ಜೀನ್ ತಿದ್ದುವಿಕೆ

IMG_20170830_0002IMG_20170830_0003IMG_20170830_0004IMG_20170830_0005IMG_20170830_0006IMG_20170830_0007

Published in: on ಆಗಷ್ಟ್ 30, 2017 at 2:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಲಾರ್ಸೆನ್ ಸಿ

Published in: on ಆಗಷ್ಟ್ 24, 2017 at 10:40 ಫೂರ್ವಾಹ್ನ  Comments (2)  

ವಿಕಾಸದ ವೀಕ್ಷಣೆ

ನಮ್ಮ ಕಣ್ಣೆದುರಲ್ಲೇ ವಿಕಾಸ ಜರುಗುತ್ತಿದೆಯೇ? ನೋಡನೋಡುತ್ತಿದ್ದಂತೆಯೇ ಹೊಸ ಜೀವಿಯ ಉಗಮವಾಗಬಹುದೇ? ಏಕಿಲ್ಲ? ಹೊಸದೊಂದು ಸಮುದ್ರದ ಹಾವು ಉಗಮವಾಗಿರುವ ಬಗ್ಗೆ ಇತ್ತೀಚೆಗೆ ಕರೆಂಟ್ ಬಯಾಲಜಿ ಪತ್ರಿಕೆ ವರದಿ ಮಾಡಿದೆ.

ಹೊಸ ಪ್ರಬೇಧದ ಉಗಮ ಎಂದರೇನು ಎಂದಿರಾ? ಹೌದು. ಇಡೀ ಜೀವಿವಿಜ್ಞಾನಕ್ಕೆ ಹೊಸ ತಿರುವು ನೀಡಿದ ವಿಕಾಸವಾದ ಎನ್ನುವ ತತ್ವದ ಅಡಿಗಲ್ಲೇ ಹೊಸ ಪ್ರಬೇಧದ ಉಗಮ. ವಿಕಾಸವಾದದ ಬಗ್ಗೆ ಕೇಳಿದ್ದೀರಲ್ಲ? ಮಂಗನಿಂದ ಮಾನವನಾದ ಎನ್ನುವ ಪ್ರಸಿದ್ಧ ಹೇಳಿಕೆಯೂ ಗೊತ್ತಿರಬೇಕು. ಅದನ್ನು ನಾವು ಎಷ್ಟೋ ಬಾರಿ ತಪ್ಪಾಗಿ ಅರ್ಥೈಸಿರುವುದೂ ಉಂಟು. ಎಷ್ಟೋ ಮಂದಿ ವಿಕಾಸ ಎಂದರೆ ಅದು ವಿದ್ವಾಂಸರ ಹೊಸದೊಂದು ತರ್ಕ. ಅದಕ್ಕೂ ನಮ್ಮ ಬದುಕಿಗೂ ಸಂಬಂಧವಿಲ್ಲ ಎನ್ನುವಂತೆ ನಿರಾಳವಾಗಿ ಇರುವುದೂ ಉಂಟು. ಬಹುಶಃ ಎಲ್ಲ ವಿಜ್ಞಾನಗಳೂ ಅಷ್ಟೆ. ವಿಜ್ಞಾನಿಗಳಿಗಷ್ಟೆ ಅದು ನೈಜ, ವಾಸ್ತವ. ಉಳಿದವರಿಗೆ ಅದು ಭ್ರಮೆ, ತರ್ಕ, ಸಿದ್ಧಾಂತ. ಇನ್ನು ಕೆಲವರಿಗಂತೂ ನವೀನ ವಿಜ್ಞಾನದ ತತ್ವಗಳು ರಾಜಕೀಯ ಸಿದ್ಧಾಂತಗಳೇ ಸರಿ.

ವಿಕಾಸವಾದದ ವಿಷಯದಲ್ಲಿಯಂತೂ ಇಂತಹ ಅನಿಸಿಕೆಗಳು ಇನ್ನೂ ಪ್ರಬಲ. ಏಕೆಂದರೆ ವಿಕಾಸವಾದ ಕೇವಲ ಯಾವುದೋ ನಿರ್ಜೀವ ವಸ್ತುವಿನ ಹುಟ್ಟು, ಸಾವಿನ ಬಗ್ಗೆ ತರ್ಕಿಸುವುದಿಲ್ಲ. ಅದು ಮಾನವ ಹಾಗೂ ಅವನೊಂದಿಗೆ ಇರುವ ಜೀವಿಗಳ ನಡುವಿನ ಸಂಬಂಧಕ್ಕೆ ಹೊಸದೊಂದು ಅರ್ಥವನ್ನು ಸೃಷ್ಟಿಸಿದೆ. ಹೀಗಾಗಿಯೇ ವಿಕಾಸವಾದ ಎಂದರೆ ಎಷ್ಟೋ ಧರ್ಮಗಳು ಉರಿದು ಬೀಳುವುದುಂಟು. ಇಂದಿಗೂ ಅಮೆರಿಕೆಯ ಹಲವು ರಾಜ್ಯಗಳಲ್ಲಿ ವಿಕಾಸವಾದವನ್ನು ಬೋಧಿಸುವುದು ತಪ್ಪು ಎಂದು ಭಾವಿಸುತ್ತಾರೆ.

ಇದಕ್ಕೆ ಕಾರಣಗಳಲ್ಲಿ ಪ್ರಮುಕವಾದದ್ದು ವಿಕಾಸವಾದ ಎನ್ನುವುದು ಮಾನವನ ವಿಕಾಸದ ಬಗ್ಗೆ ವಿವಿಧ ಧರ್ಮಗಳಲ್ಲಿ ಬೇರೂರಿರುವ ನಂಬಿಕೆಗಳಿಗೆ ಸಂಪೂರ್ಣ ವಿರುದ್ಧವಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ವಿಕಾಸ ಎನ್ನುವುದು ನಮ್ಮ, ನಿಮ್ಮ ಜೀವನಕಾಲದಲ್ಲಿ ಆಗುವಂಥದ್ದಲ್ಲ. ಹಲವು ನೂರು ವರ್ಷಗಳೂ ಅಲ್ಲ. ಹಲವಾರು ಲಕ್ಷ ವರ್ಷಗಳ ಅವಧಿಯಲ್ಲಿ ನಡೆಯುವ ಘಟನೆ ಎನ್ನುವುದು ಮತ್ತೊಂದು ಅಂಶ. ಹೆಚ್ಚೆಂದರೆ ಬೆಕ್ಟೀರಿಯಾ, ಬೂಸುಗಳಂತಹ ಸೂಕ್ಷ್ಮ ಜೀವಿಗಳಲ್ಲಿ ಹಾಗೂ ಸೊಳ್ಳೆ, ಹಣ್ಣು ನೊಣಗಳಂತಹ ಕೀಟಗಳಲ್ಲಿ ನಮ್ಮ ಜೀವಿತಕಾಲದಲ್ಲಿಯೇ ಹೊಸ ಪ್ರಬೇಧಗಳು ಕಾಣಿಸಿಕೊಂಡು ವಿಕಾಸದ ಪ್ರಕ್ರಿಯೆ ನಡೆಯುತ್ತಿರುವುದಕ್ಕೆ ಉದಾಹರಣೆಗಳಿವೆಯಾದರೂ, ಇವು ನಮ್ಮೆಲ್ಲರ ಅಳವಿಗೆ, ಸಂವೇದನೆಗೆ ನಿಲುಕದ ಸಂಗತಿಗಳಾಗಿರುವುದರಿಂದ ಕೇವಲ ವಿಜ್ಞಾನಿಗಳ ತರ್ಕ ಎಂದಷ್ಟೆ ನಂಬುತ್ತೇವೆ. ಕೀಟಗಳು, ಸೂಕ್ಷ್ಮಜೀವಿಗಳು ಹಾಗೂ ಬೂಸುಗಳಲ್ಲಿ ಕಾಣುವ ಉದಾಹರಣೆಗಳಂತೆ ಇತರೆ ದೊಡ್ಡ ಜೀವಿಗಳಲ್ಲಿ ಇವನ್ನು ಕಾಣಲಾಗಿರಲಿಲ್ಲ. ಈಗ ಹಾವಿನಂತಹ ಪ್ರಾಣಿಯಲ್ಲಿಯೂ ನಮ್ಮ ಜೀವನಕಾಲದಲ್ಲಿಯೇ ವಿಕಾಸ ನಡೆದಿರುವ ಉದಾಹರಣೆ ದೊರಕಿದೆ.

ವಿಕಾಸ ಎಂದರೆ ಮಂಗನಂಥ ಜೀವಿಯಿಂದ ಮಾನವನಂತಹ ಮತ್ತೊಂದು ಜೀವಿಯ ಉದ್ಭವ ಆಗುವುದು ಎನ್ನುವುದು ಉತ್ಪ್ರೇಕ್ಷೆ. ವಿಜ್ಞಾನಿಗಳ ಪ್ರಕಾರ ವಿಕಾಸ ಎಂದರೆ ಹೊಸದೊಂದು ಪ್ರಬೇಧದ ಜೀವಿಯ ಉಗಮ. ಪ್ರಬೇಧ ಎಂದರೆ ತನ್ನಂತಿರುವ ಜೀವಿಯೊಡನಷ್ಟೆ ಸಂತಾನೋತ್ಪತ್ತಿ ಮಾಡಬಲ್ಲ ಜೀವಿ ಎಂದರ್ಥ. ಈ ಅರ್ಥದಲ್ಲಿ ರಾಗಿ ಮತ್ತು ನವಣೆ ಹುಲ್ಲಿನ ಜಾತಿಗೇ ಸೇರಿದರೂ, ಅವೆರಡೂ ಒಂದರೊಡನೊಂದು ಕೂಡಿ ಸಂತಾನವನ್ನು ಹುಟ್ಟಿಸವು. ಹಾಗೆಯೇ ಕತ್ತೆ ಮತ್ತು ಕುದುರೆ. ಇವುಗಳು ಕೂಡಿದರೂ ಮ್ಯೂಲ್ ಎನ್ನುವ ಪ್ರಾಣಿ ಹುಟ್ಟುತ್ತದೆ. ಆದರೆ ಅದಕ್ಕೆ ಸಂತಾನೋತ್ಪತ್ತಿಯ ಸೌಭಾಗ್ಯವಿರುವುದಿಲ್ಲ. ಮ್ಯೂಲ್ ಮತ್ತೊಂದು ಮ್ಯೂಲಿಗೆ ಜನ್ಮ ನೀಡುವುದಿಲ್ಲ. ಆದ್ದರಿಂದ ಕತ್ತೆ ಮತ್ತು ಕುದುರೆಯನ್ನು ಬೇರೆ ಬೇರೆ ಪ್ರಬೇಧಗಳು ಎಂದು ವಿಜ್ಞಾನಿಗಳು ಗುರುತಿಸುತ್ತಾರೆ.

ಸಮುದ್ರದಲ್ಲಿ ವಾಸಿಸುವ ಹಾವುಗಳಲ್ಲಿ ಹೀಗೊಂದು ಹೊಸ ಪ್ರಬೇಧ ಉಗಮವಾಗಿದೆ ಎಂದು ಕಳೆದ ತಿಂಗಳು ಕರೆಂಟ್ ಬಯಾಲಜಿ ಪತ್ರಿಕೆ ವರದಿ ಮಾಡಿದೆ.

ಆಸ್ಟ್ರೇಲಿಯಾದ ಸಮೀಪವಿರುವ ಕೆಲಡೋನಿಯ ದ್ವೀಪಗಳ ಸಮೀಪ ಈ ವಿದ್ಯಮಾನವನ್ನು ವಿಜ್ಞಾನಿಗಳು ಕಂಡಿದ್ದಾರೆ. ಈ ದ್ವೀಪದ ಸಮೀಪವಿರುವ ಹಲವು ಲಗೂನುಗಳಲ್ಲಿ ಇತ್ತೀಚೆಗೆ ಸಂಪೂರ್ಣ ಕರಿ ಬಣ್ಣದ ಹುರುಪೆಗಳಿರುವ ಹಾವುಗಳು ಕಾಣಿಸಲಾರಂಭಿಸಿವೆ. ಲಗೂನುಗಳನ್ನು ಸಮುದ್ರದೊಳಗಿರುವ ದ್ವೀಪದಂತಹ ನೀರಿನ ಕೊಳಗಳೆನ್ನಬಹುದು. ಸಮುದ್ರದೊಳಗೇ ಇದ್ದರೂ ಇವು ಸಮುದ್ರದ ನೀರಿನ ಜೊತೆ ಸದಾ ಸಂಪರ್ಕದಲ್ಲಿರುವುದಿಲ್ಲ.

ವಿಕಾಸವಾದವನ್ನು ಜನಮನದ ಆಳಕ್ಕೆ ಇಳಿಸಿದ ವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ತರ್ಕಗಳಿಗೆ ಪುಷ್ಟಿಯನ್ನು ಕಂಡುಕೊಂಡಿದ್ದು ನಡುಗಡ್ಡೆಗಳಲ್ಲಿರುವ ವಿಶಿಷ್ಟ ಜೀವಿಗಳ ಅಧ್ಯಯನದಿಂದ ಎನ್ನುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕು. ಗ್ಯಾಲಪಗೋಸ್ ಎನ್ನುವ ದ್ವೀಪ ಸಮೂಹದಲ್ಲಿರುವ ನೂರಾರು ದ್ವೀಪಗಳಲ್ಲಿ ಇರುವ ಹಕ್ಕಿಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದುದನ್ನು ಡಾರ್ವಿನ್ ಕಂಡಿದ್ದ. ಇವು ಆಫ್ರಿಕಾ ಖಂಡದಿಂದ ವಲಸೆ ಬಂದ ಹಕ್ಕಿಗಳು ಎನ್ನುವುದರಲ್ಲಿ ಅನುಮಾನವಿರಲಿಲ್ಲ. ಆದರೆ ಒಂದು ದ್ವೀಪದಲ್ಲಿರುವಂತ ಹಕ್ಕಿ ಮತ್ತೊಂದರಲ್ಲಿ ಯಾಕಿಲ್ಲ ಎನ್ನುವುದೇ ಇವನಿಗೆ ಪ್ರಶ್ನೆಯಾಗಿ ಕಾಡಿತ್ತು. ಅದರ ಬೆಂಬತ್ತಿ ಹೋದವನು ಆಯಾ ದ್ವೀಪದ ಪರಿಸರಕ್ಕೆ ಹೊಂದಿಕೊಳ್ಳಬಲ್ಲಂತಹ ಗುಣವಿರುವ ಬಗೆಯಷ್ಟೆ ಅಲ್ಲಿ ಉಳಿದಿದೆ. ಉಳಿದವು ಮರೆಯಾಗಿವೆ. ಹೀಗೆ ಪ್ರತಿಯೊಂದು ದ್ವೀಪದಲ್ಲೂ ಅದರದ್ದೇ ಆದ ವಿಶಿಷ್ಟ ಪಕ್ಷಿ ಪ್ರಬೇಧವಿದೆ ಎಂದು ತರ್ಕಿಸಿದ. ನಿಸರ್ಗವೇ ಆಯ್ದು ಹೀಗೆ ವಿಕಾಸವನ್ನುಂಟು ಮಾಡಿದೆ ಎನ್ನುವ ಹೊಸ ವಾದವನ್ನು ಸೃಷ್ಟಿಸಿದ.

melaninseasnake

ಮೆಲಾನಿನ್ ಭರಿತ ಕರಿಹಾವು ಹಾಗೂ ಪಟಾಪಟಿ ಹಾವು

ಕೆಲಡೋನಿಯಯಾದ ಲಗೂನುಗಳಲ್ಲಿರುವ ಹಾವುಗಳಲ್ಲಿಯೂ ಇಂತಹದ್ದೇ ವಿಕಾಸ ನಡೆಯುತ್ತಿದೆಯಂತೆ. ಇಲ್ಲಿನ ಸಮುದ್ರದಲ್ಲಿ ಟರ್ಟಲ್ ಹೆಡೆಡ್ (ಆಮೆತಲೆಯ) ಹಾವುಗಳು (ಎಮಿಡೊಕೆಫಾಲಸ್ ಆನ್ಯುಲೇಟಸ್ – Emydocephalus annulatus) ಇವೆ. ನಮ್ಮೂರಿನ ಕಟ್ಟುಹಾವುಗಳಂತೆ ಇವುಗಳೂ ಬಣ್ಣದ ಉಂಗುರುಗಳಿರುವ ದೇಹದವು. ದೇಹದುದ್ದಕ್ಕೂ ಬಿಳಿ, ಕಪ್ಪು ಪಟ್ಟೆಗಳು ಇರುತ್ತವೆ. ಆದರೆ ಇತ್ತೀಚೆಗೆ ಇಲ್ಲಿನ ಲಗೂನುಗಳಲ್ಲಿ ಸಂಪೂರ್ಣ ಕಪ್ಪು ದೇಹದ ಹಾವುಗಳೂ ಕಂಡು ಬಂದಿದ್ದುವು. ಇವು ಬೇರೆಲ್ಲಿಂದಲಾದರೂ ವಲಸೆ ಬಂದ ಜೀವಿಗಳೋ? ಅಥವಾ ಇಲ್ಲಿಯೇ ಹುಟ್ಟಿದ ಹೊಸ ಪ್ರಬೇಧವೋ ಎನ್ನುವ ಅನುಮಾನವಿತ್ತು. ಈ ಕರಿ ಹಾವುಗಳ ಬಣ್ಣವನ್ನು ರಾಸಾಯನಿಕವಾಗಿ ವಿಶ್ಲೇಷಿಸುವುದರ ಜೊತೆಗೆ ಈ ಹಾವುಗಳ ದಟ್ಟಣೆ ಎಲ್ಲೆಲ್ಲಿ ಹೆಚ್ಚಿದೆ ಎನ್ನುವುದನ್ನು ಗುರುತಿಸಿರುವ ವಿಜ್ಞಾನಿಗಳು ಈ ಪಟ್ಟೆ ರಹಿತ ಹಾವುಗಳು ಲಗೂನುಗಳಲ್ಲಿ ಆಗುತ್ತಿರುವ ಮಾಲಿನ್ಯದಿಂದಾಗಿ ಉದ್ಭವವಾದ ಹೊಸ ಪ್ರಬೇಧಗಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅರ್ಥಾತ್, ಇಲ್ಲಿ ನಡೆದಿರುವ ಮಾಲಿನ್ಯವೇ ಹೊಸ ಜೀವಿಯ ವಿಕಾಸಕ್ಕೆ ಕಾರಣವಾಗಿದೆ.

ಅದು ಹೇಗೆ ಎಂದಿರಾ? ನಮ್ಮ ಚರ್ಮದಲ್ಲಿರುವ ಬಣ್ಣಕ್ಕೆ ಮೆಲಾನಿನ್ ಎನ್ನುವ ರಾಸಾಯನಿಕ ಕಾರಣವಷ್ಟೆ. ಇದೇ ಬಣ್ಣ ಹಾವಿನ ಮೈಯಲ್ಲೂ ಇದೆ. ನಮ್ಮ ಮೈ ಬಿಸಿಲಿಗೆ ಒಗ್ಗಿಕೊಳ್ಳುವುದಕ್ಕೆ ಇದು ಮೂಲ. ಆದರೆ ಹಾವಿಗೆ, ಅದರಲ್ಲೂ ನೀರಿನಲ್ಲಿರುವ ಹಾವಿಗೆ ಹೀಗೆ ಬಿಸಿಯಿಂದ ಕಾಯ್ದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಹಾವಿನ ಮೈ ಶೀತದ ಮೈ. ಅರ್ಥಾತ್, ಅದು ತನ್ನ ಪರಿಸರದಲ್ಲಿರುವ ಉಷ್ಣತೆಗೆ ತಕ್ಕಂತೆ ತನ್ನ ಮೈಯ ತಾಪಮಾನವನ್ನೂ ಬದಲಿಸಿಕೊಳ್ಳಬಲ್ಲದು. ಇಂತಹ ಜೀವಿಯಲ್ಲಿ ಇಷ್ಟೊಂದು ಮೆಲಾನಿನ್ ಬಂದದ್ದೇತಕ್ಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದರಿಂದೇನು ಪ್ರಯೋಜನ ಎನ್ನುವ ಪ್ರಶ್ನೆಯೂ ಜೊತೆಗೂಡುತ್ತದೆ. ಇವೆಲ್ಲಕ್ಕೂ ವಿಜ್ಞಾನಿಗಳ ಉತ್ತರ: ಮೆಲಾನಿನ್ ಪರಿಸರದಲ್ಲಿರುವ ಮಾಲಿನ್ಯ ವಸ್ತುಗಳು ದೇಹದಲ್ಲಿ ಕೂಡಿಕೊಳ್ಳದಂತೆ ಕಾಪಾಡುತ್ತದೆ.

ಹೌದು. ಕೈಗಾರಿಕಾ ಪ್ರದೇಶಗಳು ಸಮೀಪದಲ್ಲಿರುವ ಲಗೂನುಗಳಲ್ಲಿಯಷ್ಟೆ ಇಂತಹ ಕರಿಹಾವುಗಳು ಹೆಚ್ಚು ಎನ್ನುವುದನ್ನು ಸಿಡ್ನಿ ವಿಶ್ವವಿದ್ಯಾನಿಲಯದ ಜೀವಿವಿಜ್ಞಾನಿ ಕ್ಲೇರ್ ಗೋಯ್ರಾನ್ ಮತ್ತು ತಂಡ ಗುರುತಿಸಿದೆ. ಕೈಗಾರಿಕೆಗಳಿಂದ ಲಗೂನುಗಳಿಗೆ ಹರಿದು ಬರುವ ತ್ಯಾಜ್ಯಗಳು ಇದಕ್ಕೆ ಕಾರಣವಿರಬಹುದೇ ಎನ್ನುವ ಗುಮಾನಿಯಿಂದ  ಆ ನಿಟ್ಟಿನಲ್ಲಿ ಪರೀಕ್ಷೆ ನಡೆಸಿದ್ದಾರೆ. ಲಗೂನುಗಳಿಗೆ ಹರಿದು ಬರುವ ತ್ಯಾಜ್ಯಗಳಲ್ಲಿ ಸಾಕಷ್ಟು ಲೋಹದ ಅಂಶ, ಮುಖ್ಯವಾಗಿ ಸತುವಿನ ಅಂಶ ಹೆಚ್ಚಿದೆ. ತಮ್ಮ ಮೈಗೆ ಕೂಡಿಕೊಂಡ ಇಂತಹ ತ್ಯಾಜ್ಯಗಳನ್ನು ಬಿಸಾಡಲು ಹಾವುಗಳಿಗೆ ಇರುವ ದಾರಿ ಎಂದರೆ ಪೊರೆ ಬಿಡುವುದು. ಮೆಲಾನಿನ್ ಬಣ್ಣ ಲೋಹದಣುಗಳ ಜೊತೆಗೆ ಭದ್ರವಾಗಿ ಬೆಸೆದುಕೊಳ್ಳಬಲ್ಲುದು ಎನ್ನುವುದೂ ಗೊತ್ತಿರುವ ಸತ್ಯ. ಅಂದರೆ ಈ ಮಾಲಿನ್ಯ ಭರಿತ ನೀರಿನಲ್ಲಿರುವ ತ್ಯಾಜ್ಯ ಮೈಸೇರಿದರೂ ತಮ್ಮಲ್ಲಿರುವ ಮೆಲಾನಿನ್ನಿನಿಂದಾಗಿ ಅದು ಮೈಗೂಡದಂತೆ ತಪ್ಪಿಸಿಕೊಳ್ಳುವುದು ಕರಿ ಮೈಯ ಹಾವುಗಳಿಗೆ ಸರಾಗ. ಪಟ್ಟೆ, ಪಟ್ಟೆ ಹಾವುಗಳ ಮೈಗೆ ಈ ಲೋಹಗಳು ಸ್ವಲ್ಪವಾದರೂ ಕೂಡಿಕೊಳ್ಳುತ್ತವೆ. ಹೀಗಾಗಿ ಇಂತಹ ರಕ್ಷಣೆಯೊದಗಿಸುವ ಮೈಯಿರುವ ಹಾವುಗಳು ಇಲ್ಲಿ ಹೆಚ್ಚೆಚ್ಚು ಉಳಿದು, ಅವೇ ಹೊಸ ಪ್ರಬೇಧವಾಗಿವೆ ಎಂದು ಇವರು ಊಹಿಸಿದ್ದಾರೆ.

ಹೌದು. ಕರಿಬಣ್ಣ ಹಾಗೂ ಕೈಗಾರಿಕೆಯ ತ್ಯಾಜ್ಯಕ್ಕಿರುವ ಸಂಬಂಧ ಕಾಕತಾಳೀಯವಲ್ಲ. ಇಂಗ್ಲೆಂಡಿನ ಕೆಲವು ಪತಂಗಗಳು ಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ ಕಪ್ಪಾಗಿಯೂ, ಗ್ರಾಮಗಳಲ್ಲಿ ಬಿಳಿಯಾಗಿಯೂ ಇದ್ದದ್ದು ಹಲವು ದಶಕಗಳ ಹಿಂದೆಯೇ ವರದಿಯಾಗಿತ್ತು. ಹಾಗೆಯೇ ಹಕ್ಕಿಗಳೂ ತಾವುಂಡ ಆಹಾರದಲ್ಲಿರುವ ಲೋಹವಸ್ತುಗಳನ್ನು ಪುಕ್ಕಗಳಲ್ಲಿ ಸಂಗ್ರಹಿಸಿ ಬಿಸಾಡುವುದೂ ಜೀವಿವಿಜ್ಞಾನಿಗಳಿಗೆ ತಿಳಿದ ವಿಷಯವೇ. ಇವನ್ನೆಲ್ಲ ತಾಳೆ ಹಾಕಿದಾಗ  ಈ ಕರಿಬಣ್ಣದ ಸಮುದ್ರದ ಹಾವುಗಳು ಕೈಗಾರಿಕಾ ಮಾಲಿನ್ಯದಿಂದಾಗಿಯೇ ಹೊಸದಾಗಿ ಉದ್ಭವಿಸಿವೆ ಎನ್ನುವುದು ಸ್ಪಷ್ಟ ಎನ್ನುತ್ತಾರೆ ವಿಜ್ಞಾನಿಗಳು.

ವಿಕಾಸವನ್ನು ಹೀಗೆ ನಾವು ಕಾಣಲಾಗಿದೆ. ಅಷ್ಟೇ ಅಲ್ಲ. ಮಾಲಿನ್ಯವನ್ನು ಸೃಷ್ಟಿಸಿದ ನಾವೇ ಇದರ ನಿಯಾಮಕರೂ ಆಗಿದ್ದೇವೆ ಎನ್ನೋಣವೇ?

______

 Reference:

1. Goiran et al., Indusrial melanism in the seasnake Emydocephalus annulatus, Current Biology (2017), online publication, August 10, 2017,  http://dx.doi.org/10.1016/j.cub.2017.06.073

Published in: on ಆಗಷ್ಟ್ 20, 2017 at 5:08 ಅಪರಾಹ್ನ  Comments (1)