ಅಮ್ಮ ಅಪ್ಪಂದಿರಿಗೆ ಕೊಕ್?

 

ಹದಿಮೂರು ವರ್ಷಗಳ ಹಿಂದೆ ಇಂಗ್ಲೆಂಡಿನ ರೋಸ್ಲಿನ್ ಸಂಶೋಧನಾಲಯ ಡಾಲಿ ಎನ್ನುವ ತದ್ರೂಪಿ ಕುರಿಯನ್ನು ಸೃಷ್ಟಿಸಿತು. ಇದು ತಂದೆ ಮತ್ತು ತಾಯಿಯೆಂಬ ಪ್ರಾಣಿಗಳಿಗೆ ಕೊಟ್ಟ ಮೊದಲ ಕೊಕ್ ಎನ್ನಬಹುದು. ಕುರಿಯೊಂದರ ದೇಹದ ಕೋಶವನ್ನೇ ಉಪಯೋಗಿಸಿಕೊಂಡು ಅದರದ್ದೇ ತದ್ರೂಪಾದ ಮರಿಯನ್ನು ಸೃಷ್ಟಿಸಿತ್ತು ಈ ತಂತ್ರಜ್ಞಾನ. ಇದೇ ಸುಪ್ರಸಿದ್ಧ ಡಾಲಿ. ವಿಶೇಷವೆಂದರೆ ಇದರ ಸೃಷ್ಟಿಯಲ್ಲಿ ತಾಯಿಯ ಅಂಡಾಣು ಭ್ರೂಣವಾಗಿ ಬೆಳೆಯಲು ಅವಶ್ಯಕವಾದ ಗಂಡಿನ ವೀರ್ಯಾಣುವನ್ನು ಬಳಸಲೇ ಇಲ್ಲ. ಅರ್ಥಾತ್, ಪ್ರಾಣಿಗಳಲ್ಲಿ ನಾವು ಸರ್ವೇ ಸಾಮಾನ್ಯವಾಗಿ ಕಾಣುವ ತಂದೆ-ತಾಯಿಗಳಲ್ಲಿ, ತಂದೆಗೆ ಕೊಕ್ ಕೊಡಲಾಗಿತ್ತು.

ಇಂದು ಡಾಲಿ ಇಲ್ಲ. ಅದು ತನ್ನ ಜೀವನವನ್ನು ಮುಗಿಸಿ ಪರಂಧಾಮಕ್ಕೆ ಹೋಗಿಯಾಗಿದೆ. ಅದರ ಸಂತಾನಗಳು ತಮ್ಮ ವಂಶಾವಳಿಯನ್ನು ಮುಂದುವರೆಸುತ್ತಿವೆ. ಈ ಅವಧಿಯಲ್ಲಿ ವೈದ್ಯಕೀಯ ಹಾಗೂ ಜೀವಿವಿಜ್ಞಾನದಲ್ಲಿ ಅಭೂತಪೂರ್ವ ಬೆಳೆವಣಿಗೆಗಳಾಗಿವೆ. ಗಂಡು ಅರ್ಥಾತ್ ತಂದೆಯ ಸ್ಥಾನವಂತೂ ಇನ್ನೂ ನಿಕೃಷ್ಟವಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಹದ ಚರ್ಮ ಕೋಶಗಳು ತರಡಿನ ಕೋಶಗಳು ಹಾಗೂ ಎಳೆಯ ಸ್ನಾಯುಕೋಶಗಳನ್ನೂ ವೀರ್ಯಾಣುಗಳನ್ನಾಗಿ ಬದಲಾಯಿಸುವ ತಂತ್ರಗಳು ಸಿದ್ಧಿಸಿವೆ. ಇನ್ನೂ ಬಲಿಯದ ಭ್ರೂಣಗಳಲ್ಲಿರುವ ಜೀವಕೋಶಗಳನ್ನು ಹೆಣ್ಣಿಲಿಗಳ ಚರ್ಮದಲ್ಲಿ ನೆಟ್ಟು ವೀರ್ಯಾಣುಗಳನ್ನಾಗಿ ಬೆಳೆಸಿ ಮರಿಗಳನ್ನು ಸೃಷ್ಟಿಸಿದ್ದೂ ಉಂಟು. ಗಂಡಿನ ಭ್ರೂಣವೂ  ಬೇಡ, ಗಂಡೇ ಬೇಡ ಎನ್ನುವ ಸ್ಥಿತಿ.

ಇಷ್ಟೆಲ್ಲಾ ಆದರೂ ಪ್ರಾಣಿಗಳ, ಅದರಲ್ಲೂ ಸ್ತನಿಗಳಂತಹ ಪ್ರಾಣಿಗಳ ಸಂತಾನೋತ್ಪತ್ತಿಯಲ್ಲಿ ತಾಯಿಯ ಅವಶ್ಯಕತೆ ಹಾಗೆಯೇ ಇತ್ತು. ಭ್ರೂಣವನ್ನು ಹೇಗೇ ಸೃಷ್ಟಿಸಿರಲಿ, ಅದು ಬೆಳೆಯಲು ತಾಯಿಯ ಗರ್ಭಾಶಯದ ಆಸರೆ ಬೇಕೇ ಬೇಕಿತ್ತು. ಪ್ರಯೋಗಾಲಯದಲ್ಲಿ ಪಿಂಡ ಸೃಷ್ಟಿ ಆದರೂ ಅದು ಪೂರ್ಣ ಪ್ರಮಾಣದ ಶಿಶುವಾಗಿ, ಮರಿಯಾಗಿ ಬೆಳೆಯಲು ತಾಯಿಯ ಗರ್ಭಾಶಯ ಬೇಕೇ ಬೇಕು. ಭಾರತದಲ್ಲಿ ಇದೀಗ ಮಹಿಳೆಯರ ಶೋಷಣೆಗೆ ಮತ್ತೊಂದು ಆಯಾಮ ನೀಡಿರುವ ‘ಬಾಡಿಗೆತಾಯಿ’ ಉದ್ಯಮಕ್ಕೆ ಇದೇ ಕಾರಣ..

ಇದೀಗ ಗರ್ಭಾಶಯದ ಅವಶ್ಯಕತೆಯೂ ದೂರವಾಗಲಿದೆಯೇ? ತಾಯಿಗೂ ಕೊಕ್ ಸಿಗಲಿದೆಯೇ? ಹೀಗೊಂದು ಸಾಧ್ಯತೆಯನ್ನು ಫಿಲಾಡೆಲ್ಫಿಯ ಶಿಶು ಆಸ್ಪತ್ರೆಯ ವೈದ್ಯರು ಮುಂದಿಟ್ಟಿದ್ದಾರೆ. ಅತ್ಯಂತ ಅಗ್ಗ ಹಾಗೂ ಸರಳವೆನ್ನಬಹುದಾದ ಕೃತಕ ಗರ್ಭಾಶಯವನ್ನು ಇವರು ರೂಪಿಸಿದ್ದಾರೆ. ಪ್ಲಾಸ್ಟಿಕ್ ಚೀಲದಂತಹ ಈ ಗರ್ಭಾಶಯದಲ್ಲಿ ಮೂರು ತಿಂಗಳ ಪಿಂಡಕ್ಕೆ ಸಮನಾದ ಆಡಿನ ಭ್ರೂಣವನ್ನು ಇಟ್ಟು ತಾಯಿಯ ಬೆಳೆಸಿದ್ದಾರೆ. ಬಯೋಬ್ಯಾಗ್ (ಜೈವಿಕ ಚೀಲ) ಎಂದು ಪತ್ರಕರ್ತರು ಅಡ್ಡ ಹೆಸರಿಟ್ಟಿರುವ ಈ ಕೃತಕ ಗರ್ಭಾಶಯ ಈ ಹಿಂದೆ ಈ ನಿಟ್ಟಿನಲ್ಲಿ ನಡೆದ ಎಲ್ಲ ಸಂಶೋಧನೆಗಳಿಗಿಂತಲೂ ಉತ್ತಮವೆನ್ನುವ ಉತ್ಸಾಹ ವಿಜ್ಞಾನಿಗಳಿಗಿದೆ.

biobag1

ಆಡಿನ ಮರಿಯನ್ನು ಹೊತ್ತ ಕೃತಕ ಗರ್ಭಾಶಯ. ಹೆರಿಗೆ ಎಂದರೆ ಈ ಚೀಲವನ್ನು ಕತ್ತರಿಸಿ ತೆಗೆದರೆ ಸಾಕಂತೆ!

ಸದ್ಯಕ್ಕೆ ಈ ಬಗೆಯ ಜೈವಿಕ ಚೀಲವನ್ನು ಅವಧಿಗಿಂತಲೂ ಮುನ್ನವೇ ಹೆರಿಗೆಯಾಗುವ ಸಾವು ಕಟ್ಟಿಟ್ಟ ಬುತ್ತಿಯೆನ್ನುವಂತಹ ಭ್ರೂಣಗಳನ್ನು ಕಾಪಾಡಲು ಬಳಸುವ ಯೋಜನೆಯಿದೆ. ಭ್ರೂಣಹತ್ಯೆಯ ಸಂದರ್ಭದಲ್ಲಿ  ಮೂರು ತಿಂಗಳ ಭ್ರೂಣವನ್ನೇ ಕಿತ್ತೊಗೆಯುವುದು ಸಾಮಾನ್ಯ. ಇವುಗಳಿಗೆ ತಾಯ ಗರ್ಭಾಶಯದ ಹೊರಗೆ ಬದುಕುವ ಶಕ್ತಿಯಿಲ್ಲ. ಈ ಹೊಸ ಚೀಲ ಇಂತಹ ಭ್ರೂಣಗಳಿಗೆ ಜೀವದಾಯಿಯಾಗಬಲ್ಲುದು ಎನ್ನುವ ಆಶಯವಿದೆ. ಅದೇನೇ ಇರಲಿ. ಇನ್ನೂ ಎಳೆಯದಾದ ಭ್ರೂಣವನ್ನು ದೇಹದ ಹೊರಗೆ ಬೆಳೆಸುವುದು ಸಾಧ್ಯವಾದರೆ ಮುಂದೆ ತಾಯಿ ಎನ್ನುವ ಜೀವಕ್ಕೂ ಕೊಕ್ ಕೊಟ್ಟಂತೆಯೇ ಸರಿ.

ಎಂಭತ್ತು ವರ್ಷಗಳ ಹಿಂದೆ ಪ್ರಸಿದ್ಧ ಇಂಗ್ಲೀಷ್ ಲೇಖಕ ಆಲ್ಡಸ್ ಹಕ್ಸಲಿ  1984 ಎಂಬ ಕಾದಂಬರಿಯಲ್ಲಿ ಹೀಗೆ ಕಾರ್ಖಾನೆಗಳಲ್ಲಿ ಭ್ರೂಣಗಳನ್ನಿಟ್ಟು ಬೆಳೆಸುವ ಕಲ್ಪನೆಯನ್ನು ಮಾಡಿದ್ದ. ಅದು ತಂತ್ರಜ್ಞಾನದ ದುಷ್ಪ್ರಭಾವಗಳನ್ನು ಕುರಿತ ವ್ಯಂಗ್ಯಕಥೆ. ಬಹುಶಃ ರವಿ ಕಾಣದ್ದನ್ನು ಕವಿ (ಕಥೆಗಾರ) ಕಾಣುವುದು ಎಂದರೆ ಇದೇ ಇರಬೇಕು. ಅಥವಾ ಕವಿಯ ಕಲ್ಪನೆಗಳನ್ನು ವಿಜ್ಞಾನಿಗಳು ಸಾಕಾರಗೊಳಿಸುವರೋ? ವೈಜ್ಞಾನಿಕ ಕಥೆಗಳಲ್ಲಿ ಬರುವ ಕಲ್ಪನೆಗಳು ಅವಾಸ್ತವವಂತೂ ಅಲ್ಲ. ಅವು ಸಾಧ್ಯತೆಯ ಸೂಚನೆಗಳು ಎನ್ನುವುದಕ್ಕೆ ಇದು ಸಾಕ್ಷಿ.


ಕೊಳ್ಳೇಗಾಲ ಶರ್ಮ

Published in: on ಏಪ್ರಿಲ್ 29, 2017 at 10:20 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗಾಳಿಯಿಂದ ನೀರಿನ ಕೊಯ್ಲು

ಇಂದಿನ  ಇಪತ್ರಿಕೆ.ಕಾಮ್ ನಲ್ಲಿ ನನ್ನ ಲೇಖನ.

25042017

ಲೇಖನದ ಮೂಲ, ಸಂಪಾದಕರ ಕತ್ತರಿಗೆ ಸಿಗದ ವಿವರಗಳು ಇದೋ ಇಲ್ಲಿವೆ.

ಬರಗಾಲದಿಂದಾಗಿ ಬೇಸಗೆಯ ದಿನಗಳು ನೀರಿಲ್ಲದೆ ಭಣಗುಡುತ್ತಿರುವ ಈ ದಿನಗಳಲ್ಲಿ ನೀರಿನ ವಿಷಯವನ್ನು ಎತ್ತುವುದೇ ತಪ್ಪು. ಆದರೂ ಬೇಸಗೆಯ ಈ ಒಣಗಾಳಿಯಿಂದಲೂ ನೀರನ್ನು ಪಡೆಯಬಹುದು ಎಂದರೆ ಅದು ನಿಜಕ್ಕೂ ಅಚ್ಚರಿಯ ವಿಷಯವಲ್ಲವೇ? ಹೀಗೆ ಒಣಗಾಳಿಯಿಂದಲೂ ನೀರನ್ನು ‘ಕೊಯ್ಲು’ ಮಾಡುವ ಸರಳ ವಿಧಾನವೊಂದು ಸಾಧ್ಯ ಎಂದು ಅಮೆರಿಕೆಯ ಬರ್ಕಲಿ ವಿವಿಯ ವಿಜ್ಞಾನಿಗಳು ತೋರಿಸಿದ್ದಾರಂತೆ.

ಮಳೆಯ ಕೊಯ್ಲು ಕೇಳಿದ್ದೀರಿ. ಮಳೆಯ ವೇಳೆ ಬಿದ್ದ ನೀರನ್ನು ಭೂಮಿಯೊಳಗೆ ಇಂಗಿಸಿ ಅದು ನಷ್ಟವಾಗದಂತೆ ಕಾಯ್ದುಕೊಳ್ಳುವುದೇ ಮಳೆಯ ಕೊಯ್ಲು. ರಾಜಸ್ತಾನದ ಮರುಭೂಮಿಯಲ್ಲಿರುವ ರಾಣಿತಾಲಾಬ್, ಮೇಲುಕೋಟೆಯ ಅಕ್ಕ-ತಂಗಿಯರ ಕೊಳ ಹಾಗೂ ಬೀದರಿನಲ್ಲಿರುವ ಕೆಲವು ಕೊಳಗಳು ಮಳೆಕೊಯ್ಲಿನ ಬಗ್ಗೆ ನಮ್ಮ ಪೂರ್ವಜರಿಗೆ ಸಾಕಷ್ಟು ಅನುಭವ ಇದ್ದಿತೆಂದು ತೋರಿಸಿವೆ. ಮಳೆಕೊಯ್ಲೇನೋ ಸರಿ. ಆದರೆ ಈ ನೀರಿನ ಕೊಯ್ಲು? ಮಳೆಯ ಕೊಯ್ಲಿನಂತೆ ನೀರಿನ ಕೊಯ್ಲು ಹೊಸ ಚಿಂತನೆಯೇನಲ್ಲ. ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಬವಣೆಯನ್ನು ಊಹಿಸಿಕೊಂಡೇ ಹಲವಾರು ತಂತ್ರಜ್ಞರು ಗಾಳಿಯಲ್ಲಿ ಸಹಜವಾಗಿಯೇ ಇರುವ ನೀರನ್ನು ಸಂಗ್ರಹಿಸುವ ಉಪಾಯಗಳನ್ನು ಹುಡುಕುತ್ತಿದ್ದಾರೆ.

ಸುಪ್ರಸಿದ್ಧ ನೀರು ಶುಧ್ಧೀಕರಿಸುವ ಯಂತ್ರಗಳನ್ನು ತಯಾರಿಸುವ ಯುರೇಕಾ ಫೋರ್ಬಸ್ ಕಂಪೆನಿ ಮುಂಬಯಿಯಲ್ಲಿ ಗಾಳಿಯಲ್ಲಿರುವ ನೀರನ್ನು ಹಿಂಡುವ ಉಪಕರಣವೊಂದನ್ನು ಪ್ರದರ್ಶನಕ್ಕಿಟ್ಟಿತ್ತೆಂದು ಎರಡು ವರ್ಷಗಳ ಹಿಂದೆ ಪತ್ರಿಕೆಗಳು ವರದಿ ಮಾಡಿದ್ದುವು. ಮುಂಬಯಿಯ ಹವೆಯಲ್ಲಿ ಗಾಳಿಗಿಂತ ತೇವವೇ ಜಾಸ್ತಿ ಎನ್ನಬಹುದು. ಕರಾವಳಿಯಲ್ಲಿರುವ ಆ ನಗರದ ಗಾಳಿಯಲ್ಲಿ ಸಮುದ್ರದಿಂದ ಬಂದ ತೇವಾಂಶ ಕೂಡಿಕೊಂಡು ತುಸು ಭಾರಿ ತೇವವಿರುವುದು ಸಹಜ. ಇಂತಹ ತೇವಭರಿತ ಗಾಳಿಯಿಂದ ನೀರನ್ನು ಹೆಕ್ಕುವುದು ಕಷ್ಟವೇನಲ್ಲ. ಬೇಸಗೆಯಲ್ಲಿ ಕೊಠಡಿಯ ಗಾಳಿಯನ್ನು ತಂಪಾಗಿಡುವ ಹವಾನಿಯಂತ್ರಣ ಯಂತ್ರಗಳು ಹೀಗೆ ಮಾಡುತ್ತಲೇ ಗಾಳಿಯನ್ನು ತಂಪಾಗಿಸಿ, ಒಣಗಿಸುತ್ತಿರುತ್ತವೆ. ಯಾವುದಾದರೂ ಹವಾನಿಯಂತ್ರಿತ ಮಾಲ್ ನ ಹಿಂದೆಯೋ, ಅದರ ನೆಲಮಾಳಿಗೆಯಲ್ಲಿಯೋ ಹೀಗೆ ನೀರನ್ನು ಒಸರುತ್ತಿರುವ ಹವಾನಿಯಂತ್ರಕಗಳನ್ನು ಕಾಣಬಹುದು.

ಆದರೆ ಇಲ್ಲೊಂದು ಅಡ್ಡಿಯಿದೆ. ಹೀಗೆ ಗಾಳಿಯಿಂದ ನೀರನ್ನು ಪಡೆಯಬೇಕಾದರೆ ನಾವು ಬಹಳಷ್ಟು ಇಂಧನವನ್ನು (ಹವಾನಿಯಂತ್ರಕದ ವಿಷಯದಲ್ಲಿ ವಿದ್ಯುತ್ತನ್ನು) ಬಳಸಬೇಕಾಗುತ್ತದೆ. ತೇವಾಂಶವನ್ನು ಸಂಗ್ರಹಿಸಲು ಗಾಳಿಯನ್ನು ತಣಿಸಬೇಕಾಗುತ್ತದೆ. ಅದಕ್ಕಾಗಿ ತಣಿಸುವ ಯಂತ್ರಗಳು –ಶೀತಲೀಕರಣ ಯಂತ್ರ, ರೆಫ್ರಿಜರೇಟರು, ಹವಾನಿಯಂತ್ರಕ- ಇವೆಯಾದರೂ ಗಾಳಿಯ ಉಷ್ಣತೆ ತಗ್ಗಿಸಲು ವಿದ್ಯುತ್ತು ಅವಶ್ಯಕ. ಆ ನೀರನ್ನು ಸಂಗ್ರಹಿಸಿ ಪಂಪು ಮಾಡಲೂ ವಿದ್ಯುತ್ ಅವಶ್ಯಕ. ಇಷ್ಟೆಲ್ಲ ಖರ್ಚು ಮಾಡಿ ಪಡೆದ ನೀರಾದರೂ ಎಷ್ಟು? ಚಮಚದಷ್ಟು ನೀರಿಗೆ ಚಿನ್ನದಷ್ಟು ಬೆಲೆ ಎನ್ನಿಸಿಬಿಡಬಹುದು.

ಗಾಳಿಯನ್ನು ತಣಿಸಲು ಯಂತ್ರಗಳೇ ಬೇಕೇ? ಬೇರೆ ಉಪಾಯಗಳಿಲ್ಲವೇ ಎನ್ನಬೇಡಿ. ಇವೆ. ಆದರೆ ಅವು ಮುಂಬಯಿ, ಬೆಂಗಳೂರಿನಂತಹ ಸ್ಥಳಗಳಲ್ಲಿ ಬಹುಶಃ ಕೆಲಸ ಮಾಡಲಾರವು. ದಿನದಲ್ಲಿ ಒಂದೆರಡು ಗಂಟೆಯಾದರೂ ಗಾಳಿ ಬಲು ತಣ್ಣಗಾಗುವೆಡೆ ಹಾಗೂ ಗಾಳಿಯಲ್ಲಿ ತೇವಾಂಶ ಹೆಚ್ಚಿರುವ ಸಂದರ್ಭಗಳಲ್ಲಿ ಇದು ಸಾಧ್ಯ. ಉದಾಹರಣೆಗೆ, ಬೆಂಗಳೂರಿನಲ್ಲಿಯೇ ಮಳೆಗಾಲ ಮುಗಿದು ಛಳಿಗಾಲ ಆರಂಭವಾಗುವ ದಿನಗಳಲ್ಲಿ ಮುಂಜಾವಿನ ಗಾಳಿ ಬಲು ತಣ್ಣಗಿದ್ದು, ಗಿಡಗಂಟಿಗಳ ಮೇಲೆ ಇಬ್ಬನಿ ಕೂಡುವುದನ್ನು ಕಾಣಬಹುದು. ಇದು ಸಹಜವಾಗಿ ನಡೆಯುವ ಗಾಳಿಯ ನೀರಿನ ಕೊಯ್ಲು.

ಕೆನಡಾದ ಎತ್ತರದ ಗುಡ್ಡ ಪ್ರದೇಶಗಳಲ್ಲಿ ತೇವಾಂಶವನ್ನು ಅಂಟಿಸಿಕೊಳ್ಳುವ ನೂಲೆಳೆಗಳನ್ನು ಬಲೆಯಾಗಿ ನೇಯ್ದು ಗಾಳಿಯಾಡುವೆಡೆ ಬಯಲಿನಲ್ಲಿ ಜೋತಾಡಿಸಿ ಗಾಳಿ ತಣಿದಾಗ ಹುಟ್ಟುವ ನೀರಿನ ಹನಿಗಳನ್ನು ಒಂದೆಡೆ ಒಟ್ಟಾಗಿಸಿ ನೀರನ್ನು ಉತ್ಪಾದಿಸಬಹುದು ಎಂದು ಪ್ರಯೋಗಗಳು ತಿಳಿಸಿವೆ. ಜೇಡನ ಬಲೆಯ ನೂಲಿನಂತೆ ತೇವಾಂಶವನ್ನು ಅಂಟಿಸಿಕೊಳ್ಳುವ ನೂಲು ಹಾಗೂ ಅತಿ ಕಡಿಮೆ ಉಷ್ಣಾಂಶವಿರುವ ವಾತಾವರಣ ಇದಕ್ಕೆ ಅವಶ್ಯಕ. ನಮ್ಮಲ್ಲಿ ಬಹುಶಃ ಇದು ಊಟಿಯಲ್ಲೋ, ಕೊಡೈಕನಾಲ್, ಮಡಕೇರಿ, ಮುಳ್ಳಯ್ಯನಗಿರಿಯಲ್ಲಿ ಸಾಧ್ಯವೇನೋ? ಆದರೆ ಬಿಜಾಪುರದಂತಹ ಉರಿಬಿಸಿಲಿನ ನಾಡಿನಲ್ಲಿ?

 

ಅದಕ್ಕೆ ನಾವು ಮಾಡಿರುವ ಉಪಾಯ ಯುಕ್ತವಿರಬಹುದು ಎನ್ನುತ್ತಾರೆ ಬರ್ಕಲಿವಿಶ್ವವಿದ್ಯಾನಿಲಯದ ರಸಾಯನ ವಿಜ್ಞಾನಿ ಎವೆಲಿನ್ ವಾಂಗ್ ಮತ್ತು ಮರುಭೂಮಿಯ ನಾಡು ಸೌದಿ ಅರೇಬಿಯಾದಲ್ಲಿರುವ ಕಿಂಗ್ ಅಬ್ದುಲ್ಲ ವಿವಿಯ ಓಮರ್ ಯಾಘಿ. (ವಾಂಗ್ ರವರ ಶಿಷ್ಯರಲ್ಲಿ ಇಬ್ಬರು ಭಾರತೀಯರೂ ಇದ್ದಾರೆ). ಇವರಿಬ್ಬರೂ ತಮ್ಮ ಜೊತೆಗಾರರೊಡನೆ ಕೂಡಿ ಹೊಸ ಉಪಾಯವೊಂದನ್ನು ಹೂಡಿದ್ದಾರೆ. ನೀರನ್ನು ವಿಶೇಷವಾಗಿ ಅಂಟಿಸಿಕೊಳ್ಳುವಂತಹ ಸಾಮರ್ಥ್ಯವಿರುವ ತಾಮ್ರದ ಜಾಲರಿಯ ಮೇಲೆ ಜಿರ್ಕೋನಿಯಂ ಸಾವಯವ ವಸ್ತುವನ್ನು ಲೇಪಿಸಿ ಈ ಮುಚ್ಚಳವನ್ನು ರಚಿಸಿದ್ದಾರೆ.

ಜೇಡದ ಬಲೆ ಗಾಳಿಯಲ್ಲಿರುವ ನೀರನ್ನು ಸೆಳೆಯುವಂತೆ ಈ ವಸ್ತುವೂ ನೀರಿನ ಕೊಯ್ಲು ಮಾಡಬಲ್ಲುದು. ವಿಶೇಷವೇನೆಂದರೆ ಇದು ನೀರನ್ನು ಹೀರಿ ತನ್ನೊಳಗಿರುವ ಸೂಕ್ಷ್ಮ ರಂಧ್ರಗಳಲ್ಲಿ ಶೇಖರಿಸಿಕೊಳ್ಳುತ್ತದೆ. ಅನಂತರ ವಾತಾವರಣ ತುಸು ಬಿಸಿಯೇರಿದ ಕೂಡಲೇ ಈ ನೀರು ಆವಿಯಾಗಿ ಜಾಲರಿಯಿಂದ ಬೇರ್ಪಡುತ್ತದೆ. ನೀರನ್ನು ಸೆಳೆಯುವ ಇದರ ಸಾಮರ್ಥ್ಯ ಹೇಗಿದೆ ಎಂದರೆ ಶೇಕಡ 20ರಷ್ಟು ತೇವಾಂಶವಷ್ಟೆ ಇರುವ ಗಾಳಿ (ಹೆಚ್ಚೂ ಕಡಿಮೆ ಬೇಸಗೆಯಲ್ಲಿ ಬಿಜಾಪೂರದಲ್ಲಿರುವ ತೇವಾಂಶ – ಮರುಭೂಮಿಯಲ್ಲಿನ ನಿತ್ಯ ವಿದ್ಯಮಾನ) ಯಿಂದಲೂ ನೀರನ್ನು ಹೀರಿಕೊಳ್ಳಬಲ್ಲುದು.

ಈ ಜಾಲರಿಯ ಮುಚ್ಚಳವನ್ನು ಒಂದು ಪುಟ್ಟ ಅಕ್ರಿಲಿಕ್  ಪೆಟ್ಟಿಗೆಯೊಳಗೆ ನೇತಾಡಿಸಿ ಮೇಲಿಟ್ಟು ಆ ಪೆಟ್ಟಿಗೆಯನ್ನು ರಾತ್ರಿಯೆಲ್ಲ ಬಿಸಿಲಿನಲ್ಲಿ ಇತೆರೆದಿಡುತ್ತಾರೆ. ರಾತ್ರಿ ಗಾಳಿಯಲ್ಲಿರುವ ತೇವಾಂಶವನ್ನು ಜಾಲರಿ ಹೀರಿಕೊಂಡಿರುತ್ತದೆ. ಬೆಳಗ್ಗೆ  ಪೆಟ್ಟಿಗೆ ಯನ್ನು ಬಿಸಿಲಿನಲ್ಲಿ ಇಡುತ್ತಾರೆ. ಪೆಟ್ಟಿಗೆಯ ಒಳಮೈಯನ್ನೆಲ್ಲ ತೆಳು ಅಲ್ಯುಮಿನಿಯಂ ಹಾಳೆಯಿಂದ ಮುಚ್ಚಿರುವುದರಿಂದ ಅದು ಬೇಗನೆ ಬಿಸಿಯೇರಿ ಜಾಲರಿಯಲ್ಲಿರುವ ನೀರನ್ನು ಆವಿಯಾಗಿಸುತ್ತದೆ. ಪೆಟ್ಟಿಗೆಯ ತಳದಲ್ಲಿ ತಾಮ್ರದ ಹಾಳೆಯ ಮೇಲೆ ಇದೇ ರೀತಿಯ ವಸ್ತುವಿನಿಂದ ಕಂಡೆನ್ಸರನ್ನು ರೂಪಿಸಿದ್ದಾರೆ. ಇದು ಆವಿಯನ್ನು ತಣಿಸಿ ನೀರಾಗಿಸಿ ಹೊರಗೆ ಹರಿಸುತ್ತದೆ. .  ಇದಕ್ಕೆ ಯಾವುದೇ ವಿದ್ಯುತ್ತು, ಪಂಪುಗಳೂ ಅವಶ್ಯಕವಿಲ್ಲ.

ಇಷ್ಟು ನೀರು ಎಷ್ಟು ಮಂದಿಗೆ ಸಾಕು ಎನ್ನಬೇಡಿ. ಸಂಜೆಯಾದೊಡನೆ ಬೇಗನೆ ತಣಿಯುವ ಮಡಕೆಯಂತಹ ಪಾತ್ರೆಗಳಿಗೆ ಇಂತಹ ಮುಚ್ಚಳಗಳನ್ನು ಹಾಕಿಟ್ಟು ಮರುದಿನ ನೀರನ್ನು ಸಂಗ್ರಹಿಸಬಹುದು. ದೊಡ್ಡದೊಂದು ಪಾತ್ರೆಯ ಬದಲು ಹತ್ತಾರು ಸಣ್ಣ ಪಾತ್ರೆಗಳನ್ನು ತಾರಸಿಯಲ್ಲಿಟ್ಟು ಕುಟುಂಬವೊಂದಕ್ಕೆ ಬೇಕಾಗುವಂತಹ ಕುಡಿಯುವ ನೀರನ್ನು ಒದಗಿಸಿಕೊಳ್ಳುವುದು ಕಷ್ಟವೇನಲ್ಲ ಎನ್ನುವುದು ಇವರ ಲೆಕ್ಕಾಚಾರ. ಗಾಳಿ ಹೆಚ್ಚು ತೇವವಿದ್ದರೆ ಇನ್ನೂ ಹೆಚ್ಚು ನೀರು ದೊರಕಲೂ ಬಹುದು.

ಒಟ್ಟಾರೆ ಖಾಲಿ ಗಾಳಿಯಲ್ಲೇ ಮೋಡಿ ಮಾಡಿ ನೀರು ಹಿಡಿದಂತಾಯಿತು ಅಲ್ಲವೇ? ರಾಜಸ್ತಾನದ ಮರುಭೂಮಿಯಲ್ಲಿ, ಮೇಲುಕೋಟೆಯ ಶಿಖರದಲ್ಲಿ, ಬೀದರಿನ ಬೆಂಗಾಡಿನಲ್ಲಿ ಬತ್ತದ ಕೊಳಗಳನ್ನು ಕಟ್ಟಿದ ನಮ್ಮ ಪೂರ್ವಜರಿಗೆ ಈ ಅರಿವು ಇದ್ದಿದ್ದರೆ ಇನ್ನೇನೇನು ಅದ್ಭುತಗಳನ್ನು ಸಾಧಿಸುತ್ತಿದ್ದರೋ ಎನಿಸುತ್ತದೆ ಅಲ್ಲವೇ?

_____

ಆಕರ: Kim et al., Water harvesting from air with metal-organic frameworks powered by natural sunlight, Science 10.1126/science.aam8743 (2017).

Published in: on ಏಪ್ರಿಲ್ 25, 2017 at 7:02 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಉಷ್ಟ್ರಪಕ್ಷಿ  ವಿದೇಶೀ ಅಲ್ಲ

ಕಣಜ ಅಂತರಜಾಲ ಕನ್ನಡ ಕೋಶದಲ್ಲಿ ಪ್ರಕಟವಾದ ನನ್ನ ಲೇಖನ.

http://kanaja.in/?p=134436

Published in: on ಏಪ್ರಿಲ್ 20, 2017 at 6:11 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜೇಡರಣ್ಣನ ಬಣ್ಣದ ಗುಟ್ಟು

ಇಪತ್ರಿಕೆ.ಕಾಮ್ (epathrike.com) ನಲ್ಲಿ ನಿನ್ನೆ ಪ್ರಕಟವಾದ ಲೇಖನ ಇಲ್ಲಿದೆ.18042017

ಲೇಖನದ ಜೊತೆಗೆ ಚಿತ್ರಗಳೂ ಇದ್ದುವು. ಪತ್ರಿಕೆಯಲ್ಲಿ ಸ್ಥಳಾಭಾವದಿಂದಾಗಿ ಅವನ್ನು ಸಂಪಾದಕರು ಒತ್ತಟ್ಟಿಗಿಟ್ಟಿದ್ದಾರೆ. ಇದೋ ಇಲ್ಲಿವೆ ಆ ಚಿತ್ರಗಳು:

differentbluetarantula-courtesyT.Patterson

ಟರಾಂಟುಲ ನೀಲಿ ಜೇಡಗಳಲ್ಲಿ ಎಷ್ಟೊಂದು ಬಗೆ! (ಚಿತ್ರ ಕೃಪೆ: ಟಿ. ಪ್ಯಾಟರ್ಸನ್ (Courtesy: T. Patterson)

tarantulahairscolourscrosssection

ವಿಭಿನ್ನ ಟರಾಂಟುಲ ಜೇಡಗಳ ರೋಮಗಳು. ಎಡದ ಕಂಭದಲ್ಲಿ ಬೆಳಕಿನಲ್ಲಿ ಅವು ಸೂಸುವ ನೀಲಿ ಬಣ್ಣ. ಮಧ್ಯದ ಕಂಭಸಾಲಿನಲ್ಲಿ ಸೂಕ್ಷ್ಮದರ್ಶಕದಡಿಯಲ್ಲಿ ಅವುಗಳ ರಚನೆ ಹಾಗೂ ಕೊನೆಯ ಕಂಭಸಾಲಿನಲ್ಲಿ ರೋಮವನ್ನು ಕುಯ್ದಾಗ ಕಾಣುವ ರಚನೆ. ಬಲತುದಿಯ ಕೆಳಗಿನ ಚಿತ್ರದಲ್ಲಿ ರೋಮ ಗಾಢ ನೀಲಿ ಬಣ್ಣ ತೋರುವುದನ್ನೂ, ಅದಕ್ಕೆ ತಕ್ಕಂತೆ ಅದರ ಸಮ್ಮಿತಿ ಯನ್ನೂ ಗಮನಿಸಿ. Photo courtesy ಆಕರ 3

ಆಕರ:

1.Jyothi Madhusoodhan, Tarantula tint inspires new ways of making colours, PNAS, PNAS | April 4, 2017 | vol. 114 | no. 14 | 3547–3549  (http://www.pnas.org/cgi/doi/10.1073/pnas.1702304114)

2. Hsiung BK, et al. (2016) Tarantula-inspired noniridescent photonics with long-range order. Advanced Optical Materials, 10.1002/ adom.201600599

3. Hsiung BK, Deheyn DD, Shawkey MD, Blackledge TA (2015) Blue reflectance in tarantulas is evolutionarily conserved despite nanostructural diversity. Sci Adv 1(10):e1500709

 

Published in: on ಏಪ್ರಿಲ್ 19, 2017 at 5:54 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸಗಣಿ ದುಂಬಿಯ ಜೀಪಿಎಸ್

Published in: on ಏಪ್ರಿಲ್ 11, 2017 at 1:03 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೂಸಿಗೆಷ್ಟು ಬೆಲೆ

ಇಂದಿನ  ಇ-ಪತ್ರಿಕೆ. ಕಾಮ್ ನಲ್ಲಿ ಪ್ರಕಟವಾಗಿರುವ ನನ್ನ ಲೇಖನ. ಮೊನ್ನೆ ಅಲೆಕ್ಸಾಂಡರ್ ಫ್ಲೆಮಿಂಗನ ಸಂಗ್ರಹದಲ್ಲಿದ್ದ ಪೆನಿಸಿಲಿಯಮ್ ಬೂಸಿನ ತುಣುಕೊಂದನ್ನು 15000 ಡಾಲರುಗಳ ಮೊತ್ತಕ್ಕೆ ಹರಾಜು ಹಾಕಲಾಯಿತು. ಆದರೆ ಕೋಟ್ಯಂತರ ಜನರನ್ನು ಬದುಕಿಸಿದ ಪೆನಿಸಿಲಿನ್ ಶೋಧಕ್ಕೆ ಬೆಲೆ ಕಟ್ಟಲಾಗದು. ಇಂತಹ ಉಪಯುಕ್ತ ಬೂಸುಗಳು ಎಷ್ಟಿವೆಯೋ?

My write-up in epathrike.com on the auction of a bit of penicillium from Alexander Fleming’s collection. We don’t know how many such fungus and other lower plants animals are there that can be beneficial to us and are yet to come to light!

04042017

 

Published in: on ಏಪ್ರಿಲ್ 4, 2017 at 6:57 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ