ಎಲ್ಲರಿಗೂ ಆಹಾರ ಸಸ್ಯಾಹಾರ?

25042016

ಆಕರ: Karl-Heinz Erb et al., Exploring the biophysical option space for feeding the world without deforestation, Nature Communications, NATURE COMMUNICATIONS | 7:11382 | DOI: 10.1038/ncomms11382

Published in: on ಏಪ್ರಿಲ್ 25, 2016 at 5:18 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೆಳ್ಳಿ ಲೋಹ ನೀಡಿದ ನೀಲಿ ಬಣ್ಣ

18042016

ಆಕರ:

  1. http://dx.doi.org/10.4236/ojpathology.2016.61008
  2. J Liu et al, ACS Nano, 2012, DOI: 10.1021/nn303449n
Published in: on ಏಪ್ರಿಲ್ 18, 2016 at 5:14 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂಸ್ಕೃತಕ್ಕೆ ತಿಳಿಯದ್ದು ಯಾವುದೂ ಇಲ್ಲ!

ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು,

  • ಹತ್ತಿ ಬಟ್ಟೆಯ ಅತಿ ಪುರಾತನ ಬಳಕೆಯ ಪುರಾವೆ ದೊರಕಿರುವುದು ಮೆಕ್ಸಿಕೋ ದೇಶದಲ್ಲಿ. ಅಲ್ಲಿನ  ಕೆಲವು ಗವಿಗಳಲ್ಲಿ 7000 ವರ್ಷಗಳಷ್ಟು ಹಳೆಯದೆನ್ನಿಸಿದ ಹತ್ತಿ ಸಿಕ್ಕಿದೆಯೆನ್ನಲಾಗಿದೆ. ಯುರೋಪಿಗೆ ಹತ್ತಿ ತಲುಪಿದ್ದು ಸುಮಾರು 2000 ವರ್ಷಗಳ ಹಿಂದೆ. ಭಾರತದ ಸಿಂಧೂ ಕಣಿವೆಯಲ್ಲಿ (ಕ್ರಿಸ್ತ ಪೂರ್ವ 3000, ಇಂದಿಗೆ 5000 ವರ್ಷಗಳ ಹಿಂದೆ) ಹತ್ತಿ ಬಟ್ಟೆಯ ಕುರುಹುಗಳಿವೆ. ಆದರೆ ಅದೇ ಸಮಯದಲ್ಲಿ ಉತ್ತರ ಅಮೆರಿಕಾ, ಆಫ್ರಿಕಾದಲ್ಲಿಯೂ (ಈಜಿಪ್ಟ್) ನಲ್ಲಿಯೂ ಹತ್ತಿ ಬಟ್ಟೆಗಳು ಬಳಕೆಯಿದ್ದುವು. ಅಂದರೆ ಇವು ಇಲ್ಲಿಗೆ ಬೇರೆಲ್ಲಿಂದಲೋ ಬಂದಿರುವ ಸಾಧ್ಯತೆಗಳಿವೆ. ಅಥವಾ ಬೇರೆ ಕಡೆಗೆ ಭಾರತವಲ್ಲದ ಕಡೆಯಿಂದಲೂ ಬಂದಿರುವ ಸಾಧ್ಯತೆಗಳಿವೆ.
  • ಹತ್ತಿ ಬಟ್ಟೆ ತಯಾರಾಗುವುದಕ್ಕೂ ಮುನ್ನ  ಎಲ್ಲರೂ ನಗ್ನರಾಗಿಯೇ ಓಡಾಡುತ್ತಿದ್ದರು ಎನ್ನಲಾಗದು. ಏಕೆಂದರೆ ದಿರಿಸಿಗಾಗಿ ತೊಗಲನ್ನು ಬಳಸುತ್ತಿದ್ದ ದಾಖಲೆಗಳಿವೆ. ಉಣ್ಣೆಯ ತೊಗಲನ್ನು ಛಳಿ ಪ್ರದೇಶದ ಬುಡಕಟ್ಟು ಜನಾಂಗದವರು ಇಂದಿಗೂ ಬಳಸುತ್ತಾರೆ. 
  • ಅವಶ್ಯಕತೆಗನುಗುಣವಾಗಿ ಆವಿಷ್ಕಾರಗಳು ಆಗುತ್ತವೆ. ಅವು ಒಂದೆಡೆಯೇ ಆಗಬೇಕೆಂದಿಲ್ಲ.  ಏಕಕಾಲಕ್ಕೆ ಹಲವೆಡೆ ವಿಭಿನ್ನ ರೂಪದಲ್ಲಿ ಆಗಬಹುದು. ದಿರಿಸೂ ಅಷ್ಟೆ. ಲಭ್ಯವಿದ್ದ ವಸ್ತುವಿನಿಂದ ದೇಹವನ್ನು ಮುಚ್ಚಿಕೊಳ್ಳುವುದನ್ನು ಮಾನವ ಬಹಳ ಹಿಂದೆಯೇ ಕಲಿತಿದ್ದ. ಅದಕ್ಕೆ ಸಂಸ್ಕೃತದ  ಅವಶ್ಯಕತೆ ಇರಲಿಲ್ಲ. ಛಳಿ, ಗಾಳಿ, ಮಳೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಂಗವೂ ದೊಡ್ಡ  ಎಲೆಗಳ ಛತ್ರಿಯನ್ನು ಮಾಡಿಕೊಳ್ಳುತ್ತದೆ. 

ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು. ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.

  • ಜಗತ್ತಿಗೆ ಸೊನ್ನೆ ಕೊಟ್ಟವರು ನಾವೇ! ಅದು ಹೆಮ್ಮೆಯ ವಿಷಯ. ಆದರೆ ಗಣಿತವೆನ್ನುವುದು ಅದಕ್ಕೂ ಹಿಂದೆಯೂ ಇತ್ತು. ಬೇರೆ ಬೇರೆ ಸ್ವರೂಪದಲ್ಲಿ ಅದನ್ನು ವಿಭಿನ್ನ ನಾಗರೀಕತೆಗಳು ಬಳಸುತ್ತಿದ್ದುವು. ಸಿಂಧೂ ಕಣಿವೆಯ ನಾಗರೀಕತೆಗಿಂತಲೂ ಮುನ್ನ ಅಥವಾ ಅದೇ ಸಮಯಕ್ಕೆ ಗಣಿತವನ್ನು ಬೆಬಿಲೋನಿನಲ್ಲಿ ಬಳಸುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ.  ಸೊನ್ನೆಯ ಕಲ್ಪನೆ ಬಂದಿದ್ದು ಬ್ರಹ್ಮಗುಪ್ತನ ಕಾಲದಲ್ಲಿ (ಸುಮಾರು 1200 ವರ್ಷಗಳ ಹಿಂದೆ). 

೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು…ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ
ಹೆಸರಿಸಿದ್ದಾರೆ.

  • ಸಂಸ್ಕೃತದ ಮೂಲ ಆದಿ ಇರಾನಿಯನ್ ಭಾಷೆ. ಇರಾನಿನಿಂದ ಹರಿದು ಬಂದ  ಈ ಭಾಷೆ ಉತ್ತರ ಭಾರತದಲ್ಲಿ ಸಂಸ್ಕೃತ ರೂಪದಲ್ಲಿ ನೆಲೆಯಾಯಿತು ಎನ್ನುವುದು ಭಾಷಾತಜ್ಞರ ಶೋಧ. ಭಾರತಕ್ಕೆ ಬಂದ ನಂತರ ಸುಮಾರು ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಪಾಣಿನಿಯ ವ್ಯಾಕರಣದಿಂದಾಗಿ ಇದು ಸುಸಂಸ್ಕೃತ ಭಾಷೆ ಎನ್ನಿಸಿತು. ಶಾಸ್ತ್ರಗಳ ಭಾಷೆಯಾಯಿತು. ಹಾಗೆ ನೋಡಿದರೆ ಸಂಸ್ಕೃತ ಹತ್ತು ಸಾವಿರ ವರ್ಷಗಳ ಹಳೆಯ ಭಾಷೆ ಅಲ್ಲವೇ ಅಲ್ಲ. ಹತ್ತು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲೇ ಇಲ್ಲದ ಭಾಷೆಯಲ್ಲಿ ಹೊಸ ಪದ ಬಂದದ್ದು ಹೇಗೆ?

Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ,  ಈ  ಗ್ರಹಗಳ  ಗಾತ್ರ,  ತೂಕ,  ವೇಗ  ಇತ್ಯಾದಿಗಳನ್ನೆಲ್ಲಾ  ನಿರೂಪಿಸಿದ್ದಾರೆ.

  • ‘ಸಿವಿಲೈಸೇಶನ್ ಆದ ಮೇಲೆ’.. ಅಂದರೆ ಅದಕ್ಕೂ ಮುನ್ನ ನಾಗರೀಕತೆ ಎನ್ನವುದು ಇರಲಿಲ್ಲವೇ? ಈ ಲೆಕ್ಕವನ್ನು ತೆಗೆದುಕೊಂಡರೆ ಬಹುಶಃ ಸಿಂಧೂ ಕಣಿವೆಯ ಜನತೆಯೂ ನಾಗರೀಕರಾಗಿರಲಿಲ್ಲ!  ಇದನ್ನು ಪೂರ್ವಾಗ್ರಹ ಪೀಡಿತ ಬರೆಹ  ಅನ್ನುವುದಕ್ಕೆ ಇಷ್ಟು ಸಾಲದೇ?

ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.

  • ತ್ರಿಕೋಣಮಿತಿ ಎನ್ನುವ ಪದವನ್ನು ಬಳಸಿದ್ದರೋ ಇಲ್ಲವೋ. ಆದರೆ ತ್ರಿಕೋಣಗಳ ತ್ರಿಭುಜಗಳ ನಡುವಣ ಸಂಬಂಧಗಳ ಲೆಕ್ಕಾಚಾರವನ್ನು ಎಂಟನೇ ಶತಮಾನದ ಖಗೋಳಜ್ಞರು ಮಾಡುತ್ತಿದ್ದರು ಎನ್ನುವುದು ಸತ್ಯ. ನಮ್ಮ ಶುಲ್ಬಸೂತ್ರಗಳಲ್ಲಿ ಈ ಬಗೆಯ ಲೆಕ್ಕಾಚಾರಗಳು ಸಾಕಷ್ಟಿವೆ.

ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.

  • ಬಟ್ಟೆಯ ಹಾಗೆಯೇ ವೇಳೆಯ ಕಲ್ಪನೆಯೂ ಮನುಷ್ಯನಿಗೆ ನೈಸರ್ಗಿಕವಾಗಿ ಬಂದ  ಅನುಭವ. ಆದರೆ ದಿನದ ಘಳಿಗೆಗಳನ್ನು ತಿಳಿಯುವ  ವಿಧಾನಗಳು ಮಾತ್ರ ವಿಭಿನ್ನವಾಗಿದ್ದುವು. ಗಡಿಯಾರದ ಚರಿತ್ರೆಯಲ್ಲಿ ನೀರಿನ ಗಡಿಯಾರ, ಮರಳಿನ ಗಡಿಯಾರವೆಂದೆಲ್ಲ ಇವೆ. ಇವು ವಿಭಿನ್ನ ನಾಗರೀಕತೆಗಳಲ್ಲಿ ವಿಭಿನ್ನ ಸಮಯಗಳಲ್ಲಿ ಬಳಕೆಯಲ್ಲಿದ್ದುವು. ಸೂರ್ಯನ ಸ್ಥಾನವನ್ನು ಗಮನಿಸಿ ದಿನದ ವೇಳೆಯನ್ನು ಹೇಳುವ ಪದ್ಧತಿ ಆಫ್ರಿಕಾದ ಹಲವು ಬುಡಕಟ್ಟು ಜನಾಂಗಗಳಲ್ಲಿ ಈಗಲೂ ಇದೆ. ಇವರಿಗೆ ಸಂಸ್ಕೃತ ಗೊತ್ತಿಲ್ಲ.  ಇನ್ನು ಇಂದು ನಾವು ಬಳಸುವ ಗಡಿಯಾರ ಕಾಲವನ್ನು ಅತಿ ಕ್ವಚಿತ್ತಾಗಿ, ನಿಖರವಾಗಿ ತಿಳಿಸುವ ಸಾಧನ.  ಇದರ ಅನ್ವೇಷಣೆಯಾಗಿದ್ದು ಯುರೋಪಿನಲ್ಲಿ.  ನಮ್ಮ ಪೂರ್ವಜರು ಇಷ್ಟೆಲ್ಲ ತಿಳುವಳಿಕೆಯಿದ್ದವರು ಎನ್ನುವುದು ಸತ್ಯ. ಆದರೆ ಜನಸಾಮಾನ್ಯರಿಗೆ ಅನುಕೂಲವಾದಂತಹ ಅನ್ವೇಷಣೆಗಳೇಕೆ  ಅವರು ಮಾಡಲಿಲ್ಲ ಎನ್ನುವ ಸಂದೇಹ ನನ್ನನ್ನು ನಿತ್ಯವೂ ಕಾಡುತ್ತಿದೆ.

Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.

  • ಇದು ಕಥೆ ಎಂದು ಹೇಳಬೇಕೆ? ಲೈವ್ ಶೋ ಎನ್ನುವುದು ನೂರು ವರ್ಷಗಳ ಹಿಂದಿನದಲ್ಲ. ಅದಕ್ಕೆ ಬೇಕಾದ ಸಲಕರಣೆಗಳು ಸಿದ್ಧವಾದದ್ದೇ ಕೆಲವು ದಶಕಗಳ ಹಿಂದೆ. ಅದಕ್ಕೂ ಮುನ್ನ ಎಲ್ಲವೂ ರೆಕಾರ್ಡಿಂಗ್ ಆಗಿಯೇ ಪ್ರಸಾರವಾಗುತ್ತಿದ್ದುವು.

ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ…..ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ….
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು….ಪುರಾವೆ ಇದೆ….ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ…..:oops: 😳

  • ಸತುವಿನ ಬಳಕೆ ಪುರಾತನ ಭಾರತದಲ್ಲಿ ಇತ್ತು ಎನ್ನುವುದು ಸತ್ಯ. ಏಕೆಂದರೆ ಚಿನ್ನ, ಬೆಳ್ಳಿ, ಸತು , ಕಬ್ಬಿಣ ಮತ್ತು ತಾಮ್ರದ ಅದಿರು ಭಾರತದಲ್ಲಿ  ಲಭ್ಯವಿತ್ತು. ಇವುಗಳ ಸಂಸ್ಕರಣೆಯೂ  ಇತರೆ ಲೋಹಗಳಿಗೆ ಹೋಲಿಸಿದರೆ ಸುಲಭ. ಈ ಲೋಹಗಳ ಸಂಸ್ಕರಣೆಯ ವಿವಿಧ ಸ್ವರೂಪಗಳು ವಿವಿಧೆಡೆ ಆವಿಷ್ಕಾರವಾಗಿವೆ. ಎಲ್ಲವೂ ಕುಲುಮೆಯನ್ನು ಆಧರಿಸಿದುವು ಎನ್ನುವುದು ಒಂದು ಸತ್ಯ. ಅದಿರುಗಳ ಸ್ವರೂಪವನ್ನು ಅವಲಂಬಿಸಿ, ಅಪ್ಪಟ ಲೋಹವನ್ನು ತಯಾರಿಸುವುದಾಗುತ್ತಿತ್ತು. ಅಂದ ಹಾಗೆ, ಇಡೀ ರಸಾಯನ ಶಾಸ್ತ್ರದ ಬೆಳವಣಿಗೆ ಆಗಿದ್ದೇ ಬಂಗಾರದ ಬೆನ್ನು ಹತ್ತಿದವರಿಂದ. ಕಬ್ಬಿಣವನ್ನು ಬಂಗಾರ ಮಾಡುವುದು ಹೇಗೆನ್ನುವುದರ ಬೆನ್ನು ಹತ್ತಿದವರು ರಸಾಯನ ವಿಜ್ಞಾನಿಗಳಾದರು. ಇಂದಿನ ರಸಾಯನಶಾಸ್ತ್ರಕ್ಕೆ ಹಾದಿ ಮಾಡಿಕೊಟ್ಟರು. ಕೊಲ್ಲೂರಿನ ಕಬ್ಬಿಣದ ಕಂಭ ಹಾಗೂ ದೆಹಲಿಯಲ್ಲಿ ಕುತುಬ್ ಮಿನಾರಿನ ಮುಂದಿರುವ ಕಬ್ಬಿಣದ ಕಂಭಗಳು ತಯಾರಿಯಾದ ಸಮಯದಲ್ಲಿಯೇ ಯುರೋಪಿನಲ್ಲಿ ಅತಿ ಮೊನಚಾದ, ತುಕ್ಕುಗಟ್ಟದ,  ಉಕ್ಕಿನ ಕತ್ತಿಗಳೂ ತಯಾರಾಗುತ್ತಿದ್ದುವು. ಅಂದ ಹಾಗೆ ಈ ತಂತ್ರಜ್ಞಾನಕ್ಕೂ ಸಂಸ್ಕೃತಕ್ಕೂ ಸಂಬಂಧವಿರುವ ಬಗ್ಗೆ ಪುರಾವೆಗಳಿಲ್ಲ. ಇವೇನಿದ್ದರೂ ಆಯಾ ಕಾಯಕ ಮಾಡಿಕೊಂಡಿದ್ದವರು ಕಂಡುಕೊಂಡ  ಸುಧಾರಣೆಗಳು. ಶಾಸ್ತ್ರಾಧ್ಯಯನದಿಂದ, ಅಥವಾ ಇಂದು ಧಾತುಗಳ ಗುಣಗಳನ್ನು ತಿಳಿದು ಸೂತ್ರಗಳ ಮೂಲಕ ಹೊಸ ಸಂಯುಕ್ತವನ್ನು ತಯಾರಿಸುವುದು ಹೇಗೆಂದು ಲೆಕ್ಕಿಸುವ ಶಾಸ್ತ್ರ ವಿಧಾನದಿಂದಲ್ಲ. ಇದೊಂದು ರೀತಿ ನಿರಕ್ಷರಕುಕ್ಷಿಯಾದವನೊಬ್ಬ ನಿಮ್ಮ ಸ್ಕೂಟರನ್ನು ಅದ್ಭುತವಾಗಿ ರಿಪೇರಿ ಮಾಡುವ ಹಾಗೆ. ಅವನ ಕೌಶಲ್ಯಕ್ಕೆ ಎಣೆಯಿಲ್ಲ. ಅದು ಕಲಿತ ಕೌಶಲ. 

ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು…..

  • ಅದರ ಅರಿವಿಲ್ಲದಿದ್ದರೆ ಬಹುಶಃ ಯುರೋಪಿಯನ್ನರು ವಿವಿಧ ಖಂಡಗಳನ್ನು ಆಕ್ರಮಿಸುತ್ತಿರಲಿಲ್ಲವೇನೋ?

ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ…
ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.

  • ಇದಕ್ಕಿಂತಲೂ ಹಳೆಯ ಭಾಷೆಗಳಿಂದ ಸಂಸ್ಕೃತ  ವಿಕಾಸವಾಯಿತೇ ಹೊರತು ಅದು ಇದ್ದಕ್ಕಿದ್ದ ಹಾಗೆ ಉದ್ಭವಿಸಲಿಲ್ಲ .

ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ….ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ….ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು…..

  • ವಿಶ್ವಾಮಿತ್ರರ ಕಾಲ ಯಾವುದು?

ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ….ಅದಿರಲಿ….ಆ ಸ್ತೋತ್ರ ಹನುಮಾನ ಚಾಲಿಸಾ…..

  • ಭೂಮಿಯಿಂದ ಸೂರ್ಯ ಭೂಮಿಯಿಂದ ಚಂದ್ರ  ಇರುವುದಕ್ಕಿಂತಲೂ ನಾನೂರು ಪಟ್ಟು ದೂರದಲ್ಲಿದ್ದಾನೆ ಎನ್ನುವುದನ್ನು ತ್ರಿಕೋನಮಿತಿಯ ಲೆಕ್ಕಾಚಾರಗಳಿಂದ ಸುಮಾರು ಕ್ರಿಸ್ತಶಕ 500 ರಿಂದ 1200 ಳೊಳಗೆ ತಿಳಿದುಕೊಂಡಿದ್ದರು. ತುಳಸೀದಾಸರು ಬಂದದ್ದು 17ನೇ ಶತಮಾನದಲ್ಲಿ (ಕ್ರಿಸ್ತಶಕ 1420 ರಿಂದ 1620 ರೊಳಗೆ). ಹನುಮಾನ ಚಾಲೀಸಕ್ಕಿಂತಲೂ ಮುನ್ನವೇ ಈ ವಿಷಯಗಳು ತಿಳಿದಿದ್ದುವು. ಸಂಸ್ಕೃತ ಕವಿಗಳು ಇಂತಹ ಮಾಹಿತಿಗಳನ್ನು ತಮ್ಮ ಕಾವ್ಯಗಳಲ್ಲಿ ಅಳವಡಿಸಿಕೊಂಡಿರುವುದನ್ನು ಹಲವು ಸುಭಾಷಿತಗಳಲ್ಲಿ, ಕಾಳಿದಾಸನ ಕಾವ್ಯಗಳಲ್ಲಿಯೂ ಕಾಣಬಹುದು.

ಇನ್ನು ಅನೇಕ ಪುರಾವೆಗಳಿವೆ….ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು…….

ನನ್ನ ಭಾರತ ಶ್ರೇಷ್ಠ ಭಾರತ….

  • ನನ್ನ ಭಾರತ ಶ್ರೇಷ್ಠವಾಗಲು ಕೇವಲ ಸಂಸ್ಕೃತವಷ್ಟೆ ಕಾರಣವಲ್ಲ. ಜೈನ ಮುನಿಗಳು ಕ್ರಿಸ್ತಪೂರ್ವ 2ನೇ ಶತಮಾನದಲ್ಲಿ ಪ್ರಾಕೃತ ಭಾಷೆಯಲ್ಲಿ ಬರೆದ ಗ್ರಂಥಗಳಲ್ಲಿ ‘ಅನಂತ’ ವೆನ್ನುವ ಪರಿಕಲ್ಪನೆಯನ್ನು ವಿಸ್ತಾರವಾಗಿ ವಿವರಿಸಿದ್ದಾರೆ. ಇದರ  ಅರ್ಥ  ಇಷ್ಟೆ. ಭಾರತದ  ಹಿರಿಮೆಗೆ ಸಂಸ್ಕೃತವಷ್ಟೆ ಅಲ್ಲ.  ಸಂಸ್ಕೃತ ಪಂಡಿತರಷ್ಟೆ ಅಲ್ಲ.  ಇತರೆ ಜನಾಂಗ, ಭಾಷೆಯವರೂ ಕೊಡುಗೆ ನೀಡಿದ್ದಾರೆ. ಶಾಸ್ತ್ರವಿದರಂತೆ, ಗಣಿತಜ್ಞರಷ್ಟೆ, ಕೃಷಿಕರೂ, ಇತರೆ ಕುಶಲಕೈಗಾರಿಕೆಯವರೂ ನಮ್ಮ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. ಹೊಯ್ಸಳರ ದೇವಾಲಯಗಳನ್ನು ಕೆತ್ತಿದ ಅದ್ಭುತ ಕಲೆಗಾರರು ಸಂಸ್ಕೃತ ಪಂಡಿತರಾಗಿದ್ದರೇ?  ಭಾರತ ಶ್ರೇಷ್ಠವಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಯ ಪೂರ್ವಾಗ್ರಹಪೀಡಿತ ವಾದಗಳು ನಮ್ಮನ್ನು ಶ್ರೇಷ್ಠರಾಗಿಸಲಿಲ್ಲ . ಆಗಿಸಲಿಕ್ಕಿಲ್ಲ.

———-
ಇದು ವಾಟ್ಸಪ್ ನಲ್ಲಿ ಬಂದ ಸಂದೇಶ. ಸಂಸ್ಕೃತ ವಿದ್ಯಾರ್ಥಿಯಾದ ನನಗೆ ಬಹಳ ಖುಷಿಯಾದರೂ ಇಲ್ಲಿ ಕಾಲ, ಸಮಯದ ಲೆಕ್ಕಾಚಾರ ತಪ್ಪಿದೆಯೋ ಎನಿಸುತ್ತಿದೆ. ನನಗೆ ಇರುವ ಅನುಮಾನಗಳನ್ನು ಇಲ್ಲಿ ದಾಖಲಿಸಿದ್ದೇನೆ. ಹೀಗೆ ಹೇಳಿದರೆ ನಾನು ದೇಶದ್ರೋಹಿ ಆಗಬಹುದೋ? 

Published in: on ಏಪ್ರಿಲ್ 17, 2016 at 6:13 ಅಪರಾಹ್ನ  Comments (1)  

ಊಹೆಯೋ, ಕಲ್ಪನೆಯೋ?

ಕನ್ನಡಪ್ರಭ ಯುಗಾದಿ ವಿಶೇಷಾಂಕದಲ್ಲಿ ಜ್ಯೋತಿಷ್ಯದ ಬಗ್ಗೆ ನನ್ನ ಅನಿಸಿಕೆಗಳನ್ನು ಕುರಿತು ಬರೆದ ಲೇಖನಗಳ ಪುಟಗಳು ಇಲ್ಲಿವೆ.

kpyugdi1

kpyugdi2.jpg

kpyugdi3.jpg

Published in: on ಏಪ್ರಿಲ್ 16, 2016 at 11:47 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕೆಲವು ಕಾಮನ್ಸೆನ್ಸ್ ಪ್ರಶ್ನೆಗಳು

ವಾಟ್ಸಪ್ ನಲ್ಲಿ ನಿತ್ಯವೂ ಹಲವು ಪೋಸ್ಟಿಂಗ್ ಗಳು ಬರುತ್ತವೆ. ಅವುಗಳಲ್ಲಿ ಹಾಸ್ಯವೇ ಜಾಸ್ತಿಯಾದರೂ, ಕೆಲವು ಹಾಸ್ಯಾಸ್ಪದವೆನ್ನಿಸುವಂಥವೂ ಇರುತ್ತವೆ. ಕೆಳಗಿನ ಪೋಸ್ಟ್ ಹೀಗೇ ಬಂದಿತ್ತು. ಆದರೆ ಇದನ್ನು ನೋಡಿ ನಕ್ಕು ಸುಮ್ಮನಾಗಿ ಬಿಟ್ಟೆ. ನಗಲು ಕಾರಣ ಅದನ್ನು ಓದುವಾಗ ನನ್ನ ಮನಸ್ಸಿನಲ್ಲೆದ್ದ ಕೆಲವು ನಿತ್ಯಾನುಭವದ ಪ್ರಶ್ನೆಗಳು. ಅದನ್ನು ನಿಮ್ಮ ಜೊತೆಗೂ ಹಂಚಿಕೊಂಡಿದ್ದೇನೆ. ನಾನು ಸಂಪ್ರದಾಯ ವಿರೋಧಿ, ಅಹಿಂದು ಎಂದೆಲ್ಲ ನಿಮಗೆ ಅನ್ನಿಸಿದರೂ ಈ ಪ್ರಶ್ನೆಗಳು ಸತ್ಯ! ಅಂಧವಿಶ್ವಾಸ ಮತ್ತು ಲಾಜಿಕ್ ನನಗೆ ಬಂದ ಪೋಸ್ಟ್ ನಲ್ಲಿ ಇದ್ದಂಥವು. ಇಟಾಲಿಕ್ಸ್ (ಓರೆ ಅಕ್ಷರಗಳಲ್ಲಿ) ಬರೆದಿರುವುದು ನನ್ನ ಪ್ರಶ್ನೆಗಳು.

ಕೆಲವು ಕಾಮನ್ ಸೆನ್ಸ್ ಪ್ರಶ್ನೆಗಳು

ಸ್ಮಶಾನದಿಂದ ಬಂದ ಮೇಲೆ ಸ್ನಾನ ಮಾಡೋದು

ಅಂಧವಿಶ್ವಾಸ : ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಲಾಜಿಕ್‌ : ಹಿಂದೆ ಹೆಪಟೈಟೀಸ್‌, ಸ್ಮಾಲ್‌ ಪಾಕ್ಸ್‌ ಮೊದಲಾದ ರೋಗಗಳಿಗೆ ಚಿಕಿತ್ಸೆ ಇರಲಿಲ್ಲ. ಆವಾಗ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮೇಲೆ ಸ್ನಾನ ಮಾಡುತ್ತಿದ್ದರು. ಯಾಕೆಂದರೆ ಡೆಡ್‌ ಬಾಡಿಯಲ್ಲಿರುವ ಯಾವುದೇ ಕೀಟಾಣು ತಮಗೆ ಸಮಸ್ಯೆ ನೀಡದೇ ಇರಲಿ ಎಂದು.

ನಿಜ ಸ್ನಾನ ಮಾಡಿದರೆ ಹೆಣ/ಶವದಲ್ಲಿರುವ ರೋಗಾಣುಗಳು ದೇಹವನ್ನು ಸೇರುವುದಿಲ್ಲ. ಒಪ್ಪಿಕೊಳ್ಳುವ ಮಾತು. ಆದರೆ ಸತ್ತ ದೇಹದಿಂದ ಮಾತ್ರವೇ ರೋಗಾಣುಗಳು ಸೋಂಕುತ್ತವೆಯೋ? ಬದುಕಿದವರಿಂದ ತಾಕುವುದಿಲ್ಲವೇ? ಹಾಗಿದ್ದರೆ ರೋಗಿಯ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತಿದ್ದರೆ? ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ ಮಾತ್ರ ಆ ಕಾಲದಲ್ಲಿ ಈ ಆಚರಣೆಯನ್ನು ನಿರ್ದಿಷ್ಟ ಕಾರಣದಿಂದ ಮಾಡುತ್ತಿದ್ದರು ಎನ್ನಬಹುದು. ಇಲ್ಲವಾದರೆ ಅದು ಕೇವಲ ಆಚರಣೆ. ಶವ ಅಸಹ್ಯ. ಆದ್ದರಿಂದ ಶುಚಿಯಾಗಬೇಕು ಎನ್ನುವುದಷ್ಟೆ ಅರ್ಥ. ರೋಗಾಣುಗಳಿದ್ದುವೆನ್ನುವ ತಿಳುವಳಿಕೆಯಿಂದಲ್ಲ.

 

ಕೊಳದಲ್ಲಿ ನಾಣ್ಯಗಳನ್ನು ಹಾಕುವುದು

ಅಂಧವಿಶ್ವಾಸ : ಭಾಗ್ಯ ಹೆಚ್ಚಾಗುತ್ತದೆ

ಲಾಜಿಕ್‌ : ಮೊದಲು ತಾಮ್ರದ ನಾಣ್ಯಗಳು ದೊರೆಯುತ್ತಿತ್ತು. ತಾಮ್ರದ ವಸ್ತುಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಆದುದರಿಂದ ಅದನ್ನು ನೀರಿಗೆ ಹಾಕುತ್ತಿದ್ದರು. ಅಲ್ಲದೇ ತಾಮ್ರ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕ ತತ್ವವನ್ನು ಸಹ ನೀಡುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರನ್ನಿಟ್ಟಾಗ ತಾಮ್ರದ ಅಯಾನುಗಳ ಪ್ರಭಾವದಿಂದಾಗಿ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. (ಬೂಸುಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.) ಸೋಸಿದ ನೀರನ್ನು ತಾಮ್ರದ ಪಾತ್ರೆಯಲ್ಲಿಟ್ಟಾಗ ಅದರಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ. ಇದು ನಿಜ. ಆದರೆ ಹೀಗಾಗುವುದಕ್ಕೆ ಹಲವು ಪರಿಸ್ಥಿತಿಗಳು ಸರಿಯಾಗಿರಬೇಕು. ತಾಮ್ರದ ಪಾತ್ರೆ ಬಹಳ ದೊಡ್ಡದಾಗಿದ್ದರೆ ಅದರೊಳಗಿರುವ ನೀರು ಶುಚಿಗೊಳ್ಳುವುದು ನಿಧಾನ. ಏಕೆಂದರೆ ನೀರಿನ ಎಲ್ಲ ಅಣುಗಳೂ ತಾಮ್ರದ ಜೊತೆಗೆ ಸಂಪರ್ಕಕ್ಕೆ ಬರುವುದು ನಿಧಾನವಾಗುತ್ತದೆ. ಅಂದ ಮೇಲೆ ಕೊಳದೊಳಗೆ ಹಾಕಿದ ತಾಮ್ರದ ಕಾಸಿನ ಜೊತೆಗೆ ಸಂಪರ್ಕಕ್ಕೆ ಬರುವ ನೀರಿನ ಪ್ರಮಾಣ ಬಹಳವೇನಿಲ್ಲವಷ್ಟೆ. ಇನ್ನು ನದಿಗೆ ಹಾಕಿದ ತಾಮ್ರದ ಜೊತೆಗೆ ಯಾವ ನೀರು ಸಂಪರ್ಕದಲ್ಲಿ ಉಳಿಯುವುದಿಲ್ಲ. ಏಕೆಂದರೆ ಅದು ಹರಿಯುತ್ತಲೇ ಇರುವುದರಿಂದ ಅಯಾನುಗಳ ಪ್ರಭಾವಕ್ಕೆ ಒಳಗಾಗುವಷ್ಟು ಸಮಯ ಸಿಗುವುದಿಲ್ಲ. ಕೊಳವನ್ನು ಶುಚಿಗೊಳಿಸಲು ಕೊಳದ ತುಂಬಾ ತಾಮ್ರವನ್ನು ತುಂಬಬೇಕಾಗುತ್ತದಲ್ಲವೇ? ಮತ್ತೊಂದು ವಿಷಯ. ನೀರಿಗೆ ಬಿದ್ದ ಕಾಸು ಎಲ್ಲೇ ಉಳಿಯುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಕಾಶಿಯಲ್ಲಿಯೂ, ಗಯೆಯಲ್ಲಿಯೂ, ತಿ.ನರಸೀಪುರದಲ್ಲಿಯೂ ನೀರಿನೊಳಗೆ ಮುಳುಗಿ ಕಾಸನ್ನು ಹೆಕ್ಕುವ ಹುಡುಗರಿದ್ದಾರೆ. ತಾಮ್ರ ನೀರನ್ನು ಶುಚಿಗೊಳಿಸುವುದು ಸತ್ಯ. ಆದರೆ ಕೊಳದೊಳಗೆ ಹಾಕಿದ ಕಾಸು ಕೊಳವನ್ನು ಶುಚಿಗೊಳಿಸುತ್ತದೆ ಎನ್ನುವುದು ಮಿಥ್ಯೆ. ಇದು ನಿಜವಾಗಿದ್ದಿದ್ದರೆ ನಮ್ಮ ಎಲ್ಲ ದೇವಸ್ಥಾನದ ಕೊಳಗಳೂ ಈಗ ಶುಚಿಯಾಗಿರಬೇಕಿತ್ತು. ಕೊಳಕ್ಕೆ ಹಾಕುವ ಕಾಸು ಶುಚಿಗೊಳಿಸಲು ಸಾಲುವುದಿಲ್ಲ. ಮತ್ತೊಂದು ಪ್ರಶ್ನೆ. ಈಗ ನಮ್ಮ ಬಳಿ ತಾಮ್ರದ ಕಾಸು ಇಲ್ಲವಾದ ಮೇಲೆ ಕೊಳಕ್ಕೆ ಹಾಕುವುದೇಕೆ? ಅದು ನಿಷ್ಪ್ರಯೋಜಕ ಅಲ್ಲವೇ? ಸಂಪ್ರದಾಯವೇ ಆಗಿದ್ದರೂ ವ್ಯರ್ಥ ಕೆಲಸ ಮಾಡುವುದೇಕೆ?

 

ಎಲ್ಲಿಯಾದರು ಹೋಗುವಾಗ ಮೊಸರು ತಿನ್ನೋದು

ಅಂಧವಿಶ್ವಾಸ : ಭಾಗ್ಯ ನಿಮ್ಮ ಜೊತೆ ಇರುತ್ತದೆ.

ಲಾಜಿಕ್‌ : ಬೇಸಿಗೆ ಕಾಲದಲ್ಲಿ ಮೊಸರು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೇ ಮೊಸರಿನ ಜೊತೆ ಸಕ್ಕರೆ ಬೆರೆಸಿ ತಿನ್ನೋದ್ರಿಂದ ದೇಹಕ್ಕೆ ಗ್ಲೋಕೋಸ್‌ ದೊರೆಯುತ್ತದೆ.

ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಮೊಸರು ಯಾವಾಗ ತಿಂದರೂ ಒಳ್ಳೆಯದೇ. ಆದರೆ ಬಲು ಶೀತ ಕಾಲದಲ್ಲಿ ಇದು ಅಷ್ಟು ಉಪಯುಕ್ತವಲ್ಲ. ಮೊಸರಿನಲ್ಲಿರುವ ಕೆಲವು ಬ್ಯಾಕ್ಟೀರಿಯಾ (ಲ್ಯಾಕ್ಟೊಬ್ಯಾಸಿಲಸ್…) ಕೆಲವು ಅವಶ್ಯಕ ಜೀವಸತ್ವಗಳನ್ನು ಸೃಷ್ಟಿಸುವುದರಿಂದ ದೇಹಕ್ಕೆ ಉಪಯುಕ್ತ. ಹಾಗೆಯೇ ಈ ಬ್ಯಾಕ್ಟೀರಿಯಾ ಕೆಲವು ಇತರೆ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಅಣುಗಳನ್ನೂ ಉತ್ಪಾದಿಸುತ್ತದೆ. ಈ ಕಾರಣಕ್ಕೆ ಮೊಸರು ತಿನ್ನಬೇಕು. ಹಾಲಿನಲ್ಲಿಯೂ ಸಕ್ಕರೆಯ ಅಂಶ ದೊರೆಯುತ್ತದೆ. ಕೊಬ್ಬೂ ದೊರೆಯುತ್ತದೆ. ಆದರೆ ಬ್ಯಾಕ್ಟೀರಿಯಾ ಇರುವುದಿಲ್ಲವಾದ್ದರಿಂದ ಮೊಸರು ಹಾಲಿಗಿಂತ ಉತ್ತಮ. ಅಂದ ಹಾಗೆ, ಬೇಸಗೆಯಲ್ಲಿ ತಂಪು ಎಂದು ಬರೆ ಮೊಸರನ್ನು ತಿಂದು ಉಳಿಯಬಹುದೇ? ಸಾಧ್ಯವಿಲ್ಲ. ಉಪ್ಪೂ ಬೇಕು. ಇತರೆ ಆಹಾರವೂ ಬೇಕು.

 

ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯಬಾರದು

ಅಂಧವಿಶ್ವಾಸ : ಕೆಟ್ಟ ಸಮಯ ಆರಂಭವಾಗುತ್ತದೆ.

ಲಾಜಿಕ್‌ : ಹಿಂದಿನ ಕಾಲದಲ್ಲಿ ನೀರನ್ನು ಉಳಿಸುವ ಸಲುವಾಗಿ ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯದೇ ಇರುತ್ತಿದ್ದರು.

ಆಹಾ! ಬೇರೆ ದಿನಗಳಲ್ಲಿ ತೊಳೆಯದಿದ್ದರೆ ನೀರು ಉಳಿಯುವುದಿಲ್ಲವೇ? ಮಂಗಳವಾರ ಹಾಗೂ ಗುರುವಾರವಷ್ಟೆ ಏಕೆ? ಬುಧವಾರ, ಶನಿವಾರ ತೊಳೆಯದಿದ್ದರೂ ನೀರು ಉಳಿಯುತ್ತದಲ್ಲ?

 

ಬಾಗಿಲಿನಲ್ಲಿ ಲಿಂಬೆ ಮತ್ತು ಮೆಣಸು ಕಟ್ಟುವುದು

ಅಂಧವಿಶ್ವಾಸ : ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗಲು

ಲಾಜಿಕ್‌ : ನಿಂಬೆ ಮತ್ತು ಮೆಣಸಿನಲ್ಲಿರುವ ಸಿಟ್ರಿಕ್‌ ಆ್ಯಸಿಡ್‌ನಿಂದಾಗಿ ಮನೆಯ ಒಳಗೆ ಕೀಟಾಣುಗಳು ಬರದಂತೆ ತಡೆಯುತ್ತದೆ.

ಸಿಟ್ರಿಕ್ ಆಮ್ಲ ಕೀಟಾಣುಗಳು ಒಳಗೆ ಬಾರದಂತೆ ತಡೆಯುತ್ತದೆ. ಆಮ್ಲ ವಾತಾವರಣದಲ್ಲಿ ಬ್ಯಾಕ್ಟೀರಿಯಾ, ಬೂಸುಗಳ ಬೆಳವಣಿಗೆ ಕಡಿಮೆ ಎನ್ನುತ್ತದೆ ವಿಜ್ಞಾನ. ಇದೇ ಕಾರಣಕ್ಕೆ ನಾವು ಉಪ್ಪಿನಕಾಯಿ ಹಾಕುವಾಗ ವಿನೆಗರ್, ಹುಣಿಸೆ ಹುಳಿ, ನಿಂಬೆಹುಳಿಯಂತಹ ಆಮ್ಲ ವಸ್ತುಗಳನ್ನು ಬಳಸುತ್ತೇವೆ. ಶಸ್ತ್ರಕ್ರಿಯೆಯ ವೇಳೆ ನಿಷ್ಕ್ರಿಮಿಕರಣಕ್ಕೆ ಕಾರ್ಬಾಲಿಕ್ ಆಮ್ಲವನ್ನು ಬಳಸುವುದು ರೂಢಿ. ಆದರೆ ಗಮನಿಸಿ, ಇವೆಲ್ಲವನ್ನೂ ದ್ರಾವಣವನ್ನಾಗಿ ಬಳಸುತ್ತೇವೆ. ಏಕೆಂದರೆ ಬ್ಯಾಕ್ಟೀರಿಯಾ, ಬೂಸು ಮುಂತಾದವು ತೇವಾಂಶ ಇದ್ದರೆ ಸೊಂಪಾಗಿ ಬೆಳೆಯುತ್ತವೆ. ಉಪ್ಪಿನಕಾಯಿಯಲ್ಲಿರುವ ಉಪ್ಪು ಈ ತೇವಾಂಶದ ಪ್ರಭಾವ (ವಾಟರ್ ಆಕ್ಟಿವಿಟಿ) ಯನ್ನು ಕಡಿಮೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯಲು ಅವಕಾಶವಿರುವುದಿಲ್ಲ. ಗಾಳಿಯಲ್ಲಿರಬಹುದಾದ ಬ್ಯಾಕ್ಟೀರಿಯಾ ಸ್ಪೋರ್ ಗಳು ಹೀಗೆ ನಿಷ್ಕ್ರಿಯವಾಗುತ್ತವೋ ಗೊತ್ತಿಲ್ಲ. ಆದರೆ ಅದಕ್ಕೆ ಬಲು ಸಾಂದ್ರವಾದ ಸಿಟ್ರಿಕ್ ಆಮ್ಲದ ಹೊಗೆ ಹಾಕಬೇಕು. ಬಾಗಿಲಿಗೆ ಕಟ್ಟಿದ ನಿಂಬೆಯಲ್ಲಿ ಇಡೀ ಮನೆಯನ್ನು ಶುಚಿಗೊಳಿಸುವಷ್ಟು ಸಿಟ್ರಿಕ್ ಆಮ್ಲ ಇದೆಯೇ?

ಮತ್ತೊಂದು ಸಂದೇಹ! ಇದು ಸಂಪ್ರದಾಯವಷ್ಟೆ. ಅದರಲ್ಲೂ ಈ ಲಾಜಿಕ್ ಪ್ರಕಾರ ಜಾಣ ಸಂಪ್ರದಾಯ. ಹಾಗಿದ್ದರೆ ಮೆಣಸಿನಕಾಯಿ ನಮ್ಮ ದೇಶಕ್ಕೆ ಬರುವುದಕ್ಕೆ ಮುನ್ನ ಏನು ಮಾಡುತ್ತಿದ್ದರು? ಏಕೆಂದರೆ ಮೆಣಸಿನಕಾಯಿ ಭಾರತಕ್ಕೆ ಬಂದಿದ್ದು ಸುಮಾರು 500 ವರ್ಷಗಳ ಹಿಂದೆಯಷ್ಟೆ. ಅದಕ್ಕೂ ಹಿಂದೆ ಏನಿತ್ತು ಸಂಪ್ರದಾಯ? ಈಗ ನಮಗೆ ಸಾಬೂನಿನಿಂದ ಕೀಟಾಣುಗಳು ಇನ್ನೂ ಸಮರ್ಥವಾಗಿ ನಿವಾರಣೆಯಾಗುತ್ತವೆ ಎಂದು ತಿಳಿದಿದೆ. ಹಾಗಿದ್ದರೆ ಬಾಗಿಲಿಗೆ ಒಂದು ಸಾಬೂನು ಕಟ್ಟಿ ನೋಡೋಣವೇ?

ಮೂರನೆಯ ಸಂದೇಹ. ಕೀಟಾಣುಗಳು ಕೇವಲ ಮುಂಬಾಗಿಲಿನಿಂದಷ್ಟೆ ಬರುತ್ತವೆಯೇ? ಹಿಂಬಾಗಿಲಿರುವುದು ಅವಕ್ಕೆ ಗೊತ್ತಿಲ್ಲವೇ?

 

ಗ್ರಹಣದ ಸಮಯದಲ್ಲಿ ಹೊರಗೆ ಹೋಗದೇ ಇರೋದು

ಅಂಧವಿಶ್ವಾಸ : ರಾಹುವಿನ ಪ್ರಭಾವ

ಲಾಜಿಕ್‌ : ಸೂರ್ಯ ಗ್ರಹಣದ ಸಂದರ್ಭ ಬರೀ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ.

ಸೂರ್ಯ ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯ ನಿಜ. ಆದರೆ ನಿತ್ಯ ಜೀವನದಲ್ಲಿಯೂ ಯಾರೂ ಸೂರ್ಯನತ್ತ ಕಣ್ಣು ಹಾಯಿಸುವುದಿಲ್ಲವಷ್ಟೆ. ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲಿನಲ್ಲೇ ಸುತ್ತಾಡಿದ್ದರೂ, ಸನ್ ಗ್ಲಾಸ ಹಾಕಿಕೊಂಡಿದ್ದರೂ ಸೂರ್ಯನತ್ತ ನೋಡುವವರು ಎಷ್ಟು ಮಂದಿ? ಅಂದ ಮೇಲೆ ಈ ತರ್ಕ ಕುತರ್ಕವಲ್ಲವೇ? ಗ್ರಹಣದ ನೆರಳು ಮೈ ಮೇಲೆ ಬಿದ್ದರೆ ಪಾಪ ಅಂಟಿಕೊಳ್ಳುತ್ತದೆ ಎನ್ನುವುದು ಅಂಧ ವಿಶ್ವಾಸವಲ್ಲದೆ ಇನ್ನೇನಲ್ಲ.

 

ಮಂದಿರದಲ್ಲಿ ಗಂಟೆ ಭಾರಿಸುವುದು

ಅಂಧವಿಶ್ವಾಸ : ಗಂಟೆ ಭಾರಿಸುವುದರಿಂದ ದೇವರಿಗೆ ಸಂತೋಷವಾಗುತ್ತದೆ.

ಲಾಜಿಕ್‌ : ಗಂಟೆ ಬಡಿದ ಮೇಲೆ ಉಂಟಾಗುವ ವೈಬ್ರೇಶನ್‌ನಿಂದಾಗಿ ನಮ್ಮ ದೇಹದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಮನಸ್ಸು ಕೇಂದ್ರೀಕೃತವಾಗಲು ಸಹಾಯಕವಾಗುತ್ತದೆ.

 

ನಮ್ಮ ಮನಸ್ಸು ಗಂಟೆಯ ಶಬ್ದದಿಂದ ಕೇಂದ್ರೀಕೃತವಾಗುತ್ತದೆ ಎನ್ನುವುದು ನಿಜ. ಗಂಟೆಯ ನಿನಾದ, ಅದು ಅನುರಣನಗೊಳ್ಳುವ ರೀತಿಯಿಂದಾಗಿ ಸಂಗೀತವೆನ್ನಿಸುತ್ತದೆ. ಕೆಲವೊಮ್ಮೆ ಇದು ಕರ್ಕಶವೆನ್ನಿಸುವುದೂ ನಿಜ. ಆದರೆ ಈ ಕಂಪನಗಳು ‘ಧನಾತ್ಮಕ ಪ್ರಭಾವ’ ಬೀರುತ್ತವೆ ಎನ್ನುವುದು ಅಸ್ಪಷ್ಟ ವಿವರಣೆ. ಧನಾತ್ಮಕ ಎಂದರೇನು? ಯಾವುವು ಧನಾತ್ಮಕ ಪರಿಣಾಮಗಳು?

 

ಒಟ್ಟಾರೆ ಇಂತಹ ವಿವರಣೆಗಳು ನಮ್ಮ ಸಂಪ್ರದಾಯಗಳಲ್ಲೂ ವಿಜ್ಞಾನ ಇದೆ ಎಂದು ನಿರೂಪಿಸಲು ತಿಣುಕಾಡುವ ತರ್ಕಗಳು ಎನ್ನಬಹುದು. ಒಂದು ಮಾತನ್ನು ನೆನಪಿಡಬೇಕು. ವಿಜ್ಞಾನ ಸಂಸ್ಕೃತಿಯ ವಿರೋಧಿಯಲ್ಲ. ಸಂಸ್ಕೃತಿ ನಿಂತ ನೀರಲ್ಲ. ಸದಾ ಬದಲಾಗುತ್ತಿರುತ್ತದೆ. ನಮ್ಮದಲ್ಲದ ಮೆಣಸಿನಕಾಯಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿಲ್ಲವೇ? ಆಚರಣೆ, ಸಂಪ್ರದಾಯಗಳು ಕೆಲವೊಮ್ಮೆ ಯಾವ ಅರ್ಥವೂ ಇಲ್ಲದ ಅಣಕು ಕ್ರಿಯೆಗಳಾಗಿರುತ್ತವೆ. ಬೆಳಗ್ಗೆ ಕಂಪ್ಯೂಟರು ಆನ್ ಮಾಡಿದ ಕೂಡಲೇ ಅದಕ್ಕೆ ನಮಸ್ಕರಿಸುವುದು ಇಂತಹ ಅಣಕು ಕ್ರಿಯೆ.

ವಿಜ್ಞಾನದ ವಿಚಾರ ಸರಳ. ನೇರವಾದ ಪ್ರಶ್ನೆಗಳನ್ನು ಕೇಳುವುದಷ್ಟೆ ಅದರ ಕೆಲಸ. ವಿವರಣೆ ನೀಡುವುದು ವಿಜ್ಞಾನವಲ್ಲ. ಪ್ರಶ್ನೆಗಳನ್ನು ಕೇಳುತ್ತ ಹೋದ ಹಾಗೆ ವಿವರಣೆಗಳು ಸ್ಪಷ್ಟವಾಗುತ್ತವೆ. ನಾವು ಹೀಗೆ ಸಂಪ್ರದಾಯಗಳನ್ನು ಹೇರುವುದಕ್ಕಾಗಿಯೇ ಅವಕ್ಕೆ ಕಾರಣಗಳನ್ನು ಹುಡುಕುವ ಅಗತ್ಯವಿಲ್ಲ.

Published in: on ಏಪ್ರಿಲ್ 11, 2016 at 6:10 ಫೂರ್ವಾಹ್ನ  Comments (3)  

ಪಾಪಾಸುಕಳ್ಳಿಯ ಮತ್ತೊಂದು ಉಪಯೋಗ

11042016

 

Published in: on ಏಪ್ರಿಲ್ 11, 2016 at 6:06 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಂತೋಷದ ಸ್ವರೂಪ – ಸಂತೋಷದ ಬಗೆ 14

ಋಣಾತ್ಮಕ ಖುಷಿ

ದುಃಖಿ

ಸಿಗ್ಮಂಡ್ ಫ್ರಾಯ್ಡ್ “ಜನರು ದುಃಖವನ್ನು ತೊಡೆದು ಹಾಕಿ ಖುಸಿಯನ್ನು ಪಡೆಯಲು ಪ್ರಯತ್ನಸುತ್ತಾರೆ” ಎಂದು ಹೇಳುವ ಮೂಲಕ ಈ ಖುಷಿಯ ಮಾರ್ಗವನ್ನು ಬೆಂಬಲಿಸಿದ್ದಾನೆ. ಉತ್ಕಟ ಆನಂದದ ಅವಸ್ಥೆಯನ್ನು ಬಲು ದೀರ್ಘಕಾಲ ಕಾಯ್ದುಕೊಳ್ಳುವುದು, ಅತೀವ ದುಃಖಿಯಾಗಿರುವುದಕ್ಕಿಂತಲೂ ಕಷ್ಟ ಎನ್ನುವುದು ವಿಷಾದದ ವಿಷಯವಾದರೂ ಸತ್ಯ. ವ್ಯಕ್ತಿಯೊಬ್ಬ, ತನ್ನ ಸಂಗಾತಿ ಅಥವಾ ಮಗುವಿನ ಸಾವಿನಂತಹ ದೊಡ್ಡ ದುರಂತವನ್ನು ಅನುಭವಿಸಿದ್ದೇ ಆದರೆ ಬಲು ದೀರ್ಘಕಾಲದವರೆಗೆ ಪ್ರಸನ್ನತೆಯ ಸ್ಥಿತಿಗೆ ಮರಳಲು ಕಷ್ಟ ಪಡುತ್ತಾನೆ (ಳೆ). ತನ್ನ ಮಗನ ಸಾವಿಗೆ ತಾನೇ ಕಾರಣ ಎಂದು ಭಾವಿಸಿದ ಪ್ರಸಿದ್ಧ ಪ್ರೊಫೆಸರ್ ಒಬ್ಬ ಜೀವಮಾನ ಪರ್ಯಂತವೂ ಕರಿ ದಿರಿಸನ್ನೇ ಧರಿಸಿದ್ದ. ಒಂದು ವೇಳೆ ವ್ಯತಿರಿಕ್ತವಾಗಿ ಈತ ಮಗನನ್ನು ಸಾವಿನ ದವಡೆಯಿಂದ ತಪ್ಪಿಸಿಬಿಟ್ಟಿದ್ದನೆನ್ನಿ, ಆ ಕೂಡಲೇ ಆತ ಗಾಢವಾದ ಖುಷಿ ಚಿಮ್ಮುವುದನ್ನು ಅನುಭವಿಸುತ್ತಿದ್ದ. ಆದರೆ ಈ ತೀವ್ರ ಸಂತಸ ದೀರ್ಘವಾಗಿ ಉಳಿಯುತ್ತಿರಲಿಲ್ಲ. ಇದೇ ರೀತಿಯಲ್ಲಿ, ವಿವಾಹ ವಿಚ್ಛೇದನದ ಕಹಿ ಅನುಭವ ಹಲವಾರು ವರ್ಷಗಳವರೆಗೆ ಉಳಿದಿರಬಹುದು. ಅದೇ ಪ್ರೇಮಿಸುವುದರ ಜೊತೆಗೇ ಬರುವ ಖುಷಿಯ ಭಾವಾವೇಗ ಕ್ರಮೇಣ ಕ್ಷೀಣವಾಗುತ್ತದೆ. ಕಾಲ ಗಾಯವನ್ನು ಮಾಯಿಸುತ್ತದೆಯೋನೋ ನಿಜ, ಆದರೆ ಅದು ಖುಷಿಯನ್ನು ಅದಕ್ಕಿಂತಲೂ ಕ್ಷಿಪ್ರವಾಗಿ ಮರೆಸಿಬಿಡುತ್ತದೆ.

ಈ ಕಾರಣದಿಂದಲೇ ಏನೋ ಹುಟ್ಟು ಮತ್ತು ಸಾವಿನ ನಡುವಿನ ನಮ್ಮ ಬದುಕಿನಲ್ಲಿ ಖುಷಿಯ ಕ್ಷಣಗಳು ಅಲ್ಪವಿರಾಮಗಳ ಹಾಗೆ ಎನಿಸುತ್ತದೆ. ಅತಿ ಹೆಚ್ಚು ಎಂದರೆ ಸುದೀರ್ಘವಾದ ಶಾಂತ, ತೃಪ್ತ ಜೀವನದಲ್ಲಿ ಅಲ್ಲಲ್ಲಿ ಉತ್ಕಟವಾದ ಖುಷಿಯ ಕ್ಷಣಗಳಿರುವ ಜೀವನವನ್ನು ನಾವು ಬಯಸಬಹುದು. ಆದರೆ ಬಹಳಷ್ಟು ಜನರಿಗೆ ಅದರಲ್ಲೂ ಫ್ರಾಯ್ಡನ ಕುರ್ಚಿಯನ್ನು ಅಲಂಕರಿಸಿರುವವರಿಗೆ (ಮಾನಸಿಕ ರೋಗಿಗಳಿಗೆ) ಜೀವನವೆನ್ನುವುದು ಮಾನಸಿಕ ದುಃಖವೇ ತುಂಬಿರುವ ಬೆಂಗಾಡು. ಇದರಲ್ಲಿ ಅಲ್ಲಲ್ಲಿ ಎಲ್ಲೋ ಖುಷಿಯ ಓಯಸಿಸ್ ಗಳು ಇರಬಹುದು ಅಷ್ಟೆ. ಫ್ರಾಯ್ಡ್ ಹೇಳಿದಂತೆ ಇವರಿಗೆ ಖುಷಿಯ ಹುಡುಕಾಟವೆಂದರೆ ತಮ್ಮ ದುಃಖವನ್ನು ವಿವರಿಸಿ, ನಿವಾರಿಸಿಕೊಳ್ಳುವುದಷ್ಟೆ. ಮಾನಸಿಕವಲ್ಲದ, ದೈಹಿಕ ನೋವನ್ನನುಭವಿಸುತ್ತಲಿರುವವರಿಗೆ ಸಂತಸವೆನ್ನುವುದು ನೋವು ನಿವಾರಕ ಗುಳಿಗೆಗಳ ರೂಪದಲ್ಲಿ ಕಾಣಿಸುತ್ತದೆ. ಸುದೀರ್ಘಕಾಲ ನೋವನ್ನನುಭವಿಸಿದ ಮೇಲೆ ಗುಳಿಗೆಯನ್ನು ತೆಗೆದುಕೊಳ್ಳುವ ಆ ಕ್ಷಣವಿದೆಯಲ್ಲ, ಅದುವೇ ಇವರಿಗೆ ಋಣಾತ್ಮಕ ಖುಷಿ. ಆರೋಗ್ಯವಂತರಿಗೆ ನೋವಿಲ್ಲದ ಕ್ಷಣವೇನೆನ್ನುವುದೇ ಗೊತ್ತಿರುವುದಿಲ್ಲ. ಹಾಗಾಗಿ ಅವರು ನೋವು ಇಲ್ಲದ ಕ್ಷಣವನ್ನು ಗುರುತಿಸುವುದೇ ಇಲ್ಲ. ಆದರೆ ದೀರ್ಘರೋಗಿಗಳಿಗೆ ಈ ನೋವನ್ನು ಮರೆಸುವ ಕ್ಷಣಗಳೇ ಉತ್ಕಟ ಆನಂದದ ಕ್ಷಣಗಳೆನ್ನಿಸುತ್ತವೆ. ಸದಾದುಃಖಿಗಳಿಗೆ ಉತ್ಕಟವೆನ್ನಿಸುವ ಕ್ಷಣಗಳು ಓಟಗಾರನಿಗೆ ಆರಂಭವೆನ್ನಿಸುತ್ತವೆ.

ಮಾನಸಿಕ ಅಥವಾ ದೈಹಿಕ ನೋವಿಲ್ಲದ ಬಹುತೇಕ ಜನರ ನಿತ್ಯಜೀವನವೇನೂ ಪ್ರಸನ್ನ ಅನುಭವವಲ್ಲ. ಅವರಿಗೆ ಬೋರ್ ಆಗಬಹುದು, ದಿಕ್ಕು ತೋಚದಂತಾಗಬಹುದು, ಅಸುರಕ್ಷತೆಯ ಅನುಭವವಾಗಬಹುದು, ಆತಂಕ ಇಲ್ಲವೇ ಖಿನ್ನತೆಯೂ ಕಾಡಬಹುದು. ಇಂತಹ ದುಃಖದನುಭವಗಳೇ ಸಾಧಾರಣವಾದಾಗ ಅವರಿಗೆ ಉತ್ಕಟಾನಂದದ ಕ್ಷಣಗಳು ಅಪರೂಪವೆನ್ನಿಸಿಯೋ, ನಗಣ್ಯವೆಂದೋ ಅನ್ನಿಸಬಹುದು. ತಮ್ಮ ಬದುಕನ್ನು ಅವರು ಪುನರ್ರೂಪಿಸಿಕೊಳ್ಳುವುದು ಕಷ್ಟವೆನ್ನಿಸಿದರೆ, ಇವಕ್ಕೆ ಎರಡು ವಿಶೇಷ ಪರಿಹಾರಗಳಿವೆ. ಅವರು ರಾಸಾಯನಿಕವಾಗಿಯೋ, ಕಾಲ್ಪನಿಕವಾಗಿಯೋ ಖುಷಿಯನ್ನು ಕೊಂಡು ತಮ್ಮ ಸಂತಸದ ಕ್ಷಣಗಳನ್ನು ಹೆಚ್ಚಿಸಿಕೊಳ್ಳಬಹುದು. ಬೇರೆ ರೀತಿಯಲ್ಲಿ ಹೇಳುವುದಾದರೆ ಇಂತಹವರು ಮಾದಕ ದ್ರವ್ಯಗಳನ್ನು ಉಪಯೋಗಿಸಿ ರಾಸಾಯನಿಕ ಭ್ರಮಾಲೋಕಕ್ಕೋ ಅಥವಾ ಕಥೆ-ಕಾದಂಬರಿಗಳ ಮೂಲಕ ಹಗಲುಗನಸಿನ ಲೋಕಕ್ಕೋ ಹಾರಿಬಿಡುವರು.

_____________

NEGATIVE HAPPINESS

The Sufferer

Sigmund Freud favoured this approach, saying that ‘Men try to obtain happiness by eliminating unhappiness’. It is a sad truth that being ecstatically happy is harder to sustain over long periods than being miserably unhappy. If an individual sustains a major tragedy in his ( or her) life, such as the loss of a partner or the death of a child, he may find himself unable to regain a state of cheerfulness for a very long time. One eminent professor who felt responsible for the death of his son was observed to dress entirely in black for the rest of his life. In complete contrast, had he managed to snatch his son from the jaws of death, he would have felt a huge surge of happiness immediately afterwards, but his intense feeling of joy would not have lasted. In a similar way, the miserable aftermath of a bitter divorce can persist for years, whereas the uncontrollable outburst of happiness that accompanies the process of falling in love soon mellows and loses its emotional intensity. Time heals wounds slowly, but it dissipates happiness more swiftly.

 

It is for this reason that states of happiness are no more than punctuations in the life sentence we serve between our birth and our death. The best we can hope for is to have a pleasantly contented peace of mind for most of the time, interrupted only by peak moments of joyous intensity. For many people, however (especially the kind who ended up on Freud’s couch), life is a great desert of mental anguish, with only an occasional oasis of pleasure. For them, as Freud pointed out, the quest for happiness is a search for answers to explain their anguish and eliminate it. For others, who live in physical rather than mental pain, happiness comes in the shape of a bottle of painkillers. When it is time to take the pills again, the moment of relief from the prolonged pain is the classic moment of ‘negative happiness’. For those who are healthy, feeling pain-free is the norm and is barely noticed. But for the chronically ill, moments of pain-relief bring them up to what is for them a peak of happiness. The sufferer’s peak is the athlete’s baseline.

 

For many people, who may not be in mental turmoil or physical agony, daily life may still fall far short of being a pleasant experience. They may be bored, lacking in direction, insecure, anxious or stressed, and their peak moments of happiness may be too trivial or too rare to compensate for their general feeling of malaise. For them, assuming they are incapable of re-structuring their lives, there are two special solutions. They can increase their happiness quotient (buying happiness to order) by resorting to either chemical happiness or fantasy happiness. In other words, they can escape into a world of chemical dreaming or day-dreaming – by using drugs or by escaping into a world of fiction.

 

Published in: on ಏಪ್ರಿಲ್ 7, 2016 at 6:37 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಹೀಗೊಂದು ವಿಶೇಷ ಜ್ಯೋತಿರ್ಲಿಂಗ ಯಾತ್ರೆ

04042016.jpg

ಆಕರ:

  1. S. Valdiya, Geological Marvels, Hallowed Shrines and Unification of People of India, Current Science, Vol. 110, No. 6, Pp 987 – 995, 25 March 2016

ಟಪ್ಪಣಿ: ನಾನು ಕೊಟ್ಟಿದ್ದ ಶೀರ್ಷಿಕೆ, “ಹೋಗೋಣ ಬನ್ನಿ ವಿಶೇಷ ಜ್ಯೋತಿರ್ಲಿಂಗ ಯಾತ್ರೆಗೆ”. ಸಂಪಾದಕರು ತಿದ್ದಿದ್ದು “ಜ್ಯೋತಿರ್ಲಿಂಗದ ವಿಶೇಷ ಯಾತ್ರೆ.” ಇದು ಸ್ಥಳಾವಕಾಶದ ಕೊರತೆಯಿಂದಲ್ಲ ಅನಿಸುತ್ತದೆ. ಆದರೆ ‘ವಿಶೇಷ’ ಪದದ ಸ್ಥಾನಾಂತರ ಲೇಖನದ ಆಶಯವನ್ನೇ ಬದಲಿಸಿಬಿಟ್ಟಿತೇನೋ? ನಾನು ಒತ್ತುಕೊಡಲು ಬಯಸಿದ್ದು ಜ್ಯೋತಿರ್ಲಿಂಗಗಳ ಬಳಿ ಇರುವ ಭೂವಿಶೇಷಗಳ ಬಗ್ಗೆ. ಆದರೆ ಪ್ರಕಟಿತ ಶೀರ್ಷಿಕೆ ಜ್ಯೋತಿರ್ಲಿಂಗಗಳೇ ವಿಶೇಷವೆನ್ನುವ ಭಾವ ಮೂಡಿಸುತ್ತದೆ. ಪುಣ್ಯಕ್ಕೆ ಲೇಖನದ  ಆಶಯ ಹಾಗೇ ಇದೆ. 🙂

Published in: on ಏಪ್ರಿಲ್ 4, 2016 at 5:25 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ