ಕೀಟವೋಡಿಸುವ ಕೆಸುವಿನ ಗೆಡ್ಡೆ
ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ಸಂಶೋಧನಾಲಯದ ವಿಜ್ಞಾನಿ ಯಲ್ಲಪ್ಪ ರಾಜಶೇಖರ್ ಮತ್ತು ಸಂಗಡಿಗರ ಪ್ರಕಾರ ಕರ್ನಾಟಕದಲ್ಲಿ ಬೆಳೆಯುವ ಕೆಸವಿನ ದಂಟಿನ ಗೆಡ್ಡೆಗಳಲ್ಲಿ ಕೀಟಗಳನ್ನು ದೂರವಿಡುವ ಶಕ್ತಿಯಿದೆ.
ಕೆಸುವಿನ ದಂಟು
ಕರಾವಳಿಯಲ್ಲಿ ಹೆಚ್ಚು ಬಳಕೆಯಾಗುವ ಕೆಸುವಿನ ದಂಟು ಹಾಗೂ ಕೆಸುವಿನ ಗೆಡ್ಡೆಗಳ ಆಹಾರ ಗುಣಗಳ ಬಗ್ಗೆ ಹೇಳಬೇಕಿಲ್ಲ. ಕರಾವಳಿಗರು ಇದರ ಎಲೆಯಿಂದ ಮಾಡುವ ‘ಪತ್ರೊಡೆ’ ಆ ಪ್ರದೇಶವನ್ನು ಪ್ರತಿನಿಧಿಸುವ ತಿನಿಸು. ಹಾಗೆಯೇ ಗೆಡ್ಡೆಗಳೂ ವಿಶೇಷ ಆಹಾರ. ಗೆಡ್ಡೆಗಳಲ್ಲಿರುವ ಪಿಷ್ಠ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯನ್ನು ಉಲ್ಬಣಿಸದೆಯೇ ಶಕ್ತಿಯೂಡಿಸುತ್ತದೆ ಎನ್ನುವುದು ಪೌಷ್ಠಿಕ ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಕೊಲೊಕೇಶಿಯ ಎಸ್ಕುಲೆಂಟಾ ಎಂದು ಹೆಸರಿಸಿರುವ ಈ ಗಿಡದಲ್ಲಿ ಕೀಟಗಳನ್ನು ದೂರವಿಡುವ ರಾಸಾಯನಿಕಗಳೂ ಇವೆ ಎನ್ನುತ್ತಾರೆ ರಾಜಶೇಖರ್.
ಸಸ್ಯಮೂಲದ ಹಲವು ರಾಸಾಯನಿಕಗಳನ್ನು ಕೀಟನಾಶ ಮಾಡಲು ಬಳಸಲಾಗುತ್ತಿದೆ. ಉದಾಹರಣೆಗೆ, ಬೇವಿನಲ್ಲಿರುವ ಅಜಾಡಿರಾಕ್ಟಿನ್. ಇದನ್ನು ಇತರೆ ವಸ್ತುಗಳ ಜೊತೆಗೆ ಬೆರೆಸಿ ಕೀಟಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಬಯಲುಗಾಡುಗಳಲ್ಲಿ ಕಾಣಬರುವ ಮಾಕಳಿಬೇರಿ (ಡೆಕಾಲೆಪಿಸ್ ಹ್ಯಾಮಿಲ್ಟೋನಿ) ನಲ್ಲಿಯೂ ಕೀಟಗಳನ್ನು ಬೆದರಿಸುವ ರಾಸಾಯನಿಕಗಳಿವೆಯೆಂದು ಗುರುತಿಸಲಾಗಿದೆ. ಸಾಧಾರಣ ಸೊಳ್ಳೆಗಳನ್ನು ದೂರವಿಡಲು ಬಳಸುವ ಸ್ಪ್ರೇಗಳಲ್ಲಿ ಚೆಂಡುಮಲ್ಲಿಗೆ ಹೂವಿನಲ್ಲಿರುವ ಪೈರೆತ್ರಿನ್ ರಾಸಾಯನಿಕವನ್ನು ಉಪಯೋಗಿಸುತ್ತಾರೆ.
ಇವೆಲ್ಲವೂ ಇರುವಾಗ ಹೊಸ ರಾಸಾಯನಿಕವೇಕೆ? ರಾಜಶೇಖರ್ ಅವರ ಪ್ರಕಾರ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ಇವ್ಯಾವುವೂ ಉಪಯುಕ್ತವಲ್ಲ. ಪೈರೆತ್ರಿನ್ ಆಹಾರ ವಸ್ತುಗಳಲ್ಲಿ ಬಳಸಲು ಯೋಗ್ಯವಲ್ಲ. ಬೇವಿನ ರಾಸಾಯನಿಕ ಗಾಳಿಯಲ್ಲಿ ಆವಿಯಾಗದೆ ಇರುವುದರಿಂದ ಧಾನ್ಯಗಳಲ್ಲಿ ಬೆರೆಸಿಟ್ಟರೂ ನಿಷ್ಪ್ರಯೋಜಕ. ಹೀಗಾಗಿ ಧಾನ್ಯಗಳನ್ನು ಕೂಡಿಡುವುದಕ್ಕೆ ಸುಲಭವಾಗಿ ಆವಿಯಾಗುವಂತಹ ಕೀಟನಾಶಿಯ ಅವಶ್ಯಕತೆ ಇದೆ. ಇದಕ್ಕಾಗಿ ನಡೆದಿರುವ ಶೋಧಗಳಲ್ಲಿ ಕೆಸುವಿನ ದಂಟಿನ ರಾಸಾಯನಿಕವೂ ಕೂಡಿದೆ.
ಕೆಸುವಿನ ಗೆಡ್ಡೆ
ಕೆಸುವಿನ ಗೆಡ್ಡೆಯಿಂದ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರತ್ಯೇಕಿಸಿದ ಘಟಕಗಳಲ್ಲಿ ಮೆಥನಾಲ್ ನಲ್ಲಿ ಕರಗುವ ವಸ್ತುವೊಂದು ಅತಿ ಹೆಚ್ಚಿನ ಕೀಟಾಹಾರಿ ಗುಣವನ್ನು ತೋರಿಸಿತು. ಇದನ್ನು ಪ್ರತ್ಯೇಕಿಸಿ, ಶುದ್ಧಗೊಳಿಸಿದ ರಾಜಶೇಖರ್ ತಂಡ ಅದರ ರಚನೆಯನ್ನೂ ಪತ್ತೆ ಮಾಡಿ, ಅದು 2,3-ಡೈಮೀಥೈಲ್ ಮ್ಯಾಲೆಯಿಕ್ ಅನ್ ಹೈಡ್ರೈಡ್ ಎಂದು ಗುರುತಿಸಿದೆ. ಇದು ಕೂಡಿಟ್ಟ ಧಾನ್ಯಗಳನ್ನು ಸಾಮಾನ್ಯವಾಗಿ ಕಾಡುವ ನೊಣ, ಜಿರಲೆ, ಹಿಟ್ಟಿನ ಹುಳಗಳನ್ನು ಕೃತಕ ರಾಸಾಯನಿಕ ಮೀಥೈಲ್ ಬ್ರೋಮೈಡ್ ಹಾಗೂ ಫಾಸ್ಫೀನ್ ನಷ್ಟೆ ಸಮರ್ಥವಾಗಿ ಕೊಲ್ಲಬಲ್ಲದು. ಒಂದೇ ರಾಸಾಯನಿಕ ಹಲವು ಕೀಟಗಳನ್ನು ಕೊಲ್ಲುವುದು ನಿಜಕ್ಕೂ ಲಾಭಕಾರಿ. ಕೆಸುವಿನ ಗೆಡ್ಡೆಯ ಈ ಅಂಶವನ್ನು ಪ್ರಯೋಗಿಸಿದ ಎರಡೇ ದಿನಗಳಲ್ಲಿ ಧಾನ್ಯಗಳಲ್ಲಿದ್ದ ಕೀಟಗಳ ಸಂಖ್ಯೆ ಅರೆಪಾಲಾಯಿತು. ಹಾಗೆಯೇ, ಇದು ಕೀಟಗಳ ಮರಿ (ಹುಳು) ಗಳನ್ನೂ ಬೆಳೆಯಗೊಡಲಿಲ್ಲವಂತೆ. ಇಷ್ಟಾದರೂ, ಈ ರಾಸಾಯನಿಕ ಬೆರೆಸಿದ ಬೀಜಗಳು ಯಾವುದೇ ಆತಂಕವಿಲ್ಲದೆ ನೂರಕ್ಕೆ ತೊಂಬತ್ತು ಪಾಲು ಮೊಳೆತವು. ಅರ್ಥಾತ್, ಕೀಟಗಳನ್ನು ಕೊಲ್ಲುವುದಲ್ಲದೆ, ಬೀಜಗಳಿಗೆ ಇದರಿಂದ ಯಾವ ಹಾನಿಯೂ ಇಲ್ಲ.
ಮೆಕ್ಕೆಜೋಳವನ್ನು ಕಾಡುವ ಹುಳು, ಗೋದಿಹಿಟ್ಟನ್ನು ಹಾಳುಗೆಡವುವ ಹುಳು, ನೊಣ ಮತ್ತು ಜಿರಲೆಗಳ ಕಾಟವನ್ನು ತಡೆಯಲು ಇದು ಶಕ್ತವೇನೋ ಹೌದು. ಆದರೆ ಆಹಾರದಲ್ಲಿ ಉಪಯೋಗಿಸಿದರೆ ಅಪಾಯವಿಲ್ಲವೇ? ಎಂದಿರಾ. ಇದನ್ನು ಪಡೆದ ಗೆಡ್ಡೆಯನ್ನು ನಾವು ಆಹಾರವಾಗಿ ಬಳಸುವುದು ಇದ್ದೇ ಇದೆ. ಹೀಗಾಗಿ ಆ ಗೆಡ್ಡೆಯಲ್ಲಿರುವ ರಾಸಾಯನಿಕ ನಮಗಂತೂ ಅಪಾಯಕಾರಿಯಾಗಿರಲಿಕ್ಕಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ.
ಹಾಗಿದ್ದರೆ ಇದು ಯಾವಾಗ ಬಳಕೆಗೆ ಸಿಗಬಹುದು ಎನ್ನುವುದು ಮುಂದಿನ ಪ್ರಶ್ನೆ. ಇನ್ನು ಇದರ ಕ್ಷಮತೆ ಹಾಗೂ ಬಳಕೆಯ ವಿಧಾನಗಳು ಹದಗೊಳ್ಳಬೇಕು. ಅನಂತರವಷ್ಟೆ ಇದರ ಸಾರ್ವತ್ರಿಕೆ ಬಳಕೆಯ ಸುದ್ದಿ. ಅದಕ್ಕೆ ಇನ್ನೂ ಹಲವು ತಿಂಗಳೋ, ವರ್ಷಗಳೋ ಕಾಯಬೇಕಷ್ಟೆ.
ಆಕರ:
Rajashekar, Y. et al. 2, 3-Dimethylmaleic anhydride (3, 4-Dimethyl-2, 5-furandione): A
plant derived insecticidal molecule from Colocasia esculenta var. esculenta (L.) Schott. Sci. Rep. 6, 20546; published 3rd February 2016. doi: 10.1038/srep20546 (2016).