ಅಂತರಿಕ್ಷಯಾನಿ ವೀರ್ಯ

ಅಂತರಿಕ್ಷ ಯಾನ ಮಾಡಿ ಮರಳಿದ ವೀರ ಅಂತ ಓದಿಕೊಂಡಿರಾ? ಇದು ಅಕ್ಷರ ದೋಷವಲ್ಲ. ವೀರನಲ್ಲ. ವೀರ್ಯವೇ. ಒಂಭತ್ತು ತಿಂಗಳು ಅಂತರಿಕ್ಷ ವಾಸ ಮುಗಿಸಿ ಭೂಮಿಗೆ ಮರಳಿದ ವೀರ್ಯದ ಕಥೆ. ಸುಮಾರು 300 ದಿನಗಳು ಭೂಮಿಯ ಹೊರಗೆ ಅಂತರಿಕ್ಷದಲ್ಲಿ ಅಲೆದಾಡಿ ಮರಳಿದ ವೀರ್ಯದ ಕಥೆ. ಜಪಾನಿನ ವಿಜ್ಞಾನಿಗಳು ಗಂಡಿಲಿಗಳ ಶೈತ್ಯೀಕರಿಸಿದ್ದ ವೀರ್ಯವನ್ನು ಅಂತರಿಕ್ಷಯಾನಕ್ಕೆ ಕಳಿಸಿದ್ದರು. ಅದರ ಪರೀಕ್ಷೆಯ ಫಲಿತಾಂಶಗಳು ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇದರ ಪ್ರಕಾರ ಒಂಭತ್ತು ತಿಂಗಳಿಗೂ ಹೆಚ್ಚು ಕಾಲ ಅಂತರಿಕ್ಷದಲ್ಲಿದ್ದ ಶೈತ್ಯೀಕರಿಸಿದ ವೀರ್ಯಾಣುಗಳ ಫಲವತ್ತತೆ ಕುಂದಿರಲಿಲ್ಲವಂತೆ. ಅರ್ಥಾತ್, ಅಂತರಿಕ್ಷದಲ್ಲೂ ಕೃತಕ ಗರ್ಭಧಾರಣೆ ಸಾಧ್ಯ.

ಅಂತರಿಕ್ಷದಲ್ಲೇಕೆ ಕೃತಕ ಗರ್ಭಧಾರಣೆ ಎನ್ನಬೇಡಿ. ‘ಯಾನ’ ಕಾದಂಬರಿಯಲ್ಲಿದ್ದಂತೆ ಗಂಡು-ಹೆಣ್ಣು ಇಬ್ಬರನ್ನೂ ಒಟ್ಟಿಗೇ ಪ್ರವಾಸ ಕಳಿಸಿಬಿಟ್ಟರೆ ಸಾಕಲ್ಲ. ಸಂತಾನೋತ್ಪತ್ತಿ ಸಹಜವಾಗಿಯೇ ಆಗುತ್ತದಲ್ಲವೇ? ಇದು ಸರಳ ಉಪಾಯವೇನೋ ಸರಿ. ಆದರೆ ಅಂತರಿಕ್ಷ ಯಾನದ ದುಬಾರಿ ಖರ್ಚು, ಅದಕ್ಕೆ ಬೇಕಾದ ತಯಾರಿ ಹಾಗೂ ಅಂತರಿಕ್ಷದಲ್ಲಿ ಎದುರಾಗುವ ಹಲವು ಅಡ್ಡಿ ಆತಂಕಗಳು ಅಂತಹ ಸಂದರ್ಭಗಳಲ್ಲಿ ಸಂತಾನೋತ್ಪತ್ತಿ ಸುಗಮವಾಗಿರುವುದೇ ಎನ್ನುವ ಆತಂಕವನ್ನು ಉಂಟು ಮಾಡುತ್ತವೆ. ಈ ಆತಂಕ ನಿವಾರಣೆಗಾಗಿ ವಿಜ್ಞಾನಿಗಳು ಅಂತರಿಕ್ಷದಲ್ಲಿರುವ ಸ್ಪೇಸ್ ಸ್ಟೇಶನ್ನಿನಲ್ಲಿ ಹಲವು ಪ್ರಯೋಗಗಳನ್ನು ಕೈಗೊಂಡಿದ್ದುಂಟು. ಹಲ್ಲಿ, ಮೀನು, ಸಸ್ಯ ಹಾಗೂ ಬ್ಯಾಕ್ಟೀರಿಯಾಗಳನ್ನೂ ಬೆಳೆಸಿ ಪರೀಕ್ಷಿಸಿದ್ದಾರೆ. ಗುರುತ್ವಾಕರ್ಷಣೆಯೇ ಇಲ್ಲದ ಅಂತರಿಕ್ಷದಲ್ಲಿ ಸಹಜವಾಗಿ ಗರ್ಭಧಾರಣೆ ಸಾಧ್ಯವೆನ್ನುವುದೂ ಸ್ಪಷ್ಟವಾಗಿದೆ. ಆದರೆ ಇಲಿ, ನಾಯಿ (ಹಾಗೂ ಮಾನವ) ಮುಂತಾದ ಸ್ತನಿಗಳಲ್ಲಿ ಇದರ ಪರೀಕ್ಷೆ ಇನ್ನು ನಡೆಯಬೇಕಷ್ಟೆ.  

ಶೈತ್ಯೀಕರಿಸಿ ಒಣಗಿಸಿ ಅಂತರಿಕ್ಷದ ಲ್ಲಿ ನವಮಾಸಗಳಿದ್ದು ಮರಳಿದ ವೀರ್ಯಗಳಿಂದ ಫಲಿತವಾದ ಭ್ರೂಣಗಳು ಸಹಜವಾಗಿ ಬೆಳೆಯುತ್ತಿರುವ ಚಿತ್ರ. ಕೃಪೆ:ಪಿಎನ್ಎಎಸ್

ಅಂತರಿಕ್ಷವೆಂದರೆ ಸೊಗಸಾದ ಮಧುಚಂದ್ರದ ತಾಣವೇನಲ್ಲ. ಅತಿ ಶೀತಲ ಪ್ರದೇಶ. ಭೂಮಿಯ ಮೇಲಿನ ಧ್ರುವ ಪ್ರದೇಶಗಳಿಗಿಂತಲೂ ಬಲು ಶೀತಲವಾದ ವಾತಾವರಣವಿರುತ್ತದೆ. ಅಲ್ಲಿನ ವಾತಾವರಣದಲ್ಲಿ ಹೆಚ್ಚೂ ಕಡಿಮೆ ಎಲ್ಲ ಅನಿಲಗಳೂ ಕಬ್ಬಿಣದಷ್ಟು ಗಟ್ಟಿಯಾಗಿಬಿಡಬಹುದು. ಯಾವ ದ್ರವವೂ ಹರಿಯಲಿಕ್ಕಿಲ್ಲ. ದ್ರವ ನೈಟ್ರೊಜನ್ನಿಗಿಂತ ಸುಮಾರು 200 ಡಿಗ್ರಿ ಸೆಂಟಿಗ್ರೇಡ್ ಕಡಿಮೆ ಇರುತ್ತದೆ. ಇದು ಸ್ಪೇಸ್ ಸ್ಟೇಶನ್ನಿನ ಹೊರಗೆ. ಒಳಗೆ ನಮಗೆ ಹಿತವಾದ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಿರುತ್ತೇವಷ್ಟೆ. ಜೊತೆಗೆ ಅಲ್ಲಿರುವ ವಿಕಿರಣಗಳ ಪ್ರಮಾಣವೂ ಭೂಮಿಯ ಮೇಲಿನದ್ದಕ್ಕಿಂತ ನೂರು ಪಟ್ಟು ಹೆಚ್ಚು. ನೂರು ಪಟ್ಟು ಹೆಚ್ಚೆಂದರೆ ನಮ್ಮನ್ನು ಕೊಲ್ಲುವಷ್ಟಲ್ಲ, ಆದರೆ ನಮ್ಮೊಳಗೆ ಇರುವ ಸೂಕ್ಷ್ಮ ಪ್ರಕೃತಿಯ ಜೀವಕೋಶಗಳಿಗೆ ಘಾಸಿ ತರುವಷ್ಟು ಹೆಚ್ಚು. ಇವು ತಾಕಿದರೆ ಜೀವಕೋಶಗಳಲ್ಲಿರುವ ಡಿಎನ್ಎ ಶಿಥಿಲಗೊಳ್ಳುತ್ತದೆ. ಡಿಎನ್ಎ ಶಿಥಿಲಗೊಂಡಿತು ಎಂದರೆ ಜೀವ ಕಳೆಯಿತು ಎಂದೇ ಅರ್ಥ.

ಪುಣ್ಯಕ್ಕೆ ದೇಹದಲ್ಲಿ ಇಂತಹ ಅಪಾಯಗಳನ್ನು ಎದುರಿಸುವ ಸವಲತ್ತುಗಳಿವೆ. ಉದಾಹರಣೆಗೆ, ಡಿಎನ್ಎ ಶಿಥಿಲಗೊಂಡಾಗ ಅದು ತನ್ನಂತಾನೇ ರಿಪೇರಿಯಾಗುವಂತಹ ವ್ಯವಸ್ಥೆ ಜೀವಕೋಶಗಳಲ್ಲಿರುತ್ತದೆ. ಆದ್ದರಿಂದ ಅಂತರಿಕ್ಷದಲ್ಲಿ ಭ್ರೂಣ ಬೆಳೆಯಲು ಆತಂಕ ಪಡಬೇಕಿಲ್ಲ. (ಬೆಳವಣಿಗೆ ಎಂದರೆ ಜೀವಕೋಶಗಳು ಒಡೆದು ಎರಡಾಗುವುದು, ಹಾಗೂ ಆ ವೇಳೆ ಡಿಎನ್ಎ ಕೂಡ ದ್ವಿಗುಣಗೊಳ್ಳಬೇಕಾಗುತ್ತದೆ.) ಈ ಸಂದರ್ಭದಲ್ಲಿ ಡಿಎನ್ಎಯಲ್ಲಿನ ದೋಷಗಳು ತನ್ನಂತಾನೇ ದುರಸ್ತಿಯಾಗಬಲ್ಲವು. ಹಾಗೆಯೇ ವೀರ್ಯವು ದೇಹದೊಳಗೆ ಇರುವವರೆಗೂ ಆತಂಕ ಕಡಿಮೆಯೇ. ದೇಹದ ಹೊರಗೆ ಅದನ್ನು ಕೂಡಿಟ್ಟಾಗ ಶಿಥಿಲಗೊಳ್ಳುವ ಡಿಎನ್ಎಗೆ ದುರಸ್ತಿಗೊಳ್ಳಲು ಅವಕಾಶವಿರುವುದಿಲ್ಲ.

ಇದಕ್ಕೆ ಕಾರಣವಿದೆ. ಹೊಸ ಹುಟ್ಟಿಗೆ ಗಂಡು ಮತ್ತು ಹೆಣ್ಣು ಎರಡೂ ಅವಶ್ಯವಷ್ಟೆ. ಜೀವಕೋಶದ ಮಟ್ಟದಲ್ಲಿ ಗಂಡನ್ನು ವೀರ್ಯವೂ, ಹೆಣ್ಣನ್ನು ಅಂಡವೂ (ಮೊಟ್ಟೆ) ಪ್ರತಿನಿಧಿಸುತ್ತವೆ. ಇವೆರಡರ ಮಿಲನದಿಂದ ಹುಟ್ಟುವ ಭ್ರೂಣವೇ ಮುಂದೆ ಹೊಸ ಜೀವವಾಗಿ ಬೆಳೆಯುತ್ತದೆ. ಇವೆರಡರಲ್ಲೂ ವೀರ್ಯದ್ದು ಬಲು ಸೂಕ್ಷ್ಮ ಪ್ರಕೃತಿ. ಅದಷ್ಟೇ ಅಲ್ಲ.. ದೇಹದಲ್ಲಿರುವ ಬೇರೆಲ್ಲ ಜೀವಕೋಶಗಳಿಂದಲೂ ವೀರ್ಯಾಣು ಆಕಾರ ಹಾಗೂ ಚರ್ಯೆಯಲ್ಲಿ ಭಿನ್ನವಾದುವು. ಉದಾಹರಣೆಗೆ, ಎಲ್ಲ ಜೀವಕೋಶಗಳಲ್ಲೂ ತಮ್ಮ ಬದುಕಿಗೆ ಅವಶ್ಯಕವಾದ ಶಕ್ತಿಯನ್ನು ಒದಗಿಸಿಕೊಳ್ಳಲು ಜೀವರಸವೂ, ಜೊತೆಗೆ ಆಹಾರ ಸೇವಿಸುವ ವ್ಯವಸ್ಥೆಯೂ ಇರುತ್ತದೆ. ಆದರೆ ವೀರ್ಯಕ್ಕೆ ಆ ಅನುಕೂಲತೆ ಇಲ್ಲ. ಅದರಲ್ಲಿ ಇರುವುದೆಲ್ಲವೂ ಭ್ರೂಣದ ಹುಟ್ಟಿಗೆ ಅವಶ್ಯಕವಾದ ಮಾಹಿತಿ. ಅದನ್ನು ಅಂಡದ ಕಡೆಗೆ ದೂಡುವ ಒಂದು ಬಾಲ.  ಅಂಡದ ಜೊತೆಗೆ ಮಿಲನವಾಗದಿದ್ದರೆ ವೀರ್ಯಾಣುವಿನ ಡಿಎನ್ಎ ಯಲ್ಲಿ ಆಗುವ ದೋಷಗಳು ದುರಸ್ತಿಯಾಗಲಾರವು.

ಅಂತರಿಕ್ಷದಲ್ಲಿ ವೀರ್ಯ ಯಾನದ ಸಮಸ್ಯೆಯ ಮೂಲವೇ ಇದು. ಅಲ್ಲಿನ ಅತಿ ಶೀತಲ, ವಿಕಿರಣ ಶೀಲ ವಾತಾವರಣದಲ್ಲಿ ದೀರ್ಘಕಾಲವಿದ್ದರೆ ವೀರ್ಯಾಣು ಎಂದಿನಂತಿರುವುವೇ? ಅಥವಾ ಅವುಗಳಲ್ಲಿರುವ ಡಿಎನ್ಎ ಶಿಥಿಲವಾಗಿ ಕೆಡುವುದೇ? ಇಂತಹ ವೀರ್ಯವನ್ನು ಬಳಸಿ ಸೃಷ್ಟಿಸಿದ ಭ್ರೂಣಗಳು ವಿಕೃತಿಗಳಾಗಿ ಹುಟ್ಟುವುವೇ? ಇವೆಲ್ಲ ಅನುಮಾನಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಜಪಾನಿನ ಯಮನಶಿ ವಿಶ್ವವಿದ್ಯಾನಿಲಯದ ವಿಜ್ಞಾನಿ ತೆರುಹಿಕೊ ವಕಾಯಾಮ ನೇತೃತ್ವದ ತಂಡ ಇಲಿಗಳಿಂದ ತೆಗೆದ ವೀರ್ಯವನ್ನು ಶೈತ್ಯೀಕರಿಸಿ, ತೇವಾಂಶವಿಲ್ಲದಂತೆ ಶುಷ್ಕವಾಗಿಸಿ, ನಾಲ್ಕು ವರ್ಷಗಳ (ಆಗಸ್ಟ್ 4, 2013) ಹಿಂದೆ ಸ್ಪೇಸ್ ಸ್ಟೇಶನ್ನಿಗೆ ಕಳಿಸಿತ್ತು. ಶೈತ್ಯೀಕರಿಸಿ ಒಣಗಿಸುವ ವಿಧಾನದಿಂದ ವೀರ್ಯವನ್ನು ನೈಟ್ರೊಜನ್ ದ್ರವದಲ್ಲಿ ಕೂಡಿಡುವುದಕ್ಕಿಂತಲೂ ಹೆಚ್ಚು ಕಾಲ ಇಡಬಹುದು ಎನ್ನುವ ಆಸೆ. ಜೊತೆಗೆ ಭಾರಿಯಾದ ನೈಟ್ರೊಜನ್ ಸಿಲಿಂಡರನ್ನೂ ಹೊತ್ತೊಯ್ಯುವ ಅವಶ್ಯಕತೆಯೂ ಇರುವುದಿಲ್ಲ. ಹೀಗೆ ವೀರ್ಯವನ್ನು 288 ದಿನಗಳ ಕಾಲ ಅಂತರಿಕ್ಷದಲ್ಲಿಟ್ಟ ನಂತರ ಅದನ್ನು ಮರಳಿ ತಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದರು. ಇಷ್ಟು ಸೂಕ್ಷ್ಮದ ಜೀವಾಣುವನ್ನು ನೀರೇ ಇಲ್ಲದಂತೆ ಒಣಗಿಸಿಬಿಟ್ಟರೆ ಜೀವವುಳಿಯುವುದೇ? ಇದೇ ಪರೀಕ್ಷೆಯ ಮೂಲ.

ಸ್ಪೇಸ್ ಸ್ಟೇಶನ್ನಿಗೆ ವೀರ್ಯವನ್ನು ಕಳಿಸಿದ ಸಂದರ್ಭದಲ್ಲಿಯೇ ಭೂಮಿಯಲ್ಲೂ ಅದರ ಒಂದು ಪಾಲನ್ನು ಅಷ್ಟೇ ಉಷ್ಣತೆಯಲ್ಲಿ ಉಳಿಸಿದ್ದರು. ಅಂತರಿಕ್ಷದಿಂದ ಬಂದ ವೀರ್ಯದ ಜೊತೆಗೇ ಭೂಮಿಯಲ್ಲಿದ್ದ ಇವುಗಳನ್ನೂ ಪರೀಕ್ಷಿಸಲಾಯಿತು. ಹಾಗೆಯೇ ಇವನ್ನು ಕಳಿಸುವ ಮುನ್ನ ಶೈತ್ಯೀಕರಿಸಿದ್ದ ಆದರೆ ಒಣಗಿಸದ ವೀರ್ಯವನ್ನೂ ಪರೀಕ್ಷೆಗೆ ಒಡ್ಡಲಾಗಯಿತು.  ಪರೀಕ್ಷೆಯ ವೇಳೆ ಈ ವೀರ್ಯಗಳನ್ನು ಸಹಜ ಉಷ್ಣತೆಗೆ ಮರಳಿಸಿ, ಹೆಣ್ಣಿಲಿಗಳಿಗೆ ಕೃತಕವಾಗಿ ಗರ್ಭಧಾರಣೆ ಮಾಡಿದರು. ತದನಂತರ ಹುಟ್ಟಿದ ಮರಿಗಳ ಸಂಖ್ಯೆ ಹಾಗೂ ಅವುಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸಗಳಿವೆಯೋ ಎಂದು ಗಮನಿಸಿದರು. ಜೊತೆಗೆ ಹುಟ್ಟಿದ ಮರಿಗಳ ಡಿಎನ್ಎ ಮತ್ತು ಮೂಲ ವೀರ್ಯಾಣುವಿನಲ್ಲಿದ್ದ ಡಿಎನ್ಎಯಲ್ಲಿಯೂ ಏನಾದರೂ ವ್ಯತ್ಯಾಸಗಳಿವೆಯೋ ಎಂದೂ ನೋಡಿದ್ದಾರೆ.

ಈ ಪರೀಕ್ಷೆಗಳ ಫಲಿತಾಂಶ ಸಿಹಿ ಸುದ್ದಿಯೇ ಎನ್ನಬೇಕು. ಏಕೆಂದರೆ ಮೂರೂ ಬಗೆಯ ವೀರ್ಯಾಣುಗಳಿಂದಲೂ ಹುಟ್ಟಿದ ಮರಿಗಳ ಸಂಖ್ಯೆ, ಆರೋಗ್ಯದಲ್ಲಿ ಗಮನಾರ್ಹ ವ್ಯತ್ಯಾಸಗಳೇನೂ ಇರಲಿಲ್ಲ. ಅಂತರಿಕ್ಷಕ್ಕೆ ಹೋಗಿದ್ದ ವೀರ್ಯದ ಜೊತೆಗೆ ವಿಕಿರಣದ ಪ್ರಮಾಣವನ್ನು ಅಳೆಯುವ ರಾಸಾಯನಿಕಗಳನ್ನೂ ಕೂಡಿಸಲಾಗಿತ್ತು. ಹೀಗಾಗಿ ಈ ವೀರ್ಯದ ಮಾದರಿಗಳಿಗೆ ಎಷ್ಟು ವಿಕಿರಣ ತಾಕಿರಬಹುದೆನ್ನುವ ಅಂದಾಜು ದೊರಕಿದೆ. ಅವುಗಳಿಗೆ ಒಟ್ಟು ಸುಮಾರು 178 ಮಿಲಿಸೀವರ್ಟ್ ವಿಕಿರಣ ತಾಕಿತ್ತು. ಇದು ಭೂಮಿಯ ಮೇಲಿರುವುದಕ್ಕಿಂತಲೂ (ವಾರ್ಷಿಕ 1.6 ಮಿಲಿಸೀವರ್ಟ್) ನೂರು ಪಟ್ಟು ಹೆಚ್ಚು.

ಇಷ್ಟಾದರೂ ಹುಟ್ಟಿದ ಮರಿಗಳ ಸಂಖ್ಯೆಯಲ್ಲಾಗಲಿ ಅವುಗಳ ಆರೋಗ್ಯದಲ್ಲಾಗಲಿ ಯಾವುದೇ ವ್ಯತ್ಯಾಸಗಳೂ ಇರಲಿಲ್ಲ. ಅಂದರೆ ಶೈತ್ಯದಲ್ಲಿಟ್ಟ ವೀರ್ಯಾಣುಗಳು ಅಂತರಿಕ್ಷದಲ್ಲಿರುವ ಆತಂಕಗಳನ್ನೂ ನಿವಾರಿಸಿಕೊಂಡು ಬದುಕಬಲ್ಲವು ಎಂದಾಯಿತು. ಅಥವಾ ಅವುಗಳಲ್ಲಿ ದೋಷಗಳುಂಟಾಗಿದ್ದರೂ, ಅಂಡಗಳ ಜೊತೆಗೆ ಬೆರೆತು ಭ್ರೂಣವಾಗುವಾಗ ಸರಿ ಹೋಗಿರಬೇಕು ಎಂದು ವಕಾಯಾಮ ತಂಡ ತರ್ಕಿಸಿದೆ.

ಅಂತೂ ಮಂಗಳಗ್ರಹದ ಮೇಲೆ ಹೋಗುವ ಕನಸು ಕಾಣುತ್ತಿರುವ ಸಂದರ್ಭದಲ್ಲಿ ಹೀಗೊಂದು ಸುದ್ದಿ ಬಂದಿರುವುದು ಸಿಹಿಯೇ ಸರಿ. ಈಗಿನ್ನು ಮಂದೆ, ಮಂದೆ ಪ್ರಾಣಿಗಳನ್ನು ಕೊಂಡೊಯ್ಯಬೇಕಿಲ್ಲ. ಒಂದಿಷ್ಟು ಶೈತ್ಯೀಕರಿಸಿದ ಒಣ ವೀರ್ಯ, ಶೈತ್ಯೀಕರಿಸಿದ ಭ್ರೂಣ ಹಾಗೂ ಇವುಗಳಿಂದ ಹುಟ್ಟಿದ ಭ್ರೂಣಗಳನ್ನು ಬೆಳೆಸಲು ಕೆಲವು ಪ್ರಾಣಿಗಳಾದರೆ ಸಾಕು. ಹೊಸದೊಂದು ವಸಾಹತನ್ನು ಸ್ಥಾಪಿಸಬಹುದು ಎನ್ನುವ ಕನಸು ಗಟ್ಟಿಯಾಗುತ್ತಿದೆ. ಹಾಂ. ಹೀಗೇ ಬೇರಾವುದೋ ಪ್ರಪಂಚದಿಂದ ಸೂಕ್ಷ್ಮಜೀವಿಗಳು ಪ್ರವಾಸ ಬಂದು ಬಂದು ಭೂಮಿಯಲ್ಲಿ ಜೀವವನ್ನು ಬಿತ್ತಿರಬಹುದಾದ ಸಾಧ್ಯತೆಗೂ ಈ ಸಂಶೋಧನೆ ಇಂಬು ಕೊಡುತ್ತಿದೆ. ಅಂತರಿಕ್ಷದಲ್ಲಿರುವ ವಿಕಿರಣದ ಹೊಡೆತವನ್ನೂ ಅವು ತಾಳಿಕೊಂಡು ಬದುಕಿ ಉಳಿದಿರಬಹುದಲ್ಲವೇ?

__________

ಆಕರ: Sayaka Wakayama et al.,Healthy offspring from freeze-dried mouse spermatozoa held on the International Space Station for 9 months, PNAS, Vol. 114, No. 23, Pp 5988-5993, 6 June, 2017

http://www.pnas.org/content/114/23/5988.full.pdf

 

Published in: on ಜೂನ್ 21, 2017 at 5:57 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ