ಸೈಂಟ್ ಮೇರೀಸ್ ದ್ವೀಪದ ಕಲ್ಲುಗಳೇಕೆ ಷಟ್ಕೋಣದ ಕಂಭಗಳಂತಿವೆ? ಕರ್ನಾಟಕದ ಸುಪ್ರಸಿದ್ದ ದ್ವೀಪದ ಕಥೆಗೊಂದು ಹೊಸ ಭಾಷ್ಯ ಬರೆಯಲಾಗಿದೆ. ಜಕ್ಕಣಾಚಾರಿಗಿಂತಲೂ ಮಿಗಿಲಾದ ಶಿಲ್ಪಿಯೊಬ್ಬ ಲಕ್ಷಾಂತರ ವರ್ಷಗಳ ಕಾಲ ಕುಳಿತು ಉಳಿ ಕುಟ್ಟಿ ಒಂದೇ ಸಮನಾದ ಷಟ್ಕೋಣದ ಆಕಾರವನ್ನು ಕಡೆದಿದ್ದಾನೋ ಎನ್ನುವಷ್ಟು ದ್ವೀಪದ ಶಿಲೆಗಳ ಆಕಾರ ಸಮನಾಗಿದೆ. ಇದು ಕೇವಲ ಸೈಂಟ್ ಮೇರೀಸ್ ದ್ವೀಪದ್ದಷ್ಟೆ ಅಲ್ಲ. ಪ್ರಪಂಚದ ಇನ್ನೂ ಹಲವೆಡೆ ಇಂತಹ ಆಕಾರದ ಶಿಲೆಗಳು ಕಾಣುತ್ತವೆ. ಈ ಕಲ್ಲುಗಳಿಗಷ್ಟೆ ಏಕೆ ಈ ಆಕಾರ ಎನ್ನುವುದು ಸೋಜಿಗದ ಪ್ರಶ್ನೆ. ನಿನ್ನೆಯ ದಿನ ಸುಪ್ರಸಿದ್ದ ಫಿಸಿಕ್ಸ್ ಸಂಶೋಧನಾ ಪತ್ರಿಕೆ ಫಿಸಿಕಲ್ ರಿವ್ಯೂ ಲೆಟರ್ಸ್ ನಲ್ಲಿ ಪ್ರಕಟವಾಗಿರುವ ಪ್ರಬಂಧವೊಂದು ಈ ಗುಟ್ಟಿನ ಮೊಟ್ಟೆಯನ್ನೊಡೆದಿದೆ.
ಸೈಂಟ್ ಮೇರೀಸ್ ದ್ವೀಪದ ಕಲ್ಲುಗಳನ್ನು ಭೂವಿಜ್ಞಾನಿಗಳು ಬಸಾಲ್ಟ್ ಶಿಲೆಗಳೆನ್ನುತ್ತಾರೆ. ಇದು ಭೂಮಿಯೊಳಗಿರುವ ಬಿಸಿ ಶಿಲಾರಸ (ಲಾವಾ) ಮೇಲುಕ್ಕಿಬಂದು ತಣಿದಾಗ ರೂಪುಗೊಂಡ ಕಲ್ಲುಗಳು ಎನ್ನುವುದು ಅವರ ನಂಬಿಕೆ. ಕರ್ನಾಟಕವಿರುವ ದಕ್ಷಿಣ ಪ್ರಸ್ಥಭೂಮಿಯಿಡೀ ಹೀಗೇ ಲಾವಾ ರಸ ಉಕ್ಕಿ ಬಂದು ತಣಿದಾದ ಆಗಿದ್ದು. ಸುಮಾರು ಆರೂವರೆ ಕೋಟಿ ವರ್ಷಗಳ ಹಿಂದಿನ ಕಥೆ. ಒಮ್ಮೆಲೇ ಭೂಮಿಯಿಂದ ಉಕ್ಕಿದ ಲಾವಾ ಭರತಖಂಡದ ದಕ್ಷಿಣಭಾಗವನ್ನೆಲ್ಲಾ ಆವರಿಸಿಕೊಂಡಿತಂತೆ. ಆದರೆ ಈ ದಕ್ಷಿಣ ಪ್ರಸ್ಥ ಭೂಮಿಯಲ್ಲಿ ಎಲ್ಲಿಯೂ ಕಾಣದ ಷಟ್ಕೋಣದ ಶಿಲೆಗಳು ಸೈಂಟ್ ಮೇರೀಸ್‍ನಲ್ಲಿ ಮಾತ್ರ ಯಾಕೆ ಇವೆ?
ಇದಕ್ಕೆ ಉತ್ತರ: ಇವು ದಕ್ಷಿಣ ಪ್ರಸ್ಥಭೂಮಿಯ ಹುಟ್ಟಿದ ಸಂದರ್ಭದಲ್ಲೇ ಜನಿಸಿದರೂ, ತಣಿದ ಗತಿ ಮಾತ್ರ ಬೇರೆಯಿರಬೇಕು ಎನ್ನುತ್ತಾರೆ ಈ ಬಗ್ಗೆ ತಮ್ಮ ಹೊಸ ತರ್ಕವನ್ನು ಮಂಡಿಸಿರುವ ಮಾರ್ಟಿನ್ ಹಾಫ್ಮನ್ ಮತ್ತು ಸಂಗಡಿಗರು. ಇವರು ಬಿಸಿಯಾದ ಲಾವಾ ತಣಿಯುವುದಕ್ಕೆ ಬೇಕಾದ ಸಂದರ್ಭಗಳನ್ನು ಕಂಪ್ಯೂಟರಿನಲ್ಲಿ ಗಣಿತೀಯವಾಗಿ ಸೃಷ್ಟಿಸಿದರು. ಅನಂತರ ವಿಭಿನ್ನ ಸಂದರ್ಭಗಳಲ್ಲಿ ಈ ಬಿಸಿಗಲ್ಲು ತಣ್ಣಗಾದರೆ ಏನಾಗಬಹುದು ಎಂದು ಲೆಕ್ಕಿಸಿದರು. ಇದರ ಫಲವಾಗಿ ಸೈಂಟ್ ಮೇರೀಸ್ ಶಿಲೆಗಳು ಹೇಗಾಗಿರಬಹುದು ಎನ್ನುವ ಸೂಚನೆ ದೊರಕಿದೆ.
ಬಿಸಿಗಲ್ಲು ತಣಿಯುವಾಗ ಅದು ಕುಗ್ಗುತ್ತದಷ್ಟೆ. ಇದರಿಂದ ಉಂಟಾಗುವ ಬಲ ಕಡಿಮೆಯೇನಲ್ಲ. ಇದರ ಫಲವಾಗಿ ಶಿಲೆಯಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ವಾಸ್ತವವಾಗಿ ಬಿರುಕುಗಳು ಅತಿ ಒತ್ತಡವನ್ನು ವಿತರಿಸುವ ಉಪಾಯವಷ್ಟೆ. ಆರಂಭದಲ್ಲಿ ಕಲ್ಲಿನ ಹೊರಮೈ ತಣಿದಾಗ ಈ ಬಿರುಕುಗಳು ಚಚ್ಚೌಕಾಕಾರದಲ್ಲಿಯೋ ಅಥವಾ ಆಯತವಾಗಿಯೋ ಶುರುವಾಗುತ್ತವೆಯಂತೆ. ಆದರೆ ಕಾಲ ಕಳೆದ ಹಾಗೆ ಬಿರುಕುಗಳು ದೊಡ್ಡದಾಗಿ ಒಂದನೊಡನೊಂದು ಕೂಡಿಕೊಳ್ಳುತ್ತವಂತೆ. ಹೀಗಾದಾಗ ಆರಂಭದಲ್ಲಿ ಎರಡು ಬಿರುಕುಗಳ ನಡುವಿದ್ದ ತೊಂಬತ್ತು ಡಿಗ್ರಿ ಕೋನ (ಲಂಬ ಕೋನ) ಬದಲಾಗಿ ನೂರಿಪ್ಪತ್ತು ಡಿಗ್ರಿಯಾಗಿ ಬೆಳೆಯುತ್ತದೆ. ಅಕ್ಕಪಕ್ಕದ ಬಿರುಕುಗಳು ಹೀಗೆ 120 ಡಿಗ್ರಿ ಕೋನಕ್ಕೆ ಬೆಳೆದಾಗ ಷಟ್ಕೋಣಾಕೃತಿ ರೂಪುಗೊಳ್ಳುತ್ತದೆ. ಈ ರೀತಿ ಯಾವುದೆ ವಸ್ತು ತಣಿದರೂ ಷಟ್ಕೋನಗಳು ರೂಪುಗೊಳ್ಳಬೇಕಾದದ್ದು ಗಣಿತ ಪ್ರಕಾರ ನಿಯಮವಂತೆ.
ಕಂಪ್ಯುಟರಿನಲ್ಲಿ ಇಂತಹ ಲೆಕ್ಕಾಚಾರಗಳನ್ನು ಹಾಕಿದಾಗ ಎಲ್ಲ ಬಿರುಕುಗಳೂ ಕೊನೆಗೆ ಬಂದು ಕೂಡಿದ್ದು ನೂರ ಇಪತ್ತು ಡಿಗ್ರಿ ಕೋನದಲ್ಲಿ. ಹೀಗುಂಟಾಗಿರಬೇಕು ನಮ್ಮ ಸೈಂಟ್ ಮೇರೀಸ್ ದ್ವೀಪದ ಸುಂದರ ಶಿಲೆಗಳು.
ನಿಮ್ಮದೊಂದು ಉತ್ತರ