ನಾಯಿ ಮನುಷ್ಯನ ಅತ್ಯುತ್ತಮ ಗೆಳೆಯ ಅಂತ ಹೇಳಿಕೆ ಇದೆ. ಇದು ಮನುಷ್ಯನೇ ಹೇಳಿದ್ದು. ನಾಯಿಗಳಿಗೇನಾದರೂ ತಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳುವುದಕ್ಕೆ ಆಗಿದ್ದರೆ ಬಹುಶಃ ಅವು ಮನುಷ್ಯ ನಮ್ಮ ಬದ್ಧ ವೈರಿ ಅಂದು ಬಿಡುತ್ತಿದ್ದವೇನೋ? ಹೀಗೊಂದು ಆಲೋಚನೆಯನ್ನುಂಟು ಮಾಡಿದೆ ಕೊಲ್ಕತ್ತಾದ ಬೀದಿನಾಯಿಗಳ ಮೇಲೆ ನಡೆದ ಒಂದು ಸಂಶೋಧನೆ.
ನಗರದ ಜನ ನಾಯಿಗಳೆಂದರೆ ಬೆಚ್ಚಿ ಬೀಳುತ್ತಾರಷ್ಟೆ! ಸವಿನಿದ್ರೆ ಸವಿಯುವ ಹೊತ್ತಿನಲ್ಲಿ ಎಚ್ಚರವಾಗಿ ಬೊಗಳುವ ಇವುಗಳು ರಾತ್ರಿಪಾಳಿಯಲ್ಲೇ ಬದುಕುವವರಿಗೂ ಅಸಹನೀಯವೆನ್ನಿಸುತ್ತವೆ. ಕೊಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈಂಟಿಫಿಕ್ ಅಂಡ್ ಎಜ್ಯುಕೇಶನಲ್ ರೀಸರ್ಚ್ (ಐಐಎಸ್ಇಆರ್) ನ ಜೀವವಿಜ್ಞಾನಿ ಅನಿಂದಿತಾ ಭದ್ರ ಮತ್ತು ಸಂಗಡಿಗರು ಹೇಳುವ ಪ್ರಕಾರ ಬೆಚ್ಚಿ ಬೀಳಬೇಕಾದ್ದು ಮನುಷ್ಯರಲ್ಲ ಬೀದಿನಾಯಿಗಳು. ಏಕೆಂದರೆ ತನ್ನ ಅತ್ಯುತ್ತಮ ಗೆಳೆಯರ ಸಾವಿಗೆ ಮಾನವನೇ ಹೇತುವಂತೆ.
ಬೀದಿನಾಯಿಗಳು ಬೀದಿಗೆ ಬೀಳುವ ಮುನ್ನ ಮಾನವನ ಜೊತೆಗಾರರಾಗಿದ್ದವೆಂಬುದಂತೂ ಸತ್ಯ. ಮೂಲತಃ ಕಾಡಿನ ತೋಳಗಳು. ಇವು ಮಾನವನ ಸಹವಾಸಕ್ಕೆ ಬಂದು ಅವನಿಂದ ಕಲಿತವೋ, ಅವನಿಗೆ ಬಾಗಿದುವೋ, ಒಟ್ಟಾರೆ ತೋಳಗಳಂತಲ್ಲದೆ ಸೌಮ್ಯಜೀವಿಗಳಾಗಿ ಬದುಕಿವೆ. ಸೌಮ್ಯಜೀವಿಗಳಾದರೂ, ಮನುಷ್ಯರಿಗೆ ಇವನ್ನು ಕಂಡರೆ ಹೆದರಿಕೆಯೇ ಸರಿ. ಏಕೆಂದರೆ ಜಾಗತಿಕವಾಗಿ ಪ್ರತಿವರ್ಷ ರೇಬೀಸ್ ಖಾಯಿಲೆಯಿಂದ ಸಾಯುವ ಜನರಲ್ಲಿ ಶೇಕಡ ತೊಂಬತ್ತೊಂಬತ್ತು ಜನ ಬೀದಿನಾಯಿ ಕಡಿತದಿಂದಲೇ ಸಾಯುತ್ತಾರಂತೆ. ಅದೂ ಈ ಬೀದಿನಾಯಿಗಳನ್ನು ನಿಯಂತ್ರಿಸದ ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಇದು ಹೆಚ್ಚು.
ಭಾರತ ಎಷ್ಟೇ ಅಭಿವೃದ್ಧಿಯಾಗಿದೆ ಎಂದುಕೊಂಡರೂ, ಬೀದಿನಾಯಿಗಳ ಸಂಖ್ಯೆ ಹೆಚ್ಚಿರುವುದೂ ಸತ್ಯವೇ! ನಗರಗಳಲ್ಲಂತೂ ಬೀದಿನಾಯಿಗಳನ್ನು ನಿಯಂತ್ರಿಸಲು ಹಲವು ಉಪಾಯಗಳನ್ನು ಹುಡುಕಿದ್ದಾರೆ. ಯಾವುದೂ ಸಫಲವಾಗುತ್ತಿಲ್ಲ ಎನ್ನುವುದು ಬೇರೆ ಮಾತು. ಗಂಡು ನಾಯಿಗಳ ಬೀಜವೊಡೆಯುವುದು, ಲಸಿಕೆ ಹಾಕಿ ಗಂಡಸತ್ವ ಕಳೆಯುವುದೇ ಮೊದಲಾದ ವಿಧಾನಗಳಿಂದ ಆರಂಭಿಷಿ ವಿಷ ಹಾಕುವುದು, ತಲೆ ಒಡೆಯುವಂತಹ ವಿಧಾನಗಳನ್ನೂ ಬಳಸಿ ಬೀದಿನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಮುನಿಸಿಪಾಲಿಟಿಗಳೂ ಪ್ರಯತ್ನಿಸುತ್ತಿವೆ.
ಈ ಪ್ರಯತ್ನಗಳ ಸುದ್ದಿಯನ್ನು ಓದಿದವರಿಗೆ ಇದೆಂಥ ನಾಯಿಪಾಡು ಮನುಷ್ಯರದ್ದು ಎನ್ನಿಸಬಹುದು. ಎಷ್ಟೇ ಪ್ರಯತ್ನಿಸಿದರೂ ಈ ಬೀದಿನಾಯಿಗಳನ್ನು ಮೆಟ್ಟಲಾಗುತ್ತಿಲ್ಲವಲ್ಲ! ಭದ್ರ ಅವರ ಪ್ರಕಾರ ಇದಕ್ಕೆ ಕಾರಣ ನಮಗೆ ಬೀದಿನಾಯಿಗಳ ಸಂಸಾರದ ಬಗ್ಗೆ ತಿಳುವಳಿಕೆ ಇಲ್ಲ. ಅರ್ಥಾತ್, ಬೀದಿನಾಯಿಗಳು ಎಷ್ಟು ಕಾಲ ಬದುಕುತ್ತವೆ? ಹೇಗೆ ಬದುಕುತ್ತವೆ? ಹೇಗೆ ಸಾಯುತ್ತವೆ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲ.
ಅದಕ್ಕೆ ಭದ್ರ ಮತ್ತು ಸಂಗಡಿಗರು ಕೊಲ್ಕತ್ತಾದ ಬೀದಿ, ಬೀದಿಗಳನ್ನು ಪದಶಃ ಅಲೆದು ನೂರೆಂಟು ನಾಯಿ ಕುಟುಂಬಗಳ ಚರಿತ್ರೆಯನ್ನು ದಾಖಲಿಸಿದ್ದಾರೆ. ಒಬ್ಬೊಬ್ಬ ವ್ಯಕ್ತಿಯೂ ಒಂದು ಚದರ ಕಿಲೋಮೀಟರು ಫಾಸಲೆಯಲ್ಲಿ ಓಡಾಡಿ ಅಲ್ಲಿರುವ ನಾಯಿಗಳ ಕುಟುಂಬಗಳು, ಅವುಗಳಲ್ಲಿರುವ ಮರಿ, ಮರಿಗಳ ಅಂದಾಜು ವಯಸ್ಸು, ಇವುಗಳನ್ನು ಗಮನಿಸಿ ದಾಖಲಿಸಿದ್ದಾರೆ. ಅನಂತರ ಈ ನಾಯಿ ಸಮಾಜದಲ್ಲಿ ಸಾಯದೇ, ಮನುಷ್ಯರ ಕೈಗೆ ಸಿಕ್ಕದೆ ಉಳಿದವುಗಳೆಷ್ಟು ಎಂದು ಲೆಕ್ಕ ಹಾಕಲು ಪ್ರಯತ್ನಿಸಿದ್ದಾರೆ.
ನಾಯಿಮರಿಗಳು ಸುಮಾರು ಮೂರು ತಿಂಗಳವರೆಗೂ ತಾಯ ಆಸರೆಯಲ್ಲಿಯೇ ಬೆಳೆಯುತ್ತವೆ. ಅನಂತರ ತಾಯಿ ಯಾರೋ, ತಾವು ಯಾರೋ ಎನ್ನುವಂತೆ ಸ್ವತಂತ್ರ ಜೀವಿಗಳಾಗುತ್ತವೆ. ಸುಮಾರು ಆರು ತಿಂಗಳ ವೇಳೆಗೆ ಈ ಬಿಡಾಡಿಗಳೂ ವಯಸ್ಸಿಗೆ ಬಂದು ಯುವಮರಿಗಳಾಗುತ್ತವೆ. ಇಷ್ಟು ಆಗುವವರೆಗೂ ಅವು ಸಮಾಜದಲ್ಲುಳಿದರೆ ಆ ಸಮಾಜದ ಬೆಳವಣಿಗೆಗೆ ಕಾರಣವಾಗುತ್ತವಷ್ಟೆ?
ಆದ್ದರಿಂದ ಏಳುತಿಂಗಳ ವಯಸ್ಸಾಗುವವರೆಗೆ ಈ ನೂರೆಂಟು ಕುಟುಂಬದಲ್ಲಿ ಮರಿಗಳೆಷ್ಟು ಉಳಿದುವು ಎನ್ನುವುದೇ ಇವರ ಸಂಶೋಧನೆಯ ಸಾರಾಂಶ. ಅನಂತರ ಮರಿಗಳು ಸಾವಿಗೀಡಾದರೆ ಆ ಸಾವಿನ ಕಾರಣವನ್ನೂ ದಾಖಲಿಸಿದ್ದಾರೆ. ಉದಾಹರಣೆಗೆ, ಅಪಘಾತ, ಮನುಷ್ಯರ ಕಾಟದಿಂದ ಸಾವು ಅಥವಾ ಮನುಷ್ಯರು ಹೊತ್ತೊಯ್ದದ್ದನ್ನೂ ಸಾವೆಂದು ಪರಿಗಣಿಸಿದ್ದಾರೆ.
ಮರಿಗಳು ಮೂರು ತಿಂಗಳಾಗುವವರೆಗೂ ಸಹಜ ಸಾವೇ ಹೆಚ್ಚಂತೆ. ಮನುಷ್ಯನಿಂದಾಗಿ ಸಾಯುವ ಮೂರು ತಿಂಗಳೊಳಗಿನ ವಯಸ್ಸಿನ ಮರಿಗಳ ಪ್ರಮಾಣ ಕೇವಲ ಶೇಕಡ 3. ಆದರೆ ಅದೇ ಮೂರರಿಂದ ಏಳು ತಿಂಗಳಾಗುವವುದರೊಳಗೆ ಇವುಗಳಲ್ಲಿ ಬಹುತೇಕ ಮರಿಗಳು ಮನುಷ್ಯರ ವಾಹನಕ್ಕೆ ಸಿಕ್ಕೋ, ಅವರು ಉಣ್ಣಿಸಿದ ವಿಷದಿಂದಲೋ ಅಥವಾ ಮುನಿಸಿಪಾಲಿಟಿಯವರ ಬಡಿಗೆಗೆ ಸಿಕ್ಕೋ ಸಾವನ್ನಪ್ಪುತ್ತವೆ. ಇಂತಹ ಮರಿಗಳ ಪ್ರಮಾಣ ಸುಮಾರು ಶೇಕಡ 56 ರಷ್ಟು. ಅಂದರೆ ಸಮಾಜದಿಂದ ಅಳಿದು ಹೋಗುವ ಯುವಮರಿಗಳಿಗೆ ಮನುಷ್ಯನೇ ಯಮ!
ಮತ್ತೊಂದು ವಿಚಿತ್ರವೆಂದರೆ ಇವುಗಳಲ್ಲಿ ಹೆಣ್ಣು ಮರಿಗಳು ಹೆಚ್ಚೆಚ್ಚು ವಾಹನ ಅಪಘಾತಗಳಲ್ಲಿ ಸಾವನ್ನಪ್ಪಿದ್ದು. ‘ಇದು ನಿಜವೋ ಅಥವಾ ಗಂಡುಗಳನ್ನು ಸಮೂಹದಿಂದ ಮೊದಲೇ ತೆಗೆದುಕೊಂಡು ಹೋಗಿದ್ದರಿಂದ ಈ ರೀತಿ ತೋರುತ್ತಿದೆಯೋ ಗೊತ್ತಿಲ್ಲ” ಎನ್ನುವ ಭದ್ರ, ಅದನ್ನು ಪರಿಶೀಲಿಸಲು ಕಂಪ್ಯೂಟರ್ ಸಿಮ್ಯುಲೇಶನ್ (ಅಣಕ ಅಧ್ಯಯನ) ಪರೀಕ್ಷೆಯನ್ನೂ ಮಾಡಿದ್ದಾರೆ. ಇದೂ ಕೂಡ, ಏಳು ತಿಂಗಳೊಳಗಿನ ಮರಿಗಳಲ್ಲಿ ಹೆಣ್ಣುಗಳೇ ಸಾವನ್ನಪ್ಪುವುದು ಹೆಚ್ಚು ಎಂದು ತಿಳಿಸಿದೆ.
ಇದರಿಂದ ಬೀದಿನಾಯಿಗಳ ಸಂಖ್ಯೆ ಕಡಿಮೆಯಾಗಬೇಕಲ್ಲವೇ? ಹೌದು. ಆದರೆ ಏಳು ತಿಂಗಳ ನಂತರ ಬದುಕುಳಿದ ನಾಯಿಗಳಲ್ಲಿ ಈ ಅಸಮತೋಲನ ಹೇಗೋ ಸರಿ ಹೋಗಿ ಬಿಡುತ್ತಿದೆ. ಬಹುಶಃ ಈ ವಯಸ್ಸಿನಲ್ಲಿ ಸಾವಿನ ರೀತಿ ಬದಲಾಗುತ್ತಿರಬಹುದು ಎನ್ನುತ್ತಾರೆ ಭದ್ರ.
ಏನೇ ಇರಲಿ. ಸನ್ಮಿತ್ರನಿಗೆ ಸಾವು ತರುವಂತಹ ಮಾನವರು ನಾವು ಎನ್ನುವುದು ಮಾತ್ರ ನಿಜ.
Manabi Paul, Sreejani Sen Majumder, Shubhra Sau, Anjan K. Nandi & Anindita Bhadra, High early life mortality in freeranging dogs is largely influenced by humans , Scientific RepoRts | 6:19641 | DOI: 10.1038/srep19641, 2016, published 25 Jan. 2016
ನಿಮ್ಮದೊಂದು ಉತ್ತರ