ಜಿರಲೆ ರೋಬೋ!

ಒಂದು ವಾಟ್ಸಪ್ ಜೋಕು ಗಂಡಂದಿರನ್ನು ತಮಾಷೆ ಮಾಡುತ್ತದೆ. ಗಂಡ ಕೊಲ್ಲಲು ಹೊರಟ ಜಿರಲೆ ಅವನಿಗೆ ಸವಾಲು ಹಾಕುತ್ತದಂತೆ. ‘ನೀನು ನನ್ನನ್ನು ಕೊಲ್ಲುವುದಿಲ್ಲ. ಏಕೆಂದರೆ ನಾನು ನಿನಗಿಂತ ಬಲಶಾಲಿ. ನಿನಗೆ ಹೆದರದ ಹೆಂಡತಿ ನನಗೆ ಹೆದರುತ್ತಾಳೆ,’ ಅಂತ. ಜೋಕು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಮೇಲೆ ತುಸು ಯೋಚಿಸಿ. ಜಿರಲೆ ಎನ್ನುವ ಈ ಯಃಕಶ್ಚಿತ್ ಕೀಟ ಹೇಳಿದ್ದರಲ್ಲಿ ನ್ಯಾಯವಿದೆ. ತುಸು ಸತ್ಯವಿದೆ. ಸಿಕ್ಕದ್ದನ್ನು ಉಂಡು ಬದುಕುವ ಈ ಕೀಟ ಮನುಷ್ಯನನ್ನು ಕೊಲ್ಲುವ ವಿಕಿರಣಗಳನ್ನೂ ತಾಳಿಕೊಳ್ಳಬಲ್ಲುದು.

ಅದಷ್ಟೆ ಅಲ್ಲ. ಇನ್ನೂ ಅದ್ಭುತ ಸಾಮರ್ಥ್ಯಗಳಿವೆ. ಬೂಟುಕಾಲಿನಿಂದ ತುಳಿದು ಹೊಸಕಿ ಹಾಕುವಷ್ಟು ಪುಟ್ಟದಲ್ಲವೇ ಎನ್ನಬೇಡಿ. ಜಿರಲೆ ನಿಮ್ಮ ದೇಹದ ಭಾರವನ್ನು ತಡೆದುಕೊಂಡು ಅಪ್ಪಚ್ಚಿಯಾಗದೆ ಬದುಕುಳಿಯಬಲ್ಲುದು. ಇದರ ಸಾಮರ್ಥ್ಯಗಳಿಗೆ ಇನ್ನೊಂದನ್ನು ಕೂಡಿಸಿದ್ದಾರೆ ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ರಾಬರ್ಟ್ ಫುಲ್ ಮತ್ತು ಕೌಶಿಕ್ ಜಯರಾಮ್. ಇವರು ಇತ್ತೀಚಿನ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟಿಸಿರುವ ಪ್ರಬಂಧವೊಂದು ಜಿರಲೆ ಎನ್ನುವ ಜೀವಿ ಹೊಸತೊಂದು ಬಗೆಯ ರೋಬೋ ಸೃಷ್ಟಿಗೆ ಪ್ರೇರಣೆಯಾಗಬಲ್ಲುದು ಎಂದು ತಿಳಿಸಿದೆ.

ಜಿರಲೆ ರೋಬೋವೇ? ಅದೇನು ವಿಶೇಷ ಎಂದಿರಾ? ಉಗುರು ನುಸುಳದಷ್ಟು ಇಕ್ಕಟ್ಟಾದ ಸಂದಿಯಲ್ಲಿಯೂ ಹೆಬ್ಬೆರಳು ಗಾತ್ರದ ಜಿರಲೆ ಇರುವುದನ್ನು ಕಂಡಿದ್ದೀರಲ್ಲ? ಇಷ್ಟು ಇಕ್ಕಟ್ಟಿನಲ್ಲಿ ಈ ಜೀವಿ ಹೇಗೆ ಬದುಕುತ್ತದೆ? ಕೈ ಕಾಲು ಆಡಿಸಲೂ ಆಗದಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಇದು ಹೇಗೆ ನಡೆಯಬಲ್ಲುದು? ಆ ಇಕ್ಕಟ್ಟಿನಲ್ಲಿ ಅಷ್ಟು ದಪ್ಪ ದೇಹ ಹೇಗೆ ಉಳಿಯಬಲ್ಲುದು? ಇವೆಲ್ಲ ಕೌಶಿಕ್ ಮತ್ತು ಫುಲ್ ಅವರಿಗೆ ಬಲು ಕೌತುಕವೆನ್ನಿಸಿದೆ. ಇದೇ ಬಗೆಯ ಗುಣಗಳಿರುವ ರೋಬೋಗಳು ಸಿಗುವುದಾದರೆ ಕುಸಿದ ಕಟ್ಟಡಗಳ ಅವಶೇಷಗಳ ಸಂದಿಗೊಂದಿಗಳಲ್ಲಿ ನುಸುಳಿ ಅಲ್ಲಿರುವವರಿಗೆ ನೆರವು ನೀಡಬಹುದು ಎನ್ನುವುದು ಇವರ ಆಶಯ.

ಈ ಆಸೆಯ ಬೆನ್ನು ಹತ್ತಿದ ಕೌಶಿಕ್ ಮತ್ತು ಫುಲ್ ಜಿರಲೆಗಳನ್ನು ಇರುಕಿನಲ್ಲಿ ಇರಿಸಿ ಅಧ್ಯಯನ ಮಾಡಿದ್ದಾರೆ. ಅವು ಇಕ್ಕಟ್ಟಾದ ಸಂಧಿಗಳಲ್ಲಿ ನಡೆದಾಡುವ ರೀತಿ, ಅವು ತಾಳಿಕೊಳ್ಳಬಲ್ಲ ಗರಿಷ್ಟ ಒತ್ತಡದ ಪ್ರಮಾಣ, ಅಪ್ಪಚ್ಚಿಯಾಗುವ ಸ್ಥಿತಿಯಲ್ಲಿದ್ದರೂ ನಡೆದಾಡುವ ವೇಗ ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ವೀಡಿಯೋ ಚಿತ್ರಗಳನ್ನು ತೆಗೆದಿದ್ದಾರೆ. ಇವೆಲ್ಲದರ ಪ್ರೇರಣೆ ಪಡೆದು ಜಿರಲೆಯಂತೆಯೇ ವಿನ್ಯಾಸವಿರುವ ರೋಬೋವನ್ನೂ ಸೃಷ್ಟಿಸಿದ್ದಾರೆ.

ಜಿರಲೆಗಳು ನಮ್ಮಷ್ಟು ಗಟ್ಟಿ ಜೀವಿಗಳಲ್ಲ. ಮೃದು. ಒತ್ತಿದರೆ ಇರುಕಿಕೊಳ್ಳಬಲ್ಲುವು. ಇದಕ್ಕೆ ಕಾರಣ ಅವುಗಳ ಹೊರಕವಚ. ಬಹುತೇಕ ಕೀಟಗಳ ರಚನೆ ಹೀಗೇ ಇರುತ್ತದಾದರೂ, ಜಿರಲೆಗಳಲ್ಲಿ ಇವು ವಿಶೇಷ. ತೆಳುವಾದ ಪಟ್ಟಿಗಳನ್ನು ಒಂದರ ಹಿಂದೆ ಒಂದಾಗಿ ಜೋಡಿಸಿದಂತಿದೆ ದೇಹ. ಈ ಪಟ್ಟಿಗಳು ಗಟ್ಟಿಯಾಗಿದ್ದರೂ ಸುಲಭವಾಗಿ ಬಾಗಬಲ್ಲವು. ಜೊತೆಗೆ ಇವುಗಳ ಉದ್ದುದ್ದ ಕಾಲುಗಳು. ಈ ಕಾಲುಗಳು ದೇಹದ ಉದ್ದದ ಒಂದೂವರೆ ಪಟ್ಟು ಉದ್ದವಿದ್ದರೂ, ಸಂಧಿಪಾದಗಳಾಗಿದ್ದರಿಂದ ಅತಿ ಪುಟ್ಟದಾಗಿ ಮಡಿಚಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಿಳಿದ ವಿಷಯ. ಆದರೆ ಎಷ್ಟರ ಮಟ್ಟಿಗೆ ಈ ಸಾಮರ್ಥ್ಯವನ್ನು ಜಿರಲೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ಫುಲ್ ಮತ್ತು ಕೌಶಿಕ್ ಪರೀಕ್ಷಿಸಿದ್ದಾರೆ.

ಇದಕ್ಕಾಗಿ ಇವರು ಜಿರಲೆಗಳನ್ನು ಅತಿ ಇಕ್ಕಟ್ಟಾದ ಸಂಧಿಗಳೊಳಗೆ ಹೋಗುವಂತೆ ಮಾಡಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಪರಿಶೀಲಿಸಿ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಜಿರಲೆಗಳು ನಿಷ್ಣಾತವಷ್ಟೆ. ಒಳಗಿನದೆಲ್ಲವೂ ಕಾಣುವ ಪಾರದರ್ಶಕ ಡಬ್ಬಿಯೊಳಗೆ ಜಿರಲೆಯನ್ನು ಇಟ್ಟು ನಿಧಾನವಾಗಿ ಡಬ್ಬಿಯ ಮುಚ್ಚಳವನ್ನು ಒಳದೂಡಿದ್ದಾರೆ. ಹೀಗೆ ಮಾಡಿದಾಗ ಜಾಗ ಇಕ್ಕಟ್ಟಾಗಿ ಜಿರಲೆ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. (ಚಿತ್ರ 1 ನೋಡಿ). ಅಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಜಿರಲೆ ನಡೆಯುವಾಗ ವೀಡಿಯೋ ಚಿತ್ರಿಸಿದ್ದಾರೆ. ಅನಂತರ ವೀಡಿಯೋದ ನೆರವಿನಿಂದ ಜಿರಲೆಯ ನಡಿಗೆಯ ವೇಗ, ವಿಧಾನವನ್ನು ಲೆಕ್ಕ ಹಾಕಿದ್ದಾರೆ.

cockroachsqueeze

ಜಿರಲೆಯನ್ನು ಸಣ್ಣ ಸೀಳಿನ ಮೂಲಕ ಹಾಯಲು ಬಿಟ್ಟಾಗ ಅಚ್ಚರಿಯ ಚಿತ್ರಗಳು ದಾಖಲಾಗಿದ್ದುವು. ತನ್ನ ದೇಹಕ್ಕಿಂತಲೂ ನಾಲ್ಕು ಪಟ್ಟು ಕಿರಿದಾಗಿದ್ದ ಸಂದಿನೊಳಗೆ ತೂರಬೇಕೆಂದಾಗ ಜಿರಲೆ ಮೊದಲಿಗೆ ಸಂದಿನಾಚೆ ಏನಾದರೂ ಇದೆಯೋ ಎಂದು ತನ್ನ ಮೀಸೆಯನ್ನು ಚಾಚಿ ಹುಡುಕಾಡುತ್ತದೆ. ಅನಂತರ ತಲೆಯನ್ನು ತೂರಿಸುತ್ತದೆ. ತಲೆಯಾದ ಮೇಲೆ ಮುಂಗಾಲುಗಳನ್ನು ಹೊರ ಹಾಕುತ್ತದೆ. ತದನಂತರ ಎದೆ, ಉದರ ಭಾಗವನ್ನು ಸೀಳಿನೊಳಗೆ ತೂರಿಸುತ್ತದೆ. ತೆವಳುತ್ತಾ ಮುಂದೆ ಸಾಗಿ ಇಡೀ ಉದರ ಭಾಗವನ್ನು ಮತ್ತೊಂದು ಬದಿಗೆ ಎಳೆದುಕೊಳ್ಳುತ್ತದೆ.

ವೀಡಿಯೋ ಚಿತ್ರಗಳಲ್ಲಿ ಈ ಚಲನೆಗಳು ಸುಸ್ಪಷ್ಟವಾಗಿ ಕಂಡುವು. ಇವೆಲ್ಲವನ್ನೂ ಕಣ್ಣೆವೆಯಿಕ್ಕುವುದರೊಳಗೆ ಮಾಡಿ ಮುಗಿಸುತ್ತದೆ ಈ ಕೀಟ. ಕಣ್ಣೆವೆ ಮುಚ್ಚುವಷ್ಟರೊಳಗೆ ಎಂದರೆ ಎಷ್ಟು ಸೆಕೆಂಡು ಎಂದುಕೊಂಡಿರಿ – ಅರ್ಧದಿಂದ ಮುಕ್ಕಾಲು ಸೆಕೆಂಡುಗಳೊಳಗೆ ಇದು ತನ್ನ ಇಡೀ ದೇಹವನ್ನು ಸಂದಿಯೊಳಗಿನಿಂದ ಹೊರ ತಂದು ಬಿಟ್ಟಿರುತ್ತದೆ. ಇದರಂತೆ ಮನುಷ್ಯನಿಗೂ ಮಾಡಲು ಸಾಧ್ಯವಾಗುವುದಿದ್ದಿದ್ದರೆ. ಬಹುಶಃ ಯಾವ ಜೈಲಿನ ಕಿಟಕಿಗಳೂ ಬಂಧಿಗಳನ್ನು ಸೆರೆಯಾಗಿಡಲು ಶಕ್ತವಲ್ಲ. ಹಾಗೆಯೇ ಈ ಸಾಮರ್ಥ್ಯವಿದ್ದಿದ್ದರೆ ದೇಹಕ್ಕಿಂತಲೂ ಕಿರಿದಾದ ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳು ಹೊರ ಬಂದು ಬದುಕುವ ಸಾಧ್ಯತೆಗಳೂ ಇರುತ್ತಿದ್ದುವೇನೋ?

ಹೀಗೆನ್ನಲು ಕಾರಣವಿದೆ. ಜಿರಲೆ ಸುಮಾರು 12 ಮಿಮೀ ಎತ್ತರವಿರುವ ತನ್ನ ದೇಹವನ್ನು ನಾಲ್ಕು ಮಿಮೀಟರಿಗಿಂತಲೂ ಕಡಿಮೆ ಎತ್ತರಕ್ಕೆ ಸಪಾಟಾಗಿಸಿಕೊಂಡು ಮುನ್ನುಗ್ಗಬಲ್ಲುದಂತೆ. ಈ ಲೆಕ್ಕದಲ್ಲಿ ಒಂದಡಿ ದಪ್ಪವಿರುವ ಮನುಷ್ಯ ನಾಲ್ಕಿಂಚು ದಪ್ಪದ ಸಂದಿನೊಳಗೆ ಸಲೀಸಾಗಿ ನುಸುಳಬಹುದಾಗಿತ್ತು. ಜಿರಲೆಗೆ ಇದು ಸಾಧ್ಯವಾಗುವುದಕ್ಕೆ ಕಾರಣ ಅದು ತನ್ನ ಕಾಲುಗಳನ್ನು ಉದ್ದುದ್ದಕ್ಕೆ ಚಾಚಿಕೊಂಡ ನೆಲವನ್ನೇ ಆತುಕೊಂಡಂತೆ ಸಪಾಟಾಗಿ ಬಿಡಬಲ್ಲುದು. ನಮಗೆ ಇದು ಸಾಧ್ಯವಿಲ್ಲ. ಜಿರಲೆಯ ಬೆನ್ನ ಮೇಲಿನಂಚಿಗೂ ನೆಲಕ್ಕೂ ಇರುವ ಕೋನ ಇದೆಷ್ಟು ಸಪಾಟಾಗಬಲ್ಲುದು ಎಂದು ತೋರಿಸುತ್ತದೆ. ಸಂದಿನೊಳಗೆ ತೂರುವಾಗ ಈ ಕೋನ ಸುಮಾರು ನಾಲ್ಕು ಮಡಿ ಹೆಚ್ಚಾಗುತ್ತದಂತೆ.

ಅದೇನೋ ಸರಿ. ಆದರೆ ಕಾಲನ್ನು ಹೀಗೆ ಚಾಚಿಕೊಂಡು ಬಿಟ್ಟರೆ ಮುನ್ನಡೆಯುವುದು ಹೇಗೆ ಎಂದು ಯೋಚಿಸಿದಿರಲ್ಲವಾ? ನಿಮ್ಮ ಆಲೋಚನೆ ಸರಿಯೇ. ಕೌಶಿಕ್ ಮತ್ತು ಫುಲ್ ಇದನ್ನೂ ಪರಿಶೀಲಿಸಿದ್ದಾರೆ. ಜಿರಲೆಯ ಬೆನ್ನಿನ ಮೇಲೆ ಮೇಲ್ಚಾವಣಿಯುಂಟು ಮಾಡುವ ತಡೆ ಹಾಗೂ ಅದರ ಕಾಲುಗಳ ಮುಂದೂಡುವ ಬಲವನ್ನು ಲೆಕ್ಕ ಹಾಕಿದ್ದಾರೆ. ತಡೆಗಿಂತಲೂ ಮುಂದೂಡುವ ಬಲ ಹೆಚ್ಚಾಗಿದ್ದಷ್ಟೂ ಮುನ್ನಡೆ ಸುಲಭವಷ್ಟೆ. ನಾವು ನೀರಿನಲ್ಲಿ ಈಜುವಂತೆ, ಅಥವಾ ಹಕ್ಕಿಗಳು ಗಾಳಿಯಲ್ಲಿ ಹಾರುವಾಗ ಮಾಡುವಂತೆ ಜಿರಲೆಯೂ ತನ್ನ ದೇಹದ ಎಡಭಾಗವನ್ನು, ಇನ್ನೊಮ್ಮೆ ಬಲಭಾಗವನ್ನು ತೆವಳಿಸಿ ಮುಂದೆ ಸಾಗುತ್ತದೆ. ಇರುಕಿನ ಸಂದಿನೊಳಗೆ ಕಾಲುಗಳ ನೆರವೇ ಇಲ್ಲದೆ ತೆವಳುತ್ತದೆ.

ಹೀಗೆ ಕಾಲುಗಳನ್ನು ಮಡಚಿಕೊಳ್ಳುವ ಸಾಮರ್ಥ್ಯವಿರುವುದರಿಂದಲೇ ಜಿರಲೆಯನ್ನು ಹೊಸಕಿ ಹಾಕುವುದು ಕಷ್ಟ. ಫುಲ್-ಕೌಶಿಕ್ ಜಿರಲೆಗಳ ಮೇಲೆ ವಿವಿಧ ಮಟ್ಟದ ಭಾರವನ್ನು ಹೇರಿ ಅವು ಎಷ್ಟು ತಾಳಿಕೊಳ್ಳಬಲ್ಲುವು ಎಂದು ಲೆಕ್ಕ ಹಾಕಿದ್ದಾರೆ. ಈ ಪುಟಾಣಿ ಕೀಟ ತನ್ನ ದೇಹ ತೂಕಕ್ಕಿಂತ 300 ರಿಂದ 900 ಪಟ್ಟು ಭಾರವನ್ನು ತಾಳಬಲ್ಲುದು. ನಮ್ಮ ಬೆನ್ನ ಮೇಲೆ 21 ರಿಂದ 60 ಟನ್ನು ತೂಕ ಬಿದ್ದ ಹಾಗೆ. ಅರ್ಥಾತ್ ಹೆಚ್ಚೂ ಕಡಿಮೆ ಎರಡರಿಂದ ಆರು ಲೋಡ್ ಆದ ಟ್ರಕ್ಕುಗಳು ಬೆನ್ನ ಮೇಲೆ ನಿಂತ ಹಾಗೆ. ಇಷ್ಟಾದರೂ ಜಿರಲೆಗೆ ಏನೂ ಆಗುವುದಿಲ್ಲ. ಭಾರವನ್ನು ತೆಗೆದ ಕೂಡಲೇ ಎಂದಿನ ಗತ್ತಿನಿಂದ ಹರಿದಾಡಿ, ಹಾರುತ್ತದಂತೆ. ಇಷ್ಟು ಭಾರ ಬಿದ್ದರೂ ಅದರ ದೇಹಕ್ಕೆ ಕಿಂಚಿತ್ತೂ ತೊಂದರೆಯಾಗದಿರುವುದಕ್ಕೆ ಕಾರಣ, ಅವುಗಳ ಬೆನ್ನ ಮೇಲಿರುವ ಹಾಳೆಗಳು ಬಾಗುವುದಲ್ಲ. ಈ ಹಾಳೆಗಳನ್ನು ಜೋಡಿಸುವ ಸ್ನಾಯುಗಳ ರಚನೆ ಎಂದು ವೀಡಿಯೋ ಮೂಲಕ ಕೌಶಿಕ್ ಮತ್ತು ಫುಲ್ ಗಮನಿಸಿದ್ದಾರೆ

ಸಂದಿಯೊಳಗಿನ ತೆವಳಾಟ ಜಿರಲೆಯ ಸಾಧಾರಣ ಓಟಕ್ಕಿಂತ ನಿಧಾನವೇನೋ ಹೌದು. ಆದರೆ ಗತಿಯೇನೂ ಕಡಿಮೆಯಲ್ಲವಂಎ. ತನ್ನ ದೇಹದ ಆರು ಮಡಿ ಉದ್ದದ ಸಂದಿಯನ್ನು ಸೆಕೆಂಡಿನೊಳಗೆ ಇದು ಕ್ರಮಿಸಿಬಿಟ್ಟಿರುತ್ತದೆ. ಆರಡಿ ಮನುಷ್ಯ ತನ್ನ ದೇಹದ ಉದ್ದಕ್ಕೆ ಅನುಗುಣವಾಗಿ ಈ ವೇಗದಲ್ಲಿ ತೆವಳಿದರೆ ನಿಮಿಷದೊಳಗೆ ಎಂಟೂವರೆ ಕಿಲೋಮೀಟರು ದೂರವನ್ನು ತೆವಳಿಕೊಂಡೇ ಸಾಗಬಲ್ಲ! ಆ ವೇಗದಲ್ಲಿ ತೆವಳಲು ಜಿರಲೆಗೆ ಮೇಲ್ಚಾವಣಿ ಒದಗಿಸುವ ಘರ್ಷಣೆಯೂ ನೆರವಾಗುತ್ತದೆ. ಈ ಘರ್ಷಣೆಯನ್ನು ಕಡಿಮೆ ಮಾಡಿದರೆ (ಮೇಲ್ಛಾವಣಿಯನ್ನು ನುಣುಪಾಗಿಸಿದರೆ ಅಥವಾ ನೆಲವನ್ನು ನುಣುಪಾಗಿಸಿದರೆ) ಏನಾಗಬಹುದೆಂದೂ ಇವರು ಪರೀಕ್ಷಿಸಿದ್ದಾರೆ. ಮೇಲ್ಛಾವಣಿ ನುಣುಪಾಗಿದ್ದಷ್ಟೂ ಸಂದಿನೊಳಗೆ ಜಿರಲೆಯ ಚಲನೆ ವೇಗವಾಗುತ್ತದೆ. ನೆಲ ನುಣಪಾಗಿದ್ದಷ್ಟೂ ನಿಧಾನವಾಗುತ್ತದೆ. ಇದೇನೂ ವಿಶೇಷವಲ್ಲ ಎಂದಿರಾ? ಕೌಶಿಕ್-ಫುಲ್ ಅವರ ಪ್ರಕಾರ ಇದೊಂದು ವಿಶೇಷ ನಡಿಗೆ. ಎರಡು ಮೇಲ್ಮೈಗಳ ಘರ್ಷಣೆಯನ್ನೇ ಬಳಸಿಕೊಂಡು ಮುಂದೆ ಸಾಗುವ ವಿಶೇಷ ನಡಿಗೆ.

ಇರಬಹುದು. ಇದರಿಂದ ನಮಗೇನು ಲಾಭ? ಜಿರಲೆಯನ್ನಂತೂ ಹಿಡಿಯಲು ಆಗುವುದಿಲ್ಲ. ಎಂತಹ ಕಿರಿದಾದ ಸಂದಿನಲ್ಲೂ ಅದು ನುಸುಳಬಹುದು ಅಂದರೆ ಅದನ್ನು ಮನೆಯಿಂದ ಸಂಪೂರ್ಣವಾಗಿ ನಿವಾರಿಸಲು ಆಗುವುದಿಲ್ಲ. ಮತ್ತೇನು ಪ್ರಯೋಜನ ಎಂಬ ನಿರಾಸೆ ಬೇಡ.  ಕಿರಿದಾದ ಸಂದುಗಳೊಳಗೆ ನುಸುಳುವ ರೋಬೋಗಳಿಗೆ ಇವು ಪ್ರೇರಣೆಯಾಗುತ್ತವೆ. ಜಿರಲೆಯ ಬೆನ್ನ ಮೇಲಿನ ಫಲಕಗಳ ರಚನೆ, ಅವು ಬಾಗುವ ಹಾಗೂ ಸಪಾಟಾಗುವ ರೀತಿ, ಮೇಲ್ಮೈಗಳನ್ನು ಬಳಸಿಕೊಂಡು ತೆವಳುವ ಪರಿ, ಇವೆಲ್ಲವನ್ನೂ ಗಮನಿಸಿದ ನಂತರ ಫುಲ್ ಮತ್ತು ಕೌಶಿಕ್ ಅಂಗೈಮೇಲಿಟ್ಟುಕೊಳ್ಳಬಹುದಾದಂತಹ ಪುಟ್ಟ ರೊಬೋವೊಂದನ್ನು ರೂಪಿಸಿದ್ದಾರೆ.

compressiblerobot.jpg

ಇದು ಕೂಡ ಸಂದಿಗಳೊಳಗೆ ನುಸುಳುವಾಗ ತನ್ನೆತ್ತರವನ್ನು ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. ಇದರ ಕಾಲುಗಳಿಗೆ ಜಿರಲೆಯ ಉದ್ದದ ಸಂಧಿಪಾದಗಳೇ ಸ್ಪೂರ್ತಿ. ಜಿರಲೆಯೂ ಅದ್ಭುತ. ಅದನ್ನು ಅಣಕಿಸುವ ರೋಬೋವೂ ಅದ್ಭುತ. ಅಲ್ಲವೇ?

ಜಿರಲೆ ರೋಬೋದ ವೀಡಿಯೋ ಇಲ್ಲಿದೆ :

ಆಕರ:

Kaushik Jayaram and Robert J. Full, Cockroaches traverse crevices, crawl rapidly in confined spaces, and inspire a soft, legged robot PNAS | doi/10.1073/pnas.1514591113,   ( Early edition, dated 4.2.2016)

Published in: on ಫೆಬ್ರವರಿ 10, 2016 at 4:32 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ