ವಿಜ್ಞಾನಿಗಳು ಅತಿ ಹೆಚ್ಚು ಅಧ್ಯಯನ ಮಾಡಿದ ಹೂ ಯಾವುದಿರಬಹುದು? ಗುಲಾಬಿ, ಮಲ್ಲಿಗೆ, ಸಂಪಿಗೆಯಂತಹ ಸುಂದರ, ಸುಗಂಧಿತ ಹೂಗಳಿರಬಹುದು ಎಂದು ಊಹಿಸಿದ್ದರೆ ಅದು ತಪ್ಪು. ಸಸ್ಯವಿಜ್ಞಾನಿಗಳು ಕೂಲಂಕಷವಾಗಿ ಸಂಶೋಧನೆ ನಡೆಸಿದಂತಹ ಹೂವು ‘ಶವಗಂಧಿ ಪುಷ್ಟ”ಎಂದರೆ ಬಹುಶಃ ನೀವು ಮೂಗಿನ ಮೇಲೆ ಬೆರಳಿಡಬಹುದು. ಆ ಬೆರಳು ಮೂಗಿನ ಮೇಲೆಯೇ ಇರಲಿ. ಏಕೆಂದರೆ ಈ ಹೂವು ಮೂಗು ಮುಚ್ಚಿಕೊಳ್ಳುವಷ್ಟು ಗಾಢ ದುರ್ನಾತ ಬೀರುವ ಪುಷ್ಟ. ಅಷ್ಟೇ ಅಲ್ಲ. ಪ್ರಪಂಚದ ಅತಿ ದೊಡ್ಡ ಹೂಗಳಲ್ಲಿ ಇದು ಮೊದಲನೆಯದು. ಇಂಡೊನೇಶಿಯಾದ ಕಾಡುಗಳೊಳಗೆ ಇರುವ ಈ ಬೃಹತ್ ಹೂವು ಸುಮಾರು ಎಂಟರಿಂದ ಹತ್ತು ಅಡಿ ಎತ್ತರದವರೆಗೂ ಬೆಳೆಯುತ್ತದೆ. ಇದು ಬರೇ ಹೂವಲ್ಲ. ಸಾವಿರಾರು ಹೂಗಳ ಗುಚ್ಛ. ಆದರೆ ಏಕವಾಗಿ ಕಾಣುವ ಇದು ನೂರಾರು ಮೀಟರು ದೂರದಿಂದಲೂ ನಿಮ್ಮನ್ನು ಪ್ರಭಾವಿಸುವಷ್ಟು ಕೆಟ್ಟ ವಾಸನೆಯನ್ನು ಬೀರುತ್ತದೆ. ವಾಸ್ತವವಾಗಿ ಇದನ್ನು “ಶವ ಪುಷ್ಟ” ಅಥವಾ ಕ್ಯಾರಿಯಾನ್ ಫ್ಲವರ್ ಎಂದೇ ವಿಜ್ಞಾನಿಗಳು ಹೆಸರಿಸಿದ್ದಾರೆ. ಮೂಲತಃ ಸುವರ್ಣಗೆಡ್ಡೆಯ ಸಂಬಂಧಿಯಾದ ಇದರ ಹೆಸರು ಅಮಾರ್ಫೋಫಾಲ್ಲಸ್ ಟೈಟಾನಮ್. ಟೈಟಾನ್ ಆರಮ್ ಎನ್ನುವ ಮತ್ತೊಂದು ಹೆಸರೂ ಇದೆ. ಆಕಾರ, ಗಾತ್ರವನ್ನು ಕಂಡು ಇಂಗ್ಲೀಷರು ಇದನ್ನು ದೆವ್ವದ ನಾಲಗೆ (ಡೆವಿಲ್ಸ್ ಟಂಗ್ ) ಎಂದೂ ಕರೆದಿದ್ದಾರೆ. ನಾಲ್ಕೈದು ವರ್ಷಗಳಿಗೊಮ್ಮೆ ಅರಳುವ ಇದರ ಹೂವಿಗೆ ಕೊಳೆತ ಶವದ್ದೇ ಬಣ್ಣ ಹಾಗೂ ವಾಸನೆ ಇದೆ.
ಏಕೆ ಈ ಬಣ್ಣ? ಏಕೆ ಈ ದುರ್ನಾತ?
ಇಂಡೋನೇಶಿಯಾದ ದಟ್ಟ ಮಳೆಕಾಡುಗಳಲ್ಲಿ ವಾಸಿಸುವ ಇದು ರಾತ್ರಿಯಷ್ಟೆ ಹೂ ಬಿಡುತ್ತದೆ. ಆ ಸಮಯದಲ್ಲಿ ಇದನ್ನು ಮೂಸಲು ಯಾವ ಕೀಟವೂ ಬರಲಿಕ್ಕಿಲ್ಲ. ದಟ್ಟಿರುಳಲ್ಲಿ ಇದರ ವಾಸನೆಯೇ ನೊಣ, ದುಂಬಿಗಳಿಗೆ ಆಕರ್ಷಣೆ. ಹೀಗಾಗಿ ಇದು ಶವದಂತೆ ದುರ್ನಾತ ಬೀರುತ್ತದೆ ಎನ್ನುವುದು ಸಸ್ಯವಿಜ್ಞಾನಿಗಳ ತರ್ಕ. ಇದರ ವಾಸನೆಗೆ ಹೂವು ಸೂಸುವ ಡೈಮೀಥೈಲ್ ಆಲಿಗೋ ಸಲ್ಫೈಡ್ ಎನ್ನುವ ರಾಸಾಯನಿಕಗಳು ಕಾರಣವಂತೆ. ಇಂತಹ ರಾಸಾಯನಿಕಗಳು ಕೊಳೆತ ಈರುಳ್ಳಿಯಿಂದಲೂ ಬರುತ್ತವೆ.
ಯಾವಾಗ ಪರಿಚಯ?
ಕಗ್ಗತ್ತಲ ಕಾಡುಗಳಲ್ಲಿ ಬೆಳೆಯುವ ಈ ಶವಗಂಧಿಯನ್ನು ಮೊದಲು ಪರಿಚಯಿಸಿದ ಖ್ಯಾತಿ ಎಡ್ವರ್ರೊ ಬುಕಾರಿ ಎನ್ನುವ ಸಸ್ಯಶಾಸ್ತ್ರಿಗೆ ಸಲ್ಲುತ್ತದೆ. 1877ರಲ್ಲಿ ಸುಮಾತ್ರಾದ ಮಳೆಕಾಡುಗಳಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುವ ವೇಳೆ ಈತನಿಗೆ ಈ ಗಿಡ ಕಾಣಿಸಿತು. ಇದರ ಗೆಡ್ಡೆಗಳನ್ನೂ, ಬೀಜಗಳನ್ನೂ ಸಂಗ್ರಹಿಸಿದ ಬುಕಾರಿ ಅವುಗಳನ್ನು ಬೆಳೆಸಲೆಂದು ತನ್ನ ದೇಶ ಇಟಲಿಯ ಮಾರ್ಕೀಜೀಗೆ ಕಳಿಸಿದ. ದುರದೃಷ್ಟವಶಾತ್, ಈತ ಕಳಿಸಿದ ಗೆಡ್ಡೆಗಳನ್ನು ಬಂದರು ಅಧಿಕಾರಿಗಳು ದೇಶದೊಳಗೆ ಕೊಂಡೊಯ್ಯಲು ಬಿಡಲೇ ಇಲ್ಲ. ಅದು ಹೇಗೋ ಕೆಲವು ಬೀಜಗಳು ಉಳಿದುಕೊಂಡವು. ಇವುಗಳನ್ನೇ ಜಾಗ್ರತೆಯಿಂದ ಬೆಳೆಸಿದ ನಂತರ, ಸಸಿಗಳನ್ನು ಇಂಗ್ಲೆಂಡಿನ ಕ್ಯೂ ಸಸ್ಯೋದ್ಯಾನಕ್ಕೆ ಕಳಿಸಿದ. ಇವುಗಳ ಸಂತಾನ ಈಗಲೂ ಅಲ್ಲಿ ಬೆಳೆಯುತ್ತಿವೆ. ಪ್ರತಿ ಬಾರಿ ಹೂ ಬಿಟ್ಟಾಗಲೂ ತಮ್ಮ ದುರ್ನಾತ ಹಾಗೂ ಗಾತ್ರದಿಂದಲೇ ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ನಾತವಷ್ಟೆ ಅಲ್ಲ ವಿಶೇಷ!
ದುರ್ನಾತವಷ್ಟೆ ಅಲ್ಲ, ಬಿಸಿಯನ್ನೂ ಮುಟ್ಟಿಸುತ್ತದೆ ಈ ಹೂವು. ಸುತ್ತಲಿನ ತಾಪಕ್ಕಿಂತಲೂ ಸುಮಾರು ಹತ್ತರಿಂದ ಹದಿನೈದು ಡಿಗ್ರಿ ಹೆಚ್ಚು ಕಾವು ಈ ಹೂವಿನ ಸುತ್ತಲೂ ಇರುತ್ತದೆ. ಇಷ್ಟೊಂದು ಬಿಸಿಯೇರುವುದೇತಕ್ಕೆ? ಇದೊಂದು ಕುತೂಹಲ. ಬುಕಾರಿ ಈ ಶವಗಂಧಿಯನ್ನು ಪತ್ತೆ ಮಾಡುವುದಕ್ಕೂ ನೂರು ವರ್ಷಗಳ ಹಿಂದೆಯೇ ಇದರ ಸಂಬಂಧಿ ಗೆಡ್ಡೆಗಿಡಗಳ ಹೂಗಳು ಬಿಸಿಯೇರುತ್ತವೆ ಎಂದು ಸುಪ್ರಸಿದ್ಧ ವಿಜ್ಞಾನಿ ಲಮಾರ್ಕ್ ಗುರುತಿಸಿದ್ದ. “ನೀರನ್ನು ಕುದಿಸುವಷ್ಟು’ ಶಾಖ ಹುಟ್ಟುತ್ತದೆ ಎಂದು ಆತ ವಿವರಿಸಿದ್ದ. ನೀರು ಕುದಿಯುತ್ತದೆಯೋ ಇಲ್ಲವೋ, ಬೆವರಿಳಿಸುವಷ್ಟು ಉಷ್ಣವನ್ನಂತೂ ಇದು ಹೊರಸೂಸುತ್ತದೆ. ಸುತ್ತಲೂ 25 ಡಿಗ್ರಿ ಸೆಲ್ಶಿಯಸ್ ಉಷ್ಣತೆ ಇದ್ದರೆ ಹೂವಿನ ಬಳಿ 35-38 ಡಿಗ್ರಿಯವರೆಗೆ ಉಷ್ಣತೆ ಹೆಚ್ಚಿರುತ್ತದೆ.
ಈ ಬಿಸಿಯೇಕೆ?
ಹೂವಿನ ಶಿರ ಹಾಗೂ ಬುಡದಲ್ಲಿ ಶಾಖ ಹೆಚ್ಚು
ಇದಕ್ಕೆ ತಕ್ಷಣಕ್ಕೆ ಉತ್ತರವಿಲ್ಲ. ಸುವರ್ಣಗೆಡ್ಡೆಯ ಸಂಬಂಧಿ ಸಸ್ಯಗಳ ಹೂಗಳಷ್ಟೆ ಉಷ್ಣ ಹುಟ್ಟಿಸುವುದಿಲ್ಲ. ಉಷ್ಣಜನನ ಕ್ರಿಯೆಯನ್ನು ಕೆಸರಿನ ಕಮಲ (ನೆಲುಂಬೋ ನ್ಯೂಸಿಫೆರಾ) ದಲ್ಲೂ ಕಾಣಬಹುದು. ತಣ್ಣಗಿನ ರಾತ್ರಿಯಲ್ಲಿ ಇದರ ಹೂಗಳು ಬೆಚ್ಚಗೆ ಇರುತ್ತವೆ. ಸುತ್ತಲಿನ ವಾತಾವರಣಕ್ಕಿಂತಲೂ ಸುಮಾರು ಹತ್ತು ಡಿಗ್ರಿ ಹೆಚ್ಚು ಬೆಚ್ಚಗೆ ಇರುತ್ತವೆ ಎಂದು ಗುರುತಿಸಿದ್ದಾರೆ. ಇದೇ ರೀತಿಯಲ್ಲಿ ಬೇರೆ, ಬೇರೆ ಸಸ್ಯವರ್ಗಕ್ಕೆ ಸೇರಿದ ಹತ್ತಾರು ಗಿಡಗಳ ಹೂಗಳು ಬಿಸಿಯೇರುತ್ತವೆ. ಆದರೆ ಅ. ಟೈಟಾನಮ್ ಗೇಕೆ ಬೇಕು ಈ ಕಾವು?
ಕೀಟಗಳನ್ನು ಆಕರ್ಷಿಸುವುದಕ್ಕೆ ಇರಬಹುದೇ?
ಇದು ಸಹಜ ಊಹೆ. ಹೂ ಆಕಾರ, ಬಣ್ಣ, ಪರಿಮಳವೆಲ್ಲವೂ ಪರಾಗಸ್ಪರ್ಷ ಕ್ರಿಯೆಯನ್ನು ಅನುಕೂಲಿಸುವ ರೀತಿಯಲ್ಲೇ ಎಲ್ಲ ಹೂಗಳಲ್ಲೂ ವಿಕಾಸವಾಗಿರುವುದರಿಂದ ಸಹಜವಾಗಿಯೇ ಶಾಖೋತ್ಪತ್ತಿ ಗುಣವೂ ಕೀಟಗಳನ್ನು ಆಕರ್ಷಿಸಲೆಂದೇ ಇರಬೇಕು ಎಂದು ಊಹಿಸಲಾಗಿದೆ. ಅಥವಾ ತನ್ನ ಬಳಿ ಬಂದ ಕೀಟಗಳನ್ನು ಬೆಚ್ಚಗಿಡುವುದಕ್ಕಾಗಿಯೂ ಇರಬಹುದು. ದುಂಬಿಗಳಿಗೆ ಇಂತಹ ಹೂಗಳು ಬಹಳ ಇಷ್ಟ. ಅ. ಟೈಟಾನಮ್ ಶಾಖೋತ್ಪತ್ತಿ ಮಾಡುವುದಕ್ಕೆ ಇದೇ ಕಾರಣವೆನ್ನುವುದು ಇತ್ತೀಚೆಗಷ್ಟೆ ಬಯಲಾಗಿದೆ.
ವಾತಾಯನಕ್ಕೆ ಬೇಕು ಈ ಶಾಖ!
ಜರ್ಮನಿಯ ಬಾನ್ ವಿಶ್ವವಿದ್ಯಾನಿಲಯದ ಸಸ್ಯವಿಜ್ಞಾನಿ ವಿಲ್ಹೆಮ್ ಬಾರ್ತಲಾಟ್ ರವರ ವಾದ ಇದು. ತಮ್ಮ ಸಸ್ಯೋದ್ಯಾನದಲ್ಲಿ ಒಮ್ಮೆಲೇ ಅರಳಿದ ಮೂರು ಶವಗಂಧಿ ಹೂಗಳನ್ನು ಅಧ್ಯಯನ ಮಾಡಿರುವ ಇವರು ಈ ಹೂಗಳು ಸೃಷ್ಟಿಸುವ ಉಷ್ಣತೆಯಲ್ಲಿನ ವ್ಯತ್ಯಾಸ ಗಾಳಿಯಲ್ಲಿ ಸಂಚಲನೆಯನ್ನುಂಟು ಮಾಡುತ್ತದೆ. ತನ್ಮೂಲಕ ಹೂವಿನ ದುರ್ನಾತ ಎತ್ತರದ ಮರಗಳ ಕೌದಿಗೆಯನ್ನೂ ದಾಟಿ ಪಸರಿಸಲು ನೆರವಾಗುತ್ತದೆ. ಹಾಗೆಯೇ ನೊಣಗಳನ್ನೂ, ದುಂಬಿಗಳನ್ನೂ ಸೆಳೆಯುತ್ತದೆ ಎನ್ನುತ್ತಾರೆ.
ಅಷ್ಟು ಶಾಖ ಹುಟ್ಟುತ್ತದೆಯೇ?
ಮರಗಳಿಂದ ಮೇಲೆ ವಾಸನೆ ಹರಿಯಲು ಅನುವಾಗುವ ವಾತಾಯನ ಹೀಗಾಗುತ್ತದೆ
ಇದೇ ಅನುಮಾನದಿಂದ ವಿಲ್ಹೆಮ್ ಬಾರ್ತಲಾಟ್ ಈ ಹೂಗಳಿಂದ ಸೂಸುವ ಇನ್ಫ್ರಾರೆಡ್ ಕಿರಣಗಳ ಚಿತ್ರಗಳನ್ನು ಎರಡು ನಿಮಿಷಕ್ಕೊಮ್ಮೆ ತೆಗೆದು ಪರಿಶೀಲಿಸಿದ್ದಾರೆ. ಉಷ್ಣದ ಕಿರಣಗಳ ಪ್ರಖರತೆಯನ್ನು ಈ ಚಿತ್ರಗಳಲ್ಲಿ ಕಾಣಬಹುದು. ಇದರ ಪ್ರಕಾರ ಹೂಗಳು ರಾತ್ರೆ ಸುಮಾರು ಎಂಟು ಗಂಟೆಯ ವೇಳೆಗೆ ಬಿಸಿಯೇರಲು ಆರಂಭಿಸಿದರೆ ನಡುರಾತ್ರಿ ಎರಡು ಗಂಟೆಯ ಹೊತ್ತಿಗೆ ಗರಿಷ್ಟ ಉಷ್ಣತೆಯನ್ನು ತಲುಪಿ ಅನಂತರ ತಣ್ಣಗಾಗಲು ಆರಂಭಿಸುತ್ತವೆ. . ಇದರೊಳಗಿರುವ ಗಂಡು ಹೂಗಳಷ್ಟೆ ಬಿಸಿಯಾಗುತ್ತವೆಂದು ಈ ಮೊದಲು ಊಹಿಸಲಾಗಿತ್ತು. ಆದರೆ ಬಾರ್ತಲಾಟ್ ರವರ ಚಿತ್ರಗಳು ಹೂವಿನ ತುಟ್ಟತುದಿಯೇ ಶಾಖ ಪರಾಕಾಷ್ಟೆಯಲ್ಲಿರುವ ಭಾಗವೆಂದು ತೋರಿಸಿದೆ. ಹೂವಿನ ಬುಡದಲ್ಲಿ ಶಾಖ ಕಡಿಮೆ. ಇದೇ ವೇಳೆಯಲ್ಲಿಯೇ ದುರ್ನಾತವೂ ಸೂಸುತ್ತದೆನ್ನುವುದು ಕಾಕತಾಳೀಯವಲ್ಲ ಈ ಹೊತ್ತಿನಲ್ಲಿ ಗಾಳಿ ತಣಿದ ಫಲವಾಗಿ ನೆಲಕ್ಕೇ ಆತುಕೊಂಡಂತೆ ಇರುತ್ತದೆಯೇ ಹೊರತು ಮೇಲೇರುವುದಿಲ್ಲ. ಹೂವು ಸುಮಾರು 2 ರಿಂದ 3 ವಾಟ್ ನಷ್ಟು ಉಷ್ಣವನ್ನು ಪ್ರತಿ ಸೆಕೆಂಡಿಗೆ ಉತ್ಪಾದಿಸುತ್ತದೆ. ಅಂದರೆ ಐದರಿಂದ ಏಳು ಯೂನಿಟ್ ವಿದ್ಯುತ್ ನೀಡುವ ಶಾಖದಷ್ಟು ಉಷ್ಣ ಇಡೀ ಹೂವಿನಿಂದ ಉತ್ಪಾದನೆಯಾಗುತ್ತದೆ. ತಣ್ಣಗಿನ ಗಾಳಿಯನ್ನು ಬಿಸಿಯಾಗಿಸುವ ಹೂಗಳು ಕುಲುಮೆಯ ಚಿಮಣಿಗಳಂತೆ ಬಿಸಿಗಾಳಿಯನ್ನು ಮೇಲೆ ಕೊಂಡೊಯ್ಯುತ್ತವೆ. ಈ ಹೂಗಳ ಎತ್ತರವೂ ಇದಕ್ಕೆ ನೆರವಾಗುತ್ತದೆಯಷ್ಟೆ. ತನ್ಮೂಲಕ ಹೂವಿನ ದುರ್ಗಂಧ ಎತ್ತರದ ಮರಗಳ ಕೌದಿಗೆಯನ್ನೂ ದಾಟಬಲ್ಲುದು. ಅಲ್ಲೆಲ್ಲೋ ಇರುವ ಕೀಟಗಳನ್ನು ಸೆಳೆಯಬಲ್ಲುದು.
ಎಷ್ಟು ಹೊತ್ತು ಹೀಗೆ ಬಿಸಿಯಾಗಿರಬಲ್ಲದು?
ಅಮಾರ್ಫೋಫಾಲಸ್ ಟೈಟಾನಸ್ ನ ಹೂವುಗಳು ಮೂರ್ನಾಲ್ಕು ವರ್ಷಕ್ಕೊಮ್ಮೆ ಅರಳುತ್ತವೆ. ಅರಳುವುದು ಎಷ್ಟು ಅಪರೂಪವೋ, ಅಷ್ಟೇ ಶೀಘ್ರವಾಗಿ ಮುದುಡಿಯೂ ಬಿಡುತ್ತವೆ. ಹೆಚ್ಚೆಂದರೆ ಒಂದು ದಿನವಷ್ಟೆ ಇದು ಉಳಿದಿರಬಲ್ಲುದು. ಅನಂತರ ಗಾಢವಾದ ದುರ್ನಾತವನ್ನು ಸೂಸುತ್ತಾ ಶವದಂತೆಯೇ ಕಂದುಗಪ್ಪಾಗಿ ಮುದುಡುತ್ತದೆ. ಆದರೆ ಈ ಬಿಸಿಯೇರುವುದು ಎರಡು ಹಂತದಲ್ಲಿ ಆಗುತ್ತದೆ. ಹೂವು ಬಾಳುವ ಎರಡು ದಿನದಲ್ಲಿ ಮೊದಲನೆಯ ರಾತ್ರಿ ಹೆಣ್ಣು ಹೂಗಳನ್ನು ಹೊತ್ತಿರುವ ಕೇಂದ್ರಭಾಗ ಬಿಸಿಯಾಗುತ್ತದೆ. ಇದು ಬಿಸಿಯಾಗುವಾಗಲೇ ಕೆಟ್ಟ ವಾಸನೆಯೂ ಹೊರಡುತ್ತದೆ. ಮರುದಿನ ರಾತ್ರಿಯೂ ಹೂವು ಬಿಸಿಯಾಗುತ್ತದೆ. ಆದರೆ ಈ ಬಾರಿ ಗಂಡು ಹೂಗಳಿರುವ ಭಾಗದಲ್ಲಿ. ಉಷ್ಣತೆ ಮಾತ್ರ ತುಸು ಕಡಿಮೆ. ಬಹುಶಃ ಮೊದಲನೆಯ ದಿನ ಕೀಟಗಳನ್ನು ಆಕರ್ಷಿಸಲು ಬಿಸಿಯೇರುತ್ತಿರಬೇಕು. ಎರಡನೆಯ ದಿನ ಭೇಟಿಗೆ ಬಂದು ಹೂವಿನ ರಕ್ಷಣೆಯಲ್ಲೇ ಉಳಿದುಕೊಂಡ ಕೀಟಗಳನ್ನು ಬೆಚ್ಚಗಿಡಲು ಇರಬೇಕು ಎಂದು ಬಾರ್ತಲಾಟ್ ಊಹಿಸಿದ್ದಾರೆ.
ಬೇರೆ ಹೂವುಗಳಲ್ಲಿ ಶಾಖೋತ್ಪತ್ತಿಯ ಕಾರಣಗಳು ಭಿನ್ನವಾಗಿರಬಹುದು. ಅವೇನು ಎಂದು ಇನ್ನು ಮುಂದೆ ತಿಳಿಯಬೇಕು. ಅಷ್ಟೆ.
ಹೆಚ್ಚಿನ ಓದಿಗೆ:
- Bartholott, W., et al,. A torch in the rain forest: thermogenesis of the Titan arum (Amorphophallus titanum), Plant Biology, Vol 11., pp 499-505, 2009, doi 10.1111/j.1438-8677.2008.00147.x
- Anthony L. Moore et al., Unraveling the Heater: New Insights into the Structure of the Alternative Oxidase, Annu. Rev. Plant Biol. 2013. 64:637–63, doi: 10.1146/annurev-arplant-042811-105432
- Lamprecht, I., et al., Flower Ovens: Thermal investigations on heat producing plants, Thermochimica Acta, 391, pP 107-118, 2002,
- Nadja Korotkova & Wilhelm Barthlott (2009) On the thermogenesis of the Titan arum (Amorphophallus titanum), Plant Signaling & Behavior, 4:11, 1096-1098, DOI: 10.4161/psb.4.11.9872
ನಿಮ್ಮದೊಂದು ಉತ್ತರ