ಪ್ರಸ್ತಾವನೆ
ನನಗೆ ಬೇಸರ ತರಿಸುವ ಒಂದು ಉಪಾಯ ಎಂದರೆ “ನನ್ನ ಬದುಕನ್ನು ಇನ್ನಷ್ಟು ಸಂತೋಷಕರವನ್ನಾಗಿಸುವುದು ಹೇಗೆ?” ಎನ್ನುವುದನ್ನು ಕುರಿತು ಭಾಷಣ ನೀಡುವುದು. ಇದರಿಂದಲೇ ನಿಮಗೆ ಸಂತೋಷದ ಸ್ವರೂಪ ಎನ್ನುವ ಈ ಪುಸ್ತಕ ಸಂತೋಷವನ್ನು ಹೆಚ್ಚಿಸುತ್ತದೆ ಎನ್ನುವ ವ್ಯಾಯಾಮ ಮಾಡಲೋ ಅಥವಾ ಸಂತೋಷದ-ತರಬೇತಿ ಗೆ ಪ್ರವೇಶವನ್ನು ಬಲವಂತ ಮಾಡುವ ಪುಸ್ತಕವಲ್ಲವೆನ್ನುವುದು ಅರ್ಥವಾಗಿರಬಹುದು. ಇದು ಕೆಲವು ಪ್ರಶ್ನೆಗಳನ್ನು ಕೇಳಿ ನಿಮ್ಮ ಸಂತೋಷವನ್ನು ಅಳೆಯುವ ಪುಸ್ತಕವೂ ಅಲ್ಲ.
ಇದು ನಮ್ಮ ಸಂತೋಷಕ್ಕೆ ಇರುವ ಕಾರಣಗಳನ್ನು ವಿವರಿಸುತ್ತದೆ, ಅಷ್ಟೆ. ಆಡು ಮಾತಿನಲ್ಲಿ ನಾವು ಖುಷಿಯಾಗಿರುವುದು ಎಂದು ಹೇಳುವ ಮರೀಚಿಕೆಯಂತಹ ಆ ಭಾವನೆಯನ್ನು ಅರ್ಥಮಾಡಿಕೊಳ್ಳಲು ಇದು ಪ್ರಯತ್ನಿಸುತ್ತಿದೆ. ಈ ಅರಿವು ಅನಂತರ ಖುಷಿಯಾಗಿ ಬದುಕಲು ನೆರವಾದೀತು. ಅರ್ಥಾತ್, ಇಲ್ಲಿ ಹೀಗೆ ಮಾಡಿದರೆ ಖುಷಿ ಸಿಗುತ್ತದೆ ಎನ್ನುವ ಪ್ರವಚನವಿಲ್ಲ. ಬದಲಿಗೆ ಬೇಕಿದ್ದರೆ ಬಳಸಿಕೊಂಡು ಖುಷಿಯಾಗಿರಬಲ್ಲಂತಹ ಅರಿವನ್ನು ನಿಮಗೆ ಮೂಡಿಸಲಿದೆ. ಸಂತೋಷಕ್ಕೆ ಹಲವು ದಾರಿಗಳಿವೆ. ಪ್ರತಿಯೊಂದಕ್ಕೂ ಅದರದ್ದೆ ಆದ ಬಲಾಬಲಗಳಿವೆ. ಕೆಲವು ನಿಮ್ಮನ್ನು ಸೆಳೆಯಬಹುದು, ಕೆಲವು ಸೆಳೆಯದಿರಬಹುದು.
“ಕೊಕೇನ್ ಮದ್ಯ ವ್ಯಸನಿಗೆ ಖುಷಿ ಕೊಡುತ್ತದೇಕೆ?”; “ಆತ್ಮಾಹುತಿ ಮಾಡಿಕೊಳ್ಳುವ ಭಯೋತ್ಪಾದಕನಿಗೆ ಜನರನ್ನು ಸಿಡಿಸಿ ಚಿಂದಿಯಾಗಿಸುವುದೇಕೆ ಸಂತಸ ತರಬೇಕು? ಅಥವಾ “ ಇನ್ನೊಬ್ಬರಿಗೆ ನೋವುಂಟು ಮಾಡುವುದರಿಂದ ಸ್ಯಾಡಿಸ್ಟ್ ಗಳಲ್ಲಿ ಏಕೆ ಸುಖದ ಹೊಳೆಯೇ ಹರಿಯುತ್ತದೆ?” ‘ಸಂತೋಷವನ್ನು ಹೆಚ್ಚಿಸುವ ಕ್ರಮಗಳ” ಬಗ್ಗೆ ತರಬೇತಿಯನ್ನು ನೀಡುವವರಿಗೆ ಈ ಪ್ರಶ್ನೆಗಳನ್ನು ಕೇಳಿದರೆ ತಬ್ಬಿಬ್ಬಾಗುವುದು ಖಂಡಿತ. ಸಂತೋಷದ ನಿಜಸ್ವರೂಪವನ್ನು ತಿಳಿಯಲು ಇವೆಲ್ಲವೂ ಅವಶ್ಯಕ ಪ್ರಶ್ನೆಗಳೇ ಸರಿ. ನಾವು ಸಮಾಜಬಾಹಿರ, ಅಸಹ್ಯಕರ ಹಾಗೂ ಅಪಾಯಕಾರಿಯೆಂದು ಭಾವಿಸಿರುವವುಗಳನ್ನೂ ಒಳಗೊಂಡು ಪ್ರತಿಯೊಂದು ಬಗೆಯ ಖುಷಿಯನ್ನೂ ನಾವು ಗಮನಿಸಬೇಕಾಗುತ್ತದೆ. ಹೀಗೆ ಖುಷಿಯ ಪ್ರತಿಯೊಂದು ಸಾಧ್ಯತೆಗಳನ್ನೂ ಗಮನಿಸಿದ್ದಲ್ಲದೆ ಸಂತೋಷವೆನ್ನುವ ಈ ಸಂಕೀರ್ಣ ವಿದ್ಯಮಾನವನ್ನು ಅರಿಯುವುದು ಅಸಾಧ್ಯ.
————-
ಟಿಪ್ಪಣಿ: ಹ್ಯಾಪಿನೆಸ್ ಪದಕ್ಕೆ ಪರ್ಯಾಯವಾಗಿ ಸಂತೋಷ ಹಾಗೂ ಖುಷಿಯನ್ನು ಬಳಸಿದ್ದೇನೆ. ಇವು ಭಾವನೆಗಳನ್ನು ಬಿಂಬಿಸುವ ಪದಗಳು. “ಸುಖ” ವೂ ಪರ್ಯಾಯವಾಗಬಹುದಾದರೂ ಅದು ಮಾನಸಿಕ ಸ್ಥಿತಿಯನ್ನು ಬಿಂಬಿಸುವುದಿಲ್ಲ ವೆನ್ನಿಸಿ ಅದನ್ನು ಇಲ್ಲಿ ಬಳಸಿಲ್ಲ. ಕಂಫರ್ಟ್ ಪದಕ್ಕೆ ಅದು ಪರ್ಯಾಯವಾಗಬಹುದು…. ಶರ್ಮ
ನಿಮ್ಮದೊಂದು ಉತ್ತರ