ಅಧ್ಯಾಯ 1
ಸಂತೋಷದ ಸೆಲೆ
ಸಂತೋಷದ ಸ್ವರೂಪ ಕುರಿತಂತೆ ಅಪಾರ್ಥವೇ ಹೆಚ್ಚು. ಸಂತೋಷವೆಂದರೆ ಮಾನಸಿಕ ಶಾಂತಿ, ತೃಪ್ತಿ ಅಥವಾ ಸುಖ ಎಂದು ಗೊಂದಲಿಸಿಕೊಳ್ಳುವುದು ಸಾಮಾನ್ಯ. ಬದುಕು ಚೆನ್ನಾಗಿದ್ದಾಗ ಇರುವ ಭಾವವೇ ಸುಖ, ಇದ್ದಕ್ಕಿದ್ದ ಹಾಗೆ ಬದುಕು ಸುಧಾರಿಸಿದಾಗ ಉಂಟಾಗುವ ಭಾವವೇ ಸಂತೋಷ. ಇದು ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸುವ ಉತ್ತಮ ವಿವರಣೆ. ಅದ್ಭುತವಾದದ್ದೇನೋ ಆದ ತತ್ ಕ್ಷಣದಲ್ಲೇ ಭಾವನೆ ಉಕ್ಕಿ ಹರಿಯುತ್ತದೆ. ಗಾಢ ಸುಖವೆನ್ನಿಸುತ್ತದೆ. ಆನಂದ ಸ್ಫೋಟಗೊಳ್ಳುತ್ತದೆ. ನಾವು ನಿಜಕ್ಕೂ ಸಂತೋಷವಾಗಿರುವ ಕ್ಷಣ ಎಂದರೆ ಇದೇ. ದುರದೃಷ್ಟವಶಾತ್, ಇದು ಹೆಚ್ಚು ಹೊತ್ತಿರುವುದಿಲ್ಲ. ಗಾಢ ಸಂತೋಷವೆನ್ನುವುದು ಕ್ಷಣಿಕ, ತಾತ್ಕಾಲಿಕ ಭಾವ. ಇನ್ನೂ ಒಂದಷ್ಟು ಹೊತ್ತು ಈ ಸುಖದ ಭಾವ ಉಳಿಯಬಹುದು. ಆದರೆ ಆ ಖುಷಿ ಎನ್ನುವುದು ಕೂಡಲೇ ಮರೆಯಾಗಿರುತ್ತದೆ. ಸಿನಿಕನೊಬ್ಬನ ಮಾತಿನಂತೆ “ಬದುಕೆನ್ನುವುದು ಅಲ್ಲಲ್ಲಿ ಖುಷಿಯ ಕ್ಷಣಗಳೆನ್ನುವ ವಿರಾಮವಿರುವ ಸುದೀರ್ಘ ದುಃಖ”
ಹಾಗಿದ್ದರೆ ಈ ಖುಷಿಯ ಕ್ಷಣಗಳನ್ನುಂಟು ಮಾಡುವಂಥದ್ದು ಯಾವುದು? ಇದನ್ನು ತಿಳಿಯಬೇಕೆಂದರೆ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ನಾವು – ಮಾನವನೆಂಬ ಜೀವಿ – ವಿಕಾಸವಾದ ಹಾದಿಯನ್ನು ಹೊರಳಿ ನೋಡಬೇಕು. ನಮ್ಮ ಬಲು ದೂರದ ಪೂರ್ವಜರು ಹಣ್ಣು, ಕಾಯಿಗಳು ಹಾಗೂ ಕೀಟಗಳನ್ನು ತಿನ್ನುತ್ತಿದ್ದ ಮರ-ವಾಸಿಗಳಾಗಿದ್ದರು. ಮಂಗಗಳಂತೆಯೇ ತಮ್ಮ ನಿತ್ಯ ಜೀವನದಲ್ಲಿ ಇವರು ಇಂತಹ ಖುಷಿಯ ಕ್ಷಣಗಳನ್ನು ಕಾಣುತ್ತಿರಲ್ಲಿಲ. ಆದರೆ ಅನಂತರ ಇವರು ತಮ್ಮ ನಿಕಟ ಸಂಬಂಧಿಗಳಿಂದ ಹೊರಳಿ, ಬೇರೆಯದೇ ವಿಕಾಸದ ಹಾದಿಯಲ್ಲಿ ನಡೆದು ಬಂದರು. ಮರಗಳಲ್ಲಿ ಹಣ್ಣು ಹೆಕ್ಕುವ ಸುಲಭವಾದ, ಮತ್ತೆ, ಮತ್ತೆ ಮಾಡಬೇಕಾದ ಕಾಯಕವನ್ನು ಬಿಟ್ಟು ಇವರು ಬಯಲುಗಳಲ್ಲಿ ಒಟ್ಟಾಗಿ ಅಟ್ಟಾಡುತ್ತಾ ಬೇಟೆಯಾಡುವ ಶ್ರಮದ ಬದುಕನ್ನು ಆಯ್ದುಕೊಂಡರು. ಈ ಬದಲಾವಣೆಗೆ ಹೊಸ ಮಾನಸಿಕ ಸಾಮರ್ಥ್ಯವೂ ಬೇಕಾಯಿತು. ಸಹಕಾರ, ಬುದ್ದಿವಂತಿಕೆ, ಸಂವಹನ ಮತ್ತು ಧೈರ್ಯ ಹೆಚ್ಚಬೇಕಾಯ್ತು. ಸುದೀರ್ಘ ಕಾಲ ಒಂದೇ ಗುರಿಯತ್ತ ಗಮನ ಕೇಂದ್ರೀಕರಿಸುವ ಏಕಾಗ್ರತೆಯೂ ಬೇಕಾಯಿತು.
ಬಲಶಾಲಿ ಬೇಟೆಗಳನ್ನು ಬಗ್ಗುಬಡೆಯಲು ಸಹಕಾರ ಅವಶ್ಯಕ. ಬೇಟೆಯ ಉಪಾಯಗಳನ್ನು ಹೂಡಲು ಹಾಗೂ ಅಟ್ಟಾಡಿ ಕೊಲ್ಲುವ ತಂತ್ರಗಳನ್ನು ಯೋಜಿಸಲು ಸಂವಹನ ಬೇಕಿತ್ತು. ಧೈರ್ಯವೂ ಬೇಕಾಯ್ತು. ಮಾನವನಂತಹ ಪುಟ್ಟ ಪ್ರೈಮೇಟು (ಮಂಗ, ವಾನರ, ಮಾನವರನ್ನು ಪ್ರೈಮೇಟುಗಳೆನ್ನುತ್ತಾರೆ) ಮಾರಕ ಬೇಟೆಗಾರನಾಗಬೇಕಾದರೆ ತನ್ನ ಪೂರ್ವಜರಾದ ಮಂಗಗಳಲ್ಲಿ ಇಲ್ಲದ ಅಪಾಯವನ್ನು ಮೈಮೇಲೆದುಕೊಳ್ಳುವ ನಡವಳಿಕೆ ಬೇಕು. ಸ್ವಲ್ಪ ಅಪಾಯದ ಸುಳಿವು ಸಿಕ್ಕರೂ ಮಂಗಗಳು ಮರವೇರಿ ಸುರಕ್ಷತೆಯತ್ತ ಓಡಿಹೋಗುತ್ತವೆ. ನಮ್ಮ ಪೂರ್ವಜರು ಈ ಅಳುಕಿನ ಪ್ರತಿಕ್ರಿಯೆಯನ್ನು ಅದುಮಿಟ್ಟು, ಬೇಟೆಯಾಡುವಾಗಿನ ಅಪಾಯಗಳನ್ನು ಎದುರಿಸುವ ಸಂಪೂರ್ಣ ಹೊಸತಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕಾಯ್ತು. ಹಣ್ಣು ಹೆಕ್ಕುವುದಕ್ಕೆ ಹೋಲಿಸಿದರೆ ಬೇಟೆಯಾಡುವುದು ಬಲು ದೀರ್ಘವಾದ ಚಟುವಟಿಕೆಯಾದ್ದರಿಂದ ಏಕಾಗ್ರತೆಯೂ ಬೇಕಾಯಿತು. ಪ್ರೈಮೇಟುಗಳಲ್ಲಿ ಕಾಣಬರದ ಒಗ್ಗಟ್ಟು, ಏಕಾಗ್ರತೆ ಹಾಗೂ ಛಲದಿಂದ ಬೆನ್ನತ್ತುವ ಹೊಸ ನಡವಳಿಕೆಗಳು ನಮ್ಮ ಪೂರ್ವಜರು ಬೆಳೆಸಿಕೊಳ್ಳಬೇಕಾಯ್ತು.
ಈ ಬಗೆಯ ಅಪಾಯಕಾರಿ ಆಹಾರಾನ್ವೇಷಣೆಯಲ್ಲಿ ಸಫಲರಾಗಬೇಕೆಂದರೆ ನಾವು ಇನ್ನಷ್ಟು ಚುರುಕಾಗಬೇಕಾಯ್ತು. ತೀವ್ರ ವ್ಯಾಯಾಮದ ಬಯಕೆ ಅವಶ್ಯಕವಾಯಿತು. ಬೇಟೆಯಾಟದಲ್ಲಿ ಗೆದ್ದಮೇಲೆ ನಮ್ಮ ಸಾಮಾಜಿಕ ಬದುಕಿನಲ್ಲಿ ಹೊಸದೊಂದು ಅಂಶವನ್ನು ಕೂಡಿಸಬೇಕಾಗಿ ಬಂತು. ನಾವು ಆಹಾರವನ್ನು ಹಂಚಿಕೊಳ್ಳಬೇಕಾಯಿತು. ಚರಿತ್ರಪೂರ್ವದ ಮಾನವರನ್ನು ಹಾಲಿವುಡ್ ಚಿತ್ರಗಳಲ್ಲಿ ಸದಾ ತನ್ನ ಬಳಗದವರ ತಲೆಯನ್ನೇ ಬಡಿಗೆಯಿಂದ ಹೊಡೆಯುತ್ತಿರುವ ಕ್ರೂರ, ಕಾಳಗಜೀವಿಯಾಗಿ ಅದೇಕೆ ಬಿಂಬಿಸುತ್ತಾರೋ ಗೊತ್ತಿಲ್ಲ. ನಿರ್ಮೊಪಕರೋ, ಅವರ ಮನೋವೈದ್ಯರೋ ಉತ್ತರ ಹೇಳಬೇಕು! ಇಂತಹ ಘಟನೆಗಳು ನಡೆಯುವುದಿಲ್ಲವೆಂದಲ್ಲ. ಈಗಲೂ ಇವು ನಡೆಯಬಹುದು. ಆದರೆ ಇಂತಹ ಘಟನೆಗಳೇ ನಿತ್ಯ ಸಹಜವೆನ್ನಿಸಿಬಿಟ್ಟಿದ್ದರೆ ವಿಕಾಸದ ಪ್ರಾಥಮಿಕ ಹಂತಗಳಲ್ಲಿ ನಾವು ಬದುಕಿ ಉಳಿಯುವುದು ಸಾಧ್ಯವೇ ಇರಲಿಲ್ಲ. ಬಳಗದೊಳಗೆ ಹಿಂಸೆ ಎನ್ನುವುದು ಅಪರೂಪವಿದ್ದಿರಬೇಕು. ಇಲ್ಲದಿದ್ದರೆ ಬರೇ ಗೊಂದಲವಿರುತ್ತಿತ್ತು. ಬಹುಶಃ ಆಗ ಒಬ್ಬರಿನ್ನೊಬ್ಬರ ಜೊತೆಗೆ ಸಹಕರಿಸುವ, ಸಹಾಯ ನೀಡುವ ಹಾಗೂ ಹಂಚಿಕೊಳ್ಳುವ ಭಾವನೆಗಳೇ ಪ್ರಬಲವಾಗಿದ್ದಿರಬೇಕು. ಇವಿಲ್ಲದೆ ನಾವು ಸುಧಾರಿಸುತ್ತಲೇ ಇರಲಿಲ್ಲ.
ಇಂದು ದಿನಪತ್ರಿಕೆಗಳು, ಟೆಲಿವಿಷನ್ ನೋಡುವಾಗ ಇದೆಂತಹ ಹಿಂಸೆಯ, ಕ್ರೂರವಾದ ಕಾಲ ಎಂದು ನಮಗೆ ತೋರುತ್ತದೆ. ಆದರೆ ಇದು ತಿರುಚಿದ ಸತ್ಯ ಹಾಗೂ ‘ಉ..ಉ.. ಢಿಶುಂ ಢಿಶುಂ’ ಎಂದು ನಮ್ಮ ಪೂರ್ವಜರನ್ನು ಹಾಲಿವುಡ್ ನಿರ್ಮಾಪಕರು ಚಿತ್ರಿಸಿರುವ ಸುಳ್ಳಿನಷ್ಟೆ ದೊಡ್ಡದು. ಈಗ ನಾವು ತಲುಪಿರುವ ಜನಸಂಖ್ಯೆಯ ಮಟ್ಟವನ್ನೂ, ನಾವು ಸಹಿಸುವ ಅತಿ ಜನದಟ್ಟಣೆಯನ್ನೂ ಲೆಕ್ಕಿಸಿದರೆ, ನಿಜಕ್ಕೂ ನಾವು ಶಾಂತಿಪ್ರಿಯರು, ಸೌಮ್ಯವಾದ ಅದ್ಭುತ ಜೀವಿಗಳು. ಇದನ್ನು ನಂಬಲು ಅಸಾಧ್ಯ ಎನ್ನಿಸಿತೇ? ಈ ದಿನ ಉದಯವಾದಾಗಿನಿಂದ ಸಂಜೆಯವಿರೆಗೆ ಯಾರಿಂದಲೂ ಪೆಟ್ಟು ತಿನ್ನದೆ ದಿನಗಳೆದ ಲಕ್ಷಾಂತರ, ಕೋಟ್ಯಂತರ ಜನರೆಷ್ಟಿದ್ದಾರೆಂದು ಲೆಕ್ಕ ಹಾಕಿ ನೋಡಿ. ನಮ್ಮ ಪುಣ್ಯ. ಬಹಳಷ್ಟು ಜನ ಹೀಗೇ ಇದ್ದಾರೆ. ನಾವು ಏಳು ಬಿಲಿಯನ್ ಜನರಲ್ಲಿ ಹೀಗೆ ಗುದ್ದಾಡುವವರು ಹಾಗು ಅಪರೂಪಕ್ಕೊಮ್ಮೆ ಕಲ್ಲನ್ನೋ, ಬಾಂಬನ್ನೋ ಬಿಸಾಡುವವರು ಅಷ್ಟಿಷ್ಟು ಇದ್ದೇ ಇರುತ್ತಾರೆ. ಸುದ್ದಿ ಮಾಧ್ಯಮದವರ ಅದೃಷ್ಟ. ಇವರೇ ಅವರಿಗೆ ಸುದ್ದಿ. ಆದರೆ ಮರೆಯಬೇಡಿ. ನಮ್ಮಲ್ಲಿ ಬಹುತೇಕ ಜನ, ಬಹಳಷ್ಟು ವೇಳೆ, ಇಂತಹ ಯಾವುದೇ ಹಿಂಸೆಯ ಬದಲಿಗೆ ಸಂತೋಷದ ಹುಡುಕಾಟದಲ್ಲೇ ನಿರತರು.
ಬೇಟೆಗಾರನ ಬದುಕಿಗೆ ಹೊರಳಿದ್ದರ ಮತ್ತೊಂದು ಪರಿಣಾಮವೆಂದರೆ ನಮ್ಮ ಕುತೂಹಲ ಹೆಚ್ಚಿದ್ದು. ಹುಚ್ಚೇ ಏನೋ ಎನ್ನುವ ಮಟ್ಟಿಗೆ ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ಪರೀಕ್ಷಿಸಿ ಅನ್ವೇಷಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡೆವು. ಮರಿ ಮಂಗಗಳ ಆಟದಲ್ಲಿಯೂ ಇದನ್ನು ಕಾಣುತ್ತೇವೆ. ಈ ಪ್ರವೃತ್ತಿ ಅವುಗಳು ಪ್ರೌಢವಾಗುವುದರೊಳಗೆ ಮರೆಯಾಗಿಬಿಡುತ್ತದೆ. ಆದರೆ ನಾವು ಮಾತ್ರ ಈ ಮಕ್ಕಳಾಟಿಕೆಯ ಕುತೂಹಲವನ್ನು ದೊಡ್ಡವರಾದಾಗಲೂ ಉಳಿಸಿಕೊಂಡಿದ್ದೇವೆ. ವಯಸ್ಕರಲ್ಲಿ ಇದು ನಮ್ಮ ಪರಿಸರದ ಅಂಶಗಳನ್ನು ವಿಶ್ಲೇಷಿಸಿ, ವರ್ಗೀಕರಿಸುವ ಪ್ರೌಢಗುಣವಾಗಿ ಇದು ಮುಂದುವರೆಯುತ್ತದೆ. ಬುಡಕಟ್ಟು ಜನರಾಗಿ ನಾವು ಬೇಟೆಗೆ ಬೇಕಾದ ಆ ಜಾಗದ ಅರಿವನ್ನು, ಬೇಟೆಯ ಪ್ರಾಣಿಗಳ ನಡವಳಿಕೆಗಳನ್ನು ಇದರಿಂದಷ್ಟೆ ಅರ್ಥಮಾಡಿಕೊಳ್ಳಬಹುದಾಯ್ತು. ಮೊಸರಿನ ಮೇಲೆ ಕೊಸರಿನಂತೆ ಈ ತೀವ್ರ ಕುತೂಹಲ ಶೋಧ ಪ್ರವೃತ್ತಿಗೆ ಹಾದಿ ಮಾಡಿ ಕೊಟ್ಟಿತು. ಶೋಧಗಳು ಹೊಸ ಸಾಧನಗಳತ್ತ ಕೊಂಡೊಯ್ದವು. ಸಾಧನಗಳು ತಾಂತ್ರಿಕ ಮುನ್ನಡೆಯತ್ತ ಕರೆದೊಯ್ದವು.
ಈ ತಾಂತ್ರಿಕ ಸುಧಾರಣೆಗಳು ಸುಮಾರು ಒಂದು ಮಿಲಿಯನ್ ವರ್ಷಗಳವರೆಗೆ ಬೇಟೆಗಾರ ಕಾಡುಜನರಾಗಿದ್ದ ನಮ್ಮನ್ನು ಬೆರಗುಗೊಳಿಸುವ ಹೊಸ ಪ್ರಪಂಚದ ಹೊಸ್ತಿಲಿನೆಡೆ ಕೊಂಡೊಯ್ದವು. ಬೇಟೆಗಾರ ಆದಿಮಾನವ ಕೃಷಿಕನಾದ. ಬೇಟೆಯ ಪ್ರಾಣಿಗಳನ್ನು ಹಾಗೂ ನಮ್ಮ ಆಹಾರ ಬೆಳೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ನಿಯಂತ್ರಿಸಿದ್ದರಿಂದಾಗಿ ಮೊತ್ತ ಮೊದಲ ಬಾರಿಗೆ ನಮ್ಮ ಬಳಿ ಅವಶ್ಯಕ್ಕಿಂತ ಆಹಾರ ಹೆಚ್ಚಾಯಿತು. ಆಹಾರಾನ್ವೇಷಣೆ ಎಷ್ಟು ಸಮರ್ಥವಾಗಿಬಿಟ್ಟಿತ್ತೆಂದರೆ ಅದಕ್ಕಾಗಿ ಪಂಗಡದ ಎಲ್ಲ ಸದಸ್ಯರ ನೆರವೂ ಬೇಕಿರಲಿಲ್ಲ. ಇದರ ಅರ್ಥವಿಷ್ಟೆ. ಈಗ ವಿಶೇಷ ಕೌಶಲಗಳಿದ್ದವರು ಅದನ್ನು ತೀವ್ರಗತಿಯಿಂದ ಸುಧಾರಿಸಿಕೊಳ್ಳಬಹುದಾಯ್ತು. ನವ ಶಿಲಾಯುಗದ ಈ ಕ್ರಾಂತಿಯಿಂದಾಗಿ ಹಳ್ಳಿಗಳು, ಪಟ್ಟಣಗಳಾಗಿ, ಪಟ್ಟಣಗಳು ನಗರಗಳಾಗಿ ಬೆಳೆಯುವುದನ್ನು ಕಂಡೆವು. ಆ ಪುಟ್ಟ ಬುಡಕಟ್ಟು ಪಂಗಡಗಳು ಈಗ ಮಹಾಪಂಗಡಗಳಾಗಿ ಹಿಗ್ಗಿದುವು. ಮಾನವನ ಶೋಧಪ್ರಕೃತಿಯ ಬಲವೆನ್ನಿಸಿದ ಕುತೂಹಲಕ್ಕೆ ಲಂಗುಲಗಾಮಿಲ್ಲವಾಯಿತು. ಖುಷಿ ಎನ್ನುವುದು ಹೊಸ ಆಟಿಕೆ, ಹೊಸ ಪದ, ಹೊಸ ವಸ್ತು, ಹೊಸ ಸಾಧನ, ಹೊಸ ಬಗೆಯ ಸಂಚಾರ, ಹೊಸ ಶೈಲಿಯ ಕಟ್ಟಡವೆಂದಾಯಿತು. ಹೊಸ ಆಯುಧ ಹಾಗೂ ಹೊಸ ಬಂದೀಖಾನೆಗಳಿಗೂ ಇದೇ ಅರ್ಥ ಬಂದಿದ್ದು ದುಃಖದ ವಿಷಯ.
ಶಾಂತ ಬೇಟೆಗಾರನೀಗ ಅತಿ ಒತ್ತಡದಲ್ಲಿ ಸಿಕ್ಕಿಕೊಂಡ. ಈ ಹೊಸ, ನಗರವಾಸಿ, ಮಹಾಪಂಗಡ ಜೀವನದಿಂದಾಗಿ ಅವನ ಹಲವು ನಡವಳಿಕೆಗಳು ಅಸೀಮ ಒತ್ತಡಕ್ಕೊಳಗಾದವು. ಮಾನವನೆಂಬ ಈ ನಗರ-ವಾನರ ಈಗ ಶ್ರೀಮಂತನಾಗಿದ್ದ, ಹಲವು ಭಯಂಕರ ಪ್ರಮಾದಗಳನ್ನೂ ಮಾಡಿದ. ಅವನ ಸಫಲತೆಯ ಕಥೆ ಎಷ್ಟು ಬೇಗ ಓಡುತ್ತಿತ್ತು ಎಂದರೆ ಈ ಹೊಸ ಬಗೆಯ ಬದುಕಿಗೆ ಅವಶ್ಯಕವಾದ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳುವುದು ಕಷ್ಟವಾಯಿತು. ಮೊದಲಿಗೆ ಸ್ಪರ್ಧೆ ಹಾಗೂ ಸಹಕಾರಗಳ ನಡುವಣ ಸೂಕ್ಷ್ಮವಾದ ಸಮತೋಲ ಏರುಪೇರಾಯಿತು. ಇದು ಸ್ಪರ್ಧೆಯ ಕಡೆಗೇ ಹೆಚ್ಚು ವಾಲಿತು. ಪುರಾತನ ಪಟ್ಟಣಗಳು ಹಾಗೂ ನಗರಗಳಲ್ಲಿದ್ದ ಬೃಹತ್ ಜನತೆ ಹೆಚ್ಚೆಚ್ಚು ನಿರಾಪ್ತ (impersonal) ಎನ್ನಿಸಿದವು. ಗೆಳೆತನದ ಬಂಧಗಳು ಕಳಚಿಕೊಳ್ಳಲಾರಂಭಿಸಿದುವು. ಸ್ಥಳೀಯವಾಗಿ ಮುಖಂಡರಾದಂತಹವರು ಮೊದಲಿಗಿಂತ ಹೆಚ್ಚು ನಿರ್ದಯತೆಯಿಂದ ತಮ್ಮ ಅಧಿಕಾರವನ್ನು ಪ್ರಯೋಗಿಸಬಹುದಾಯಿತು. ಗುಲಾಮ ವರ್ಗಗಳು ಹುಟ್ಟಿಕೊಂಡವು. ಬಹುತೇಕರಿಗೆ ಆನಂದ ಎನ್ನುವುದು ಅಪರೂಪವಾಯಿತು.. ನಾವು ಎಷ್ಟೋ ಬಾರಿ ಹಾಡಿ ಹೊಗಳುವ ಗ್ರೀಕರ ಸಾಮ್ರಾಜ್ಯವನ್ನು ಕೂಡ ಗುಲಾಮಗಿರಿಯ ಮೇಲೇ ಕಟ್ಟಲಾಗಿತ್ತು.
ಇದರಿಂದ ಕೌಟುಂಬಿಕ ಸಂಬಂಧಗಳಿಗೂ ತೊಂದರೆಯಾಯಿತು. ಬೇಟೆಗಾರರಾಗಿದ್ದಷ್ಟು ಸುದೀರ್ಘ ಕಾಲವೂ ನಾವು ಜೋಡಿ ದಂಪತಿಗಳಾಗಿ ಬದುಕುವತ್ತ ಹೊರಳಿದ್ದೆವು. ಇದೊಂದು ಮಹತ್ತರ ತಿರುವಾಗಿತ್ತು. ಅಂದರೆ ನಮ್ಮ ಪೂರ್ವಜರು ಪ್ರೇಮಿಸಲು ತಯಾರಾಗಿದ್ದರು. ನೆನಪಿಡಿ, ಈ ಬದಲಾವಣೆ ನಿಧಾನವಾಗಿ ಬೆಳೆಯುವ ಸಂತಾನಗಳನ್ನು ಕಾಪಾಡುವುದರತ್ತ ಇಟ್ಟ ಪ್ರಮುಖ ಹೆಜ್ಜೆ. ಗಂಡಸರು ಬೇಟೆಗಾಗಿ ಹೆಚ್ಚೆಚ್ಚು ಹೊತ್ತು ದೂರವಿರುತ್ತಿದ್ದರು ಹಾಗೂ ಮನೆಗೆ ಮರಳಿ ಹೆಂಗಸರು ಹಾಗೂ ಮಕ್ಕಳಿಗೆ ಉಣಿಸು ನೀಡಿ ಪಾಲಿಸಬೇಕಿದ್ದರೆ ಹೆಣ್ಣಿನ ಜೊತೆಗಿನ ಅವರ ಸಂಬಂಧ ಬಲು ಭದ್ರವಾಗಬೇಕಿತ್ತು.
ನಗರ ಜೀವನದ ಹೊಸ ವ್ಯವಸ್ಥೆಯಲ್ಲಿ, ವಿಶೇಷ ಕೌಶಲ್ಯಗಳ ಬೆಳವಣಿಗೆ ಹಾಗೂ ಕಾಯಕಗಳ ಹಂಚಿಕೆಗಳು ಕಾಣಿಸಿಕೊಂಡ ಫಲ ವ್ಯಾಪಾರ ಹಾಗೂ ಚೌಕಾಶಿತನ ಜೀವನದ ಒಂದು ಅಂಗವಾದುವು. ಇದರೊಟ್ಟಿಗೆ ಕೌಟುಂಬಿಕ ಬಂಧ ಎನ್ನುವುದು ಪ್ರೇಮ ಎನ್ನುವುದರಿಂದ ವ್ಯವಹಾರ ಬಂಧವಾಗಿ ಬದಲಾಯಿತು. ಮದುವೆ ಎನ್ನುವುದು ಹೊಸ ರೀತಿಯ ವ್ಯಾಪಾರವಾಯಿತು. ಇದಕ್ಕೆ ಒಗ್ಗಿಬರದ ಪ್ರೇಮ ಎನ್ನುವ ಬಂಧ ನಿಷ್ಠುರವಾಗಿ ಅದುಮಲ್ಪಟ್ಟಿತು. ಆಪ್ತ ಸಂಬಂಧಗಳಲ್ಲಿ ಅಸಂತೋಷವೆನ್ನುವುದು ಹರಡಿಕೊಂಡಿತು.
ಆದರೂ ಈ ಮನುಷ್ಯ ಎನ್ನುವ ಜೀವಿ ಬಲು ಗಟ್ಟಿ ಬಿಡಿ. ಹೀಗೆ ನಮ್ಮ ಜೈವಿಕ ಅನುವಂಶೀಯತೆಯ ಪ್ರಧಾನ ಗುಣಗಳಿಗೆ ವಿರುದ್ಧವಾಗಿ ಸಮಾಜದ ಸ್ಥಿತಿಗತಿಗಳು ಎಳೆದಾಡಿದಾಗಲೆಲ್ಲ ನಮ್ಮಲ್ಲಿ ಅಂತರ್ಗತವಾದ ಯಾವುದೋ ಶಕ್ತಿ ಸ್ವಸ್ಥಾನಕ್ಕೆ ಮರಳಲು ನೆರವಾಗುತ್ತದೆ. ಹತ್ತಾರು ಸಾವಿರ ವರ್ಷಗಳ ಮಾನವನ ಕಥೆಯ ಬೆರಗುಗೊಳಿಸುವ ಅಂಶವೆಂದರೆ ಇದು ನಾವು ಚರಿತ್ರಪೂರ್ವ ಕಾಲದಲ್ಲಿ ಇದ್ದಂತಹ ಸ್ಥಿತಿಗೇ ಮರಳಲು ಪ್ರಯತ್ನಿಸುತ್ತಿರುವ ಸುದೀರ್ಘ ಶ್ರಮ ಎನ್ನಬಹುದು. ಇದ್ದಂತಹ ಸ್ಥಿತಿಯೇ ಹೊರತು ಇದ್ದ ಸ್ಥಿತಿಯಲ್ಲ ಎನ್ನಿ. ಇದರ ಅರ್ಥ ವಿಷ್ಟೆ. ಪ್ರತಿಯೊಂದು ತಾಂತ್ರಿಕ ಬೆಳವಣಿಗೆಯೂ ನಾವು ಮಾನವರಾಟವನ್ನು ಆಡುವುದಕ್ಕೆ ಹೊಸ ಮಾರ್ಗಗಳನ್ನು ಹುಡುಕಬೇಕಾಯ್ತು.
ನಾಗರೀಕತೆ ಎನ್ನುವುದು ಈ ಬೆತ್ತಲೆ ವಾನರ ಹೊತ್ತು ನಡೆದ ಪ್ರಥಮ ಚಿಕಿತ್ಸೆಯ ಹೊರೆ ಎಂದು ಈ ಹಿಂದೆ ಒಮ್ಮೆ ನಾನು ಹೇಳಿದ್ದುಂಟು. ನಾಗರೀಕತೆ ಎನ್ನುವುದು ನಮ್ಮ ಪಾದಗಳಲ್ಲಿ ಬೊಕ್ಕೆಯೇಳಿಸುವಷ್ಟು ಭಾರಿ ಹೊರೆಯಾಗಿದ್ದರಿಂದ ಪ್ರಥಮ ಚಿಕಿತ್ಸೆಯ ಹೊರೆಯೂ ಬೇಕಾಯ್ತು. ಮಾನವನೆಂಬ ಬೆತ್ತಲೆ ವಾನರ ತಾನು ಧರಿಸಿರುವ ಹೊಸ ಸಂಕೋಲೆಗಳನ್ನು ಕಳಚಿಕೊಳ್ಳದೆಯೇ ಹಳೆಯ ಜೈವಿಕ ಸಂಪ್ರದಾಯಗಳತ್ತ ಮರಳಲು ಸದಾ ಪ್ರಯತ್ನಿಸುವ ಪ್ರಾಣಿ. ಈ ಸೂಕ್ಷ್ಮವಾದ ನಡೆಯಲ್ಲಿ ನಮಗೆ ಭಾಷೆಯ ಬೆಳವಣಿಗೆಯಿಂದ ಲಭಿಸಿದ ಸಾಮರ್ಥ್ಯ ನಮ್ಮ ನೆರವಿಗೆ ಬರುತ್ತದೆ. ನಾವೀಗ ಮಹಾ ಸಂಕೇತಜ್ಞರಾಗಿ ಬಿಟ್ಟಿದ್ದೇವೆ. ನಾವು ಭಾಷೆಯೆಂಬ ಸಂಕೇತವನ್ನು ಬಳಸುವುದಷ್ಟೆ ಅಲ್ಲ, ನಮ್ಮ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಸಾಂಕೇತಿಕ ಸೂತ್ರಗಳನ್ನು ರಚಿಸುತ್ತೇವೆ. ಹೀಗೆ ಸಂಕೇತಗಳನ್ನು ಸೃಷ್ಟಿಸುವದರಲ್ಲಿ ನಾವು ಎಷ್ಟು ಪರಿಣತರಾಗಿವಿಟ್ಟಿದ್ದೇವೆ ಎಂದರೆ ಒಂದು ಸಾಂಕೇತಿಕ ಸಾಧನೆಯೂ ನಮಗೆ ಖುಷಿ ತರಬಲ್ಲುದು. ಸಾಂಕೇತಿಕವಾಗಿಯೇ ಆದರೂ ಆದಿ ರೂಪದಲ್ಲಿ ಮಾಡುತ್ತಿದ್ದ ಕೆಲಸದ ಮಾದರಿಯನ್ನೋ, ನಕಲನ್ನೋ ಸಾಂಕೇತಿಕವಾಗಿ ನಡೆಸಿ ಅದು ನಿಜವೇ ಏನೋ ಎನ್ನುವಷ್ಟು ಖುಷಿ ಪಡುತ್ತೇವೆ. ಇದಕ್ಕೊಂದು ವೈಯಕ್ತಿಕ ಉದಾಹರಣೆ ಕೊಡುತ್ತೇನೆ. ಪುಸ್ತಕಗಳನ್ನು ಹುಡುಕುವುದು ನನಗೆ ಬಹಳ ಖುಷಿ ಕೊಡುವ ಕೆಲಸ. ಬಹಳ ದಿನಗಳ ಹುಡುಕಾಟದ ಅನಂತರ ನನಗೆ ಬೇಕಾಯಿತೆನ್ನಿಸಿದ ಅಪರೂಪದ ಪುಸ್ತಕವೊಂದು ಸಿಕ್ಕಿತೆನ್ನಿ, ಅದನ್ನು ತೆಗೆದುಕೊಂಡು ಮನೆಗೆ ಹೋಗುವುದು ಆದಿ ರೂಪದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಮನೆಗೆ ಕೊಂಡೊಯ್ಯುತ್ತಿದ್ದುದರ ಸಂಕೇತ. ನನಗೆ ಈ ರೀತಿಯ ಬೇಟೆಯ ಅವಶ್ಯಕತೆ ಇನ್ನೂ ಇದೆ. ಆದರೆ ನನ್ನ ಪೂರ್ವೀಕರಂತೆ ನನ್ನ ಬೇಟೆಯ ಬಯಕೆಯನ್ನು ತಣಿಸಲು ಕಾಡುಪ್ರಾಣಿಗಳನ್ನು ಕೊಲ್ಲಬೇಕಿಲ್ಲ. ಏಕೆಂದರೆ ನಾನೀಗ ಮಾನವನಾಗಿದ್ದೇನೆ.
ಇಂದು ನಮ್ಮ ನಡವಳಿಕೆಗಳಲ್ಲಿ ಬಹುತೇಕ ಇಂತಹ ಆದಿ ನಡವಳಿಕೆಗಳ ಸಂಕೇತ ಸ್ವರೂಪಗಳು. ನಮ್ಮ ಉಳಿವಿಗೆ ಅವಶ್ಯಕವಾದ ಬೇಟೆಯನ್ನು ಬೇಸಾಯ ಕಿತ್ತೊಗೆದಂದಿನಿಂದಲೇ ಇದು ಆರಂಭವಾಯಿತು. ಉಳಿವಿಗಾಗಿ ಬೇಟೆ ಎನ್ನುವುದು ಮರೆಯಾದ ಕೂಡಲೇ, ಅದರ ಜಾಗದಲ್ಲಿ ಬೇಟೆಯೆಂಬ ಆಟ ಬಂತು. ಕಾಲಗಳೆಯಲು ಕಾಡುಪ್ರಾಣಿಗಳನ್ನು ಕೊಲೆಮಾಡಲಾರಂಭಿಸಿದೆವು. ಇಂತಹ ಕೊಲೆಗಡುಕ ಆಟಗಳು ಬೇಟೆಯ ಉನ್ಮಾದವನ್ನು ಉಳಿಸಿದುವು. ಅನಂತರ, ನಗರಗಳು ಹಾಗೂ ಪಟ್ಟಣಗಳು ಇನ್ನೂ ದೊಡ್ಡ, ದೊಡ್ಡದಾಗಿ ಬೆಳೆಯಲಾರಂಭಿಸಿದಾಗ ನಗರದ ಜನತೆ ಇಂತಹ ಓಟಾಟಗಳನ್ನು ಅನುಭವಿಸಲಾರದಾಯಿತಷ್ಟೆ. ಆಗ ಇಂತಹ ಬೇಟೆಯ ಅಪಬ್ರಂಶವೆನ್ನಿಸಿದ ಆಟ ಕಾಣಿಸಿಕೊಂಡಿತು: ಅದುವೇ ರಂಗಸ್ಪರ್ಧೆಗಳು. ಪುರಾತನ ರೋಮ್ ನಲ್ಲಿ ಕೊಲಿಸಿಯಮ್ ನಿರ್ಮಾಣವಾಯಿತು. ಅಲ್ಲಿ ತುಂಬಿಕೊಂಡ ಜನಜಂಗುಳಿಯ ಸಂತೋಷಕ್ಕಾಗಿ ಅಸಂಖ್ಯ ಪ್ರಾಣಿಗಳನ್ನು ತಂದು ಬೇಟೆಯಾಡಲಾಯಿತು. ಒಂಭೈನೂರು ವರ್ಷಗಳ ಹಿಂದೆ ಅದರ ಉದ್ಘಾಟನೆಯ ಸಂದರ್ಭದಲ್ಲಿ ಐದುಸಾವಿರಕ್ಕೂ ಹೆಚ್ಚು ಪ್ರಾಣಿಗಳು ಕೊಲೆಯಾದುವು. ಈ ಬಗೆಯ ಪ್ರಾಣಿಬೇಟೆ ವ್ಯಾಪಕವಾಗಿ ನಡೆಯುತ್ತಿತ್ತು. ಸ್ಪೇನಿನ ಗೂಳಿಕಾಳಗದಂತಹ ರೂಪದಲ್ಲಿ ಈಗಲೂ ಇದು ಉಳಿದುಕೊಂಡಿದೆ. ಬೇಟೆಯಾಡುವುದರ ಪ್ರಾತ್ಯಕ್ಷಿಕೆಯೋ ಎನ್ನುವಂತೆ ಪ್ರತಿವರ್ಷ ಪಾಂಪ್ಲೋನಾದಲ್ಲಿ ನಡೆಯುವ ಗೂಳಿ ಸ್ಪರ್ಧೆಗಳ ಬಗ್ಗೆ ನಿಮಗೆ ಗೊತ್ತೆ ಇರಬೇಕಲ್ಲ!
ನಾಗರೀಕತೆ ಎನ್ನುವುದು ಇಲ್ಲವೇ ಇಲ್ಲವೇನೋ ಎನ್ನುವಂತೆ ಹಲವು ರಾಷ್ಟ್ರಗಳಲ್ಲಿ ಈ ಬಗೆಯ ಬೇಟೆಯಾಟಗಳು ವಿವಿಧ ರೂಪಗಳಲ್ಲಿ ಇನ್ನೂ ಅರಳುತ್ತಲೇ ಇವೆ. ನಮ್ಮಲ್ಲಿ ಈ ಬೇಟೆಯ ಹಂಬಲ ಎಷ್ಟು ಪ್ರಬಲವಾಗಿದೆ ಎಂದರೆ ಈ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಅದು ತನ್ನ ರಕ್ತಸಿಕ್ತ ಮೂಲರೂಪದಲ್ಲಿ ಸಿಡಿಯಬಹುದು. ಈ ಹಂಬಲವನ್ನು ಹತ್ತಿಕ್ಕಲು ಜನತೆ ತಮ್ಮ ಸಾಂಕೇತಿಕ ಸೂತ್ರಗಳನ್ನು ಇನ್ನೂ ಉನ್ನತ ಮಾನವೀಯ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ.
ಖುಷಿಯ ವಿಷಯವೆಂದರೆ ಹಳೆಯ ರಕ್ತದೋಕುಳಿಯಾಟಗಳ ಜಾಗೆಯಲ್ಲಿ ಇಂದು ಚೆಂಡಿನಾಟಗಳು ಬಂದಿವೆ. ಪ್ರಾಣಿಗಳನ್ನು ಕೊಲ್ಲುತ್ತಿದ್ದ ತಂಡದ ಬದಲಿಗೆ ಆಟಗಾರರ ತಂಡವಿದೆ. ಪ್ರತಿ ಚೆಂಡಿನಾಟವೂ ಅದರದ್ದೇ ಆದ ಆದಿಮ ಬೇಟೆಯಾಟದ ವಿಶೇಷ ಮಾದರಿಯನ್ನು ರೂಪಿಸಿಕೊಂಡಿದೆ. ಫುಟ್ಬಾಲಿನಲ್ಲಿ ಗೋಲುಗಂಭಗಳು ಬೇಟೆಪ್ರಾಣಿಯ ಸಂಕೇತವಾಗಿವೆ. ಅದನ್ನು ನಾವು ಕೊಲ್ಲಬೇಕು. ಶಸ್ತ್ರವನ್ನು ಬೀಸಿ ಕೊಲ್ಲಲು ಈ ಬೇಟೆ ಸುಲಭ ಈಡು. ಆಟ ಇನ್ನಷ್ಟು ಉತ್ತೇಜಕವೆನ್ನಿಸಬೇಕೆಂದರೆ ಈಡನ್ನು ರಕ್ಷಿಸಬೇಕು. ವಿರೋಧಿ ತಂಡದ ಡಿಫೆಂಡರ್ ಗಳಿಂದ ಈ ರಕ್ಷಣೆ ದೊರೆಯುತ್ತದೆ. ಸಾಕಷ್ಟು ಗೋಲುಗಳನ್ನು ಗಳಿಸಿದಾಗ (ಅಂದರೆ ಸಾಕಷ್ಟು ಬೇಟೆಗಳನ್ನು ಕೊಂದ ಮೇಲೆ) ಗೆದ್ದ ಟೀಮಿನ ನಕಲು-ಬೇಟೆಗಾರರು ತಾವು ಗೆದ್ದ ಬೇಟೆಯನ್ನು (ಟ್ರೋಫಿ) ತಮ್ಮ ಪಂಗಡದ ನೆಲೆಗೆ ಕೊಂಡೊಯ್ಯುತ್ತಾರೆ. ಅಲ್ಲಿ ಅದನ್ನು ಪಂಗಡದ ಇತರರು, ಅಂದರೆ ತಂಡದ ಬೆಂಬಲಿಗರು, ಕಾಣಲೆಂದು ಟೌನ್ ಹಾಲಿನ ಬಾಲ್ಕನಿಯಲ್ಲಿ ಪ್ರದರ್ಶನಕ್ಕಿಡುತ್ತಾರೆ. ಈ ಟ್ರೋಫಿಯನ್ನು ತಿನ್ನುವುದಂತೂ ಆಗದು. ಆದರೂ ಫುಟ್ಬಾಲಿನ ಮಹಾ ಸ್ಪರ್ಧೆಗಳಲ್ಲಿ ಗೆದ್ದ ಟ್ರೋಫಿಯನ್ನು ಅನಂತರ ನಡೆಯುವ ಭೋಜನಕೂಟದಲ್ಲಿ ಪಂಕ್ತಿಯ ನಡುವೆ ಇಡುವುದುಂಟು.
ಬೇಟೆಗೂ ಇದಕ್ಕೂ ಇರುವ ಸಾಮ್ಯತೆ ಸ್ಪಷ್ಟ. ವಿವರಗಳು ಬದಲಾಗಿರಬಹುದು. ಆದರೆ ಯೋಜನೆ, ತಂತ್ರಗಾರಿಕೆ, ತಂತ್ರಗಳು ಮತ್ತು ಅಪಾಯಗಳು, ದೈಹಿಕ ಶ್ರಮ ಮತ್ತು ಗಾಯಗಳು, ತಂಡದ ಸಹಕಾರ, ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈಡನ್ನು ಹೊಡೆಯಬೇಕೆನ್ನುವ ಆ ಉನ್ನತ ಗುರಿ, ಈ ಎಲ್ಲ ಮೂಲ ಭಾವನೆಗಳು ಹಾಗೇ ಉಳಿದಿವೆ. ಇಂದಿನ ಎಲ್ಲ ಆಟೋಟಗಳಲ್ಲೆಲ್ಲದರಲ್ಲೂ ಓಡುವುದು ಹಾಗೂ ಗುರಿಯಿಡುವುದು ಇದ್ದೇ ಇದೆ. ಇವೆರಡೂ ಆದಿಮ ಬೇಟೆಯ ಮೂಲ ತತ್ವಗಳು.
ಉತ್ಕಟ ಖುಷಿಯನ್ನು ಪ್ರಕಟಿಸುವ ಭಾವಗಳು ಹೇಗಿರುತ್ತವೆ ಎನ್ನುವುದನ್ನು ಗಮನಿಸಬೇಕಾದರೆ ಪ್ರಮುಖ ಆಟವೊಂದರ ಕೊನೆಯ ಕ್ಷಣದಲ್ಲಿ ಗೆಲುವಿನ ಗೋಲು ಹೊಡೆದಾಗ ಆಟಗಾರರು ಹಾಗೂ ಪ್ರೇಕ್ಷಕರ ನಡವಳಿಕೆಯನ್ನು ಗಮನಿಸಬೇಕು. ನಮ್ಮ ಪೂರ್ವಜ ಬೇಟೆಗಾರರು ಯಾರೂ ಹೀಗೆ ಅತ್ಯಾನಂದದಿಂದ ಹೀಗೆ ಮೇಲೆ ಹಾರುತ್ತಿದ್ದರೆಂದು ನನಗೆ ಅನಿಸುವುದಿಲ್ಲ. ಇಂದಿನ ಆಟೋಟಗಳು ಆ ಕೊನೆಯ ತೃಪ್ತಿದಾಯಕವಾದ ಖುಷಿಯ ಕ್ಷಣಗಳನ್ನು ಮುಟ್ಟುವಂತಹ ಬೇಟೆಯಾಡುವ ಸಂಕೀರ್ಣ ಕ್ರಿಯೆಯ ಹಂತಗಳನ್ನು ಹೃಸ್ವವಾಗಿಸಿಬಿಟ್ಟಿವೆ. ನಮ್ಮಲ್ಲಿ ಬಹಳ ಜನರಿಗೆ, ಇಂತಹ ಆಟಗಳು ಖುಷಿಯ ಒರಟು ಸೆಲೆಗಳೆನ್ನಿಸಬಹುದು. ಇದಕ್ಕಿಂತಲೂ ನಾಜೂಕಾದ ಹಾಗೂ ಮಾರ್ಮಿಕ ಬೇಟೆಯಾಟಗಳನ್ನು ನಾವು ಇಷ್ಟಪಟ್ಟೇವು. ನಗರದಲ್ಲಿ ವ್ಯಾಪಾರಿ ಹೀಗೆಯೇ ಗಿರಾಕಿಯನ್ನು ‘ಹಿಡಿ’ಯುತ್ತಾನೆ. ನಟನೊಬ್ಬ ತನ್ನ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ‘ಕೊಲ್ಲು’ ತ್ತಾನೆ. ತಾವಿಟ್ಟುಕೊಂಡ ‘ಗುರಿ’ ಯ ಹಣವನ್ನು ಸಂಗ್ರಹಿಸಿದಾಗ ಧರ್ಮಾರ್ಥ ಸಂಸ್ಥೆಗಳ ಸಿಬ್ಬಂದಿಗೆ ಖುಷಿಯಾಗುತ್ತದೆ. ರಾಜಕಾರಣಿ ತನ್ನ ‘ಗುರಿ’ ಬಡವರ ನೋವಿನ ನಿವಾರಣೆ ಎನ್ನುತ್ತಾನೆ. ಕ್ಯಾನ್ಸರಿಗೆ ಚಿಕಿತ್ಸೆಯನ್ನು ‘ಹುಡುಕು’ ವುದೇ ವಿಜ್ಞಾನಿಯ ಜೀವನದ ಧ್ಯೇಯವಾಗುತ್ತದೆ. ಕಲಾವಿದ ಕ್ಯಾನ್ವಾಸಿನ ಮೇಲೆ ಲೋಪವಿಲ್ಲದ ಚಿತ್ರವನ್ನು ‘ ಸೆರೆ ಹಿಡಿದು’ ಇಡಬೇಕೆಂದು ಬಯಸುತ್ತಾನೆ. ಕೊಲ್ಲು, ಬಡಿ, ಗುರಿಯಿಡು, ಹುಡುಕು, ಸೆರೆ ಹಿಡಿ ಹೀಗೇ ನಾವು ನಮ್ಮ ಪ್ರಮುಖ ಧ್ಯೇಯಗಳನ್ನು ವ್ಯಕ್ತಪಡಿಸಲು ಬಳಸುವ ಹತ್ತು ಹಲವು ಶಬ್ದಗಳು ಬಲು ಅರ್ಥಪೂರ್ಣ.
ನಾವೆಲ್ಲರೂ ಒಂದು ರೀತಿಯಲ್ಲಿ ಮಾರ್ಮಿಕ ಬೇಟೆಗಾರರು. ಬೇರೆ, ಬೇರೆ ವೇಷ ತೊಡುತ್ತೇವೆ ಅಷ್ಟೆ. ನಮ್ಮಲ್ಲಿ ಕೆಲವರು ಹಲವು ವೇ಼ಷಗಳನ್ನು ಧರಿಸಿ, ವಿಭಿನ್ನ ಚಟುವಟಿಕೆಗಳಲ್ಲಿ ಸಂತೋಷವನ್ನು ಹುಡುಕುತ್ತೇವೆ. ಉಳಿದವರು ವಿಶೇಷಜ್ಞರಾಗಿ ಜೀವಮಾನ ಪರ್ಯಂತ ಒಂದೇ ಬೇಟೆಯ ಬೆನ್ನು ಹತ್ತಿ ಹೋಗಲು ಇಚ್ಛಿಸುತ್ತಾರೆ. ಕೆಲವು ಮಾರ್ಮಿಕ ಬೇಟೆಯಾಟ ಬದುಕಿನ ಪೂರ್ತಿ ಇರಬಹುದು. ನಾನು ಈಗ ಸರ್ ಜೇಮ್ಸ್ ಮುರ್ರೇ ಆಕ್ಸ್ ಫರ್ಡ್ ನಿಘಂಟನ್ನು ಸಂಕಲಿಸಿದ ಮನೆಯಲ್ಲಿ ವಾಸವಿದ್ದೇನೆ. ಆತ ಸುಮಾರು ಮೂವತ್ತು ವರ್ಷಗಳ ಕಾಲ ಈ ನಿಘಂಟಿನ ಕಾರ್ಯದಲ್ಲಿ ನಿರತನಾಗಿದ್ದ. ಆತನ ಬೇಟೆ, ಅಂತಿಮ ಗುರಿ, ಜೆಡ್ ಅಕ್ಷರದ ಕೊನೆಯ ಪದ ಇದ್ದಿರಬೇಕು. ಅತ್ಯಂತ ವಿಷಾದದ ಸಂಗತಿ ಎಂದರೆ ಆತ ‘ಟಿ’ ಅಕ್ಷರವನ್ನು ತಲುಪುವ ಮುನ್ನವೇ, ಅಂದರೆ ಚಿರಸ್ಮರಣೀಯವಾದ ಖುಷಿಯನ್ನು ಅನುಭವಿಸುವ ಮುನ್ನವೇ, ಸತ್ತನೆಂದು ತಿಳಿಯುತ್ತದೆ. ಆತ ಸಾಯುವ ವೇಳೆ ಇನ್ನೂ “turndown” (ಟರ್ನ್ ಡೌನ್) ಎನ್ನುವ ಪದದಲ್ಲೇ ಇದ್ದ. “zymurgy” (ಜೈಮುರ್ಜಿ – ಇಂಗ್ಲೀಷ್ ನಿಘಂಟಿನ ಕೊನೆಯ ಪದ) ಯ ವಿವರಣೆಯನ್ನು ಪೂರ್ಣಗೊಳಿಸಿದ ಅಪ್ಪಟ ಸಂತೋಷವನ್ನು ಅನುಭವಿಸಲು ಆತ ಬದುಕಿ ಉಳಿಯಲಿಲ್ಲ. ಆ ಕ್ಷಣ ಎಂತಹ ಉತ್ಕಟ ಆನಂದದ ಕ್ಷಣವಾಗಿರುತ್ತಿತ್ತೋ?!
ಸಂತೋಷವೆನವನುವುದು ಒಬ್ಬೊಬ್ಬರಿಗೆ ಒಂದೊಂದು ತೆರವಷ್ಟೆ. ಆದರೂ ನಾನು ಒಂದೇ ಒಂದು ಬಗೆಯ ಬಗ್ಗೆ ಮಾತನಾಡುತ್ತಿದ್ದೇನೆ. ಬೇಟೆಯಾಡುವ ಆದಿಮ ತುಡಿತವನ್ನು ತೃಪ್ತಿಗೊಳಿಸಿದ್ದರಿಂದ ದೊರೆಯುವ ಖುಷಿಯ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಈ ತುಡಿತವೇ ಇಂದು ಹಲವು ವಿಧವಾದ ಕ್ರಿಯಾಶೀಲ ಹಾಗೂ ಪರಿಪೂರ್ಣತೆಯ ಚಟುವಟಿಕೆಗಳ ಎತ್ತರವನ್ನು ತಲುಪಿದೆ. ನಾನು ಹೀಗೇಕೆ ಮಾಡಿದೆ ಎಂದರೆ, ನಮ್ಮಲ್ಲಿ ಬಹಳಷ್ಟು ಮಂದಿಯಲ್ಲಿ ಈ ಗುಣ ಕಾಣೆಯಾಗಿರುವುದೇ ಇಂದು ನಾವು ಕಾಣುತ್ತಿರುವ ದುಃಖ, ದುಮ್ಮಾನಗಳಿಗೆ ಕಾರಣ ಅನ್ನುವುದು ನನ್ನ ನಂಬಿಕೆ. ಬದುಕಿನಲ್ಲಿ ಕ್ರಿಯಾಶೀಲತೆ ಹಾಗೂ ಸವಾಲುಗಳನ್ನು ಎದುರಿಸುವವರು ಬಹಳ ಅದೃಷ್ಟವಂತರು. ನಮ್ಮೆದುರಿಗೆ ನಾವು ತಲುಪಬಹುದಾದ ಗುರಿ ಕಾಣುತ್ತಿರುತ್ತದೆ. ನಾವು ಮನುಷ್ಯರು ವಿಕಾಸವಾದಂತೆ, ಅಂದರೆ ಯೋಜನೆಗಳನ್ನು ಹಾಕುತ್ತಾ, ತಂತ್ರಗಳನ್ನು ರೂಪಿಸುತ್ತಾ, ಶ್ರಮಪಟ್ಟು, ಅಪಾಯಗಳನ್ನು (ಕಷ್ಟಗಳನ್ನು) ಎದುರಿಸಿ, ಸಾಧನೆ ಮಾಡುತ್ತ ಬದುಕಬಹುದು. ಆದರೆ ಕೃಷಿಕ್ರಾಂತಿ ಮಾನವ ಜನಾಂಗದ ಬಹುತೇಕ ಜನತೆಯಲ್ಲಿ ಕೆಟ್ಟ ದೋಷವೊಂದನ್ನು ಉಳಿಸಿಬಿಟ್ಟಿದೆ. ಬಹುತೇಕ ಜನರು ಅವಿರತವಾದ, ಉದಾಸ, ಮರುಕಳಿಸುವಂತಹ ಕೃಷಿ ಕೆಲಸಗಳಲ್ಲಿ ತೊಡಗಿಕೊಂಡರು. ಈಗಲೂ ಹಲವು ದೇಶಗಳಲ್ಲಿ ಇದು ನಡೆಯುತ್ತಲೇ ಇದೆ. ಹುಲ್ಲು ಮೇಯುವ ದನಗಳಿಗೆ ಈ ಬಗೆಯ ಜೀವನ ಒಪ್ಪುವುದಾದರೂ, ಗುರಿಹಿಡಿದು ನಡೆಯುವಷ್ಟು ಬುದ್ಧಿಮತ್ತೆಯಿರುವ ಹೆಣ್ಣು, ಗಂಡುಗಳಿಗಲ್ಲ.
ಕೈಗಾರಿಕಾ ಕ್ರಾಂತಿಯಿಂದಾಗಿ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಮೇಲೆ ನೋಡಿದರೆ ಆಕಾಶವೂ ಕಾಣದಂತಾಯ್ತು. ಅವರ ಕೆಲಸ ಇನ್ನಷ್ಟು ಮುಠ್ಠಾಳತನದ್ದೆನಿಸಿತು. ಯಾವುದೇ ಗೊತ್ತು-ಗುರಿ ಅವರ ಕೈಮೀರಿತ್ತು. ಇಂತಹ ಕೆಲಸದಲ್ಲಿ ಯಾವುದೇ ಖುಷಿ ಇರಲಿಲ್ಲ. ಪುರಾತನ ಗ್ರೀಸಿನಲ್ಲಿದ್ದ ಗುಲಾಮಗಿರಿಯನ್ನು ನಾವು ತೊಡೆದುಹಾಕಿದ್ದೆವೇನೋ ಸರಿ. ಆದರೆ ಅದರ ಜಾಗದಲ್ಲಿ ನವೀನ ದಿನಗೂಲಿ ಗುಲಾಮರನ್ನು ಸ್ಥಾಪಿಸಿದೆವು. ಇವರಿಗೆಲ್ಲ ಖುಷಿಯ ಕ್ಷಣ ಎಂಬುದು ಅವರ ಕೆಲಸದಾಚೆಯ ಚಟುವಟಿಕೆಗಳಿಗೆ ಸೀಮಿತವಾಯಿತು.ಆದರೂ ಈ ಕೆಲಸವೇ ಅವರು ಮನೆಗೆ ಎರಡು “ತುತ್ತು” ತರುವಂತೆ ಮಾಡಿದ್ದು. ಅಂದರೆ ಇಷ್ಟೆ. ಈ ನೀರಸ, ಪುನರಾವರ್ತನೆಗೊಳ್ಳುವ ಕೆಲಸ ಆದಿಮ, ರೋಮಾಂಚನಕಾರಿ ಬೇಟೆಗೆ ಪರ್ಯಾಯವೆನಿಸಿತು. ಅವರ ತಲೆಯೊಳಗಿದ್ದ, ವಿಕಾಸದ ಚರಿತ್ರೆಯಲ್ಲೇ ಮಹಾನ್ ಎನ್ನಿಸಿದ, ಮಿದುಳಿಗೆ ಅವಮಾನ ಎನ್ನುವಂತಹ ಕೆಲಸಗಳನ್ನ ಮಾಡುವುದರಲ್ಲೇ ಬಹುತೇಕ ಬದುಕು ಸವೆಸಬೇಕಾಯ್ತು. ಈ ಭಯಂಕರ ಹಿನ್ನೆಡೆಯಿಂದಾಗಿ ಮಾನವತೆಯ ಬೃಹತ್ ಪಾಲು ಸಂತೋಷವನ್ನು ತಮ್ಮ ಬದುಕಿನ ಕೇಂದ್ರದಲ್ಲಿ ಹುಡುಕದೆ, ಹವ್ಯಾಸ, ರಜೆ ಮುಂತಾದ ಬೇರೆ ಯಾವುದೋ ಕೋನದಲ್ಲಿ ಹುಡುಕಬೇಕಾಯಿತು.
ನಾವೀಗ ಇದನ್ನು ತಿದ್ದಿಕೊಳ್ಳುತ್ತಿದ್ದೇವೆ, ಆದರೆ ತುಂಬಾ ನಿಧಾನವಾಗಿ. ದಿನಗೂಲಿಯ ಗುಲಾಮಿತನದ ಜಾಗೆಯಲ್ಲಿ ನಿರ್ಭಾವುಕ, ಯಾಂತ್ರಿಕ ಮನಸ್ಸನ್ನು ಕಲ್ಲಾಗಿಸುವಂತಹ ಸರಳ ಕೆಲಸಗಳನ್ನು ತಂದಿದ್ದೇವೆ. ಆದಾಯಕ್ಕೆ ತೊಂದರೆ ಇಲ್ಲದಂತೆ ಈ ಬಗೆಯ ನೀರಸ ಪುನರಾವರ್ತಿಸುವ ಉದ್ಯೋಗಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಸಮಾಜದ ಹೊಣೆ. ಸುಧಾರಿತ ತಂತ್ರಜ್ಞಾನಗಳು ಒದಗಿಸುವ ಉನ್ನತ ಕ್ಷಮತೆ ಇದನ್ನು ಸಾಧ್ಯವಾಗಿಸಬಹುದು. ಆದರೆ ನಾವು ಎಲ್ಲಿಯಾದರೂ ಎಡವಿದರೆ ಮುಷ್ಕರಕ್ಕಿಳಿಯದ, ಸಮರ್ಥ ರೋಬೋಗಳು ಲಕ್ಷಾಂತರ ಜನರಿಗೆ ಕೆಲಸವಿಲ್ಲದಂತೆ ಮಾಡುವ ದುರ್ದಿನಗಳನ್ನು ಕಾಣಬೇಕಾದೀತು. ಹೊಸ ಸುವರ್ಣಯುಗದ ಸಾಧ್ಯತೆಯೇನೋ ಇದೆ. ಇದಕ್ಕಾಗಿ ನಮ್ಮಲ್ಲಿರುವ ಕಲ್ಪನೆಗಳು, ಚೈತನ್ಯಗಳನ್ನು ಆಕರ್ಷಿಸುವಂತಹ ರಾಜಕೀಯ ಪ್ರಪಂಚ ಬೇಕು. ಮನುಷ್ಯರು ಎಂತಹ ಜೀವಿಗಳು, ಇವರನ್ನು ಖುಷಿಗೊಳಿಸುವುದೇನು ಎನ್ನುವ ಬಗ್ಗೆ ರಾಜಕೀಯ ವ್ಯಕ್ತಿಗಳು ಕಣ್ತೆರೆದು ಕಾಣಲು ಇದು ಪ್ರಸಕ್ತ ಸಮಯ.
ನಮ್ಮ ಈ ಅತಿ ಸಂಕ್ಷಿಪ್ತ ಚರಿತ್ರೆಯ ಪ್ರಕಾರ ಮನುಷ್ಯನಿಗೆ ಖುಷಿ ಕೊಡುವಂತಹ ಮೂಲಗಳು ಹಲವಿವೆ ಎನ್ನುವುದು ಸ್ಪಷ್ಟ. ನಮ್ಮ ಬೇಟೆಗಾರ ಚರಿತ್ರೆಯಿಂದಾಗಿ ಹೊರಹೊಮ್ಮುವ ಮೊದಲನೆಯದನ್ನು “ಈಡಿನ ಖುಷಿ” ಎನ್ನಬಹುದು. ಇದಲ್ಲದೆ ‘ಸ್ಪರ್ಧಾತ್ಮಕ ಸಂತೋಷ”ವೂ ಇದೆ. ಇದು ಗೆಲುವಿನ ಖುಷಿ. ನಾವು ಸಣ್ಣ ಪಂಗಡಗಳಾಗಿ ವಿಕಾಸವಾಗಿ ಬಂದ ಸಾಮಾಜಿಕ ಹಿನ್ನೆಲೆಯಿಂದಾಗಿ ಬಂದದ್ದು. ಇದಕ್ಕೆ ವ್ಯತಿರಿಕ್ತವಾಗಿ “ಸಹಕಾರದ ಆನಂದ”ವೂ ಇದೆ. ಬದುಕಲು ನಾವು ಒಬ್ಬರಿನ್ನೊಬ್ಬರಿಗೆ ನೆರವಾಗಬೇಕಾದ್ದರಿಂದ ಬಂದದ್ದು. ನಮ್ಮ ಮೂಲಭೂತ ಜೈವಿಕ ತುಡಿತಗಳೂ ಉಳಿದುಕೊಂಡಿವೆ. ಊಟ, ಕುಡಿತ, ಸಂಭೋಗ ಹಾಗೂ ಬೆಚ್ಚಗಿರಬೇಕಾದ ಈ ಜೈವಿಕ ಅವಶ್ಯಕತೆಗಳು ಇಂದಿಗೂ ನಮಗೆ :ವಿವಿಧ ಬಗೆಯ ”ಐಂದ್ರಿಯ ಆನಂದ”ವನ್ನು ನೀಡುತ್ತವೆ. ಇದಲ್ಲದೆ ಹೆಚ್ಚೆಚ್ಚು ಸಂಕೀರ್ಣಗೊಳ್ಳುತ್ತಿರುವ ನಮ್ಮ ಮಿದುಳಿನಿಂದಾಗಿ “ಮಾನಸಿಕ ಸಂತೋಷ”ದ ಸೆಲೆಗಳೂ ಸಿಕ್ಕಿವೆ. ಬುದ್ಧಿವಂತಿಕೆಯನ್ನು ಕೆದಕುವ ಚಟುವಟಿಕೆಗಳನ್ನು ನಡೆಸಿದಾಗ ದೊರೆಯುವ ಪ್ರತಿಫಲ ಇದು.
ಇವು ಸಂತೋಷದ ಕೆಲವು ಪ್ರಮುಖ ವರ್ಗಗಳು. ಇನ್ನೂ ಕೆಲವು ಖುಷಿಯ ಬಗೆಗಳಿವೆ. ಇವೆಲ್ಲವನ್ನೂ ಒಂದೊಂದನ್ನಾಗಿ ಪರಿಶೀಲಿಸೋಣ.