ಕಳೆದ ತಿಂಗಳು ಮೈಸೂರಿನಲ್ಲಿ ಒಂದು ವಿಚಾರ ಸಂಕಿರಣದಲ್ಲಿ ಹೀಗೊಂದು ಚರ್ಚೆ ನಡೆದಿತ್ತು. ಸಂಪ್ರದಾಯ ಅಥವಾ ಪರಂಪರೆ ಮತ್ತು ವಿಜ್ಞಾನ. ಬೆಂಗಳೂರಿನ ನೆಹರೂ ತಾರಾಲಯದ ನಿವೃತ್ತ ನಿರ್ದೇಶಕಿ ಡಾ. ಬಿ. ಎಸ್. ಶೈಲಜಾ, ಕರ್ನಾಟಕದ ಹಳೆದ ಸಾಹಿತ್ಯದಲ್ಲಿ ಹಾಗೂ ಶಿಲಾಶಾಸನಗಳಲ್ಲಿ ಆಗಸದಲ್ಲಿ ನಡೆಯುವ ಹಲವು ವಿದ್ಯಮಾನಗಳನ್ನು ಅಂದಿನ ಜನರು ಗಮನಿಸಿ, ದಾಖಲಿಸಿದ್ದರು ಎನ್ನುವುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ವಿವರಿಸಿದ್ದರು. ಇದು ಅಂದು ಅವರು ಈ ವಿದ್ಯಮಾನಗಳನ್ನು ಕಂಡಿದ್ದರ ಕುರುಹಷ್ಟೇಯೋ, ಅಥವಾ ಅವುಗಳೇಕೆ ಆಗುತ್ತವೆ ಎನ್ನುವುದನ್ನು ನಮ್ಮ ಪೂರ್ವಜರು ತಿಳಿದಿದ್ದರೋ ಎನ್ನುವುದನ್ನು ಸ್ಪಷ್ಟ ಪಡಿಸುವುದಿಲ್ಲ ಎಂದೂ ಹೇಳಿದ್ದರು.
ಇದೇ ಸಭೆಯಲ್ಲಿ ಬೆಂಗಳೂರಿನ ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಬಿ. ಎಸ್. ಸೋಮಶೇಖರ್ ಮಾತನಾಡಿ ಮತ್ತೊಂದು ಸ್ವಾರಸ್ಯಕರವಾದ ಪ್ರಶ್ನೆಯನ್ನು ಮುಂದಿಟ್ಟಿದ್ದರು. ನಾವು ಜಾನಪದದಲ್ಲಿಯೂ, ನಮ್ಮ ನಿತ್ಯ ಜೀವನದಲ್ಲಿಯೂ ಪಾಲಿಸಿಕೊಂಡು ಬರುತ್ತಿರುವ ಹಲವು ರೂಢಿಗತ ನಡವಳಿಕೆಗಳು ಬಹುಶಃ ಪರಿಸರಪ್ರಜ್ಞೆಯನ್ನೋ, ವೈದ್ಯಕೀಯ ಅರಿವನ್ನೋ ಮೂಡಿಸುವ ಕಲಿಕೆಯ ವಿಧಾನಗಳಾಗಿದ್ದಿರಬಹುದೋ? ಅವನ್ನು ನಾವು ಈಗ ಮರೆತು ಕೇವಲ ರೂಢಿಗತ ಆಚರಣೆಯನ್ನಾಗಿಸಿಬಿಟ್ಟಿದ್ದೇವೆಯೋ? ಇದು ಅವರ ಪ್ರಶ್ನೆ. ಇದಕ್ಕೆ ಅವರು ಹಲವು ಬುಡಕಟ್ಟು ಜನಾಂಗಗಳಲ್ಲಿ ನಿತ್ಯ ಜೀವನದಲ್ಲಿ ಬಳಸದ ಹಣ್ಣು, ಹಂಪಲು, ಸೊಪ್ಪು, ಸದೆಗಳನ್ನು ಕೆಲವು ವಿಶೇಷ ಹಬ್ಬ, ಹರಿದಿನ ಅಥವಾ ಆಚರಣೆಗಳಲ್ಲಿಯಷ್ಟೆ ಬಳಸುತ್ತಾರೆ ಎನ್ನುವುದನ್ನು ಉದಾಹರಣೆಯಾಗಿ ಕೊಟ್ಟಿದ್ದರು. ಈ ಹಣ್ಣು, ಹಂಪಲು, ಸೊಪ್ಪಿನಲ್ಲಿ ಯಾವುದೋ ವಿಶೇಷ ಗುಣವಿದೆ. ಅದನ್ನು ಹೀಗೆ ಆಚರಣೆಯ ಅಂಗವಾಗಿಸಿಬಿಟ್ಟರೆ ಅವನ್ನು ಸಂರಕ್ಷಿಸುವ ಹೊಣೆ ಸಮುದಾಯದ ಮೇಲಿರುತ್ತದೆ ಎನ್ನುವುದರಿಂದ ಹೀಗಾಗಿರಬಹುದೋ ಎನ್ನುವ ತರ್ಕವನ್ನು ಮುಂದಿಟ್ಟರು.
ಸಂಪ್ರದಾಯ ಹಾಗೂ ವಿಜ್ಞಾನದ ವಿಷಯ ಬಂದಾಗ ಈ ತಾಕಲಾಟ ಇದ್ದಿದ್ದೇ. ಆಚರಣೆಗಳು ನಿಜಕ್ಕೂ ಅರ್ಥವತ್ತಾದ ನಡವಳಿಕೆಗಳೋ, ಅಥವಾ ನಾವು ಅವನ್ನು ಕೇವಲ ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದರಿಂದ ಅವಕ್ಕೆ ಒಂದು ಸಮಜಾಯಿಸಿ ಕೊಡುತ್ತಿದ್ದೇವೆಯೋ? ಅವು ಅರ್ಥವತ್ತಾದ ನಡವಳಿಕೆಗಳಾಗಿದ್ದರೆ ಅವುಗಳಲ್ಲಿದ್ದ ವಿಜ್ಞಾನವನ್ನೋ, ತಿಳಿವನ್ನೋ ನಾವು ಮರೆತಿರಬಹುದು. ಅವು ಕೇವಲ ರೂಢಿಗತವಾಗಿ ಬಂದಿದ್ದರೆ ಬಹುಶಃ ಕೇವಲ ಮೌಢ್ಯಗಳಿರಬಹುದು. ಈ ಗೊಂದಲ ಏಕೆ ಎಂದರೆ ಇಂದಿಗೂ ಸಮಾಜಶಾಸ್ತ್ರಜ್ಞರು ಪಾರಂಪರಿಕ ನಡವಳಿಕೆಗಳಲ್ಲಿ ಒಂದು ಜ್ಞಾನ ಪರಂಪರೆ ಇದೆ. ಅದು ಇಂದಿನ ವಿಜ್ಞಾನದ ಪ್ರಯೋಗ, ಪರೀಕ್ಷೆ ವಿಧಾನಗಳಂತಲ್ಲ. ಹಾಗಂತ ಅವನ್ನು ಕಡೆಗಣಿಸಬಾರದು ಎಂದು ವಾದಿಸುತ್ತಾರೆ. ಇದೇ ತರ್ಕವನ್ನು ಮುಂದಿಟ್ಟುಕೊಂಡು ವಿಜ್ಞಾನದ ದೃಷ್ಟಿಯಲ್ಲಿ ಅರ್ಥಹೀನವಾದ ಹಲವು ನಡವಳಿಕೆಗಳಲ್ಲಿ ಸಂಪ್ರದಾಯಸ್ತರು ಹಲವು ಅರ್ಥ ಹುಡುಕಲು ಹೊರಡುವುದೂ ಉಂಟು.
ಮಾನವ ಶಾಸ್ತ್ರಜ್ಞರ ಪ್ರಕಾರ ಇಂತಹ ಹಲವು ಆಚರಣೆಗಳು ಕೇವಲ ಕಲ್ಟ್ ನಡವಳಿಕೆಗಳು. ಅರ್ಥಾತ್, ಯಾರೋ ಏಕೋ ಮಾಡಿದವನ್ನು ಉಳಿದವರು ಮಕ್ಕಿಕಾಮಕ್ಕಿ ನಕಲು ಮಾಡಿ, ಹಾಗೆಯೇ ಅದು ಸಮುದಾಯದಲ್ಲೆಲ್ಲ ಹರಡಿಕೊಂಡು ಬಿಟ್ಟಂತಹ ನಡವಳಿಕೆಗಳೂ ಇರಬಹುದು. ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಉದಾಹರಣೆಗೆ, ಹಬ್ಬದ ದಿನ ತೋರಣ ಕಟ್ಟುವುದು, ಕತ್ತಲಾದ ಮೇಲೆ ಮನೆ ಗುಡಿಸಬಾರದು ಎನ್ನುವುದು, ಕೆಲವೆಡೆ ಒಂಟಿ ದೀಪವನ್ನು ಹಚ್ಚಬಾರದು ಎನ್ನುವುದೂ ಉಂಟು. ಮುಂಬಾಗಿಲ ಮೇಲೆ ದೃಷ್ಟಿ ಬೊಂಬೆ ನೇತು ಹಾಕುವುದು, ನಿಂಬೆ-ಮೆಣಸಿನಕಾಯಿಯನ್ನು ನೇತುಹಾಕುವುದು, ಬ್ರಾಹ್ಮಣರು ಶೌಚಕ್ಕೆ ಹೋಗುವಾಗ ಜನಿವಾರವನ್ನು ಕಿವಿಯ ಸುತ್ತ ಸುತ್ತಿಕೊಂಡು ಹೋಗುವುದು, ಶ್ರಾದ್ಧದ ವೇಳೆ ಹೆಂಗಸರು ಅಲ್ಲಿ ಇರಬಾರದು ಎನ್ನುವುದು ಇತ್ಯಾದಿ, ಇತ್ಯಾದಿ. ಇವು ಆಚರಣೆಗಳು ನಿಜ. ಆದರೆ ಮೌಢ್ಯಗಳೋ, ಮರೆತ ಅರಿವಿನ ಪ್ರಜ್ಞೆಯೋ? ಇದನ್ನು ತೀರ್ಮಾನಿಸುವುದು ಕಷ್ಟ. ಏಕೆಂದರೆ ಇಂತಹ ನಡವಳಿಕೆಗಳು ಹುಟ್ಟಿದ ಬಗ್ಗೆ, ಅವು ವಿಕಾಸವಾದ ಬಗ್ಗೆ ದಾಖಲೆಗಳು ಸಿಗುವುದು ಕಷ್ಟ.
ಅಂತಹ ಒಂದು ಉದಾಹರಣೆ ಮೊನ್ನೆ ಸಿಕ್ಕಿದ್ದರಿಂದಾಗಿ ಈ ಲೇಖನ. ಕೊರೊನಾ ಊರ ಬಾಗಿಲನ್ನೇ ಬಡಿದು, ಎಲ್ಲರನ್ನೂ ಮನೆಯೊಳಗೆ ಕುಳ್ಳಿರಿಸಿರುವಾಗ ಈ ಚಿತ್ರವನ್ನು ಡಾ. ಮೋಹನ್ ತಂಬಡ್ ಕಳಿಸಿದರು. ಇದೇ ಚಿತ್ರ ಶ್ರೀ ಎಲ್. ಸಿ. ನಾಗರಾಜರ ಫೇಸ್ ಬುಕ್ ಪುಟದಲ್ಲಿಯೂ ಚರ್ಚೆಗೆ ಒಳಗಾಗಿತ್ತು. ಇದು ನಮ್ಮ, ನಿಮ್ಮ ಮನೆಯ ಸುತ್ತಮುತ್ತಲಿನ ಬೇಲಿಯಲ್ಲಿ ಕಾಣುವ ಒಂದು ಕಳೆಗಿಡದ ಕಾಯಿ. ಇದು ತರಕಾರಿಗೂ ಯೋಗ್ಯವಲ್ಲ. ಇದನ್ನು ಕೆಲವೆಡೆ ಉಮ್ಮತ್ತಿಕಾಯಿ ಎಂದು ಕೆಲವೆಡೆ ಹೇಳುತ್ತಾರೆಂದು ನಾಗರಾಜ್ ಬರೆದಿದ್ದರು. ವೈಜ್ಞಾನಿಕವಾಗಿ ಇದನ್ನು ದತೂರ ಸ್ಟ್ರಾಮೋನಿಯಂ (Datura stramonium) ಅಥವಾ ದತೂರ ಮೆಟೆಲ್ (Datura metel) ವಿಶೇಷ ಎಂದರೆ ಈಗ ಕೊರೊನಾ ಭೀತಿಯ ಸಮಯದಲ್ಲಿ ನಡೆದ ಯುಗಾದಿ ಹಬ್ಬದಲ್ಲಿ ಮನೆಯ ಮುಂದೆ ಕಟ್ಟುವ ಮಾವಿನ ತಳಿರು ತೋರಣದಲ್ಲಿ ಈ ಕಾಯಿಯನ್ನೂ ಸೇರಿಸಿ ಕೆಲವರು ಕಟ್ಟಿದರಂತೆ. ಇದು ಕೊರೊನಾದಂತೆಯೇ ಕಾಣುವುದರಿಂದಾಗಿ, ಕೊರೊನಾವನ್ನು ದೂರವಿರಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ಇದನ್ನು ಕಟ್ಟಿದರು ಎಂದು ಚಿತ್ರಗಳು ಬಂದವು. ಇದನ್ನು ಮೊದಲು ಮಾಡಿದವರು ಹಾಗೆ ನಂಬಿಕೆ ಇಟ್ಟುಕೊಂಡು ಮಾಡಿದರೋ, ಅಥವಾ ತಮಾಷೆಗೆ ಮಾಡಿದರೋ ಗೊತ್ತಿಲ್ಲ. ಆದರೆ ಹಲವರು ಇದನ್ನು ಪಾಲಿಸಿದರು ಎನ್ನುವುದನ್ನೂ ಕೇಳಿದೆವು. ಅರ್ಥಾತ್, ಮಾನವಶಾಸ್ತ್ರಜ್ಞರು ಹೇಳುವ ರೀತಿಯಲ್ಲಿ ಇದು ಒಂದು ಕಲ್ಟ್ ಆಚರಣೆಯಾಗಿ ಬದಲಾಯಿತು. ಈ ಆಚರಣೆ ಮುಂದುವರೆಯುತ್ತದೆಯೋ ಇಲ್ಲವೋ ಬಲ್ಲವರಿಲ್ಲ. ಆದರೆ ಹೀಗೆ ಆಚರಣೆಗಳು ಉದ್ಭವಿಸಬಲ್ಲುವು ಎನ್ನುವುದಕ್ಕೆ ಒಂದು ಜೀವಂತ ಉದಾಹರಣೆಯಂತೂ ಸಿಕ್ಕಿತು.
ಸ್ವಾರಸ್ಯವೆಂದರೆ ಈ ಆಚರಣೆಯಲ್ಲಿ ಏನೂ ಅರ್ಥವಿಲ್ಲ ಎನಿಸಿದರೆ ಜನ ಇದನ್ನು ನಿಲ್ಲಿಸಿಬಿಡುವರೇ? ಮುಂದುವರೆಸುವರೇ? ಅಥವಾ ಇನ್ನೊಂದು ಐವತ್ತು ವರ್ಷ ಇದೇ ಆಚರಣೆ ಮುಂದುವರೆದಿದ್ದರೆ, ಅಂದಿನವರು ಇದನ್ನು ಹೇಗೆ ಅರ್ಥೈಸಬಹುದು? ಇದು ಏಕೆ ಬಂದಿತು ಎನ್ನುವುದರ ಮೂಲ ಹಿಡಿಯುವರೋ ಅಥವಾ ಈ ಉಮ್ಮತ್ತಿ ಕಾಯಿಯಲ್ಲಿ ಇದ್ದ ಏನೋ ಅಂಶ ನಮಗೆ ತಿಳಿದಿಲ್ಲ. ನಮ್ಮ ಪೂರ್ವಜರಿಗೆ ತಿಳಿದಿತ್ತು. ಅದರಿಂದಾಗಿಯೇ ಅದನ್ನು ಬಳಸಿದ್ದರು ಎನ್ನಬಹುದೋ? ಅಂದ ಹಾಗೆ ಈ ಕಾಯಿಯ ಬೀಜ ಉನ್ಮತ್ತರನ್ನಾಗಿ ಮಾಡುತ್ತದೆ ಎನ್ನುವುದರಿಂದಾಗಿ ಇದನ್ನು ಉಮ್ಮತ್ತಿ ಕಾಯಿ ಎನ್ನುತ್ತಾರೆ ಎಂದು ಗೆಳೆಯ ಕೃಷ್ಣಪ್ರಸಾದ್ ಹೇಳಿದರು. ಇದು ಬೇಧಿಯನ್ನೂ ಉಂಟು ಮಾಡುತ್ತದಂತೆ. ಗೂರಲು ಕಡಿಮೆ ಮಾಡುವ ಗುಣವೂ ಇದಕ್ಕೆ ಇದೆ ಎಂದು ಆಯುರ್ವೇದದಲ್ಲಿ ಹೇಳಿದ್ದಾರೆ ಎಂದು ಎಲ್ ಸಿ ನಾಗರಾಜರ ಪುಟದಲ್ಲಿ ಯಾರೋ ದಾಖಲಿಸಿದ್ದಾರೆ. . ಬಿ.ಎಸ್.ಸೋಮಶೇಖರ್ ಅವರ ಪ್ರಕಾರ ಕೊಳ್ಳೇಗಾಲ ಮತ್ತು ಮಳವಳ್ಳಿಯ ಕಡೆ ಅಸ್ತಮಾ ಇರುವವರಿಗೆ ಇದರ ಎಲೆಯನ್ನು ಸುರುಳಿ ಸುತ್ತಿ ಹೊಗೆ ಸೇದಲು ಕೊಡುವುದೂ ಉಂಟು. ಇವೆಲ್ಲವೂ ನಿಜವಾಗಿದ್ದರೆ, ಅಂದರೆ ನಿಜಕ್ಕೂ ಚಿಕಿತ್ಸಕ ವಿಧಾನಗಳಾಗಿದ್ದರೆ, ಬಹುಶಃ ಮುಂದೆ ೨೦೮೦ರಲ್ಲಿ ಯಾರಾದರೂ ಸಂಶೋಧನೆ ನಡೆಸಿ, ಈ ಉಮ್ಮತ್ತಿ ಕಾಯಿ ಕೊರೊನಾಗೆ ಚಿಕಿತ್ಸೆಯಾಗಿದ್ದಿರಬೇಕು. ಹಾಗಾಗಿ ಅದನ್ನು ಕಾಪಾಡಿಕೊಳ್ಳಿ ಎಂದು ಈ ನಡವಳಿಕೆ ಬಂದಿರಬೇಕು ಎಂದು ತರ್ಕಿಸಲೂ ಬಹುದು. ಅದ್ಯಾವುದೂ ಇಲ್ಲದೆಯೂ ಒಂದು ಆಚರಣೆ, ಮೌಢ್ಯ, ಸಾಮುದಾಯಿಕ ವಿಧಿಯಾಗಿಬಿಡಬಹುದು ಎನ್ನುವುದಕ್ಕೆ ಈ ಉಮ್ಮತ್ತಿ ಕಾಯಿ ತೋರಣವನ್ನೇರಿದ್ದು ಒಳ್ಳೆಯ ಉದಾಹರಣೆ.
ನಮ್ಮ ಆಚರಣೆಗಳೆಲ್ಲವೂ ಹೀಗೇ ಎನ್ನಲಾರೆ. ಆದರೆ ಈ ಸಾಧ್ಯತೆ ಬಲು ಸರಳವಾದ ವಿವರಣೆ. ಐನ್ಸ್ಟೀನ್ ಹೇಳಿಲ್ಲವೇ? “ಯಾವುದಾದರೂ ಪ್ರಶ್ನೆಗೆ ಇರುವ ಅತಿ ಸರಳ ವಿವರಣೆಯೇ ಅದರ ಅತ್ಯುತ್ತಮ ವಿವರಣೆ.” ಆಚರಣೆಗಳಿಗೆ ಇಲ್ಲ, ಸಲ್ಲದ ವೈಜ್ಞಾನಿಕ ವಿವರಣೆಗಳನ್ನು ಕೊಡುವ ಮುನ್ನ ಈ ಸರಳ ಸಾಧ್ಯತೆಯನ್ನೂ ಗಮನಿಸುವುದು ಒಳ್ಳೆಯದು ಅಲ್ಲವೇ?