ಕೀಟವೋಡಿಸುವ ಕೆಸುವಿನ ಗೆಡ್ಡೆ

ಕೀಟವೋಡಿಸುವ ಕೆಸುವಿನ ಗೆಡ್ಡೆ

ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ಸಂಶೋಧನಾಲಯದ ವಿಜ್ಞಾನಿ ಯಲ್ಲಪ್ಪ ರಾಜಶೇಖರ್ ಮತ್ತು ಸಂಗಡಿಗರ ಪ್ರಕಾರ ಕರ್ನಾಟಕದಲ್ಲಿ ಬೆಳೆಯುವ ಕೆಸವಿನ ದಂಟಿನ ಗೆಡ್ಡೆಗಳಲ್ಲಿ ಕೀಟಗಳನ್ನು ದೂರವಿಡುವ ಶಕ್ತಿಯಿದೆ.

colocasia

ಕೆಸುವಿನ ದಂಟು

ಕರಾವಳಿಯಲ್ಲಿ ಹೆಚ್ಚು ಬಳಕೆಯಾಗುವ ಕೆಸುವಿನ ದಂಟು ಹಾಗೂ ಕೆಸುವಿನ ಗೆಡ್ಡೆಗಳ ಆಹಾರ ಗುಣಗಳ ಬಗ್ಗೆ ಹೇಳಬೇಕಿಲ್ಲ. ಕರಾವಳಿಗರು ಇದರ ಎಲೆಯಿಂದ ಮಾಡುವ ‘ಪತ್ರೊಡೆ’ ಆ ಪ್ರದೇಶವನ್ನು ಪ್ರತಿನಿಧಿಸುವ ತಿನಿಸು. ಹಾಗೆಯೇ ಗೆಡ್ಡೆಗಳೂ ವಿಶೇಷ ಆಹಾರ. ಗೆಡ್ಡೆಗಳಲ್ಲಿರುವ ಪಿಷ್ಠ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯನ್ನು ಉಲ್ಬಣಿಸದೆಯೇ ಶಕ್ತಿಯೂಡಿಸುತ್ತದೆ ಎನ್ನುವುದು ಪೌಷ್ಠಿಕ ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಕೊಲೊಕೇಶಿಯ ಎಸ್ಕುಲೆಂಟಾ ಎಂದು ಹೆಸರಿಸಿರುವ  ಈ ಗಿಡದಲ್ಲಿ ಕೀಟಗಳನ್ನು ದೂರವಿಡುವ ರಾಸಾಯನಿಕಗಳೂ ಇವೆ ಎನ್ನುತ್ತಾರೆ ರಾಜಶೇಖರ್.

ಸಸ್ಯಮೂಲದ ಹಲವು ರಾಸಾಯನಿಕಗಳನ್ನು ಕೀಟನಾಶ ಮಾಡಲು ಬಳಸಲಾಗುತ್ತಿದೆ. ಉದಾಹರಣೆಗೆ, ಬೇವಿನಲ್ಲಿರುವ ಅಜಾಡಿರಾಕ್ಟಿನ್. ಇದನ್ನು ಇತರೆ ವಸ್ತುಗಳ ಜೊತೆಗೆ ಬೆರೆಸಿ ಕೀಟಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಬಯಲುಗಾಡುಗಳಲ್ಲಿ ಕಾಣಬರುವ ಮಾಕಳಿಬೇರಿ (ಡೆಕಾಲೆಪಿಸ್ ಹ್ಯಾಮಿಲ್ಟೋನಿ) ನಲ್ಲಿಯೂ ಕೀಟಗಳನ್ನು ಬೆದರಿಸುವ ರಾಸಾಯನಿಕಗಳಿವೆಯೆಂದು ಗುರುತಿಸಲಾಗಿದೆ. ಸಾಧಾರಣ ಸೊಳ್ಳೆಗಳನ್ನು ದೂರವಿಡಲು ಬಳಸುವ ಸ್ಪ್ರೇಗಳಲ್ಲಿ ಚೆಂಡುಮಲ್ಲಿಗೆ ಹೂವಿನಲ್ಲಿರುವ ಪೈರೆತ್ರಿನ್ ರಾಸಾಯನಿಕವನ್ನು ಉಪಯೋಗಿಸುತ್ತಾರೆ.

ಇವೆಲ್ಲವೂ ಇರುವಾಗ ಹೊಸ ರಾಸಾಯನಿಕವೇಕೆ? ರಾಜಶೇಖರ್ ಅವರ ಪ್ರಕಾರ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ಇವ್ಯಾವುವೂ ಉಪಯುಕ್ತವಲ್ಲ.  ಪೈರೆತ್ರಿನ್ ಆಹಾರ ವಸ್ತುಗಳಲ್ಲಿ ಬಳಸಲು ಯೋಗ್ಯವಲ್ಲ. ಬೇವಿನ ರಾಸಾಯನಿಕ ಗಾಳಿಯಲ್ಲಿ ಆವಿಯಾಗದೆ ಇರುವುದರಿಂದ ಧಾನ್ಯಗಳಲ್ಲಿ ಬೆರೆಸಿಟ್ಟರೂ ನಿಷ್ಪ್ರಯೋಜಕ. ಹೀಗಾಗಿ ಧಾನ್ಯಗಳನ್ನು ಕೂಡಿಡುವುದಕ್ಕೆ ಸುಲಭವಾಗಿ ಆವಿಯಾಗುವಂತಹ ಕೀಟನಾಶಿಯ ಅವಶ್ಯಕತೆ ಇದೆ. ಇದಕ್ಕಾಗಿ ನಡೆದಿರುವ ಶೋಧಗಳಲ್ಲಿ ಕೆಸುವಿನ ದಂಟಿನ ರಾಸಾಯನಿಕವೂ ಕೂಡಿದೆ.

colocasia_esculenta_dsc07801

ಕೆಸುವಿನ ಗೆಡ್ಡೆ

ಕೆಸುವಿನ ಗೆಡ್ಡೆಯಿಂದ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರತ್ಯೇಕಿಸಿದ ಘಟಕಗಳಲ್ಲಿ ಮೆಥನಾಲ್ ನಲ್ಲಿ ಕರಗುವ ವಸ್ತುವೊಂದು ಅತಿ ಹೆಚ್ಚಿನ ಕೀಟಾಹಾರಿ ಗುಣವನ್ನು ತೋರಿಸಿತು. ಇದನ್ನು ಪ್ರತ್ಯೇಕಿಸಿ, ಶುದ್ಧಗೊಳಿಸಿದ ರಾಜಶೇಖರ್ ತಂಡ ಅದರ ರಚನೆಯನ್ನೂ ಪತ್ತೆ ಮಾಡಿ, ಅದು 2,3-ಡೈಮೀಥೈಲ್ ಮ್ಯಾಲೆಯಿಕ್ ಅನ್ ಹೈಡ್ರೈಡ್ ಎಂದು ಗುರುತಿಸಿದೆ. ಇದು ಕೂಡಿಟ್ಟ ಧಾನ್ಯಗಳನ್ನು ಸಾಮಾನ್ಯವಾಗಿ ಕಾಡುವ ನೊಣ, ಜಿರಲೆ, ಹಿಟ್ಟಿನ ಹುಳಗಳನ್ನು ಕೃತಕ ರಾಸಾಯನಿಕ ಮೀಥೈಲ್ ಬ್ರೋಮೈಡ್ ಹಾಗೂ ಫಾಸ್ಫೀನ್ ನಷ್ಟೆ ಸಮರ್ಥವಾಗಿ ಕೊಲ್ಲಬಲ್ಲದು. ಒಂದೇ ರಾಸಾಯನಿಕ ಹಲವು ಕೀಟಗಳನ್ನು ಕೊಲ್ಲುವುದು ನಿಜಕ್ಕೂ ಲಾಭಕಾರಿ. ಕೆಸುವಿನ ಗೆಡ್ಡೆಯ  ಈ ಅಂಶವನ್ನು ಪ್ರಯೋಗಿಸಿದ ಎರಡೇ ದಿನಗಳಲ್ಲಿ ಧಾನ್ಯಗಳಲ್ಲಿದ್ದ ಕೀಟಗಳ ಸಂಖ್ಯೆ ಅರೆಪಾಲಾಯಿತು. ಹಾಗೆಯೇ, ಇದು ಕೀಟಗಳ ಮರಿ (ಹುಳು) ಗಳನ್ನೂ ಬೆಳೆಯಗೊಡಲಿಲ್ಲವಂತೆ. ಇಷ್ಟಾದರೂ, ಈ ರಾಸಾಯನಿಕ ಬೆರೆಸಿದ ಬೀಜಗಳು ಯಾವುದೇ ಆತಂಕವಿಲ್ಲದೆ ನೂರಕ್ಕೆ ತೊಂಬತ್ತು ಪಾಲು ಮೊಳೆತವು. ಅರ್ಥಾತ್, ಕೀಟಗಳನ್ನು ಕೊಲ್ಲುವುದಲ್ಲದೆ, ಬೀಜಗಳಿಗೆ ಇದರಿಂದ ಯಾವ ಹಾನಿಯೂ ಇಲ್ಲ.

ಮೆಕ್ಕೆಜೋಳವನ್ನು ಕಾಡುವ ಹುಳು, ಗೋದಿಹಿಟ್ಟನ್ನು ಹಾಳುಗೆಡವುವ ಹುಳು, ನೊಣ ಮತ್ತು ಜಿರಲೆಗಳ ಕಾಟವನ್ನು ತಡೆಯಲು ಇದು ಶಕ್ತವೇನೋ ಹೌದು. ಆದರೆ ಆಹಾರದಲ್ಲಿ ಉಪಯೋಗಿಸಿದರೆ ಅಪಾಯವಿಲ್ಲವೇ? ಎಂದಿರಾ. ಇದನ್ನು ಪಡೆದ ಗೆಡ್ಡೆಯನ್ನು ನಾವು ಆಹಾರವಾಗಿ ಬಳಸುವುದು ಇದ್ದೇ ಇದೆ. ಹೀಗಾಗಿ ಆ ಗೆಡ್ಡೆಯಲ್ಲಿರುವ ರಾಸಾಯನಿಕ ನಮಗಂತೂ ಅಪಾಯಕಾರಿಯಾಗಿರಲಿಕ್ಕಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ.

ಹಾಗಿದ್ದರೆ ಇದು ಯಾವಾಗ ಬಳಕೆಗೆ ಸಿಗಬಹುದು ಎನ್ನುವುದು ಮುಂದಿನ ಪ್ರಶ್ನೆ. ಇನ್ನು ಇದರ ಕ್ಷಮತೆ ಹಾಗೂ ಬಳಕೆಯ ವಿಧಾನಗಳು ಹದಗೊಳ್ಳಬೇಕು. ಅನಂತರವಷ್ಟೆ ಇದರ ಸಾರ್ವತ್ರಿಕೆ ಬಳಕೆಯ ಸುದ್ದಿ. ಅದಕ್ಕೆ ಇನ್ನೂ ಹಲವು ತಿಂಗಳೋ, ವರ್ಷಗಳೋ ಕಾಯಬೇಕಷ್ಟೆ.

ಆಕರ:

Rajashekar, Y. et al. 2, 3-Dimethylmaleic anhydride (3, 4-Dimethyl-2, 5-furandione): A

plant derived insecticidal molecule from Colocasia esculenta var. esculenta (L.) Schott. Sci. Rep. 6, 20546; published 3rd February 2016.  doi: 10.1038/srep20546 (2016).

 

Published in: on ಫೆಬ್ರವರಿ 4, 2016 at 5:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜೀಕಾ ವೈರಸ್. ಏನಿದು?

ಜೀಕಾ ಎನ್ನುವ ಹೆಸರು ಕೇಳಿ ಟಾಟಾ ಕಂಪೆನಿ ತನ್ನ ಹೊಸ ಕಾರಿಗೆ ಇಟ್ಟಿದ್ದ  ಇದೇ ಹೆಸರನ್ನು ಬದಲಿಸಲಿದೆ. ಬ್ರೆಜಿಲ್್ ದೇಶದಲ್ಲಿ ಹರಡಿರುವ ಜೀಕಾ ವೈರಸ್ ಉಂಟು ಮಾಡಿರುವ ಭೀತಿ ಇದು. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಸೋಂಕನ್ನು ಜಾಗತಿಕ ಸಾಂಕ್ರಾಮಿಕ ರೋಗ  ಎಂದು ವರ್ಗೀಕರಿಸಿದೆ. ಹಾಗೆಯೇ ಭಾರತವೂ ಕೂಡ ಸದ್ಯಕ್ಕೆ ಜೀಕಾ ಧಾಂದಲೆ ನಡೆಸುತ್ತಿರುವ ರಾಷ್ಟ್ರಗಳಿಗೆ ಪ್ರವಾಸ ಹೋಗುವ ಬಗ್ಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ, ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಜೀಕಾ ಸೋಂಕು ಹತ್ತಿದ ಬಸುರಿಯರಿಗೆ ಹುಟ್ಟುವ ಮಗು ಮೈಕ್ರೊಕೆಫಾಲಿ ಎನ್ನುವ ದೋಷವನ್ನು ಹೊತ್ತು ಜನಿಸಬಹುದೆನ್ನುವುದೂ ಈ ಭೀತಿಗೆ ಕಾರಣ. ಮೈಕ್ರೊಕೆಪಾಲಿ ಮಾರಕವಲ್ಲ. ಮಗು ಬದುಕು ಉಳಿಯುತ್ತದೆ. ಆದರೆ ಅದರ ಮಿದುಳಿನ ಕ್ಷಮತೆ ಕಡಿಮೆಯಾಗಬಹುದು. ಸಾಮಾನ್ಯ ಬದುಕಿಗೆ ತೊಂದರೆ ಆಗದಿದ್ದರೂ, ಬೌದ್ಧಿಕ ಕೊರತೆ ಕಾಣಿಸಬಹುದು. ಇದೋ ಈ ಭೀತಿಯನ್ನುಂಟು ಮಾಡಿದ ಜೀಕಾ ವೈರಸ್ ಬಗ್ಗೆ ಇತ್ತೀಚೆಗೆ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಅನುವಾದ  ನಿಮಗಾಗಿ.

ಜೀಕಾ ವೈರಸ್ ಎಲ್ಲಿಂದ ಬಂತು?

zika-virus

ಜೀಕಾ ವೈರಸ್ ಸ್ವರೂಪ

1947ನೇ ಇಸವಿಯಲ್ಲಿ ಜೀಕಾ ವೈರಸ್ ಶೋಧವಾಯಿತು. 1952ರಲ್ಲಿ ಮೊತ್ತ ಮೊದಲ ಬಾರಿಗೆ ಇದರ ವಿವರಗಳನ್ನು ಪ್ರಕಟಿಸಲಾಗಿತ್ತು. ಈ ವೈರಸ್ ಆಫ್ರಿಕಾ ಹಾಗೂ ಆಗ್ನೇಯ ಏಶಿಯಾದಲ್ಲಿ ಇದ್ದದ್ದು ತಿಳಿದಿದ್ದರೂ, ಕಳೆದ ದಶಕದ ವರೆಗೆ ಕೇವಲ ಹದಿನೈದು ಕೇಸುಗಳ ಉಲ್ಲೇಖವಷ್ಟೆ ಇದ್ದುವು. 2007ರಲ್ಲಿ ಮೈಕ್ರೊನೇಶಿಯಾ ಸಂಯುಕ್ತ ಸಂಸ್ಥಾನದ ದ್ವೀಪಗಳಲ್ಲೊಂದಾದ ಯಾಪ್ ನಲ್ಲಿ ಇದು ಸಾಂಕ್ರಾಮಿಕವಾಗಿ ಕಾಣಿಸಿಕೊಂಡಿತು. ಅಂದಿನಿಂದ ಶಾಂತಸಾಗರದ ವಿವಿಧ ದ್ವೀಪಗಳಲ್ಲಿ ಪಯಣಿಸಿದ  ಇದು ಕೊನೆಗೆ ಬ್ರೆಜಿಲ್ ತಲುಪಿತು. ಇಲ್ಲಿಂದ ಈ ವೈರಸ್ ಅತಿ ಶೀಘ್ರವಾಗಿ ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕ, ಮೆಕ್ಸಿಕೋ ಹಾಗೀ ಕೆರಿಬಿಯನ್ ದ್ವೀಪ ಸಮೂಹಗಳಿಗೆ ಹರಡಿದೆ.

ಈಗ ಇದು ಹೀಗೆ ವಿಸ್ಫೋಟಿಸಲು ಕಾರಣವೇನು?

ಈ ಹಿಂದೆಯೂ ಆಫ್ರಿಕಾ ಹಾಗೂ ಏಶಿಯಾದಲ್ಲಿ ಜೀಕಾ ವೈರಸ್ ನ ರೋಗ ಹರಡಿದ್ದಿರಬಹುದಾದರೂ ಅವು ಗಮನಕ್ಕೆ ಬಾರದೇ ಹೋದುವು. ವಿಜ್ಞಾನಿಗಳೂ ಇದರತ್ತ ಗಮನ ಹರಿಸಲಿಲ್ಲ. ಇಂದು ಕಾಣಿಸಿಕೊಂಡ ಬೃಹತ್ ಸೋಂಕು ಎಂದಾದರೊಂದು ದಿನ ಆಗಲೇಬೇಕಿತ್ತು. ಲ್ಯಾಟಿನ್ ಅಮೆರಿಕದಲ್ಲಿ ಹಳದಿ ಜ್ವರದ ಸೊಳ್ಳೆ ಎಂದೇ ಹೆಸರಾದ ಹಾಗೂ ಜೀಕಾ ವೈರಸ್ ಹರಡುವ ಪ್ರಮುಖ ಕೀಟ ಏಡಿಸ್ ಈಜಿಪ್ಟಿ ವ್ಯಾಪಕವಾಗಿದೆ. (ಇತ್ತೀಚೆಗೆ ಪ್ರಪಂಚದ ಹಲವೆಡೆ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಏಶಿಯಾದ ಟೈಗರ್ ಸೊಳ್ಳೆ ಏಡಿಸ್ ಆಲ್ಬೊಪಿಕ್ಟಸ್ ಕೂಡ ಇದರ ವಾಹಕವಿರಬಹುದೆಂಬ ಊಹೆ ಇದೆ). ಜೊತೆಗೆ ಅಮೆರಿಕದಲ್ಲಿ ಯಾರಿಗೂ ಇದನ್ನೆದುರಿಸುವ ರೋಗನಿರೋಧಕತೆ ಇರಲಿಲ್ಲ. ಪ್ರವಾಸಗಳು ಇದು ಹರಡಲು ನೆರವಾದವು. ಏಡಿಸ್ ಸೊಳ್ಳೆಗಳು ಕೆಲವು ನೂರು ಮೀಟರುಗಳಷ್ಟು ದೂರವಷ್ಟೆ ಪಯಣಿಸಬಲ್ಲುವು. ಆದರೆ ಜೀಕಾ ಸೋಂಕಿರುವ ಮನುಷ್ಯರು ಕಾರು, ಬಸ್ಸು, ರೈಲು, ವಿಮಾನಗಳನ್ನು ಹತ್ತಿ ಪ್ರವಾಸ ಮಾಡಿದಂತೆಲ್ಲ, ಇದು ದೇಶ ವಿದೇಶಗಳಿಗೆ ಹರಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ವೈರಸ್ ದೂರ, ದೂರಕ್ಕೂ ಹರಡಿದೆ.

ಜೀಕಾ ಯುರೋಪು ಮತ್ತು ಅಮೆರಿಕಾದಲ್ಲೂ ಹರಡೀತೇ?

ಯುರೋಪು ಹಾಗೂ ಅಮೇರಿಕದಲ್ಲಿ ಈಗಾಗಲೇ ಕೆಲವು ‘ಆಮದಾದ’ ಕೇಸುಗಳಿವೆ. ಈ ರೋಗಿಗಳು ಜೀಕಾ ಸೋಂಕಿರುವ ದೇಶಗಳಿಂದ ಪ್ರವಾಸ ಬಂದವರು. ಲ್ಯಾಟಿನ್ ಅಮೆರಿಕದಲ್ಲಿ ಈ ರೋಗದ ವ್ಯಾಪ್ತಿಯನ್ನು ಗಮನಿಸಿದರೆ ಇದು ನಿರೀಕ್ಷಿಸಿದ ಫಲಿತಾಂಶವೇ ಸರಿ.  ಸ್ಥಳೀಯವಾಗಿ ಏನಾದರೂ ಸೋಂಕು ಹರಡಬಹುದೇ? ವ್ಯಕ್ತಿಯಿಂದ ವ್ಯಕ್ತಿಗೆ ಸೊಳ್ಳೆಗಳು ಇದನ್ನು ಹರಡುತ್ತಿರಬಹುದೇ ಎನ್ನುವುದೇ ಪ್ರಮುಖ ಪ್ರಶ್ನೆ. ಈ ಸಾಧ್ಯತೆ ಖಂಡಿತ ಇದೆ. ದಕ್ಷಿಣ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಏಡಿಸ್ ಆಲ್ಬೊಪಿಕ್ಟಸ್ ಇದೆ. ಇದು ಉತ್ತರ ಯುರೋಪಿಗೂ ವಿಸ್ತರಿಸಬಹುದು. ಅಮೆರಿಕೆ ಸಂಯುಕ್ತ ಸಂಸ್ಥಾನದ ದಕ್ಷಿಣ ಹಾಗೂ ಪೂರ್ವ ರಾಜ್ಯಗಳಲ್ಲಿಯೂ ಏಡಿಸ್ ಈಜಿಪ್ಟಿ ಹಾಗೂ ಏಡಿಸ್ ಆಲ್ಬೊಪಿಕ್ಟಸ್ ಸೊಳ್ಳೆಗಳನ್ನು ಕಾಣಬಹುದು.

ಸೊಳ್ಳೆಗಳಿಂದ ಹರಡುವ ರೋಗಗಳ ಬಗೆಗಿನ ಈ ಹಿಂದಿನ ಅನುಭವಗಳ ಆಧಾರದ ಮೇಲೆ ಉಳಿದೆಡೆಗಳಿಗಿಂತ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕತೆ ಕಡಿಮೆಯಿರುತ್ತದೆಯೆಂದು ವಿಜ್ಞಾನಿಗಳ ನಿರೀಕ್ಷೆ. ಇತ್ತೀಚೆಗೆ ಫ್ಲಾರಿಡಾ, ಟೆಕ್ಸಾಸ್ ಹಾಗೂ ಹವಾಯಿ ರಾಜ್ಯಗಳಲ್ಲಿ ಕಾಣಿಸಿಕೊಂಡ ಡೆಂಘೀ ಜ್ವರ ಕೆಲವು ನೂರು ಜನರಿಗೆ ಖಾಯಿಲೆ ತಂದಿದೆಯಷ್ಟೆ. ಉತ್ತರ ಇಟಲಿಯಲ್ಲಿ 2007 ರಲ್ಲಿ ಕಾಣಿಸಿಕೊಂಡ ಸೊಳ್ಳೆಯಿಂದ ಹರಡುವ ಚಿಕುನ್ ಗುನ್ಯ ಖಾಯಿಲೆ (ಈ ಸೋಂಕನ್ನು ಭಾರತೀಯನೊಬ್ಬ ಹೊತ್ತು ತಂದಿದ್ದ) ಸುಮಾರು 197 ಜನರನ್ನು ತಾಕಿತಷ್ಟೆ. ಈ ದೇಶಗಳಲ್ಲಿ ಸೋಂಕಿನ ವ್ಯಾಪ್ತಿ ಕಡಿಮೆ ಇರುವುದಕ್ಕೆ ಒಂದು ಕಾರಣ ಇಲ್ಲಿಯ ಜನತೆ ದಿನದಲ್ಲಿ ಅತಿ ಕಡಿಮೆ ಸಮಯವನ್ನು ಮನೆಯಿಂದ ಹೊರಗಡೆ ಕಳೆಯುತ್ತಿರುವುದು ಇರಬಹುದು.

ಜೀಕಾ ಹುಟ್ಟಿನಿಂದಲೇ ಬರುವ ದೋಷಗಳನ್ನು ಹೆಚ್ಚಿಸುತ್ತಿದೆ ಎನ್ನುವುದು ಖಾತ್ರಿಯಾಗಿದೆಯೇ?

original_microcephaly

ಮೈಕ್ರೊಕೆಫಾಲಿ ಎಂದರೇನು?

ಇಲ್ಲ. ಆದರೆ ಜೀಕಾ ವೈರಸ್ ಬಾಧೆ ತೀವ್ರವಾಗಿರುವ ಬ್ರೆಜಿಲ್ ನಲ್ಲಿ ಇದಕ್ಕೆ ಪೂರಕವಾಗಿ ಸಾಂದರ್ಭಿಕ ಪುರಾವೆಗಳಿವೆ. ಇಲ್ಲಿ ಮೈಕ್ರೊಕೆಫಾಲಿ (ಸಣ್ಣತಲೆ) ಎನ್ನುವ ದೋಷವಿರುವ ಮಕ್ಕಳ ಹುಟ್ಟು ಹೆಚ್ಚಾಗಿದೆ. ಈ ದೋಷದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತವಾಗುವುದರಿಂದ ಸಾಮಾನ್ಯಕ್ಕಿಂತಲೂ ಕಡಿಮೆ ಗಾತ್ರದ ತಲೆ ಬೆಳೆಯುತ್ತದೆ. ಇದನ್ನು ಖಾತ್ರಿ ಮಾಡಿಕೊಳ್ಳಲು ಗರ್ಭಿಣಿ ಮಹಿಳೆಯರ ಮೇಲೆ ಕೈಗೊಂಡಿರುವ ಅಧ್ಯಯನದ ಫಲಿತಾಂಶಗಳು ಸಿಗಲು ಇನ್ನೂ ಹಲವು ತಿಂಗಳುಗಳಾಗಬಹುದು. ಕಳೆದ ಜೂನ್ ಮತ್ತು ಜುಲೈನಲ್ಲಿ ಇಲ್ಲಿನ ಗರ್ಭಿಣಿ ಮಹಿಳೆಯರನ್ನು ಅಲ್ಟ್ರಾಸೌಂಡ್ ಬಳಸಿ ಪರೀಕ್ಷಿಸುತ್ತಿದ್ದಾಗ ಮೈಕ್ರೊಕೆಫಾಲಿ ಸಂಖ್ಯೆ ಹೆಚ್ಚಿದ್ದದ್ದನ್ನು ಬ್ರೆಜಿಲ್ಲಿನ ವೈದ್ಯರು ಗಮನಿಸಿದ್ದರು. ಇದು ಇದ್ದಕ್ಕಿದ್ದ ಹಾಗೆ ಜೀಕಾ ರೋಗ ಹೆ್ಚ್ಚಾದ ಕೆಲವು ತಿಂಗಳ ನಂತರವಷ್ಟೆ. ಇಲ್ಲಿನ ಬಾಹಿಯಾದಲ್ಲಿರುವ ರಾಷ್ಟ್ರೀಯ ವಿವಿಯ ಗರ್ಭವಿಜ್ಞಾನ ತಜ್ಞ ಮಾನೋಯಿಲ್ ಸಾರ್ನೋ ಹೇಳುವ ಪ್ರಕಾರ ಈಗ ಕಾಣಿಸಿಕೊಳ್ಳುತ್ತಿರುವ ಮಿದುಳಿನ ದೋಷಗಳು ಸೈಟೊಮೆಗಾಲೊ ವೈರಸ್ ಹಾಗೂ ರುಬೆಲ್ಲಾ ವೈರಸ್ಸಿನಂತಹ ಇತರೆ ಸೋಂಕುಗಳುಂಟು ಮಾಡುವುದರಿಂದ ಭಿನ್ನವಾಗಿವೆ. ಕಳೆದ ಆಗಸ್ಟ್ ನಲ್ಲಿ ಈತನ ತಂಡ ಜೀಕಾ ಸೋಂಕಿರುವ ಗರ್ಭಿಣಿಯರ ಅಧ್ಯಯನವನ್ನು ಆರಂಭಿಸಿದೆ. ಇದರ ಫಲಿತಾಂಶ ಮುಂದಿನ ಬೇಸಗೆಯ ವೇಳೆಗೆ ದೊರೆಯಬಹುದು. ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಬೇರೆ ಕಡೆಗಳಲ್ಲಿಯೂ ಇಂತಹುದೇ ಅಧ್ಯಯನಗಳು ಆರಂಭವಾಗಿವೆ.

ವಿಜ್ಞಾನಿಗಳಿಗೆ ಈ ಬಗ್ಗೆ ಇರುವ ಇತರೆ ಪ್ರಶ್ನೆಗಳು ಯಾವುವು?

ಬಹಳಷ್ಟು ಪ್ರಶ್ನೆಗಳಿವೆ. ಯಾರಿಗೆ ಸೋಂಕಿದೆ, ಯಾರಿಗೆ ಇಲ್ಲ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಏಕೆಂದರೆ ವೈರಸ್ ಪತ್ತೆ ಮಾಡುವ ವಿಧಾನಗಳು ಪಕ್ವವಾಗಿಲ್ಲ. ರೋಗಿಯ ರಕ್ತದಲ್ಲಿ ವೈರಸ್ಸಿನ ಆರ್ ಎನ್ ಎ ಯ ಅವಶೇಷಗಳನ್ನು ಹುಡುಕುವುದು ಅತಿ ಖಚಿತವಾದ ಪತ್ತೆ ಪರೀಕ್ಷೆ. ಆದರೆ ಇವು ರೋಗಲಕ್ಷಣಗಳು ಕಾಣಿಸಿಕೊಂಡ ಒಂದು ವಾರದೊಳಗೆ ನಡೆದರೆ ಮಾತ್ರ ಫಲ ನೀಡುತ್ತವೆ. ಅನಂತರ ರಕ್ತದಲ್ಲಿರುವ ಪ್ರತಿಕಾಯ (ಆಂಟಿಬಾಡಿ) ಗಳನ್ನು ಪತ್ತೆ ಮಾಡಬಹುದು. ಆದರೆ ಸದ್ಯಕ್ಕೆ ಜೀಕಾ ವೈರಸ್ಸಿನ ಆಂಟಿಬಾಡಿಗಳನ್ನು ಪತ್ತೆ ಮಾಡುವ ಪರೀಕ್ಷೆಗಳು ಬ್ರೆಜಿಲ್ ಹಾಗೂ ಲ್ಯಾಟಿನ್ ಅಮೆರಿಕದ ಬಹುತೇಕ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವ ಡೆಂಘೀ ವೈರಸ್ಸಿನ ಆಂಟಿಬಾಡಿಗಳ ಜೊತೆಗೂ ಪ್ರತಿಕ್ರಿಯಿಸುತ್ತದೆ. ಈ ಪ್ರದೇಶಗಳ ಬಹುತೇಕ ವಯಸ್ಕರ ದೇಹದಲ್ಲಿ ಡೆಂಘೀ ಆಂಟಿಬಾಡಿಗಳು ಇದ್ದೇ ಇವೆ. ಹೀಗಾಗಿ ಮೈಕ್ರೊಕೆಫಾಲಿ ಇರುವ ಮಗುವಿಗೆ ಜನ್ಮ ನೀಡಿದ ತಾಯಿ ಬಸುರಿಯಾಗಿದ್ದಾಗ ಜೀಕಾದ ಸೋಂಕೇ ಇತ್ತೇ ಎನ್ನುವುದನ್ನು ತಿಳಿಯುವುದು ಕಷ್ಟವಾಗಿದೆ.

ಲೈಂಗಿಕ ಸಂಪರ್ಕದಿಂದ ಜೀಕಾ ಹರಡುತ್ತದೆಯೋ ಎನ್ನುವುದನ್ನು ಸಂಶೋಧಕರು ತಿಳಿಯಬೇಕಿದೆ. 2008ರಲ್ಲಿ ಆಫ್ರಿಕಾದಲ್ಲಿ ಈ ಸೋಂಕನ್ನು ಪಡೆದ ಅಮೆರಿಕೆಯ ವೈದ್ಯನೊಬ್ಬ ಅನಂತರ ತನ್ನ ಮಡದಿಗೆ ಇದನ್ನು ಸೋಂಕಿಸಿದ್ದ. ಇದೇ ಬಗೆಯಲ್ಲಿ ಲೈಂಗಿಕ ಸಂಪರ್ಕದಿಂದ ಸೋಂಕುಂಟಾಗಿರುವ ಮತ್ತೊಂದು ಘಟನೆ ಪಾಲಿನೇಶಿಯಾ ದ್ವೀಪಗಳಲ್ಲಿ 2013 ರಲ್ಲಿ ವರದಿಯಾಗಿದೆ. ಇದರಿಂದಾಗಬಹುದಾದ ಅಪಾಯಗಳ ಅರಿವು ಸದ್ಯಕ್ಕೆ ವೈದ್ಯರಿಗಿಲ್ಲ. (ನನಗೇನಾದರೂ ವೈರಸ್ ಸೋಂಕಿದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಒಂದೆರಡು ತಿಂಗಳಾದರೂ ಕಾಯುತ್ತೇನೆ ಎಂದು ನ್ಯೂ ಯಾರ್ಕ್ ಟೈಮ್ಸ್ ಗೆ ತಿಳಿಸಿದ್ದಾರೆ ಅಮೆರಿಕೆಯ ಗ್ಯಾಲ್ವೆಸ್ಟನ್ನಿನಲ್ಲಿರುವ ಟೆಕ್ಸಾಸ್ ವಿವಿಯ ವೈರಸ್ ತಜ್ಞ ಸ್ಕಾಟ್ ವೀವರ್)

ಜೀಕಾ ಚಿಕಿತ್ಸೆಗೆ ಯಾವ ಔಷಧಗಳು ಲಭ್ಯವಿವೆ?

ಯಾವುದೂ ಇಲ್ಲ. ಕಳೆದ ವರ್ಷದವರೆಗೂ ಜೀಕಾ ಎಷ್ಟು ಅಪರೂಪವಾದ ಸೋಂಕಾಗಿತ್ತೆಂದರೆ ಅದು ಇಷ್ಟು ಗಂಭೀರವೆಂದು ಯಾರೂ ಊಹಿಸಿರಲಿಲ್ಲ. ಹೀಗಾಗಿ ಅದಕ್ಕಾಗಿ ಔಷಧಗಳನ್ನು ಹುಡುಕಲು ಯಾರೂ ಪ್ರಯತ್ನಿಸಿರಲೂ ಇಲ್ಲ. ಈಗಲೂ ಈ ವೈರಸ್ ಹೀಗೆ ದಾಳಿ ನಡೆಸಿರುವಾಗಲೂ ಅದನ್ನು ಎದುರಿಸುವ ಔಷಧಗಳಿಗೆ ಬೃಹತ್ ಮಾರುಕಟ್ಟೆ ದೊರೆಯಬಹುದೆಂಬ ಖಾತ್ರಿ ಇಲ್ಲ. ಏಕೆಂದರೆ ಇದರ ಸೋಂಕಿರುವ ಬಹುತೇಕ ಜನರಲ್ಲಿ ಸೋಂಕಿರಬಹುದಾದ ಯಾವುದೇ ಲಕ್ಷಣಗಳೂ ಕಾಣುವದಿಲ್ಲ, ಕಂಡರೂ ಅತ್ಯಲ್ಪ. ಜೊತೆಗೆ ಔಷಧಗಳು ಬಸುರಿನಲ್ಲಿ ಜೀಕಾ ಸೋಂಕಿದಾಗ ಹುಟ್ಟುವ ಮಕ್ಕಳಲ್ಲಿ ಕಾಣುವ ದೋಷಗಳನ್ನು ತಡೆಯಬಲ್ಲುವು ಎನ್ನುವುದೂ ಸ್ಪಷ್ಟವಾಗಿಲ್ಲ. ಸೋಂಕುಂಟಾಗಿ ಅವರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ. ಮೈಕ್ರೊಕೆಫಾಲಿಯನ್ನು ತಡೆಯಲು ಜೀಕಾ ವಿರುದ್ಧದ ಲಸಿಕೆಯೊಂದೇ ಹಾದಿ.

ಲಸಿಕೆ ಯಾವಾಗ ಸಿದ್ಧವಾಗಬಹುದು?

ಅದಕ್ಕೆ ವರ್ಷಗಳೇ ಬೇಕಾಗುತ್ತದೆ. ಜೀಕಾ ಲಸಿಕೆಗಳ ಶೋಧದಲ್ಲಿ ಹಲವರು ತೊಡಗಿಕೊಂಡಿದ್ದಾಋಎ. ಕನಿಷ್ಟ ಹತ್ತಾರು ತಿಂಗಳಾದರೂ ಬೇಕು. ಇವೆಲ್ಲವೂ ಸದ್ಯದಲ್ಲಿ ಲಭ್ಯವಿರುವ ಲಸಿಕೆಗಳ ತಂತ್ರವನ್ನೇ ಅವಲಂಬಿಸಿವೆ. ಉದಾಹರಣೆಗೆ, ರೋಗಜೀವಿಯಲ್ಲಿರುವ ಪ್ರೊಟೀನುಗಳನ್ನು ಅಪಾಯಕಾರಿಯಲ್ಲದ ಇತರೆ ವೈರಸ್ ಜೊತೆಗೆ ಕೂಡಿಸಿ ಹಲವು ರೋಗಗಳಿಗೆ ಲಸಿಕೆಗಳನ್ನು ತಯಾರಿಸುತ್ತಾರೆ. ಇಂತಹ ವೈರಸ್ಗಳನ್ನೇ ಉಪಯೋಗಿಸಿಕೊಂಡು ಜೀಕಾಗೂ ಲಸಿಕೆಯನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಫಲ ನೀಡಬಲ್ಲ ಲಸಿಕೆಯೊಂದು ಸಿದ್ಧವಾದ ಮೇಲೆ ಅದನ್ನು ಪ್ರಾಣಿಗಳಲ್ಲಿ ಮೊದಲು ಪರೀಕ್ಷಿಸಿ ಅನಂತರ ಮನುಷ್ಯರಲ್ಲಿ ಪ್ರಯೋಗಿಸಬೇಕು. ಮನುಷ್ಯರಲ್ಲು ಮೊದಲಿಗೆ ಅವುಗಳ ಸುರಕ್ಷತೆಯ ಬಗ್ಗೆ ಸಣ್ಣ ಪರೀಕ್ಷೆಗಳನ್ನು ನಡೆಸಿ ಅನಂತರ ಲಸಿಕೆಗಳು ನಿಜವಾಗಿಯೂ ಫಲಕಾರಿಯೇ ಎನ್ನುವುದರ ಪರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾಗುತ್ತದೆ. ಇವೆಲ್ಲಕ್ಕೂ ಕನಿಷ್ಟವೆಂದರೂ ಹತ್ತರಿಂದ ಹದಿನೈದು ತಿಂಗಳುಗಳು ಬೇಕು. ಈಗಿನ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುಸು ಶೀಘ್ರವಾಗಿ ಕೆಲಸ ಮಾಡಬಹುದು. ಹಾಗಿದ್ದರೂ ಜೀಕಾ ವೈರಸ್ ಮಾರುಕಟ್ಟೆಯಲ್ಲಿ ದೊರೆಯಬೇಕಂದರೆ ಕನಿಷ್ಟ ಐದರಿಂದ ಏಳು ವರ್ಷಗಳು ಬೇಕು ಎನ್ನುತ್ತಾರೆ ಅಮೆರಿಕೆಯ ರಾಷ್ಟ್ರೀಯ ಅಲರ್ಜಿ ಹಾಗೂ ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕರಾದ ಆಂತೊನಿ ಫಾಸಿ.

ಹಾಗಿದ್ದರೆ ಈ ವೈರಸ್ ಹರಡುವುದನ್ನು ನಾವು ತಡೆಯುವುದು ಹೇಗೆ?

ಸೊಳ್ಳೆಗಳು ಮನುಷ್ಯರನ್ನು ಕಚ್ಚದಂತೆ ನೋಡಿಕೊಳ್ಳುವುದು. ಹೂದಾನಿಗಳು, ಖಾಲಿ ಬಾಟಲ್ಲುಗಳು ಹಾಗೂ ಬಿಸಾಡಿದ ಟಯರುಗಳೇ ಮುಂತಾದ ಏಡಿಸ್ ಸೊಳ್ಳೆಗಳು ಬೆಳೆಯುವಂತಹ ಸಣ್ಣ ಪು್ಟ್ಟ ನಿಂತ ನೀರಿನ ಸೆಲೆಗಳನ್ನು ಕಡಿಮೆ ಮಾಡಿ  ಸೊಳ್ಳೆಗಳ ಸಂಖ್ಯೆಯನ್ನು ಕುಗ್ಗಿಸಲು ಪ್ರಯತ್ನಿಸಬಹುದು. ಸೊಳ್ಳೆ ನುಸುಳದ ಹಾಗೆ ಕಿಟಕಿಗಳನ್ನು ಪರದೆಯಿಂದ ಮುಚ್ಚುವುದು, ಮೈ ಮುಚ್ಚುವಂತೆ ಬಟ್ಟೆ ಧರಿಸುವುದು, ಸೊಳ್ಳೆ ದೂರವಿಡುವ ಕ್ರೀಮ್ ಗಳನ್ನು ಬಳಸುವುದು ಮುಂತಾದ ಕ್ರಮಗಳಿಂದ ವೈಯಕ್ತಿಕವಾಗಿಯೂ ಸೊಳ್ಳೆ ಕಡಿಯದಂತೆ ನೋಡಿಕೊಳ್ಳಬೇಕು. ಬಸುರಿ ಹೆಂಗಸರಿಗಂತು ಇದು ಬಲು ಮುಖ್ಯ  ಆದರೆ ಈ ರೀತಿ ಸೊಳ್ಳೆ ನಿಯಂತ್ರಣದಿಂದಾಗುವ ಫಲಿತಾಂಶಗಳು ಸಾಧಾರಣವಷ್ಟೆ ಎಂದು ಹಿಂದಿನ ಪ್ರಯತ್ನಗಳು ಪಾಠ ಕಲಿಸಿವೆ ಜೊತೆಗೆ ಇವನ್ನು ನಿರಂತರವಾಗಿ ಮುಂದುವರೆಸುವುದು ಕಷ್ಟ.

ಸೊಳ್ಳೆಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳಿರಬಹುದೇ?

ಸದ್ಯಕ್ಕೆ ಇಲ್ಲ. ಆದರೆ ಕೆಲವು ಮುಂದೆ ದೊರೆಯಬಹುದು. ಆಕ್ಸಿಟೆಕ್ ಎನ್ನುವ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಏಡಿಸ್ ಈಜಿಪ್ಟಿ ಸೊಳ್ಳೆಗಳ ಮರಿಗಳು ಬೆಳೆಯದಂತೆ ಹುಟ್ಟುವ ಮೊದಲೇ ಕೊಲ್ಲುವ ಜೀನ್ ಒಂದರ ವಿನ್ಯಾಸ ಮಾಡಿದೆ. ಈ ತಳಿಯ ಗಂಡು ಸೊಳ್ಳೆಗಳನ್ನು ಬೃಹತ್ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ, ಅವು ಸ್ಥಳೀಯ ಹೆಣ್ಣು ಸೊಳ್ಳೆಗಳ ಜೊತೆ ಕೂಡುವುವು. ಇದರಿಂದ ಹುಟ್ಟುವ ಸಂತಾನಗಳು ಬೆಳೆಯದೇ ಸಾಯುವುದರಿಂದ ಸೊಳ್ಳೆಯ ಸಂಖ್ಯೆ ಕಡಿಮೆಯಾಗುವುದು. ಇದರ ಪರೀಕ್ಷೆಗಳನ್ನು ನಡೆಸಲಾಗಿದೆ.

ಮತ್ತೊಂದೆಡೆ ಏಡಿಸ್ ಈಜಿಪ್ಟಿ ಸೊಳ್ಳೆಗಳಿಗೆ ವೋಲ್ಬಾಚಿಯ ಎನ್ನುವ ಬೆಕ್ಟೀರಿಯಾವನ್ನು ವಿಜ್ಞಾನಿಗಳು ಸೋಂಕಿಸುತ್ತಿದ್ದಾರೆ. ಇದು ರೋಗಗಳನ್ನು ಹರಡುವ ಸೊಳ್ಳೆಗಳ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಇದನ್ನೆಲ್ಲ ಡೆಂಘೀ ರೋಗವನ್ನು ನಿಯಂತ್ರಿಸಲೆಂದು ಸಂಶೋಧಕರು ಮಾಡುತ್ತಿದ್ದರು. ಆದರೆ ಜೀಕಾದ ಈ ದಾಂಧಲೆ ಈ ಪ್ರಯತ್ನಗಳಿಗೆ ಇನ್ನಷ್ಟು ಒತ್ತು ನೀಡಿವೆ.  ಇವೆಲ್ಲವೂ ಸಿದ್ಧವಾಗಬೇಕಾದರೆ ಇನ್ನೂ ಹಲವು ವರ್ಷಗಳು ಬೇಕೆನ್ನುವುದಂತೂ ನಿಜ.

—————

ಸೈನ್ಸ್ ಪತ್ರಿಕೆಯಲ್ಲಿ 29.1.2016 ರಂದು ಪ್ರಕಟವಾದ ಗ್ರೆಚೆನ್ ವೋಗೆಲ್, ಜಾನ್ ಕೋಹೆನ್ ಹಾಗೂ ಮಾರ್ಟಿನ್ ಎನ್ಸೆರಿಂಕ್ ಅವರ ಲೇಖನದ ಅನುವಾದ

Published in: on ಫೆಬ್ರವರಿ 4, 2016 at 7:04 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ