ಬೆಂಕಿ ಮಾನವರು!

ಅಕಾರಣ ದೇಹ ದಹನ ಪವಾಡವೇ?!

ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಎರಡು ವರ್ಷದ ಹುಡುಗನೊಬ್ಬ ಸುದ್ದಿಯಾಗಿದ್ದ. ಚೆ್ನ್ನೈನ ಕೀಲ್ಪಾಕ್ ಆಸ್ಪತ್ರೆಗೆ ದಾಖಲಾದ ರಾಹುಲ್ ಹೆಸರಿನ ಈ ಪೋರನಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಅವನ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಮಾಧ್ಯಮದಲ್ಲಿ ಇದು ಸಾಕಷ್ಟು ಸುದ್ದಿಯಾಯಿತು. ಹಲವು ವಿಚಿತ್ರ ವಿವರಣೆಗಳನ್ನೂ ಕೆಲವರು ಕೊಟ್ಟರು. ಆನಂತರ ರಾಹುಲ್ ಮೈಮೇಲಿನ ಬೆಂಕಿ ಆರಿ ಹೋದ ಹಾಗೆಯೇ ಈ ಸುದ್ದಿಯೂ ಆರಿ ಶಾಂತವಾಯಿತು. ಕೀಲ್ಪಾಕ್ ಆಸ್ಪತ್ರೆಯ ವೈದ್ಯರು ಇದು ವಿಚಿತ್ರವಲ್ಲ. ಯಾರೋ ಬೇಕಂತಲೇ ರಾಹುಲ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದು ಎಲ್ಲೂ ವರದಿಯಾಗಲಿಲ್ಲ.

ಹೌದೇ. ಹೀಗೆ ಮನುಷ್ಯರಿಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿಕೊಳ್ಳಬಹುದೇ? ಈ ಬಗ್ಗೆ ಚರ್ಚೆ ಇಂದಲ್ಲ ಹದಿನೆಂಟನೇ ಶತಮಾನದಿಂದಲೂ ನಡೆಯುತ್ತಿದೆ. ಇದೋ ಬಲು ಪ್ರಸಿದ್ಧಿ ಪಡೆದ ಪ್ರಪಂಚದ ಹತ್ತು ಇಂತಹ ಬೆಂಕಿಮಾನವರ ಕುರಿತು ವಿವರ ಇಲ್ಲಿದೆ. ಬಹಳ ಇತ್ತೀಚಿನ ಸುದ್ದಿ ಎಂದರೆ ಅಮೆರಿಕೆಯ ಮಹಿಳೆಯೊಬ್ಬಳದ್ದು. ಅತಿಯಾಗಿ ಮದ್ಯಪಾನ ಮಾಡಿದ ಈ ಮಹಿಳೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದದ್ದು ಕಳೆದ ವರ್ಷ ವರದಿಯಾಗಿತ್ತು. ಹದಿನೇಳನೇ ಶತಮಾನದಿಂದಲೂ ಹೀಗೆ ಅಕಾರಣ ಬೆಂಕಿ ಹೊತ್ತಿಕೊಳ್ಳುವ ಮಾನವರ ವಿಷಯದಲ್ಲಿ ಮದ್ಯಪಾನವೇ ದೋಷಿಯಾಗಿದೆ. ಅಕಾರಣ ದೇಹ ದಹನವನ್ನು ‘ಸ್ಪಾಂಟೇನಿಯಸ್ ಹ್ಯೂಮನ್ ಕಂಬಶ್ಚನ್’ (ಎಸ್.ಎಚ್.ಸಿ.) ಎನ್ನುತ್ತಾರೆ.

ಇವೆಲ್ಲ ಸುದ್ದಿಗಳನ್ನು ಕೇಳಿದಾಗ, ಇದು ನಿಜವಿರಬಹುದೇ? ಮೂಢನಂಬಿಕೆಯನ್ನು ಅಲ್ಲಗಳೆಯಲು ಹೋದಾಗ, ವಿಜ್ಞಾನಕ್ಕೆ ಎಲ್ಲವೂ ತಿಳಿಯುತ್ತದೆ ಎನ್ನುವುದು ತಪ್ಪು. ಇಂತಹ ವಿದ್ಯಮಾನಗಳು ಬಹುಶಃ ವಿಜ್ಞಾನಕ್ಕೂ ತಿಳಿಯದ ಕ್ರಿಯೆ ಇರಬಹುದು ಎನ್ನುವ ವಾದ ಕೇಳುತ್ತೇವೆ. ಹಾಗೆಯೇ ಇದೂ ಕೂಡ ನಮಗೆ ತಿಳಿಯದ್ದು ಏನಾದರೂ ಆಗಿರಬಹುದೇ? ಎಂದು ಭಾವಿಸಿದ್ದೆ. ವೀಕಿಪೀಡಿಯಾದಲ್ಲಿ ಈ ಬಗ್ಗೆ ತುಸು ದೀರ್ಘವಾದ ಲೇಖನವೇ ಇದೆ. ಆದರೆ ಅದುವೂ ಇದಮಿತ್ಥಂ ಎಂದಿಲ್ಲ.

ಈ ಹಿನ್ನೆಲೆಯಲ್ಲಿ ಇವತ್ತು ಬೇರೇನನ್ನೋ ಹುಡುಕುತ್ತಿದ್ದಾಗ 2012ರಲ್ಲಿ ಅಮೆರಿಕೆಯ ಟೆನೆಸೀ ವಿವಿಯ ಮಾನವ ಶಾಸ್ತ್ರಜ್ಞೆಆಂಜಿ ಕ್ರಿಸ್ಟೆನ್ಸನ್ ಜರ್ನಲ್ ಆಫ್ ಫೋರೆನ್ಸಿಕ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಶೋಧ ಪತ್ರ ಕಣ್ಣಿಗೆ ಬಿತ್ತು. ನಿಜವಾಗಿಯೂ ಮಾನವ ದೇಹಗಳು ಅಕಾರಣ ಜ್ವಲಿಸಬಲ್ಲವೇ? ಒಂದು ವೇಳೆ ಹೀಗೆ ಹೊತ್ತಿ ಉರಿದರೆ ಏನಾಗುತ್ತದೆ? ಎಂದು ಇವರು ಪರಿಶೀಲಿಸಿದ್ದರು. ಅಂದ ಹಾಗೆ ಯಾರನ್ನೂ ಬೆಂಕಿಗೆ ದೂಡಿಯೋ, ಬೆಂಕಿ ಹಚ್ಚಿಯೋ ಇವರು ಪರೀಕ್ಷೆ ಮಾಡಲಿಲ್ಲ. ವಯಸ್ಸಾದವರಲ್ಲಿ ಸವೆದ ಮೂಳೆ ಹಾಗೂ ಸಾಧಾರಣ ಮೂಳೆಯೆರಡನ್ನೂ ಬೆಂಕಿ ಹಚ್ಚಿ ಸುಟ್ಟರು. ಹಾಗೆಯೇ ಒಂದಿಷ್ಟು ಮಾನವ ಅಂಗಾಂಶವನ್ನೂ ಬೆಂಕಿ ಹಚ್ಚಿ ಸುಟ್ಟು, ಅದರಿಂದ ಬರುವ ಜ್ವಾಲೆಯ ಗುಣಗಳನ್ನು ಪರಿಶೀಲಿಸಿದರು.

ಇವರ ಈ ಪ್ರಯೋಗಕ್ಕೆ ಕಾರಣವಿಷ್ಟೆ. ಕಳೆದ ಮುನ್ನೂರು ವರ್ಷಗಳಲ್ಲಿ ಸುಮಾರು 200 ಇಂತಹ ಅಕಾರಣ ದೇಹ ದಹನದ ಸಂಗತಿಗಳು ವರದಿಯಾಗಿವೆ. ಈ ಎಲ್ಲವುಗಳನ್ನೂ ಗಮನಿಸಿದಾಗ ಕೆಲವು ಸಂಗತಿಗಳು ಸಾಮಾನ್ಯ. ಬಹುತೇಕ ಎಲ್ಲವೂ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆದಂಥವು. ಎರಡನೆಯದಾಗಿ ಯಾವುದನ್ನೂ ನೇರವಾಗಿ ಕಂಡವರಿಲ್ಲ. ಸುಟ್ಟು ಕರಿಕಲಾಗಿ ಬಿದ್ದ ಶವಗಳನ್ನಷ್ಟೆ ಕಂಡ ಸಂದರ್ಭಗಳು ಜಾಸ್ತಿ. ಮೂರನೆಯದಾಗಿ ದೇಹ ಸುಟ್ಟರೂ ಅದರ ಸುತ್ತ ಮುತ್ತಲಿನ ಯಾವ ವಸ್ತುಗಳೂ ಸುಟ್ಟಿರುವುದಿಲ್ಲ. ಅತಿ ಹೆಚ್ಚೆಂದರೆ ದೇಹ ಬಿದ್ದ ಜಾಗೆ ಹಾಗೂ ಅದಕ್ಕೆ ನೇರವಾಗಿರುವ ಮೇಲ್ಚಾವಣಿಯಷ್ಟೆ ಸುಟ್ಟಿದ್ದದ್ದು ಕಂಡು ಬರುತ್ತದೆ. ನಾಲ್ಕನೆಯದಾಗಿ ಅಕಾರಣ ದೇಹದಹನವಾದವರಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚು. ಐದನೆಯದಾಗಿ ಇವರೆಲ್ಲರಿಗೂ ಮದ್ಯಪಾನ ಮಾಡುತ್ತಿದ್ದರು. ಆರನೆಯದಾಗಿ ಇಡೀ ದೇಹ ಕರಿಕಲಾಗಿದ್ದರೂ, ತಲೆ ಹಾಗೂ ಪಾದಗಳು ಸುಡದೆ ಉಳಿಯುತ್ತವೆ. ಮೂಳೆಯಂತೂ ಅಸ್ಥಿಸಂಚಯಕ್ಕೆ ಬೇಕಾದಷ್ಟು ತುಣುಕೂ ಇಲ್ಲದ ಹಾಗೆ ಭಸ್ಮವಾಗಿರುತ್ತದೆ.

ಮದ್ಯಪಾನ ಹೆಚ್ಚಾದ ಸಂದರ್ಭದಲ್ಲಿ ರಕ್ತದಲ್ಲಿ ಮದ್ಯದ ಸಾರ ಹೆಚ್ಚಾಗಿ ಚರ್ಮದ ಮೂಲಕ ಹೊರ ಸೂಸುತ್ತಿರಬಹುದು. ಆಕಸ್ಮಿಕವಾಗಿ ಬೆಂಕಿ ತಗುಲಿ ದೇಹಕ್ಕೂ ಉರಿ ಹತ್ತಬಹುದು ಎನ್ನುವುದು ಊಹೆ. ಆದರೂ ದೇಹ ಉರಿಯುವಾಗ ಸುತ್ತಲಿನ ವಸ್ತುಗಳು ಸುಡುವುದಿಲ್ಲವೇಕೆ? ತಲೆ, ಕಾಲುಗಳು ಉರಿಯದೆ ಉಳಿಯುವುದೇಕೆ? ವಯಸ್ಕ ಮಹಿಳೆಯರೇ ಇದಕ್ಕೆ ಹೆಚ್ಚು ಬಲಿಯಾಗಿದ್ದಾರಲ್ಲ, ಅದೇಕೆ? ಬೆಂಕಿ ಹತ್ತಿದ್ದು ಎಲ್ಲಿಂದ? ಮೂಳೆಯೇಕೆ ಭಸ್ಮವಾಗಿಬಿಡುತ್ತದೆ? ಈ ಸಂದೇಹಗಳೇ ಅಕಾರಣ ದೇಹ ದಹನವನ್ನು ವಿಚಿತ್ರ ವಿದ್ಯಮಾನವಾಗಿಸಿವೆ.

“ಇದು ವಿಚಿತ್ರವೇನಲ್ಲ. ಅಕಾರಣ ದೇಹ ದಹನದ ಬಹುತೇಕ ಸಂದರ್ಭದಲ್ಲಿ ಹತ್ತಿರದಲ್ಲೆಲ್ಲೋ ಬೆಂಕಿಯ ಸೆಲೆ (ಮೋಂಬತ್ತಿ, ಅಗ್ಗಿಷ್ಟಿಕೆ, ದೀಪ ಮುಂತಾದ ಸಣ್ಣ ಉರಿಯ ಜ್ವಾಲೆಗಳು) ಇದ್ದದ್ದು ದಾಖಲಾಗಿದೆ. ಬೆಂಕಿ ಹೊತ್ತಿಸಲು ಇವು ಸಾಕು,” ಎನ್ನುತ್ತಾರೆ ಕ್ರಿಸ್ಟೆನ್ಸನ್. ಅದೇನೋ ಸರಿ. ಆದರೆ ದೇಹದಲ್ಲಿ ಉರಿಯುವಂಥದ್ದು ಏನಿದೆ? ಸಾಮಾನ್ಯವಾಗಿ ದೇಹವನ್ನು ಸುಡಬೇಕಾದಾಗ ಸೌದೆ, ಎಣ್ಣೆ  ಮುಂತಾದ ಕಾವು ಹೆಚ್ಚು ನೀಡುವ ಉರುವಲನ್ನು ಬಳಸಬೇಕು. ಇವ್ಯಾವುವೂ ಇಲ್ಲದಿದ್ದರೂ ದೀಪದ ಸಣ್ಣ ಜ್ವಾಲೆಯ ಉರಿಗೇ ದೇಹ ಹೊತ್ತಿಕೊಳ್ಳಬಹುದೇ?

ದೇಹದಲ್ಲಿಯೂ ಉರಿಯುವ ವಸ್ತುಗಳಿವೆ. ಚರ್ಮ ಹಾಗೂ ಅನ್ನಾಂಗಗಳು ಸಾಮಾನ್ಯವಾಗಿ ಉರಿಯುವುದಿಲ್ಲವಾದರೂ ಶುಷ್ಟವಾದಾಗ ಚೆನ್ನಾಗಿಯೇ ಉರಿಯುತ್ತವೆ. ಮೂಳೆಯೂ ಉರಿಯುವುದಿಲ್ಲವಾದರೂ ಅದರಲ್ಲಿರುವ ಮಜ್ಜೆ ಮತ್ತು ಅಂಗಾಂಶಗಳು ಬೆಂಕಿಗೆ ತುಪ್ಪ ಸುರಿದಂತೆ ಉರಿಯನ್ನು ಹೆಚ್ಚಿಸಬಲ್ಲುವು. ಇನ್ನುಕೊನೆಯದು ದೇಹದಲ್ಲಿರುವ ಕೊಬ್ಬು. ಇದು ಚೆನ್ನಾಗಿ ಉರಿಯುತ್ತದೆ. ಅಷ್ಟೆ ಅಲ್ಲ, ಉರಿ ಹೆಚ್ಚಾದಾಗ ಕರಗಿ ಬಿಡಬಲ್ಲುದು. ಇವೆಲ್ಲವನ್ನೂ ಗಮನಿಸಿದರೆ ದೇಹ ದಹನದ ಸಂಗತಿಗಳು ವಿಚಿತ್ರವಲ್ಲವೆನ್ನಬಹುದು.

ದೇಹ ದಹನವೆನ್ನುವುದು ಮೋಂಬತ್ತಿ ಉರಿದಂತೆ ಎನ್ನುತ್ತಾರೆ ವಿಜ್ಞಾನಿಗಳು. ಮೋಂಬತ್ತಿಯಲ್ಲಿ ಮೇಣ ಹೊತ್ತಿ ಉರಿಯುವುದಿಲ್ಲ. ಆದರೆ ಬತ್ತಿಯಲ್ಲಿನ ಜ್ವಾಲೆಗೆ ಉರುವಲನ್ನು ಒದಗಿಸುತ್ತಾ ಕರಗಿ ಹೋಗುತ್ತದೆ. ಇದೇ ರೀತಿಯಲ್ಲಿಯೇ ದೇಹದಲ್ಲಿನ ಕೊಬ್ಬು (ನೆಣ) ಧರಿಸಿದ ಬಟ್ಟೆಗೆ ಹಾಗೂ ಚರ್ಮ ಉರಿಯಲು ಉರುವಲನ್ನು ಒದಗಿಸುತ್ತಾ ಕರಗಿಬಿಡಬಹುದು. ಈ ಬಗೆಯಲ್ಲಿ ಉರಿಯುವ ಜ್ವಾಲೆಯಲ್ಲಿ ಕಾವು ಕಡಿಮೆ ಇರುವುದರಿಂದ ಸುತ್ತಲಿನ ವಸ್ತುಗಳು ಹೊತ್ತಿಕೊಳ್ಳುವುದಿಲ್ಲ ಎನ್ನುವುದು ತರ್ಕ. 1965ರಲ್ಲಿ ಈ ಬಗ್ಗೆ ಡಿ. ಜೆ. ಗೀ ಎನ್ನುವ ವೈದ್ಯ ಪ್ರಯೋಗಗಳನ್ನು ನಡೆಸಿದ್ದ. ದೇಹದ ಕೊಬ್ಬು ಉರಿದು ಬೂದಿಯಾಗಬೇಕಾದರೆ ಸುಮಾರು 2500 ಸೆಂಟಿಗ್ರೇಡ್ ನಷ್ಟು ಕಾವು ಬೇಕು. ಆದರೆ ಇದೇ ಕೊಬ್ಬು ಕರಗಿ ಬತ್ತಿಗೆ ಉರುವಲಾಗಬೇಕಾದರೆ ಕೇವಲ 240 ಸೆಂಟಿಗ್ರೇಡ್ ನಷ್ಟು ಕಾವಿದ್ದರೆ ಸಾಕು.

ಇಂಗ್ಲೆಂಡಿನ ಬಿಬಿಸಿ 1989ರಲ್ಲೇ ಈ ದೇಹ ದಹನದ ಸಂಗತಿ ಮಿಥ್ಯೆ ಎಂದು ನಿರೂಪಿಸುವ ಕಾರ್ಯಕ್ರಮವೊಂದನ್ನು ಪ್ರದರ್ಶಿಸಿತ್ತು. ಹಂದಿಯೊಂದರ ಶವವನ್ನು ಕಂಬಳಿಯಲ್ಲಿ ಸುತ್ತಿ ಅದಕ್ಕೆ ಬೆಂಕಿ ಹಚ್ಚಿದ್ದರು. ತನ್ನ ಮೇಲೆ ಸಿಂಪಡಿಸಿದ್ದ ಸೀಮೆಣ್ಣೆ ಉರಿದು ಹೋದ ಮೇಲೂ, ಐದು ಗಂಟೆಗಳ ಕಾಲ ಕಂಬಳಿ ಉರಿಯುತ್ತಲೇ ಇತ್ತು. ಹಂದಿಯಲ್ಲಿದ್ದ ಕೊಬ್ಬು ಕಂಬಳಿಗೆ ಉರುವಲಾಗಿ ಅದು ಅಷ್ಟು ದೀರ್ಘ ಕಾಲ ಉರಿಯಿತು. ಅಕಾರಣ ದೇಹ ದಹನವೂ ಹೀಗೇ ಆಗುತ್ತದೆ ಎಂದು ಬಿಬಿಸಿ ನುಡಿದಿತ್ತು.

ಇಷ್ಟಾದರೂ ಅಕಾರಣ ದೇಹ ದಹನವೊಂದು ವಿಚಿತ್ರ, ಪವಾಡ ಎನ್ನುವವರು ಇದ್ದೇ ಇದ್ದಾರೆ. ಸಾಮಾನ್ಯವಾಗಿ ದೇಹವನ್ನು ಸುಡಲು 9000 ರಿಂದ 10000 ಸೆಂಟಿಗ್ರೇಡ್ ಉಷ್ಣತೆ ಬೇಕು. ಇದೇ ಕಾರಣಕ್ಕೇ ಚಿತೆಯ ಸಮೀಪ ನಾವ್ಯಾರೂ ಸುಳಿಯಲಾಗುವುದಿಲ್ಲ. ಅದರ ಕಾವು ಅಷ್ಟಿದ್ದರೆ ಮಾತ್ರ ದೇಹ ಸಂಪೂರ್ಣ ಭಸ್ಮವಾಗಬಲ್ಲುದು. ಆದರೂ ಮೂಳೆಗಳು ಕೆಲವು ಉರಿಯದೆ ಉಳಿಯುತ್ತವೆ. ಅಕಾರಣ ದೇಹ ದಹನದಲ್ಲಿ ಮೂಳೆಗಳೂ ಉರಿದು ಬೂದಿಯಾಗಿರುತ್ತವೆ. ಆದ್ದರಿಂದ ದೇಹ ಮೇಣದಂತೆ ಕರಗಿ ದೀಪದಂತೆ ದೇಹ ಉರಿಯುವುದನ್ನು ಒಪ್ಪಲಾಗುವುದಿಲ್ಲಎನ್ನುವುದು ಪವಾಡವನ್ನು ನಂಬುವವರ ಮಾತು.

ಕ್ರಿಸ್ಟೆನ್ಸನ್ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯೋಗ ನಡೆಸಿದರು. ಅಕಾರಣ ದೇಹದ ದಹನಕ್ಕೊಳಗಾದ ವ್ಯಕ್ತಿಗಳ ಮೂಳೆಗಳು ಮೂಳೆಸವೆತ (ಆಸ್ಟಿಯೋಪೋರೋಸಿಸ್) ಕ್ಕೊಳಗಾದವುಗಳಿರಬಹುದೇ? ಇಂತಹ ಮೂಳೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಬಲ್ಲುವೇ? ಹೀಗಾಗುವುದಿದ್ದರೆ ಅಕಾರಣ ದೇಹ ದಹನವನ್ನು ವಿವರಿಸುವುದು ಸಾಧ್ಯ. ಏಕೆಂದರೆ ಅಕಾರಣ ದೇಹ ದಹನವಾಗಿರುವ ಬಹುತೇಕ ವ್ಯಕ್ತಿಗಳಲ್ಲಿ ಆಸ್ಟಿಯೋಪೋರೋಸಿಸ್ ಇರಬಹುದಾದ ಎಲ್ಲ ಯೋಗ್ಯತೆಗಳೂ ಹೆಚ್ಚಿವೆ. ಮಧ್ಯವಯಸ್ಕರು, ಬೊಜ್ಜಿರುವವರು ಹಾಗೂ ಕಾಕಸಿಯನ್ ಜನಾಂಗದವರು. ಹೀಗೆ ತರ್ಕಿಸಿದ ಕ್ರಿಸ್ಟೆನ್ಸನ್ ಒಂದು ಪ್ರಯೋಗ ನಡೆಸಿದ್ದಾರೆ.

ವೈದ್ಯಕೀಯ ಕಾಲೇಜಿನಿಂದ ಎರಡು ಮೂಳೆಗಳನ್ನು ಹಾಗೂ 70 ವರ್ಷ ವಯಸ್ಸಿನ ಮಹಿಳೆಯ ತುಂಡರಿಸಿದ ಕಾಲಿನ ತುಣುಕುಗಳನ್ನು ಇವರು ಪರೀಕ್ಷೆಗೆ ಒಳಪಡಿಸಿದ್ದಾರೆ. ಮೂಳೆಗಳಲ್ಲಿ ಒಂದು ಸಾಧಾರಣ ಮೂಳೆ ಹಾಗೂ ಮತ್ತೊಂದು ಸವೆದ ಮೂಳೆ. ಮೂಳೆಸವೆತ ಇರುವ ಮೂಳೆಗಳ ಸಾಂದ್ರತೆ ಬಹಳ ಕಡಿಮೆ ಇರುತ್ತದೆಯಾದ್ದರಿಂದ ಮೂಳೆಸವೆತವನ್ನು ಅಳೆಯಲು ಬಳಸುವ ಸಾಧನದಿಂದ ಈ ಎರಡೂ ಮೂಳೆಗಳ ಸಾಂದ್ರತೆಯನ್ನು ಗುರುತಿಸಿದ್ದಾರೆ. ಅನಂತರ ಇವುಗಳನ್ನು ಸಮಾನ ಅಳತೆಯ ಮೂರು ಪುಟ್ಟ ತುಂಡುಗಳನ್ನಾಗಿ ಮಾಡಿ ಪ್ರತಿಯೊಂದು ತುಂಡನ್ನೂ ಸುಟ್ಟಿದ್ದಾರೆ. ಚಿತಾಗಾರದಲ್ಲಿ ಸಾಮಾನ್ಯವಾಗಿರುವ ಕಾವಿನಲ್ಲಿ ಇವನ್ನು ಸುಟ್ಟು ಉಳಿಕೆ ಹೇಗಿರುತ್ತದೆ ಎಂದು ಗಮನಿಸಿದ್ದಾರೆ. ಮೂರೂ ತುಂಡುಗಳಲ್ಲಿಯೂ ಮೂಳೆಸವೆತದ ತುಂಡುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದವು. ಆದರೆ ಸಾಧಾರಣ ಮೂಳೆಯ ತುಂಡುಗಳು ಕರಿಕಲಾದರೂ ಗಟ್ಟಿಯಾಗಿದ್ದುವು.

ಇನ್ನು ಕಾಲು ಭಾಗದ ಮಾಂಸವನ್ನು ಚರ್ಮದ ಸಹಿತ ಬಟ್ಟೆಯೊಂದರಲ್ಲಿ ಸುತ್ತಿ ಬೆಂಕಿ ಹಚ್ಚಿದ್ದಾರೆ. ಪ್ರತಿ ತುಣುಕೂ ಸುಮಾರು 45 ನಿಮಿಷಗಳ ಕಾಲ ಉರಿದಿದೆ. ಹೀಗೆ ಉರಿಯುತ್ತಿರುವಾಗ ಅದರ ವೀಡಿಯೋ ಚಿತ್ರವನ್ನು ತೆಗೆದಿದ್ದಾರೆ. ವೀಡಿಯೊದಲ್ಲಿ ಜ್ವಾಲೆಯ ಎತ್ತರ ಬಣ್ಣವನ್ನು ಗುರುತಿಸಬಹುದಷ್ಟೆ. ಹಾಗೆಯೇ ದೂರದಿಂದಲೇ ಜ್ವಾಲೆಯ ಕಾವನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಉರಿದ ಮಾಂಸದ ತುಣುಕಿನ ಅಡಿಯಲ್ಲಿ ಹರಡಿದ ಕೊಬ್ಬಿನ ಪ್ರಮಾಣವನ್ನೂ ಲೆಕ್ಕ ಹಾಕಿದ್ದಾರೆ. ಸೆಕೆಂಡಿಗೆಷ್ಟು ಮಾಂಸ ಸುಡುತ್ತದೆಂದು ಗಮನಿಸಿ, ಆ ಪ್ರಕಾರ ಉತ್ಪನ್ನವಾದ ಉಷ್ಣದ ಪ್ರಮಾಣವೆಷ್ಟು ಎಂದು ಗಣಿಸಿದ್ದಾರೆ. ಗಣಿಸಿದ ಉಷ್ಣದ ಪ್ರಮಾಣ ತಾವು ಗಮನಿಸಿ ಅಳೆದ ಉಷ್ಣದ ಪ್ರಮಾಣಕ್ಕಿಂತ ಕಡಿಮೆ ಇತ್ತು.

ಆ ಮಾಂಸದ ತುಂಡಿನ ತೂಕದ ಆಧಾರದ ಮೇಲೆ ಲೆಕ್ಕ ಹಾಕಿದ ಉಷ್ಣತೆಯ ಅರ್ಧವಷ್ಟೆ ಗಮನಿಸಿದ ಉಷ್ಣತೆ ಇತ್ತು. ಅರ್ಥಾತ್, ಈ ದೇಹದ ತುಣುಕು ಕಡಿಮೆ ಉಷ್ಣತೆಯಲ್ಲಿ ದೀರ್ಘ ಕಾಲ ಉರಿಯಿತೆಂದು ಅರ್ಥವಷ್ಟೆ. ಬಟ್ಟೆಯೇ ಬತ್ತಿಯಾಗಿ, ಕೊಬ್ಬೇ ಮೇಣವಾಗಿ ಉರಿದರೆ ದೇಹ ಹೀಗೆಯೇ ನಿಧಾನವಾಗಿ ಉರಿಯುತ್ತದೆ. ವೀಡಿಯೋಗಳಲ್ಲಿ ಕಂಡ ಚಿತ್ರಗಳಲ್ಲಿಯೂ ಜ್ವಾಲೆ ಬಹಳ ಸಣ್ಣದಾಗಿಯೇ ಇತ್ತು ಎನ್ನುತ್ತಾರೆ. ಅಂದರೆ ಇಷ್ಟು ಉರಿದರೂ ದೇಹದ ಜ್ವಾಲೆ ಸುತ್ತಲಿನ ವಸ್ತುಗಳಿಗೆ ಬಿಸಿ ತಾಕಿಸದೇ ಇರಬಹುದು!  ಇವೆಲ್ಲದರ ಜೊತೆಗೆ ಮದ್ಯಪಾನಿಗಳ  ಉಸಿರು ಹಾಗೂ ಚರ್ಮದಲ್ಲಿರುವ ಮದ್ಯಸಾರ  ಉರಿಯುವುದಕ್ಕೆ ಇನ್ನಷ್ಟು ಒತ್ತಾಸೆಯಾಗಬಹುದು.

ಒಟ್ಟಾರೆ ಈ ಪ್ರಯೋಗ ಅಕಾರಣ ದೇಹ ದಹನವಾಗುವಾಗ ದೇಹದ ಕೊಬ್ಬೇ ಮೇಣವಾಗಿ ನಿಧಾನವಾಗಿ ಉರಿದು ಸಂಪೂರ್ಣ ಬೂದಿಯಾಗಬಹುದು. ಕೊಬ್ಬಿನ ಅಂಶ ಕಡಿಮೆ ಇರುವ ದೇಹದ ತುದಿ ಭಾಗಗಳು (ಬೆರಳು, ಕಾಲಿನ ತುದಿ, ತಲೆ) ಹೀಗೆ ಉರುವಲಾಗದೇ ಉಳಿಯಬಹುದು ಎಂದು ಸೂಚಿಸಿವೆ. ಅಸ್ಥಿ ಸಂಚಯಕ್ಕೂ ಉಳಿಯದಂತೆ ಮೂಳೆಗಳು ಸಂಪೂರ್ಣವಾಗಿ ಬೂದಿಯಾಗಬಹುದು ಎಂದೂ ಈ ಪ್ರಯೋಗ ನಿರೂಪಿಸಿದೆ. ಬಲು ವೃದ್ಧರ ಶವಸಂಸ್ಕಾರ ಮಾಡುವಾಗ ಮೂಳೆಗಳು ಉಳಿಯುವುದು ಅಪರೂಪವಷ್ಟೆ.

ಚೆನ್ನೈನ ರಾಹುಲ್ ನ ವಿಷಯದಲ್ಲಿಯೂ ಅಕಾರಣವಾಗಿಯೇನೂ ಆಗಿರಲಿಲ್ಲ ಎನ್ನುವುದು ಅಲ್ಲಿನ ವೈದ್ಯರ ಹೇಳಿಕೆ. ಏಕೆಂದರೆ ಆ ಕುಟುಂಬ ವಾಸಿಸುವ ಕಾಲೊನಿಯಲ್ಲಿ ಗಾಳಿಯಲ್ಲಿ ಉರಿಯುವ ಗಂಧಕದ ಬಳಕೆ ಹೆಚ್ಚು ಹಾಗೂ ಮನೆಯಲ್ಲಿ ಹಲವೆಡೆ ಗಂಧಕದ ಧೂಳು ಇದ್ದದ್ದನ್ನು ಗಮನಿಸಲಾಗಿದೆ ಎಂದಿದ್ದಾರೆ. ರಾಹುಲನಿಗಷ್ಟೆ ಅಲ್ಲದೆ ಅವನ ಸಹೋದರನಿಗೂ ಒಂದೆರಡು ಬಾರಿ ಬೆಂಕಿ ಬಿದ್ದಿದ್ದ ದಾಖಲೆ ಇರುವುದರಿಂದ ಈ ದಹ್ಯ ವಸ್ತುವಿನ ಪುಡಿಯಿಂದ ಹೀಗಾಗಿರಬಹುದು ಎನ್ನುವುದು ಅವರ ತರ್ಕ. ಪರೀಕ್ಷೆ ಮಾಡಲು ಸಾಧ್ಯವಿಲ್ಲದಿದ್ದರಿಂದ ಸಾಂದರ್ಭಿಕ ಪುರಾವೆಗಳೇ ಆಧಾರ.

ಹೀಗೆ ಅಕಾರಣ ದೇಹ ದಹನದ ಸಂದರ್ಭದಲ್ಲಿ ಕಾಣುವ ವಿಚಿತ್ರವೆನ್ನಿಸುವ ಎಲ್ಲ ಸಂಗತಿಗಳನ್ನೂ ವಿಜ್ಞಾನ ಸಮರ್ಪಕವಾಗಿ ವಿವರಿಸಬಲ್ಲುದು. ಪವಾಡಗಳು ವಿಜ್ಞಾನ ವಿವರಿಸಲಾಗದ ವಿಷಯಗಳಲ್ಲ. ಅವನ್ನು ಪರೀಕ್ಷಿಸುವ ವ್ಯವಧಾನ, ಸಾಧನಗಳು ಬೇಕಷ್ಟೆ.

________________

ಆಕರ:

Angi M. Christensen, Experiments in the combustibility of the Human body, J. Forensic Sci., Vol. 47 No. 3 Pp 66-470, 2002

Published in: on ಫೆಬ್ರವರಿ 16, 2016 at 6:13 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ