ನಾನುವಿಜ್ಞಾನ ಬರೆಹಗಾರನಾದಾಗ ನನ್ನ ಬಾಸ್ ಹಾಗೂ ಆ ಕ್ಷೇತ್ರದಲ್ಲಿ ನನಗೆ ಪ್ರೇರಣಾರೂಪರಾಗಿದ್ದ ಜಿ.ಪಿ. ಫೋಂಡ್ಕೆ ಒಂದು ಮಾತು ಹೇಳುತ್ತಿದ್ದರು. ಬರೆಯುವಾಗ ಉತ್ಸಾಹದಲ್ಲಿ ಉಪಮೆಗಳನ್ನು ಬಳಸುತ್ತೇವಷ್ಟೆ. ಅವು ನಾವಂದುಕೊಂಡ ಅರ್ಥವನ್ನೇ ಕೊಡುತ್ತವೋ ಇಲ್ಲವೋ ಎನ್ನುವುದನ್ನು ಪರಿಶೀಲಿಸಿ ಬಳಸಬೇಕು. ಮಿಶ್ರ ಉಪಮೆಗಳು, ಬಗ್ಗೆ ಎಚ್ಚರಿಕೆ ಎಂದಿದ್ದರು.
ಮೂವತ್ತು ವರ್ಷಗಳ ಹಿಂದೆ ಈ ಮಾತು ಅಷ್ಟು ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ. ಅದರಲ್ಲೂ ಫೇಸ್ಬುಕ್ ಮತ್ತು ವಾಟ್ಸಾಪ್ವ ಸಾಹಿತ್ಯದಲ್ಲಿ ಕಾಣುವ ಇನ್ಸ್ಟಂಟ್ ಸೃಜನಶೀಲತೆ ಈ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತದೆ.
ಮೊನ್ನೆ ಯಾರೋ ಇನ್ಯಾರನ್ನೋ ಫೇಸ್ಬುಕ್ಕಿನಲ್ಲಿ ಹಳಿದಿದ್ದರು. ಈ ಸಾಮಾಜಿಕ ಸಂವಹನ ಮಾಧ್ಯಮ ಗಳು “ಹಳಿಯುವ ಮಾಧ್ಯಮ” (ಟ್ರಾಲ್) ಗಳಾಗಿ ಏಕೆ ಬದಲಾದವೋ ಗೊತ್ತಿಲ್ಲ. ಹೀಗೇ ಒಬ್ಬರು ಹಳಿದಿದ್ದರು : ಆ “ಮಹಾತ್ಮ ಹೂಸಿದಷ್ಟು ಇವನು ಉಸಿರೂ ಆಡಿರಲಿಕ್ಕಿಲ್ಲ.”
ಮಹಾತ್ಮ ಮತ್ತು ಇವನ ವಯಸ್ಸು ಮತ್ತು ಅನುಭವವನ್ನು ಕುರಿತೋ ಮಹಾತ್ಮನ ಹೂಸಿನ ಮೌಲ್ಯವೂ ಇವನ ಉಸಿರಿಗಿಲ್ಲ ಎಂತೋ ಅರ್ಥೈಸಿಕೊಳ್ಳಬಹುದು ಎಂದುಕೊಂಡಿದ್ದೇನೆ.
ಆದರೆ ವಿಜ್ಞಾನ ಮತ್ತು ಕಾಮನ್ಸೆನ್ಸ್ ನನಗೆ ಹಾಗೆ ಅರ್ಥೈಸಿಕೊಳ್ಳಲು ಬಿಡಲೇ ಇಲ್ಲ. ನಾವು ಸದಾ ಹೂಸುವುದಿಲ್ಲವಷ್ಟೆ. ಹೆಚ್ಚೆಂದರೆ ಶೌಚಕ್ಕೆ ಹೋದಾಗ, ಹೊಟ್ಟೆ ಕೆಟ್ಟಿದ್ದಾಗ ಅಥವಾ ಹೊಟ್ಟೆ ಬಿರಿಯ ತಿಂದಾಗಷ್ಟೆ ಹೂಸುವುದು ಸಹಜ.
ಒಂದು ಅಂದಾಜಿನ ಪ್ರಕಾರ ದಿನಕ್ಕೆ ಹದಿನೈದರಿಂದ ಇಪ್ಪತ್ತು ಬಾರಿ (ಇದು ಗರಿಷ್ಟ) ಹೂಸಬಲ್ಲೆವಂತೆ. ಅದೇ ಉಸಿರಾಟ? ನಿಮಿಷಕ್ಕೆ ಹನ್ನೆರಡರಿಂದ ಹದಿನೈದು. ಹೆಚ್ಚಾದರೂ ಕಷ್ಟ. ಕಡಿಮೆಯಾದರೂ ಕಷ್ಟ.
ಈ ಲೆಕ್ಕದ ಪ್ರಕಾರ ಒಂದು ವರುಷದ ಮಗು ಅಂದರೆ 7,358,400 ಬಾರಿ ಉಸಿರಾಡುವುದು ಎಂದರ್ಥ. ಆ ಮಗು ಹೂಸುವುದು 5110 ಬಾರಿ. ಅಂದರೆ ಒಂದು ವರ್ಷದ ಮಗುವಿನ ಉಸಿರಾಟಕ್ಕಿಂತ ಹೆಚ್ಚು ಹೂಸಬೇಕು ಎಂದರೆ ಆ ಮಹಾತ್ಮ ಗಂಟೆಗೆ 900 ಬಾರಿ ಹೂಸ ಬೇಕು? ಎಂಥಾ ಹೊಟ್ಟೆಯೋ? ಅಥವಾ ಅಂತಹ ಭೋಜನವೋ ಅಂತ ಅಚ್ಚರಿಯಾಗುತ್ತದೆ.
ಅದು ಸಂಖ್ಯೆಯ ಬಗ್ಗೆ ಹೇಳಿದ್ದಲ್ಲ ಪರಿಣಾಮದ ಬಗ್ಗೆ ಎಂದೇ ಇಟ್ಟುಕೊಳ್ಳೋಣ. ಉಸಿರು ನೆರೆಯವರ ಮೇಲೆ ಉಂಟು ಮಾಡುವ ಪರಿಣಾಮಕ್ಕಿಂತ ಹೂಸಿನ ಪರಿಣಾಮ ಗೊತ್ತಿದ್ದದ್ದೇ! ಸಹಜವಾದ ಹೂಸಿನ ಪರಿಣಾಮವೇ ತಾಳಿಕೊಳ್ಳುವುದು ಕಷ್ಟ. ಇನ್ನು ಉಸಿರಾಟಕ್ಕಿಂತ ಮಿಗಿಲಾದ ಹೂಸಿನ ಆರ್ಭಟ! ದೇವರೇ!!
ಈ ವಿಶಿಷ್ಟ ಹೋಲಿಕೆ ದೈವಾಂಶ ಸಂಭೂತರಾದ ಮಹಾತ್ಮ ಹಾಗೂ ಪಾಮರರಾದ ನಮ್ಮಂಥವರ ನಡುವಿನ ವ್ಯತ್ಯಾಸವನ್ನು ತೋರಿಸುತ್ತದಂತೆ. ಗಂಟೆಗೆ 900 ಬಾರಿ ಹೂಸುವ ಭಾಗ್ಯ ನನಗಂತೂ ಬೇಡ.
ಅಂದ ಹಾಗೇ ಇದರಿಂದ ಪ್ರೇರಣೆ ಪಡೆದು ಉಚ್ಚಿಕೊಳ್ಳುವಷ್ಟೂ ಉಗುಳುವುದಿಲ್ಲ ಎಂತಲೋ, ಸ್ಖಲಿಸಿದಷ್ಟೂ ಸಿಂಬಳ ಸೀಂಟಿಲ್ಲ ಎಂತಲೋ ಹೋಲಿಕೆಗಳನ್ನು ಯಾರೂ ರೂಪಿಸುವುದಿಲ್ಲ ಎಂದುಕೊಂಡಿದ್ದೇನೆ.
lol.. dummies excited with brainless punditry.
ur poking is right around the ‘marma’ there!