ಕೆಲವು ತಿಂಗಳುಗಳ ಹಿಂದೆ ಪ್ರಥಮ್ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಸರ್ವೆ ಶಿಕ್ಷಣ ತಜ್ಞರನ್ನು ಬೆಚ್ಚಿ ಬೀಳಿಸಿತ್ತು. ಅದರಲ್ಲಿ ಎಂಟನೆಯ ತರಗತಿಯನ್ನು ಪ್ರವೇಶಿಸಿದ ಮಕ್ಕಳಲ್ಲಿ ಬಹಳಷ್ಟು ಮಂದಿಗೆ ಅಕ್ಷರಗಳನ್ನು ಗುರುತಿಸುವ, ಓದುವ ಹಾಗೂ ಬರೆಯುವ ಸಾಮರ್ಥ್ಯವಿಲ್ಲವೆಂದು ಇದ್ದುದೇ ಈ ಗಾಭರಿಗೆ ಕಾರಣ. ಓದದಿದ್ದರೇನು ಜ್ಞಾನ ಬರುವುದಿಲ್ಲವೇ? ಬದುಕಿಗೆ ಓದು (ಪುಸ್ತಕ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಅಕ್ಷರಗಳ ಮೂಲಕ ಪಾಠಗಳನ್ನು ಓದುವುದು) ಅಷ್ಟೊಂದು ಮುಖ್ಯವೇ? ಓದದೆಯೇ ಟೀವಿ ಇತ್ಯಾದಿ ಮಾಧ್ಯಮಗಳಿಂದ ಬಹಳಷ್ಟು ಕಲಿಯಬಹುದಲ್ಲ ಎನ್ನುವ ಪ್ರಶ್ನೆಗಳಿವೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ಕಾಣುವ ಭಾಷೆ ಹಾಗೂ ವಿಷಯಗಳನ್ನು ಗಮನಿಸಿದರೆ, ಓದುವುದು ಬಾರದಿದ್ದರೆಯೇ ಚೆನ್ನಿತ್ತು ಎಂದು ನಿಮಗನಿಸಿದ್ದರೆ ಅದು ನಿಮ್ಮ ತಪ್ಪು ಖಂಡಿತ ಅಲ್ಲ. ಆದರೆ ನಿನ್ನೆ ಸೈನ್ಸ್ ಅಡ್ವಾನ್ಸಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯೊಂದು ಓದು ಮತ್ತೊಂದು ಕಾರಣಕ್ಕೂ ನಮಗೆ ಅವಶ್ಯಕ ಎಂದು ತಿಳಿಸಿದೆ. ಓದುವುದರಿಂದ ನಮ್ಮ ದೃಷ್ಟಿ ಪರಿಜ್ಞಾನ ಇನ್ನಷ್ಟು ಚೆನ್ನಾಗುತ್ತದೆ ಎಂದು ಇದು ತಿಳಿಸಿದೆ.
ಓದಿ, ಓದಿ ಮರುಳಾದ ಕೂಚಂಭಟ್ಟ ಎನ್ನುವವರೂ ಇದರತ್ತ ಗಮನ ಕೊಡಬೇಕು. ಹೆಚ್ಚು ಓದಿದರೆ ಕಣ್ಣು ಹಾಳಾಗುತ್ತದೆ ಎಂದು ಬೆದರಿಸುವ ತಾಯಂದಿರು ಗಮನಿಸಿದರೆ ಚೆನ್ನ. ಓದುವುದರಿಂದ ನಮ್ಮ ಮಿದುಳಿನಲ್ಲಿರುವ ದೃಷ್ಟಿ ಕೇಂದ್ರದ ನರಗಳು ಇನ್ನಷ್ಟು ಗಾಢವಾಗಿ ಬೆಸೆದುಕೊಳ್ಳುತ್ತವೆ ಎಂದು ಈ ವರದಿ ತಿಳಿಸಿದೆ. ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾನಿಲಯದ ನರವಿಜ್ಞಾನಿ ಮೈಖೇಲ್ ಸ್ಕೈಡ್ ಕೆಲವು ಭಾರತೀಯ ವಿಜ್ಞಾನಿಗಳ ಜೊತೆಗೂಡಿ ಹೀಗೆ ವರದಿಯನ್ನು ಮಾಡಿದ್ದಾರೆ.
ಓದುವುದನ್ನು ಕಲಿಯುವುದರಿಂದ ಮಿದುಳಿನಲ್ಲಿ ದೃಷ್ಟಿ ಸಂಕೇತಗಳನ್ನು ಗ್ರಹಿಸಿ ಸಂಸ್ಕರಿಸುವ ಭಾಗಗಳಿಗೆ ಹೆಚ್ಚಿನ ರಕ್ತ ಪರಿಚಲನೆಯಂತಹ ಬದಲಾವಣೆಗಳು ಆಗುತ್ತವೆಂದು ಇದುವರೆಗೂ ಭಾವಿಸಲಾಗಿತ್ತು. ಇದರಿಂದಾಗಿ ಆ ಭಾಗಗಳು ಚುರುಕಾಗುತ್ತವೆ ಎಂಬ ಭಾವನೆಯಿತ್ತು. ಆದರೆ ಸ್ಕೈಡ್ ಮತ್ತು ಸಂಗಡಿಗರು ನಡೆಸಿರುವ ಸಂಶೋಧನೆಯು ದೃಷ್ಟಿ ಸಂವೇದನೆಗೆ ಮೀಸಲಾದ ಮಿದುಳಿನ ಭಾಗಗಳಲ್ಲದೆ ಬೇರೆ ಭಾಗಗಳಲ್ಲಿಯೂ ಓದುವುದರಿಂದ ಬದಲಾವಣೆಗಳಾಗುತ್ತವೆ ಎಂದು ತಿಳಿಸಿದೆ.
ವಿಶೇಷವೆಂದರೆ ಈ ಸಂಶೋಧನೆ ನಡೆದಿದ್ದು ಭಾರತದಲ್ಲಿ. ಉತ್ತರಪ್ರದೇಶದ ಲಕ್ನೋದ ಗ್ರಾಮವೊಂದರ ಅನಕ್ಷರಸ್ತರ ಮೇಲೆ ಈ ಅಧ್ಯಯನಗಳನ್ನು ನಡೆಸಲಾಯಿತು. ಗ್ರಾಮದ ಇಪ್ಪತ್ತೊಂದು ಅನಕ್ಷರಸ್ತರಿಗೆ ಆರು ತಿಂಗಳ ಕಾಲ ಸರಳವಾದ ಹಿಂದಿ ಪದಗಳನ್ನು ಓದಲು ಕಲಿಸಲಾಯಿತು. ಅಧ್ಯಯನದ ಅವಧಿಯಲ್ಲಿ ಓದದೆಯೇ ವಿರಮಿಸುತ್ತಿದ್ದ ಸಮಯದಲ್ಲಿ ಇವರ ಮಿದುಳಿನ ಯಾವ ಭಾಗಗಳು ಚುರುಕಾಗಿರುತ್ತವೆ ಎಂದು ಎಂ. ಆರ್. ಐ. ಚಿತ್ರಗಳ ಮೂಲಕ ಗಮನಿಸಲಾಯಿತು. ಅದೇ ಊರಿನ ಇನ್ನಷ್ಟ ಓದಲು–ಬರೆಯಲು ಬಾರದ ಅನಕ್ಷರಸ್ತರ ಮಿದುಳಿನ ಚಿತ್ರಗಳನ್ನು ತೆಗೆದು ಈ ಚಿತ್ರಗಳ ಜೊತೆಗೆ ಹೋಲಿಸಿ ವ್ಯತ್ಯಾಸಗಳೇನಾದರೂ ಇವೆಯೋ ಎಂದು ಗಮನಿಸಲಾಯಿತು.
ದೃಷ್ಟಿಗೆ ಸಂಬಂಧಿಸಿದ ಹಿರಿಮೆದುಳಿನ (ಮಹಾಮಸ್ತಿಷ್ಕ) ಭಾಗಗಳಲ್ಲಿಯಷ್ಟೆ ಅಲ್ಲದೆ ಮಧ್ಯದ ಮಿದುಳಿನ ಭಾಗಗಳಲ್ಲಿಯೂ ಕೆಲವು ಕಡೆ ಅಕ್ಷರ ಕಲಿತವರಲ್ಲಿ ಚಟುವಟಿಕೆ ಹೆಚ್ಚಾಗಿದ್ದುದನ್ನು ಎಂ.ಆರ್.ಐ. ತೋರಿಸಿತು. ಈ ಅಧಿಕ ಚಟುವಟಿಕೆ ಅವರು ಅಕ್ಷರಗಳನ್ನು ಓದುವಾಗ ಇಲ್ಲವೇ ಗುರುತಿಸುವಾಗಷ್ಟೆ ಅಲ್ಲ, ಓದದೆಯೇ ಇದ್ದಾಗಲೂ ಉಳಿದಿತ್ತು. ಅರ್ಥಾತ್, ಮಿದುಳಿನಲ್ಲಿ ಕಾಣುವ ಈ ವ್ಯತ್ಯಾಸ ಕೇವಲ ಓದುವ ಸಂದರ್ಭಕ್ಕಷ್ಟೆ ಸೀಮಿತವಾಗಿರದೆ ಶಾಶ್ವತ ಬದಲಾವಣೆಯಿರಬೇಕಷ್ಟೆ. ಓದನ್ನು ಕಲಿತದ್ದರಿಂದಲೇ ಈ ವ್ಯತ್ಯಾಸ ಎಂದು ಹೇಗೆ ಹೇಳುತ್ತೀರಿ? ಅಕ್ಷರಗಳು ಅವರಿಗೆ ಚಿತ್ರಗಳಂತೆಯೇ ಕಂಡಿರಬಹುದಲ್ಲವೇ? ಚಿತ್ರಗಳನ್ನು ನೋಡಿದರೆ ಓದಿದಂತಲ್ಲವಲ್ಲ?
ಹೌದು ಈ ಅನುಮಾನಗಳೂ ನಿಜವೇ. ಇದೇ ಕಾರಣಕ್ಕೆ ಸ್ಕೈಡ್ ಮತ್ತು ತಂಡದವರು ಪರೀಕ್ಷೆಗೆಂದು ದೇವನಾಗರಿ ಲಿಪಿಯನ್ನೂ, ಹಿಂದಿ ಭಾಷೆಯನ್ನೂ ಬಳಸಿದ್ದಾರೆ. ಇಂಗ್ಲೀಷಿನಲ್ಲಿ ಅಕ್ಷರ ಹಾಗೂ ಶಬ್ದಕ್ಕೆ ಕೆಲವೊಮ್ಮೆ ತಾಳಮೇಳವಿರುವುದಿಲ್ಲವಷ್ಟೆ. ಆದರೆ ಭಾರತೀಯ ಭಾಷೆಗಳಲ್ಲಿ ಎಲ್ಲದರಲ್ಲೂ ಹೇಳಿದಂತೆ ಬರೆಯುವ ಲಿಪಿಗಳಿವೆ. ದೇವನಾಗರಿ ಕೂಡ ಹಾಗೆಯೇ. ಜೊತೆಗೆ ದೇವನಾಗರಿ ಲಿಪಿ ಚೀನೀಯರ ಹಾಗೂ ಜಪಾನೀಯರ ಚಿತ್ರಲಿಪಿಯಂತೆ ಕಾಣುತ್ತದೆ. ಹೀಗೆ ಚಿತ್ರ ಹಾಗೂ ಶಬ್ದ ಎರಡರಲ್ಲೂ ಗೊಂದಲ ತರದ ಭಾಷೆ ಎನ್ನುವ ಕಾರಣಕ್ಕೆ ಇದನ್ನು ಬಳಸಿದ್ದಾರೆ.
ಪರೀಕ್ಷೆಗೊಳಪಟ್ಟವರು ದೇವನಾಗರಿ ಲಿಪಿಯನ್ನು ಆರು ತಿಂಗಳ ಕಾಲ ಕಲಿತರಷ್ಟೆ. ಆರು ತಿಂಗಳ ಕೊನೆಯಲ್ಲಿ ಅವರ ಮಿದುಳಿನಲ್ಲಿ ಶಾಶ್ವತ ಬದಲಾವಣೆಗಳಾಗಿದ್ದುದು ಕಂಡು ಬಂತು. ಈ ಬದಲಾವಣೆಗಳು ದೃಷ್ಟಿ ಸಂವೇದನೆಗೆ ಮೂಲವಾದ ನರಮಂಡಲದಲ್ಲಿಯೇ ಆಗಿರುವುದು ವಿಚಿತ್ರವೆನ್ನಿಸಿದೆ. ಓದುವುದನ್ನು ಅಭ್ಯಾಸ ಮಾಡುವುದರಿಂದ ದೃಷ್ಟಿ ಸಾಮರ್ಥ್ಯವೂ ಹೆಚ್ಚುತ್ತದೆಂದು ಇದು ಹೇಳುತ್ತಿದೆಯೋ? ಗೊತ್ತಿಲ್ಲ.
ಆದರೆ ಒಂದಂತೂ ಸ್ಪಷ್ಟ. ಓದುವುದರಿಂದ ಮಿದುಳಿನಲ್ಲಿ ಲಾಭದಾಯಕ ಬದಲಾವಣೆಗಳಾಗುತ್ತವೆ. ಪುಸ್ತಕ ಓದಲು ಹೊಸ ಕಾರಣ ಸಿಕ್ಕಂತಾಯಿತು ಅಲ್ಲವೇ?
_____________
ಕೊಳ್ಳೇಗಾಲ ಶರ್ಮ
ಆಕರ: 1. Skeide et al., Sci. Adv. 2017;3: e1602612 24 May 2017 (http://advances.sciencemag.org/content/3/5/e1602612/tab-pdf)
Is Reading in mobile or tabscreen makes the same ????
Reading is an activity of both eyes and brain. So whether you use computer or paper does not matter. Learning through audio may differ