ನೀರ್ದೋಚಿ ತಂತ್ರಗಳು

29022016

ಆಕರ: Hai Zhu,  Zhiguang Guo and Weimin Liu, Biomimetic water-collecting materials inspired by nature, Chem. Commu., Published online  February 2016,                                          DOI: 10.1039/c5cc09867j

ಸಂಯುಕ್ತ ಕರ್ನಾಟಕದ ಇಂದಿನ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.

ಇದು ಪ್ರಕಟವಾದ ನಾಲ್ಕು ದಿನಗಳ ಅನಂತರ ನೇಚರ್ ಪತ್ರಿಕೆಯಲ್ಲಿ ಇದೇ ವಿಷಯದ ಬಗ್ಗೆ ಇನ್ನೊಂದು ಲೇಖನ  (Condensation on slippery asymmetric bumps) ಪ್ರಕಟವಾಗಿದೆ. ಹಾಗೆಯೇ ನೇಪಾಳದಲ್ಲಿರುವ ನೀರ್ದೋಚುವ ತಂತ್ರದ ವೀಡಿಯೋ (ಫಾಗ್ ಕ್ವೆಸ್ಟ್ ತಂತ್ರ) ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಈಗ ಹೆಚ್ಚಿನ ಗಮನ ಹರಿಯುತ್ತಿದೆ ಅನ್ನುವುದಕ್ಕೆ ಇದು ಒಂದು ಸೂಚಿ.

7.03.2016

ಈ ಲೇಖನವನ್ನು ಓದಿ ಹಿರಿಯರಾದ ಅಡ್ಯನಡ್ಕ ಕೃಷ್ಣಭಟ್ಟರು ಇಮೇಲ್ ಮಾಡಿದ ಪ್ರತಿಕ್ರಿಯೆ ಇಲ್ಲಿದೆ.

ಪ್ರೀತಿಯ ಶರ್ಮರಿಗೆ,

ವಂದನೆಗಳು.  ಎರಡೂ ಬರಹಗಳಲ್ಲಿ  ನಿಮ್ಮದೇ ಶೈಲಿಯ ಗುರುತು ಅಳಿಸದಿದೆ. ಪುಟ್ಟ ವಾಕ್ಯಗಳು,ಪ್ರಶ್ನೆಗಳು,ಸಾಧ್ಯ ಉತ್ತರಗಳು , ಕೆಲವು ವಿಶಿ ಷ್ಟ -ಓದುಗರಿಗೆ ಹೊಸತೆನಿಸುವ,ಆದರೆ ಮನಸಿಗೆ ಹೊಳೆವ -ಪದಗಳು  ಅಗುರುತಿನ ಲಕ್ಷಣಗಳು . ಗೋಸುಂಬೆ ಮತ್ತು ತಂತ್ರ -ಓದುಗರಿಗೆ  ಹೊಸದೆನಿಸುವ ವಿಷಯ ಗಳು. ನೀವು ಮತ್ತೆ ಪದಲೋಕಕ್ಕೆ ಬಂದದ್ದು ವೈಯಕ್ತಿಕವಾಗಿ ನನಗೆ ಸಂತೋಷವೇ ಸರಿ. 
‘ಮಂಜುಹನಿ’ ಕನ್ನಡಕ್ಕೆ ಕಸುವು ಕೊಡಬಲ್ಲ ಒಳ್ಳೆಯ ಪದ. ಕೇಸರ -ಸರಿ. ಕೇಶರ-ಅಲ್ಲ .ಸಾಪೇಕ್ಷ ಆರ್ದ್ರತೆ ‘ಆಗಬೇಕು .ಬರೆಯುವ ಅವಸರದಲ್ಲಿ ಸಾಪೇಕ್ಷ ಸಾಂದ್ರತೆ’ ಆಗಿದೆ. ಸಮಾ ನ್ಯ ಓದುಗನಿಗೆ ಇದು ಗೊತ್ತಾಗದು. 
ನಿಮ್ಮ,
ಎಕೆಬಿ 
ತಪ್ಪು-ಒಪ್ಪುಗಳನ್ನೆರಡನ್ನೂ ಸರಿಸಮನಾಗಿ ಗಮನಿಸಿ ಸದಾ ಪ್ರೋತ್ಸಾಹಿಸುವ ಎಕೆಬಿ ಯವರ ಎರಡು ಮಾತುಗಳು ಸಹಸ್ರ ಲೈಕ್ ಇದ್ದ ಹಾಗೆ.
Published in: on ಫೆಬ್ರವರಿ 29, 2016 at 5:44 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ 12

ಪ್ರಶಾಂತ ಆನಂದ

ಧ್ಯಾನಿ

ಪ್ರಪಂಚದ ಎಲ್ಲ ಗೋಜುಗಳನ್ನೂ ಮರೆತು ಒಂಟಿಯಾಗಿ ಧ್ಯಾನಸ್ತನಾದಾಗ ದೊರೆಯುವ ಖುಷಿ ಇದು. ಆಂತರಿಕ ಶಾಂತಿಯನ್ನು ಪಡೆಯುವುದು ಧ್ಯಾನಸ್ತನ ಉದ್ದೇಶ. ಇದು ಹಿಂದಿನ ಬಗೆಯ ಖುಷಿಗೆ ಸಂಬಂಧಿಸಿದ್ದೇ ಆದರೂ ಸಾಂಸಾರಿಕ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ದೂರವಿಡುವುದಲ್ಲ.  ಇದು ಪ್ರಪಂಚದ ಗೊಡವೆಯನ್ನು ದೂರವಿಟ್ಟು ಧಾರ್ಮಿಕ ಅಥವಾ ತಾತ್ವಿಕ ಕಾರಣಗಳಿಗಾಗಿ ತನ್ನೊಳಗನ್ನು ನೋಡುವುದಕ್ಕೆ ಸಂಬಂಧಿಸಿದ್ದು. ಹಲವರಿಗೆ ಇದು ಮನುಷ್ಯನ ಸಹಜ ಗುಣವಲ್ಲವೆನ್ನಿಸಬಹುದು.  ಮನುಷ್ಯರು ಸಹಜವಾಗಿಯೇ ಕುತೂಹಲ ಹಾಗೂ ಚೈತ್ನಯಶೀಲತೆಯಿರುವ ಕ್ರಿಯಾಶೀಲ, ಶ್ರಮಿಕ,ಶೋಧ ಪ್ರವೃತ್ತಿಯ ವ್ಯಕ್ತಿಗಳು.  ಮನಸ್ಸನ್ನು ಬರಿದಾಗಿಸಿದರೆ ಉನ್ನತ ಪ್ರಜ್ಞಾವಸ್ಥೆಯನ್ನು ಪಡೆಯಬಹುದೆನ್ನುವ ಕಲ್ಪನೆ ವಿಕಾಸವಾದದ ದೃಷ್ಟಿಯಿಂದ ಒಪ್ಪುವುದು ಕಷ್ಟವೇ.  ಧ್ಯಾನಸ್ಥರು ಮಾನಸಿಕವಾಗಿ ಖುಷಿಯಾಗಿದ್ದಾರೆಂದು ತೋರಿದರೂ ಕ್ರಿಯಾಶೀಲರಾದ ಸಾಮಾನ್ಯರಿಗೆ ಚಟುವಟಿಕೆಯಿಂದಿರುವ ಉಳಿದವರೇ ಹೆಚ್ಚು ಖುಷಿಯಾಗಿರುವಂತೆ ತೋರಬಹುದು.

ಧ್ಯಾನಿಯ ಪ್ರಪಂಚವೆಲ್ಲ ಪ್ರಶಾಂತತೆಯಿಂದಿರಬಹುದು. ಆದರೆ ನಮ್ಮಂತಹವರಿಗೆ ಇದು ಬಲು ಜಡವೆನ್ನಿಸುತ್ತದೆ. ಭಾವೋನ್ಮಾದವಿಲ್ಲ, ಹರ್ಷೋಲ್ಲಾಸವಿಲ್ಲ. ಕೇವಲ ಪ್ರಶಾಂತ ವೈರಾಗ್ಯದ ಭಾವನೆಯಷ್ಟೆ ಇದೆ ಎನ್ನಿಸುತ್ತದೆ. ಈ ವೈರಾಗ್ಯದಲ್ಲೇ ಧ್ಯಾನಿಗಳು ನೆಮ್ಮದಿಯನ್ನು ಅನುಭವಿಸುತ್ತಿರಬಹುದು. ಸಂಸಾರದ ತಾಪತ್ರಯಗಳಿಂದ ದೂರವಿಟ್ಟು ಇದು ಕೆಲವರಿಗೆ ಒಳ್ಳೆಯ ಫಲ ನೀಡುತ್ತದೇನೋ. ನನಗಂತೂ ಇದು ಹೊಸ ಆಂತರಿಕ ಸತ್ಯಾನ್ವೇಷಣೆಯ ಬದಲು ವಾಸ್ತವದಿಂದ ಓಡಿಹೋಗುವ ಹಾದಿ ಎನಿಸುತ್ತದೆ. ನನಗೂ, ಹಾಗೆಯೇ ಬಹುತೇಕ ಮಾನವರಿಗೆ, ಎಲ್ಲವನ್ನೂ ತಿರಸ್ಕರಿಸಲು ಹೇಳುವ ಆತ್ಮಾವಲೋಕನದ ತತ್ವಶಾಸ್ತ್ರಕ್ಕಿಂತಲೂ ಸಂಭ್ರಮದ ಸ್ಥಳ ಎನಿಸುತ್ತದೆ ಈ ಪ್ರಪಂಚ. ನಿಜ ಹೇಳಬೇಕೆಂದರೆ, ಈ ಬಗೆಯ ಪ್ರಶಾಂತ ಆನಂದವನ್ನು ಹುಡುಕುವವರು ಒಂದು ವಿಷಯದಲ್ಲಿ ನಮ್ಮೆಲ್ಲರಿಗಿಂತ ಹೆಚ್ಚು ಲಾಭ ಪಡೆಯುತ್ತಾರೆ. ಮಾನವ ಸಹಜ ಕುತೂಹಲವನ್ನು ದೀರ್ಘಕಾಲ ದೂರವಿಡಬಲ್ಲಂತಹ ಪ್ರಶಾಂತ ಸ್ವಭಾವದವರಾಗಿದ್ದು, ಧ್ಯಾನದಲ್ಲಿ ಸಫಲರಾದರೆ ಅವರು ನಮಗೆಲ್ಲರಿಗಿಂತಲೂ ದೀರ್ಘಾವಧಿಯ ಆನಂದವನ್ನು ಅನುಭವಿಸಬಲ್ಲರು.

ಸಾಮಾನ್ಯ ಕ್ರಿಯಾಶೀಲ ಮನುಷ್ಯರಿಗೆ ಸುದೀರ್ಘವಾದ ನಿರೀಕ್ಷೆಯ ಮಧ್ಯೆ ಅಲ್ಲಲ್ಲಿ ಗಾಢವಾದ ಖುಷಿಯ ಅಲೆಗಳಷ್ಟೆ ಪ್ರಾಪ್ತವಾಗುತ್ತವೆ. ಧ್ಯಾನಿಗಳು ನಿಜಕ್ಕೂ ತಮ್ಮ ಆತ್ಮಾವಲೋಕನದಲ್ಲಿ ಖುಷಿ ಕಾಣುವುದು ಸಾಧ್ಯವಾದರೆ ಅವರು ಬಲು ದೀರ್ಘ ಕಾಲ ಖುಷಿಯಾಗಿ ಇರಬಲ್ಲರು. ಬುದ್ಧ ತನ್ನ ಬೋಧನೆಗಳಲ್ಲಿ ಇದನ್ನು ಚೆನ್ನಾಗಿ ತಿಳಿಸಿದ್ದಾರೆ. ಆತನ ಬೋಧನೆಯ ಕೇಂದ್ರ ತತ್ವ ‘ಮಧ್ಯಮ ಮಾರ್ಗ’ ವನ್ನು ಹೀಗೆ ಸಂಕ್ಷಿಪ್ತವಾಗಿ ವಿವರಿಸಬಹುದು. ತಮ್ಮ ಆಸೆಗಳನ್ನು ಸಂಪೂರ್ಣ ನಿರಾಕರಿಸುವುದರಿಂದಾಗುವ ಆತ್ಮಹಾನಿಗೂ, ಆಸೆಗಳ ಬೆಂಬತ್ತಿ ಸಂಕಟವನ್ನು ಅನುಭವಿಸುವವರನ್ನೂ ಕಂಡ ಬುದ್ಧನಿಗೆ ಇವೆರಡರ ನಡುವಿನ ಮಧ್ಯಮ ಮಾರ್ಗ ಗೋಚರಿಸಿತು. ತಮ್ಮ ಆಸೆಗಳನ್ನೇ ತ್ಯಜಿಸಿಬಿಡುವುದೇ ಈ ಮಾರ್ಗ.  ಬೇರೆ ರೀತಿಯಲ್ಲಿ ಹೇಳುವುದಾದರೆ ಬುದ್ಧ ವಿರಾಗಿಯ ಕಠಿಣ ನಿರಾಕರಣೆಯನ್ನೂ ಹಾಗೂ ಅನಿವಾರ್ಯವಾಗಿ ನಿರಾಶೆಗಳನ್ನು ಹೊತ್ತು ತರುವ ಭೋಗಿಯ ಜೀವನವನ್ನೂ ಬೇಡವೆಂದು, ಇವೆರಡೂ ವಿಪರೀತಗಳ ನಡುವಿನ ಮಾರ್ಗದ ಮೇಲೆ ಗಮನವಿತ್ತ. ಸಿನಿಕರಿಗ ಇದು ಎಲ್ಲವೂ ಮಿತಿಯಲ್ಲಿರುವ ಹೊಂದಾಣಿಕೆಯ ತತ್ವವೆಂದು ತೋರುತ್ತದೆ. ಕುಡಿತ ತಪ್ಪಲ್ಲ ಅತಿಯಾಗಿ ಕುಡಿದರೆ ಯಕೃತ್ತಿಗೆ ಹಾನಿಯಾಗುತ್ತದೆ ಮುಂತಾಗಿ ಘೋರ ನಿರ್ಬಂಧಗಳ ಬದಲಿಗೆ ಮಿತಿಯಾಗಿ ಕಡಿವಾಣ ಹಾಕುವುದು ಹಾಗೂ ಲಂಪಟತನದ ಬದಲಿಗೆ ಅಲ್ಪಲೋಲುಪನಾಗಿರುವ ಕಲ್ಪನೆ ಸಿನಿಕರಿಗೆ ಬರಬಹುದು.

ಆದರೆ ಬುದ್ಧನ ಮನಸ್ಸಿನಲ್ಲಿದ್ದುದು ಅದಲ್ಲ. ಆತ ಆಸೆ ಮಿತಿಯಲ್ಲಿರುವುದನ್ನ ಮಧ್ಯಮ ಮಾರ್ಗವೆಂದು ಪರಿಗಣಿಸಲಿಲ್ಲ.  ಆಸೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕೆಂದಿದ್ದ. ಸಂಪೂರ್ಣ ನಿಷೇಧ ಹಾಗೂ ಸಂಪೂರ್ಣ ಭೋಗಗಳೆರಡು ವಿಪರೀತ ವೈರುಧ್ಯಗಳೆಂದೂ, ಇವುಗಳ ನಡುವೆ ಎಲ್ಲೋ ಆಸೆಗಳೇ ಇಲ್ಲದ ತಟಸ್ಥ ಸ್ಥಿತಿಯೂ ಇದೆ ಎಂದು ಬುದ್ಧ ಕಂಡಿದ್ದ. ಅಲ್ಲಿ ಮನಸ್ಸಿಗೆ ಶಾಂತಿ ಇದ್ದು ಗಾಢವಾದ ಮುಕ್ತ ಮತ್ತು ಸ್ವತಂತ್ರ ಭಾವವಿರುವ ನಿರ್ವಾಣ ಸ್ಥಿತಿ ದೊರೆಯುತ್ತದೆ.  ಧ್ಯಾನಿಗೆ ಇದು  ಪ್ರಸನ್ನತೆಯ ಖುಷಿಯನ್ನು ತರುತ್ತದೆಂದರೆ ತಾರ್ಕಿಕವಾಗಿ ಅದು ಕ್ಷಣಿಕ ಸುಖಕ್ಕಿಂತಲೂ ದೀರ್ಘಲಾಭ ತರುವಂಥದ್ದಷ್ಟೆ. ನಾವುಗಳು ಆಗೊಮ್ಮೆ ಈಗೊಮ್ಮೆ ಕಾಣುವ ಉತ್ಕಟ ಸಂತೋಷದ ಆ ಕ್ಷಣವನ್ನು ಹೀಗೆಯೇ ದೀರ್ಘಕಾಲ ಉಳಿಸಿಕೊಳ್ಳುವುದು ಸಾಧ್ಯವೆನ್ನುವುದು ಅನುಮಾನ.

ಪ್ರಶಾಂತ ಖುಷಿಯೆನ್ನುವುದು ಯಾಕೋ ಸಾವಿನಷ್ಟು ಸಂಕಟಕರವಲ್ಲದ  ಪ್ತಶಾಂತ ಮರಣ ಎನ್ನಿಸುತ್ತದೆ.

——————-

“ನಾವು ಆಗೊಮ್ಮೆ, ಈಗೊಮ್ಮೆ ಕಾಣುವ…. ಅನುಮಾನ”. ಈ ವಾಕ್ಯದ ಭಾಷಾಂತರ ಬಹಳ ಕಷ್ವವೆನ್ನಿಸಿತು. ಬಹುಶಃ ಮಾರಿಸ್ ಕೂಡ  ಇಲ್ಲಿ ಗೊಂದಲಮಯವಾಗಿಯೇ ಬರೆದಿರುವಂತಿದೆ. ಈ ಗೊಂದಲವನ್ನು ಅನುವಾದದಲ್ಲಿ ನಿವಾರಿಸುವುದು ಹೇಗೆ? ಮೂಲದ ಆಶಯವೇ ತಿಳಿಯದಿದ್ದಾಗ ಇದು ಬಹಳ ಕಷ್ಟ.

_________________

TRANQUIL HAPPINESS

The Meditator

This is the form of happiness that is obtained by contemplation and isolation from the cares of the world. The meditator’s goal is to find an inner peace. It is related to the last category, but here there is a deliberate philosophical or religious shutting out of the rest of the world and a turning in on oneself, rather than a temporary side-stepping of worldly problems. To many people, this type of happiness appears out of tune with true human nature. If human beings are, by their very nature, active, striving, exploratory individuals, full of curiosity and energy, the idea that higher states of consciousness can be obtained by letting the mind go blank is hard to understand from an evolutionary point of view. To typically energetic individuals, it seems that, even if the meditators are having a happy time inside their skulls, it is more likely that everyone else is having a much better time outside, where the action is.

The meditator’s world may be pervaded by a sense of serenity, but this is too passive for most of us. There is no surge of emotion, no joyous elation: merely a quiet feeling of detachment. Within that detachment the meditators may well experience a sense of calm; for some people, this could be enormously rewarding, shutting them off from the cares of the world. But for me this amounts to an escape from reality rather than the discovery of a new, inner reality. For me, and I suspect for the majority of human beings, the world is too exciting a place to be shut off by an inwardlooking philosophy. To be fair, those who practice the pursuit of tranquil happiness as a serious preoccupation do have one advantage over the rest of us. If they have a sufficiently serene type of personality, one that allows them to switch off human curiosity for long periods of time, they can, if they are successful in their meditations, achieve a more prolonged state of happiness than the rest of us.

 

For the more typically active human beings, there are long stretches of anticipation with only occasional peaks of intense, surging happiness. But if meditators can truly find happiness in their inner searching, then they can, in theory, sustain this for much longer periods of time. This is summed up well in the teachings of Buddha. The key to his philosophy is ‘The Middle Way’, which has been summarized as follows: ‘Realizing both the self-destructiveness of those who deny their desires and the misery of those who follow their desires, the Buddha saw that there is a Middle Path, which is simply to lose one’s desires: In other words, the Buddha rejected the masochism of self-denial and the many inevitable disappointments of the out-and-out hedonist, and focused on the central zone between these two extremes. Viewed cynically, this is no more than a philosophy of compromise, of ‘moderation in all things’: the idea that one drink is good for you but twenty will rot your liver, etc., mild restraints instead of savage ones, or mild indulgences instead of debauched ones.

 

But that is not quite what the Buddha had in mind. He did not envisage The Middle Way as a moderate expression of desire, but rather of the loss of desire altogether. Rather than seeing the ‘spectrum of desire’ as a kind of scale, from totally inhibited to totally unleashed, he saw it instead as two opposed extremes between which there is a completely neutral point where no desire exists at all. In that region, the mind finds peace and a state of Nirvana: a deep inner feeling of freedom and nonattachment. If this can bring tranquil happiness to the meditator, then in theory it has the advantage of being long-lasting rather than fleeting. But whether it is possible to maintain, over a long  period, the intensity of the surge of joy that the rest of us feel when we experience a peak. moment of happiness, seems doubtful.

 

Tranquil happiness, it has to be said, sounds rather like the peace of death without any of the unpleasantness of dying.

Published in: on ಫೆಬ್ರವರಿ 28, 2016 at 7:54 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗುರುತ್ವದ ಅಲೆಗಳ ಬೆನ್ನು ಹಿಡಿದು

22022016

ಸಂಯುಕ್ತ ಕರ್ನಾಟಕದಲ್ಲಿ ಇಂದು ಪ್ರಕಟವಾಗಿರುವ ನನ್ನ ಲೇಖನ. ಲೀಗೋದಂತಹ ಬಿಳಿಆನೆಯನ್ನು ಕಟ್ಟಲು ಭಾರತವೂ ಸಿದ್ಧವಾಗಿದೆ. ಮೊನ್ನೆಯಷ್ಟೆ ಈ ಬಗ್ಗೆ ತಾತ್ವಿಕವಾಗಿ ಕೇಂದ್ರ ಸರಕಾರದ  ಒಪ್ಪಿಗೆ ಸಿಕ್ಕಿದೆ. ಇತ್ತೀಚೆಗೆ ವೈದ್ಯಕೀಯ, ಔದ್ಯಮಿಕ ಹಾಗೂ ಇತರೆ ಸಂಶೋಧನೆಗಳಿಗೆ ಸರಕಾರ ಧನಸಹಾಯವನ್ನು ಕಡಿತ ಮಾಡಿದ್ದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ್ಲಲ್ಲಿ ಭೂಮಿಯ ಮೇಲೆ ಪ್ರಯೋಜನಕ್ಕೆ ಬಾರದ ವಿದ್ಯಮಾನವನ್ನು ಹುಡುಕಲು ಹೊರಟಿರುವುದು ಅಚ್ಚರಿಯ ಸಂಗತಿ. ಅಥವಾ ಮೊನ್ನೆಯಷ್ಟೆ 9000 ಜನರನ್ನು ಗುಳೆ ಎಬ್ಬಿಸಿ, ಅನ್ಯಗ್ರಹ ಜೀವಿಗಳನ್ನು ಹುಡುಕುವು ಪ್ರಪಂಚದ ಅತಿ ದೊಡ್ಡ ದೂರದರ್ಶಕವನ್ನು ಕಟ್ಟಲು ಚೀನಾ ಮುಂದಾಯಿತಲ್ಲ? ಅದಕ್ಕೆ ಸೆಡ್ಡು ಹೊಡೆಯುವ ಪರಿ ಇದು ಇರಬಹುದೇ?

ತಪ್ಪೊಪ್ಪಿಗೆ: ಲೇಖನದಲ್ಲಿ ಜೋಡಿ ನಕ್ಷತ್ರಗಳು 400 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದುವು ಎಂದಿದೆ. ಇದು ತಪ್ಪು. ಅವು 1.3 ಬಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿವೆ. ಹುಲುಮಾನವರಿಗೆ ಎರಡೂ ದೂರಗಳೂ ಒಂದೆ ಎನ್ನಿಸಿದರೂ, ವಿಜ್ಞಾನದಲ್ಲಿ ಇದು ಬಹಳ ವ್ಯತ್ಯಾಸವನ್ನುಂಟು ಮಾಡಬಹುದು. ಆತುರದ ಲೇಖನಗಳನ್ನು ಬರೆಯುವಾಗಲೂ ಮತ್ತೊಮ್ಮೆ, ಇನ್ನೊಮ್ಮೆ ಅಂಕಿ ಸಂಖ್ಯೆಗಳನ್ನು ಪರಿಶೀಲಿಸಬೇಕಾದ್ದು ಲೇಖಕನ ಕರ್ತವ್ಯ. ಅದನ್ನು ಮಾಡದೇ ಇದ್ದುದು ಅಕ್ಷಮ್ಯ ಅಪರಾಧ.

ವಿಜ್ಞಾನ ಲೇಖಕರು ವಿಷಯಗಳನ್ನು ಆಯ್ದುಕೊಳ್ಳುವುದು ಏಕೆ? ಯಾವ ಮಾನದಂಡವಿರುತ್ತದೆ? ರೋಹಿತ್ ಚಕ್ರತೀರ್ಥ ಎಂದೋ ಕೇಳಿದ ೀ ಪ್ರಶ್ನೆಗೆ ಇಲ್ಲೊಂದು ಉತ್ತರ. ಮೊನ್ನೆ ಈ ಅಂಕಣಕ್ಕೆ ಬರೆಯಲು ನಾನು ಆಯ್ದುಕೊಂಡ ವಿಷಯ ವಿಕಾಸವಾದದ ಬಗ್ಗೆ ಕುರಿತ ಒಂದು ಸಂಶೋಧನೆ. ಅಷ್ಟರಲ್ಲಾಗಲೇ ಲೀಗೋ ಬಗ್ಗೆ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿಯಾಗಿತ್ತು. ಅಂಕಣದ ಲೇಖನವನ್ನು ಪರಿಷ್ಕರಿಸುವಾಗ ಮತ್ತೊಂದು ಸುದ್ದಿ ಬಂತು. ಅದಾಗ ತಾನೇ ಕೇಂದ್ರ ಮಂತ್ರಿಮಂಡಲ ಭಾರತದಲ್ಲೂ ಒಂದು ಲೀಗೋ ವ್ಯವಸ್ಥೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಿತ್ತು. ಜೊತೆಗೆ ಚೀನಾ ಸರಕಾರ ಪ್ರಪಂಚದ ಅತಿ ದೊಡ್ಡ ಅನ್ಯಗ್ರಹ ಶೋಧಕ ದೂರದರ್ಶಕವನ್ನು ಸ್ಥಾಪಿಸಲು ಹೊರಟಿದ್ದೂ ಅದೇ ವೇಳೆಗೆ ಸುದ್ದಿಯಾಯಿತು.

ವೈಯಕ್ತಿಕವಾಗಿ ಲೀಗೋ ಬಗ್ಗೆ ನನಗೆ ಹಲವು ಅನುಮಾನಗಳಿವೆ. ಇತ್ತೀಚೆಗಷ್ಟೆ ಲೀಗೋ ನವೀಕರಣಗೊಂಡಿದೆ. ಇದಕ್ಕಾಗಿ ವೆಚ್ಚವಾದ ಹಣದ ಬಗ್ಗೆ ಹಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಲೀಗೋ ಅನುಸರಿಸುತ್ತಿರುವ ತಂತ್ರಗಳ ಬಗ್ಗೆಯೂ ಅನುಮಾನಗಳಿವೆ. ಕೆಲವು ತಿಂಗಳುಗಳ ಹಿಂದೆ ಇದೇ ಲೀಗೋ ಹೀಗೆಯೇ ಸುದ್ದಿ ಹಬ್ಬಿಸಿ ಅನಂತರ ಅದು ಪರೀಕ್ಷೆಗೆಂದು ಕಳಿಸಿದ ಸಂಕೇತ. ತಪ್ಪಾಗಿ ನೈಜ ಸಂಕೇತವೆಂದು ಹೇಳಿಬಿಟ್ಟೆವು ಎಂದು ತಪ್ಪೊಪ್ಪಿಕೊಂಡಿತ್ತು. ಈಗ ಕಂಡದ್ದೂ ಅದೇ ಬಗೆಯ ಸುಳ್ಳು ಸಂಕೇತವೋ? ಅಥವಾ ನಿಜವಾಗಿಯೂ ಸಂಕೇತವೊಂದು ದೊರಕಿದೆಯೋ ಎನ್ನುವ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಿವೆ.

ಇವೆಲ್ಲದರ ಹಿನ್ನೆಲೆಯಲ್ಲಿ ಲೀಗೋ ಹಾಗೂ ಭಾರತೀಯ ಲೀಗೋ (ಇದಕ್ಕಾಗುವ ವೆಚ್ಚ ಹಾಗೂ ಇದರ ಸ್ಥಾಪನೆಯ ಸ್ಥಳದ ಬಗ್ಗೆ ವಿವರಗಳು ಇನ್ನು ಮುಂದೆ ದೊರೆಯಬೇಕಷ್ಟೆ) ಒಟ್ಟೊಟ್ಟಿಗೆ ಸುದ್ದಿಯಾಗಿದ್ದರಿಂದ  ಇದನ್ನು ಬರೆಯಬೇಕೆನ್ನಿಸಿತು. ಬರೆದಿದ್ದ ಲೇಖನವನ್ನು ಒತ್ತೊಟ್ಟಿಗಿಟ್ಟು ಆತುರದ ಲೇಖನ ಬರೆದೆ. ಅಪರಾಧ ಮಾಡಿದೆ.!

 

Published in: on ಫೆಬ್ರವರಿ 22, 2016 at 5:35 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಯಾವ ದೀಪಗಳು ಹಿತ ಕೀಟಗಳಿಗೆ?

ಬಿರು ಬೇಸಗೆ ಕಳೆದು ಮೊದಲ ಮಳೆ ಭೂಮಿಯನ್ನು ತಣಿಸಿದ ಮರುದಿನವೇ ಒಂದು ವಿಚಿತ್ರ ಕಾಣುತ್ತೇವಷ್ಟೆ. ಸಂಜೆ ದೀಪ ಹೊತ್ತಿಸಿದ ಕೂಡಲೇ ದೀಪಕ್ಕೆ ಮುತ್ತಿಕೊಂಡು ಮುಸುಕು ಹಾಕಿಬಿಡುವ ಹಾರುವ ಇರುವೆಗಳ ಮೋಡ ಎಲ್ಲಿಂದಲೋ ಕಾಣಿಸಿಕೊಳ್ಳುತ್ತದೆ. ಮುಂಜಾವು ವಾಕಿಂಗ್ ಹೋಗುವಾಗ ಪಾರಿಜಾತ ಮರದ ಕೆಳಗೆ ಹೂಗಳು ಉದುರಿರುವುದನ್ನು ನೋಡುವುದರ ಜೊತೆಗೇ ದೀಪದ ಕಂಭದ ಕೆಳಗೆ ರೆಕ್ಕೆ ಇರುವೆಗಳ ಹಾಸನ್ನೂ ನೋಡುತ್ತೇವೆ. ಈ ಕೀಟಗಳು ದೀಪಗಳನ್ನು ಹುಡುಕಿಕೊಂಡು ಬಂದು ಸಾಯುವುದೇಕೆ ಎನ್ನುವ ಪ್ರಶ್ನೆ ಕೆಲವರ ಮನಸ್ಸಿನಲ್ಲಾದರೂ ಎದ್ದಿರಲೇ ಬೇಕು.

ಕೀಟಗಳಿಗೂ ದೀಪಗಳಿಗೂ ಅದೇನೋ ಅವಿನಾಭಾವ ಸಂಬಂಧ. ಬೆಂಕಿಗೆ ಮುತ್ತು ಕೊಟ್ಟ ಪತಂಗದ ಹಾಗೆ ಎಂದು ಕೇಳಿಲ್ಲವೇ? “ನಿಲ್ಲು ನಿಲ್ಲೇ ಪತಂಗ, ಬೇಡ,ಬೇಡ ಬೆಂಕಿಯ ಸಂಗ,” ಎಂದು ಕವಿ ಎಷ್ಟೇ ಹೇಳಿದರೂ ಪತಂಗ ನಿಲ್ಲದು. ಪತಂಗವಷ್ಟೆ ಅಲ್ಲ, ಹಲವು ಬಗೆಯ ಸೊಳ್ಳೆಗಳು, ನುಸಿ, ರೆಕ್ಕೆ ಬೆಳೆಸಿಕೊಂಡ ಗಂಡು ಇರುವೆಗಳು, ದುಂಬಿ, ನಾರುವ ದುಂಬಿ, ಹೆಸರೇ ಗೊತ್ತಿಲ್ಲದ ನೂರಾರು ಬಗೆಯ ಕೀಟಗಳನ್ನು ಕೃತಕ ಬೆಳಕು ಆಕರ್ಷಿಸುತ್ತದೆ.

Chrysocoris,_Hebbal,_Bangalore,_India_-_20060806

ಬೆಳಕಿನಿಂದ ಆಕರ್ಷಿತವಾಗುವ ಒಂದು ಕೀಟ.  ಇದಕ್ಕೆ ಕನ್ನಡದಲ್ಲಿ ಏನೆಂದು ಹೆಸರು? ಯಾರಿಗಾದರೂ ಗೊತ್ತೇ?

ಇದಕ್ಕೆ ನಿಜವಾದ ಕಾರಣವೇನೆಂದು ಹೇಳಲು ಸಾಧ್ಯವಾಗಿಲ್ಲ. ಗೊತ್ತಿರುವುದೆಲ್ಲ ಇಷ್ಟೆ. ಬಹುತೇಕ ಕೀಟಗಳು ದಿಕ್ಕು ಗುರುತಿಸಲು ಒಂದೋ ಸೂರ್ಯನ ಅಥವಾ ಚಂದ್ರನನ್ನು ಅನುಸರಿಸುತ್ತವೆ. ಇವುಗಳ ಕಣ್ಣು ಎಷ್ಟು ಸೂಕ್ಷ್ಮವೆಂದರೆ ಸೂರ್ಯನ ಬೆಳಕು ಇವುಗಳಿಗೆ ಬೇರೆಯದೇ ರೀತಿಯಲ್ಲಿ ಕಾಣುತ್ತದೆ. ಬೆಳಕಿನ ಅಲೆಗಳು ಕಂಪನ ಯಾವ ದಿಕ್ಕಿನಲ್ಲಿದೆ ಎನ್ನುವುದನ್ನು ಕೀಟಗಳ ಕಣ್ಣು ಕಾಣಬಲ್ಲದು. ಈ ಸಾಮರ್ಥ್ಯ ಮಾನವನ ಕಣ್ಣಿಗಿಲ್ಲ.  ಇದರ ಫಲ: ದಟ್ಟ ಮೋಡಗಳ ನಡುವೆ ಸೂರ್ಯ ಮರೆಯಾಗಿದ್ದರೂ ಬೆಳಕಿನ ಅಲೆಗಳ ಕಂಪನದ ದಿಕ್ಕನ್ನು ಗಮನಿಸಿ ಇವು ಸೂರ್ಯನಿರುವ ಎಡೆಯನ್ನು ಗುರುತಿಸಬಲ್ಲವು. ರಾತ್ರಿ ಚಟುವಟಿಕೆ ತೋರುವ ನಿಶಾಚರಿ ಕೀಟಗಳಿಗೆ ಚಂದ್ರನೇ ದಾರಿದೀಪ.

ಬೆಳಗಿನ ಹೊತ್ತು ಸೂರ್ಯನ ಪ್ರಖರ ಬೆಳಕಿನಿಂದಾಗಿ ನೀವು ಬೇರಾವುದೇ ದೀಪ ಹೊತ್ತಿಸಿಟ್ಟರೂ ಅದು ಮಂಕುದೀಪವಷ್ಟೆ! ಹೀಗಾಗಿ ಕೃತಕ ದೀಪಗಳಿಂದ ಕೀಟಗಳಿಗಾಗುವ ಗೊಂದಲ ನಮಗೆ ಬೆಳಗ್ಗಿನ ಹೊತ್ತು ಕಾಣುವುದಿಲ್ಲ. ರಾತ್ರಿ ದೀಪ ಹೊತ್ತಿಸಿದಾಗ ಅವನ್ನೇ ಚಂದ್ರನೆಂದು ಭ್ರಮಿಸಿ ಕೀಟಗಳು ಅತ್ತ ಹಾರಿ ಬರುತ್ತವೆ. ಇನ್ನು ರೆಕ್ಕೆ ಇರುವೆಯಂತಹ ಪ್ರಾಣಿಗಳ ಜೀವನವೇ ಕ್ಷಣಿಕ. ಅವು ಅನ್ನಾಹಾರ ಸೇವಿಸಲಾರವು. ದೇಹದಲ್ಲಿ ಕಸುವೆಷ್ಟಿದೆಯೋ ಅಷ್ಟೇ ಅವುಗಳ ಹಾರಾಟ.  ಕೃತಕ ಬೆಳಕಿನಿಂದಾಗಿ ಗೊಂದಲಗೊಂಡು ಅತ್ತ ಹಾರಿ ಬಂದ ಅವು ದಿಕ್ಕು ತಿಳಿಯದೇ ಅಲ್ಲಲ್ಲೇ ಗಿರಕಿ ಹೊಡೆಯುತ್ತವೆ. ಕಸುವುಗುಂದಿ ಕಾಲನ ವಶವಾಗುತ್ತವೆ. ದೀಪದ ಕಂಭದ ಕೆಳಗಿನ ಇರುವೆ ಹಾಸಿಗೆ ಇದೇ ಕಾರಣ.

ಅದೆಲ್ಲ ಸರಿ. ಈ ಹಿಂದೆ ಕೇವಲ ಬುಡ್ಡಿ ಬೆಳಕೋ, ಬಲ್ಬ್ ಬೆಳಕೋ ಇರುತ್ತಿತ್ತು. ಆದರೆ ಈಗ ಹಾಗಿಲ್ಲ. ಹತ್ತಾರು ಬಗೆಯ ದೀಪಗಳಿವೆ. ಪಾದರಸ, ಸೋಡಿಯಂ, ನಿಯಾನ್ ಅನಿಲಗಳಿರುವ, ಫ್ಲೂರೆಸೆಂಟ್ ದೀಪಗಳು, ನೂರು ವರ್ಷ ಹಳೆಯ ಬಲ್ಬ್ ದೀಪಗಳು, ಹತ್ತು ವರ್ಷಗಳ ಹಿಂದೆ ಜನಪ್ರಿಯವಾಗಿ ಅಷ್ಟೇ ಬೇಗನೆ ಮೂಲೆಗುಂಪಾಗುತ್ತಿರುವ ಸಿಎಫ್ ಎಲ್ ಗಳು ಹಾಗೂ ಇತ್ತೀಚೆಗೆ ಪ್ರಚಾರ ಪಡೆಯುತ್ತಿರುವ ಎಲ್ ಇ ಡಿ ಬಲ್ಬುಗಳು. ಇವೆಲ್ಲವೂ ಬೆಳಕನ್ನು ಸೂಸುವ ವಿಧಾನಗಳು ವಿಭಿನ್ನ. ಹಾಗೆಯೇ, ಇವುಗಳಿಂದ ಸೂಸುವ ಬೆಳಕಿನ ಗುಣಗಳೂ ವಿಭಿನ್ನ. ಬಲ್ಬು ಹಳದಿ ಬಣ್ಣ ಹೆಚ್ಚಿರುವ ಬೆಳಕನ್ನು ಸೂಸುತ್ತದೆ. ನಿಯಾನ್ ದೀಪಗಳು ಯಾವ ಬಣ್ಣವನ್ನು ಬೇಕಾದರೂ ಸೂಸಬಲ್ಲವು. ಸೋಡಿಯಂ ದೀಪಗಳು ತುಸು ಹೆಚ್ಚೇ ನೇರಳಾತೀತ ಕಿರಣಗಳನ್ನು ಚೆಲ್ಲುತ್ತವೆ. ಸಿಎಫ್ ಎಲ್ ಮತ್ತು ಎಲ್ ಇ ಡಿ ದೀಪಗಳು ಬೆಳಕಿನಲ್ಲಿ ನೀಲಿ ಬೆಳಕಿನ ಪ್ರಮಾಣ ಕಡಿಮೆ.  ಇದಲ್ಲದೆ ಕೀಟಗಳನ್ನು ಆಕರ್ಷಿಸುವುದೇ ಇಲ್ಲ ಎಂದು ಪ್ರಚಾರ ಪಡೆದ ‘ಬಗ್’ ದೀಪಗಳೂ ಮಾರುಕಟ್ಟೆಯಲ್ಲಿ ಇವೆ. ಇವುಗಳಲ್ಲಿ ಯಾವ ಬಲ್ಬು ಕೀಟಗಳನ್ನು ಆಕರ್ಷಿಸಬಲ್ಲದು? ಅಥವಾ ಎಲ್ಲ ದೀಪಗಳೂ ಒಂದೇ ರೀತಿಯಲ್ಲಿ ಕೀಟಗಳನ್ನು ಆಕರ್ಷಿಸುತ್ತವೆಯೋ?

Earwig_Dermaptera_unidentified_2014_04_06_5259.jpg

ಎಲ್ ಇ ಡಿ ಬಲ್ಬುಗಳು ಇದನ್ನು ಆಕರ್ಷಿಸುವುದು ಕಡಿಮೆ. ಇದರ ಹೆಸರೇನಿರಬಹುದು?

ಇದು ಕೌತುಕದ ಪ್ರಶ್ನೆ. ಮೊನ್ನೆ ಅಮೆರಿಕೆಯ ಅಸೋಸಿಯೇಷನ್ ಫಾರ್ ಅಡ್ವಾನ್ಸ್ ಮೆಂಟ್ ಆಫ್ ಸೈನ್ಸ್ ನ ಸಭೆಯಲ್ಲಿ ಹೀಗೊಂದು ಪ್ರಶ್ನೆಗೆ ಉತ್ತರ ಹುಡುಕುವ ಸಂಶೋಧನೆಯ ವಿವರಗಳ ಬಗ್ಗೆ ಚರ್ಚೆ ಯಾಯಿತು. ಮೈಖೇಲ್ ಜಸ್ಟಿಸ್ ಎನ್ನುವ ಕೀಟತಜ್ಞ ಬೇಸಗೆಯ ತಿಂಗಳಲ್ಲಿ ಪ್ರತಿದಿನ ರಾತ್ರಿ ಕೀಟಗಳನ್ನು ಸಂಗ್ರಹಿಸಿದ. ಆರು ಬಗೆಯ ದೀಪಗಳನ್ನು ಬೇರೆ, ಬೇರೆಡೆ ಹೊತ್ತಿಸಿಟ್ಟ. ಈ ದೀಪಗಳ ಬಳಿ ಬಂದ ಕೀಟಗಳು ಜಾರಿ ಬೀಳುವಂತೆ ಈತನ ಸಾಧನವಿತ್ತು. ಇದರಲ್ಲಿ ಬಿದ್ದ ಕೀಟಗಳ ಬಗೆ ಹಾಗೂ ಸಂಖ್ಯೆಯನ್ನು ಲೆಕ್ಕ ಹಾಕಿ, ಎಂತಹ ಕೀಟಗಳು ದೀಪಗಳ ಬಳಿಗೆ ಹೆಚ್ಚು ಬರುತ್ತವೆ. ಯಾವ ದೀಪದ ಬಳಿ ಹೆಚ್ಚು ಕೀಟಗಳು ಬರುತ್ತವೆ ಎಂದು ಲೆಕ್ಕ ಹಾಕಿದ.

ಫಲಿತಾಂಶ: ಬಲ್ಬ್ ದೀಪಗಳು ಅತಿ ಹೆಚ್ಚಿನ ಕೀಟಗಳನ್ನು ಆಕರ್ಷಿಸಿದುವು. ಕೀಟಗಳನ್ನು ಆಕರ್ಷಿಸುವುದೇ ಇಲ್ಲ ಎಂದು ಪ್ರಚಾರ ಪಡೆದ ‘ಬಗ್’ ದೀಪಗಳಿಗೆ ಎರಡನೆಯ ಸ್ಥಾನ! ಕೊನೆಯ ಸ್ಥಾನ: ಎಲ್ ಇ ಡಿ ಬಲ್ಬುಗಳದ್ದು. ಬಹುಶಃ ಎಲ್ ಇ ಡಿ ಬಲ್ಬುಗಳು ಸೂಸುವ ಬೆಳಕಿನ ಗುಣ ಕೀಟಗಳಿಗೆ ಇಷ್ಟವಾಗದಿರಬಹುದು ಎನ್ನುವುದು ಜಸ್ಟಿಸ್ ನ ತರ್ಕ. ‘ಬಗ್’ ದೀಪಗಳಂತೂ ಬೇರೆಲ್ಲ ಬಲ್ಬ್ ಗಳಿಗಿಂತಲೂ ಹೆಚ್ಚು ಕೆಲವು ಬಗೆಯ ಕೀಟಗಳನ್ನು ಆಕರ್ಷಿಸುತ್ತಿದ್ದುವು. ಹಾಗೆಯೇ ಕಚ್ಚಿ ನೋವುಂಟು ಮಾಡುವ “ಇಯರ್ ವಿಗ್” ನಂತಹ ಕೀಟಗಳನ್ನೂ ಇವು ಹೆಚ್ಚು ಸೆಳೆದುವು.

ಅಂದರೆ ಇನ್ನು ಮನೆಯ ಮುಂದೆ, ಓದುವ ಜಾಗದಲ್ಲಿ ಅಥವಾ ಎಲ್ಲಿ ಕೀಟಗಳ ಬಾಧೆ ಬೇಡವೆನ್ನಿಸುತ್ತದೆಯೋ ಅಲ್ಲಿ ಎಲ್ ಇ ಡಿ ದೀಪಗಳನ್ನು ಹಾಕುವುದು ಒಳ್ಳೆಯದು ಎನ್ನೋಣವೇ? ಅಥವಾ ಇದು ಕೇವಲ ಅಮೆರಿಕೆಯ ಕೀಟಗಳಿಗಷ್ಟೆ ನಿಜವೋ? ನಮ್ಮೂರ ಕೀಟಗಳ ಆಯ್ಕೆ ಬೇರೆ ಇರಬಹುದೋ?

ಆಕರ: http://www.aaas.org/abstract/light-pollution-and-insects-insect-attraction-various-types-residential-lights?_ga=1.24804538.1671817005.1396291853

 

Published in: on ಫೆಬ್ರವರಿ 19, 2016 at 4:55 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ- ಸಂತೋಷದ ಬಗೆ 11

ಆಯ್ದ ಖುಷಿ

ವಿಮನಸ್ಕ

ಇದು ಸುತ್ತಲಿರುವ ಭಯ-ಆತಂಕಗಳನ್ನು ಅಲಕ್ಷಿಸುವ ಖುಷಿ ಇದು. ಖಿನ್ನತೆಯಿಂದ ಬಳಲುವ ವ್ಯಕ್ತಿಗಳು ಬದುಕಿನ ಘೋರ ವಾಸ್ತವತೆಯನ್ನು ಹಾಗೂ ಜೀವನದ ನೋವುಗಳನ್ನು ಕಾಣುತ್ತಿರುವವರು ತಾವಷ್ಟೆ ಎಂದೂ, ಖುಷಿ-ಸಂತೋಷದಿಂದಿರುವವರು ಇದನ್ನುಕಾಣುತ್ತಿಲ್ಲ ಅಥವಾ ಉದ್ದೇಶಪೂರ್ವಕವಾಗಿ ಅವಗಣಿಸುತ್ತಿದ್ದಾರೆಂದು ಭಾವಿಸಿರುತ್ತಾರೆ. ಹಸಿವಿನಿಂದ ಸಾವನ್ನಪ್ಪುತ್ತಲಿರುವವರು, ಸೆರೆಯಲ್ಲಿ ಹಿಂಸೆಯನ್ನನುಭವಿಸುತ್ತಿರವವರು, ಪ್ರಾಣಿಗಳ ಮೇಲೆ ಪ್ರಯೋಗ ನಡೆಯುತ್ತಿರುವುದು, ಮಲಿನಗೊಂಡ ಪರಿಸರ ಹಾಗೂ ಇನ್ಯಾವುದೇ ದುರಂತ ವಿಷಯದಲ್ಲೂ ಕೋಟ್ಯಂತರ ಮಂದಿ ನೋವನ್ನನುಭವಿಸುತ್ತಿರುವಾಗ ಯಾರಾದರೂ ಹೇಗೆ ಖುಷಿಯಾಗಿರುತ್ತಾರೆನ್ನುವುದು ಅವರಿಗೆ ಅರ್ಥವಾಗದ ವಿಷಯ. ಇದು ಸಂತಸವನ್ನೇ ಹಲವರು ತೆಗಳುವಂತೆ ಮಾಡಿದೆ. ಐನ್ಸ್ಟೀನ್ ಕೂಡ ಸಂತೋಷವನ್ನು “ಕೊಳಚೆಯ ಆದರ್ಶ” ಎಂದು ಕರೆದಿದ್ದಾರೆ. ನೀವು ಈ ಪ್ರತಿಭಾನ್ವಿತರ ಹಳೆಯ ಛಾಯಾಚಿತ್ರಗಳನ್ನು ನೋಡುವಾಗ ಆತನ ಆ ಖಿನ್ನ ಮುಖದಲ್ಲಿ ಹೆಚ್ಚು ನಗುವನ್ನು ಕಾಣಲಾರಿರಿ.  ಸಂತೋಷವಾಗಿರುವುದಕ್ಕೆ ಬೇಕಾದ್ದಕ್ಕಿಂತಲೂ ಹೆಚ್ಚು ಜ್ಞಾನಿಯಾಗಿದ್ದರಾತ. ಪ್ರತಿ ಕ್ಷಣವೂ ಆ ಅರಿವಿನ ಹೊರೆ ತೂಗುತ್ತಿತ್ತು. ಇವರಂತೆಯೇ ಇನ್ನೂ ಹಲವರು ಸಂತೋಷವನ್ನುಮುಗ್ಧತೆ, ಮೂರ್ಖತನ, ಮೂಢರ ಪ್ರಸನ್ನತೆ  ಹಾಗೂ ಹುಚ್ಚು ಮರೆವು ಎಂದು ಬಣ್ಣಿಸಿದ್ದಾರೆ.

ವಿಮನಸ್ಕತೆಯ ಈ ಖುಷಿಯಲ್ಲಿ ಒಳ್ಳೆಯದೂ ಇದೆ. ಕೆಟ್ಟದ್ದೂ ಇದೆ. ಒಳ್ಳೆಯದೇನೆಂದರೆ ಇಂತಹ ವಿಮನಸ್ಕತೆಯನ್ನು ತೋರುವವರ ಸಂಗ ಖುಷಿ ತರುತ್ತದೆ. ಕೆಟ್ಟದ್ದೇನೆಂದರೆ ಅವರು ತಮ್ಮ ಜೊತೆಗಿರುವವರಲ್ಲೂ ಗೊಂದಲವನ್ನುಂಟು ಮಾಡಬಲ್ಲರು. ಏಕೆಂದರೆ  ಬದುಕು ನೀಡುವ ಸವಾಲುಗಳನ್ನು  ಪರಿಗಣಿಸಲು ನಿರಾಕರಿಸುವ ಇವರು ಸದಾ ಮಹದಾನಂದದ ಸ್ಥಿತಿಯಲ್ಲೇ ಇರುವರು. ರೋಮ್ ಹೊತ್ತಿ ಉರಿಯುವಾಗ ನೀರೋ ಪಿಟೀಲು ನುಡಿಸುತ್ತಿದ್ದನೆಂಬ ಹಳೆಯ ಗಾದೆ ಇಲ್ಲಿ ನೆನಪಾಗುತ್ತದೆ. ಇಂತಹ ವಿಮನಸ್ಕರು ತಮ್ಮ ಸುತ್ತಲೂ ಮಹಾದುರಂತವೇ ನಡೆದರೂ ಖುಷಿಯಿಂದಿರಬಲ್ಲರು. ಕೊನೆಯಲ್ಲಿ ಅದು ಅವರನ್ನು ತಾಕಿಯೇ ತಾಕುತ್ತದೆ ಎನ್ನಿ. ಆದರೆ ಆ ಕ್ಷಣಕ್ಕೆ ಅವರು ಅದನ್ನು ಅವಗಣಿಸಬಲ್ಲರು. ಅವರು ಪ್ರತಿಭಾವಂತರಾದಲ್ಲಿಅವ್ಯವಸ್ಥೆಯನ್ನು ಮರೆಯುವುದನ್ನು ಕ್ಷಮಿಸಬಹುದು. ಆದರೆ ಕೊನೆಗೂ ಅದು ಅವರನ್ನು ಬಾಧಿಸದೆ ಇರದು.

ನನಗೆ ಪರಿಚಯವಿದ್ದ ಕಾಡಿನ ಮಧ್ಯೆ ಗುಡಿಸಲಿನಲ್ಲಿದ್ದುಕೊಂಡು ಚಿತ್ರಗಳನ್ನು ಬರೆಯುತ್ತಿದ್ದ ಡಚ್ ಕಲಾವಿದನೊಬ್ಬ ನನಗೆ ಒಮ್ಮೆ ಹೇಳಿದ್ದ. “ನಿತ್ಯ ಮಾಡಬೇಕಾದ್ದನ್ನೆಲ್ಲ ನಾನೇ ಮಾಡುತ್ತಿದ್ದರೆ ಏನನ್ನೂ ಸಾಧಿಸಲಾರೆ.” ಸ್ಟುಡಿಯೋವನ್ನು ಗುಡಿಸಿ, ಶುಚಿಯಾಗಿಟ್ಟುಕೊಂಡು, ನಿತ್ಯದ ವ್ಯವಹಾರಗಳನ್ನು ತಪ್ಪದೆ ಮಾಡಿಕೊಂಡು, ದೈನಂದಿನ ವಿಷಯಗಳಿಗೆ ಗಮನ ಕೊಡುವುದೇ ಮೊದಲಾದ ಸ್ವಸ್ಥ ಜೀವನಕ್ಕೆ ಅವಶ್ಯಕವೆಂದು ಬಹಳಷ್ಟು ಜನರು ಪರಿಗಣಿಸುವ ವಿಷಯಗಳನ್ನು ಮಾಡುತ್ತಿದ್ದರೆ ಪೈಂಟ್ ಮಾಡಲು ಬೇಕಾದ ಸಮಯ ಹಾಗೂ ಉತ್ಸಾಹ ಸಿಗದೇ ಹೋಗುತ್ತದೆ ಎನ್ನುವುದು ಅವನ ಮಾತಿನ ಅರ್ಥ. ಹಲವು ಗಂಟೆಗಳಷ್ಟು ಕಾಲ ತೀವ್ರ ಗಮನ ನೀಡಬೇಕಾದಂತಹ ಕ್ಲಿಷ್ಟಕರವಾದ ಪೇಂಟಿಂಗ್ ಶೈಲಿಯನ್ನು ಆತ ಅನುಸರಿಸುತ್ತಿದ್ದ.  ದೈನಂದಿನ ಇತರೆ ಸಂಗತಿಗಳನ್ನು ನಿರ್ಲಕ್ಷಿಸದಿದ್ದರೆ ಅವನ ಪ್ರಮುಖ ಕೆಲಸಕ್ಕೆ ಧಕ್ಕೆಯಾಗುತ್ತಿತ್ತು. ಆದರೆ ಈತ ಸಂಪೂರ್ಣ ವಿಮನಸ್ಕನಲ್ಲ. ಏಕೆಂದರೆ ತಾನು ಇತರೆ ವಿಷಯಗಳನ್ನು ಅವಗಣಿಸುತ್ತಿದ್ದೇನೆಂಬ ಅರಿವು ಅವನಿಗಿತ್ತು. ಸಂಪೂರ್ಣ ವಿಮನಸ್ಕತೆ ಇರುವವರಿಗೆ ತಾವೇನನ್ನು ನಿರ್ಲಕ್ಷಿಸುತ್ತಿದ್ದೇವೆ ಎನ್ನುವ ಪರಿಗಣನೆಯೂ ಇರುವುದಿಲ್ಲ. ತನ್ನ ಮನಸ್ಸಿನಿಂದ ಅದನ್ನು ಸಂಪೂರ್ಣವಾಗಿ ಅದನ್ನು ಅಳಿಸಿಬಿಡಬಲ್ಲರು. ಅರೆ ವಿಮನಸ್ಕತೆಯಿರುವವರಿಗೆ ತಮ್ಮ ಕೆಲಸದಿಂದ ಖುಷಿ ಪಡೆಯುವಾಗಲೂ ಎಲ್ಲೋ ಮನಸ್ಸಿನ ಮೂಲೆಯಲ್ಲಿ ನಿತ್ಯದ ಬಣವೆಗಳ ಬಗ್ಗೆ ಒಂದಿಷ್ಟು ಅಳುಕು ಇದ್ದೇ ಇರುತ್ತದೆ. ಆದರೆ ತನ್ನ ಗುರಿಯ ಸಾಧನೆಗಾಗಿ ಅದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಾರೆ.

ಅಸಾಮಾನ್ಯದ ಬೆಂಬತ್ತಿ ನಡೆದು ಸಾಧಾರಣವಾದದ್ದನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಹವರಿಗೆ ಕಲಾವಿದ ಫ್ರಾನ್ಸಿಸ್ ಬೇಕನ್ ಮತ್ತೊಂದು ಉದಾಹರಣೆ. ಬದುಕಿನ ಸಂಜೆಯಲ್ಲಿದ್ದಾಗ, ಆತನ ಚಿತ್ರಗಳು ಹಲವು ಮಿಲಿಯನ್ ಪೌಂಡುಗಳಿಗೆ ಮಾರಾಟವಾಗುತ್ತಿದ್ದಾಗಲೂ ಆತ ಸಾಮಾನುಗಳಿಂದ ಕಿಕ್ಕಿರಿದ, ಪುಟ್ಟದೊಂದು ಮಂಚವಿದ್ದ ಸ್ಟುಡಿಯೋದಲ್ಲಿಯೇ ವಾಸವಿದ್ದ. ಅಡುಗೆ ಮನೆಯಲ್ಲೇ ಸ್ನಾನದ ಕೋಣೆಯೂ ಇದ್ದು, ಸಣ್ಣ ಬಲ್ಬುಗಳಿಂದ ಬೆಳಗಿತ್ತು. ಅವನ ಎಂಭತ್ತನೇ ಹುಟ್ಟುಹಬ್ಬದಂದು ಶುಭ ಹಾರೈಸಲು ಬಂದವರು ಅವನಿಗೆ ಹೂಗುಚ್ಛಗಳನ್ನು ನೀಡಿದಾಗ ಬೇಕನ್ ಹೇಳಿದ್ದು: “ಇದೊಳ್ಳೆ ತಮಾಷೆ. ಇದಕ್ಕಾಗಿ ಹೂದಾನಿಗಳನ್ನು ಇಟ್ಟುಕೊಳ್ಳುವವನಲ್ಲ ನಾನು.”  ಬಟ್ಟೆಗಳನ್ನುಒಗೆಯಲೂ ಅವನ ಕಲಾಪ್ರದರ್ಶಕರೇ ವ್ಯವಸ್ಥೆ ಮಾಡಿದ್ದರು. ಇಂತಹ ಕ್ರಿಯಾತ್ಮಕ ವ್ಯಕ್ತಿಗಳು ಯಾಕೋ ನಿತ್ಯದ ಸಂಗತಿಗಳಿಗಾಗಿ ಸಮಯ ವ್ಯರ್ಥ ಮಾಡುವುದನ್ನು ಒಪ್ಪುವುದಿಲ್ಲ. ಬೇಕನ್ನಿನಂತಹ ಕೆಲವರಂತೂ ತಮ್ಮನ್ನು ವಿಮನಸ್ಕರನ್ನಾಗಿ ಮಾಡುವ ಎಲ್ಲವನ್ನೂ ಮನಸ್ಸಿನಿಂದಲೇ ತೊಡೆದು ಹಾಕುವ ಸಾಮರ್ಥ್ಯ ತೋರುವರು.

____________________________

SELECTIVE HAPPINESS

The Hysteric

 

This is happiness that depends on ignoring the horrors of life all around one. People who suffer from depression believe that they are the only ones who are seeing the world in its true light and that happy people are simply missing – or deliberately ignoring – the terrible problems and pains of existence. They cannot understand how anyone can ever enjoy a moment’s happiness when there are starving millions, torture prisons, animal experiments, polluted environments or whatever particular disaster area they are most concerned with. This has led several people to define happiness in most uncomplimentary terms. No less a person than Einstein referred to happiness as ‘the ideal of the  pigsty’. And when you look at photographs of the great sad face of the old genius, you can see that he wasn’t exactly a laugh a minute. He knew too much to be happy and was apparently incapable of switching off that great burden of knowledge, even for a brief moment. Others who have similar views have defined happiness as hysterical oblivion, innocence, unintelIigence and the serenity of fools.

 

There is an upside and a downside to hysteric happiness. The upside is that those exhibiting the hysteric personality are usually more fUn to be with. The downside is that they can create chaos for those around them. Because they refuse to recognize the problems that life throws at them, they are able to exist is a state of blissful ch􀁍ess. The old saying about Nero fiddling while Rome burned comes to mind Hysterics are capable of having a good time even when disaster is all around them. Eventually, of course, it will catch up with them, but for the moment, they can manage to ignore it. If they happen to have enough talent, they may be forgiven for ignoring the chaos, but eventually it comes home to roost.

 

An elderly Dutch artist I once knew, who lived and painted in a small cottage in the middle of a forest, once said to me, ‘If I did everything I had to do, I would never get anything done: What he meant was that if he kept his studio dusted and tidy, dealt efficiently with his correspondence, and paid attention to all the other daily trivia that most people consider essential to their well-being, he would never have the time or energy to sit at his easel painting his pictures. His style of painting was difficult and demanding and took many hours of intense concentration. If he had not ignored the other aspects of his daily life, his important work would have suffered. But he was really only a semi-hysteric, because he was aware of the fact that he was ignoring matters that he considered to be trivia. A full-bloodied hysteric is not even aware of what he is ignoring; he manages to blot it out completely. The semihysteric, while gaining a powerful happiness from devoting himself to his rewarding work, nevertheless has a faint worry at the back. of his mind about all the commonplace. humdrum duties he really ought to be performing. like everyone else. but is willfully ignoring in order to achieve his special goal.

 

The artist Francis Bacon was another example of someone who was capable of ignoring the ordinary in his pursuit of the extraordinary. At the time. late in his life. when his paintings were selling for several million pounds each. he was still occupying a small bed-sitting room next to his cramped studio. His bath was in his tiny kitchen and the rooms were lit by naked light-bulbs. At the celebrations for his eightieth birthday. he was given bouquets of flowers by well-wishers. but commented wryly. ‘How ridiculous – I am not the sort of person who has vases: Even his laundry had to be organized for him by his art gallery. For many creative people. there is a stubborn refusal to waste time on everyday matters. and some. like Bacon. show a remarkable ability to blot out anything that distracts them.

 

Published in: on ಫೆಬ್ರವರಿ 18, 2016 at 5:58 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗುರುತ್ವದ ಅಲೆಗಳ ಪತ್ತೆ ಹೇಗೆ?

ligocombinedpickan

ನೇಚರ್ ಪತ್ರಿಕೆಯಲ್ಲಿ ಇಂದು ಪ್ರಕಟವಾದ ವಿವರಣಾತ್ಮಕ ಚಿತ್ರದ ಕನ್ನಡ ರೂಪ. 

Published in: on ಫೆಬ್ರವರಿ 17, 2016 at 5:31 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೆಂಕಿ ಮಾನವರು!

ಅಕಾರಣ ದೇಹ ದಹನ ಪವಾಡವೇ?!

ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಎರಡು ವರ್ಷದ ಹುಡುಗನೊಬ್ಬ ಸುದ್ದಿಯಾಗಿದ್ದ. ಚೆ್ನ್ನೈನ ಕೀಲ್ಪಾಕ್ ಆಸ್ಪತ್ರೆಗೆ ದಾಖಲಾದ ರಾಹುಲ್ ಹೆಸರಿನ ಈ ಪೋರನಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಅವನ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಮಾಧ್ಯಮದಲ್ಲಿ ಇದು ಸಾಕಷ್ಟು ಸುದ್ದಿಯಾಯಿತು. ಹಲವು ವಿಚಿತ್ರ ವಿವರಣೆಗಳನ್ನೂ ಕೆಲವರು ಕೊಟ್ಟರು. ಆನಂತರ ರಾಹುಲ್ ಮೈಮೇಲಿನ ಬೆಂಕಿ ಆರಿ ಹೋದ ಹಾಗೆಯೇ ಈ ಸುದ್ದಿಯೂ ಆರಿ ಶಾಂತವಾಯಿತು. ಕೀಲ್ಪಾಕ್ ಆಸ್ಪತ್ರೆಯ ವೈದ್ಯರು ಇದು ವಿಚಿತ್ರವಲ್ಲ. ಯಾರೋ ಬೇಕಂತಲೇ ರಾಹುಲ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದು ಎಲ್ಲೂ ವರದಿಯಾಗಲಿಲ್ಲ.

ಹೌದೇ. ಹೀಗೆ ಮನುಷ್ಯರಿಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿಕೊಳ್ಳಬಹುದೇ? ಈ ಬಗ್ಗೆ ಚರ್ಚೆ ಇಂದಲ್ಲ ಹದಿನೆಂಟನೇ ಶತಮಾನದಿಂದಲೂ ನಡೆಯುತ್ತಿದೆ. ಇದೋ ಬಲು ಪ್ರಸಿದ್ಧಿ ಪಡೆದ ಪ್ರಪಂಚದ ಹತ್ತು ಇಂತಹ ಬೆಂಕಿಮಾನವರ ಕುರಿತು ವಿವರ ಇಲ್ಲಿದೆ. ಬಹಳ ಇತ್ತೀಚಿನ ಸುದ್ದಿ ಎಂದರೆ ಅಮೆರಿಕೆಯ ಮಹಿಳೆಯೊಬ್ಬಳದ್ದು. ಅತಿಯಾಗಿ ಮದ್ಯಪಾನ ಮಾಡಿದ ಈ ಮಹಿಳೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದದ್ದು ಕಳೆದ ವರ್ಷ ವರದಿಯಾಗಿತ್ತು. ಹದಿನೇಳನೇ ಶತಮಾನದಿಂದಲೂ ಹೀಗೆ ಅಕಾರಣ ಬೆಂಕಿ ಹೊತ್ತಿಕೊಳ್ಳುವ ಮಾನವರ ವಿಷಯದಲ್ಲಿ ಮದ್ಯಪಾನವೇ ದೋಷಿಯಾಗಿದೆ. ಅಕಾರಣ ದೇಹ ದಹನವನ್ನು ‘ಸ್ಪಾಂಟೇನಿಯಸ್ ಹ್ಯೂಮನ್ ಕಂಬಶ್ಚನ್’ (ಎಸ್.ಎಚ್.ಸಿ.) ಎನ್ನುತ್ತಾರೆ.

ಇವೆಲ್ಲ ಸುದ್ದಿಗಳನ್ನು ಕೇಳಿದಾಗ, ಇದು ನಿಜವಿರಬಹುದೇ? ಮೂಢನಂಬಿಕೆಯನ್ನು ಅಲ್ಲಗಳೆಯಲು ಹೋದಾಗ, ವಿಜ್ಞಾನಕ್ಕೆ ಎಲ್ಲವೂ ತಿಳಿಯುತ್ತದೆ ಎನ್ನುವುದು ತಪ್ಪು. ಇಂತಹ ವಿದ್ಯಮಾನಗಳು ಬಹುಶಃ ವಿಜ್ಞಾನಕ್ಕೂ ತಿಳಿಯದ ಕ್ರಿಯೆ ಇರಬಹುದು ಎನ್ನುವ ವಾದ ಕೇಳುತ್ತೇವೆ. ಹಾಗೆಯೇ ಇದೂ ಕೂಡ ನಮಗೆ ತಿಳಿಯದ್ದು ಏನಾದರೂ ಆಗಿರಬಹುದೇ? ಎಂದು ಭಾವಿಸಿದ್ದೆ. ವೀಕಿಪೀಡಿಯಾದಲ್ಲಿ ಈ ಬಗ್ಗೆ ತುಸು ದೀರ್ಘವಾದ ಲೇಖನವೇ ಇದೆ. ಆದರೆ ಅದುವೂ ಇದಮಿತ್ಥಂ ಎಂದಿಲ್ಲ.

ಈ ಹಿನ್ನೆಲೆಯಲ್ಲಿ ಇವತ್ತು ಬೇರೇನನ್ನೋ ಹುಡುಕುತ್ತಿದ್ದಾಗ 2012ರಲ್ಲಿ ಅಮೆರಿಕೆಯ ಟೆನೆಸೀ ವಿವಿಯ ಮಾನವ ಶಾಸ್ತ್ರಜ್ಞೆಆಂಜಿ ಕ್ರಿಸ್ಟೆನ್ಸನ್ ಜರ್ನಲ್ ಆಫ್ ಫೋರೆನ್ಸಿಕ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಶೋಧ ಪತ್ರ ಕಣ್ಣಿಗೆ ಬಿತ್ತು. ನಿಜವಾಗಿಯೂ ಮಾನವ ದೇಹಗಳು ಅಕಾರಣ ಜ್ವಲಿಸಬಲ್ಲವೇ? ಒಂದು ವೇಳೆ ಹೀಗೆ ಹೊತ್ತಿ ಉರಿದರೆ ಏನಾಗುತ್ತದೆ? ಎಂದು ಇವರು ಪರಿಶೀಲಿಸಿದ್ದರು. ಅಂದ ಹಾಗೆ ಯಾರನ್ನೂ ಬೆಂಕಿಗೆ ದೂಡಿಯೋ, ಬೆಂಕಿ ಹಚ್ಚಿಯೋ ಇವರು ಪರೀಕ್ಷೆ ಮಾಡಲಿಲ್ಲ. ವಯಸ್ಸಾದವರಲ್ಲಿ ಸವೆದ ಮೂಳೆ ಹಾಗೂ ಸಾಧಾರಣ ಮೂಳೆಯೆರಡನ್ನೂ ಬೆಂಕಿ ಹಚ್ಚಿ ಸುಟ್ಟರು. ಹಾಗೆಯೇ ಒಂದಿಷ್ಟು ಮಾನವ ಅಂಗಾಂಶವನ್ನೂ ಬೆಂಕಿ ಹಚ್ಚಿ ಸುಟ್ಟು, ಅದರಿಂದ ಬರುವ ಜ್ವಾಲೆಯ ಗುಣಗಳನ್ನು ಪರಿಶೀಲಿಸಿದರು.

ಇವರ ಈ ಪ್ರಯೋಗಕ್ಕೆ ಕಾರಣವಿಷ್ಟೆ. ಕಳೆದ ಮುನ್ನೂರು ವರ್ಷಗಳಲ್ಲಿ ಸುಮಾರು 200 ಇಂತಹ ಅಕಾರಣ ದೇಹ ದಹನದ ಸಂಗತಿಗಳು ವರದಿಯಾಗಿವೆ. ಈ ಎಲ್ಲವುಗಳನ್ನೂ ಗಮನಿಸಿದಾಗ ಕೆಲವು ಸಂಗತಿಗಳು ಸಾಮಾನ್ಯ. ಬಹುತೇಕ ಎಲ್ಲವೂ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆದಂಥವು. ಎರಡನೆಯದಾಗಿ ಯಾವುದನ್ನೂ ನೇರವಾಗಿ ಕಂಡವರಿಲ್ಲ. ಸುಟ್ಟು ಕರಿಕಲಾಗಿ ಬಿದ್ದ ಶವಗಳನ್ನಷ್ಟೆ ಕಂಡ ಸಂದರ್ಭಗಳು ಜಾಸ್ತಿ. ಮೂರನೆಯದಾಗಿ ದೇಹ ಸುಟ್ಟರೂ ಅದರ ಸುತ್ತ ಮುತ್ತಲಿನ ಯಾವ ವಸ್ತುಗಳೂ ಸುಟ್ಟಿರುವುದಿಲ್ಲ. ಅತಿ ಹೆಚ್ಚೆಂದರೆ ದೇಹ ಬಿದ್ದ ಜಾಗೆ ಹಾಗೂ ಅದಕ್ಕೆ ನೇರವಾಗಿರುವ ಮೇಲ್ಚಾವಣಿಯಷ್ಟೆ ಸುಟ್ಟಿದ್ದದ್ದು ಕಂಡು ಬರುತ್ತದೆ. ನಾಲ್ಕನೆಯದಾಗಿ ಅಕಾರಣ ದೇಹದಹನವಾದವರಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚು. ಐದನೆಯದಾಗಿ ಇವರೆಲ್ಲರಿಗೂ ಮದ್ಯಪಾನ ಮಾಡುತ್ತಿದ್ದರು. ಆರನೆಯದಾಗಿ ಇಡೀ ದೇಹ ಕರಿಕಲಾಗಿದ್ದರೂ, ತಲೆ ಹಾಗೂ ಪಾದಗಳು ಸುಡದೆ ಉಳಿಯುತ್ತವೆ. ಮೂಳೆಯಂತೂ ಅಸ್ಥಿಸಂಚಯಕ್ಕೆ ಬೇಕಾದಷ್ಟು ತುಣುಕೂ ಇಲ್ಲದ ಹಾಗೆ ಭಸ್ಮವಾಗಿರುತ್ತದೆ.

ಮದ್ಯಪಾನ ಹೆಚ್ಚಾದ ಸಂದರ್ಭದಲ್ಲಿ ರಕ್ತದಲ್ಲಿ ಮದ್ಯದ ಸಾರ ಹೆಚ್ಚಾಗಿ ಚರ್ಮದ ಮೂಲಕ ಹೊರ ಸೂಸುತ್ತಿರಬಹುದು. ಆಕಸ್ಮಿಕವಾಗಿ ಬೆಂಕಿ ತಗುಲಿ ದೇಹಕ್ಕೂ ಉರಿ ಹತ್ತಬಹುದು ಎನ್ನುವುದು ಊಹೆ. ಆದರೂ ದೇಹ ಉರಿಯುವಾಗ ಸುತ್ತಲಿನ ವಸ್ತುಗಳು ಸುಡುವುದಿಲ್ಲವೇಕೆ? ತಲೆ, ಕಾಲುಗಳು ಉರಿಯದೆ ಉಳಿಯುವುದೇಕೆ? ವಯಸ್ಕ ಮಹಿಳೆಯರೇ ಇದಕ್ಕೆ ಹೆಚ್ಚು ಬಲಿಯಾಗಿದ್ದಾರಲ್ಲ, ಅದೇಕೆ? ಬೆಂಕಿ ಹತ್ತಿದ್ದು ಎಲ್ಲಿಂದ? ಮೂಳೆಯೇಕೆ ಭಸ್ಮವಾಗಿಬಿಡುತ್ತದೆ? ಈ ಸಂದೇಹಗಳೇ ಅಕಾರಣ ದೇಹ ದಹನವನ್ನು ವಿಚಿತ್ರ ವಿದ್ಯಮಾನವಾಗಿಸಿವೆ.

“ಇದು ವಿಚಿತ್ರವೇನಲ್ಲ. ಅಕಾರಣ ದೇಹ ದಹನದ ಬಹುತೇಕ ಸಂದರ್ಭದಲ್ಲಿ ಹತ್ತಿರದಲ್ಲೆಲ್ಲೋ ಬೆಂಕಿಯ ಸೆಲೆ (ಮೋಂಬತ್ತಿ, ಅಗ್ಗಿಷ್ಟಿಕೆ, ದೀಪ ಮುಂತಾದ ಸಣ್ಣ ಉರಿಯ ಜ್ವಾಲೆಗಳು) ಇದ್ದದ್ದು ದಾಖಲಾಗಿದೆ. ಬೆಂಕಿ ಹೊತ್ತಿಸಲು ಇವು ಸಾಕು,” ಎನ್ನುತ್ತಾರೆ ಕ್ರಿಸ್ಟೆನ್ಸನ್. ಅದೇನೋ ಸರಿ. ಆದರೆ ದೇಹದಲ್ಲಿ ಉರಿಯುವಂಥದ್ದು ಏನಿದೆ? ಸಾಮಾನ್ಯವಾಗಿ ದೇಹವನ್ನು ಸುಡಬೇಕಾದಾಗ ಸೌದೆ, ಎಣ್ಣೆ  ಮುಂತಾದ ಕಾವು ಹೆಚ್ಚು ನೀಡುವ ಉರುವಲನ್ನು ಬಳಸಬೇಕು. ಇವ್ಯಾವುವೂ ಇಲ್ಲದಿದ್ದರೂ ದೀಪದ ಸಣ್ಣ ಜ್ವಾಲೆಯ ಉರಿಗೇ ದೇಹ ಹೊತ್ತಿಕೊಳ್ಳಬಹುದೇ?

ದೇಹದಲ್ಲಿಯೂ ಉರಿಯುವ ವಸ್ತುಗಳಿವೆ. ಚರ್ಮ ಹಾಗೂ ಅನ್ನಾಂಗಗಳು ಸಾಮಾನ್ಯವಾಗಿ ಉರಿಯುವುದಿಲ್ಲವಾದರೂ ಶುಷ್ಟವಾದಾಗ ಚೆನ್ನಾಗಿಯೇ ಉರಿಯುತ್ತವೆ. ಮೂಳೆಯೂ ಉರಿಯುವುದಿಲ್ಲವಾದರೂ ಅದರಲ್ಲಿರುವ ಮಜ್ಜೆ ಮತ್ತು ಅಂಗಾಂಶಗಳು ಬೆಂಕಿಗೆ ತುಪ್ಪ ಸುರಿದಂತೆ ಉರಿಯನ್ನು ಹೆಚ್ಚಿಸಬಲ್ಲುವು. ಇನ್ನುಕೊನೆಯದು ದೇಹದಲ್ಲಿರುವ ಕೊಬ್ಬು. ಇದು ಚೆನ್ನಾಗಿ ಉರಿಯುತ್ತದೆ. ಅಷ್ಟೆ ಅಲ್ಲ, ಉರಿ ಹೆಚ್ಚಾದಾಗ ಕರಗಿ ಬಿಡಬಲ್ಲುದು. ಇವೆಲ್ಲವನ್ನೂ ಗಮನಿಸಿದರೆ ದೇಹ ದಹನದ ಸಂಗತಿಗಳು ವಿಚಿತ್ರವಲ್ಲವೆನ್ನಬಹುದು.

ದೇಹ ದಹನವೆನ್ನುವುದು ಮೋಂಬತ್ತಿ ಉರಿದಂತೆ ಎನ್ನುತ್ತಾರೆ ವಿಜ್ಞಾನಿಗಳು. ಮೋಂಬತ್ತಿಯಲ್ಲಿ ಮೇಣ ಹೊತ್ತಿ ಉರಿಯುವುದಿಲ್ಲ. ಆದರೆ ಬತ್ತಿಯಲ್ಲಿನ ಜ್ವಾಲೆಗೆ ಉರುವಲನ್ನು ಒದಗಿಸುತ್ತಾ ಕರಗಿ ಹೋಗುತ್ತದೆ. ಇದೇ ರೀತಿಯಲ್ಲಿಯೇ ದೇಹದಲ್ಲಿನ ಕೊಬ್ಬು (ನೆಣ) ಧರಿಸಿದ ಬಟ್ಟೆಗೆ ಹಾಗೂ ಚರ್ಮ ಉರಿಯಲು ಉರುವಲನ್ನು ಒದಗಿಸುತ್ತಾ ಕರಗಿಬಿಡಬಹುದು. ಈ ಬಗೆಯಲ್ಲಿ ಉರಿಯುವ ಜ್ವಾಲೆಯಲ್ಲಿ ಕಾವು ಕಡಿಮೆ ಇರುವುದರಿಂದ ಸುತ್ತಲಿನ ವಸ್ತುಗಳು ಹೊತ್ತಿಕೊಳ್ಳುವುದಿಲ್ಲ ಎನ್ನುವುದು ತರ್ಕ. 1965ರಲ್ಲಿ ಈ ಬಗ್ಗೆ ಡಿ. ಜೆ. ಗೀ ಎನ್ನುವ ವೈದ್ಯ ಪ್ರಯೋಗಗಳನ್ನು ನಡೆಸಿದ್ದ. ದೇಹದ ಕೊಬ್ಬು ಉರಿದು ಬೂದಿಯಾಗಬೇಕಾದರೆ ಸುಮಾರು 2500 ಸೆಂಟಿಗ್ರೇಡ್ ನಷ್ಟು ಕಾವು ಬೇಕು. ಆದರೆ ಇದೇ ಕೊಬ್ಬು ಕರಗಿ ಬತ್ತಿಗೆ ಉರುವಲಾಗಬೇಕಾದರೆ ಕೇವಲ 240 ಸೆಂಟಿಗ್ರೇಡ್ ನಷ್ಟು ಕಾವಿದ್ದರೆ ಸಾಕು.

ಇಂಗ್ಲೆಂಡಿನ ಬಿಬಿಸಿ 1989ರಲ್ಲೇ ಈ ದೇಹ ದಹನದ ಸಂಗತಿ ಮಿಥ್ಯೆ ಎಂದು ನಿರೂಪಿಸುವ ಕಾರ್ಯಕ್ರಮವೊಂದನ್ನು ಪ್ರದರ್ಶಿಸಿತ್ತು. ಹಂದಿಯೊಂದರ ಶವವನ್ನು ಕಂಬಳಿಯಲ್ಲಿ ಸುತ್ತಿ ಅದಕ್ಕೆ ಬೆಂಕಿ ಹಚ್ಚಿದ್ದರು. ತನ್ನ ಮೇಲೆ ಸಿಂಪಡಿಸಿದ್ದ ಸೀಮೆಣ್ಣೆ ಉರಿದು ಹೋದ ಮೇಲೂ, ಐದು ಗಂಟೆಗಳ ಕಾಲ ಕಂಬಳಿ ಉರಿಯುತ್ತಲೇ ಇತ್ತು. ಹಂದಿಯಲ್ಲಿದ್ದ ಕೊಬ್ಬು ಕಂಬಳಿಗೆ ಉರುವಲಾಗಿ ಅದು ಅಷ್ಟು ದೀರ್ಘ ಕಾಲ ಉರಿಯಿತು. ಅಕಾರಣ ದೇಹ ದಹನವೂ ಹೀಗೇ ಆಗುತ್ತದೆ ಎಂದು ಬಿಬಿಸಿ ನುಡಿದಿತ್ತು.

ಇಷ್ಟಾದರೂ ಅಕಾರಣ ದೇಹ ದಹನವೊಂದು ವಿಚಿತ್ರ, ಪವಾಡ ಎನ್ನುವವರು ಇದ್ದೇ ಇದ್ದಾರೆ. ಸಾಮಾನ್ಯವಾಗಿ ದೇಹವನ್ನು ಸುಡಲು 9000 ರಿಂದ 10000 ಸೆಂಟಿಗ್ರೇಡ್ ಉಷ್ಣತೆ ಬೇಕು. ಇದೇ ಕಾರಣಕ್ಕೇ ಚಿತೆಯ ಸಮೀಪ ನಾವ್ಯಾರೂ ಸುಳಿಯಲಾಗುವುದಿಲ್ಲ. ಅದರ ಕಾವು ಅಷ್ಟಿದ್ದರೆ ಮಾತ್ರ ದೇಹ ಸಂಪೂರ್ಣ ಭಸ್ಮವಾಗಬಲ್ಲುದು. ಆದರೂ ಮೂಳೆಗಳು ಕೆಲವು ಉರಿಯದೆ ಉಳಿಯುತ್ತವೆ. ಅಕಾರಣ ದೇಹ ದಹನದಲ್ಲಿ ಮೂಳೆಗಳೂ ಉರಿದು ಬೂದಿಯಾಗಿರುತ್ತವೆ. ಆದ್ದರಿಂದ ದೇಹ ಮೇಣದಂತೆ ಕರಗಿ ದೀಪದಂತೆ ದೇಹ ಉರಿಯುವುದನ್ನು ಒಪ್ಪಲಾಗುವುದಿಲ್ಲಎನ್ನುವುದು ಪವಾಡವನ್ನು ನಂಬುವವರ ಮಾತು.

ಕ್ರಿಸ್ಟೆನ್ಸನ್ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯೋಗ ನಡೆಸಿದರು. ಅಕಾರಣ ದೇಹದ ದಹನಕ್ಕೊಳಗಾದ ವ್ಯಕ್ತಿಗಳ ಮೂಳೆಗಳು ಮೂಳೆಸವೆತ (ಆಸ್ಟಿಯೋಪೋರೋಸಿಸ್) ಕ್ಕೊಳಗಾದವುಗಳಿರಬಹುದೇ? ಇಂತಹ ಮೂಳೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಬಲ್ಲುವೇ? ಹೀಗಾಗುವುದಿದ್ದರೆ ಅಕಾರಣ ದೇಹ ದಹನವನ್ನು ವಿವರಿಸುವುದು ಸಾಧ್ಯ. ಏಕೆಂದರೆ ಅಕಾರಣ ದೇಹ ದಹನವಾಗಿರುವ ಬಹುತೇಕ ವ್ಯಕ್ತಿಗಳಲ್ಲಿ ಆಸ್ಟಿಯೋಪೋರೋಸಿಸ್ ಇರಬಹುದಾದ ಎಲ್ಲ ಯೋಗ್ಯತೆಗಳೂ ಹೆಚ್ಚಿವೆ. ಮಧ್ಯವಯಸ್ಕರು, ಬೊಜ್ಜಿರುವವರು ಹಾಗೂ ಕಾಕಸಿಯನ್ ಜನಾಂಗದವರು. ಹೀಗೆ ತರ್ಕಿಸಿದ ಕ್ರಿಸ್ಟೆನ್ಸನ್ ಒಂದು ಪ್ರಯೋಗ ನಡೆಸಿದ್ದಾರೆ.

ವೈದ್ಯಕೀಯ ಕಾಲೇಜಿನಿಂದ ಎರಡು ಮೂಳೆಗಳನ್ನು ಹಾಗೂ 70 ವರ್ಷ ವಯಸ್ಸಿನ ಮಹಿಳೆಯ ತುಂಡರಿಸಿದ ಕಾಲಿನ ತುಣುಕುಗಳನ್ನು ಇವರು ಪರೀಕ್ಷೆಗೆ ಒಳಪಡಿಸಿದ್ದಾರೆ. ಮೂಳೆಗಳಲ್ಲಿ ಒಂದು ಸಾಧಾರಣ ಮೂಳೆ ಹಾಗೂ ಮತ್ತೊಂದು ಸವೆದ ಮೂಳೆ. ಮೂಳೆಸವೆತ ಇರುವ ಮೂಳೆಗಳ ಸಾಂದ್ರತೆ ಬಹಳ ಕಡಿಮೆ ಇರುತ್ತದೆಯಾದ್ದರಿಂದ ಮೂಳೆಸವೆತವನ್ನು ಅಳೆಯಲು ಬಳಸುವ ಸಾಧನದಿಂದ ಈ ಎರಡೂ ಮೂಳೆಗಳ ಸಾಂದ್ರತೆಯನ್ನು ಗುರುತಿಸಿದ್ದಾರೆ. ಅನಂತರ ಇವುಗಳನ್ನು ಸಮಾನ ಅಳತೆಯ ಮೂರು ಪುಟ್ಟ ತುಂಡುಗಳನ್ನಾಗಿ ಮಾಡಿ ಪ್ರತಿಯೊಂದು ತುಂಡನ್ನೂ ಸುಟ್ಟಿದ್ದಾರೆ. ಚಿತಾಗಾರದಲ್ಲಿ ಸಾಮಾನ್ಯವಾಗಿರುವ ಕಾವಿನಲ್ಲಿ ಇವನ್ನು ಸುಟ್ಟು ಉಳಿಕೆ ಹೇಗಿರುತ್ತದೆ ಎಂದು ಗಮನಿಸಿದ್ದಾರೆ. ಮೂರೂ ತುಂಡುಗಳಲ್ಲಿಯೂ ಮೂಳೆಸವೆತದ ತುಂಡುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದವು. ಆದರೆ ಸಾಧಾರಣ ಮೂಳೆಯ ತುಂಡುಗಳು ಕರಿಕಲಾದರೂ ಗಟ್ಟಿಯಾಗಿದ್ದುವು.

ಇನ್ನು ಕಾಲು ಭಾಗದ ಮಾಂಸವನ್ನು ಚರ್ಮದ ಸಹಿತ ಬಟ್ಟೆಯೊಂದರಲ್ಲಿ ಸುತ್ತಿ ಬೆಂಕಿ ಹಚ್ಚಿದ್ದಾರೆ. ಪ್ರತಿ ತುಣುಕೂ ಸುಮಾರು 45 ನಿಮಿಷಗಳ ಕಾಲ ಉರಿದಿದೆ. ಹೀಗೆ ಉರಿಯುತ್ತಿರುವಾಗ ಅದರ ವೀಡಿಯೋ ಚಿತ್ರವನ್ನು ತೆಗೆದಿದ್ದಾರೆ. ವೀಡಿಯೊದಲ್ಲಿ ಜ್ವಾಲೆಯ ಎತ್ತರ ಬಣ್ಣವನ್ನು ಗುರುತಿಸಬಹುದಷ್ಟೆ. ಹಾಗೆಯೇ ದೂರದಿಂದಲೇ ಜ್ವಾಲೆಯ ಕಾವನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಉರಿದ ಮಾಂಸದ ತುಣುಕಿನ ಅಡಿಯಲ್ಲಿ ಹರಡಿದ ಕೊಬ್ಬಿನ ಪ್ರಮಾಣವನ್ನೂ ಲೆಕ್ಕ ಹಾಕಿದ್ದಾರೆ. ಸೆಕೆಂಡಿಗೆಷ್ಟು ಮಾಂಸ ಸುಡುತ್ತದೆಂದು ಗಮನಿಸಿ, ಆ ಪ್ರಕಾರ ಉತ್ಪನ್ನವಾದ ಉಷ್ಣದ ಪ್ರಮಾಣವೆಷ್ಟು ಎಂದು ಗಣಿಸಿದ್ದಾರೆ. ಗಣಿಸಿದ ಉಷ್ಣದ ಪ್ರಮಾಣ ತಾವು ಗಮನಿಸಿ ಅಳೆದ ಉಷ್ಣದ ಪ್ರಮಾಣಕ್ಕಿಂತ ಕಡಿಮೆ ಇತ್ತು.

ಆ ಮಾಂಸದ ತುಂಡಿನ ತೂಕದ ಆಧಾರದ ಮೇಲೆ ಲೆಕ್ಕ ಹಾಕಿದ ಉಷ್ಣತೆಯ ಅರ್ಧವಷ್ಟೆ ಗಮನಿಸಿದ ಉಷ್ಣತೆ ಇತ್ತು. ಅರ್ಥಾತ್, ಈ ದೇಹದ ತುಣುಕು ಕಡಿಮೆ ಉಷ್ಣತೆಯಲ್ಲಿ ದೀರ್ಘ ಕಾಲ ಉರಿಯಿತೆಂದು ಅರ್ಥವಷ್ಟೆ. ಬಟ್ಟೆಯೇ ಬತ್ತಿಯಾಗಿ, ಕೊಬ್ಬೇ ಮೇಣವಾಗಿ ಉರಿದರೆ ದೇಹ ಹೀಗೆಯೇ ನಿಧಾನವಾಗಿ ಉರಿಯುತ್ತದೆ. ವೀಡಿಯೋಗಳಲ್ಲಿ ಕಂಡ ಚಿತ್ರಗಳಲ್ಲಿಯೂ ಜ್ವಾಲೆ ಬಹಳ ಸಣ್ಣದಾಗಿಯೇ ಇತ್ತು ಎನ್ನುತ್ತಾರೆ. ಅಂದರೆ ಇಷ್ಟು ಉರಿದರೂ ದೇಹದ ಜ್ವಾಲೆ ಸುತ್ತಲಿನ ವಸ್ತುಗಳಿಗೆ ಬಿಸಿ ತಾಕಿಸದೇ ಇರಬಹುದು!  ಇವೆಲ್ಲದರ ಜೊತೆಗೆ ಮದ್ಯಪಾನಿಗಳ  ಉಸಿರು ಹಾಗೂ ಚರ್ಮದಲ್ಲಿರುವ ಮದ್ಯಸಾರ  ಉರಿಯುವುದಕ್ಕೆ ಇನ್ನಷ್ಟು ಒತ್ತಾಸೆಯಾಗಬಹುದು.

ಒಟ್ಟಾರೆ ಈ ಪ್ರಯೋಗ ಅಕಾರಣ ದೇಹ ದಹನವಾಗುವಾಗ ದೇಹದ ಕೊಬ್ಬೇ ಮೇಣವಾಗಿ ನಿಧಾನವಾಗಿ ಉರಿದು ಸಂಪೂರ್ಣ ಬೂದಿಯಾಗಬಹುದು. ಕೊಬ್ಬಿನ ಅಂಶ ಕಡಿಮೆ ಇರುವ ದೇಹದ ತುದಿ ಭಾಗಗಳು (ಬೆರಳು, ಕಾಲಿನ ತುದಿ, ತಲೆ) ಹೀಗೆ ಉರುವಲಾಗದೇ ಉಳಿಯಬಹುದು ಎಂದು ಸೂಚಿಸಿವೆ. ಅಸ್ಥಿ ಸಂಚಯಕ್ಕೂ ಉಳಿಯದಂತೆ ಮೂಳೆಗಳು ಸಂಪೂರ್ಣವಾಗಿ ಬೂದಿಯಾಗಬಹುದು ಎಂದೂ ಈ ಪ್ರಯೋಗ ನಿರೂಪಿಸಿದೆ. ಬಲು ವೃದ್ಧರ ಶವಸಂಸ್ಕಾರ ಮಾಡುವಾಗ ಮೂಳೆಗಳು ಉಳಿಯುವುದು ಅಪರೂಪವಷ್ಟೆ.

ಚೆನ್ನೈನ ರಾಹುಲ್ ನ ವಿಷಯದಲ್ಲಿಯೂ ಅಕಾರಣವಾಗಿಯೇನೂ ಆಗಿರಲಿಲ್ಲ ಎನ್ನುವುದು ಅಲ್ಲಿನ ವೈದ್ಯರ ಹೇಳಿಕೆ. ಏಕೆಂದರೆ ಆ ಕುಟುಂಬ ವಾಸಿಸುವ ಕಾಲೊನಿಯಲ್ಲಿ ಗಾಳಿಯಲ್ಲಿ ಉರಿಯುವ ಗಂಧಕದ ಬಳಕೆ ಹೆಚ್ಚು ಹಾಗೂ ಮನೆಯಲ್ಲಿ ಹಲವೆಡೆ ಗಂಧಕದ ಧೂಳು ಇದ್ದದ್ದನ್ನು ಗಮನಿಸಲಾಗಿದೆ ಎಂದಿದ್ದಾರೆ. ರಾಹುಲನಿಗಷ್ಟೆ ಅಲ್ಲದೆ ಅವನ ಸಹೋದರನಿಗೂ ಒಂದೆರಡು ಬಾರಿ ಬೆಂಕಿ ಬಿದ್ದಿದ್ದ ದಾಖಲೆ ಇರುವುದರಿಂದ ಈ ದಹ್ಯ ವಸ್ತುವಿನ ಪುಡಿಯಿಂದ ಹೀಗಾಗಿರಬಹುದು ಎನ್ನುವುದು ಅವರ ತರ್ಕ. ಪರೀಕ್ಷೆ ಮಾಡಲು ಸಾಧ್ಯವಿಲ್ಲದಿದ್ದರಿಂದ ಸಾಂದರ್ಭಿಕ ಪುರಾವೆಗಳೇ ಆಧಾರ.

ಹೀಗೆ ಅಕಾರಣ ದೇಹ ದಹನದ ಸಂದರ್ಭದಲ್ಲಿ ಕಾಣುವ ವಿಚಿತ್ರವೆನ್ನಿಸುವ ಎಲ್ಲ ಸಂಗತಿಗಳನ್ನೂ ವಿಜ್ಞಾನ ಸಮರ್ಪಕವಾಗಿ ವಿವರಿಸಬಲ್ಲುದು. ಪವಾಡಗಳು ವಿಜ್ಞಾನ ವಿವರಿಸಲಾಗದ ವಿಷಯಗಳಲ್ಲ. ಅವನ್ನು ಪರೀಕ್ಷಿಸುವ ವ್ಯವಧಾನ, ಸಾಧನಗಳು ಬೇಕಷ್ಟೆ.

________________

ಆಕರ:

Angi M. Christensen, Experiments in the combustibility of the Human body, J. Forensic Sci., Vol. 47 No. 3 Pp 66-470, 2002

Published in: on ಫೆಬ್ರವರಿ 16, 2016 at 6:13 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಭೃಂಗದ ಬೆನ್ನೇರಿ ಬಂದ ಭೂತ

15022016

ಸಂಯುಕ್ತ ಕರ್ನಾಟಕದಲ್ಲಿ ಇಂದು ಪ್ರಕಟವಾಗಿರುವ ಲೇಖನ. ನಿಮ್ಮ ವಿಮರ್ಶೆಗಾಗಿ

ಟಿಪ್ಪಣಿ: ಒಮ್ಮೆ ರೋಹಿತ್ ಚಕ್ರತೀರ್ಥ ನೀವು ಲೇಖನಗಳನ್ನು ಬರೆಯುವಾಗ ವಿಷಯಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ? ನೀವು ಬರೆದ ಲೇಖನಗಳಲ್ಲಿ ನಿಮಗೆ ಅತಿ ಪ್ರಿಯವಾದುವೆನ್ನುವುದು ಯಾವುದಾದರೂ ಇವೆಯೇ? ಇದ್ದರೆ ಏಕೆ? ಎನ್ನುವ ಪ್ರಶ್ನೆಗಳನ್ನು ಕೇಳಿದ್ದರು. ಆ ಸಂದರ್ಭದಲ್ಲಿ ನನಗೆ ನಾವು ಬರೆಯುವ ಪ್ರತಿಯೊಂದು ಲೇಖನವೂ ನಾವು ಹೆತ್ತ ಮುದ್ದಿನ ಹೆಗ್ಗಣವೆನ್ನಿಸುತ್ತದೆ ಎನ್ನುವ ಅನಿಸಿಕೆಯಿತ್ತು. ಲೇಖನಗಳನ್ನು ಬರೆಯುವಾಗ ಸಮಯದ ತುರ್ತು (ಡೆಡ್ ಲೈನ್), ನಮ್ಮ ಆಸಕ್ತಿಯ ವಿಷಯಗಳು, ಸಾಮಾನ್ಯ ಕೌತುಕದ ಸಂಗತಿಗಳು, ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿರುವ ವಿಷಯಗಳು, ಇವ್ಯಾವುವೂ ಇಲ್ಲದಿದ್ದಾಗ ಕೈಗೆ ಸಿಕ್ಕಿದ ಸಂಗತಿಗಳು ಲೇಖನದ ಹೂರಣಗಳಾಗುತ್ತವೆ. ಕೆಲವೊಂದು ಸಂದರ್ಭದಲ್ಲಿ ಡೆಡ್ ಲೈನ್ ಗೋಸ್ಕರವಾಗಿ ಸುದ್ದಿಯೇ ಅಲ್ಲದ ಸಂಗತಿಗಳ ಬಗ್ಗೆಯೂ ಬರೆದಿದ್ದಿದೆ. ನಿನ್ನೆ ಈ ಲೇಖನವನ್ನು ಬರೆದು ಕಳಿಸಿದ ಮೇಲೆ ಯಾಕೋ ಸಮಾಧಾನವೇ ಆಗಲಿಲ್ಲ. ಲೇಖನದ ಹೂರಣ ಚೆನ್ನಾಗಿದೆ. ಹೊಸ ಸುದ್ದಿ. ಸಂಕೀರ್ಣ ವಿಷಯವನ್ನು ತಕ್ಕ ಮಟ್ಟಿಗೆ ಅರ್ಥ ಮಾಡಲು ಪ್ರಯತ್ನಿಸಿದ್ದೇನೆ. ಇದು ಎಲ್ಲ ವಿಜ್ಞಾನ ಲೇಖಕರು ಎದುರಿಸುವ ಸವಾಲಾದ್ದರಿಂದ ಬಹು ಮಟ್ಟಿಗೆ ಇದು ಸಾಧ್ಯವಾದಲ್ಲಿ ಖುಷಿಯಾಗಬೇಕು. ಯಾಕೋ ಖುಷಿಯಾಗುತ್ತಿಲ್ಲ. ಯಾಕೆ ಎನ್ನುವುದೇ ಪ್ರಶ್ನೆ!

Published in: on ಫೆಬ್ರವರಿ 15, 2016 at 6:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಿರಲೆ ರೋಬೋ!

ಒಂದು ವಾಟ್ಸಪ್ ಜೋಕು ಗಂಡಂದಿರನ್ನು ತಮಾಷೆ ಮಾಡುತ್ತದೆ. ಗಂಡ ಕೊಲ್ಲಲು ಹೊರಟ ಜಿರಲೆ ಅವನಿಗೆ ಸವಾಲು ಹಾಕುತ್ತದಂತೆ. ‘ನೀನು ನನ್ನನ್ನು ಕೊಲ್ಲುವುದಿಲ್ಲ. ಏಕೆಂದರೆ ನಾನು ನಿನಗಿಂತ ಬಲಶಾಲಿ. ನಿನಗೆ ಹೆದರದ ಹೆಂಡತಿ ನನಗೆ ಹೆದರುತ್ತಾಳೆ,’ ಅಂತ. ಜೋಕು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಮೇಲೆ ತುಸು ಯೋಚಿಸಿ. ಜಿರಲೆ ಎನ್ನುವ ಈ ಯಃಕಶ್ಚಿತ್ ಕೀಟ ಹೇಳಿದ್ದರಲ್ಲಿ ನ್ಯಾಯವಿದೆ. ತುಸು ಸತ್ಯವಿದೆ. ಸಿಕ್ಕದ್ದನ್ನು ಉಂಡು ಬದುಕುವ ಈ ಕೀಟ ಮನುಷ್ಯನನ್ನು ಕೊಲ್ಲುವ ವಿಕಿರಣಗಳನ್ನೂ ತಾಳಿಕೊಳ್ಳಬಲ್ಲುದು.

ಅದಷ್ಟೆ ಅಲ್ಲ. ಇನ್ನೂ ಅದ್ಭುತ ಸಾಮರ್ಥ್ಯಗಳಿವೆ. ಬೂಟುಕಾಲಿನಿಂದ ತುಳಿದು ಹೊಸಕಿ ಹಾಕುವಷ್ಟು ಪುಟ್ಟದಲ್ಲವೇ ಎನ್ನಬೇಡಿ. ಜಿರಲೆ ನಿಮ್ಮ ದೇಹದ ಭಾರವನ್ನು ತಡೆದುಕೊಂಡು ಅಪ್ಪಚ್ಚಿಯಾಗದೆ ಬದುಕುಳಿಯಬಲ್ಲುದು. ಇದರ ಸಾಮರ್ಥ್ಯಗಳಿಗೆ ಇನ್ನೊಂದನ್ನು ಕೂಡಿಸಿದ್ದಾರೆ ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ರಾಬರ್ಟ್ ಫುಲ್ ಮತ್ತು ಕೌಶಿಕ್ ಜಯರಾಮ್. ಇವರು ಇತ್ತೀಚಿನ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟಿಸಿರುವ ಪ್ರಬಂಧವೊಂದು ಜಿರಲೆ ಎನ್ನುವ ಜೀವಿ ಹೊಸತೊಂದು ಬಗೆಯ ರೋಬೋ ಸೃಷ್ಟಿಗೆ ಪ್ರೇರಣೆಯಾಗಬಲ್ಲುದು ಎಂದು ತಿಳಿಸಿದೆ.

ಜಿರಲೆ ರೋಬೋವೇ? ಅದೇನು ವಿಶೇಷ ಎಂದಿರಾ? ಉಗುರು ನುಸುಳದಷ್ಟು ಇಕ್ಕಟ್ಟಾದ ಸಂದಿಯಲ್ಲಿಯೂ ಹೆಬ್ಬೆರಳು ಗಾತ್ರದ ಜಿರಲೆ ಇರುವುದನ್ನು ಕಂಡಿದ್ದೀರಲ್ಲ? ಇಷ್ಟು ಇಕ್ಕಟ್ಟಿನಲ್ಲಿ ಈ ಜೀವಿ ಹೇಗೆ ಬದುಕುತ್ತದೆ? ಕೈ ಕಾಲು ಆಡಿಸಲೂ ಆಗದಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಇದು ಹೇಗೆ ನಡೆಯಬಲ್ಲುದು? ಆ ಇಕ್ಕಟ್ಟಿನಲ್ಲಿ ಅಷ್ಟು ದಪ್ಪ ದೇಹ ಹೇಗೆ ಉಳಿಯಬಲ್ಲುದು? ಇವೆಲ್ಲ ಕೌಶಿಕ್ ಮತ್ತು ಫುಲ್ ಅವರಿಗೆ ಬಲು ಕೌತುಕವೆನ್ನಿಸಿದೆ. ಇದೇ ಬಗೆಯ ಗುಣಗಳಿರುವ ರೋಬೋಗಳು ಸಿಗುವುದಾದರೆ ಕುಸಿದ ಕಟ್ಟಡಗಳ ಅವಶೇಷಗಳ ಸಂದಿಗೊಂದಿಗಳಲ್ಲಿ ನುಸುಳಿ ಅಲ್ಲಿರುವವರಿಗೆ ನೆರವು ನೀಡಬಹುದು ಎನ್ನುವುದು ಇವರ ಆಶಯ.

ಈ ಆಸೆಯ ಬೆನ್ನು ಹತ್ತಿದ ಕೌಶಿಕ್ ಮತ್ತು ಫುಲ್ ಜಿರಲೆಗಳನ್ನು ಇರುಕಿನಲ್ಲಿ ಇರಿಸಿ ಅಧ್ಯಯನ ಮಾಡಿದ್ದಾರೆ. ಅವು ಇಕ್ಕಟ್ಟಾದ ಸಂಧಿಗಳಲ್ಲಿ ನಡೆದಾಡುವ ರೀತಿ, ಅವು ತಾಳಿಕೊಳ್ಳಬಲ್ಲ ಗರಿಷ್ಟ ಒತ್ತಡದ ಪ್ರಮಾಣ, ಅಪ್ಪಚ್ಚಿಯಾಗುವ ಸ್ಥಿತಿಯಲ್ಲಿದ್ದರೂ ನಡೆದಾಡುವ ವೇಗ ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ವೀಡಿಯೋ ಚಿತ್ರಗಳನ್ನು ತೆಗೆದಿದ್ದಾರೆ. ಇವೆಲ್ಲದರ ಪ್ರೇರಣೆ ಪಡೆದು ಜಿರಲೆಯಂತೆಯೇ ವಿನ್ಯಾಸವಿರುವ ರೋಬೋವನ್ನೂ ಸೃಷ್ಟಿಸಿದ್ದಾರೆ.

ಜಿರಲೆಗಳು ನಮ್ಮಷ್ಟು ಗಟ್ಟಿ ಜೀವಿಗಳಲ್ಲ. ಮೃದು. ಒತ್ತಿದರೆ ಇರುಕಿಕೊಳ್ಳಬಲ್ಲುವು. ಇದಕ್ಕೆ ಕಾರಣ ಅವುಗಳ ಹೊರಕವಚ. ಬಹುತೇಕ ಕೀಟಗಳ ರಚನೆ ಹೀಗೇ ಇರುತ್ತದಾದರೂ, ಜಿರಲೆಗಳಲ್ಲಿ ಇವು ವಿಶೇಷ. ತೆಳುವಾದ ಪಟ್ಟಿಗಳನ್ನು ಒಂದರ ಹಿಂದೆ ಒಂದಾಗಿ ಜೋಡಿಸಿದಂತಿದೆ ದೇಹ. ಈ ಪಟ್ಟಿಗಳು ಗಟ್ಟಿಯಾಗಿದ್ದರೂ ಸುಲಭವಾಗಿ ಬಾಗಬಲ್ಲವು. ಜೊತೆಗೆ ಇವುಗಳ ಉದ್ದುದ್ದ ಕಾಲುಗಳು. ಈ ಕಾಲುಗಳು ದೇಹದ ಉದ್ದದ ಒಂದೂವರೆ ಪಟ್ಟು ಉದ್ದವಿದ್ದರೂ, ಸಂಧಿಪಾದಗಳಾಗಿದ್ದರಿಂದ ಅತಿ ಪುಟ್ಟದಾಗಿ ಮಡಿಚಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಿಳಿದ ವಿಷಯ. ಆದರೆ ಎಷ್ಟರ ಮಟ್ಟಿಗೆ ಈ ಸಾಮರ್ಥ್ಯವನ್ನು ಜಿರಲೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ಫುಲ್ ಮತ್ತು ಕೌಶಿಕ್ ಪರೀಕ್ಷಿಸಿದ್ದಾರೆ.

ಇದಕ್ಕಾಗಿ ಇವರು ಜಿರಲೆಗಳನ್ನು ಅತಿ ಇಕ್ಕಟ್ಟಾದ ಸಂಧಿಗಳೊಳಗೆ ಹೋಗುವಂತೆ ಮಾಡಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಪರಿಶೀಲಿಸಿ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಜಿರಲೆಗಳು ನಿಷ್ಣಾತವಷ್ಟೆ. ಒಳಗಿನದೆಲ್ಲವೂ ಕಾಣುವ ಪಾರದರ್ಶಕ ಡಬ್ಬಿಯೊಳಗೆ ಜಿರಲೆಯನ್ನು ಇಟ್ಟು ನಿಧಾನವಾಗಿ ಡಬ್ಬಿಯ ಮುಚ್ಚಳವನ್ನು ಒಳದೂಡಿದ್ದಾರೆ. ಹೀಗೆ ಮಾಡಿದಾಗ ಜಾಗ ಇಕ್ಕಟ್ಟಾಗಿ ಜಿರಲೆ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. (ಚಿತ್ರ 1 ನೋಡಿ). ಅಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಜಿರಲೆ ನಡೆಯುವಾಗ ವೀಡಿಯೋ ಚಿತ್ರಿಸಿದ್ದಾರೆ. ಅನಂತರ ವೀಡಿಯೋದ ನೆರವಿನಿಂದ ಜಿರಲೆಯ ನಡಿಗೆಯ ವೇಗ, ವಿಧಾನವನ್ನು ಲೆಕ್ಕ ಹಾಕಿದ್ದಾರೆ.

cockroachsqueeze

ಜಿರಲೆಯನ್ನು ಸಣ್ಣ ಸೀಳಿನ ಮೂಲಕ ಹಾಯಲು ಬಿಟ್ಟಾಗ ಅಚ್ಚರಿಯ ಚಿತ್ರಗಳು ದಾಖಲಾಗಿದ್ದುವು. ತನ್ನ ದೇಹಕ್ಕಿಂತಲೂ ನಾಲ್ಕು ಪಟ್ಟು ಕಿರಿದಾಗಿದ್ದ ಸಂದಿನೊಳಗೆ ತೂರಬೇಕೆಂದಾಗ ಜಿರಲೆ ಮೊದಲಿಗೆ ಸಂದಿನಾಚೆ ಏನಾದರೂ ಇದೆಯೋ ಎಂದು ತನ್ನ ಮೀಸೆಯನ್ನು ಚಾಚಿ ಹುಡುಕಾಡುತ್ತದೆ. ಅನಂತರ ತಲೆಯನ್ನು ತೂರಿಸುತ್ತದೆ. ತಲೆಯಾದ ಮೇಲೆ ಮುಂಗಾಲುಗಳನ್ನು ಹೊರ ಹಾಕುತ್ತದೆ. ತದನಂತರ ಎದೆ, ಉದರ ಭಾಗವನ್ನು ಸೀಳಿನೊಳಗೆ ತೂರಿಸುತ್ತದೆ. ತೆವಳುತ್ತಾ ಮುಂದೆ ಸಾಗಿ ಇಡೀ ಉದರ ಭಾಗವನ್ನು ಮತ್ತೊಂದು ಬದಿಗೆ ಎಳೆದುಕೊಳ್ಳುತ್ತದೆ.

ವೀಡಿಯೋ ಚಿತ್ರಗಳಲ್ಲಿ ಈ ಚಲನೆಗಳು ಸುಸ್ಪಷ್ಟವಾಗಿ ಕಂಡುವು. ಇವೆಲ್ಲವನ್ನೂ ಕಣ್ಣೆವೆಯಿಕ್ಕುವುದರೊಳಗೆ ಮಾಡಿ ಮುಗಿಸುತ್ತದೆ ಈ ಕೀಟ. ಕಣ್ಣೆವೆ ಮುಚ್ಚುವಷ್ಟರೊಳಗೆ ಎಂದರೆ ಎಷ್ಟು ಸೆಕೆಂಡು ಎಂದುಕೊಂಡಿರಿ – ಅರ್ಧದಿಂದ ಮುಕ್ಕಾಲು ಸೆಕೆಂಡುಗಳೊಳಗೆ ಇದು ತನ್ನ ಇಡೀ ದೇಹವನ್ನು ಸಂದಿಯೊಳಗಿನಿಂದ ಹೊರ ತಂದು ಬಿಟ್ಟಿರುತ್ತದೆ. ಇದರಂತೆ ಮನುಷ್ಯನಿಗೂ ಮಾಡಲು ಸಾಧ್ಯವಾಗುವುದಿದ್ದಿದ್ದರೆ. ಬಹುಶಃ ಯಾವ ಜೈಲಿನ ಕಿಟಕಿಗಳೂ ಬಂಧಿಗಳನ್ನು ಸೆರೆಯಾಗಿಡಲು ಶಕ್ತವಲ್ಲ. ಹಾಗೆಯೇ ಈ ಸಾಮರ್ಥ್ಯವಿದ್ದಿದ್ದರೆ ದೇಹಕ್ಕಿಂತಲೂ ಕಿರಿದಾದ ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳು ಹೊರ ಬಂದು ಬದುಕುವ ಸಾಧ್ಯತೆಗಳೂ ಇರುತ್ತಿದ್ದುವೇನೋ?

ಹೀಗೆನ್ನಲು ಕಾರಣವಿದೆ. ಜಿರಲೆ ಸುಮಾರು 12 ಮಿಮೀ ಎತ್ತರವಿರುವ ತನ್ನ ದೇಹವನ್ನು ನಾಲ್ಕು ಮಿಮೀಟರಿಗಿಂತಲೂ ಕಡಿಮೆ ಎತ್ತರಕ್ಕೆ ಸಪಾಟಾಗಿಸಿಕೊಂಡು ಮುನ್ನುಗ್ಗಬಲ್ಲುದಂತೆ. ಈ ಲೆಕ್ಕದಲ್ಲಿ ಒಂದಡಿ ದಪ್ಪವಿರುವ ಮನುಷ್ಯ ನಾಲ್ಕಿಂಚು ದಪ್ಪದ ಸಂದಿನೊಳಗೆ ಸಲೀಸಾಗಿ ನುಸುಳಬಹುದಾಗಿತ್ತು. ಜಿರಲೆಗೆ ಇದು ಸಾಧ್ಯವಾಗುವುದಕ್ಕೆ ಕಾರಣ ಅದು ತನ್ನ ಕಾಲುಗಳನ್ನು ಉದ್ದುದ್ದಕ್ಕೆ ಚಾಚಿಕೊಂಡ ನೆಲವನ್ನೇ ಆತುಕೊಂಡಂತೆ ಸಪಾಟಾಗಿ ಬಿಡಬಲ್ಲುದು. ನಮಗೆ ಇದು ಸಾಧ್ಯವಿಲ್ಲ. ಜಿರಲೆಯ ಬೆನ್ನ ಮೇಲಿನಂಚಿಗೂ ನೆಲಕ್ಕೂ ಇರುವ ಕೋನ ಇದೆಷ್ಟು ಸಪಾಟಾಗಬಲ್ಲುದು ಎಂದು ತೋರಿಸುತ್ತದೆ. ಸಂದಿನೊಳಗೆ ತೂರುವಾಗ ಈ ಕೋನ ಸುಮಾರು ನಾಲ್ಕು ಮಡಿ ಹೆಚ್ಚಾಗುತ್ತದಂತೆ.

ಅದೇನೋ ಸರಿ. ಆದರೆ ಕಾಲನ್ನು ಹೀಗೆ ಚಾಚಿಕೊಂಡು ಬಿಟ್ಟರೆ ಮುನ್ನಡೆಯುವುದು ಹೇಗೆ ಎಂದು ಯೋಚಿಸಿದಿರಲ್ಲವಾ? ನಿಮ್ಮ ಆಲೋಚನೆ ಸರಿಯೇ. ಕೌಶಿಕ್ ಮತ್ತು ಫುಲ್ ಇದನ್ನೂ ಪರಿಶೀಲಿಸಿದ್ದಾರೆ. ಜಿರಲೆಯ ಬೆನ್ನಿನ ಮೇಲೆ ಮೇಲ್ಚಾವಣಿಯುಂಟು ಮಾಡುವ ತಡೆ ಹಾಗೂ ಅದರ ಕಾಲುಗಳ ಮುಂದೂಡುವ ಬಲವನ್ನು ಲೆಕ್ಕ ಹಾಕಿದ್ದಾರೆ. ತಡೆಗಿಂತಲೂ ಮುಂದೂಡುವ ಬಲ ಹೆಚ್ಚಾಗಿದ್ದಷ್ಟೂ ಮುನ್ನಡೆ ಸುಲಭವಷ್ಟೆ. ನಾವು ನೀರಿನಲ್ಲಿ ಈಜುವಂತೆ, ಅಥವಾ ಹಕ್ಕಿಗಳು ಗಾಳಿಯಲ್ಲಿ ಹಾರುವಾಗ ಮಾಡುವಂತೆ ಜಿರಲೆಯೂ ತನ್ನ ದೇಹದ ಎಡಭಾಗವನ್ನು, ಇನ್ನೊಮ್ಮೆ ಬಲಭಾಗವನ್ನು ತೆವಳಿಸಿ ಮುಂದೆ ಸಾಗುತ್ತದೆ. ಇರುಕಿನ ಸಂದಿನೊಳಗೆ ಕಾಲುಗಳ ನೆರವೇ ಇಲ್ಲದೆ ತೆವಳುತ್ತದೆ.

ಹೀಗೆ ಕಾಲುಗಳನ್ನು ಮಡಚಿಕೊಳ್ಳುವ ಸಾಮರ್ಥ್ಯವಿರುವುದರಿಂದಲೇ ಜಿರಲೆಯನ್ನು ಹೊಸಕಿ ಹಾಕುವುದು ಕಷ್ಟ. ಫುಲ್-ಕೌಶಿಕ್ ಜಿರಲೆಗಳ ಮೇಲೆ ವಿವಿಧ ಮಟ್ಟದ ಭಾರವನ್ನು ಹೇರಿ ಅವು ಎಷ್ಟು ತಾಳಿಕೊಳ್ಳಬಲ್ಲುವು ಎಂದು ಲೆಕ್ಕ ಹಾಕಿದ್ದಾರೆ. ಈ ಪುಟಾಣಿ ಕೀಟ ತನ್ನ ದೇಹ ತೂಕಕ್ಕಿಂತ 300 ರಿಂದ 900 ಪಟ್ಟು ಭಾರವನ್ನು ತಾಳಬಲ್ಲುದು. ನಮ್ಮ ಬೆನ್ನ ಮೇಲೆ 21 ರಿಂದ 60 ಟನ್ನು ತೂಕ ಬಿದ್ದ ಹಾಗೆ. ಅರ್ಥಾತ್ ಹೆಚ್ಚೂ ಕಡಿಮೆ ಎರಡರಿಂದ ಆರು ಲೋಡ್ ಆದ ಟ್ರಕ್ಕುಗಳು ಬೆನ್ನ ಮೇಲೆ ನಿಂತ ಹಾಗೆ. ಇಷ್ಟಾದರೂ ಜಿರಲೆಗೆ ಏನೂ ಆಗುವುದಿಲ್ಲ. ಭಾರವನ್ನು ತೆಗೆದ ಕೂಡಲೇ ಎಂದಿನ ಗತ್ತಿನಿಂದ ಹರಿದಾಡಿ, ಹಾರುತ್ತದಂತೆ. ಇಷ್ಟು ಭಾರ ಬಿದ್ದರೂ ಅದರ ದೇಹಕ್ಕೆ ಕಿಂಚಿತ್ತೂ ತೊಂದರೆಯಾಗದಿರುವುದಕ್ಕೆ ಕಾರಣ, ಅವುಗಳ ಬೆನ್ನ ಮೇಲಿರುವ ಹಾಳೆಗಳು ಬಾಗುವುದಲ್ಲ. ಈ ಹಾಳೆಗಳನ್ನು ಜೋಡಿಸುವ ಸ್ನಾಯುಗಳ ರಚನೆ ಎಂದು ವೀಡಿಯೋ ಮೂಲಕ ಕೌಶಿಕ್ ಮತ್ತು ಫುಲ್ ಗಮನಿಸಿದ್ದಾರೆ

ಸಂದಿಯೊಳಗಿನ ತೆವಳಾಟ ಜಿರಲೆಯ ಸಾಧಾರಣ ಓಟಕ್ಕಿಂತ ನಿಧಾನವೇನೋ ಹೌದು. ಆದರೆ ಗತಿಯೇನೂ ಕಡಿಮೆಯಲ್ಲವಂಎ. ತನ್ನ ದೇಹದ ಆರು ಮಡಿ ಉದ್ದದ ಸಂದಿಯನ್ನು ಸೆಕೆಂಡಿನೊಳಗೆ ಇದು ಕ್ರಮಿಸಿಬಿಟ್ಟಿರುತ್ತದೆ. ಆರಡಿ ಮನುಷ್ಯ ತನ್ನ ದೇಹದ ಉದ್ದಕ್ಕೆ ಅನುಗುಣವಾಗಿ ಈ ವೇಗದಲ್ಲಿ ತೆವಳಿದರೆ ನಿಮಿಷದೊಳಗೆ ಎಂಟೂವರೆ ಕಿಲೋಮೀಟರು ದೂರವನ್ನು ತೆವಳಿಕೊಂಡೇ ಸಾಗಬಲ್ಲ! ಆ ವೇಗದಲ್ಲಿ ತೆವಳಲು ಜಿರಲೆಗೆ ಮೇಲ್ಚಾವಣಿ ಒದಗಿಸುವ ಘರ್ಷಣೆಯೂ ನೆರವಾಗುತ್ತದೆ. ಈ ಘರ್ಷಣೆಯನ್ನು ಕಡಿಮೆ ಮಾಡಿದರೆ (ಮೇಲ್ಛಾವಣಿಯನ್ನು ನುಣುಪಾಗಿಸಿದರೆ ಅಥವಾ ನೆಲವನ್ನು ನುಣುಪಾಗಿಸಿದರೆ) ಏನಾಗಬಹುದೆಂದೂ ಇವರು ಪರೀಕ್ಷಿಸಿದ್ದಾರೆ. ಮೇಲ್ಛಾವಣಿ ನುಣುಪಾಗಿದ್ದಷ್ಟೂ ಸಂದಿನೊಳಗೆ ಜಿರಲೆಯ ಚಲನೆ ವೇಗವಾಗುತ್ತದೆ. ನೆಲ ನುಣಪಾಗಿದ್ದಷ್ಟೂ ನಿಧಾನವಾಗುತ್ತದೆ. ಇದೇನೂ ವಿಶೇಷವಲ್ಲ ಎಂದಿರಾ? ಕೌಶಿಕ್-ಫುಲ್ ಅವರ ಪ್ರಕಾರ ಇದೊಂದು ವಿಶೇಷ ನಡಿಗೆ. ಎರಡು ಮೇಲ್ಮೈಗಳ ಘರ್ಷಣೆಯನ್ನೇ ಬಳಸಿಕೊಂಡು ಮುಂದೆ ಸಾಗುವ ವಿಶೇಷ ನಡಿಗೆ.

ಇರಬಹುದು. ಇದರಿಂದ ನಮಗೇನು ಲಾಭ? ಜಿರಲೆಯನ್ನಂತೂ ಹಿಡಿಯಲು ಆಗುವುದಿಲ್ಲ. ಎಂತಹ ಕಿರಿದಾದ ಸಂದಿನಲ್ಲೂ ಅದು ನುಸುಳಬಹುದು ಅಂದರೆ ಅದನ್ನು ಮನೆಯಿಂದ ಸಂಪೂರ್ಣವಾಗಿ ನಿವಾರಿಸಲು ಆಗುವುದಿಲ್ಲ. ಮತ್ತೇನು ಪ್ರಯೋಜನ ಎಂಬ ನಿರಾಸೆ ಬೇಡ.  ಕಿರಿದಾದ ಸಂದುಗಳೊಳಗೆ ನುಸುಳುವ ರೋಬೋಗಳಿಗೆ ಇವು ಪ್ರೇರಣೆಯಾಗುತ್ತವೆ. ಜಿರಲೆಯ ಬೆನ್ನ ಮೇಲಿನ ಫಲಕಗಳ ರಚನೆ, ಅವು ಬಾಗುವ ಹಾಗೂ ಸಪಾಟಾಗುವ ರೀತಿ, ಮೇಲ್ಮೈಗಳನ್ನು ಬಳಸಿಕೊಂಡು ತೆವಳುವ ಪರಿ, ಇವೆಲ್ಲವನ್ನೂ ಗಮನಿಸಿದ ನಂತರ ಫುಲ್ ಮತ್ತು ಕೌಶಿಕ್ ಅಂಗೈಮೇಲಿಟ್ಟುಕೊಳ್ಳಬಹುದಾದಂತಹ ಪುಟ್ಟ ರೊಬೋವೊಂದನ್ನು ರೂಪಿಸಿದ್ದಾರೆ.

compressiblerobot.jpg

ಇದು ಕೂಡ ಸಂದಿಗಳೊಳಗೆ ನುಸುಳುವಾಗ ತನ್ನೆತ್ತರವನ್ನು ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. ಇದರ ಕಾಲುಗಳಿಗೆ ಜಿರಲೆಯ ಉದ್ದದ ಸಂಧಿಪಾದಗಳೇ ಸ್ಪೂರ್ತಿ. ಜಿರಲೆಯೂ ಅದ್ಭುತ. ಅದನ್ನು ಅಣಕಿಸುವ ರೋಬೋವೂ ಅದ್ಭುತ. ಅಲ್ಲವೇ?

ಜಿರಲೆ ರೋಬೋದ ವೀಡಿಯೋ ಇಲ್ಲಿದೆ :

ಆಕರ:

Kaushik Jayaram and Robert J. Full, Cockroaches traverse crevices, crawl rapidly in confined spaces, and inspire a soft, legged robot PNAS | doi/10.1073/pnas.1514591113,   ( Early edition, dated 4.2.2016)

Published in: on ಫೆಬ್ರವರಿ 10, 2016 at 4:32 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ10

ಅಪಾಯದಲ್ಲೂ ಖುಷಿ

ಸಾಹಸಿ

ಬದುಕು ಸವಾಲೇ ಅಲ್ಲ ಎನ್ನಿಸುವ ಕೆಲವರಿಗೆ ಉದ್ದೇಶಪೂರ್ವಕವಾಗಿ  ಅಪಾಯವನ್ನೆದುರಿಸುವುದು  ಖುಷಿಯ ಸೆಲೆಯಾಗುತ್ತದೆ. ಈಗಾಗಲೇ ಹೇಳಿದಂತೆ, ಪೂರ್ವಜರ ಬೇಟೆಗಾರ ಜೀವನ ಪ್ರತಿನಿತ್ಯವೂ ಅಪಾಯವನ್ನೆದುರಿಸುವುದಾಗಿತ್ತು. ದೊಡ್ಡ ಬೇಟೆಗಳನ್ನು ಬೆನ್ನತ್ತುವ ಸವಾಲನ್ನು ಎದುರಿಸುವುದಾಗಿತ್ತು. ಮರವಾಸಿ ಮಂಗಗಳಲ್ಲಿಲ್ಲದ ಧೈರ್ಯ, ಸಾಹಸ ನಮಗೆ ದಕ್ಕಿತು. ಇಂದು ಬಹಳಷ್ಟು ಜನ ಅಪಾಯದಿಂದ ದೂರವಿರುವುದರಲ್ಲೇ ತೃಪ್ತರಾಗಿ, ಒಂದಿಷ್ಟೂ ಅಪಾಯವಿಲ್ಲದ ನಿರಾಳ ಬದುಕನ್ನು ಜೀವಿಸುತ್ತಾರೆ. ಆದರೆ ಕೆಲವರಿಗೆ ಇಂತಹ ಬದುಕು ತೀರ ನೀರಸವೆನ್ನಿಸಿ ತಾವೇ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವದರಲ್ಲಿ ಖುಷಿ ಕಾಣುವರು.  ಇವರಿಗೆ ಸವಾಲು ಎದುರಾಗಿದ್ದರಿಂದ ಅಲ್ಲ, ಸವಾಲನ್ನು ಮೆಟ್ಟಿ ನಿಲ್ಲುವುದರಲ್ಲಿ ಖುಷಿ ಸಿಗುತ್ತದೆ. ಅಪಾಯವನ್ನು ದಾಟಿದ ನಂತರ ಸುರಕ್ಷತೆಯನ್ನು ತಲುಪುವ ಕ್ಷಣದಲ್ಲಿ ಅವರ ಧಮನಿ, ಧಮನಿಗಳಲ್ಲೂ ಖುಷಿಯ ಅಲೆ ಚಿಮ್ಮುತ್ತದೆ.

ನಮಗೆ ಕಾಣುವ ಹಾನಿಪ್ರಿಯರಲ್ಲಿ ಎರಡು ಬಗೆ: ಜೂಜುಕೋರರು ಹಾಗೂ ಕಟ್ಟಾಸ್ಪರ್ಧಿಗಳು. ಜೂಜಾಡುವುದರಿಂದ ಹಣಕ್ಕೆ ಹಾನಿಯಾಗುತ್ತದೆ ಆದರೆ ಹಾನಿಪ್ರಿಯರ ದೇಹಕ್ಕೆ ತೊಂದರೆಯಾಗುವುದಿಲ್ಲ. ರೂಲೆಟ್ ಆಟದಲ್ಲೋ, ಮೂರೆಲೆಯಲ್ಲೋ, ಲಾಟರಿಯಲ್ಲೋ, ತಂಬೋಲ ಅಥವಾ ಕುದುರೆ ರೇಸ್ ನಲ್ಲೋ ಜೂಜಾಡುವುದು ಇವರಿಗೆ ಉಳಿದೆಲ್ಲ ಸಮಸ್ಯೆಗಳೂ ಮರೆತುಹೋಗುವಷ್ಟು ಮತ್ತನ್ನುಂಟು ಮಾಡುತ್ತದೆ. ಜೂಜಿನಲ್ಲಿ ಮತ್ತುಂಟು ಮಾಡುವ ಗೆಲುವಿನಿಂದ ಒಟ್ಟಾರೆ ದಕ್ಕಿದ್ದಕ್ಕಿಂತ ಖುಷಿಯ ಕೆಲಸಗಳಿಂದ ಗಳಿಸಿದ್ದು ಹತ್ತು ಪಟ್ಟು ಹೆಚ್ಚಾಗಿದ್ದರೂ, ಈ ಖುಷಿಯ ಅಲೆಯ ಸೆಳೆತವೆಷ್ಟಿರುತ್ತದೆ ಎಂದರೆ ಅದು ಜೂಜಾಡುವುದನ್ನು ಇನ್ನಷ್ಟು ಬಲಗೊಳಿಸುತ್ತದೆ.

ದುಸ್ಸಾಹಸಿಗಳ ಕಥೆ ಬೇರೆ. ಇಲ್ಲಿ ಒಮ್ಮೆ ಕಂಡ ಸೋಲು, ಕಡಿಮೆ ಖುಷಿ ನೀಡುವುದಿರಲಿ, ಹಾನಿಪ್ರಿಯನ ಜೀವವನ್ನೇ ತೆಗೆದುಬಿಡಬಹುದು. ಆಟ ಕೊನೆಯಾಗಿಬಿಡಬಹುದು. ಎಷ್ಟೋ ಸರ್ಕಾರಗಳು ಇಂತಹ ಅಪಾಯಕಾರಿ ಆಟಗಳನ್ನು ನಿಷೇಧಿಸಿ  ಅಪಾಯಕ್ಕೆ ಸ್ವಯಂ ತಲೆಯೊಡ್ಡುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತವೆ. ಆದರೂ ಇದು ಈ ದುಸ್ಸಾಹಸಿಗಳನ್ನು ತಡೆಯುವುದಿಲ್ಲ.  ಬಿಗ್ ಡಿಪ್ಪರ್ ನಂತಹ ಪರಿಷೆಯ ಆಟಗಳಾಗಲಿ, ತುಸು ಗಂಭೀರವಾದ ಪರ್ವತಾರೋಹಣ ಅಥವಾ ಸ್ಕೀಯಿಂಗ್ ನಂತಹ ನಿಷೇಧಿಸದ ಆಟಗಳು ಅವರಿಗೆ ಬೇಕಿಲ್ಲ. ಅವರಿಗೆ ಖುಷಿ ನೀಡುವ ಅಳಿವು-ಉಳಿವಿನ ಸಾಹಸಗಳು ಕಾನೂನು ಬಾಹಿರವಾಗಿರಲೇ ಬೇಕು. ಉದಾಹರಣೆಗೆ, ಕಾನೂನಿನ ಕೆಂಗಣ್ಣಿಗೆ ಗುರಿಯಾಗುವಂಹ ಆಟಗಳಾದ ಎತ್ತರದ ಕಟ್ಟಡಗಳನ್ನು ಏರುವುದು, ಅಥವಾ ಅವುಗಳ ಮೇಲೆ ಬಲು ಎತ್ತರದಿಂದ ಧುಮುಕುವುದೇ ಮೊದಲಾದವುಗಳು  ಇಂತಹ ಅಲ್ಪಸಂಖ್ಯಾತ ಸಾಹಸವ್ಯಸನಿಗಳಿಗೆ ಬಲು ಪ್ರಿಯವಾದವುಗಳು.

ಸುರಂಗ ರೇಲ್ವೆಗಳಲ್ಲಿ ಡಬ್ಬಿಗಳ ಹೊರಗೆ ನೇತಾಡಿಕೊಂಡು ಪಯಣಿಸುವುದು ಇವುಗಳಲ್ಲಿ ಅತಿ ಅಪಾಯಕಾರಿಯೆನ್ನಿಸಿದ ಆಟ. ನ್ಯೂಯಾರ್ಕ್ ನಲ್ಲಿ ಇದನ್ನು ಸಬ್ ವೇ ಸರ್ಫಿಂಗ್ ಎಂದೂ ಲಂಡನ್ನಿನಲ್ಲಿ ಟ್ಯೂಬ್ ಸರ್ಫಿಂಗ್ ಎಂದೂ ಕರೆಯುತ್ತಾರೆ.  ಯುವಕರು ರೈಲು ಡಬ್ಬಿಗಳ ಮೇಲೋ ಅಥವಾ ಅದರ ಹಿಂಬದಿಯಲ್ಲೋ ಜೋತಾಡಿಕೊಂಡು ವೇಗವಾಗಿ ಸಾಗುವ ರೈಲು ತಮ್ಮನ್ನು ಬಿಸಾಡದಂತೆ ಸಾಹಸ ಪಡುತ್ತಾರೆ. ಹಲವೊಮ್ಮೆ ಅವರು ಸೋಲುವುದೂ ಉಂಟು. ಫಲ ಸಾವೇ.

ಇತ್ತೀಚೆಗೆ ಇಂತಹ ಅಪಾಯಕಾರಿ ಆಟಗಳ ಸಂಖ್ಯೆ ಚಕಿತಗೊಳಿಸುವಷ್ಟು ಹೆಚ್ಚಾಗಿದೆ. ಇದು ಡೇಂಜರಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಎಕ್ಸ್ಟ್ರೀಮ್ ಸ್ಪೋರ್ಟ್ಸ್ ಅಸೋಸಿಯೇಷನ್ ನಂತಹ ಸಂಘಟನೆಗಳ ಸ್ಥಾಪನೆಗೆ ಹಾದಿಮಾಡಿಕೊಟ್ಟಿದೆ. ಇಂತಹ ಖುಷಿಯ ಹುಡುಕಾಟದಲ್ಲಿ ಮಾನವ ತೊಡಗಿಕೊಂಡಿರುವ ವೈವಿಧ್ಯಮಯ ರೀತಿಗೆ ಇದೋ ಕೆಲವು ಆಟಗಳ ಪಟ್ಟಿ ಇಲ್ಲಿದೆ: ಬೇಸ್ ಜಂಪಿಂಗ್, ಬಾಡಿ ಬೋರ್ಡಿಂಗ್, ಸೇತುವೆ ಹಾರುವುದು, ಬಂಗೀ ಜಂಪ್, ಕಾಟಾಪುಲ್ಟಿಂಗ್, ಕೇವ್ ಡೈವಿಂಗ್, ಡರ್ಟ್ ಬೋರ್ಡಿಂಗ್, ಹ್ಯಾಂಗ್ ಗ್ಲೈಡಿಂಗ್, ಕೈಟ್ ಬೋರ್ಡಿಂಗ್, ಕೈಟ್ ಸರ್ಫಿಂಗ್, ಲ್ಯಾಂಡ್ ಸೇಲಿಂಗ್, ಲೆ ಪಾರ್ಕರ್, ಮೈಕ್ರೊಗ್ಲೈಡಿಂಗ್, ಮೌಂಟೇನ್ ಬೋರ್ಡಿಂಗ್, ಪ್ಯಾರಾ ಗ್ಲೈಡಿಂಗ್, ಸ್ಯಾಂಡ್ ಬೋರ್ಡಿಂಗ್, ಸ್ಕೀ ಬೋರ್ಡಿಂಗ್, ಸ್ಕೈ ಡೈವಿಂಗ್, ಸ್ಕೈ ಸರ್ಫಿಂಗ್  ಸ್ನೋ ಬೋರ್ಡಿಂಗ್, ಸ್ಟೀಪ್ ಸ್ಕೀಯಿಂಗ್, ಸ್ಟ್ರೀಟ್ ಲೂಗಿ, ಸ್ಟಂಟ್ ಪೋಗೋ, ಸರ್ಫ್ ಬೋರ್ಡಿಂಗ್, ವೇಕ್ ಬೋರ್ಡಿಂಗ್, ವೈಟ್ ವಾಟರ್ ರಾಫ್ಟಿಂಗ್, ವಿಂಗ್ ವಾಕಿಂಗ್  ಹಾಗೂ ವಿಂಗ್ ಸೂಟ್ ಸ್ಕೈ ಫ್ಲೈಯಿಂಗ್. ಇವುಗಳಲ್ಲಿ ಕೆಲವು ಕಾನೂನುಬದ್ಧವಾಗಿದ್ದು ಸುಸ್ಥಾಪಿತ. ಉಳಿದವಲ್ಲ.

ಈ ಆಟಗಳ ಹುರಿಯಾಳುಗಳಿಗೆ ಪ್ರೇರಣೆಯೇನೆಂಬುದು ಸ್ಪಷ್ಟ.  ಇತರೆ ಆಟಗಾರರಂತೆ ಅವರಿಗೆ ಕೀರ್ತಿ ಅಥವಾ ಸಂಪತ್ತು ಬೇಕಿಲ್ಲ. ಬದಲಿಗೆ ತಾವೇ ತಮ್ಮ ಮೇಲೆಳೆದುಕೊಂಡ ಅಪಾಯದಿಂದ ತಪ್ಪಿಸಿಕೊಳ್ಳುವುದರಲ್ಲಿರುವ ಖುಷಿಗಿಂತ ತುಸು ಹೆಚ್ಚೇನನ್ನೋ ಗುರಿಯಾಗಿಟ್ಟುಕೊಂಡಿರುತ್ತಾರೆ. ಒಮ್ಮೆ ಇಂತಹ ಸಾಹಸ ಮಾಡಿ, ಕೂದಲೂ ಕೊಂಕದೆ ಉಳಿದು ಬಂದಾಗ ಅವರಾಡುವ ಮಾತು: “ಸಂತೋಷಕ್ಕೆ ಸ್ವಾತಂತ್ರ್ಯವೇ ಮೂಲ, ಸ್ವಾತಂತ್ರ್ಯಕ್ಕೆ ಧೈರ್ಯವೇ ಮೂಲ,” ಅಥವಾ “ ನಿಮ್ಮನ್ನು ಉಸಿರುಗಟ್ಟಿಸುವಂಥವುಗಳಿಂದ ಬದುಕನ್ನು ಅಳೆಯಬೇಕು, ನಾವು ಸೆಳೆದುಕೊಳ್ಳುವ ಉಸಿರಿನ ಲೆಕ್ಕದಿಂದಲ್ಲ.” ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಹೆದರುವವರ ಬಗ್ಗೆ ಅವರು ಹೀನಾಯವಾಗಿ ಕಾಣುತ್ತಾರೆ. “ಗಾಯವಾಗದಂತೆ ತಡೆಯಬೇಕಿದ್ದರೆ ಈ ಕೆಳಗಿನ ಸೂಚನೆಗಳನ್ನು ಪಾಲಿಸಿ. ಮನೆಯೊಳಗೇ ಇರಿ. ಮಲಗಿರಿ. ಹಾಸಿಗೆಯಿಂದ ಕೆಳಗೆ ಉರುಳದಿರಿ. ನಿದ್ರೆ ಬಿಟ್ಟು ಬೇರೇನನ್ನೂ ಮಾಡದಿರಿ.” ಎಂದು ಹೀಯಾಳಿಸುತ್ತಾರೆ.

ಸಮಾಜ ತನ್ನ ಸದಸ್ಯರ ಮುಂದೆ ಹೆಚ್ಚೆಚ್ಚು ಅಡ್ಡಿಗಳನ್ನು ಇಟ್ಟಾಗಲೆಲ್ಲ ಹೆಚ್ಚೆಚ್ಚು ಜನ ಈ ಬಗೆಯಲ್ಲಿ “ಅಪಾಯಕಾರಿ ಖುಷಿ” ಯಬೆನ್ನುಹತ್ತುವುದನ್ನು ಅನಿವಾರ್ಯವಾಗಿ ನಾವು ಕಾಣುತ್ತೇವೆ. ಸೀಟು ಬೆಲ್ಟುಗಳು ಹಾಗೂ ಸ್ಪೀಡ್ ಬ್ರೇಕರ್ ಗಳ ಪ್ರಪಂಚದಲ್ಲಿ ನಾವು ಭದ್ರವಾಗಿರುವಾಗ, ಕೆಲವರು ಜೀವಾಪಾಯವನ್ನುಂಟು ಮಾಡುವ ಹವ್ಯಾಸಗಳಲ್ಲಿ ತೊಡಗಿಕೊಂಡು ಬಂಡಾಯವೇಳುತ್ತಾರೆ. ನಮ್ಮ ಬೇಟೆಗಾರ ಪೂರ್ವಜರ ಭೂತ ಹೀಗೆ ಬೇರೊಂದು ಬಗೆಯಲ್ಲಿ ನಮ್ಮನ್ನು ಇನ್ನೂ ಕಾಡುತ್ತಿದೆ.

———————————

ಟಿಪ್ಪಣಿ:  Risk, danger,  ಇವಕ್ಕೆ ಸಂದರ್ಭಾನುಸಾರ ಪದಗಳನ್ನು ಬಳಸಲಾಗಿದೆ. ಕೆಲವೆಡೆ ಮೂಲ ಲೇಖಕರ ರೂಪಕ ಬರೆವಣಿಗೆ ಅನುವಾದದಲ್ಲಿ ಅರ್ಥ ಕಳೆದುಕೊಳ್ಳುತ್ತಿತ್ತು. “ಸೀಟುಬೆಲ್ಟುಗಳು ಹಾಗೂ ಸ್ಪೀಡ್ ಬ್ರೇಕರ್… ಈ ವಾಕ್ಯದ ಮೂಲವನ್ನು ನೋಡಿ. ಇನ್ನೊಂದು ಸಮಸ್ಯೆ. ನಮಗೆ ಪರಿಚಯವಿಲ್ಲದ  ಎಷ್ಟೋ ಆಟಗಳ ಉಲ್ಲೇಖಗಳಿವೆ. ಅವಕ್ಕೆ ಕನ್ನಡದಲ್ಲಿ ಪರ್ಯಾಯವಿಲ್ಲ.  ರೂಪಿಸಿದರೂ ಪ್ರಯೋಜನವಿಲ್ಲವಾದ್ದರಿಂದ ಅವನ್ನು ಹಾಗೆಯೇ ಅಕ್ಷರತಃ ಬರೆದಿದ್ದೇನೆ.

______________________________________

HAPPINESS

The Risk Taker

 

Deliberate, voluntary risk-taking is a source of happiness for certain individuals who find life lacking in rash challenges. As already explained, the primeval hunting existence turned our ancient ancestors into regular risk-takers, ready to accept the dangers of pursuing large prey. We became brave in a way that was unknown to tree-dwelling monkeys. Many people today are perfecdy content to avoid acts of bravery and to enjoy a quiet life that is as risk-free as possible, but some find this too tame an existence and crave the excitements of surviving selfimposed hazards. The happiness comes, of course, not in facing the challenge, but in successfully overcoming it. The moment of safety following the risk is the time when a surge of primeval happiness courses through the veins.

 

There are two widely popular forms of risk-taking today: gambling and extreme sports. Gambling puts the bank balance at risk, but does not damage the risk-taker’s body. A big win at the roulette table, the poker game, the national lottery, the bingo parlour, the tombola, or the races produces such a massive ‘high’ for the inveterate gambler that all the ‘lows’ are momentarily forgotten. Such is the impact of this surge of happiness that it reinforces the gambling urge, even if the total winnings from the few ‘highs’ are outweighed ten times by the total deficit from the many ‘lows’.

 

With extreme sports, the position is rather different. A single ‘low’ here can cost the risk-taker his or her life, and the game is over for good. ‘Nanny’ governments try to protect people from their own, self-imposed follies by outlawing various dangerous

sports, but this fails to stop the more adventurous ones. Not for them the approved thrills of fairground fun and big-dipper riding, or, more seriously, mountain-climbing and skiing. For them, illegality is almost a required condition of an extreme sport for it to provide the ultimate joy of danger-survival. Mountaineering up the sides of tall buildings, for example, or parachuting from the tops of them, are both popular among the risk-addicted minority, even though these activities may incur the wrath of the authorities.

 

Among the most dangerous of all the new extreme sports are those that involve riding on the outside of underground railway carriages. In New York this is known as subway-surfing and in London as Tubesurfing. Young men cling on to the tops or backs of carriages and try to avoid being thrown off as the trains speed along. They do not always succeed, with lethal results.

 

In recent years there has been an amazing proliferation in danger-sports, and this has resulted in the establishment of organizations such as the Dangerous Sports Club and the Extreme Sports Association. To give some idea of just how varied the quest for this type of human happiness has become, here is a list of just a few of the sports involved. Some are well-established and legalyl permitted, others are not: base-jumping, body-boarding, bridgejumping, bungee-jumping, catapulting, cave-diving, dirt-boarding, hang-gliding, kite-boarding, kitesurfing, land-sailing, Le Parkour, microlighting, mountain-boarding, paragliding, sand-boarding, skiboarding, sky-diving, sky-surfing, snow-boarding, steep-skiing, street luge, stunt pogo, surfboarding, wake-boarding, whitewater rafting, wing-walking, and wingsuit sky-flying.

 

The exponents of these sports are clear about their motivations. They are not seeking fame or fortune, like mainstream sportsmen. Instead they have as their objective little more than the excitement of avoiding the dangers they have imposed on themselves. To perform one of their exploits and come out unscathed at the end of it is enough, and they have mottos such as ‘The key to happiness is freedom, and the key to freedom is courage’ and ‘Measure life by the things that take your breath away – not by the number of breaths you take: They are scathing about those who are too scared to take part in their activities, advising ‘To avoid personal injury, carefulyl follow these instructions: stay inside, stay in bed, don’t fall out of the bed, do nothing but sleep:

 

It seems inevitable that the more society struggles to cotton-wool its inhabitants, the more seeking of ‘dangerous happiness’ we shall see. As we become increasingly cosseted in a seat-belted, speed-limited world, there will always be those who will rebel by exposing themselves to the exhilaration of lifethreatening pastimes. This is yet another way in which the ghost of the courageous, primeval hunter haunts us still.

 

Published in: on ಫೆಬ್ರವರಿ 9, 2016 at 6:28 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ