ಅಪ್ಪನ ಬೆಲೆ

23052016

ಅಪ್ಪನ ಬೆಲೆ ಏನು?

ಕೊಳ್ಳೇಗಾಲ ಶರ್ಮ

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

 

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ. ಅಪ್ಪ ಅನ್ನುವ ಕಿರೀಟ ಎಲ್ಲ ಗಂಡುಗಳಿಗೂ ಇಲ್ಲ. ಉದಾಹರಣೆಗೆ, ಮೀನುಗಳಲ್ಲಿ ಅವಿರುವ ನೆಲೆಯಲ್ಲೇ ಹೆಣ್ಣು ಮೊಟ್ಟೆಯಿಡುತ್ತದೆ, ಗಂಡು ಆ ಮೊಟ್ಟೆಯ ಮೇಲೆ ವೀರ್ಯದ ಮಳೆಗೈಯುತ್ತದೆ. ಇದಾದ ನಂತರ ಗಂಡು ಎಲ್ಲೋ, ಹೆಣ್ಣು ಎಲ್ಲೋ? ಅಪರೂಪಕ್ಕೆ ಕೆಲವು ಮೀನುಗಳಲ್ಲಿ ಗಂಡು-ಹೆಣ್ಣುಗಳೆರಡೂ ಮೊಟ್ಟೆಗಳು ಒಡೆಯುವವರೆಗೂ ಗೂಡನ್ನು ಕಾಯುವುದುಂಟು. ಅನಂತರ ಅವರವರ ದಾರಿ ಅವರವರಿಗೆ. ಕೀಟಗಳಲ್ಲೂ, ಇತರೆ ಜೀವಿಗಳಲ್ಲೂ ಇದೇ ಸ್ಥಿತಿಯನ್ನು ಕಾಣಬಹುದು. ಜೇಡಗಳಲ್ಲಿ ಇನ್ನೂ ವಿಚಿತ್ರ. ಹೆಣ್ಣಿನ ಜೊತೆ ಕೂಡಿದ ನಂತರ ಗಂಡು ಅದೇ ಹೆಣ್ಣಿಗೆ ಆಹಾರವಾಗಿಬಿಡುತ್ತದೆ! ಹುತಾತ್ಮನಾಗುತ್ತದೆ. ಇರುವೆ, ಜೇನ್ನೊಣಗಳಂತಹ ಕೆಲವು ಕೀಟಗಳಲ್ಲಿ ಮರಿಗಳ ಪೋಷಣೆಗೂ ವ್ಯವಸ್ಥೆಯೇನೋ ಇದೆ. ಆದರೆ ಇಲ್ಲಿ ಪೋಷಕರು ವೀರ್ಯ ಕೊಟ್ಟ ಗಂಡುಗಳಲ್ಲ. ಅದಕ್ಕಾಗಿಯೇ ಹುಟ್ಟಿದ ಕಾರ್ಮಿಕ ಕೀಟಗಳು.

 

ಅಪ್ಪನೆಂಬ ಜವಾಬುದಾರಿ ಹೆಚ್ಚಿಗೆ ಕಾಣುವುದು ಹಕ್ಕಿಗಳಲ್ಲಿ ಹಾಗೂ ಸ್ತನಿಗಳಲ್ಲಿ. ಹಲವು ಹಕ್ಕಿಗಳ ಗಂಡುಗಳು ಮೊಟ್ಟೆಯೊಡೆದು ಬಂದ ಮರಿ ರೆಕ್ಕೆ ಬಲಿತು ಹಾರುವವರೆಗೂ ಹೆಣ್ಣಿಗೆ ಹೆಗಲು ಕೊಟ್ಟು ಜೊತೆಯಾಗಿರುತ್ತದೆ. ಹಾಗೆಂದು ಇವುಗಳೆಲ್ಲವೂ ಮರಿಗಳಿಗೆ ಉಣಿಸು ನೀಡುವುದಿಲ್ಲ. ಹೆಚ್ಚೆಂದರೆ ಮೊಟ್ಟೆಗೆ ಕಾವಿಡಬಹುದು, ಮರಿಗಳನ್ನು ತಿನ್ನಲು ಹೊಂಚು ಹಾಕುವ ಹಾವಿನಂತಹ ವೈರಿಗಳ ಜೊತೆ ಕಾದಾಡಿ ಕಾಯಬಹುದು, ಅಥವಾ ಆಹಾರ ತರಲು ಹೆಣ್ಣು ಹೊರ ಹೋದಾಗ ತಾನು ಮರಿಗಳನ್ನು ಕಾಯಬಹುದು.

 

ನಿಜವಾದ ಅಪ್ಪಂದಿರು ಕಾಣುವುದು ಸ್ತನಿಗಳಲ್ಲಿ. ಪ್ರಪಂಚದಲ್ಲಿರುವ ಎಲ್ಲ ಸ್ತನಿಗಳಲ್ಲಿ ಶೇಕಡ ಹತ್ತರಷ್ಟು ಜೀವಿಗಳಲ್ಲಿ ಗಂಡು ಅಪ್ಪನ ಜವಾಬುದಾರಿಯನ್ನು ಹೊರುತ್ತದೆ. ಹಾಗಂತ ಎಲ್ಲ ಸ್ತನಿಗಳಲ್ಲೂ ಅಪ್ಪಂದಿರೆನ್ನುವ ಪ್ರಾಣಿಗಳಿರುವುದಿಲ್ಲ. ಗಂಡುಗಳಿರುತ್ತವೆಯಷ್ಟೆ. ಗೂಳಿ ಎಲ್ಲಿಯಾದರೂ ಕರುವಿನ ಆರೈಕೆ ಮಾಡುವುದನ್ನು ನೋಡಿದ್ದೀರೇ? ಏಕಪತ್ನೀವ್ರತಸ್ತನೆನ್ನುವ ಒಂದೇ ಹೆಣ್ಣಿನ ಜೊತೆ ಕೂಡುವ ಪ್ರಾಣಿಗಳಲ್ಲಿ ಅರ್ಧಕ್ಕರ್ಧದವುಗಳಲ್ಲಿ ಅಪ್ಪನ ನಡವಳಿಕೆ ಕಾಣುತ್ತದೆ. ಮನುಷ್ಯನಲ್ಲಿ ಮಾತ್ರ ಗಂಡು-ಹೆಣ್ಣು ಇಬ್ಬರೂ ಹೆತ್ತ ಮಕ್ಕಳ ಜೀವನದ ಕೊನೆಯವರೆಗೂ ಜೊತೆಗಿರುತ್ತಾರೆ. ಅಪ್ಪ-ಅಮ್ಮ ಎನ್ನಿಸಿಕೊಳ್ಳುತ್ತಾರೆ.

 

ಇಲ್ಲಿ ಅಪ್ಪನ ಬೆಲೆ ಏನು? ಸಂತಾನವನ್ನು ಕಾಯಲಿಕ್ಕಾ ಅಥವಾ ಸಂತಾನವನ್ನು ಹೆಚ್ಚಿಸಲಿಕ್ಕಾ? ಬರೇ ಸಂತಾನವಷ್ಟೆ ಸಾಕು ಎಂದರೆ ಅಮ್ಮನಷ್ಟೆ ಮಕ್ಕಳ ಪಾಲನೆ ಪೋಷಣೆಯನ್ನು ಮಾಡಿದರೆ ಸಾಕಲ್ಲವೇ? ಅಪ್ಪ ಎನ್ನುವ ಜವಾಬುದಾರಿ ಇಲ್ಲದೆ ಬರೇ ಗಂಡಸ್ತನ ತೋರುವ ಗಂಡಾಗಿದ್ದರೂ ಸಾಕಿತ್ತು ಅಲ್ಲವೇ? ಇವು ತರಲೆ ಪ್ರಶ್ನೆಗಳಲ್ಲ. ಜೀವಿಗಳ ವಿಕಾಸ ಹೇಗಾಯಿತು, ಏಕಾಯಿತು ಎನ್ನುವ ರಹಸ್ಯವನ್ನು ಅರಿಯುವ ಪ್ರಶ್ನೆಗಳು. ಹಾಗಾಗಿ ಈ ಬಗ್ಗೆ ಜೀವಿವಿಜ್ಞಾನಿಗಳ ಆಸಕ್ತಿ. ಗಂಡಿನ ಜೀವನದಲ್ಲಿ ಈ ಹೊಣೆಗಾರಿಕೆ ಇರಲೇಬೇಕೆಂದಿಲ್ಲ. ಆದರೂ ಹೀಗೇಕೆ? ಅಪ್ಪನೆಂಬ ಸ್ಥಾನ ವಿಕಾಸವಾಗಿದ್ದೇಕೆ? ಇದರಿಂದ ಆ ಪ್ರಾಣಿಗೇನು ಲಾಭ?

ಅರ್ಥವಾಗಲಿಲ್ಲ ಎಂದಿರಾ? ಲಾಭ-ನಷ್ಟ ಕೇವಲ ವ್ಯಾಪಾರದ ಲೆಕ್ಕಾಚಾರವಲ್ಲ. ಜೀವಿಗಳ ಅಳಿವು-ಉಳಿವನ್ನೂ ಲಾಭ-ನಷ್ಟವೆಂದೇ ವಿಜ್ಞಾನಿಗಳು ಪರಿಗಣಿಸುತ್ತಾರೆ. ಇಲ್ಲಿ ಲಾಭವೆಂದರೆ ಜೀವಿಯ ಉಳಿವು. ಅದಕ್ಕೆ ತೆರುವ ಬೆಲೆ ಎಂದರೆ ಜೀವಿ ಪಡುವ ಕಷ್ಟ. ಯಾವುದೇ ಜೀವಿಯ ಪ್ರತಿಯೊಂದು ನಡವಳಿಕೆಯನ್ನೂ ಈ ಅರ್ಥದಲ್ಲಿಯೇ ವಿಶ್ಲೇಷಿಸುವುದು ಜೀವಿವಿಜ್ಞಾನಿಗಳ ಕ್ರಮ. ಯಾವುದೇ ನಡವಳಿಕೆಯೂ ಆ ಜೀವಿಯ ಸಂತತಿಯ ಉಳಿವಿಗೆ ಪೂರಕವಾಗಿರಲೇ ಬೇಕು. ಇಲ್ಲದಿದ್ದರೆ ಅದನ್ನು ಪ್ರಕೃತಿ ಎಂದೋ ಅನವಶ್ಯಕ ಎಂದು ಕಿತ್ತು ಬಿಸಾಡಿಬಿಡುತ್ತಿತ್ತು ಎನ್ನುವುದು ಈ ತರ್ಕದ ಹಿಂದಿರುವ ವಿಶ್ವಾಸ.

ಜೀವವಿಜ್ಞಾನಿಗಳ ಈ ಕುತೂಹಲಕ್ಕೆ ಒಂದು ಉದಾಹರಣೆ ಮೊನ್ನೆ ಮೇ 16ರಂದು ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ-ಬಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆ. ಇಂಗ್ಲೆಂಡಿನ ಲಿವರ್ ಪೂಲ್ ವಿವಿಯ ವಿಜ್ಞಾನಿಗಳಾದ ಪೌಲಾ ಸ್ಟಾಕ್ಲಿ ಮತ್ತು ಲಯೇನ್ ಹಾಬ್ಸನ್ ಈ ಪತ್ರಿಕೆಯಲ್ಲಿ ಪ್ರಕಟಿಸಿರುವ ಸುದ್ದಿಯ ಪ್ರಕಾರ ಬೃಹತ್ ಸಂಸಾರವನ್ನು ಸ್ಥಾಪಿಸುವುದಕ್ಕಿಂತಲೂ, ಚಿಕ್ಕ ಚೊಕ್ಕ ಸಂತಾನವನ್ನು ಉಳಿಸಿ, ಬೆಳೆಸಲು ಗಂಡಿನ ಅವಶ್ಯಕತೆ ಇದೆ. ಇದಕ್ಕಾಗಿಯೇ ಕೆಲವು ಪ್ರಾಣಿಗಳಲ್ಲಿ ಗಂಡು ಅಪ್ಪನ ಅವತಾರ ತಾಳಿ ಹೆಣ್ಣಿನ ಜೊತೆ ಮಕ್ಕಳ ಪಾಲನೆ-ಪೋಷಣೆಯಲ್ಲಿ ಪಾಲ್ಗೊಳ್ಳುತ್ತದೆಯಂತೆ.

ಪ್ರಾಣಿಗಳಲ್ಲಿ, ವಿಶೇಷವಾಗಿ ಸ್ತನಿಗಳಲ್ಲಿ, ಅಪ್ಪನೆನ್ನುವ ಜವಾಬುದಾರಿ ಏಕೆ ಉದ್ಭವಿಸಿತು? ಈ ಪೋಷಕ ವೃತ್ತಿ ವಿಕಾಸವಾದದ್ದರಿಂದ ಏನು ಲಾಭ? ಯಾರಿಗೆ? ಸ್ಟಾಕ್ಲಿ ಮತ್ತು ಹಾಬ್ಸನ್ ಪ್ರಕಾರ ಸಂತಾನೋತ್ಪತ್ತಿ ಎನ್ನುವುದು ಬಲು ವೆಚ್ಚದ ಕೆಲಸ. ಇದಕ್ಕಾಗಿ ಜೀವಿಗಳು ಸಮಯ, ಶಕ್ತಿಯನ್ನು ವ್ಯಯಿಸುತ್ತವಷ್ಟೆ. ಅಷ್ಟು ವೆಚ್ಚ ಮಾಡಿದ ಮೇಲೆ ಬರುವ ಲಾಭ ಎಂದರೆ ತಮ್ಮ ಗುಣಗಳುಳ್ಳ ಸಂತಾನ.  ಸಂತಾನಗಳು ಬದುಕುಳಿದು ಮರಿಗಳನ್ನುಂಟು ಮಾಡಿದರಷ್ಟೆ ತಂದೆ-ತಾಯಂದಿರ ಶ್ರಮ ಸಾರ್ಥಕವಾದ ಹಾಗೆ. ವಂಶೋದ್ಧಾರಣೆಯೇ ಲಾಭ. ಆದ್ದರಿಂದ ವಂಶೋದ್ಧಾರಣೆಯಲ್ಲಿ ಅಪ್ಪನ ನಡವಳಿಕೆಯಿಂದ ಲಾಭವಿರಲೇಬೇಕು. ಏಕೆಂದರೆ ಅಪ್ಪನ ಜವಾಬುದಾರಿ ಹೊರುವುದು ಎಂದರೆ ಒಂದೇ ಹೆಣ್ಣಿನ ಜೊತೆ ಬಾಳುವುದು ಹಾಗೂ ಮರಿಗಳು ದೊಡ್ಡದಾಗುವುವರೆಗೂ ಹೆಣ್ಣಿನ ಜೊತೆ ಕೂಡುವ ಅಥವಾ ಮರಿ ಮಾಡುವ ಸಂದರ್ಭಗಳನ್ನು ಕಳೆದುಕೊಳ್ಳುವುದು ಎಂದಷ್ಟೆ. ಇದು ಗಂಡಿಗೆ ಆಗುವ ನಷ್ಟ.  ಗಂಡು ಈ ನಷ್ಟವನ್ನು ಸಹಿಸಿಕೊಳ್ಳುವುದೇಕೆ?

ಇದನ್ನು ವಿವರಿಸಲು ಮೊದಲು ಕೆಲವು ಊಹೆಗಳಿದ್ದುವು. ಉದಾಹರಣೆಗೆ, ಹೆಣ್ಣು ಹೆಚ್ಚು ಹೆರುವುದರಿಂದಾಗಿ ಅಪ್ಪನ ಪಾತ್ರ ಉದ್ಭವಿಸಿತು ಎನ್ನುವುದು ಒಂದು ಊಹೆ.  ಪ್ರಸವವೇ ಪ್ರಯಾಸವೆನ್ನಿಸುವಷ್ಟು ದೊಡ್ಡ ಗಾತ್ರದ ಮರಿಯನ್ನು ಹೆರುವಂತಹ ಹೆಣ್ಣುಗಳಿಗೆ ಗಂಡಿನ ನೆರವು ಬೇಕಾಗಿ ಬಂದು ಅಪ್ಪನ ಹೊಣೆ ಹುಟ್ಟಿರಬಹುದು ಎನ್ನುವುದು ಮತ್ತೊಂದು ಊಹೆ. ಅಥವಾ ಸಂಗಾತಿಯ ಜೊತೆಗಿನ ಬಂಧದಿಂದ ಇದು ಉಂಟಾಗಿರಬಹುದು ಎನ್ನುವುದು ಮೂರನೆಯ ಊಹೆ. ಸ್ಟಾಕ್ಲಿ ಮತ್ತು ಹಾಬ್ಸನ್ ಸಂಖ್ಯಾಶಾಸ್ತ್ರದ ನೆರವಿನಿಂದ ಈ ಊಹೆಗಳೆಷ್ಟು ನಿಜ ಎಂದು ಹುಡುಕಲು ಪ್ರಯತ್ನಿಸಿದ್ದಾರೆ.

ಇದಕ್ಕಾಗಿ ಸ್ಟಾಕ್ಲಿ ಮತ್ತು ಹಾಬ್ಸನ್ ಯಾವ್ಯಾವ ಪ್ರಾಣಿಗಳಲ್ಲಿ ಅಪ್ಪನ ಪಾತ್ರವನ್ನು ಗಂಡು ನಿರ್ವಹಿಸುತ್ತದೆ ಎನ್ನುವುದನ್ನು ಪಟ್ಟಿ ಮಾಡಿದರು. ಈ ಪಟ್ಟಿಯಲ್ಲಿರುವ ಪ್ರಾಣಿಗಳಲ್ಲಿ ಸರಾಸರಿ ಎಷ್ಟು ಸಂತಾನವಾಗಬಹುದು? ಒಮ್ಮೆಗೆ ಎಷ್ಟು ಮರಿಗಳಾಗಬಹುದು? ಗಂಡುಗಳೂ ಪಾಲನೆಯಲ್ಲಿ ಪಾಲ್ಗೊಂಡವುಗಳಲ್ಲಿ ಮರಿಗಳ ಸಂಖ್ಯೆ ಹೆಚ್ಚೋ? ಕಡಿಮೆಯೋ? ಇಂತಹ ಗಂಡುಗಳ ಸಂಗಾತಿ ತನ್ನ ಜೀವಮಾನದಲ್ಲಿ ಎಷ್ಟು ಬಾರಿ ಹೆರಬಹುದು? ಹೆತ್ತ ಮರಿಗಳಲ್ಲಿ ಉಳಿಯುವವುಗಳ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದೇ? ಗಂಡು ಏಕಪತ್ನೀವ್ರತಸ್ತನೇ? ಬಹುಪತ್ನಿಯಿರುವ ಗಂಡಿನ ಸಂತಾನಗಳ ಸಂಖ್ಯೆಯೇನು ಎಂದೆಲ್ಲ ಮಾಹಿತಿಯನ್ನು ಕಲೆ ಹಾಕಿ ಅದನ್ನು ಗಂಡಿನ ನಡವಳಿಕೆಯ ಜೊತೆಗೆ ತಾಳೆ ನೋಡಿದರು.

ಈ ಲೆಕ್ಕಗಳ ಪ್ರಕಾರ ಗಂಡುಗಳು ಜವಾಬುದಾರಿ ವಹಿಸಿಕೊಂಡ ಪ್ರಾಣಿಗಳಲ್ಲೆಲ್ಲ ಮರಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡಿತು. ಪಾಲನೆ ಎಂದರೆ ಆಹಾರದ ಸರಬರಾಜಷ್ಟೆ ಅಲ್ಲ. ಏಕೆಂದರೆ ಬೆಕ್ಕಿನಂತಹ ಮಾಂಸಾಹಾರಿ ಪ್ರಾಣಿಗಳಲ್ಲಿ ಗಡವಗಳು ತನ್ನದೇ ಮಕ್ಕಳ ಜೊತೆಗೂ ಆಹಾರವನ್ನು ಹಂಚಿಕೊಳ್ಳವು.  ಗಡವ ಮಂಗಗಳು ಆಹಾರವನ್ನು ಸಂಪಾದಿಸಿ ಕೊಡದಿದ್ದರೂ, ಮರಿಗಳನ್ನು ಕಾಯವುದು, ಹೊತ್ತೊಯ್ಯುವಂತಹ ಕೆಲಸಗಳನ್ನು ಮಾಡುತ್ತವೆ. ಇನ್ನು ಕೆಲವು ಪ್ರಾಣಿಗಳಲ್ಲಿ ಏಕಪತ್ನೀಯತೆಯೂ ಜಾಸ್ತಿ. ಇವೆಲ್ಲವನ್ನೂ ತಾಳೆ ಹಾಕಿದಾಗ ಗೊತ್ತಾಗಿದ್ದು ಅಪ್ಪನೆಂಬ ನಡವಳಿಕೆ ಹುಟ್ಟಿದ್ದು ಹೆಚ್ಚು ಸಂತಾನವಿರುವುದರಿಂದಲ್ಲ. ಬದಲಾಗಿ ಈ ನಡವಳಿಕೆಯೇ ಹೆಚ್ಚು ಸಂತಾನ ಉಳಿಯುವುದಕ್ಕೆ ಕಾರಣವಾಗಿದೆ ಎನ್ನುವುದು. ಇದಲ್ಲದೆ ಏಕಪತ್ನೀಯತೆಯಂತಹ ಗಂಡು-ಹೆಣ್ಣಿನ ಸಂಬಂಧ ಗಟ್ಟಿಯಾಗಿದೆ ಮತ್ತು  ಮರಿಗಳ ಸಂಖ್ಯೆ ಹೆಚ್ಚಿದ್ದರೂ ಪಾಲನೆ ಸುಗಮವಾಗಿದೆ ಎನ್ನುತ್ತಾರೆ ಸ್ಟಾಕ್ಲಿ ಮತ್ತು ಹಾಬ್ಸನ್. ಅಪ್ಪನೆಂಬ ನಡವಳಿಕೆಯ ಜೊತೆ, ಜೊತೆಯಲ್ಲಿಯೇ ಈ ಲಾಭಗಳೂ ವಿಕಾಸವಾಗಿವೆಯಂತೆ. ಅಪ್ಪನಿರುವ ಪ್ರಾಣಿಗಳಲ್ಲಿ ಬದುಕುಳಿದು ತನ್ನ ಜೀವನ ಕರ್ತವ್ಯವನ್ನು ಪೂರೈಸುವ ಸಂತಾನಗಳ ಪ್ರಮಾಣ ಹೆಚ್ಚು.  ಇದು ಅಪ್ಪ ಹೊರೆ ಹೊರುವುದರ ಲಾಭ.

ಅಪ್ಪನಾಗುವುದರಿಂದ ಗಂಡಿನ ಸ್ವಂತಕ್ಕೆ ಕಷ್ಟವಾದರೂ ವಂಶಕ್ಕಾಗುವ ಲಾಭ ಎನ್ನೋಣವೇ?

_____________

 

ಆಕರ: Paula Stockley and Liane Hobson, Paternal Care and litter size coevolution in mammals. Proc. Royal Soc., B 283, 20160140  (http://dx.doi.org/10.1098/rspb.2016.0140)

ಸಂಯುಕ್ತ ಕರ್ನಾಟಕ ದಲ್ಲಿ ಪ್ರಕಟವಾಗಿದ್ದು.

Published in: on ಮೇ 23, 2016 at 5:10 ಫೂರ್ವಾಹ್ನ  Comments (1)  

The URI to TrackBack this entry is: https://kollegala.wordpress.com/2016/05/23/%e0%b2%85%e0%b2%aa%e0%b3%8d%e0%b2%aa%e0%b2%a8-%e0%b2%ac%e0%b3%86%e0%b2%b2%e0%b3%86/trackback/

RSS feed for comments on this post.

One Commentನಿಮ್ಮ ಟಿಪ್ಪಣಿ ಬರೆಯಿರಿ

  1. ಶರ್ಮರೇ .. ಬರಹ ತುಂಬಾ ಚೆನ್ನಾಗಿದೆ .. ಯೂನಿಕೋಡ್ ನಲ್ಲಿ ಚೆನ್ನಾಗಿ ಕಾಣುತ್ತಿದೆ …


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: