ಸೈಕಲ್ಲು ಬೀಳದಂತೆ ಸವಾರಿ ಮಾಡುವುದು ಹೇಗೆ?

‘ಅಮ್ಮಾವ್ರ ಡ್ರೈವರ್’ ಇದು ನನ್ನ ಗೆಳೆಯರು ನನಗೆ ಇಟ್ಟಿರುವ ಹೆಸರು. ಮನೆಯಲ್ಲಿ ಎರಡು ಸ್ಕೂಟರ್, ಒಂದು ಕಾರಿದ್ದರೂ ಎಲ್ಲೇ ಹೋಗಬೇಕಿದ್ದರೂ ನನ್ನ ಹೆಂಡತಿಗೆ ನಾನೇ ಡ್ರೈವರ್ರು. ಅವಳಿಗೆ ಡ್ರೈವಿಂಗ್ ಬರೋದಿಲ್ಲ ಅಂತಲ್ಲ. ಕಾರು, ಸ್ಕೂಟರ್ ಡ್ರೈವಿಂಗ್ ಕಲಿತಾಗಿದೆ. ಆದರೆ ಸ್ಕೂಟರ್ ಓಡಿಸಬೇಕೆಂದರೆ ಹೆದರಿಕೆಯಂತೆ. ಚಿಕ್ಕಂದಿನಲ್ಲಿ ಸೈಕಲ್ಲು ಓಡಿಸುವಾಗ ಬಿದ್ದು ಮಾಡಿಕೊಂಡ ಗಾಯವನ್ನು ಪುರಾವೆಯಾಗಿ ತೋರಿಸಿ ಬಾಯಿ ಮುಚ್ಚಿಸುತ್ತಾಳೆ. ಸೈಕಲ್ಲು ಸ್ಕೂಟರ್ರು ಬ್ಯಾಲೆನ್ಸ್ ಮಾಡೋದಿಕ್ಕೆ ಆಗೋದಿಲ್ಲ ಅನ್ನೋದು ಅವಳ ಅಂಬೋಣ.

ಫಿಸಿಕ್ಸ್ ಓದಿದ ನನಗೆ ಯಾಕೋ ಅವಳ ಮಾತಿನ ಮೇಲೆ ನಂಬಿಕೆ ಇಲ್ಲವೆನ್ನಿ. ಏಕೆಂದರೆ ಸೈಕಲ್ಲಿನ ಚಕ್ರದ ರೀತಿ ಗಿರ್ರನೆ ತಿರುಗುವ ಯಾವುದೇ ಚಕ್ರವೂ ದಿಕ್ಕು ಬದಲಿಸುವುದಿಲ್ಲ. ಗೈರೋಸ್ಕೋಪ್ ಪರಿಣಾಮ ಎನ್ನುವ ಇದು ಬಹಳ ಉಪಯುಕ್ತ ವಿದ್ಯಮಾನ. ಗಿರ್ರನೆ  ವೇಗದಿಂದ ತಿರುಗುತ್ತಿರುವ ಬುಗುರಿಯನ್ನು ಅತ್ತಿತ್ತ ವಾಲಾಡಿಸಿದರೂ ಅದು ಬೀಳುವುದಿಲ್ಲವಷ್ಟೆ. ಇದೇ ಗೈರೋಸ್ಕೋಪು ಪರಿಣಾಮ. ಬುಗುರಿಯ ವೇಗ ಕಡಿಮೆಯಾದಲ್ಲದೆ ಅದು ಧರೆಗೆ ಒರಗುವುದಿಲ್ಲ.

ಸ್ವಲ್ಪ ವೇಗವಾಗಿ ಸೈಕಲ್ಲು ಓಡಿಸಿದರೆ ಸಾಕು. ಸೈಕಲ್ಲು ತನ್ನಂತಾನೇ ಸಮತೋಲ ಕಾಯ್ದುಕೊಳ್ಳುತ್ತದೆ ಎನ್ನುವುದು ನಾನು ತರಗತಿಯಲ್ಲಿ ಕಲಿತ ಪಾಠ. ಇದನ್ನು ಹೇಳಿದರೆ, ಅದು ತರಗತಿಯ ಪಾಠ, ಬದುಕಿನದಲ್ಲ. ನಾನು ವೇಗವಾಗಿ ಓಡಿಸಲು ಸಾಧ್ಯವಿಲ್ಲ ಅನ್ನುತ್ತಾಳೆ ನನ್ನವಳು. ಇಂತಹ ಮಾತಿಗೆ ಎದುರಾಡಲಾದೀತೇ?

ಆದರೂ ತರಗತಿಯಲ್ಲಿ ಕಲಿತ ಪಾಠ ತಪ್ಪೇ ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಇದ್ದೇ ಇತ್ತು. ಮೊನ್ನೆ ಇದಕ್ಕೆ ಉತ್ತರ ಕೊಡುವ ಸಂಶೋಧನೆಯೊಂದು ಪ್ರಕಟವಾಗಿದೆ. ಅಮೆರಿಕೆಯ ಮಿಶಿಗನ್ ವಿಶ್ವವಿದ್ಯಾನಿಲಯದ ಇಂಜಿನೀಯರುಗಳು ‘ಬೈಸಿಕಲ್ಲಿನಲ್ಲಿ ಸಮತೋಲ ಕಾಯ್ದುಕೊಳ್ಳುವ ಕೌಶಲ್ಯ’ (On the Skills of Balancing While Riding a Bicycle; doi:10.1371/journal.pone.0149340) ಎಂಬ ಪ್ರಬಂಧದಲ್ಲಿ ಪರಿಣತ ಬೈಸಿಕಲ್ಲು ಸವಾರರಿಗೂ, ನನ್ನ ಮಡದಿಯಂತಹ ಹೊಸಸವಾರರಿಗೂ ಸಮತೋಲ ಕಾಯ್ದುಕೊಳ್ಳಲು ಇರುವ ತೊಂದರೆಗಳೇನೆಂದು ಪರೀಕ್ಷಿಸಿದ್ದಾರೆ. ಪರಿಣತರು ಅದು ಹೇಗೆ ಸಮತೋಲವನ್ನು ಕಾಯ್ದುಕೊಳ್ಳಬಲ್ಲರು ಎನ್ನುವುದನ್ನು ವಿಶ್ಲೇಷಿಸಿದ್ದಾರೆ.

bicyclemechanics

ಬೈಸಿಕಲ್ ಸವಾರರ ಪರೀಕ್ಷೆಗೆ ವಿಶೇಷ ಅಟ್ಟಣಿಗೆ. ಚಿತ್ರ ಕೃಪೆ: ಪಿಎಲ್ಓಎಸ್ ಒನ್. (www.plosone.org)

ಬೈಸಿಕಲ್ಲು ಓಡಿಸುವವರನ್ನು ನೀವು ನೋಡಿದ್ದರೆ, ಈ ಪಾಠ ಸುಲಭವಾಗಿ ಅರ್ಥವಾಗುತ್ತದೆ. ಮುಂದೆ ಹೋಗುತ್ತಿರುವವ ಎಡಕ್ಕೆ ಹೋಗುತ್ತಾನೋ, ಬಲಕ್ಕೆ ಹೋಗುತ್ತಾನೋ ಎನ್ನುವ ಅನುಮಾನ ಪ್ರತಿ ಕ್ಷಣವೂ ನಿಮಗೆ ಕಾಡುತ್ತಲೇ ಇರುತ್ತದೆ. ಏಕೆಂದರೆ ಸವಾರ ನೆಟ್ಟಗೇ ಸವಾರಿ ಮಾಡುತ್ತಿದ್ದರೂ, ಸೈಕಲ್ಲಿನ ಹ್ಯಾಂಡಲ್ಲು ಮಾತ್ರ ಇತ್ತ ಒಮ್ಮೆ, ಅತ್ತ ಒಮ್ಮೆ ತಿರುಗುತ್ತಿರುತ್ತದೆ. ಹಿಂಬಾಲಿಸುವ ವಾಹನಗಳಿಗೆ ಗೊಂದಲವುಂಟು ಮಾಡುತ್ತದೆ. ಹೀಗೆ ಹ್ಯಾಂಡಲ್ ತಿರುಗಿಸುವುದು ಬೈಸಿಕಲ್ಲು ಸವಾರನ ಶೋಕಿಯೇನಲ್ಲ. ಅದು ಅವನಿಗೆ ಅನಿವಾರ್ಯ ಎನ್ನುತ್ತದೆ ಫಿಸಿಕ್ಸ್.

bicyclemechanics2-kan.jpg

ಸವಾರ ಹಾಗೂ ಬೈಸಿಕಲ್ಲಿನ ರಾಶಿ, ಸೈಕಲ್ಲಿನ ಚಲನೆಯ ವೇಗ ಹಾಗೂ ಸವಾರನ ವಾಲಾಟ ಸೈಕಲ್ಲಿನ ಸಮತೋಲವನ್ನು ಕಾಯ್ದುಕೊಳ್ಳಲು ಬೇಕಾಗುವ ಬಲಗಳು

ಎರಡೇ ಚಕ್ರದ ಆಸರೆಯಲ್ಲಿ ನಿಂತ ಸೈಕಲ್ಲು ಹಾಗೂ ಅದರ ಸವಾರನ ತೂಕವೆಲ್ಲವೂ  (ಚಿತ್ರದಲ್ಲಿ ರಾಶಿ ಕೇಂದ್ರ) ಸೀಟಿನ ಕೆಳಗಿರುವ ನೆಲದತ್ತಲೇ ಇರಬೇಕು. ಸ್ವಲ್ಪ ಬಲಕ್ಕೋ, ಎಡಕ್ಕೋ ಸರಿದರೆ ಸೈಕಲ್ಲು ಧರೆಗೊರಗುತ್ತದೆ. ಈ ಸಮತೋಲವನ್ನು ಕಾಯ್ದುಕೊಳ್ಳಲು ಎರಡು ಉಪಾಯಗಳಿವೆಯಂತೆ. ಮೊದಲನೆಯದು ಹ್ಯಾಂಡಲ್ ತಿರುಗಿಸುತ್ತಿರುವುದು. ಎರಡನೆಯದು ಸವಾರನ ವಾಲಾಟ. ಇದ್ದಕ್ಕಿದ್ದಹಾಗೆ ಏರು ಎದುರಾದಾಗ ಸೈಕಲ್ ಸವಾರರು ಸೀಟು ಬಿಟ್ಟೆದ್ದು ಬಲವಾಗಿ ಪೆಡಲ್ ಮಾಡುವುದನ್ನು ಕಂಡಿದ್ದೀರಷ್ಟೆ. ಹೀಗೆ ನಿಂತುಕೊಂಡು ಪೆಡಲ್ ಮಾಡುವುದು ಹೆಚ್ಚು ಬಲ ಬಿಡುವುದಕ್ಕಲ್ಲ! ಏರನ್ನು ಹತ್ತುತ್ತಿರುವ ಸೈಕಲ್ಲಿನ ವೇಗ ಸಹಜವಾಗಿಯೇ ಕಡಿಮೆಯಾದಾಗ ಸಮತೋಲ ಕಾಯ್ದುಕೊಳ್ಳಬೇಕಾದರೆ ದೇಹವನ್ನು ವಾಲಿಸಬೇಕಾಗುತ್ತದೆ. ಇದಕ್ಕಾಗಿ ಎದ್ದು ನಿಂತು ಅತ್ತಿತ್ತ ನರ್ತಿಸುತ್ತಾ ಪೆಡಲ್ ಮಾಡಬೇಕಾಗುತ್ತದೆ.

ಹೌದು. ಸೈಕಲ್ಲು ಸವಾರಿ ಮಾಡುವವರಿಗೆ ಇವು ನಿತ್ಯಾನುಭವ. ಇದರಲ್ಲಿ ಮಿಶಿಗನ್ ವಿಜ್ಞಾನಿಗಳಿಗೆ ಹೊಸತೇನು ಕಂಡಿತೋ? ಹ್ಯಾಂಡಲ್ ಚಾಲನೆ ಹಾಗೂ ದೇಹದ ವಾಲಾಟದಲ್ಲಿ ಯಾವುದನ್ನು ಸವಾರರು ಹೇಗೆ, ಯಾವಾಗ, ಎಷ್ಟು ಬಳಸುತ್ತಾರೆ ಎನ್ನುವುದು ಮಿಶಿಗನ್ ವಿವಿಯ ನೀಲ್ ಪರ್ಕಿನ್ಸ, ಜೇಮ್ಸ್ ಆಶ್ಟನ್-ಮಿಲರ್ ಮತ್ತು ಸ್ಟೀಫನ್ ಕೈನ್ ಅವರನ್ನು ಕಾಡಿದ ಪ್ರಶ್ನೆ. ಸವಾರಿ ಮಾಡುತ್ತಿರುವ ಸೈಕಲ್ಲು ನೆಲಕ್ಕೆ ಬೀಳದಂತೆ ಪರಿಣತರು ಉಪಯೋಗಿಸುವ ತಂತ್ರಗಳನ್ನೇ ಹೊಸಬರೂ ಉಪಯೋಗಿಸುತ್ತಾರೋ? ಅಥವಾ ಪರಿಣತರು ಬೇರೇನಾದರೂ ತಂತ್ರವನ್ನು ಬಳಸುತ್ತಿರಬಹುದೋ ಎಂದು ಇವರಿಗೆ ಸಂದೇಹ ಬಂದಿದೆ. ಅದಕ್ಕಾಗಿ ಒಂದು ಪ್ರಯೋಗವನ್ನು ಮಾಡಿದ್ದಾರೆ.

ಒಂದು ಉರುಳೆಗಳ ಅಟ್ಟಣಿಗೆ ಕಟ್ಟಿ, ಅದರ ಮೇಲೆ ಸೈಕಲ್ಲನ್ನು ಓಡಿಸಲು ಹೇಳಿದ್ದಾರೆ. ಈ ಅಟ್ಟಣಿಗೆಗೆ ಅಲ್ಲಲ್ಲಿ ಬಲವನ್ನು ಅಳೆಯುವ ಸಂವೇದಕಗಳನ್ನು ಜೋಡಿಸಿದ್ದಾರೆ. ಸೈಕಲ್ಲು ಓಡಿಸುವಾಗ ಸವಾರನ ವಾಲಾಟಕ್ಕೆ ತಕ್ಕಂತೆ ಅಟ್ಟಣಿಗೆಯೂ ಜರುಗುವಂತೆ ಮಾಡಿ, ವಾಲಾಟ ಎಷ್ಟಿರಬಹುದು ಎಂದು ಅಳೆದಿದ್ದಾರೆ. ಹತ್ತು ಜನ ಹೊಸಬರು ಹಾಗೂ ಸೈಕಲ್ ಸವಾರಿ ಪರಿಣತರಿಂದ  ಈ ವಿಶಿಷ್ಟ ಸೈಕಲ್ ಸವಾರಿ ಮಾಡಿಸಿದ್ದಾರೆ. ಸೈಕಲ್ಲಿನ ವೇಗವನ್ನು ಉರುಳೆಗಳ ಮೂಲಕ ನಿಯಂತ್ರಿಸಿ, ವಿವಿಧ ವೇಗದಲ್ಲಿ ಚಲಿಸುವಾಗ ಹ್ಯಾಂಡಲ್ಲಿನ ಚಲನೆ ಹಾಗೂ ಸವಾರರ ಚಲನೆಯನ್ನು ದಾಖಲಿಸಿದ್ದಾರೆ. ಇವೆಲ್ಲವನ್ನೂ ವಿಶ್ಲೇಷಿಸಿದ್ದಾರೆ.

ಈ ಹಿಂದೆ ಈ ಬಗ್ಗೆ ನಡೆದಿದ್ದ ಅಧ್ಯಯನಗಳಲ್ಲಿ ಹೊಸ ಸವಾರರು ಹ್ಯಾಂಡಲ್ಲನ್ನು ತಿರುಗಿಸುವುದರ ಜೊತೆ, ಜೊತೆಗೇ ವಾಲಾಡುತ್ತ ಸೈಕಲ್ಲು ಬೀಳದಂತೆ ತಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದಿತ್ತು. ಆದರೆ ಪರಿಣತರು ಒಂದೋ ಹ್ಯಾಂಡಲ್ಲನ್ನು ತಿರುಗಿಸಿ ಅಥವಾ ವಾಲಾಟದಿಂದಷ್ಟೆ ಸೈಕಲ್ಲಿನ ಸಮತೋಲವನ್ನು ಕಾಯ್ದುಕೊಳ್ಳಬಲ್ಲರು ಎಂದು ಊಹಿಸಿದ್ದರು. ಅರ್ಥಾತ್, ಪರಿಣತರು ಈ ಎರಡೂ ತಂತ್ರಗಳನ್ನು ಒಟ್ಟಾಗಿ ಬಳಸುವುದಿಲ್ಲ ಎಂಬ ತೀರ್ಮಾನವಿತ್ತು.

ಮಿಶಿಗನ್ ಇಂಜಿನೀಯರುಗಳ ಪ್ರಯೋಗ ಇನ್ನೊಂದು ಹೊಸ ಅಂಶವನ್ನು ಬೆಳಕಿಗೆ ತಂದಿದೆ. ಸೈಕಲ್ಲು ನಿಧಾನವಾಗಿ ಚಲಿಸುತ್ತಲಿರುವವರೆಗೂ ಹೊಸಬರು ಹಾಗೂ ಪರಿಣತರ ತಂತ್ರಗಳಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಇಬ್ಬರೂ ಹ್ಯಾಂಡಲ್ ತಿರುಗಿಸುತ್ತಾ, ವಾಲಾಡುತ್ತ ಸೈಕಲ್ಲನ್ನು ಬೀಳದಂತಿಡಲು ಸರ್ಕಸ್ ಮಾಡುತ್ತಾರೆ. ಒಮ್ಮೆ ಸೈಕಲ್ಲು ವೇಗವಾಗಿ ಚಲಿಸಲು ಆರಂಭಿಸಿತೋ, ಕತೆಯೇ ಬೇರೆ. ಹೊಸಬರು ಇನ್ನೂ ಮೊದಲಿನಂತೆಯೇ ಸರ್ಕಸ್ ಮಾಡುತ್ತಿರುತ್ತಾರೆ. ಆದರೆ ಪರಿಣತರು ಹ್ಯಾಂಡಲ್ಲಿನ ಚಿಂತೆಯನ್ನೇ ಬಿಟ್ಟು ಕೇವಲ ವಾಲಾಟದಿಂದಲೇ ಬೈಸಿಕಲ್ಲಿನ ಸಮತೋಲವನ್ನು ನಿಯಂತ್ರಿಸುತ್ತಾರಂತೆ. ಅದುವೂ ಅತ್ಯಲ್ಪ ವಾಲಾಟದಿಂದ. ಹೀಗಾಗಿ ಇವರು ವೇಗವಾಗಿ ಸೈಕಲ್ಲೊತ್ತುವಾಗ ವಾಲಾಡುತ್ತದ್ದಾರೆ ಎಂದೆನಿಸುವುದೇ ಇಲ್ಲ.

ಇದು ಓದಿದ ಮೇಲೆ ನನ್ನ ಹೆಂಡತಿಗೆ ಸೈಕಲ್ಲು ಕಲಿಸುವ ಚಿಂತೆ ಬಿಟ್ಟೇ ಬಿಟ್ಟಿದ್ದೇನೆ. ಏಕೆಂದರೆ ವೇಗವಾಗಿ ಹೋಗದೆ ಸಮತೋಲ ಕಾಯಲಾಗುವುದಿಲ್ಲ. ಈಕೆ ವೇಗವಾಗಿ ಹೋಗುವುದೇ ಇಲ್ಲ. ಇನ್ನು ಸೈಕಲ್ಲು ಬೀಳದೆ ಇರುವುದಾದರೂ ಹೇಗೆ?

ಆಕರ:

Cain SM, Ashton-Miller JA, Perkins NC, (2016) On the Skill of Balancing While Riding a Bicycle. PLoS ONE 11(2): e0149340. doi:10.1371/ journal.pone.0149340,

Published in: on ಮಾರ್ಚ್ 11, 2016 at 10:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಗುರುತ್ವದ ಅಲೆಗಳ ಪತ್ತೆ ಹೇಗೆ?

ligocombinedpickan

ನೇಚರ್ ಪತ್ರಿಕೆಯಲ್ಲಿ ಇಂದು ಪ್ರಕಟವಾದ ವಿವರಣಾತ್ಮಕ ಚಿತ್ರದ ಕನ್ನಡ ರೂಪ. 

Published in: on ಫೆಬ್ರವರಿ 17, 2016 at 5:31 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೆಂಕಿ ಮಾನವರು!

ಅಕಾರಣ ದೇಹ ದಹನ ಪವಾಡವೇ?!

ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಎರಡು ವರ್ಷದ ಹುಡುಗನೊಬ್ಬ ಸುದ್ದಿಯಾಗಿದ್ದ. ಚೆ್ನ್ನೈನ ಕೀಲ್ಪಾಕ್ ಆಸ್ಪತ್ರೆಗೆ ದಾಖಲಾದ ರಾಹುಲ್ ಹೆಸರಿನ ಈ ಪೋರನಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಅವನ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಮಾಧ್ಯಮದಲ್ಲಿ ಇದು ಸಾಕಷ್ಟು ಸುದ್ದಿಯಾಯಿತು. ಹಲವು ವಿಚಿತ್ರ ವಿವರಣೆಗಳನ್ನೂ ಕೆಲವರು ಕೊಟ್ಟರು. ಆನಂತರ ರಾಹುಲ್ ಮೈಮೇಲಿನ ಬೆಂಕಿ ಆರಿ ಹೋದ ಹಾಗೆಯೇ ಈ ಸುದ್ದಿಯೂ ಆರಿ ಶಾಂತವಾಯಿತು. ಕೀಲ್ಪಾಕ್ ಆಸ್ಪತ್ರೆಯ ವೈದ್ಯರು ಇದು ವಿಚಿತ್ರವಲ್ಲ. ಯಾರೋ ಬೇಕಂತಲೇ ರಾಹುಲ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದು ಎಲ್ಲೂ ವರದಿಯಾಗಲಿಲ್ಲ.

ಹೌದೇ. ಹೀಗೆ ಮನುಷ್ಯರಿಗೆ ಇದ್ದಕ್ಕಿದ್ದ ಹಾಗೆ ಬೆಂಕಿ ಹೊತ್ತಿಕೊಳ್ಳಬಹುದೇ? ಈ ಬಗ್ಗೆ ಚರ್ಚೆ ಇಂದಲ್ಲ ಹದಿನೆಂಟನೇ ಶತಮಾನದಿಂದಲೂ ನಡೆಯುತ್ತಿದೆ. ಇದೋ ಬಲು ಪ್ರಸಿದ್ಧಿ ಪಡೆದ ಪ್ರಪಂಚದ ಹತ್ತು ಇಂತಹ ಬೆಂಕಿಮಾನವರ ಕುರಿತು ವಿವರ ಇಲ್ಲಿದೆ. ಬಹಳ ಇತ್ತೀಚಿನ ಸುದ್ದಿ ಎಂದರೆ ಅಮೆರಿಕೆಯ ಮಹಿಳೆಯೊಬ್ಬಳದ್ದು. ಅತಿಯಾಗಿ ಮದ್ಯಪಾನ ಮಾಡಿದ ಈ ಮಹಿಳೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದದ್ದು ಕಳೆದ ವರ್ಷ ವರದಿಯಾಗಿತ್ತು. ಹದಿನೇಳನೇ ಶತಮಾನದಿಂದಲೂ ಹೀಗೆ ಅಕಾರಣ ಬೆಂಕಿ ಹೊತ್ತಿಕೊಳ್ಳುವ ಮಾನವರ ವಿಷಯದಲ್ಲಿ ಮದ್ಯಪಾನವೇ ದೋಷಿಯಾಗಿದೆ. ಅಕಾರಣ ದೇಹ ದಹನವನ್ನು ‘ಸ್ಪಾಂಟೇನಿಯಸ್ ಹ್ಯೂಮನ್ ಕಂಬಶ್ಚನ್’ (ಎಸ್.ಎಚ್.ಸಿ.) ಎನ್ನುತ್ತಾರೆ.

ಇವೆಲ್ಲ ಸುದ್ದಿಗಳನ್ನು ಕೇಳಿದಾಗ, ಇದು ನಿಜವಿರಬಹುದೇ? ಮೂಢನಂಬಿಕೆಯನ್ನು ಅಲ್ಲಗಳೆಯಲು ಹೋದಾಗ, ವಿಜ್ಞಾನಕ್ಕೆ ಎಲ್ಲವೂ ತಿಳಿಯುತ್ತದೆ ಎನ್ನುವುದು ತಪ್ಪು. ಇಂತಹ ವಿದ್ಯಮಾನಗಳು ಬಹುಶಃ ವಿಜ್ಞಾನಕ್ಕೂ ತಿಳಿಯದ ಕ್ರಿಯೆ ಇರಬಹುದು ಎನ್ನುವ ವಾದ ಕೇಳುತ್ತೇವೆ. ಹಾಗೆಯೇ ಇದೂ ಕೂಡ ನಮಗೆ ತಿಳಿಯದ್ದು ಏನಾದರೂ ಆಗಿರಬಹುದೇ? ಎಂದು ಭಾವಿಸಿದ್ದೆ. ವೀಕಿಪೀಡಿಯಾದಲ್ಲಿ ಈ ಬಗ್ಗೆ ತುಸು ದೀರ್ಘವಾದ ಲೇಖನವೇ ಇದೆ. ಆದರೆ ಅದುವೂ ಇದಮಿತ್ಥಂ ಎಂದಿಲ್ಲ.

ಈ ಹಿನ್ನೆಲೆಯಲ್ಲಿ ಇವತ್ತು ಬೇರೇನನ್ನೋ ಹುಡುಕುತ್ತಿದ್ದಾಗ 2012ರಲ್ಲಿ ಅಮೆರಿಕೆಯ ಟೆನೆಸೀ ವಿವಿಯ ಮಾನವ ಶಾಸ್ತ್ರಜ್ಞೆಆಂಜಿ ಕ್ರಿಸ್ಟೆನ್ಸನ್ ಜರ್ನಲ್ ಆಫ್ ಫೋರೆನ್ಸಿಕ್ಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದ ಶೋಧ ಪತ್ರ ಕಣ್ಣಿಗೆ ಬಿತ್ತು. ನಿಜವಾಗಿಯೂ ಮಾನವ ದೇಹಗಳು ಅಕಾರಣ ಜ್ವಲಿಸಬಲ್ಲವೇ? ಒಂದು ವೇಳೆ ಹೀಗೆ ಹೊತ್ತಿ ಉರಿದರೆ ಏನಾಗುತ್ತದೆ? ಎಂದು ಇವರು ಪರಿಶೀಲಿಸಿದ್ದರು. ಅಂದ ಹಾಗೆ ಯಾರನ್ನೂ ಬೆಂಕಿಗೆ ದೂಡಿಯೋ, ಬೆಂಕಿ ಹಚ್ಚಿಯೋ ಇವರು ಪರೀಕ್ಷೆ ಮಾಡಲಿಲ್ಲ. ವಯಸ್ಸಾದವರಲ್ಲಿ ಸವೆದ ಮೂಳೆ ಹಾಗೂ ಸಾಧಾರಣ ಮೂಳೆಯೆರಡನ್ನೂ ಬೆಂಕಿ ಹಚ್ಚಿ ಸುಟ್ಟರು. ಹಾಗೆಯೇ ಒಂದಿಷ್ಟು ಮಾನವ ಅಂಗಾಂಶವನ್ನೂ ಬೆಂಕಿ ಹಚ್ಚಿ ಸುಟ್ಟು, ಅದರಿಂದ ಬರುವ ಜ್ವಾಲೆಯ ಗುಣಗಳನ್ನು ಪರಿಶೀಲಿಸಿದರು.

ಇವರ ಈ ಪ್ರಯೋಗಕ್ಕೆ ಕಾರಣವಿಷ್ಟೆ. ಕಳೆದ ಮುನ್ನೂರು ವರ್ಷಗಳಲ್ಲಿ ಸುಮಾರು 200 ಇಂತಹ ಅಕಾರಣ ದೇಹ ದಹನದ ಸಂಗತಿಗಳು ವರದಿಯಾಗಿವೆ. ಈ ಎಲ್ಲವುಗಳನ್ನೂ ಗಮನಿಸಿದಾಗ ಕೆಲವು ಸಂಗತಿಗಳು ಸಾಮಾನ್ಯ. ಬಹುತೇಕ ಎಲ್ಲವೂ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆದಂಥವು. ಎರಡನೆಯದಾಗಿ ಯಾವುದನ್ನೂ ನೇರವಾಗಿ ಕಂಡವರಿಲ್ಲ. ಸುಟ್ಟು ಕರಿಕಲಾಗಿ ಬಿದ್ದ ಶವಗಳನ್ನಷ್ಟೆ ಕಂಡ ಸಂದರ್ಭಗಳು ಜಾಸ್ತಿ. ಮೂರನೆಯದಾಗಿ ದೇಹ ಸುಟ್ಟರೂ ಅದರ ಸುತ್ತ ಮುತ್ತಲಿನ ಯಾವ ವಸ್ತುಗಳೂ ಸುಟ್ಟಿರುವುದಿಲ್ಲ. ಅತಿ ಹೆಚ್ಚೆಂದರೆ ದೇಹ ಬಿದ್ದ ಜಾಗೆ ಹಾಗೂ ಅದಕ್ಕೆ ನೇರವಾಗಿರುವ ಮೇಲ್ಚಾವಣಿಯಷ್ಟೆ ಸುಟ್ಟಿದ್ದದ್ದು ಕಂಡು ಬರುತ್ತದೆ. ನಾಲ್ಕನೆಯದಾಗಿ ಅಕಾರಣ ದೇಹದಹನವಾದವರಲ್ಲಿ ಮಧ್ಯ ವಯಸ್ಕ ಮಹಿಳೆಯರೇ ಹೆಚ್ಚು. ಐದನೆಯದಾಗಿ ಇವರೆಲ್ಲರಿಗೂ ಮದ್ಯಪಾನ ಮಾಡುತ್ತಿದ್ದರು. ಆರನೆಯದಾಗಿ ಇಡೀ ದೇಹ ಕರಿಕಲಾಗಿದ್ದರೂ, ತಲೆ ಹಾಗೂ ಪಾದಗಳು ಸುಡದೆ ಉಳಿಯುತ್ತವೆ. ಮೂಳೆಯಂತೂ ಅಸ್ಥಿಸಂಚಯಕ್ಕೆ ಬೇಕಾದಷ್ಟು ತುಣುಕೂ ಇಲ್ಲದ ಹಾಗೆ ಭಸ್ಮವಾಗಿರುತ್ತದೆ.

ಮದ್ಯಪಾನ ಹೆಚ್ಚಾದ ಸಂದರ್ಭದಲ್ಲಿ ರಕ್ತದಲ್ಲಿ ಮದ್ಯದ ಸಾರ ಹೆಚ್ಚಾಗಿ ಚರ್ಮದ ಮೂಲಕ ಹೊರ ಸೂಸುತ್ತಿರಬಹುದು. ಆಕಸ್ಮಿಕವಾಗಿ ಬೆಂಕಿ ತಗುಲಿ ದೇಹಕ್ಕೂ ಉರಿ ಹತ್ತಬಹುದು ಎನ್ನುವುದು ಊಹೆ. ಆದರೂ ದೇಹ ಉರಿಯುವಾಗ ಸುತ್ತಲಿನ ವಸ್ತುಗಳು ಸುಡುವುದಿಲ್ಲವೇಕೆ? ತಲೆ, ಕಾಲುಗಳು ಉರಿಯದೆ ಉಳಿಯುವುದೇಕೆ? ವಯಸ್ಕ ಮಹಿಳೆಯರೇ ಇದಕ್ಕೆ ಹೆಚ್ಚು ಬಲಿಯಾಗಿದ್ದಾರಲ್ಲ, ಅದೇಕೆ? ಬೆಂಕಿ ಹತ್ತಿದ್ದು ಎಲ್ಲಿಂದ? ಮೂಳೆಯೇಕೆ ಭಸ್ಮವಾಗಿಬಿಡುತ್ತದೆ? ಈ ಸಂದೇಹಗಳೇ ಅಕಾರಣ ದೇಹ ದಹನವನ್ನು ವಿಚಿತ್ರ ವಿದ್ಯಮಾನವಾಗಿಸಿವೆ.

“ಇದು ವಿಚಿತ್ರವೇನಲ್ಲ. ಅಕಾರಣ ದೇಹ ದಹನದ ಬಹುತೇಕ ಸಂದರ್ಭದಲ್ಲಿ ಹತ್ತಿರದಲ್ಲೆಲ್ಲೋ ಬೆಂಕಿಯ ಸೆಲೆ (ಮೋಂಬತ್ತಿ, ಅಗ್ಗಿಷ್ಟಿಕೆ, ದೀಪ ಮುಂತಾದ ಸಣ್ಣ ಉರಿಯ ಜ್ವಾಲೆಗಳು) ಇದ್ದದ್ದು ದಾಖಲಾಗಿದೆ. ಬೆಂಕಿ ಹೊತ್ತಿಸಲು ಇವು ಸಾಕು,” ಎನ್ನುತ್ತಾರೆ ಕ್ರಿಸ್ಟೆನ್ಸನ್. ಅದೇನೋ ಸರಿ. ಆದರೆ ದೇಹದಲ್ಲಿ ಉರಿಯುವಂಥದ್ದು ಏನಿದೆ? ಸಾಮಾನ್ಯವಾಗಿ ದೇಹವನ್ನು ಸುಡಬೇಕಾದಾಗ ಸೌದೆ, ಎಣ್ಣೆ  ಮುಂತಾದ ಕಾವು ಹೆಚ್ಚು ನೀಡುವ ಉರುವಲನ್ನು ಬಳಸಬೇಕು. ಇವ್ಯಾವುವೂ ಇಲ್ಲದಿದ್ದರೂ ದೀಪದ ಸಣ್ಣ ಜ್ವಾಲೆಯ ಉರಿಗೇ ದೇಹ ಹೊತ್ತಿಕೊಳ್ಳಬಹುದೇ?

ದೇಹದಲ್ಲಿಯೂ ಉರಿಯುವ ವಸ್ತುಗಳಿವೆ. ಚರ್ಮ ಹಾಗೂ ಅನ್ನಾಂಗಗಳು ಸಾಮಾನ್ಯವಾಗಿ ಉರಿಯುವುದಿಲ್ಲವಾದರೂ ಶುಷ್ಟವಾದಾಗ ಚೆನ್ನಾಗಿಯೇ ಉರಿಯುತ್ತವೆ. ಮೂಳೆಯೂ ಉರಿಯುವುದಿಲ್ಲವಾದರೂ ಅದರಲ್ಲಿರುವ ಮಜ್ಜೆ ಮತ್ತು ಅಂಗಾಂಶಗಳು ಬೆಂಕಿಗೆ ತುಪ್ಪ ಸುರಿದಂತೆ ಉರಿಯನ್ನು ಹೆಚ್ಚಿಸಬಲ್ಲುವು. ಇನ್ನುಕೊನೆಯದು ದೇಹದಲ್ಲಿರುವ ಕೊಬ್ಬು. ಇದು ಚೆನ್ನಾಗಿ ಉರಿಯುತ್ತದೆ. ಅಷ್ಟೆ ಅಲ್ಲ, ಉರಿ ಹೆಚ್ಚಾದಾಗ ಕರಗಿ ಬಿಡಬಲ್ಲುದು. ಇವೆಲ್ಲವನ್ನೂ ಗಮನಿಸಿದರೆ ದೇಹ ದಹನದ ಸಂಗತಿಗಳು ವಿಚಿತ್ರವಲ್ಲವೆನ್ನಬಹುದು.

ದೇಹ ದಹನವೆನ್ನುವುದು ಮೋಂಬತ್ತಿ ಉರಿದಂತೆ ಎನ್ನುತ್ತಾರೆ ವಿಜ್ಞಾನಿಗಳು. ಮೋಂಬತ್ತಿಯಲ್ಲಿ ಮೇಣ ಹೊತ್ತಿ ಉರಿಯುವುದಿಲ್ಲ. ಆದರೆ ಬತ್ತಿಯಲ್ಲಿನ ಜ್ವಾಲೆಗೆ ಉರುವಲನ್ನು ಒದಗಿಸುತ್ತಾ ಕರಗಿ ಹೋಗುತ್ತದೆ. ಇದೇ ರೀತಿಯಲ್ಲಿಯೇ ದೇಹದಲ್ಲಿನ ಕೊಬ್ಬು (ನೆಣ) ಧರಿಸಿದ ಬಟ್ಟೆಗೆ ಹಾಗೂ ಚರ್ಮ ಉರಿಯಲು ಉರುವಲನ್ನು ಒದಗಿಸುತ್ತಾ ಕರಗಿಬಿಡಬಹುದು. ಈ ಬಗೆಯಲ್ಲಿ ಉರಿಯುವ ಜ್ವಾಲೆಯಲ್ಲಿ ಕಾವು ಕಡಿಮೆ ಇರುವುದರಿಂದ ಸುತ್ತಲಿನ ವಸ್ತುಗಳು ಹೊತ್ತಿಕೊಳ್ಳುವುದಿಲ್ಲ ಎನ್ನುವುದು ತರ್ಕ. 1965ರಲ್ಲಿ ಈ ಬಗ್ಗೆ ಡಿ. ಜೆ. ಗೀ ಎನ್ನುವ ವೈದ್ಯ ಪ್ರಯೋಗಗಳನ್ನು ನಡೆಸಿದ್ದ. ದೇಹದ ಕೊಬ್ಬು ಉರಿದು ಬೂದಿಯಾಗಬೇಕಾದರೆ ಸುಮಾರು 2500 ಸೆಂಟಿಗ್ರೇಡ್ ನಷ್ಟು ಕಾವು ಬೇಕು. ಆದರೆ ಇದೇ ಕೊಬ್ಬು ಕರಗಿ ಬತ್ತಿಗೆ ಉರುವಲಾಗಬೇಕಾದರೆ ಕೇವಲ 240 ಸೆಂಟಿಗ್ರೇಡ್ ನಷ್ಟು ಕಾವಿದ್ದರೆ ಸಾಕು.

ಇಂಗ್ಲೆಂಡಿನ ಬಿಬಿಸಿ 1989ರಲ್ಲೇ ಈ ದೇಹ ದಹನದ ಸಂಗತಿ ಮಿಥ್ಯೆ ಎಂದು ನಿರೂಪಿಸುವ ಕಾರ್ಯಕ್ರಮವೊಂದನ್ನು ಪ್ರದರ್ಶಿಸಿತ್ತು. ಹಂದಿಯೊಂದರ ಶವವನ್ನು ಕಂಬಳಿಯಲ್ಲಿ ಸುತ್ತಿ ಅದಕ್ಕೆ ಬೆಂಕಿ ಹಚ್ಚಿದ್ದರು. ತನ್ನ ಮೇಲೆ ಸಿಂಪಡಿಸಿದ್ದ ಸೀಮೆಣ್ಣೆ ಉರಿದು ಹೋದ ಮೇಲೂ, ಐದು ಗಂಟೆಗಳ ಕಾಲ ಕಂಬಳಿ ಉರಿಯುತ್ತಲೇ ಇತ್ತು. ಹಂದಿಯಲ್ಲಿದ್ದ ಕೊಬ್ಬು ಕಂಬಳಿಗೆ ಉರುವಲಾಗಿ ಅದು ಅಷ್ಟು ದೀರ್ಘ ಕಾಲ ಉರಿಯಿತು. ಅಕಾರಣ ದೇಹ ದಹನವೂ ಹೀಗೇ ಆಗುತ್ತದೆ ಎಂದು ಬಿಬಿಸಿ ನುಡಿದಿತ್ತು.

ಇಷ್ಟಾದರೂ ಅಕಾರಣ ದೇಹ ದಹನವೊಂದು ವಿಚಿತ್ರ, ಪವಾಡ ಎನ್ನುವವರು ಇದ್ದೇ ಇದ್ದಾರೆ. ಸಾಮಾನ್ಯವಾಗಿ ದೇಹವನ್ನು ಸುಡಲು 9000 ರಿಂದ 10000 ಸೆಂಟಿಗ್ರೇಡ್ ಉಷ್ಣತೆ ಬೇಕು. ಇದೇ ಕಾರಣಕ್ಕೇ ಚಿತೆಯ ಸಮೀಪ ನಾವ್ಯಾರೂ ಸುಳಿಯಲಾಗುವುದಿಲ್ಲ. ಅದರ ಕಾವು ಅಷ್ಟಿದ್ದರೆ ಮಾತ್ರ ದೇಹ ಸಂಪೂರ್ಣ ಭಸ್ಮವಾಗಬಲ್ಲುದು. ಆದರೂ ಮೂಳೆಗಳು ಕೆಲವು ಉರಿಯದೆ ಉಳಿಯುತ್ತವೆ. ಅಕಾರಣ ದೇಹ ದಹನದಲ್ಲಿ ಮೂಳೆಗಳೂ ಉರಿದು ಬೂದಿಯಾಗಿರುತ್ತವೆ. ಆದ್ದರಿಂದ ದೇಹ ಮೇಣದಂತೆ ಕರಗಿ ದೀಪದಂತೆ ದೇಹ ಉರಿಯುವುದನ್ನು ಒಪ್ಪಲಾಗುವುದಿಲ್ಲಎನ್ನುವುದು ಪವಾಡವನ್ನು ನಂಬುವವರ ಮಾತು.

ಕ್ರಿಸ್ಟೆನ್ಸನ್ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಯೋಗ ನಡೆಸಿದರು. ಅಕಾರಣ ದೇಹದ ದಹನಕ್ಕೊಳಗಾದ ವ್ಯಕ್ತಿಗಳ ಮೂಳೆಗಳು ಮೂಳೆಸವೆತ (ಆಸ್ಟಿಯೋಪೋರೋಸಿಸ್) ಕ್ಕೊಳಗಾದವುಗಳಿರಬಹುದೇ? ಇಂತಹ ಮೂಳೆಗಳು ಸಂಪೂರ್ಣವಾಗಿ ಸುಟ್ಟು ಬೂದಿಯಾಗಬಲ್ಲುವೇ? ಹೀಗಾಗುವುದಿದ್ದರೆ ಅಕಾರಣ ದೇಹ ದಹನವನ್ನು ವಿವರಿಸುವುದು ಸಾಧ್ಯ. ಏಕೆಂದರೆ ಅಕಾರಣ ದೇಹ ದಹನವಾಗಿರುವ ಬಹುತೇಕ ವ್ಯಕ್ತಿಗಳಲ್ಲಿ ಆಸ್ಟಿಯೋಪೋರೋಸಿಸ್ ಇರಬಹುದಾದ ಎಲ್ಲ ಯೋಗ್ಯತೆಗಳೂ ಹೆಚ್ಚಿವೆ. ಮಧ್ಯವಯಸ್ಕರು, ಬೊಜ್ಜಿರುವವರು ಹಾಗೂ ಕಾಕಸಿಯನ್ ಜನಾಂಗದವರು. ಹೀಗೆ ತರ್ಕಿಸಿದ ಕ್ರಿಸ್ಟೆನ್ಸನ್ ಒಂದು ಪ್ರಯೋಗ ನಡೆಸಿದ್ದಾರೆ.

ವೈದ್ಯಕೀಯ ಕಾಲೇಜಿನಿಂದ ಎರಡು ಮೂಳೆಗಳನ್ನು ಹಾಗೂ 70 ವರ್ಷ ವಯಸ್ಸಿನ ಮಹಿಳೆಯ ತುಂಡರಿಸಿದ ಕಾಲಿನ ತುಣುಕುಗಳನ್ನು ಇವರು ಪರೀಕ್ಷೆಗೆ ಒಳಪಡಿಸಿದ್ದಾರೆ. ಮೂಳೆಗಳಲ್ಲಿ ಒಂದು ಸಾಧಾರಣ ಮೂಳೆ ಹಾಗೂ ಮತ್ತೊಂದು ಸವೆದ ಮೂಳೆ. ಮೂಳೆಸವೆತ ಇರುವ ಮೂಳೆಗಳ ಸಾಂದ್ರತೆ ಬಹಳ ಕಡಿಮೆ ಇರುತ್ತದೆಯಾದ್ದರಿಂದ ಮೂಳೆಸವೆತವನ್ನು ಅಳೆಯಲು ಬಳಸುವ ಸಾಧನದಿಂದ ಈ ಎರಡೂ ಮೂಳೆಗಳ ಸಾಂದ್ರತೆಯನ್ನು ಗುರುತಿಸಿದ್ದಾರೆ. ಅನಂತರ ಇವುಗಳನ್ನು ಸಮಾನ ಅಳತೆಯ ಮೂರು ಪುಟ್ಟ ತುಂಡುಗಳನ್ನಾಗಿ ಮಾಡಿ ಪ್ರತಿಯೊಂದು ತುಂಡನ್ನೂ ಸುಟ್ಟಿದ್ದಾರೆ. ಚಿತಾಗಾರದಲ್ಲಿ ಸಾಮಾನ್ಯವಾಗಿರುವ ಕಾವಿನಲ್ಲಿ ಇವನ್ನು ಸುಟ್ಟು ಉಳಿಕೆ ಹೇಗಿರುತ್ತದೆ ಎಂದು ಗಮನಿಸಿದ್ದಾರೆ. ಮೂರೂ ತುಂಡುಗಳಲ್ಲಿಯೂ ಮೂಳೆಸವೆತದ ತುಂಡುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದವು. ಆದರೆ ಸಾಧಾರಣ ಮೂಳೆಯ ತುಂಡುಗಳು ಕರಿಕಲಾದರೂ ಗಟ್ಟಿಯಾಗಿದ್ದುವು.

ಇನ್ನು ಕಾಲು ಭಾಗದ ಮಾಂಸವನ್ನು ಚರ್ಮದ ಸಹಿತ ಬಟ್ಟೆಯೊಂದರಲ್ಲಿ ಸುತ್ತಿ ಬೆಂಕಿ ಹಚ್ಚಿದ್ದಾರೆ. ಪ್ರತಿ ತುಣುಕೂ ಸುಮಾರು 45 ನಿಮಿಷಗಳ ಕಾಲ ಉರಿದಿದೆ. ಹೀಗೆ ಉರಿಯುತ್ತಿರುವಾಗ ಅದರ ವೀಡಿಯೋ ಚಿತ್ರವನ್ನು ತೆಗೆದಿದ್ದಾರೆ. ವೀಡಿಯೊದಲ್ಲಿ ಜ್ವಾಲೆಯ ಎತ್ತರ ಬಣ್ಣವನ್ನು ಗುರುತಿಸಬಹುದಷ್ಟೆ. ಹಾಗೆಯೇ ದೂರದಿಂದಲೇ ಜ್ವಾಲೆಯ ಕಾವನ್ನು ಪತ್ತೆ ಮಾಡಲು ಪ್ರಯತ್ನಿಸಿದ್ದಾರೆ. ಉರಿದ ಮಾಂಸದ ತುಣುಕಿನ ಅಡಿಯಲ್ಲಿ ಹರಡಿದ ಕೊಬ್ಬಿನ ಪ್ರಮಾಣವನ್ನೂ ಲೆಕ್ಕ ಹಾಕಿದ್ದಾರೆ. ಸೆಕೆಂಡಿಗೆಷ್ಟು ಮಾಂಸ ಸುಡುತ್ತದೆಂದು ಗಮನಿಸಿ, ಆ ಪ್ರಕಾರ ಉತ್ಪನ್ನವಾದ ಉಷ್ಣದ ಪ್ರಮಾಣವೆಷ್ಟು ಎಂದು ಗಣಿಸಿದ್ದಾರೆ. ಗಣಿಸಿದ ಉಷ್ಣದ ಪ್ರಮಾಣ ತಾವು ಗಮನಿಸಿ ಅಳೆದ ಉಷ್ಣದ ಪ್ರಮಾಣಕ್ಕಿಂತ ಕಡಿಮೆ ಇತ್ತು.

ಆ ಮಾಂಸದ ತುಂಡಿನ ತೂಕದ ಆಧಾರದ ಮೇಲೆ ಲೆಕ್ಕ ಹಾಕಿದ ಉಷ್ಣತೆಯ ಅರ್ಧವಷ್ಟೆ ಗಮನಿಸಿದ ಉಷ್ಣತೆ ಇತ್ತು. ಅರ್ಥಾತ್, ಈ ದೇಹದ ತುಣುಕು ಕಡಿಮೆ ಉಷ್ಣತೆಯಲ್ಲಿ ದೀರ್ಘ ಕಾಲ ಉರಿಯಿತೆಂದು ಅರ್ಥವಷ್ಟೆ. ಬಟ್ಟೆಯೇ ಬತ್ತಿಯಾಗಿ, ಕೊಬ್ಬೇ ಮೇಣವಾಗಿ ಉರಿದರೆ ದೇಹ ಹೀಗೆಯೇ ನಿಧಾನವಾಗಿ ಉರಿಯುತ್ತದೆ. ವೀಡಿಯೋಗಳಲ್ಲಿ ಕಂಡ ಚಿತ್ರಗಳಲ್ಲಿಯೂ ಜ್ವಾಲೆ ಬಹಳ ಸಣ್ಣದಾಗಿಯೇ ಇತ್ತು ಎನ್ನುತ್ತಾರೆ. ಅಂದರೆ ಇಷ್ಟು ಉರಿದರೂ ದೇಹದ ಜ್ವಾಲೆ ಸುತ್ತಲಿನ ವಸ್ತುಗಳಿಗೆ ಬಿಸಿ ತಾಕಿಸದೇ ಇರಬಹುದು!  ಇವೆಲ್ಲದರ ಜೊತೆಗೆ ಮದ್ಯಪಾನಿಗಳ  ಉಸಿರು ಹಾಗೂ ಚರ್ಮದಲ್ಲಿರುವ ಮದ್ಯಸಾರ  ಉರಿಯುವುದಕ್ಕೆ ಇನ್ನಷ್ಟು ಒತ್ತಾಸೆಯಾಗಬಹುದು.

ಒಟ್ಟಾರೆ ಈ ಪ್ರಯೋಗ ಅಕಾರಣ ದೇಹ ದಹನವಾಗುವಾಗ ದೇಹದ ಕೊಬ್ಬೇ ಮೇಣವಾಗಿ ನಿಧಾನವಾಗಿ ಉರಿದು ಸಂಪೂರ್ಣ ಬೂದಿಯಾಗಬಹುದು. ಕೊಬ್ಬಿನ ಅಂಶ ಕಡಿಮೆ ಇರುವ ದೇಹದ ತುದಿ ಭಾಗಗಳು (ಬೆರಳು, ಕಾಲಿನ ತುದಿ, ತಲೆ) ಹೀಗೆ ಉರುವಲಾಗದೇ ಉಳಿಯಬಹುದು ಎಂದು ಸೂಚಿಸಿವೆ. ಅಸ್ಥಿ ಸಂಚಯಕ್ಕೂ ಉಳಿಯದಂತೆ ಮೂಳೆಗಳು ಸಂಪೂರ್ಣವಾಗಿ ಬೂದಿಯಾಗಬಹುದು ಎಂದೂ ಈ ಪ್ರಯೋಗ ನಿರೂಪಿಸಿದೆ. ಬಲು ವೃದ್ಧರ ಶವಸಂಸ್ಕಾರ ಮಾಡುವಾಗ ಮೂಳೆಗಳು ಉಳಿಯುವುದು ಅಪರೂಪವಷ್ಟೆ.

ಚೆನ್ನೈನ ರಾಹುಲ್ ನ ವಿಷಯದಲ್ಲಿಯೂ ಅಕಾರಣವಾಗಿಯೇನೂ ಆಗಿರಲಿಲ್ಲ ಎನ್ನುವುದು ಅಲ್ಲಿನ ವೈದ್ಯರ ಹೇಳಿಕೆ. ಏಕೆಂದರೆ ಆ ಕುಟುಂಬ ವಾಸಿಸುವ ಕಾಲೊನಿಯಲ್ಲಿ ಗಾಳಿಯಲ್ಲಿ ಉರಿಯುವ ಗಂಧಕದ ಬಳಕೆ ಹೆಚ್ಚು ಹಾಗೂ ಮನೆಯಲ್ಲಿ ಹಲವೆಡೆ ಗಂಧಕದ ಧೂಳು ಇದ್ದದ್ದನ್ನು ಗಮನಿಸಲಾಗಿದೆ ಎಂದಿದ್ದಾರೆ. ರಾಹುಲನಿಗಷ್ಟೆ ಅಲ್ಲದೆ ಅವನ ಸಹೋದರನಿಗೂ ಒಂದೆರಡು ಬಾರಿ ಬೆಂಕಿ ಬಿದ್ದಿದ್ದ ದಾಖಲೆ ಇರುವುದರಿಂದ ಈ ದಹ್ಯ ವಸ್ತುವಿನ ಪುಡಿಯಿಂದ ಹೀಗಾಗಿರಬಹುದು ಎನ್ನುವುದು ಅವರ ತರ್ಕ. ಪರೀಕ್ಷೆ ಮಾಡಲು ಸಾಧ್ಯವಿಲ್ಲದಿದ್ದರಿಂದ ಸಾಂದರ್ಭಿಕ ಪುರಾವೆಗಳೇ ಆಧಾರ.

ಹೀಗೆ ಅಕಾರಣ ದೇಹ ದಹನದ ಸಂದರ್ಭದಲ್ಲಿ ಕಾಣುವ ವಿಚಿತ್ರವೆನ್ನಿಸುವ ಎಲ್ಲ ಸಂಗತಿಗಳನ್ನೂ ವಿಜ್ಞಾನ ಸಮರ್ಪಕವಾಗಿ ವಿವರಿಸಬಲ್ಲುದು. ಪವಾಡಗಳು ವಿಜ್ಞಾನ ವಿವರಿಸಲಾಗದ ವಿಷಯಗಳಲ್ಲ. ಅವನ್ನು ಪರೀಕ್ಷಿಸುವ ವ್ಯವಧಾನ, ಸಾಧನಗಳು ಬೇಕಷ್ಟೆ.

________________

ಆಕರ:

Angi M. Christensen, Experiments in the combustibility of the Human body, J. Forensic Sci., Vol. 47 No. 3 Pp 66-470, 2002

Published in: on ಫೆಬ್ರವರಿ 16, 2016 at 6:13 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಭೃಂಗದ ಬೆನ್ನೇರಿ ಬಂದ ಭೂತ

15022016

ಸಂಯುಕ್ತ ಕರ್ನಾಟಕದಲ್ಲಿ ಇಂದು ಪ್ರಕಟವಾಗಿರುವ ಲೇಖನ. ನಿಮ್ಮ ವಿಮರ್ಶೆಗಾಗಿ

ಟಿಪ್ಪಣಿ: ಒಮ್ಮೆ ರೋಹಿತ್ ಚಕ್ರತೀರ್ಥ ನೀವು ಲೇಖನಗಳನ್ನು ಬರೆಯುವಾಗ ವಿಷಯಗಳನ್ನು ಹೇಗೆ ಆಯ್ಕೆ ಮಾಡುತ್ತೀರಿ? ನೀವು ಬರೆದ ಲೇಖನಗಳಲ್ಲಿ ನಿಮಗೆ ಅತಿ ಪ್ರಿಯವಾದುವೆನ್ನುವುದು ಯಾವುದಾದರೂ ಇವೆಯೇ? ಇದ್ದರೆ ಏಕೆ? ಎನ್ನುವ ಪ್ರಶ್ನೆಗಳನ್ನು ಕೇಳಿದ್ದರು. ಆ ಸಂದರ್ಭದಲ್ಲಿ ನನಗೆ ನಾವು ಬರೆಯುವ ಪ್ರತಿಯೊಂದು ಲೇಖನವೂ ನಾವು ಹೆತ್ತ ಮುದ್ದಿನ ಹೆಗ್ಗಣವೆನ್ನಿಸುತ್ತದೆ ಎನ್ನುವ ಅನಿಸಿಕೆಯಿತ್ತು. ಲೇಖನಗಳನ್ನು ಬರೆಯುವಾಗ ಸಮಯದ ತುರ್ತು (ಡೆಡ್ ಲೈನ್), ನಮ್ಮ ಆಸಕ್ತಿಯ ವಿಷಯಗಳು, ಸಾಮಾನ್ಯ ಕೌತುಕದ ಸಂಗತಿಗಳು, ಪತ್ರಿಕೆಗಳಲ್ಲಿ ಸುದ್ದಿಯಾಗುತ್ತಿರುವ ವಿಷಯಗಳು, ಇವ್ಯಾವುವೂ ಇಲ್ಲದಿದ್ದಾಗ ಕೈಗೆ ಸಿಕ್ಕಿದ ಸಂಗತಿಗಳು ಲೇಖನದ ಹೂರಣಗಳಾಗುತ್ತವೆ. ಕೆಲವೊಂದು ಸಂದರ್ಭದಲ್ಲಿ ಡೆಡ್ ಲೈನ್ ಗೋಸ್ಕರವಾಗಿ ಸುದ್ದಿಯೇ ಅಲ್ಲದ ಸಂಗತಿಗಳ ಬಗ್ಗೆಯೂ ಬರೆದಿದ್ದಿದೆ. ನಿನ್ನೆ ಈ ಲೇಖನವನ್ನು ಬರೆದು ಕಳಿಸಿದ ಮೇಲೆ ಯಾಕೋ ಸಮಾಧಾನವೇ ಆಗಲಿಲ್ಲ. ಲೇಖನದ ಹೂರಣ ಚೆನ್ನಾಗಿದೆ. ಹೊಸ ಸುದ್ದಿ. ಸಂಕೀರ್ಣ ವಿಷಯವನ್ನು ತಕ್ಕ ಮಟ್ಟಿಗೆ ಅರ್ಥ ಮಾಡಲು ಪ್ರಯತ್ನಿಸಿದ್ದೇನೆ. ಇದು ಎಲ್ಲ ವಿಜ್ಞಾನ ಲೇಖಕರು ಎದುರಿಸುವ ಸವಾಲಾದ್ದರಿಂದ ಬಹು ಮಟ್ಟಿಗೆ ಇದು ಸಾಧ್ಯವಾದಲ್ಲಿ ಖುಷಿಯಾಗಬೇಕು. ಯಾಕೋ ಖುಷಿಯಾಗುತ್ತಿಲ್ಲ. ಯಾಕೆ ಎನ್ನುವುದೇ ಪ್ರಶ್ನೆ!

Published in: on ಫೆಬ್ರವರಿ 15, 2016 at 6:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜಿರಲೆ ರೋಬೋ!

ಒಂದು ವಾಟ್ಸಪ್ ಜೋಕು ಗಂಡಂದಿರನ್ನು ತಮಾಷೆ ಮಾಡುತ್ತದೆ. ಗಂಡ ಕೊಲ್ಲಲು ಹೊರಟ ಜಿರಲೆ ಅವನಿಗೆ ಸವಾಲು ಹಾಕುತ್ತದಂತೆ. ‘ನೀನು ನನ್ನನ್ನು ಕೊಲ್ಲುವುದಿಲ್ಲ. ಏಕೆಂದರೆ ನಾನು ನಿನಗಿಂತ ಬಲಶಾಲಿ. ನಿನಗೆ ಹೆದರದ ಹೆಂಡತಿ ನನಗೆ ಹೆದರುತ್ತಾಳೆ,’ ಅಂತ. ಜೋಕು ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕ ಮೇಲೆ ತುಸು ಯೋಚಿಸಿ. ಜಿರಲೆ ಎನ್ನುವ ಈ ಯಃಕಶ್ಚಿತ್ ಕೀಟ ಹೇಳಿದ್ದರಲ್ಲಿ ನ್ಯಾಯವಿದೆ. ತುಸು ಸತ್ಯವಿದೆ. ಸಿಕ್ಕದ್ದನ್ನು ಉಂಡು ಬದುಕುವ ಈ ಕೀಟ ಮನುಷ್ಯನನ್ನು ಕೊಲ್ಲುವ ವಿಕಿರಣಗಳನ್ನೂ ತಾಳಿಕೊಳ್ಳಬಲ್ಲುದು.

ಅದಷ್ಟೆ ಅಲ್ಲ. ಇನ್ನೂ ಅದ್ಭುತ ಸಾಮರ್ಥ್ಯಗಳಿವೆ. ಬೂಟುಕಾಲಿನಿಂದ ತುಳಿದು ಹೊಸಕಿ ಹಾಕುವಷ್ಟು ಪುಟ್ಟದಲ್ಲವೇ ಎನ್ನಬೇಡಿ. ಜಿರಲೆ ನಿಮ್ಮ ದೇಹದ ಭಾರವನ್ನು ತಡೆದುಕೊಂಡು ಅಪ್ಪಚ್ಚಿಯಾಗದೆ ಬದುಕುಳಿಯಬಲ್ಲುದು. ಇದರ ಸಾಮರ್ಥ್ಯಗಳಿಗೆ ಇನ್ನೊಂದನ್ನು ಕೂಡಿಸಿದ್ದಾರೆ ಅಮೆರಿಕೆಯ ಕಾರ್ನೆಲ್ ವಿಶ್ವವಿದ್ಯಾನಿಲಯದ ರಾಬರ್ಟ್ ಫುಲ್ ಮತ್ತು ಕೌಶಿಕ್ ಜಯರಾಮ್. ಇವರು ಇತ್ತೀಚಿನ ಪ್ರೊಸೀಡಿಂಗ್ಸ್ ಆಫ್ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಸ್ ಪತ್ರಿಕೆಯಲ್ಲಿ ಪ್ರಕಟಿಸಿರುವ ಪ್ರಬಂಧವೊಂದು ಜಿರಲೆ ಎನ್ನುವ ಜೀವಿ ಹೊಸತೊಂದು ಬಗೆಯ ರೋಬೋ ಸೃಷ್ಟಿಗೆ ಪ್ರೇರಣೆಯಾಗಬಲ್ಲುದು ಎಂದು ತಿಳಿಸಿದೆ.

ಜಿರಲೆ ರೋಬೋವೇ? ಅದೇನು ವಿಶೇಷ ಎಂದಿರಾ? ಉಗುರು ನುಸುಳದಷ್ಟು ಇಕ್ಕಟ್ಟಾದ ಸಂದಿಯಲ್ಲಿಯೂ ಹೆಬ್ಬೆರಳು ಗಾತ್ರದ ಜಿರಲೆ ಇರುವುದನ್ನು ಕಂಡಿದ್ದೀರಲ್ಲ? ಇಷ್ಟು ಇಕ್ಕಟ್ಟಿನಲ್ಲಿ ಈ ಜೀವಿ ಹೇಗೆ ಬದುಕುತ್ತದೆ? ಕೈ ಕಾಲು ಆಡಿಸಲೂ ಆಗದಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಇದು ಹೇಗೆ ನಡೆಯಬಲ್ಲುದು? ಆ ಇಕ್ಕಟ್ಟಿನಲ್ಲಿ ಅಷ್ಟು ದಪ್ಪ ದೇಹ ಹೇಗೆ ಉಳಿಯಬಲ್ಲುದು? ಇವೆಲ್ಲ ಕೌಶಿಕ್ ಮತ್ತು ಫುಲ್ ಅವರಿಗೆ ಬಲು ಕೌತುಕವೆನ್ನಿಸಿದೆ. ಇದೇ ಬಗೆಯ ಗುಣಗಳಿರುವ ರೋಬೋಗಳು ಸಿಗುವುದಾದರೆ ಕುಸಿದ ಕಟ್ಟಡಗಳ ಅವಶೇಷಗಳ ಸಂದಿಗೊಂದಿಗಳಲ್ಲಿ ನುಸುಳಿ ಅಲ್ಲಿರುವವರಿಗೆ ನೆರವು ನೀಡಬಹುದು ಎನ್ನುವುದು ಇವರ ಆಶಯ.

ಈ ಆಸೆಯ ಬೆನ್ನು ಹತ್ತಿದ ಕೌಶಿಕ್ ಮತ್ತು ಫುಲ್ ಜಿರಲೆಗಳನ್ನು ಇರುಕಿನಲ್ಲಿ ಇರಿಸಿ ಅಧ್ಯಯನ ಮಾಡಿದ್ದಾರೆ. ಅವು ಇಕ್ಕಟ್ಟಾದ ಸಂಧಿಗಳಲ್ಲಿ ನಡೆದಾಡುವ ರೀತಿ, ಅವು ತಾಳಿಕೊಳ್ಳಬಲ್ಲ ಗರಿಷ್ಟ ಒತ್ತಡದ ಪ್ರಮಾಣ, ಅಪ್ಪಚ್ಚಿಯಾಗುವ ಸ್ಥಿತಿಯಲ್ಲಿದ್ದರೂ ನಡೆದಾಡುವ ವೇಗ ಇತ್ಯಾದಿಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ. ವೀಡಿಯೋ ಚಿತ್ರಗಳನ್ನು ತೆಗೆದಿದ್ದಾರೆ. ಇವೆಲ್ಲದರ ಪ್ರೇರಣೆ ಪಡೆದು ಜಿರಲೆಯಂತೆಯೇ ವಿನ್ಯಾಸವಿರುವ ರೋಬೋವನ್ನೂ ಸೃಷ್ಟಿಸಿದ್ದಾರೆ.

ಜಿರಲೆಗಳು ನಮ್ಮಷ್ಟು ಗಟ್ಟಿ ಜೀವಿಗಳಲ್ಲ. ಮೃದು. ಒತ್ತಿದರೆ ಇರುಕಿಕೊಳ್ಳಬಲ್ಲುವು. ಇದಕ್ಕೆ ಕಾರಣ ಅವುಗಳ ಹೊರಕವಚ. ಬಹುತೇಕ ಕೀಟಗಳ ರಚನೆ ಹೀಗೇ ಇರುತ್ತದಾದರೂ, ಜಿರಲೆಗಳಲ್ಲಿ ಇವು ವಿಶೇಷ. ತೆಳುವಾದ ಪಟ್ಟಿಗಳನ್ನು ಒಂದರ ಹಿಂದೆ ಒಂದಾಗಿ ಜೋಡಿಸಿದಂತಿದೆ ದೇಹ. ಈ ಪಟ್ಟಿಗಳು ಗಟ್ಟಿಯಾಗಿದ್ದರೂ ಸುಲಭವಾಗಿ ಬಾಗಬಲ್ಲವು. ಜೊತೆಗೆ ಇವುಗಳ ಉದ್ದುದ್ದ ಕಾಲುಗಳು. ಈ ಕಾಲುಗಳು ದೇಹದ ಉದ್ದದ ಒಂದೂವರೆ ಪಟ್ಟು ಉದ್ದವಿದ್ದರೂ, ಸಂಧಿಪಾದಗಳಾಗಿದ್ದರಿಂದ ಅತಿ ಪುಟ್ಟದಾಗಿ ಮಡಿಚಿಕೊಳ್ಳಲು ಸಾಧ್ಯವಾಗುತ್ತದೆ. ಇದು ತಿಳಿದ ವಿಷಯ. ಆದರೆ ಎಷ್ಟರ ಮಟ್ಟಿಗೆ ಈ ಸಾಮರ್ಥ್ಯವನ್ನು ಜಿರಲೆ ಬಳಸಿಕೊಳ್ಳಬಲ್ಲುದು ಎನ್ನುವುದನ್ನು ಫುಲ್ ಮತ್ತು ಕೌಶಿಕ್ ಪರೀಕ್ಷಿಸಿದ್ದಾರೆ.

ಇದಕ್ಕಾಗಿ ಇವರು ಜಿರಲೆಗಳನ್ನು ಅತಿ ಇಕ್ಕಟ್ಟಾದ ಸಂಧಿಗಳೊಳಗೆ ಹೋಗುವಂತೆ ಮಾಡಿದ್ದಾರೆ. ತಮ್ಮ ಸುತ್ತಲಿನ ಪರಿಸರವನ್ನು ಪರಿಶೀಲಿಸಿ ಅಲ್ಲಿಂದ ತಪ್ಪಿಸಿಕೊಳ್ಳುವುದರಲ್ಲಿ ಜಿರಲೆಗಳು ನಿಷ್ಣಾತವಷ್ಟೆ. ಒಳಗಿನದೆಲ್ಲವೂ ಕಾಣುವ ಪಾರದರ್ಶಕ ಡಬ್ಬಿಯೊಳಗೆ ಜಿರಲೆಯನ್ನು ಇಟ್ಟು ನಿಧಾನವಾಗಿ ಡಬ್ಬಿಯ ಮುಚ್ಚಳವನ್ನು ಒಳದೂಡಿದ್ದಾರೆ. ಹೀಗೆ ಮಾಡಿದಾಗ ಜಾಗ ಇಕ್ಕಟ್ಟಾಗಿ ಜಿರಲೆ ಹೇಗೆ ಪ್ರತಿಕ್ರಯಿಸುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. (ಚಿತ್ರ 1 ನೋಡಿ). ಅಷ್ಟು ಇಕ್ಕಟ್ಟಾದ ಜಾಗೆಯಲ್ಲಿ ಜಿರಲೆ ನಡೆಯುವಾಗ ವೀಡಿಯೋ ಚಿತ್ರಿಸಿದ್ದಾರೆ. ಅನಂತರ ವೀಡಿಯೋದ ನೆರವಿನಿಂದ ಜಿರಲೆಯ ನಡಿಗೆಯ ವೇಗ, ವಿಧಾನವನ್ನು ಲೆಕ್ಕ ಹಾಕಿದ್ದಾರೆ.

cockroachsqueeze

ಜಿರಲೆಯನ್ನು ಸಣ್ಣ ಸೀಳಿನ ಮೂಲಕ ಹಾಯಲು ಬಿಟ್ಟಾಗ ಅಚ್ಚರಿಯ ಚಿತ್ರಗಳು ದಾಖಲಾಗಿದ್ದುವು. ತನ್ನ ದೇಹಕ್ಕಿಂತಲೂ ನಾಲ್ಕು ಪಟ್ಟು ಕಿರಿದಾಗಿದ್ದ ಸಂದಿನೊಳಗೆ ತೂರಬೇಕೆಂದಾಗ ಜಿರಲೆ ಮೊದಲಿಗೆ ಸಂದಿನಾಚೆ ಏನಾದರೂ ಇದೆಯೋ ಎಂದು ತನ್ನ ಮೀಸೆಯನ್ನು ಚಾಚಿ ಹುಡುಕಾಡುತ್ತದೆ. ಅನಂತರ ತಲೆಯನ್ನು ತೂರಿಸುತ್ತದೆ. ತಲೆಯಾದ ಮೇಲೆ ಮುಂಗಾಲುಗಳನ್ನು ಹೊರ ಹಾಕುತ್ತದೆ. ತದನಂತರ ಎದೆ, ಉದರ ಭಾಗವನ್ನು ಸೀಳಿನೊಳಗೆ ತೂರಿಸುತ್ತದೆ. ತೆವಳುತ್ತಾ ಮುಂದೆ ಸಾಗಿ ಇಡೀ ಉದರ ಭಾಗವನ್ನು ಮತ್ತೊಂದು ಬದಿಗೆ ಎಳೆದುಕೊಳ್ಳುತ್ತದೆ.

ವೀಡಿಯೋ ಚಿತ್ರಗಳಲ್ಲಿ ಈ ಚಲನೆಗಳು ಸುಸ್ಪಷ್ಟವಾಗಿ ಕಂಡುವು. ಇವೆಲ್ಲವನ್ನೂ ಕಣ್ಣೆವೆಯಿಕ್ಕುವುದರೊಳಗೆ ಮಾಡಿ ಮುಗಿಸುತ್ತದೆ ಈ ಕೀಟ. ಕಣ್ಣೆವೆ ಮುಚ್ಚುವಷ್ಟರೊಳಗೆ ಎಂದರೆ ಎಷ್ಟು ಸೆಕೆಂಡು ಎಂದುಕೊಂಡಿರಿ – ಅರ್ಧದಿಂದ ಮುಕ್ಕಾಲು ಸೆಕೆಂಡುಗಳೊಳಗೆ ಇದು ತನ್ನ ಇಡೀ ದೇಹವನ್ನು ಸಂದಿಯೊಳಗಿನಿಂದ ಹೊರ ತಂದು ಬಿಟ್ಟಿರುತ್ತದೆ. ಇದರಂತೆ ಮನುಷ್ಯನಿಗೂ ಮಾಡಲು ಸಾಧ್ಯವಾಗುವುದಿದ್ದಿದ್ದರೆ. ಬಹುಶಃ ಯಾವ ಜೈಲಿನ ಕಿಟಕಿಗಳೂ ಬಂಧಿಗಳನ್ನು ಸೆರೆಯಾಗಿಡಲು ಶಕ್ತವಲ್ಲ. ಹಾಗೆಯೇ ಈ ಸಾಮರ್ಥ್ಯವಿದ್ದಿದ್ದರೆ ದೇಹಕ್ಕಿಂತಲೂ ಕಿರಿದಾದ ಕೊಳವೆಬಾವಿಯಲ್ಲಿ ಬಿದ್ದ ಮಕ್ಕಳು ಹೊರ ಬಂದು ಬದುಕುವ ಸಾಧ್ಯತೆಗಳೂ ಇರುತ್ತಿದ್ದುವೇನೋ?

ಹೀಗೆನ್ನಲು ಕಾರಣವಿದೆ. ಜಿರಲೆ ಸುಮಾರು 12 ಮಿಮೀ ಎತ್ತರವಿರುವ ತನ್ನ ದೇಹವನ್ನು ನಾಲ್ಕು ಮಿಮೀಟರಿಗಿಂತಲೂ ಕಡಿಮೆ ಎತ್ತರಕ್ಕೆ ಸಪಾಟಾಗಿಸಿಕೊಂಡು ಮುನ್ನುಗ್ಗಬಲ್ಲುದಂತೆ. ಈ ಲೆಕ್ಕದಲ್ಲಿ ಒಂದಡಿ ದಪ್ಪವಿರುವ ಮನುಷ್ಯ ನಾಲ್ಕಿಂಚು ದಪ್ಪದ ಸಂದಿನೊಳಗೆ ಸಲೀಸಾಗಿ ನುಸುಳಬಹುದಾಗಿತ್ತು. ಜಿರಲೆಗೆ ಇದು ಸಾಧ್ಯವಾಗುವುದಕ್ಕೆ ಕಾರಣ ಅದು ತನ್ನ ಕಾಲುಗಳನ್ನು ಉದ್ದುದ್ದಕ್ಕೆ ಚಾಚಿಕೊಂಡ ನೆಲವನ್ನೇ ಆತುಕೊಂಡಂತೆ ಸಪಾಟಾಗಿ ಬಿಡಬಲ್ಲುದು. ನಮಗೆ ಇದು ಸಾಧ್ಯವಿಲ್ಲ. ಜಿರಲೆಯ ಬೆನ್ನ ಮೇಲಿನಂಚಿಗೂ ನೆಲಕ್ಕೂ ಇರುವ ಕೋನ ಇದೆಷ್ಟು ಸಪಾಟಾಗಬಲ್ಲುದು ಎಂದು ತೋರಿಸುತ್ತದೆ. ಸಂದಿನೊಳಗೆ ತೂರುವಾಗ ಈ ಕೋನ ಸುಮಾರು ನಾಲ್ಕು ಮಡಿ ಹೆಚ್ಚಾಗುತ್ತದಂತೆ.

ಅದೇನೋ ಸರಿ. ಆದರೆ ಕಾಲನ್ನು ಹೀಗೆ ಚಾಚಿಕೊಂಡು ಬಿಟ್ಟರೆ ಮುನ್ನಡೆಯುವುದು ಹೇಗೆ ಎಂದು ಯೋಚಿಸಿದಿರಲ್ಲವಾ? ನಿಮ್ಮ ಆಲೋಚನೆ ಸರಿಯೇ. ಕೌಶಿಕ್ ಮತ್ತು ಫುಲ್ ಇದನ್ನೂ ಪರಿಶೀಲಿಸಿದ್ದಾರೆ. ಜಿರಲೆಯ ಬೆನ್ನಿನ ಮೇಲೆ ಮೇಲ್ಚಾವಣಿಯುಂಟು ಮಾಡುವ ತಡೆ ಹಾಗೂ ಅದರ ಕಾಲುಗಳ ಮುಂದೂಡುವ ಬಲವನ್ನು ಲೆಕ್ಕ ಹಾಕಿದ್ದಾರೆ. ತಡೆಗಿಂತಲೂ ಮುಂದೂಡುವ ಬಲ ಹೆಚ್ಚಾಗಿದ್ದಷ್ಟೂ ಮುನ್ನಡೆ ಸುಲಭವಷ್ಟೆ. ನಾವು ನೀರಿನಲ್ಲಿ ಈಜುವಂತೆ, ಅಥವಾ ಹಕ್ಕಿಗಳು ಗಾಳಿಯಲ್ಲಿ ಹಾರುವಾಗ ಮಾಡುವಂತೆ ಜಿರಲೆಯೂ ತನ್ನ ದೇಹದ ಎಡಭಾಗವನ್ನು, ಇನ್ನೊಮ್ಮೆ ಬಲಭಾಗವನ್ನು ತೆವಳಿಸಿ ಮುಂದೆ ಸಾಗುತ್ತದೆ. ಇರುಕಿನ ಸಂದಿನೊಳಗೆ ಕಾಲುಗಳ ನೆರವೇ ಇಲ್ಲದೆ ತೆವಳುತ್ತದೆ.

ಹೀಗೆ ಕಾಲುಗಳನ್ನು ಮಡಚಿಕೊಳ್ಳುವ ಸಾಮರ್ಥ್ಯವಿರುವುದರಿಂದಲೇ ಜಿರಲೆಯನ್ನು ಹೊಸಕಿ ಹಾಕುವುದು ಕಷ್ಟ. ಫುಲ್-ಕೌಶಿಕ್ ಜಿರಲೆಗಳ ಮೇಲೆ ವಿವಿಧ ಮಟ್ಟದ ಭಾರವನ್ನು ಹೇರಿ ಅವು ಎಷ್ಟು ತಾಳಿಕೊಳ್ಳಬಲ್ಲುವು ಎಂದು ಲೆಕ್ಕ ಹಾಕಿದ್ದಾರೆ. ಈ ಪುಟಾಣಿ ಕೀಟ ತನ್ನ ದೇಹ ತೂಕಕ್ಕಿಂತ 300 ರಿಂದ 900 ಪಟ್ಟು ಭಾರವನ್ನು ತಾಳಬಲ್ಲುದು. ನಮ್ಮ ಬೆನ್ನ ಮೇಲೆ 21 ರಿಂದ 60 ಟನ್ನು ತೂಕ ಬಿದ್ದ ಹಾಗೆ. ಅರ್ಥಾತ್ ಹೆಚ್ಚೂ ಕಡಿಮೆ ಎರಡರಿಂದ ಆರು ಲೋಡ್ ಆದ ಟ್ರಕ್ಕುಗಳು ಬೆನ್ನ ಮೇಲೆ ನಿಂತ ಹಾಗೆ. ಇಷ್ಟಾದರೂ ಜಿರಲೆಗೆ ಏನೂ ಆಗುವುದಿಲ್ಲ. ಭಾರವನ್ನು ತೆಗೆದ ಕೂಡಲೇ ಎಂದಿನ ಗತ್ತಿನಿಂದ ಹರಿದಾಡಿ, ಹಾರುತ್ತದಂತೆ. ಇಷ್ಟು ಭಾರ ಬಿದ್ದರೂ ಅದರ ದೇಹಕ್ಕೆ ಕಿಂಚಿತ್ತೂ ತೊಂದರೆಯಾಗದಿರುವುದಕ್ಕೆ ಕಾರಣ, ಅವುಗಳ ಬೆನ್ನ ಮೇಲಿರುವ ಹಾಳೆಗಳು ಬಾಗುವುದಲ್ಲ. ಈ ಹಾಳೆಗಳನ್ನು ಜೋಡಿಸುವ ಸ್ನಾಯುಗಳ ರಚನೆ ಎಂದು ವೀಡಿಯೋ ಮೂಲಕ ಕೌಶಿಕ್ ಮತ್ತು ಫುಲ್ ಗಮನಿಸಿದ್ದಾರೆ

ಸಂದಿಯೊಳಗಿನ ತೆವಳಾಟ ಜಿರಲೆಯ ಸಾಧಾರಣ ಓಟಕ್ಕಿಂತ ನಿಧಾನವೇನೋ ಹೌದು. ಆದರೆ ಗತಿಯೇನೂ ಕಡಿಮೆಯಲ್ಲವಂಎ. ತನ್ನ ದೇಹದ ಆರು ಮಡಿ ಉದ್ದದ ಸಂದಿಯನ್ನು ಸೆಕೆಂಡಿನೊಳಗೆ ಇದು ಕ್ರಮಿಸಿಬಿಟ್ಟಿರುತ್ತದೆ. ಆರಡಿ ಮನುಷ್ಯ ತನ್ನ ದೇಹದ ಉದ್ದಕ್ಕೆ ಅನುಗುಣವಾಗಿ ಈ ವೇಗದಲ್ಲಿ ತೆವಳಿದರೆ ನಿಮಿಷದೊಳಗೆ ಎಂಟೂವರೆ ಕಿಲೋಮೀಟರು ದೂರವನ್ನು ತೆವಳಿಕೊಂಡೇ ಸಾಗಬಲ್ಲ! ಆ ವೇಗದಲ್ಲಿ ತೆವಳಲು ಜಿರಲೆಗೆ ಮೇಲ್ಚಾವಣಿ ಒದಗಿಸುವ ಘರ್ಷಣೆಯೂ ನೆರವಾಗುತ್ತದೆ. ಈ ಘರ್ಷಣೆಯನ್ನು ಕಡಿಮೆ ಮಾಡಿದರೆ (ಮೇಲ್ಛಾವಣಿಯನ್ನು ನುಣುಪಾಗಿಸಿದರೆ ಅಥವಾ ನೆಲವನ್ನು ನುಣುಪಾಗಿಸಿದರೆ) ಏನಾಗಬಹುದೆಂದೂ ಇವರು ಪರೀಕ್ಷಿಸಿದ್ದಾರೆ. ಮೇಲ್ಛಾವಣಿ ನುಣುಪಾಗಿದ್ದಷ್ಟೂ ಸಂದಿನೊಳಗೆ ಜಿರಲೆಯ ಚಲನೆ ವೇಗವಾಗುತ್ತದೆ. ನೆಲ ನುಣಪಾಗಿದ್ದಷ್ಟೂ ನಿಧಾನವಾಗುತ್ತದೆ. ಇದೇನೂ ವಿಶೇಷವಲ್ಲ ಎಂದಿರಾ? ಕೌಶಿಕ್-ಫುಲ್ ಅವರ ಪ್ರಕಾರ ಇದೊಂದು ವಿಶೇಷ ನಡಿಗೆ. ಎರಡು ಮೇಲ್ಮೈಗಳ ಘರ್ಷಣೆಯನ್ನೇ ಬಳಸಿಕೊಂಡು ಮುಂದೆ ಸಾಗುವ ವಿಶೇಷ ನಡಿಗೆ.

ಇರಬಹುದು. ಇದರಿಂದ ನಮಗೇನು ಲಾಭ? ಜಿರಲೆಯನ್ನಂತೂ ಹಿಡಿಯಲು ಆಗುವುದಿಲ್ಲ. ಎಂತಹ ಕಿರಿದಾದ ಸಂದಿನಲ್ಲೂ ಅದು ನುಸುಳಬಹುದು ಅಂದರೆ ಅದನ್ನು ಮನೆಯಿಂದ ಸಂಪೂರ್ಣವಾಗಿ ನಿವಾರಿಸಲು ಆಗುವುದಿಲ್ಲ. ಮತ್ತೇನು ಪ್ರಯೋಜನ ಎಂಬ ನಿರಾಸೆ ಬೇಡ.  ಕಿರಿದಾದ ಸಂದುಗಳೊಳಗೆ ನುಸುಳುವ ರೋಬೋಗಳಿಗೆ ಇವು ಪ್ರೇರಣೆಯಾಗುತ್ತವೆ. ಜಿರಲೆಯ ಬೆನ್ನ ಮೇಲಿನ ಫಲಕಗಳ ರಚನೆ, ಅವು ಬಾಗುವ ಹಾಗೂ ಸಪಾಟಾಗುವ ರೀತಿ, ಮೇಲ್ಮೈಗಳನ್ನು ಬಳಸಿಕೊಂಡು ತೆವಳುವ ಪರಿ, ಇವೆಲ್ಲವನ್ನೂ ಗಮನಿಸಿದ ನಂತರ ಫುಲ್ ಮತ್ತು ಕೌಶಿಕ್ ಅಂಗೈಮೇಲಿಟ್ಟುಕೊಳ್ಳಬಹುದಾದಂತಹ ಪುಟ್ಟ ರೊಬೋವೊಂದನ್ನು ರೂಪಿಸಿದ್ದಾರೆ.

compressiblerobot.jpg

ಇದು ಕೂಡ ಸಂದಿಗಳೊಳಗೆ ನುಸುಳುವಾಗ ತನ್ನೆತ್ತರವನ್ನು ನಾಲ್ಕು ಪಟ್ಟು ಕಡಿಮೆ ಮಾಡಿಕೊಳ್ಳಬಹುದು. ಇದರ ಕಾಲುಗಳಿಗೆ ಜಿರಲೆಯ ಉದ್ದದ ಸಂಧಿಪಾದಗಳೇ ಸ್ಪೂರ್ತಿ. ಜಿರಲೆಯೂ ಅದ್ಭುತ. ಅದನ್ನು ಅಣಕಿಸುವ ರೋಬೋವೂ ಅದ್ಭುತ. ಅಲ್ಲವೇ?

ಜಿರಲೆ ರೋಬೋದ ವೀಡಿಯೋ ಇಲ್ಲಿದೆ :

ಆಕರ:

Kaushik Jayaram and Robert J. Full, Cockroaches traverse crevices, crawl rapidly in confined spaces, and inspire a soft, legged robot PNAS | doi/10.1073/pnas.1514591113,   ( Early edition, dated 4.2.2016)

Published in: on ಫೆಬ್ರವರಿ 10, 2016 at 4:32 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಕೀಟವೋಡಿಸುವ ಕೆಸುವಿನ ಗೆಡ್ಡೆ

ಕೀಟವೋಡಿಸುವ ಕೆಸುವಿನ ಗೆಡ್ಡೆ

ಹೌದು. ಬೇವಿನ ನಂತರ ಈಗ ಮತ್ತೊಂದು ಹಿತ್ತಲ ಗಿಡ ಕೀಟನಾಶಕಗಳ ಸಮಸ್ಯೆಗೆ ಪರಿಹಾರ ಒದಗಿಸಲಿದೆಯೇ? ಹೀಗೊಂದು ಸುದ್ದಿಯನ್ನು ಸೈಂಟಿಫಿಕ್ ರಿಪೋರ್ಟ್ಸ್ ಪತ್ರಿಕೆ ನಿನ್ನೆ ಪ್ರಕಟಿಸಿದೆ. ಇಂಫಾಲದ ಜೈವಿಕ ಸಂಪನ್ಮೂಲ ಹಾಗೂ ಸುಸ್ಥಿರ ಅಭಿವೃದ್ಧಿ ಸಂಶೋಧನಾಲಯದ ವಿಜ್ಞಾನಿ ಯಲ್ಲಪ್ಪ ರಾಜಶೇಖರ್ ಮತ್ತು ಸಂಗಡಿಗರ ಪ್ರಕಾರ ಕರ್ನಾಟಕದಲ್ಲಿ ಬೆಳೆಯುವ ಕೆಸವಿನ ದಂಟಿನ ಗೆಡ್ಡೆಗಳಲ್ಲಿ ಕೀಟಗಳನ್ನು ದೂರವಿಡುವ ಶಕ್ತಿಯಿದೆ.

colocasia

ಕೆಸುವಿನ ದಂಟು

ಕರಾವಳಿಯಲ್ಲಿ ಹೆಚ್ಚು ಬಳಕೆಯಾಗುವ ಕೆಸುವಿನ ದಂಟು ಹಾಗೂ ಕೆಸುವಿನ ಗೆಡ್ಡೆಗಳ ಆಹಾರ ಗುಣಗಳ ಬಗ್ಗೆ ಹೇಳಬೇಕಿಲ್ಲ. ಕರಾವಳಿಗರು ಇದರ ಎಲೆಯಿಂದ ಮಾಡುವ ‘ಪತ್ರೊಡೆ’ ಆ ಪ್ರದೇಶವನ್ನು ಪ್ರತಿನಿಧಿಸುವ ತಿನಿಸು. ಹಾಗೆಯೇ ಗೆಡ್ಡೆಗಳೂ ವಿಶೇಷ ಆಹಾರ. ಗೆಡ್ಡೆಗಳಲ್ಲಿರುವ ಪಿಷ್ಠ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯನ್ನು ಉಲ್ಬಣಿಸದೆಯೇ ಶಕ್ತಿಯೂಡಿಸುತ್ತದೆ ಎನ್ನುವುದು ಪೌಷ್ಠಿಕ ತಜ್ಞರ ಅಭಿಪ್ರಾಯ. ವಿಜ್ಞಾನಿಗಳು ಕೊಲೊಕೇಶಿಯ ಎಸ್ಕುಲೆಂಟಾ ಎಂದು ಹೆಸರಿಸಿರುವ  ಈ ಗಿಡದಲ್ಲಿ ಕೀಟಗಳನ್ನು ದೂರವಿಡುವ ರಾಸಾಯನಿಕಗಳೂ ಇವೆ ಎನ್ನುತ್ತಾರೆ ರಾಜಶೇಖರ್.

ಸಸ್ಯಮೂಲದ ಹಲವು ರಾಸಾಯನಿಕಗಳನ್ನು ಕೀಟನಾಶ ಮಾಡಲು ಬಳಸಲಾಗುತ್ತಿದೆ. ಉದಾಹರಣೆಗೆ, ಬೇವಿನಲ್ಲಿರುವ ಅಜಾಡಿರಾಕ್ಟಿನ್. ಇದನ್ನು ಇತರೆ ವಸ್ತುಗಳ ಜೊತೆಗೆ ಬೆರೆಸಿ ಕೀಟಗಳನ್ನು ನಿಯಂತ್ರಿಸಲು ಉಪಯೋಗಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದ ಬಯಲುಗಾಡುಗಳಲ್ಲಿ ಕಾಣಬರುವ ಮಾಕಳಿಬೇರಿ (ಡೆಕಾಲೆಪಿಸ್ ಹ್ಯಾಮಿಲ್ಟೋನಿ) ನಲ್ಲಿಯೂ ಕೀಟಗಳನ್ನು ಬೆದರಿಸುವ ರಾಸಾಯನಿಕಗಳಿವೆಯೆಂದು ಗುರುತಿಸಲಾಗಿದೆ. ಸಾಧಾರಣ ಸೊಳ್ಳೆಗಳನ್ನು ದೂರವಿಡಲು ಬಳಸುವ ಸ್ಪ್ರೇಗಳಲ್ಲಿ ಚೆಂಡುಮಲ್ಲಿಗೆ ಹೂವಿನಲ್ಲಿರುವ ಪೈರೆತ್ರಿನ್ ರಾಸಾಯನಿಕವನ್ನು ಉಪಯೋಗಿಸುತ್ತಾರೆ.

ಇವೆಲ್ಲವೂ ಇರುವಾಗ ಹೊಸ ರಾಸಾಯನಿಕವೇಕೆ? ರಾಜಶೇಖರ್ ಅವರ ಪ್ರಕಾರ ಆಹಾರ ಪದಾರ್ಥಗಳನ್ನು ಶೇಖರಿಸಿಡಲು ಇವ್ಯಾವುವೂ ಉಪಯುಕ್ತವಲ್ಲ.  ಪೈರೆತ್ರಿನ್ ಆಹಾರ ವಸ್ತುಗಳಲ್ಲಿ ಬಳಸಲು ಯೋಗ್ಯವಲ್ಲ. ಬೇವಿನ ರಾಸಾಯನಿಕ ಗಾಳಿಯಲ್ಲಿ ಆವಿಯಾಗದೆ ಇರುವುದರಿಂದ ಧಾನ್ಯಗಳಲ್ಲಿ ಬೆರೆಸಿಟ್ಟರೂ ನಿಷ್ಪ್ರಯೋಜಕ. ಹೀಗಾಗಿ ಧಾನ್ಯಗಳನ್ನು ಕೂಡಿಡುವುದಕ್ಕೆ ಸುಲಭವಾಗಿ ಆವಿಯಾಗುವಂತಹ ಕೀಟನಾಶಿಯ ಅವಶ್ಯಕತೆ ಇದೆ. ಇದಕ್ಕಾಗಿ ನಡೆದಿರುವ ಶೋಧಗಳಲ್ಲಿ ಕೆಸುವಿನ ದಂಟಿನ ರಾಸಾಯನಿಕವೂ ಕೂಡಿದೆ.

colocasia_esculenta_dsc07801

ಕೆಸುವಿನ ಗೆಡ್ಡೆ

ಕೆಸುವಿನ ಗೆಡ್ಡೆಯಿಂದ ವಿವಿಧ ರಾಸಾಯನಿಕಗಳನ್ನು ಬಳಸಿ ಪ್ರತ್ಯೇಕಿಸಿದ ಘಟಕಗಳಲ್ಲಿ ಮೆಥನಾಲ್ ನಲ್ಲಿ ಕರಗುವ ವಸ್ತುವೊಂದು ಅತಿ ಹೆಚ್ಚಿನ ಕೀಟಾಹಾರಿ ಗುಣವನ್ನು ತೋರಿಸಿತು. ಇದನ್ನು ಪ್ರತ್ಯೇಕಿಸಿ, ಶುದ್ಧಗೊಳಿಸಿದ ರಾಜಶೇಖರ್ ತಂಡ ಅದರ ರಚನೆಯನ್ನೂ ಪತ್ತೆ ಮಾಡಿ, ಅದು 2,3-ಡೈಮೀಥೈಲ್ ಮ್ಯಾಲೆಯಿಕ್ ಅನ್ ಹೈಡ್ರೈಡ್ ಎಂದು ಗುರುತಿಸಿದೆ. ಇದು ಕೂಡಿಟ್ಟ ಧಾನ್ಯಗಳನ್ನು ಸಾಮಾನ್ಯವಾಗಿ ಕಾಡುವ ನೊಣ, ಜಿರಲೆ, ಹಿಟ್ಟಿನ ಹುಳಗಳನ್ನು ಕೃತಕ ರಾಸಾಯನಿಕ ಮೀಥೈಲ್ ಬ್ರೋಮೈಡ್ ಹಾಗೂ ಫಾಸ್ಫೀನ್ ನಷ್ಟೆ ಸಮರ್ಥವಾಗಿ ಕೊಲ್ಲಬಲ್ಲದು. ಒಂದೇ ರಾಸಾಯನಿಕ ಹಲವು ಕೀಟಗಳನ್ನು ಕೊಲ್ಲುವುದು ನಿಜಕ್ಕೂ ಲಾಭಕಾರಿ. ಕೆಸುವಿನ ಗೆಡ್ಡೆಯ  ಈ ಅಂಶವನ್ನು ಪ್ರಯೋಗಿಸಿದ ಎರಡೇ ದಿನಗಳಲ್ಲಿ ಧಾನ್ಯಗಳಲ್ಲಿದ್ದ ಕೀಟಗಳ ಸಂಖ್ಯೆ ಅರೆಪಾಲಾಯಿತು. ಹಾಗೆಯೇ, ಇದು ಕೀಟಗಳ ಮರಿ (ಹುಳು) ಗಳನ್ನೂ ಬೆಳೆಯಗೊಡಲಿಲ್ಲವಂತೆ. ಇಷ್ಟಾದರೂ, ಈ ರಾಸಾಯನಿಕ ಬೆರೆಸಿದ ಬೀಜಗಳು ಯಾವುದೇ ಆತಂಕವಿಲ್ಲದೆ ನೂರಕ್ಕೆ ತೊಂಬತ್ತು ಪಾಲು ಮೊಳೆತವು. ಅರ್ಥಾತ್, ಕೀಟಗಳನ್ನು ಕೊಲ್ಲುವುದಲ್ಲದೆ, ಬೀಜಗಳಿಗೆ ಇದರಿಂದ ಯಾವ ಹಾನಿಯೂ ಇಲ್ಲ.

ಮೆಕ್ಕೆಜೋಳವನ್ನು ಕಾಡುವ ಹುಳು, ಗೋದಿಹಿಟ್ಟನ್ನು ಹಾಳುಗೆಡವುವ ಹುಳು, ನೊಣ ಮತ್ತು ಜಿರಲೆಗಳ ಕಾಟವನ್ನು ತಡೆಯಲು ಇದು ಶಕ್ತವೇನೋ ಹೌದು. ಆದರೆ ಆಹಾರದಲ್ಲಿ ಉಪಯೋಗಿಸಿದರೆ ಅಪಾಯವಿಲ್ಲವೇ? ಎಂದಿರಾ. ಇದನ್ನು ಪಡೆದ ಗೆಡ್ಡೆಯನ್ನು ನಾವು ಆಹಾರವಾಗಿ ಬಳಸುವುದು ಇದ್ದೇ ಇದೆ. ಹೀಗಾಗಿ ಆ ಗೆಡ್ಡೆಯಲ್ಲಿರುವ ರಾಸಾಯನಿಕ ನಮಗಂತೂ ಅಪಾಯಕಾರಿಯಾಗಿರಲಿಕ್ಕಿಲ್ಲ ಎನ್ನುವುದು ಸಾಮಾನ್ಯ ಅಭಿಪ್ರಾಯ.

ಹಾಗಿದ್ದರೆ ಇದು ಯಾವಾಗ ಬಳಕೆಗೆ ಸಿಗಬಹುದು ಎನ್ನುವುದು ಮುಂದಿನ ಪ್ರಶ್ನೆ. ಇನ್ನು ಇದರ ಕ್ಷಮತೆ ಹಾಗೂ ಬಳಕೆಯ ವಿಧಾನಗಳು ಹದಗೊಳ್ಳಬೇಕು. ಅನಂತರವಷ್ಟೆ ಇದರ ಸಾರ್ವತ್ರಿಕೆ ಬಳಕೆಯ ಸುದ್ದಿ. ಅದಕ್ಕೆ ಇನ್ನೂ ಹಲವು ತಿಂಗಳೋ, ವರ್ಷಗಳೋ ಕಾಯಬೇಕಷ್ಟೆ.

ಆಕರ:

Rajashekar, Y. et al. 2, 3-Dimethylmaleic anhydride (3, 4-Dimethyl-2, 5-furandione): A

plant derived insecticidal molecule from Colocasia esculenta var. esculenta (L.) Schott. Sci. Rep. 6, 20546; published 3rd February 2016.  doi: 10.1038/srep20546 (2016).

 

Published in: on ಫೆಬ್ರವರಿ 4, 2016 at 5:30 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಜೀಕಾ ವೈರಸ್. ಏನಿದು?

ಜೀಕಾ ಎನ್ನುವ ಹೆಸರು ಕೇಳಿ ಟಾಟಾ ಕಂಪೆನಿ ತನ್ನ ಹೊಸ ಕಾರಿಗೆ ಇಟ್ಟಿದ್ದ  ಇದೇ ಹೆಸರನ್ನು ಬದಲಿಸಲಿದೆ. ಬ್ರೆಜಿಲ್್ ದೇಶದಲ್ಲಿ ಹರಡಿರುವ ಜೀಕಾ ವೈರಸ್ ಉಂಟು ಮಾಡಿರುವ ಭೀತಿ ಇದು. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸ್ ಸೋಂಕನ್ನು ಜಾಗತಿಕ ಸಾಂಕ್ರಾಮಿಕ ರೋಗ  ಎಂದು ವರ್ಗೀಕರಿಸಿದೆ. ಹಾಗೆಯೇ ಭಾರತವೂ ಕೂಡ ಸದ್ಯಕ್ಕೆ ಜೀಕಾ ಧಾಂದಲೆ ನಡೆಸುತ್ತಿರುವ ರಾಷ್ಟ್ರಗಳಿಗೆ ಪ್ರವಾಸ ಹೋಗುವ ಬಗ್ಗೆ, ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ, ಎಚ್ಚರಿಕೆಯ ಸೂಚನೆಯನ್ನು ನೀಡಿದೆ. ಜೀಕಾ ಸೋಂಕು ಹತ್ತಿದ ಬಸುರಿಯರಿಗೆ ಹುಟ್ಟುವ ಮಗು ಮೈಕ್ರೊಕೆಫಾಲಿ ಎನ್ನುವ ದೋಷವನ್ನು ಹೊತ್ತು ಜನಿಸಬಹುದೆನ್ನುವುದೂ ಈ ಭೀತಿಗೆ ಕಾರಣ. ಮೈಕ್ರೊಕೆಪಾಲಿ ಮಾರಕವಲ್ಲ. ಮಗು ಬದುಕು ಉಳಿಯುತ್ತದೆ. ಆದರೆ ಅದರ ಮಿದುಳಿನ ಕ್ಷಮತೆ ಕಡಿಮೆಯಾಗಬಹುದು. ಸಾಮಾನ್ಯ ಬದುಕಿಗೆ ತೊಂದರೆ ಆಗದಿದ್ದರೂ, ಬೌದ್ಧಿಕ ಕೊರತೆ ಕಾಣಿಸಬಹುದು. ಇದೋ ಈ ಭೀತಿಯನ್ನುಂಟು ಮಾಡಿದ ಜೀಕಾ ವೈರಸ್ ಬಗ್ಗೆ ಇತ್ತೀಚೆಗೆ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಅನುವಾದ  ನಿಮಗಾಗಿ.

ಜೀಕಾ ವೈರಸ್ ಎಲ್ಲಿಂದ ಬಂತು?

zika-virus

ಜೀಕಾ ವೈರಸ್ ಸ್ವರೂಪ

1947ನೇ ಇಸವಿಯಲ್ಲಿ ಜೀಕಾ ವೈರಸ್ ಶೋಧವಾಯಿತು. 1952ರಲ್ಲಿ ಮೊತ್ತ ಮೊದಲ ಬಾರಿಗೆ ಇದರ ವಿವರಗಳನ್ನು ಪ್ರಕಟಿಸಲಾಗಿತ್ತು. ಈ ವೈರಸ್ ಆಫ್ರಿಕಾ ಹಾಗೂ ಆಗ್ನೇಯ ಏಶಿಯಾದಲ್ಲಿ ಇದ್ದದ್ದು ತಿಳಿದಿದ್ದರೂ, ಕಳೆದ ದಶಕದ ವರೆಗೆ ಕೇವಲ ಹದಿನೈದು ಕೇಸುಗಳ ಉಲ್ಲೇಖವಷ್ಟೆ ಇದ್ದುವು. 2007ರಲ್ಲಿ ಮೈಕ್ರೊನೇಶಿಯಾ ಸಂಯುಕ್ತ ಸಂಸ್ಥಾನದ ದ್ವೀಪಗಳಲ್ಲೊಂದಾದ ಯಾಪ್ ನಲ್ಲಿ ಇದು ಸಾಂಕ್ರಾಮಿಕವಾಗಿ ಕಾಣಿಸಿಕೊಂಡಿತು. ಅಂದಿನಿಂದ ಶಾಂತಸಾಗರದ ವಿವಿಧ ದ್ವೀಪಗಳಲ್ಲಿ ಪಯಣಿಸಿದ  ಇದು ಕೊನೆಗೆ ಬ್ರೆಜಿಲ್ ತಲುಪಿತು. ಇಲ್ಲಿಂದ ಈ ವೈರಸ್ ಅತಿ ಶೀಘ್ರವಾಗಿ ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕ, ಮೆಕ್ಸಿಕೋ ಹಾಗೀ ಕೆರಿಬಿಯನ್ ದ್ವೀಪ ಸಮೂಹಗಳಿಗೆ ಹರಡಿದೆ.

ಈಗ ಇದು ಹೀಗೆ ವಿಸ್ಫೋಟಿಸಲು ಕಾರಣವೇನು?

ಈ ಹಿಂದೆಯೂ ಆಫ್ರಿಕಾ ಹಾಗೂ ಏಶಿಯಾದಲ್ಲಿ ಜೀಕಾ ವೈರಸ್ ನ ರೋಗ ಹರಡಿದ್ದಿರಬಹುದಾದರೂ ಅವು ಗಮನಕ್ಕೆ ಬಾರದೇ ಹೋದುವು. ವಿಜ್ಞಾನಿಗಳೂ ಇದರತ್ತ ಗಮನ ಹರಿಸಲಿಲ್ಲ. ಇಂದು ಕಾಣಿಸಿಕೊಂಡ ಬೃಹತ್ ಸೋಂಕು ಎಂದಾದರೊಂದು ದಿನ ಆಗಲೇಬೇಕಿತ್ತು. ಲ್ಯಾಟಿನ್ ಅಮೆರಿಕದಲ್ಲಿ ಹಳದಿ ಜ್ವರದ ಸೊಳ್ಳೆ ಎಂದೇ ಹೆಸರಾದ ಹಾಗೂ ಜೀಕಾ ವೈರಸ್ ಹರಡುವ ಪ್ರಮುಖ ಕೀಟ ಏಡಿಸ್ ಈಜಿಪ್ಟಿ ವ್ಯಾಪಕವಾಗಿದೆ. (ಇತ್ತೀಚೆಗೆ ಪ್ರಪಂಚದ ಹಲವೆಡೆ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಏಶಿಯಾದ ಟೈಗರ್ ಸೊಳ್ಳೆ ಏಡಿಸ್ ಆಲ್ಬೊಪಿಕ್ಟಸ್ ಕೂಡ ಇದರ ವಾಹಕವಿರಬಹುದೆಂಬ ಊಹೆ ಇದೆ). ಜೊತೆಗೆ ಅಮೆರಿಕದಲ್ಲಿ ಯಾರಿಗೂ ಇದನ್ನೆದುರಿಸುವ ರೋಗನಿರೋಧಕತೆ ಇರಲಿಲ್ಲ. ಪ್ರವಾಸಗಳು ಇದು ಹರಡಲು ನೆರವಾದವು. ಏಡಿಸ್ ಸೊಳ್ಳೆಗಳು ಕೆಲವು ನೂರು ಮೀಟರುಗಳಷ್ಟು ದೂರವಷ್ಟೆ ಪಯಣಿಸಬಲ್ಲುವು. ಆದರೆ ಜೀಕಾ ಸೋಂಕಿರುವ ಮನುಷ್ಯರು ಕಾರು, ಬಸ್ಸು, ರೈಲು, ವಿಮಾನಗಳನ್ನು ಹತ್ತಿ ಪ್ರವಾಸ ಮಾಡಿದಂತೆಲ್ಲ, ಇದು ದೇಶ ವಿದೇಶಗಳಿಗೆ ಹರಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ವೈರಸ್ ದೂರ, ದೂರಕ್ಕೂ ಹರಡಿದೆ.

ಜೀಕಾ ಯುರೋಪು ಮತ್ತು ಅಮೆರಿಕಾದಲ್ಲೂ ಹರಡೀತೇ?

ಯುರೋಪು ಹಾಗೂ ಅಮೇರಿಕದಲ್ಲಿ ಈಗಾಗಲೇ ಕೆಲವು ‘ಆಮದಾದ’ ಕೇಸುಗಳಿವೆ. ಈ ರೋಗಿಗಳು ಜೀಕಾ ಸೋಂಕಿರುವ ದೇಶಗಳಿಂದ ಪ್ರವಾಸ ಬಂದವರು. ಲ್ಯಾಟಿನ್ ಅಮೆರಿಕದಲ್ಲಿ ಈ ರೋಗದ ವ್ಯಾಪ್ತಿಯನ್ನು ಗಮನಿಸಿದರೆ ಇದು ನಿರೀಕ್ಷಿಸಿದ ಫಲಿತಾಂಶವೇ ಸರಿ.  ಸ್ಥಳೀಯವಾಗಿ ಏನಾದರೂ ಸೋಂಕು ಹರಡಬಹುದೇ? ವ್ಯಕ್ತಿಯಿಂದ ವ್ಯಕ್ತಿಗೆ ಸೊಳ್ಳೆಗಳು ಇದನ್ನು ಹರಡುತ್ತಿರಬಹುದೇ ಎನ್ನುವುದೇ ಪ್ರಮುಖ ಪ್ರಶ್ನೆ. ಈ ಸಾಧ್ಯತೆ ಖಂಡಿತ ಇದೆ. ದಕ್ಷಿಣ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಏಡಿಸ್ ಆಲ್ಬೊಪಿಕ್ಟಸ್ ಇದೆ. ಇದು ಉತ್ತರ ಯುರೋಪಿಗೂ ವಿಸ್ತರಿಸಬಹುದು. ಅಮೆರಿಕೆ ಸಂಯುಕ್ತ ಸಂಸ್ಥಾನದ ದಕ್ಷಿಣ ಹಾಗೂ ಪೂರ್ವ ರಾಜ್ಯಗಳಲ್ಲಿಯೂ ಏಡಿಸ್ ಈಜಿಪ್ಟಿ ಹಾಗೂ ಏಡಿಸ್ ಆಲ್ಬೊಪಿಕ್ಟಸ್ ಸೊಳ್ಳೆಗಳನ್ನು ಕಾಣಬಹುದು.

ಸೊಳ್ಳೆಗಳಿಂದ ಹರಡುವ ರೋಗಗಳ ಬಗೆಗಿನ ಈ ಹಿಂದಿನ ಅನುಭವಗಳ ಆಧಾರದ ಮೇಲೆ ಉಳಿದೆಡೆಗಳಿಗಿಂತ ಈ ಪ್ರದೇಶಗಳಲ್ಲಿ ಸಾಂಕ್ರಾಮಿಕತೆ ಕಡಿಮೆಯಿರುತ್ತದೆಯೆಂದು ವಿಜ್ಞಾನಿಗಳ ನಿರೀಕ್ಷೆ. ಇತ್ತೀಚೆಗೆ ಫ್ಲಾರಿಡಾ, ಟೆಕ್ಸಾಸ್ ಹಾಗೂ ಹವಾಯಿ ರಾಜ್ಯಗಳಲ್ಲಿ ಕಾಣಿಸಿಕೊಂಡ ಡೆಂಘೀ ಜ್ವರ ಕೆಲವು ನೂರು ಜನರಿಗೆ ಖಾಯಿಲೆ ತಂದಿದೆಯಷ್ಟೆ. ಉತ್ತರ ಇಟಲಿಯಲ್ಲಿ 2007 ರಲ್ಲಿ ಕಾಣಿಸಿಕೊಂಡ ಸೊಳ್ಳೆಯಿಂದ ಹರಡುವ ಚಿಕುನ್ ಗುನ್ಯ ಖಾಯಿಲೆ (ಈ ಸೋಂಕನ್ನು ಭಾರತೀಯನೊಬ್ಬ ಹೊತ್ತು ತಂದಿದ್ದ) ಸುಮಾರು 197 ಜನರನ್ನು ತಾಕಿತಷ್ಟೆ. ಈ ದೇಶಗಳಲ್ಲಿ ಸೋಂಕಿನ ವ್ಯಾಪ್ತಿ ಕಡಿಮೆ ಇರುವುದಕ್ಕೆ ಒಂದು ಕಾರಣ ಇಲ್ಲಿಯ ಜನತೆ ದಿನದಲ್ಲಿ ಅತಿ ಕಡಿಮೆ ಸಮಯವನ್ನು ಮನೆಯಿಂದ ಹೊರಗಡೆ ಕಳೆಯುತ್ತಿರುವುದು ಇರಬಹುದು.

ಜೀಕಾ ಹುಟ್ಟಿನಿಂದಲೇ ಬರುವ ದೋಷಗಳನ್ನು ಹೆಚ್ಚಿಸುತ್ತಿದೆ ಎನ್ನುವುದು ಖಾತ್ರಿಯಾಗಿದೆಯೇ?

original_microcephaly

ಮೈಕ್ರೊಕೆಫಾಲಿ ಎಂದರೇನು?

ಇಲ್ಲ. ಆದರೆ ಜೀಕಾ ವೈರಸ್ ಬಾಧೆ ತೀವ್ರವಾಗಿರುವ ಬ್ರೆಜಿಲ್ ನಲ್ಲಿ ಇದಕ್ಕೆ ಪೂರಕವಾಗಿ ಸಾಂದರ್ಭಿಕ ಪುರಾವೆಗಳಿವೆ. ಇಲ್ಲಿ ಮೈಕ್ರೊಕೆಫಾಲಿ (ಸಣ್ಣತಲೆ) ಎನ್ನುವ ದೋಷವಿರುವ ಮಕ್ಕಳ ಹುಟ್ಟು ಹೆಚ್ಚಾಗಿದೆ. ಈ ದೋಷದಲ್ಲಿ ಮಿದುಳಿನ ಬೆಳವಣಿಗೆ ಕುಂಠಿತವಾಗುವುದರಿಂದ ಸಾಮಾನ್ಯಕ್ಕಿಂತಲೂ ಕಡಿಮೆ ಗಾತ್ರದ ತಲೆ ಬೆಳೆಯುತ್ತದೆ. ಇದನ್ನು ಖಾತ್ರಿ ಮಾಡಿಕೊಳ್ಳಲು ಗರ್ಭಿಣಿ ಮಹಿಳೆಯರ ಮೇಲೆ ಕೈಗೊಂಡಿರುವ ಅಧ್ಯಯನದ ಫಲಿತಾಂಶಗಳು ಸಿಗಲು ಇನ್ನೂ ಹಲವು ತಿಂಗಳುಗಳಾಗಬಹುದು. ಕಳೆದ ಜೂನ್ ಮತ್ತು ಜುಲೈನಲ್ಲಿ ಇಲ್ಲಿನ ಗರ್ಭಿಣಿ ಮಹಿಳೆಯರನ್ನು ಅಲ್ಟ್ರಾಸೌಂಡ್ ಬಳಸಿ ಪರೀಕ್ಷಿಸುತ್ತಿದ್ದಾಗ ಮೈಕ್ರೊಕೆಫಾಲಿ ಸಂಖ್ಯೆ ಹೆಚ್ಚಿದ್ದದ್ದನ್ನು ಬ್ರೆಜಿಲ್ಲಿನ ವೈದ್ಯರು ಗಮನಿಸಿದ್ದರು. ಇದು ಇದ್ದಕ್ಕಿದ್ದ ಹಾಗೆ ಜೀಕಾ ರೋಗ ಹೆ್ಚ್ಚಾದ ಕೆಲವು ತಿಂಗಳ ನಂತರವಷ್ಟೆ. ಇಲ್ಲಿನ ಬಾಹಿಯಾದಲ್ಲಿರುವ ರಾಷ್ಟ್ರೀಯ ವಿವಿಯ ಗರ್ಭವಿಜ್ಞಾನ ತಜ್ಞ ಮಾನೋಯಿಲ್ ಸಾರ್ನೋ ಹೇಳುವ ಪ್ರಕಾರ ಈಗ ಕಾಣಿಸಿಕೊಳ್ಳುತ್ತಿರುವ ಮಿದುಳಿನ ದೋಷಗಳು ಸೈಟೊಮೆಗಾಲೊ ವೈರಸ್ ಹಾಗೂ ರುಬೆಲ್ಲಾ ವೈರಸ್ಸಿನಂತಹ ಇತರೆ ಸೋಂಕುಗಳುಂಟು ಮಾಡುವುದರಿಂದ ಭಿನ್ನವಾಗಿವೆ. ಕಳೆದ ಆಗಸ್ಟ್ ನಲ್ಲಿ ಈತನ ತಂಡ ಜೀಕಾ ಸೋಂಕಿರುವ ಗರ್ಭಿಣಿಯರ ಅಧ್ಯಯನವನ್ನು ಆರಂಭಿಸಿದೆ. ಇದರ ಫಲಿತಾಂಶ ಮುಂದಿನ ಬೇಸಗೆಯ ವೇಳೆಗೆ ದೊರೆಯಬಹುದು. ಬ್ರೆಜಿಲ್ ಮತ್ತು ಕೊಲಂಬಿಯಾದಲ್ಲಿ ಬೇರೆ ಕಡೆಗಳಲ್ಲಿಯೂ ಇಂತಹುದೇ ಅಧ್ಯಯನಗಳು ಆರಂಭವಾಗಿವೆ.

ವಿಜ್ಞಾನಿಗಳಿಗೆ ಈ ಬಗ್ಗೆ ಇರುವ ಇತರೆ ಪ್ರಶ್ನೆಗಳು ಯಾವುವು?

ಬಹಳಷ್ಟು ಪ್ರಶ್ನೆಗಳಿವೆ. ಯಾರಿಗೆ ಸೋಂಕಿದೆ, ಯಾರಿಗೆ ಇಲ್ಲ ಎನ್ನುವುದನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಏಕೆಂದರೆ ವೈರಸ್ ಪತ್ತೆ ಮಾಡುವ ವಿಧಾನಗಳು ಪಕ್ವವಾಗಿಲ್ಲ. ರೋಗಿಯ ರಕ್ತದಲ್ಲಿ ವೈರಸ್ಸಿನ ಆರ್ ಎನ್ ಎ ಯ ಅವಶೇಷಗಳನ್ನು ಹುಡುಕುವುದು ಅತಿ ಖಚಿತವಾದ ಪತ್ತೆ ಪರೀಕ್ಷೆ. ಆದರೆ ಇವು ರೋಗಲಕ್ಷಣಗಳು ಕಾಣಿಸಿಕೊಂಡ ಒಂದು ವಾರದೊಳಗೆ ನಡೆದರೆ ಮಾತ್ರ ಫಲ ನೀಡುತ್ತವೆ. ಅನಂತರ ರಕ್ತದಲ್ಲಿರುವ ಪ್ರತಿಕಾಯ (ಆಂಟಿಬಾಡಿ) ಗಳನ್ನು ಪತ್ತೆ ಮಾಡಬಹುದು. ಆದರೆ ಸದ್ಯಕ್ಕೆ ಜೀಕಾ ವೈರಸ್ಸಿನ ಆಂಟಿಬಾಡಿಗಳನ್ನು ಪತ್ತೆ ಮಾಡುವ ಪರೀಕ್ಷೆಗಳು ಬ್ರೆಜಿಲ್ ಹಾಗೂ ಲ್ಯಾಟಿನ್ ಅಮೆರಿಕದ ಬಹುತೇಕ ಪ್ರದೇಶದಲ್ಲಿ ವ್ಯಾಪಕವಾಗಿ ಹರಡಿರುವ ಡೆಂಘೀ ವೈರಸ್ಸಿನ ಆಂಟಿಬಾಡಿಗಳ ಜೊತೆಗೂ ಪ್ರತಿಕ್ರಿಯಿಸುತ್ತದೆ. ಈ ಪ್ರದೇಶಗಳ ಬಹುತೇಕ ವಯಸ್ಕರ ದೇಹದಲ್ಲಿ ಡೆಂಘೀ ಆಂಟಿಬಾಡಿಗಳು ಇದ್ದೇ ಇವೆ. ಹೀಗಾಗಿ ಮೈಕ್ರೊಕೆಫಾಲಿ ಇರುವ ಮಗುವಿಗೆ ಜನ್ಮ ನೀಡಿದ ತಾಯಿ ಬಸುರಿಯಾಗಿದ್ದಾಗ ಜೀಕಾದ ಸೋಂಕೇ ಇತ್ತೇ ಎನ್ನುವುದನ್ನು ತಿಳಿಯುವುದು ಕಷ್ಟವಾಗಿದೆ.

ಲೈಂಗಿಕ ಸಂಪರ್ಕದಿಂದ ಜೀಕಾ ಹರಡುತ್ತದೆಯೋ ಎನ್ನುವುದನ್ನು ಸಂಶೋಧಕರು ತಿಳಿಯಬೇಕಿದೆ. 2008ರಲ್ಲಿ ಆಫ್ರಿಕಾದಲ್ಲಿ ಈ ಸೋಂಕನ್ನು ಪಡೆದ ಅಮೆರಿಕೆಯ ವೈದ್ಯನೊಬ್ಬ ಅನಂತರ ತನ್ನ ಮಡದಿಗೆ ಇದನ್ನು ಸೋಂಕಿಸಿದ್ದ. ಇದೇ ಬಗೆಯಲ್ಲಿ ಲೈಂಗಿಕ ಸಂಪರ್ಕದಿಂದ ಸೋಂಕುಂಟಾಗಿರುವ ಮತ್ತೊಂದು ಘಟನೆ ಪಾಲಿನೇಶಿಯಾ ದ್ವೀಪಗಳಲ್ಲಿ 2013 ರಲ್ಲಿ ವರದಿಯಾಗಿದೆ. ಇದರಿಂದಾಗಬಹುದಾದ ಅಪಾಯಗಳ ಅರಿವು ಸದ್ಯಕ್ಕೆ ವೈದ್ಯರಿಗಿಲ್ಲ. (ನನಗೇನಾದರೂ ವೈರಸ್ ಸೋಂಕಿದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮುನ್ನ ಒಂದೆರಡು ತಿಂಗಳಾದರೂ ಕಾಯುತ್ತೇನೆ ಎಂದು ನ್ಯೂ ಯಾರ್ಕ್ ಟೈಮ್ಸ್ ಗೆ ತಿಳಿಸಿದ್ದಾರೆ ಅಮೆರಿಕೆಯ ಗ್ಯಾಲ್ವೆಸ್ಟನ್ನಿನಲ್ಲಿರುವ ಟೆಕ್ಸಾಸ್ ವಿವಿಯ ವೈರಸ್ ತಜ್ಞ ಸ್ಕಾಟ್ ವೀವರ್)

ಜೀಕಾ ಚಿಕಿತ್ಸೆಗೆ ಯಾವ ಔಷಧಗಳು ಲಭ್ಯವಿವೆ?

ಯಾವುದೂ ಇಲ್ಲ. ಕಳೆದ ವರ್ಷದವರೆಗೂ ಜೀಕಾ ಎಷ್ಟು ಅಪರೂಪವಾದ ಸೋಂಕಾಗಿತ್ತೆಂದರೆ ಅದು ಇಷ್ಟು ಗಂಭೀರವೆಂದು ಯಾರೂ ಊಹಿಸಿರಲಿಲ್ಲ. ಹೀಗಾಗಿ ಅದಕ್ಕಾಗಿ ಔಷಧಗಳನ್ನು ಹುಡುಕಲು ಯಾರೂ ಪ್ರಯತ್ನಿಸಿರಲೂ ಇಲ್ಲ. ಈಗಲೂ ಈ ವೈರಸ್ ಹೀಗೆ ದಾಳಿ ನಡೆಸಿರುವಾಗಲೂ ಅದನ್ನು ಎದುರಿಸುವ ಔಷಧಗಳಿಗೆ ಬೃಹತ್ ಮಾರುಕಟ್ಟೆ ದೊರೆಯಬಹುದೆಂಬ ಖಾತ್ರಿ ಇಲ್ಲ. ಏಕೆಂದರೆ ಇದರ ಸೋಂಕಿರುವ ಬಹುತೇಕ ಜನರಲ್ಲಿ ಸೋಂಕಿರಬಹುದಾದ ಯಾವುದೇ ಲಕ್ಷಣಗಳೂ ಕಾಣುವದಿಲ್ಲ, ಕಂಡರೂ ಅತ್ಯಲ್ಪ. ಜೊತೆಗೆ ಔಷಧಗಳು ಬಸುರಿನಲ್ಲಿ ಜೀಕಾ ಸೋಂಕಿದಾಗ ಹುಟ್ಟುವ ಮಕ್ಕಳಲ್ಲಿ ಕಾಣುವ ದೋಷಗಳನ್ನು ತಡೆಯಬಲ್ಲುವು ಎನ್ನುವುದೂ ಸ್ಪಷ್ಟವಾಗಿಲ್ಲ. ಸೋಂಕುಂಟಾಗಿ ಅವರಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ. ಮೈಕ್ರೊಕೆಫಾಲಿಯನ್ನು ತಡೆಯಲು ಜೀಕಾ ವಿರುದ್ಧದ ಲಸಿಕೆಯೊಂದೇ ಹಾದಿ.

ಲಸಿಕೆ ಯಾವಾಗ ಸಿದ್ಧವಾಗಬಹುದು?

ಅದಕ್ಕೆ ವರ್ಷಗಳೇ ಬೇಕಾಗುತ್ತದೆ. ಜೀಕಾ ಲಸಿಕೆಗಳ ಶೋಧದಲ್ಲಿ ಹಲವರು ತೊಡಗಿಕೊಂಡಿದ್ದಾಋಎ. ಕನಿಷ್ಟ ಹತ್ತಾರು ತಿಂಗಳಾದರೂ ಬೇಕು. ಇವೆಲ್ಲವೂ ಸದ್ಯದಲ್ಲಿ ಲಭ್ಯವಿರುವ ಲಸಿಕೆಗಳ ತಂತ್ರವನ್ನೇ ಅವಲಂಬಿಸಿವೆ. ಉದಾಹರಣೆಗೆ, ರೋಗಜೀವಿಯಲ್ಲಿರುವ ಪ್ರೊಟೀನುಗಳನ್ನು ಅಪಾಯಕಾರಿಯಲ್ಲದ ಇತರೆ ವೈರಸ್ ಜೊತೆಗೆ ಕೂಡಿಸಿ ಹಲವು ರೋಗಗಳಿಗೆ ಲಸಿಕೆಗಳನ್ನು ತಯಾರಿಸುತ್ತಾರೆ. ಇಂತಹ ವೈರಸ್ಗಳನ್ನೇ ಉಪಯೋಗಿಸಿಕೊಂಡು ಜೀಕಾಗೂ ಲಸಿಕೆಯನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ. ಹೀಗೆ ಫಲ ನೀಡಬಲ್ಲ ಲಸಿಕೆಯೊಂದು ಸಿದ್ಧವಾದ ಮೇಲೆ ಅದನ್ನು ಪ್ರಾಣಿಗಳಲ್ಲಿ ಮೊದಲು ಪರೀಕ್ಷಿಸಿ ಅನಂತರ ಮನುಷ್ಯರಲ್ಲಿ ಪ್ರಯೋಗಿಸಬೇಕು. ಮನುಷ್ಯರಲ್ಲು ಮೊದಲಿಗೆ ಅವುಗಳ ಸುರಕ್ಷತೆಯ ಬಗ್ಗೆ ಸಣ್ಣ ಪರೀಕ್ಷೆಗಳನ್ನು ನಡೆಸಿ ಅನಂತರ ಲಸಿಕೆಗಳು ನಿಜವಾಗಿಯೂ ಫಲಕಾರಿಯೇ ಎನ್ನುವುದರ ಪರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕಾಗುತ್ತದೆ. ಇವೆಲ್ಲಕ್ಕೂ ಕನಿಷ್ಟವೆಂದರೂ ಹತ್ತರಿಂದ ಹದಿನೈದು ತಿಂಗಳುಗಳು ಬೇಕು. ಈಗಿನ ತುರ್ತು ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತುಸು ಶೀಘ್ರವಾಗಿ ಕೆಲಸ ಮಾಡಬಹುದು. ಹಾಗಿದ್ದರೂ ಜೀಕಾ ವೈರಸ್ ಮಾರುಕಟ್ಟೆಯಲ್ಲಿ ದೊರೆಯಬೇಕಂದರೆ ಕನಿಷ್ಟ ಐದರಿಂದ ಏಳು ವರ್ಷಗಳು ಬೇಕು ಎನ್ನುತ್ತಾರೆ ಅಮೆರಿಕೆಯ ರಾಷ್ಟ್ರೀಯ ಅಲರ್ಜಿ ಹಾಗೂ ಸೋಂಕು ರೋಗಗಳ ಸಂಸ್ಥೆಯ ನಿರ್ದೇಶಕರಾದ ಆಂತೊನಿ ಫಾಸಿ.

ಹಾಗಿದ್ದರೆ ಈ ವೈರಸ್ ಹರಡುವುದನ್ನು ನಾವು ತಡೆಯುವುದು ಹೇಗೆ?

ಸೊಳ್ಳೆಗಳು ಮನುಷ್ಯರನ್ನು ಕಚ್ಚದಂತೆ ನೋಡಿಕೊಳ್ಳುವುದು. ಹೂದಾನಿಗಳು, ಖಾಲಿ ಬಾಟಲ್ಲುಗಳು ಹಾಗೂ ಬಿಸಾಡಿದ ಟಯರುಗಳೇ ಮುಂತಾದ ಏಡಿಸ್ ಸೊಳ್ಳೆಗಳು ಬೆಳೆಯುವಂತಹ ಸಣ್ಣ ಪು್ಟ್ಟ ನಿಂತ ನೀರಿನ ಸೆಲೆಗಳನ್ನು ಕಡಿಮೆ ಮಾಡಿ  ಸೊಳ್ಳೆಗಳ ಸಂಖ್ಯೆಯನ್ನು ಕುಗ್ಗಿಸಲು ಪ್ರಯತ್ನಿಸಬಹುದು. ಸೊಳ್ಳೆ ನುಸುಳದ ಹಾಗೆ ಕಿಟಕಿಗಳನ್ನು ಪರದೆಯಿಂದ ಮುಚ್ಚುವುದು, ಮೈ ಮುಚ್ಚುವಂತೆ ಬಟ್ಟೆ ಧರಿಸುವುದು, ಸೊಳ್ಳೆ ದೂರವಿಡುವ ಕ್ರೀಮ್ ಗಳನ್ನು ಬಳಸುವುದು ಮುಂತಾದ ಕ್ರಮಗಳಿಂದ ವೈಯಕ್ತಿಕವಾಗಿಯೂ ಸೊಳ್ಳೆ ಕಡಿಯದಂತೆ ನೋಡಿಕೊಳ್ಳಬೇಕು. ಬಸುರಿ ಹೆಂಗಸರಿಗಂತು ಇದು ಬಲು ಮುಖ್ಯ  ಆದರೆ ಈ ರೀತಿ ಸೊಳ್ಳೆ ನಿಯಂತ್ರಣದಿಂದಾಗುವ ಫಲಿತಾಂಶಗಳು ಸಾಧಾರಣವಷ್ಟೆ ಎಂದು ಹಿಂದಿನ ಪ್ರಯತ್ನಗಳು ಪಾಠ ಕಲಿಸಿವೆ ಜೊತೆಗೆ ಇವನ್ನು ನಿರಂತರವಾಗಿ ಮುಂದುವರೆಸುವುದು ಕಷ್ಟ.

ಸೊಳ್ಳೆಗಳ ನಿಯಂತ್ರಣಕ್ಕೆ ಬೇರೆ ವಿಧಾನಗಳಿರಬಹುದೇ?

ಸದ್ಯಕ್ಕೆ ಇಲ್ಲ. ಆದರೆ ಕೆಲವು ಮುಂದೆ ದೊರೆಯಬಹುದು. ಆಕ್ಸಿಟೆಕ್ ಎನ್ನುವ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಏಡಿಸ್ ಈಜಿಪ್ಟಿ ಸೊಳ್ಳೆಗಳ ಮರಿಗಳು ಬೆಳೆಯದಂತೆ ಹುಟ್ಟುವ ಮೊದಲೇ ಕೊಲ್ಲುವ ಜೀನ್ ಒಂದರ ವಿನ್ಯಾಸ ಮಾಡಿದೆ. ಈ ತಳಿಯ ಗಂಡು ಸೊಳ್ಳೆಗಳನ್ನು ಬೃಹತ್ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ, ಅವು ಸ್ಥಳೀಯ ಹೆಣ್ಣು ಸೊಳ್ಳೆಗಳ ಜೊತೆ ಕೂಡುವುವು. ಇದರಿಂದ ಹುಟ್ಟುವ ಸಂತಾನಗಳು ಬೆಳೆಯದೇ ಸಾಯುವುದರಿಂದ ಸೊಳ್ಳೆಯ ಸಂಖ್ಯೆ ಕಡಿಮೆಯಾಗುವುದು. ಇದರ ಪರೀಕ್ಷೆಗಳನ್ನು ನಡೆಸಲಾಗಿದೆ.

ಮತ್ತೊಂದೆಡೆ ಏಡಿಸ್ ಈಜಿಪ್ಟಿ ಸೊಳ್ಳೆಗಳಿಗೆ ವೋಲ್ಬಾಚಿಯ ಎನ್ನುವ ಬೆಕ್ಟೀರಿಯಾವನ್ನು ವಿಜ್ಞಾನಿಗಳು ಸೋಂಕಿಸುತ್ತಿದ್ದಾರೆ. ಇದು ರೋಗಗಳನ್ನು ಹರಡುವ ಸೊಳ್ಳೆಗಳ ಸಾಮರ್ಥ್ಯವನ್ನು ಕಡಿಮೆ ಮಾಡುವುದು. ಇದನ್ನೆಲ್ಲ ಡೆಂಘೀ ರೋಗವನ್ನು ನಿಯಂತ್ರಿಸಲೆಂದು ಸಂಶೋಧಕರು ಮಾಡುತ್ತಿದ್ದರು. ಆದರೆ ಜೀಕಾದ ಈ ದಾಂಧಲೆ ಈ ಪ್ರಯತ್ನಗಳಿಗೆ ಇನ್ನಷ್ಟು ಒತ್ತು ನೀಡಿವೆ.  ಇವೆಲ್ಲವೂ ಸಿದ್ಧವಾಗಬೇಕಾದರೆ ಇನ್ನೂ ಹಲವು ವರ್ಷಗಳು ಬೇಕೆನ್ನುವುದಂತೂ ನಿಜ.

—————

ಸೈನ್ಸ್ ಪತ್ರಿಕೆಯಲ್ಲಿ 29.1.2016 ರಂದು ಪ್ರಕಟವಾದ ಗ್ರೆಚೆನ್ ವೋಗೆಲ್, ಜಾನ್ ಕೋಹೆನ್ ಹಾಗೂ ಮಾರ್ಟಿನ್ ಎನ್ಸೆರಿಂಕ್ ಅವರ ಲೇಖನದ ಅನುವಾದ

Published in: on ಫೆಬ್ರವರಿ 4, 2016 at 7:04 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಶವಗಂಧಿ ಹೂವು

ವಿಜ್ಞಾನಿಗಳು ಅತಿ ಹೆಚ್ಚು ಅಧ್ಯಯನ ಮಾಡಿದ ಹೂ ಯಾವುದಿರಬಹುದು? ಗುಲಾಬಿ, ಮಲ್ಲಿಗೆ, ಸಂಪಿಗೆಯಂತಹ ಸುಂದರ, ಸುಗಂಧಿತ ಹೂಗಳಿರಬಹುದು ಎಂದು ಊಹಿಸಿದ್ದರೆ ಅದು ತಪ್ಪು. ಸಸ್ಯವಿಜ್ಞಾನಿಗಳು ಕೂಲಂಕಷವಾಗಿ ಸಂಶೋಧನೆ ನಡೆಸಿದಂತಹ ಹೂವು ‘ಶವಗಂಧಿ ಪುಷ್ಟ”ಎಂದರೆ ಬಹುಶಃ ನೀವು ಮೂಗಿನ ಮೇಲೆ ಬೆರಳಿಡಬಹುದು. ಆ ಬೆರಳು ಮೂಗಿನ ಮೇಲೆಯೇ ಇರಲಿ. ಏಕೆಂದರೆ ಈ ಹೂವು ಮೂಗು ಮುಚ್ಚಿಕೊಳ್ಳುವಷ್ಟು ಗಾಢ ದುರ್ನಾತ ಬೀರುವ ಪುಷ್ಟ. ಅಷ್ಟೇ ಅಲ್ಲ. ಪ್ರಪಂಚದ ಅತಿ ದೊಡ್ಡ ಹೂಗಳಲ್ಲಿ ಇದು ಮೊದಲನೆಯದು.  ಇಂಡೊನೇಶಿಯಾದ ಕಾಡುಗಳೊಳಗೆ ಇರುವ ಈ ಬೃಹತ್ ಹೂವು ಸುಮಾರು ಎಂಟರಿಂದ ಹತ್ತು ಅಡಿ ಎತ್ತರದವರೆಗೂ ಬೆಳೆಯುತ್ತದೆ.  ಇದು ಬರೇ ಹೂವಲ್ಲ. ಸಾವಿರಾರು ಹೂಗಳ ಗುಚ್ಛ. ಆದರೆ ಏಕವಾಗಿ ಕಾಣುವ ಇದು ನೂರಾರು ಮೀಟರು ದೂರದಿಂದಲೂ ನಿಮ್ಮನ್ನು ಪ್ರಭಾವಿಸುವಷ್ಟು ಕೆಟ್ಟ ವಾಸನೆಯನ್ನು ಬೀರುತ್ತದೆ. ವಾಸ್ತವವಾಗಿ ಇದನ್ನು “ಶವ ಪುಷ್ಟ” ಅಥವಾ ಕ್ಯಾರಿಯಾನ್ ಫ್ಲವರ್ ಎಂದೇ ವಿಜ್ಞಾನಿಗಳು ಹೆಸರಿಸಿದ್ದಾರೆ. ಮೂಲತಃ ಸುವರ್ಣಗೆಡ್ಡೆಯ ಸಂಬಂಧಿಯಾದ ಇದರ ಹೆಸರು ಅಮಾರ್ಫೋಫಾಲ್ಲಸ್ ಟೈಟಾನಮ್.  ಟೈಟಾನ್ ಆರಮ್ ಎನ್ನುವ ಮತ್ತೊಂದು ಹೆಸರೂ ಇದೆ. ಆಕಾರ, ಗಾತ್ರವನ್ನು ಕಂಡು ಇಂಗ್ಲೀಷರು ಇದನ್ನು ದೆವ್ವದ ನಾಲಗೆ (ಡೆವಿಲ್ಸ್ ಟಂಗ್ ) ಎಂದೂ ಕರೆದಿದ್ದಾರೆ. ನಾಲ್ಕೈದು ವರ್ಷಗಳಿಗೊಮ್ಮೆ ಅರಳುವ ಇದರ ಹೂವಿಗೆ ಕೊಳೆತ ಶವದ್ದೇ ಬಣ್ಣ ಹಾಗೂ ವಾಸನೆ ಇದೆ.

ಏಕೆ ಬಣ್ಣ? ಏಕೆ ದುರ್ನಾತ?

ಇಂಡೋನೇಶಿಯಾದ ದಟ್ಟ ಮಳೆಕಾಡುಗಳಲ್ಲಿ ವಾಸಿಸುವ ಇದು ರಾತ್ರಿಯಷ್ಟೆ ಹೂ ಬಿಡುತ್ತದೆ. ಆ ಸಮಯದಲ್ಲಿ ಇದನ್ನು ಮೂಸಲು ಯಾವ ಕೀಟವೂ ಬರಲಿಕ್ಕಿಲ್ಲ. ದಟ್ಟಿರುಳಲ್ಲಿ ಇದರ ವಾಸನೆಯೇ ನೊಣ, ದುಂಬಿಗಳಿಗೆ ಆಕರ್ಷಣೆ. ಹೀಗಾಗಿ ಇದು ಶವದಂತೆ ದುರ್ನಾತ ಬೀರುತ್ತದೆ ಎನ್ನುವುದು ಸಸ್ಯವಿಜ್ಞಾನಿಗಳ ತರ್ಕ. ಇದರ ವಾಸನೆಗೆ ಹೂವು ಸೂಸುವ ಡೈಮೀಥೈಲ್ ಆಲಿಗೋ ಸಲ್ಫೈಡ್ ಎನ್ನುವ ರಾಸಾಯನಿಕಗಳು ಕಾರಣವಂತೆ. ಇಂತಹ ರಾಸಾಯನಿಕಗಳು ಕೊಳೆತ ಈರುಳ್ಳಿಯಿಂದಲೂ ಬರುತ್ತವೆ.

ಯಾವಾಗ ಪರಿಚಯ?atitanum-photo

ಕಗ್ಗತ್ತಲ ಕಾಡುಗಳಲ್ಲಿ ಬೆಳೆಯುವ  ಈ ಶವಗಂಧಿಯನ್ನು ಮೊದಲು ಪರಿಚಯಿಸಿದ ಖ್ಯಾತಿ ಎಡ್ವರ್ರೊ ಬುಕಾರಿ ಎನ್ನುವ ಸಸ್ಯಶಾಸ್ತ್ರಿಗೆ ಸಲ್ಲುತ್ತದೆ. 1877ರಲ್ಲಿ ಸುಮಾತ್ರಾದ ಮಳೆಕಾಡುಗಳಲ್ಲಿ ಸಸ್ಯಗಳನ್ನು ಅಧ್ಯಯನ ಮಾಡುವ ವೇಳೆ ಈತನಿಗೆ ಈ ಗಿಡ ಕಾಣಿಸಿತು. ಇದರ ಗೆಡ್ಡೆಗಳನ್ನೂ, ಬೀಜಗಳನ್ನೂ ಸಂಗ್ರಹಿಸಿದ ಬುಕಾರಿ ಅವುಗಳನ್ನು ಬೆಳೆಸಲೆಂದು ತನ್ನ ದೇಶ ಇಟಲಿಯ ಮಾರ್ಕೀಜೀಗೆ ಕಳಿಸಿದ. ದುರದೃಷ್ಟವಶಾತ್, ಈತ ಕಳಿಸಿದ ಗೆಡ್ಡೆಗಳನ್ನು ಬಂದರು ಅಧಿಕಾರಿಗಳು ದೇಶದೊಳಗೆ ಕೊಂಡೊಯ್ಯಲು ಬಿಡಲೇ ಇಲ್ಲ. ಅದು ಹೇಗೋ ಕೆಲವು ಬೀಜಗಳು ಉಳಿದುಕೊಂಡವು. ಇವುಗಳನ್ನೇ ಜಾಗ್ರತೆಯಿಂದ ಬೆಳೆಸಿದ ನಂತರ, ಸಸಿಗಳನ್ನು ಇಂಗ್ಲೆಂಡಿನ ಕ್ಯೂ ಸಸ್ಯೋದ್ಯಾನಕ್ಕೆ ಕಳಿಸಿದ. ಇವುಗಳ ಸಂತಾನ ಈಗಲೂ ಅಲ್ಲಿ ಬೆಳೆಯುತ್ತಿವೆ. ಪ್ರತಿ ಬಾರಿ ಹೂ ಬಿಟ್ಟಾಗಲೂ ತಮ್ಮ ದುರ್ನಾತ ಹಾಗೂ ಗಾತ್ರದಿಂದಲೇ ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

 

ನಾತವಷ್ಟೆ ಅಲ್ಲ ವಿಶೇಷ!

ದುರ್ನಾತವಷ್ಟೆ ಅಲ್ಲ, ಬಿಸಿಯನ್ನೂ ಮುಟ್ಟಿಸುತ್ತದೆ ಈ ಹೂವು. ಸುತ್ತಲಿನ ತಾಪಕ್ಕಿಂತಲೂ ಸುಮಾರು ಹತ್ತರಿಂದ ಹದಿನೈದು ಡಿಗ್ರಿ ಹೆಚ್ಚು ಕಾವು ಈ ಹೂವಿನ ಸುತ್ತಲೂ ಇರುತ್ತದೆ. ಇಷ್ಟೊಂದು ಬಿಸಿಯೇರುವುದೇತಕ್ಕೆ? ಇದೊಂದು ಕುತೂಹಲ. ಬುಕಾರಿ ಈ ಶವಗಂಧಿಯನ್ನು ಪತ್ತೆ ಮಾಡುವುದಕ್ಕೂ ನೂರು ವರ್ಷಗಳ ಹಿಂದೆಯೇ ಇದರ ಸಂಬಂಧಿ ಗೆಡ್ಡೆಗಿಡಗಳ ಹೂಗಳು ಬಿಸಿಯೇರುತ್ತವೆ ಎಂದು ಸುಪ್ರಸಿದ್ಧ ವಿಜ್ಞಾನಿ ಲಮಾರ್ಕ್ ಗುರುತಿಸಿದ್ದ. “ನೀರನ್ನು ಕುದಿಸುವಷ್ಟು’ ಶಾಖ ಹುಟ್ಟುತ್ತದೆ ಎಂದು ಆತ ವಿವರಿಸಿದ್ದ. ನೀರು ಕುದಿಯುತ್ತದೆಯೋ ಇಲ್ಲವೋ, ಬೆವರಿಳಿಸುವಷ್ಟು ಉಷ್ಣವನ್ನಂತೂ ಇದು ಹೊರಸೂಸುತ್ತದೆ. ಸುತ್ತಲೂ 25 ಡಿಗ್ರಿ ಸೆಲ್ಶಿಯಸ್ ಉಷ್ಣತೆ ಇದ್ದರೆ ಹೂವಿನ ಬಳಿ 35-38 ಡಿಗ್ರಿಯವರೆಗೆ ಉಷ್ಣತೆ ಹೆಚ್ಚಿರುತ್ತದೆ.

ಬಿಸಿಯೇಕೆ?

atitanum-thermalphoto

ಹೂವಿನ ಶಿರ ಹಾಗೂ ಬುಡದಲ್ಲಿ ಶಾಖ ಹೆಚ್ಚು

ಇದಕ್ಕೆ ತಕ್ಷಣಕ್ಕೆ ಉತ್ತರವಿಲ್ಲ. ಸುವರ್ಣಗೆಡ್ಡೆಯ  ಸಂಬಂಧಿ ಸಸ್ಯಗಳ ಹೂಗಳಷ್ಟೆ ಉಷ್ಣ ಹುಟ್ಟಿಸುವುದಿಲ್ಲ. ಉಷ್ಣಜನನ ಕ್ರಿಯೆಯನ್ನು ಕೆಸರಿನ ಕಮಲ (ನೆಲುಂಬೋ ನ್ಯೂಸಿಫೆರಾ) ದಲ್ಲೂ ಕಾಣಬಹುದು. ತಣ್ಣಗಿನ ರಾತ್ರಿಯಲ್ಲಿ ಇದರ ಹೂಗಳು ಬೆಚ್ಚಗೆ ಇರುತ್ತವೆ. ಸುತ್ತಲಿನ ವಾತಾವರಣಕ್ಕಿಂತಲೂ ಸುಮಾರು ಹತ್ತು ಡಿಗ್ರಿ ಹೆಚ್ಚು ಬೆಚ್ಚಗೆ ಇರುತ್ತವೆ ಎಂದು ಗುರುತಿಸಿದ್ದಾರೆ. ಇದೇ ರೀತಿಯಲ್ಲಿ ಬೇರೆ, ಬೇರೆ ಸಸ್ಯವರ್ಗಕ್ಕೆ ಸೇರಿದ ಹತ್ತಾರು ಗಿಡಗಳ ಹೂಗಳು ಬಿಸಿಯೇರುತ್ತವೆ. ಆದರೆ . ಟೈಟಾನಮ್ ಗೇಕೆ ಬೇಕು ಈ ಕಾವು?

ಕೀಟಗಳನ್ನು ಆಕರ್ಷಿಸುವುದಕ್ಕೆ ಇರಬಹುದೇ?

ಇದು ಸಹಜ ಊಹೆ. ಹೂ ಆಕಾರ, ಬಣ್ಣ, ಪರಿಮಳವೆಲ್ಲವೂ ಪರಾಗಸ್ಪರ್ಷ ಕ್ರಿಯೆಯನ್ನು ಅನುಕೂಲಿಸುವ ರೀತಿಯಲ್ಲೇ ಎಲ್ಲ ಹೂಗಳಲ್ಲೂ ವಿಕಾಸವಾಗಿರುವುದರಿಂದ ಸಹಜವಾಗಿಯೇ ಶಾಖೋತ್ಪತ್ತಿ ಗುಣವೂ ಕೀಟಗಳನ್ನು ಆಕರ್ಷಿಸಲೆಂದೇ ಇರಬೇಕು ಎಂದು ಊಹಿಸಲಾಗಿದೆ. ಅಥವಾ ತನ್ನ ಬಳಿ ಬಂದ ಕೀಟಗಳನ್ನು ಬೆಚ್ಚಗಿಡುವುದಕ್ಕಾಗಿಯೂ ಇರಬಹುದು. ದುಂಬಿಗಳಿಗೆ ಇಂತಹ ಹೂಗಳು ಬಹಳ ಇಷ್ಟ.  . ಟೈಟಾನಮ್ ಶಾಖೋತ್ಪತ್ತಿ ಮಾಡುವುದಕ್ಕೆ ಇದೇ ಕಾರಣವೆನ್ನುವುದು ಇತ್ತೀಚೆಗಷ್ಟೆ ಬಯಲಾಗಿದೆ.

ವಾತಾಯನಕ್ಕೆ ಬೇಕು ಶಾಖ!

ಜರ್ಮನಿಯ ಬಾನ್ ವಿಶ್ವವಿದ್ಯಾನಿಲಯದ ಸಸ್ಯವಿಜ್ಞಾನಿ ವಿಲ್ಹೆಮ್ ಬಾರ್ತಲಾಟ್ ರವರ ವಾದ ಇದು. ತಮ್ಮ ಸಸ್ಯೋದ್ಯಾನದಲ್ಲಿ ಒಮ್ಮೆಲೇ ಅರಳಿದ ಮೂರು ಶವಗಂಧಿ ಹೂಗಳನ್ನು ಅಧ್ಯಯನ ಮಾಡಿರುವ ಇವರು ಈ ಹೂಗಳು ಸೃಷ್ಟಿಸುವ ಉಷ್ಣತೆಯಲ್ಲಿನ ವ್ಯತ್ಯಾಸ ಗಾಳಿಯಲ್ಲಿ ಸಂಚಲನೆಯನ್ನುಂಟು ಮಾಡುತ್ತದೆ. ತನ್ಮೂಲಕ ಹೂವಿನ ದುರ್ನಾತ ಎತ್ತರದ ಮರಗಳ ಕೌದಿಗೆಯನ್ನೂ ದಾಟಿ ಪಸರಿಸಲು ನೆರವಾಗುತ್ತದೆ. ಹಾಗೆಯೇ ನೊಣಗಳನ್ನೂ, ದುಂಬಿಗಳನ್ನೂ ಸೆಳೆಯುತ್ತದೆ ಎನ್ನುತ್ತಾರೆ.

ಅಷ್ಟು ಶಾಖ ಹುಟ್ಟುತ್ತದೆಯೇ?

convection-forest

ಮರಗಳಿಂದ ಮೇಲೆ ವಾಸನೆ ಹರಿಯಲು ಅನುವಾಗುವ ವಾತಾಯನ ಹೀಗಾಗುತ್ತದೆ

ಇದೇ ಅನುಮಾನದಿಂದ ವಿಲ್ಹೆಮ್ ಬಾರ್ತಲಾಟ್ ಈ ಹೂಗಳಿಂದ ಸೂಸುವ ಇನ್ಫ್ರಾರೆಡ್ ಕಿರಣಗಳ ಚಿತ್ರಗಳನ್ನು ಎರಡು ನಿಮಿಷಕ್ಕೊಮ್ಮೆ ತೆಗೆದು ಪರಿಶೀಲಿಸಿದ್ದಾರೆ. ಉಷ್ಣದ ಕಿರಣಗಳ ಪ್ರಖರತೆಯನ್ನು ಈ ಚಿತ್ರಗಳಲ್ಲಿ ಕಾಣಬಹುದು. ಇದರ ಪ್ರಕಾರ  ಹೂಗಳು ರಾತ್ರೆ ಸುಮಾರು ಎಂಟು ಗಂಟೆಯ ವೇಳೆಗೆ ಬಿಸಿಯೇರಲು ಆರಂಭಿಸಿದರೆ ನಡುರಾತ್ರಿ ಎರಡು ಗಂಟೆಯ ಹೊತ್ತಿಗೆ ಗರಿಷ್ಟ ಉಷ್ಣತೆಯನ್ನು ತಲುಪಿ ಅನಂತರ ತಣ್ಣಗಾಗಲು ಆರಂಭಿಸುತ್ತವೆ. . ಇದರೊಳಗಿರುವ ಗಂಡು ಹೂಗಳಷ್ಟೆ ಬಿಸಿಯಾಗುತ್ತವೆಂದು ಈ ಮೊದಲು ಊಹಿಸಲಾಗಿತ್ತು. ಆದರೆ ಬಾರ್ತಲಾಟ್ ರವರ ಚಿತ್ರಗಳು ಹೂವಿನ ತುಟ್ಟತುದಿಯೇ ಶಾಖ ಪರಾಕಾಷ್ಟೆಯಲ್ಲಿರುವ ಭಾಗವೆಂದು ತೋರಿಸಿದೆ. ಹೂವಿನ ಬುಡದಲ್ಲಿ ಶಾಖ ಕಡಿಮೆ. ಇದೇ ವೇಳೆಯಲ್ಲಿಯೇ ದುರ್ನಾತವೂ ಸೂಸುತ್ತದೆನ್ನುವುದು ಕಾಕತಾಳೀಯವಲ್ಲ ಈ ಹೊತ್ತಿನಲ್ಲಿ ಗಾಳಿ ತಣಿದ ಫಲವಾಗಿ ನೆಲಕ್ಕೇ ಆತುಕೊಂಡಂತೆ ಇರುತ್ತದೆಯೇ ಹೊರತು ಮೇಲೇರುವುದಿಲ್ಲ. ಹೂವು ಸುಮಾರು 2 ರಿಂದ 3 ವಾಟ್ ನಷ್ಟು ಉಷ್ಣವನ್ನು ಪ್ರತಿ ಸೆಕೆಂಡಿಗೆ ಉತ್ಪಾದಿಸುತ್ತದೆ. ಅಂದರೆ ಐದರಿಂದ ಏಳು ಯೂನಿಟ್ ವಿದ್ಯುತ್ ನೀಡುವ ಶಾಖದಷ್ಟು ಉಷ್ಣ ಇಡೀ ಹೂವಿನಿಂದ ಉತ್ಪಾದನೆಯಾಗುತ್ತದೆ.  ತಣ್ಣಗಿನ ಗಾಳಿಯನ್ನು ಬಿಸಿಯಾಗಿಸುವ ಹೂಗಳು ಕುಲುಮೆಯ ಚಿಮಣಿಗಳಂತೆ ಬಿಸಿಗಾಳಿಯನ್ನು ಮೇಲೆ ಕೊಂಡೊಯ್ಯುತ್ತವೆ. ಈ ಹೂಗಳ ಎತ್ತರವೂ ಇದಕ್ಕೆ ನೆರವಾಗುತ್ತದೆಯಷ್ಟೆ. ತನ್ಮೂಲಕ ಹೂವಿನ ದುರ್ಗಂಧ ಎತ್ತರದ ಮರಗಳ ಕೌದಿಗೆಯನ್ನೂ ದಾಟಬಲ್ಲುದು. ಅಲ್ಲೆಲ್ಲೋ ಇರುವ ಕೀಟಗಳನ್ನು ಸೆಳೆಯಬಲ್ಲುದು.

ಎಷ್ಟು ಹೊತ್ತು ಹೀಗೆ ಬಿಸಿಯಾಗಿರಬಲ್ಲದು?

ಅಮಾರ್ಫೋಫಾಲಸ್ ಟೈಟಾನಸ್ ನ ಹೂವುಗಳು ಮೂರ್ನಾಲ್ಕು ವರ್ಷಕ್ಕೊಮ್ಮೆ ಅರಳುತ್ತವೆ. ಅರಳುವುದು ಎಷ್ಟು ಅಪರೂಪವೋ, ಅಷ್ಟೇ ಶೀಘ್ರವಾಗಿ ಮುದುಡಿಯೂ ಬಿಡುತ್ತವೆ. ಹೆಚ್ಚೆಂದರೆ ಒಂದು ದಿನವಷ್ಟೆ ಇದು ಉಳಿದಿರಬಲ್ಲುದು. ಅನಂತರ ಗಾಢವಾದ ದುರ್ನಾತವನ್ನು ಸೂಸುತ್ತಾ ಶವದಂತೆಯೇ ಕಂದುಗಪ್ಪಾಗಿ ಮುದುಡುತ್ತದೆ. ಆದರೆ ಈ ಬಿಸಿಯೇರುವುದು ಎರಡು ಹಂತದಲ್ಲಿ ಆಗುತ್ತದೆ. ಹೂವು ಬಾಳುವ ಎರಡು ದಿನದಲ್ಲಿ ಮೊದಲನೆಯ ರಾತ್ರಿ ಹೆಣ್ಣು ಹೂಗಳನ್ನು ಹೊತ್ತಿರುವ  ಕೇಂದ್ರಭಾಗ ಬಿಸಿಯಾಗುತ್ತದೆ. ಇದು ಬಿಸಿಯಾಗುವಾಗಲೇ ಕೆಟ್ಟ ವಾಸನೆಯೂ ಹೊರಡುತ್ತದೆ. ಮರುದಿನ ರಾತ್ರಿಯೂ  ಹೂವು ಬಿಸಿಯಾಗುತ್ತದೆ. ಆದರೆ ಈ ಬಾರಿ ಗಂಡು ಹೂಗಳಿರುವ ಭಾಗದಲ್ಲಿ. ಉಷ್ಣತೆ ಮಾತ್ರ ತುಸು ಕಡಿಮೆ. ಬಹುಶಃ ಮೊದಲನೆಯ ದಿನ ಕೀಟಗಳನ್ನು ಆಕರ್ಷಿಸಲು ಬಿಸಿಯೇರುತ್ತಿರಬೇಕು. ಎರಡನೆಯ ದಿನ  ಭೇಟಿಗೆ ಬಂದು  ಹೂವಿನ ರಕ್ಷಣೆಯಲ್ಲೇ ಉಳಿದುಕೊಂಡ ಕೀಟಗಳನ್ನು ಬೆಚ್ಚಗಿಡಲು ಇರಬೇಕು ಎಂದು ಬಾರ್ತಲಾಟ್ ಊಹಿಸಿದ್ದಾರೆ.

ಬೇರೆ ಹೂವುಗಳಲ್ಲಿ ಶಾಖೋತ್ಪತ್ತಿಯ ಕಾರಣಗಳು ಭಿನ್ನವಾಗಿರಬಹುದು. ಅವೇನು ಎಂದು ಇನ್ನು ಮುಂದೆ ತಿಳಿಯಬೇಕು. ಅಷ್ಟೆ.

ಹೆಚ್ಚಿನ ಓದಿಗೆ:

  1. Bartholott, W., et al,. A torch in the rain forest: thermogenesis of the Titan arum (Amorphophallus titanum), Plant Biology, Vol 11., pp 499-505, 2009, doi 10.1111/j.1438-8677.2008.00147.x
  2. Anthony L. Moore et al., Unraveling the Heater: New Insights into the Structure of the Alternative Oxidase, Annu. Rev. Plant Biol. 2013. 64:637–63, doi: 10.1146/annurev-arplant-042811-105432
  1. Lamprecht, I., et al., Flower Ovens: Thermal investigations on heat producing plants, Thermochimica Acta, 391, pP 107-118, 2002,
  1. Nadja Korotkova & Wilhelm Barthlott (2009) On the thermogenesis of the Titan arum (Amorphophallus titanum), Plant Signaling & Behavior, 4:11, 1096-1098, DOI: 10.4161/psb.4.11.9872

 

Published in: on ಫೆಬ್ರವರಿ 2, 2016 at 5:39 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಮರಳಶಯ್ಯೆ

ವಿಜ್ಞಾನದಲ್ಲಿ ಬ್ರೇಕ್‍ ಥ್ರೂ ವಿಜ್ಞಾನ ಎನ್ನುವುದು ಇಲ್ಲ, ಇರುವುದೆಲ್ಲ ಅಂಬೆಗಾಲಿಕ್ಕುವ ಮುನ್ನಡೆಗಳಷ್ಟೆ ಎನ್ನುವ ಮಾತಿದೆ. ಆದರೆ ನಮ್ಮಂತಹ ವಿಜ್ಞಾನ ಲೇಖಕರ ಬರೆಹಗಳಲ್ಲಿ ಎಲ್ಲವೂ ಬ್ರೇಕ್‍ ಥ್ರೂ ಗಳೇನೋ ಎನ್ನಿಸುವ ಮಟ್ಟಿಗೆ ಬರವಣಿಗೆ ಇರುತ್ತದೆ. ಮತ್ತೊಂದೆಡೆ, ವಿಜ್ಞಾನ ವಸ್ತುನಿಷ್ಠ ವಿಷಯವಾದ್ದರಿಂದ ಒಂದು ವಿಷಯದ ಕುರಿತು ಬರೆದ ವಿಜ್ಞಾನ ಲೇಖನಗಳೆಲ್ಲವೂ ಏಕತಾನದಂತಿರಬೇಕು ಎನ್ನುವ ಕಲ್ಪನೆಯೂ ಓದುಗರಲ್ಲಿ ಇದೆ. ಇವೆರಡೂ ತಪ್ಪು ಎನ್ನುವುದಕ್ಕೆ ಉದಾಹರಣೆ ಇದೋ ಇಲ್ಲಿದೆ.

ಕಳೆದ ವಾರ ತಿರುಚೆಂದೂರಿನಲ್ಲಿ ತಿಮಿಂಗಲಗಳು ತೀರಕ್ಕೆ ಬಂದು ಬಿದ್ದು ಸಾಯುವುದರ ಸುದ್ದಿ ಕೇಳಿದಾಗ ವೇಲ್‍ ಸ್ಟ್ರಾಂಡಿಂಗ್‍ ಎನ್ನುವ ವಿದ್ಯಮಾನದ ಕುರಿತು ಬರೆಯಬಹುದು ಎಂದು ಆಲೋಚಿಸಿ, ಆ ದಿನವೇ ಲೇಖನ ಬರೆದು ಸಂಯುಕ್ತ ಕರ್ನಾಟಕಕ್ಕೆ ಕಳಿಸಿದೆ. ಆದರೆ ಮರುದಿನ ಪ್ರಜಾವಾಣಿ ನೋಡಿದಾಗ, ನನಗಿಂತ ಹಿರಿಯರಾದ ನಾಗೇಶ ಹೆಗಡೆಯವರು, ನನಗಿಂತಲೂ ಎಷ್ಟು ಫಾಸ್ಟ್ ಅಂತ ಗೊತ್ತಾಯಿತು. ಅದೇ ವಿಷಯದ ಮೇಲೆ ಅವರ ಲೇಖನ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು.

ಒಂದು ಪತ್ರಿಕೆಯಲ್ಲಿ ಒಂದು ವಿಷಯದ ಮೇಲೆ ಲೇಖನ ಪ್ರಕಟವಾದ ಮೇಲೆ ಬೇರೆ ಪತ್ರಿಕೆಗೆ ಅದು ರದ್ದಿ ಎನಿಸಿಬಿಡುತ್ತದೆ. ಆದರೂ ಬೇರೆ ಲೇಖನವನ್ನು ಕಳಿಸದೆ ಅದೇ ಲೇಖನವನ್ನು ಪ್ರಕಟಿಸಿದ್ದೇವೆ.

ಮಾಹಿತಿ ಒಂದೇ ಆದರೂ ಓದುಗನನ್ನು ಸೆರೆ ಹಿಡಿಯುವ ಶೈಲಿ ಮುಖ್ಯವಾಗುತ್ತದೆ ಎನ್ನುವುದು ಈ ಲೇಖನಗಳನ್ನು ಹೋಲಿಸಿದರೆ ಸ್ಪಷ್ಟ. ಹಿರಿಯರಾದ ಹೆಗಡೆಯವರ ಲೇಖನದಲ್ಲಿ ಯುವಕರನ್ನೂ ಹಿಡಿದಿಡುವ ಲವಲವಿಕೆ ಇದೆ. ನನ್ನ ಲೇಖನದಲ್ಲಿ ಆ ಲವಲವಿಕೆ ಇಲ್ಲ. ವೃದ್ಧರ ಗಾಂಭೀರ್ಯವಿದೆ ಎಂದುಕೊಂಡಿದ್ದೇನೆ. ಬಹುಶಃ ಇದರಿಂದ ವಿಭಿನ್ನ ಓದುಗ ವರ್ಗವನ್ನು ಈ ಮಾಹಿತಿ ತಲುಪಬಹುದು.

ಹೂರಣ ಒಂದೇ ಇದ್ದರೂ, ಸೂಕ್ಷ್ಮ ಮಾಹಿತಿಗಳಲ್ಲಿ ವ್ಯತ್ಯಾಸಗಳಿವೆ. ಇದು ಲೇಖಕನ ಅನುಭವ ಹಾಗೂ ಮಾಹಿತಿ ಭಂಡಾರದ ಪ್ರಭಾವ. ಕನ್ನಡದ ವಿಜ್ಞಾನ ಲೇಖಕರು ಎದುರಿಸುವ ಪ್ರಮುಖ ಸಮಸ್ಯೆಗಳನ್ನು ಇಬ್ಬರು ಲೇಖಕರು ಹೇಗೆ ನಿವಾರಿಸಿಕೊಂಡಿದ್ದಾರೆ ಎನ್ನುವುದಕ್ಕೂ ಇವು ಉದಾಹರಣೆಗಳು. ತಿಮಿಂಗಿಲಗಳು ಹೀಗೆ ತೀರಕ್ಕೆ ಬಂದು ಬೀಳುವುದಕ್ಕೆ’ವೇಲ್‍ ಸ್ಟ್ರಾಂಡಿಂಗ್‍’ ಅಥವಾ ‘ಬೀಚಿಂಗ್‍’ ಎನ್ನುವ ಪದಗಳನ್ನು ಸಮುದ್ರ ವಿಜ್ಞಾನಿಗಳು ಬಳಸುತ್ತಾರೆ. ಇದಕ್ಕೆ ಸಂವೇದಿಯಾದ ಕನ್ನಡ ಪದಗಳಿಲ್ಲ. ನಾನು ಬೀಚಿಂಗ್‍ ಎನ್ನುವುದನ್ನೇ ಪನ್‍ ಮಾಡಿ “ತೀರಯಾತ್ರೆ” ಎಂದು ಬಳಸಿದೆ. ಆದರೆ ಇದು ನಿಘಂಟಿನಲ್ಲಿ ಕೂಡಿಕೊಳ್ಳುವ ಪದವಾಗಲು ಅರ್ಹವಲ್ಲ. ಏಕೆಂದರೆ ಆ ಲೇಖನಕ್ಕಷ್ಟೆ ಸೀಮಿತವಾದ ಪನ್.

ಆದರೆ ನಾಗೇಶ ಹೆಗಡೆಯವರ ಲೇಖನದಲ್ಲಿ ಈ ವಿದ್ಯಮಾನಕ್ಕೆ ‘ದಡವರ್ತಿ’ ಎಂದು ಹೊಸ ಪದ ಬಳಕೆಯಾಗಿದೆ. ಸಂಸ್ಕೃತ ಅಥವಾ ಹಳೆಗನ್ನಡದ ಮೊರೆ ಹೋಗದೆ ಇಂದಿನ ಕನ್ನಡದ ಪದಗಳನ್ನೇ ಬಳಸಿ ಹೊಸ ಪದಗಳನ್ನು ಟಂಕಿಸುವುದು ಸಾಧ್ಯ ಎನ್ನುವುದರ ಪ್ರಾತ್ಯಕ್ಷಿಕೆ ಇದು. ಕನ್ನಡ ಓದಬಲ್ಲವನಿಗೆ “ದಡವರ್ತಿ” ಎನ್ನುವುದರ ಅರ್ಥ ಮನದಟ್ಟಾಗುವುದು ಕಷ್ಟವೇ ಇಲ್ಲ. ಬೀಚಿಂಗ್‍ ಎಂದು ಬಳಸಿದ್ದರೂ ಅರ್ಥವಾಗುತ್ತಿರಲಿಲ್ಲ.

ನಾಗೇಶ ಹೆಗಡೆಯವರ ಅನುಮತಿಯೊಂದಿಗೆ ಅವರ ಲೇಖನವನ್ನೂ, ನನ್ನದನ್ನೂ ಇಲ್ಲಿ ನಿಮ್ಮ ಕಮೆಂಟುಗಳಿಗಾಗಿ ಇಟ್ಟಿದ್ದೇನೆ. ವಿಜ್ಞಾನ ಲೇಖನ, ಸಾಹಿತ್ಯದ ಬಗ್ಗೆ, ಇಂತಹ ಲೇಖನಗಳು ಔಚಿತ್ಯದ ಬಗ್ಗೆಯೂ ಚರ್ಚಿಸಲು ಇವು ಅನುವು ಮಾಡಿಕೊಡುತ್ತವೆ.

18012015

ಆಕರ:

  1. ವಿಕಿಪೀಡಿಯ: https://en.wikipedia.org/wiki/Cetacean_stranding#cite_note-18
  2. Angela M. K. Hansen et al., Trace Element Concentrations in Liver of 16 Species of Cetaceans Stranded on Pacific Islands from 1997 through 2013, Arch Environ Contam Toxicol, DOI 10.1007/s00244-015-0204-1, July 2015
  3. JOSEPH L. KIRSCHVINK, et al., EVIDENCE FROM STRANDINGS FOR GEOMAGNETIC SENSITIVITY IN cetaceans, I. j. Exp. Biol. 120, 1-24 (1986)
  4. LETIZIAMARSILI and SILVANO FOCARDI, CHLORINATED HYDROCARBON (HCB, ddts AND pcbs) LEVELS IN CETACEANS STRANDED ALONG THE ITALIAN COASTS: AN OVERVIEW, Environmental Monitoring and Assessment 45: 129–180, 1997.
  1. Consuelo Rubio-Guerri1 et al., Unusual striped dolphin mass mortality episode related to cetacean morbillivirus in the Spanish Mediterranean sea, BMC Veterinary Research 2013, 9:106, http://www.biomedcentral.com/1746-6148/9/106

IMG-20160114-WA0013

Published in: on ಜನವರಿ 18, 2016 at 6:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ತಳಿ ತಿದ್ದುವ ಕ್ರಿಸ್ಪರ್‍

21122015.jpg

ಆಕರ:

  1. Puping Liang et al., CRISPR/Cas9-mediated gene editing in human tripronuclear zygotes, Protein Cell,   6(5):363–372, 2015,  DOI 10.1007/s13238-015-0153-5)
  1. Valentino M. Gantzand Ethan Bier, the mutagenic chain reaction: a method for converting heterozygous to homozygous mutations, Science 24 April 2015: Vol. 348 no. 6233 pp. 442-444, 2015
Published in: on ಡಿಸೆಂಬರ್ 21, 2015 at 5:46 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ