ಹದಿಮೂರು ವರ್ಷಗಳ ಹಿಂದೆ ಇಂಗ್ಲೆಂಡಿನ ರೋಸ್ಲಿನ್ ಸಂಶೋಧನಾಲಯ ಡಾಲಿ ಎನ್ನುವ ತದ್ರೂಪಿ ಕುರಿಯನ್ನು ಸೃಷ್ಟಿಸಿತು. ಇದು ತಂದೆ ಮತ್ತು ತಾಯಿಯೆಂಬ ಪ್ರಾಣಿಗಳಿಗೆ ಕೊಟ್ಟ ಮೊದಲ ಕೊಕ್ ಎನ್ನಬಹುದು. ಕುರಿಯೊಂದರ ದೇಹದ ಕೋಶವನ್ನೇ ಉಪಯೋಗಿಸಿಕೊಂಡು ಅದರದ್ದೇ ತದ್ರೂಪಾದ ಮರಿಯನ್ನು ಸೃಷ್ಟಿಸಿತ್ತು ಈ ತಂತ್ರಜ್ಞಾನ. ಇದೇ ಸುಪ್ರಸಿದ್ಧ ಡಾಲಿ. ವಿಶೇಷವೆಂದರೆ ಇದರ ಸೃಷ್ಟಿಯಲ್ಲಿ ತಾಯಿಯ ಅಂಡಾಣು ಭ್ರೂಣವಾಗಿ ಬೆಳೆಯಲು ಅವಶ್ಯಕವಾದ ಗಂಡಿನ ವೀರ್ಯಾಣುವನ್ನು ಬಳಸಲೇ ಇಲ್ಲ. ಅರ್ಥಾತ್, ಪ್ರಾಣಿಗಳಲ್ಲಿ ನಾವು ಸರ್ವೇ ಸಾಮಾನ್ಯವಾಗಿ ಕಾಣುವ ತಂದೆ-ತಾಯಿಗಳಲ್ಲಿ, ತಂದೆಗೆ ಕೊಕ್ ಕೊಡಲಾಗಿತ್ತು.
ಇಂದು ಡಾಲಿ ಇಲ್ಲ. ಅದು ತನ್ನ ಜೀವನವನ್ನು ಮುಗಿಸಿ ಪರಂಧಾಮಕ್ಕೆ ಹೋಗಿಯಾಗಿದೆ. ಅದರ ಸಂತಾನಗಳು ತಮ್ಮ ವಂಶಾವಳಿಯನ್ನು ಮುಂದುವರೆಸುತ್ತಿವೆ. ಈ ಅವಧಿಯಲ್ಲಿ ವೈದ್ಯಕೀಯ ಹಾಗೂ ಜೀವಿವಿಜ್ಞಾನದಲ್ಲಿ ಅಭೂತಪೂರ್ವ ಬೆಳೆವಣಿಗೆಗಳಾಗಿವೆ. ಗಂಡು ಅರ್ಥಾತ್ ತಂದೆಯ ಸ್ಥಾನವಂತೂ ಇನ್ನೂ ನಿಕೃಷ್ಟವಾಗಿಬಿಟ್ಟಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಹದ ಚರ್ಮ ಕೋಶಗಳು ತರಡಿನ ಕೋಶಗಳು ಹಾಗೂ ಎಳೆಯ ಸ್ನಾಯುಕೋಶಗಳನ್ನೂ ವೀರ್ಯಾಣುಗಳನ್ನಾಗಿ ಬದಲಾಯಿಸುವ ತಂತ್ರಗಳು ಸಿದ್ಧಿಸಿವೆ. ಇನ್ನೂ ಬಲಿಯದ ಭ್ರೂಣಗಳಲ್ಲಿರುವ ಜೀವಕೋಶಗಳನ್ನು ಹೆಣ್ಣಿಲಿಗಳ ಚರ್ಮದಲ್ಲಿ ನೆಟ್ಟು ವೀರ್ಯಾಣುಗಳನ್ನಾಗಿ ಬೆಳೆಸಿ ಮರಿಗಳನ್ನು ಸೃಷ್ಟಿಸಿದ್ದೂ ಉಂಟು. ಗಂಡಿನ ಭ್ರೂಣವೂ ಬೇಡ, ಗಂಡೇ ಬೇಡ ಎನ್ನುವ ಸ್ಥಿತಿ.
ಇಷ್ಟೆಲ್ಲಾ ಆದರೂ ಪ್ರಾಣಿಗಳ, ಅದರಲ್ಲೂ ಸ್ತನಿಗಳಂತಹ ಪ್ರಾಣಿಗಳ ಸಂತಾನೋತ್ಪತ್ತಿಯಲ್ಲಿ ತಾಯಿಯ ಅವಶ್ಯಕತೆ ಹಾಗೆಯೇ ಇತ್ತು. ಭ್ರೂಣವನ್ನು ಹೇಗೇ ಸೃಷ್ಟಿಸಿರಲಿ, ಅದು ಬೆಳೆಯಲು ತಾಯಿಯ ಗರ್ಭಾಶಯದ ಆಸರೆ ಬೇಕೇ ಬೇಕಿತ್ತು. ಪ್ರಯೋಗಾಲಯದಲ್ಲಿ ಪಿಂಡ ಸೃಷ್ಟಿ ಆದರೂ ಅದು ಪೂರ್ಣ ಪ್ರಮಾಣದ ಶಿಶುವಾಗಿ, ಮರಿಯಾಗಿ ಬೆಳೆಯಲು ತಾಯಿಯ ಗರ್ಭಾಶಯ ಬೇಕೇ ಬೇಕು. ಭಾರತದಲ್ಲಿ ಇದೀಗ ಮಹಿಳೆಯರ ಶೋಷಣೆಗೆ ಮತ್ತೊಂದು ಆಯಾಮ ನೀಡಿರುವ ‘ಬಾಡಿಗೆತಾಯಿ’ ಉದ್ಯಮಕ್ಕೆ ಇದೇ ಕಾರಣ..
ಇದೀಗ ಗರ್ಭಾಶಯದ ಅವಶ್ಯಕತೆಯೂ ದೂರವಾಗಲಿದೆಯೇ? ತಾಯಿಗೂ ಕೊಕ್ ಸಿಗಲಿದೆಯೇ? ಹೀಗೊಂದು ಸಾಧ್ಯತೆಯನ್ನು ಫಿಲಾಡೆಲ್ಫಿಯ ಶಿಶು ಆಸ್ಪತ್ರೆಯ ವೈದ್ಯರು ಮುಂದಿಟ್ಟಿದ್ದಾರೆ. ಅತ್ಯಂತ ಅಗ್ಗ ಹಾಗೂ ಸರಳವೆನ್ನಬಹುದಾದ ಕೃತಕ ಗರ್ಭಾಶಯವನ್ನು ಇವರು ರೂಪಿಸಿದ್ದಾರೆ. ಪ್ಲಾಸ್ಟಿಕ್ ಚೀಲದಂತಹ ಈ ಗರ್ಭಾಶಯದಲ್ಲಿ ಮೂರು ತಿಂಗಳ ಪಿಂಡಕ್ಕೆ ಸಮನಾದ ಆಡಿನ ಭ್ರೂಣವನ್ನು ಇಟ್ಟು ತಾಯಿಯ ಬೆಳೆಸಿದ್ದಾರೆ. ಬಯೋಬ್ಯಾಗ್ (ಜೈವಿಕ ಚೀಲ) ಎಂದು ಪತ್ರಕರ್ತರು ಅಡ್ಡ ಹೆಸರಿಟ್ಟಿರುವ ಈ ಕೃತಕ ಗರ್ಭಾಶಯ ಈ ಹಿಂದೆ ಈ ನಿಟ್ಟಿನಲ್ಲಿ ನಡೆದ ಎಲ್ಲ ಸಂಶೋಧನೆಗಳಿಗಿಂತಲೂ ಉತ್ತಮವೆನ್ನುವ ಉತ್ಸಾಹ ವಿಜ್ಞಾನಿಗಳಿಗಿದೆ.

ಆಡಿನ ಮರಿಯನ್ನು ಹೊತ್ತ ಕೃತಕ ಗರ್ಭಾಶಯ. ಹೆರಿಗೆ ಎಂದರೆ ಈ ಚೀಲವನ್ನು ಕತ್ತರಿಸಿ ತೆಗೆದರೆ ಸಾಕಂತೆ!
ಸದ್ಯಕ್ಕೆ ಈ ಬಗೆಯ ಜೈವಿಕ ಚೀಲವನ್ನು ಅವಧಿಗಿಂತಲೂ ಮುನ್ನವೇ ಹೆರಿಗೆಯಾಗುವ ಸಾವು ಕಟ್ಟಿಟ್ಟ ಬುತ್ತಿಯೆನ್ನುವಂತಹ ಭ್ರೂಣಗಳನ್ನು ಕಾಪಾಡಲು ಬಳಸುವ ಯೋಜನೆಯಿದೆ. ಭ್ರೂಣಹತ್ಯೆಯ ಸಂದರ್ಭದಲ್ಲಿ ಮೂರು ತಿಂಗಳ ಭ್ರೂಣವನ್ನೇ ಕಿತ್ತೊಗೆಯುವುದು ಸಾಮಾನ್ಯ. ಇವುಗಳಿಗೆ ತಾಯ ಗರ್ಭಾಶಯದ ಹೊರಗೆ ಬದುಕುವ ಶಕ್ತಿಯಿಲ್ಲ. ಈ ಹೊಸ ಚೀಲ ಇಂತಹ ಭ್ರೂಣಗಳಿಗೆ ಜೀವದಾಯಿಯಾಗಬಲ್ಲುದು ಎನ್ನುವ ಆಶಯವಿದೆ. ಅದೇನೇ ಇರಲಿ. ಇನ್ನೂ ಎಳೆಯದಾದ ಭ್ರೂಣವನ್ನು ದೇಹದ ಹೊರಗೆ ಬೆಳೆಸುವುದು ಸಾಧ್ಯವಾದರೆ ಮುಂದೆ ತಾಯಿ ಎನ್ನುವ ಜೀವಕ್ಕೂ ಕೊಕ್ ಕೊಟ್ಟಂತೆಯೇ ಸರಿ.
ಎಂಭತ್ತು ವರ್ಷಗಳ ಹಿಂದೆ ಪ್ರಸಿದ್ಧ ಇಂಗ್ಲೀಷ್ ಲೇಖಕ ಆಲ್ಡಸ್ ಹಕ್ಸಲಿ 1984 ಎಂಬ ಕಾದಂಬರಿಯಲ್ಲಿ ಹೀಗೆ ಕಾರ್ಖಾನೆಗಳಲ್ಲಿ ಭ್ರೂಣಗಳನ್ನಿಟ್ಟು ಬೆಳೆಸುವ ಕಲ್ಪನೆಯನ್ನು ಮಾಡಿದ್ದ. ಅದು ತಂತ್ರಜ್ಞಾನದ ದುಷ್ಪ್ರಭಾವಗಳನ್ನು ಕುರಿತ ವ್ಯಂಗ್ಯಕಥೆ. ಬಹುಶಃ ರವಿ ಕಾಣದ್ದನ್ನು ಕವಿ (ಕಥೆಗಾರ) ಕಾಣುವುದು ಎಂದರೆ ಇದೇ ಇರಬೇಕು. ಅಥವಾ ಕವಿಯ ಕಲ್ಪನೆಗಳನ್ನು ವಿಜ್ಞಾನಿಗಳು ಸಾಕಾರಗೊಳಿಸುವರೋ? ವೈಜ್ಞಾನಿಕ ಕಥೆಗಳಲ್ಲಿ ಬರುವ ಕಲ್ಪನೆಗಳು ಅವಾಸ್ತವವಂತೂ ಅಲ್ಲ. ಅವು ಸಾಧ್ಯತೆಯ ಸೂಚನೆಗಳು ಎನ್ನುವುದಕ್ಕೆ ಇದು ಸಾಕ್ಷಿ.
ಕೊಳ್ಳೇಗಾಲ ಶರ್ಮ
ನಿಮ್ಮದೊಂದು ಉತ್ತರ