ಜಾಣಸುದ್ದಿ

ವಿಜ್ಞಾನ, ವಿಚಾರ, ವಿಸ್ಮಯಗಳಿಗೆ ಮೀಸಲಾದ ಧ್ವನಿಪತ್ರಿಕೆ. ಪ್ರತಿವಾರ, ಹೊಸ ಜ್ಞಾನ.

ಸಂಚಿಕೆ 2, ಸೆಪ್ಟೆಂಬರ್ 16, 2017

ಸೊನ್ನೆಗೆಷ್ಟು ವಯಸ್ಸು?

ಇದೇನಿದು ಪ್ರಶ್ನೆ ಎನ್ನಬೇಡಿ. ಸೊನ್ನೆಯನ್ನು ಭಾರತೀಯ ಗಣಿತಜ್ಞರು ಕಂಡು ಹಿಡಿದರು ಎನ್ನುವುದು ನಮಗೆಲ್ಲ ತಿಳಿದ ಸಂಗತಿ. ಸೊನ್ನೆ ಅಥವಾ ಶೂನ್ಯ ಎನ್ನುವ ಯಾವುದೇ ಬೆಲೆಯಿಲ್ಲದ ಅಂಕಿಯನ್ನು ಸಂಖ್ಯೆಗಳಲ್ಲಿ ಬಳಸುವ ವಿಧಾನವನ್ನು ಜಾರಿಗೆ ತಂದು ಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ನೀಡಿದ್ದು ಭಾರತೀಯರ ಹೆಗ್ಗಳಿಕೆ. ಆದರೆ ಇದನ್ನು ಕಂಡು ಹಿಡಿದಿದ್ದು ಯಾವಾಗ?

ಈ ಪ್ರಶ್ನೆಗೆ ಖಚಿತವಾದ ಉತ್ತರವನ್ನು ಇದುವರೆವಿಗೂ ನೀಡಲಾಗಿರಲಿಲ್ಲ. ಸೊನ್ನೆಯನ್ನು ಸುಮಾರು ಸಾವಿರದೈನೂರು ಹಿಂದೆ ಬಳಸಲಾಗಿತ್ತು ಎಂದು ಅಂದಾಜಿಸಲಾಗಿತ್ತು. ಈ ಅಂದಾಜಿಗೆ ಮೂಲ ಭಾರತದ ಪುರಾತನ ಗಣಿತ ಕೃತಿಗಳಲ್ಲಿ ಅದರ ಉಲ್ಲೇಖ ಹಾಗೂ ಇದನ್ನು ಆಧರಿಸಿ ಪಾಶ್ಚಾತ್ಯ ಕೃತಿಗಳಲ್ಲಿ ಕಂಡ ಉಲ್ಲೇಖಗಳು. ಈ ಉಲ್ಲೇಖಗಳಿಗೆ ಹಿಂದೆಯೇ ಸೊನ್ನೆಯ ಸೃಷ್ಟಿಯಾಗಿರಬೇಕು ಎಂದಷ್ಟೆ ಅಂದಾಜು ಮಾಡಲು ಸಾಧ್ಯವಾಗಿತ್ತು.

ಸೊನ್ನೆಗೆ ಮುನ್ನ ಗಣಿತ ಇರಲಿಲ್ಲವೆನ್ನಬೇಡಿ. 3000 ವರ್ಷಗಳ ಹಿಂದೆಯೇ ಬೆಬಿಲೋನಿಯನ್ನರು ಹಾಗೂ ಮಾಯನ್ನರು ಗಣಿತವನ್ನು ಬಳಸುತ್ತಿದ್ದರು. ಭಾರತ, ಚೀನಾಗಳಲ್ಲಿಯೂ ಗಣಿತವನ್ನು ಕಲಿಸುತ್ತಿದ್ದರು, ಬಳಸುತ್ತಿದ್ದರು. ಆದರೆ ಸೊನ್ನೆ ಎನ್ನುವ ಅಂಕಿಯ ಬಳಕೆ ಇರಲಿಲ್ಲ. ಇದರಿಂದಾಗಿ ಮಾಯನ್ನರು ಬರೆದ ದಾಖಲೆಗಳಲ್ಲಿ 12, 102 ಹಾಗೂ 1200 ಎಲ್ಲವೂ ಒಂದೇ ರೀತಿ ಕಾಣುತ್ತಿದ್ದುವು. ಕಾಲಾಂತರದಲ್ಲಿ ಈ ಸಂಖ್ಯೆಗಳನ್ನು ಸರಿಯಾಗಿ ಬರೆಯಲು ಅಂಕೆಗಳಿಲ್ಲದ ಸ್ಥಾನದಲ್ಲಿ ಖಾಲಿ ಜಾಗೆಯನ್ನು ಬಿಟ್ಟು ಬರೆಯುವ ಪದ್ಧತಿ ಇತ್ತು. ಇಂತಹ ಖಾಲಿ ಸ್ಥಾನಗಳನ್ನು ಪಿಂಗಳ ಮುನಿ ಶೂನ್ಯ ಎಂದು ಹೆಸರಿಸಿದ್ದ.

ಹೀಗೆ ಏನೂ ಇಲ್ಲದ ಕಡೆಗೆ ಸೊನ್ನೆ ಎನ್ನುವ ಅಂಕೆಯನ್ನು ಬರೆಯುವ ಪದ್ಧತಿ ಬಂದಿದ್ದು ಕ್ರಿಸ್ತಶಕ 628ರ ಸುಮಾರಿನಲ್ಲಿ ಬ್ರಹ್ಮಗುಪ್ತನು ಬರೆದ ಬ್ರಹ್ಮಪುಟಸಿದ್ಧಾಂತದಲ್ಲಿ ಇರುವ ಉಲ್ಲೇಖದಿಂದ ಅಂದಾಜಿಸಿದ್ದಾರೆ. ಆದರೆ ಇದೀಗ ಲಂಡನ್ನಿನ ವಸ್ತು ಸಂಗ್ರಹಾಲಯದಲ್ಲಿರುವ ತಾಳೆಪತ್ರವೊಂದು ಸೊನ್ನೆ ಇನ್ನೂ ಹಳೆಯದು ಎಂದು ತೋರಿಸಿದೆ.

ಬನಸ್ಥಲಿ ತಾಳೆಪತ್ರ ಎನ್ನುವ ಈ ದಾಖಲೆ ಇಂದಿನ ಪಾಕಿಸ್ತಾನದ ಪೆಶಾವರ ಪ್ರಾಂತ್ಯದಲ್ಲಿರುವ ಬನಸ್ಥಲಿ ಎನ್ನುವ ಹಳ್ಳಿಯಲ್ಲಿ ಸುಮಾರು 1881ರಲ್ಲಿ ದೊರಕಿತ್ತು. ಇದರ ಹತ್ತಾರು ಹಾಳೆಗಳಲ್ಲಿ ಅಲ್ಲಲ್ಲಿ ಇಂಗ್ಲೀಷಿನ ಪ್ಲಸ್ ನಂತಹ ಚಿಹ್ನೆ ಇತ್ತು. ಸಂಖ್ಯೆಗಳಲ್ಲಿರುವ ಖಾಲಿ ಜಾಗೆಯನ್ನು ಭರ್ತಿ ಮಾಡಲು ಇದನ್ನು ಬಳಸಿದ್ದರು.  ಅಂದಿನ ವರ್ತಕರಿಗೆ ಗಣಿತದ ಪಾಠಗಳನ್ನು ತಿಳಿಸಿಕೊಡಲು ಬಹುಶಃ ಈ ತಾಳೆಪತ್ರವನ್ನು ಬಳಸಿದ್ದರು ಎಂದು ಊಹಿಸಲಾಗಿದೆ. ಇದರಲ್ಲಿ ಗಣಿತದ ಹಲವು ಪಾಠಗಳಿದ್ದುವು. ಆದರೆ ಇವು ಯಾವ ಕಾಲದವು ಎಂದು ನಿಷ್ಕರ್ಷೆ ಮಾಡಲಾಗಿರಲಿಲ್ಲ.

Bakhshalidoc2

ಬನಸ್ಥಲಿ ತಾಳೆಪತ್ರ: After the Guardian

ಪುಡಿ ಪುಡಿಯಾಗಿ ಉದುರುತ್ತಿರುವ ಈ ದಾಖಲೆಯನ್ನು ಇತ್ತೀಚೆಗೆ ರೇಡಿಯೊಕಾರ್ಬನ್ ಡೇಟಿಂಗ್ ತಂತ್ರದಿಂದ ಪರೀಕ್ಷಿಸಲಾಯಿತು. ಈ ತಂತ್ರದಲ್ಲಿ ಯಾವುದೇ ವಸ್ತುವಿನಲ್ಲಿರುವ ಕಾರ್ಬನ್ 12 ಮತ್ತು ಕಾರ್ಬನ್ 14 ರ ನಡುವಣ ಪರಿಮಾಣವನ್ನು ಪತ್ತೆ ಮಾಡಬಹುದು. ಕಾರ್ಬನ 14ರಿಂದಲೇ ಕಾರ್ಬನ್ 12 ಉತ್ಪತ್ತಿಯಾಗುತ್ತದೆ. ಹೀಗಾಗಿ ಸುಲಭವಾಗಿ ಆ ವಸ್ತು ಎಷ್ಟು ಹಳೆಯದು ಎಂದು ಊಹಿಸಬಹುದು. ಪರೀಕ್ಷೆಗಳ ನಂತರ ಈ ಹಾಳೆಗಳಲ್ಲಿ ಸೊನ್ನೆಯ ಉಲ್ಲೇಖವಿರುವ ಒಂದು ಪುಟ ಕ್ರಿಸ್ತಶಕ 200ರ ಸುಮಾರಿನದ್ದು ಎಂದು ಖಾತ್ರಿ ಪಡಿಸಿದೆ. ಅರ್ಥಾತ್, ಸೊನ್ನೆಯ ಬಳಕೆ ನಾವು ತಿಳಿದಿದ್ದಕ್ಕಿಂತಲೂ 500 ವರ್ಷ ಹಿಂದೆಯೇ ಆಗಿತ್ತು.

ಇನ್ನೂ ಹಿಂದೆ ಸೊನ್ನೆಯ ಬಳಕೆ ಆಗಿದ್ದಿರಬಹುದು. ಆದರೆ ಅದಕ್ಕೆ ದಾಖಲೆ ಸಿಗುವವರೆಗೂ ಇದುವೇ ಸೊನ್ನೆ ಎನ್ನುವ ಅಂಕಿಯ ಅಥವಾ ಶೂನ್ಯದ ಸಂಕೇತದ ಮೊದಲ ವೃತ್ತಾಂತ ಎನ್ನಬಹುದು. ಬನಸ್ಥಲಿ ತಾಳೆಪತ್ರವನ್ನು ಇಂಗ್ಲೆಂಡಿನ ಬೋಡಿಯನ್ ಗ್ರಂಥಾಲಯ ಅಕ್ಟೋಬರ್ 4 ರಿಂದ ನಡೆಯಲಿರುವ ವಸ್ತುಪ್ರದರ್ಶನವೊಂದರಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಿದೆ.

ಹೆಚ್ಚಿನ ಓದಿಗೆ: https://www.theguardian.com/science/2017/sep/14/much-ado-about-nothing-ancient-indian-text-contains-earliest-zero-symbol

ಚುಟುಕು ಚುರುಮುರಿ

ಪತಂಗ – ಚಿಟ್ಟೆ

ನಿಲ್ಲು ನಿಲ್ಲೇ ಪತಂಗ ಅನ್ನುವ ಹಾಡು ಕೇಳಿದ್ದೀರಿ. ಹಾಗೆಯೇ ಚಿಟ್ಟೆ, ಚಿಟ್ಟೆ ಬಣ್ಣದ ಚಿಟ್ಟೆ ಹಾಡನ್ನೂ ಹಾಡಿದ್ದೀರಿ. ಪತಂಗ ಮತ್ತು ಚಿಟ್ಟೆಗಳಲ್ಲಿ ಏನು ವ್ಯತ್ಯಾಸ? ಬಣ್ನವೇ? ಸಾಮಾನ್ಯವಾಗಿ ನಾವು ಕನ್ನಡದಲ್ಲಿ ಪತಂಗ ಮತ್ತು ಚಿಟ್ಟೆ ಎರಡನ್ನೂ ಚಿಟ್ಟೆ ಎಂದೇ ಕರೆದು ಬಿಡುತ್ತೇವೆ. ಆದರೆ ವಿಜ್ಞಾನಿಗಳು ಇವುಗಳ ಮಧ್ಯೆ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಗುರುತಿಸುತ್ತಾರೆ.

ನಮ್ಮ ಕಣ್ಣಿಗೆ ಎದ್ದು ತೋರುವ ಎರಡು ವ್ಯತ್ಯಾಸಗಳಿಂದ ಚಿಟ್ಟೆ ಮತ್ತು ಪತಂಗಗಳನ್ನು ಗುರುತಿಸಬಹುದು. ಪತಂಗಗಳ ಮೀಸೆ ಯಾವಾಗಲೂ ಹಕ್ಕಿಯ ಗರಿಗಳ ಹಾಗೆ ಕಾಣುತ್ತದೆ. ಚಿಟ್ಟೆಯ ಮೀಸೆ ಉದ್ದ ದಾರದ ತುದಿಯಲ್ಲಿ ಗಂಟು ಇದ್ದಂತೆ ತೋರುತ್ತದೆ. ಚಿಟ್ಟೆಗಳು ಕುಳಿತಾಗ ರೆಕ್ಕೆಗಳನ್ನು ನೀಟಾಗಿ ಮಡಚಿಕೊಂಡು ಕುಳಿತುಕೊಳ್ಳುತ್ತವೆ. ಪತಂಗಗಳು ರೆಕ್ಕೆಗಳನ್ನು ಬೆನ್ನ ಮೇಲೆ ವಿಶಾಲವಾಗಿ ಹರಡಿಕೊಂಡು ಕುಳಿತುಕೊಳ್ಳುತ್ತವೆ. ಇವು ಸಾಮಾನ್ಯ ನಿಯಮಗಳು. ನಿಸರ್ಗದಲ್ಲಿ ಎಲ್ಲ ನಿಯಮಗಳಿಗೂ ಅಪವಾದಗಳಿದ್ದೇ ಇರುತ್ತವೆ ಎನ್ನುವುದನ್ನು ಮರೆಯಬೇಡಿ.

ಒಂದು ಸ್ವಾರಸ್ಯವೆಂದರೆ ಹಾರುವ ಚಿಟ್ಟೆಯಾಗಲಿ, ಪತಂಗವಾಗಲಿ ಆಹಾರ ಸೇವಿಸುವುದಿಲ್ಲ ಹೆಚ್ಚೆಂದರೆ ಒಂದಿಷ್ಟು ಮಕರಂದ ಕುಡಿಯಬಹುದು. ಅವುಗಳ ಹಾರಾಟದ ಒಂದೇ ಗುರಿ ಸಂಗಾತಿಯನ್ನು ಹುಡುಕಿ, ಮೊಟ್ಟೆಯಿಡುವುದು. ಅಷ್ಟೆ.

ಹಗ್ಗ ಸೆಳೆ, ದೀಪ ಹಚ್ಚು

ಬಾವಿಯಿಂದ ನೀರು ಸೇದುವುದನ್ನು ನೋಡಿರಬೇಕಲ್ಲ. ಈಗಲೂ ಕೆಲವು ಹಳ್ಳಿಗಳಲ್ಲಿ ರಾಟೆ, ಹಗ್ಗಗಳನ್ನು ಉಪಯೋಗಿಸಿ ಬಾವಿಯಿಂದ ನೀರನ್ನು ಮೇಲೆತ್ತುವ ಪದ್ಧತಿ ಇದೆ. ಇದೇ ರೀತಿಯಲ್ಲಿ ರಾಟೆ, ಹಗ್ಗಗಳನ್ನು ಬಳಸಿ ವಿದ್ಯುತ್ ದೀಪಗಳನ್ನು ಉರಿಸುವ ಉಪಾಯವನ್ನು ಗ್ರಾವಿಟಿ ಲೈಟ್ ಫೌಂಡೇಶನ್ ಸಂಸ್ಥೆ ಹುಡುಕಿದೆ. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಬೆಳಕನ್ನು ಪಡೆಯಲು ನೀವು ಮಾಡಬೇಕಾಗಿದ್ದು ಇಷ್ಟೆ. ದೀಪದ ಜೊತೆಗಿರುವ ಹಗ್ಗವನ್ನು ಸೆಳೆದು, ನೆಲದ ಮೇಲಿರುವ ಭಾರವನ್ನು ಸೂರಿಗೆ ಏರಿಸಿ ಬಿಡುವುದು. ಅಷ್ಟೆ.

gravitylight

ಗ್ರಾವಿಟಿ ಲೈಟ್ ರಾಟೆ

ಸುಮಾರು ಹನ್ನೆರಡು ಕಿಲೋ ತೂಕದ ಭಾರವನ್ನು ಎಳೆದು ಸೂರು ಮುಟ್ಟಿಸಿ ಬಿಟ್ಟರೆ ಸಾಕು. ಅದು ತನ್ನ ತೂಕದ ಭಾರದಿಂದಲೇ ಕೆಳಗೆ ಇಳಿಯುತ್ತದೆ. ಆದರೆ ದಿಢೀರನೆ ಕೆಳಗೆ ಬೀಳದ ಹಾಗೆ ರಾಟೆಯಲ್ಲಿ ವಿಶೇಷ ಗಿಯರುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಗಿಯರುಗಳು ಮೇಲೇರಿದ ತೂಕ ಧಬಕ್ಕನೆ ಕೆಳಗೆ ಬೀಳದಂತೆ ನಿಧಾನವಾಗಿ ಕೆಳಗೆ ಇಳಿಸುವುದಷ್ಟೆ ಅಲ್ಲ, ಜೊತೆ, ಜೊತೆಗೇ ಪುಟ್ಟ ಡೈನಾಮೋವೊಂದನ್ನೂ ತಿರುಗಿಸುತ್ತವೆ. ಈ ಡೈನಾಮೋ ಉತ್ಪಾದಿಸುವ ವಿದ್ಯುತ್ತು ದೀಪವನ್ನು ಬೆಳಗಿಸುತ್ತದೆ.

ಅಯ್ಯೋ ಇಷ್ಟೆಲ್ಲ ಕಷ್ಟ ಪಡಬೇಕೆ ಎನ್ನಬೇಡಿ. ನೀವು ಕೊಳ್ಳಬೇಕಾಗಿರುವುದು ದೀಪ ಹಾಗೂ ಅದಕ್ಕೆ ಜೋಡಿಸಿರುವ ರಾಟೆಯನ್ನು ಅಷ್ಟೆ. ತೂಕಕ್ಕೆ ನಿಮಗಿಷ್ಟ ಬಂದ ವಸ್ತುವನ್ನು ಚೀಲದಲ್ಲಿ ಹಾಕಿ ಕೊಕ್ಕೆಗೆ ನೇತು ಬಿಡಬಹುದು. ರಾಟೆಯ ವಿನ್ಯಾಸ ಹೇಗಿದೆ ಎಂದರೆ ನೀವು ಇಪ್ಪತ್ತು ಕಿಲೋ ತೂಕವನ್ನು ಎತ್ತುತ್ತಿದ್ದರೂ ಅದು ಕೇವಲ ಮೂರು ಕಿಲೋನಂತೆ ಭಾಸವಾಗುತ್ತದೆ. ತೂಕ ಸೂರಿನಿಂದ ಕೆಳಗೆ ಇಳಿಯಲು ಸುಮಾರು 20 ನಿಮಿಷಗಳು ಬೇಕು. ತದನಂತರ ಮತ್ತೊಮ್ಮೆ ರಾಟೆ ಸೇದಿದರೆ ಸಾಕು.

ಹಳೆಯ ಗಡಿಯಾರದಲ್ಲಿರುವ ಸ್ಪ್ರಿಂಗು ಗಿಯರು ವ್ಯವಸ್ಥೆಯನ್ನೇ ಬಳಸಿಕೊಂಡು ನಿಧಾನವಾಗಿ ಕೆಳಗಿಳಿಯುವ ತೂಕದ ರಾಟೆಯನ್ನು ಗ್ರಾವಿಟಿ ಲೈಟ್ ರೂಪಿಸಿದೆ. ಈ ರಾಟೆಯನ್ನು ಕೊಂಡೊಯ್ದರೆ ಸಾಕು, ದಟ್ಟ ಕಾಡಿನಲ್ಲೂ, ಕಲ್ಲು ಮಣ್ಣು ತುಂಬಿದ ಚೀಲವನ್ನು ಮೇಲೆತ್ತಿ ಬೆಳಕನ್ನು ಒದಗಿಸಿಕೊಳ್ಳಬಹುದು.

ಆಹಾ. ವ್ಯಾಯಾಮದ ಜೊತೆಗೆ ಉಚಿತವಾಗಿ ಬೇಕೆಂದ ಕಡೆ ಬೆಳಕು ಸಿಕ್ಕ ಹಾಗೆ ಅಲ್ಲವೇ?

https://gravitylight.org/how-it-works/

ಮಾಸದ ಬಣ್ಣ

ನವಿಲಿನ ಗರಿಯಂತಹ, ಚಿಟ್ಟೆಯ ರೆಕ್ಕೆಯಂತಹ ಬಣ್ಣದ ಬಟ್ಟೆಗಳಿದ್ದರೆ ಎಷ್ಟು ಚೆನ್ನ ಎಂದು ಕನಸು ಕಂಡಿದ್ದಿರಾ? ಇದೋ. ಶೀಘ್ರವೇ ಈ ಕನಸೂ ನನಸಾಗಬಹುದು. ಚಿಟ್ಟೆ, ನವಿಲಿನ ಬಣ್ಣಗಳಂತೆಯೇ ಗಾಳಿ, ಬೆಳಕಿಗೆ ಮಾಸದ ಮಿರು, ಮಿರುಗುವ ಬಣ್ಣವನ್ನು ತಯಾರಿಸಬಹುದಂತೆ.

ಅಮೆರಿಕೆಯ ಅಕ್ರಾನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಆಲಿ ಧಿನೋಜವಾಲಾ ನಾರ್ಥ್ ವೆಸ್ಟರ್ನ ವಿಶ್ವವಿದ್ಯಾನಿಲಯ ಹಾಗೂ ಕೆಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳ ಜೊತೆಗೂಡಿ ಹೀಗೊಂದು ಉಪಾಯವನ್ನು ರೂಪಿಸಿದ್ದಾರೆ. ನಮ್ಮ ಚರ್ಮ ಹಾಗೂ ಕೂದಲನ್ನು ಕಪ್ಪಗಿರಿಸುವ ಬಣ್ಣದ ರಾಸಾಯನಿಕವನ್ನೇ ಜಾಣತನದಿಂದ ಚಿಟ್ಟೆ, ನವಿಲಿನ ಗರಿಯಂತೆ ಬಣ್ಣಬಣ್ಣವನ್ನು ಸೂಸುವಂತೆ ಮಾಡಿದ್ದಾರೆ.

ಚಿಟ್ಟೆಯ ರೆಕ್ಕೆ ಹಾಗೂ ನವಿಲಿನ ಗೆರೆಗಳು ಬಣ್ಣವನ್ನು ಸೂಸುವುದಕ್ಕೆ ಕಾರಣ ಅವುಗಳ ರಚನೆ. ಈ ಸೂಕ್ಷ್ಮರಚನೆಯಿಂದಾಗಿ ಅವುಗಳ ಮೇಲೆ ಬಿದ್ದ ಬೆಳಕು ನೀರಿನ ಮೇಲೆ ಹರಡಿದ ಎಣ್ಣೆಯ ಪದರದಂತೆಯೇ ಬೆಳಕನ್ನು ಪ್ರತಿಫಲಿಸುತ್ತದೆ. ಪ್ರತಿಫಲಿಸುವ ಬೆಳಕಿನ ವಿವಿಧ ಅಂಗಗಳು ಜೊತೆಗೂಡಿಯೋ, ಒಂದಿನ್ನೊಂದನ್ನು ಕಳೆಯುವುದರಿಂದಲೋ, ಕೆಲವು ಬಣ್ಣಗಳಷ್ಟೆ ಗಾಢವಾಗಿ ತೋರ್ಪಡುತ್ತವೆ. ಇದನ್ನು ವ್ಯತೀಕರಣ ಕ್ರಿಯೆ ಎನ್ನುತ್ತಾರೆ.

ನಮ್ಮ ಚರ್ಮ ಹಾಗೂ ಕೂದಲಿಗೆ ಕಪ್ಪು ಬಣ್ಣ ಕೊಡುವ ಮೆಲಾನಿನ್ ಎನ್ನುವ ರಾಸಾಯನಿಕವನ್ನು ಅತಿ ಸೂಕ್ಷ್ಮ ಗಾತ್ರದ ಸಿಲಿಕಾ ಹರಳುಗಳೊಳಗೆ ಕೂರಿಸಿ ವಿಶೇಷ ಗುಂಡುಗಳನ್ನು ಆಲಿ ಧಿನೋಜವಾಲಾ ಸೃಷ್ಟಿಸಿದ್ದಾರೆ. ಸಿಲಿಕಾದ ಗುಂಡುಗಳೊಳಗೆ ಹೊಕ್ಕು ಮರಳಿ ಪುಟಿದು ಬರುವ ಬೆಳಕು ವ್ಯತೀಕರಣಗೊಂಡು ಮಿರುಗುವ ಬಣ್ಣಗಳು ಸೃಷ್ಟಿಯಾಗುತ್ತವೆಯಂತೆ. ಕೃತಕವಾಗಿ ಸೃಷ್ಟಿಸಿದ ಮೆಲಾನಿನ್ ಮತ್ತು ಸಿಲಿಕಾದ ಹರಳುಗಳನ್ನಷ್ಟೆ ಬಳಸಿದರೂ, ಬೇಕೆಂದ ಬಣ್ನವನ್ನು ಸೃಷ್ಟಿಸುವುದು ಸಾಧ್ಯ ಎಂದು ಇವರು ಪರೀಕ್ಷೆಗಳ ಮೂಲಕ ಖಚಿತ ಪಡಿಸಿಕೊಂಡಿದ್ದಾರೆ.

ಇನ್ನು ಈ ಸೂಕ್ಷ್ಮ ಹರಳುಗಳನ್ನು ಬಟ್ಟೆಯ ಮೇಲೆ ಹಚ್ಚುವುದಷ್ಟೆ ಉಳಿದಿರುವುದು. ಬಣ್ಣ, ಬಣ್ಣದ ಮಿರುಗುವ ಬಟ್ಟೆ ಸಿದ್ಧ. ರಾಸಾಯನಿಕ ಬಣ್ಣಗಳಂತೆ ಇದು ಬಿಸಿಲಿಗೂ, ತಾಪಕ್ಕೂ ಮಾಸುವುದಿಲ್ಲ ಎನ್ನುವುದು ಒಂದು ಲಾಭ. ಬೋನಸ್ ಸಂಗತಿ ಎಂದರೆ, ಒಗೆದಾಗ ರಾಸಾಯನಿಕ ಬಣ್ಣಗಳಂತೆ ನೀರಿಗೆ ವಿಷ ಲೋಹಗಳನ್ನು ಕೂಡಿಸಿ ಮಲಿನಗೊಳಿಸುವುದಿಲ್ಲ. ಇದರ ವೀಡಿಯೋವನ್ನು ಇಲ್ಲಿ ನೋಡಿ

ಹೆಚ್ಚಿನ ಓದಿಗೆ: http://www.sciencemag.org/news/2017/09/new-dyes-don-t-fade-are-made-same-molecule-colors-your-skin

ಜಾಣ ನುಡಿ

“ಇಡೀ ಗಣಿತ ವಿಜ್ಞಾನಕ್ಕೆ ಸೊನ್ನೆಯೇ ಆಧಾರ. ಗಣಿತದಲ್ಲಿ ಯಾವುದೇ ಮೌಲ್ಯವನ್ನು ನಿರ್ಧರಿಸುವುದೂ ಸೊನ್ನೆಯೇ.”

– ಜರ್ಮನ್ ಪ್ರಕೃತಿ ವಿಜ್ಞಾನಿ ಲೊರೆಂಜ್

(ಇದು ಜಾಣಸುದ್ದಿ ಧ್ವನಿಪತ್ರಿಕೆಯ ಎರಡನೆಯ ಸಂಚಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಗಳ ಪಾಠ. ಸುದ್ದಿ ಕೇಳಬೇಕೆನ್ನುವವರು ಅಥವಾ ಹೆಚ್ಚಿನ ವಿವರ ಹಾಗೂ ಪ್ರಶ್ನೆಗಳಿದ್ದರೆ 9886640328 ನಂಬರಿಗೆ ಮೆಸೇಜು ಮಾಡಿ. ವಾಟ್ಸಪ್ಪಿನಲ್ಲಿ ಧ್ವನಿಪತ್ರಿಕೆಯನ್ನು ಕಳಿಸುವೆವು)

Published in: on ಸೆಪ್ಟೆಂಬರ್ 17, 2017 at 5:22 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ