್ನೂ ಸ್ವಚ್ಛವಾಗಿ ಗುಡಿಸಿ ಹಾಕಿದರೆ ಅಲ್ಲಿ ಜಿರಲೆಗಳು ಮರಳುತ್ತಿರಲಿಲ್ಲ. ಆದರೆ ಒಂದೆರಡು ಹಿಕ್ಕೆಯ ಕಣಗಳು ಇದ್ದರೂ ಸಾಕು, ಸಂತೆಗೂಡುತ್ತಿದ್ದುವು. ಅಂತಹ ಆಕರ್ಷಣೆ ಈ ಹಿಕ್ಕೆಯಲ್ಲೇನಿದೆ? ಅದಕ್ಕೆ ಕಾರಣವೇನು ಎಂದು ಕೋಬಿ ತಂಡ ಪರಿಶೀಲಿಸಿತು.

ಹೊಸದಾಗಿ ಹಾಕಿದ ಹಿಕ್ಕೆಯ ಮೇಲೆ ಜಿರಲೆಗಳ ಉದರದಿಂದ ಸಂಗ್ರಹಿಸಿದ ಬೆಕ್ಟೀರಿಯಾಗಳನ್ನು ಸಿಂಪಡಿಸಿ ನೋಡಿತು. ಹೀಗೆ ಬೆಕ್ಟೀರಿಯಾ ಸಿಂಪಡಿಸಿದ ಹಿಕ್ಕೆಗಳತ್ತ ಬಂದ ಜಿರಲೆಗಳೇ ಹೆಚ್ಚು. ಬೆಕ್ಟೀರಿಯಾ ಸಿಂಪರಿಸದ ಹಿಕ್ಕೆಗಳ ಮೇಲೆ ಸಂತೆ ನೆರೆಯಲಿಲ್ಲ. ಅಂದರೆ ಈ ಬೆಕ್ಟೀರಿಯಾಗಳು ಹಿಕ್ಕೆಯನ್ನು ಅದು ಹೇಗೋ ಆಕರ್ಷಕವಾಗಿಸಿರಬೇಕಷ್ಟೆ! ಇದನ್ನು ನಿರೂಪಿಸಲು ಇವರು ಇನ್ನೂ ಒಂದು ಪ್ರಯೋಗ ಮಾಡಿದರು. ಹಿಕ್ಕೆಗಳ ಮೇಲೆ ಬೆಕ್ಟೀರಿಯಾ ಸಿಂಪರಿಸಿ, ಅದರ ಜೊತೆಗೆ ಬೆಕ್ಟೀರಿಯಾವನ್ನು ಕೊಲ್ಲುವ ಪ್ರತಿಜೀವಕ (ಆಂಟಿಬಯಾಟಿಕ್) ಹಾಕಿದರು. ಆಗ ಬೆಕ್ಟೀರಿಯಾಗಳು ಬೆಳೆಯುವುದಿಲ್ಲವಷ್ಟೆ. ಇಂತಹ ಹಿಕ್ಕೆಗಳ ಮೇಲೆ ಬೆಕ್ಟೀರಿಯಾ ಇಲ್ಲದ ಹೊಸ ಹಿಕ್ಕೆಗಳಂತೆಯೇ ಜಿರಲೆಗಳ ಸಂತೆ ನೆರೆಯಲಿಲ್ಲ. ಅಂದರೆ ಬೆಕ್ಟೀರಿಯಾಗಳೇ ಹಿಕ್ಕೆಗಳನ್ನು ಜಿರಲೆಗಳಿಗೆ ಆಕರ್ಷಕವಾಗಿಸಿರಬೇಕು. ಬೆಕ್ಟೀರಿಯಾಗಳ ಪ್ರಭಾವದಿಂದ ಹಿಕ್ಕೆಗಳಲ್ಲಾಗುವ ಬದಲಾವಣೆಗಳನ್ನು ಗಮನಿಸಿರುವ ಇವರು ಬೆಕ್ಟೀರಿಯಾಗಳು ಬೆಳೆಯುವುದರಿಂದಾಗಿ ಹಿಕ್ಕೆಗಳಿಂದ ಸೂಸುವ ಕಾರ್ಬಾಕ್ಸಿಲಿಕ್ ಆಮ್ಲಗಳು ಇದಕ್ಕೆ ಕಾರಣ ಎಂದಿದ್ದಾರೆ.

ಇವು ಗಾಳಿಯಲ್ಲಿ ಹರಡಿ ಇಲ್ಲಿಗೇ ಬನ್ನಿ ಎಂದು ಬೇರೆ ಜಿರಲೆಗಳನ್ನೂ ಕರೆಯುತ್ತವಂತೆ.! ಒಟ್ಟಾರೆ ಮೈಯ ಗಂಧವೋ, ಮಲದ ಗಂಧವೋ, ಒಟ್ಟಾರೆ ಗಾಳಿಯಲ್ಲಿ ಹರಡುವ ವಾಸನೆಯೇ ಜಿರಲೆಗಳನ್ನು ಕೂಗಿ ಕೂಡಿಸುತ್ತಿದೆ. ಈ ಗಂಧ ಅಲ್ಲಿ ಉಳಿಯದಂತೆ ಮಾಡಿಬಿಟ್ಟರೆ ಜಿರಲೆಗಳು ಜಂಗುಳಿಗಟ್ಟದಂತೆ ಮಾಡಬಹುದೇ? ಅಥವಾ ಈ ಗಂಧವನ್ನೇ ನಾವೂ ಹಚ್ಚಿಟ್ಟು ಬೇಕೆಂದಲ್ಲಿ ಜಿರಲೆಗಳನ್ನು ಕರೆದು ಮಾರಣಹೋಮ ಮಾಡಬಹುದೇ? ಇಲ್ಲವೇ, ಆಂಟಿಬಯಾಟಿಕ್‍ ಗಳನ್ನು ಸುರಿದು ಜಿರಲೆಗಳನ್ನು ಓಡಿಸಬಹುದೇ? ಈಗಾಗಲೇ ಆಂಟಿಬಯಾಟಿಕ್‍  ಗಳ ಬಳಕೆಯಿಂದಾಗಿ ಇವಕ್ಕೆ ಜಗ್ಗದ ರೋಗಾಣುಗಳು ಹುಟ್ಟಿವೆಯಲ್ಲ. ಹಾಗೇ ಆಗಬಹುದೇ? ಕಾದು ನೋಡೋಣ!

_____________

ಮೊನ್ನೆ ಶಾಲೆಯೊಂದರಲ್ಲಿ ಜಿರಲೆಗಳನ್ನು ತೋರಿಸುವಾಗ ಮಕ್ಕಳು ಚೀರಾಡಿ, ಕಿರುಚಾಡುತ್ತಿದ್ದರು. ಪೀಟಿ ಮೇಷ್ಟರು ದೊಡ್ಡ ಕೋಲು ಹಿಡಿದುಕೊಂಡು ಬಂದದ್ದೂ ಆಯಿತು. ಬಹುಶಃ ಮಕ್ಕಳ ಗಲಾಟೆಯನ್ನು ತಣ್ಣಗಾಗಿಸುವುದಕ್ಕೆ ಬಂದಿರಬೇಕು ಎಂದು ಕೊಂಡೆ. ಆಮೇಲೆ ಕೇಳಿದಾಗ ಗೊತ್ತಾಯಿತು. ಗಂಡು ಜಿರಲೆ ಯಾವುದು, ಹೆಣ್ಣು ಜಿರಲೆ ಯಾವುದು ಅಂತ ತೋರಿಸುತ್ತಿದ್ದೆ. ಅದು ಹೇಗೆ ಗುರುತು ಹಿಡಿಯೋದು ಅನ್ನುವ ಕುತೂಹಲದಿಂದ ವ್ಯಾಯಾಮ ಮಾಡಿಸುವುದನ್ನ ಬಿಟ್ಟು ಓಡಿ ಬಂದಿದ್ದರು.

ನಿಮ್ಮ ಬಳಿಯೂ ಇಂತಹ ಜಿರಲೆ ಕಥೆಗಳು, ಪ್ರಸಂಗಗಳು ಇದ್ದರೆ ಇಲ್ಲಿ ಕೂಡಿಸಿ.

Published in: on ಡಿಸೆಂಬರ್ 13, 2015 at 4:49 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2015/12/13/%e0%b2%9c%e0%b2%bf%e0%b2%b0%e0%b2%b2%e0%b3%86%e0%b2%97%e0%b2%b3-%e0%b2%9c%e0%b2%be%e0%b2%a4%e0%b3%8d%e0%b2%b0%e0%b3%86%e0%b2%97%e0%b3%86-%e0%b2%ac%e0%b3%86%e0%b2%95%e0%b3%8d%e0%b2%9f%e0%b3%80%e0%b2%b0/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: