ಸೀನಿನ ಲೆಕ್ಕಾಚಾರ

06062016

ಹೆಚ್ಚಿನ ಓದಿಗೆ:

E. Scharfmann, A. H. Techet, J. W. M. Bush, L. Bourouiba (2016) Visualization of Sneeze Ejecta: steps of fluid fragmentation leading to respiratory droplets. Exp. Fluids 57:24, doi:10.1007/s00348-015-2078-4

ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು. ಮೆಣಸಿನ ಪುಡಿ, ದೂಳಿನಂತಹ ಕಿರಿಕಿರಿಯುಂಟು ಮಾಡುವ ವಸ್ತುಗಳು ಮೂಗಿನೊಳಗೆ ಹೊಕ್ಕಾಗ ಅವನ್ನು ಹೊರದೂಡಲು ನಮಗೆ ಪ್ರಕೃತಿ ನೀಡಿರುವ ವರ ಇದು ಎನ್ನುತ್ತಾರೆ ಜೀವಿವಿಜ್ಞಾನಿಗಳು. ಸೀನಲು ಕಾರದ ಪುಡಿಯೋ, ನಶ್ಯವೋ ಇರಲೇ ಬೇಕೆಂದಿಲ್ಲ. ಉಸಿರಾಟದ ಅಂಗಗಳಿಗೆ ಸೂಕ್ಷ್ಮಾಣುಗಳು ಸೋಂಕಿ ಕಾಯಿಲೆಯಾದಾಗಲೂ ಸೀನು ಬರುವುದುಂಟು. ಸಾಮಾನ್ಯವಾಗಿ ನೆಗಡಿ, ಫ್ಲೂ, ಮುಂತಾದ ಸೋಂಕುಗಳಾದಾಗಲೂ ಸೀನುವುದು ಇದ್ದದ್ದೇ. ಸೀನಿನ ಹಾಗೆಯೇ ಕೆಮ್ಮೂ ಕೂಡ ಸ್ಫೋಟಕ ವಿದ್ಯಮಾನ. ಎರಡೂ ಸಂದರ್ಭಗಳಲ್ಲಿ ಬಲೂನು ಒಡೆದಂತೆ ಇದ್ದಕ್ಕಿದ್ದ ಹಾಗೆ ಗಾಳಿ ಎದೆಯೊತ್ತಿಕೊಂಡು ಬಂದು ಹೊರಗಡೆಗೆ ಸ್ಫೋಟಿಸುತ್ತದೆ. ಜೊತೆಗೆ ಮೂಗಿನಲ್ಲಿರುವ ಸಣ್ಣ ಕಣಗಳನ್ನೂ, ಹನಿಗಳನ್ನೂ ಹೊತ್ತು ಬರುತ್ತದೆ. ಇದುವೇ ಸೀನು. ಬಾಯಿಯಿಂದ ಬಂದಾಗ ಅದು ಕೆಮ್ಮು.

ಕೆಮ್ಮು ಮತ್ತು ಸೀನಿನ ಬಗ್ಗೆ ವೈದ್ಯರಿಗೆ ಬಲು ಕಾಳಜಿ. ಏಕೆಂದರೆ ಹಲವು ರೋಗಗಳು ಹರಡುವುದಕ್ಕೆ ಇವು ಮುಖ್ಯ ಕಾರಣವೆಂದು ಅವರು ನಂಬಿಕೆ. ಸೀನಿದಾಗ ಗಾಳಿಯ ಜೊತೆ ಹೊರಬೀಳುವ ಸಣ್ಣ ಹನಿಗಳು ರೋಗಾಣುಗಳನ್ನು ಹೊತ್ತೊಯ್ಯುತ್ತವೆ. ಗಾಳಿಯಲ್ಲಿ ಹರಡುತ್ತವೆ. ಜೊತೆಗೇ ಹನಿಗಳು ಸೂಕ್ಷ್ಮವಾಗಿದ್ದಷ್ಟೂ ಹೆಚ್ಚೆಚ್ಚು ದೂರಕ್ಕೆ ಪಸರಿಸುತ್ತವೆ ಎನ್ನುವುದು ವೈದ್ಯರ ನಂಬಿಕೆ. ಆದ್ದರಿಂದಲೇ ನೆಗಡಿಯಾದವರ ಬಳಿ ಹೋಗಬೇಡಿ ಎನ್ನುವ ಸಲಹೆ. ಸಮೀಪ ಹೋಗಬೇಡಿ ಎಂದರೆ ಎಷ್ಟು ಸಮೀಪ? ಕೋಣೆಯ ಈ ತುದಿಯಲ್ಲಿ ಕುಳಿತುಕೊಂಡು ಆ ತುದಿಯಲ್ಲಿರುವ ಕೆಮ್ಮಿನ ರೋಗಿಯನ್ನು ಮಾತನಾಡಿಸಿದರೆ ಕ್ಷೇಮವಿರಬಹುದೇ? ಅಥವಾ ಇನ್ನೂ ಹತ್ತಿರ ಹೋದರೆ ತೊಂದರೆಯಿಲ್ಲವೇ? ಈ ಪ್ರಶ್ನೆಗಳಿಗೆ ಬಹುಶಃ ವೈದ್ಯರೂ ಉತ್ತರ ಹೇಳರು. ಲಿಡಿಯಾಳ ಸಂಶೋಧನೆಯ ಗಮನವೆಲ್ಲವೂ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರತ್ತ ಎಂದರೆ ತಪ್ಪೇನಿಲ್ಲ.

ಲಿಡಿಯಾ ಪ್ರಕಾರ ಸೀನು ಮತ್ತು ಕೆಮ್ಮು ದ್ರವಚಲನೆಯ ವಿದ್ಯಮಾನಗಳು. ಅರ್ಥಾತ್, ದ್ರವ ಪದಾರ್ಥಗಳು ಗಾಳಿಯಲ್ಲಿ ಚಲಿಸುವ ಘಟನೆಗಳು. ಚಿಲುಮೆಯಿಂದ ಚಿಮ್ಮುವ ನೀರಿನ ಹನಿಗಳು ಚಲಿಸುವಂತೆಯೇ ಇಲ್ಲಿಯೂ ಹನಿಗಳು ಚಲಿಸುತ್ತವೆ. ಆದ್ದರಿಂದ ಈ ಹನಿಗಳ ಚಲನೆಗೂ ಸೀನುವಾಗ ಉಂಟಾಗುವ ಸ್ಫೋಟ (ಗಾಳಿಯ ಒತ್ತಡ) ದ ಬಲ ಹಾಗೂ ಉಸಿರಿನಲ್ಲಿರುವ ದ್ರವದ ಪ್ರಮಾಣಕ್ಕೂ ಸಂಬಂಧವಿರಬೇಕು. ಇದನ್ನು ಅಧ್ಯಯನ ಮಾಡಿದರೆ ಬಹುಶಃ ಸೀನಿದಾಗ ಹನಿಗಳೆಷ್ಟು ದೂರ ಹಾರಿಯಾವೆಂದು ಊಹಿಸಬಹುದು? ಅದಕ್ಕೆ ತಕ್ಕಂತೆ ರೋಗಿಗಳಿಂದ ದೂರವಿರಲೂ ಪ್ರಯತ್ನಸಿಬಹುದು.

ನಿಜ. ಇದು ದ್ರವಚಲನೆಯ ವಿದ್ಯಮಾನ. ಆದರೆ ಇಲ್ಲಿರುವ ದ್ರವದ ಹನಿಗಳು ಮಳೆಯ ಹನಿಗಳಂತೆಯೋ, ಚಿಲುಮೆಯಿಂದ ಸಿಂಪರಿಸುವ ಹನಿಗಳಂತೆಯೇ ಏಕರೂಪದವಲ್ಲ. ನೀರಿನಂತಹ ಉಗುಳು, ಅಂಟಿನಂತಹ ಸಿಂಬಳ ಮತ್ತು ಗಾಳಿ ಇವೆಲ್ಲವೂ ಕೂಡಿ ಉಂಟಾದ ವಿಶಿಷ್ಟ ದ್ರವ. ಈ ದ್ರವದ ಚಲನೆಯ ವೈಶಿಷ್ಟ್ಯವೇನೆಂದು ತಿಳಿದಲ್ಲಿ ಅವು ಚಲಿಸುವ ದಿಕ್ಕು, ದೂರವನ್ನೆಲ್ಲ ಊಹಿಸಬಹುದು. ಹೀಗೆಂದು ಆಲೋಚಿಸಿರುವ ಲಿಡಿಯಾ ಬೇಕೆಂದಾಗ ಸೀನುವಂತೆ ಮಾಡಿ ಸೀನಿನ ವೀಡಿಯೊ ಚಿತ್ರಣ ತೆಗೆಯುತ್ತಾರೆ. ಪ್ರತಿ ಸೆಕೆಂಡಿಗೆ ನೂರಕ್ಕೂ ಹೆಚ್ಚು ಚಿತ್ರ ತೆಗೆಯುವ ತೀವ್ರಗತಿಯ ಛಾಯಾಗ್ರಹಣ ತಂತ್ರವನ್ನು ಈಕೆ ಬಳಸುತ್ತಾರೆ. ಹೀಗೆ ದೊರೆತ ವೀಡಿಯೋ ಚಿತ್ರದಲ್ಲಿ ಸೀನಿದಾಗ ಉಂಟಾಗುವ ಕಣಗಳು ಹೇಗೆ ಹರಡಿಕೊಳ್ಳುತ್ತವೆ ಎನ್ನುವುದನ್ನು ಗಮನಿಸಿ, ಅದಕ್ಕಾಗಿ ಒಂದು ಗಣೀತೀಯ ಮಾದರಿ (ಸೂತ್ರ) ವನ್ನು ರೂಪಿಸಿದ್ದಾರೆ. ಈ ಮಾದರಿ ಸೀನಿದಾಗ ಬಾಯಿಯಿಂದ ಹೊರಬಂದ ಹನಿಗಳು ಎತ್ತ ಮತ್ತು ಹೇಗೆ ಪಸರಿಸುತ್ತವೆ ಎಂದು ಲೆಕ್ಕ ಹಾಕಬಲ್ಲವು. ಸೀನಿನ ಸ್ಪಷ್ಟ ಚಿತ್ರವನ್ನು ತೋರಬಲ್ಲವು.

sneezedynamics

ಸೀನು ಎಂದರೆ ಒಂದು ಮಹಾಸ್ಫೋಟವಷ್ಟೆ. ಎದೆಯೊಳಗಿನ ಗಾಳಿಯ ಒತ್ತಡ ಇದ್ದಕ್ಕಿದ್ದ ಹಾಗೆ ಹೆಚ್ಚಿ, ಥಟ್ಟನೆ ಬಾಯಿ-ಮೂಗಿನಿಂದ ಹೊರ ಚಿಮ್ಮುತ್ತದೆ. ಹೀಗೆ ಒತ್ತಡ ಹೆಚ್ಚಾಗುವಂತೆ ಮಾಡುವ ದೇಹದ ಕ್ರಿಯೆಗಳ ಕಥೆಯೇ ಬೇರೆ. ಅದು ಇಲ್ಲಿ ಬೇಡ. ಆದರೆ ಸ್ಫೋಟಗೊಂಡು ಹೊರ ಬಂದ ಸೀನಿನ ಗಾಳಿ ಮೊದಲಿಗೆ ದುಂಡಗಿನ ಬಲೂನಿನಂತೆಯೇ ಇರುತ್ತದೆ. ಕ್ರಮೇಣ ಸುತ್ತಲಿನ ಗಾಳಿಯ ಒತ್ತಡಕ್ಕೆ ಅನುಗುಣವಾಗಿ ದೊಡ್ಡದಾಗುತ್ತದೆ. ಹಾಗೆಯೇ ಸುತ್ತಲಿನ ಗಾಳಿಯನ್ನು ಒಳಗೆ ಸೆಳೆದುಕೊಂಡು ಒಡೆಯುತ್ತದೆ. ಹಲವು ಬಲೂನುಗಳಾಗುತ್ತದೆ.

ಈ ಹಿಂದೆಯೂ ಇಂತಹ ಚಿತ್ರಗಳನ್ನು ತೆಗೆಯಲಾಗಿತ್ತು. ಆದರೆ ಹನಿಗಳ ಚಲನೆಯನ್ನು ಲಿಡಿಯಾ ಮಾಡಿರುವಂತೆ ಕೂಲಂಕಷವಾಗಿ ಮಾಡಿರಲಿಲ್ಲ. ಬಾಯಿ-ಮೂಗಿನಿಂದ ಹೊರ ಬಂದ ಹನಿಗಳು ಬಿಡಿ, ಬಿಡಿಯಾಗಿ ಹರಡಿಕೊಳ್ಳುತ್ತವೆಂದು ಇದುರವೆಗೂ ತಿಳಿಯಲಾಗಿತ್ತು. ಆದರೆ ಲಿಡಿಯಾ ತೆಗೆದಿರುವ ವೀಡಿಯೋಗಳು ತಿಳಿಸುವುದೇ ಬೇರೆ. ಎಲ್ಲ ಹನಿಗಳೂ ಬಿಡಿಯಾಗಿರುವುದಿಲ್ಲ. ಸಿಂಬಳದ ಅಂಟುತನ ಇದನ್ನು ತಡೆಗಟ್ಟುತ್ತದೆ. ಜೇಡರಬಲೆಯ ಮೇಲೆ ಹನಿಗಳು ಮುತ್ತುಗಳಂತೆ ಸಂಗ್ರಹವಾಗಿರುವುದನ್ನು ಕಂಡಿರುತ್ತೀರಲ್ಲ? ಇಲ್ಲಿಯೂ ಹಾಗೆಯೇ ಹನಿಗಳು ಸಿಂಬಳದ ಎಳೆಗಳ ಮೇಲೆ ಹರಡಿಕೊಂಡಿರುತ್ತವೆ.

ಇದರ ಪರಿಣಾಮ: ಸಣ್ಣ ಹನಿಗಳು ಕೂಡ ದೊಡ್ಡದಾಗಿ ಬೆಳೆಯಬಲ್ಲವು. ದೊಡ್ಡ ಹನಿಗಳು ಕೂಡ ಸಿಂಬಳದೆಳೆಯ ಆಸರೆಯಲ್ಲಿ ಬಲು ದೂರ ಚಲಿಸಬಲ್ಲುವು. ಕೈಯಳತೆಯ ದೂರದಲ್ಲಿದ್ದರೆ ಸೋಂಕು ತಗುಲುವುದಿಲ್ಲವೆನ್ನುವಂತಿಲ್ಲ ಎನ್ನುತ್ತಾರೆ ಲಿಡಿಯಾ. ಕೆಲವರು ಕೈ ಕುಲುಕದೆಯೇ ಕೈ ಜೋಡಿಸಿ ನಮಸ್ತೆ ಹೇಳುತ್ತಾರೆ. ಕೈ ಕುಲುಕಿದಾಗ ಬಲು ಸಮೀಪವಿರುತ್ತೇವೆಯಾದ್ದರಿಂದ ಸೋಂಕುಂಟಾಗುವ ಸಾಧ್ಯತೆ ಜಾಸ್ತಿ. ನಮಸ್ತೆ ಎಂದು ಕೈ ಜೋಡಿಸಿದರೆ ಹೀಗಾಗದು ಎನ್ನುವುದು ಇವರ ತರ್ಕ. ಫ್ಲೂ ಹಾಗೂ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ ಇಬೊಲಾ ವೈರಸ್ ಗಳು ಈ ತೆರನಾಗಿ ದೇಹ ಸಂಪರ್ಕದಿಂದಲೇ ದಾಟಿ ಬರುತ್ತವೆ. ಅಂತಹ ಸಂದರ್ಭದಲ್ಲಿ ‘ನಮಸ್ತೆ’ ನೆರವಾಗಬಹುದು. ಆದರೆ ನೆಗಡಿ ಹಾಗೂ ಹಂದಿಜ್ವರ ಅಥವಾ ಕೋಳಿಜ್ವರಗಳ ಸಂದರ್ಭದಲ್ಲಿ ಕೋಣೆಯಿಂದ ಹೊರ ಹೋದರೂ ಸೋಂಕು ಬೆಂಬತ್ತಿ ಬರಬಹುದು ಎನ್ನುತ್ತದೆ ಲಿಡಿಯಾ ರವರ ಸಂಶೋಧನೆಗಳು.

ಇದರಿಂದೇನು ಪ್ರಯೋಜನ ಎನ್ನಬೇಡಿ. ಲಿಡಿಯಾರ ಸೂತ್ರಗಳಂತೆಯೇ ಎಲ್ಲ ಸೀನಿನ ಸಂದರ್ಭಗಳೂ ಇದ್ದಲ್ಲಿ, ಗಾಳಿಯಲ್ಲಿ ಹರಡುವ ರೋಗಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವುದು ಸುಲಭವಾದೀತು ಎನ್ನುವುದು ಲಿಡಿಯಾರ ತರ್ಕ. ಅದಕ್ಕೂ ಮುನ್ನ, ಹನಿಗಳಲ್ಲಿ ಎಷ್ಟು ರೋಗಾಣುಗಳು ಇರಬಹುದು? ಎಷ್ಟು ಹನಿಗಳಿಂದ ರೋಗಗಳುಂಟಾಗಬಹುದು? ಎಂತಹ ರೋಗಾಣುಗಳು ಹೀಗೆ ಹನಿಗಳ ಮೂಲಕ ಹರಡಬಲ್ಲವು? ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕು. ಅದುವರೆವಿಗೂ ಮೂಗಿಗೆ ಬಟ್ಟೆಯನ್ನೋ, ಕರ್ಚೀಫನ್ನೋ ಕಟ್ಟಿಕೊಂಡು, ನಮಸ್ತೆ ಹೇಳುತ್ತ ಎಚ್ಚರದಿಂದಿರಬೇಕಷ್ಟೆ.

 

Published in: on ಜೂನ್ 7, 2016 at 9:06 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

The URI to TrackBack this entry is: https://kollegala.wordpress.com/2016/06/07/%e0%b2%b8%e0%b3%80%e0%b2%a8%e0%b2%bf%e0%b2%a8-%e0%b2%b2%e0%b3%86%e0%b2%95%e0%b3%8d%e0%b2%95%e0%b2%be%e0%b2%9a%e0%b2%be%e0%b2%b0/trackback/

RSS feed for comments on this post.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: