ಭಯಂಕರ ಶೀರ್ಷಿಕೆ

ಬಾಳು ಕಹಿಯಾಗಿಸುವ ಬಿಳಿವಿಷ ಎನ್ನುವ ಭಯಂಕರ ಶೀರ್ಷಿಕೆಯನ್ನು ಕೊಟ್ಟಿರುವ ಈ ಲೇಖನವನ್ನು ಒಮ್ಮೆ ಓದಿ. ಹಾಂ. ನಿಧಾನವಾಗಿ ಓದಿ. ಬಹುಶಃ ಹತ್ತನೆಯ ತರಗತಿಯನ್ನು ಪಾಸು ಮಾಡಿರುವ ಯಾವ ವಿದ್ಯಾರ್ಥಿಯೂ ಕೂಡ ಈ ಲೇಖನದಲ್ಲಿ ಇರುವ ಅಂಶಗಳಲ್ಲಿ ಹಲವು ನ್ಯೂನತೆಗಳಿವೆ ಎಂದು ಕಂಡುಕೊಳ್ಳಬಲ್ಲ. ಇದು ಸಹಸ್ರಾರು ಓದುಗರಿಗೆ ವಿಷಯವನ್ನು ತಿಳಿಸುವ ಸಂಪಾದಕರಿಗೆ ತಿಳಿಯಲಿಲ್ಲವೆಂದರೆ ಅದನ್ನು ಬೇಜವಾಬುದಾರಿ ಎನ್ನದೇ ಇನ್ನೇನನ್ನಬಹುದು ಎಂದು ಪದವನ್ನು ಹುಡುಕುತ್ತಿದ್ದೇನೆ.

ಸಕ್ಕರೆ ಒಳಿತೋ, ಕೆಡುಕೋ ಎನ್ನುವ ಪ್ರಶ್ನೆ ಬಿಡಿ. ಸಕ್ಕರೆಯನ್ನು ಕೆಡುಕು ಎಂದು ತೋರಿಸಲೇ ಬೇಕು ಎನ್ನುವ ಹಠದಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವ ಸಂಗತಿ ಇದು. ಸಾರ್ವಜನಿಕರಿಗೆ ನೀಡುವ ಮಾಹಿತಿ ಹೇಗಿರಬಾರದು ಎನ್ನುವುದಕ್ಕೆ ಉದಾಹರಣೆ.

ಒಂದೊಂದಾಗಿ ವಿಷಯವನ್ನು ಗಮನಿಸೋಣ.

  1. ಸಕ್ಕರೆ ಉತ್ಪಾದಿಸುವಾಗ ಸರ್ವಾಧಿಕ ಪ್ರಮಾಣದಲ್ಲಿ ಗಂಧಕವನ್ನು ಉಪಯೋಗಿಸಲಾಗುತ್ತ;ದೆ. ಗಂಧಕವನ್ನು ಬಾಂಬು ತಯಾರಿಸಲು, ಸಿಡಿಮದ್ದು ಅಥವಾ ಪಟಾಕಿ ತಯಾರಿಸಲು ಬಳಸುತ್ತಾರೆ. ಅದೊಂದು ರಾಸಾಯನಿಕ ವಸ್ತುವಾಗಿದೆ. ಗಂಧಕವು ಅತ್ಯಂತ ಜಡ ಪದಾರ್ಥವಾಗಿದ್ದು, ಒಮ್ಮೆ ಶರೀರದೊಳಗೆ ಸೇರಿದರೆ ಸುಲಭವಾಗಿ ಹೊರಬೀಳದು.

ರಾಸಾಯನಿಕ ಎನ್ನುವ ಹೆಸರು ಇರುವ ಮಾತ್ರಕ್ಕೇ ಅದು ಕೆಡುಕೇ? ನೀರೂ ಒಂದು ರಾಸಾಯನಿಕವೇ ಅಲ್ಲವೇ? ಹಾಗೆಯೇ ಉಪ್ಪು ಕೂಡ ರಾಸಾಯನಿಕವೇ. ಇದು ಬಲು ಸಾಮಾನ್ಯವಾದ ಸಂದೇಹ.

ಇನ್ನು ಸಕ್ಕರೆ ಎನ್ನುವುದು ಶುದ್ಧ ಶುಕ್ರೋಸ್ ಎನ್ನುವ ರಾಸಾಯನಿಕ ಎಂಬುದನ್ನು ಹತ್ತನೆಯ ತರಗತಿಯಲ್ಲಿಯೇ ಕಲಿತಿದ್ದೇವೆ. ಅಪ್ಪಟ ಸಕ್ಕರೆಯಲ್ಲಿ ಕೇವಲ ಕಾರ್ಬನ್ನು, ಹೈಡ್ರೋಜನ್ನು ಮತ್ತು ಆಕ್ಸಿಜನ್ನು ಮಾತ್ರ ಇರುತ್ತವೆ. ಗಂಧಕದ ಅಣುವೂ ಇರುವುದಿಲ್ಲ. ಈ ವಾಸ್ತವಾಂಶವನ್ನು ಲೇಖನ ಧ್ವನಿಸುತ್ತಿಲ್ಲ. ಸಕ್ಕರೆಯಲ್ಲಿ ಗಂಧಕ ಕಲಬೆರಕೆಯಾಗಿ ಉಳಿಯಬಹುದೇ ಹೊರತು ಅಂಗವಾಗಿಯಲ್ಲ.

ಗಂಧಕವು ಜಡಪದಾರ್ಥವಾಗಿದ್ದು… ಈ ಜಡ ಎನ್ನುವುದರ ಅರ್ಥವೇನೋ ಸ್ಪಷ್ಟವಿಲ್ಲ. ಸಕ್ಕರೆ ಜಡವಲ್ಲವೇ? ನೀರು? ಅದಿರಲಿ ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾದ ಪ್ರೊಟೀನುಗಳಲ್ಲಿ ಇಪ್ಪತ್ತು ಅಮೈನೊ ಆಮ್ಲಗಳಿವೆ. ಅವುಗಳಲ್ಲಿ ಕೆಲವು ಗಂಧಕಾಮ್ಲಗಳು. ಇವು ಇಲ್ಲದೆ ನಮ್ಮ ದೇಹ ಆರೋಗ್ಯವಂತವಾಗಿರದು. ಉದಾಹರಣೆಗೆ, ಕ್ಯಾನ್ಸರ್ ಬೆಳೆವಣಿಗೆಯನ್ನು ತಡೆಗಟ್ಟುವ ದೇಹದ್ದೇ ನೈಸರ್ಗಿಕ ರಕ್ಷಣೋಪಾಯವಾದ ಗ್ಲುಟಾಥಯೋನ್ ಎನ್ನುವ ರಾಸಾಯನಿಕದ ಕ್ಷಮತೆಗೆ ಅದರಲ್ಲಿ ಗಂಧಕ ಇರುವುದೇ ಕಾರಣ. ಪ್ರತ್ಯಾಕ್ಸೀಕಾರಕಗಳು ಅಥವಾ ಆಂಟಿ ಆಕ್ಸಿಡೆಂಟುಗಳು ಎಂದು ನಾವು ಹೇಳುವ ಹಲವಾರು ರಾಸಾಯನಿಕಗಳಲ್ಲಿ ಗಂಧಕ ಸಾಮಾನ್ಯ ಅಂಶ.

  1. ಗಂಧಕಾಂಶ ಹೆಚ್ಚಿರುವ ಸಕ್ಕರೆಯ ಸೇವನೆಯಿಂದ ಕೊಲೆಸ್ಟರಾಲ್ ಹೆಚ್ಚುತ್ತದೆ. ಕೊಲೆಸ್ಟರಾಲ್ ಹೆಚ್ಚಳದಿಂದ ಹೃದಯಾಘಾತ ಸಂಭವಿಸುತ್ತದೆ.

ಕೊಲೆಸ್ಟರಾಲ್ ನಮ್ಮ ದೇಹದಲ್ಲೇ ತಯಾರಾಗುವ ವಸ್ತು. ಇದು ಹೊರಗಿನಿಂದ ಬರುವುದಿಲ್ಲ. ಇದರ ತಯಾರಿಕೆಗೆ ಕೇವಲ ಸಕ್ಕರೆಯಷ್ಟೆ ಕಾರಣವಲ್ಲ. ಕೊಬ್ಬು ಸೇವನೆಯೂ ಕಾರಣ. ಶುಕ್ರೋಸನ್ನು ಸಕ್ಕರೆಯ ರೂಪದಲ್ಲಿಯಲ್ಲಿಯೋ, ಬೆಲ್ಲದ ರೂಪದಲ್ಲಿಯೋ ಅತಿಯಾಗಿ ಸೇವಿಸಿದರೆ (ಕರಗಿಸುವಷ್ಟು ವ್ಯಾಯಾಮ ಮಾಡದೆ ಕೂಡಿಸುತ್ತಲೇ ಇದ್ದರೆ) ಅವು ಕೊಬ್ಬಾಗಿ ಶೇಖರವಾಗುತ್ತವೆ ಎನ್ನುವುದು ಸತ್ಯ. ಆದರೆ ಇದು ಕೇವಲ ಸಕ್ಕರೆಗಷ್ಟೆ ಸೀಮಿತವಲ್ಲ. ಹಾಂ. ಸಕ್ಕರೆ ಸೇವನೆಯಿಂದಲೇ ಡಯಾಬಿಟೀಸ್ ಬರುತ್ತದೆ ಎನ್ನುವುದೂ ಸತ್ಯವಲ್ಲ. ಕೊಲೆಸ್ಟರಾಲ್ ಜಾಸ್ತಿಯಾದರೆ ಹೃದಯಾಘಾತ ಆಗುವ ಸಂಭವ ಹೆಚ್ಚು. ನಿಜ. ಆದರೆ ಸಕ್ಕರೆಯಿಂದಷ್ಟೆ ಕೊಲೆಸ್ಟರಾಲ್ ಜಾಸ್ತಿಯಾಗುತ್ತದೆ ಎನ್ನುವುದು ಸತ್ಯವಲ್ಲ.

  1. ಸಕ್ಕರೆಯಿಂದ ತಯಾರಿಸಿದ ಸಿಹಿತಿಂಡಿ ಸೇವನೆಯಿಂದ ದೇಹದ ತೂಕ ಹೆಚ್ಚಾಗುವುದು.

ದೇಹದ ತೂಕ ಹೆಚ್ಚುವುದಕ್ಕೆ ಅತಿಯಾದ ಕೊಬ್ಬಿನ ಸೇವನೆ, ವ್ಯಾಯಾಮದ ಕೊರತೆ ಮುಖ್ಯ ಕಾರಣಗಳು. ಕೆಲವು ಅನುವಂಶೀಯ ಗುಣಗಳೂ ಇದಕ್ಕೆ ಕಾರಣ. ಸಕ್ಕರೆಯನ್ನಷ್ಟೆ ದೂರುವುದು ತಪ್ಪಲ್ಲ.

  1. ಸಕ್ಕರೆ ತಯಾರಿಕೆಯಲ್ಲಿ ಇಪ್ಪತ್ತಮೂರಕ್ಕೂ ಹೆಚ್ಚು ರಾಸಾಯನಿಕಗಳನ್ನು ಬಳಸುವುದರಿಂದ… ಪಚನ ಶಕ್ತಿ ಕ್ಷೀಣಿಸುತ್ತದೆ.

ನಾವು ಸೇವಿಸುವ ಸಕ್ಕರೆಯಲ್ಲಿರುವುದು ಒಂದೇ ರಾಸಾಯನಿಕ. ತಯಾರಿಕೆಯಲ್ಲಿ ಏನೇ ಬಳಸಿರಲಿ, ದೇಹದೊಳಗೆ ಹೋಗುವುದು ಒಂದೇ ರಾಸಾಯನಿಕ. ಹಾಗೆ ನೋಡಿದರೆ ಬೆಲ್ಲದ ತಯಾರಿಕೆಯಲ್ಲಿಯೂ ರಾಸಾಯನಿಕಗಳನ್ನು ಬಳಸುತ್ತಾರೆ. ಜೊತೆಗೆ ಅದರಲ್ಲಿ ಶುಕ್ರೋಸಿನ ಜೊತೆಗೆ ಇನ್ನೂ ಹಲವು ರಾಸಾಯನಿಕಗಳು ಇರುತ್ತವೆ. ಹಾಗೆಂದು ಅದು ಸಕ್ಕರೆಗಿಂತಲು ಅಪಾಯಕಾರಿ ಎನ್ನೋಣವೇ?

  1. ಸಕ್ಕರೆಯೂ ಕ್ಯಾನ್ಸರ್ ಕಾರಕವಾಗಿದೆ. ಕ್ಯಾನ್ಸರಿನ ಜೀವಾಣುಗಳು ಸಕ್ಕರೆಯಿಲ್ಲದೆ ಇರಲಾರವು ಎಂದು ತಜ್ಞರು ಅಧ್ಯಯನದ ಮೂಲಕ ಸಾಬೀತು ಪಡಿಸಿದ್ದಾರೆ.

ಯಾವ ತಜ್ಞರು? ಯಾವಾಗ? ಕ್ಯಾನ್ಸರು ರೋಗಾಣುಗಳಿಂದ ಬರುವ ಖಾಯಿಲೆ ಅಲ್ಲ. ನಮ್ಮದೇ ಜೀವಕೋಶಗಳ ರೋಗಸ್ತ ಸ್ಥಿತಿ. ಅಂದ ಮೇಲೆ ನಮ್ಮ ದೇಹದಲ್ಲಿ ಇತರೆ ಕೋಶಗಳಿಗೆ ಒದಗುವ ಆಹಾರವನ್ನೇ ಅವು ಕೂಡ ಬಳಸುತ್ತವೆ. ಈ ಮೂಲ ಅಂಶವೂ ಸಂಪಾದಕರಿಗೆ ಹೊಳೆಯಲಿಲ್ಲವೇ? ಈ ಪ್ರಶ್ನೆ ಹೊಳೆದಿದ್ದರೆ ಬಹುಶಃ ಸಕ್ಕರೆ ಕ್ಯಾನ್ಸರುಕಾರಕ ಎನ್ನುವ ಮಾತಿನ ಬಗ್ಗೆ ಸಂದೇಹವೂ ಹುಟ್ಟುತ್ತಿತ್ತು.

  1. ರಕ್ತದಲ್ಲಿ ಟ್ರೈಗ್ಲಿಸರಿನ್ ಪ್ರಮಾಣ ಹೆಚ್ಚಾಗುವುದು…..

ಟ್ರೈಗ್ಲಿಸರೈಡುಗಳು ಕೊಬ್ಬು ಅಥವಾ ತೈಲದ ಒಂದು ಭಾಗ. ಕೊಬ್ಬು ದೇಹದಲ್ಲಿ ಜೀರ್ಣವಾದಾಗ ಇವು ಬಿಡುಗಡೆಯಾಗುತ್ತವೆ. ಶಕ್ತಿಯನ್ನು ಒದಗಿಸುತ್ತವೆ. ದೇಹದಲ್ಲಿ ಆಹಾರದಿಂದ ಶಕ್ತಿ ಒದಗದಿದ್ದಾಗ, ಟ್ರೈಗ್ಲಿಸರೈಡುಗಳು ಶಿಥಿಲವಾಗಿ ಗ್ಲುಕೋಸಿನ ರೂಪ ತಳೆದು ಶಕ್ತಿ ನೀಡುತ್ತವೆ. ನಾವು ಸೇವಿಸುವ ಆಹಾರ ಅಗತ್ಯಕ್ಕಿಂತಲೂ ಹೆಚ್ಚು ಗ್ಲುಕೋಸು ಒದಗಿಸಿದಾಗ ಆ ಹೆಚ್ಚುವರಿ ಗ್ಲೂಕೋಸು ದೇಹದಲ್ಲೇ ಸಂಗ್ರಹವಾಗುತ್ತದೆ. ಕೊಬ್ಬು ಹೆಚ್ಚು ಸೇವಿಸಿದರೆ ಬೊಜ್ಜಾಗಿಯೂ, ಸಕ್ಕರೆ ಹೆಚ್ಚಾದರೆ ಗ್ಲೈಕೋಜನ್ನಾಗಿಯೂ ಸಂಗ್ರಹವಾಗುತ್ತದೆ. ಇವು ಒಬ್ಬಿಬ್ಬರ ಅಧ್ಯಯನದಿಂದ ದೊರೆತ ಅಂಶಗಳಲ್ಲವೆನ್ನುವುದನ್ನು ಗಮನಿಸಿ. ಸಹಸ್ರಾರು ವಿಜ್ಞಾನಿಗಳು ದಶಕಗಳ ಕಾಲ ನಡೆಸಿದ ಸಂಶೋಧನೆಗಳಿಂದ ಪಡೆದ ಸಾರ. ಹಾಂ. ನಾವು ಸಾಮಾನ್ಯವಾಗಿ ಸಕ್ಕರೆ ಎನ್ನುವುದು ಸುಕ್ರೋಸು, ಸಕ್ಕರೆ ಖಾಯಿಲೆ ಎನ್ನುವುದು ರಕ್ತದಲ್ಲಿ ಗ್ಲುಕೋಸು ಅಂಶ ಹೆಚ್ಚಾಗಿ ಕಾಣುವ ಸ್ಥಿತಿ ಮತ್ತು ಆಹಾರದಲ್ಲಿ ಕೆಲೊರಿ ಎನ್ನುವುದು ಕೇವಲ ಅದರಲ್ಲಿರುವ ಕಾರ್ಬೊಹೈಡ್ರೇಟು (ಹಿಂದೆ ಇದನ್ನು ಶರ್ಕರ ಎನ್ನುತ್ತಿದ್ದರು) ಅಂಶದಿಂದಷ್ಟೆ ಅಲ್ಲ, ಕೊಬ್ಬು, ಪ್ರೊಟೀನುಗಳನ್ನೂ ಕೂಡಿಸಿ ಹೇಳುವ ಮಾತು.

ಒಟ್ಟಾರೆ ಈ ಲೇಖನ ಪತ್ರಿಕೆಯ ಬೇಜವಾಬುದಾರಿಯನ್ನು ಎತ್ತಿ ತೋರಿಸುತ್ತದೆ ಎನ್ನಬಹುದು. ಪತ್ರಿಕೋದ್ಯಮದ ಮೂಲ ತತ್ವಗಳಾದ ಯಾರು, ಏನು, ಹೇಗೆ, ಎಲ್ಲಿ, ಎಂದು, ಎಷ್ಟು ಎನ್ನುವ ಪ್ರಶ್ನೆಗಳನ್ನೇ ಕೇಳದೆ ಸಾರಾಸಗಟಾಗಿ ಅಭಿಪ್ರಾಯವನ್ನೇ ಪ್ರಕಟಿಸಿ, ಅದಕ್ಕೆ ಬೆದರಿಸುವ ಶೀರ್ಷಿಕೆಯನ್ನೂ ಹಾಕಿರುವುದು ನಿಜಕ್ಕೂ ಆಶ್ಚರ್ಯಕರ.

ಮಾಹಿತಿ ಸಂಗ್ರಹವೇ ಆಗಿದ್ದರೂ, ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕಲ್ಲವೇ? ಅಂದ ಹಾಗೆ ಯಾವ ವಿಜ್ಞಾನಿಯೂ ಒಬ್ಬ ತಜ್ಞನ ಮಾತನ್ನು ನಂಬುವುದಿಲ್ಲ. ತಜ್ಞನ ಮಾತನ್ನು ಬೆಂಬಲಿಸುವಂತಹ ಇನ್ನೂ ಹಲವು ಪುರಾವೆಗಳಿದ್ದರಷ್ಟೆ ಅದು ಸತ್ಯವೆಂದು ತಿಳಿಯುತ್ತದೆ ವಿಜ್ಞಾನ.

Published in: on ನವೆಂಬರ್ 3, 2018 at 5:15 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ