ಸೀನಿನ ಲೆಕ್ಕಾಚಾರ

06062016

ಹೆಚ್ಚಿನ ಓದಿಗೆ:

E. Scharfmann, A. H. Techet, J. W. M. Bush, L. Bourouiba (2016) Visualization of Sneeze Ejecta: steps of fluid fragmentation leading to respiratory droplets. Exp. Fluids 57:24, doi:10.1007/s00348-015-2078-4

ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ? ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ? ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು. ಮೆಣಸಿನ ಪುಡಿ, ದೂಳಿನಂತಹ ಕಿರಿಕಿರಿಯುಂಟು ಮಾಡುವ ವಸ್ತುಗಳು ಮೂಗಿನೊಳಗೆ ಹೊಕ್ಕಾಗ ಅವನ್ನು ಹೊರದೂಡಲು ನಮಗೆ ಪ್ರಕೃತಿ ನೀಡಿರುವ ವರ ಇದು ಎನ್ನುತ್ತಾರೆ ಜೀವಿವಿಜ್ಞಾನಿಗಳು. ಸೀನಲು ಕಾರದ ಪುಡಿಯೋ, ನಶ್ಯವೋ ಇರಲೇ ಬೇಕೆಂದಿಲ್ಲ. ಉಸಿರಾಟದ ಅಂಗಗಳಿಗೆ ಸೂಕ್ಷ್ಮಾಣುಗಳು ಸೋಂಕಿ ಕಾಯಿಲೆಯಾದಾಗಲೂ ಸೀನು ಬರುವುದುಂಟು. ಸಾಮಾನ್ಯವಾಗಿ ನೆಗಡಿ, ಫ್ಲೂ, ಮುಂತಾದ ಸೋಂಕುಗಳಾದಾಗಲೂ ಸೀನುವುದು ಇದ್ದದ್ದೇ. ಸೀನಿನ ಹಾಗೆಯೇ ಕೆಮ್ಮೂ ಕೂಡ ಸ್ಫೋಟಕ ವಿದ್ಯಮಾನ. ಎರಡೂ ಸಂದರ್ಭಗಳಲ್ಲಿ ಬಲೂನು ಒಡೆದಂತೆ ಇದ್ದಕ್ಕಿದ್ದ ಹಾಗೆ ಗಾಳಿ ಎದೆಯೊತ್ತಿಕೊಂಡು ಬಂದು ಹೊರಗಡೆಗೆ ಸ್ಫೋಟಿಸುತ್ತದೆ. ಜೊತೆಗೆ ಮೂಗಿನಲ್ಲಿರುವ ಸಣ್ಣ ಕಣಗಳನ್ನೂ, ಹನಿಗಳನ್ನೂ ಹೊತ್ತು ಬರುತ್ತದೆ. ಇದುವೇ ಸೀನು. ಬಾಯಿಯಿಂದ ಬಂದಾಗ ಅದು ಕೆಮ್ಮು.

ಕೆಮ್ಮು ಮತ್ತು ಸೀನಿನ ಬಗ್ಗೆ ವೈದ್ಯರಿಗೆ ಬಲು ಕಾಳಜಿ. ಏಕೆಂದರೆ ಹಲವು ರೋಗಗಳು ಹರಡುವುದಕ್ಕೆ ಇವು ಮುಖ್ಯ ಕಾರಣವೆಂದು ಅವರು ನಂಬಿಕೆ. ಸೀನಿದಾಗ ಗಾಳಿಯ ಜೊತೆ ಹೊರಬೀಳುವ ಸಣ್ಣ ಹನಿಗಳು ರೋಗಾಣುಗಳನ್ನು ಹೊತ್ತೊಯ್ಯುತ್ತವೆ. ಗಾಳಿಯಲ್ಲಿ ಹರಡುತ್ತವೆ. ಜೊತೆಗೇ ಹನಿಗಳು ಸೂಕ್ಷ್ಮವಾಗಿದ್ದಷ್ಟೂ ಹೆಚ್ಚೆಚ್ಚು ದೂರಕ್ಕೆ ಪಸರಿಸುತ್ತವೆ ಎನ್ನುವುದು ವೈದ್ಯರ ನಂಬಿಕೆ. ಆದ್ದರಿಂದಲೇ ನೆಗಡಿಯಾದವರ ಬಳಿ ಹೋಗಬೇಡಿ ಎನ್ನುವ ಸಲಹೆ. ಸಮೀಪ ಹೋಗಬೇಡಿ ಎಂದರೆ ಎಷ್ಟು ಸಮೀಪ? ಕೋಣೆಯ ಈ ತುದಿಯಲ್ಲಿ ಕುಳಿತುಕೊಂಡು ಆ ತುದಿಯಲ್ಲಿರುವ ಕೆಮ್ಮಿನ ರೋಗಿಯನ್ನು ಮಾತನಾಡಿಸಿದರೆ ಕ್ಷೇಮವಿರಬಹುದೇ? ಅಥವಾ ಇನ್ನೂ ಹತ್ತಿರ ಹೋದರೆ ತೊಂದರೆಯಿಲ್ಲವೇ? ಈ ಪ್ರಶ್ನೆಗಳಿಗೆ ಬಹುಶಃ ವೈದ್ಯರೂ ಉತ್ತರ ಹೇಳರು. ಲಿಡಿಯಾಳ ಸಂಶೋಧನೆಯ ಗಮನವೆಲ್ಲವೂ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರತ್ತ ಎಂದರೆ ತಪ್ಪೇನಿಲ್ಲ.

ಲಿಡಿಯಾ ಪ್ರಕಾರ ಸೀನು ಮತ್ತು ಕೆಮ್ಮು ದ್ರವಚಲನೆಯ ವಿದ್ಯಮಾನಗಳು. ಅರ್ಥಾತ್, ದ್ರವ ಪದಾರ್ಥಗಳು ಗಾಳಿಯಲ್ಲಿ ಚಲಿಸುವ ಘಟನೆಗಳು. ಚಿಲುಮೆಯಿಂದ ಚಿಮ್ಮುವ ನೀರಿನ ಹನಿಗಳು ಚಲಿಸುವಂತೆಯೇ ಇಲ್ಲಿಯೂ ಹನಿಗಳು ಚಲಿಸುತ್ತವೆ. ಆದ್ದರಿಂದ ಈ ಹನಿಗಳ ಚಲನೆಗೂ ಸೀನುವಾಗ ಉಂಟಾಗುವ ಸ್ಫೋಟ (ಗಾಳಿಯ ಒತ್ತಡ) ದ ಬಲ ಹಾಗೂ ಉಸಿರಿನಲ್ಲಿರುವ ದ್ರವದ ಪ್ರಮಾಣಕ್ಕೂ ಸಂಬಂಧವಿರಬೇಕು. ಇದನ್ನು ಅಧ್ಯಯನ ಮಾಡಿದರೆ ಬಹುಶಃ ಸೀನಿದಾಗ ಹನಿಗಳೆಷ್ಟು ದೂರ ಹಾರಿಯಾವೆಂದು ಊಹಿಸಬಹುದು? ಅದಕ್ಕೆ ತಕ್ಕಂತೆ ರೋಗಿಗಳಿಂದ ದೂರವಿರಲೂ ಪ್ರಯತ್ನಸಿಬಹುದು.

ನಿಜ. ಇದು ದ್ರವಚಲನೆಯ ವಿದ್ಯಮಾನ. ಆದರೆ ಇಲ್ಲಿರುವ ದ್ರವದ ಹನಿಗಳು ಮಳೆಯ ಹನಿಗಳಂತೆಯೋ, ಚಿಲುಮೆಯಿಂದ ಸಿಂಪರಿಸುವ ಹನಿಗಳಂತೆಯೇ ಏಕರೂಪದವಲ್ಲ. ನೀರಿನಂತಹ ಉಗುಳು, ಅಂಟಿನಂತಹ ಸಿಂಬಳ ಮತ್ತು ಗಾಳಿ ಇವೆಲ್ಲವೂ ಕೂಡಿ ಉಂಟಾದ ವಿಶಿಷ್ಟ ದ್ರವ. ಈ ದ್ರವದ ಚಲನೆಯ ವೈಶಿಷ್ಟ್ಯವೇನೆಂದು ತಿಳಿದಲ್ಲಿ ಅವು ಚಲಿಸುವ ದಿಕ್ಕು, ದೂರವನ್ನೆಲ್ಲ ಊಹಿಸಬಹುದು. ಹೀಗೆಂದು ಆಲೋಚಿಸಿರುವ ಲಿಡಿಯಾ ಬೇಕೆಂದಾಗ ಸೀನುವಂತೆ ಮಾಡಿ ಸೀನಿನ ವೀಡಿಯೊ ಚಿತ್ರಣ ತೆಗೆಯುತ್ತಾರೆ. ಪ್ರತಿ ಸೆಕೆಂಡಿಗೆ ನೂರಕ್ಕೂ ಹೆಚ್ಚು ಚಿತ್ರ ತೆಗೆಯುವ ತೀವ್ರಗತಿಯ ಛಾಯಾಗ್ರಹಣ ತಂತ್ರವನ್ನು ಈಕೆ ಬಳಸುತ್ತಾರೆ. ಹೀಗೆ ದೊರೆತ ವೀಡಿಯೋ ಚಿತ್ರದಲ್ಲಿ ಸೀನಿದಾಗ ಉಂಟಾಗುವ ಕಣಗಳು ಹೇಗೆ ಹರಡಿಕೊಳ್ಳುತ್ತವೆ ಎನ್ನುವುದನ್ನು ಗಮನಿಸಿ, ಅದಕ್ಕಾಗಿ ಒಂದು ಗಣೀತೀಯ ಮಾದರಿ (ಸೂತ್ರ) ವನ್ನು ರೂಪಿಸಿದ್ದಾರೆ. ಈ ಮಾದರಿ ಸೀನಿದಾಗ ಬಾಯಿಯಿಂದ ಹೊರಬಂದ ಹನಿಗಳು ಎತ್ತ ಮತ್ತು ಹೇಗೆ ಪಸರಿಸುತ್ತವೆ ಎಂದು ಲೆಕ್ಕ ಹಾಕಬಲ್ಲವು. ಸೀನಿನ ಸ್ಪಷ್ಟ ಚಿತ್ರವನ್ನು ತೋರಬಲ್ಲವು.

sneezedynamics

ಸೀನು ಎಂದರೆ ಒಂದು ಮಹಾಸ್ಫೋಟವಷ್ಟೆ. ಎದೆಯೊಳಗಿನ ಗಾಳಿಯ ಒತ್ತಡ ಇದ್ದಕ್ಕಿದ್ದ ಹಾಗೆ ಹೆಚ್ಚಿ, ಥಟ್ಟನೆ ಬಾಯಿ-ಮೂಗಿನಿಂದ ಹೊರ ಚಿಮ್ಮುತ್ತದೆ. ಹೀಗೆ ಒತ್ತಡ ಹೆಚ್ಚಾಗುವಂತೆ ಮಾಡುವ ದೇಹದ ಕ್ರಿಯೆಗಳ ಕಥೆಯೇ ಬೇರೆ. ಅದು ಇಲ್ಲಿ ಬೇಡ. ಆದರೆ ಸ್ಫೋಟಗೊಂಡು ಹೊರ ಬಂದ ಸೀನಿನ ಗಾಳಿ ಮೊದಲಿಗೆ ದುಂಡಗಿನ ಬಲೂನಿನಂತೆಯೇ ಇರುತ್ತದೆ. ಕ್ರಮೇಣ ಸುತ್ತಲಿನ ಗಾಳಿಯ ಒತ್ತಡಕ್ಕೆ ಅನುಗುಣವಾಗಿ ದೊಡ್ಡದಾಗುತ್ತದೆ. ಹಾಗೆಯೇ ಸುತ್ತಲಿನ ಗಾಳಿಯನ್ನು ಒಳಗೆ ಸೆಳೆದುಕೊಂಡು ಒಡೆಯುತ್ತದೆ. ಹಲವು ಬಲೂನುಗಳಾಗುತ್ತದೆ.

ಈ ಹಿಂದೆಯೂ ಇಂತಹ ಚಿತ್ರಗಳನ್ನು ತೆಗೆಯಲಾಗಿತ್ತು. ಆದರೆ ಹನಿಗಳ ಚಲನೆಯನ್ನು ಲಿಡಿಯಾ ಮಾಡಿರುವಂತೆ ಕೂಲಂಕಷವಾಗಿ ಮಾಡಿರಲಿಲ್ಲ. ಬಾಯಿ-ಮೂಗಿನಿಂದ ಹೊರ ಬಂದ ಹನಿಗಳು ಬಿಡಿ, ಬಿಡಿಯಾಗಿ ಹರಡಿಕೊಳ್ಳುತ್ತವೆಂದು ಇದುರವೆಗೂ ತಿಳಿಯಲಾಗಿತ್ತು. ಆದರೆ ಲಿಡಿಯಾ ತೆಗೆದಿರುವ ವೀಡಿಯೋಗಳು ತಿಳಿಸುವುದೇ ಬೇರೆ. ಎಲ್ಲ ಹನಿಗಳೂ ಬಿಡಿಯಾಗಿರುವುದಿಲ್ಲ. ಸಿಂಬಳದ ಅಂಟುತನ ಇದನ್ನು ತಡೆಗಟ್ಟುತ್ತದೆ. ಜೇಡರಬಲೆಯ ಮೇಲೆ ಹನಿಗಳು ಮುತ್ತುಗಳಂತೆ ಸಂಗ್ರಹವಾಗಿರುವುದನ್ನು ಕಂಡಿರುತ್ತೀರಲ್ಲ? ಇಲ್ಲಿಯೂ ಹಾಗೆಯೇ ಹನಿಗಳು ಸಿಂಬಳದ ಎಳೆಗಳ ಮೇಲೆ ಹರಡಿಕೊಂಡಿರುತ್ತವೆ.

ಇದರ ಪರಿಣಾಮ: ಸಣ್ಣ ಹನಿಗಳು ಕೂಡ ದೊಡ್ಡದಾಗಿ ಬೆಳೆಯಬಲ್ಲವು. ದೊಡ್ಡ ಹನಿಗಳು ಕೂಡ ಸಿಂಬಳದೆಳೆಯ ಆಸರೆಯಲ್ಲಿ ಬಲು ದೂರ ಚಲಿಸಬಲ್ಲುವು. ಕೈಯಳತೆಯ ದೂರದಲ್ಲಿದ್ದರೆ ಸೋಂಕು ತಗುಲುವುದಿಲ್ಲವೆನ್ನುವಂತಿಲ್ಲ ಎನ್ನುತ್ತಾರೆ ಲಿಡಿಯಾ. ಕೆಲವರು ಕೈ ಕುಲುಕದೆಯೇ ಕೈ ಜೋಡಿಸಿ ನಮಸ್ತೆ ಹೇಳುತ್ತಾರೆ. ಕೈ ಕುಲುಕಿದಾಗ ಬಲು ಸಮೀಪವಿರುತ್ತೇವೆಯಾದ್ದರಿಂದ ಸೋಂಕುಂಟಾಗುವ ಸಾಧ್ಯತೆ ಜಾಸ್ತಿ. ನಮಸ್ತೆ ಎಂದು ಕೈ ಜೋಡಿಸಿದರೆ ಹೀಗಾಗದು ಎನ್ನುವುದು ಇವರ ತರ್ಕ. ಫ್ಲೂ ಹಾಗೂ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ ಇಬೊಲಾ ವೈರಸ್ ಗಳು ಈ ತೆರನಾಗಿ ದೇಹ ಸಂಪರ್ಕದಿಂದಲೇ ದಾಟಿ ಬರುತ್ತವೆ. ಅಂತಹ ಸಂದರ್ಭದಲ್ಲಿ ‘ನಮಸ್ತೆ’ ನೆರವಾಗಬಹುದು. ಆದರೆ ನೆಗಡಿ ಹಾಗೂ ಹಂದಿಜ್ವರ ಅಥವಾ ಕೋಳಿಜ್ವರಗಳ ಸಂದರ್ಭದಲ್ಲಿ ಕೋಣೆಯಿಂದ ಹೊರ ಹೋದರೂ ಸೋಂಕು ಬೆಂಬತ್ತಿ ಬರಬಹುದು ಎನ್ನುತ್ತದೆ ಲಿಡಿಯಾ ರವರ ಸಂಶೋಧನೆಗಳು.

ಇದರಿಂದೇನು ಪ್ರಯೋಜನ ಎನ್ನಬೇಡಿ. ಲಿಡಿಯಾರ ಸೂತ್ರಗಳಂತೆಯೇ ಎಲ್ಲ ಸೀನಿನ ಸಂದರ್ಭಗಳೂ ಇದ್ದಲ್ಲಿ, ಗಾಳಿಯಲ್ಲಿ ಹರಡುವ ರೋಗಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವುದು ಸುಲಭವಾದೀತು ಎನ್ನುವುದು ಲಿಡಿಯಾರ ತರ್ಕ. ಅದಕ್ಕೂ ಮುನ್ನ, ಹನಿಗಳಲ್ಲಿ ಎಷ್ಟು ರೋಗಾಣುಗಳು ಇರಬಹುದು? ಎಷ್ಟು ಹನಿಗಳಿಂದ ರೋಗಗಳುಂಟಾಗಬಹುದು? ಎಂತಹ ರೋಗಾಣುಗಳು ಹೀಗೆ ಹನಿಗಳ ಮೂಲಕ ಹರಡಬಲ್ಲವು? ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬೇಕು. ಅದುವರೆವಿಗೂ ಮೂಗಿಗೆ ಬಟ್ಟೆಯನ್ನೋ, ಕರ್ಚೀಫನ್ನೋ ಕಟ್ಟಿಕೊಂಡು, ನಮಸ್ತೆ ಹೇಳುತ್ತ ಎಚ್ಚರದಿಂದಿರಬೇಕಷ್ಟೆ.

 

Published in: on ಜೂನ್ 7, 2016 at 9:06 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಆಹಾ! ಕಾಂತಾ!

 

ಪ್ರಣಯದಾಟವೂ ಕಾಂತಶಕ್ತಿಯೂ

ಕೊಳ್ಳೇಗಾಲ ಶರ್ಮ

ಪ್ರಣಯದಾಟ ಕಾಂತ-ಕಾಂತೆಯರ ನಡುವೆ ನಡೆಯುತ್ತದೆ. ಅದರಲ್ಲನೇನು ವಿಶೇಷ? ಎಂದಿರಾ? ನಿಜ. ಪ್ರಣಯದಾಟ ಗಂಡು-ಹೆಣ್ಣಿನ ನಡುವಿನ ಆಕರ್ಷಣೆಯ ಫಲ. ಗಂಡು ಹೆಣ್ಣನ್ನು ಆಕರ್ಷಿಸುತ್ತದೋ, ಹೆಣ್ಣು ಗಂಡನ್ನು ಆಕರ್ಷಿಸುತ್ತದೋ, ಗೊತ್ತಿಲ್ಲ. ಒಟ್ಟಾರೆ ಸಂತಾನಾಭಿವೃದ್ಧಿಯಲ್ಲಿ ಪ್ರಣಯದಾಟಗಳು ಪ್ರಮುಖ ಪಾತ್ರ ವಹಿಸುತ್ತವೆನ್ನುವುದು ಮಾತ್ರ ನಿಜ. ಈ ಆಟ ಕೇವಲ ಹೆಣ್ಣು, ಗಂಡಿನ ನಡುವಿನ ಆಕರ್ಷಣೆಯಲ್ಲ. ಇದರಲ್ಲಿ ಈ ಭೂಮಿಯ ಕಾಂತ ಶಕ್ತಿಯ ಪ್ರಭಾವವೂ ಇದೆಯಂತೆ.

ಗಂಡು-ಹೆಣ್ಣಿನ ನಡುವೆ ನಡೆಯುವ ಪ್ರಣಯಕೇಳಿಯನ್ನು ವಿದ್ಯುತ್ ಅಥವಾ ಅಯಸ್ಕಾಂತ ಶಕ್ತಿಯು ಪ್ರಭಾವಿಸುತ್ತದೆನ್ನುವ ಸ್ವಾರಸ್ಯಕರ (ಶಾಕಿಂಗ್ ಸುದ್ದಿ ಅಂದರೂ ಸರಿಯೇ. ಆಕರ್ಷಕ ಸುದ್ದಿ ಅಂದರೂ ಸರಿಯೇ!) ಸುದ್ದಿಯನ್ನು ತೈವಾನಿನ ಚಾಂಗ್ ಗುನ್ ವಿವಿಯ ವಿಜ್ಞಾನಿ ಚಿಯಾಲಿನ್ ವೂ ಮತ್ತು ಸಂಗಡಿಗರು ಇತ್ತೀಚಿನ ಪಿಎಲ್ಓಎಸ್ ಒನ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ಇದು ಸುದ್ದಿ ಏಕೆಂದರೆ ಇದುವರೆವಿಗೂ ಅಯಸ್ಕಾಂತ ಹಾಗೂ ಕಾಂತವಲಯಗಳ ಪ್ರಭಾವವನ್ನು ಜೀವಿಗಳ ಚಲನೆಯ ಮೇಲಾಗುತ್ತದೆಂದಷ್ಟೆ ಗುರುತಿಸಲಾಗಿತ್ತು. ಆದರೆ ಈ ಸುದ್ದಿ ಕಾಂತವಲಯಗಳು ಸಂತಾನೋತ್ಪತ್ತಿಯ ಚಟುವಟಿಕೆಗಳನ್ನೂ ಪ್ರಭಾವಿಸುತ್ತದೆಂದು ಸೂಚಿಸಿವೆ. ಚಿಯಾಲಿನ್ ವೂ ತಂಡ ಈ ವಿದ್ಯಮಾನವನ್ನು ಹಣ್ಣಿನ ನೊಣ ಡ್ರೋಸೋಫಿಲಾ ಮೇಲೆ ನಡೆಸಿದ ಪ್ರಯೋಗಗಳ ಮೂಲಕ ಅರಿತುಕೊಂಡಿದೆ.

ಜೀವಿಗಳ ಮೇಲೆ ಕಾಂತ ವಲಯದ ಪ್ರಭಾವ ಇರುವ ಬಗ್ಗೆ ಅಚ್ಚರಿಯೇನಿಲ್ಲ. ಏಕೆಂದರೆ ಕೋಟ್ಯಂತರ ಜೀವಿಗಳ ನೆಲೆಯಾಗಿರುವ ಈ ಭೂಮಿಯೇ ಒಂದು ದೊಡ್ಡ ಅಯಸ್ಕಾಂತ. ಇದರ ಪ್ರಭಾವ ಜೀವಿಗಳ ಮೇಲೂ ಇರಬಹುದು. ಇದಕ್ಕೆ ಒಂದು ಉದಾಹರಣೆ ಎಂದರೆ ಚಿಟ್ಟೆ ಹಾಗೂ ಹಕ್ಕಿಗಳ ವಲಸೆ. ಹಕ್ಕಿಗಳು ವಲಸೆ ಹೋಗುವಾಗ ತಮ್ಮ ದಿಕ್ಕನ್ನು ಗುರುತಿಸಲು ಭೂಮಿಯ ಅಯಸ್ಕಾಂತದ ವಲಯಗಳನ್ನು ಬಳಸುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಬೆಳಗಿನ ಹೊತ್ತು ವಲಸೆ ಹೋಗುವ ಹಕ್ಕಿಗಳಿಗೆ ಸೂರ್ಯ ದಿಕ್ಕು ತೋರಿಸುತ್ತಾನೆ. ಆದರೆ ರಾತ್ರಿ ಹೊತ್ತು ಸೂರ್ಯನಿಲ್ಲದಾಗಲೂ ದಿಕ್ಸೂಚಿಯಾಗಬಲ್ಲ ಸಂಗತಿ ಎಂದರೆ ಭೂಕಾಂತವಲಯ. ಹಕ್ಕಿಗಳು ಕಾಂತವಲಯದ ಪ್ರಭಾವದ ನೆರವಿನಿಂದ ಭೂಮಿಯ ಉತ್ತರ ಹಾಗೂ ದಕ್ಷಿಣ ಧ್ರುವಗಳನ್ನು ಗುರುತಿಸಿ ಹಾರುತ್ತಿರಬಹುದು ಎನ್ನುವ  ಬಗ್ಗೆ ಹಲವು ಪುರಾವೆಗಳಿವೆ.

ಕಾಂತ ವಲಯ ಎಂದರೆ ಒಂದು ಅಯಸ್ಕಾಂತದ ಪ್ರಭಾವ ಹರಡಿರುವ ನೆಲೆ. ಈ ಪ್ರಭಾವ ಅಯಸ್ಕಾಂತದ ಒಂದು ಧ್ರುವದಿಂದ ಮತ್ತೊಂದು ಧ್ರುವದ ವರೆಗೆ ವ್ಯಾಪಿಸಿರುತ್ತದೆ, ಈ ವಲಯದೊಳಗೆ ಯಾವುದೇ ವಿದ್ಯುತ್ ವಾಹಕ ವಸ್ತು ಬಂದರೂ ಅದರಲ್ಲಿ ವಿದ್ಯುತ್ ಅಥವಾ ಕಾಂತ ಶಕ್ತಿಯುಂಟಾಗಬಹುದು. ಧ್ರುವಗಳ ದಿಕ್ಕಿನಲ್ಲೇ ಇದ್ದಲ್ಲಿ ಹೀಗಾಗುವ ವಿದ್ಯುತ್ ಅಥವಾ ಕಾಂತ ಶಕ್ತಿಯ ಪ್ರಭಾವ ಹೆಚ್ಚು. ಧ್ರುವಗಳ ದಿಕ್ಕಿಗೆ ಅಡ್ಡಲಾಗಿದ್ದಲ್ಲಿ ಕಡಿಮೆ. ಈ ವಿದ್ಯಮಾನವನ್ನು ಬಳಸಿಕೊಂಡು ದಿಕ್ಸೂಚಿಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವವನ್ನು ಸೂಚಿಸುತ್ತವಷ್ಟೆ. ಹಾಗೆಯೇ ತಮ್ಮೊಳಗಿರುವ ಕಿರು ಕಾಂತಗಳನ್ನು ಬಳಸಿಕೊಂಡು ಹಕ್ಕಿಗಳು ದಿಕ್ಕುಗಳನ್ನು ಗುರುತಿಸುತ್ತಿರಬಹುದು ಎನ್ನುವ ಊಹೆಯಿದೆ.

ಜೀವಿಗಳಲ್ಲಿ ಕಾಂತಶಕ್ತಿಯ ಸಂವೇದನೆ ಹೇಗಾಗುತ್ತದೆನ್ನುವ ಬಗ್ಗೆ ಹಲವು ಊಹೆಗಳಿವೆ. ಅಯಸ್ಕಾಂತದ ಜೊತೆಗೆ ಮೊಳೆಯನ್ನು ಉಜ್ಜಿದಾಗ ಮೊಳೆಯೂ ಅಯಸ್ಕಾಂತವಾಗುತ್ತದಷ್ಟೆ. ಇಂತಹ ವಿದ್ಯಮಾನದಿಂದ ಜೀವಿಗಳಲ್ಲಿರುವ ಅಣುಗಳೂ ಸೂಕ್ಷ್ಮ ಅಯಸ್ಕಾಂತಗಳಾಗಿ ಭೂಕಾಂತವನ್ನು ಗುರುತಿಸುತ್ತಿರಬಹುದೆನ್ನುವುದು ಮೊದಲ ಊಹೆ. ಮುಖ್ಯವಾಗಿ ಇದು ಸಮುದ್ರಜೀವಿಗಳಲ್ಲಿ ಆಗುತ್ತಿರಬಹುದೆಂದು ವಿಜ್ಞಾನಿಗಳು ನಂಬಿದ್ದರೂ ಸಾಕ್ಷಿಗಳು ದೊರೆತಿಲ್ಲ. ಅಥವಾ ಜೀವಿಗಳ ದೇಹದಲ್ಲಿ ಅತಿ ಸೂಕ್ಷ್ಮವಾದ ಕಾಂತಗುಣವುಳ್ಳ ವಸ್ತುಗಳಿರಬಹುದು. ಇವುಗಳು ಕಾಂತಶಕ್ತಿಯನ್ನು ಗ್ರಹಿಸುತ್ತಿರಬಹುದು ಎನ್ನುವ ಊಹೆಯೂ ಇದೆ. ಇದಕ್ಕೆ ಅನುಗುಣವಾಗಿ ಪಾರಿವಾಳಗಳ ಮಿದುಳಿನಲ್ಲಿ ಹಾಗೂ ಇನ್ನೂ ಕೆಲವು ಜೀವಿಗಳಲ್ಲಿ ಕಾಂತಗುಣವುಳ್ಳ ಸೂಕ್ಷ್ಮ ಹರಳುಗಳು ಸಿಕ್ಕಿವೆ. ಇವ್ಯಾವುದೂ ಇಲ್ಲದ ಕಡೆ ಕಾಂತ ಶಕ್ತಿಯ ಪ್ರಭಾವದಿಂದಾಗಿ ಕೆಲವು ರಾಸಾಯನಿಕ ಕ್ರಿಯೆಗಳಾಗುತ್ತಿರಬಹುದು. ಇವು ಕಾಂತ ಶಕ್ತಿಯನ್ನು ಗ್ರಹಿಸಲು ನೆರವಾಗುತ್ತಿರಬಹುದೆನ್ನುವ ಮತ್ತೊಂದು ವಾದವೂ ಇದೆ. ಇಂತಹ ರಾಸಾಯನಿಕ ಕ್ರಿಯೆಗಳು ಬೆಳಕಿಗೆ ಪ್ರತಿಕ್ರಿಯಿಸುವಂತಹ ಕೆಲವೇ ಜೀವಕೋಶಗಳಲ್ಲಿ ಆಗುತ್ತಿರಬಹುದು. ಕಾಂತಶಕ್ತಿಯಿಂದಾಗಿ ಆಗುವ ಕ್ರಿಯೆಗಳು ಬೆಳಕಿಗೆ ಪ್ರತಿಕ್ರಿಯಿಸುವಂತಹ ವಸ್ತುಗಳನ್ನು ಸೃಷ್ಟಿಸುತ್ತಿರಬಹುದೆನ್ನುವುದು ಮೂರನೆಯ ವಾದ. ಅರ್ಥಾತ್. ಕಾಂತ ಶಕ್ತಿಯನ್ನು ಗ್ರಹಿಸಲು ಕಾಂತಶಕ್ತಿಯಿರುವ ವಸ್ತುಗಳು ಇರಲೇಬೇಕಿಲ್ಲವೆನ್ನುತ್ತದೆ ಈ ವಾದ.  ಇದೀಗ ಚಿಯಾಲಿನ್ ವೂ ತಂಡ ಗುರುತಿಸಿರುವುದು ಈ ಮೂರನೆಯ ತೆರನ ಕಾಂತಶಕ್ತಿ ಸಂವೇದನೆ ಹಣ್ಣಿನ ನೊಣಗಳಲ್ಲಿ ಪ್ರಣಯಕೇಳಿಯನ್ನು ಉತ್ತೇಜಿಸುತ್ತದೆ ಎಂದು ಗುರುತಿಸಿದ್ದಾರೆ. ಡ್ರೊಸೊಫಿಲಾ ನೊಣಗಳಲ್ಲಿ ಕ್ರಿಪ್ಟೋಕ್ರೋಮುಗಳೆನ್ನುವ ಪ್ರೋಟೀನುಗಳು ಈ ಕೆಲಸ ಮಾಡುತ್ತಿರಬಹುದು ಎನ್ನುವ ಊಹೆ ವೂ ತಂಡದ್ದು.

ಕ್ರಿಪ್ಟೊಕ್ರೋಮುಗಳಿಗೂ ಪ್ರಾಣಿಗಳ ನಡವಳಿಕೆಗೂ ಸಂಬಂಧವಿರಬಹುದೆನ್ನುವ ಗುಮಾನಿ ಹೊಸತೇನಲ್ಲ. ಹಕ್ಕಿಗಳ ಕಣ್ಣಿನಲ್ಲಿ ಇಂತಹ ಪ್ರೊಟೀನುಗಳಿವೆ. ಇವು ಬೆಳಕಿನ ಕೆಲವು ವರ್ಣ ತರಂಗಗಳನ್ನು ಮಾತ್ರ ಸಂವೇದಿಸುತ್ತವೆ. ತನ್ಮೂಲಕ ಹಗಲು, ರಾತ್ರಿಯ ಕಾಲಗಣನೆಗೆ ನೆರವಾಗುತ್ತವೆ. ಇವುಗಳಿಂದಾಗಿ ಹಕ್ಕಿಗಳು ಹಗಲು, ರಾತ್ರಿಯೇನೆಂಬುದನ್ನು ಅರಿಯಬಲ್ಲುವು. ನೀಲಿ ಹಾಗೂ ನೇರಳಾತೀತ ಬೆಳಕಿನ ತರಂಗಗಳಿಗೆ ಸ್ಪಂದಿಸುವ ಕ್ರಿಪ್ಟೋಕ್ರೋಮುಗಳಲ್ಲಿ ಬೆಳಕಿನಿಂದ ಚುರುಕಾಗುವ ಫ್ಲೇವಿನ್ ಅಡೆನಿನ್ ಡೈನ್ಯೂಕ್ಲಿಯೋಟೈಡ್ ಎನ್ನುವ ರಾಸಾಯನಿಕವಿದೆ. ಇದು ಬೆಳಕನ್ನು ಹೀರಿಕೊಂಡು ರಾಸಾಯನಿಕ ಕ್ರಿಯೆಯನ್ನು ಆರಂಭಿಸುತ್ತದೆ. ದೃಷ್ಟಿಗೂ, ಹಗಲು-ರಾತ್ರಿಯ ವ್ಯತ್ಯಾಸವನ್ನು ತಿಳಿಯಲೂ ನೆರವಾಗುತ್ತದೆ. ಹಕ್ಕಿಗಳ ಕಣ್ಣುಗಳಲ್ಲಿ ಇಂತಹ ಹಲವು ಕ್ರಿಪ್ಟೋಕ್ರೋಮುಗಳನ್ನು ಗುರುತಿಸಲಾಗಿದೆ.

ಆದರೆ ಡ್ರೋಸೋಫಿಲಾದಲ್ಲಿ ಒಂದೇ ಒಂದು ಈ ಬಗೆಯ ಪ್ರೊಟೀನು ಇದೆ. ಇದುವೂ ಕಣ್ಣಿನಲ್ಲಿಲ್ಲ. ನೊಣದ ಮಿದುಳಿನಲ್ಲಿದೆ. ಅಲ್ಲಿ ಇದು ಹಗಲು-ರಾತ್ರಿಯನ್ನು ತಿಳಿಸುವ ಜೈವಿಕ ಗಡಿಯಾರವನ್ನು ಚಾಲಿಸುತ್ತಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.  ಈ ಹಿಂದೆ ಅಧ್ಯಯನದ ವೇಳೆ ಏಕತೆರನಾದ ಕಾಂತಶಕ್ತಿಯಲ್ಲಿ ನೊಣಗಳನ್ನು ಇಟ್ಟಾಗ ಅವುಗಳ ಜೈವಿಕ ಗಡಿಯಾರ ನಿಧಾನವಾಗಿ, ಕಾಲಪ್ರವೃತ್ತಿಗಳು ಏರುಪೇರಾಗಿದ್ದುವು. ಹಾಗಿದ್ದರೆ ಈ ಕ್ರಿಪ್ಟೋಕ್ರೋಮುಗಳು ಬೆಳಕನ್ನಷ್ಟೆ ಅಲ್ಲ, ಕಾಂತಶಕ್ತಿಯನ್ನೂ ಗ್ರಹಿಸಬಲ್ಲುವೇ ಎನ್ನುವ ಸಂದೇಹವೆದ್ದಿತ್ತು.

ಇದನ್ನು ತೀರ್ಮಾನಿಸಲು ವೂ ಮತ್ತು ಸಂಗಡಿಗರು ನೊಣಗಳನ್ನು ಪ್ರಣಯಕೇಳಿಯಾಡಿಸಿದರು. ನೊಣಗಳಲ್ಲಿ ಪ್ರಣಯದಾಟ ಯಾವಾಗೆಂದರೆ ಆವಾಗ ನಡೆಯುವುದಿಲ್ಲ. ಏನಿದ್ದರೂ ಕತ್ತಲಾಗಬೇಕು. ಅದು ಅವಕ್ಕೆ ತಿಳಿಯಬೇಕು. ಅರ್ಥಾತ್ ಇದು ಜೈವಿಕ ಗಡಿಯಾರದ ನಿಯಂತ್ರಣದಲ್ಲಿರುವ ಒಂದು ಚಟುವಟಿಕೆ. ಭೂಮಿಯ ಕಾಂತಶಕ್ತಿಯ ಹತ್ತುಪಟ್ಟು ಹೆಚ್ಚು ಕಾಂತಶಕ್ತಿಯಿರುವ ಒಂದು ಸಾಧನವನ್ನು ಇವರು ನಿರ್ಮಿಸಿದರು. ಈ ರಂಗಮಂಚದಲ್ಲಿ ವಿವಿಧ ತಳಿಯ ಗಂಡು-ಹೆಣ್ಣುಗಳನ್ನು ಬಿಡಲಾಯಿತು. ವಿವಿಧ ಕಾಂತಶಕ್ತಿಯನ್ನು ನಿರ್ಮಿಸಿ ಗಂಡು-ಹೆಣ್ಣುಗಳ ಚಟವಟಿಕೆಯನ್ನು ಗಮನಿಸಲಾಯಿತು. ಗಂಡುಗಳು ಹೆಣ್ಣನ್ನು ಆಕರ್ಷಿಸಲು ಅವನ್ನು ಮುಟ್ಟುತ್ತವೆ. ಒತ್ತರಿಸಿಕೊಂಡು ನಡೆಯುತ್ತವೆ. ಬಳಿಸಾರಿ ರೆಕ್ಕೆಗಳನ್ನು ಬಡಿಯುತ್ತವೆ. ಮೀಸೆಯಿಂದ ಬಡಿಯುತ್ತವೆ. ಹತ್ತು ನಿಮಿಷದಲ್ಲಿ ಅವು ಇಂತಹದುವನ್ನು ಎಷ್ಟು ಬಾರಿ ಮಾಡುತ್ತವೆನ್ನುವುದೇ ಪ್ರಣಯದಾಟದ ಉತ್ಕಟತೆಯ ಸೂಚಿ.

ಕಾಂತಶಕ್ತಿ ಹೆಚ್ಚಾದಂತೆ ಗಂಡುಗಳ ಪ್ರಣಯದಾಟವೂ ಉತ್ಕಟವಾಯಿತು. ಇವರು ಉಪಯೋಗಿಸಿದ ಮೂರು ವಿಭಿನ್ನ ತಳಿಗಳಲ್ಲಿ ವ್ಯತ್ಯಾಸವಿದ್ದರೂ, ಕಾಂತಶಕ್ತಿ ಬಳಸಿದಾಗ ಪ್ರಣಯದಾಟ ಸಾಮಾನ್ಯಕ್ಕಿಂತಲೂ ಹೆಚ್ಚುತ್ತಿದ್ದುದು ಕಂಡು ಬಂತು. ಇದಕ್ಕೂ ಬೆಳಕಿಗೂ ಏನಾದರೂ ಸಂಬಂಧವಿದೆಯೋ ಎನ್ನುವುದನ್ನು ಗಮನಿಸಲು ವೂ ಮತ್ತೊಂದು ಪ್ರಯೋಗ ಮಾಡಿದರು. ಕಾಂತಶಕ್ತಿಯನ್ನು ಹೆಚ್ಚಿಸಿ, ನೀಲಿ ಬೆಳಕನ್ನು ಮಂದವಾಗಿಸಿದರು. ಈ ಸಂದರ್ಭದಲ್ಲಿ ಗಂಡುಗಳಾಟ ತುಸು ಕಡಿಮೆಯಾಯಿತು.

ಹೀಗೇಕೆ ಎನ್ನುವುದನ್ನು ತಿಳಿಯಲು  ಜೈವಿಕ ತಂತ್ರಜ್ಞಾನದ ಮೂಲಕ ಕ್ರಿಪ್ಟೊಕ್ರೋಮ್ ಪ್ರೋಟೀನನ್ನು ತಯಾರಿಸಲಾಗದ ನೊಣದ ತಳಿಗಳನ್ನು ಸೃಷ್ಟಿಸಿದರು. ಈ ತಳಿಯ ಗಂಡು-ಹೆಣ್ಣುಗಳನ್ನು ತಮ್ಮ ಕಾಂತಸಾಧನದೊಳಗಿಟ್ಟು ಕಾಂತಶಕ್ತಿಯನ್ನು ಹೆಚ್ಚಿಸಿದರು. ಗಂಡು-ಹೆಣ್ಣುಗಳ ಆಟ ಹೆಚ್ಚಿತೇ ಎಂದು ಗಮನಿಸಿದರು. ಕ್ರಿಪ್ಟೊಕ್ರೋಮ್ ಪ್ರೊಟೀನುಗಳಿಲ್ಲದ ನೊಣಗಳಲ್ಲಿ ಕಾಂತಶಕ್ತಿಯ ಪ್ರಭಾವ ಇಲ್ಲವೇ ಇಲ್ಲ ಎನ್ನುವಂತಿತ್ತು.

ಅಂದರೆ ಈ ಪ್ರೊಟೀನುಗಳು ಕಾಂತಶಕ್ತಿಯನ್ನು ಹೇಗೋ ಸಂವೇದಿಸಿ, ರಾಸಾಯನಿಕ ಕ್ರಿಯೆಗಳ ಮೂಲಕ ಮಿದುಳಿಗೆ ಸೂಚಿಸುತ್ತವೆ ಎನ್ನುವ ಅನುಮಾನವುಂಟಾಗುತ್ತದಷ್ಟೆ! ಇದನ್ನು ಸ್ಪಷ್ಟ ಪಡಿಸಿಕೊಳ್ಳಲು ನೊಣಗಳ ಮಿದುಳಿನಲ್ಲಿ ಜೈವಿಕ ಗಡಿಯಾರಗಳನ್ನು ಪ್ರತಿನಿಧಿಸುವ ನರಕೋಶಗಳನ್ನು ರಾಸಾಯನಿಕವಾಗಿ ಪ್ರಚೋದಿಸಿ ಪ್ರಯೋಗ ಮಾಡಿದರು. ಹೀಗೆ ರಾಸಾಯನಿಕವಾಗಿ ಪ್ರಚೋದಿಸಿದ ನೊಣಗಳು ಕ್ರಿಪ್ಟೋಕ್ರೋಮು ಪ್ರೊಟೀನು ತಯಾರಿಸುವ ಸಾಮರ್ಥ್ಯವಿಲ್ಲದಿದ್ದರೂ ಕಾಂತಶಕ್ತಿ ಹೆಚ್ಚಿದಂತೆ ಹೆಚ್ಚೆಚ್ಚು ಹೆಣ್ಣುಗಳ ಹಿಂದೆ ಬಿದ್ದುವು. ಅರ್ಥಾತ್, ಕ್ರಿಪ್ಟೊಕ್ರೋಮುಗಳು ಬೆಳಕಿಗಷ್ಟೆ ಅಲ್ಲ, ಕಾಂತಶಕ್ತಿಯನ್ನು ಗ್ರಹಿಸುತ್ತವೆ ಎನ್ನುವುದು ಹೀಗೆ ಸ್ಪಷ್ಟವಾಗಿದೆ. ಬೆಳಕಿನ ಗ್ರಹಿಕೆಗೂ, ಇತರೆ ಸಂವೇದನೆಗಳಿಗೂ, ಜೈವಿಕ ಗಡಿಯಾರಕ್ಕೂ ನಂಟು ಇದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ದೊರೆತಿದೆ ಎನ್ನಬಹುದು.

_____________

A.S.K.V.S.Sharma, Sri Lakshmi, 30 Feet Road, 6th Main, Near Hampi Circle, Hebbal 2nd Stage, Mysore-570017; Phone: 9886640328; email: kollegala@gmail.com

ಆಕರ: Paula Stockley and Liane Hobson, Paternal Care and litter size coevolution in mammals. Proc. Royal Soc., B 283, 20160140 (http://dx.doi.org/10.1098/rspb.2016.0140)

ಹೆಚ್ಚಿನ ಓದಿಗೆ:

Wu C-L, Fu T-F, Chiang M-H, Chang Y-W, Her J-L, Wu T (2016) Magnetoreception Regulates Male Courtship Activity in Drosophila. PLoS ONE, 11(5): e0155942.  doi:10.1371/journal.pone.0155942

http://epaper.samyukthakarnataka.com/c/10648982

Published in: on ಮೇ 30, 2016 at 5:42 ಅಪರಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಅಪ್ಪನ ಬೆಲೆ

23052016

ಅಪ್ಪನ ಬೆಲೆ ಏನು?

ಕೊಳ್ಳೇಗಾಲ ಶರ್ಮ

ಮನೆ ಜಗಳದ ವಿಷಯ ಅಲ್ಲ ಬಿಡಿ. ಇದು ಜೀವಿವಿಜ್ಞಾನದ ವಿಸ್ಮಯ. ಹೌದು. ಜೀವಿಗಳಲ್ಲಿ ಗಂಡು ಹೆಣ್ಣು ಎನ್ನುವ ಭೇದವನ್ನು ಯಃಕಶ್ಚಿತ್ ಕೀಟಗಳಿಂದ ಮಾನವನವರೆಗೂ ಕಾಣುತ್ತೇವೆ. ಜೀವಿಗಳ ಬೆಳೆವಣಿಗೆ, ಉಳಿವಿಗೆ ಹೆಣ್ಣಿನ ಕೊಡುಗೆ ಏನೆಂಬುದನ್ನು ವಿವರಿಸಬೇಕಿಲ್ಲ. ನೂರಾರು ಸಂತಾನವನ್ನು ಹೆರುವ ಹೊಣೆ ಹೆಣ್ಣಿನದ್ದೇ. ಅದಕ್ಕೇ ಅದಕ್ಕೆ ಅಮ್ಮನ ಪಟ್ಟ. ಹಾಗಿದ್ದರೆ ಗಂಡಿನ ಪಾತ್ರವೇನು? ಕೇವಲ ಸಂತಾನಾಭಿವೃದ್ಧಿ ಮಾಡಲಿ ಎಂದು ಹೆಣ್ಣಿಗೆ ವೀರ್ಯಾಣುವನ್ನು ಕೊಡುವುದಷ್ಟೆ ಗಂಡಿನ ಕೆಲಸವೆ? ಅಥವಾ ಅದಕ್ಕಿಂತಲೂ ಹೆಚ್ಚಿನದೇನಾದರೂ ಇದೆಯೋ? ಇದು ಪ್ರಶ್ನೆ.

 

ಈ ಪ್ರಶ್ನೆಯೊಳಗೆ ಅಡಗಿದೆ ಅಪ್ಪನ ಕುರಿತ ಇನ್ನೊಂದು ಪ್ರಶ್ನೆ. ಅಪ್ಪ ಅನ್ನುವ ಕಿರೀಟ ಎಲ್ಲ ಗಂಡುಗಳಿಗೂ ಇಲ್ಲ. ಉದಾಹರಣೆಗೆ, ಮೀನುಗಳಲ್ಲಿ ಅವಿರುವ ನೆಲೆಯಲ್ಲೇ ಹೆಣ್ಣು ಮೊಟ್ಟೆಯಿಡುತ್ತದೆ, ಗಂಡು ಆ ಮೊಟ್ಟೆಯ ಮೇಲೆ ವೀರ್ಯದ ಮಳೆಗೈಯುತ್ತದೆ. ಇದಾದ ನಂತರ ಗಂಡು ಎಲ್ಲೋ, ಹೆಣ್ಣು ಎಲ್ಲೋ? ಅಪರೂಪಕ್ಕೆ ಕೆಲವು ಮೀನುಗಳಲ್ಲಿ ಗಂಡು-ಹೆಣ್ಣುಗಳೆರಡೂ ಮೊಟ್ಟೆಗಳು ಒಡೆಯುವವರೆಗೂ ಗೂಡನ್ನು ಕಾಯುವುದುಂಟು. ಅನಂತರ ಅವರವರ ದಾರಿ ಅವರವರಿಗೆ. ಕೀಟಗಳಲ್ಲೂ, ಇತರೆ ಜೀವಿಗಳಲ್ಲೂ ಇದೇ ಸ್ಥಿತಿಯನ್ನು ಕಾಣಬಹುದು. ಜೇಡಗಳಲ್ಲಿ ಇನ್ನೂ ವಿಚಿತ್ರ. ಹೆಣ್ಣಿನ ಜೊತೆ ಕೂಡಿದ ನಂತರ ಗಂಡು ಅದೇ ಹೆಣ್ಣಿಗೆ ಆಹಾರವಾಗಿಬಿಡುತ್ತದೆ! ಹುತಾತ್ಮನಾಗುತ್ತದೆ. ಇರುವೆ, ಜೇನ್ನೊಣಗಳಂತಹ ಕೆಲವು ಕೀಟಗಳಲ್ಲಿ ಮರಿಗಳ ಪೋಷಣೆಗೂ ವ್ಯವಸ್ಥೆಯೇನೋ ಇದೆ. ಆದರೆ ಇಲ್ಲಿ ಪೋಷಕರು ವೀರ್ಯ ಕೊಟ್ಟ ಗಂಡುಗಳಲ್ಲ. ಅದಕ್ಕಾಗಿಯೇ ಹುಟ್ಟಿದ ಕಾರ್ಮಿಕ ಕೀಟಗಳು.

 

ಅಪ್ಪನೆಂಬ ಜವಾಬುದಾರಿ ಹೆಚ್ಚಿಗೆ ಕಾಣುವುದು ಹಕ್ಕಿಗಳಲ್ಲಿ ಹಾಗೂ ಸ್ತನಿಗಳಲ್ಲಿ. ಹಲವು ಹಕ್ಕಿಗಳ ಗಂಡುಗಳು ಮೊಟ್ಟೆಯೊಡೆದು ಬಂದ ಮರಿ ರೆಕ್ಕೆ ಬಲಿತು ಹಾರುವವರೆಗೂ ಹೆಣ್ಣಿಗೆ ಹೆಗಲು ಕೊಟ್ಟು ಜೊತೆಯಾಗಿರುತ್ತದೆ. ಹಾಗೆಂದು ಇವುಗಳೆಲ್ಲವೂ ಮರಿಗಳಿಗೆ ಉಣಿಸು ನೀಡುವುದಿಲ್ಲ. ಹೆಚ್ಚೆಂದರೆ ಮೊಟ್ಟೆಗೆ ಕಾವಿಡಬಹುದು, ಮರಿಗಳನ್ನು ತಿನ್ನಲು ಹೊಂಚು ಹಾಕುವ ಹಾವಿನಂತಹ ವೈರಿಗಳ ಜೊತೆ ಕಾದಾಡಿ ಕಾಯಬಹುದು, ಅಥವಾ ಆಹಾರ ತರಲು ಹೆಣ್ಣು ಹೊರ ಹೋದಾಗ ತಾನು ಮರಿಗಳನ್ನು ಕಾಯಬಹುದು.

 

ನಿಜವಾದ ಅಪ್ಪಂದಿರು ಕಾಣುವುದು ಸ್ತನಿಗಳಲ್ಲಿ. ಪ್ರಪಂಚದಲ್ಲಿರುವ ಎಲ್ಲ ಸ್ತನಿಗಳಲ್ಲಿ ಶೇಕಡ ಹತ್ತರಷ್ಟು ಜೀವಿಗಳಲ್ಲಿ ಗಂಡು ಅಪ್ಪನ ಜವಾಬುದಾರಿಯನ್ನು ಹೊರುತ್ತದೆ. ಹಾಗಂತ ಎಲ್ಲ ಸ್ತನಿಗಳಲ್ಲೂ ಅಪ್ಪಂದಿರೆನ್ನುವ ಪ್ರಾಣಿಗಳಿರುವುದಿಲ್ಲ. ಗಂಡುಗಳಿರುತ್ತವೆಯಷ್ಟೆ. ಗೂಳಿ ಎಲ್ಲಿಯಾದರೂ ಕರುವಿನ ಆರೈಕೆ ಮಾಡುವುದನ್ನು ನೋಡಿದ್ದೀರೇ? ಏಕಪತ್ನೀವ್ರತಸ್ತನೆನ್ನುವ ಒಂದೇ ಹೆಣ್ಣಿನ ಜೊತೆ ಕೂಡುವ ಪ್ರಾಣಿಗಳಲ್ಲಿ ಅರ್ಧಕ್ಕರ್ಧದವುಗಳಲ್ಲಿ ಅಪ್ಪನ ನಡವಳಿಕೆ ಕಾಣುತ್ತದೆ. ಮನುಷ್ಯನಲ್ಲಿ ಮಾತ್ರ ಗಂಡು-ಹೆಣ್ಣು ಇಬ್ಬರೂ ಹೆತ್ತ ಮಕ್ಕಳ ಜೀವನದ ಕೊನೆಯವರೆಗೂ ಜೊತೆಗಿರುತ್ತಾರೆ. ಅಪ್ಪ-ಅಮ್ಮ ಎನ್ನಿಸಿಕೊಳ್ಳುತ್ತಾರೆ.

 

ಇಲ್ಲಿ ಅಪ್ಪನ ಬೆಲೆ ಏನು? ಸಂತಾನವನ್ನು ಕಾಯಲಿಕ್ಕಾ ಅಥವಾ ಸಂತಾನವನ್ನು ಹೆಚ್ಚಿಸಲಿಕ್ಕಾ? ಬರೇ ಸಂತಾನವಷ್ಟೆ ಸಾಕು ಎಂದರೆ ಅಮ್ಮನಷ್ಟೆ ಮಕ್ಕಳ ಪಾಲನೆ ಪೋಷಣೆಯನ್ನು ಮಾಡಿದರೆ ಸಾಕಲ್ಲವೇ? ಅಪ್ಪ ಎನ್ನುವ ಜವಾಬುದಾರಿ ಇಲ್ಲದೆ ಬರೇ ಗಂಡಸ್ತನ ತೋರುವ ಗಂಡಾಗಿದ್ದರೂ ಸಾಕಿತ್ತು ಅಲ್ಲವೇ? ಇವು ತರಲೆ ಪ್ರಶ್ನೆಗಳಲ್ಲ. ಜೀವಿಗಳ ವಿಕಾಸ ಹೇಗಾಯಿತು, ಏಕಾಯಿತು ಎನ್ನುವ ರಹಸ್ಯವನ್ನು ಅರಿಯುವ ಪ್ರಶ್ನೆಗಳು. ಹಾಗಾಗಿ ಈ ಬಗ್ಗೆ ಜೀವಿವಿಜ್ಞಾನಿಗಳ ಆಸಕ್ತಿ. ಗಂಡಿನ ಜೀವನದಲ್ಲಿ ಈ ಹೊಣೆಗಾರಿಕೆ ಇರಲೇಬೇಕೆಂದಿಲ್ಲ. ಆದರೂ ಹೀಗೇಕೆ? ಅಪ್ಪನೆಂಬ ಸ್ಥಾನ ವಿಕಾಸವಾಗಿದ್ದೇಕೆ? ಇದರಿಂದ ಆ ಪ್ರಾಣಿಗೇನು ಲಾಭ?

ಅರ್ಥವಾಗಲಿಲ್ಲ ಎಂದಿರಾ? ಲಾಭ-ನಷ್ಟ ಕೇವಲ ವ್ಯಾಪಾರದ ಲೆಕ್ಕಾಚಾರವಲ್ಲ. ಜೀವಿಗಳ ಅಳಿವು-ಉಳಿವನ್ನೂ ಲಾಭ-ನಷ್ಟವೆಂದೇ ವಿಜ್ಞಾನಿಗಳು ಪರಿಗಣಿಸುತ್ತಾರೆ. ಇಲ್ಲಿ ಲಾಭವೆಂದರೆ ಜೀವಿಯ ಉಳಿವು. ಅದಕ್ಕೆ ತೆರುವ ಬೆಲೆ ಎಂದರೆ ಜೀವಿ ಪಡುವ ಕಷ್ಟ. ಯಾವುದೇ ಜೀವಿಯ ಪ್ರತಿಯೊಂದು ನಡವಳಿಕೆಯನ್ನೂ ಈ ಅರ್ಥದಲ್ಲಿಯೇ ವಿಶ್ಲೇಷಿಸುವುದು ಜೀವಿವಿಜ್ಞಾನಿಗಳ ಕ್ರಮ. ಯಾವುದೇ ನಡವಳಿಕೆಯೂ ಆ ಜೀವಿಯ ಸಂತತಿಯ ಉಳಿವಿಗೆ ಪೂರಕವಾಗಿರಲೇ ಬೇಕು. ಇಲ್ಲದಿದ್ದರೆ ಅದನ್ನು ಪ್ರಕೃತಿ ಎಂದೋ ಅನವಶ್ಯಕ ಎಂದು ಕಿತ್ತು ಬಿಸಾಡಿಬಿಡುತ್ತಿತ್ತು ಎನ್ನುವುದು ಈ ತರ್ಕದ ಹಿಂದಿರುವ ವಿಶ್ವಾಸ.

ಜೀವವಿಜ್ಞಾನಿಗಳ ಈ ಕುತೂಹಲಕ್ಕೆ ಒಂದು ಉದಾಹರಣೆ ಮೊನ್ನೆ ಮೇ 16ರಂದು ಪ್ರೊಸೀಡಿಂಗ್ಸ್ ಆಫ್ ರಾಯಲ್ ಸೊಸೈಟಿ-ಬಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆ. ಇಂಗ್ಲೆಂಡಿನ ಲಿವರ್ ಪೂಲ್ ವಿವಿಯ ವಿಜ್ಞಾನಿಗಳಾದ ಪೌಲಾ ಸ್ಟಾಕ್ಲಿ ಮತ್ತು ಲಯೇನ್ ಹಾಬ್ಸನ್ ಈ ಪತ್ರಿಕೆಯಲ್ಲಿ ಪ್ರಕಟಿಸಿರುವ ಸುದ್ದಿಯ ಪ್ರಕಾರ ಬೃಹತ್ ಸಂಸಾರವನ್ನು ಸ್ಥಾಪಿಸುವುದಕ್ಕಿಂತಲೂ, ಚಿಕ್ಕ ಚೊಕ್ಕ ಸಂತಾನವನ್ನು ಉಳಿಸಿ, ಬೆಳೆಸಲು ಗಂಡಿನ ಅವಶ್ಯಕತೆ ಇದೆ. ಇದಕ್ಕಾಗಿಯೇ ಕೆಲವು ಪ್ರಾಣಿಗಳಲ್ಲಿ ಗಂಡು ಅಪ್ಪನ ಅವತಾರ ತಾಳಿ ಹೆಣ್ಣಿನ ಜೊತೆ ಮಕ್ಕಳ ಪಾಲನೆ-ಪೋಷಣೆಯಲ್ಲಿ ಪಾಲ್ಗೊಳ್ಳುತ್ತದೆಯಂತೆ.

ಪ್ರಾಣಿಗಳಲ್ಲಿ, ವಿಶೇಷವಾಗಿ ಸ್ತನಿಗಳಲ್ಲಿ, ಅಪ್ಪನೆನ್ನುವ ಜವಾಬುದಾರಿ ಏಕೆ ಉದ್ಭವಿಸಿತು? ಈ ಪೋಷಕ ವೃತ್ತಿ ವಿಕಾಸವಾದದ್ದರಿಂದ ಏನು ಲಾಭ? ಯಾರಿಗೆ? ಸ್ಟಾಕ್ಲಿ ಮತ್ತು ಹಾಬ್ಸನ್ ಪ್ರಕಾರ ಸಂತಾನೋತ್ಪತ್ತಿ ಎನ್ನುವುದು ಬಲು ವೆಚ್ಚದ ಕೆಲಸ. ಇದಕ್ಕಾಗಿ ಜೀವಿಗಳು ಸಮಯ, ಶಕ್ತಿಯನ್ನು ವ್ಯಯಿಸುತ್ತವಷ್ಟೆ. ಅಷ್ಟು ವೆಚ್ಚ ಮಾಡಿದ ಮೇಲೆ ಬರುವ ಲಾಭ ಎಂದರೆ ತಮ್ಮ ಗುಣಗಳುಳ್ಳ ಸಂತಾನ.  ಸಂತಾನಗಳು ಬದುಕುಳಿದು ಮರಿಗಳನ್ನುಂಟು ಮಾಡಿದರಷ್ಟೆ ತಂದೆ-ತಾಯಂದಿರ ಶ್ರಮ ಸಾರ್ಥಕವಾದ ಹಾಗೆ. ವಂಶೋದ್ಧಾರಣೆಯೇ ಲಾಭ. ಆದ್ದರಿಂದ ವಂಶೋದ್ಧಾರಣೆಯಲ್ಲಿ ಅಪ್ಪನ ನಡವಳಿಕೆಯಿಂದ ಲಾಭವಿರಲೇಬೇಕು. ಏಕೆಂದರೆ ಅಪ್ಪನ ಜವಾಬುದಾರಿ ಹೊರುವುದು ಎಂದರೆ ಒಂದೇ ಹೆಣ್ಣಿನ ಜೊತೆ ಬಾಳುವುದು ಹಾಗೂ ಮರಿಗಳು ದೊಡ್ಡದಾಗುವುವರೆಗೂ ಹೆಣ್ಣಿನ ಜೊತೆ ಕೂಡುವ ಅಥವಾ ಮರಿ ಮಾಡುವ ಸಂದರ್ಭಗಳನ್ನು ಕಳೆದುಕೊಳ್ಳುವುದು ಎಂದಷ್ಟೆ. ಇದು ಗಂಡಿಗೆ ಆಗುವ ನಷ್ಟ.  ಗಂಡು ಈ ನಷ್ಟವನ್ನು ಸಹಿಸಿಕೊಳ್ಳುವುದೇಕೆ?

ಇದನ್ನು ವಿವರಿಸಲು ಮೊದಲು ಕೆಲವು ಊಹೆಗಳಿದ್ದುವು. ಉದಾಹರಣೆಗೆ, ಹೆಣ್ಣು ಹೆಚ್ಚು ಹೆರುವುದರಿಂದಾಗಿ ಅಪ್ಪನ ಪಾತ್ರ ಉದ್ಭವಿಸಿತು ಎನ್ನುವುದು ಒಂದು ಊಹೆ.  ಪ್ರಸವವೇ ಪ್ರಯಾಸವೆನ್ನಿಸುವಷ್ಟು ದೊಡ್ಡ ಗಾತ್ರದ ಮರಿಯನ್ನು ಹೆರುವಂತಹ ಹೆಣ್ಣುಗಳಿಗೆ ಗಂಡಿನ ನೆರವು ಬೇಕಾಗಿ ಬಂದು ಅಪ್ಪನ ಹೊಣೆ ಹುಟ್ಟಿರಬಹುದು ಎನ್ನುವುದು ಮತ್ತೊಂದು ಊಹೆ. ಅಥವಾ ಸಂಗಾತಿಯ ಜೊತೆಗಿನ ಬಂಧದಿಂದ ಇದು ಉಂಟಾಗಿರಬಹುದು ಎನ್ನುವುದು ಮೂರನೆಯ ಊಹೆ. ಸ್ಟಾಕ್ಲಿ ಮತ್ತು ಹಾಬ್ಸನ್ ಸಂಖ್ಯಾಶಾಸ್ತ್ರದ ನೆರವಿನಿಂದ ಈ ಊಹೆಗಳೆಷ್ಟು ನಿಜ ಎಂದು ಹುಡುಕಲು ಪ್ರಯತ್ನಿಸಿದ್ದಾರೆ.

ಇದಕ್ಕಾಗಿ ಸ್ಟಾಕ್ಲಿ ಮತ್ತು ಹಾಬ್ಸನ್ ಯಾವ್ಯಾವ ಪ್ರಾಣಿಗಳಲ್ಲಿ ಅಪ್ಪನ ಪಾತ್ರವನ್ನು ಗಂಡು ನಿರ್ವಹಿಸುತ್ತದೆ ಎನ್ನುವುದನ್ನು ಪಟ್ಟಿ ಮಾಡಿದರು. ಈ ಪಟ್ಟಿಯಲ್ಲಿರುವ ಪ್ರಾಣಿಗಳಲ್ಲಿ ಸರಾಸರಿ ಎಷ್ಟು ಸಂತಾನವಾಗಬಹುದು? ಒಮ್ಮೆಗೆ ಎಷ್ಟು ಮರಿಗಳಾಗಬಹುದು? ಗಂಡುಗಳೂ ಪಾಲನೆಯಲ್ಲಿ ಪಾಲ್ಗೊಂಡವುಗಳಲ್ಲಿ ಮರಿಗಳ ಸಂಖ್ಯೆ ಹೆಚ್ಚೋ? ಕಡಿಮೆಯೋ? ಇಂತಹ ಗಂಡುಗಳ ಸಂಗಾತಿ ತನ್ನ ಜೀವಮಾನದಲ್ಲಿ ಎಷ್ಟು ಬಾರಿ ಹೆರಬಹುದು? ಹೆತ್ತ ಮರಿಗಳಲ್ಲಿ ಉಳಿಯುವವುಗಳ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದೇ? ಗಂಡು ಏಕಪತ್ನೀವ್ರತಸ್ತನೇ? ಬಹುಪತ್ನಿಯಿರುವ ಗಂಡಿನ ಸಂತಾನಗಳ ಸಂಖ್ಯೆಯೇನು ಎಂದೆಲ್ಲ ಮಾಹಿತಿಯನ್ನು ಕಲೆ ಹಾಕಿ ಅದನ್ನು ಗಂಡಿನ ನಡವಳಿಕೆಯ ಜೊತೆಗೆ ತಾಳೆ ನೋಡಿದರು.

ಈ ಲೆಕ್ಕಗಳ ಪ್ರಕಾರ ಗಂಡುಗಳು ಜವಾಬುದಾರಿ ವಹಿಸಿಕೊಂಡ ಪ್ರಾಣಿಗಳಲ್ಲೆಲ್ಲ ಮರಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡಿತು. ಪಾಲನೆ ಎಂದರೆ ಆಹಾರದ ಸರಬರಾಜಷ್ಟೆ ಅಲ್ಲ. ಏಕೆಂದರೆ ಬೆಕ್ಕಿನಂತಹ ಮಾಂಸಾಹಾರಿ ಪ್ರಾಣಿಗಳಲ್ಲಿ ಗಡವಗಳು ತನ್ನದೇ ಮಕ್ಕಳ ಜೊತೆಗೂ ಆಹಾರವನ್ನು ಹಂಚಿಕೊಳ್ಳವು.  ಗಡವ ಮಂಗಗಳು ಆಹಾರವನ್ನು ಸಂಪಾದಿಸಿ ಕೊಡದಿದ್ದರೂ, ಮರಿಗಳನ್ನು ಕಾಯವುದು, ಹೊತ್ತೊಯ್ಯುವಂತಹ ಕೆಲಸಗಳನ್ನು ಮಾಡುತ್ತವೆ. ಇನ್ನು ಕೆಲವು ಪ್ರಾಣಿಗಳಲ್ಲಿ ಏಕಪತ್ನೀಯತೆಯೂ ಜಾಸ್ತಿ. ಇವೆಲ್ಲವನ್ನೂ ತಾಳೆ ಹಾಕಿದಾಗ ಗೊತ್ತಾಗಿದ್ದು ಅಪ್ಪನೆಂಬ ನಡವಳಿಕೆ ಹುಟ್ಟಿದ್ದು ಹೆಚ್ಚು ಸಂತಾನವಿರುವುದರಿಂದಲ್ಲ. ಬದಲಾಗಿ ಈ ನಡವಳಿಕೆಯೇ ಹೆಚ್ಚು ಸಂತಾನ ಉಳಿಯುವುದಕ್ಕೆ ಕಾರಣವಾಗಿದೆ ಎನ್ನುವುದು. ಇದಲ್ಲದೆ ಏಕಪತ್ನೀಯತೆಯಂತಹ ಗಂಡು-ಹೆಣ್ಣಿನ ಸಂಬಂಧ ಗಟ್ಟಿಯಾಗಿದೆ ಮತ್ತು  ಮರಿಗಳ ಸಂಖ್ಯೆ ಹೆಚ್ಚಿದ್ದರೂ ಪಾಲನೆ ಸುಗಮವಾಗಿದೆ ಎನ್ನುತ್ತಾರೆ ಸ್ಟಾಕ್ಲಿ ಮತ್ತು ಹಾಬ್ಸನ್. ಅಪ್ಪನೆಂಬ ನಡವಳಿಕೆಯ ಜೊತೆ, ಜೊತೆಯಲ್ಲಿಯೇ ಈ ಲಾಭಗಳೂ ವಿಕಾಸವಾಗಿವೆಯಂತೆ. ಅಪ್ಪನಿರುವ ಪ್ರಾಣಿಗಳಲ್ಲಿ ಬದುಕುಳಿದು ತನ್ನ ಜೀವನ ಕರ್ತವ್ಯವನ್ನು ಪೂರೈಸುವ ಸಂತಾನಗಳ ಪ್ರಮಾಣ ಹೆಚ್ಚು.  ಇದು ಅಪ್ಪ ಹೊರೆ ಹೊರುವುದರ ಲಾಭ.

ಅಪ್ಪನಾಗುವುದರಿಂದ ಗಂಡಿನ ಸ್ವಂತಕ್ಕೆ ಕಷ್ಟವಾದರೂ ವಂಶಕ್ಕಾಗುವ ಲಾಭ ಎನ್ನೋಣವೇ?

_____________

 

ಆಕರ: Paula Stockley and Liane Hobson, Paternal Care and litter size coevolution in mammals. Proc. Royal Soc., B 283, 20160140  (http://dx.doi.org/10.1098/rspb.2016.0140)

ಸಂಯುಕ್ತ ಕರ್ನಾಟಕ ದಲ್ಲಿ ಪ್ರಕಟವಾಗಿದ್ದು.

Published in: on ಮೇ 23, 2016 at 5:10 ಫೂರ್ವಾಹ್ನ  Comments (1)  

ಅನ್ಯಗ್ರಹ ಜೀವಿಗಳು ಹೇಗಿರಬಹುದು?

16052016

ಈ ಲೇಖನದಲ್ಲಿ ಎರಡು ಅಂಶಗಳನ್ನು ತಿಳಿಸಿಲ್ಲ. ಮೊದಲನೆಯದು ಅನ್ಯಗ್ರಹ ಜೀವಿಗಳು ಬುದ್ಧಿವಂತವಾಗಿದ್ದರೆ ಅವು ಸೈಬರ್ ಮನುಷ್ಯರಾಗಿರಲಿಕ್ಕೆ ಸಾಧ್ಯವಿಲ್ಲ. ಹೆಚ್ಚೆಂದರೆ ಅವು ರೋಬೋ ಸೇವಕರನ್ನು ಅನ್ವೇಷಣೆಗೆ ಕಳಿಸಬಹುದು. ನಾವು ಚಂದ್ರ-ಮಂಗಳ ಗ್ರಹಗಳಿಗೆ ಶೋಧನೌಕೆಗಳನ್ನು ಕಳಿಸಿದ ಹಾಗೆ. ಆದರೆ ರೋಬೋಗಳನ್ನು ಅನ್ಯಗ್ರಹ ಜೀವಿಗಳೆನ್ನುವ ಹಾಗಿಲ್ಲವಲ್ಲ.

ಎರಡನೆಯದಾಗಿ ಅನ್ಯಗ್ರಹಜೀವಿಗಳೂ ತಮ್ಮ, ತಮ್ಮಲ್ಲಿ ಸಂವಹನೆಗೆ ಮಾತು ಮತ್ತು ನೋಟವನ್ನು ಬಳಸಲೇ ಬೇಕು. ಕೀಟಗಳಂತೆ ವಾಸನೆಯನ್ನು ಬಳಸಬಹುದಾದರೂ ಅದರ ವ್ಯಾಪ್ತಿ ಬಲು ಕಡಿಮೆಯಾದ್ದರಿಂದ ನೋಟ ಹಾಗೂ ಮಾತಿನಿಂದಲೇ ಸಂವಹನ ಹೆಚ್ಚು. ಮಾತು ಎಂದಾಗ ಅವುಗಳ ಸ್ವರ ಬೇರೆ ರೀತಿ ಇರಬಹುದು, ಭಾಷೆ ಬೇರೆ ಇರಬಹುದು. ಆದರೆ ಮಾತು ಇದ್ದೇ ಇರುತ್ತದೆ.

ಮತ್ತೊಂದು ವಿಷಯ. ಅವುಗಳ ಕೈ ಹಾಗೂ ಬೆರಳುಗಳು ಕೂಡ ನಮ್ಮ ಹಾಗೆಯೇ ಮೃದುವಾಗಿರಬೇಕು. ಇದು ಸಂವೇದನೆಗೆ ಬಲು ಮುಖ್ಯ. ಮೃದುವಾದದ್ದನ್ನೂ, ಕಠಿಣವಾದದ್ದನ್ನೂ ಗ್ರಹಿಸಲು ಮೃದುವಾದ ಬೆರಳುಗಳು ಅವಶ್ಯಕ. ಹಾಗೆಯೇ ನೂರಾರು ಕೈಗಳಿರುವ ಸಾಧ್ಯತೆಯೂ ಇಲ್ಲ ಎನ್ನುತ್ತಾರೆ ವಿಲ್ಸನ್.

ಒಟ್ಟಾರೆ ಸಹಕಾರಿ ಎನ್ನಿಸುವ ಮೃದು ಮನಸ್ಸು, ನೇವರಿಸುವಷ್ಟು ಮೃದುವಾದ ಸ್ಪರ್ಶ  ಇವು ಅನ್ಯಗ್ರಹ ಜೀವಿಗಳಲ್ಲೂ ಇರಲೇಬೇಕು. ಅವು ಬುದ್ದಿವಂತ ಹಾಗೂ ನಮ್ಮಷ್ಟೆ ಸಾಹಸಿ ಜೀವಿಗಳಾಗಿದ್ದರೆ ಇವೆರಡೂ ಅವಶ್ಯಕ.

ಆಕರ: Edward O. Wilson, The Meaning of Human Existence,  ISBN  978-0-87140-480-0 (e-book), Liveright Publishing Corporation, New York, 2014 (Chapter 10, A Portrait of E.T.)

Published in: on ಮೇ 16, 2016 at 6:42 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಅನ್ಯ ಗ್ರಹ ಜೀವಿಗಳು ಪ್ರವಾಸ ಬಂದರೇ?

09052016.jpg

ಅನ್ಯ ಗ್ರಹ ಜೀವಿಗಳು ಪ್ರವಾಸ ಬಂದರೇ

ಮೊನ್ನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸೂಳೆಕೆರೆ ಗ್ರಾಮದಲ್ಲಿ ಅನ್ಯಗ್ರಹ ಜೀವಿಗಳು ಕಾಣಿಸಿಕೊಂಡರಂತೆ. ಗ್ರಾಮಸ್ಥರು ಗದ್ದೆಯಿಂದ  ಹಿಂದಿರುಗುವ ವೇಳೆ ರಾತ್ರಿ ಇದ್ದಕ್ಕಿದ್ದಹಾಗೆ ಆಕಾಶದಲ್ಲಿ ಬೆಂಕಿಯ ಚೆಂಡಿನಂತಹ ಪ್ರಕಾಶ ಕಾಣಿಸಿಕೊಂಡಿತು. ಅದರ ಜೊತೆಗೆ ತಟ್ಟೆಯ ರೀತಿಯ ವಸ್ತುವೊಂದು ಕಾಣಿಸಿಕೊಂಡಿತು ಎಂದು ಪತ್ರಿಕೆಯ ವರದಿಗಳು ಹೇಳಿದುವು. ಸುದ್ದಿ ಬಂiÀÄಲಾದ ಕೂಡಲೇ ಟೀವಿ ಚಾನೆಲೊಂದು “ಸರ್ ಒಂದು ಚರ್ಚೆ ಇಟ್ಟುಕೊಂಡಿದ್ದೇವೆ. ದಯವಿಟ್ಟು ಸ್ಟುಡಿಯೋಗೆ ಬಂದು ಚರ್ಚೆಯಲ್ಲಿ ಭಾಗವಹಿಸಿ,” ಎಂದು ಆಹ್ವಾನವೂ ಬಂತು. ಯಾವ ರೀತಿ ಇತ್ತಂತೆ ಅನ್ಯಗ್ರಹ ಜೀವಿ ಎಂದು ಕೇಳಿದ್ದಕ್ಕೆ ‘ನೋ ಐಡಿಯಾ ಸರ್, ಅದನ್ನು ನೋಡಿದವರೂ ಬರುತ್ತಾರೆ. ಅವರನ್ನೇ ಕೇಳೋಣ’ ಎನ್ನುವ ಉತ್ತರ ಬಂತು. ನೋಡಿದವರು ಪ್ರತ್ಯಕ್ಷವಾಗದಿದ್ದರಿಂದ ಚರ್ಚೆಯೂ ನಡೆಯಲಿಲ್ಲ.  ಅನ್ನುವುದು ಬೇರೆ ಮಾತು. ಆದರೆ ಹೀಗೊಂದು ವೇಳೆ ಅನ್ಯಗ್ರಹಗಳಲ್ಲಿ ಜೀವಿಗಳಿದ್ದರೆ ಅವರು ಹೇಗಿರಬಹುದು? ನಮ್ಮ ಭೂಮಿಯಂತಹ ಗ್ರಹಕ್ಕೆ ಅವರು ಬರಬಹುದೇ? ಬಂದರೆ ವ¯ಸೆ ಬರುತ್ತಾರೋ? ಆಕ್ರಮಣ ಮಾಡಲು ಬರಬಹುದೋ? ಇವೆಲ್ಲ ಪ್ರಶ್ನೆಗಳು ನನ್ನ ತಲೆಯನ್ನೂ ಕೊರೆಯತೊಡಗಿದುವು.

ಇವೆಲ್ಲಕ್ಕಿಂತಲೂ ಮುಖ್ಯವಾದ ಪ್ರಶ್ನೆಗಳು.  ಅನ್ಯಜೀವಿಗಳಿರಬಹುದಾದರೆ ಎಲ್ಲಿ? ಎಷ್ಟು ದೂರದಲ್ಲಿರಬಹುದು? ಇವಕ್ಕೆ ಉತ್ತರವೂ ಇದೆ. ನಮ್ಮ ಸೂರ್ಯಮಂಡಲದಲ್ಲಿಯೇ ಎಂಟು ಗ್ರಹಗಳಿದ್ದರೂ ಭೂಮಿಯಲ್ಲಷ್ಟೆ ಜೀವ ಅರಳಿದೆ ಎನ್ನುವುದನ್ನು ಗಮನಿಸಿ. ಇದಕ್ಕೆ ಕಾರಣ ಈ ಭೂಮಿ ಸೂರ್ಯನಿಂದ ಇರುವ ದೂರ. ಸೂರ್ಯನ ಕಾವಿನಿಂದ ಭೂಮಿ ಬೇಯುವುದೂ ಇಲ್ಲ, ಅತಿ ದೂರವಾಗಿ ತಣ್ಣಗಾಗುವುದೂ ಇಲ್ಲ. ಜೀವ ಅರಳಲು ಇಂತಹ ಹದವಾದ ಉಷ್ಣತೆ ಬೇಕು ಎನ್ನುವುದು ಬಹುತೇಕ ಜೀವವಿಜ್ಞಾನಿಗಳ ಅನುಭವ. ಆದ್ದರಿಂದ ಇನ್ನೆಲ್ಲೋ ಜೀವ ಅರಳಿರುವುದಾಗಿದ್ದರೆ, ಆ ಗ್ರಹವೂ ಇಂತಹ ಸಹ್ಯ ಉಷ್ಣತೆಯದ್ದಾಗಿರಬೇಕು. ಅರ್ಥಾತ್, ಮತ್ತೊಂದು ಸೂರ್ಯಮಂಡಲದಲ್ಲಿರಬಹುದಾದ ಹತ್ತಾರು ಗ್ರಹಗಳಲ್ಲಿ ಒಂದೋ ಎರಡೋ ಅಷ್ಟೆ ಹೀಗಿರಲು ಸಾಧ್ಯ. ಹಾಂ. ನೂರಾರು ಗ್ರಹಗಳಿರುವ ಸೂರ್ಯಮಂಡಲಗಳ ಸಾಧ್ಯತೆಯೂ ಕಡಿಮೆ ಏಕೆಂದರೆ ಆಗ ಅವುಗಳ ಗುರುತ್ವಾಕರ್ಷಣೆ ಒಂದಿನ್ನೊಂದನ್ನು ಸೆಳೆದು ಅಡ್ಡಾದಿಡ್ಡಿ ಓಡಾಡಿಸಿ, ಕೊನೆಗೆ ಒಂದಕ್ಕೊಂದು ಢಿಕ್ಕಿ ಹೊಡೆಯಬಹುದು.

ಹಾಗಿದ್ದರೆ ಮತ್ತೊಂದು ಜೀವಿನೆಲೆ ಇರುವುದಾದರೆ ಅದು ಎಲ್ಲಿರಬಹುದು? ನಮಗೆ ಅತಿ ಸಮೀಪದ ನಕ್ಷತ್ರಗಳಲ್ಲಿ ಈ ಸಾಧ್ಯತೆಗಳು ಕಡಿಮೆ. ಆದರೆ ವಿಶ್ವದಲ್ಲಿ ಬಲು ದೂರ ಹೋದಷ್ಟೂ ಸಹ್ಯ ವಾತಾವರಣವಿರುವ ಗ್ರಹಗಳ ಸಂಖ್ಯೆ ಹೆಚ್ಚಿರಬಹುದು. ಎಷ್ಟು ದೂರ ಎಂದಿರಿ? ಕನಿಷ್ಠ 250 ಜ್ಯೋತಿರ್ವರ್ಷಗಳು. ಅಂದರೆ ಸೆಕೆಂಡಿಗೆ ಮೂರು ಲಕ್ಷ ಕಿಲೋಮೀಟರು ವೇಗದಲ್ಲಿ ಚಲಿಸಿದರೂ ಸುಮಾರು 250 ವರ್ಷಗಳ ಕಾಲ ಪಯಣಿಸಬೇಕಾದಷ್ಟು ದೂರ. ಅಲ್ಲಿ ಇಂತಹ ಗ್ರಹಗಳಿರುವ ಸಾಧ್ಯತೆ ಇದೆ. ಜೀವಿ ಇರಬಹುದಾದ ಸಾಧ್ಯತೆಯೂ ಇದೆ. ಆದರೆ ಅವು ನಮ್ಮಲ್ಲಿಗೆ ಬರುವಷ್ಟು ಬುದ್ಧಿವಂತರೇ? ಅಂತಹ ತಂತ್ರಜ್ಞಾನ ಅವುಗಳ ಬಳಿ ಇರಬಹುದೇ? ಇದು ಬೇರೆ ಪ್ರಶ್ನೆ.

ಒಂದು ವೇಳೆ ಅವುಗಳ ಬಳಿ ಇಂತಹ ಬುದ್ಧಿವಂತಿಕೆ, ತಂತ್ರಜ್ಞಾನ ಇದೆ ಎಂದೇ ಇಟ್ಟುಕೊಳ್ಳೋಣ. ಹಾಗಿದ್ದರೆ ಆ ಜೀವಿಗಳು ನಮಗಿಂತಲೂ ಮೊದಲು ವಿಕಾಸವಾಗಿರಬೇಕು. ನಾವು ಈ ಸ್ಥಿತಿಗೆ ಬೆಳೆಯಲು ಸುಮಾರು 60 ಕೋಟಿ ವರ್ಷಗಳು ಬೇಕಾಯಿತು. ಅಲ್ಲಿನ ಜೀವಿಗಳು ಭೂಮಿಗೆ ಪಯಣಿಸುವಷ್ಟು ಮುಂದುವರೆದಿದ್ದಾವೆಂದರೆ ಆ ಗ್ರಹದಲ್ಲಿ ಜೀವಿಯ ಉಗಮ ಇನ್ನೂ ಮುಂಚೆಯೇ ಆಗಿರಬೇಕು. ಜೊತೆಗೆ ಪ್ರಯಾಣದ ಸಮಯವನ್ನೂ ಕೂಡಿಸಿಕೊಳ್ಳಿ. ಸೆಕೆಂಡಿಗೆ ಮೂರುಲಕ್ಷ ಕಿಲೋಮೀಟರು (ಬೆಳಕು ಚಲಿಸುವ ವೇಗ) ಗಳಷ್ಟು ವೇಗದಲ್ಲಿ ಯಾವ ಸಾಧನವೂ ಚಲಿಸಲಾರದಾದ್ದರಿಂದ ಅವು ಭೂಮಿಯನ್ನು ತಲುಪಲು 250 ವರ್ಷಗಳಿಗಿಂತ ಹೆಚ್ಚು ಕಾಲ ಬೇಕು. ಅವು ಇಂದು ಭೂಮಿಗೆ ಬಂದು ಸೇರುತ್ತವೆಂದಾದರೆ ಬಹುಶಃ ಕ್ರಿಸ್ತ ಹುಟ್ಟುವ ಮೊದಲೋ ಅಥವಾ ನಮ್ಮ ಬೇಲೂರು ಹಳೇಬೀಡು ದೇವಾಲಯಗಳನ್ನು ಕಟ್ಟುತ್ತಿದ್ದಾಗಲೂ, ಅಥವಾ ಇನ್ನೂ ಹಿಂದೆಯೇ ಅವು ತಮ್ಮ ಪ್ರಯಾಣವನ್ನು ಆರಂಭಿಸಿರಬೇಕಾಗುತ್ತದೆ.

ಇದನ್ನೂ ಒಪ್ಪೋಣ. ಅವು ಅಲ್ಲಿಂದ ಹೊರಟಿವೆ. ಭೂಮಿಯನ್ನೂ ತಲುಪಿವೆ. ಆದರೆ ನೆಲಕ್ಕೆ ಇಳಿಯಬೇಕಲ್ಲ? ಅವುಗಳ ನೌಕೆ ಅಮೆರಿಕೆ ಹಾರಿಸುವ ಸ್ಪೇಸ್ ಸ್ಟೇಶನ್ ಲಾಂಚರ್ ಗಳಂತೆ ಇರಬೇಕು. ಅಂದರೆ ಅವು ಭೂಮಿಯ ವಾತಾವರಣವನ್ನು ಪ್ರವೇಶಿಸಿ ನೆಲಕ್ಕಿಳಿಯುವಾಗ ಉಂಟಾಗುವ ಬಿಸಿಯನ್ನು ತಡೆಯುವಂತಿರಬೇಕು. ಆಗೆಷ್ಟು ಬಿಸಿ ಇರುತ್ತದೆಂದರೆ ಕಲ್ಲೂ ಕರಗಿಬಿಡಬಹುದು. ಇಂತಹ ಸಂದರ್ಭಗಳನ್ನು ‘ನಕ್ಷತ್ರ ಬಿತ್ತು’ ಎನ್ನುವಾಗ ಕಾಣುತ್ತೇವೆ. ಎಲ್ಲೋ ವ್ಯೋಮದಲ್ಲಿರುವ ಶಿಲೆಗಳು ಹಾದಿ ತಪ್ಪಿ ಭೂಮಿಗೆ ಬಂದು ಬೀಳುವಾಗ ಉರಿದು ಬೂದಿಯಾಗುತ್ತವೆ. ಗುಡ್ಡದಂತಹ ಶಿಲೆಯೂ ನೆಲ ಮುಟ್ಟಿದಾಗ ಪುಟ್ಟ ಗೋಲಿಕಲ್ಲಿನಂತಾಗುತ್ತದೆ. ಅವು ಈ ಉರಿತದಿಂದಲೂ ಉಳಿದು ನೆಲಕ್ಕಿಳಿದರಷ್ಟೆ ನಾವು ಅವುಗಳನ್ನು ಕಾಣಲು ಸಾಧ್ಯ.

ಇವೆಲ್ಲವೂ ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರು ಎನ್ನುವುದಕ್ಕೆ ಇರುವ ಸಾಧ್ಯತೆಗಳನ್ನು ಸೂಚಿಸುತ್ತವಷ್ಟೆ. ಒಟ್ಟಾರೆ ಅನ್ಯಗ್ರಹ ಜೀವಿಗಳು ಭೂಮಿಗೆ ಪ್ರವಾಸ ಬರಲು ಇಚ್ಛಿಸಿದರೂ ಅದು ಸುಲಭದ ಕಾರ್ಯವಲ್ಲ. ಅದೇನೋ ಸರಿ. ಆದರೆ ನಾವು ಚಂದ್ರನಲ್ಲಿಗೆ ಮಾನವರಹಿತ ನೌಕೆ ಕಳಿಸಿದ ಹಾಗೆ ಅವರೂ ಭೂಮಿಗೆ ನೌಕೆ ಕಳಿಸಬಹುದಲ್ಲ? ಅಥವಾ ನಾವು ಇಲಿ, ನಾಯಿ, ಬೆಕ್ಕು ಕಳಿಸುತ್ತೇವಲ್ಲ ಹಾಗೆ ಅವರ ನೆಲದ ಪ್ರಯೋಗಪಶುಗಳನ್ನು ಕಳಿಸಿರಬಹುದಲ್ಲಾ ಎಂದಿರಾ? ಒಪ್ಪಬಹುದಾದ ಸಂದೇಹವೇ. ಆದರೆ ಅಂತರಿಕ್ಷ ಯಾನದಲ್ಲಿ ಮಾನವನ ಪ್ರಯೋಗಗಳನ್ನು ಗಮನಿಸಿದರೆ ಇದುವೂ ಕೂಡ ಕಷ್ಟ ಸಾಧ್ಯ.

ಉದಾಹರಣೆಗೆ, ಅಮೆರಿಕೆಯ ನಾಸಾ ಸಂಸ್ಥೆ 1977ರಲ್ಲಿ ಹಾರಬಿಟ್ಟ ವಾಯೇಜರ್ 1 ನೌಕೆ ಈ ನಲವತ್ತು ವರ್ಷಗಳಲ್ಲಿ 2000 ಕೋಟಿ ಕಿಲೋಮೀಟರುಗಳನ್ನು ಕ್ರಮಿಸಿದೆ. ಆದರೆ ಇನ್ನೂ ಅದಕ್ಕೆ ಯಾವುದೇ ಜೀವಾಧಾರಿ ಗ್ರಹ ಸಿಕ್ಕಿಲ್ಲ. ಈ ವೇಗದಲ್ಲೇ ಕ್ರಮಿಸಿದರೂ, 250 ಜ್ಯೋತಿರ್ವರ್ಷಗಳ ದೂರವನ್ನು ಪುರೈಸುವುದಕ್ಕೆ ಸುಮಾರು ಹತ್ತು ಲಕ್ಷ ವರ್ಷಗಳು ಬೇಕು. ಅಷ್ಟು ಕಾಲ ಬದುಕುಳಿಯುವ ಜೀವಿಗಳಿವೆಯೇ? ಭೂಮಿಯಲ್ಲಿರುವ ಜೀವಿಗಳ ಆಯುಸ್ಸನ್ನು ಕಂಡಾಗ ಇದು ಅಸಾಧ್ಯ ಎನ್ನಿಸುತ್ತದೆ. ನಮ್ಮಲ್ಲಿರುವ ಅತಿ ಪುರಾತನ ಮರದ ವಯಸ್ಸು ಕೆಲವು ಸಾವಿರ ವರ್ಷಗಳಷ್ಟೆ.

ಹಾಗಂತ ವಿಜ್ಞಾನಿಗಳು ಬೇರೆ ಪ್ರಪಂಚಗಳೇ ಇಲ್ಲ ಎಂದು ಹೇಳುವುದಿಲ್ಲ. ಈ ವಿಶ್ವದ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ಯಾವುದರಲ್ಲಾದರೂ ನಮ್ಮ ಸೂರ್ಯಮಂಡಲದಂತಹ ವ್ಯವಸ್ಥೆ ಇರಬಹುದು. ಅಲ್ಲಿ ಯಾವುದರಲ್ಲಾದರೂ ಜೀವಿಗಳಿರಬಹುದು ಎನ್ನುವ ಕಲ್ಪನೆ ಇರುವುದಂತೂ ಸತ್ಯ. ಅದಕ್ಕಾಗೇ ಸೇಟಿ (ಸರ್ಚ್ ಫಾರ್ ಎಕ್ಸ್ಟ್ರಾಟೆರೆಸ್ಟ್ರಿಯಲ್ ಇಂಟೆಲಿಜೆನ್ಸ್‌) ಎನ್ನುವ ಭೂಮ್ಯಾತೀತ ಜೀವಿಗಳ ಹುಡುಕಾಟದ ಯೋeನೆಯೂ ನಡೆದಿದೆ. ಇದರ ಅಂಗವಾಗಿ ವಾಯೇಜರ್ ನೌಕೆಯಲ್ಲಿ ಒಂದು ಸಂದೇಶವನ್ನೂ ಕಳಿಸಿದ್ದಾಗಿದೆ. ಆದರೆ ಧಿಢೀರನೆ ಹೀಗೆ ಭೂಮಿಗೆ ಅನ್ಯಗ್ರಹ ಜೀವಿಗಳು ಪ್ರವಾಸ ಬರುವ ಸಾಧ್ಯತೆಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಹಾಗಿದ್ದರೆ ಸೂಳೆಕೆರೆಯ ರೈತರು ಕಂಡಿದ್ದೇನು? ಬಹುಶಃ ಆಕಾಶದಿಂದ ಭೂಮಿಗೆ ಬಿದ್ದ ಯಾವುದಾದರೂ ಉಲ್ಕೆ ಇರಬಹುದು. ಅದು ಉರಿದದ್ದನ್ನು ಇವರು ಕಂಡಿರಬಹುದು. ಇದು ಊಹೆ. ಏಕೆಂದರೆ ಅಲ್ಲಿ ಯಾವುದೇ ವಸ್ತು ಬಂದಿಳಿದ ಅಥವಾ ಬಿದ್ದ ಕುರುಹುಗಳು ಕಂಡಿಲ್ಲ. ಇನ್ನು ಅವರು ಕಂಡ ಆಕಾಶನೌಕೆ ತಟ್ಟೆಯಂತಿತ್ತಂತೆ. ವಿಚಿತ್ರವೆಂದರೆ ಇದುವರೆವಿಗೂ ಪ್ರಪಂಚದ ವಿವಿಧೆಡೆ ಅನ್ಯಜೀವಿಗಳನ್ನೋ, ಅವರ ನೌಕೆಯನ್ನೋ ಕಂಡೆವು ಎನ್ನುವವರೆಲ್ಲ ತಟ್ಟೆಯಂತಹ ವಸ್ತುವನ್ನೇ ಕಂಡಿದ್ದೇವೆ ಎನ್ನುವುದು. ವಿಮಾನವಾಗಲಿ, ರಾಕೆಟ್ಟಾಗಲಿ ಅಥವಾ ಇನ್ಯಾವುದೇ ಬಗೆಯ ಆಕಾರವಾಗಲಿ ಯಾಕೆ ಬಂದಿಲ್ಲ ಎನ್ನುವುದೂ ಕುತೂಹಲದ ವಿಷಯವೇ? ಹಾರುವತಟ್ಟೆಗಳ ಬಗ್ಗೆ ಕಥೆಗಳಿರುವುದರಿಂದ ಕಂಡದ್ದನ್ನು ಹೀಗೆ ಊಹಿಸಿಕೊಂಡಿರಬಹುದೇ?

ಅದೇನೇ ಇರಲಿ. ಅನ್ಯಗ್ರಹ ಜೀವಿಗಳು ಇದ್ದಾರಾದರೆ ಹೇಗಿರಬಹುದು ಎನ್ನುವುದಂತು ಬಲು ಕೌತುಕದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾಗ ಸಿಕ್ಕಿದ್ದು ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಜೀವವಿಜ್ಞಾನಿ ಎಡ್ವರ್ಡ್ ಆಸ್ಬಾರ್ನ್‌ ವಿಲ್ಸನ್ ರವರ ಪುಸ್ತಕ “ ದಿ ಮೀನಿಂಗ್ ಆಫ್ ಹ್ಯೂಮನ್ ಎಕ್ಸಿಸ್ಟೆನ್ಸ್‌” ಅರ್ಥಾತ್ ಮಾನವತೆ ಎಂಬುದರ  ಅರ್ಥ. ವಿಲ್ಸನ್ ಬರೆದ ‘ಸೋಶಿಯೋಬಯಾಲಜಿ’ ಪುಸ್ತಕ ನಡವಳಿಕೆ ವಿಜ್ಞಾನಿಗಳಿಗೆ ಒಂದು ಉದ್ಗ್ರಂಥ.  ಈತನ ಈ ಪುಸ್ತಕದಲ್ಲಿದ್ದ ಅನ್ಯಗ್ರಹ ಜೀವಿಯ ವ್ಯಕ್ತಿಚಿತ್ರ ಎನ್ನುವ ಲೇಖನ ಸ್ವಾರಸ್ಯಕರವೆನ್ನಿಸಿತು. ಈ ಲೇಖನದಲ್ಲಿ ಅನ್ಯಗ್ರಹ ಜೀವಿ ಎನ್ನುವುದು ಇರುವುದಾದರೆ ಅದು ಹೇಗಿರಬಹುದು ಎಂದು ತಮ್ಮ ಸಂಶೋಧನೆಗಳ ಅನುಭವದ ಹಿನ್ನೆಲೆಯಲ್ಲಿ ಕಲ್ಪಿಸುವುದಕ್ಕೆ ಪ್ರಯತ್ನಿಸಿದ್ದಾರೆ ವಿಲ್ಸನ್. ವಿಲ್ಸನ್ನರು ವಿವರಿಸುವ ಅನ್ಯಗ್ರಹಜೀವಿಯ ಬಗ್ಗೆ ಮುಂದಿನ ವಾರ ತಿಳಿಯೋಣ.

 


ಈ ಲೇಖನ ಈಗ  ಇಜ್ಞಾನ  ಇ-ಪತ್ರಿಕೆಯಲ್ಲಿಯೂ ಲಭ್ಯ.

Published in: on ಮೇ 9, 2016 at 5:42 ಫೂರ್ವಾಹ್ನ  Comments (2)  

ಎಲ್ಲರಿಗೂ ಆಹಾರ ಸಸ್ಯಾಹಾರ?

25042016

ಆಕರ: Karl-Heinz Erb et al., Exploring the biophysical option space for feeding the world without deforestation, Nature Communications, NATURE COMMUNICATIONS | 7:11382 | DOI: 10.1038/ncomms11382

Published in: on ಏಪ್ರಿಲ್ 25, 2016 at 5:18 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೆಳ್ಳಿ ಲೋಹ ನೀಡಿದ ನೀಲಿ ಬಣ್ಣ

18042016

ಆಕರ:

  1. http://dx.doi.org/10.4236/ojpathology.2016.61008
  2. J Liu et al, ACS Nano, 2012, DOI: 10.1021/nn303449n
Published in: on ಏಪ್ರಿಲ್ 18, 2016 at 5:14 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಸರ್ಜರಿಗೊಂದು ಸೂರ್ಯನಮಸ್ಕಾರ

28032016ಆಕರ:

Boubour J, Jenson K, Richter H, Yarbrough J, Oden ZM, Schuler DA (2016) A Shipping Container-Based Sterile Processing Unit for Low Resources Settings. PLoS ONE 11(3): e0149624 doi:10.1371/journal.pone.0149624

Published in: on ಮಾರ್ಚ್ 28, 2016 at 5:23 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಮಾಣಿಕ್ಯಕ್ಕೆ ಪುಟ ನೀಡುವ ಸೂಕ್ಷ್ಮತರಂಗಗಳು

21032016.jpg

microwaveandrubies

ಮೈಕ್ರೊವೇವ್ ತರಂಗಗಳಿಂದ ಪುಟವಿಡುವ ಮುನ್ನ (ಎಡಗಡೆ) ಹಾಗೂ ಪುಟವಿಟ್ಟ ಅನಂತರ (ಬಲಗಡೆ) ಮಾಣಿಕ್ಯದ ಚಿತ್ರ

ಆಕರ:

  1. Swain et al., Microwave heat treatment of natural ruby and its characterization, Appl. Phys. A (2016) 122:224 , DOI 10.1007/s00339-016-9703-9
Published in: on ಮಾರ್ಚ್ 21, 2016 at 5:33 ಫೂರ್ವಾಹ್ನ  ನಿಮ್ಮ ಟಿಪ್ಪಣಿ ಬರೆಯಿರಿ  

ಬೆಂಕಿ ಮೊದಲೋ, ರುಬ್ಬುವ ಕಲ್ಲು ಮೊದಲೋ?

14032016

ಆಕರ:

  1. Katherine D. Zink1 & Daniel E. Lieberman1,Impact of meat and Lower Palaeolithic food  processing techniques on chewing in humans ; doi:10.1038/nature16990, Nature published online 9.3.2016
  2. Anon., Food Processing, Nature, Vol. 531, Pp 139, 10.3.2016
  3. Sujatha Gupta, Clever Eating, Nature, Vol. 532, Pp S12-S13, 3.3.2016

ಟಿಪ್ಪಣಿ:

ಪ್ರಕಟಿತ ಲೇಖನದಲ್ಲಿ ಸ್ಥಳಾವಕಾಶವಿಲ್ಲ ಎಂದು ಸಂಪಾದಕರು ಒಂದು ಪ್ಯಾರಾವನ್ನು ತೆಗೆದು ಹಾಕಿದ್ದಾರೆ.  ಇದು “80 ಕಿಲೋ ಭಾರ ಹೇರಿದಷ್ಟು ಬಲ..” ಎಂದು ಕೊನೆಗೊಳ್ಳುವ ಪ್ಯಾರಾದ ಮುಂದುವರಿಕೆ.

ನಮ್ಮ ದವಡೆಗಳಿಗೆ ಅಷ್ಟು ಬಲವನ್ನುಒದಗಿಸುವ ಸಾಮರ್ಥ್ಯವಿಲ್ಲ.  ಇರೆಕ್ಟಸ್ ನದ್ದಕ್ಕೆ ಕೂಡ. ಹಾಗಿದ್ದರೆ ಆಗಿನ ಕಾಲದಲ್ಲಿ ಆಹಾರವನ್ನು ಜೀರ್ಣವಾಗಿಸುವುದಕ್ಕೆ ಯಾವ  ಉಪಾಯಗಳಿದ್ದುವು? ಈ ಪ್ರಶ್ನೆಯನ್ನು ಉತ್ತರಿಸಲು ಕ್ಯಾಥರೀನ್ ಮತ್ತು ಡೇನಿಯಲ್ ಮೂರು ಪ್ರಯೋಗಗಳನ್ನು ಮಾಡಿದ್ದಾರೆ. ಮಾಂಸ, ಸಿಹಿಗೆಣಸು, ಕ್ಯಾರಟ್, ಬೀಟ್ ರೂಟ್ ಗಳಂತಹ  ಅರೆಯಲೇ ಬೇಕಾದ ಆಹಾರಗಳನ್ನು ಸಣ್ಣಗೆ ಹೋಳುಗಳನ್ನಾಗಿ ಮಾಡಿಯೋ, ಸುಟ್ಟೋ, ಅರೆದೋ, ಜಜ್ಜಿಯೋ ತಿನ್ನಲು ಕೊಟ್ಟಿದ್ದಾರೆ.ಸುಡಲು ಬೆಂಕಿ ಹಾಗೂ ಕತ್ತರಿಸಲು ಮತ್ತು ಜಜ್ಜಲು ಇರೆಕ್ಟಸ್ ನ ಕಾಲದಿಂದ ದೊರೆತ ಕಲ್ಲುಗಳನ್ನೇ ಬಳಸಿದ್ದಾರೆ.ಇವನ್ನು ತಿನ್ನವುದಕ್ಕೆ ಕೊಟ್ಟು, ತಿನ್ನುವವರ ದವಡೆಗೆ ಬಲಪತ್ತೆ ಸಾಧನಗಳನ್ನು ಅಳವಡಿಸಿ ಎಷ್ಟೆಷ್ಟು ಬಲ ಪ್ರಯೋಗಿಸಲಾಯಿತು, ಎಷ್ಟೆಷ್ಟು ಬಾರಿ ಅಗಿಯಲಾಯಿತು ಎಂದು ವಿವರವಾಗಿ ಗಮನಿಸಿದ್ದಾರೆ. ಅನಂತರ ಅಗಿದ  ಆಹಾರವನ್ನು ಉಗುಳಲು ಹೇಳಿ, ಅದೆಷ್ಟು ಶಿಥಿಲವಾಗಿದೆ, ಅರಗಿದೆ ಎಂದು ಪರೀಕ್ಷಿಸಿದ್ದಾರೆ. ಇವುಗಳಿಂದ ದೊರೆತ ಮಾಹಿತಿಯನ್ನು ಕಂಪ್ಯೂಟರ್ ನಲ್ಲಿ ಗಣಿಸಿ ಅರೆದರೆ ಚೆನ್ನವೋ, ಸುಟ್ಟರೆ ಚೆನ್ನವೋ, ಜಜ್ಜಿದರೆ ಚೆನ್ನವೋ ಎಂದು ಲೆಕ್ಕಿಸಿದ್ದಾರೆ.

ಈ ಪ್ಯಾರಾವನ್ನು ಕೂಡಿಸಿಕೊಂಡು ಓದಿದರೆ ಏನಾದರೂ ಬದಲಾವಣೆ ಕಂಡಿತೇ? ಈ ಪ್ಯಾರಾ ಅನವಶ್ಯಕವೇ? ಇದಿಲ್ಲದಿದ್ದಾಗ ಕಂಡ ಅರ್ಥಕ್ಕೂ, ಇದನ್ನು ಕೂಡಿಸಿದಾಗ  ಹೊಳೆದ ಅರ್ಥಕ್ಕೂ ವ್ಯತ್ಯಾಸವಿದೆಯೇ? ಕಮೆಂಟಿಸಿ.

Published in: on ಮಾರ್ಚ್ 14, 2016 at 6:18 ಫೂರ್ವಾಹ್ನ  Comments (2)