ಕೆಲವು ಕಾಮನ್ಸೆನ್ಸ್ ಪ್ರಶ್ನೆಗಳು

ವಾಟ್ಸಪ್ ನಲ್ಲಿ ನಿತ್ಯವೂ ಹಲವು ಪೋಸ್ಟಿಂಗ್ ಗಳು ಬರುತ್ತವೆ. ಅವುಗಳಲ್ಲಿ ಹಾಸ್ಯವೇ ಜಾಸ್ತಿಯಾದರೂ, ಕೆಲವು ಹಾಸ್ಯಾಸ್ಪದವೆನ್ನಿಸುವಂಥವೂ ಇರುತ್ತವೆ. ಕೆಳಗಿನ ಪೋಸ್ಟ್ ಹೀಗೇ ಬಂದಿತ್ತು. ಆದರೆ ಇದನ್ನು ನೋಡಿ ನಕ್ಕು ಸುಮ್ಮನಾಗಿ ಬಿಟ್ಟೆ. ನಗಲು ಕಾರಣ ಅದನ್ನು ಓದುವಾಗ ನನ್ನ ಮನಸ್ಸಿನಲ್ಲೆದ್ದ ಕೆಲವು ನಿತ್ಯಾನುಭವದ ಪ್ರಶ್ನೆಗಳು. ಅದನ್ನು ನಿಮ್ಮ ಜೊತೆಗೂ ಹಂಚಿಕೊಂಡಿದ್ದೇನೆ. ನಾನು ಸಂಪ್ರದಾಯ ವಿರೋಧಿ, ಅಹಿಂದು ಎಂದೆಲ್ಲ ನಿಮಗೆ ಅನ್ನಿಸಿದರೂ ಈ ಪ್ರಶ್ನೆಗಳು ಸತ್ಯ! ಅಂಧವಿಶ್ವಾಸ ಮತ್ತು ಲಾಜಿಕ್ ನನಗೆ ಬಂದ ಪೋಸ್ಟ್ ನಲ್ಲಿ ಇದ್ದಂಥವು. ಇಟಾಲಿಕ್ಸ್ (ಓರೆ ಅಕ್ಷರಗಳಲ್ಲಿ) ಬರೆದಿರುವುದು ನನ್ನ ಪ್ರಶ್ನೆಗಳು.

ಕೆಲವು ಕಾಮನ್ ಸೆನ್ಸ್ ಪ್ರಶ್ನೆಗಳು

ಸ್ಮಶಾನದಿಂದ ಬಂದ ಮೇಲೆ ಸ್ನಾನ ಮಾಡೋದು

ಅಂಧವಿಶ್ವಾಸ : ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಲಾಜಿಕ್‌ : ಹಿಂದೆ ಹೆಪಟೈಟೀಸ್‌, ಸ್ಮಾಲ್‌ ಪಾಕ್ಸ್‌ ಮೊದಲಾದ ರೋಗಗಳಿಗೆ ಚಿಕಿತ್ಸೆ ಇರಲಿಲ್ಲ. ಆವಾಗ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮೇಲೆ ಸ್ನಾನ ಮಾಡುತ್ತಿದ್ದರು. ಯಾಕೆಂದರೆ ಡೆಡ್‌ ಬಾಡಿಯಲ್ಲಿರುವ ಯಾವುದೇ ಕೀಟಾಣು ತಮಗೆ ಸಮಸ್ಯೆ ನೀಡದೇ ಇರಲಿ ಎಂದು.

ನಿಜ ಸ್ನಾನ ಮಾಡಿದರೆ ಹೆಣ/ಶವದಲ್ಲಿರುವ ರೋಗಾಣುಗಳು ದೇಹವನ್ನು ಸೇರುವುದಿಲ್ಲ. ಒಪ್ಪಿಕೊಳ್ಳುವ ಮಾತು. ಆದರೆ ಸತ್ತ ದೇಹದಿಂದ ಮಾತ್ರವೇ ರೋಗಾಣುಗಳು ಸೋಂಕುತ್ತವೆಯೋ? ಬದುಕಿದವರಿಂದ ತಾಕುವುದಿಲ್ಲವೇ? ಹಾಗಿದ್ದರೆ ರೋಗಿಯ ಮನೆಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತಿದ್ದರೆ? ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ ಮಾತ್ರ ಆ ಕಾಲದಲ್ಲಿ ಈ ಆಚರಣೆಯನ್ನು ನಿರ್ದಿಷ್ಟ ಕಾರಣದಿಂದ ಮಾಡುತ್ತಿದ್ದರು ಎನ್ನಬಹುದು. ಇಲ್ಲವಾದರೆ ಅದು ಕೇವಲ ಆಚರಣೆ. ಶವ ಅಸಹ್ಯ. ಆದ್ದರಿಂದ ಶುಚಿಯಾಗಬೇಕು ಎನ್ನುವುದಷ್ಟೆ ಅರ್ಥ. ರೋಗಾಣುಗಳಿದ್ದುವೆನ್ನುವ ತಿಳುವಳಿಕೆಯಿಂದಲ್ಲ.

 

ಕೊಳದಲ್ಲಿ ನಾಣ್ಯಗಳನ್ನು ಹಾಕುವುದು

ಅಂಧವಿಶ್ವಾಸ : ಭಾಗ್ಯ ಹೆಚ್ಚಾಗುತ್ತದೆ

ಲಾಜಿಕ್‌ : ಮೊದಲು ತಾಮ್ರದ ನಾಣ್ಯಗಳು ದೊರೆಯುತ್ತಿತ್ತು. ತಾಮ್ರದ ವಸ್ತುಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಆದುದರಿಂದ ಅದನ್ನು ನೀರಿಗೆ ಹಾಕುತ್ತಿದ್ದರು. ಅಲ್ಲದೇ ತಾಮ್ರ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕ ತತ್ವವನ್ನು ಸಹ ನೀಡುತ್ತದೆ.

ತಾಮ್ರದ ಪಾತ್ರೆಯಲ್ಲಿ ನೀರನ್ನಿಟ್ಟಾಗ ತಾಮ್ರದ ಅಯಾನುಗಳ ಪ್ರಭಾವದಿಂದಾಗಿ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. (ಬೂಸುಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ.) ಸೋಸಿದ ನೀರನ್ನು ತಾಮ್ರದ ಪಾತ್ರೆಯಲ್ಲಿಟ್ಟಾಗ ಅದರಲ್ಲಿ ಬೆಳೆಯುವ ಬ್ಯಾಕ್ಟೀರಿಯಾಗಳ ಸಂಖ್ಯೆ ಕಡಿಮೆ. ಇದು ನಿಜ. ಆದರೆ ಹೀಗಾಗುವುದಕ್ಕೆ ಹಲವು ಪರಿಸ್ಥಿತಿಗಳು ಸರಿಯಾಗಿರಬೇಕು. ತಾಮ್ರದ ಪಾತ್ರೆ ಬಹಳ ದೊಡ್ಡದಾಗಿದ್ದರೆ ಅದರೊಳಗಿರುವ ನೀರು ಶುಚಿಗೊಳ್ಳುವುದು ನಿಧಾನ. ಏಕೆಂದರೆ ನೀರಿನ ಎಲ್ಲ ಅಣುಗಳೂ ತಾಮ್ರದ ಜೊತೆಗೆ ಸಂಪರ್ಕಕ್ಕೆ ಬರುವುದು ನಿಧಾನವಾಗುತ್ತದೆ. ಅಂದ ಮೇಲೆ ಕೊಳದೊಳಗೆ ಹಾಕಿದ ತಾಮ್ರದ ಕಾಸಿನ ಜೊತೆಗೆ ಸಂಪರ್ಕಕ್ಕೆ ಬರುವ ನೀರಿನ ಪ್ರಮಾಣ ಬಹಳವೇನಿಲ್ಲವಷ್ಟೆ. ಇನ್ನು ನದಿಗೆ ಹಾಕಿದ ತಾಮ್ರದ ಜೊತೆಗೆ ಯಾವ ನೀರು ಸಂಪರ್ಕದಲ್ಲಿ ಉಳಿಯುವುದಿಲ್ಲ. ಏಕೆಂದರೆ ಅದು ಹರಿಯುತ್ತಲೇ ಇರುವುದರಿಂದ ಅಯಾನುಗಳ ಪ್ರಭಾವಕ್ಕೆ ಒಳಗಾಗುವಷ್ಟು ಸಮಯ ಸಿಗುವುದಿಲ್ಲ. ಕೊಳವನ್ನು ಶುಚಿಗೊಳಿಸಲು ಕೊಳದ ತುಂಬಾ ತಾಮ್ರವನ್ನು ತುಂಬಬೇಕಾಗುತ್ತದಲ್ಲವೇ? ಮತ್ತೊಂದು ವಿಷಯ. ನೀರಿಗೆ ಬಿದ್ದ ಕಾಸು ಎಲ್ಲೇ ಉಳಿಯುವುದನ್ನು ನಾನು ಎಲ್ಲಿಯೂ ನೋಡಿಲ್ಲ. ಕಾಶಿಯಲ್ಲಿಯೂ, ಗಯೆಯಲ್ಲಿಯೂ, ತಿ.ನರಸೀಪುರದಲ್ಲಿಯೂ ನೀರಿನೊಳಗೆ ಮುಳುಗಿ ಕಾಸನ್ನು ಹೆಕ್ಕುವ ಹುಡುಗರಿದ್ದಾರೆ. ತಾಮ್ರ ನೀರನ್ನು ಶುಚಿಗೊಳಿಸುವುದು ಸತ್ಯ. ಆದರೆ ಕೊಳದೊಳಗೆ ಹಾಕಿದ ಕಾಸು ಕೊಳವನ್ನು ಶುಚಿಗೊಳಿಸುತ್ತದೆ ಎನ್ನುವುದು ಮಿಥ್ಯೆ. ಇದು ನಿಜವಾಗಿದ್ದಿದ್ದರೆ ನಮ್ಮ ಎಲ್ಲ ದೇವಸ್ಥಾನದ ಕೊಳಗಳೂ ಈಗ ಶುಚಿಯಾಗಿರಬೇಕಿತ್ತು. ಕೊಳಕ್ಕೆ ಹಾಕುವ ಕಾಸು ಶುಚಿಗೊಳಿಸಲು ಸಾಲುವುದಿಲ್ಲ. ಮತ್ತೊಂದು ಪ್ರಶ್ನೆ. ಈಗ ನಮ್ಮ ಬಳಿ ತಾಮ್ರದ ಕಾಸು ಇಲ್ಲವಾದ ಮೇಲೆ ಕೊಳಕ್ಕೆ ಹಾಕುವುದೇಕೆ? ಅದು ನಿಷ್ಪ್ರಯೋಜಕ ಅಲ್ಲವೇ? ಸಂಪ್ರದಾಯವೇ ಆಗಿದ್ದರೂ ವ್ಯರ್ಥ ಕೆಲಸ ಮಾಡುವುದೇಕೆ?

 

ಎಲ್ಲಿಯಾದರು ಹೋಗುವಾಗ ಮೊಸರು ತಿನ್ನೋದು

ಅಂಧವಿಶ್ವಾಸ : ಭಾಗ್ಯ ನಿಮ್ಮ ಜೊತೆ ಇರುತ್ತದೆ.

ಲಾಜಿಕ್‌ : ಬೇಸಿಗೆ ಕಾಲದಲ್ಲಿ ಮೊಸರು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೇ ಮೊಸರಿನ ಜೊತೆ ಸಕ್ಕರೆ ಬೆರೆಸಿ ತಿನ್ನೋದ್ರಿಂದ ದೇಹಕ್ಕೆ ಗ್ಲೋಕೋಸ್‌ ದೊರೆಯುತ್ತದೆ.

ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಮೊಸರು ಯಾವಾಗ ತಿಂದರೂ ಒಳ್ಳೆಯದೇ. ಆದರೆ ಬಲು ಶೀತ ಕಾಲದಲ್ಲಿ ಇದು ಅಷ್ಟು ಉಪಯುಕ್ತವಲ್ಲ. ಮೊಸರಿನಲ್ಲಿರುವ ಕೆಲವು ಬ್ಯಾಕ್ಟೀರಿಯಾ (ಲ್ಯಾಕ್ಟೊಬ್ಯಾಸಿಲಸ್…) ಕೆಲವು ಅವಶ್ಯಕ ಜೀವಸತ್ವಗಳನ್ನು ಸೃಷ್ಟಿಸುವುದರಿಂದ ದೇಹಕ್ಕೆ ಉಪಯುಕ್ತ. ಹಾಗೆಯೇ ಈ ಬ್ಯಾಕ್ಟೀರಿಯಾ ಕೆಲವು ಇತರೆ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಅಣುಗಳನ್ನೂ ಉತ್ಪಾದಿಸುತ್ತದೆ. ಈ ಕಾರಣಕ್ಕೆ ಮೊಸರು ತಿನ್ನಬೇಕು. ಹಾಲಿನಲ್ಲಿಯೂ ಸಕ್ಕರೆಯ ಅಂಶ ದೊರೆಯುತ್ತದೆ. ಕೊಬ್ಬೂ ದೊರೆಯುತ್ತದೆ. ಆದರೆ ಬ್ಯಾಕ್ಟೀರಿಯಾ ಇರುವುದಿಲ್ಲವಾದ್ದರಿಂದ ಮೊಸರು ಹಾಲಿಗಿಂತ ಉತ್ತಮ. ಅಂದ ಹಾಗೆ, ಬೇಸಗೆಯಲ್ಲಿ ತಂಪು ಎಂದು ಬರೆ ಮೊಸರನ್ನು ತಿಂದು ಉಳಿಯಬಹುದೇ? ಸಾಧ್ಯವಿಲ್ಲ. ಉಪ್ಪೂ ಬೇಕು. ಇತರೆ ಆಹಾರವೂ ಬೇಕು.

 

ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯಬಾರದು

ಅಂಧವಿಶ್ವಾಸ : ಕೆಟ್ಟ ಸಮಯ ಆರಂಭವಾಗುತ್ತದೆ.

ಲಾಜಿಕ್‌ : ಹಿಂದಿನ ಕಾಲದಲ್ಲಿ ನೀರನ್ನು ಉಳಿಸುವ ಸಲುವಾಗಿ ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯದೇ ಇರುತ್ತಿದ್ದರು.

ಆಹಾ! ಬೇರೆ ದಿನಗಳಲ್ಲಿ ತೊಳೆಯದಿದ್ದರೆ ನೀರು ಉಳಿಯುವುದಿಲ್ಲವೇ? ಮಂಗಳವಾರ ಹಾಗೂ ಗುರುವಾರವಷ್ಟೆ ಏಕೆ? ಬುಧವಾರ, ಶನಿವಾರ ತೊಳೆಯದಿದ್ದರೂ ನೀರು ಉಳಿಯುತ್ತದಲ್ಲ?

 

ಬಾಗಿಲಿನಲ್ಲಿ ಲಿಂಬೆ ಮತ್ತು ಮೆಣಸು ಕಟ್ಟುವುದು

ಅಂಧವಿಶ್ವಾಸ : ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗಲು

ಲಾಜಿಕ್‌ : ನಿಂಬೆ ಮತ್ತು ಮೆಣಸಿನಲ್ಲಿರುವ ಸಿಟ್ರಿಕ್‌ ಆ್ಯಸಿಡ್‌ನಿಂದಾಗಿ ಮನೆಯ ಒಳಗೆ ಕೀಟಾಣುಗಳು ಬರದಂತೆ ತಡೆಯುತ್ತದೆ.

ಸಿಟ್ರಿಕ್ ಆಮ್ಲ ಕೀಟಾಣುಗಳು ಒಳಗೆ ಬಾರದಂತೆ ತಡೆಯುತ್ತದೆ. ಆಮ್ಲ ವಾತಾವರಣದಲ್ಲಿ ಬ್ಯಾಕ್ಟೀರಿಯಾ, ಬೂಸುಗಳ ಬೆಳವಣಿಗೆ ಕಡಿಮೆ ಎನ್ನುತ್ತದೆ ವಿಜ್ಞಾನ. ಇದೇ ಕಾರಣಕ್ಕೆ ನಾವು ಉಪ್ಪಿನಕಾಯಿ ಹಾಕುವಾಗ ವಿನೆಗರ್, ಹುಣಿಸೆ ಹುಳಿ, ನಿಂಬೆಹುಳಿಯಂತಹ ಆಮ್ಲ ವಸ್ತುಗಳನ್ನು ಬಳಸುತ್ತೇವೆ. ಶಸ್ತ್ರಕ್ರಿಯೆಯ ವೇಳೆ ನಿಷ್ಕ್ರಿಮಿಕರಣಕ್ಕೆ ಕಾರ್ಬಾಲಿಕ್ ಆಮ್ಲವನ್ನು ಬಳಸುವುದು ರೂಢಿ. ಆದರೆ ಗಮನಿಸಿ, ಇವೆಲ್ಲವನ್ನೂ ದ್ರಾವಣವನ್ನಾಗಿ ಬಳಸುತ್ತೇವೆ. ಏಕೆಂದರೆ ಬ್ಯಾಕ್ಟೀರಿಯಾ, ಬೂಸು ಮುಂತಾದವು ತೇವಾಂಶ ಇದ್ದರೆ ಸೊಂಪಾಗಿ ಬೆಳೆಯುತ್ತವೆ. ಉಪ್ಪಿನಕಾಯಿಯಲ್ಲಿರುವ ಉಪ್ಪು ಈ ತೇವಾಂಶದ ಪ್ರಭಾವ (ವಾಟರ್ ಆಕ್ಟಿವಿಟಿ) ಯನ್ನು ಕಡಿಮೆ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಬೆಳೆಯಲು ಅವಕಾಶವಿರುವುದಿಲ್ಲ. ಗಾಳಿಯಲ್ಲಿರಬಹುದಾದ ಬ್ಯಾಕ್ಟೀರಿಯಾ ಸ್ಪೋರ್ ಗಳು ಹೀಗೆ ನಿಷ್ಕ್ರಿಯವಾಗುತ್ತವೋ ಗೊತ್ತಿಲ್ಲ. ಆದರೆ ಅದಕ್ಕೆ ಬಲು ಸಾಂದ್ರವಾದ ಸಿಟ್ರಿಕ್ ಆಮ್ಲದ ಹೊಗೆ ಹಾಕಬೇಕು. ಬಾಗಿಲಿಗೆ ಕಟ್ಟಿದ ನಿಂಬೆಯಲ್ಲಿ ಇಡೀ ಮನೆಯನ್ನು ಶುಚಿಗೊಳಿಸುವಷ್ಟು ಸಿಟ್ರಿಕ್ ಆಮ್ಲ ಇದೆಯೇ?

ಮತ್ತೊಂದು ಸಂದೇಹ! ಇದು ಸಂಪ್ರದಾಯವಷ್ಟೆ. ಅದರಲ್ಲೂ ಈ ಲಾಜಿಕ್ ಪ್ರಕಾರ ಜಾಣ ಸಂಪ್ರದಾಯ. ಹಾಗಿದ್ದರೆ ಮೆಣಸಿನಕಾಯಿ ನಮ್ಮ ದೇಶಕ್ಕೆ ಬರುವುದಕ್ಕೆ ಮುನ್ನ ಏನು ಮಾಡುತ್ತಿದ್ದರು? ಏಕೆಂದರೆ ಮೆಣಸಿನಕಾಯಿ ಭಾರತಕ್ಕೆ ಬಂದಿದ್ದು ಸುಮಾರು 500 ವರ್ಷಗಳ ಹಿಂದೆಯಷ್ಟೆ. ಅದಕ್ಕೂ ಹಿಂದೆ ಏನಿತ್ತು ಸಂಪ್ರದಾಯ? ಈಗ ನಮಗೆ ಸಾಬೂನಿನಿಂದ ಕೀಟಾಣುಗಳು ಇನ್ನೂ ಸಮರ್ಥವಾಗಿ ನಿವಾರಣೆಯಾಗುತ್ತವೆ ಎಂದು ತಿಳಿದಿದೆ. ಹಾಗಿದ್ದರೆ ಬಾಗಿಲಿಗೆ ಒಂದು ಸಾಬೂನು ಕಟ್ಟಿ ನೋಡೋಣವೇ?

ಮೂರನೆಯ ಸಂದೇಹ. ಕೀಟಾಣುಗಳು ಕೇವಲ ಮುಂಬಾಗಿಲಿನಿಂದಷ್ಟೆ ಬರುತ್ತವೆಯೇ? ಹಿಂಬಾಗಿಲಿರುವುದು ಅವಕ್ಕೆ ಗೊತ್ತಿಲ್ಲವೇ?

 

ಗ್ರಹಣದ ಸಮಯದಲ್ಲಿ ಹೊರಗೆ ಹೋಗದೇ ಇರೋದು

ಅಂಧವಿಶ್ವಾಸ : ರಾಹುವಿನ ಪ್ರಭಾವ

ಲಾಜಿಕ್‌ : ಸೂರ್ಯ ಗ್ರಹಣದ ಸಂದರ್ಭ ಬರೀ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ.

ಸೂರ್ಯ ಗ್ರಹಣದ ಸಂದರ್ಭದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಕಣ್ಣಿಗೆ ಅಪಾಯ ನಿಜ. ಆದರೆ ನಿತ್ಯ ಜೀವನದಲ್ಲಿಯೂ ಯಾರೂ ಸೂರ್ಯನತ್ತ ಕಣ್ಣು ಹಾಯಿಸುವುದಿಲ್ಲವಷ್ಟೆ. ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲಿನಲ್ಲೇ ಸುತ್ತಾಡಿದ್ದರೂ, ಸನ್ ಗ್ಲಾಸ ಹಾಕಿಕೊಂಡಿದ್ದರೂ ಸೂರ್ಯನತ್ತ ನೋಡುವವರು ಎಷ್ಟು ಮಂದಿ? ಅಂದ ಮೇಲೆ ಈ ತರ್ಕ ಕುತರ್ಕವಲ್ಲವೇ? ಗ್ರಹಣದ ನೆರಳು ಮೈ ಮೇಲೆ ಬಿದ್ದರೆ ಪಾಪ ಅಂಟಿಕೊಳ್ಳುತ್ತದೆ ಎನ್ನುವುದು ಅಂಧ ವಿಶ್ವಾಸವಲ್ಲದೆ ಇನ್ನೇನಲ್ಲ.

 

ಮಂದಿರದಲ್ಲಿ ಗಂಟೆ ಭಾರಿಸುವುದು

ಅಂಧವಿಶ್ವಾಸ : ಗಂಟೆ ಭಾರಿಸುವುದರಿಂದ ದೇವರಿಗೆ ಸಂತೋಷವಾಗುತ್ತದೆ.

ಲಾಜಿಕ್‌ : ಗಂಟೆ ಬಡಿದ ಮೇಲೆ ಉಂಟಾಗುವ ವೈಬ್ರೇಶನ್‌ನಿಂದಾಗಿ ನಮ್ಮ ದೇಹದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಮನಸ್ಸು ಕೇಂದ್ರೀಕೃತವಾಗಲು ಸಹಾಯಕವಾಗುತ್ತದೆ.

 

ನಮ್ಮ ಮನಸ್ಸು ಗಂಟೆಯ ಶಬ್ದದಿಂದ ಕೇಂದ್ರೀಕೃತವಾಗುತ್ತದೆ ಎನ್ನುವುದು ನಿಜ. ಗಂಟೆಯ ನಿನಾದ, ಅದು ಅನುರಣನಗೊಳ್ಳುವ ರೀತಿಯಿಂದಾಗಿ ಸಂಗೀತವೆನ್ನಿಸುತ್ತದೆ. ಕೆಲವೊಮ್ಮೆ ಇದು ಕರ್ಕಶವೆನ್ನಿಸುವುದೂ ನಿಜ. ಆದರೆ ಈ ಕಂಪನಗಳು ‘ಧನಾತ್ಮಕ ಪ್ರಭಾವ’ ಬೀರುತ್ತವೆ ಎನ್ನುವುದು ಅಸ್ಪಷ್ಟ ವಿವರಣೆ. ಧನಾತ್ಮಕ ಎಂದರೇನು? ಯಾವುವು ಧನಾತ್ಮಕ ಪರಿಣಾಮಗಳು?

 

ಒಟ್ಟಾರೆ ಇಂತಹ ವಿವರಣೆಗಳು ನಮ್ಮ ಸಂಪ್ರದಾಯಗಳಲ್ಲೂ ವಿಜ್ಞಾನ ಇದೆ ಎಂದು ನಿರೂಪಿಸಲು ತಿಣುಕಾಡುವ ತರ್ಕಗಳು ಎನ್ನಬಹುದು. ಒಂದು ಮಾತನ್ನು ನೆನಪಿಡಬೇಕು. ವಿಜ್ಞಾನ ಸಂಸ್ಕೃತಿಯ ವಿರೋಧಿಯಲ್ಲ. ಸಂಸ್ಕೃತಿ ನಿಂತ ನೀರಲ್ಲ. ಸದಾ ಬದಲಾಗುತ್ತಿರುತ್ತದೆ. ನಮ್ಮದಲ್ಲದ ಮೆಣಸಿನಕಾಯಿ ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿಲ್ಲವೇ? ಆಚರಣೆ, ಸಂಪ್ರದಾಯಗಳು ಕೆಲವೊಮ್ಮೆ ಯಾವ ಅರ್ಥವೂ ಇಲ್ಲದ ಅಣಕು ಕ್ರಿಯೆಗಳಾಗಿರುತ್ತವೆ. ಬೆಳಗ್ಗೆ ಕಂಪ್ಯೂಟರು ಆನ್ ಮಾಡಿದ ಕೂಡಲೇ ಅದಕ್ಕೆ ನಮಸ್ಕರಿಸುವುದು ಇಂತಹ ಅಣಕು ಕ್ರಿಯೆ.

ವಿಜ್ಞಾನದ ವಿಚಾರ ಸರಳ. ನೇರವಾದ ಪ್ರಶ್ನೆಗಳನ್ನು ಕೇಳುವುದಷ್ಟೆ ಅದರ ಕೆಲಸ. ವಿವರಣೆ ನೀಡುವುದು ವಿಜ್ಞಾನವಲ್ಲ. ಪ್ರಶ್ನೆಗಳನ್ನು ಕೇಳುತ್ತ ಹೋದ ಹಾಗೆ ವಿವರಣೆಗಳು ಸ್ಪಷ್ಟವಾಗುತ್ತವೆ. ನಾವು ಹೀಗೆ ಸಂಪ್ರದಾಯಗಳನ್ನು ಹೇರುವುದಕ್ಕಾಗಿಯೇ ಅವಕ್ಕೆ ಕಾರಣಗಳನ್ನು ಹುಡುಕುವ ಅಗತ್ಯವಿಲ್ಲ.

Published in: on ಏಪ್ರಿಲ್ 11, 2016 at 6:10 ಫೂರ್ವಾಹ್ನ  Comments (3)  

ಪಾಪಾಸುಕಳ್ಳಿಯ ಮತ್ತೊಂದು ಉಪಯೋಗ

11042016

 

Published in: on ಏಪ್ರಿಲ್ 11, 2016 at 6:06 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ