ಕೀಟನಾಶಕಗಳೂ, ಕರಡಿ ಶಿಶ್ನಗಳೂ

ಯಾರಿಗೋ ಬಿಟ್ಟ ಬಾಣ ಇನ್ಯಾರಿಗೋ ತಗುಲಿತಂತೆ ಎನ್ನುವ ಮಾತು ಕೇಳಿದ್ದೇವೆ. ಪರಿಸರದ ವಿಷಯಕ್ಕೆ ಬಂದಾಗ ಈ ಮಾತು ಅಪ್ಪಟ ಸತ್ಯ. ಏನನ್ನೋ ಮಾಡಲು ಹೋಗಿ ಪರಿಸರದಲ್ಲಿ ಇನ್ನೇನನ್ನೋ ಕೆಡಿಸುವುದು ಸರ್ವೇ ಸಾಮಾನ್ಯವೇನೋ ಎಂದಾಗಿ ಬಿಟ್ಟಿದೆ. ವಾಸ್ತವವಾಗಿ ಪರಿಸರದ ಬಗ್ಗೆ ಕಾಳಜಿ ಬಂದಿದ್ದೇ ಈ ರೀತಿಯ ಗುರಿ ತಪ್ಪಿದ ಬಾಣದಿಂದ. 1960 ದಶಕದಲ್ಲಿ ಅಮೆರಿಕೆಯ ಪರಿಸರ ಪ್ರೇಮಿ ಪತ್ರಕರ್ತೆ ರಾಶೆಲ್ ಕಾರ್ಸನ್ ಸೈಲೆಂಟ್ ಸ್ಪ್ರಿಂಗ್ (ಮೌನ ವಸಂತ) ಎನ್ನುವ ಪುಸ್ತಕವನ್ನು ಬರೆದಳು. ಎರಡನೇ ಮಹಾಯುದ್ಧದ ನಂತರ ಅಮೆರಿಕೆಯಲ್ಲಿ ನಡೆದ ಕೃಷಿ ಕ್ರಾಂತಿಗೂ ವಸಂತ ಋತುವಿನಲ್ಲಿ ಸಾಮಾನ್ಯವಾಗಿ ಚಿಲಿಪಿಲಿಗುಟ್ಟುತ್ತಿದ್ದ ಹಕ್ಕಿಗಳ ಸಂಖ್ಯೆ ಕಡಿಮೆ ಆಗಿದ್ದಕ್ಕೂ ಈಕೆ ತಾಳೆ ಹಾಕಿದಳು. ಕೃಷಿಗಾಗಿ ಬಳಸುವ ರಾಸಾಯನಿಕಗಳು ಪರಿಸರವನ್ನು ಕಲುಷಿತಗೊಳಿಸಿ ತನ್ಮೂಲಕ ಹಕ್ಕಿಗಳ ಸಂತಾನೋತ್ಪತ್ತಿಯನ್ನೇ ಉಡುಗಿಸಿದೆ ಎನ್ನುವ ಸತ್ಯ ಆಗ ಬಯಲಾಯಿತು. ಹೀಗೆ ಆರಂಭವಾಯಿತು ಪರಿಸರವನ್ನು ಉಳಿಸಬೇಕೆನ್ನುವ ಮಹಾ ಹೋರಾಟ. ಈ ಹೋರಾಟ ಇನ್ನೂ ನಿಂತಿಲ್ಲ. ಹಾಗೆಯೇ ಪರಿಸರಕ್ಕೆ ಆಗುತ್ತಿರುವ ಘಾಸಿಯೂ ನಿಂತಿಲ್ಲ. ಇದರಿಂದಾಗಿ ಪರಿಸರದಲ್ಲಿರುವ ಜೀವಿಗಳಿಗೆ ಆಗುತ್ತಿರುವ ತೊಂದರೆಗಳೂ ನಿಂತಿಲ್ಲ. ಒಂದೆಡೆ ಪರಿಸರ ಮಾಲಿನ್ಯದಿಂದಾಗಿ ಮಾನವರ ಆರೋಗ್ಯ ಹದಗೆಡುತ್ತಿದೆ ಎನ್ನುವ ಕಾಳಜಿ ಹಾಗೂ ಮತ್ತೊಂದೆಡೆ ಈ ಪರಿಸರ ಮಾಲಿನ್ಯ ಇನ್ಯಾವ್ಯಾವ ಜೀವಿಗಳ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತಿದೆಯೋ ಎನ್ನುವ ಆತಂಕವೂ ಹೆಚ್ಚುತ್ತಿದೆ. ಈ ಆತಂಕಕ್ಕೆ ಇಂಬು ಕೊಡುವ ಎರಡು ಸುದ್ದಿಗಳು ಕಳೆದ ವಾರ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಸುವಿಗೆ ಕೊಟ್ಟ ಔಷಧ ರಣಹದ್ದುವಿಗೆ ವಿಷವಾಯಿತಂತೆ. ಹಾಗೆಯೇ ಎಲ್ಲೋ ಕೃಷಿಯಲ್ಲಿ ಬಳಸಿದ ಪುಟ್ಟ ಕೀಟಗಳನ್ನು ನಿಯಂತ್ರಿಸಲು ಬಳಸಿದ ಕೀಟವಿಷಗಳು ಇನ್ನೆಲ್ಲೋ ಇರುವ ದೈತ್ಯ ಕರಡಿಗಳನ್ನು ಸಂತಾನಹೀನರನ್ನಾಗಿ ಮಾಡುತ್ತಿರಬಹುದು ಎನ್ನುವ ಸುದ್ದಿ ಬಂದಿದೆ.

polar-bear-arctic-wildlife-snow-53425.jpeg

ಡೈಕ್ಲೊಫೆನಾಕ್ ಎನ್ನುವುದು ನೋವು ನಿವಾರಿಸುವ ಔಷಧ. ಮೂಳೆ ಮುರಿದರೋ, ಸ್ನಾಯು ಉಳುಕಿದರೋ, ತಲೆನೋವಿಗೋ, ಸಂಧಿವಾತಕ್ಕೋ ಇದನ್ನು ನಾವು ಬೇಕಾಬಿಟ್ಟಿ, ಯಾರ ಸಲಹೆಯನ್ನೂ ಕೇಳದೆಯೇ, ಬಳಸುತ್ತಿದ್ದೇವೆ. ಇದೇ ಔಷಧ ಹಾಗೂ ಇದರಂತಹುದೇ ನೋವು ಶಮನಕ ರಾಸಾಯನಿಕಗಳನ್ನು ಪಶುಪಾಲನೆಯಲ್ಲಿ ಬಳಸುತ್ತಾರೆ. ಹಸುಗಳಿಗೆ ನಮಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಚುಚ್ಚುತ್ತಾರೆ.  ಈ ಹಸುಗಳು ಸತ್ತಾಗ ರಣಹದ್ದುಗಳಿಗೆ ಆಹಾರವಾಗುತ್ತವಷ್ಟೆ. ಆಗ ಹಸುವಿನ ಮಾಂಸದೊಟ್ಟಿಗೆ ರಣಹದ್ದುಗಳ ದೇಹ ಸೇರಿದ ಔಷಧ ಅಲ್ಲೇ ಜೀರ್ಣವಾಗದೆ ಸಂಗ್ರಹವಾಗುತ್ತದೆಯಂತೆ. ಕ್ರಮೇಣ ಅದು ಮೂತ್ರಪಿಂಡಗಳನ್ನು ನಾಶ ಮಾಡಿ ರಣಹದ್ದುಗಳನ್ನು ಕೊಲ್ಲುತ್ತದೆ. ರಣಹದ್ದುಗಳಲ್ಲೇ ಹೀಗೇಕಾಗುತ್ತದೆ ಎಂದರೆ ಅದೊಂದು ಹಕ್ಕಿ. ಅದರಲ್ಲಿ ಮೂತ್ರ ತಯಾರಾಗುವುದಿಲ್ಲ. ಬದಲಿಗೆ ಯೂರಿಕ್ ಆಮ್ಲ ತಯಾರಾಗುತ್ತದೆ. ಈ ಯೂರಿಕ್ ಆಮ್ಲದ ತಯಾರಿಕೆಗೆ ಬೇಕಾದಂತಹ ಜೈವಿಕ ರಾಸಾಯನಿಕವನ್ನು ಡೈಕ್ಲೊಫೆನಾಕ್ ಮತ್ತು ಅದರಂತಹ ಔಷಧಗಳು ನಿಶ್ಶಕ್ತವನ್ನಾಗಿಸುತ್ತವೆ. ಹೀಗಾಗಿ ಯೂರಿಕ್ ಆಮ್ಲ ಮೂತ್ರಪಿಂಡದ ಕಲ್ಲಾಗುತ್ತದೆ. ಮೂತ್ರಪಿಂಡ ನಾಶವಾಗಿ ರಣಹದ್ದುಗಳು ಸಾವನ್ನಪ್ಪುತ್ತವೆ. ಈ ಕಾರಣದಿಂದಾಗಿ ಒಮ್ಮೆ ಲಕ್ಷಾಂತರ ಸಂಖ್ಯೆಯಲ್ಲಿ ಕಾಣುತ್ತಿದ್ದ ರಣಹದ್ದುಗಳು ಈಗ ನೂರಿನ್ನೂರರಷ್ಟು ಆಗಿವೆ. ಇವನ್ನು ನಾವು ಪ್ರೀತಿಯಿಂದ ಕಾಪಾಡಿಕೊಳ್ಳಬೇಕು ಎಂದು ಸೈನ್ಸ್ ಪತ್ರಿಕೆ ವರದಿ ಮಾಡಿತ್ತು.

ಇದೀಗ ಕೆಮಿಸ್ಟ್ರಿ ವರ್ಲ್ಡ್ ಪತ್ರಿಕೆ ಮತ್ತೊಂದು ಸುದ್ದಿ ಹೊತ್ತು ಬಂದಿದೆ. ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಧ್ರುವಕರಡಿಗಳಿಗೆ ಮರ್ಮಾಘಾತವಾಗುತ್ತಿವೆಯಂತೆ. ಹೌದು. ಮರ್ಮಾಘಾತವೇ ಸರಿ. ಏಕೆಂದರೆ ಈ ರಾಸಾಯನಿಕಗಳು ಧ್ರುವಕರಡಿಗಳ ಶಿಶ್ನಗಳನ್ನೇ ಮುರಿಯುತ್ತಿರಬಹುದು ಎಂದು ಗ್ರೀನ್ ಲ್ಯಾಂಡಿನ ವಿಜ್ಞಾನಿಗಳು ಸಂದೇಹಿಸಿದ್ದಾರಂತೆ. ಶಿಶ್ನಗಳೇ? ಅವು ಮುರಿಯುವುದು ಹೇಗೆ? ಶಿಶ್ನಗಳು ಎಂದರೆ ಮಾಂಸಲವಷ್ಟೆ ಎಂದಿರಲ್ಲವಾ? ನಿಜ. ಮಾನವರಲ್ಲಿ ಹಾಗೂ ಇನ್ನೂ ಹಲವು ಪ್ರಾಣಿಗಳಲ್ಲಿ ಶಿಶ್ನಗಳು ಕೇವಲ ಸ್ನಾಯುಗಳಿವೆ ಅಷ್ಟೆ. ಆದರೆ ಧ್ರುವಕರಡಿಗಳ ಶಿಶ್ನಗಳಲ್ಲಿ ಸ್ನಾಯುಗಳ ಜೊತೆಗೆ ಒಂದು ತೆಳುವಾದ ಮೂಳೆಯೂ ಇರುತ್ತದೆ. ರಾಸಾಯನಿಕಗಳ ಪ್ರಭಾವದಿಂದಾಗಿ ಈ ಮೂಳೆ ಮುರಿಯುವಷ್ಟು ಕೃಶವಾಗಿದೆಯಂತೆ. ಇವರು 1995 ರಿಂದ 2014 ರವರೆಗೆ ಧ್ರುವಪ್ರದೇಶದಲ್ಲಿದ್ದ ಕರಡಿಗಳ ಶಿಶ್ನಗಳ ಮೂಳೆಗಳನ್ನು ಎಲ್ಲೆಲ್ಲಿದ್ದವೋ ಅಲ್ಲಲ್ಲಿ ಪರೀಕ್ಷಿಸಿದ್ದಾರೆ. ಜೊತೆಗೆ ಅವಕಾಶ ದೊರೆತಾಗಲೆಲ್ಲ, ಮೂಳೆಗಳಲ್ಲದೆ ಉಳಿದ ದೇಹದ ಭಾಗಗಳನ್ನೂ ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದ್ದಾರೆ. ಮತ್ತೂ ಒಂದು ಹೆಜ್ಜೆ ಮುಂದೆ ಸಾಗಿ ಈ ಕರಡಿಗಳು ಸಾಮಾನ್ಯವಾಗಿ ಇರುವ ನೆಲೆ, ಆ ನೆಲೆಗಳಲ್ಲಿ ಇರುವಂತಹ ರಾಸಾಯನಿಕ ಮಾಲಿನ್ಯದ ಮಟ್ಟವನ್ನು ಅಳೆದಿದ್ದಾರೆ. ಇವೆಲ್ಲವನ್ನೂ ಗಣಿತಸೂತ್ರಗಳ ಮೂಲಕ ತಾಳೆ ಹಾಕಿ, ಹೆಚ್ಚು ಕೀಟನಾಶಕಗಳ ಉಳಿಕೆ ದೇಹದಲ್ಲಿ ಇದ್ದಂತಹ ಕರಡಿಗಳ ಶಿಶ್ನಗಳ ಮೂಳೆಗಳು ಹೆಚ್ಚು ಶಿಥಿಲವಾಗಿದೆ ಎಂಬುದನ್ನೂ, ಹೆಚ್ಚು ಕೃಷಿ ಚಟುವಟಿಕೆ ಇರುವಂತಹ ಹಾಗೂ ತತ್ಪರಿಣಾಮವಾಗಿ ಹೆಚ್ಚು ಪರಿಸರ ಮಾಲಿನ್ಯವಿರುವಂತಹ ಪ್ರದೇಶಗಳಲ್ಲಿರುವ ಕರಡಿಗಳ ಶಿಶ್ನಮೂಳೆಯನ್ನೂ ಇತರೆ ಕರಡಿಗಳ ಶಿಶ್ನಮೂಳೆಗಳೂ ಎಷ್ಟು ಗಟ್ಟಿಯಾಗಿವೆ ಎಂದು ಹೋಲಿಸಿದ್ದಾರೆ. ಪರಿಸರ ಮಾಲಿನ್ಯ ಹೆಚ್ಚಿರುವೆಡೆಯ ಕರಡಿಗಳ ಶಿಶ್ನಗಳು ಹೆಚ್ಚೆಚ್ಚು ಕೃಷವಾಗಿದ್ದುವಂತೆ.

ಮನುಷ್ಯರಲ್ಲಿ ವಯಸ್ಸಾದ ಮೇಲೆ ಮೂಳೆಸವೆತ ಕಾಣಿಸಿಕೊಳ್ಳುತ್ತದಷ್ಟೆ. ಈ ಮೂಳೆಸವೆತ ಹೆಚ್ಚಿದ್ದಾಗ ಒಂದಿಷ್ಟು ತಟ್ಟಿದರೂ ಮೂಳೆ ಮುರಿಯುತ್ತದಷ್ಟೆ. ಮುಪ್ಪಾದವರ ಬವಣೆಯಲ್ಲಿ ಇದೂ ಒಂದು. ಧ್ರುವಕರಡಿಗಳಲ್ಲಿ ಯುವಕರಿಗೆ ಇದು ಬಲು ಬೇಗನೇ ಬರುತ್ತಿರಬಹುದು ಎಂದು ಅವುಗಳ ಮೂಳೆಗಳ ಅಧ್ಯಯನ ತಿಳಿಸುತ್ತದೆ. ಇವುಗಳ ಮೂಳೆಗಳ ಸರಾಸರಿ ಸಾಂದ್ರತೆ -1.44. ಮೂಳೆ ಸವೆತದ ಲಕ್ಷಣ ಇರುವ ಮೂಳೆಗಳ ಸಾಂದ್ರತೆ ಸಾಮಾನ್ಯವಾಗಿ -1.0ಕ್ಕಿಂತಲೂ ಕಡಿಮೆ ಇರುತ್ತದೆ. ಡಿಡಿಟಿ ಹಾಗೂ ಇತರೆ ಕೀಟನಾಶಕಗಳು ಉಳಿಕೆಗಳು ಕರಡಿಗಳ ದೇಹದಲ್ಲಿ ಬೇರೆ ಜೀವಿಗಳಲ್ಲಿರುವುದಕ್ಕಿಂತಲೂ ಹೆಚ್ಚು ಕಾಣಿಸಿದೆ. ಬಹುಶಃ ಇದುವೇ ಮೂಳೆ ಸವೆತಕ್ಕೆ ಕಾರಣವಿರಬಹುದು ಎಂದು ಅಧ್ಯಯನ ನಡೆಸಿದ ವಿಜ್ಞಾನಿ ಕ್ರಿಶ್ಚಿಯನ್ ಸೊನಿ ತಿಳಿಸಿದ್ದಾರೆ.

ಕರಡಿಗಳಲ್ಲೇ ಏಕೆ ಈ ಕೀಟನಾಶಕಗಳ ಅಂಶ ಹೆಚ್ಚಾಗಿದೆ ಎಂದು ನೀವು ಕೇಳಬಹುದು. ಜೀವಿವಿಜ್ಞಾನಿಗಳ ಪ್ರಕಾರ ಧ್ರುವ ಪ್ರದೇಶದಲ್ಲಿರುವ ಆಹಾರ ಸರಪಳಿಗಳಲ್ಲಿ ಕರಡಿಗಳೇ ಮೇಲ್ಪಂಕ್ತಿಯವು. ಅರ್ಥಾತ್, ಕರಡಿಗಳನ್ನು ತಿಂದು ಬದುಕುವ ಪ್ರಾಣಿಗಳು ಇಲ್ಲ. ಕೀಟನಾಶಕಗಳು ಆಹಾರ ಸರಪಳಿಯಲ್ಲಿ ಕೆಳಪಂಕ್ತಿಯಲ್ಲಿರುವ ಪ್ರಾಣಿಗಳಲ್ಲಿ ಕಡಿಮೆಯೂ, ಮೇಲ್ಪಂಕ್ತಿಯಲ್ಲಿರುವ ಪ್ರಾಣಿಗಳಲ್ಲಿ ಹೆಚ್ಚಾಗಿಯೂ ಸಂಗ್ರಹವಾಗುತ್ತವೆ. ಈ ವಿದ್ಯಮಾನವನ್ನು ಜೈವಿಕವರ್ಧನೆ (biomagnification) ಎಂದು ಕರೆಯುತ್ತಾರೆ. ಕರಡಿ ಸರಪಳಿಯ ಅತ್ಯುನ್ನತ ಸ್ಥಾನದಲ್ಲಿರುವದರಿಂದ ಅದು ತಿನ್ನುವ ಪ್ರಾಣಿಗಳಲ್ಲಿಯೂ ಹೆಚ್ಚೆಚ್ಚು ಉಳಿಕೆ ಇರುತ್ತದೆ. ಹೀಗಾಗಿ ಇದಕ್ಕೆ ಅಪಾಯ ಹೆಚ್ಚು. ರಣಹದ್ದುಗಳಿಗೂ ಇದೇ ಕಾರಣದಿಂದಲೇ ಅಪಾಯ ಹೆಚ್ಚು.

ಮೂಳೆ ಸವೆತಕ್ಕೂ ಸಂತಾನೋತ್ಪತ್ತಿಗೂ ಸಂಬಂಧವೇನು ಎಂದಿರಾ? ಧ್ರುವಕರಡಿಗಳ ಶಿಶ್ನಗಳಲ್ಲಿ ತೆಳು ಮೂಳೆಗಳಿವೆ. ಧ್ರುವಕರಡಿಗಳು ಕೂಡುವುದು ವರ್ಷದಲ್ಲಿ ಒಮ್ಮೆಯಷ್ಟೆ. ಆ ಸಮಯದಲ್ಲಿ ಗಂಡುಗಳು ಎಷ್ಟು ಹೆಣ್ಣುಗಳು ಸಿಗುತ್ತವೆಯೋ, ಎಷ್ಟೆಷ್ಟು ದೀರ್ಘಕಾಲ ಕೂಡಬಹುದೋ ಅಷ್ಟಷ್ಟು ಕೂಡಲು ಪ್ರಯತ್ನಿಸುತ್ತವೆ. ಇವು ಧ್ರುವಕರಡಿಗಳ ಉಳಿವಿಗೆ ಬಲು ಮುಖ್ಯ. ದೊರೆತ ಅಲ್ಪ ಅವಕಾಶದಲ್ಲಿಯೇ ಸಂತಾನೋತ್ಪತ್ತಿಯನ್ನು ಹೆಚ್ಚೆಚ್ಚು ಮಾಡಬಹುದು. ಇದಕ್ಕೆ ಅನುಕೂಲವಾಗಲೋ ಎನ್ನುವಂತೆ ಕರಡಿಗಳ ಶಿಶ್ನಗಳಲ್ಲಿ ಮೂಳೆಗಳಿವೆ.

ಶಿಶ್ನ ಹಾಗೂ ಯೋನಿಗಳ ವಿನ್ಯಾಸ ಪ್ರತಿಯೊಂದು ಜೀವಿಯ ಸಂತಾನೋತ್ಪತ್ತಿಯಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆನ್ನುವುದನ್ನು ನಾವು ಮರೆಯುವ ಹಾಗಿಲ್ಲ. ಈ ಪ್ರಮುಖ ಅಂಗವೇ ಶಿಥಿಲವಾದರೆ? ಮೂಳೆಸವೆತದಿಂದಾಗಿ ಕರಡಿಗಳ ಶಿಶ್ನಗಳು ಮೃದುವಾಗುತ್ತವೆ. ದೀರ್ಘಕಾಲ ಕೂಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಇದು ಅವುಗಳ ಸಂತಾನೋತ್ಪತ್ತಿಯನ್ನು ಬಾಧಿಸಬಹುದು ಎಂದು ಸೊನಿ ಊಹಿಸಿದ್ದಾರೆ. ಏರುತ್ತಿರುವ ತಾಪಮಾನ, ಕಡಿಮೆಯಾಗುತ್ತಿರುವ ಆಹಾರ ಹಾಗೂ ನೆಲೆ, ಮನುಷ್ಯನ ಕಾಟ ಇವುಗಳೂ ಕರಡಿಗಳ ಸಂಖ್ಯೆ ಕ್ಷೀಣಿಸುವುದಕ್ಕೆ ಕಾರಣ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು. ಇವುಗಳಿಗಾದರೂ ಹೇಗಾದರೂ ಒಗ್ಗಿಕೊಳ್ಳಬಹುದು. ಆದರೆ ಸಂತಾನೋತ್ಪತ್ತಿಗೆ ಅವಶ್ಯಕವಾದ ಶಿಶ್ನವೇ ಶಿಥಿಲವಾದರೆ ಎನ್ನುವುದೇ ಇವರ ಪ್ರಶ್ನೆ. ಅಲ್ಲವೇ?

ಕೀಟಗಳಿಗೆ ಬಿಟ್ಟ ಬಾಣ ಹೀಗೆ ಪಾಪ ಕರಡಿಗಳ ಮರ್ಮಾಂಗಕ್ಕೇ ತಾಗುತ್ತಿರುವುದು ವಿಧಿಯ ವಿಚಿತ್ರ ಎನ್ನೋಣವೋ, ಮಾನವನ ಅಜ್ಞಾನದ ಕುರುಹು ಎನ್ನೋಣವೋ?

ಕೊಳ್ಳೇಗಾಲ ಶರ್ಮ

 

ಆಕರ: T Daugaard-Petersen et al, Environ. Int., 2018, 114, 212 DOI: 10.1016/j.envint.2018.02.022)

  1. Inga Vesper, Persistant pollutants push polar bear penises to breaking point, Chemistry World, 20 March 2018

 

Published in: on ಮಾರ್ಚ್ 23, 2018 at 6:18 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ