ಸಂಸ್ಕೃತಕ್ಕೆ ತಿಳಿಯದ್ದು ಯಾವುದೂ ಇಲ್ಲ!

ಬಟ್ಟೆ ಹಾಕಿಕೊಳ್ಳಲು ಗೊತ್ತಿಲ್ಲದವರಿಗೆ, ಬಟ್ಟೆ ಹಾಕುವದನ್ನು ಕಲಿಸಿದವರು ನಮ್ಮ ಪೂರ್ವ ಭಾರತೀಯರು ಅರ್ಥಾತ್ ಸಂಸ್ಕೃತ ಪಂಡಿತರು,

 • ಹತ್ತಿ ಬಟ್ಟೆಯ ಅತಿ ಪುರಾತನ ಬಳಕೆಯ ಪುರಾವೆ ದೊರಕಿರುವುದು ಮೆಕ್ಸಿಕೋ ದೇಶದಲ್ಲಿ. ಅಲ್ಲಿನ  ಕೆಲವು ಗವಿಗಳಲ್ಲಿ 7000 ವರ್ಷಗಳಷ್ಟು ಹಳೆಯದೆನ್ನಿಸಿದ ಹತ್ತಿ ಸಿಕ್ಕಿದೆಯೆನ್ನಲಾಗಿದೆ. ಯುರೋಪಿಗೆ ಹತ್ತಿ ತಲುಪಿದ್ದು ಸುಮಾರು 2000 ವರ್ಷಗಳ ಹಿಂದೆ. ಭಾರತದ ಸಿಂಧೂ ಕಣಿವೆಯಲ್ಲಿ (ಕ್ರಿಸ್ತ ಪೂರ್ವ 3000, ಇಂದಿಗೆ 5000 ವರ್ಷಗಳ ಹಿಂದೆ) ಹತ್ತಿ ಬಟ್ಟೆಯ ಕುರುಹುಗಳಿವೆ. ಆದರೆ ಅದೇ ಸಮಯದಲ್ಲಿ ಉತ್ತರ ಅಮೆರಿಕಾ, ಆಫ್ರಿಕಾದಲ್ಲಿಯೂ (ಈಜಿಪ್ಟ್) ನಲ್ಲಿಯೂ ಹತ್ತಿ ಬಟ್ಟೆಗಳು ಬಳಕೆಯಿದ್ದುವು. ಅಂದರೆ ಇವು ಇಲ್ಲಿಗೆ ಬೇರೆಲ್ಲಿಂದಲೋ ಬಂದಿರುವ ಸಾಧ್ಯತೆಗಳಿವೆ. ಅಥವಾ ಬೇರೆ ಕಡೆಗೆ ಭಾರತವಲ್ಲದ ಕಡೆಯಿಂದಲೂ ಬಂದಿರುವ ಸಾಧ್ಯತೆಗಳಿವೆ.
 • ಹತ್ತಿ ಬಟ್ಟೆ ತಯಾರಾಗುವುದಕ್ಕೂ ಮುನ್ನ  ಎಲ್ಲರೂ ನಗ್ನರಾಗಿಯೇ ಓಡಾಡುತ್ತಿದ್ದರು ಎನ್ನಲಾಗದು. ಏಕೆಂದರೆ ದಿರಿಸಿಗಾಗಿ ತೊಗಲನ್ನು ಬಳಸುತ್ತಿದ್ದ ದಾಖಲೆಗಳಿವೆ. ಉಣ್ಣೆಯ ತೊಗಲನ್ನು ಛಳಿ ಪ್ರದೇಶದ ಬುಡಕಟ್ಟು ಜನಾಂಗದವರು ಇಂದಿಗೂ ಬಳಸುತ್ತಾರೆ. 
 • ಅವಶ್ಯಕತೆಗನುಗುಣವಾಗಿ ಆವಿಷ್ಕಾರಗಳು ಆಗುತ್ತವೆ. ಅವು ಒಂದೆಡೆಯೇ ಆಗಬೇಕೆಂದಿಲ್ಲ.  ಏಕಕಾಲಕ್ಕೆ ಹಲವೆಡೆ ವಿಭಿನ್ನ ರೂಪದಲ್ಲಿ ಆಗಬಹುದು. ದಿರಿಸೂ ಅಷ್ಟೆ. ಲಭ್ಯವಿದ್ದ ವಸ್ತುವಿನಿಂದ ದೇಹವನ್ನು ಮುಚ್ಚಿಕೊಳ್ಳುವುದನ್ನು ಮಾನವ ಬಹಳ ಹಿಂದೆಯೇ ಕಲಿತಿದ್ದ. ಅದಕ್ಕೆ ಸಂಸ್ಕೃತದ  ಅವಶ್ಯಕತೆ ಇರಲಿಲ್ಲ. ಛಳಿ, ಗಾಳಿ, ಮಳೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಂಗವೂ ದೊಡ್ಡ  ಎಲೆಗಳ ಛತ್ರಿಯನ್ನು ಮಾಡಿಕೊಳ್ಳುತ್ತದೆ. 

ಗಣಿತವನ್ನು ಅರಿದು ಕುಡಿದವರು ಹಾಗೂ ಇಡೀ ಜಗತ್ತಿಗೆ ಗಣಿತವನ್ನು ಕಲಿಸಿದವರು ಸಂಸ್ಕೃತ ಪಂಡಿತರು. ಜಗತ್ತಿಗೆ ಸೊನ್ನೆ ಕೊಟ್ಟವರು ನಮ್ಮ ಸಂಸ್ಕೃತ ಪಂಡಿತರೇ.

 • ಜಗತ್ತಿಗೆ ಸೊನ್ನೆ ಕೊಟ್ಟವರು ನಾವೇ! ಅದು ಹೆಮ್ಮೆಯ ವಿಷಯ. ಆದರೆ ಗಣಿತವೆನ್ನುವುದು ಅದಕ್ಕೂ ಹಿಂದೆಯೂ ಇತ್ತು. ಬೇರೆ ಬೇರೆ ಸ್ವರೂಪದಲ್ಲಿ ಅದನ್ನು ವಿಭಿನ್ನ ನಾಗರೀಕತೆಗಳು ಬಳಸುತ್ತಿದ್ದುವು. ಸಿಂಧೂ ಕಣಿವೆಯ ನಾಗರೀಕತೆಗಿಂತಲೂ ಮುನ್ನ ಅಥವಾ ಅದೇ ಸಮಯಕ್ಕೆ ಗಣಿತವನ್ನು ಬೆಬಿಲೋನಿನಲ್ಲಿ ಬಳಸುತ್ತಿದ್ದರು ಎಂದು ದಾಖಲೆಗಳು ತಿಳಿಸುತ್ತವೆ.  ಸೊನ್ನೆಯ ಕಲ್ಪನೆ ಬಂದಿದ್ದು ಬ್ರಹ್ಮಗುಪ್ತನ ಕಾಲದಲ್ಲಿ (ಸುಮಾರು 1200 ವರ್ಷಗಳ ಹಿಂದೆ). 

೧೦,೦೦೦ ವರ್ಷಗಳ ಹಿಂದೆಯೇ ನಮ್ಮ ಸಂಸ್ಕೃತ ಪಂಡಿತರು ಭೂಮಿ ಗೋಲಾಕಾರದಲ್ಲಿದೆ ಎಂದು ಹೇಳಿದ್ದರು…ಏಕೆಂದರೆ #ಭೂಗೋಳ ಎಂದೆ ನಾವು ಕರೆಯುತ್ತೇವೆ ಭೂಮಿ ಗೋಳಾಕಾರದಲ್ಲಿದ್ದದ್ದರಿಂದ ಭೂಗೋಳ ಎಂದು ನಮ್ಮ ಸಂಸ್ಕೃತ ಪಂಡಿತರು ಆವಾಗಲೇ
ಹೆಸರಿಸಿದ್ದಾರೆ.

 • ಸಂಸ್ಕೃತದ ಮೂಲ ಆದಿ ಇರಾನಿಯನ್ ಭಾಷೆ. ಇರಾನಿನಿಂದ ಹರಿದು ಬಂದ  ಈ ಭಾಷೆ ಉತ್ತರ ಭಾರತದಲ್ಲಿ ಸಂಸ್ಕೃತ ರೂಪದಲ್ಲಿ ನೆಲೆಯಾಯಿತು ಎನ್ನುವುದು ಭಾಷಾತಜ್ಞರ ಶೋಧ. ಭಾರತಕ್ಕೆ ಬಂದ ನಂತರ ಸುಮಾರು ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಪಾಣಿನಿಯ ವ್ಯಾಕರಣದಿಂದಾಗಿ ಇದು ಸುಸಂಸ್ಕೃತ ಭಾಷೆ ಎನ್ನಿಸಿತು. ಶಾಸ್ತ್ರಗಳ ಭಾಷೆಯಾಯಿತು. ಹಾಗೆ ನೋಡಿದರೆ ಸಂಸ್ಕೃತ ಹತ್ತು ಸಾವಿರ ವರ್ಷಗಳ ಹಳೆಯ ಭಾಷೆ ಅಲ್ಲವೇ ಅಲ್ಲ. ಹತ್ತು ಸಾವಿರ ವರ್ಷಗಳ ಹಿಂದೆ ಅಸ್ತಿತ್ವದಲ್ಲೇ ಇಲ್ಲದ ಭಾಷೆಯಲ್ಲಿ ಹೊಸ ಪದ ಬಂದದ್ದು ಹೇಗೆ?

Civilization ಆದ ನಂತರ ವಿದೇಶಿಯರು telescope ಮುಖಾಂತರ ಒಂಭತ್ತು ಗ್ರಹಗಳಿವೆ ಎಂದು ಹೆಸರಿಸಿದರೆ, ನಮ್ಮ ಸಂಸ್ಕೃತ ಪಂಡಿತರು ೧೦,೦೦೦ ವರ್ಷಗಳ ಹಿಂದೆಯೆ # ನವಗ್ರಹ ಎಂದು ಹೆಸರಿಸಿದ್ದಾರೆ. ಅಷ್ಟೇ ಅಲ್ಲ,  ಈ  ಗ್ರಹಗಳ  ಗಾತ್ರ,  ತೂಕ,  ವೇಗ  ಇತ್ಯಾದಿಗಳನ್ನೆಲ್ಲಾ  ನಿರೂಪಿಸಿದ್ದಾರೆ.

 • ‘ಸಿವಿಲೈಸೇಶನ್ ಆದ ಮೇಲೆ’.. ಅಂದರೆ ಅದಕ್ಕೂ ಮುನ್ನ ನಾಗರೀಕತೆ ಎನ್ನವುದು ಇರಲಿಲ್ಲವೇ? ಈ ಲೆಕ್ಕವನ್ನು ತೆಗೆದುಕೊಂಡರೆ ಬಹುಶಃ ಸಿಂಧೂ ಕಣಿವೆಯ ಜನತೆಯೂ ನಾಗರೀಕರಾಗಿರಲಿಲ್ಲ!  ಇದನ್ನು ಪೂರ್ವಾಗ್ರಹ ಪೀಡಿತ ಬರೆಹ  ಅನ್ನುವುದಕ್ಕೆ ಇಷ್ಟು ಸಾಲದೇ?

ವಿದೇಶಿಯರು trigonometry ಎಂದು ಗಣಿತದಲ್ಲಿ ಹೇಳಿದರೆ, ನಮ್ಮ ಸಂಸ್ಕೃತ ಪಂಡಿತರು #ತ್ರಿಕೋಣಮಿತಿ ಎಂದು ಏಳು-ಎಂಟನೇ ಶತಮಾನದಲ್ಲಿ ಹೇಳಿದ್ದಾರೆ.

 • ತ್ರಿಕೋಣಮಿತಿ ಎನ್ನುವ ಪದವನ್ನು ಬಳಸಿದ್ದರೋ ಇಲ್ಲವೋ. ಆದರೆ ತ್ರಿಕೋಣಗಳ ತ್ರಿಭುಜಗಳ ನಡುವಣ ಸಂಬಂಧಗಳ ಲೆಕ್ಕಾಚಾರವನ್ನು ಎಂಟನೇ ಶತಮಾನದ ಖಗೋಳಜ್ಞರು ಮಾಡುತ್ತಿದ್ದರು ಎನ್ನುವುದು ಸತ್ಯ. ನಮ್ಮ ಶುಲ್ಬಸೂತ್ರಗಳಲ್ಲಿ ಈ ಬಗೆಯ ಲೆಕ್ಕಾಚಾರಗಳು ಸಾಕಷ್ಟಿವೆ.

ವೇಳೆ ಹೇಳಲು ಬರದ ವಿದೇಶೀಯರಿಗೆ ವೇಳೆ ಹೇಗೆ ಹೇಳಬೇಕು ಎಂದು ಕಲಿಸಿಕೊಟ್ಟವರು ನಮ್ಮ ಸಂಸ್ಕೃತ ಪಂಡಿತರು.
ಓರಿಸ್ಸಾದ ಕೋನಾರ್ಕ್ ಮಂದಿರಕ್ಕೆ ಅಂಟಿಕೊಂಡಂತಹ ೨೪ ಚಕ್ರಗಳನ್ನು ನೋಡಿ ಈಗಲೂ ಪ್ರಖರವಾಗಿ ವೇಳೆ ಹೇಳುವರು.

 • ಬಟ್ಟೆಯ ಹಾಗೆಯೇ ವೇಳೆಯ ಕಲ್ಪನೆಯೂ ಮನುಷ್ಯನಿಗೆ ನೈಸರ್ಗಿಕವಾಗಿ ಬಂದ  ಅನುಭವ. ಆದರೆ ದಿನದ ಘಳಿಗೆಗಳನ್ನು ತಿಳಿಯುವ  ವಿಧಾನಗಳು ಮಾತ್ರ ವಿಭಿನ್ನವಾಗಿದ್ದುವು. ಗಡಿಯಾರದ ಚರಿತ್ರೆಯಲ್ಲಿ ನೀರಿನ ಗಡಿಯಾರ, ಮರಳಿನ ಗಡಿಯಾರವೆಂದೆಲ್ಲ ಇವೆ. ಇವು ವಿಭಿನ್ನ ನಾಗರೀಕತೆಗಳಲ್ಲಿ ವಿಭಿನ್ನ ಸಮಯಗಳಲ್ಲಿ ಬಳಕೆಯಲ್ಲಿದ್ದುವು. ಸೂರ್ಯನ ಸ್ಥಾನವನ್ನು ಗಮನಿಸಿ ದಿನದ ವೇಳೆಯನ್ನು ಹೇಳುವ ಪದ್ಧತಿ ಆಫ್ರಿಕಾದ ಹಲವು ಬುಡಕಟ್ಟು ಜನಾಂಗಗಳಲ್ಲಿ ಈಗಲೂ ಇದೆ. ಇವರಿಗೆ ಸಂಸ್ಕೃತ ಗೊತ್ತಿಲ್ಲ.  ಇನ್ನು ಇಂದು ನಾವು ಬಳಸುವ ಗಡಿಯಾರ ಕಾಲವನ್ನು ಅತಿ ಕ್ವಚಿತ್ತಾಗಿ, ನಿಖರವಾಗಿ ತಿಳಿಸುವ ಸಾಧನ.  ಇದರ ಅನ್ವೇಷಣೆಯಾಗಿದ್ದು ಯುರೋಪಿನಲ್ಲಿ.  ನಮ್ಮ ಪೂರ್ವಜರು ಇಷ್ಟೆಲ್ಲ ತಿಳುವಳಿಕೆಯಿದ್ದವರು ಎನ್ನುವುದು ಸತ್ಯ. ಆದರೆ ಜನಸಾಮಾನ್ಯರಿಗೆ ಅನುಕೂಲವಾದಂತಹ ಅನ್ವೇಷಣೆಗಳೇಕೆ  ಅವರು ಮಾಡಲಿಲ್ಲ ಎನ್ನುವ ಸಂದೇಹ ನನ್ನನ್ನು ನಿತ್ಯವೂ ಕಾಡುತ್ತಿದೆ.

Live show ಎಂದು ೧೦೦ ವರ್ಷದಿಂದ ವಿದೇಶಿಯರು ಹೇಳುತ್ತ ಬರುತ್ತಿದ್ದರೆ, ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಪ್ರಕಾರ ಮಹಾಭಾರತದಲ್ಲಿ ಈ LIVE SHOW ಪ್ರಮಾಣವಾಗಿದೆ.ಮಹಾಭಾರತದ ಯುದ್ಧವನ್ನು ಕುಳಿತಲ್ಲಿಯೇ ಸಂಜಯನು ಕುರುಡ ಧೃತರಾಷ್ಟ್ರನಿಗೆ ಕಾಮೆಂಟ್ರಿ ಹೇಳ್ತಾನೆ. ಇದು ಸಂಸ್ಕೃತ ಮಾತನಾಡುವ ಕಾಲದಲ್ಲಿಯೇ.

 • ಇದು ಕಥೆ ಎಂದು ಹೇಳಬೇಕೆ? ಲೈವ್ ಶೋ ಎನ್ನುವುದು ನೂರು ವರ್ಷಗಳ ಹಿಂದಿನದಲ್ಲ. ಅದಕ್ಕೆ ಬೇಕಾದ ಸಲಕರಣೆಗಳು ಸಿದ್ಧವಾದದ್ದೇ ಕೆಲವು ದಶಕಗಳ ಹಿಂದೆ. ಅದಕ್ಕೂ ಮುನ್ನ ಎಲ್ಲವೂ ರೆಕಾರ್ಡಿಂಗ್ ಆಗಿಯೇ ಪ್ರಸಾರವಾಗುತ್ತಿದ್ದುವು.

ಈಗಿನ ಕಾರ್ಖಾನೆಯಲ್ಲಿ zinc ಅದಿರು ಪ್ರಮುಖವಾದ ಪಾತ್ರವನ್ನು ವಹಿಸಿದೆ ,ಏಕೆಂದರೆ zinc ಬಳಸಿ galvanizing ಮಾಡಿದರೆ steel productಗಳು ತುಕ್ಕು ಹಿಡಿಯುವದಿಲ್ಲ…..ಉದಾಹರಣೆಗೆ steel ವಿದ್ಯುತ್ ಕಂಬಗಳನ್ನು ನೋಡಿ, silver ಬಣ್ಣದಲ್ಲಿರುತ್ತವೆ,ಕಾರಣ zinc ಉಪಯೋಗ ಮಾಡಿರುತ್ತಾರೆ….
ಆ zinc ಹೇಗೆ mining ಮಾಡಿಬತೆಗೆದುಕೊಳ್ಳಬೇಕೆಂಬ ಪದ್ಧತಿ ಮೊದಲು ಭಾರತೀಯರೇ ಕಂಡುಹಿಡಿದದ್ದು….ಪುರಾವೆ ಇದೆ….ಕೊಲ್ಲೂರಿನಲ್ಲಿ ದೇವಸ್ಥಾನದ ಮುಂದೆ ಈಗಲೂ ೭೫೦ft. ಉಕ್ಕಿನ ಕಂಬವೊಂದನ್ನು ನೆಡಲಾಗಿದೆ. Carbon testing ಪ್ರಕಾರ ಆ ಕಂಬ ೧೫೦೦ ವರ್ಷಗಳ ಹಿಂದೆ ನೆಡಲಾಗಿದೆ…..:oops: 😳

 • ಸತುವಿನ ಬಳಕೆ ಪುರಾತನ ಭಾರತದಲ್ಲಿ ಇತ್ತು ಎನ್ನುವುದು ಸತ್ಯ. ಏಕೆಂದರೆ ಚಿನ್ನ, ಬೆಳ್ಳಿ, ಸತು , ಕಬ್ಬಿಣ ಮತ್ತು ತಾಮ್ರದ ಅದಿರು ಭಾರತದಲ್ಲಿ  ಲಭ್ಯವಿತ್ತು. ಇವುಗಳ ಸಂಸ್ಕರಣೆಯೂ  ಇತರೆ ಲೋಹಗಳಿಗೆ ಹೋಲಿಸಿದರೆ ಸುಲಭ. ಈ ಲೋಹಗಳ ಸಂಸ್ಕರಣೆಯ ವಿವಿಧ ಸ್ವರೂಪಗಳು ವಿವಿಧೆಡೆ ಆವಿಷ್ಕಾರವಾಗಿವೆ. ಎಲ್ಲವೂ ಕುಲುಮೆಯನ್ನು ಆಧರಿಸಿದುವು ಎನ್ನುವುದು ಒಂದು ಸತ್ಯ. ಅದಿರುಗಳ ಸ್ವರೂಪವನ್ನು ಅವಲಂಬಿಸಿ, ಅಪ್ಪಟ ಲೋಹವನ್ನು ತಯಾರಿಸುವುದಾಗುತ್ತಿತ್ತು. ಅಂದ ಹಾಗೆ, ಇಡೀ ರಸಾಯನ ಶಾಸ್ತ್ರದ ಬೆಳವಣಿಗೆ ಆಗಿದ್ದೇ ಬಂಗಾರದ ಬೆನ್ನು ಹತ್ತಿದವರಿಂದ. ಕಬ್ಬಿಣವನ್ನು ಬಂಗಾರ ಮಾಡುವುದು ಹೇಗೆನ್ನುವುದರ ಬೆನ್ನು ಹತ್ತಿದವರು ರಸಾಯನ ವಿಜ್ಞಾನಿಗಳಾದರು. ಇಂದಿನ ರಸಾಯನಶಾಸ್ತ್ರಕ್ಕೆ ಹಾದಿ ಮಾಡಿಕೊಟ್ಟರು. ಕೊಲ್ಲೂರಿನ ಕಬ್ಬಿಣದ ಕಂಭ ಹಾಗೂ ದೆಹಲಿಯಲ್ಲಿ ಕುತುಬ್ ಮಿನಾರಿನ ಮುಂದಿರುವ ಕಬ್ಬಿಣದ ಕಂಭಗಳು ತಯಾರಿಯಾದ ಸಮಯದಲ್ಲಿಯೇ ಯುರೋಪಿನಲ್ಲಿ ಅತಿ ಮೊನಚಾದ, ತುಕ್ಕುಗಟ್ಟದ,  ಉಕ್ಕಿನ ಕತ್ತಿಗಳೂ ತಯಾರಾಗುತ್ತಿದ್ದುವು. ಅಂದ ಹಾಗೆ ಈ ತಂತ್ರಜ್ಞಾನಕ್ಕೂ ಸಂಸ್ಕೃತಕ್ಕೂ ಸಂಬಂಧವಿರುವ ಬಗ್ಗೆ ಪುರಾವೆಗಳಿಲ್ಲ. ಇವೇನಿದ್ದರೂ ಆಯಾ ಕಾಯಕ ಮಾಡಿಕೊಂಡಿದ್ದವರು ಕಂಡುಕೊಂಡ  ಸುಧಾರಣೆಗಳು. ಶಾಸ್ತ್ರಾಧ್ಯಯನದಿಂದ, ಅಥವಾ ಇಂದು ಧಾತುಗಳ ಗುಣಗಳನ್ನು ತಿಳಿದು ಸೂತ್ರಗಳ ಮೂಲಕ ಹೊಸ ಸಂಯುಕ್ತವನ್ನು ತಯಾರಿಸುವುದು ಹೇಗೆಂದು ಲೆಕ್ಕಿಸುವ ಶಾಸ್ತ್ರ ವಿಧಾನದಿಂದಲ್ಲ. ಇದೊಂದು ರೀತಿ ನಿರಕ್ಷರಕುಕ್ಷಿಯಾದವನೊಬ್ಬ ನಿಮ್ಮ ಸ್ಕೂಟರನ್ನು ಅದ್ಭುತವಾಗಿ ರಿಪೇರಿ ಮಾಡುವ ಹಾಗೆ. ಅವನ ಕೌಶಲ್ಯಕ್ಕೆ ಎಣೆಯಿಲ್ಲ. ಅದು ಕಲಿತ ಕೌಶಲ. 

ವಿದೇಶೀಯರಿಗೆ ಬಂಗಾರ ಎಂದರೆ ಏನು ವಜ್ರ ಎಂದರೇನು ಎಂಬ ತಿಳುವಳಿಕೆ ಇಲ್ಲದೇ ಇರತಕ್ಕಂತಹ ಕಾಲದಲ್ಲಿ ಬಂಗಾರದ ಒಡವೆ ಮಾಡಿಸಿ ದೇವರಿಗೆ ಸಮರ್ಪಿಸುವದು ಅಷ್ಟೆ ಅಲ್ಲ ನಮ್ಮ ಮಹಿಳೆಯರು ಆಭರಣಗಳನ್ನು ಮಾಡಿಸಿ ತೊಡುತ್ತಿದ್ದರು…..

 • ಅದರ ಅರಿವಿಲ್ಲದಿದ್ದರೆ ಬಹುಶಃ ಯುರೋಪಿಯನ್ನರು ವಿವಿಧ ಖಂಡಗಳನ್ನು ಆಕ್ರಮಿಸುತ್ತಿರಲಿಲ್ಲವೇನೋ?

ಜಗತ್ತಿನಲ್ಲಿ ಅತೀ ಪುರಾತನ ಭಾಷೆಯ ಪಟ್ಟಿಯಲ್ಲಿ ಸಂಸ್ಕೃತ ಭಾಷೆ ಮೊಟ್ಟ ಮೊದಲದ್ದಾಗಿದೆ…
ನೆನಪಿರಲಿ ಕನ್ನಡ ಭಾಷೆ ಮೂರನೇಯದ್ದಾಗಿದೆ.

 • ಇದಕ್ಕಿಂತಲೂ ಹಳೆಯ ಭಾಷೆಗಳಿಂದ ಸಂಸ್ಕೃತ  ವಿಕಾಸವಾಯಿತೇ ಹೊರತು ಅದು ಇದ್ದಕ್ಕಿದ್ದ ಹಾಗೆ ಉದ್ಭವಿಸಲಿಲ್ಲ .

ಈಗೀಗ ವಿದೇಶಿಯರು ಯೋಗಾಸನದತ್ತ ಮುಖಮಾಡಿದ್ದಾರೆ….ಎಷ್ಟೋ ಸಾವಿರ ವರ್ಷಗಳ ಹಿಂದೆಯೇ ಸಂಸ್ಕೃತ ಪಂಡಿತರು ಯೋಗಾಸನವನ್ನು ಹೇಳಿಕೊಟ್ಟಿದ್ದಾರೆ….ವಿಶ್ವಾಮಿತ್ರರು ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದ ಭಂಗಿಗೆ ವಿಶ್ವಾಮಿತ್ರ ಆಸನ ಎಂದು ಹೇಳುವರು…..

 • ವಿಶ್ವಾಮಿತ್ರರ ಕಾಲ ಯಾವುದು?

ಭೂಮಿ ಸೂರ್ಯನಿಂದ ಎಷ್ಟು ದೂರ ಇದೆ ಎಂದು ವಿದೇಶಿಯರು ಅರ್ಥಾತ್ ನಾಸಾದವರು ೪೦೦-೫೦೦ ವರ್ಷಗಳ ಹಿಂದೆ ಕಂಡುಹಿಡಿದರೆ, ಅದಕ್ಕಿಂತು ಮೊದಲಾಗಿ ಅಕ್ಬರನ ಪ್ರಾಂತ್ಯದಲ್ಲಿ ವಾಸವಾಗಿದ್ದ ತುಲಸೀದಾಸರು ಹನುಮಂತ ದೇವರ ಕುರಿತು ಸ್ತೋತ್ರ ಬರೆಯುತ್ತಾರೆ ಆ ಸ್ತೋತ್ರದಲ್ಲಿ ಎಷ್ಟು ದೂರ ಎಂಬುದನ್ನು ಪ್ರಖರವಾಗಿ ಅಂಕಿಗಳಲ್ಲಿ ಬರೆಯಲಾಗಿದೆ ಕಾರಣ ಹನುಮಂತ ದೇವರು ಸೂರ್ಯನನ್ನು ಉಂಡೆ ಎಂದು ತಿಳಿದು ತಿನ್ನಲು ಹೋಗಿದ್ದರಲ್ಲಾ ಆ ಕಾರಣವೇ ….ಅದಿರಲಿ….ಆ ಸ್ತೋತ್ರ ಹನುಮಾನ ಚಾಲಿಸಾ…..

 • ಭೂಮಿಯಿಂದ ಸೂರ್ಯ ಭೂಮಿಯಿಂದ ಚಂದ್ರ  ಇರುವುದಕ್ಕಿಂತಲೂ ನಾನೂರು ಪಟ್ಟು ದೂರದಲ್ಲಿದ್ದಾನೆ ಎನ್ನುವುದನ್ನು ತ್ರಿಕೋನಮಿತಿಯ ಲೆಕ್ಕಾಚಾರಗಳಿಂದ ಸುಮಾರು ಕ್ರಿಸ್ತಶಕ 500 ರಿಂದ 1200 ಳೊಳಗೆ ತಿಳಿದುಕೊಂಡಿದ್ದರು. ತುಳಸೀದಾಸರು ಬಂದದ್ದು 17ನೇ ಶತಮಾನದಲ್ಲಿ (ಕ್ರಿಸ್ತಶಕ 1420 ರಿಂದ 1620 ರೊಳಗೆ). ಹನುಮಾನ ಚಾಲೀಸಕ್ಕಿಂತಲೂ ಮುನ್ನವೇ ಈ ವಿಷಯಗಳು ತಿಳಿದಿದ್ದುವು. ಸಂಸ್ಕೃತ ಕವಿಗಳು ಇಂತಹ ಮಾಹಿತಿಗಳನ್ನು ತಮ್ಮ ಕಾವ್ಯಗಳಲ್ಲಿ ಅಳವಡಿಸಿಕೊಂಡಿರುವುದನ್ನು ಹಲವು ಸುಭಾಷಿತಗಳಲ್ಲಿ, ಕಾಳಿದಾಸನ ಕಾವ್ಯಗಳಲ್ಲಿಯೂ ಕಾಣಬಹುದು.

ಇನ್ನು ಅನೇಕ ಪುರಾವೆಗಳಿವೆ….ನಮ್ಮ ಸಂಸ್ಕೃತ ಪಂಡಿತರೇ ಈ ಇಡೀ ಜಗತ್ತಿನ civilization ಗೆ ಕಾರಣ ಎಂದು ತೋರಿಸಲು…….

ನನ್ನ ಭಾರತ ಶ್ರೇಷ್ಠ ಭಾರತ….

 • ನನ್ನ ಭಾರತ ಶ್ರೇಷ್ಠವಾಗಲು ಕೇವಲ ಸಂಸ್ಕೃತವಷ್ಟೆ ಕಾರಣವಲ್ಲ. ಜೈನ ಮುನಿಗಳು ಕ್ರಿಸ್ತಪೂರ್ವ 2ನೇ ಶತಮಾನದಲ್ಲಿ ಪ್ರಾಕೃತ ಭಾಷೆಯಲ್ಲಿ ಬರೆದ ಗ್ರಂಥಗಳಲ್ಲಿ ‘ಅನಂತ’ ವೆನ್ನುವ ಪರಿಕಲ್ಪನೆಯನ್ನು ವಿಸ್ತಾರವಾಗಿ ವಿವರಿಸಿದ್ದಾರೆ. ಇದರ  ಅರ್ಥ  ಇಷ್ಟೆ. ಭಾರತದ  ಹಿರಿಮೆಗೆ ಸಂಸ್ಕೃತವಷ್ಟೆ ಅಲ್ಲ.  ಸಂಸ್ಕೃತ ಪಂಡಿತರಷ್ಟೆ ಅಲ್ಲ.  ಇತರೆ ಜನಾಂಗ, ಭಾಷೆಯವರೂ ಕೊಡುಗೆ ನೀಡಿದ್ದಾರೆ. ಶಾಸ್ತ್ರವಿದರಂತೆ, ಗಣಿತಜ್ಞರಷ್ಟೆ, ಕೃಷಿಕರೂ, ಇತರೆ ಕುಶಲಕೈಗಾರಿಕೆಯವರೂ ನಮ್ಮ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. ಹೊಯ್ಸಳರ ದೇವಾಲಯಗಳನ್ನು ಕೆತ್ತಿದ ಅದ್ಭುತ ಕಲೆಗಾರರು ಸಂಸ್ಕೃತ ಪಂಡಿತರಾಗಿದ್ದರೇ?  ಭಾರತ ಶ್ರೇಷ್ಠವಾಗಿತ್ತೆಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಗೆಯ ಪೂರ್ವಾಗ್ರಹಪೀಡಿತ ವಾದಗಳು ನಮ್ಮನ್ನು ಶ್ರೇಷ್ಠರಾಗಿಸಲಿಲ್ಲ . ಆಗಿಸಲಿಕ್ಕಿಲ್ಲ.

———-
ಇದು ವಾಟ್ಸಪ್ ನಲ್ಲಿ ಬಂದ ಸಂದೇಶ. ಸಂಸ್ಕೃತ ವಿದ್ಯಾರ್ಥಿಯಾದ ನನಗೆ ಬಹಳ ಖುಷಿಯಾದರೂ ಇಲ್ಲಿ ಕಾಲ, ಸಮಯದ ಲೆಕ್ಕಾಚಾರ ತಪ್ಪಿದೆಯೋ ಎನಿಸುತ್ತಿದೆ. ನನಗೆ ಇರುವ ಅನುಮಾನಗಳನ್ನು ಇಲ್ಲಿ ದಾಖಲಿಸಿದ್ದೇನೆ. ಹೀಗೆ ಹೇಳಿದರೆ ನಾನು ದೇಶದ್ರೋಹಿ ಆಗಬಹುದೋ? 

Published in: on ಏಪ್ರಿಲ್ 17, 2016 at 6:13 ಅಪರಾಹ್ನ  Comments (1)  

The URI to TrackBack this entry is: https://kollegala.wordpress.com/2016/04/17/%e0%b2%b8%e0%b2%82%e0%b2%b8%e0%b3%8d%e0%b2%95%e0%b3%83%e0%b2%a4%e0%b2%95%e0%b3%8d%e0%b2%95%e0%b3%86-%e0%b2%a4%e0%b2%bf%e0%b2%b3%e0%b2%bf%e0%b2%af%e0%b2%a6%e0%b3%8d%e0%b2%a6%e0%b3%81-%e0%b2%af%e0%b2%be/trackback/

RSS feed for comments on this post.

One Commentನಿಮ್ಮ ಟಿಪ್ಪಣಿ ಬರೆಯಿರಿ

 1. Hats off! Thank you for writing the obvious truth in a published form.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: